ನಾಗರಿಕತೆಯ ಬೆಳವಣಿಗೆಯಲ್ಲಿ “ಗುರು”ಗಳ ಪಾತ್ರ ಗಣನೀಯ.
ಆಳವಾದ ಅಭ್ಯಾಸ, ಚಿಂತನ, ಸಾಧನೆಗಳ ಮೂಲಕ ತಾವು ಕಂಡುಕೊಂಡ ಸತ್ಯ, ಜ್ಞಾನ, ಕೌಶಲ್ಯಗಳನ್ನು ಯೋಗ್ಯ- ಸತ್ಪಾತ್ರ ಶಿಷ್ಯರ ಮೂಲಕ ಸಮಾಜಕ್ಕೆ ಉಪಯುಕ್ತವಾಗುವಂತೆ ಮಾಡಿ ಮಾನವ ಸಮಾಜವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯುವಲ್ಲಿ ಗುರುಸಮೂಹದ ಪಾತ್ರ ಮಹತ್ವದ್ದು.
ನೂರಾರು ಋಷಿಮುನಿಗಳು ತಮ್ಮ ಸಾಧನೆಗಳ ಮೂಲಕ ಕಂಡುಕೊಂಡ ಸಿದ್ಧಾಂತಗಳನ್ನು ಗೌರವಿಸಿ ಆ ಹಾದಿಯಲ್ಲಿ ನಡೆದ ಸಾವಿರಾರು ಧರ್ಮಪ್ರಭುಗಳು ಭಾರತದ ಇತಿಹಾಸ ಬೆಳಗುವಂತೆ ಮಾಡಿ ವಿಶ್ವಕ್ಕೆ ಬೆಳಕು ನೀಡುವ ದೇಶವಾದುದು ಇತಿಹಾಸ ಸತ್ಯ.
ಗ್ರೀಕ್ ವಿದ್ವಾಂಸ ಅರಿಸ್ಟಾಟಲ್ ನ ಶ್ರೀರಕ್ಷೆಯಲ್ಲಿ ಅಲೆಕ್ಸಾಂಡರ್ ವಿಶ್ವವಿಜಯದ ಕನಸು ಕಂಡ. ನವ ನಂದರ ದುರಾಡಳಿತ ಕೊನೆಗೊಳಿಸಿ, ವಾಯವ್ಯ ಭಾರತವನ್ನು ಯವನ ಮುಕ್ತಗೊಳಿಸಿ ಅಖಂಡ ಭಾರತವನ್ನು ಒಂದು ಚಕ್ರಾಧಿಪತ್ಯದ ಒಳಗೆ ಪಾಲಿಸಿದ ಚಂದ್ರಗುಪ್ತನ ಮಾರ್ಗದರ್ಶಕ ಚಾಣಕ್ಯ..
ಹಕ್ಕಬುಕ್ಕರನ್ನು ಹುರಿದುಂಬಿಸಿ ಭವ್ಯ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ದಕ್ಷಿಣ ಭಾರತವನ್ನು ಸುಲ್ತಾನರುಗಳ ದುರಾಡಳಿತದಿಂದ ಕಾಪಾಡಿದ ವಿದ್ಯಾರಣ್ಯರು..
ಭಾರತದ ಉದ್ದಗಲಕ್ಕೂ ಹರಡಿದ್ದ ಮೊಗಲರ ವಿರುದ್ಧ ಕತ್ತಿ ಹಿರಿದು ಧರ್ಮ ರಕ್ಷಣೆಗಾಗಿ ನವ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿಯ ಮಾರ್ಗದರ್ಶಕ ಸಮರ್ಥ ರಾಮದಾಸರು..
ಮೊದಲಾದವರು ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದವರು.
ಬೌದ್ಧ ಜೈನಮತಗಳ ಪ್ರಭಾವದಡಿ ತಾತ್ಕಾಲಿಕವಾಗಿ ಕಳಾಹೀನವಾಗಿದ್ದ ಸನಾತನ ಧರ್ಮದ ಬೆಳಕು ಮತ್ತೆ ಪ್ರಜ್ವಲಿಸುವಂತೆ ಮಾಡಿ ದೇಶದಾದ್ಯಂತ ಸಂಚರಿಸಿ ಅಲ್ಲಲ್ಲಿ ಮಠ ಮಂದಿರಗಳನ್ನು ಸ್ಥಾಪಿಸಿ ಸಮಸ್ತ ಶಿಷ್ಯರನ್ನು ಪೀಠಾಧಿಕಾರಿಗಳಾಗಿ ನೇಮಿಸಿ ಸನಾತನ ಧರ್ಮದ ದೀಪ ಸದಾ ಪ್ರಜ್ವಲಿಸುವಂತೆ ಮಾಡಿದ ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಚಿನ್ನವಾಗಿ ಮುಂದುವರಿದ ಶ್ರೀರಾಮಚಂದ್ರಾಪುರ ಮಠದ ಶಿಷ್ಯರೆಂಬುದು ನಮ್ಮೆಲ್ಲರ ಹೆಮ್ಮೆ. ಪ್ರಕೃತ ಆ ಪೀಠದಲ್ಲಿದ್ದು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಶ್ರೀ ರಾಘವೇಶ್ವರ ಭಾರತೀ ಗುರುಗಳಿಗೆ ಅನಂತ ನಮನಗಳು.
ದೇವತಾರ್ಚನೆ, ಗೋಮಾತೆ, ಸಮಾಜ ಸೇವೆ, ರಾಷ್ಟ್ರ ಸೇವೆಗಳಲ್ಲಿ ತಮ್ಮನ್ನೂ, ತಮ್ಮ ಅನುಯಾಯಿಗಳನ್ನೂ ತೊಡಗಿಸಿ ಮಹಾತ್ಮರು ತೋರಿದ ದಾರಿಯಲ್ಲಿ ನಡೆದು,ಇತರರನ್ನೂ ನಡೆಸಿ ಈಗಾಗಲೇ ಸಾಕಷ್ಟು ಹೆಸರುಗಳಿಸಿರುವ ಧೀಮಂತ ಮೂರ್ತಿಗಳು.
ಸಾವಿರಾರು ವರ್ಷಗಳಿಂದ ಮಾನವನ ಸಹಜೀವಿಯಾಗಿ, ಸಂಪತ್ತಾಗಿ ಸಹಕರಿಸಿ ಇಂದು ಮಾನವನ ಕೃತಜ್ಞತೆಯಿಂದ ದುರ್ಭರ ಜೀವನ ನಡೆಸುತ್ತಿರುವ ಗೋಮಾತೆಯ ಸ್ಥಿತಿಯನ್ನು ಉತ್ತಮಪಡಿಸಲು ಅಹೋರಾತ್ರಿಯಿಂದ ಶ್ರಮಿಸುತ್ತಿರುವ ಶ್ರೀ ಗುರುಗಳ ಕ್ರಮ ಶ್ಲಾಘನೀಯ. ಕಾಡುಹಂದಿ, ಹುಲಿ ಮುಂತಾದವುಗಳಿಗೂ ಅಭಯಾರಣ್ಯ ನಿರ್ಮಿಸುವ ನಾವು ದನಕರುಗಳಿಗೆ ನಿರ್ಭಯವಾಗಿ ಅಭಯಾರಣ್ಯಗಳಿಲ್ಲದೆ ಬೇಡವಾದ ಕರುಗಳು ಬೇರೆ ಅವಕಾಶವೇ ಇಲ್ಲದೆ ಸಾವಿಗೆ ಶರಣಾಗುವ ಪರಿಸ್ಥಿತಿ ನಿಜಕ್ಕೂ ವಿಷಾದನೀಯವಲ್ಲವೇ? ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನುರಿತ ಕೆಲಮಂದಿ ಆಸಕ್ತ ಯುವಕ ಶಿಷ್ಯರ ತಂಡವೊಂದನ್ನು ರಚಿಸಿ, ವಿಶ್ವದಾದ್ಯಂತ ಹರಡಿರುವ ಶಿಷ್ಯರಿಗೂ,ಅಭಿಮಾನಿಗಳಿಗೂ ನೇರ ಸಂಪರ್ಕಕ್ಕೆ ದೊರೆಯುವಂತೆ ಹರೇರಾಮ.ಇನ್ ವೆಬ್ ಸೈಟ್ ಮುಖಾಂತರ ಗುರುಗಳ ಉಪದೇಶ, ಸೂಚನೆ,ಆದೇಶಗಳನ್ನು ತಿಳಿದುಕೊಂಡು ನೇರ ಸಂಪರ್ಕ ಸಾಧಿಸುವ ಸುತ್ಯರ್ಹ ಕಾರ್ಯಗಳನ್ನು ಮಾಡುವುದರ ಮೂಲಕ ಅಭಿನಂದನೀಯರಾಗಿದ್ದಾರೆ.
ದಿನಾಂಕ ೨೫-೦೫-೨೦೦೯ ರಂದು ನಮ್ಮ ಎಲ್ಯಡ್ಕ ಮನೆಯಲ್ಲಿ ನಡೆದ ಷಷ್ಟಿಪೂರ್ತಿ ಸಮಾರಂಭದಂದು ತಮ್ಮ ತುರ್ತು ಕೆಲಸಗಳ ನಡುವೆ ಕೃಪೆ ತೋರಿ ಎಲ್ಯಡ್ಕಕ್ಕೆ ದಯಮಾಡಿಸಿ, ದೇವರ ಕೋಣೆಯಲ್ಲಿ ದೇವರ ಪ್ರತಿರೂಪವಾಗಿ ಆಸೀನರಾಗಿ ಆತ್ಮೀಯ ಮಾತುಕತೆಗಳೊಂದಿಗೆ ಹರಸಿ ಸಭೆ ಸೇರಿದ್ದ ಬಂಧುಮಿತ್ರ, ನೆರೆಹೊರೆಯವರ ಸಮ್ಮುಖದಲ್ಲಿ ನಮ್ಮ ಆತ್ಮ ವೃತ್ತಾಂತ “ದೃಷ್ಟ-ಅದೃಷ್ಟ” ಕೃತಿಯನ್ನು ಬಿಡುಗಡೆಗೊಳಿಸಿ ನೆರೆದ ಸಮಸ್ತರನ್ನೂ ಹರಸಿ ಬೀಳ್ಕೊಡುವ ಮೊದಲು ನಮ್ಮ ಸಹವಾಸಿ ಗೋ ಸಂಸಾರದ ಮುತ್ತಜ್ಜಿ ಉಮಾ ಹಾಗೂ ಸಮಸ್ತ ಸದಸ್ಯರಿಗೂ ಫಲ ಮಂತ್ರಾಕ್ಷತೆ ನೀಡಿ ಹರಸಿದ ನೆನಪು ನಮ್ಮೆಲ್ಲರ ಕಣ್ಣ ಮುಂದೆ ಸದಾ ಹಸಿರಾಗಿದ್ದು ಗೌರವ ಭಾವನೆಯನ್ನು ಪ್ರಚೋದಿಸುತ್ತದೆ.
ಗುರು ಪರಂಪರೆಗೆ ವಂದನೆ ಭಗವಂತನಿಗೆ ಸೇರಿ ಭಗವಂತನ ಆಶೀರ್ವಾದ ಅವರ ಮೂಲಕ ಹರಿದು ಬರುತ್ತದೆ.
ನಮನಗಳು ಮತ್ತು ಆಶೀರ್ವಾದಗಳು ವಿದ್ಯುತ್ಪ್ರವಾಹದ ಎರಡು ತಂತಿಗಳಂತೆ ಹೊರಟಲ್ಲಿಗೆ ಬಂದು ಸೇರುವ ಪ್ರವಾಹಗಳು.
ಪ್ರತಿಯೊಂದು ವ್ಯಕ್ತಿಯೂ – ಕೆಲವರಿಗೆ ಗುರುಸ್ಥಾನದಲ್ಲಿದ್ದರೆ ಇನ್ನು ಕೆಲವರಿಗೆ ಶಿಷ್ಯರೇ. ಆದಿಗುರು ಭಗವಂತನೊಬ್ಬನೇ ಎಲ್ಲಾ ಗುರುಗಳಿಗೂ ಗುರು. ಗುರುಗಳಿಗೆ ನಮನ ಭಗವಂತನಿಗೆ ನಮನ. ಗುರುಗಳ ಕೃಪೆ-ಭಗವಂತನ ಕೃಪೆ. ಗುರು ಮತ್ತು ಭಗವಂತ ಜೊತೆಗೆ ಇದ್ದಾಗ ಮೊದಲು ಗುರುವಿನ ಪಾದಕ್ಕೆ ನಮಿಸುತ್ತೇನೆ. ಯಾಕೆಂದರೆ ಭಗವಂತನನ್ನು ತೋರಿಸಿ ಕೊಟ್ಟಾತ ಗುರು-ಅಂದಿದ್ದಾರೆ ಮಹಾತ್ಮ ಕಬೀರರರು. ಶ್ರೀ ಗುರುಗಳು ಆಶಿಸಿದ ಸಮಸ್ತ ರಚನಾತ್ಮಕ ಕಾರ್ಯಗಳಲ್ಲೂ ನಮ್ಮಿಂದಾದ ಅಳಿಲ ಸೇವೆ ಸಲ್ಲಿಸಲು ಸಮಸ್ತ ಶಿಷ್ಯ ಕೋಟಿಗೆ ಅನುವಾಗಲೆಂದು ಹಾರೈಸುತ್ತಾ ಗುರುಗಳಿಗೂ ಹಿರಿಯ ಕಿರಿಯ ಸೇವಾಸಕ್ತ ಶಿಷ್ಯ ವೃಂದಕ್ಕೂ ನಮನಗಳೊಂದಿಗೆ,
–
ಈಶ್ವರ ಭಟ್, ಎಸ್.
M.A. B.Ed
ಎಳ್ಯಡ್ಕ ಮನೆ, ಪಾಲ್ತಾಡಿ ಅಂಚೆ,
ಪುತ್ತೂರು ತಾಲೂಕು, ದ.ಕ 574210
ishwarabhats@gmail.com
08251-272292
ಪರಿಚಯ:
ಶ್ರೀ ಎಸ್.ಈಶ್ವರ ಭಟ್ಟರು
ಶ್ರೀ ಎಸ್.ಈಶ್ವರ ಭಟ್ಟರು ಪುತ್ತೂರು ತಾಲೂಕಿನ ಎಳ್ಯಡ್ಕದಲ್ಲಿರುವವರು. ಮೂವತ್ತನಾಲ್ಕು ವರುಶಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ಎಳ್ಯಡ್ಕ ಮನೆಯಲ್ಲಿ ನಡೆಸುತ್ತಿದ್ದಾರೆ. ವೇದ, ಜ್ಯೋತಿಷ್ಯ, ಚರಿತ್ರೆ, ಆಂಗ್ಲ-ಕನ್ನಡ ಸಾಹಿತ್ಯಗಳಲ್ಲಿ ವಿಶೇಷ ಒಲವನ್ನು ಹೊಂದಿರುವ ಇವರು ವಿದ್ಯಾವಂತ ಸಮಾಜದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಅಪರೂಪದ ಅರ್ಥಗರ್ಭಿತ ಸುಭಾಷಿತಗಳ ಸಂಗ್ರಹವನ್ನು ಹವ್ಯಾಸವನ್ನಾಗಿಸಿಕೊಂಡು ವಿರಾಮದ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಮಠ, ಪೀಠದ ಸೇವೆಯಲ್ಲಿಯೂ ಸಂತೋಷವನ್ನು ಕಾಣುತ್ತಿರುವ ಶ್ರೀ ಈಶ್ವರ ಭಟ್ಟರಿಗೆ ಶ್ರೀರಾಮನು ಶುಭಾಶೀರ್ವಾದವನ್ನು ಅನುಗ್ರಹಿಸಲೆಂದು ನಮ್ಮೆಲ್ಲರ ಹಾರಯಿಕೆ.
July 26, 2010 at 5:21 PM
ಭವ್ಯ ಬರಹ.
”ಕಾಡುಹಂದಿ, ಹುಲಿ ಮುಂತಾದವುಗಳಿಗೂ ಅಭಯಾರಣ್ಯ ನಿರ್ಮಿಸುವ ನಾವು ದನಕರುಗಳಿಗೆ ನಿರ್ಭಯವಾಗಿ ಅಭಯಾರಣ್ಯಗಳಿಲ್ಲದೆ ಬೇಡವಾದ ಕರುಗಳು ಬೇರೆ ಅವಕಾಶವೇ ಇಲ್ಲದೆ ಸಾವಿಗೆ ಶರಣಾಗುವ ಪರಿಸ್ಥಿತಿ ನಿಜಕ್ಕೂ ವಿಷಾದನೀಯವಲ್ಲವೇ?” -ಈ ಸಾಲು ಅದ್ಭುತವಾಗಿದೆ. ಓದಿ ತುಂಬಾ ಸಂಕಟವಾಗುತ್ತಿದೆ.
July 26, 2010 at 6:22 PM
ಶ್ರೀ ಎಸ್.ಈಶ್ವರ ಭಟ್ಟರ ಆತ್ಮ ವೃತ್ತಾಂತ “ದೃಷ್ಟ-ಅದೃಷ್ಟ” ಕೃತಿ ಓದಿದಾಗ ನಿಜವಾಗಿಯೂ ನನಗೆ ಕಣ್ಣೀರು ಬಂತು.
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ …ಮಾತು ನೆನಪಾಯಿತು…
ನಿಜಯಾಗಿಯು ತುಂಬಿದ ಕೊಡ….
ಚಾಣಕ್ಯ, ಸಮರ್ಥ ರಾಮದಾಸರು, ವಿದ್ಯಾರಣ್ಯ ಇವರುಗಳಿಗೆ ಸಿಕ್ಕಿದಂತೆ ನಮ್ಮ ಗುರುಗಳ ಕಲ್ಪನೆಯನ್ನು ಬಹಿರ್ಮುಖದಲ್ಲಿ ಸಮರ್ಥವಾಗಿ ನಿರ್ವಹಿಸುವ/ನಡೆಸುವ ಒಬ್ಬ ಸಮರ್ಥ ನಾಯಕ ಬೇಗ ಸಿಗಲಿ ಅಂತ ಆ ದೇವರಲ್ಲಿ ಕೇಳೋಣ…..
July 26, 2010 at 6:35 PM
ಹರೇರಾಮ..,
ಜೀವನ ಎನ್ನುವುದು ಸುಖದ ಸುಪ್ಪತ್ತಿಗೆ ಯಾರಿಗೂ ಅಲ್ಲ… ಜೀವನದಲ್ಲಿ ಬಂದ ಕಷ್ಟ, ಸುಖ, ನೋವು, ನಲಿವು, ಅಗಲುವಿಕೆಗಳನ್ನು ಎಲ್ಲವನ್ನೂ ಬಂದಂತೆ ಧೈರ್ಯದಿಂದ ಎದುರಿಸಿದವರು.. ಶ್ರೀ ಎಳ್ಯಡ್ಕ ಈಶ್ವರ ಭಟ್ ಇವರು.. ಇವರ ಆತ್ಮಕಥನ ‘ದೃಷ್ಟ -ಅದೃಷ್ಟ ‘ ಓದಿದರೆ ಇವರ ಮಾನಸಿಕ ಸ್ಥೈರ್ಯ ನಮಗೆ ಕಾಣಲು ಸಿಗುತ್ತದೆ.. ವಿಧಿ ತಮಗೆ ದೃಷ್ಟಿ ಬೆಳಕನ್ನು ಕೊಡುವಲ್ಲಿ ತಾರತಮ್ಯ ಮಾಡಿದರೂ ಆ ಪರಿಸ್ಥಿತಿಯನ್ನು ಕಡೆಗಣಿಸಿ.., ಓದುವುದೇ ತನ್ನ ಗುರಿ, ತನ್ನ ಧ್ಯೇಯ ಎನ್ನುವಂತೆ ಬಾಲ್ಯದಿಂದಲೂ ಓದನ್ನು ಗೀಳನ್ನಾಗಿ ಮಾಡಿಕೊಂಡು ಕಡು ಬಡತನದ ಮಧ್ಯೆಯೂ ಕಷ್ಟದಿಂದ ಬೆಳೆದು ಶಿಕ್ಷಕರಾದವರು. ಶಿಕ್ಷಕ ವೃತ್ತಿಯಲ್ಲಿರುವ ಒಬ್ಬ ಗುರು ಹೇಗಿರಬೇಕು ಎಂದು ನಾಡಿಗೆ ತೋರಿ ಕೊಟ್ಟವರು.. ತಾನು ಕಲಿಸಿದ ಸಾವಿರಾರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಕೊಟ್ಟು ಅವರನ್ನು ದೇಶದ ಉತ್ತಮ ಪ್ರಜೆಯಾಗುವಂತೆ ಬೆಳೆಸಿದವರು.. ಇವರು ಒಳ್ಳೆಯ ಶಿಕ್ಷಕ ಮಾತ್ರ ಅಲ್ಲ ಒಬ್ಬ ಒಳ್ಳೆಯ ಪಿತನೂ ಹೌದು… ಇವರ ಮೂವರು ಮಕ್ಕಳೂ ಈಗ ಮಾಡುತ್ತಿರುವ ಸಾಧನೆಯ ಹಿಂದೆ ಈಶ್ವರ ಭಟ್ ರ ಮಾರ್ಗದರ್ಶನ, ಬೆಂಬಲ, ಪ್ರೋತ್ಸಾಹ ಕಾಣುತ್ತದೆ.. ಹಲವಾರು ಭಾಷೆಗಳ ಮೇಲೆ ಹಿಡಿತವಿರುವ ಈಶ್ವರ ಭಟ್ ರು ನಮ್ಮಂಥ ಹಲವಾರು ಜನಗಳಿಗೆ ಸ್ಪೂರ್ತಿಯಾಗಿದ್ದಾರೆ.. ಶ್ರೀ ಗುರುಗಳ ಮೇಲೆ ಅತೀವ ಭಕ್ತಿಯನ್ನೂ, ಗೌರವವನ್ನೂ ಹೊಂದಿದ್ದು, ಮಠಕ್ಕೆ ತಮ್ಮಿಂದಾದ ಸೇವೆ ಮಾಡುತ್ತಿದ್ದಾರೆ.ತಮ್ಮ ಮಕ್ಕಳಿಗೂ ಅದೇ ಪ್ರೇರಣೆ ಕೊಡುತ್ತಿದ್ದಾರೆ.
ಈಗ ಅನಿಸುತ್ತದೆ.. ,ತನ್ನ ಪಾಲಿಗೆ ಬಂದದ್ದನ್ನು ಎದುರಿಸಿದ ಇವರ ಧೃಢತೆಯ ಎದುರು ವಿಧಿ ತಲೆಬಾಗಿ ನಿಂತಿದೆಯೇನೋ ಎಂದು…. ಇವರ ಜೀವನ ಸುಖ ನೆಮ್ಮದಿಯಿಂದ ಸಾಗಲಿ.. ಎಲ್ಲಾ ದೇವರ, ಶ್ರೀ ಗುರುಗಳ ಆಶೀರ್ವಾದ ಸದಾ ಇವರ, ಇವರ ಕುಟುಂಬದ ಮೇಲಿರಲಿ… ಹರೇರಾಮ….
July 27, 2010 at 12:08 AM
“….. ಹಂದಿ,ಹುಲಿ,ಚಿರತೆ ಗಳಿಗೆ ಅಭಯಾರಣ್ಯ…ಪಶು,ಕರು ಗಳಿಗೆ ಕಸಾಯಿಖಾನೆ…”
ಈಶ್ವರಣ್ಣ ಈ ಉಪಮೆ ಜನ ಸಾಮಾನ್ಯರಾದ ನಮಗೂ ಅನ್ವಯ ವಾಗುವಂತಾಯಿತು.ಕಳ್ಳಕಾಕರಿಗಿದು ವೈಭವದ ಕಾಲ.. ಭ್ರಷ್ಟರಿಗೆ,ಲಂಚಕೋರರಿಗೆ,ದುರ್ಮಾರ್ಗಿಗಳಿಗೆ ಸುಕಾಲ……ಅಭ್ಹಯಾರಣ್ಯದ ರಕ್ಷಣೆ….! ನ್ಯಾಯನೀತಿಯಲ್ಲಿ ಬದುಕಬಯಸುವ ….ಮುಂದುವರಿದವರೆಂದೆನಿಸಿದ ಪಷುಗಳಂತ ನಮಗೆ ಕಸಾಯಿಖಾನೆ ವರ್ಗ……….!
July 27, 2010 at 7:08 AM
ಗುಕಾರ ಅಂಧಕಾರಸ್ಯಾತ್ ರು ಕಾರಸ್ತನ್ನಿರೋಧಕ: ಅಂಧಕಾರ ನಿರೋಧಿತ್ವಾತ್ ಗುರು ಇತ್ಯಭಿಧೀಯತೇ
ಗುಕಾರ ಅಂಧಕಾರ ಎಂದರೆ ಅಜ್ಞಾನ ಸ್ವರೂಪವಾದರೆ ರುಕಾರ ಅದನ್ನು ನಿರೋಧಿಸುವ ಶಕ್ತಿ.ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾದಿಸುವವ ಎಂದರ್ಥ.ಗುರು ಎಂಬ ಪದಕ್ಕೆ ಅನೇಕ ಅರ್ಥಗಳಿವೆ.ತಂದೆ,ಪೂಜನೀಯ ವ್ಯಕ್ತಿ,ಮಹತ್ತಿನ ವಸ್ತು ಅಥವಾ ವಿಷಯ ಹಾಗೂ ಘನತ್ವ ಮತ್ತು ಭಾರ ಎಂದು ಈ ಪದ ಸೂಚಿಸುತ್ತದೆ.ಗುರು ಜ್ಞಾನದಿಂದ ಭಾರವಾಗಿದ್ದರೆ ಶಿಷ್ಯನು ಅಜ್ಞಾನದಿಂದ ಲಘುವಾಗಿರುತ್ತಾನೆ. ಲಘುತ್ವದಿಂದ ಮಹತ್ವದೆಡೆಗೆ ಹೋಗಲು ಗುರುವಿನ ಮಾರ್ಗ,ಅನುಗ್ರಹ ಬೇಕೇ ಬೇಕು.ಇಂತಹ ಪಾಠವನ್ನು ನಮಗೆ ಬೋಧಿಸುತ್ತಾ ಗುರು ದೃಷ್ಟಿಯನ್ನು ನಮ್ಮಗುರುಗಳಲ್ಲಿ ನೆಟ್ಟು ಅನುಗ್ರಹವೆಂಬ ಅದೃಷ್ಟವನ್ನು ಪಡೆದವರಲ್ಲಿ ಒಬ್ಬರು ನನ್ನ ಶೈಕ್ಷಣಿಕ ಗುರುಗಳು ಮತ್ತು ದೊಡ್ಡಪ್ಪರಾದ ಶ್ರೀಯುತ ಎಲ್ಯಡ್ಕ ಈಶ್ವರ ಭಟ್ಟರು. ಈ ಮೂಲಕ ಇವರು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಮೆಚ್ಚುಗೆಗೆ ಪಾತ್ರರಾದವರು. ನನ್ನ ಉಭಯ ಗುರುಗಳಿಗೂ ವಂದಿಸುತ್ತೇನೆ. ಹರೇ ರಾಮ.
July 27, 2010 at 3:16 PM
ಈಶ್ವರ ಭಟ್ಟರ ಬರಹಕ್ಕೆ ಆಳವೂ ಇದೆ; ಅಗಲವೂ ಇದೆ.
July 27, 2010 at 8:47 PM
ಶ್ರೀಯುತರು ಹಿರಿಯರು ಆದ ಈಶ್ವರ ಭಟ್ಟರಿಗೆ ಅಭಿನಂದನೆಗಳು. ಸ್ವತಃ ಗುರು ಸ್ಥಾನದಲ್ಲಿ ಇದ್ದು ನೂರಾರು/ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರಿಂದ ಮಾತ್ರ ಇಂತಹ ಗುಣ ಮಟ್ಟದ ಬರಹ ನಿರೀಕ್ಷಿಸಲು ಸಾದ್ಯ. ಅಭಿನಂದನೆಗಳು- ಹಾಗೂ ಶ್ರೀಯುತ ಕೇಶವ ಮುರಳಿಯವರ ಜೊತೆಗಿನ [ಮತ್ತು ಈಗ ಶ್ರೀ ಮಹೇಶರ] ಸುದೀರ್ಘ ಒಡನಾಟ ಮತ್ತು ಬಾಂದವ್ಯದಿಂದಾಗಿ ತಮ್ಮ ಪರೋಕ್ಷ ವಿದ್ಯಾರ್ಥಿ ಯಾಗಲು ನನಗೆ ಸಾಧ್ಯವದದ್ದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ – ಧನ್ಯವಾದಗಳು
ನಮಸ್ಕಾರಗಳೊಂದಿಗೆ
ಪ್ರಸನ್ನ
July 27, 2010 at 11:46 PM
ಹೊಸತನವಿದೆ ಹಿರಿತನವಿದೆ ಬರಹದಲಿ…..
ಭೂಮಿಯ ಭಾರ ಹೆಚ್ಚಾದಾಗ, ಹರ ಗುರು ರೂಪದಿ ಬ೦ದು ನಟರಾಜ ನರ್ತನವ ಮಾಡಿ, ಹಗುರಾಗಿಸುವನು, ನರ್ತನವ ತಿದ್ದಿ ಹಗುರಾಗುವನು…… ಪ್ರತಿಬಾರಿ ಬರುವನು, ಸರಿದಾರಿ ತೋರುವನು, ಆನ೦ದದ ಮಳೆ ಬೆಳೆ..
.
[ “ನಮನಗಳು ಮತ್ತು ಆಶೀರ್ವಾದಗಳು ವಿದ್ಯುತ್ಪ್ರವಾಹದ ಎರಡು ತಂತಿಗಳಂತೆ ಹೊರಟಲ್ಲಿಗೆ ಬಂದು ಸೇರುವ ಪ್ರವಾಹಗಳು.” ] – Beautiful
July 29, 2010 at 9:28 AM
ಅಂಕಣ ಮತ್ತು ಅಂಕಣಕ್ಕೆ ಇಟ್ಟ ಹೆಸರು ಚೆನ್ನಾಗಿದೆ.
July 29, 2010 at 9:13 PM
ಎಳ್ಯಡ್ಕ ಈಶ್ವರ ಭಟ್ಟರ ಲೇಖನ ವಿಚಾರ ಪ್ರಚೋದಕವಾಗಿ ಮೂಡಿ ಬಂದಿದೆ.
ಅಲೆಕ್ಸಾಂಡರನಿಗೆ ಅರಿಸ್ಟಾಟಲ್, ಚಂದ್ರ ಗುಪ್ತನಿಗೆ ಚಾಣಕ್ಯ, ಹುಕ್ಕ ಬುಕ್ಕರಿಗೆ ವಿದ್ಯಾರಣ್ಯರು, ಶಿವಾಜಿಗೆ ಸಂತ ರಾಮದಾಸರು ಹೇಗೆ ಮಾರ್ಗದರ್ಶಕರಾಗಿ ಅವರನ್ನು ಅಮರರಾಗಿಸಿದರೋ, ಅಂತೆಯೇ ನಮ್ಮ ಈ ಕಾಲ ಘಟ್ಟದಲ್ಲಿ, ಸನಾತನ ಧರ್ಮದ ಉದ್ಧಾರಕರಾಗಿ ಬಂದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟು 36 ನೇ ಯತಿವರ್ಯರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಮಾರ್ಗದರ್ಶನ ಸಿಕ್ಕಿರುವುದು ನಮ್ಮೆಲ್ಲರ ಮಹಾ ಭಾಗ್ಯವೇ ಸರಿ.
ಹುಟ್ಟಿನಿಂದ ಕೊನೆ ಉಸಿರಿರುವ ವರೇಗೆ, ನಮಗೆ ಗುರುಗಳ ಮಾರ್ಗದರ್ಶನ ಬೇಕೇ ಬೇಕು. ನಮ್ಮನ್ನು ಸನ್ಮಾರ್ಗದೆಡೆಗೆ ಒಯ್ಯುಲು ಸಿಗುವ ಶಕ್ತಿ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಮಾತ್ರ ಸಾಧ್ಯ.
ಒಂದು ಬೀದಿ ನಾಯಿಯನ್ನು ಕೊಲ್ಲಲೂ ಸಾಧ್ಯವಿಲ್ಲದ ಕಾನೂನು ಇರುವ ಈ ನಾಡಿನಲ್ಲಿ, ದಿನ ನಿತ್ಯ ಗವ್ಯ ಉತ್ಪನ್ನಗಳನ್ನು ಉಪಯೋಗಿಸುವ ಜನಾಂಗ ಅದರ ಹತ್ಯೆಯನ್ನು ತಡೆಯಲು ಕಾನೂನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಎಂಥಾ ವಿಪರ್ಯಾಸ.
ಈ ಲೇಖನದ ಕೊನೆಯಲ್ಲಿ ಬಂದ ಪ್ರತಿಕ್ರಿಯೆಯನ್ನು ಓದಿದಾಗ ಶ್ರೀ ಭಟ್ಟರ ಆತ್ಮ ವೃತ್ತಾಂತ ““ದೃಷ್ಟ-ಅದೃಷ್ಟ” ಓದಬೇಕೆಂಬ ಬಯಕೆ ಮೂಡಿದೆ.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ||
July 30, 2010 at 7:03 AM
ವಿಚಾರ ಪ್ರಚೋದಕ ಪ್ರತಿಕ್ರಿಯೆ
July 31, 2010 at 4:09 PM
ನಾಗರಿಕ ಸಮಾಜದಲ್ಲಿ ಗುರುಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಅನ್ನಿಸುತ್ತೆ. ಹಿಂದಿನ ದಿನಕ್ಕಿಂತಲೂ ಈಗ ಗುರುಗಳ ಮಾರ್ಗದರ್ಶನ ಸಮಾಜಕ್ಕೆ ಅತ್ಯಂತ ಆವಶ್ಯಕವಾಗಿದೆ.
ದಾರಿ ತಪ್ಪಿ ಹೋಗುತ್ತಿರುವ ಯುವ ಜನಾಂಗಕ್ಕೆ ಸರಿಯಾದ ಹಾದಿ ತೋರಿಸಿ, ಸಮಾಜ, ಧರ್ಮ, ಸಂಸ್ಕೃತಿಗಳತ್ತ ಯೋಚನೆ ಮಾಡುವ ಹಾಗೆ ಮಾಡುವ ಕೆಲಸವನ್ನು ಆಯಾ ಸಮಾಜದ ಗುರುಗಳೇ ಮಾಡಬೇಕಾದ್ದು. ಅಂತಹ ದೊಡ್ಡ ಬದಲಾವಣೆಯನ್ನು ಶ್ರೀಗಳು ಮಾಡುತ್ತಿರುವುದರಲ್ಲಿ ಎರಡುಮಾತಿಲ್ಲ.
ಗುರುಗಳ ಸ್ಥಾನ – ದೇವರು ಮತ್ತು ವ್ಯಕ್ತಿಯ ಮಧ್ಯೆ ಇರುವ ಪ್ರಮುಖ ಸ್ಥಾನ ಅಂತಾನೇ ಹೇಳಬಹುದು. ದೇವರ ರೂಪವನ್ನು ಗುರುಗಳಲ್ಲಿ ನಾವು ಕಾಣುತ್ತೇವೆ. ದೇವರಷ್ಟೇ ಭಕ್ತಿಯಿಂದ ನಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ. ಅಷ್ಟೇ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತೇವೆ. ಗುರುಗಳು ಅಪೇಕ್ಷೆ ಪಟ್ಟ ಯಾವುದೇ ಕೆಲಸವನ್ನು ತುಂಬು ಹೃದಯದಿಂದ ಮಾಡುತ್ತೇವೆ. ಏಕೆಂದರೆ ಆ ಸ್ಥಾನ ಅಂತಹದ್ದು. ದೇವರ ಪ್ರತಿರೂಪವಾದ ಗುರುಗಳ ಸೇವೆ ಮಾಡಿ ದೇವರ(ಗುರುಗಳ) ಕೃಪೆಗೆ ಪಾತ್ರರಾಗೋಣ.
July 31, 2010 at 8:53 PM
ಕಿಂ ಕುರ್ವಂತಿ ವಕ್ತಾರಃ ಯದಿ ಶ್ರೋತಾ ನ ವಿದ್ಯತೇ |
ನಗ್ನಃ ಕ್ಷಪಣಕೇ ದೇಶೇ ರಜಕಃ ಕಿಂ ಕರಿಷ್ಯತಿ..!? ||
ಕೇಳುವವರಿದ್ದಾಗ ಮಾತ್ರ ಹೇಳುವ ಮಾತು, ಓದುವವರಿದ್ದಾಗ ಮಾತ್ರ ಬರೆದ ಲೇಖನಗಳು ಫಲಪ್ರದ.
ಲೇಖನವನ್ನು ಓದಿದ, ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞತೆಗಳು ಹಾಗೂ ವಂದನೆಗಳು…
ಶ್ರೀ ಗುರುಭ್ಯೋ ನಮಃ, ಹರೇರಾಮ ||
August 3, 2010 at 8:15 PM
laaika aidu. chendalli baraddi…
March 5, 2013 at 4:39 PM
ಶ್ರೀ ಎಳ್ಯಡ್ಕ ಈಶ್ವರ್ ಭಟ್ಟರು ನನಗೆ ಗುರುವಾಗಿದ್ದವರು..
ಇವರು ಹರಿದಾಡುವ ವಿಶ್ವಕೋಶವೆಂದರೂ ಅತಿಶಯೋಕ್ತಿಯಲ್ಲ..ಇವರ ದೃಷ್ಟ ಅದೃಷ್ಟ ಪುಸ್ತಕವು ಜೀವನ ಪಾಠ ಕಲಿಸುವ ಮಹಾನ್ ಮಾರ್ಗದರ್ಶಕ ಹೊತ್ತಗೆ….
ಶ್ರೀದೇವರು ಗುರುವರ್ಯರಿಗೆ ಆಯುರಾರೋಗ್ಯ ನೀಡಲಿ ಎಂದು ಬೇಡಿಕೊಳ್ಳುವ………ಪ್ರವೀಣ್ ಚೆನ್ನಾವರ ಪಾಲ್ತಾಡಿ,ಪುತ್ತೂರು.