“Blue Whale- This is not a game but danger. Once you enter, you can never exit”
‘ಬ್ಲೂ ವೇಲ್- ಅದೊಂದು ಆಟವಲ್ಲ; ಆಪತ್ತು! ಒಮ್ಮೆ ಒಳಹೊಕ್ಕರೆ ಮುಗಿಯಿತು; ಬದುಕಿ ಹೊರಬರುವ ಪ್ರಶ್ನೆಯೇ ಇಲ್ಲ!’
ಬ್ಲೂ ವೇಲ್ ಎಂಬ ಯಮಕಂಟಕದಾಟಕ್ಕೆ ಬಲಿಯಾಗಿ, ಬದುಕನ್ನೇ ಕಳೆದುಕೊಂಡ ತಮಿಳುನಾಡಿನ ತಿರುಮಂಗಲಂ’ನ ವಿಘ್ನೇಶನ ಮೃತ್ಯುವಾಕ್ಯಗಳಿವು! ಪಾಪ, ಪ್ರಾಣಕ್ಕೆರವಾಗುವಾಗ ವಿಘ್ನೇಶನಿಗೆ ಕೇವಲ ೧೯ರ ಹರೆಯ. ಮಧುರೈಯ ಮನ್ನಾರ್ ವಿದ್ಯಾಸಂಸ್ಥೆಯಲ್ಲಿ ಎರಡನೆಯ ವರ್ಷದ ಕಾಲೇಜು ವಿದ್ಯಾರ್ಥಿಯಾಗಿದ್ದ ಈತ ಒಂದು ಬುಧವಾರ ಆಗಸ್ಟ್ ೩೦ರ ಬೆಳಗಿನ ಜಾವ ೪.೧೫ಕ್ಕೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮರಣಕಾರಣದ ಅನ್ವೇಷಣೆಯಲ್ಲಿದ್ದ ಪೋಲೀಸರ ಕಣ್ಣಿಗೆ ಬಿದ್ದಿದ್ದು ವಿಘ್ನೇಶನ ಎಡ ಮುಂಗೈ ಮೇಲೆ ಬ್ಲೇಡಿನಿಂದ ಕೊರೆಯಲ್ಪಟ್ಟಿದ್ದ ತಿಮಿಂಗಿಲದ ಚಿತ್ರ ಮತ್ತು ಅಲ್ಲಿಯೇ ಕೆಳಗೆ ಕೊರೆದು ಬರೆಯಲ್ಪಟ್ಟಿದ್ದ “Blue Whale” ಎಂಬ ಶಬ್ದ!
ಸ್ಥಳದಲ್ಲಿಯೇ ಲಭಿಸಿದ ಕಾಗದದ ತುಣುಕಿನಲ್ಲಿ ವಿಘ್ನೇಶನ ಅಕ್ಷರಗಳು:
“Blue Whale- This is not a game but danger. Once you enter, you can never exit”
‘ಬ್ಲೂ ವೇಲ್- ಅದೊಂದು ಆಟವಲ್ಲ; ಆಪತ್ತು! ಒಮ್ಮೆ ಒಳಹೊಕ್ಕರೆ ಮುಗಿಯಿತು; ಬದುಕಿ ಹೊರಬರುವ ಪ್ರಶ್ನೆಯೇ ಇಲ್ಲ!’
ಏನಿದು ಬ್ಲೂ~ವೇಲ್ ಆಟ?:
ಜಗತ್ತಿನ ದುರ್ಬಲರನ್ನು, ದುಃಖಿತರನ್ನು ಇನ್ನಷ್ಟು ದುರ್ಬಲಗೊಳಿಸಿ, ಮತ್ತಷ್ಟು ದುಃಖಿಗಳನ್ನಾಗಿಸಿ, ಕೊನೆಗೆ ಕೊಂದು ಕಳೆಯಲೆಂದೇ ರೂಪಿಸಲ್ಪಟ್ಟ ಘೋರ-ಕ್ರೂರ ಕ್ರೀಡೆಯಿದು! ಆಟವೆನ್ನುವುದಕ್ಕಿಂತ ಇದನ್ನು ಹುಚ್ಚಾಟವೆನ್ನುವುದೇ ಹೆಚ್ಚು ಸೂಕ್ತ. ಫಿಲಿಪ್ ಬುಡೆಕಿನ್ (Phillip Budeikin) ಎಂಬ ರಷಿಯಾದ ರಾಕ್ಷಸ ಈ ಕೊಲ್ಲುವ ಆಟದ ಸೃಷ್ಟಿಕರ್ತ. ಸ್ವಯಂ ಮಾನಸಿಕ ರೋಗಿಯಾದ ಈತನ ದೃಷ್ಟಿಯಲ್ಲಿ ದುರ್ಬಲಮನಸ್ಕರೆಂದರೆ ಜೀವವಿರುವ ಕಸಗಳು! ಅವರನ್ನು ಕೊಲ್ಲುವುದೆಂದರೆ ಅವನಿಗೆ ಅದು ಸಮಾಜದ ಶುದ್ಧಿ! ಕನಿಷ್ಠ ಹದಿನೇಳು ಮಂದಿ ಹದಿಹರೆಯದವರನ್ನು ಬಲಿ ತೆಗೆದುಕೊಂಡ ಈತ ಈಗ ಸೆರೆಮನೆಯಲ್ಲಿದ್ದಾನೆ. ಆದರೆ ಆಟ ಮಾತ್ರ ಎಗ್ಗಿಲ್ಲದೆ ಬೆಳೆಯುತ್ತಲೇ ಇದೆ; ಜಗತ್ತಿನಾದ್ಯಂತ ಹರಡುತ್ತಲೇ ಇದೆ; ಅಭಾಗ್ಯ ನಿರ್ಬಲರ ಬಲಿ ತೆಗೆದುಕೊಳ್ಳುತ್ತಲೇ ಇದೆ!
ಬ್ಲೂ ವೇಲ್ ಎಂಬ ಹೆಸರೇಕೆ?:
ಒಮ್ಮೊಮ್ಮೆ ದೈತ್ಯ ನೀಲಿ ತಿಮಿಂಗಿಲಗಳು ಅನ್ಯಾನ್ಯ ಕಾರಣಗಳಿಂದ ಆತ್ಮಹತ್ಯೆ ಮಾಡುವುದುಂಟು! ಕಡಲ ನಡುವಿನಿಂದ ತಡಿಯೆಡೆಗೆ ವೇಗವಾಗಿ ಈಜುತ್ತಾ ಬಂದು ತೀರದ ಮರಳಿನ ಮೇಲೆ ಇವು ಬಿದ್ದುಬಿಡುತ್ತವೆ. ಸಹೃದಯಿ ಮಾನವರು ಪ್ರಯತ್ನಪೂರ್ವಕವಾಗಿ ನೀರಿನಲ್ಲಿ ಬಿಟ್ಟರೂ – ಪುನರಪಿ ದಂಡೆಗೆ ಮರಳಿ, ನರಳಿ ಸಾಯುತ್ತವೆ!
ಮನುಷ್ಯರಲ್ಲಿ, ಅಲ್ಲಲ್ಲಿ-ಆಗಾಗ ಕಂಡುಬರುವ ಆತ್ಮಹತ್ಯೆಯ ಪ್ರವೃತ್ತಿಯು ಪ್ರಾಣಿಪ್ರಪಂಚದಲ್ಲಿ ಅಪರೂಪ. ಆದರೆ ನೀಲಿ ತಿಮಿಂಗಿಲಗಳಲ್ಲಿ ಈ ಪ್ರವೃತ್ತಿ ಇರುವುದು ವಿಶೇಷ. ಬ್ಲೂವೇಲ್ ಗೇಮ್ ತನ್ನ ಹೆಸರು ಮತ್ತು ಸ್ಪೂರ್ತಿಯನ್ನು ಪಡೆದುಕೊಂಡಿದ್ದು ಇಲ್ಲಿಂದಲೇ!
ಬ್ಲೂವೇಲ್ : ಕಾರ್ಯವಿಧಾನ:
ಬ್ಲೂವೇಲ್ ಗೇಮ್’ಗೆ App ಇಲ್ಲ; ಇಂಟರ್ನೆಟ್ಟನ್ನು ಅವಗಾಹಿಸಿ, ಬ್ಲೂವೇಲ್ ಚಾಲೇಂಜಸ್’ನಲ್ಲಿ ಭಾಗವಹಿಸೋಣವೆಂದರೆ, ಅದಕ್ಕೊಂದು ವೆಬ್’ಸೈಟೇ ಇಲ್ಲ! ಈ ಲೋಕದಲ್ಲಿಯಾಗಲೀ E-ಲೋಕದಲ್ಲಿಯಾಗಲೀ, ಎಲ್ಲಿಯೂ ಬ್ಲೂವೇಲ್ ದ್ವಾರ ಸುಲಭಗೋಚರವಲ್ಲ! ಹಾಗಿದ್ದರೆ ಈ ಮೃತ್ಯುಕ್ರೀಡೆ ನಡೆಯುವುದಾದರೂ ಹೇಗೆ?
ಬ್ಲೂವೇಲ್’ನ ಸೂತ್ರಧಾರರು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್’ಟ್ಯಾಗ್’ಗಳ ಮೂಲಕ, ಸ್ಟೇಟಸ್’ಗಳ ಮೂಲಕ ದುರ್ಬಲಮಾನಸರನ್ನು ಅನ್ವೇಷಿಸುತ್ತಾರೆ. ದುಃಖಿಗಳು, ದುರ್ಬಲರು ಇವರ ಕಣ್ಣಿಗೆ ಬಿದ್ದರೋ, ವೈಯಕ್ತಿಕ ಸಂದೇಶಗಳ ಮೂಲಕ ಅವರೊಡನೆ ನಿರಂತರ ಸಂಭಾಷಣೆ ಪ್ರಾರಂಭ. ಅವರ ಬದುಕಿನಲ್ಲಿಲ್ಲದ ಆಪ್ತತೆಯನ್ನು ನೀಡಿ, ಅವರಿಗೆ ಹತ್ತಿರವಾದೊಡನೆ ಆಟ ಪ್ರಾರಂಭವೇ! ಇಂತಹ ಹಲವು ಬಲಿಪಶುಗಳು ಸಿಕ್ಕಿದೊಡನೆಯೇ ಒಬ್ಬ ಕ್ಯುರೇಟರ್ ನ ಅಡಿಯಲ್ಲಿ ಒಂದು ಗುಂಪು ರಚಿತವಾಗುತ್ತದೆ. ದಿನಕ್ಕೊಂದು ಟಾಸ್ಕ್ ನಂತೆ, 50 ಟಾಸ್ಕ್ ಗಳಲ್ಲಿ ಆಟವೇನು, ಬಾಳಾಟವೇ ಮುಕ್ತಾಯ!!
ಮೊದಮೊದಲು ಪ್ರೀತಿಯ ಮಾತುಗಳು; ಪ್ರೀತಿಯ ನೆಪದಲ್ಲಿ ವೈಯಕ್ತಿಕ ದೋಷ-ದೌರ್ಬಲ್ಯಗಳ ಸಂಗ್ರಹ. ಬರಬರುತ್ತಾ ಕ್ಯುರೇಟರ್ ಕಠೋರನಾಗುತ್ತಾನೆ. ಕ್ರೂರನಾಗುತ್ತಾನೆ. ನಡುವೆ ಆಟವನ್ನು ತ್ಯಜಿಸಿ, ಬದುಕಲು ಪ್ರಯತ್ನಿಸಿದರೆ ಬ್ಲ್ಯಾಕ್’ಮೇಲ್ ಪ್ರಯೋಗ. 50 ನೆಯ ಟಾಸ್ಕ್ ಆದ- ಆತ್ಮಹತ್ಯೆಯನ್ನು- ಮಾಡಿಕೊಳ್ಳದಿದ್ದರೆ ಕುಟುಂಬದ ಸದಸ್ಯರೆಲ್ಲರನ್ನೂ ಕೊಂದುಬಿಡುವೆವೆನ್ನುವವರೆಗೆ ಒತ್ತಡತಂತ್ರ! ಒಟ್ಟಿನಲ್ಲಿ ಒಮ್ಮೆ ಬ್ಲೂವೇಲ್ ಪ್ರವೇಶ ಮಾಡಿದರೆ, ಬದುಕಿ ಹೊರಹೋಗಲಾರದ ಪರಿಸ್ಥಿತಿ! ಅದೊಂದು ಚಕ್ರವ್ಯೂಹ!
ಅತ್ತ ದೊಡ್ಡವರೂ ಅಲ್ಲದ, ಇತ್ತ ಚಿಕ್ಕವರೂ ಅಲ್ಲದ ಹದಿಹರೆಯದವರೇ ಈ ನರಹಂತಕರ ಬಲಿಪಶುಗಳು. ಅವರಲ್ಲಿಯೂ ಈ ಕೆಳಗಿನ ಲಕ್ಷಣದವರೇ ಬ್ಲೂವೇಲ್ ಆಕ್ರಮಣಕ್ಕೆ ಪ್ರಮುಖ ಲಕ್ಷ್ಯ:
- ಎಲ್ಲರನ್ನೂ ಸಂತೋಷಪಡಿಸಲು ಪ್ರಯತ್ನಿಸುವವರು.
- ಯಾರು ಏನು ಕೇಳಿದರೂ ಇಲ್ಲವೆನ್ನಲಾರದವರು.
- ಬೇರೆಯವರು ತಮ್ಮನ್ನು ಅನುಮೋದಿಸಲು, ಅಂಗೀಕರಿಸಲು ಹಾತೊರೆಯುವವರು.
- “ತಮ್ಮನ್ನು ಯಾರೂ ಸ್ವೀಕರಿಸದಿದ್ದರೆ?” ಎಂಬ ಆತಂಕದಲ್ಲಿರುವವರು.
- ಭಯದ ಸ್ವಭಾವದವರು.
- ಬದುಕಿನಲ್ಲಿ ಸೋತೆನೆಂಬ ಭಾವದಲ್ಲಿರುವವರು, ನೊಂದವರು.
- ಯಾವುದೋ ಕಾರಣಕ್ಕೆ ಕೊರಗುವವರು, ಮನೋದೌರ್ಬಲ್ಯ(Depression)ಗೆ ಒಳಗಾದವರು.
- ಆತ್ಮವಿಶ್ವಾಸದ ಕೊರತೆಯುಳ್ಳವರು.
- ತಮ್ಮ ರೂಪದ ಕುರಿತು, ವ್ಯಕ್ತಿತ್ವದ ಕುರಿತು ಕೀಳರಿಮೆಯುಳ್ಳವರು.
- ತಮ್ಮಿಂದ ಯಾರಿಗೂ ಉಪಯೋಗವಿಲ್ಲವೆಂಬ ಭಾವದಲ್ಲಿರುವವರು.
- ಸ್ವಂತಿಕೆಯಿಲ್ಲದವರು.
- ಅನ್ಯಾಶ್ರಯದ ಅನಿವಾರ್ಯತೆಯುಳ್ಳವರು.
- ಸಮತೋಲನವಿಲ್ಲದವರು, ಭಾವನೆಗಳ ಏರಿಳಿತವುಳ್ಳವರು.
- ಒಂಟಿತನ ಕಾಡುವವರು.
ಇಂಥವರಿಗೆ ಕ್ಷಣಿಕ ಸಮಾಧಾನ ನೀಡಿ, ಶಾಶ್ವತವಾಗಿ ನಾಶ ಮಾಡುವ, ಚೂರು-ಪಾರು ಪ್ರೀತಿ ಕೊಟ್ಟು ಪುಸಲಾಯಿಸಿ, ಬಳಿಕ ವಿಷದ ಮಡುವಿನಲ್ಲಿಯೇ ಮುಳುಗಿಸಿ, ಮುಗಿಸುವ ಪ್ರಕ್ರಿಯೆಗೇ ಬ್ಲೂವೇಲ್ ಗೇಮ್ ಎಂದು ಹೆಸರು!
ಪ್ರಾಣಹಾರೀ ಪಂಚಾಶತ್:
ರೆಡಿಟ್(Reddit) ಜಾಲತಾಣದಲ್ಲಿ ಬ್ಲೂವೇಲ್`ನಲ್ಲಿ ನೀಡಲಾದ ೫೦ ಸವಾಲುಗಳ ಮಾದರಿಯೊಂದನ್ನು ಪ್ರಕಟಿಸಲಾಗಿದೆ. ಅವು ಹೀಗಿವೆ.
- ಬ್ಲೇಡ್ ನಿಂದ ಕೈಯಲ್ಲಿ “f57” ಎಂದು ಕೊರೆದುಕೋ, ಕ್ಯುರೇಟರಿಗೆ ಫೋಟೋ ಕಳುಹಿಸು.
*ಉದ್ದೇಶ: ಅನೇಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಿದ್ದರೂ ಆ ಧೈರ್ಯವಿರುವುದಿಲ್ಲ. ಪ್ರಾಣಹರವಲ್ಲದ, ಆದರೆ ತನಗೆ ತಾನೇ ಸಾಕಷ್ಟು ನೋವು ಕೊಟ್ಟು ಕೊಳ್ಳುವ ಈ ಪರಿಯ ಕಾರ್ಯಗಳು ಕ್ರಮೇಣ ಆತ್ಮಹತ್ಯೆಯ ಧೈರ್ಯವನ್ನು ಕೊಡುತ್ತವೆ.
ಇಂದು ಬೆರಳು; ನಾಳೆ ಕೊರಳು!
- ಬೆಳಗಿನ ಜಾವ ೪.೨೦ಕ್ಕೆ ಎದ್ದು, ಕ್ಯುರೇಟರ್ ನಿನಗೆ ಕಳುಹಿಸುವ, ಭ್ರಮಾತ್ಮಕವಾದ, ಭಯಾನಕವಾದ ವೀಡಿಯೋಗಳನ್ನು ವೀಕ್ಷಿಸು.
*ಉದ್ದೇಶ: ಮಾನಸಿಕ ಸ್ಥಿತಿಯನ್ನು ಕೆಡಿಸುವುದು. ನಿದ್ದೆಯು ಮಾನಸಿಕ ಸ್ವಾಸ್ಥ್ಯದ ಮುಖ್ಯ ಮೂಲ. ನಿದ್ದೆಯ ಅಭಾವವು ಮನೋರೋಗದ ಪ್ರಥಮ ಹೆಜ್ಜೆ ಮತ್ತು ಪ್ರಥಮ ಲಕ್ಷಣ. ಆದುದರಿಂದ ಬ್ಲೂವೇಲ್ ಘಾತುಕರು ತಾವು ಕೊಲ್ಲಬೇಕೆಂದುಕೊಂಡವರ ನಿದ್ದೆಯನ್ನು ಮೊದಲು ಅಸ್ತವ್ಯಸ್ತಗೊಳಿಸುತ್ತಾರೆ. ಜೊತೆಗೆ ಮನಸ್ಸನ್ನು ಹಾಳುಗೈಯುವ ಘೋರ ದೃಶ್ಯಗಳನ್ನು ಯಾರಿಲ್ಲದ ಆ ಸಮಯದಲ್ಲಿ ನೋಡಿದರಂತೂ ಮನಸ್ಸಿನ ಕಥೆ ಮುಗಿದೇ ಹೋಯಿತು!
- ನಿನ್ನ ಕೈಯ ನರಗಳ ಪಕ್ಕದಲ್ಲಿ ಬ್ಲೇಡಿನಿಂದ ಗಾಯಗಳನ್ನು ಮಾಡಿಕೋ, ಹೆಚ್ಚು ಆಳವಲ್ಲದ, ಕೇವಲ ಮೂರು ಗಾಯಗಳು. ಫೋಟೋ ತೆಗೆದು ಕ್ಯುರೇಟರಿಗೆ ಕಳುಹಿಸು.
- ಕಾಗದದ ಮೇಲೆ ತಿಮಿಂಗಿಲದ ಚಿತ್ರ ಬಿಡಿಸು. ಕ್ಯುರೇಟರಿಗೆ ಫೋಟೋ ಕಳುಹಿಸು.
- ‘ನಾನು ‘ವೇಲ್’ ಆಗಲು ಸಿದ್ಧನಿರುವೆನೇ?’ ಎಂದು ನಿನ್ನನ್ನು ನೀನೇ ಕೇಳಿಕೋ. ಸಿದ್ಧನಿರುವೆಯಾದರೆ ಕಾಲ ಮೇಲೆ ‘YES’ ಎಂದು ಬ್ಲೇಡಿನಿಂದ ಕೊರೆದುಕೋ’. ಇಲ್ಲವಾದರೆ ಮೈಯಲ್ಲಿ ಹಲವೆಡೆ ಗಾಯ ಮಾಡಿಕೋ. (ಅದು ವೇಲ್ ಆಗಲು ಸಿದ್ಧವಿಲ್ಲದುದಕ್ಕೆ ದಂಡನೆ!)
*ಉದ್ದೇಶ: ತಾನಾಗಿ ಪ್ರಾಣಕ್ಕೆರವಾಗುಗುವ ವೇಲ್(ತಿಮಿಂಗಿಲ) ತಾನು ಎಂದು ಸ್ವಹಿಂಸೆಯ ಮೂಲಕ ನಂಬಿಸುವುದು. ಅಂತಿಮವಾಗಿ ಅದರಂತೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಇದು ಪೀಠಿಕೆ.
- ಈ ಟಾಸ್ಕ್ ಗೂಢಭಾಷೆಯಲ್ಲಿದೆ.
- ಕೈಯಲ್ಲಿ “f40” ಎಂದು ಕೊರೆದು, ಕ್ಯುರೇಟರಿಗೆ ಅದರ ಫೋಟೋ ಕಳುಹಿಸು.
- ನಿನ್ನ ಫೇಸ್ಬುಕ್, ಇನ್ಸ್ಟಾಗ್ರಾಂ ಮೊದಲಾದ ಪ್ರೊಫೈಲುಗಳಲ್ಲಿ #i_am_a_whale ಎಂದು ಸ್ಟೇಟಸ್ ಹಾಕು.
ಉದ್ದೇಶ: ಒಂದೇ ಕಲ್ಲಿಗೆ ಎರಡು ಹಕ್ಕಿ. ಒಂದೆಡೆ ಪ್ರಕೃತ ವ್ಯಕ್ತಿಯಲ್ಲಿ ‘ತಾನು ವೇಲ್’ ಎಂಬುದನ್ನು ದೃಢಗೊಳಿಸುವುದು; ಇನ್ನೊಂದೆಡೆ ಆನ್ಲೈನ್ ಜಗತ್ತಿನಲ್ಲಿ ಬ್ಲೂವೇಲ್ ರೋಗವನ್ನು ಹರಡುವುದು. ತನ್ಮೂಲಕ ಇನ್ನಷ್ಟು ಬಲಿಪಶುಗಳನ್ನು ಸಂಪಾದಿಸುವುದು.
- ಭಯವನ್ನು ಮೀರು. (ಆತ್ಮಹತ್ಯೆಗೆ ಭಯ ಪಡಬೇಡ)
- ಬೆಳಗಿನ ಜಾವ ೪.೨೦ಕ್ಕೆ ಎದ್ದು, ಯಾವುದಾದರೊಂದು ಕಟ್ಟಡದ ಛಾವಣಿಯ ಮೇಲೆ ಹತ್ತು. (ಎತ್ತರ ಹೆಚ್ಚಿದ್ದಷ್ಟೂ ಒಳ್ಳೆಯದು!)
ಉದ್ದೇಶ: ಮುಂದೊಂದು ದಿನ ಎತ್ತರದಿಂದ ಹಾರಿ, ಪ್ರಾಣ ಕಳೆದುಕೊಳ್ಳಲು ಈಗಲೇ ಮಾಡುವ ಮಾನಸಿಕ ಸಿದ್ಧತೆ.
- ಕೈಯ ಮೇಲೆ ಬ್ಲೇಡಿನಿಂದ ತಿಮಿಂಗಿಲದ ಚಿತ್ರ ಕೊರೆದುಕೋ. ಕ್ಯುರೇಟರಿಗೆ ಫೋಟೋ ಕಳುಹಿಸು.
- ಭ್ರಮಾತ್ಮಕವಾದ, ಭಯಾನಕವಾದ ವೀಡಿಯೋಗಳನ್ನು ದಿನವಿಡೀ ವೀಕ್ಷಿಸು.
ಉದ್ದೇಶ: ಮನಸ್ಸನ್ನು ಸಂಪೂರ್ಣವಾಗಿ ಹಾಳುಗೈಯುವುದು.
- ಕ್ಯುರೇಟರ್ ನಿನಗೆ ಕಳುಹಿಸುವ ಹಾಡುಗಳನ್ನು ಕೇಳು.
- ಬ್ಲೇಡ್ ನಿಂದ ತುಟಿಯನ್ನುಸೀಳಿಕೊ.
- ಸೂಜಿಯಿಂದ ನಿನ್ನ ಕೈಯನ್ನು ಹಲವಾರು ಬಾರಿ ಚುಚ್ಚಿಕೋ.
- ನಿನಗೆ ತೊಂದರೆಯಾಗುಂಥದ್ದೇನಾದರೂ ಮಾಡಿಕೊ, ಏನಾದರೂ ಮಾಡಿ ಅಸ್ವಸ್ಥನಾಗು.
- ಸುತ್ತ ಮುತ್ತ ಅತಿ ಎತ್ತರದ ಕಟ್ಟಡವನ್ನು ಹುಡುಕಿ, ಅದರ ತುಟ್ಟ ತುದಿಗೆ ಹೋಗು. ಅಲ್ಲಿ ಕಾಲೆರಡನ್ನೂ ಗಾಳಿಯಲ್ಲಿ ತೂಗಾಡಿಸಿ, ಕುಳಿತುಕೋ.
- ಯಾವುದಾದರೂ ದೊಡ್ಡ ಪ್ರಪಾತದ ಆಳವನ್ನು ನೋಡುತ್ತಾ ನಿಂತುಕೋ.
- ಯಾವುದಾದರೂ ಕ್ರೇನಿನ ತುದಿಗೇರು; ಅಥವಾ ಕೊನೆಯ ಪಕ್ಷ ಏರಲೆತ್ನಿಸು.
ಮೇಲಿನ ಮೂರೂ ಟಾಸ್ಕ್`ಗಳೂ ೫೦ನೆಯ ಟಾಸ್ಕಿಗೆ ಮಾನಸಿಕ ಸಿದ್ಧತೆ.
- ಕ್ಯುರೇಟರ್ ನಡೆಸುವ ನಿನ್ನ ವಿಶ್ವಾಸಾರ್ಹತೆಯ ಪರೀಕ್ಷೆ
- ಬೇರೊಬ್ಬ ವೇಲ್(ನಿನ್ನ ಹಾಗೆಯೇ ಬ್ಲೂವೇಲ್ ಸವಾಲುಗಳನ್ನೆದುರಿಸುತ್ತಿರುವ ಮತ್ತೊಬ್ಬ, ಅಥವಾ ಕ್ಯುರೇಟರ್)ನೊಡನೆ ಸಂಭಾಷಣೆ ನಡೆಸು.
ಈ ರೀತಿಯ ಸಂಭಾಷಣೆಗಳಲ್ಲಿ ‘ನೀನು ಕುರೂಪಿ, ಯಾವುದಕ್ಕೂ ಪ್ರಯೋಜನವಿಲ್ಲದವನು(ಳು)’ ಎಂಬಿತ್ಯಾದಿ ಆತ್ಮತಿರಸ್ಕಾರದ ಭಾವಗಳನ್ನು ತುಂಬಿ ಆತ್ಮಹತ್ಯೆಗೆ ಅಣಿಗೊಳಿಸಲಾಗುತ್ತದೆ.
- ಗಗನಚುಂಬಿ ಕಟ್ಟಡವನ್ನೇರಿ, ಅದರ ತುದಿಯಲ್ಲಿ, ಕಾಲೆರಡನ್ನೂ ಗಾಳಿಯಲ್ಲಿ ತೂಗಾಡಿಸುತ್ತಾ ಕುಳಿತುಕೊ.
- ಗೂಢಭಾಷೆಯಲ್ಲಿರುವ ಇನ್ನೊಂದು ಟಾಸ್ಕ್
- ರಹಸ್ಯವಾದ ಮತ್ತೊಂದು ಟಾಸ್ಕ್
- ಇನ್ನೊಬ್ಬ ‘ವೇಲ್’ ಜೊತೆ ಮಾತಾಡು.
- ಕ್ಯುರೇಟರ್ ನಿನಗೆ ನಿನ್ನ ಮರಣದಿನವನ್ನು ನಿಶ್ಚಯಿಸಿ, ತಿಳಿಸುವನು. ನೀನದನ್ನು ಸ್ವೀಕರಿಸಬೇಕು.
ಉದ್ದೇಶ: ವ್ಯಕ್ತಿ ತಾನಾಗಿ ಮರಣಸಮಯವನ್ನು ನಿಶ್ಚಯ ಮಾಡಿಕೊಳ್ಳಲಾರದಿರಬಹುದು. ಅಥವಾ ನಿಶ್ಚಯಿಸುವಾಗ ತಡವಾಗಬಹುದು. ನಡುವೆ ಕಾರಣಾಂತರದಿಂದ ಮತ್ತೆ ಬದುಕಿನ ಕಡೆ ವಾಲಿಬಿಡಬಹುದು. ಇವೆಲ್ಲಕ್ಕೂ ಒಂದೇ ಏಟಿನಲ್ಲಿ ಪರಿಹಾರ– ಮರಣದಿನವನ್ನು ಅವನ ಮೇಲೆ ಹೇರಿಬಿಡುವುದು!
- ಬೆಳಗಿನ ಜಾವ ೪.೨೦ಕ್ಕೆ ಎದ್ದು,ಸನಿಹದ ರೇಲ್ವೇ ಹಳಿಗೆ ಹೋಗು.
- ದಿನವಿಡೀ ಯಾರೊಡನೆಯೂ ಮಾತನಾಡದಿರು.
ಉದ್ದೇಶ: ಮಾತನಾಡಿದಾಗ, ಮನಸ್ಸು ಬಿಚ್ಚಿ ಹೇಳಿಕೊಂಡಾಗ, ಹೃದಯದ ಭಾರ ಇಳಿದೀತು. ಹಗುರಾದೀತು. ಬದುಕುವ ಆಸೆ ಚಿಗುರೀತು. ಪ್ರಕ್ಷುಬ್ಧ ಮನಸ್ಥಿತಿಯ ಜೊತೆಗೆ ಒಂಟಿತನ ಸೇರಿದರೆ ಆತ್ಮಹತ್ಯೆಯ ದಾರಿ ತೆರೆದೀತು!
- ನಾನೊಬ್ಬ ‘ವೇಲ್ ‘ಎಂದು ಶಪಥ ಮಾಡು.
- 30 — 49. ಪ್ರತಿನಿತ್ಯ ಬೆಳಿಗ್ಗೆ ೪.೨೦ಕ್ಕೆ ಏಳು. ಭಯಾನಕ ವೀಡಿಯೋಗಳನ್ನು ವೀಕ್ಷಿಸು. ‘ಅವರು’ ಕಳುಹಿಸುವ ಹಾಡುಗಳನ್ನು ಕೇಳು. ದಿನಕ್ಕೊಂದರಂತೆ ದೇಹದಲ್ಲಿ ಬ್ಲೇಡಿನಿಂದ ಗಾಯ ಮಾಡಿಕೋ. ದಿನಕ್ಕೊಮ್ಮೆಯಾದರೂ ಇನ್ನೊಬ್ಬ ವೇಲ್`ನೊಡನೆ ಸಂಭಾಷಣೆ ನಡೆಸು.
*ನಿದ್ದೆಯು ತನು–ಮನಗಳ ಗಾಯಗಳು ಮಾಯುವ, ಆಘಾತಗಳನ್ನು ಮರೆಯಿಸಿ, ನಮ್ಮನ್ನು ಸಹಜತೆಗೆ ಮರಳಿಸುವ ಪ್ರಮುಖ ಸಾಧನ. ನಿದ್ದೆಯಿಲ್ಲದಿದ್ದಾಗ ಉದ್ವೇಗ–ಭಯ–ಬಳಲಿಕೆ–ಕಿರಿಕಿರಿಗಳು ಹೆಚ್ಚುವವು. ಸಹಿಸಿಕೊಳ್ಳುವ ಶಕ್ತಿಯು ಕ್ಷೀಣಿಸುವುದು.
- ಕೊನೆಯ ಟಾಸ್ಕ್: ಗಗನಚುಂಬಿ ಕಟ್ಟಡವೊಂದರಿಂದ ಕೆಳಗೆ ಹಾರಿ, ಪ್ರಾಣ ಬಿಡು!
ಹೀಗೆ ಕೇವಲ ೫೦ ದಿನಗಳಲ್ಲಿ ಬದುಕಿನಲ್ಲಿ ಒಂದಷ್ಟು ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಲಾಗುತ್ತದೆ.
~
ಬ್ಲೂವೇಲ್`ಗೆ ನಾವು ತುತ್ತಾಗದಿರುವುದು ಹೇಗೆ?
ಸಾಮಾಜಿಕ ಜಾಲತಾಣಗಳಲ್ಲಿ ವಿಷಾದದ ಸ್ಟೇಟಸ್`ಗಳನ್ನು ಹಾಕದಿರಿ. ಅಪರಿಚಿತರಲ್ಲಿ ಮನದಾಳದ ಗೊಂದಲಗಳನ್ನು, ನೋವು-ಸೋಲುಗಳನ್ನು ಹೇಳಿಕೊಳ್ಳದಿರಿ. e-ಪ್ರಪಂಚದಲ್ಲಂತೂ ದೌರ್ಬಲ್ಯಗಳನ್ನು ಎಂದೂ ಬಿಟ್ಟು ಕೊಡದಿರಿ!
ಹೇಳಬೇಕಾದುದನ್ನು ಹೇಳಬೇಕಾದವರ ಬಳಿ ಹೇಳಿಕೊಳ್ಳಿ; ಸಂಬಂಧಪಡದವರಲ್ಲಿ ಏನನ್ನೂ ಹೇಳಿಕೊಳ್ಳದಿರಿ!
ಗಾಯವನ್ನು ಗುಣಪಡಿಸುವವರಿಗೆ ತೋರಿಸಬೇಕು, ಕಿತ್ತು ತಿನ್ನುವವರಿಗಲ್ಲ.
ಬ್ಲೂವೇಲ್ ದುರ್ದೈವಿಗಳನ್ನು ಗುರುತಿಸುವುದು ಹೇಗೆ?
ಬ್ಲೂವೇಲ್ ಪೀಡೆಗೆ ತುತ್ತಾದ ಅಸಹಾಯಕ ಬಾಲಕ/ಬಾಲಕಿಯರು ನಮ್ಮ ನಡುವೆ ಇರಬಹುದು. ನಮ್ಮ ಊರಿನಲ್ಲಿ, ಅಷ್ಟೇಕೆ, ನಮ್ಮ ಮನೆಯಲ್ಲಿಯೂ ಇರಬಹುದು! ವರದಿಗಳ ಪ್ರಕಾರ ಈ ಮೃತ್ಯುಕವಾಟಕ್ಕೆ ಒಡ್ಡಿಕೊಂಡವರು ಬೆಂಗಳೂರು, ಮೈಸೂರುಗಳಲ್ಲಿಯೂ ಇದ್ದಾರೆ! ಇಂಥವರನ್ನು ಗುರುತಿಸಿ, ಕಾಪಾಡುವುದು ನಮ್ಮ ಆದ್ಯ ಕರ್ತವ್ಯ.
ಈ ಕೆಳಕಂಡಂತೆ, ಬ್ಲೂವೇಲ್ ಯಮಪಾಶಕ್ಕೆ ತುತ್ತಾದವರ ಲಕ್ಷಣಗಳು:
- ದೇಹದಲ್ಲಿ, ಅದರಲ್ಲಿಯೂ ಕೈಯಲ್ಲಿ ಬ್ಲೇಡಿನಿಂದ ಕೊರೆಯಲ್ಪಟ್ಟ ತಿಮಿಂಗಿಲದ ಆಕೃತಿ.
- ದೇಹದಲ್ಲಿ ಬ್ಲೇಡಿನಿಂದ ಮಾಡಿರಬಹುದಾದ ಗಾಯಗಳು.
- ರಾತ್ರಿ ಎಚ್ಚರವಾಗಿರುವುದು
- ಕದ್ದು ಮುಚ್ಚಿ ಇಂಟರ್ನೆಟ್ ಬಳಸುವುದು.
- ಸೌಧಾಗ್ರಗಳಲ್ಲಿ, ಕಾಲುಗಳನ್ನು ಇಳಿಬಿಟ್ಟು, ಕುಳಿತುಕೊಳ್ಳುವುದು.
- ಬೆಳಗಿನ ೪.೨೦ರಂಥ ಸೂಕ್ತವಲ್ಲದ ಸಮಯದಲ್ಲಿ ಹೊರಗೆ ಹೋಗುವುದು.
- ಮುಖ್ಯವಾಗಿ ದಿನೇ ದಿನೇ ಹೆಚ್ಚುವ, ಉದ್ವಿಗ್ನ-ದುಃಖಭರಿತ ಮನಃಸ್ಥಿತಿ.
~
ಒಳ್ಳೆಯತನಕ್ಕೇ ನೇರ ವಿರುದ್ಧವಾದುದು ಬ್ಲೂವೇಲ್ ಗೇಮ್. ಕೆಡುಕು ಮಾಡದಿರುವುದು ಒಳ್ಳೆಯತನ. ಒಳಿತು ಮಾಡುವುದು ಒಳ್ಳೆಯತನ. ಅದರಲ್ಲಿಯೂ ದುರ್ಬಲರಿಗೆ, ದುಃಖಿತರಿಗೆ ಒಳಿತು ಮಾಡುವುದು ಒಳ್ಳೆಯತನದಲ್ಲಿಯೂ ಒಳ್ಳೆಯತನ. ಕೆಡುಕು ಮಾಡುವುದು ಕೆಟ್ಟತನ, ಅದರಲ್ಲಿಯೂ ದುರ್ಬಲರು, ದುಃಖಿತರನ್ನು ಹುಡುಕಿ ಹುಡುಕಿ, ಮತ್ತಷ್ಟು ಹಿಂಸಿಸಿ ಕೊಲ್ಲೆನ್ನುವುದು ಕೆಟ್ಟತನದಲ್ಲಿಯೂ ಕೆಟ್ಟತನವಲ್ಲವೇ!?
ದುರ್ಬಲಮಾನಸರು, ಬದುಕಿನಲ್ಲಿ ಎಲ್ಲಿಯೋ ಸೋತವರು ಬುಡೆಕಿನ್ ತಿಳಿದಂತೆ ನಿಷ್ಪ್ರಯೋಜಕರಲ್ಲ, ಜೀವಂತ ಕಸವಲ್ಲ. ಅವರೊಳಗೆ ಹುದುಗಿ ಮರೆಯಾಗಿರುವ ಶಕ್ತಿಯನ್ನು ಗುರುತಿಸಿ, ಅರಳಿಸಬಲ್ಲ ಯೋಜಕನೋರ್ವ ದೊರೆತರೆ ಅವರೂ ಸಮಾಜಕ್ಕೆ ಮಹೋಪಯೋಗಿಗಳೇ ಆಗಬಹುದು.
ಈ ಕುರಿತು ಅಭಿಯುಕ್ತರ ಉಕ್ತಿಯನ್ನು ಗಮನಿಸಿ.
ಅಮಂತ್ರಂ ಅಕ್ಷರಂ ನಾಸ್ತಿ ನಾಸ್ತಿ ಮೂಲಂ ಅನೌಷಧಮ್|
ಅಯೋಗ್ಯಃ ಪುರುಷೋ ನಾಸ್ತಿ ಯೋಜಕಃ ತತ್ರ ದುರ್ಲಭಃ|| (ಸುಭಾಷಿತ)
“ಮಂತ್ರವಲ್ಲದ ಅಕ್ಷರವಿಲ್ಲ. ಔಷಧವಲ್ಲದ ಬೇರಿಲ್ಲ. ಯೋಗ್ಯನಲ್ಲದ ವ್ಯಕ್ತಿಯೇ ಇಲ್ಲ. ಒಂದು ವೇಳೆ ಹಾಗೆ ಕಂಡು ಬಂದರೆ ಅದು ಯೋಜಕರ ಅಭಾವವೇ ಹೊರತು ವ್ಯಕ್ತಿಯಲ್ಲಿ ಯೋಗ್ಯತೆಯ ಅಭಾವವಲ್ಲ!”
~
ಬ್ಲೂ ವೇಲ್ Vs ಪಿಂಕ್ ವೇಲ್:
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬುದು ಬಲ್ಲವರ ಮಾತು. ಅದೇ ರೀತಿ, ತಿಮಿಂಗಿಲವನ್ನು ತಿಮಿಂಗಿಲದಿಂದಲೇ ಎದುರಿಸಬೇಕಾಗಿದೆ. ಬ್ಲೂ-ವೇಲ್ ಎಂಬ ಮಹಾಮಾರಿಯನ್ನು ಧೈರ್ಯವಾಗಿ ಎದುರಿಸಲು Pink-Whale ಎಂಬ ಸುಖಾಂತ್ಯದ ಆಟವು ಅಂತರ್ಜಾಲದಲ್ಲಿ ಬ್ರಝಿಲ್ ನ ಸಹೃದಯಿಗಳ ಮುತುವರ್ಜಿಯಿಂದ ಹುಟ್ಟಿಕೊಂಡಿದೆ. ಬ್ಲೂವೇಲ್ ನಂತೆ ಪಿಂಕ್ ವೇಲ್ ಕೂಡಾ ಮಾನಸಿಕವಾಗಿ ದುರ್ಬಲರಾದವರನ್ನು ಸಂಪರ್ಕಿಸುತ್ತದೆ. ಆದರೆ ಇವೆರಡರ ಉದ್ದೇಶಗಳ ನಡುವೆ ಅಜಗಜಾಂತರವಿದೆ.
ಬ್ಲೂವೇಲ್ ಆಟವು ಆತ್ಮಹತ್ಯೆಗೆ ಪ್ರೇರೇಪಿಸಿದರೆ, ಪಿಂಕ್ ವೇಲ್ ಜೀವನವನ್ನು ಪುನಃ ಕಟ್ಟುವಲ್ಲಿ ಸಹಕರಿಸುತ್ತದೆ. ಬ್ಲೂ-ವೇಲ್ ನಲ್ಲಿ ಎಲ್ಲವೂ ಗುಪ್ತ ಗುಪ್ತ, ಪಿಂಕ್ ವೇಲ್ ನಲ್ಲಿ ಎಲ್ಲವೂ ಪ್ರಕಾಶಿತ. ಬ್ಲೂವೇಲ್ ನಲ್ಲಿ destructive ಆದ ೫೦ ಆಟಗಳಿವೆ, ಪಿಂಕ್ ವೇಲ್ ನಲ್ಲಿ constructive ಆದ ೩೦ ಆಟಗಳಿವೆ. ಬ್ಲೂವೇಲ್ ನಲ್ಲಿ ಕೈಯಲ್ಲಿ ಬ್ಲೇಡ್ ನಿಂದ “ನಾನೊಬ್ಬ ವೇಲ್” ಎಂದು ಕೊರೆದುಕೊಳ್ಳಬೇಕಾದರೆ, ಪಿಂಕ್ ವೇಲ್ ನಲ್ಲಿ ಪುಸ್ತಕದಲ್ಲಿ ಯಾವದಾದರೂ ಸುಂದರ ಸೂಕ್ತಿಯನ್ನು ಬರೆದು ಅದಕ್ಕೆ ಅಂದ-ಚೆಂದದ ಅಲಂಕಾರವನ್ನು ಮಾಡಬೇಕಿದೆ, ತುಂಬಾ ಪ್ರೀತಿಸುವ ಕುಟುಂಬ ಸದಸ್ಯರ ಕೈ ಮೇಲೆ – ತಾನು ಅವರನ್ನೆಷ್ಟು ಪ್ರೀತಿಸುತ್ತಿದ್ದೇನೆ – ಎಂಬುದನ್ನು ಬರೆಯಬೇಕು, ಸಮಾಜಕ್ಕೆ ಸಹಾಯ ಮಾಡಬೇಕು, ದಿನಕ್ಕೊಬ್ಬರಂತೆ ಆತ್ಮೀಯರಲ್ಲಿ ಮಾತನಾಡಬೇಕು – ಇತ್ಯಾದಿ. ಇವುಗಳನ್ನು ಮುಕ್ತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಬಹುದು. ಆಟದ ಕೊನೆಯಲ್ಲಿ ಯಾವುದಾದರೊಂದು ಸಂಸ್ಥೆಗೆ ದೇಣಿಗೆಯನ್ನು ಕೊಡಬೇಕು..
ಇಷ್ಟಾಗಿಯೂ ಆಟಗಾರನ ಮನಸ್ಸು ತಿಳಿಯಾಗಿಲ್ಲವೆಂದಾದರೆ, ಆತ್ಮಹತ್ಯಾ ಮನಃಸ್ಥಿತಿಯಿಂದ ಹೊರಬರಲು ಆಯಾ ದೇಶದ ಸಹಾಯವಾಣಿಗೆ ಸಂಪರ್ಕಿಸುತ್ತಾರೆ. ಬೇಸರವನ್ನು ಹೋಗಲಾಡಿಸಿ, ಮರಳಿ ಜೀವನವನ್ನು ಕಟ್ಟಲು ಸಹಾಯಮಾಡುತ್ತಾರೆ.
~
ನಮ್ಮ ದೇಶದಲ್ಲಿಯೇ ಚದುರಂಗದ ಆಟವಿದೆ. ಅದು ಬದುಕನ್ನು ಎದುರಿಸಲು ಮನಸ್ಸನ್ನು ಸಜ್ಜುಗೊಳಿಸುತ್ತದೆ. ಸಮಸ್ಯೆಗಳಿಂದಾಗಿ ಬದುಕು ಬಲೆಯಾದಾಗ, ಸಾವಧಾನವಾಗಿ ಚಿಂತಿಸಿ, ಬಿಡಿಸಿಕೊಳ್ಳುವ ತರಬೇತಿಯನ್ನು ಮನಸ್ಸಿಗೆ ನೀಡುತ್ತದೆ. ಈ ಪರಿಯ ಆಟಗಳು ‘ಉದ್ಧರೇತ್ ಆತ್ಮನಾ ಆತ್ಮಾನಂ’ ಎಂಬ ಗೀತಾಚಾರ್ಯನ ವಾಕ್ಯದ ಸಾಕಾರಕ್ಕೆ ಸಾಧನಗಳು.
ಬದುಕಿನ ವ್ಯವಸ್ಥೆಯನ್ನು ಕಲ್ಪಿಸುವ ಶಕ್ತಿಗೆ ದೇವರು ಎಂದು ಹೆಸರು. ಕಷ್ಟದಲ್ಲಿರುವಾಗ ಕಾಪಾಡುವ ಶಕ್ತಿಗೇ ದೇವರು ಎಂದು ಹೆಸರು.
ತಾನೂ ಹಾಗೆ ಮಾಡಿದಾಗ ಮಾನವನು ದೇವನೆನಿಸುತ್ತಾನೆ. ಪರರ ಉನ್ನತಿಯನ್ನು ಸಹಿಸದಿರುವುದು, ಅದನ್ನು ಹಾಳುಗೈಯುವುದು ದಾನವತೆ!
ಬದುಕಿನಲ್ಲಿ ಈಗಾಗಲೇ ಪೆಟ್ಟು ತಿಂದವನ ತಲೆಯ ಮೇಲೆ ಪುನಃ ಕಲ್ಲು ಹಾಕುವುದು ದಾನವತೆಗಿಂತ ಹೇಯವಾದುದು.
ಅದು ಪೈಶಾಚಿಕತೆ!
ಬನ್ನಿ ದೇವರಾಗೋಣ!
ದಾನವತೆಯನ್ನು ದಮನಗೊಳಿಸೋಣ!
ಧ್ವಂಸವನ್ನೇ ಧ್ವಂಸ ಮಾಡೋಣ! ಹಿಂಸೆಯ ಸಂಹಾರ ಮಾಡೋಣ! ಅಳುವವರ ಅಳುವಳಿಸೋಣ; ಅಲ್ಲಿ ನಗುವರಳಿಸೋಣ!
~*~*~
September 11, 2017 at 7:20 AM
Pink whale ಅನ್ನು ಪ್ರಾರಂಭಿಸಿದವರ ಉದ್ದೇಶ ಅದೆಷ್ಟು ಒಳಿತು! ಅದೆಷ್ಟೋ ಜೀವಗಳ ರಕ್ಷಣೆಯಾಗಬಲ್ಲದು.
ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕೇ ಹೊರತು, ಯಾರೋ ಮಾನಸಿಕ ರೋಗಿ ಹೇಳಿ ಹೋದ ಕ್ರೂರ ಕಾರ್ಯಗಳನ್ನಲ್ಲ..
September 11, 2017 at 7:55 AM
ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಹಾನಿಕಾರಕ!
E-ಪ್ರಪಂಚದ ಈ ಯುಗದಲ್ಲಿ ಪೋಷಕರಿಗೆ ಇದು ಎಚ್ಚರಿಕೆಯ ಕರೆಘಂಟೆ.
ತಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರ ಚಲನವಲನಗಳ ಬಗ್ಗೆ ಸರಿಯಾದ ನಿಗಾ ವಹಿಸದಿದ್ದರೆ ತಮ್ಮ ಕರುಳ ಕುಡಿಗಳು ಇಂತಹ ಅನಾಹುತಗಳಿಗೆ ತುತ್ತಾಗಬೇಕಾದೀತು. ತಮ್ಮ ವೇಗದ ಜೀವನ ಶೈಲಿಯಿಂದ ಹೊರಬಂದು , ಸ್ವಂತ ಬದುಕಿಗೂ ಹೆಚ್ಚಿನ ಸಮಯ, ಗಮನ ನೀಡದಿದ್ದಲ್ಲಿ ದುರಂತಗಳು ತಪ್ಪಿದ್ದಲ್ಲ.
ಸರಿ ತಪ್ಪುಗಳು, ಒಳ್ಳೆಯ ಕೆಟ್ಟದರ ಬಗ್ಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಈಗಿನ ಪೀಳಿಗೆಗೆ!
ಬನ್ನಿ, ಎಲ್ಲರೂ ಸೇರಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡೋಣ!
#ಲೋಕಲೇಖ
September 11, 2017 at 8:45 AM
ಜಗತ್ತಿಗಂಟಿದ ಮಹಾಮಾರಿಯೊಂದರ ಕುರಿತಾದ ಸಕಾಲಿಕ ಬರಹ….
ಶ್ರೀಪೀಠದ ಸಮಾಜಸ್ವಾಸ್ಥ್ಯನಿರ್ಮಾಣದ ಘನೋದ್ದೇಶದ ನಿದರ್ಶನ.
September 11, 2017 at 10:30 AM
ನಮ್ಮನ್ನು ನಿರಂತರ ಸನ್ಮಾರ್ಗದ ಹಾದಿಯಲ್ಲಿ ನಡೆಸುವ ಶ್ರೀರಾಮನ ಕೃಪೆ ಎಲ್ಲಾ ಶಿಷ್ಯರ ಮೇಲಿರುವಾಗ,ವಿಷಮ ಸಂಧರ್ಭಗಳಲ್ಲಿ ಎಚ್ಚರಿಸಿ ಮುನ್ನಡೆಸುವ ಶ್ರೀರಾಮಸ್ವರೂಪಿ ಸದ್ಗುರುಗಳಿರುವಾಗ, “ಬ್ಲೂವೇಲ್”ನಂತಹ ಮಹಾಮಾರಿಯು ನಮ್ಮ ಸನಿಹಕ್ಕೂ ಸುಳಿಯುವ ಧೈರ್ಯವನ್ನೇ ಮಾಡದು.
September 11, 2017 at 3:03 PM
ಬ್ಲೂವಾಲೇ ಗೇಮ್ ದುರ್ಬಲ ಮನಸ್ಸಿನವರ ಮೇಲೆ ದೂರದ ಯಾರೋ ಯಃಕಶ್ಚಿತ್ ಕೂಡ ಏನು ಬೇಕಾದರೂ ಮಾಡಬಹುದು ಎನ್ನಲು ಉದಾರಹಣೆ. ನಮ್ಮ ಮನಸ್ಸು ಗಟ್ಟಿ ಇದ್ದರೆ ಯಾರಿಂದಲೂ ಏನೂ ಮಾಡಲಾಗದು. ಉಪಯುಕ್ತ ಮಾಹಿತಿಯನ್ನು ಅನುಕ್ರಮವಾಗಿ ಹರಳಂತೆ ಹರಡಿದ ಪೂಜ್ಯ ಪಾದಪದ್ಮಕ್ಕೆ ಹಣೆಹಚ್ಚುವೆ.
September 13, 2017 at 2:52 PM
“His tongue dropped manna!”
ಮಿಲ್ಟನ್ನ ಈ ವಾಕ್ಯ ನೆನಪಿಗೆ ಬಂತು. ಸೈತಾನನ ಬಾಯಿಯಲ್ಲಿ ಅಮೃತವೇ ಸುರಿಯಿತಂತೆ! ದುರ್ಬಲರನ್ನು ವಶೀಕರಿಸುವ ಕ್ಯೂರೇಟರನ ಬಾಯಿಯಲ್ಲೂ ಅಮೃತವೇ ಸುರಿಯುತ್ತಿರಬಹುದು!