ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.
ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !
ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.
‘ಹರ ತನ್ನೊಳಿರ್ದುಂ ಗುರು ತೋರದೇ ತಿಳಿವುದೇ?’ ಎನ್ನುತ್ತಾನೆ ಸರ್ವಜ್ಞ.
ನಮ್ಮೊಳಗೇ ಇರುವ ಭಗವಂತನನ್ನು ಗುರು ತೋರಿಸಿಕೊಡದೇ ಇದ್ದರೆ ನಮಗದು ತಿಳಿಯುವುದಿಲ್ಲ.
ಸಾವಿರ ವರ್ಷಗಳ ಹಿಂದಿನ ಈ ಮಾತಿನ ಅರ್ಥವ್ಯಾಪ್ತಿ ಹಿಂದೆಂದಿಗಿಂತ ಹೆಚ್ಚು ಇಂದು ವಿಸ್ತೃತ! ಅಂದಿನ ಜನಗಳಿಗಾದರೋ ಭಗವಂತನನ್ನು ತೋರಿಸಲು ಮಾರ್ಗದರ್ಶನ ಬೇಕಾಗಿತ್ತು. ಆದರೆ ಇಂದು, ಸ್ವಕೇಂದ್ರೀಕೃತ ಜೀವನಶೈಲಿಯ ಕಾರಣದಿಂದಾಗಿ, ಭಗವಂತನಿರಲಿ, ಕಣ್ಣೆದುರು ಕಾಣುವ ಯಾವ ಉದಾತ್ತವಾದುದನ್ನೂ ನಾವು ಗುರುತಿಸಲು ತಿಳಿದಿಲ್ಲ! ಮಹತ್ತಾದುದನ್ನು ಕಂಡು ಅದನ್ನು ಭಾವಿಸುವ, ಮಾನಿಸುವ ಸೂಕ್ಷ್ಮಪ್ರಜ್ಞೆಯೊಂದನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಮಹಾತ್ಮರು, ಅವರ ಮಹತ್ಕಾರ್ಯಗಳು ಅದೆಷ್ಟೋ ಬಾರಿ ನಮ್ಮ ಶುಷ್ಕಬುದ್ದಿಗೆ, ಕುತಾರ್ಕಿಕ ಮನಸ್ಸಿಗೆ, ದೋಷೈಕಗ್ರಾಹಿ ದೃಷ್ಟಿಗೆ ಹಿರಿದೆನಿಸದೇ ಅವುಗಳ ನೈಜ ಉಪಯೋಗಗಳನ್ನು ಪಡೆಯದಿರುವಂತಾಗಿದೆ. ಹೀಗಾಗಿ ಬೇಕು ಇದು ದೊಡ್ಡದೆಂದು ಸಮಾಜಕ್ಕೆ ತೋರಬಲ್ಲ ಮುಖಂಡರು. ಹಿರಿದಾದನ್ನು ಇನ್ನಷ್ಟು ಸ್ಪುಟವಾಗಿ ಕಾಣುವಂತೆ ಮಾಡುವ ದೃಷ್ಟಿಯೊಂದನ್ನು ಸಮಷ್ಟಿಗೆ ನೀಡುವ ’ಪ್ರಮುಖರು’.
ಭಾರತೀಯರ ಆರಾಧ್ಯ ದೈವ ಶ್ರೀರಾಮ ಜಾಗೃತಾವಸ್ಥೆಯ ಪ್ರತೀಕ. ಆತನ ಹೆಸರೇ ಮನುಕುಲವನ್ನು ಎಚ್ಚರಿಸುತ್ತದೆ. ಹೇಗೆನ್ನುವಿರಾ ? ನೋಡಿ, ಶ್ರೀ ರಾಮನಿಗೂ ಏಳಕ್ಕೂ ವಿಶೇಷ ಸಂಬಂಧವಿದೆ.
ರಾಮಾಯಣದಲ್ಲಿ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ. ಐದುನೂರು ಅಧ್ಯಾಯಗಳಿವೆ. ಏಳು ಕಾಂಡಗಳಿವೆ. ರಾಮಾವತಾರ ವಿಷ್ಣವಿನ ಏಳನೆಯ ಅವತಾರ, ಏಳುಕಾಂಡಗಳ ರಾಮಾಯಣದ ನಾಯಕ ಶ್ರೀರಾಮ ಜನಿಸಿದ್ದು ಪುನರ್ವಸು ನಕ್ಷತ್ರದಲ್ಲಿ. ನಕ್ಷತ್ರಗಳ ರಾಶಿಯಲ್ಲಿ, ನಕ್ಷತ್ರಗಳ ಗುಂಪಿನಲ್ಲಿ ಪುನರ್ವಸು ಏಳನೆಯದು. ರಾಮ ಶಬ್ದಕ್ಕೆ ಸಂಖ್ಯಾಶಾಸ್ತ್ರದ ಸ್ಥಾನ ಕೂಡ ಏಳು.