“ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೋ…” ~ ದಾಸವಾಣಿ.
ಅರ್ಘ್ಯದ ಕಲ್ಪನೆಯೇ ಅದ್ಭುತ: ನೀರು ಬೊಗಸೆಯಷ್ಟು; ಪುಣ್ಯ ಸಮುದ್ರದಷ್ಟು!
ಸರೋವರದಿಂದ ಒಂದು ಬೊಗಸೆಯಷ್ಟು ನೀರನ್ನು ಮೇಲಕ್ಕೆತ್ತಿ, ದೇವನ ನೆನಪಲ್ಲಿ- ‘ಇದು ನಿನಗಪ್ಪಾ’ ಎಂಬ ಭಾವದಲ್ಲಿ ಪುನಃ ಅಲ್ಲಿಯೇ ಚೆಲ್ಲಿದರೆ- ಅದು ಅನಂತ ಪುಣ್ಯ-ಫಲದಾಯಕವಾದ ಅರ್ಘ್ಯ.
ಅಂತೆಯೇ ಗೋಮಾತೆಯಿತ್ತ ಹಾಲನ್ನದಿಂದಲೇ ಸಮುದ್ಭವಿಸಿ, ನಮ್ಮ ದೇಹದಲ್ಲಿ ಜೀವದ್ರವವಾಗಿ ಹರಿಯುತ್ತಿರುವ ರಕ್ತದ ಹತ್ತು ಹನಿಗಳನ್ನು ಗೋರಕ್ಷೆಯ ಅಕ್ಷರಗಳಾಗಿ ಮೂಡಿಸಿ, ಆಳುವವರ ಮುಂದೆ ಗೋಹತ್ಯಾ~ನಿಷೇಧದ ಹಕ್ಕೊತ್ತಾಯವನ್ನು ಮಂಡಿಸಿದರೆ ಅದು ಗೋವಿಗೆ ಸಮರ್ಪಿಸಿದ ಅಭಯಾಕ್ಷರವೆಂಬ ಅರ್ಘ್ಯ. ಅದನ್ನು ಅರ್ಘ್ಯ ಎನ್ನುವುದಕ್ಕಿಂತ ಅನರ್ಘ್ಯ* ಎಂದರೇ ಸೂಕ್ತವೇನೋ; ಏಕೆಂದರೆ ರಕ್ತಕ್ಕೆ ಬೆಲೆ ಕಟ್ಟಲು ಸಾಧ್ಯವಾಗದು! ರಕ್ತಾಕ್ಷರಗಳ ಮೂಲಕ ರಕ್ಷಿಸಲ್ಪಡುವ ಗೋವುಗಳ ಪ್ರಾಣಗಳಿಗೂ ಬೆಲೆ ಕಟ್ಟಲಾಗದು!
ಅನರ್ಘ್ಯದ ರಕ್ಷಣೆಗೆ ಅನರ್ಘ್ಯದ ಸಮರ್ಪಣೆ; ಅದುವೇ ಸ್ವರಕ್ತ~ಲಿಖಿತ ಅಭಯಾಕ್ಷರದ ನಿರೂಪಣೆ! LokaLekha by @SriSamsthana SriSri RaghaveshwaraBharati MahaSwamiji
ರಕ್ತಕ್ಕೆ ಬೆಲೆ ಕಟ್ಟಲಾಗದೆಂದೆವು; ಏಕೆಂದರೆ ಅದು ಜೀವದ್ರವ. ಜೀವಕ್ಕೆ ಬೆಲೆ ಕಟ್ಟಲಾಗದು!
ರಕ್ತವೆಂದರದು ದೈವದ್ರವ; ಏಕೆಂದರೆ ಅದು ದೈವನಿರ್ಮಿತ. ಮನುಷ್ಯನಿಂದ ರಕ್ತಸೃಷ್ಟಿಯು ಸಾಧ್ಯವಿಲ್ಲ! ಜಗತ್ತಿನ ಯಾವ ಕಾರ್ಖಾನೆಗಳಲ್ಲಿಯೂ, ಯಾವ ಯಂತ್ರಗಳಿಂದಲೂ ರಕ್ತವನ್ನು ತಯಾರಿಸಲು ಸಾಧ್ಯವಾಗದು! ದೇಹವೆಂಬ ದೈವನಿರ್ಮಿತವಾದ, ಜೀವಸ್ಪಂದವಿರುವ ಯಂತ್ರದೊಳಗೆ ಮಾತ್ರವೇ ರಕ್ತದ ತಯಾರಿಕೆಯು ಸಾಧ್ಯ! ಮಾತ್ರವಲ್ಲ, ಜೀವವಿರುವಲ್ಲಿ ಮಾತ್ರವೇ ರಕ್ತದ ಇರವು- ಹರಿವು; ರಕ್ತದ ಹರಿವಿನಿಂದಲೇ ಜೀವದ ಇರವು!
ಸ್ವರಕ್ತ~ಲಿಖಿತ ಅಭಯಾಕ್ಷರವೆಂದರೆ ಸರ್ವದೇವಮಯಿ ಮಾತೆಗೆ ದೈವದ್ರವದಿಂದ ಮಾಡುವ ಮಹಾಪೂಜೆ!
ರಕ್ತಕ್ಕೆ ಮಾತ್ರವಲ್ಲ, ಹಾಲಿಗೂ ಬೆಲೆ ಕಟ್ಟಲಾಗದು; ಏಕೆಂದರೆ ಅದು ಜೀವದ್ರವ ಮಾತ್ರವಲ್ಲ, ಭಾವದ್ರವವೂ ಹೌದು! ಭಾವದ ಪ್ರಭಾವಕ್ಕೊಳಪಟ್ಟು ಒಂದು ಜೀವದಿಂದ ಇನ್ನೊಂದು ಜೀವದೆಡೆಗೆ -ತಾಯಿಯಿಂದ ಕರುವಿನೆಡೆಗೆ, ಲೋಕದ ತಾಯಿಯಿಂದ ನರರೆಡೆಗೆ- ಹರಿಯುವ ಅಮೃತ ದ್ರವವದು. ಜೀವಕ್ಕೂ ಬೆಲೆ ಕಟ್ಟಲಾಗದು, ಜೀವದ ಭಾವಕ್ಕೂ ಬೆಲೆ ಕಟ್ಟಲಾಗದು; ಅದರಂತೆಯೇ ಹಾಲೆಂಬ ವಾತ್ಸಲ್ಯದ ಹರಿವಿಗೂ ಬೆಲೆ ಕಟ್ಟಲಾಗದು!
ಬೆಲೆ ಕಟ್ಟಲಾಗದುದರ(ಹಾಲಿನ) ಋಣವನ್ನು ಬೆಲೆ ಕಟ್ಟಲಾಗುದುದನ್ನೇ(ರಕ್ತವನ್ನೇ) ಕೊಟ್ಟು ತೀರಿಸಬೇಕಲ್ಲವೇ!?
ಹಾಲೂ ದೈವದ್ರವವೇ; ಏಕೆಂದರೆ ನಿಜವಾದ ಹಾಲನ್ನು ಕೃತ್ರಿಮವಾಗಿ ತಯಾರಿಸಲು ಸಾಧ್ಯವೇ ಆಗದು! ತಾಯ್ತನದ ತವರಾದ ಗೋವಿನಲ್ಲಿ, ಕರುವಿಗಾಗಿ ದೇವರೇ ಸೃಜಿಸುವ ಕರುಣಾದ್ರವವದು! ಭಾವವಿರುವಲ್ಲಿ ಮಾತ್ರವೇ ಅದರ ಇರವು- ಹರಿವು! ಹಾಲು ಸಹಜವಾಗಿ ಹರಿಯಿತೆಂದರೆ ಅದರ ಹಿಂದೆ ಭಾವದ ಹರಿವಿದೆಯೆಂದೇ ಅರ್ಥ!
ನಮಗೆ ಭಾವದ್ರವವನ್ನು ಇತ್ತವಳಿಗೆ ಅನವರತ ಆಗುತ್ತಿರುವ ಇನ್ನಿಲ್ಲದ ಉಪದ್ರವವನ್ನು ಕಳೆಯಲು ಜೀವದ್ರವದ ಸಮರ್ಪಣೆ; ಅದುವೇ ಸ್ವರಕ್ತ~ಲಿಖಿತ ಅಭಯಾಕ್ಷರ.
ಹಾಲಿನ ಹೊಳೆ ಹರಿಸಿದವಳ ಹತ್ಯೆಯನ್ನು ತಡೆಯಲು ಹತ್ತು ಹನಿ ರಕ್ತದಲ್ಲಿ ಹೃದಯದ ಭಾವವನ್ನು ಬೆರೆಸಿ, ಬರೆದ ಬರಹವೇ ಸ್ವರಕ್ತ~ಲಿಖಿತ ಅಭಯಾಕ್ಷರ.
ಅಭಯಾಕ್ಷರವೆಂದರದು ಭಾರತೀಯರ ಹೃದಯಾಕ್ಷರ! ಗೋವಿಗೆ ನೋವಾಗಬಾರದೆಂಬ ಭಾರತವಾಸಿಗಳ ಆಂತರದ ನಿರಂತರ ಭಾವದ ಅಕ್ಷರಾಭಿವ್ಯಕ್ತಿಯೇ ಅಭಯಾಕ್ಷರ! ಗೋವೆಂದರದು ಭಾರತದ ಪ್ರಾಣ; ಭಾರತೀಯರ ಭಾವ! ಗೋಹತ್ಯೆಯೆಂದರದು ಭಾರತದ ಪ್ರಾಣದ ಮೇಲೆ, ಅಪ್ಪಟ ಭಾರತೀಯರ ಭಾವದ ಮೇಲೆ ಗೈವ ಪ್ರಹಾರ!
ಪ್ರಾಚೀನ ಭಾರತಕ್ಕೆ ಗೊತ್ತೇ ಇರದ ಗೋಹತ್ಯೆಯನ್ನು ಭಾರತದಲ್ಲಿ ವಿದೇಶಗಳ ವಿಧರ್ಮೀಯ ಆಕ್ರಮಣಕಾರಿಗಳು ಆರಂಭಿಸಿದರು.ಭಾರತೀಯರಿಗೆ, ಭಾರತದ ಆತ್ಮಕ್ಕೆ ನೋವುಂಟು ಮಾಡುವ ಒಂದೊಂದು ಸಂಗತಿಯೂ ಅವರಿಗೆ ಆಡಳಿತದ ನೀತಿಯೇ ಆಗಿತ್ತು. ಭಾರತದ ಸಂಸ್ಕೃತಿ~ಸಂಪತ್ತುಗಳೆರಡೂ ಗೋವುಗಳನ್ನು ಆಶ್ರಯಿಸಿದ್ದವು; ‘ಒಂದೇ ಕಲ್ಲಿಗೆ ಎರಡು ಹಕ್ಕಿ’ ಎಂಬಂತೆ ವಿದೇಶೀ ದುರಾಡಳಿತಗಾರರು ಗೋಹತ್ಯೆಯ ಮೂಲಕ ಭಾರತದ ಆತ್ಮ~ಪ್ರಾಣಗಳೆರಡನ್ನೂ ನಾಶಪಡಿಸಲೆಳಸಿದರು!
ದುರ್ದೈವದ ದುರ್ದೈವವೆಂದರೆ ಭಾರತದ ವೈರಿಗಳ ಆಡಳಿತದಲ್ಲಿ ಆರಂಭಗೊಂಡ ಗೋಹತ್ಯೆಯು ಭಾರತೀಯರ ಆಡಳಿತದಲ್ಲಿಯೂ ಮುಂದುವರಿದಿರುವುದು! ಅದು ಹಾಗಿರಲಿ, ಗೋವಧೆಯು ಪರಕೀಯರ ಆಡಳಿತದ ಸಮಯದಲ್ಲಿ ನಡೆದದ್ದಕ್ಕಿಂತ ಅದೆಷ್ಟೋ ಅಧಿಕ ಪ್ರಮಾಣದಲ್ಲಿ ಸ್ವಕೀಯರ ಆಡಳಿತದಲ್ಲಿ ನಡೆದಿದೆ ಎಂಬುದನ್ನು ಭಾವಿಸುವಾಗಲೂ, ಬರೆಯುವಾಗಲೂ ಎಲ್ಲಿಲ್ಲದ ವ್ಯಥೆಯಾಗುತ್ತದೆ!
ಈವರೆಗೆ ಭಾರತದಲ್ಲಿ ಹರಿದ ಗೋರಕ್ತವನ್ನು ಒಗ್ಗೂಡಿಸಿದರೆ ಅದು ಭಾರತದ ನಾಲ್ಕನೆಯ ಸಾಗರವೇ ಆದೀತು! ಪರಕೀಯರು ಈ ದೇಶದಲ್ಲಿ ತಿಂದ, ತಿನ್ನಿಸಿದ ಗೋಮಾಂಸವನ್ನು ರಾಶಿ ಹಾಕಿದರೆ ಅದು ಎರಡನೆಯ ಹಿಮಾಲಯವೇ ಆದೀತು!
ಭಾರತದಲ್ಲಿ ಈವರೆಗೆ ಕಟುಕರ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಗೋವುಗಳನ್ನು ಎಣಿಸಹೊರಟರೆ ಸಂಖ್ಯಾಶಾಸ್ತ್ರಕ್ಕೇ ತಲೆ ಸುತ್ತು ಬಂದೀತು!
ಸಹಿಸುವುದೆಂದರೆ ಎಲ್ಲಿಯವರೆಗೆ?? ಈ ಕಗ್ಗೊಲೆಯ ಕಾಂಡಕ್ಕೆ ಕೊನೆಯೇ ಇಲ್ಲವೇ?? ಈ ದುರಂತವು ಅಂತಗೊಳ್ಳದಿದ್ದರೆ ದೇಶ ನಾಶವಾದೀತು! ವಿಶ್ವವೇ ವಿಷವಾದೀತು!
ಗೋಹತ್ಯೆಯೆಂಬ ನಾಡಿನ ಪೀಡೆಯನ್ನು ಕೊನೆಗಾಣಿಸಲೆಂದೇ ಅಭಯಾಕ್ಷರದ ಅವತಾರವಾಯಿತು! ಪ್ರಜಾಪ್ರಭುತ್ವದಲ್ಲಿ -ಆ ಶಬ್ದವೇ ಸೂಚಿಸುವಂತೆ- ಪ್ರಜೆಗಳಿಗಿರುವ ಪರಮಾಧಿಕಾರವನ್ನು ಗೋವುಗಳ ಪಾಲಿನ ಅಭಯಚಕ್ರವನ್ನಾಗಿಸುವುದು ಅಭಯಾಕ್ಷರದ ಕಾರ್ಯನೀತಿ.
ಅಭಯಾಕ್ಷರವು ಗೋರಕ್ಷೆಯ ಮಹಾಸ್ತ್ರವಾದರೆ ಸ್ವರಕ್ತ~ಲಿಖಿತ ಅಭಯಾಕ್ಷರವು ಬ್ರಹ್ಮಾಸ್ತ್ರ! ಯಾವುದೇ ಒಬ್ಬ ಪ್ರಜೆಯ, ನ್ಯಾಯಬದ್ಧವಾದ ಒಂದೇ ಒಂದು ಅರ್ಜಿಯನ್ನು ಆಡಳಿತಾರೂಢರು ತಿರಸ್ಕರಿಸುವಂತಿಲ್ಲ; ಹಾಗಿರುವಾಗ ಅಸಂಖ್ಯ ಪ್ರಜೆಗಳು ತಮ್ಮ ಸ್ವರಕ್ತದಲ್ಲಿ ಬರೆದ, ಧರ್ಮಬದ್ಧವಾದ, ದಯಾಬದ್ಧವಾದ, ನ್ಯಾಯಬದ್ಧವಾದ, ಸಂವಿಧಾನಸೂಚಿತವಾದ ಅಸಂಖ್ಯ ಅರ್ಜಿಗಳನ್ನು ಅದು ಹೇಗೆ ತಿರಸ್ಕರಿಸುವರೋ ನೋಡೋಣ.
ಸ್ವಾರ್ಥಿ ಮನುಷ್ಯರು ಗೋಹತ್ಯೆಯಿಂದ ಹರಿಸಿದ ರಕ್ತ ಸಿಂಧುವಿನಷ್ಟು; ಸಾತ್ತ್ವಿಕ ಮನುಷ್ಯರು ಸ್ವರಕ್ತ~ಲಿಖಿತ ಅಭಯಾಕ್ಷರದ ದ್ವಾರಾ ಗೋರಕ್ಷೆಗಾಗಿ ಈಗ ಸಮರ್ಪಿಸುವ ರಕ್ತವು ಕೇವಲ ಹತ್ತು ಹನಿಯಷ್ಟು!
ಕಟುಕರ ಕರಾಳ ಹಸ್ತಗಳಲ್ಲಿ ಗೋವುಗಳು ಅನುಭವಿಸಿದ ನೋವು ಸಾವಿರ ರೌರವದಷ್ಟು; ಅಭಯಾಕ್ಷರಕ್ಕಾಗಿ ನಮ್ಮ ದೇಹದಿಂದ ಚುಚ್ಚುಗೊಳವೆಯ ಮೂಲಕ ಸಂಗ್ರಹಿಸುವಾಗ ಆಗುವ ನೋವು ಇರುವೆ ಕಚ್ಚಿದಷ್ಟು ಮಾತ್ರ!
ಇಷ್ಟೂ ಮಾಡಲಾಗದ ಹೇಡಿಗಳಿಗಿಂತ ಕೇಡಿಗಳೇ ಮೇಲಲ್ಲವೇ!?
ಬನ್ನಿ ಬಂಧುಗಳೇ, ಭುವಿಗೆ ಬಂದಿದ್ದು ಸಾರ್ಥಕವಾಗುವ ಒಂದೇ ಒಂದು ಕಾರ್ಯ ಮಾಡೋಣ; ಯಾರ ರಕ್ತವನ್ನೂ ಹರಿಸದೆ, ಯಾರ ಪ್ರಾಣವನ್ನೂ ಹೀರದೆ, ನಮ್ಮದೇ ರಕ್ತವನ್ನು ಸಾರ್ಥಕವಾಗಿ ಸಮರ್ಪಿಸಿ, ಗೋವುಗಳನ್ನು ಉಳಿಸೋಣ.
ಮುಗ್ಧತೆ~ಮಾತೃತ್ವಗಳು ಮೈವೆತ್ತ ಆ ಪುಣ್ಯಜೀವಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡೋಣ.
ಪ್ರಸ್ತುತಿ :
~*~
ಕ್ಲಿಷ್ಟ~ಸ್ಪಷ್ಟ:
- ಅನರ್ಘ್ಯ = ಬೆಲೆ ಕಟ್ಟಲಾಗದ
LokaLekha by @SriSamsthana SriSri RaghaveshwaraBharati MahaSwamiji
~*~
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
December 25, 2017 at 10:26 AM
ಹರೇರಾಮ. ಶ್ರೀ ಸಂಸ್ಥಾನದವರಿಂದ ಅನುಗ್ರಹಿಸಲ್ಪಟ್ಟ ಇಂದಿನ ಲೋಕ-ಲೇಖ ಓದುತ್ತಿದ್ದಂತೆ ಹೃದಯವನ್ನು ಮುಟ್ಟಿ, ಕುಟ್ಟಿ ಎಬ್ಬಿಸಿತಲ್ಲದೆ ಗೋವಿಗಾಗಿ ಕಣ್ಣು ಆರ್ದವವಾಗಿ ಹತ್ತು ಹನಿ ಸ್ವಂತ ರಕ್ತದಲ್ಲಿ ಅಭಯಾಕ್ಷರ ಬರೆಯಲೇ ಬೇಕೆಂಬ ತುಡಿತ ಪ್ರಭಲವಾಯಿತು.
ಬಹುಶಃ ಮಧುಮೇಹ ರೋಗಿಗಳಿಗೆ ಇದು ಔಷಧೀಯ ರಾಮಬಾಣವಾಗಲೂ ಬಹುದು.. ವಂದೇ ಗೋಮಾತರಂ.
December 25, 2017 at 1:20 PM
ರಕ್ತಪತ್ರಾರ್ಪಣೆಯ ಮೂಲಕ ಗೋಸಂರಕ್ಷಣೆಗಾಗಿ ಮತ್ತೊಂದು ಶಪಥ. ಬನ್ನಿ, ಕೈಜೋಡಿಸೋಣ ಕನ್ನಡದ ಬಂಧುಗಳೇ, ಭಾಷೆ, ಜಾತಿ, ಮತ ಬೇಧಗಳನ್ನು ಮರೆತು ಒಂದಾಗಿ ಗೋಸಂರಕ್ಷಣೆಯ ಜವಾಬ್ದಾರಿ ಹೊರೋಣ
December 26, 2017 at 8:43 AM
Hare Rama