ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಆಡಿ ಜಾತ್ರೆ ನಡೆಯುತ್ತದೆ. ಅಲ್ಲಿ ಕೃಷಿಕರ ಗೋ ಸಂಪತ್ತು ಕಟುಕರ ಪಾಲಾಗುತ್ತಿದೆ. ಗೋ ಸಂಪತ್ತು ಕಟುಕರ ಪಾಲಾಗಬಾರದು ಎಂಬ ಹಿನ್ನೆ ಲೆಯಲ್ಲಿ ಶ್ರೀರಾಮಚಂದ್ರಾಪುರಮಠ ಅಭಯಜಾತ್ರೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದಿಶಾದರ್ಶಕರಾಗಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಅಭಯ ಜಾತ್ರೆ ಕುರಿತ ವಿವರಗಳನ್ನು ಗೋವಾಣಿಯೊಂದಿಗೆ ಹಂಚಿಕೊಂಡದ್ದು ಹೀಗೆ..
ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ
ಕಾರ್ಯಕರ್ತರೇ ರೂಪಿಸಿದ ಅಭಯಜಾತ್ರೆ!
1 ಅಭಯ ಜಾತ್ರೆಯ ಕಲ್ಪನೆ ಹುಟ್ಟಿದ್ದು ಹೇಗೆ ಮತ್ತು ಹಿನ್ನೆಲೆ ಏನು?
ಅಭಯ ಜಾತ್ರೆಯ ಕಲ್ಪನೆ ಹುಟ್ಟಿದ್ದು ಕಾರ್ಯಕರ್ತರಲ್ಲಿ, ತುಂಬಾ ಹೊಸ ರೀತಿಯ ಆಲೋಚನೆ ಇದು, ತುಂಬಾ ಸೂಕ್ತ ವಾದ ಚಿಂತನೆ ಇದು, ನಮಗಂತೂ ತುಂಬಾ ಖುಷಿಯಾಗಿದೆ. ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿತ್ತು ನೋಡಿ, ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಆಡಿ ಜಾತ್ರೆ ನಡೆದೇ ನಡೀತದೆ. ಅಲ್ಲಿಗೆ ಕಟುಕರು ಬಂದೇ ಬರುತ್ತಾರೆ.. ಅವರು ಗೋವುಗಳನ್ನ ಖರೀದಿ ಮಾಡೇ ಮಾಡುತಾರೆ ಇದಾವುದನ್ನೂ ತಡೆಯಲು ಸಾಧ್ಯವಿಲ್ಲ. ಜಾತ್ರ ನಡೆಯದಂತೆ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ಗೋವುಗಳು ಹೋಗದಂತೆ ರೈತರ ಮನವೊಲಿಸಬಹುದು. ಆದರೆ ಅದು ಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ. ಕಾರಣ ರೈತರಿಗೆ ಗೋವು ಬೇಕು. ಆದರೆ ಹಣದ ಒತ್ತಡ, ಹಣದ ಅವಸರ ಅವರಿಗೆ ಇದ್ದೇ ಇರತ್ತೆ. ಅವರು ಗೋವುಗಳನ್ನ ಮಾರುತಾರೆ ಮುಂದಿನ ಯೋಚನೆ ಅವರಿಗೆ ಇಲ್ಲ. ಪರಿಣಾಮದ ಗಂಭೀರತೆಯ ಕಲ್ಪನೆ ಅವರಿಗೆ ಇಲ್ಲ. ಹಣದ ಸಮಸ್ಯೆಗೆ ಪರಿಹಾರ ಹೇಳದೆ, ರೈತರಿಗೆ ನೀವು ಗೋವುಗಳನ್ನ ಮಾರಬೇಡಿ ಅಂದರೆ ಅವನಿಗೆ ಬೇರೆ ಏನು ಮಾಡಬೇಕು ಅಂತ ಅರ್ಥ ಆಗೋದಿಲ್ಲ. ಅದಕ್ಕೆ ಪರಿಹಾರ ನಾವು ಕೊಟ್ಟ ಹಾಗೆ ಆಗೋದಿಲ್ಲ ಹಾಗಾಗಿ ಪರ್ಯಾಯ ಕೊಡದೆ ಸುಮ್ಮನೆ ಸಂತೆಗೆ ಕೊಂಡು ಹೋಗಬೇಡ, ಮಾರಬೇಡ ಅಂದರೆ ಒಂದು ಸ್ವಲ್ಪ ಪರಿಣಾಮ ಬೀರಬಹುದು ಆದರೆ ಸಮಗ್ರ ಪರಿಣಾಮ ಬೀರಲು ಸಾಧ್ಯವಿಲ್ಲ, ಕಟುಕರು ಗೋವುಗಳನ್ನ ಬರೀದಿ ಮಾಡೋದನ್ನ ಹೇಗೆ ತಡೀತೀರಿ ಇದೆಲ್ಲ ನೋಡಿದಾಗ ಒಂದೇ ದಾರಿ ಸಮರ್ಪಕ ದಾರಿ ಇರುವಂಥದ್ದು ಪರ್ಯಾಯ ಜಾತ್ರೆ ನಡೆಸುವಂಥದ್ದು. ಅಲ್ಲಿ ಕಟುಕರಿಗೆ ಪ್ರವೇಶ ನಿಷೇಧ ಮಾಡುವಂಥದ್ದು’ ಅದು ಕೇವಲ ಗೋ ಪ್ರೇಮಿಗಳಿಗೆ ಕೃಷಿಕರಿಗೆ ಮೀಸಲಾಗಿರುವಂತೆ ನೋಡಿಕೊಳ್ಳುವಂಥದ್ದು ಹಾಗೆ ಮಾಡಿದಾಗ ರೈತನ ಮನ ಒಲಿಸೋದು ತುಂಬಾ ಸುಲಭ ನೋಡಿ ಇಲ್ಲಿ ಬೇರೆ ಜಾತ್ರೆ ಏರ್ಪಾಡು ಮಾಡ್ತೀವಿ ನಾವು ಇಲ್ಲೇ ಬಾ ನೀನು, ನಿಮ್ಮ ಊರ ಹತ್ರಾನೇ, ಮತ್ತೆ ವರ್ಷಕ್ಕೆ ಮೂರು ಬಾರಿ, ಆಡಿ ಜಾತ್ರೆ ವರ್ಷಕ್ಕೆ ಒಂದೇ ಬಾರಿ.
ನಾವು ಈ ಜಾತ್ರೆ ಏರ್ಪಾಡು ಮಾಡುತ್ತೇವೆ ಇಲ್ಲಿ ಬಂದು ನೀನು ಮಾರಿಕೋ ಎಂದಾಗ ಅವನಿಗೆ ಸ್ವಲ್ಪ ಸಮಾಧಾನ ಆಗತ್ತೆ, ಅವನಿಗೆ ಪರ್ಯಾಯ ಸಿಗುತ್ತೆ ರೈತನಿಗೆ ಬೇರೆ ಆಪ್ಷನ್ ಕೊಡದೇ, ಹೀಗೆ ಮಾಡಬೇಡ ಹಾಗೆ ಮಾಡಬೇಡ ಅನ್ನುವುದರಲ್ಲಿ ಔಚಿತ್ಯ ಇಲ್ಲ ರೈತನಿಗೆ ಬೇರೆ ಆಪ್ಷನ್ ಕೊಡಬೇಕು ಆ ಕೆಲಸವನ್ನು ಅಭಯ ಜಾತ್ರೆ ಮಾಡಿದೆ.
2 ಅಭಯ ಜಾತ್ರೆ ನಡೆಸುವಲ್ಲಿ ಎದುರಾಗಬಹುದಾದ ಸವಾಲುಗಳು?
ದೊಡ್ಡ ಸವಾಲು ಸಮಯ, ಕೆಲವೇ ದಿನಗಳ ಅಂತರದಲ್ಲಿ ನಾವು ಈ ಕೆಲಸವನ್ನ ಮಾಡಬೇಕಾಗಿದೆ. ದೊಡ್ಡ ಕೆಲಸವನ್ನು, ಮತ್ತೆ ಇನ್ನೊಂದು ಸವಾಲು ಖರೀದಿ ಮಾಡುವಂಥವರು ಬರಬೇಕು ಬಯಸಿ ಬರಬೇಕು. ಬರದಿದ್ದಾಗ ಆ ಇಡೀ ಭಾರ ಮಠದ ಮೇಲೆ ಬೀಳುತ್ತೆ. ಆ ರಿಸ್ಕನ್ನು ಮಠ ತಗೊಳಕ್ಕೆ ತಯಾರಿದ್ದರೆ ಮಾತ್ರ ಮುಂದೆ ಹೋಗಬಹುದು. ಈ ವಿಚಾರದಲ್ಲಿ ಮಠ ಈ ಚಾಲೆಂಜನ್ನು, ರಿಸ್ಕನ್ನು ತಗೆದುಕೊಂಡಿದೆ. ಗೋವುಗಳ ಜೀವ ಉಳಿಸಕ್ಕೆ ಸರ್ವಸ್ವವನ್ನು ಕೊಟ್ಟರೂ ಚಿಂತೆಯಿಲ್ಲ ಅನ್ನುವ ಭಾವದಲ್ಲಿ ಮಠ ಸವಾಲನ್ನು ಸ್ವೀಕಾರ ಮಾಡಿದೆ. ಹಾಗಾಗಿ ಮುಖ್ಯ ಸವಾಲು ದೊಡ್ಡ ಸಂಖ್ಯೆಯ ಖರೀದಿದಾರರು ಬರಬೇಕು. ಅವರು ಕೃಷಿಕರೇ, ಗೋಪ್ರೇಮಿಗಳೇ ಆಗಬೇಕು, ಕಟುಕರು ಆಗಬಾರದು ಅಂತಹ ಸಾತ್ವಿಕ ಮನಸ್ಥಿತಿಯ ಖರೀದಿದಾರರನ್ನು ಪತ್ತೆ ಮಾಡುವಂಥದ್ದು. ಅವರು ಇಲ್ಲಿ ಬರುವಂತೆ ಮಾಡುವಂಥದು, ಕಡಿಮೆ ಸಮಯದಲ್ಲಿ ಮಾಡುವಂಥದು, ಅದು ಇನ್ನೊಂದು ಸವಾಲು. ಮತ್ತೆ ಮತ್ತೊಂದು ಸವಾಲು ಕಟುಕರ, ಏಜಂಟರ ಪ್ರತಿರೋಧ ಎದುರಿಸುವಂಥದ್ದು ಅವರು ಯಾವ ದಾರಿಗೂ ಹೋಗಬಹುದು, ಹಣದ ಪ್ರಶ್ನೆ ಇದೆ, ಮೀಟ್ ಲಾಬಿ ಇದೆ ಹಾಗಾಗಿ ಅವರು ಯಾವ ಮಟ್ಟಕ್ಕೂ ಹೋಗಬಹುದು, ಮಾನದ ಮೇಲೆ ಆಕ್ರಮಣ ಮಾಡಬಹುದು, ಜೀವದ ಮೇಲೆ ಆಕ್ರಮಣ ಮಾಡಬಹುದು, ಹೆಸರು ಕೆಡಿಸಲು ಅಪಪ್ರಚಾರ ಮಾಡಬಹುದು, ನಾನಾ ಪ್ರಕಾರಗಳಲ್ಲಿ ಅವರು ತೊಂದರೆ ಕೊಡಬಹುದು, ಈ ಸಾಧ್ಯತೆ ಇದ್ದೇ ಇದೆ. ಮತ್ತೆ ಇನ್ನೊಂದು ಅವರು ರೈತರ ಮನವನ್ನು ಕಲುಷಿತಗೊಳಿಸುವಂಥದ್ದು, ಹೋಗಿ ರೈತರಿಗೆ ಇಲ್ಲ ಸಲ್ಲದ ವಿಷಯಗಳನ್ನ ಹೇಳಿ ಅವರ ಮನಸ್ಸನ್ನ ಹಾಳು ಮಾಡುವಂಥದ್ದು ಇದೆಲ್ಲ ಸವಾಲುಗಳು… ಆದರೆ ಇವೆಲ್ಲವುಗಳನ್ನ ಮಠ ಮೆಟ್ಟಿ ನಿಂತಿದೆ. ನಿಲ್ಲುತ್ತೆ.
3 ಅಭಯ ಜಾತ್ರೆ ಯಶಸ್ವಿಗೊಳಿಸುವಲ್ಲಿ ನಿಮ್ಮ ಕಾರ್ಯಯೋಜನೆ ಏನು?
ಅಭಯ ಜಾತ್ರೆ ಸಂದರ್ಭದಲ್ಲಿ ಆಡಿ ಜಾತ್ರೆಗೆ ಗೋವುಗಳನ್ನು ಮಾರಾಟ ಮಾಡಲು ಬಂದ ಪ್ರತಿಯೊಬ್ಬ ಗೋಪಾಲಕನ ಭೇಟಿ ಮಾಡುವುದು, ಅಭಯ ಜಾತ್ರಗೇ ಗೋವು ತರುವಂತೆ ಮನವರಿಕೆ ಮಾಡುವುದು. ಹಣದ ತೀರಾ ಅಗತ್ಯವಿರುವ ಗೋಪಾಲಕನಿಂದ ತಕ್ಷಣ ಗೋವುಗಳನ್ನು ಖರೀದಿಸುವುದು ಹಾಗೂ ಅವುಗಳನ್ನು ಅಭಯ ಜಾತ್ರೆಗೆ ತರುವುದು. ಅಲ್ಲಿ ಅಗತ್ಯ ಇರುವ ಗೋಪಾಲಕರಿಗೆ ಅವುಗಳನ್ನು ಮಾರಾಟ ಮಾಡುವುದು. ಸಾಮಾಜಿಕ ಜಾಲತಾಣಗಳಲ್ಲಿ ದೇಸೀ ಗೋವು ಆಸಕ್ತರಿಗೆ ಕರೆ ಕೊಡುವುದು. ಹೀಗೆ, ಕಾರ್ಯಕರ್ತರೇ ಮುತುವರ್ಜಿಯಿಂದ ಗೋವುಗಳು ಕಟುಕರ ಪಾಲಾಗುವುದನ್ನು ತಪ್ಪಿಸಲು ಏನೆಲ್ಲಾ ಮಾಡುತ್ತಾರೋ ಅದುವೆ ಇದರ ಯಶಸ್ಸಿಗೆ ಕಾರಣವಾಗಲಿದೆ.
4 ಸಾರ್ವಜನಿಕರಿಂದ ಯಾವ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೀರಿ?
ಸಾಧ್ಯವಾದಷ್ಟು ಹೆಚ್ಚು ಜನರಿಗೆ ಈ ವಿಷಯವನ್ನು ತಲುಪಿಸುವಂಥದ್ದು, ಹೀಗೊಂದು ಕಸಾಯಿಖಾನೆಗಳಿಂದ ನಿಯಂತ್ರಿತ ಜಾತ್ರೆಗೆ ಹೊರತಾದ ಅತ್ಯಂತ ಶುಭವಾದ ದೇಶಕ್ಕೆ ಅಗತ್ಯವಿರುವಂಥ ಒಂದು ಜಾತ್ರೆ ನಡೀತಾ ಇದೆ ಅನ್ನುವುದನ್ನು ಜನರಿಗೆ ತಲುಪಿಸುವಂಥದ್ದು ಮತ್ತೆ ಗೋವುಗಳನ್ನು ಸ್ವೀಕರಿಸಿ ಸಾಕಲು ಮುಂದೆ ಬರುವಂಥದ್ದು ಅದಿಲ್ಲದಿದ್ದರೆ ಗೋ ಸಂಜೀವಿನಿಗೆ ಸಮರ್ಪಣೆ ಮಾಡಿ, ಒಂದು ಗೋವಿನ ಜವಾಬ್ದಾರಿ ನಾನು ತಗೋತೇನೆ, ಗೋವಿನ ವೆಚ್ಚವನ್ನು ನಾನು ಕೊಡುತ್ತೇನೆ ಅನ್ನುವ ರೀತಿಯಲ್ಲಿ ಸಮರ್ಪಣೆ ಮಾಡುವುದಕ್ಕೆ ಮುಂದೆ ಬರಬಹುದು. ಈ ಎಲ್ಲ ರೀತಿಯಲ್ಲಿ ಸಾರ್ವಜನಿಕರು ಸಹಕಾರ ನೀಡಬಹುದು.
5 ಜಾತ್ರೆಯ ಹೆಸರಿನಲ್ಲಿ ಪ್ರವಾಹದ ವಿರುದ್ಧವಾಗಿ ಈಜಿದ ಅನುಭವ ಅನಿಸುತ್ತಿಲ್ಲವೇ?
ಕೆಡುಕಿನ ಪ್ರವಾಹದ ವಿರುದ್ಧ ಈಜುವುದು ಅದು ಎಲ್ಲ ಮನುಷ್ಯರ ಕರ್ತವ್ಯ ಮಠಕ್ಕಂತೂ ಅನಿವಾರ್ಯ ಕರ್ತವ್ಯ ಪ್ರವಾಹ ಶುಭವಾಗಿದ್ದರೆ ಅದರ ಜೊತೆಗೇ ಹೋಗುವಂಥಾದ್ದು ಅದು ಗಂಗಾ ಪ್ರವಾಹವಾಗಿದ್ದರೆ, ಅದು ಬಿಟ್ಟು ಅದು ಅಶುಭ ಪ್ರವಾಹವಾಗಿದ್ದರೆ ಅದರ ವಿರುದ್ಧ ಈಜುವುದು ಮಾತ್ರಾ ಅಲ್ಲ ಪ್ರವಾಹವನ್ನ ನಿಲ್ಲಿಸಬೇಕಾಗುತ್ತೆ.
Read E-Magazine: http://kamadugha.org/gou-vaani-samputa1-sanchike-2
~*~*~
Leave a Reply