ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ. ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ ~ ಶ್ರದ್ಧಾಸುಮ 14:

ಬ್ರಹ್ಮೈಕ್ಯ ಪೂಜ್ಯಗುರುವರ್ಯರು ನಾನು ದರ್ಶನಮಾಡಿದಂತೆ

ಮಧುಕೇಶ್ವರ ಎಂ. ಅಡ್ಕೋಳಿ

“ಗುರುವೇ ಬ್ರಹ್ಮನು ಗುರುವೇ ವಿಷ್ಣುವು ಗುರುವೇ ದೇವ ಮಹೇಶನು| ಗುರುವೇ ಸಾಕ್ಷಾತ್ ಪರಬ್ರಹ್ಮನು ಅವನ ಚರಣಕೆ ನಮನವು”||

ಶ್ರೀಗುರುವು ಸೃಷ್ಟಿಕರ್ತನಾದ ಬ್ರಹ್ಮ, ಜಗತ್ ಪಾಲಕನಾದ ವಿಷ್ಣು, ಪ್ರಳಯಕಾರನಾದ ಮಹೇಶ್ವರ ಮತ್ತು ಸಾಕ್ಷತ್ ಪರಬ್ರಹ್ಮ ಸ್ವರೂಪಿಯೇ ಶ್ರೀಗುರುವು. ಅವನು ತ್ರಿಮೂರ್ತಿ ಸ್ವರೂಪನು. ಶ್ರೀಗುರುವು ಜ್ಞಾನಸೂರ್ಯ. ಅವನು ಅಜ್ಞಾನವೆಂಬ ಕತ್ತಲೆಯ ನಾಶಕ. ದಟ್ಟವಾದ ಇರುಳಿನ ಗಾಢವಾದ ಕತ್ತಲೆಯನ್ನು ಹೊಡೆದೋಡಿಸಿ, ಹಗಲನ್ನು ನೀಡಿ, ಜೀವಸಂಕುಲವನ್ನು ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗುವಂತೆ ಮಾಡುವ ದಿನಮಣಿ ಪ್ರಭಾಕರನಂತೆ, ಜನಮನದಲ್ಲಿ ಹುದುಗಿದ್ದ ಅಜ್ಞಾನವನ್ನು ತೊಲಗಿಸಿ, ಅವರು ಅನುಸರಿಸಬೇಕಾದ ಅರಿವಿನ ದಾರಿಯನ್ನು ಅವರವರಿಗೆ ತೋರಿಸಿ, ಒಳ್ಳೆಯ ದಾರಿಯಲ್ಲಿ ಮುಂದುವರಿಯಲು ಅವರಿಗೆ ಪ್ರೇರಣೆ ನೀಡಿ, ಉದ್ಧರಿಸುವ ಕರುಣಾನಿಧಿ ಶ್ರೀಗುರು. ಇಂತಹ ಸದ್ಗುರುಗಳನ್ನು ಐದು ದಶಕಗಳಿಗೂ ಹೆಚ್ಚಿನ ಕಾಲ ನಮ್ಮ ಕುಲಗುರುಗಳನ್ನಾಗಿ, ದಾರಿದೀಪವನ್ನಾಗಿ ನಾವು ಪಡೆದಿದ್ದೆವು. ಬ್ರಹ್ಮೈಕ್ಯರಾದ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು, ನಮ್ಮ ಕುಲಗುರುಗಳವರು. ಚಂದಾವರ ಸೀಮೆಯಲ್ಲಿರುವ ಕೆಕ್ಕಾರು ಶ್ರೀರಘೂತ್ತಮ ಮಠ, ನಾವು ಪರಂಪರೆಯಿಂದ ಸೇವಿಸಿ ನಡೆದುಕೊಂಡು ಬಂದ ಶ್ರೀಗುರುಮಠ. ಅದು ಶ್ರೀರಾಮಚಂದ್ರಾಪುರ ಮಠದ ಶಾಖಾಮಠ, ಶ್ರೀಗುರುಗಳು ತಮ್ಮ ಉನ್ನತಶಾಸ್ತ್ರ ವಿದ್ಯಾಭ್ಯಾಸವನ್ನು ಮುಗಿಯಿಸಿ, ಶ್ರೀಮಠಕ್ಕೆ ಚಿತ್ತೈಸಿದಾಗ, ಶ್ರೀಮಠದ ಕಟ್ಟಡ ಬಹುಜೀರ್ಣವಾಗಿತ್ತು. ತೋಟಪಟ್ಟಿಗಳು ಕೆಟ್ಟು ಕರಕಾಗಿದ್ದವು. ಆಗ ಶ್ರೀಗಳವರು ಸೀಮೆಯ ಆದ್ಯಂತ ಸಂಚಾರಮಾಡಿ, ತಮ್ಮ ಕರ್ತವ್ಯದ ಬಗ್ಗೆ ಎಲ್ಲರಿಗೆ ತಿಳಿಸಿ ಹೇಳಿ ಶಿಷ್ಯಜನತೆಯ ಘನತೆಯ ಪ್ರತಿಕಗಳಾದ ಮಠಮಂದಿರಗಳ ಕಟ್ಟಡಗಳನ್ನು ಪುನಃ ನಿರ್ಮಾಣ ಮಾಡಿಸಿದರು. ಜೊತೆಗೆ ಭೂಸುಧಾರಣಾ ಕಾಯ್ದೆ ಜಾರಿಯಿಂದಾಗಿ, ಪರರ ಕರಗತವಾಗಲಿದ್ದ ಮಠದ ಸ್ಥಿರಾಸ್ತಿಯನ್ನು ಶ್ರೀಮಠಕ್ಕೆ ಉಳಿಯಿಸಿ, ಬೆಳೆಯಿಸಿದವರು ಶ್ರೀಶ್ರೀಗಳವರು. ಶ್ರೀಮಠದ ಆದಾಯವನ್ನು ಹೆಚ್ಚಿಸಿ, ಪರಂಪರಾಗತವಾಗಿ ಬಂದ ಶ್ರೀಮಠದ ನಿತ್ಯ ನೈಮಿತ್ತಿಕಾದಿ ಪೂಜಾವಿನಿಯೋಗಗಳು, ಆರಾಧನೆ ರಥೋತ್ಸವಾದಿಗಳು ಸಕಾಲದಲ್ಲಿ ಕ್ರಮದಂತೆ ನೆರವೇರುವಂತೆ ಮಾಡಿದ ಕೀರ್ತಿ ಶ್ರೀಶ್ರೀಗಳವರದು. ಮಠದ ಆಡಳಿತಕ್ಕೆ ತಮ್ಮ ನೇತೃತ್ವದಲ್ಲಿ ವಿಶ್ವಸ್ತ ಮಂಡಳಿಯೊಂದನ್ನು ರಚನೆಮಾಡಿ, ಶ್ರೀಮಠದ ಎಲ್ಲಾ ಕಾರ್ಯಗಳು ಸುಗಮವಾಗಿ ನೆರವೇರುವಂತೆ ಶ್ರೀಗುರುಗಳು ಮಾಡಿದ್ದಾರೆ. ಅಲ್ಲದೇ ಅಲ್ಲಿ ವೇದ-ಸಂಸ್ಕೃತ ಪಾಠಶಾಲೆಗೆ ಆಶ್ರಯವನ್ನೂ ನೀಡಿದ್ದು ಅವರ ಹಿರಿತನ. ಶ್ರೀಶ್ರೀಗಳವರಲ್ಲಿಯ ಅಸಾಧಾರಣ ವಿದ್ಯಾನಿಪುಣತೆ, ಧೃಡತಪೋನುಷ್ಠಾನಪರತೆ, ಹಾಗೂ ವ್ಯವಹಾರಚತುರತೆ, ಈ ಮೂರೂ ಗುಣಗಳೂ ಮುಪ್ಪುರಿಗೊಂಡು ಜನತೆಯನ್ನು ಅವರತ್ತ ಸೂಜಿಗಲ್ಲಿನಂತೆ ಸದಾ ಆಕರ್ಷಿಸುತ್ತಿದ್ದವು. ಅವರ ಅಸಾಧಾರಣ ಮೇಧಾಶಕ್ತಿ, ಅಪೂರ್ವಸ್ಮರಣಶಕ್ತಿಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದವು. ಅನನ್ಯ ಭಕ್ತಿಯಿಂದ ಶರಣಾದ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸಿ, ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದ ಸುರತರು ಕಲ್ಪವೃಕ್ಷ ಅವರಾಗಿದ್ದರು. ನನಗೆ ಅರವತ್ತು ವರ್ಷಗಳು ತುಂಬಿದಾಗ, ಹಾಗೂ ತದನಂತರ ನಾನು ಪತ್ನೀಸಹಿತ ಕಾಶೀಯಾತ್ರೆಯನ್ನು ಮುಗಿಯಿಸಿ ಬಂದಾಗ, ಪರಿವಾರಸಹಿತ ಶ್ರೀಗುರುದೇವತಾ ಸನ್ನಿಧಿಯಲ್ಲಿ ಸಲ್ಲಿಸಿದ ಕಿಂಚಿತ್ ಸೇವೆಯನ್ನು ಮಹತ್ತನ್ನಾಗಿ ಸ್ವೀಕರಿಸಿ-ಶ್ರೀಗುರುಗಳು ನಮ್ಮನ್ನೂ ಅನುಗ್ರಹಿಸಿದ್ದಾರೆ. ‘ಶ್ರೀಗುರುಗಳು ತಮ್ಮ ಪ್ರವಚನದಲ್ಲಿ’-“ಯಜ್ಞ, ದಾನ, ತಪಸ್ಸು ಇವು ಮೂರು ಅತ್ಯಂತ ಪವಿತ್ರವಾದವುಗಳು. ಮನೀಷಿಗಳಾದವರು ಸಂಗರಹಿತವಾಗಿ ಫಲಾಪೇಕ್ಷೆಯಿಲ್ಲದೆ, ಈ ಮೂರೂಕರ್ಮಗಳನ್ನು ಆಚರಿಸಬೇಕು. ವಿಹಿತ ಕರ್ಮಗಳನ್ನು ಎಂದೆಂದಿಗೂ ಬಿಡಬಾರದು. ಒಳ್ಳೆಯ ಕರ್ಮಗಳನ್ನು ಮಾಡಿದವನು ಎಂದೂ ದುರ್ಗತಿಯನ್ನುಹೊಂದುವುದಿಲ್ಲ” ಎಂಬುವುದು ಭಗವಂತನ ಆಣತಿ- ಎಂದು ಉಪದೇಶಿಸುತ್ತಿದ್ದರು. ತಮ್ಮ ನಡೆನುಡಿಗಳಲ್ಲಿ ಏಕರೂಪತೆಯನ್ನು ಅಳವಡಿಸಿಕೊಂಡು ಮುನ್ನಡೆದ ಅವರು ಮಹಾನುಭಾವರು, ಮಹಾನುಭವಿಗಳು. ಅಂದು ಅವರು ನೀಡಿದ ಉಪದೇಶ ವಚನಗಳೇ ಇಂದು ನಮಗೆಲ್ಲರಿಗೆ ಮಾರ್ಗದರ್ಶಕಗಳು. ಲೌಕಿಕ ವಿಷಯದಲ್ಲಿ ನಿರ್ಲಿಪ್ತರೂ, ಸರ್ವವಿಧಗಳಿಂದ ಸಂತೃಪ್ತರೂ ಆಗಿ ಬ್ರಹ್ಮೀಭಾವ ಹೊಂದಿದವರು ಶ್ರೀಶ್ರೀಗಳವರು.

ಗುರುವರರೇ, ನಿಮಗೆನ್ನ ಮನದಲ್ಲಿ ಸುಸ್ಥಾನ. ನಿಮ್ಮ ಶ್ರೀಚರಣಕ್ಕೆ ಈ ವಚನ ನಮನ. ~*~

Facebook Comments Box