ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.

ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !

ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.

ಮೊನ್ನೆ ಮೊನ್ನೆಯಷ್ಟೇ ಮುಗಿದ ‘ವಿಶ್ವಮಂಗಲ ಗೋಗ್ರಾಮ ಯಾತ್ರೆ’ಯೊಂದೇ ಸಾಕು ಶ್ರೀಗಳ ಸಂಕಲ್ಪ ಶಕ್ತಿಯನ್ನು ಸಾರಲು. ಬೇರೇ ಯಾವುದೇ ದೇಶದಲ್ಲಾಗಿದ್ದರೆ, ಅಥವಾ ಬೇರೇ ಯಾವುದೇ ಸಂಸ್ಥೆಯಾಗಿದ್ದರೆ, ಹೋಗಲಿ ಬೇರೆ ಯಾವುದೇ ವಿಚಾರವಾಗಿದ್ದರೂ ಇಂಥದ್ದೊಂದು ಯಾತ್ರೆ ವಿಶ್ವಮಟ್ಟದ ಮಾತಾಗಿರುತ್ತಿತ್ತು. ಮಾಧ್ಯಮಗಳು ಅದನ್ನು ಬಿಂಬಿಸುತ್ತಿದ್ದ, ವಿಶ್ವ ಸಮುದಾಯ ಅದನ್ನು ನೋಡುತ್ತಿದ್ದ ರೀತಿಯೇ ಬೇರಾಗಿರುತ್ತಿತ್ತು. ಇಂಥದ್ದೊಂದು ಯಾತ್ರೆಗೆ ಸಿಗಬೇಕಾದ ಪ್ರಾಮುಖ್ಯ ಖಂಡಿತಾ ಸಿಗಲಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

ಅಲ್ಲದಿದ್ದರೆ ಮತ್ತೇನು?
ಕಳೆದ ವರ್ಷದ ಅಕ್ಟೋಬರ್ ೨೮ ರಂದು ವಿಜಯ ದಶಮಿಯ ಶುಭ ಮುಹೂರ್ತದಲ್ಲಿ ಭರತಭೂಮಿಯ ಅತ್ಯಂತ ಐತಿಹಾಸಿಕ, ಪೌರಾಣಿಕ ಮಹತ್ವದ ತಾಣ ಕುರುಕ್ಷೇತ್ರದಿಂದ ಶ್ರೀಗಳ ಸಾರಥ್ಯ, ಸಾಯುಜ್ಯದಲ್ಲಿ ಆರಂಭಗೊಂಡ ವಿಶ್ವಮಂಗಲ ಗೋ ಗ್ರಾಮ ಯಾತ್ರೆ ಅಖಂಡ ಭಾರತದಾದ್ಯಂತ ೨೪ ಸಾವಿರ ಕಿಲೋಮೀಟರ್‌ಗಳ ಉದ್ದಕ್ಕೂ ಸಂಚರಿಸಿ ಈ ವರ್ಷದ ಆರಂಭ- ಅಂದರೆ ಜನವರಿ ೧೪ರ ಸಂಕ್ರಾತಿಯಂದು ದೇಶದ ಮಧ್ಯಬಿಂದು ನಾಗಪುರದಲ್ಲಿ ಸಮಾಪನಗೊಂಡಿತು. ದೇಶದ ಎಲ್ಲ ೨೮ ರಾಜ್ಯಗಳನ್ನೂ ಯಾತ್ರೆ ತಲುಪಿದ್ದು ಮಾತ್ರವಲ್ಲ, ಉದ್ದಕ್ಕೂ ಗೋಸಂರಕ್ಷಣೆಯ ಕುರಿತು ಬಿತ್ತರಿಸಿದ ಸಂದೇಶ, ಜನಸಾಮಾನ್ಯರಲ್ಲಿ ಮೂಡಿಸಿದ ಜಾಗೃತಿ ಯಾತ್ರೆಯ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿ. ಇದೇ ಸಂದರ್ಭದಲ್ಲಿ ಗೋ ಸಂರಕ್ಷಣೆಯ ಪರವಾಗಿ ೮ ಕೋಟಿ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ.

ಒಂದು ವಿಷಯದ ಪರವಾಗಿ ಅಷ್ಟು ಸಂಖ್ಯೆಯ ಜನಾಭಿಪ್ರಾಯ ರೂಪಿಸುವುದು, ಅದೂ ಸ್ವಯಂಪ್ರೇರಣೆಯಿಂದ ಅಂಥದ್ದರಲ್ಲಿ ಪಾಲ್ಗೊಳ್ಳುವಂತೆ ಮಾಡಿದುದು ಸಣ್ಣ ಸಂಗತಿಯೇನು ? ದುರದೃಷ್ಟಕ್ಕೆ ಈವರೆಗೆ ಅದು ಮಹತ್ವದ ಸಂಗತಿಯಾಗಿ ನಮಗಾರಿಗೂ ಕಂಡಂತಿಲ್ಲ. ಹೋಗಲಿ ಬಿಡಿ. ಆದರೆ, ಇಂದು ಇಡೀ ದೇಶದ ೮ ಕೋಟಿ ಜನ ಪ್ರತ್ಯಕ್ಷವಾಗಿ ಶ್ರೀ ರಾಘವೇಶ್ವರರ ಹಿಂದಿದ್ದಾರೆ. ಮಾನಸಿಕವಾಗಿ ಶ್ರೀಗಳ ಆಂದೋಲನಕ್ಕೆ ಸಾಥ್ ಕೊಟ್ಟಿರುವವರ ಸಂಖ್ಯೆ ಇದರ ಮೂರ್ನಾಲ್ಕುಪಟ್ಟು ಹೆಚ್ಚಿದೆ. ಅಂದರೇ ದೇಶದ ಜನಸಂಖ್ಯೆಯ ಕನಿಷ್ಠ ಕಾಲುಭಾಗಕ್ಕಿಂತಲೂ ಹೆಚ್ಚು ಮಂದಿ ಎಲ್ಲ ಎಲ್ಲೆಗಳನ್ನು ಮೀರಿ, ಕೇವಲ ಗೋಂಸರಕ್ಷಣೆಯ ಏಕೋದ್ದೇಶಕ್ಕೆ ಒಂದಾಗಿದ್ದಾರೆ. ಅಂಥದೊಂದು ಸಂಘಟನೆಗೆ ಕಾರಣೀಭೂತರಾಗಿ ನಿಂತಿರುವ ರಾಘವೇಶ್ವರರ ಬಗೆಗಿನ ಹೊಗಳಿಕೆಗಳೆಲ್ಲ ಕ್ಲೀಷೆ ಎನಿಸುತ್ತದೆ.

ಇನ್ನು ವಿಶ್ವ ಗೋ ಸಮ್ಮೇಳನದ ಸಾರ್ಥಕ್ಯ ಎಂಬುದೊಂದು ಕೈಗೆಟುಕಿದ ಸವಿಗನಸು. ೨೦೦೭ರ ಏಪ್ರಿಲ್ ೨೧ರಿಂದ ಸತತ ಒಂಬತ್ತು ದಿನಗಳ ಕಾಲ ಇಡೀ ವಿಶ್ವದ ಕಣ್ಣುಗಳು ಹೊಸನಗರ ಸಮೀಪದ ರಾಮಚಂದ್ರಾಪುರ ಎಂಬ ಕರ್ನಾಟಕದ ಮಲೆನಾಡಿನ ಕಗ್ಗಾಡಿನ ಹಳ್ಳಿಯೊಂದರ ಮೇಲೆ ನೆಟ್ಟಿತ್ತು. ಹಾಗೆ ನೆಟ್ಟ ದಿಟ್ಟಿಯ ಕೇಂದ್ರ ಬಿಂದು ಆಗಿದ್ದ ಶ್ರೀ ರಾಘವೇಶ್ವರರು ಗೋ ಸಂರಕ್ಷಣೆಯ ಆಂದೋಲನಕ್ಕೆ ಹೊಸದೊಂದು ಭಾಷ್ಯವನ್ನು ಆ ಮೂಲಕ ಬರೆದರು. ಅದೊಂದು ಜಾಗತಿಕ ಹಬ್ಬ. ವಿಶ್ವದ ಮೂಲೆ ಮೂಲೆಗಳಿಂದ ಗೋ ಅಭಿಮಾನಿಗಳು, ತಜ್ಞರು, ಹೋರಾಟಗಾರರು, ಸಂಶೋಧಕರು, ವಿಜ್ಞಾನಿಗಳು ಸಮ್ಮೇಳನದಲ್ಲಿ ಪಾಲ್ಗೊಂಡರು. ಒಂಬತ್ತು ದಿನಗಳ ನಿರಂತರ ಚರ್ಚೆ, ಸಂವಾದಗಳು ನಡೆದವು. ಶ್ರೀಗಳು ಅದಕ್ಕಿಟ್ಟ ಹೆಸರೇ ಜನರನ್ನು ಸಂಮೋಹನಗೊಳಿಸುವಂತಿತ್ತು. ‘ಜಗನ್ಮಾತೆಯ ಜಾಗತಿಕ ಹಬ್ಬ’-ಯಾವುದೇ ಒಂದು ಸರಕಾರ, ವಿಶ್ವವಿದ್ಯಾಲಯದ ಮಟ್ಟದಲ್ಲಿ ಆಗಬೇಕಿದ್ದ ಕೆಲಸವನ್ನು ತೀರಾ ಅಕಾಡೆಮಿಕ್ ಸ್ವರೂಪದಿಂದ ಭಿನ್ನವಾಗಿ ಜನಸಾಮಾನ್ಯರತ್ತ ಕೊಂಡೊಯ್ದ ಸಾಧನೆಗೆ ಎಣೆಯೇ ಇರಲಿಲ್ಲ. ಇವು ಉದಾಹರಣೆಗಳಷ್ಟೇ. ಶ್ರೀ ರಾಘವೇಶ್ವರರ ಒಂದೊಂದೂ ಹೆಜ್ಜೆಯೂ ಒಂದೊಂದು ವಿಶಿಷ್ಟ, ಮೌಲ್ಯಯುತ, ಸರ್ವಶ್ರೇಷ್ಠವೆಂದು ದಾಖಲಿಸಬಹುದಾದ ಸಾಧನೆಗಳೇ.

ಹಾಗೆ ನೋಡಿದರೆ, ಹೋರಾಟ, ಆಂದೋಲನಗಳಿಗೆ ಹತ್ತಾರು ವಿಷಯಗಳಿದ್ದವು. ಅದರಲ್ಲಿ ಯಾವುದನ್ನೇ ಕೈಗೆತ್ತಿಕೊಳ್ಳಬಹುದಿತ್ತು. ಅಥವಾ ಏನನ್ನೂ ಮಾಡದೇ ಅವೇ ಧಾರ್ಮಿಕ ಆಚರಣೆಗಳು, ಪೀಠಾಧಿಕಾರ, ಉತ್ಸವ, ಆರಾಧನೆ-ಭಕ್ತ ಸಮೂಹ, ಪಾದಪೂಜೆ, ಮಠ-ಮಹಲು, ಒಂದಷ್ಟು ಶಿಕ್ಷಣ ಸಂಸ್ಥೆಗಳು…ಇತ್ಯಾದಿ, ಇತ್ಯಾದಿಗಳಲ್ಲಿ ಅವರು ಕಳೆದು ಹೋಗಿಬಿಡಬಹುದಿತ್ತು. ಆದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗೋ ಸಂರಕ್ಷಣೆಯನ್ನೇ ಆಯ್ದುಕೊಂಡು ಅದನ್ನೇ ತಮ್ಮ ಜೀವಿತದ ಗುರಿಯಾಗಿಸಿಕೊಂಡು, ಆ ನಿಟ್ಟಿನಲ್ಲಿ ತಾವು-ತಮ್ಮ ಇಡೀ ಶಿಷ್ಯ ಸಮೂಹವನ್ನೇ ತೊಡಗಿಸಿಕೊಂಡಿದ್ದಿದೆಯಲ್ಲಾ, ಅದು ನಿಜಕ್ಕೂ ಒಂದು ಪುಟ್ಟ ಬೆರಗನ್ನು ಹುಟ್ಟಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಟ್ಟದಷ್ಟು ಹೆಮ್ಮೆ, ಇನ್ನಿಲ್ಲದ ಪ್ರೀತಿ, ಬೀಗುವಷ್ಟು ಗರ್ವ, ನಮ್ಮದೇ ಎನ್ನುವ ಅಭಿಮಾನವನ್ನು ನಮಗರಿವಿಲ್ಲದೇ ಮೂಡಿಸುತ್ತದೆ. ಏಕೆಂದರೆ ಈ ನೆಲದ ಕೃಷಿ, ಪಾರಂಪರಿಕ ಶ್ರೀಮಂತಿಕೆಗಳಲ್ಲಿ ಒಂದಾದ ಗೋ ಸಂಪತ್ತನ್ನು ನಾವು ಉಳಿಸಿಕೊಳ್ಳಲು ಇದು ಸಕಾಲ. ಆಧುನಿಕ ಈ ಕಾಲಘಟ್ಟದಲ್ಲಿ ಅಂಥ ಅನಿವಾರ್ಯತೆಯೂ ನಮಗೊದಗಿದೆ. ಆದರೆ ಅದಕ್ಕೊಂದು ಸಮರ್ಥ ನಾಯಕತ್ವದ ಕೊರತೆ ಎದುರಾಗಿತ್ತು. ಅಷ್ಟೇಕೆ, ಇಂಥ ಅಗತ್ಯ ಚಿಂತನೆಯಡೆಗೆ ತೊಡಗಿಸಿಕೊಳ್ಳುವವರೇ ವಿರಳ ಅಥವಾ ಇಲ್ಲವೇ ಇಲ್ಲ ಎನ್ನುವ ಸನ್ನಿವೇಶದಲ್ಲಿ ‌ಆಶಾಕಿರಣವಾಗಿ ಪಡಮೂಡಿದವರು ಶ್ರೀರಾಘವೇಶ್ವರರು. ಅಂಥ ಎಲ್ಲ ಕೊರತೆಯನ್ನೂ ಶ್ರೀಗಳು ಯಶಸ್ವಿಯಾಗಿ ತುಂಬಿಕೊಟ್ಟಿದ್ದಾರೆ. ಮಾತ್ರವಲ್ಲ, ಭರತಭೂಮಿಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಭವಿಷ್ಯಕ್ಕೆ ಭರವಸೆಯ ಹೊಸ ಬೆಳಕಾಗಿದ್ದಾರೆ.

ತೀರಾ ಮೂವತ್ತು ಮೂವತ್ತೆರಡನೇ ವಯಸ್ಸಿಗೆಲ್ಲಾ, ಪೀಠವೇರಿದ ಕೇವಲ ಹತ್ತು ವರ್ಷಗಳಿಗೆಲ್ಲಾ ಶ್ರೀಗಳು ಕೈಗೊಂಡ ದಿಟ್ಟ ನಿರ್ಧಾರಗಳು, ಮಾಡಿದ ಸಾಧನೆ-ಸಂಘಟನೆ, ಈ ಸಮಾಜಕ್ಕೆ ಕೊಟ್ಟ ಕೊಡುಗೆ, ಜತೆಜತೆಗೇ ಅವರು ಬೆಳೆದ ಪರಿ ಎಂಥವರನ್ನೂ ದಿಙ್ಮೂಢರನ್ನಾಗಿಸುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಗೋಕರ್ಣ ಸಂಸ್ಥಾನದ ಶ್ರೀ ರಾಮಚಂದ್ರಾಪುರಮಠದ ಪೀಠಾಧಿಕಾರಕ್ಕೆ ಬರುತ್ತಿದ್ದಂತೆಯೇ ಶ್ರೀ ರಾಘವೇಶ್ವರರು ಮಾಡಿದ ಮೊದಲ ಕೆಲಸ ಸಮುದಾಯದ ಬಳಿಗೆ ಮಠವನ್ನು ಕೊಂಡೊಯ್ದದ್ದು. ತಾವು ಎಲ್ಲರ ಪ್ರತಿನಿಧಿಯಾಗಿ ನಿಂತು ಸಮಾಜ ಸಂಘಟನೆಗೆ ತೊಡಗಿದ್ದು. ಜತೆಗೆ ಪ್ರತಿಯೊಬ್ಬರ ಮೇಲೂ ಅವರು ತೋರುವ ಅವ್ಯಾಜ್ಯ ಪ್ರೀತಿ, ಅವರ ಆ ಮುಗ್ಧತೆ, ನಿಷ್ಕಪಟ ಮನಸ್ಸು, ನಿರ್ಮಲ ನಗು, ಮೃದುಭಾಷೆ, ಹಿತ ನುಡಿ, ಕಳಂಕರಹಿತ ವ್ಯಕ್ತಿತ್ವ, ಹಠ ಬಿಡದೇ ಹಿಡಿದದ್ದನ್ನು ಸಾಸುವ ಬದ್ಧತೆ, ನಿರಂತರ ಪರಿಶ್ರಮ, ದಣಿವರಿಯದ ದೇಹ, ಎಲ್ಲರನ್ನೂ ಒಂದೇ ಭಾವನೆಯಿಂದ ಬಳಿ ಕರೆದು ಜತೆಗೊಯ್ಯುವ ಸಮಾನ ಭಾವ, ನೊಂದ ಮನಕ್ಕೆ ಸಂತೈಕೆ ನೀಡುವ ಮಾತೃತ್ವ, ಎಂಥದೇ ಹೋರಾಟಕ್ಕೆ ಮುಂಚೂಣಿಯೊದಗಿಸುವ ನಾಯಕತ್ವ, ಅನ್ಯಾಯವನ್ನು ಮೃದು ಭಾಷೆಯಲ್ಲಿ, ಆದರೆ ಅಷ್ಟೇ ಖಂಡಿತವಾಗಿ ಖಂಡಿಸುವ ಛಾತಿ, ಧರ್ಮಪಾಲನೆಯ ಕರ್ತವ್ಯ ಪ್ರಜ್ಞೆ, ಆ ಪಾಂಡಿತ್ಯ, ಜ್ಞಾನ, ಅರಿವಿನ ವಿಸ್ತಾರ….ಓಹ್, ಸಾಕ್ಷಾತ್ ಆಚಾರ್ಯ ಶಂಕರರ ಪ್ರತಿ ರೂಪವನ್ನು ಶ್ರೀ ರಾಘವೇಶ್ವರರಲ್ಲಿ ಕಂಡರೆ ಅದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.

ಅಂಥದ್ದೊಂದು ಮಹಾನ್ ಶಕ್ತಿಗೆ ಎಲ್ಲ ಸುಮನಸಿಗರ ಪರವಾಗಿ ಇದೋ ಕೋಟಿಕೋಟಿ ನಮನ.

– ವಿಶ್ವೇಶ್ವರ ಭಟ್
ಸಂಪಾದಕ, ವಿಜಯ ಕರ್ನಾಟಕ

ಪರಿಚಯ:

ವಿಶ್ವೇಶ್ವರ ಭಟ್

ಇಂದು ಕನ್ನಡನಾಡಿನ ಮನೆಮಾತು. ಅವರ ಸಂಪಾದಕತ್ವದ ಹಿರಿಮೆಗೆ ಇದೊಂದು ನಿದರ್ಶನ ಸಾಕು. ದಿನಪತ್ರಿಕೆಯ ಓದುಗನಿಗೆ ತಾನೋದುವ ಪತ್ರಿಕೆಯ ಸಂಪಾದಕನ ಹೆಸರು ಗೊತ್ತಿರಲಿಲ್ಲ.

ಶ್ರೀ ವಿಶ್ವೇಶ್ವರ ಭಟ್

ಅದೊಂದು ಗೊತ್ತುಮಾಡಿಕೊಳ್ಳುವ ಸಂಗತಿಯೆಂದೂ ಅವನು ಭಾವಿಸಿರಲಿಲ್ಲ. ಭಟ್ಟರು ವಿಜಯಕರ್ನಾಟಕದ ಸಾರಥ್ಯ ವಹಿಸಿಕೊಂಡ ಅನಂತರ ಬದಲಾದ ಕನ್ನಡ ಪತ್ರಿಕೋದ್ಯಮದ ದಿಕ್ಕಿನಲ್ಲಿ ಇದು ಗಮನಾರ್ಹ ವಿಷಯ. ವಿ.ಕ.ದ ಕಟ್ಟಕಡೆಯ ಓದುಗನಿಗೂ ಭಟ್ಟರು ಗೊತ್ತು. ಇದೊಂದು ಪತ್ರಿಕೋದ್ಯಮದ ದಾಖಲೆಯೇ ಸರಿ. ಇದು ಭಟ್ಟರ ಅದೃಷ್ಟರೇಖೆ ತಂದ ಫಲವಲ್ಲ, ನಿಂತನೀರಾಗಿದ್ದ ಪತ್ರಿಕೋದ್ಯಮದ ದಿಕ್ಕು ಬದಲಿಸಿದ ಪರಿಶ್ರಮದ ಫಲ. ಹೌದು! ವಿಜಯಕರ್ನಾಟಕದ ಸಾರಥ್ಯ ಭಟ್ಟರದ್ದಾದ ಅನಂತರದ್ದು ಇತಿಹಾಸ. ಅದು ಕನ್ನಡ ಪತ್ರಿಕೋದ್ಯಮದ ಸುವರ್ಣ ಇತಿಹಾಸ. ಭಟ್ಟರು ಸುದ್ದಿಮನೆಯಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡತೊಡಗಿದ್ದರು. ಪತ್ರಿಕೆಯ ಓರಣ ಒಪ್ಪವಾಯಿತು. ಒಳಹೂರಣದ ರೀತಿ-ನೀತಿ ಪರಿಷ್ಕೃತಗೊಂಡಿತು. ಏನಾಯಿತು………. ಎಷ್ಟಾಯಿತು………. ಎನ್ನುವುದು ಹೇಳಿಮುಗಿಸಲಾರದಷ್ಟು. ಇಷ್ಟಂತೂ ಸತ್ಯ, ಓದುಗ ಹೊಸತನದಲ್ಲಿ ಮಿಂದೆದ್ದ; ಪತ್ರಿಕೋದ್ಯಮ ಹೊಚ್ಚಹೊಸದೆನಿಸಿತು; ಭಟ್ಟರು ಹೊಸತನದ ಹರಿಕಾರರೆನಿಸಿದರು.

ಹುಟ್ಟಿದ್ದು ಉತ್ತರಕನ್ನಡದ ಸುಂದರ ಹಳ್ಳಿ ಮೂರೂರಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದ ಎಮ್. ಎಸ್ಸಿ. ಪದವೀಧರ. ಸೆಳೆತ ಪತ್ರಿಕೋದ್ಯಮದತ್ತ. ಮತ್ತದೇ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಪ್ರಥಮ ಸ್ಥಾನದೊಂದಿಗೆ. ಜೊತೆಗೆ Diploma in Development Journalism ಪದವಿ. ವಿದೇಶೀ ನೆಲದಲ್ಲಿ ಮುಂದುವರಿದ ಅಧ್ಯಯನ. Diploma in International Journalism, Diploma in International Reporting, Diploma in Newspaper Designing ಪದವಿಗಳು.

ಕೆಲಕಾಲ ಪತ್ರಕರ್ತ. ಮತ್ತೆ ಪತ್ರಿಕೋದ್ಯಮದ ‘ಮೇಸ್ಟ್ರು’. ಮತ್ತೆ ಕೆಲಕಾಲ ಕೇಂದ್ರ ಸಚಿವರ ವಿಶೇಷಾಧಿಕಾರಿ. ಮಧ್ಯದಲ್ಲಿ ಉದಯ ವಾಹಿನಿಯ ವಾರ್ತಾ ಓದುಗ. ಪ್ರಸ್ತುತ ವಿಜಯ ಕರ್ನಾಟಕದ ಸಂಪಾದನೆಯ ಜವಾಬ್ದಾರಿ…… ಹೆಜ್ಜೆ ಇಟ್ಟಲ್ಲೆಲ್ಲ ತನ್ನದೇ ಛಾಪು.

ಜನಪ್ರಿಯ ಅಂಕಣಕಾರ. ತನ್ನದೇ ವಿಶಿಷ್ಟ ಶೈಲಿಯಲ್ಲಿ ಓದುಗರನ್ನು ಕಟ್ಟಿಹಾಕಿದ ಲೇಖಕ. ಹತ್ತುಹಲವು ಅಂಕಣಕಾರರ ನಿರ್ಮಾತೃ. ಬೈಲೈನೂ ಸಿಗದ ಸುದ್ದಿಮನೆಯ ಕಾಯಕಜೀವಿಗಳನ್ನು ಅಂಕಣಕಾರರನ್ನಾಗಿಸಿದ ಅಪರೂಪದ ಸಂಪಾದಕ. 36ಗ್ರಂಥಗಳು ಪ್ರಕಟಿತ. ರಾಜ್ಯೋತ್ಸವವೂ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕೃತ.

ಇದೆಲ್ಲಕ್ಕಿಂತ ಹೆಚ್ಚಾಗಿ “ಸಭ್ಯ, ಸುಸಂಸ್ಕೃತ, ಸಹೃದಯಿ.”
~
ಸಂಪಾದಕ,
ಹರೇರಾಮ.ಇನ್
editor@hareraama.in

Facebook Comments Box