ಕಣ್ಮುಚ್ಚಿ ಕಲ್ಪಿಸಿಕೊಳ್ಳಿ.

ವಿಮಾನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ.

ಒಂದು ವೇಳೆ ವಿಮಾನವನ್ನು ನಡೆಸುವಾತ ದೀರ್ಘ ನಿದ್ರೆಗೆಳಿದರೆ ಪರಿಣಾಮವೇನಾದೀತು?

ದೇಶವನ್ನು ಕಾಯುವ ಸೈನಿಕ ಮೈಮರೆತು ಮಲಗಿದರೆ ಪ್ರಜೆಗಳ ಪಾಡೇನು?

ಒಂದಡಿ ಮುಂದಿಟ್ಟು ಕಲ್ಪಿಸಿಕೊಳ್ಳಿ.

ಬ್ರಹ್ಮಾಂಡವನ್ನು ನಡೆಸುವಾತ/ಕಾಯುವಾತ ನಾಲ್ಕುತಿಂಗಳುಗಳ ಕಾಲ ನಿದ್ರಿಸಿದರೆ…?

ಹೀಗೂ ಉಂಟೇ?

ಋಷಿ ದೃಷ್ಟಿಯಲ್ಲಿ –

ವಿಶ್ವವನ್ನು ಕಟ್ಟುವ ಶಕ್ತಿಗೆ ಬ್ರಹ್ಮನೆಂದು ಹೆಸರು.

ಕಾಯುವ ಶಕ್ತಿಗೆ ವಿಷ್ಣುವೆಂದು ಹೆಸರು.

ಕೊಲ್ಲುವ ಶಕ್ತಿಗೆ ಮಹೇಶ್ವರನೆಂದು ಹೆಸರು.

ಬ್ರಹ್ಮನ ಸೃಷ್ಟಿಯನ್ನು ಪ್ರಳಯದವರೆಗೆ ಪಾಲಿಸುವ/ನಡೆಸುವ ಹೊಣೆಹೊತ್ತ ನಾರಾಯಣನಿಗೆ ವರುಷದ ನಾಲ್ಕು ತಿಂಗಳು ನಿದ್ರೆ.

ಆಷಾಡ ಶುದ್ದ ಏಕಾದಶಿಯಿಂದ ಕಾರ್ತೀಕ ಶುದ್ದ ದ್ವಾದಶಿಯವರೆಗೆ (ಪ್ರಥಮೈಕಾದಶಿಯಿಂದ ಉತ್ಥಾನ ದ್ವಾದಶಿಯವರೆಗೆ) ನಾಲ್ಕು ತಿಂಗಳ ಮಳೆಗಾಲ ಶ್ರೀವಿಷ್ಣುವಿನ ಯೋಗ ನಿದ್ರೆಯ ಸಮಯ.

ಮುಚ್ಚಿದ ಕಣ್ಣುಗಳಿಂದ ಎಡಬಿಡದೇ ವಿಶ್ವವನ್ನೆಲ್ಲಾ ನೋಡುವ ಪ್ರಭು….

ಜಗದ ರಕ್ಷಣೆಯಲ್ಲಿ ಜಾಗರೂಕವೇ ಆಗಿರುವ ನಿದ್ರಾಮುದ್ರೆ (ನಿದ್ರಾಮುದ್ರಾಂ ನಿಖಿಲಜಗತೀ ರಕ್ಷಣೇ ಜಾಗರೂಕಾಂ – ಭೋಜರಾಜ).

ಎಚ್ಚರದಲ್ಲೂ ನಿದ್ರಿಸುವವರ ಪ್ರಪಂಚವಿದು.

ವಿಚಿತ್ರ!!

ನಿದ್ದೆಯಲ್ಲೂ ಎಚ್ಚರವಿರುವವನು ಇದರ ಪ್ರಭು!!!

ನಿದ್ರೆಯಲ್ಲಿ ಎರಡು ವಿಧ.

ಒಳಗೂ ಹೊರಗೂ ಕತ್ತಲಾವರಿಸುವಂತೆ ನಿದ್ರಿಸಿದರೆ… ಅದು ಜಾಡ್ಯ ನಿದ್ರೆ.

ಅಂತರಂಗ ಬಹಿರಂಗಗಳು ಆನಂದದ ಬೆಳಕಿನಲ್ಲಿ ಬೆಳಗಿದರೆ… ಅದು ಯೋಗನಿದ್ರೆ.

ಶಂಕರಾಚಾರ್ಯರು ಯೋಗನಿದ್ರೆಯನ್ನು ವರ್ಣಿಸುವ ಪರಿ…

ಇದು ಎಚ್ಚರವಲ್ಲ (ಎಚ್ಚರದಲ್ಲಿ ಬಾಹ್ಯ ಪ್ರಪಂಚದ ಪರಿವೆ ಇರುತ್ತದೆ).

ಇದು ನಿದ್ರೆಯಲ್ಲ (ನಿದ್ರೆಯಲ್ಲಿ ಅಂತಃ ಪ್ರಪಂಚದ ಪರಿವೆ ಇರುವುದಿಲ್ಲ).

ಇದು ಬದುಕಲ್ಲ (ಬದುಕಿನ ಲಕ್ಷಣಗಳಾದ ಉಸಿರಾಟ, ಹೃದಯ ಸ್ಪಂದನ, ರಕ್ತ ಸಂಚನಗಳಿಲ್ಲದ ಸ್ಥಿತಿ ಇದು).

ಇದು ಮೃತ್ಯುವಲ್ಲ ( ಮೃತರಾದವರು ಮತ್ತೆ ಎದ್ದು ಬರಲಾರರು).

ಕೊನೆಗೆ ಯೋಗ ನಿದ್ರೆಗೆ ಶಂಕರಾಚಾರ್ಯರು ಕೊಟ್ಟ ಹೆಸರು…

ವಿಚಿತ್ರಂ!!!

ನಮ್ಮ ನಿದ್ರೆ ನಿದ್ರೆಯಲ್ಲ.

ಏಕೆಂದರೆ…

ನಿದ್ರೆಯಲ್ಲಿ ನಮ್ಮ ಸರ್ವಾವಯವಗಳೂ ಪೂರ್ಣ ವಿಶ್ರಾಂತಿಯನ್ನು ಪಡೆಯುವುದಿಲ್ಲ.

ನಮ್ಮ ಎಚ್ಚರ ಎಚ್ಚರವಲ್ಲ.

ಕಾರಣ…

ಎಚ್ಚರದಲ್ಲಿ ನಮ್ಮೊಳಗೆ ಹುದುಗಿರುವ ಸರ್ವ ಶಕ್ತಿಗಳು ಪರಿಪೂರ್ಣವಾಗಿ ಜಾಗೃತವಾಗಿರುವುದಿಲ್ಲ.

ಜೀವಲೋಕಕ್ಕೆ ಎಚ್ಚರ ನಿದ್ರೆಗಳನ್ನು ಕಲಿಸಿಕೊಡುವ ದೇವರ ದೇವ ನಾಲ್ಕು ತಿಂಗಳ ಕಾಲ ತನ್ನ ಯೋಗ ನಿದ್ರೆಯನ್ನು ತೊರೆದು ಎಚ್ಚೆತ್ತುಕೊಳ್ಳುವ “ಉತ್ಥಾನ ದ್ವಾದಶಿ” ಇಂದು.

(ಮುಂದುವರೆಯುವುದು…)

Facebook Comments Box