ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||

ಕಾಶ್ಮೀರವೆಲ್ಲಿ? ಕರ್ನಾಟಕವೆಲ್ಲಿ? ಆದರೆ ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ! ಕರ್ನಾಟಕವೇನು, ಭಾರತವರ್ಷದ ಉದ್ದಗಲವೆಷ್ಟೋ ಈ ಶ್ಲೋಕದ ವ್ಯಾಪ್ತಿಯಷ್ಟು!

ಹೌದು! ಕಾಶ್ಮೀರದ ಶಾರದೆಯ ವ್ಯಾಪ್ತಿ ಕಾಶ್ಮೀರಮಾತ್ರವಲ್ಲ, ಸಮಸ್ತ ಭಾರತ ದೇಶ!

ಕಾಶ್ಮೀರವಂತೂ ಶಾರದಾಮಯ! ಒಂದು ಕಾಲದಲ್ಲಿ ಕಾಶ್ಮೀರವನ್ನು ಶಾರದಾ ದೇಶವೆಂದೇ ಕರೆಯುತ್ತಿದ್ದರು. ಅಲ್ಲಿಯ ಲಿಪಿಯ ಹೆಸರು ಶಾರದಾ! ಶಾರದಾ ಮಂದಿರವಿರುವ ಗ್ರಾಮಕ್ಕೆ ಆಗಲೂ, ಈಗಲೂ – ಅದು ಪಾಕಿಸ್ತಾನದ ವಶವಾದ ಬಳಿಕವೂ – ಶಾರದಾಗ್ರಾಮವೆಂದೇ ಹೆಸರು! ಸಮ್ಮುಖದಲ್ಲಿರುವ ಪರ್ವತಶಿಖರವೊಂದನ್ನು ಈಗಲೂ ಶಾರದೀ ಎಂದು ಕರೆಯುತ್ತಾರೆ. ಆ ಊರಿನಲ್ಲಿ ಈಗ ಉಳಿದುಕೊಂಡಿರುವುದು ಶತಮಾನಗಳ ಹಿಂದೆ ಮತಪರಿವರ್ತನೆಗೊಳಗಾದ ಮುಸಲ್ಮಾನರು ಮಾತ್ರ. ಆದರೆ ಇಂದಿಗೂ ಅವರು ಆಣೆ ಹಾಕುವುದು, ಪ್ರಮಾಣ ಮಾಡುವುದು ತಾಯಿ ಶಾರದೆಯ ಹೆಸರಿನಲ್ಲಿ!

ಕಾಶ್ಮೀರದ ಮೂಲ ಜನಾಂಗವನ್ನು ಕಾಶ್ಮೀರಿ ಪಂಡಿತರು ಎಂದೇ ಕರೆಯುತ್ತಾರೆ. ಪಾಂಡಿತ್ಯವು ವಿದ್ಯೆಯಿಂದ‌; ವಿದ್ಯೆಯು ಶಾರದೆಯಿಂದ. ಕಾಶ್ಮೀರಿ ಪಂಡಿತರು ಎಂಬ ಅಭಿಧಾನವು ಆ ಜನಾಂಗಕ್ಕೆ ಶಾರದಾನುಗ್ರಹ!

ನಿಮಗೆ ಗೊತ್ತೇ? ಒಂದು ಕಾಲದಲ್ಲಿ, ಒಂದಿಡೀ ಜನಾಂಗದಲ್ಲಿ ಜ್ಞಾನಿಯಲ್ಲದ ಒಬ್ಬನೇ ಒಬ್ಬ ಮನುಷ್ಯನಿರಲಿಲ್ಲ! ಆದುದರಿಂದಲೇ ಆ ಜನಾಂಗವೇ ಪಂಡಿತರು ಎಂದು ಕರೆಯಲ್ಪಟ್ಟಿತು. ಒಂದು ಕಾಲದಲ್ಲಿ, ಅಖಂಡ ಭರತಖಂಡದಲ್ಲಿ ವಿದ್ಯೆಯ ಪರಮೋಚ್ಚ ಪರೀಕ್ಷೆಯಾಗುತ್ತಿದ್ದುದು ಕಾಶ್ಮೀರದಲ್ಲಿ. ಅಲ್ಲಿ ಸೈ ಎನಿಸಿಕೊಂಡರೆ ಅವನು ನಿಜವಾದ ಪಂಡಿತ! ಅಲ್ಲಿಯವರೆಗೆ ಅವನ ಪಾಂಡಿತ್ಯ ಪೂರ್ಣವಲ್ಲ.

ವಿದ್ಯಾಸಾಮ್ರಾಜ್ಯವಾಗಿತ್ತು ಕಾಶ್ಮೀರ!

ಭಾರತವು ದೇವಸ್ಥಾನವಾದರೆ ಅದರ ಶಿಖರ ಕಾಶ್ಮೀರ. ಕಾಶ್ಮೀರವು ಭಾರತದ ಶಿಖರವಾದರೆ ಅದರ ಕಲಶವು ಶಾರದಾಪೀಠ! ನಾವು-ನೀವಿರುವ ಈ ಕಾಲದ ದೌರ್ಭಾಗ್ಯವೆಂದರೆ ಭಾರತದ ಕಲಶವೆನಿಸಿದ ಶಾರದಾಮಂದಿರಕ್ಕೆ ಇಂದು ಕಲಶವಿರಲಿ, ಛಾವಣಿಯೇ ಇಲ್ಲ! ಸಮಸ್ತ ಭಾರತೀಯರ ಹೃದಯಮಂದಿರದಲ್ಲಿ ವಿದ್ಯಾಮೂರ್ತಿಯಾಗಿ ಪೂಜಿಸಲ್ಪಡುವ ಶಾರದೆಯ ಮೂಲ ಮಂದಿರದಲ್ಲಿ ಮೂರ್ತಿಯೇ ಇಲ್ಲ! ಇನ್ನು ಪೂಜೆಯೆಲ್ಲಿ!? ಮೋಟು ಗೋಡೆಗಳ, ಮುರುಕು ಪೀಠದ, ಭಗ್ನಾವಶೇಷಗಳ ಇಂದಿನ ಶಾರದಾಪೀಠದ ದುರಂತದೃಶ್ಯವನ್ನು ನೋಡಿ, ಕರಗಿ-ಮರುಗದಿದ್ದರೆ ನೀವು ಭಾರತೀಯರೇ ಅಲ್ಲ!

ಕೇವಲ ಮಂದಿರಮಾತ್ರದಲ್ಲಲ್ಲ, ಶಾರದೆಯು ಕಾಶ್ಮೀರದ ಅಸಂಖ್ಯ ಪಂಡಿತರ ಮಸ್ತಿಷ್ಕಗಳಲ್ಲಿ, ಮುಖಗಳಲ್ಲಿ ವಿದ್ಯಾವಾಹಿನಿಯಾಗಿ ವಿರಾಜಿಸುತ್ತಿದ್ದಳು. ಆದರೆ ಇಂದವರ ಸ್ಥಿತಿ ಸಾವಿಗಿಂತ ಘೋರ! ಯಾರಿಗೂ ಕೇಡು ಮಾಡದ ಆ ಜ್ಞಾನ~ಜನಾಂಗದ ಅದೆಷ್ಟೋ ಜನರ ಜೀವಹರಣ ಮಾಡಲಾಯಿತು; ಇನ್ನೆಷ್ಟೋ ಪಂಡಿತರ ಮಡದಿ-ಮಕ್ಕಳ ಮಾನಹರಣ ಮಾಡಲಾಯಿತು; ಕೊನೆಗುಳಿದವರು ತಮ್ಮ ನೆಲೆ-ನೆಲಗಳನ್ನು ಪರಿತ್ಯಜಿಸಿ, ದಿಕ್ಕುದೆಸೆಯಿಲ್ಲದೆ ಓಡುವಂತಾಯಿತು!

ಎಲ್ಲಿಂದಲೋ ಬಂದ ರೋಹಿಂಗ್ಯಾಗಳ ಕುರಿತು ಕಣ್ಣೀರು ಸುರಿಸುವವರಿಗೆ ನಮ್ಮವರೇ ಆದ ಕಾಶ್ಮೀರಿ ಪಂಡಿತರ ದುರವಸ್ಥೆಯನ್ನು ನೋಡಲು ಕಣ್ಣೇ ಇಲ್ಲ!

ಇಂದವರ ಆಸೆ ವರ್ಷಕ್ಕೊಂದು ಬಾರಿ ಶಾರದಾಪೀಠದ ದರ್ಶನ ಮಾಡುವುದು. ದುರಂತದ ದುರಂತವೆಂದರೆ ತಮ್ಮ ಮಾತೃಸ್ಥಾನದ ಭಗ್ನಾವಶೇಷಗಳನ್ನು ನೋಡಲೂ ಅವರಿಗೆ ಅವಕಾಶವಿಲ್ಲ! ಗಡಿನಿಯಂತ್ರಣರೇಖೆ(LOC) ಎಂಬ ತಡೆಗೋಡೆಯು ತಾಯ್ಮಕ್ಕಳನ್ನು ಬೇರ್ಪಡಿಸಿದೆ.

ಗೊತ್ತೇ ನಿಮಗೆ? ಗಡಿಯೀಚೆಯ ಮುಸಲ್ಮಾನರಿಗೆ ಆಚೆಯಿರುವ ತಮ್ಮ ಬಂಧುಗಳನ್ನು ಭೇಟಿ ಮಾಡಲು ವಿಶೇಷಾನುಮತಿಯಿದೆ. ಇಲ್ಲಿಯವರಿಗೆ ಅಲ್ಲಿ ಹೋಗಿ ವ್ಯಾಪಾರ ಮಾಡಲು ವಿಶೇಷಾವಕಾಶವಿದೆ! ಆದರೆ ಹಿಂದುಗಳಾದ ನಮಗೆ, ನಮ್ಮೆಲ್ಲರ ಸೋದರರೇ ಆದ ಕಾಶ್ಮೀರಿ ಪಂಡಿತರಿಗೆ ತಮ್ಮ ತಾಯಿಯ ಬಳಿ ವರ್ಷಕ್ಕೊಮ್ಮೆ ಹೋಗಲೂ ಅವಕಾಶವಿಲ್ಲ! ಕಾಶ್ಮೀರಿ ಪಂಡಿತರ ಬಹುದಿನಗಳ ಈ ಬೇಡಿಕೆಗೆ ನಮ್ಮದೇ ಸರಕಾರಗಳು ಸ್ಪಂದಿಸಿಲ್ಲ!

ಈಗ ಕಾಲ ಬದಲಾಗತೊಡಗಿದೆ. ಅಥವಾ ಕಾಶ್ಮೀರಿ ಪಂಡಿತರ ಎಡೆಬಿಡದ ಹೋರಾಟಗಳು ಕಾಲವನ್ನು ಬದಲಾಯಿಸುತ್ತಿವೆ. ಶಾರದಾಪೀಠದ ಮತ್ತು ಕಾಶ್ಮೀರಿ ಪಂಡಿತರ ದುರವಸ್ಥೆಗೆ ಪ್ರಧಾನ ಕಾರಣವಾದ ಪಾಕಿಸ್ಥಾನವು ಇತ್ತೀಚೆಗೆ ಶಾರದಾದರ್ಶನಕ್ಕೆ ಅವಕಾಶ ನೀಡುವ ಮಾತಾಡುತ್ತಿದೆ! ಮಾತ್ರವಲ್ಲ, ಯಾತ್ರಿಗಳ ಅನುಕೂಲಕ್ಕಾಗಿ, ಶಾರದಾಗ್ರಾಮದ ಪರಿಸರದಲ್ಲಿ ರಸ್ತೆಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಮಾಡುವುದಾಗಿಯೂ ಪ್ರಕಟಿಸಿದೆ. ಈಗಿನ ಜಮ್ಮು-ಕಾಶ್ಮೀರ ಸರಕಾರವು ಶಾರದಾಯಾತ್ರೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿಯೇ ಘೋಷಿಸಿದೆ.

ಇನ್ನು ಶಾರದಾ ಗ್ರಾಮದ ಮುಸಲ್ಮಾನರು; ಅವರೊಂದು ವಿಸ್ಮಯ!

ಶಾರದಾಪೀಠದ ಪುನರುಜ್ಜೀವನ ಅವರ ತವಕ; ಕಾಶ್ಮೀರೀ ಪಂಡಿತರ ಶಾರದಾಯಾತ್ರೆಗೆ ಅವರು ಪೂರಕ. ನಂಬಲಸಾಧ್ಯವಾದ ಸಂಗತಿಯೆಂದರೆ ಇತ್ತೀಚೆಗೆ ಶಾರದಾಮಂದಿರದಲ್ಲಿ ಬಹುಕಾಲದ ಬಳಿಕ ಪೂಜೆಯೊಂದು ನಡೆಯಿತು! ಆ ಪೂಜೆಯನ್ನು ನೆರವೇರಿಸಿದವರು ಶಾರದಾ ಗ್ರಾಮದ ಮುಸಲ್ಮಾನರು! ಅವರು ಮೊದಲು ಮೂರ್ತಿಯಿದ್ದ ಸ್ಥಳದಲ್ಲಿ ಪುಷ್ಪಗಳಿಂದ ಪೂಜೆ ನಡೆಸಿದ್ದಾರೆ; ಗರ್ಭಗುಡಿಯ ಗೋಡೆಯಲ್ಲಿ ಶಾರದಾ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿದ್ದಾರೆ; ಪುಷ್ಪಪ್ರಸಾದವನ್ನೂ ಮತ್ತು ಶಾರದಾಭೂಮಿಯ ಮಂಗಲಮಯವಾದ ಮಣ್ಣನ್ನೂ ಪಂಡಿತರುಗಳಿಗೆ ಅಂಚೆಯ ಮೂಲಕ ಕಳುಹಿಸಿದ್ದಾರೆ!

ಗಮನಿಸಿ; ಇವೆಲ್ಲವನ್ನೂ ಪರಮಪ್ರೇಮದಿಂದ ನೆರವೇರಿಸಿದವರು ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದಲ್ಲಿ ವಾಸಿಸುವ ಮುಸಲ್ಮಾನರು! ಇಂದು ಅವರ ಬದುಕು ಇಸ್ಲಾಂ ಮತದಲ್ಲಿ; ಅವರಿರುವ ಊರು ಪಾಕಿಸ್ತಾನದ ವಶದಲ್ಲಿ! ಸಾಕಾರ ದೇವರ ಪೂಜೆಯನ್ನು ಅತ್ಯುಗ್ರವಾಗಿ ವಿರೋಧಿಸುವ ಮುಸಲ್ಮಾನರು, ಪಾಕಿಸ್ತಾನದ ಅಂಕೆಗೊಳಪಟ್ಟ ಪ್ರದೇಶದಲ್ಲಿ, ಅದೂ ಉಗ್ರಗಾಮಿಗಳ ಹಾವಳಿಯ ನಡುವೆ ಪುಷ್ಪಗಳಿಂದ ಶಾರದಾಪೀಠಕ್ಕೆ ಪೂಜೆಗೈದು, ಪ್ರಸಾದ ಕಳುಹಿಸಿದರೆಂಬುದನ್ನು ನಂಬಲಾಗದು! ಆದರೆ ಸ್ವತಃ ಕಾಶ್ಮೀರಿ ಪಂಡಿತರ ನಿಯೋಗವೇ ನಮ್ಮನ್ನು ಭೇಟಿಯಾಗಿ, ಪ್ರಸಾದವಿತ್ತು, ಪುಷ್ಪಪೂಜೆಯ ಭಾವಚಿತ್ರವನ್ನೂ, ಮತ್ತು ಪಾಕಿಸ್ತಾನದಿಂದ ಪಂಡಿತರಿಗೆ ಬಂದ, ಅಲ್ಲಿಯ ಮೊಹರಿರುವ ಲಕೋಟೆಯನ್ನೂ ತೋರಿಸಿದಾಗ ನಂಬಲೇಬೇಕಾಯಿತು!

ಕಾಶ್ಮೀರದ ಶಾರದೆಯ ಪ್ರಸಾದ ಪುಷ್ಪಗಳು, ಶಾರದಾ ಗ್ರಾಮದ ಮಣ್ಣು ನಮ್ಮ ಮಠದಲ್ಲಿದೆಯೆಂಬುದು ವಿಖ್ಯಾತ-ವ್ಯಾಖ್ಯಾನಸಿಂಹಾಸನವು ನಮ್ಮಲ್ಲಿದೆಯೆಂಬಷ್ಟೇ ಹೆಮ್ಮೆ ನಮಗೆ!

ಆದರೆ “ಆ ಹೂವುಗಳ ಹಿಂದಿರುವ, ಆ ಮಣ್ಣಿನ ಹಿಂದಿರುವ ಶಾರದಾಗ್ರಾಮವಾಸಿಗಳೆಲ್ಲರೂ ಮೂಲದಲ್ಲಿ ಮತಾಂತರ-ದೇಶಾಂತರಗಳಿಗೆ ಒಳಗಾದ ಕಾಶ್ಮೀರಿ ಪಂಡಿತರೇ!” ಎಂಬುದನ್ನು ನೆನೆದಾಗ ಕರುಳು ಚುರ್ರೆನ್ನದಿರದು!

ಇವೆಲ್ಲವೂ ಸರಿ. ಶಾರದಾಯಾತ್ರೆಗೆ ಈಗ ಬೇಕಿರುವುದು ಭಾರತ ಸರಕಾರದ ಅನುಮತಿ. ಈಗಿರುವ ಅನುಮತಿ-ನಿಯಮದಲ್ಲಿ “ಗಡಿಯಾಚೆಗಿನ ಬಂಧುಗಳನ್ನು ಭೇಟಿಯಾಗಲು, ಅಲ್ಲಿ ವ್ಯಾಪಾರ ಮಾಡಲು” ಎಂಬುದರ ಜೊತೆಗೆ “ಧಾರ್ಮಿಕಯಾತ್ರೆಗೈಯಲು” ಎಂಬ ಒಂದು ಶಬ್ದ ಸೇರಿದರೆ ಪಂಡಿತರಿಗೆ ಶಾರದೆಯ ದ್ವಾರ ತೆರೆಯುವುದು! ಇದೇ ಉದ್ದೇಶಕ್ಕಾಗಿಯೇ “Save Sharda” ಎಂಬ ಹೆಸರಿನಲ್ಲಿ ಸಂಘಟನೆಯೊಂದನ್ನು ಕಟ್ಟಿಕೊಂಡು ಅವರುಗಳು ಅವಿರತವಾದ ಹೋರಾಟವನ್ನು ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಈ ಹೋರಾಟದಲ್ಲಿ ಭಾರತೀಯರೆಲ್ಲರೂ ಜೊತೆಯಾಗಬೇಕಿದೆ. ಅವರ ದನಿಗೆ ನಮ್ಮ ದನಿಯನ್ನು, ಅವರ ಶಕ್ತಿಗೆ ನಮ್ಮ ಶಕ್ತಿಯನ್ನು ಸೇರಿಸಬೇಕಿದೆ. ಏಕೆಂದರೆ ಶಾರದಾಕಾರ್ಯವು ಕೇವಲ ಪಂಡಿತರದಲ್ಲ, ನಮ್ಮೆಲ್ಲರದು! ಶಾರದೆ ಕಾಶ್ಮೀರಿ ಪಂಡಿತರುಗಳಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ತಾಯಿ!

ಯಾರಿರಲಿ ಬಿಡಲಿ, ಶಾರದಾಪೀಠದ ಪುನರುತ್ಥಾನಕಾರ್ಯದಲ್ಲಿ ಕಾಶ್ಮೀರಿ ಪಂಡಿತರ ಜೊತೆಗೆ ನಾವಂತೂ ಇದ್ದೇವೆ. ಅದಕ್ಕೆ ಸಹಜ ಕಾರಣ ಭಾರತೀಯತೆ‌. ವಿಶೇಷ ಕಾರಣ ಶ್ರೀಶಂಕರಾಚಾರ್ಯರ ಪರಂಪರೆಗೆ ನಾವು ಸೇರಿರುವುದು!

ಶಂಕರರಿಗೂ ಶಾರದೆಗೂ ಅವಿನಾಭಾವದ ಸಂಬಂಧ!

ಕಾಶ್ಮೀರಪುರವಾಸಿನಿಯ ಸನ್ನಿಧಿಯಲ್ಲಿಯೇ ಅಲ್ಲವೇ ಆದಿ ಶಂಕರರು ಸರ್ವಜ್ಞಪೀಠವನ್ನೇರಿ ಜಗದ್ಗುರುವೆನಿಸಿಕೊಂಡಿದ್ದು! ದಕ್ಷಿಣ ದೇಶದ ಯಾರೊಬ್ಬ ಪಂಡಿತನೂ ಆವರೆಗೆ ಅರಿವಿನ ಆ ಎತ್ತರವನ್ನು ಏರದ ಕಾರಣ ಶಾರದಾ ಪೀಠದ ದಕ್ಷಿಣದ್ವಾರವೇ ಅಂದಿನವರೆಗೆ ತೆರೆದಿರಲಿಲ್ಲ! ಶಂಕರರು ತಮ್ಮ ವಿದ್ವತ್ತಿನಿಂದ ಕಾಶ್ಮೀರದ ಪಂಡಿತಮಂಡಲವನ್ನು ಮಂತ್ರಮುಗ್ಧಗೊಳಿಸಿ, ದಕ್ಷಿಣದ್ವಾರವನ್ನು ತೆರೆಯಿಸಿ, ಒಳ ಪ್ರವೇಶಿಸಿದರು! ಶಸ್ತ್ರದಿಂದಲ್ಲ, ಶಾಸ್ತ್ರದಿಂದ ಅವರು ಜ್ಞಾನಸಾಮ್ರಾಜ್ಯದ ಆ ಮಹಾರಾಜಧಾನಿಯನ್ನು ಗೆದ್ದು, ಸರ್ವಜ್ಞಪೀಠವನ್ನೇರಿದರು! ಅಷ್ಟು ಮಾತ್ರವಲ್ಲ, ಅಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿ, ಶಾರದೆಗೆ ನೈಜಪೂಜೆ ಸಲ್ಲಿಸಿದರು!

ಶಂಕರಭಗವತ್ಪಾದರ ಅವಿಚ್ಛಿನ್ನ ಪರಂಪರೆಯ ಇಂದಿನ ಕೊಂಡಿಯಾದ ನಮ್ಮ ಹೃದಯದ ಹಿರಿಯಾಸೆ:

ಸಮಸ್ತ ಕಾಶ್ಮೀರವು ಭಾರತಕ್ಕೆ ಮರಳಬೇಕು.
ಸಮಸ್ತ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳಬೇಕು.
ಸಮಸ್ತ ಕಾಶ್ಮೀರಿಗಳು ಶಾರದೆಯ ಆರಾಧಿಸುವ ತಮ್ಮ ಮೂಲಧರ್ಮಕ್ಕೆ ಮರಳಬೇಕು.
ಶಾರದಾಪೀಠವು ಭಾರತಕ್ಕೆ ಮರಳಬೇಕು; ತನ್ನ ಮೊದಲಿನ ಭವ್ಯತೆಯಲ್ಲಿ ಅರಳಬೇಕು.

ಈಗಿಂದೀಗ ಆಗಬೇಕಿರುವುದು:

ಕಾಶ್ಮೀರಿ ಪಂಡಿತರಿಗೆ ಕಾಶ್ಮೀರಪುರವಾಸಿನಿಯ ಚರಣದರ್ಶನದ ಅವಕಾಶ.

ದೇಶಭಕ್ತರ, ಧರ್ಮನಿಷ್ಠರ ಒಲವಿನ ಬಲದಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರವು ಇಂದು ಭಾರತವನ್ನು ಆಳುತ್ತಿದೆ. ಈ ಕಾರ್ಯವು ಇಂದಲ್ಲದಿದ್ದರೆ ಎಂದು?

ಈಗ ನವರಾತ್ರಿ; ವಿಜಯದಶಮಿಯು ಕಣ್ಮುಂದಿದೆ. ದೇಶವೆಲ್ಲವೂ ಶಾರದಾಪೂಜೆಯಲ್ಲಿ ಮಗ್ನವಾಗುವ ಸಮಯವದು. ಶಾರದೆಯ ಮೂಲನೆಲೆಯ ಕುರಿತು ಒಂದಷ್ಟು ಭಕ್ತಿ, ಶಾರದಾಸಂತಾನದ ಕುರಿತು ಒಂದಷ್ಟು ಕಾಳಜಿಗಳು ನಮಗಿಲ್ಲದಿದ್ದರೆ ನಾವು ಮಾಡುವ ಶಾರದಾಪೂಜೆಗೆ ಯಾವ ಅರ್ಥವೂ ಇಲ್ಲ! ಶಾರದಾನುಗ್ರಹಕ್ಕೆ ನಾವು ಯೋಗ್ಯರೂ ಅಲ್ಲ!

ಅಂತ್ಯದಲ್ಲೊಂದು ಅಮೃತದ ಬಿಂದು:

ಭಾರತಿಯು ಭಾರತಕ್ಕೆ ಮರಳಿದಂದು ಭಾರತವು ವಿಶ್ವಗುರುವಾಗುವುದು!

~*~*~

ಚಿತ್ರ~ವಿಶೇಷ:

ಮಾಹಿತಿ & ಚಿತ್ರದ ಆಕರ – ಸೇವ್ ಶಾರದಾ ನಿಯೋಗದ ನೇತೃತ್ವ ವಹಿಸಿರುವ ರವೀಂದ್ರ ಪಂಡಿತರು.

ಇದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ 41ನೇ ಲೇಖನ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box