1. ರಾಮನು ಸೀತೆಯ ಚಾರಿತ್ರ್ಯವನ್ನು ಶಂಕಿಸಿದ್ದನೇ?
2. ನಮ್ಮ ಪೂರ್ವಜರು ಗ್ರಹಣವನ್ನು “ಸೂರ್ಯ-ಚಂದ್ರರನ್ನು ರಾಹುವೆಂಬ ಹಾವು ನುಂಗುವುದು” ಎಂದು ತಪ್ಪು ತಿಳಿದಿದ್ದರೇ?
ಮೇಲಿನ ಎರಡೂ ಪ್ರಶ್ನೆಗಳ ಉತ್ತರವು ಮಹಾಕವಿ ಕಾಳಿದಾಸನ ರಘುವಂಶ ಮಹಾಕಾವ್ಯದ ಒಂದೇ ಶ್ಲೋಕದಲ್ಲಿದೆ.
ಸಂದರ್ಭ: ಸೀತೆಯ ಚಾರಿತ್ರ್ಯದ ಕುರಿತು ಜನರು ಅಯೋಧ್ಯೆಯ ಬೀದಿ-ಬೀದಿಗಳಲ್ಲಿ ಆಡಿಕೊಳ್ಳುತ್ತಿದ್ದಾರೆ ಎಂಬ ಅಪ್ರಿಯ ವಾರ್ತೆಯು ಚಾರನ ಮೂಲಕ ರಾಮನಿಗೆ ತಿಳಿದು ಬಂದಿದೆ. ಮುಂದಿನ ಕ್ರಮಕ್ಕಾಗಿ ರಾಮನು ತಮ್ಮಂದಿರನ್ನು ಕರೆಸಿ, ಅವರಿಗೆ ವಿದ್ಯಮಾನವನ್ನು ತಾನೇ ಅರುಹುತ್ತಿದ್ದಾನೆ. ಈ ಸಂದರ್ಭದಲ್ಲಿ ಸೀತೆಯ ಚಾರಿತ್ರ್ಯದ ಕುರಿತು ರಾಮನು ಸ್ವಾಭಿಪ್ರಾಯವನ್ನು ಸೋದಾಹರಣವಾಗಿ ವಿವರಿಸುವ ಪರಿ ನೋಡಿ:
“ಅವೈಮಿ ಚೈನಾಂ ಅನಘೇತಿ ಕಿಂತು
ಲೋಕಾಪವಾದೋ ಬಲವಾನ್ ಮತೋ ಮೇ |
ಛಾಯಾ ಹಿ ಭೂಮೇಃ ಶಶಿನೋ ಮಲತ್ವೇನ
ಆರೋಪಿತಾ ಶುದ್ಧಿಮತಃ ಪ್ರಜಾಭಿಃ ||”
(ಕಾಲಿದಾಸ ಕೃತ ರಘುವಂಶ ಮಹಾಕಾವ್ಯ, ಸರ್ಗ 14, ಶ್ಲೋಕ 40)
“ಸೀತೆಯು ದೋಷರಹಿತಳು” ಎಂಬುದನ್ನು ನಾನು ಚೆನ್ನಾಗಿ ಬಲ್ಲೆನೆನ್ನುವ ರಾಮ, ಆಕೆಯ ಮೇಲಿನ ಲೋಕಾಪವಾದವನ್ನು ಚಂದ್ರಗ್ರಹಣಕ್ಕೆ ಹೋಲಿಸುತ್ತಾನೆ: “ವಾಸ್ತವವಾಗಿ ಚಂದ್ರನಲ್ಲಿ ಯಾವ ವಿಕಾರವೂ ಏರ್ಪಡದಿದ್ದರೂ ಆತನ ಮೇಲೆ ಹಾಯುವ ಭೂಮಿಯ ನೆರಳನ್ನು ಕಂಡು ಅವನನ್ನು ಕಲ್ಮಶಗ್ರಸ್ತನೆಂದು ಜನರು ಆರೋಪಿಸುತ್ತಾರೆ; ಅಂತೆಯೇ ಸೀತೆಯಲ್ಲಿ ಯಾವ ದೋಷವೂ ಇಲ್ಲದಿದ್ದರೂ ರಾವಣನ ನೆರಳಿನಲ್ಲಿ ಕೆಲಕಾಲ ಇದ್ದ ಮಾತ್ರಕ್ಕೇ ಜನರು ಆಕೆಯನ್ನು ಕಲಂಕಿತೆಯೆಂದು ತಪ್ಪಾಗಿ ಭಾವಿಸುತ್ತಾರೆ.” ಇದು ರಾಮನ ಭಾವ.
‘ತಾವೇ ತಿಳಿದವರು!’ ಎಂದು ತಪ್ಪಾಗಿ ತಿಳಿದುಕೊಂಡು ‘ರಾಮನಿಗೆ ಸೀತೆಯಲ್ಲಿ ತಪ್ಪು ಭಾವನೆಯಿತ್ತು’ ‘ನಮ್ಮ ಪೂರ್ವಜರಿಗೆ ಗ್ರಹಣದ ಬಗ್ಗೆ ತಪ್ಪು ತಿಳಿವಳಿಕೆಯಿತ್ತು’ ಎನ್ನುವವರು ಕಾಳಿದಾಸನ ಕನ್ನಡಿಯಲ್ಲಿ ಅವಶ್ಯವಾಗಿ ತಮ್ಮ ಮುಖವನ್ನು ನೋಡಿಕೊಳ್ಳಬೇಕು.
ಸೀತೆಯನ್ನು “ಅನಘಾ – ದೋಷರಹಿತಳು” ಎಂದು ರಾಮನು ಸಾರುವಾಗ ತನ್ನ ಸತಿಯ ಕುರಿತು ಆತನಿಗೆ ಲವಲೇಶದಷ್ಟೂ ಶಂಕೆಯಿರಲಿಲ್ಲವೆಂಬುದು ಸೂರ್ಯಸ್ಪಷ್ಟ. ಹಾಗೆಯೇ ಚಂದ್ರಗ್ರಹಣವನ್ನು “ಪರಿಶುದ್ಧನಾದ ಚಂದ್ರನ ಮೇಲೆ ಬೀಳುವ ಭೂಮಿಯ ನೆರಳು” ಎನ್ನುವ ರಾಮನ ಮಾತಿನಲ್ಲಿ ಗ್ರಹಣದ ಕುರಿತಾದ ನಿಖರ ವೈಜ್ಞಾನಿಕ ವಿಮರ್ಶೆಯಿದೆ.
ನಮಗಿಲ್ಲಿ ಕಗ್ಗವೊಂದು ಪ್ರಸ್ತುತವೆನಿಸುತ್ತಿದೆ:
ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ |
ಹಿತಚಿಂತಕರು ಜನಕೆ, ಕೃತಪರಿಶ್ರಮರು? ||
ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ |
ಮಿತಿಯಿಂ ನವೀಕರಣ – ಮಂಕುತಿಮ್ಮ ||877||
‘ನಾವೇ ಸುಜ್ಞಾನಿಗಳು; ನಮ್ಮ ಪೂರ್ವಜರು ಅಜ್ಞಾನಿಗಳು’ ಎಂಬ ಭ್ರಮೆ ಸಲ್ಲ! ಈ ಭರತಭೂಮಿಯಲ್ಲಿ ನಮ್ಮ ಪೂರ್ವದಲ್ಲಿಯೂ ಮಹಾಮತಿವಂತರಿದ್ದರು; ಅವರು ಲೋಕಹಿತಚಿಂತಕರೂ ಆಗಿದ್ದರು. ಅವರ ಮಹಾಸಾಧನೆ-ಶೋಧನೆ-ಬೋಧನೆಗಳ ಹಿಂದೆ ಅಪಾರ ಪರಿಶ್ರಮವಿದ್ದಿತು! ಮಿತಿಮೀರಿದ ಚಿಕಿತ್ಸೆಯು ಇಲ್ಲದ ರೋಗವು ಬರಲು ಕಾರಣವಾಗುವಂತೆ, ‘ಪರಂಪರೆಯೆಲ್ಲವೂ ಮೌಢ್ಯ; ಆಧುನಿಕತೆಯೆಲ್ಲವೂ ಸತ್ಯ’ ಎಂಬ ಭ್ರಮೆಯಲ್ಲಿ ತರುತ್ತಿರುವ ಅತಿಯಾದ ಮಾರ್ಪಾಡುಗಳು ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗಬಹುದು!
ನವೀಕರಣದಲ್ಲಿ ಸಮೀಕರಣವಿರಲಿ; ಅದು ವಿನಾಕಾರಣವಾಗದಿರಲಿ!
ಸಾರಾಸಾರ-ವಿಚಾರದ ಒರೆಗೆ ಹಚ್ಚದೆಯೇ ಭಾರತೀಯತೆಯನ್ನು ಮೌಢ್ಯವೆಂದು ಉದ್ಘೋಷಿಸಿಬಿಡುವ ಮಹಾನುಭಾವರ ಕೊರಳಿಗೆ ಕಾಳಿದಾಸನ ಆ ಕಾವ್ಯಖಂಡವನ್ನು ಈ ಕಗ್ಗದ ಹಗ್ಗದ ಮೂಲಕವಾಗಿ ಕಟ್ಟಿ, ಸಂಸ್ಕೃತಿ~ಸಾಗರದಲ್ಲಿ ಮೂರು ಜನ್ಮ ಮುಳುಗಿಸಿಟ್ಟರೆ* ನಮ್ಮ ದೇಶವು ಉದ್ಧಾರವಾಗುವ ಸಾಧ್ಯತೆಗಳಿವೆ!
ಆದರೂ ಸಾಲದಿದ್ದರೆ ಆರ್ಯಭಟನು ಹರಿಸಿದ ಈ ಅಮೃತಾಕ್ಷರಗಳಿಂದ ಮಹಾಮಸ್ತಕಾಭಿಷೇಕ ಮಾಡಬಹುದು!
ಛಾದಯತಿ ಶಶೀ ಸೂರ್ಯಂ ಶಶಿನಂ ಮಹತೀ ಚ ಭೂಚ್ಛಾಯಾ|
(ಆರ್ಯಭಟೀಯ, ಗೋಳಪಾದ, 4ನೆಯ ಅಧ್ಯಾಯ, ಶ್ಲೋಕ 37)
ಚಂದ್ರನು ಸೂರ್ಯಬಿಂಬವನ್ನು ಮುಚ್ಚುತ್ತಾನೆ ಮತ್ತು ಭೂಮಿಯ ವಿಶಾಲವಾದ ನೆರಳು ಚಂದ್ರನನ್ನು ಮುಚ್ಚುತ್ತದೆ; ಅದುವೇ ಗ್ರಹಣ.
ಆರ್ಯಭಟನದು ಅತಿ ಪುರಾತನ ಕಾಲದ ಮಾತಾಯಿತು; ಇಂದು ನಿನ್ನೆಯ ಜ್ಯೋತಿರ್ವಿದರೂ ಕೂಡಾ ಅಂದು ಪೂರ್ವಜರು ವಿರಚಿಸಿದ ಗ್ರಹಣಗಣಿತವನ್ನಾಧರಿಸಿ ಗ್ರಹಣದ ಪ್ರಾರಂಭಕಾಲ-ಮಧ್ಯಕಾಲ-ಮೋಕ್ಷಕಾಲಗಳನ್ನು ಮತ್ತು ಗ್ರಹಣವು ಖಗ್ರಾಸವೋ-ಖಂಡಗ್ರಾಸವೋ ಎಂಬುದನ್ನು ಕರಾರುವಾಕ್ಕಾಗಿ ಮೊದಲೇ ತಿಳಿದು ಪಂಚಾಂಗಗಳಲ್ಲಿ ಪ್ರಕಟಿಸುವರಲ್ಲವೇ? ಈ ಕಾಲದ ಜ್ಯೋತಿರ್ವಿದರೇನೂ ಆರ್ಯಭಟರಲ್ಲ, ಅಂತಹ ಸಾಮಾನ್ಯ ಜ್ಯೋತಿರ್ವಿದರೂ ಗ್ರಹಣವನ್ನು ಮೊದಲೇ ತಿಳಿಯಲು ಅನುವಾಗುವಂತೆ ಗಣಿತವನ್ನು ತಯಾರಿಸಿದ ಅಂದಿನ ಖಗೋಳಶಾಸ್ತ್ರಜ್ಞರ ಮಹಾಮೇಧೆ ಎಂತಿರಬೇಕು!?
ಆಧುನಿಕ ಖಗೋಳ ವಿಜ್ಞಾನಿಗಳು ನಿನ್ನೆ-ಮೊನ್ನೆ ಕಂಡುಹಿಡಿದ ಅನೇಕಾನೇಕ ಸಂಗತಿಗಳು ಆರ್ಯಭಟನ, ಸೋಮೇಶ್ವರನ, ಭಾಸ್ಕಾರಾಚಾರ್ಯರ ಕೃತಿಗಳಲ್ಲಿ , ವೇದೋಪನಿಷತ್ತುಗಳಲ್ಲಿ, ಪುರಾಣೇತಿಹಾಸಗಳಲ್ಲಿ ಅದೆಷ್ಟೋ ಮೊದಲೇ ನಿರೂಪಣೆಗೊಂಡಿವೆ.
ಖಗೋಳದ ಗ್ರಹಣಗಳು ಬಹುಕಾಲ ಇರುವುದಿಲ್ಲ; ಅಷ್ಟೋ-ಇಷ್ಟೋ ಹೊತ್ತು ನೆರಳು-ಬೆಳಕುಗಳ ಆಟವಾಡಿ ಬಳಿಕ ಪ್ರಕಾಶಕ್ಕೆ ಅವಕಾಶ ನೀಡಿ ಮುಗಿದುಹೋಗುತ್ತವೆ;
ಆದರೆ ಭಾರತೀಯ ಸಂಸ್ಕೃತಿಯನ್ನು ಹಳಿದು ಹಾಲ್ಕುಡಿಯುವ ಅಪಕ್ವ ವಿಮರ್ಶಕರ ಬುದ್ಧಿಗೆ ಬಡಿದ ಗ್ರಹಣವು ಬಿಡುವುದೆಂದೋ!?
~*~
ತಿಳಿವು~ಸುಳಿವು:
-
- 31-ಜನವರಿ-2018 ನೇ ಬುಧವಾರ ಬಾನಂಗಳದಲ್ಲಿ ಸಂಭವಿಸಿದ ಖಗ್ರಾಸ ಚಂದ್ರಗ್ರಹಣದ ಸಂದರ್ಭದಲ್ಲಿ ಭಾರತೀಯ ಪದ್ಧತಿಗಳನ್ನು ಹಳಿಯುವ ಕೆಲವು ವಿಮರ್ಶೆಗಳಿಗೆ ಉತ್ತರಿಸುವ #ಲೋಕಲೇಖ ವಿದು.
- *<ಮೂರು ಜನ್ಮ ಮುಳುಗಿಸಿಟ್ಟರೆ> : ಆಯುರ್ವೇದ ವೈದ್ಯಪದ್ಧತಿಯಲ್ಲಿ ಭಾವನ ಎಂಬ ಸಂಸ್ಕಾರವಿದೆ. ಔಷಧಯುಕ್ತ ಕಷಾಯಗಳಿಂದ ಕೂಡಿದ ಪಾಕದಲ್ಲಿ ವಸ್ತುವೊಂದನ್ನು ಮುಳುಗಿಸಿ, ಸೂರ್ಯನ ಬಿಸಿಲಿನಲ್ಲಿ ಒಣಗಿಸಿ, ಪುನಃ ಕಷಾಯದಲ್ಲಿ ಮುಳುಗಿಸಿ, ಪುನಃ ಒಣಗಿಸಿ – ಈ ರೀತಿ ಮೂರು ಬಾರಿ ಪುನರಾವರ್ತಿಸಿ ವಸ್ತುವೊಂದಕ್ಕೆ ಸಾರವನ್ನು ಕೊಡುವ ಪದ್ಧತಿ. ಭಾರತೀಯತೆಯನ್ನು ಮೌಢ್ಯವೆಂದು ಉದ್ಘೋಷಿಸುವ ಸತ್ವಾಂಧರಿಗೆ ಇದೇ ರೀತಿಯ ಸಂಸ್ಕಾರ ಕೊಡಬೇಕಾದೀತೆಂಬುದು ಬರೆಹದ ಅಭಿಪ್ರಾಯ.
- ಗ್ರಹಣಾಚರಣೆಯ ಕುರಿತು ಶ್ರೀಶ್ರೀಗಳವರ ಟ್ವೀಟ್:
*ಗ್ರಹಣಾಚರಣೆ ಒಂದು ಮೌಢ್ಯವೇ?*
ಆಧುನಿಕ ಮನಸ್ಸುಗಳಿಗೆ ಹಿಡಿದ ಪಶ್ಚಿಮ ರಾಹುಗ್ರಹಣವನ್ನು ಬಿಡಿಸುವ ಮಾತುಗಳು ನಮ್ಮ ಆಚಾರ್ಯರಾದ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸರಿಂದ..https://t.co/YdB762PG7G
— RaghaveshwaraBharati (@SriSamsthana) February 4, 2018
~*~
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
February 5, 2018 at 7:05 AM
ಹರೇರಾಮ.
ತಮ್ಮ ತಿಳುವಳಿಕೆಯ ದೋಷವರಿಯದೆ ಹಳತನ್ನು ಹಳಿಯುವವರ ಕಣ್ಣು ತೆರೆಸಲೋಸುಗ ಇಂದಿನ ಲೋಕ-ಲೇಖ.