‘ಹರ ತನ್ನೊಳಿರ್ದುಂ ಗುರು ತೋರದೇ ತಿಳಿವುದೇ?’ ಎನ್ನುತ್ತಾನೆ ಸರ್ವಜ್ಞ.

ನಮ್ಮೊಳಗೇ ಇರುವ ಭಗವಂತನನ್ನು ಗುರು ತೋರಿಸಿಕೊಡದೇ ಇದ್ದರೆ ನಮಗದು ತಿಳಿಯುವುದಿಲ್ಲ.

ಸಾವಿರ ವರ್ಷಗಳ ಹಿಂದಿನ ಈ ಮಾತಿನ ಅರ್ಥವ್ಯಾಪ್ತಿ ಹಿಂದೆಂದಿಗಿಂತ ಹೆಚ್ಚು ಇಂದು ವಿಸ್ತೃತ! ಅಂದಿನ ಜನಗಳಿಗಾದರೋ ಭಗವಂತನನ್ನು ತೋರಿಸಲು ಮಾರ್ಗದರ್ಶನ ಬೇಕಾಗಿತ್ತು. ಆದರೆ ಇಂದು, ಸ್ವಕೇಂದ್ರೀಕೃತ ಜೀವನಶೈಲಿಯ ಕಾರಣದಿಂದಾಗಿ, ಭಗವಂತನಿರಲಿ, ಕಣ್ಣೆದುರು ಕಾಣುವ ಯಾವ ಉದಾತ್ತವಾದುದನ್ನೂ ನಾವು ಗುರುತಿಸಲು ತಿಳಿದಿಲ್ಲ! ಮಹತ್ತಾದುದನ್ನು ಕಂಡು ಅದನ್ನು ಭಾವಿಸುವ, ಮಾನಿಸುವ ಸೂಕ್ಷ್ಮಪ್ರಜ್ಞೆಯೊಂದನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಮಹಾತ್ಮರು, ಅವರ ಮಹತ್ಕಾರ್ಯಗಳು ಅದೆಷ್ಟೋ ಬಾರಿ ನಮ್ಮ ಶುಷ್ಕಬುದ್ದಿಗೆ, ಕುತಾರ್ಕಿಕ ಮನಸ್ಸಿಗೆ, ದೋಷೈಕಗ್ರಾಹಿ ದೃಷ್ಟಿಗೆ ಹಿರಿದೆನಿಸದೇ ಅವುಗಳ ನೈಜ ಉಪಯೋಗಗಳನ್ನು  ಪಡೆಯದಿರುವಂತಾಗಿದೆ. ಹೀಗಾಗಿ ಬೇಕು ಇದು ದೊಡ್ಡದೆಂದು ಸಮಾಜಕ್ಕೆ ತೋರಬಲ್ಲ ಮುಖಂಡರು. ಹಿರಿದಾದನ್ನು ಇನ್ನಷ್ಟು ಸ್ಪುಟವಾಗಿ ಕಾಣುವಂತೆ ಮಾಡುವ ದೃಷ್ಟಿಯೊಂದನ್ನು ಸಮಷ್ಟಿಗೆ ನೀಡುವ ’ಪ್ರಮುಖರು’.

‘ಪ್ರಮುಖ’ರು ಸಮಷ್ಟಿಯೊಂದರ ನೇತಾರರು. ಸಮಾಜವನ್ನು ಮುನ್ನಡೆಸುವವರು. ಅವರದ್ದು ಒಳಿತೆಸಗುವ ಮಾತು. ಪ್ರಮುಖವೆಂದರೆ ಒಳ್ಳೆಯ ಮಾತೆಂದೂ ಅರ್ಥ. ಹಾಗಾಗಿ ಅವರ ಮಾತೂ ’ಪ್ರಮುಖ’. ಇನ್ನೊಂದು ಕೋನದಲ್ಲಿ ಅವರ ಮಾತು ಸಮೂಹದ ಪ್ರಾತಿನಿಧಿಕವಾಗಿಯೂ ‘ಪ್ರಮುಖ’ .

ಪ್ರಕೃತ “ಪ್ರಮುಖ” , ನಿತ್ಯನೂತನತೆಯನ್ನು ತನ್ನ ಪ್ರತ್ಯಂಗಗಳಲ್ಲಿ ಹೊಂದಿದ ಆಸ್ತಿಕರ ಶ್ರಧ್ಧಾಪ್ರಜ್ಞೆ, ಶ್ರೀಶ್ರೀಗಳವರ ಮುಖವಾಣಿ ‘ಹರೇರಾಮ’ದಲ್ಲಿ ಹೊಸತೊಂದು ಅಂಕಣವಾಗಿ ಹೊರಹೊಮ್ಮಲಿದೆ.

    ಇದು –

  • ಧರ್ಮ, ಕಲೆ, ಕ್ರೀಡೆ, ಉದ್ಯಮ, ಮಾಧ್ಯಮ, ರಾಜಕೀಯ ಹೀಗೆ ಬೇರೆಬೇರೆ ಕ್ಷೇತ್ರಗಳಲ್ಲಿ ಕೃತಪರಿಶ್ರಮರಾದ ಮಹನೀಯರ ಭಾವಸ್ಪಂದನ…
  • ಪ್ರಮುಖರು, ಶ್ರೀಶ್ರೀಗಳವರೊಂದಿಗೆ ಕಳೆದ ರಸನಿಮಿಷಗಳೆಡೆಗಿನ ಅವಧಾನ…
  • ಶ್ರೀಸಂಸ್ಥಾನ ಮತ್ತವರ ಸಮಾಜಮುಖಿ ಕಾರ್ಯಗಳೆಡೆಗಿನ ಖಾಸ್ ಅಭಿಪ್ರಾಯಗಳ ಅನುಸಂಧಾನ…
  • ಪರಮಪೂಜ್ಯರ ವ್ಯಕ್ತಿತ್ವದ ವಿವಿಧಮಜಲುಗಳೆಡೆಗಿನ   ಹೊಸನೋಟವೊಂದರ ಸಂಪ್ರದಾನ…
Facebook Comments Box