ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ, ಇವರ ಸಂಕಲ್ಪ-ಪ್ರೇರಣೆ-ಮಾರ್ಗದರ್ಶನದಲ್ಲಿ, ತಕ್ಷಶಿಲೆಯ ಅವಸಾನದ ಬಳಿಕ ಭಾರತೀಯ ವಿದ್ಯೆ-ಕಲೆಗಳ ಸಂರಕ್ಷಣೆಗಾಗಿ ಅದೇ ಮಾದರಿಯಲ್ಲಿ ನಿರ್ಮಿತವಾಗುತ್ತಿರುವ ವಿಶ್ವಲಯವು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಗೋಕರ್ಣದ ಪ್ರಾಣಾಂಕುರ ಪ್ರಾಂಗಣದ (ಸಾರ್ವಭೌಮ ಗುರುಕುಲ ಮತ್ತು ರಾಜರಾಜೇಶ್ವರೀ ಗುರುಕುಲಗಳ ಕ್ಯಾಂಪಸ್ ಆ ಹೆಸರಿನಿಂದ ಕರೆಯಲ್ಪಟ್ಟಿದೆ.) ವಿವಿಧ ಸ್ಥಳಗಳಿಗೆ ಈ ಕೆಳಗಿನ ಚಿತ್ರದಲ್ಲಿರುವಂತೆ ಹೆಸರುಗಳನ್ನಿಡಲಾಗಿದೆ. ವಿದ್ಯಾರ್ಥಿಗಳು ತಮ್ಮ ನಿತ್ಯ ಪಾಠದೊಂದಿಗೆ, ಈ ಹೆಸರುಗಳ ಫಲಕಗಳಲ್ಲಿ ಅಡಗಿರುವ ಅರ್ಥಗಳನ್ನು ತಿಳಿಯುವ ಮೂಲಕ, ತಮ್ಮ ಸೂಕ್ಷ್ಮಗ್ರಾಹಿತ್ವವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.

ಪ್ರಸ್ತುತ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದಿರುವ ಈ ಗುರುಕುಲ, ಅಲ್ಲಿನ ವಿಶೇಷತೆ, ಈ ಹೆಸರುಗಳ ಅರ್ಥ-ಮಹತ್ತ್ವ-ಹಿನ್ನೆಲೆಗಳನ್ನು ವಿದ್ಯಾರ್ಥಿಗಳಷ್ಟೇ ಅರಿತು ತಿಳಿದರೆ ಸಾಕೇ? ನಾವೂ ತಿಳಿದುಕೊಳ್ಳುವುದು ಬೇಡವೇ?

ಬನ್ನಿ, ಗುರುಕುಲದ ವಿವಿಧ ನಾಮ ಫಲಕಗಳೊಂದಿಗೆ, ಅಲ್ಲಿನ ಪ್ರಾಂಗಣಗಳನ್ನು ನಾವೀಗ ತಿಳಿದುಕೊಳ್ಳೋಣ.

  1. ಸಮಗ್ರ ಕ್ಯಾಂಪಸ್: ಪ್ರಾಣಾಂಕುರ ಪ್ರಾಂಗಣ (Prananura Prangana):

‘ಪ್ರಾಂಗಣ’ವೆಂದರೆ – ಕ್ಯಾಂಪಸ್; ಸಾರ್ವಭೌಮ ಮತ್ತು ರಾಜರಾಜೇಶ್ವರೀ ಗುರುಕುಲಗಳ ಸಮಗ್ರ ಕ್ಯಾಂಪಸ್ ಗೆ ಪ್ರಾಣಾಂಕುರ ಪ್ರಾಂಗಣವೆಂಬ ಹೆಸರಿಡಲು ಈ ಮೂರು ಕಾರಣಗಳು:

  1. ಗೋಕರ್ಣದ ಶತಶೃಂಗ ಶಿಖರದಲ್ಲಿ ಆಂಜನೇಯನು ಆವಿರ್ಭವಿಸಿದನೆಂದು ವಾಲ್ಮೀಕಿ ರಾಮಾಯಣವು ಉಲ್ಲೇಖಿಸುತ್ತದೆ; ಮುಖ್ಯಪ್ರಾಣನೆಂದು ಕರೆಸಿಕೊಳ್ಳುವ ಪ್ರಾಣಸ್ವರೂಪಿ ಹನುಮಂತನು ಅಂಕುರಿಸಿದ ಪ್ರಾಂಗಣವಾದುದರಿಂದ ಈ ಅಭಿಧಾನ.

ಸಾರ್ವಭೌಮ ಮತ್ತು ರಾಜರಾಜೇಶ್ವರೀ ಗುರುಕುಲಗಳು ಆಂಜನೇಯ ಜನ್ಮಭೂಮಿಯ ಪರಿಸರದಲ್ಲಿವೆ ಎಂಬುದನ್ನು ಇಲ್ಲಿ ಗಮನಿಸಬೇಕು.

  1. ಬಾಲ್ಯಾವಸ್ಥೆಯು- ಪ್ರಾಣವು ಎಂದರೆ ಜೀವನವು ಇನ್ನೂ ಅಂಕುರಿಸುತ್ತಿರುವ ಅವಸ್ಥೆ; ವಿದ್ಯಾಕಾಂಕ್ಷಿಗಳಾದ ಬಾಲಕರ ನೆಲೆವೀಡಾಗಿ ಬೆಳೆಯಲಿರುವುದರಿಂದ ಪ್ರಾಣಾಂಕುರ ಪ್ರಾಂಗಣವೆಂಬ ಅಭಿಧಾನ.
  2. ಅಪರೂಪದ ಭಾರತೀಯ ಸಸ್ಯಪ್ರಭೇದಗಳನ್ನು ಇಲ್ಲಿ ಇದೀಗ ಅಂಕುರಗೊಳಿಸಲಾಗುತ್ತಿದೆ. ಪ್ರಕೃತಿಯ ಪ್ರಾಣವೇ ಆದ ಸಸ್ಯಗಳು ಅಂಕುರಿಸುತ್ತಿರುವುದರಿಂದಲೂ ಇದು ಪ್ರಾಣಾಂಕುರ ಪ್ರಾಂಗಣ.

 

  1. ಗುರುಕುಲಗಳ ಪ್ರಧಾನ ಕಟ್ಟಡ: #ಸ್ವಸ್ತಿಶ್ರೀ (Swasti~Sri):

ಸಂಪೂರ್ಣ ಭವನವೇ ಸ್ವಸ್ತಿಕದ ಆಕಾರದಲ್ಲಿರುವುದರಿಂದ ಅದು ಸ್ವಸ್ತಿಶ್ರೀ. ಇಲ್ಲಿ ಅಧ್ಯಯನ ಗೈಯುವ ಮಕ್ಕಳಿಗೆ ಸ್ವಸ್ತಿ- ಎಂದರೆ ಶುಭವನ್ನೂ, ಶ್ರೀ- ಎಂದರೆ ಸಿರಿಯನ್ನೂ ಪ್ರದಾನ ಮಾಡುವುದರಿಂದ ಸ್ವಸ್ತಿಶ್ರೀ.

ದೇಶಪ್ರೇಮ-ಧರ್ಮನಿಷ್ಠೆ-ಗುರುಭಕ್ತಿ-ದೇವಭಾವಗಳು ಸದಾ ಭಾವೀ ಪೀಳಿಗೆಯ ಕಣ್ಮುಂದೆ ಇರಲಿ, ವಿದ್ಯಾರ್ಥಿಗಳು ಈ ಭಾವವನ್ನು ಬೆಳೆಸಲಿ ಎಂದೇ, ಗುರುಕುಲದ ಭವನಗಳಿಗೆ ಈ ಹೆಸರುಗಳನ್ನು ಇರಿಸಲಾಗಿದೆ.

  • ದೇಶಪ್ರೇಮ ಸದನ (Desha~Prema Sadana) – ಬಾಲಕರ ತರಗತಿಗಳು ನಡೆಯುವ ಕಟ್ಟಡ
  • ಧರ್ಮನಿಷ್ಠಾ ಸದನ (Dharma~Nishthaa Sadana) – ಬಾಲಕರ ವಸತಿ
  • ಗುರುಭಕ್ತಿ ಸದನ (Guru~Bhakti Sadana) – ಬಾಲಕಿಯರ ವಸತಿ
  • ದೇವಭಾವ ಸದನ (Deva~Bhava Sadana) – ಬಾಲಕಿಯರಿಗೆ ತರಗತಿಗಳು ನಡೆಯುವ ಕಟ್ಟಡ

 

  1. ಸ್ವಾಗತ ಕೇಂದ್ರ – ದ್ವಾರಶ್ರೀ (Dwara~Sri):

ಅತಿಥಿಗಳೇ ದ್ವಾರಶೋಭೆ, ಆದ್ದರಿಂದ ಅತಿಥಿಗಳ ಸ್ವಾಗತಕ್ಕಾಗಿಯೇ ಗುರುಕುಲಗಳ ದ್ವಾರದಲ್ಲಿರುವ ಸ್ವಾಗತ ಕೇಂದ್ರದ ಹೆಸರು – ದ್ವಾರಶ್ರೀ.

 

  1. ನಿರೀಕ್ಷಣಾ ಕೊಠಡಿ (Lobby) ಸುಪ್ರವೇಶ (Supravesha):

ಬಂದ ಅತಿಥಿಗಳಿಗೆಂದು ಮೀಸಲಾದ ಗುರುಕುಲಗಳ ಪ್ರವೇಶದಲ್ಲಿರುವ ನಿರೀಕ್ಷಣಾ ಕೊಠಡಿ (lobby)ಯು – ಸುಪ್ರವೇಶ.

 

  1. ಪ್ರಾಂಶುಪಾಲರ ಕೊಠಡಿ (Principal Chamber) – ಪ್ರೇಕ್ಷಾ (Preksha):

ಪ್ರ+ಈಕ್ಷಾ=ಪ್ರೇಕ್ಷಾ. ಈಕ್ಷಾ ಎಂದರೆ ನೋಟ; ಪ್ರೇಕ್ಷಾ ಎಂದರೆ ಪ್ರಕೃಷ್ಟವಾದ- ಸೂಕ್ಷ್ಮವಾದ ನೋಟ. ಗುರುಕುಲದ ಮೇಲೆ ಆ ಪರಿಯ ನೋಟವುಳ್ಳವರು ಪ್ರಾಂಶುಪಾಲರು.

ಪ್ರಾಂಶುಪಾಲರು ಸಮಗ್ರ ಗುರುಕುಲವನ್ನು ಸೂಕ್ಷ್ಮೇಕ್ಷಿಕೆಯಿಂದ ನೋಡುತ್ತಿರಬೇಕು ಎಂಬ ಭಾವದ ಹಿನ್ನೆಲೆಯಲ್ಲಿ ಪ್ರಾಂಶುಪಾಲರ ಕೊಠಡಿಗೆ ಪ್ರೇಕ್ಷಾ ಎಂಬ ಹೆಸರು.

 

  1. ಸಮಾಲೋಚನಾ ಕೊಠಡಿ (Conference Room) ಮಂತ್ರಣಮಂದಿರ (Mantrana Mandira):

ವಿದ್ಯಾಲಯಗಳಲ್ಲಿ ಸಮಾಲೋಚನೆಗಳನ್ನು ನಡೆಸಲು ವಿಶಾಲವಾದ ಕೊಠಡಿಯಿರಬೇಕು. ನಮ್ಮ ಗುರುಕುಲದಲ್ಲಿ ಇಂತಹ ಮಂತ್ರಾಲೋಚನೆಗಳನ್ನು ನಡೆಸಲೆಂದು ಮೀಸಲಾದ ಸುವ್ಯವಸ್ಥಿತ, ಸುಸಜ್ಜಿತವಾದ ಸಮಾಲೋಚನಾ ಕೊಠಡಿಗೆ ಮಂತ್ರಣಮಂದಿರವೆಂಬ ಹೆಸರು.

 

  1. ಬೋಧಕರ ಕೊಠಡಿ (Staff Room) – ಬೋಧಶ್ರೀ (Bhodha~Sri):

ಬೋಧಶ್ರೀ ಎಂದರೆ ಜ್ಞಾನಸಂಪತ್ತು; ಬೋಧಕವರ್ಗಕ್ಕೆಂದು ಮೀಸಲಾದ ಕೋಣೆಯ ಹೆಸರು – ಬೋಧಶ್ರೀ

 

  1. ದಾಖಲೆಗಳ ಕೊಠಡಿ (Document Room) – ಗುಪ್ತಾಕ್ಷರ (Guptakshara):

ಗುರುಕುಲಗಳ ಬೋಧಕ, ಬೋಧಕೇತರ, ವಿದ್ಯಾರ್ಥಿಗಳ ಮಾಹಿತಿಗಳು, ಹಾಗೂ ಇನ್ನಿತರ ದಾಖಲೆಗಳನ್ನು ಗೌಪ್ಯವಾಗಿ ಸಂಗ್ರಹಿಸಿಡಲಾಗುವ ದಾಖಲೆಗಳ ಕೊಠಡಿಯ ಹೆಸರು –ಗುಪ್ತಾಕ್ಷರ.

 

  1. ಲೆಕ್ಕಪತ್ರ ವಿಭಾಗ (Accounts Section) – ಶ್ರೀರೇಖಾ (Sri~Rekhaa):

ಶ್ರೀ ಎಂದರೆ ಸಂಪತ್ತು; ರೇಖೆ – ದಾಖಲಾತಿ. ಸಂಪತ್ತಿನ ಯಾತಾಯಾತದ ದಾಖಲಾತಿಯ ಸ್ಥಾನವೇ – ಶ್ರೀರೇಖಾ.

 

  1. ಆಚಾರ್ಯರ ವಸತಿ (Teachers’ Residence)

ಬೋಧ-ದಯೆ-ಧರ್ಮಗಳು ಗುರುವಿನಲ್ಲಿ ಇರಲೇಬೇಕಾದ ಮೂರು ಗುಣಗಳು. ಅದಕ್ಕಾಗಿಯೇ ಈ ಗುಣಗಳ ನಿಧಿಗಳಾಗಿರಬೇಕಾದ ಗುರುಕುಲಗಳ ಆಚಾರ್ಯರ ವಸತಿಗಳಿಗೆ ಈ ಹೆಸರುಗಳು:

  1. ಆಚಾರ್ಯರ ವಸತಿ ೧ – ಬೋಧನಿಧಿ
  2. ಆಚಾರ್ಯರ ವಸತಿ ೨ – ದಯಾನಿಧಿ
  • ಆಚಾರ್ಯರ ವಸತಿ ೩ – ಧರ್ಮನಿಧಿ

 

  1. ಬಾಲಕಿಯರ ಸಭಾಂಗಣ – ಮಣಿಮಾಲಾ (Mani~Maalaa):

ಮಣಿಗಳು ಎಲ್ಲಿ ಸೇರುವವೋ ಅದು ಮಣಿಮಾಲೆ; ಮುತ್ತಿನ ಮಣಿಗಳಂಥ ಬಾಲಿಕೆಯರು ಸೂತ್ರವೊಂದಕ್ಕೆ ಒಳಪಟ್ಟು ಸೇರಿಕೊಳ್ಳುವ ಸ್ಥಳ – ಬಾಲಿಕೆಯರಿಗಾಗಿ ಇರುವ ಸಭಾಂಗಣವೇ – ಮಣಿಮಾಲಾ.

 

  1. ಬಾಲಕರ ಸಭಾಂಗಣ – ಐಕ್ಯಶ್ರೀ (Aikya~Sri)

ಗುರುಕುಲದ ಎಲ್ಲಾ ಬಾಲಕರೂ ಸೇರಿದಾಗ ಎಲ್ಲಿ ಐಕ್ಯದ ಶೋಭೆಯು ಕಳೆಗಟ್ಟುವುದೋ, ಆ ಸಭಾಂಗಣವೇ – ‘ಐಕ್ಯಶ್ರೀ’.

 

  1. ಉಗ್ರಾಣ (Store Room) – ವಸ್ತು ವಾಸ:

ಗುರುಕುಲದ ಎಲ್ಲಾ ವಸ್ತುಗಳನ್ನು/ಸಾಮಗ್ರಿಗಳನ್ನು ಇಡುವ ಎಂದರೆ, ವಸ್ತುಗಳು ವಾಸಿಸುವ ಉಗ್ರಾಣವನ್ನು ‘ವಸ್ತು~ವಾಸ’ ಎಂದು ಹೆಸರಿಸಲಾಗಿದೆ.

ಗಮನಿಸಿ: ಇಲ್ಲಿ ವಸ್ತುಗಳಿಗೂ ಜೀವಕಳೆಯನ್ನು ಭಾವಿಸಲಾಗಿದೆ!

 

  1. ತರಗತಿ (Class Room):

ವಿದ್ಯೆಯನ್ನು ನೀಡಿದರೆ ಸಾಕೇ? ಧರ್ಮವನ್ನೂ ನೀಡಬೇಡವೇ?

ಧರ್ಮವಿಲ್ಲದ ವಿದ್ಯಾವಂತನು ಸಾಕ್ಷರ-ರಾಕ್ಷಸನಾಗುವನು! ಆದುದರಿಂದ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೇ ಧರ್ಮವನ್ನೂ ಸಂಪಾದಿಸಲೆಂಬ ಆಶಯದಲ್ಲಿ ತರಗತಿಗಳಿಗೆ ಧರ್ಮದ ಹತ್ತು ಲಕ್ಷಣಗಳ ಅಭಿಧಾನ.

ಧರ್ಮವೆಂದರೇನೆಂಬುದು ಬಾಲಕರಿಗೆ ಸುಲಭವಾಗಿ ಅರ್ಥವಾಗಲಿ, ಮನದಲ್ಲಿ ನೆಲೆ ನಿಲ್ಲಲಿ ಎಂಬ ಆಶಯವೂ ಜೊತೆಯಲ್ಲಿ ಸೇರಿದೆ:

धृति: क्षमा दमोऽस्तेयं शौचमिन्द्रियनिग्रह:। धीर्विद्या सत्यमक्रोधो दशकं धर्मलक्षणम्‌।।

ತರಗತಿಕೊಠಡಿ 1 – ಧೃತಿವರ್ಗ

ತರಗತಿಕೊಠಡಿ 2 – ಕ್ಷಮಾವರ್ಗ

ತರಗತಿಕೊಠಡಿ 3 – ದಮವರ್ಗ

ತರಗತಿಕೊಠಡಿ 4 – ಅಸ್ತೇಯವರ್ಗ

ತರಗತಿಕೊಠಡಿ 5 – ಶುದ್ಧಿವರ್ಗ

ತರಗತಿಕೊಠಡಿ 6 – ಸಂಯಮವರ್ಗ

ತರಗತಿಕೊಠಡಿ 7 – ಧೀವರ್ಗ

ತರಗತಿಕೊಠಡಿ 8 – ವಿದ್ಯಾವರ್ಗ

ತರಗತಿಕೊಠಡಿ 9 – ಸತ್ಯವರ್ಗ

ತರಗತಿಕೊಠಡಿ 10 – ಅಕ್ರೋಧವರ್ಗ

 

  1. ರಸಾಯನಶಾಸ್ತ್ರ ಪ್ರಯೋಗಾಲಯ (Chemistry Laboratory)– ರಸಾಲಯ:

ರಸಗಳು- ಬಗೆಬಗೆಯ ದ್ರವಗಳು- ರಾಸಾಯನಿಕಗಳು ಎಲ್ಲಿ ಶೋಭಿಸುವವೋ ಅದು ರಸಾಲಯ. ಆದ್ದರಿಂದ ರಸಾಯನಶಾಸ್ತ್ರದ ಪ್ರಯೋಗಾಲಯಕ್ಕೆ ರಸಾಲಯವೆಂಬ ಹೆಸರು.

 

  1. ಭೌತಶಾಸ್ತ್ರ ಪ್ರಯೋಗಾಲಯ (Physics Laboratory) ಕರಣಾಲಯ:
  • ಕರಣಗಳು=ಉಪಕರಣಗಳು, ಅವುಗಳ ಕೇಂದ್ರವೇ ಕರಣಾಲಯ.
  • ಕರಣಗಳು=ಸಾಧನಗಳು, ಅವುಗಳನ್ನು ಮತ್ತು ಅವುಗಳ ಮೂಲಕ ಜಗತ್ತನ್ನು ಅರಿಯುವ ಸ್ಥಳ.
  • ಕರಣ=ಕೃತಿ-ಪ್ರಯೋಗ, ಅದು ನಡೆಯುವ ಸ್ಥಳ.

ಆದುದರಿಂದ ಭೌತಶಾಸ್ತ್ರದ ಪ್ರಯೋಗಾಲಯದ ಹೆಸರು – ಕರಣಾಲಯ.

  1. ಜೀವಶಾಸ್ತ್ರ ಪ್ರಯೋಗಾಲಯ (Biology Laboratory)– ಜೀವಾಲಯ:

ಜೀವಿಗಳ ರಚನೆ, ಕಾರ್ಯನಿರ್ವಹಣೆ, ಬೆಳವಣಿಗೆ, ವಿಕಾಸ, ಹಂಚಿಕೆ, ಗುರುತಿಸುವಿಕೆ ಮತ್ತು ಜೀವ ವರ್ಗೀಕರಣಗಳ ಕುರಿತಾದ ಜೀವರಾಶಿಗಳ ಬಗೆಗಿನ ಸಮಗ್ರವಾದ ಅಧ್ಯಯನವನ್ನು ಮಾಡುವ ಪ್ರಯೋಗಾಲಯವು – ಜೀವಾಲಯ.

 

  1. ವಸನಶ್ರೀ:

ವಸನವೆಂದರೆ ವಸ್ತ್ರ, ಶ್ರೀ ಎಂದರೆ ಶೋಭೆ; ಶೋಭೆಯನ್ನು ಕಳೆದುಕೊಂಡ ವಸ್ತ್ರಗಳು ತೊಳೆದು, ಒಣಗಿಸಲ್ಪಟ್ಟು ಮರಳಿ ಶೋಭೆಯನ್ನು ಕಂಡುಕೊಳ್ಳುವ ಸ್ಥಳ.

 

  1. ಕಂಪ್ಯೂಟರ್ ಲ್ಯಾಬ್ (ಬಾಲಕಿಯರು) ಧೀದರ್ಪಣ

ಧೀದರ್ಪಣ – ಕಂಪ್ಯೂಟರ್ ಎನ್ನುವುದು ಮನುಷ್ಯನ ಮನಸ್ಸಿನ ಪ್ರತಿಬಿಂಬ ಎಂಬ ಭಾವದಲ್ಲಿ ಕಂಪ್ಯೂಟರ್ ಲ್ಯಾಬ್ ಗೆ ಈ ಹೆಸರು.

 

  1. ಕಂಪ್ಯೂಟರ್ ಲ್ಯಾಬ್ (ಬಾಲಕರು) ಧೀವಿಲಾಸ

ಧೀವಿಲಾಸ – ಧೀ ಎಂದರೆ ಬುದ್ಧಿಯ ವಿಲಾಸ-ವೈಭವಗಳೇ ಅಲ್ಲವೇ ಹಾರ್ಡ್-ವೇರ್, ಸಾಫ್ಟ್-ವೇರ್’ಗಳಾಗಿ ಬದಲಾದದ್ದು? ಅದನ್ನು ಸೂಚಿಸಲೆಂದೇ ಕಂಪ್ಯೂಟರ್ ಲ್ಯಾಬ್ ಗೆ ಈ ಹೆಸರು.

 

  1. ಆಶೌಚವಿರುವವರ ವಸತಿ – ಪುನರ್ನವ (Punarnava)

ಋತುಚಕ್ರ, ಸನಿಹದವರ ಹುಟ್ಟು-ಸಾವುಗಳ ಅವಧಿಯು ಮನುಷ್ಯನು ಒಮ್ಮೆ ಶೂನ್ಯನಾಗಿ, ಮತ್ತೆ ಹೊಸಬನಾಗುವ ಪ್ರಕೃತಿದತ್ತ ಅವಕಾಶ. ಅದಕ್ಕೆಂದೇ ನಿರ್ಮಿತವಾದ- ಆಶೌಚದ ಸಂದರ್ಭದಲ್ಲಿ ವಿಶ್ರಾಂತಿಗಾಗಿ ಬಳಸುವ ಕೊಠಡಿಯ ನಾಮಧೇಯ ‘ಪುನರ್ನವ’.

 

  1. ಶೌಚಾಲಯ(ಬಾಲಕರಿಗಾಗಿ)- ಶೋಧಿನೀ (Shodhini)

ಶೋಧಿನೀ ಎಂದರೆ ಶುದ್ಧಗೊಳಿಸುವ ಸ್ಥಾನ. ಬಾಲಕರ ಶೌಚಾಲಯದ ಹೆಸರು ಶೋಧಿನೀ.

 

  1. ಶೌಚಾಲಯ(ಬಾಲಕಿಯರಿಗಾಗಿ)- ವಿಶೋಧಿನೀ (Vishodhini)

ವಿಶೋಧಿನೀ ಎಂದರೆ ವಿಶುದ್ಧಗೊಳಿಸುವ ಸ್ಥಾನ. ಬಾಲಕಿಯರ ಶೌಚಾಲಯಕ್ಕೆ ಈ ಹೆಸರನ್ನು ಇರಿಸಲಾಗಿದೆ.

 

  1. ಕೈ ತೊಳೆಯುವ ಸ್ಥಳ – ಹಸ್ತಶುದ್ಧಿ (Hasta~Shuddhi)

ಹಸ್ತವನ್ನು ಶುದ್ಧಗೊಳಿಸಲೆಂದು ಮೀಸಲಾಗಿರುವ (ಕೈ ತೊಳೆಯುವ) ಸ್ಥಳವು – ‘ಹಸ್ತಶುದ್ಧಿ’. ಬದುಕು ಆದರ್ಶವಾಗಿರಲು ಕೈಬಾಯಿ ಶುದ್ಧವಾಗಿರಬೇಕು ಎಂಬ ತತ್ತ್ವವನ್ನು ಈ ಅಭಿಧಾನವು ನೆನಪಿಸುತ್ತಿದೆ.

ಹೀಗೆ ಗುರುಕುಲದ ಒಂದೊಂದು ನಾಮಫಲಕದ ಹಿಂದಿನ ಅರ್ಥವು ಒಂದೊಂದು ಉದ್ದೇಶವನ್ನು ಹೊಂದಿದೆ.

ಹರೇರಾಮ

Facebook Comments Box