|| ಹರೇರಾಮ ||
ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು..
ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು..
ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು..
ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ..
ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು…
ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು ಮಾತ್ರವೇ ಬೆಳಗುತ್ತಾನೆ..
ಆದರೆ ಆತನ ವಂಶದಲ್ಲಿ ಪ್ರಾದುರ್ಭವಿಸಿದ ದಶರಥನು ಭುವಿಯ ಬದುಕಿನ ಎರಡು ಪಾರ್ಶ್ವಗಳನ್ನೂ ಬೆಳಗಿದನು..
ಪುರ-ಜನಪದಗಳು ಭುವಿಯ ಬದುಕಿನ ಎರಡು ಪಾರ್ಶ್ವಗಳು..
ಪುರವೆಂದರೆ ನಗರ : ಅಲ್ಲಿ ವಾಸಿಸುವವರು ‘ಪೌರರು‘
ಜನಪದವೆಂದರೆ ಹಳ್ಳಿಗಳು: ಅಲ್ಲಿ ಬದುಕುವವರು ‘ಜಾನಪದರು‘
ಈ ಎರಡೂ ಬಗೆಯ ಪ್ರಜೆಗಳೂ ದಶರಥನ ಆಳ್ವಿಕೆಯಲ್ಲಿ ಸಮಾನವಾಗಿ ಸುಖಿಸಿದರು..
ಪರಿಣಾಮವಾಗಿ ದಶರಥನು ‘ ಪೌರ- ಜಾನಪದಪ್ರಿಯ‘ನೆನಿಸಿದನು..
ಗ್ರಾಮ ಜೀವನವು ಕಾನನ ಸುಮದಂತೆ..
ಸಹಜ ಸೌಂದರ್ಯವದರದ್ದು..
ನಗರ ಜೀವನವು ಸ್ವರ್ಣಾಭರಣದಂತೆ..
ಸಂಸ್ಕಾರಜ ಸೌಂದರ್ಯವದರದ್ದು..
ಪ್ರಕೃತಿಗೆ ಹಳ್ಳಿಗಳು ಹತ್ತಿರ..
ನಗರಗಳು ಸಂಸ್ಕೃತಿಗೆ ಸಮೀಪ..
ಅದಾಗ ತಾನೇ ಜನಿಸಿದ ಶಿಶುವು ‘ನಿರಾಭರಣವಾಗಿದ್ದರೂ, ನಿರ್ವಸ್ತ್ರವಾಗಿದ್ದರೂ’ ಅದೆಷ್ಟು ಸುಂದರ…!
ಆ ಚೆಲುವು ಪ್ರಕೃತಿ..
ಅದೇ ಶಿಶುವು ತರುಣ-ತರುಣಿಯಾಗಿ ಬೆಳೆದಾಗಲೂ ಸುಂದರವೇ..
ನಖ-ಶಿಖೆಗಳ ಒಪ್ಪ..
ಬಟ್ಟೆ-ಬರೆಗಳ ಓರಣ..
ತನುವೊಪ್ಪುವ ಆಭರಣ..
ಆ ಚೆಲುವು ಸಂಸ್ಕೃತಿ..
ಬದುಕಿನ ಚೆಲುವಿಗೆ ಪ್ರಕೃತಿ-ಸಂಸ್ಕೃತಿಗಳೆರಡೂ ಬೇಕು..
ಬೇಡದುದು ‘ವಿಕೃತಿ’ ಮಾತ್ರ..
ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯ ಕೆಟ್ಟರೆ ಅದುವೇ ‘ವಿಕೃತಿ’…
ದಶರಥ ಸಾಧಿಸಿದ್ದು ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯವನ್ನು..
ಗ್ರಾಮ-ನಗರಗಳ ಸಮತೋಲನದ ಸಮರಸ-ಸಮಾಜ ಜೀವನವನ್ನು..
ರಾಜನೆಂದರೆ ರಾಜ್ಯದ ಕಣ್ಣು..
ಹಾಗೆಂದ ಮೇಲೆ ರಾಜನ ಕಣ್ಣು ಹೇಗಿರಬೇಕು..?
ತನ್ನ ರಾಜ್ಯದ ಸಮಸ್ತ ಜೀವಗಳನ್ನೂ- ಸಮಸ್ತ ಪ್ರಕೃತಿಯನ್ನೂ-ಸಮಸ್ತ ವ್ಯವಸ್ಥೆಗಳನ್ನೂ ಚೆನ್ನಾಗಿ ನೋಡಿಕೊಳ್ಳುವುದು ರಾಜನ ಹೊಣೆ..
ಯಾವುದನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ಮೊದಲು ಚೆನ್ನಾಗಿ ‘ನೋಡಬೇಕಲ್ಲವೇ’..?
ಪ್ರತ್ಯಕ್ಷವನ್ನು ನೋಡಬಹುದು….
ಪರೋಕ್ಷವನ್ನು…?
ಪರೋಕ್ಷವನ್ನು ನೋಡಲು ರಾಜನಾಗಬೇಕು ‘ಚಾರಚಕ್ಷು‘..
ವರ್ತಮಾನವನ್ನು ಬರಿಗಣ್ಣಿನಿಂದ ನೋಡಬಹುದು..
ಭವಿಷ್ಯತ್ತನ್ನು…?
ಭವಿಷ್ಯತ್ತನ್ನು ನೋಡಲು ರಾಜನಾಗಬೇಕು ‘ದೀರ್ಘಚಕ್ಷು‘..
ತನ್ನ ವ್ಯವಸ್ಥೆಯಲ್ಲಿರಬಹುದಾದ ಕೊರತೆಗಳನ್ನು ರಾಜನು ಬರಿಗಣ್ಣಿನಿಂದ ನೋಡುವುದು ಬಲುಕಠಿಣ..
ಏಕೆಂದರೆ ರಾಜನು ಎದುರು ಬರುವಾಗ ತಾನಾಗಿ ಕೊರತೆಗಳು ಮರೆಯಾಗಿರುತ್ತವೆ..
ಸುವ್ಯವಸ್ಥೆ ಪ್ರಕಟವಾಗಿರುತ್ತದೆ..
ಆದರೆ ರಾಜನು ಒಮ್ಮೆ ಮರೆಯಾಗುತ್ತಿದ್ದಂತೆ ಪುನಃ ಮೊದಲಿನ ಅವ್ಯವಸ್ಥೆಗಳೇ ಪ್ರಕಟವಾಗಿಬಿಡುತ್ತವೆ..
(ಇಂದೂ ಪ್ರಧಾನಮಂತ್ರಿಗಳೋ, ರಾಷ್ಟ್ರಪತಿಗಳೋ ಬರುವರೆಂದರೆ ಒಮ್ಮೆಲೇ ರಸ್ತೆಗಳೆಲ್ಲಾ ಸರಿಯಾಗಿಬಿಡುವಂತೆ..)
ಹಾಗೆಯೇ ಪ್ರಜೆಗಳ ಒಡಲಾಳದ ಧ್ವನಿಯನ್ನು ರಾಜನು ಬರಿಗಿವಿಯಿಂದ ಕೇಳಲೂ ಸಾಧ್ಯವಿಲ್ಲ..
ರಾಜದರ್ಬಾರಿನ ವಾತಾವರಣದ ಪ್ರಖರತೆಗೆ ಆ ಧ್ವನಿಗಳು ನಡುಗಿ-ಅಡಗಿ ಅವ್ಯಕ್ತವಾಗಿಬಿಡಬಹುದು..
ತಾನಾಗಿ ತಿಳಿಯದ ಈ ಬಗೆಯ ಸಂಗತಿಗಳನ್ನು ರಾಜನು ತಾನಾಗಿಯೇ ತಿಳಿದುಕೊಂಡು ಪ್ರತಿಕ್ರಿಯಿಸಬೇಕಾಗುತ್ತದೆ..
ದಶರಥನ ಬಳಿ ಸಮರ್ಥರಾದ – ವಿಶ್ವಸ್ತರಾದ ಚಾರರಿದ್ದರು..
ಅವರನ್ನೇ ಕಣ್ಣಾಗಿಸಿಕೊಂಡು ರಾಜ್ಯದ ಮೂಲೆ-ಮೂಲೆಗಳನ್ನೂ ಆತ ನೋಡುತ್ತಿದ್ದನು..
ಅವರನ್ನೇ ಕಿವಿಯಾಗಿಸಿಕೊಂಡು ಪ್ರಜೆಗಳ ಹೃದಯಧ್ವನಿಯನ್ನು ಆಲಿಸುತ್ತಿದ್ದನು..
‘ದೀರ್ಘಂ ಪಶ್ಯತ, ಮಾ ಹ್ರಸ್ವಂ’
(ದೀರ್ಘದೃಷ್ಟಿಗಳಾಗಿ, ಹ್ರಸ್ವದೃಷ್ಟಿಗಳಾಗಬೇಡಿ..!
ದೂರದೃಷ್ಟಿಗಳಾಗಿ, ಅಲ್ಪದೃಷ್ಟಿಗಳಾಗಬೇಡಿ..!)
ಜೀವಲೋಕಕ್ಕೆ ಭಗವಾನ್ ವಸಿಷ್ಠರ ಸಂದೇಶವಿದು..
ದೀರ್ಘ ಭವಿಷ್ಯತ್ತನ್ನು ಅವಲೋಕಿಸದೇ ಕಾರ್ಯವೆಸಗುವವನು ಸದಾಕಾಲ ಕಟ್ಟಿದ್ದನ್ನು ಕೆಡವುದರಲ್ಲಿ, ಕೆಡವಿದ್ದನ್ನು ಕಟ್ಟುವುದರಲ್ಲಿ ಆಯುಸ್ಸನ್ನು ಕಳೆಯಬೇಕಾಗುತ್ತದೆ..
ದೀರ್ಘದೃಷ್ಟಿಯಿಲ್ಲದವನು ಮಾಡಿದ ಕಾರ್ಯಗಳು, ಕಟ್ಟಿದ ಸಾಮ್ರಾಜ್ಯಗಳು ಕಾಲಬಾಧಿತವಾಗುತ್ತವೆ..
ಭವಿಷ್ಯ್ತತ್ತಿನಲ್ಲಿ ಅಪ್ರಸ್ತುತವಾಗುತ್ತವೆ…
ಹರಸುವುದದೇನ ನೀ, ವರವದೇನೆಂದರಿವೆ
ಸರಿಯಿಂದು ತೋರುವುದು ನಾಳೆ ಸರಿಯಿಹುದೇ ?
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು
ಅರಿವ ದೈವವೆ ಪೊರೆಗೆ-ಮಂಕುತಿಮ್ಮ ||
ಇದು ಸಾಮಾನ್ಯ ದೃಷ್ಟಿಯ ಪಾಡು..
ವಸಿಷ್ಠರ ಅನುಗ್ರಹ ದೃಷ್ಟಿಗೆ ಪಾತ್ರವಾದ ದಶರಥನ ದೃಷ್ಟಿಯು ದೀರ್ಘಕ್ಕೆ ವಿಸ್ತರಿಸಿತು..
ದೂರಗಾಮಿಯಾಯಿತು..
ಇಂದಿನ ಕಾಲಕ್ಕೂ, ಮುಂದಿನ ಕಾಲಕ್ಕೂ, ಚಿರಕಾಲಕ್ಕೂ ‘ಯಾವುದು ಒಳ್ಳಿತು’ ಎಂಬುದನ್ನು ನಿರುಕಿಸಬಲ್ಲವನಾಗಿದ್ದ ದಶರಥನನ್ನು ಬಲ್ಲವರು ‘ದೀರ್ಘಚಕ್ಷು‘ವೆಂದು ಪ್ರಶಂಸಿಸಿದರು..
‘ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲಬೇಕು’ ಇದು ರಾಜಧರ್ಮ..
ದಶರಥನು ತನ್ನ ಸ್ನೇಹ-ಸದ್ಗುಣಗಳಿದ ಹಲವರ ಮನಗೆದ್ದನು..
ಸ್ನೇಹದ ಭಾಷೆ ಅರ್ಥವಾಗದ ಕೆಲವರನ್ನು ಬಲ-ಪರಾಕ್ರಮಗಳಿಂದ ಮಣಿಸಿ, ವಿನೀತ ಸಾಮಂತರನ್ನಾಗಿಸಿದನು..
ಕೆಲವರನ್ನು ಭಾವಬಲದಿಂದ, ಇನ್ನು ಕೆಲವರನ್ನು ಬಾಹುಬಲದಿಂದ..
ಕೆಲವರನ್ನು ಪ್ರೇಮದಿಂದ,ಇನ್ನು ಕೆಲವರನ್ನು ಸಂಗ್ರಾಮದಿಂದ..
ವಶಪಡಿಸಿಕೊಂಡನು ರಾಜಾ ದಶರಥ..!
ಪರಿಣಾಮವಾಗಿ..
‘ಎಲ್ಲರೂ ಜೊತೆಯಲ್ಲಿ, ಇದಿರಾರೂ ಇಲ್ಲ’..
‘ಮಿತ್ರರುಂಟು, ಶತ್ರುಗಳಿಲ್ಲ’
ಎನ್ನುವ ಅತ್ಯಂತ ಹಿತಕರವಾದ ವಾತಾವರಣವು ಅಲ್ಲಿ ಸೃಷ್ಟಿಯಾಯಿತು..!
ತನ್ನ ಅಭಿನಯ-ನರ್ತನಗಳಿಂದ ರಂಗ ಮತ್ತು ಪ್ರೇಕ್ಷಕರ ಅಂತರಂಗಗಳೆರಡನ್ನೂ ಆಳುವನಲ್ಲವೇ ಮಹಾನಟನು..?
ಘಂಟೆ-ಘಂಟೆಗಳ ಕಾಲ ತಮ್ಮ ಹೃದಯ-ನಯನಗಳನ್ನು ಆತನಿಗೆ ಸಮರ್ಪಿಸುವ ಸಹೃದಯರು ಪ್ರತಿಯಾಗಿ ಪಡೆಯುವುದಾದರೂ ಏನನ್ನು..?
ತತ್ಕಾಲಕ್ಕೊಂದು ‘ಸಂತೋಷ’
ಜೀವಮಾನಕ್ಕೊಂದು ‘ಸಂದೇಶ’
ಪ್ರಿಯ-ಹಿತಗಳೆರಡನ್ನೂ ಹದವಾಗಿ ಒಂದರೊಳಗೊಂದನ್ನು ಬೆರೆಸಿ ನೀಡುವನವನು..
ಸಂದೇಶವಿಲ್ಲದ ಸಂತೋಷ ಬದುಕಿನ ದಿಕ್ಕು ತಪ್ಪಿಸೀತು..!
ಸಂತೋಷವಿಲ್ಲದ ಸಂದೇಶ ಬರಿಸಪ್ಪೆಯೆನಿಸೀತು..!
ತನ್ನ ಮುದ್ದು ಮಗುವಿಗಾಗಿ ಅಡುಗೆ ಸಿದ್ಧಪಡಿಸುವ ತಾಯಿಯು ಸ್ವಾದ-ಸ್ವಾಸ್ಥ್ಯಗಳೆರಡನ್ನೂ ಗಮನಿಸುವಳಲ್ಲವೇ ..?
ಸ್ವಾದವಿಲ್ಲದಿದ್ದರೆ ಮಗು ಸ್ವೀಕರಿಸದಿದ್ದೀತು..
ಸ್ವಾಸ್ಥ್ಯಕರವಲ್ಲದಿದ್ದರೆ ಸ್ವೀಕರಿಸಿಯೂ ಅನರ್ಥವಾದೀತು..!
ದಶರಥನ ರಾಜ್ಯಭಾರವಂತು..
ಆತ ಪ್ರಜಾರಂಜಕನೂ ಅಹುದು..
ಪ್ರಜಾಪಾಲಕನೂ ಅಹುದು..
ಪ್ರಜೆಗಳನ್ನು ರಂಜಿಸುವಾಗ ಧರ್ಮವನ್ನು ಮರೆಯಲಿಲ್ಲ..
ಪ್ರಜೆಗಳನ್ನು ಪಾಲಿಸುವಾಗ ಅವರ ಸಂತೋಷವನ್ನು ಅಲಕ್ಷಿಸಲಿಲ್ಲ..
ಪ್ರಿಯ-ಹಿತಗಳೆರಡರ ಸಮನ್ವಯದ ಸಂತುಷ್ಟ-ಸತ್ಯನಿಷ್ಠ ಸಮಾಜವನ್ನು ಸಾಧಿಸಿದನಾತ..
ಕಾಲಕಳೆದಂತೆ ಗುಣ-ಶೋಭೆಗಳೂ ಕಳೆಯುವುದುಂಟು..
ವಸ್ತು ಹಳೆಯದಾಗುವುದುಂಟು..
ಕಳಾಹೀನವಾಗುವುದುಂಟು..
ಸ್ಥಿತ ವೈಭವವು ಗತವೈಭವವಾಗುವುದುಂಟು..
ಆದರೆ ಸೂರ್ಯ ಮಾಸಲುಂಟೇ..?
ಲಕ್ಷ-ಕೋಟಿವರ್ಷಗಳು ಕಳೆದರೂ ಇಂದಿಗೂ ಕುಂದದ ಪ್ರಭೆಯಿಂದ ಲೋಕವನ್ನು ಬೆಳಗುವನವನು..
ಅಂತೆಯೇ ಅವನ ವಂಶವೂ..
ಅಂದಿನ ಅಯೋಧ್ಯಾವಾಸಿಗಳದೇನು ಅದೃಷ್ಟವಂತರೋ..?
ಮೊದಲ ಮಹಾರಾಜನಾದ ಮನುವು ಅದಾವ ಮಮತೆಯಿಂದ ಅಯೋಧ್ಯೆಯನ್ನು ಪಾಲಿಸಿದ್ದನೋ,
ಮೂವತ್ತನಾಲ್ಕು ತಲೆಗಳ ನಂತರ ಸಿಂಹಾಸನದಲ್ಲಿ ಮಂಡಿಸಿದ್ದ ದಶರಥನೂ ಅದೇ ಮಮತೆಯಿಂದ-ಕುಶಲತೆಯಿಂದ ಅಯೋಧ್ಯೆಯನ್ನೂ-ಅಯೋಧ್ಯೆಯ ದ್ವಾರಾ ವಿಶ್ವವನ್ನೂ ಪಾಲಿಸಿದನು..
ದಶರಥನು ಅನವರತವಾಗಿ ನೆರವೇರಿಸಿದ ಯಜ್ಞಗಳಿಂದ ಸುಪ್ರೀತರಾದ ದೇವತೆಗಳು ಸುರಿಸಿದ ಅಮೃತವೃಷ್ಟಿಯು ಭುವಿಯನ್ನು ತಂಪಾಗಿಟ್ಟಿತು..
ಅಂತರಂಗದ ಒಳಮನೆಯಲ್ಲಿ ಅನವರತವಾಗಿ ಆತ ನಡೆಸಿದ ಆತ್ಮಸಾಧನೆಯ ಫಲವಾಗಿ ಜಾಗೃತಗೊಂಡು, ಸರ್ವೇಂದ್ರಿಯಗಳ ಮೂಲಕ ಹೊರಹೊಮ್ಮಿದ ಅಂತಸ್ಥ ಚೇತನದ ಕಿರಣಗಳು ಭುವಿಯನ್ನು ಬೆಳಗಿದವು..
ದಶರಥನ ಕೀರ್ತಿಲತೆಯು ಕ್ರಮಕ್ರಮವಾಗಿ ಪಾತಾಳದ ಆಳದಲ್ಲಿ ಬೇರು ಬಿಟ್ಟಿತು..
ಭುವಿಯಗಲ ವಿಸ್ತರಿಸಿತು..
ಮುಗಿಲು ಮುತ್ತಿಕ್ಕಿತು..
ತ್ರಿಲೋಕ ವಿಖ್ಯಾತನೆನಿಸಿದನಾತ..!
ಸತ್ಯಸಂಧನಾಗಿ, ಧರ್ಮನಿಷ್ಠನಾಗಿ ದಶರಥನು ರಾಜ್ಯಭಾರವನ್ನು ನಡೆಸುತ್ತಿರಲು..
ಅಯೋಧ್ಯೆಯು ಅಮರಾವತಿಯೊಡನೆ, ಕೋಸಲವು ಸ್ವರ್ಗದೊಡನೆ ಸ್ಪರ್ಧಿಸಿದವು..
ದಶರಥನು ದೇವತೆಗಳ ದೊರೆಗೆ ಮಿಗಿಲೆನಿಸಿದನು..
|| ಹರೇರಾಮ ||
November 11, 2010 at 10:57 AM
hare raama,
gurugale,
e kaliyuga dalli suryavamsha davaru yaru?
November 11, 2010 at 9:30 PM
ಕತ್ತಲೆಯು ರಾಜ್ಯವಾಳುವ ಕಾಲದಲ್ಲಿ..ಸೂರ್ಯನೆಲ್ಲಿ..? ಚಂದ್ರನೆಲ್ಲಿ..?
November 12, 2010 at 9:21 AM
hare raama,
gurugale,
surya, chandra ru bapdu yaavaaga?
November 12, 2010 at 9:15 PM
ಬೆಳಕಿನ ಯುಗದ ಆರಂಭದಲ್ಲಿ..
November 12, 2010 at 10:06 PM
hare raama,
gurugale,
e jeevi aa yugada nereekshe yali, neemma charanadalli…….
November 11, 2010 at 12:00 PM
ದಶರಥನ ಅಪ್ರತಿಮ ವ್ಯಕ್ತಿತ್ವ ಗುರುಗಳ ಅನನ್ಯ ಅಕ್ಷರದರ್ಪಣದ ಮೂಲಕ ಅದ್ಭುತವಾಗಿ ಪ್ರತಿಫಲಿಸುತ್ತಿದೆ!!
November 11, 2010 at 9:34 PM
ರಾಮಜನಕನ ವ್ಯಕ್ತಿತ್ವ ನಿಜವಾಗಿಯೂ ಪ್ರತಿಫಲಿಸಿದ್ದು ವಾಲ್ಮೀಕಿಗಳ ಶ್ರೀ ರಾಮಾಯಣದರ್ಪಣದಲ್ಲಿ..
ಇದು ಬಿಂಬವಲ್ಲ..
ಪ್ರತಿಬಿಂಬವೂ ಅಲ್ಲ..
ಪ್ರತಿಬಿಂಬದ ಛಾಯೆಮಾತ್ರ..!
November 11, 2010 at 12:53 PM
ಹರೇರಾಮ,,ದಶರಥ ಮಹಾರಾಜನ ಮೇರು ಸದ್ರುಶ ನಡತೆ ಪರಿಚಯ ಈಗ ಸಿಕ್ಕಿತು..
ನಮ್ಮ ದೇಶವನ್ನಾಳುವ ರಾಜಕಾರಣಿಗಳು ಜನನಾಯಕರು ದಶರಥ ಮಹಾರಾಜನ ಗುಣಗಳಲ್ಲಿ ಒ೦ದಶ ದಷ್ಟಾದರೂ ಅಳವಡಿಸಿಕೊ೦ಡರೆ ಚನ್ನಾಗಿತ್ತಲ್ಲವೆ?
November 11, 2010 at 9:36 PM
ನಿಜವಾಗಿಯೂ ಚೆನ್ನಾಗಿರುತ್ತಿತ್ತು…
ಆದರೆ…………………..
November 11, 2010 at 2:07 PM
ದಶರಥ ಒಳ್ಳೆ ರಾಜ ಎಂಬುದಷ್ಟೆ ಕೇಳಿದ್ದೆ,ಆದರೆ ಏಕೆ ಎಂಬುದು ಈಗಲೇ ಗೊತ್ತಾಗಿದ್ದು…
November 11, 2010 at 9:38 PM
ವಾಲ್ಮೀಕಿಗಳು ದಶರಥನ ಕುರಿತು ಹೇಳಿದ್ದೆಲ್ಲವನ್ನೂ ಇಲ್ಲಿ ಹೇಳಲಾಗಿಲ್ಲ…!
November 11, 2010 at 2:09 PM
ಪ್ರಕೃತಿ – ಸಂಸ್ಕೃತಿ – ವಿಕೃತಿಗಳ ಬಗೆಗೆ ಕೊಟ್ಟ ವಿಶ್ಲೇಷಣೆ ‘ಅಪೂರ್ವ’…’ಅನೂಹ್ಯ’…
ಇಂಥಹದ್ದನ್ನು ಬರೆಯಲು ಕೇವಲ ನಮ್ಮ ಸಂಸ್ಥಾನದಿಂದ ಮಾತ್ರ ಸಾಧ್ಯ ಎನ್ನುವುದರಲ್ಲಿ ನಿಸ್ಸಂಶಯ…
ಇಂದಿನ ಅಂದಿನ ರಾಜಕೀಯಗಳ ತುಲನೆ ತುಂಬಾ ಸುಂದರವಾಗಿ ಮೂಡಿಬಂದಿದೆ…
ಸೂರ್ಯವಂಶದ ರಾಜರುಗಳ ಬಗೆಗೆ ಓದುವಾಗ ಮೂಡಿದ ಕೆಲಪ್ರಶ್ನೆಗಳೆಂದರೆ…
ಇಂಥಾ ಮಹಾಮಹಿಮರು ಜನಿಸಿದ ವಂಶ ಏಕೆ ಕಾಲಕ್ರಮದಲ್ಲಿ ನಶಿಸಿತು? ವಂಶವಾಹಿಯಲ್ಲಿ ಧರ್ಮ ಪ್ರವಹಿಸುತ್ತದೆಯೆಂದಾದಲ್ಲಿ , ವ್ಯಕ್ತಿಯ ವ್ಯಕ್ತಿತ್ವರೂಪಿಸುವಲ್ಲಿ ವಂಶ ಪ್ರಮುಖ ಪಾತ್ರವಹಿಸುತ್ತದೆಯೆಂದಾದಲ್ಲಿ, ಅದು ಎಲ್ಲ ಕಾಲದಲ್ಲೂ ನಿರ್ಭಾದಿತವಾಗಿ ಇರಬೇಕ್ಕಿತ್ತಷ್ಟೆ?
ಅಥವಾ ಧರ್ಮವು ಕಾಲಕ್ರಮದಲ್ಲಿ ವೃದ್ದಿ -ಕ್ಷಯಗಳನ್ನು ಹೊಂದುತ್ತದೆ ಎಂದಾದಲ್ಲಿ ಧರ್ಮಕ್ಕಿಂತ ಕಾಲವೇ ಹೆಚ್ಚು ಪ್ರಭಾವಶಾಲಿಯಾದಂತಾಗಲಿಲ್ಲವೇ? ಹೀಗಾದಲ್ಲಿ, ಇದು ಪರೋಕ್ಷವಾಗಿ, ‘ಧರ್ಮವನ್ನು ಆಶ್ರಯಿಸು’ ಎಂಬ ಬದಲಿಗೆ ‘ಕಾಲಕ್ಕೆ ತಕ್ಕಂತೆ ಇರು’ ಎಂಬ ಸಂದೇಶ ನೀಡಿದಂತಾಗಲಿಲ್ಲವೆ?
November 12, 2010 at 9:26 PM
ಧರ್ಮಕ್ಕೆ ವೃದ್ಧಿ-ಕ್ಷಯಗಳಿಲ್ಲ..
ಅಳಿವು-ಬೆಳೆವುಗಳಿಲ್ಲ..
ಅದು ಸನಾತನ..ಸದಾತನ..
ಹ್ಞಾ..!
ವೃದ್ಧಿ-ಕ್ಷಯಗಳು ಕಾಲಕ್ಕೆ ಖಂಡಿತವಾಗಿಯೂ ಇವೆ..
ಯಾವ ಕಾಲದಲ್ಲಿ ಧರ್ಮದ ಸಾನ್ನಿಧ್ಯ ಬಹುವಾಗಿದೆಯೋ ಅದು ಸುಕಾಲ..
ಯಾವ ಕಾಲದಲ್ಲಿ ಧರ್ಮದ ಸಾನ್ನಿಧ್ಯ ಕಡಿಮೆಯಿದೆಯೋ ಅದು ದುಷ್ಕಾಲ…
ಧರ್ಮವನ್ನಾಶ್ರಯಿಸುವವರ ಸಂಖ್ಯೆಯಲ್ಲಿ ಕಾಲಾನುಸಾರವಾಗಿ ವೃದ್ಧಿ-ಕ್ಷಯಗಳಾಗುತ್ತವೆ…
ಅದರಿಂದಾಗಿ ಧರ್ಮಕ್ಕಾಗಲೀ, ಆ ಧರ್ಮವನ್ನಾಶ್ರಯಿಸಿದವರಿಗಾಗಲೀ ಯಾವ ಹಾನಿಯೂ ಇಲ್ಲ..
ಈ ಕಾಲದಲ್ಲಿಯೂ ಧರ್ಮವನ್ನಾಶ್ರಯಿಸಿದ ಆದಿಶಂಕರಾಚಾರ್ಯರಂಥವರು ಇನ್ನಿಲ್ಲದ ಎತ್ತರವನ್ನು ಏರಲಿಲ್ಲವೇ..?
ಆಶ್ರಯಿಸಿದವರನ್ನು ದಾಟಿಸಲಿಲ್ಲವೇ..?
November 12, 2010 at 9:40 PM
ಧ್ಯಾಯನ್ ಕೃತೇ, ಯಜನ್ ಯಜ್ಞೈಃ ತ್ರೇತಾಯಾಂ, ದ್ವಾಪರೇ ಸಮ್ಯಕ್ ಅರ್ಚಯನ್ ।
ಯದಾಪ್ನೋತಿ ತದಾಪ್ನೋತಿ ಕಲೌ ಸಂಕೀರ್ತ್ಯ ಕೇಶವಮ್ ॥
” ಕೃತಯುಗದಲ್ಲಿ ಏಕಾಂತಧ್ಯಾನದಿಂದ..
ತ್ರೇತೆಯಲ್ಲಿ ಕರ್ಮದ ಮರ್ಮವನ್ನರಿತು ಮಾಡಿದ ಯಜ್ಞಗಳಿಂದ..
ದ್ವಾಪರದಲ್ಲಿ ಸಮೀಚೀನವಾದ ಪೂಜೆಯಿಂದ..ಏನನ್ನು ಪಡೆಯಬಹುದೋ,
ಕಲಿಯುಗದಲ್ಲಿ ಅದನ್ನು ಕೇಶವನ ನಾಮಸಂಕೀರ್ತನಮಾತ್ರದಿಂದ ಪಡೆಯಬಹುದು..”
ಈ ಅಭಿಯುಕ್ತರ ಉಕ್ತಿಯು ಸೂಚಿಸುವುದೇನನ್ನು..?
ಯಾವುದನ್ನು ಅತ್ಯಂತ ಕೇಡುಗಾಲವೆಂದು ಜರೆಯುತ್ತೇವೆಯೋ, ಧರ್ಮವನ್ನು ಆಶ್ರಯಿಸುವವನ ಪಾಲಿಗೆ ಅದು ಸುಕಾಲವೇ ಆಗಿ ಪರಿಣಮಿಸುತ್ತದೆಯೆಂದಲ್ಲವೇ..?
November 12, 2010 at 9:46 PM
ಧರ್ಮವು ಬಹುರೂಪಿ..
ಒಮ್ಮೆ ಅದು ಸೂರ್ಯವಂಶವಾಗಿ ಉದಯಿಸಿ ಬಂದರೆ ಮತ್ತೊಮ್ಮೆ ಚಂದ್ರವಂಶವಾಗಿ..ಇನ್ನೊಮ್ಮೆ ಶಂಕರಾಚಾರ್ಯರಾಗಿ..
ಉದಯಾಸ್ತಗಳು ನಮ್ಮ ಕಣ್ಣಿಗಿವೆ..ಸೂರ್ಯನಿಗಿವೆಯೇ..?
ಇಂದಿಗೂ ನಮ್ಮ-ನಿಮ್ಮ ಎದೆಯೊಳಗೆ ಆಡುತ್ತ ಸತ್ಯ-ಧರ್ಮಗಳೆಡೆಗೆ ಪ್ರೇರಿಸುವ ಸೂರ್ಯವಂಶವನ್ನು ನಶಿಸಿತೆಂದು ಹೇಳುವುದಾದರೂ ಹೇಗೆ..?
November 12, 2010 at 10:52 PM
ಮನಸ್ಸಿಗೆ ಮುಟ್ಟುವಂತಹ ಉತ್ತರ… ತುಂಬಾ ಇಷ್ಟವಾಯಿತು ಸಂಸ್ಥಾನ…
ಅಗಣಿತಪ್ರಣತಿಗಳು…
November 15, 2010 at 1:33 AM
ಅದ್ಭುತವಾದ ಪ್ರಶ್ನೆ, ಅತ್ಯದ್ಭುತವಾದ ಉತ್ತರಗಳು, ಎತ್ತರಗಳು…
ಹೆಚ್ಚು ಹೆಚ್ಚು ಇ೦ತಹ ಪ್ರಶ್ನೆಗಳು ಉತ್ತರಗಳು ಬ೦ದರೆ ಧರ್ಮವನ್ನಾಶ್ರಯಿಸುವವರ ಸ೦ಖ್ಯೆ ಹೆಚ್ಚಾಗುವುದು..?
.
ಶ್ರೀ ಗುರುಭ್ಯೋ ನಮಃ
November 13, 2010 at 11:44 AM
ಅಬ್ಬಾ… ಮಧು ದೊಡ್ಡೇರಿಯವರಿ೦ದ ಕಾಮೆ೦ಟ ನೋಡಿ ಖುಷಿಯಾಯಿತು… ನೋಟಕರಿರುವೆವು ನಾವು ಆಟವ ಹೆಚ್ಚು ಹೆಚ್ಚು ಆಡಿ ನೀವು…
.
ಶ್ರೀ ಗುರುಭ್ಯೋ ನಮಃ
November 14, 2010 at 9:14 PM
ಕಲೌ ಕೃತಯುಗಂ ತಸ್ಯ ಕಲಿಸ್ತಸ್ಯ ಕೃತೇ ಯುಗೇ ।
ಹೃದಯೇ ಯಸ್ಯ ಗೋವಿಂದಃ ಹೃದಯೇ ಯಸ್ಯ ನಾಚ್ಯುತಃ ॥
‘ ಯಾರ ಹೃದಯದಲ್ಲಿ ಗೋವಿಂದನಿರುವನೋ ಅವನ ಪಾಲಿಗೆ ಕಲಿಯುಗವೂ ಕೃತಯುಗವಾಗಿ ಪರಿಣಮಿಸುತ್ತದೆ..
ಯಾರ ಹೃದಯದಲ್ಲಿ ಅಚ್ಯುತನಿಲ್ಲವೋ ಅವನ ಪಾಲಿಗೆ ಕೃತಯುಗವೂ ಕಲಿಯುಗವೇ ಆಗಿ ಫಲಿಸುತ್ತದೆ’
ಧರ್ಮವನ್ನಾಶ್ರಯಿಸಿದರೆ ಕಾಲವು ನಮಗೆ ತಕ್ಕಂತೆ ಪರಿವರ್ತಿತವಾಗುವುದೆಂಬುದನ್ನು ಪ್ರತಿಪಾದಿಸುವ ಅಭಿಯುಕ್ತೋಕ್ತಿ..
November 11, 2010 at 2:09 PM
ಮಹತ್ತಾದ ವಿಷಯಗಳನ್ನು ಮಹಾತ್ಮರು ಹೇಳಿದರೇ ಅದಕ್ಕೊಂದು ತೂಕ…
November 11, 2010 at 9:39 PM
ವಿಷಯದ ತೂಕವಿದು..!
November 15, 2010 at 1:39 AM
ವಿಷಯದಲ್ಲಿ ತೂಕವಿದೆ ಎ೦ದು ತೋರಿಸುವ ಮಹಾತ್ಮರ ಕರುಣೆ ಪ್ರೀತಿ ಅಪಾರ.
ಅಲ್ಲದಿದ್ದರೆ ನಮ್ಮ ವಿಷಯಗಳಲ್ಲಿನ ಪ್ರೀತಿ ಶಿವನಿಗೆ ಪ್ರೀತಿ.
.
ಶ್ರೀ ಗುರುಭ್ಯೋ ನಮಃ
November 11, 2010 at 2:49 PM
ಹರೇರಾಮ.ಸಾಮಾನ್ಯವಾಗಿ ದಶರಥನ ದೌರ್ಬಲ್ಯದ ಬಗ್ಗೆ ಓದಿದ್ದ ನಮಗೆ ಶ್ರೀಗಳಿಂದ ದಶರಥನ ಮಹೋನ್ನತ ಗುಣ-ಸಾಧನೆಗಳ ಬಗ್ಗೆ ವಿಸ್ತಾರವಾಗಿ ತಿಳಿಯುವ ಒಂದು ಅವಕಾಶ ಬಂತು. ಪ್ರಕೃತಿ-ಸಂಸ್ಕೃತಿ-ವಿಕೃತಿಯ ಬಗ್ಗೆ ಕೊಟ್ಟ ಉದಾಹರಣೆ ತುಂಬಾ ಚೆನ್ನಾಗಿದೆ. ಹರೇ ರಾಮ.
November 11, 2010 at 4:03 PM
ಸಂದೇಶವಿಲ್ಲದ ಸಂತೋಷ ಬದುಕಿನ ದಿಕ್ಕು ತಪ್ಪಿಸೀತು !
ಸಂತೋಷವಿಲ್ಲದ ಸಂದೇಶ ಬರಿ ಸಪ್ಪೆಯೆನಿಸೀತು !
ತಮ್ಮ ಸಂದೇಶವು ನಮ್ಮೆಲ್ಲರ ಮನ ಬೆಳಗಿಸಿತು
ತಾವು ತೋರಿಸಿದ ದಾರಿಯಲ್ಲಿ ನಡೆದರೆ ಎಲ್ಲರ ಮನೆಯು ಬೆಳಗೀತು।!
ಹರೇ ರಾಮ
November 11, 2010 at 5:32 PM
ಅಬ್ಬಾ!!! ಹೀಗಿದ್ದರೇ ದಶರಥ ಮಹಾರಾಜರು?
ಬರೇ ೪ ಅಕ್ಶರ ಮಾತ್ರ ಕೇಳಿ ಗೊತ್ತಿದ್ದದ್ದು.
November 11, 2010 at 11:16 PM
Raja of Residential house to Raja of Parliamentary house should behave like Dasharatha Raja. Let all follow our MAHARUSHI AND MAHARAJA – SREE SREE RAGHAVESHWARA BHARATHEE MAHASWAMEEJE….
November 19, 2010 at 4:16 PM
ಇದು ನಿಮಗಾಯಿತು…
ನಮಗೆ…?
ಅವರೇ…ರಾಮನೆಂಬ ಶಾಶ್ವತ ಮಹಾರಾಜ..ಶಂಕರರೆಂಬ ಶಾಶ್ವತ ಗುರುಗಳು..ನಮಗೆ..ನಿಮಗೆ..ಎಲ್ಲರಿಗೂ…
November 20, 2010 at 3:24 PM
Hare Raama, Om Sree Gurubhyo Namaha,
Neither Maharaja Sree Raama Nor Mahaguru Sree Shankara Are Visible To Us, We See And Experience BOTH In YOU SAMSTHANA…
November 12, 2010 at 12:37 AM
ಹರೇರಾಮ..
ನಾನೊಂದು ವಿಷಯ ಹೇಳಲೆ..?
ನಮ್ಮ ನಮ್ಮ ವಂಶಗಳನ್ನು ನಾವು ಹೇಗೆ ಹೊಗಳಿಕೊಳ್ಳುತ್ತೇವೆ..?
ಯಾಕೆ ಹೊಗಳಿಕೊಳ್ಳುತ್ತೇವೆ..?
ಯಾಕೇಂದ್ರೆ…
ವಂಶಪರಂಪರೆಯ ಬಗ್ಗೆ ನಮಗೇನೂ ತಿಳಿಯದು, ಅದಕ್ಕೇ..!
ಈಗೀಗ ವಂಶದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಕ್ಕೇ ಹೋಗುವುದಿಲ್ಲ..
ಯಾರಿಗೆ ಬೇಕು ಮಾರಾಯ ಈ ವಂಶದ ರಗಳೆ, ನಾವುಂಟು ನಮ್ಮ ಮಕ್ಕಳುಂಟು ಸಾಕೋ ಸಾಕು ..ಇನ್ನೆಂಥದೂ ಬೇಡಪ್ಪಾ…
ವಂಶ ಬೆಳ್ದು ಏನಾಗ್ಬೇಕಾಗಿದೆ…?
ಈ ಮನೋಭಾವವೇ ಜಾಸ್ತಿಯಲ್ಲವೇ..?
ನಮ್ಮ ವಂಶ ಪರಂಪರೆಯನ್ನು ಹೇಳಿಕೊಳ್ಳೋದಕ್ಕೆ ನಾವೂ ಆ ಪರಂಪರೆಯ ದಾರಿಯಲ್ಲಿ ಸಾಗಬೇಕು..
ನಿಜ, ನಮ್ಮತನವನ್ನು ನಾವೆಂದಿಗೂ ಬಿಡಬಾರದು ಮಹನೀಯರೇ..
ಕಷ್ಟವೋ ಸುಖವೋ ಆ ದಾರಿಯಲ್ಲಿ ಖಂಡಿತಾ ನಡೆಯಲೇ ಬೇಕು..
ಕಷ್ಟಪಡದೆ ಬರುವ ವಂಶಕೀರ್ತಿ ನಮಗೆ ಬೇಡ ಬಂಧುಗಳೇ..
ಅದರಲ್ಲಿ ನಮ್ಮ ಹೆಸರೆಂದಿಗೂ ಉಳಿಯದು ನೆನಪಿಡಿ..!
ನಡೆಯುವ ದಾರಿಯಲ್ಲಿ ಎಡವುವುದು ಸಹಜವೇ ಅಲ್ಲವೇ..?
ತಪ್ಪಾಗಲಿ , ತಿದ್ದಿಕೊಂಡು ನಡೆಯುವ..
ಹಿಂದಕ್ಕೆ ಗಮನಿಸುತ್ತಾ ನಡೆದರೆ ಮುಂದಿನ ಗಮ್ಯ ನಿಲುಕಲು ಕಷ್ಟವೇ ಹೇಳಿ….?
“ಮೊದಲ ಮಹಾರಾಜನಾದ ಮನುವು ಅದಾವ ಮಮತೆಯಿಂದ ಅಯೋಧ್ಯೆಯನ್ನು ಪಾಲಿಸಿದ್ದನೋ,
ಮೂವತ್ತನಾಲ್ಕು ತಲೆಗಳ ನಂತರ ಸಿಂಹಾಸನದಲ್ಲಿ ಮಂಡಿಸಿದ್ದ ದಶರಥನೂ ಅದೇ ಮಮತೆಯಿಂದ-ಕುಶಲತೆಯಿಂದ ಅಯೋಧ್ಯೆಯನ್ನೂ-ಅಯೋಧ್ಯೆಯ ದ್ವಾರಾ ವಿಶ್ವವನ್ನೂ ಪಾಲಿಸಿದನು..”
ಈ ವಾಕ್ಯ ನೋಡಿ….
ದಶರಥನು ಮನುವಾಳಿದ ಹಾಗೇ ಆಳಿದ ಅಂತಲ್ಲವೇನೋ ಈ ವಾಕ್ಯದ ಭಾವ…
ಇಲ್ಲಿ ಅಷ್ಟೂ ತಲೆಮಾರುಗಳಿಗೆ ಅದರದೇ ವಿಶಿಷ್ಟತೆಯಿದೆ ಎಂದು ನನ್ನನಿಸಿಕೆ..
ಯಾರೊಬ್ಬರೂ ಮತ್ತೊಬ್ಬರಂತೆ ಎಲ್ಲವನ್ನೂ ಮಾಡಲಾಗದು ಅಲ್ಲವೇ..?
ಮನು ಹಾಕಿಕೊಟ್ಟ ದಾರಿ ಅದು..
ಮುಂದಿನವರು ಹೀಗೆ ಹೋದರೆ ವಂಶ ಕೀರ್ತಿ ಅಳಿಯದು ಎಂಬುದಾಗಿ..
ಹಾಗಾಗಿ ಪ್ರತಿಯೊಬ್ಬ ಚಕ್ರವರ್ತಿಯೂ ತಮ್ದದೇ ತನವನ್ನು ರೂಡಿಸಿದರೇ ಹೊರತು ’ಇನ್ನೊಬ್ಬರಂತೆ’ ಅಲ್ಲ..
ಅಂದರೆ ಮುಂದಿನ ಎಲ್ಲರೂ ಆ ದಾರಿಯಲ್ಲಿ ನಡೆದರು..
ತಮ್ಮ ಛಾಪನ್ನು ಒತ್ತಿದರು..
ವಂಶವನ್ನು ಬೆಳಗಿದರು…!
ಅದಕ್ಕೇ ಅದು ನಿಂತ ನೀರಾಗಲಿಲ್ಲ..
ಸತತ ಚಲನೆಯಿರುವ ಸಾಗರವಾಯಿತು…!!
ದಶರಥ ಆ ಕೀರ್ತಿಯನ್ನು ಮತ್ತಷ್ಟು ಹಿರಿದಾಗಿಸಿದ..!
ಯಾರೂ ವಂಶಗೌರವಕ್ಕೆ ಚ್ಯುತಿ ತರಲಿಲ್ಲ…!
ಸರಪಳಿಯನ್ನು ತುಂಡರಿಸಲಿಲ್ಲ…!
ಬದಲಿಗೆ ಹೊಸೆದರು…ಬಲಪಡಿಸಿದರು…
ಬರೆಯಲು ಅನುಭವ ಬೇಕು ..
ಈ ವಾಕ್ಯಕ್ಕೆ ಇನ್ನೂ ಅರ್ಥ ಬಹಳವಿದೆ..
ನನ್ನರಿವು ಇಷ್ಟೇ..
ಈಗ ಹೇಳಿ..
ಸೂರ್ಯವಂಶೀಯರು ಎಲ್ಲಿಯಾದರೂ ತಮ್ಮನ್ನು ತಾವು ಹೊಗಳಿಕೊಂಡರೇ…?
ತಮ್ಮ ವಂಶಕ್ಕಾಗಿ ಹೋರಾಡಿದರೇ…?
ಅಲ್ಲ ಗೆಳೆಯರೇ..
ವಂಶಗೌರವಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು…ದುಡಿದರು..
ಪ್ರಜೆಗಳ ಮನದಲ್ಲಿ ಚಿರಸ್ಥಾಯಿಯಾದರು..
ಅದಕ್ಕೇ ಈ ವಂಶಕ್ಕಿನ್ನೊಂದೆಣೆಯಿಲ್ಲವೀ ಜಗತ್ತಿನಲಿ….
ಬನ್ನಿ, ನಮ್ಮ ನಮ್ಮ ಮೂಲಶಕ್ತಿಯನ್ನು ಸ್ಮರಿಸೋಣ..
ಕನಿಷ್ಠ ಆ ದಾರಿಯಲ್ಲಾದರೂ ನಡೆಯೋಣ..
ಹೀಗಳೆಯದಿರೋಣ ಆ ಜೀವಸರಪಳಿಯ…
ಮುಂದಿನ ಪೀಳಿಗೆಗೆ ಬೆಸೆಯೋಣ ಕೊಂಡಿಯ…
ದಶರಥನಂತಲ್ಲ..!!
ನಮ್ಮಂತೆಯೇ ನಡೆಯೋಣ ದೃಢಚಿತ್ತದಿಂದ….
ವಂಶದುಳಿವೇ ನಮ್ಮ ಗುರಿಯಾಗಲಿ…
ಹೊಗಳದಿರು ತೆಗಳದಿರು..
ಅಗೌರವದಿಂ ನೋಡದಿರು …
ನಿನದೇ ಮೂಲವದು ಅದರಿಂದೇ ನೀನಿಂದು…
ನೀ ಒಳಿತು ಮಾಡಿದರೇನು ಕೆಡುಕನೆಣಿಸಿದರೇನು…
ಜಗ ನಿನ್ನ ಗುರುತಿಪುದು ..
ನಿನ್ನ ವಂಶದಿಂದಲ್ಲವೇನು…?
ತಂದೇ…
ಬರೆದುದರಲ್ಲಿ ಏನರ್ಥವಿದೆಯೋ ಕಾಣೆ..
ನೀನೆನ್ನ ಗುರುವಲ್ಲವೇ…?
ತಿಳಿದುಕೋ ಎನ್ನಂತರಂಗವನು…
ಬಾಲಿಶ ಶಬ್ದಗಳಿವು ನೋಡಿ ನಗದಿರು ನೀನು..
ಪುಟ್ಟ ಮಗುವಲ್ಲವೇ ನಾನು…?!!?
November 12, 2010 at 11:41 AM
ಹರೇ ರಾಮ
Harshanna nanna palige Samstana taayee aagi kandre neenu Guru aagi kanside..Ninna Guru Bhaktige nanna ananta vandanegalu.
November 12, 2010 at 10:37 PM
ಕೊಡುವವನೂ ಅವನೇ….
ಪ್ರೇರೇಪಿಸುವವನೂ ಅವನೇ….
ಪಡೆವವನೂ ಅವನೇ…!
ನನ್ನದೇನೂ ಇಲ್ಲ, ಎಲ್ಲವೂ ನಿನ್ನದೇ ಅಂದರೆ ಸಾಕು…
ನಮ್ಮಂತರಂಗದ ಕರೆಯನ್ನೇ ಕಾಯುತ್ತಿರುವ ನನ್ನ ತಂದೆ….
ಓಡೋಡಿ ಬರುವ ನಮ್ಮ ಕಾಯಲೆಂದೇ….!
ಈ ಸುಖ ಇನ್ನೆಲ್ಲಾದರೂ ಸಿಗುವುದೇ….
ಹೇಳು…..!!
November 12, 2010 at 9:47 PM
ಪುಟ್ಟ ಮಗುವಿನ ಮುಖ್ಯ ಲಕ್ಷಣವೇ ಅನಿಮಿತ್ತವಾದ ಹರ್ಷ..!
November 12, 2010 at 7:21 AM
ಹರೇರಾಮಕ್ಕೆ ಹರೇ ರಾಮ
.
ಶ್ರೀ ಗುರುಭ್ಯೋ ನಮಃ
November 12, 2010 at 9:48 PM
ಏನೀ ಬಾರಿ ವಿಲಂಬ-ಸಂಕ್ಷೇಪಗಳು..?
November 13, 2010 at 11:45 AM
ಸಾಷ್ಟಾಂ೦ಗ ಪ್ರಣಾಮಗಳು.
“ಕಾಲದೊಡನೆ ನಡೆಸುತ್ತಿರುವ ಕದನದಲ್ಲಿ ಗೆಲ್ಲಬೇಕಾಗಿದೆ” – ಸ೦ಸ್ಥಾನ
.
.
.
ಕಾಲದೊಡನೆ ಯುದ್ಧ, ಕಾಲಯುದ್ದ, ಕಾಲಾತೀತ ಯುದ್ಧ ಅಥವಾ ಯುದ್ಧಕಾಲ..??
ಅಕಾಲ ಕಾಲಹರಣ ಮಾಡುವ ನನ್ನ೦ತವರಿಗೆ ಕಾಲ ಒ೦ದು ಮಿ೦ಚು-ಗುಡುಗಗಳ ಸ೦ಗಮದ೦ತೆ, ಮಿ೦ಚಿ ಮಾಯವಾದ೦ತೆ, ಗುಡುಗಿನ ಶಬ್ಧ ಆದ ಸ್ವಲ್ಪ ಹೊತ್ತಿನ ನ೦ತರ ಅರಿವಾಗುವ೦ತೆ..
.
ಗುರುಗಳ ನಿದ್ರಾದೇವಿಯ ಮೇಲಿನ ಪ್ರಭಾವ, ಪ್ರವಚನ ಕೇಳಿ ಬೇಗ ಅ೦ತ ಮಲಗುತ್ತಿದ್ದೇನೆ, ಬೇಗ ಏಳಲು ಶುರುಮಾಡಿಕೊಳ್ಳಬೇಕು… ಹೆಚ್ಚು ರಾತ್ರಿ ಹೊತ್ತು ಬರೆಯುತಿದ್ದದ್ದು..
.
ಶ್ರೀ ಗುರುಭ್ಯೋ ನಮಃ
November 12, 2010 at 7:28 AM
ಹರೇ ರಾಮ
ಶೇಣಿ ಅಜ್ಜನ ‘ರಾವಣನ ಪಾತ್ರ ಪೋಷಣೆ’ ಯಲ್ಲಿ ಕೇಳಿದ ನೆನಪು…..,
ವಂಶದ ಕುಡಿಗೋಸ್ಕರ ಹಪ ಹಪಿಸಿದ ದಶರಥ
ಶ್ರೀರಾಮನೇ ಮೊದಲ್ಗೊಂಡ ನಾಲ್ಕು ಪುತ್ರ ರತ್ನರನ್ನು ಪಡೆದ ಬಳಿಕ
ರಾಜ್ಯ ಭಾರ ಅರಮನೆ ಮತ್ತು ಅಂತಃಪುರಕ್ಕೆ ಸೀಮಿತವಾಗಿತ್ತು….
ಅಯೋಧ್ಯೆಯ ಅಂಗಳದಿಂದ ಹೊರಗೆ ಗಮನ ಕಡಿಮೆಯಾಗಿತ್ತು…
ಪರಿಣಾಮ, ರಾಕ್ಷಸರ ಕಾಟ ತಡೆಯಲಾರದೆ ವಿಶ್ವಾಮಿತ್ರರು
ತಾಟಕಾದಿಗಳ ಹನನಕ್ಕಾಗಿ ಶ್ರೀ ರಾಮ ಲಕ್ಷ್ಮಣರನ್ನು ಬಯಸಿದರು…
ಆಗ್ರಹಿಸಿದರು….ದಿವ್ಯ ಮಂತ್ರಾಸ್ತ್ರಗಳನ್ನಿತ್ತು ಅನುಗ್ರಹಿಸಿದರು…ಇತ್ಯಾದಿ…ಇತ್ಯಾದಿ
ಪ್ರಾಯಸಂದ ದಶರಥ, ಸಹಜವಾದ ಪುತ್ರವಾತ್ಸಲ್ಯಕ್ಕೆ ಒಳಗಾಗಿದ್ದನೇ ?
ಸಮ ಪ್ರಾಯದಲ್ಲಿ ಕೈಕೇಯಿಗೆ ವರ ನೀಡುವಾಗ ಪತ್ನೀವ್ಯಾಮೋಹಕ್ಕೆ ಬಲಿಯಾಗಿದ್ದನೇ ?
ರಾಜ್ಯದ ಮತ್ತು ಪ್ರಜೆಗಳ ಬಗ್ಗೆ ಗಮನ ಕಡಿಮೆಯಾಗಿತ್ತೇ ?
ಸೂರ್ಯ ವಂಶ ಚಕ್ರವರ್ತಿ ಸಶಕ್ತನಾಗಿದ್ದರೆ
ವಾಲಿ ,ರಾವಣ ನಂತಹವರು ದಕ್ಷಿಣ ಭಾರತದಲ್ಲಿ ಹೇಗೆ ಆ ಮಟ್ಟಕ್ಕೆ ಬೆಳೆದರು ?
ಈ ಪ್ರಶ್ನೆಗಳೆಷ್ಟು ಸಮರ್ಥನೀಯ / ಬಾಲಿಶವೇ ಸಂಸ್ಥಾನ ?
(ಯಕ್ಷಗಾನದ ರಾವಣನ ವಾದಕ್ಕೆ ಕ್ಷಮೆ ಇರಲಿ …)
November 14, 2010 at 9:34 PM
ದಶರಥನೊಂದು ಶಿಷ್ಟಶಕ್ತಿ..
ರಾವಣನು ಅವನನ್ನು ಮೀರಿದ ದುಷ್ಟಶಕ್ತಿ..
ಶಿಷ್ಟಶಕ್ತಿಗೆ ದುಷ್ಟಶಕ್ತಿಯನ್ನು ನಿಗ್ರಹಿಸಲು ಅಸಾಧ್ಯವಾದಾಗ ವಿಶ್ವಪಾಲಕನ ಮೊರೆಹೊಕ್ಕಿತು…
ಆತ ಶಿಷ್ಟಶಕ್ತಿಯೊಳಗಿನಿಂದಲೇ ಹುಟ್ಟಿ ಬಂದು ದುಷ್ಟಸಂಹಾರವನ್ನು ನೆರವೇರಿಸಿದನು..
November 14, 2010 at 9:35 PM
ದಶರಥನ ಗುಣಗಳ ಚರ್ಚೆಯಿಲ್ಲಿ..
ಆತನ ಕೊರತೆಗಳ ಕುರಿತು ಮುಂದೆ ಚರ್ಚಿಸುವೆವು…
November 14, 2010 at 10:16 PM
ಧನ್ಯೋಸ್ಮಿ
ಹರೇ ರಾಮ
November 12, 2010 at 9:20 AM
ಹರೇ ರಾಮ
ವ೦ಶದಿ೦ದ ಗುರುತಿಸಿಕೊಳುವದಕ್ಕೂ,{ಸೂರ್ಯವ೦ಶ,ಚ೦ದ್ರವ೦ಶ}, ಗೋತ್ರದಿ೦ದ ಗುರುತಿಸಿಕೊಳುವದಕ್ಕೂ
ವ್ಯತ್ಯಾಸವೇನು? ಗೋತ್ರಗಳು ಬ೦ದಿದ್ದು ಯಾವಾಗ? ಹೇಗೆ?
ಹರೇ ರಾಮ
November 14, 2010 at 9:21 PM
ಗೋತ್ರವೂ ವಂಶವೇ..
ಒಂದು ಶ್ರೀಮುಖ ಅಥವಾ ಬ್ಲಾಗ್ನಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸೋಣ..
November 12, 2010 at 9:30 AM
ತಾನು ತನ್ನದೆಂದು ಮರುಗುವವರು ಹಲವರು
ಅವನು ಅವನದೆಂದು(ಭಗವಂತ) ಮಣಿದು ಗೆಲ್ಲುವವರು ಕೆಲವೇ ಕೆಲವರು.
ಸಮಾಜವಲ್ಲವೇ? ಹೃದಯಂಗಳದಿ ನೆಲೆನಿಂತ ಭವ ದು:ಖ ನಾಶನ ಸೇವಾ ಸ್ವೀಕಾರ ದ್ವಾರ
ಧರ್ಮವಲ್ಲವೇ? ಬಿಂದುವನ್ನು ಪರಮಸಿಂಧುವಿಗೆ ಸೇರಿಸುವ ಸೇತು.
ಧರ್ಮದಿಂದೊಡಗೂಡಿದ ಸಮಾಜ ಸೇವೆ ಆ ವಿಶ್ವಾತ್ಮನ ಸೇವೆಯಾದೀತು!! ದಶರಥನ ರಾಜ್ಯವಾದೀತು..
ಗುರುವೇ,ಸಾಮನ್ಯ ಬುದ್ಧಿಗೆ ನಿಲುಕದೀ ಹಿತ ಜ್ಞಾನವನು, ಪ್ರಿಯ ಉಪಮೆ ಬಳಸಿ ಅನುಗ್ರಹಿಸುವ ಈ ಬಗೆ ಅವರ್ಣನೀಯ.
ಹರೇ ರಾಮ.
November 12, 2010 at 10:17 AM
ಹರೇ ರಾಮ ಅಶ್ವಿನಿ, ಈ ರೀತಿ ಬರವಲೆ ಕೇವಲ ನಮ್ಮ ಗುರುಗಳಿಂಗೆ ಮಾತ್ರ ಸಾಧ್ಯ. ನಮ್ಮ ಕಲ್ಪನೆಗೂ ಬತ್ತಿಲ್ಲೆ ಅಲ್ದಾ. ಆದರೆ ಓದುವ, ಅನುಭವಿಸುವ ಪುಣ್ಯ ನವಗೆ ಗುರುಗಳು ದಯಪಾಲಿಸಿದ್ದವು. ಅವು ತೋರಿಸಿದ ದಾರಿಲಿ ನಡವ ಬುದ್ಧಿ ಬರಲ್ಲಿ ಹೇಳಿ ದೇವರಲ್ಲಿ ಪ್ರಾರ್ಥನೆ.
November 12, 2010 at 10:30 AM
ಹೌದು… ಗುರು-ದೇವನ ವಿಶೇಷ ಲೀಲೆಯದು!!!
November 12, 2010 at 10:32 AM
ಪ್ರಕೃತಿ-ಸಂಕೃತಿ-ವಿಕೃತಿ ಗಳ ಉದಾಹರಣೆ, ವಿವರಣೆ ಅದ್ಭುತ….ದಶರಥನ ಟೀಕಿಸುತ್ತಿದ್ದ ನಾವೆಲ್ಲರೂ ಅವನ ಕಿರುಬೆರಳಿಗೂ ಸಮಾನರಲ್ಲ. ಇನ್ನು ಯಾರಯಾರ ಬಗ್ಗೆ ಏನೇನು ತಪ್ಪು ಕಲ್ಪನೆಗಳಿವೆಯೋ… ಗುರುಗಳು ಕಣ್ಣು ತೆರೆಸಬೇಕು.
November 14, 2010 at 9:25 AM
ಯೇನಕೇನ ಪ್ರಕಾರೇಣ ಯಸ್ಯಕಸ್ಯಾಪಿ ದೇಹಿನಃ |
ಸಂತೋಷಂ ಜನಯೇತ್ಪ್ರಾಜ್ಞಃ ತದೇವೇಶ್ವರಪೂಜನಂ ||
ಈ ಮಾತಿನ ನೈಜಾರ್ಥ ಎಂತದು?
November 14, 2010 at 9:29 PM
ನೈಜಾರ್ಥವು ಅನುಭವಮಾತ್ರಗಮ್ಯ…
ಇದೊಂದು ಝಲಕು ಮಾತ್ರ..
‘ನಮ್ಮೊಳಗೂ, ನಿಮ್ಮೊಳಗೂ, ಎಲ್ಲ ದೇಹಿಗಳೊಳಗೂ ಈಶ್ವರನಿದ್ದಾನೆ…’ಸಂತೋಷ’ದ ರೂಪದಲ್ಲಿ..
ಆತ ಅವ್ಯಕ್ತನಾಗಿದ್ದರೆ ವ್ಯಕ್ತಪಡಿಸಿಕೊಂಡು, ಕಂಡು ಸಂತೋಷಪಡು…
ಅಲ್ಲಿಗೆ ಎರಡುಕಡೆಗಳಲ್ಲಿಯೂ ಈಶ್ವರನ ಆವಿರ್ಭಾವವಾದಂತಾಯಿತು…
ಎಲ್ಲೆಲ್ಲಿ ಜೀವಗಳು ನಲಿದು ನಗುವವೋ ಅಲ್ಲಲ್ಲಿ ಈಶ್ವರನ ಪ್ರಕಟೀಕಾರವಿದೆ..!
November 15, 2010 at 1:26 AM
ರಾಮನನ್ನು ಬಿಟ್ಟು ರಾಜ್ಯವಿಲ್ಲ…. ರಾಮಾಯಣವೆ೦ದರೆ ರಾಮ-ರಾಜ್ಯ ಸ೦ಗಮ..
ಗುರುಗಳ ಪ್ರಕೃತಿ-ಸ೦ಸ್ಕೃತಿಗಳ ವಿವರಣೆ ಅದೊ೦ದು ಕಲಾಕೃತಿ..
ಅ೦ತರ೦ಗದಲ್ಲಿ ಮೂಡುವ ಚಿತ್ರಗಳ ಚಿತ್ರಣಗಳ ಡೈರೆಕ್ಟ್ ಪ್ರಿ೦ಟ್ ಹಾಕುವ ಹಾಗಿದ್ದಿದ್ದರೆ…
.
ಕೊಡುವುದರಲ್ಲಿರುವ ಸುಖವ ಮರೆತಿರುವೆವು.
ಶಿವನನ್ನು ಬಾಚಿ ತಬ್ಬಿಕೊ೦ಡ ಮಾರ್ಕ೦ಡೇಯನೆಲ್ಲಿ, ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಬಾಚಿ ತು೦ಬಿಸಿಕೊಳ್ಳುತ್ತಿರುವ ನಾವೆಲ್ಲಿ, ಸೋ ಶಿವನೆಲ್ಲಿ?
ಅಯೋಧ್ಯೆಯೆಲ್ಲಿ, ದಶರಥರ೦ತ ರಾಜರೆಲ್ಲಿ, ಪುರಜನರು ಜಾನಪದರು ಎಲ್ಲಿ..
ತನ್ನನ್ನು ತಾನು ಗೆಲ್ಲದ ನಾಯಕರಿ೦ದ ಪುರಜನರು ಕುರಿಜನರಾಗಿದ್ದೇವೆ, ಜಾನಪದರು ಜಾತ್ರೆಯೆಲ್ಲಿ ಕಳೆದುಹೋಗಿ ದಾರಿ ತಪ್ಪಿದ ಮಕ್ಕಳ೦ತಾಗಿದ್ದಾರೆ.
.
“ಆನ೦ದಮಯ ಈ ಜಗದುದಯ..” ಎ೦ದು ಹೇಳುತ್ತಿದ್ದವರೆಲ್ಲಿ?
ಹೃದಯವನ್ನೇ ಕಳೆದುಕೊ೦ಡ ಮೇಲೆ, ಉದಯವೇನು, ಅಲ್ಲಿ ಅಸ್ತಮಾನವೂ ಇಲ್ಲ – ಮತ್ತೆ ಉದಯದ ಪ್ರಶ್ನೆಯೆಲ್ಲಿ?
.
ಸಪ್ತಕುದುರೆಯ ವೇಗ ಸೌ೦ದರ್ಯದಲ್ಲಿ ಓಡಬಹುದಾದ೦ತ ದೇಶವೆ೦ಬ ರಥಕ್ಕೆ, ಕತ್ತೆ ಹ೦ದಿಗಳ ಕಟ್ಟಿ ಕು೦ಭಕರ್ಣರನ್ನು ಸಾರಥಿಯನ್ನಾಗಿ ಮಾಡಿರುವೆವು ನಾವು ನಾವು ಬೇರೆ ಯಾರು ಅಲ್ಲ, ನಾವೇ..
.
ನಾವು ಸ್ವರ್ಗ ಸೇರುವುದೇನು, ಸ್ವರ್ಗವನ್ನು ಧರೆಗೆ ಇಳಿಸಬೇಕು..
ಬೇಕು ದೃಢ ಮನಸುಗಳು, ದೃಢ ಬಾಹುಗಳು, ದೃಢ ನಿರ್ಧಾರಗಳು,
ದೃಢತೆಯನ್ನು ಅನುಗ್ರಹಿಸು ಹನುಮ೦ತ, ಮಿಡತೆಯ೦ತೆ ಹಣತೆಯ ದೀಪದ ಶಾಖಕ್ಕೇ ಬಲಕು೦ದಿ ಸತ್ತ೦ತಾಗಿರುವೆವು, ನಿನಗೆ ನಿನ್ನ ಶಕ್ತಿಯ ಅರಿವಾಗಿಸಿದವರೊಡನೆ ಬ೦ದು ನಮ್ಮ ಅರಿವನ್ನು ಪ್ರಚೋದಿಸು.
.
ನಾನು ಎ೦ದರೆ ಕೇವಲ ನನ್ನ ಬೆಡ್-ರೂಮ್ ಆಗಿರುವ ಕಾಲ-ದೇಶ.
“ಉದರ ನಿಮಿತ್ತಂ ಬಹುಕೃತ ವೇಷಮ್” ಹೋಗಿ ಈಗ “ಧನ ನಿಮಿತ್ತಂ ಬಹುಕೃತ ಓಟ೦”..
ಹಲವು ವರ್ಷಗಳ ಕೆಳಗೆ ಶಿವರಾತ್ರಿಯ ಜಾಗರಣೆಯ ರಾತ್ರಿ ನಡೆದ ಘಟನೆ,
ಒಮ್ಮೆ ಪೋಲಿಸ್ ಬ೦ದರು ಎ೦ದು ಒಬ್ಬ ಓಡಿದ,
ಅವನು ಸುಮಾರು ದೂರ ಓಡುತ್ತಲೆ ಇದ್ದಾನೆ, ಹಿ೦ದೆ ಪೋಲಿಸ್ ಓಡಿಸಿಕೊ೦ಡು ಬರುತ್ತಲೆ ಇದ್ದಾನೆ,
ಓಡಿದ ಓಡಿದ…., ಓಡಿಸಿಕೊ೦ಡು ಓಡಿಸಿಕೊ೦ಡು ಹೋದ….,
ಬಹಳ ದೂರ ಓಡಿದ ಮೇಲೆ ಹಿ೦ದೆ ತಿರುಗಿ ನೋಡಿದ – ಪೋಲಿಸ್ ಅಲ್ಲ – ಈತನ ಸ್ನೇಹಿತನೆ ಓಡಿಕೊ೦ಡು ಬರುತ್ತಿದ್ದ ಹಿ೦ದೆ,
ಮು೦ದಿದ್ದವನು ಪೋಲಿಸ್ ಓಡಿಸಿಕೊ೦ಡು ಬರುತ್ತಿರುವ ಎ೦ದು ಓಡುತ್ತಿದ್ದ, ಹಿ೦ದಿದ್ದ ಸ್ನೇಹಿತ ಆತ ಓಡುತ್ತಿರುವ ಹೇಳಿ ತಾನು ಓಡುತ್ತಲೆ ಇದ್ದ…
ನಾವೆಲ್ಲಿ ಏಕೆ ಓಡುತ್ತಿರುವೆವು.
.
ಶ್ರೀ ಗುರುಭ್ಯೋ ನಮಃ
November 15, 2010 at 7:54 AM
ದೇಶವನ್ನೆ ದೇಹವೆ೦ದುಕೊ೦ಡರು.. ಪ್ರಜೆಗಳನ್ನು ತನ್ನ ಮಕ್ಕಳೆ೦ದುಕೊ೦ಡರು..
ಹಗಲಿರುಳು ದುಡಿಯುವ ರಾಜನೆ೦ಬ ತ೦ದೆಗೆ, ಋಷಿಗಳಿ೦ದ ಹಿಡಿದು ಎಲ್ಲರೂ ಗೌರವ ಸಲ್ಲಿಸುವರು. ಪ್ರಕೃತಿ ಸ೦ಸ್ಕೃತಿಗಳು ವಿಕೃತಿಯಾಗದು.
ಪ್ರಕೃತಿಗೆ ಜೀವನದಿಯಿ೦ದ – ಸ೦ಸ್ಕೃತಿಗೆ ಜೀವನನದಿಯಿ೦ದ ಶಕ್ತಿ ಸಿಗುತ್ತ ಹಸಿರೆಲ್ಲೆಲ್ಲೂ ಕಾಣುವುದು.
.
ರಾಜ ಮರ್ಯಾದೆಯನ್ನು ಬಯಸುವೆವು ನಾವೆಲ್ಲ, ಆದರೆ ಒಬ್ಬ ಸಾಮಾನ್ಯ ಪ್ರಜೆ ಮಾಡಬೇಕಾದ ಕರ್ತವ್ಯಗಳ ಮರೆಯುವೆವು..
ನಾನು ಕೆಟ್ಟವನು, ನೀನು ಕೆಟ್ಟವನು, ಈ ಜಗತ್ತೆ ಕೆಟ್ಟದು ಎನ್ನುವೆವು.. ಎಲ್ಲರಲ್ಲೂ ಇರುವ ಅವಗುಣಗಳ ತೋರಿಸುವೆವು, ಗುಣಗಳ ಮರೆಯುವೆವು..
ನಮಗೆ ಬೇಕಾಗಿರುವುದೆ ನೀನೂ ಕೆಟ್ಟವನು, ಅವನು ಕೆಟ್ಟವನು ಎ೦ದು ಸಾಧಿಸುವುದು.. ಕುನ್ನಿಯಿ೦ದ ಹಿಡಿದು ಯಾರೂ ಗೌರವ ಕೊಡರು..
.
ಶ್ರೀ ಗುರುಭ್ಯೋ ನಮಃ
November 15, 2010 at 7:31 AM
ರಾಮನ ನ೦ತರ ಬ೦ದ ಸೂರ್ಯ ವ೦ಶದ ರಾಜರುಗಳು ಯಾರು ಗುರುಗಳೇ?
.
ಶ್ರೀ ಗುರುಭ್ಯೋ ನಮಃ
November 15, 2010 at 4:33 PM
ಹರೇರಾಮ್,
ರಾಮ ರಾಮ,
November 16, 2010 at 8:20 AM
ಹರೆರಾಮ ಸಂಸ್ಥಾನ – ಚಾರಚಕ್ಷು ಅಂದರೆ ಏನು? ಉದಾಹರಣೆ ಸಹಿತ ವಿವರಣೆ ಬೇಕು ಅಂತ ಬಿನ್ನಹ.
November 19, 2010 at 4:22 PM
ಚಾರ ಎಂದರೆ ಗುಪ್ತಚರ..
ಚಕ್ಷು ಎಂದರೆ ಕಣ್ಣು..
ಚಾರಚಕ್ಷು ಎಂದರೆ ಗುಪ್ತಚರರನ್ನೇ ಕಣ್ಣಾಗಿಸಿಕೊಂಡು ತಾನು ಪ್ರತ್ಯಕ್ಷ ನೋಡಲಾರದುದನ್ನು ನೋಡುವವನು..
ಉದಾಹರಣೆಗೆ ನಿನ್ನನ್ನೇ ಕಣ್ಣಾಗಿಸಿಕೊಂಡು ನಾವು ನೋಡುವಂತೆ…
November 16, 2010 at 2:29 PM
‘……ಅಂದಿನ ಅಯೋಧ್ಯಾವಾಸಿಗಳದೇನು ಅದೃಷ್ಟವಂತರೋ..?
ಮೊದಲ ಮಹಾರಾಜನಾದ ಮನುವು ಅದಾವ ಮಮತೆಯಿಂದ ಅಯೋಧ್ಯೆಯನ್ನು ಪಾಲಿಸಿದ್ದನೋ,
ಮೂವತ್ತನಾಲ್ಕು ತಲೆಗಳ ನಂತರ ಸಿಂಹಾಸನದಲ್ಲಿ ಮಂಡಿಸಿದ್ದ ದಶರಥನೂ ಅದೇ ಮಮತೆಯಿಂದ-ಕುಶಲತೆಯಿಂದ ಅಯೋಧ್ಯೆಯನ್ನೂ-ಅಯೋಧ್ಯೆಯ ದ್ವಾರಾ ವಿಶ್ವವನ್ನೂ ಪಾಲಿಸಿದನು…….”
ಇಂದಿನ ಶ್ರೀ ಸಂಸ್ಥಾನ ಗೋಕರ್ಣ ಮಂಡಲದ ಶಿಷ್ಯರೆಷ್ಟು ಅದೃಷ್ಟವಂತರೋ..?
ಮೊದಲ ರಾಜ ಗುರು ಶ್ರೀ ಶಂಕರರು ಅದಾವ ಮಮತೆಯಿಂದ ಈ ಮಂಡಲವನ್ನು ಹರಸಿದ್ದನೋ,
ಮೂವತ್ತ ಐದು ಗುರುಗಳ ನಂತರ ಸಿಂಹಾಸನದಲ್ಲಿ ಮಂಡಿಸಿರುವ ಶ್ರೀ ಶಂಕರರೂ ಅದೇ ಮಮತೆಯಿಂದ-ಕುಶಲತೆಯಿಂದ
ಮಂಡಲವನ್ನೂ-ಈ ಮಂಡಲದ ದ್ವಾರಾ ವಿಶ್ವವನ್ನೂ ಹರಸುತ್ತಿರುವರು……
November 16, 2010 at 4:20 PM
hareraama hareraama…….
November 16, 2010 at 7:46 PM
ಸತ್ಯ… ಸತ್ಯ…
November 19, 2010 at 4:23 PM
ನಿಮ್ಮ ಕಣ್ಣು ಚೆನ್ನ…
November 19, 2010 at 7:43 PM
HARE RAAMA
October 4, 2011 at 9:58 PM
ಹರೇ ರಾಮ…