ಪ್ರಿಯರಾದವರ ಕುರಿತು ಅಪ್ರಿಯವಾದ ಮಾತುಗಳನ್ನು ಕೇಳಿದಾಗ ನೋವಾಗುತ್ತದೆ; ಅಪ್ರಿಯವಾದರೂ ಅದು ಸತ್ಯವಾದರೆ – ಪಥ್ಯವಾದರೆ ಹೇಗೋ ಸಹಿಸಬಹುದು; ಆದರೆ ಮಿಥ್ಯೆಯನ್ನು ಸಹಿಸಲಾಗದು! ಭಾರತಕ್ಕೆ ಭಾರತವೇ ಪ್ರೀತಿಸುವ – ಪೂಜಿಸುವ ವ್ಯಕ್ತಿತ್ವವೆಂದರೆ ಅದು ರಾಮ. ಭಕ್ತಿಯಿಂದ ಭಾವಿಸುವವರಿಗೆ ಅವನು ದೇವೋತ್ತಮ; ಭಾವದಿಂದ ಜೀವಿಸುವವರಿಗೆ ಅವನು ಮಾನವೋತ್ತಮ- ಮರ್ಯಾದಾ~ಪುರುಷೋತ್ತಮ! ಅವನ ಕುರಿತು ಬುದ್ಧಿಜೀವಿಗಳೆಂಬ ಹಣೆಪಟ್ಟಿಯ ಕೆಲವರು ಇತ್ತೀಚೆಗೆ ಇಲ್ಲದ ಮತ್ತು ಸಲ್ಲದ ಕೆಲವು ಅಪಶಬ್ದಗಳನ್ನಾಡುವಾಗ ಹೃದಯ ನೊಂದಿತು.
ಸತ್ಪುರುಷರ ನಿಂದೆ ನಡೆಯುವಾಗ, ಸತ್ಯಕ್ಕೆ ಅಪಚಾರವಾಗುತ್ತಿರುವಾಗ ತಿಳಿದೂ ಮೌನಧಾರಣೆ ಮಾಡುವುದು ಮಹಾಪಾತಕವೇ ಆಗಿದೆ! ಹಾಗೆ ಮಾಡುವವನು ಇದ್ದೂ ಇರದಂತೆ; ಆದುದರಿಂದ ರಾಮನ ಮೇಲಿನ ಈ ಮಿಥ್ಯಾಪವಾದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡುವೆವು.
ಇಷ್ಟಕ್ಕೂ ಬುದ್ಧಿಜೀವಿಗಳೆಂಬ ಬುದ್ಧಿಜೀವಿಗಳು ಹೇಳಿದ್ದೇನು?
ಪುನರುಚ್ಚಾರಕ್ಕೂ ಯೋಗ್ಯವಲ್ಲದ ಮಾತುಗಳವು. ವಿಷಯನಿರೂಪಣೆಯ ನೇರದಲ್ಲಿ ಗತ್ಯಂತರವಿಲ್ಲದೆ ಅವರ ಮಾತೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇವೆ: “ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ.”
ಈ ಮಾತುಗಳನ್ನು ಕೇಳಿದಾಗ ಕಿವಿಗೆ ಕಾದ ಸೀಸವನ್ನು ಹೊಯ್ದಂತಾಗದೇ!?
ಸಕಲರಿಗೂ ಶುಭಗೈದ ಅಕಲಂಕಚರಿತರಿಗೆ ಮಿಥ್ಯಾಕಲಂಕ ಹಚ್ಚಿ- ಅವರ ಹೆಸರಿಗೆ ಕೆಸರೆರಚಿ, ತಾವು ಹೆಸರುಗಳಿಸಲೆಳಸುವುದು ಯಾರಿಗೂ ತರವಲ್ಲ; ಯತಿವೇಷದಲ್ಲಿರುವವರಿಗೆ ಅಲ್ಲವೇ ಅಲ್ಲ!
ಒಂದು ದಿನವೂ ಬಿಡದೆ ವಾಲ್ಮೀಕಿ ರಾಮಾಯಣವನ್ನು ಅವಲೋಕಿಸುವವರು ನಾವು ; ‘ಅಲ್ಲಿ ಏನಿದೆ / ಏನಿಲ್ಲ’ ಎಂಬುದರ ಸ್ಪಷ್ಟ ತಿಳಿವಳಿಕೆಯನ್ನಾಧರಿಸಿ ಮೂರೇ ಮೂರು ಮಾತುಗಳಲ್ಲಿ ಮರ್ಯಾದಾಪುರುಷೋತ್ತಮನ ಕುರಿತಾದ ದುಷ್ಪ್ರಚಾರವನ್ನು ನಿರಾಕರಿಸುವೆವು:
ಒಂದನೆಯ ಮಾತು: ವಾಲ್ಮೀಕಿ ರಾಮಾಯಣದ ಏಳು ಕಾಂಡಗಳ, 500 ಅಧ್ಯಾಯಗಳ, 24 ಸಾವಿರ ಮೀರಿದ ಶ್ಲೋಕಗಳಲ್ಲಿ ಎಲ್ಲಿಯೂ “ರಾಮ-ಸೀತೆಯರು ಗೋಮಾಂಸ ಸೇವಿಸುತ್ತಿದ್ದರು” ಎಂಬ ಉಲ್ಲೇಖವಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನ ಆಹಾರದ ಕುರಿತಾದ ವರ್ಣನೆಗಳು ಹಲವಿವೆ; ಅಲ್ಲೆಲ್ಲಿಯೂ ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಗೋಮಾಂಸದ ಉಲ್ಲೇಖ ಇಲ್ಲವೇ ಇಲ್ಲ! ಗೋವನ್ನು ಕೊಲ್ಲುವ/ತಿನ್ನುವ ಮಾತು ಹಾಗಿರಲಿ, ಆ ಕಾಲದಲ್ಲಿ ಗೋವಿನ ವಿಷಯದಲ್ಲಿ ಮಾಡುವ ಸಣ್ಣ ತಪ್ಪೂ ಮಹಾಪಾಪವೆಂದು ಪರಿಗಣಿಸಲ್ಪಡುತ್ತಿತ್ತು ಎಂಬುದಕ್ಕೆ ರಾಮಾಯಣದಲ್ಲಿ ಪ್ರತ್ಯಕ್ಷ ಉಲ್ಲೇಖಗಳಿವೆ.
ರಾಮಾಯಣದ ಒಂದು ಸಂದರ್ಭ: ಕೌಸಲ್ಯೆಯು “ರಾಮನ ವನಗಮನದ ಸಂಚಿನಲ್ಲಿ ನೀನೂ ಭಾಗಿ!” ಎಂಬಂತೆ ಭರತನನ್ನು ಶಂಕಿಸುತ್ತಾಳೆ. ವ್ಯಥೆಗೊಂಡ ಭರತನು ‘ತಾನು ಅಂಥವನಲ್ಲ’ ಎಂದು ಸಿದ್ಧಪಡಿಸಲು ಘೋರ ಶಪಥಗಳನ್ನು ಗೈಯುತ್ತಾನೆ. ಮಹಾಪಾಪಗಳನ್ನು ಒಂದೊಂದಾಗಿ ಹೆಸರಿಸಿ ‘ಒಂದು ವೇಳೆ ರಾಮನ ವನಗಮನವು ತನಗೆ ಸಹಮತವಾದರೆ ಆ ಮಹಾಪಾಪಗಳು ತನಗೆ ಬರಲಿ’ ಎಂದು ಉದ್ಘೋಷಿಸುವುದು ಶಪಥದ ಸ್ವರೂಪ. ಅತ್ಯಂತ ಹೇಯವಾದ ಮಹಾಪಾಪಗಳ ಪಟ್ಟಿಯಲ್ಲಿ ಕೆಳಕಾಣುವ ಮೂರು ಪಾಪಗಳು ಗೋವಿನ ಕುರಿತಾಗಿವೆ:
- ಗಾಶ್ಚ ಸ್ಪೃಶತು ಪಾದೇನ” – ಗೋವುಗಳಿಗೆ ಕಾಲು ತಗುಲಿಸಿದರೆ ಬರುವ ಪಾಪವು ನನಗೆ ಬರಲಿ.
– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 31
- “ಹನ್ತು ಪಾದೇನ ಗಾಂ ಸುಪ್ತಾಂ” – ಮಲಗಿರುವ ಗೋವನ್ನು ಕಾಲಿನಿಂದ ಒದ್ದರೆ ಬರುವ ಪಾಪವು ನನಗೆ ಬರಲಿ.
– ವಾಲ್ಮೀಕಿರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 22
- “ಬಾಲವತ್ಸಾಂಚ ಗಾಂ ದೋಗ್ಧು” – ಎಳೆಗರುವಿರುವ ಹಸುವಿನ ಹಾಲು ಕರೆದವನಿಗೆ ಬರುವ ಪಾಪವು ನನಗೆ ಬರಲಿ.
– ವಾಲ್ಮೀಕಿರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 56
ಶಪಥಗಳ ಕೊನೆಯಲ್ಲಿ ಕೌಸಲ್ಯೆಯು ಕರಗುತ್ತಾಳೆ; ಭರತ ನಿಷ್ಕಲಂಕನೆಂದು ಹೃದಯಾಂತರಾಳದಿಂದ ಸ್ವೀಕರಿಸುತ್ತಾಳೆ.
ಗಮನಿಸಿ, ಅಂದಿನ ಕಾಲದಲ್ಲಿ ಗೋವಿಗೆ ಕಾಲು ತಗುಲಿಸಿದರೂ ಮಹಾಪಾಪವೆಂದು ಪರಿಗಣಿಸಲಾಗಿತ್ತು. ಎಳೆಗರುವಿನ ಪಾಲಿನ ಹಾಲನ್ನು ಕರೆದು ಕುಡಿಯುವುದೂ ಪಾತಕವೆನಿಸಿತ್ತು! ತಥಾಕಥಿತ ಬುದ್ಧಿಜೀವಿಗಳೇ, ಈ ಎತ್ತರದ ನ್ಯಾಯಪ್ರಜ್ಞೆ ಮತ್ತು ಈ ಮಟ್ಟದ ಪ್ರಾಣಿದಯೆ ನಿಮ್ಮಲ್ಲಿದೆಯೇ? ಆತ್ಮಾವಲೋಕನ ಮಾಡಿಕೊಳ್ಳಿ.
ಇದು ರಾಮನ ತಮ್ಮ ಮತ್ತು ರಾಮನ ತಾಯಿಯ ನಡುವೆ ನಡೆದ ಸಂವಾದ; ಆ ಕಾಲದ, ಆ ದೇಶದ, ಆ ಕುಟುಂಬದ ನಿಲುವನ್ನು -ಗೋವಿನ ಕುರಿತಾದ ನಿಲುವನ್ನು- ಈ ಸಂದರ್ಭವು ಸಂದೇಹಕ್ಕೆ ಎಡೆಯೇ ಇಲ್ಲದಂತೆ ನಿರೂಪಿಸುತ್ತದೆ. ಹೀಗಿರುವಾಗ ರಾಮ-ಸೀತೆಯರು ಗೋಮಾಂಸವನ್ನು ಸೇವಿಸುವ ಕಲ್ಪನೆಯನ್ನಾದರೂ ಹೇಗೆ ಮಾಡಲು ಸಾಧ್ಯ!? ಹೇಳಿ ಕೇಳಿ ಯಾವುದೇ ವೈಯಕ್ತಿಕ/ಸಾಮಾಜಿಕ ನಿಯಮಗಳನ್ನು ಯಾವ ಕಾರಣಕ್ಕೂ ಮುರಿಯುವವನಲ್ಲ ರಾಮಚಂದ್ರ; ಆ ಪಾತ್ರದ ರಚನೆಯೇ ಹಾಗೆ! ಆದುದರಿಂದಲೇ ತಾನೇ ಅವನು ಮರ್ಯಾದಾ~ಪುರುಷೋತ್ತಮನೆನಿಸಿಕೊಂಡಿರುವುದು!?
ನೀವು ಹೀಗೆ ನಿರಾಧಾರವಾಗಿ ರಾಮನಲ್ಲಿ ಗೋಮಾಂಸ-ಭಕ್ಷಕತ್ವವನ್ನು ಆರೋಪಿಸುವುದಾದರೆ ನಾಳೆ ನಿಮ್ಮನ್ನು ಯಾರಾದರೂ ನರಮಾಂಸ-ಭಕ್ಷಕರೆಂದು ನಿರಾಧಾರವಾಗಿ ಆರೋಪಿಸಿದರೆ ಸುಮ್ಮನಿರಬೇಕಾದೀತು!
ಹೇಗಿದ್ದರೂ ಆರೋಪಕ್ಕೆ ಆಧಾರ ಬೇಡವಲ್ಲವೇ?
ಎರಡನೆಯ ಮಾತು: ರಾಮನ ಮಾತು ಹಾಗಿರಲಿ, ರಾಮಾಯಣದ ಪ್ರಕಾರ ರಾವಣನೂ ಗೋಮಾಂಸ ಸೇವಿಸುತ್ತಿರಲಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ಇದೋ ಇಲ್ಲಿದೆ ಆಧಾರ:
ಸಂದರ್ಭ: ಲಂಕೆಯಲ್ಲಿ ಸೀತೆಯನ್ನು ಅರಸುತ್ತಾ ಆಂಜನೇಯನು ರಾವಣನ ಪಾನಭೂಮಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಕುಡಿದುಳಿದ ಪೇಯಗಳು, ತಿಂದುಳಿದ ಮಾಂಸಗಳು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಗೋಚರಿಸುತ್ತವೆ; ವಾಲ್ಮೀಕಿಗಳು ಅಲ್ಲಿ ಕಂಡುಬರುವ ಅರ್ಧಭಕ್ಷಿತವಾದ ಮಾಂಸಗಳ ಉದ್ದವಾದ ಪಟ್ಟಿಯನ್ನೇ ನೀಡುತ್ತಾರೆ:
ವಾಲ್ಮೀಕಿರಾಮಾಯಣ ಸುಂದರಕಾಂಡ ಸರ್ಗ 11:
- ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಭಾಗಶಃ |
ತತ್ರ ನ್ಯಸ್ತಾನಿ ಮಾಂಸಾನಿ ಪಾನಭೂಮೌ ದದರ್ಶ ಸಃ ||೧೩||
ಕತ್ತರಿಸಿ ಇಡಲ್ಪಟ್ಟ ಜಿಂಕೆ,ಕೋಣ,ಹಂದಿಗಳ ಮಾಂಸಗಳನ್ನು ಹನುಮನು ರಾವಣನ ಪಾನಭೂಮಿಯಲ್ಲಿ ಕಂಡನು. - ರೌಕ್ಮೇಷು ಚ ವಿಶಾಲೇಷು ಭಾಜನೇಷ್ವರ್ಧಭಕ್ಷಿತಾನ್ |
ದದರ್ಶ ಕಪಿಶಾರ್ದೂಲೋ ಮಯೂರಾನ್ ಕುಕ್ಕುಟಾಂಸ್ತಥಾ ||೧೪||
ಸ್ವರ್ಣ ಭಾಜನಗಳಲ್ಲಿ ಅರ್ಧ ತಿಂದುಳಿದ, ನವಿಲು ಮತ್ತು ಕೋಳಿಗಳ ಮಾಂಸಗಳನ್ನು ಅಲ್ಲಿ ಕಪಿವರನು ಕಂಡನು. - ವರಾಹವಾಧ್ರೀಣಸಕಾನ್ ದಧ್ರಿಸೌವರ್ಚಲಾಯುತಾನ್ |
ಶಲ್ಯಾನ್ ಮೃಗಮಯೂರಾಂಶ್ಚ ಹನೂಮಾನನ್ವವೈಕ್ಷತ ||೧೫||
ಮೊಸರು ಮತ್ತು ಉಪ್ಪುಗಳಿಂದ ಸಂಸ್ಕರಿಸಲ್ಪಟ್ಟ ಹಂದಿ, ಮುಳ್ಳುಹಂದಿ, ಖಡ್ಗಮೃಗ, ಜಿಂಕೆ, ನವಿಲುಗಳ ಮಾಂಸವನ್ನೂ ಹನುಮಂತನು ಅಲ್ಲಿ ಕಂಡನು. - ಕ್ರಕರಾನ್ ವಿವಿಧಾನ್ ಸಿದ್ಧಾಂಶ್ಚಕೋರಾನರ್ಧಭಕ್ಷಿತಾನ್ |
ಮಹಿಷಾನೇಕಶಲ್ಯಾಂಶ್ಚ ಚ್ಛಾಗಾಂಶ್ಚ ಕೃತನಿಷ್ಠಿತಾನ್ ||೧೬||
ಇನ್ನೊಂದೆಡೆ, ಕತ್ತರಿಸಿ, ಸಂಸ್ಕರಿಸಿದ ಕಾಡುಕೊಕ್ಕರೆ ಮತ್ತು ಚಕೋರಪಕ್ಷಿಗಳ ಮಾಂಸಗಳನ್ನು ಮತ್ತು ಅರ್ಧಭಕ್ಷಿತವಾದ ಎಮ್ಮೆ, ಆಡು, ಮತ್ತು ಮೀನುಗಳ ಮಾಂಸವನ್ನು ಮಾರುತಿಯು ನೋಡಿದನು.
ಇಲ್ಲೆಲ್ಲಿಯೂ ಗೋಮಾಂಸದ ಸುಳಿವಿಲ್ಲ!
ಬೇರೆ ಅನೇಕ ಪ್ರಾಣಿಗಳ ಮಾಂಸಗಳು ಉಲ್ಲೇಖಗೊಂಡಿವೆ; ಆದರೆ ಗೋಮಾಂಸದ ಪ್ರಸ್ತಾಪವೇ ಇಲ್ಲ!
ತದ್ವಿರುದ್ಧವಾಗಿ, ಮುಂದೆ ಒಂದೆಡೆಯಲ್ಲಿ ರಾವಣನು ಗೋವುಗಳನ್ನು ಪ್ರಶಂಸಿಸುವ ಪ್ರಸ್ತಾಪವಿದೆ!
“ವಿದ್ಯತೇ ಗೋಷು ಸಂಪನ್ನಮ್” – “ಗೋವುಗಳಲ್ಲಿ ಸಂಪತ್ತಿದೆ!”
(ವಾಲ್ಮೀಕಿ ರಾಮಾಯಣ, ಯುದ್ಧಕಾಂಡ, ಸರ್ಗ 16, ಶ್ಲೋಕ 9)
ಇದು ರಾವಣವಾಣಿ!
ಹೇಗಿದ್ದರೂ ಈ ಬುದ್ಧಿಜೀವಿಗಳಿಗೆ ರಾಮನು ಬೇಡ; ಈ ವಿಷಯದಲ್ಲಿ ಅವರುಗಳು ರಾವಣನನ್ನಾದರೂ ಅನುಸರಿಸಿದ್ದರೆ ರಾಷ್ಟ್ರಕ್ಕೆ ಒಳಿತಾಗುತ್ತಿತ್ತು!!
ಮೂರನೆಯ ಮಾತು: ಸಂಪೂರ್ಣ ರಾಮಾಯಣದ ಯಾವುದೇ ಭಾಗದಲ್ಲಿ, ಯಾವುದೇ ಶ್ಲೋಕದಲ್ಲಿ ಯಾರೂ ಗೋಮಾಂಸ ಸೇವಿಸಿದ ಉಲ್ಲೇಖವಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ರಾಮಸೀತೆಯರು ಗೋಮಾಂಸ ಸೇವಿಸಿದರೆಂದು ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿರುವರೆಂದು ಗಳಹುವ ಬುದ್ಧಿಜೀವಿಗಳಿಗೂ ಅವರ ಬಾಲಬಡುಕರಿಗೂ ಇದು ಬಹಿರಂಗ ಸವಾಲ್!!
ರಾಮಾಯಣದಲ್ಲಿ ಎಲ್ಲಿಯಾದರೂ ಒಂದು ಕಡೆ, ಯಾರಾದರೂ ಗೋಮಾಂಸ ಸೇವಿಸುವ ವರ್ಣನೆಯನ್ನು ಕಾಂಡ~ಸರ್ಗ~ಶ್ಲೋಕ-ಸಂಖ್ಯೆಯೊಡನೆ ತೋರಿಸಿ!!
ಕೊನೆಯ ಪಕ್ಷ, ಇಡಿಯ ರಾಮಾಯಣದಲ್ಲಿ ಎಲ್ಲಿಯಾದರೂ ಒಂದು ಕಡೆ ‘ಗೋಮಾಂಸ’ ಶಬ್ದದ ಬಳಕೆಯಾಗಿದ್ದರೆ ಅದನ್ನು ತೋರಿಸಿಬಿಡಿ!
ಸಾಕೇ ಸಾಕು!!
~
ನೋಡದೆಯೇ ಇಡುವ ಹೆಜ್ಜೆ ಮುಳ್ಳಿನ ಮೇಲೆ ಬಿದ್ದೀತು; ನಡೆಯುವವನನ್ನು ಪ್ರಪಾತಕ್ಕೆ ಬೀಳಿಸೀತು!
ತಿಳಿಯದೇ ಆಡುವ ಮಾತು ಆಡುವವನನ್ನು ಮಾತ್ರವಲ್ಲ; ಕೇಳುವವನನ್ನೂ ಮಹಾಪತನಕ್ಕೆ ಒಳಪಡಿಸೀತು!
ತಿಳಿದು ಮಾತನಾಡಬೇಕೆಂಬ ಮೊದಲ ತಿಳಿವಳಿಕೆಯಿಂದ ಬುದ್ಧಿಜೀವಿತ್ವದೆಡೆಗೆ ನೈಜಪ್ರಯಾಣ ಆರಂಭವಾಗಲಿ.
ಶುಭಪ್ರಯಾಣ!
#LokaLekha by @SriSamsthana SriSri RaghaveshwaraBharati MahaSwamiji
~*~
ತಿಳಿವು~ಸುಳಿವು:
- <ಇಲ್ಲದ ಮತ್ತು ಸಲ್ಲದ ಕೆಲವು ಅಪಶಬ್ದಗಳನ್ನಾಡುವಾಗ>
ಇಲ್ಲಿ, ಇಲ್ಲದ – ಎಂದರೆ, ಯತಾರ್ಥವಾಗಿ ಮೂಲವೇ ಇಲ್ಲದ ಮಾತುಗಳು ಎಂದು; ಸಲ್ಲದ ಎಂದರೆ – ರಾಮನ ವ್ಯಕ್ತಿತ್ವಕ್ಕೆ ಹೇಳಬಾರದ ಎಂಬ ಅರ್ಥ. - ದುಷ್ಪ್ರಚಾರ = ಕೆಟ್ಟದಾದ ಪ್ರಚಾರ, ಅಪಪ್ರಚಾರ
~*~
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
January 29, 2018 at 6:57 AM
ರಾಮನಿರಲಿ, ರಾವಣನೂ ಕೂಡ ಗೋಮಾಂಸ ಭಕ್ಷಿಸುತ್ತಿರಲಿಲ್ಲ.ಹೌದು ಬುದ್ದಿ ಜೀವಿಗಳೆಂಬ ಬುದ್ಧಿಜೀವಿಗಳು ಗಮನಿಸಲೇ ಬೇಕಾದ ಕಟು ಸತ್ಯ.
#ಲೋಕಲೇಖ
January 29, 2018 at 12:27 PM
ಯುಕ್ತಿಯುಕ್ತ ಮೇರು ಲೇಖನ. ಸರಿಯಾದ ಮಾರುತ್ತರ. ಇದಕ್ಕಿಂತ ಮೀರಿ ಏನು ಹೇಳಲು ಶಕ್ಯ ? ಶ್ರೀ ಚರಣಗಳಿಗೆ ಶರಣು ಶರಣು.
January 29, 2018 at 12:59 PM
ಈ ಉತ್ತರಗಳನ್ನೂ ಕೊಡಬೇಕಾಯಿತು. ಇವರದ್ದು ಉತ್ತರಕ್ಕಾಗಿ ಅಥವಾ ತಿಳುವಳಿಕೆಗಳಿಗಾಗಿ ಪ್ರಶ್ನೆಗಳಲ್ಲ. ನಾವು ಪ್ರಶ್ನಿಸುತ್ತೇವೆ ಎಂದು ಪ್ರಶ್ನೆಗಳು. “ರಕ್ಷಕರು” ಎನ್ನುವ ಪದ ಅಪಭ್ರಂಶವಾಗಿ “ರಾಕ್ಷಸರು” ಎಂಬ ಪದವಾಗಿದೆ ಎಂದು ವಾದಿಸುತ್ತಾರೆ. ಏನು ಉತ್ತರಿಸುತ್ತೀರಿ?
ದುರ್ಗೆ ಮಹಿಷಾಸುರನ ಮೇಲೆ ದೌರ್ಜನ್ಯವೆಸಗಿದಳೆಂದು ನವರಾತ್ರಿಯಲ್ಲಿ ಮಹಿಷಾಸುರನೇ ಉತ್ತಮನೆಂಬಂತೆ ಹಬ್ಬವನ್ನಾಚರಿಸಿದರು. ಹಿರಣ್ಯಕಶ್ಯಪು ಇದನ್ನೇ ಮಾಡಿದ್ದಲ್ಲವೇ? ನನ್ನನ್ನೇ ಪೂಜಿಸಿ ಎಂಬ ಶಾಸನ ಮಾಡಿದ್ದ.
ರಾವಣ ರಾಕ್ಷಸ ಜಾತಿಯವ. ಇವರ ನಡೆ ಗಮನಿಸಿದರೆ ಇವರೂ ಅದೇ ಜಾತಿಯವರು. ಆದರೆ ರಾಕ್ಷಸ ರಾವಣ ಗೋವು ಸಂಪತ್ತೆಂದರೆ ಅದೇ ಜಾತಿಯ ಇವರು ನಂಬುವುದಿಲ್ಲ.
ಇತಿಹಾಸವೆಂದೂ ಬದಲಾಗಿಲ್ಲ. ಅದೇ ಹಿರಣ್ಯಕಶ್ಯಪರು ಪುನರವತರಿಸಿ ಬರುತ್ತಲೇ ಇದ್ದಾರೆ, ಇರುತ್ತಾರೆ. ಈ ರೀತಿಯ ಜಾಗೃತಿ ಸದಾ ಜಾರಿಯಲ್ಲಿರುತ್ತದೆ, ಅದೇ ಸಂತೋಷ.
January 29, 2018 at 8:14 PM
ಇವರಿಗೆ ಬುದ್ಧಿ ಜೀವಿಗಳು ಅಂತ ಹೇಳೋದೇ
ಅಪರಾಧ.. ಲದ್ದಿ ಜೀವಿಗಳು ಇವರು ..
ರಾಮಾಯಣ ಓದಿರೋದೆ ಸುಳ್ಳು ಇವರು…
ಇಲ್ಲದ ಅಪಪ್ರಚಾರವೇ ಇವರ ಕೆಲಸ..
ಮಾಧ್ಯಮದಲ್ಲಿ ಕಾಣಿಸಿಕೊಳ್ಳೋಕೆ ಒಂದು
ಹೇಳಿಕೆ ಬೇಕು ಅಷ್ಟೆ… ನಮ್ಮ ಸಂಸ್ಥಾನ
ಸರಿಯಾದ ತಿರುಗೇಟು ಕೊಟ್ಟಿದ್ದಾರೆ..
ಹರೇರಾಮ.. ಜೈ ಶ್ರೀರಾಮ..
ವಂದೇ ಗೋಮಾತರಂ