ಜೀವಹತ್ಯೆಯು ಪಾಪ; ಗೋಹತ್ಯೆಯು ಮಹಾಪಾಪ!
ಚೌರ್ಯವು ಅಪರಾಧ; ಗೋಚೌರ್ಯವು ಮಹಾಪರಾಧ!
ಹೀಗಿರುವಾಗ- ನಾವು ತಾಯಿಯೆಂದು ಪ್ರೀತಿಸುವ, ದೇವರೆಂದು ಪೂಜಿಸುವ ಗೋವೆಂಬ ದೇವತುಲ್ಯ ಜೀವವನ್ನು ಕದ್ದೊಯ್ದರೆ… ಕತ್ತು ಕೊಯ್ದರೆ… ಎಷ್ಟು ನೋವಾಗಬೇಡ!? ಹಾಡುಹಗಲೇ, ಅದೂ ಮನೆಗೆ ನುಗ್ಗಿ, ಕಟುಕರು ಹಸುವನ್ನು ಸೆಳೆದೊಯ್ಯುವರೆಂದರೆ- ಧರಣಿಗೂ ನರಕಕ್ಕೂ ಏನು ಅಂತರ? ‘ವಿಷವೃಕ್ಷೋಪಿ ಸಂವರ್ಧ್ಯ ಸ್ವಯಂ ಛೇತ್ತುಂ ಅಸಾಂಪ್ರತಂ’ – ‘ವಿಷದ ಬಳ್ಳಿಯನ್ನೇ ಆದರೂ, ಕೈಯಾರೆ ಬೆಳೆಸಿದ ಬಳಿಕ ಕಡಿಯಲು ಕೈ ಬಾರದು!’ ಎನ್ನುವರು ಕರುಳುಳ್ಳವರು; ಹಾಗಿರುವಾಗ- ಮನೆಯೊಳಗೆ ಅಮೃತದ ಬಳ್ಳಿಯಾಗಿ ಬೆಳೆದು, ಕಳೆಗಟ್ಟಿದ ಆಕಳು ಕಳ್ಳರ- ಕರವಾಲದ ಪಾಲಾದರೆ ಹೃದಯ ಹೋಳಾಗದೇ!?
ಕರ್ನಾಟಕದ ಕರಾವಳಿಯಲ್ಲಿ, ಕರುಳು ಚುರುಗುಡಿಸುವ ಗೋಚೌರ್ಯ-ಕ್ರೌರ್ಯಗಳು ನಿತ್ಯವಾರ್ತೆಯಾಗಿಬಿಟ್ಟಿದೆ! ‘ನಿನ್ನೆ ಅವರದು ಹೋಯಿತು; ಇಂದು ಇವರದು; ನಾಳೆ ನಮ್ಮದೇ!’ ಎನ್ನುವಂತಿದೆ ದಕ್ಷಿಣಕನ್ನಡ-ಕಾಸರಗೋಡು ಜಿಲ್ಲೆಗಳ ಗೋವಳರ ಆಕಳ ಕಳ್ಳತನದ ಕಳವಳದ ಕಥೆ! ನಮ್ಮ ಕಾಮದುಘಾ ಮಹಾಂದೋಲನದ ಸೇನಾನಿ ಡಾ.ಕೃಷ್ಣಮೂರ್ತಿಯವರ ಬದಿಯಡ್ಕದ ಮನೆಯಿಂದ, ಕೆಲ ವರ್ಷಗಳ ಹಿಂದೆ- ಸೀತಾ ಎಂಬ ಸುರಭಿಸದೃಶವಾದ ಹಸುವನ್ನು ಕದ್ದೊಯ್ದಾಗ ಆದ ಗಾಯ ಇನ್ನೂ ಮಾಸಿಲ್ಲ! ಅಷ್ಟರಲ್ಲಿ, ದಕ್ಷಿಣಕನ್ನಡದ ಮುಡಿಪು ಸಮೀಪದ ಕೈರಂಗಳದಿಂದ ಬಂದೆರಗಿತು ಮತ್ತೊಂದು ದುರ್ವಾರ್ತೆ! ಮತ್ತೊಂದು ಕಾಮಧೇನು ಕಟುಕರ ಪಾಲು!
ಈ ಬಾರಿ ಕಟುಕರದು ಮತ್ತೆರಡು ಹೆಜ್ಜೆ ಮುಂದೆ; ಮನೆಗಳಾಯಿತು, ಇದೀಗ ಕೈರಂಗಳದ ಗೋಶಾಲೆಗೇ ನುಗ್ಗಿ ಕಟುಕರು ಹಸುಗಳ ಕೊರಳಿಗೆ ಕೈಯಿಕ್ಕಿದ್ದಾರೆ! ಒಂದಲ್ಲ, ಎರಡಲ್ಲ, ಮೂರು ಬಾರಿ ಕೈರಂಗಳದ ಗೋಶಾಲೆಯಿಂದ ಗೋವುಗಳ ಕಳ್ಳತನವಾಗಿದೆ! ಮಾತ್ರವಲ್ಲ, ಕಟುಕರು ಮೊನ್ನೆ ಮೂರನೆಯ ಬಾರಿ ಗೋಚೌರ್ಯಗೈದು- ಸ್ಥಳ ಬಿಡುವ ಮೊದಲು, ಮರಳಿ ಬರುವ ಧಮಕಿಯೊಡ್ಡುವ ಮಟ್ಟಕ್ಕೆ ಧಾರ್ಷ್ಟ್ಯ ತೋರಿದಾಗ ಗೋಶಾಲೆಯ ಅಧ್ಯಕ್ಷ- ರಾಜಾರಾಮ ಭಟ್ಟರ ಸಹನೆ ಮೀರಿತು; ಸುಲಭವಾಗಿ ಯಾರೂ ಕೈಗೊಳ್ಳದ, ಒಮ್ಮೆ ಕೈಗೊಂಡರೆ ಹಿಂದೆ ಬರಲು ಸಾಧ್ಯವಿರದ ಮಹತ್ತರ ನಿರ್ಣಯವೊಂದನ್ನು ಅವರು ಕೈಗೊಂಡರು!
ಅದು ಆಮರಣ ನಿರಶನದ ನಿರ್ಣಯ; ‘ಪೋಲೀಸರು ಹಸುಗಳ್ಳರನ್ನು ಬಂಧಿಸಬೇಕು; ಗೋಶಾಲೆಯ ಆವರಣದಲ್ಲಿ ಅವರನ್ನು ಹಾಜರುಪಡಿಸಬೇಕು; ಮತ್ತೊಮ್ಮೆ ಬರುವೆವೆಂಬ ತಮ್ಮ ಧಮಕಿಯನ್ನು ಹಸುಗಳ್ಳರು ತಾವೇ ನುಂಗುವಂತಾಗಬೇಕು’ ಅದಾಗದಿದ್ದರೆ ಮರಣವಾದರೂ ಸರಿ, ನಿರಶನದಿಂದ ಏಳೆನೆಂಬ ಭಟ್ಟರ ಹಠ ಸಮಾಜವನ್ನು ಎಬ್ಬಿಸಿತು!
ಹಸುಗಳ್ಳತನವು ದಕ್ಷಿಣಕನ್ನಡಕ್ಕೆ ಹೊಸದೇನೂ ಅಲ್ಲ; ಆದರೆ ಈ ಮಟ್ಟದ ಪ್ರತಿಭಟನೆ ಹೊಸತು! ದಿನ ಬೆಳಗಾದರೆ ಹಸುಗಳ್ಳತನದ ಸುದ್ದಿಯನ್ನು ಕೇಳಿ, ಅದು ಸರಿಯಲ್ಲವೆಂದು ಹೇಳಿ, ಸುಮ್ಮನಾಗಿಬಿಡುವುದು ಆವರೆಗಿನ ವಾಡಿಕೆ; ಹಸುಗಳ ಹೆಣಗಾಟಕ್ಕೆ ನಮ್ಮ ಗೊಣಗಾಟವು ಮಾತ್ರವೇ ಆವರೆಗಿನ ಪ್ರತಿಕ್ರಿಯೆಯಾಗಿತ್ತು! ಇದೇ ಮೊದಲ ಬಾರಿಗೆ ಸರ್ವಸಮಾಜವೂ ಎಚ್ಚೆತ್ತುಕೊಂಡಿತು, ಮಾತ್ರವಲ್ಲ, ಕಟುಕರು ಬೆಚ್ಚಿಬೀಳುವ- ಅಧಿಕಾರಿಗಳು ನಿದ್ದೆ ಬಿಡುವ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿತು!
ಹೊತ್ತಿ ಉರಿಯುವುದು ಇಂಧನದ ಸ್ವಭಾವವಾದರೂ ಕಡ್ಡಿ ಗೀರುವವರು ಯಾರಾದರೂ ಬೇಕಲ್ಲವೇ? ಗೋವುಗಳ ಸಾವುಗಳ ನೋವುಗಳು ಪ್ರತಿಯೊಬ್ಬ ಭಾರತೀಯನ ಹೃದಯಶಲ್ಯಗಳು! ಕದಿಯುವ-ಕೊಲ್ಲುವ-ತಿನ್ನುವ ಕಿರಾತಕರನ್ನು ಹೊರತು ಪಡಿಸಿದರೆ, ಮನುಷ್ಯರೆನಿಸಿದ ಮತ್ತೆಲ್ಲರೂ ಗೋವಿನ ನೋವಿನಲ್ಲಿ ನೊಂದವರೇ! ಸಮಾಜದ ಅಂತರ್ಮನದಲ್ಲಿ ಗುಪ್ತವಾಗಿ- ಸುಪ್ತವಾಗಿ ಮಡುಗಟ್ಟಿದ್ದ ಗೋವಧೆಯ ವೇದನೆಯು ಸ್ಫೋಟಗೊಂಡಿತು; ಕೈರಂಗಳದ ಮಹಾಂದೋಲನವಾಗಿ ರೂಪುಗೊಂಡಿತು!
ಕೈರಂಗಳದಲ್ಲಿ ಹೊತ್ತಿದ ‘ಕಾಮಧೇನು~ಕದನ’ದ ಕಿಚ್ಚು ನಾಡಿನ ಸಕಲ ಗೋಪ್ರೇಮಿಗಳ ಎದೆಯಂಗಳ ತಲುಪಿತು; ಮಹಾಜನತೆಯು ಯಾವುದೋ ಮೋಡಿಗೊಳಗಾದಂತೆ- ಮಹಾಪ್ರವಾಹದೋಪಾದಿಯಲ್ಲಿ ಆಂದೋಲನದ ಆವರಣ ಸೇರಿತು; ಅದೆಷ್ಟೋ ಗೋಪ್ರೇಮಿಗಳು ಭಾವಸಮಾನತೆಯನ್ನು ಕೃತಿಯಲ್ಲಿಯೂ ತಂದರು; ನಂದಿನಿಗಾಗಿ ನಡೆಯುವ ನಿರಶನದಲ್ಲಿ ತಾವೂ ಭಾಗಿಯಾದರು; ಕೆಲವರಂತೂ ಅನ್ನತ್ಯಾಗದ ಮೂಲಕ ಪ್ರಾಣತ್ಯಾಗಕ್ಕೂ ಸಿದ್ಧರಾದರು!
ಹೀಗೆ, ಸಮಾಜದ ಸಂಯಮದ ಆಣೆಕಟ್ಟು ಒಡೆದು, ಮಹಾಪೂರವಾಗಿ ಹರಿದಾಗ, ಬೆಚ್ಚಿಬೀಳುವ ಸರದಿ ಅಧಿಕಾರಿಗಳದಾಯಿತು; ಕೊಚ್ಚಿಹೋಗುವ ಸರದಿ ಕಟುಕರದಾಯಿತು; ಗಡ್ಡಕ್ಕೆ ಬೆಂಕಿ ಹೊತ್ತಿದರೂ ಎಚ್ಚರಗೊಳ್ಳದ ಪರಿಯ ಗಾಢ-ಜಡನಿದ್ರೆಯಲ್ಲಿ ಸದಾ ಮುಳುಗಿ ಮಲಗಿರುವ ಕಾನೂನುಪಾಲಕರು ಧಿಡೀರನೆ ಎಚ್ಚರಗೊಂಡು, ವಿದ್ಯುದ್ವೇಗದಲ್ಲಿ ಕಾರ್ಯಾಚರಣೆ ನಡೆಸಿದರು; ಪರಿಣಾಮವಾಗಿ, ಕೆಲವೇ ದಿನಗಳಲ್ಲಿ ಆಕಳ ಕಳ್ಳರು ಕಂಬಿ ಎಣಿಸುವಂತಾಯಿತು! ಉಪವಾಸ ನಡೆದ ಗೋಶಾಲೆಯ ಆವರಣದಲ್ಲಿಯೇ ಗೋವಿನ ಗೆಲುವಿನ ಉತ್ಸವ ನಡೆಯುವಂತಾಯಿತು!
ಯಾವುದೇ ಮಹಾಂದೋಲನದ ಯಶಸ್ಸು ಎಂದೂ ಒಬ್ಬರಿಬ್ಬರದಾಗಿರುವುದಿಲ್ಲ; ಆದರೆ ಮಹತ್ತರ ಪಾತ್ರ ವಹಿಸಿದ ಒಬ್ಬರಿಬ್ಬರು ಇರದೆ ಯಾವುದೇ ಯಶಸ್ವೀ ಮಹಾಂದೋಲನವು ಮೈದಾಳುವುದಿಲ್ಲ! ಅದು ಕೈರಂಗಳದ ವಿಷಯದಲ್ಲಿಯೂ ಹಾಗೆಯೇ:
- ಕರವಾಳ ಹಿಡಿದ ಕರಾಳ ಕಟುಕರೊಡನೆ ಸೆಣಸಾಡಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಗೋವೊಂದರ ಪ್ರಾಣ ಉಳಿಸಿದ ವಿಶ್ವನಾಥ ಕಡ್ವಾಯಿ ಮತ್ತು ಆತನಿಗೆ ಬೆಂಗಾವಲಾಗಿ ನಿಂತ ದೇವರಾಜ ಪಾಂಡಿಕಟ್ಟ.
- ಆಮರಣ-ನಿರಶನದ ಘೋಷಣೆಯ ಮೂಲಕ ಕೈರಂಗಳದ ಗೋಮಹಾಂದೋಲನದ ಕಿಚ್ಚು ಹೊತ್ತಿಸಿದ ಕೊಡಕ್ಕಲ್ಲು ರಾಜಾರಾಮ ಭಟ್.
- ತಾಯಿಯರ ತಾಯಿಯನ್ನೇ ಕದ್ದು-ಕೊಂದು-ತಿಂದು ತೇಗುವ, ಬೀಗುವ ಆತತಾಯಿಗಳನ್ನು ತಡವಿಲ್ಲದೆ ಸೆರೆಹಿಡಿದು, ಆಂದೋಲನದ ಪರಿಪೂರ್ಣತೆಗೆ ಕಾರಣರಾದ ಆರಕ್ಷಕರು; ಚುನಾವಣೆಯ ಸಮಯವಾದ ಕಾರಣ ರಾಜಕಾರಣಿಗಳಿಗೆ ಹಲ್ಲಿಲ್ಲದಿರುವುದು ಆರಕ್ಷಕರಿಗೆ ಹಲ್ಲು ಮೂಡಿಸಿರಬಹುದು!
ಕೊನೆಮಾತು: ಕೈರಂಗಳದ ಮಹಾಸಮರವು ಹಸುಗಳ್ಳರಿಗೆ ಮತ್ತು ಅವರ ಎಂಜಲಿನಲ್ಲಿ ಬದುಕುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೊಳಗಿದ ಎಚ್ಚರಿಕೆಯ ಮಹಾಘಂಟೆ! ಎಚ್ಚೆತ್ತುಕೊಳ್ಳದಿದ್ದರೆ, ಮತ್ತೊಮ್ಮೆ ಮರುಕಳಿಸುವ ಕೈರಂಗಳವು ಕಡಲತಡಿಯಲ್ಲಿ ಪರಶುರಾಮರ ಸರಣಿಯನ್ನೇ ಸೃಜಿಸೀತು! ಅವರು ಬೀಸುವ ಕೊಡಲಿಗೆ ಸುನಾಮಿಯಾಗಿ ಮೇಲೇಳುವ ಕಡಲಲ್ಲಿ ದುಷ್ಟ ರಾಜಕಾರಣಿಗಳ ಕುಲವೇ ಕೊಚ್ಚಿಹೋದೀತು!
~*~
ಚಿತ್ರಗಳು:

ಎಪ್ರಿಲ್ ೦೧-೦೪-೨೦೧೮ರಂದು ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಕೈರಂಗಳ ಅಮೃತಧಾರಾ ಗೋಶಾಲೆ ಸಮಿತಿಯ ಅಧ್ಯಕ್ಷ ಶ್ರೀ ರಾಜಾರಾಮ್ ಭಟ್

ಧೀರೋಧಾತ್ತವಾಗಿ ಹೋರಾಡಿ ವಿಶ್ವನಾಥ ಕಡ್ವಾಯಿಯವರು ಗೋಚೋರರ ಕೈಯಿಂದ ರಕ್ಷಿಸಿದ ಗೋವಿನೊಂದಿಗೆ ಶ್ರೀಸಂಸ್ಥಾನದವರು ಹಾಗೂ ವಿಶ್ವನಾಥ ಕಡ್ವಾಯಿ
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
Leave a Reply