ಅದು 2004ರ ನವಂಬರ್ 12; ದೇಶವೇ ದೀಪಾವಳಿಯ ಬೆಳಕಿನ ಹೋಳಿಯಲ್ಲಿ ಮೀಯುವ ದಿನ. ಆದರೆ, ಅದೇ ದಿನದ ಬೆಳಗಿನ ಜಾವವೇ ಸಿಡಿಮದ್ದಿನ ಸರದಂತೆ ಬಂದೆರಗಿತೊಂದು ದುರ್ವಾರ್ತೆ! ಕಾಂಚಿ~ಕಾಮಕೋಟಿ ಪೀಠಾಧಿಪತಿಗಳಾದ ಜಯೇಂದ್ರ ಸರಸ್ವತಿಗಳನ್ನು ಬಂಧಿಸಲಾಗಿತ್ತು!! ಒಂದು ಕ್ಷಣ ‘ಇದು ನಿಜವಾಗಿರಲಾರದು’ ಎಂದುಕೊಂಡೆವು; ಮತ್ತೊಂದು ಕ್ಷಣ ‘ಇದು ನಿಜವಾಗದಿರಲಿ’ ಎಂದು ದೇವರಲ್ಲಿ ಬೇಡಿಕೊಳ್ಳುವಂತಾಯಿತು. ನಿರ್ದಯವಾದ ನಿಜವೆಂದರೆ ಆ ದುರಂತವು ಘಟಿಸಿಯೇಬಿಟ್ಟಿತ್ತು! ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ಸರ್ವಹಿತೈಷಿ ಸಂತವರೇಣ್ಯರನ್ನು ಬಂಧಿಸಲಾಗಿತ್ತು. ಆದರೆ ‘ಜಯೇಂದ್ರ ಸರಸ್ವತಿಗಳು ಕೊಲೆ ಮಾಡಿಸಿದ್ದಾರೆ’ ಎಂಬ ಕ್ರೂರ ಮಿಥ್ಯೆಯನ್ನು ನಮ್ಮ ಮನಸ್ಸು ಸರ್ವಥಾ ಒಪ್ಪಿಕೊಳ್ಳಲಿಲ್ಲ! ಬಂಧಿಸುವವರು ಜಯೇಂದ್ರ ಸರಸ್ವತಿಗಳ ಶರೀರವನ್ನು ಬಂಧಿಸಬಹುದು; ಆದರೆ, ನಮ್ಮ – ನಮ್ಮಂಥವರ ಮನಸ್ಸನ್ನು ಬಂಧಿಸಲು ಸಾಧ್ಯವೇ!?
ಜಯೇಂದ್ರರ ವ್ಯಕ್ತಿತ್ವವನ್ನೊಮ್ಮೆ ಮನಸ್ಸಿಗೆ ತಂದುಕೊಂಡು, ಘಟನೆಯ ಲಭ್ಯ ವಿವರಗಳನ್ನು ಕೂಲಂಕಷವಾಗಿ ವಿವೇಚಿಸಿದಾಗ- ಕಾಂಚೀ ಮಠದ ವಿನಾಶಕ್ಕಾಗಿ ಹೆಣೆಯಲ್ಪಟ್ಟ ಷಡ್ಯಂತ್ರವಿದೆಂಬ ದೃಢ ನಿಶ್ಚಯಕ್ಕೆ ನಾವು ಬಂದೆವು. ಧರ್ಮದ ಮೇಲಿನ ಈ ದುರ್ಭರ ದೌರ್ಜನ್ಯವನ್ನು ಪ್ರತಿಭಟಿಸಿ ಎಲ್ಲಿಂದಲಾದರೂ ಕೂಗು ಆರಂಭವಾಗಲೇಬೇಕಿತ್ತು. ಅದೇ ಸಮಯದಲ್ಲಿ ಶೃಂಗೇರಿಯಲ್ಲಿ ಈ ಭಾಗದ ಶಂಕರಾಚಾರ್ಯ ಪೀಠಸ್ಥರುಗಳ ಸಮಾವೇಶವೊಂದು ಏರ್ಪಟ್ಟಿತ್ತು. ಒಂದು ವೇಳೆ ಅಲ್ಲಿ ಸೇರಿದ ಶಂಕರಾಚಾರ್ಯ ಪರಂಪರೆಯ ಗುರುಪೀಠಗಳು ಕಾಂಚೀ ಶಂಕರಾಚಾರ್ಯರ ಬಂಧನವನ್ನು ಉಗ್ರವಾಗಿ ಖಂಡಿಸದೇ ಇರಲಾರರು; ಆಗ ಸಮಾಜವು ಸಿಡಿದೇಳಬಹುದು; ಅನ್ಯ ಪೀಠಾಧಿಪತಿಗಳೂ ಸ್ವರವೆತ್ತಬಹುದು; ಸಾತ್ತ್ವಿಕ ಪ್ರತಿಭಟನೆಯ ಅಲೆಯೊಂದು ರಾಷ್ಟ್ರವನ್ನು ವ್ಯಾಪಿಸಬಹುದು; ಜಯೇಂದ್ರ ಸರಸ್ವತಿಗಳಿಗಾಗುತ್ತಿರುವ ಘೋರ ಅನ್ಯಾಯಕ್ಕೆ ತಡೆ ಬೀಳಬಹುದೆಂಬ ದೊಡ್ಡ ನಿರೀಕ್ಷೆಯಲ್ಲಿ ನಾವಿದ್ದೆವು!
ಆದರೆ ಅಂದು ಅಲ್ಲಿ ನಡೆದದ್ದೇ ಬೇರೆ! ಬಹಿರಂಗ ಸಭೆಯು ನಡೆಯುತ್ತಿರುವ ಹೊತ್ತಿನಲ್ಲಿಯೇ “ಕಾಂಚಿಯವರ ಪರವಾಗಿ ಯಾರೂ ಮಾತನಾಡಬಾರದು!” ಎಂಬ ಸೂಚನೆಯೊಂದು ನಮಗೆ ಬಂದಿತು! ಸಹೋದರ-ಪೀಠವೊಂದು ಅನ್ಯಾಯವಾಗಿ ಆಕ್ರಮಣಕ್ಕೊಳಗಾಗುತ್ತಿರುವಾಗ, ಅದರ ಪರವಾಗಿ ದನಿ ಎತ್ತಬಾರದೆಂಬ ಸೂಚನೆ ನಮಗೆ ಪಥ್ಯವೆನಿಸಲಿಲ್ಲ; ಆ ಸೂಚನೆಯು ಪಾಲನಾಯೋಗ್ಯವೆಂದೂ ಅನ್ನಿಸಲಿಲ್ಲ. ಅಷ್ಟರಲ್ಲಿ, ಎಲ್ಲ ಪೀಠಾಧಿಪತಿಗಳಿಗೂ ಈ ಸೂಚನೆಯ ರವಾನೆಯಾಗಿದೆಯೆಂದು ನಮಗೆ ತಿಳಿಸಲಾಯಿತು; ಅದರ ಪರಿಣಾಮವೂ ಸಭೆಯಲ್ಲಿ ಗೋಚರಿಸಿತು; ಯಾರೊಬ್ಬರೂ ಕಾಂಚಿಯ ಪರವಾಗಿ ಸ್ವರವೆತ್ತಲಿಲ್ಲ! ಯಾರೂ ಸ್ವರವೆತ್ತದಿದ್ದರೂ ಯಾರು ಸ್ವರವೆತ್ತಲೇಬೇಕಿತ್ತೋ -ವೇದಿಕೆಯ ಮೇಲೆ ವಿರಾಜಮಾನರಾಗಿದ್ದರೂ- ಅವರೂ ಸ್ವರವೆತ್ತಲಿಲ್ಲ; ಆದರೆ ನಮಗೆ ಸ್ವರವೆತ್ತದಿರಲು ಸಾಧ್ಯವಾಗಲಿಲ್ಲ!
ನಮ್ಮ ಮಾತಿನ ಸರದಿ ಬಂದಾಗ ಕಾಂಚಿಯವರ ಬಂಧನವನ್ನು ಘಂಟಾಘೋಷವಾಗಿ ಖಂಡಿಸಿದೆವು; “ಕಾವಿಯೆಂದರದು ಬೆಂಕಿ; ಕಾವಿಗೆ ಕೈಯಿಕ್ಕಿ ಭಸ್ಮವಾಗದಿರಿ!” ಎಂದು ರಾಜಕಾರಣಿಗಳನ್ನು ಎಚ್ಚರಿಸಿದೆವು. ಸಭೆಯು ಅದ್ಭುತವಾಗಿ ಸ್ಪಂದಿಸಿತು; ಬಂಧನದ ಖಂಡನೆಗೆ ಅಲ್ಲಿ ಸೇರಿದ್ದ ಜನಸ್ತೋಮದ ಒಕ್ಕೊರಲ ಬೆಂಬಲ ವ್ಯಕ್ತವಾಯಿತು! ಆದರೆ, ಸೂಚನೆಯ ಹಿಂದಿನ ಶಕುನಿ-ಶಕ್ತಿಗಳಿಗೆ ಅಪಾರ ಅಸಮಾಧಾನವುಂಟಾಯಿತು; ಪರಿಣಾಮವಾಗಿ ಅಂದಿನಿಂದ ನಾವೇ ಅವರ ‘ಟಾರ್ಗೆಟ್’ ಆದೆವು!
#LokaLekha by @SriSamsthana SriSri RaghaveshwaraBharati MahaSwamiji
ಕಲ್ಪಿಸಿಕೊಳ್ಳಿ: ಒಮ್ಮೆ ಅಂದು ಸೇರಿದ ಶಂಕರಾಚಾರ್ಯ ಪೀಠಸ್ಥರ ಸಮೂಹವು ಜಯೇಂದ್ರಸರಸ್ವತಿಗಳ ಮೇಲಾಗುತ್ತಿದ್ದ ದೌರ್ಜನ್ಯವನ್ನು ಒಕ್ಕೊರಲಿನಿಂದ ಖಂಡಿಸಿದ್ದರೆ ಮುಂದಿನ ಕಥೆಯೇ ಬೇರೆಯಾಗುತ್ತಿತ್ತು! ಸಂತಸ್ತೋಮದಲ್ಲಿ ಮತ್ತು ಭಕ್ತಸ್ತೋಮದಲ್ಲಿ ಅದು ಪ್ರತಿಭಟನೆಯ ಕಿಚ್ಚನ್ನೇ ಹಚ್ಚುತ್ತಿತ್ತು! ಸಂತರು ಒಗ್ಗಟ್ಟಾಗಿ ಎದ್ದು ನಿಂತರೆ ಅವರನ್ನು ತಡೆಯುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ! ಭೋರ್ಗರೆಯುವ ಕಾವಿಯ ಕಡಲಿನ ಸುನಾಮಿಯಲ್ಲಿ ಷಡ್ಯಂತ್ರದ ಸೂತ್ರಧಾರರಾದ ದುಷ್ಟ ರಾಜಕಾರಣಿಗಳು ಕೊಚ್ಚಿಹೋಗುತ್ತಿದ್ದರು! ಗುರುಶಕ್ತಿಯ ಪ್ರೇರಣೆಯಿಂದ ಎದ್ದು ನಿಂತ ಜನಶಕ್ತಿಯು ಎಲ್ಲ ದುಷ್ಟ ಶಕ್ತಿಗಳ ಉಚ್ಚಾಟನೆಗೈಯುತ್ತಿತ್ತು!
ಆದರೇನು ಮಾಡೋಣ, ‘ಯಾಕೆ ಮೂಕನಾದ್ಯೋ ಗುರುವೆ ನೀ?’ ಎಂದು ಒಬ್ಬೊಬ್ಬರನ್ನೂ ಕೇಳುವ ಪರಿಸ್ಥಿತಿ ಅಂದಿನದಾಗಿಹೋಯಿತು!
ಈ ಹಿನ್ನೆಲೆಯಲ್ಲಿಯೇ ಲೇಖನದ ಶೀರ್ಷಿಕೆ- “ಜಯೇಂದ್ರ ಸರಸ್ವತಿಗಳಿಗೆ ನಾವು- ಸಮಯುಗದ ಯತಿಗಳು ಏನು ಕೊಟ್ಟೆವು?’ ಎಂದು.
#LokaLekha by @SriSamsthana SriSri RaghaveshwaraBharati MahaSwamiji
ಜಯೇಂದ್ರ ಸರಸ್ವತಿಗಳ ದೀಕ್ಷಾಗುರುವಾಗಿದ್ದ ಕಾಂಚಿಯ ಪರಮಾಚಾರ್ಯರು ‘ನೆಲದಲ್ಲಿ ನಡೆದಾಡಿದ ದೇವರು’ ಎಂದೇ ನಮ್ಮ ದೃಢ ಭಾವ; ಧರ್ಮ-ಅಧ್ಯಾತ್ಮಗಳ ಸಾಧನೆ~ಬೋಧನೆಗಳ ನೇರದಲ್ಲಿ ಈಚಿನ ಯಾವ ಪೀಠಾಧಿಪತಿಗಳನ್ನೂ ಅವರ ತಕ್ಕಡಿಯಲ್ಲಿ ತೂಗಲಾಗದು! ಅವರ ಮುಂದುವರಿಕೆಯಾದ ಜಯೇಂದ್ರ ಸರಸ್ವತಿಗಳು ಧಾರ್ಮಿಕ-ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಶೃಂಗ-ತುಂಗವನ್ನು ತಲುಪಿದ್ದ ಕಾಂಚಿ~ಕಾಮಕೋಟಿ ಪೀಠದ ಸತ್ಕಾರ್ಯಗಳ ಸರಣಿಯನ್ನು ಸಾಮಾಜಿಕ ಮುಖದಲ್ಲಿ ಮುನ್ನಡೆಸಿದರು. ವಿಶ್ವವಿದ್ಯಾಲಯದಿಂದ ಪ್ರಾರಂಭಿಸಿ ವಿಶ್ವಕ್ಕೇ ಮಾದರಿಯಾಗಬಲ್ಲ ಆಸ್ಪತ್ರೆಗಳವರೆಗೆ, ವೇದಪಾಠಶಾಲೆಗಳ ಸರಣಿಯಿಂದ ಪ್ರಾರಂಭಿಸಿ, ಅಯೋಧ್ಯೆಯ ರಾಮಮಂದಿರ ವಿವಾದದ ಮಧ್ಯಸ್ಥಿಕೆಯವರೆಗೆ- ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಗಳು ಪರಮಾಶ್ಚರ್ಯವನ್ನು ಮೂಡಿಸುವಂಥಹದು!
ಹೀಗಿರುವಾಗ ಅವರ ಮೇಲೆ ಆರೋಪವು ಹೊರಿಸಲ್ಪಟ್ಟರೆ ಅದರ ಪರಾಮರ್ಶೆಯು ‘ಜಯೇಂದ್ರ ಸರಸ್ವತಿಗಳು ಒಳ್ಳೆಯವರು’ ಎನ್ನುವಲ್ಲಿಂದಲೇ ಆರಂಭವಾಗಬೇಕು; ಆವರೆಗಿನ ಜಯೇಂದ್ರ ಸರಸ್ವತಿಗಳವರ ಚರಿತ್ರೆಯು ಅದನ್ನೇ ಹೇಳುತ್ತದೆ; ಅವರು ಸಮಾಜಕ್ಕೆ ಸತತವಾಗಿ ಒಳಿತುಗೈಯುತ್ತಲೇ ಬಂದಿರುವುದು ಸರ್ವವೇದ್ಯ; ಅಲ್ಲೆಲ್ಲಿಯೂ ಕೆಡುಕಿನ ಸುಳಿವಿಲ್ಲ! ಆದುದರಿಂದ ‘ಅವರು ಒಳ್ಳೆಯವರು’ ಎನ್ನುವಲ್ಲಿಂದಲೇ ವಿಮರ್ಶೆಯು ಪ್ರಾರಂಭವಾಗಬೇಕು; ಕೆಡುಕು ಮಾಡಿದ್ದರ ಕುರಿತು ಆರೋಪಿಸುವವರು ಪ್ರಬಲವಾದ ಸಾಕ್ಷ್ಯಾಧಾರಗಳನ್ನು ನೀಡಬೇಕು. ಇದು ನ್ಯಾಯವಾದ ಕ್ರಮ.#LokaLekha by @SriSamsthana SriSri RaghaveshwaraBharati MahaSwamiji
ಆದರೆ ಜಯೇಂದ್ರಸರಸ್ವತಿಗಳ ವಿಷಯದಲ್ಲಿ ಹೀಗಾಗಲೇ ಇಲ್ಲ! ಆರೋಪವು ಬಂದದ್ದೇ ತಡ, ಅದನ್ನೇ ಕಾಯುತ್ತಿರುವಂತೆ ಪೋಲೀಸರು ಶ್ರೀಗಳನ್ನು ಅಪರಾಧಿಯೆಂಬಂತೆ ನಡೆಸಿಕೊಂಡರು; ಮಾಧ್ಯಮಗಳು ಅಪರಾಧಿಯೆಂದೇ ಬಿಂಬಿಸಿದವು; ಅದಲ್ಲವೆಂದು ಸಾಬೀತು ಪಡಿಸುವ ಹೊಣೆಗಾರಿಕೆಯು ಜಯೇಂದ್ರಸರಸ್ವತಿಗಳ ಹೆಗಲೇರಿತು.#LokaLekha by @SriSamsthana SriSri RaghaveshwaraBharati MahaSwamiji
ಯಮಜಾಲವ ಹೋಲುವ ದೇಶದ ಕಾನೂನು ವ್ಯವಸ್ಥೆಯ ನಡುವಲ್ಲಿ, ನರಕದ ನೋವಿನ ನವ ವರ್ಷಗಳ ಬಳಿಕ ಕಾಂಚಿಯ ಪೀಠಾಧಿಪತಿಗಳು ತಮ್ಮ ನಿರ್ದೋಷಿತ್ವವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಿದರು; ಆದರೆ ಮಾಧ್ಯಮಗಳು ಸಮಾಜಕ್ಕೆ ಅದನ್ನು ಸಮರ್ಪಕವಾಗಿ ಹೇಳಲೂ ಇಲ್ಲ; ನಿರಪರಾಧಿ ಸಂತನ ವಿಷಯದಲ್ಲಿ ತಾವೆಸಗಿದ ಅಕ್ಷಮ್ಯ ಅಪರಾಧಕ್ಕೆ ಪೋಲೀಸರು-ಅಧಿಕಾರಸ್ಥರು ಪಶ್ಚಾತ್ತಾಪ ಪಡಲೂ ಇಲ್ಲ! ಯಾವೊಂದು ದೋಷವೂ ಇಲ್ಲದೆ ಬಗೆಬಗೆಯ ನಿಂದೆ-ಕ್ಲೇಶಗಳಿಗೆ ಒಳಗಾದ ಜಯೇಂದ್ರ ಸರಸ್ವತಿಗಳು ಮತ್ತೆ ಮೊದಲಿನಂತಾಗಲೇ ಇಲ್ಲ!
ಶರಶಯ್ಯೆಯ ಶಾಂತನವನಂತೆ ಸಮಾಜಕಂಟಕರು ಚುಚ್ಚಿದ ಮಿಥ್ಯಾರೋಪದ ಮುಳ್ಳುಗಳನ್ನು ಮೈತುಂಬ ಚುಚ್ಚಿಕೊಂಡು, ನೋವುಗಳೆಲ್ಲವನ್ನೂ ನುಂಗಿಕೊಂಡು, ತಾವು ಮಾತ್ರ ಹೂವುಗಳನ್ನೇ ಸಕಲರಿಗೂ ನೀಡಿದ ಜಯೇಂದ್ರ ಸರಸ್ವತಿಗಳು ಇಂದು ಬ್ರಹ್ಮಲೀನರಾಗಿದ್ದಾರೆ; ನಾವುಗಳು ನೀಡಿದ ನೋವುಗಳಿಂದ ಅವರು ಮುಕ್ತರಾಗಿದ್ದಾರೆ; ಸನ್ಯಾಸಿಗಳು ಸಹಜವಾಗಿಯೇ ಸಾವನ್ನು ನಗುನಗುತ್ತಲೇ ಸ್ವಾಗತಿಸುವವರು; ಆದುದರಿಂದ ದೇಹಾಂತವು ಜಯೇಂದ್ರ ಸರಸ್ವತಿಗಳಿಗೆ ಹಿನ್ನಡೆಯಲ್ಲ!
ಆದರೆ, ದೇಶಕ್ಕೆ??#LokaLekha by @SriSamsthana SriSri RaghaveshwaraBharati MahaSwamiji
ಸಮಾಜಕಲ್ಯಾಣದ ಕಾರ್ಯಗಳಲ್ಲಿ ಸಮಯುಗದ ಸಂತರಲ್ಲಿ ಅಗ್ರಮಾನ್ಯರೆನಿಸಿದ ಮಹಾಸಂತರೋರ್ವರ ನಿರ್ಗಮನವೆಂದರೆ ಸಮಾಜದ ಪಾಲಿಗೆ ಅದು ಭಾಗ್ಯರವಿಯ ಅಸ್ತಮಾನ! ದೇಶದ ಪಾಲಿಗದು ದೌರ್ಭಾಗ್ಯದ ದುರ್ದಿನ!
ಮರಣವೆಂಬ ಪೂರ್ಣವಿರಾಮದ ಹೊರತಾಗಿ ಜೀವನದ ಪಂಕ್ತಿಯು ಪೂರ್ಣವಾಗುವುದೇ ಇಲ್ಲ! ಸಂತರಿಗೆ ಮರಣವೆಂಬುದಿಲ್ಲ; ಇರುವುದು ಮುಕ್ತಿಯೊಂದೇ! ಆದುದರಿಂದ ಅವರ ಅಗಲಿಕೆಗಿಂತ ನಮಗೆ ಅಧಿಕವಾದ ವ್ಯಥೆಯನ್ನುಂಟುಮಾಡುವುದು ಬದುಕಿರುವಾಗ ಅವರನ್ನು ನಡೆಸಿಕೊಂಡ ರೀತಿ! ಆ ಕೊರತೆಯನ್ನು ತುಂಬಲು ಇನ್ನಾವ ಒರತೆಯಿಂದಲೂ ಸಾಧ್ಯವಿಲ್ಲ! ಅದು ತಿದ್ದಲಾರದ ತಪ್ಪಾಗಿ ದೇಶದ ಚರಿತ್ರೆಯಲ್ಲಿ ದಾಖಲಾಗುತ್ತದೆ. ಇಂದು ಅವರನ್ನು ಹಾಡಿಹೊಗಳುತ್ತಿರುವವರಲ್ಲಿ ಅರ್ಧಾಂಶದಷ್ಟಾದರೂ ಜನರು ಅಂದು ಅವರ ಪರವಾಗಿ ಸ್ವರವೆತ್ತಿದ್ದರೆ…?
ಕೊನೆಯಲ್ಲಿ ಸರ್ವಶಕ್ತನಲ್ಲೊಂದು ಜೀವದಾಳದ ಪ್ರಾರ್ಥನೆ:#LokaLekha by @SriSamsthana SriSri RaghaveshwaraBharati MahaSwamiji
ಜಯೇಂದ್ರ ಸರಸ್ವತಿಗಳ ತೆರನಾದ ಜಗನ್ಮಂಗಲಕಾರಿಗಳನ್ನು ಜಗತ್ತಿಗೆ ಅವಶ್ಯವಾಗಿ ಕಳುಹಿಕೊಡು;
ಆದರೆ ಅದಕ್ಕಿಂತ ಮೊದಲು ಅವರ ನಿಜವನ್ನು ನೋಡಬಲ್ಲ, ಅವರನ್ನು ಸಮೀಚೀನವಾಗಿ ನೋಡಿಕೊಳ್ಳುವಲ್ಲಿ ನೆರವೀಯಬಲ್ಲ ಕಣ್ಣುಗಳನ್ನು ಸಹಜೀವಿಗಳಿಗೆ ಕರುಣಿಸು…
~*~
ತಿಳಿವು~ಸುಳಿವು:
- ಕಾಂಚಿ ಶ್ರೀಪೀಠ ಹಾಗೂ ಶ್ರೀರಾಮಚಂದ್ರಾಪುರ ಪೀಠಗಳು ಉತ್ತಮ ಬಾಂಧವ್ಯವನ್ನು ಹೊಂದಿವೆ. ದಿನಾಂಕ 6 ನವೆಂಬರ್ 1998 ರಂದು ಕಾಂಚಿ ಶ್ರೀಗಳವರು ಮುಜುಂಗಾವಿನ ಶ್ರೀ ಭಾರತೀ ಸ್ವಾಸ್ಥ್ಯಮಂದಿರಕ್ಕೆ ಚಿತ್ತೈಸಿದ್ದಾಗ:
- ಶ್ರೀಶ್ರೀ ಜಯೇಂದ್ರಸರಸ್ವತಿಗಳವರ ಮೇಲೆ ಆರೋಪವಿದ್ದಾಗ ಹಲವಾರು ಘಂಟೆಗಳಷ್ಟು ಸಮಯ ಸುದ್ದಿ ಬಿತ್ತರಿಸಿದ ವಾಹಿನಿಗಳು, ನ್ಯಾಯಾಲಯದಲ್ಲಿ ಆರೋಪ ಮುಕ್ತರಾದ ಸುದ್ದಿಯನ್ನು ತೋರಿಸುವಲ್ಲಿ ಕೊಟ್ಟ ಪ್ರಾಮುಖ್ಯವೇನು – ಈ ಕೆಳಗಿನ ಪ್ರಸ್ತುತಿಯನ್ನು ಗಮನಿಸಿ:
(ಕೃಪೆ: HinduismNow.ORG Link)
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
March 5, 2018 at 3:58 PM
Andre kavi hakidavare ee samajadalli target alva.. Kavi halodrallu 2 vidha ede.. Ond manasika vairagyadinda kavi hakod.. Ennond kavi Bechage hodidu kolluvad.. Aste
March 5, 2018 at 8:40 PM
ಈ ಸತ್ಯವನ್ನು ಇಷ್ಟು ದಿನವೂ ಹೃದಯಾಂತರಾಳದಲ್ಲಿ ಬಚ್ಚಿಟ್ಟು ಕೊರಗಿದಿರಲ್ಲಾ ಗುರುವೇ????????????????
March 6, 2018 at 10:11 AM
ಹೋ, ಸಂತ ಸಮಿತಿಯಿಂದ ನಮ್ಮ ಗುರುಗಳನ್ನು ಹೊರಗಿಡುವುದಕ್ಕೆ ಇದು ಕಾರಣ, ಇದೇ ಕಾರಣ. ಅನ್ಯಾಯವನ್ನು ಅನ್ಯಾಯ ಎಂದು ಒಪ್ಪಿಕೊಳ್ಳದೇ ಮತ್ತು ಅನ್ಯಾಯ ಮಾಡಿದ ವ್ಯವಸ್ಥೆ ವಿರುದ್ಧ ಪ್ರತಿಭಟಿಸದೇ ಇರುವುದು ತಪ್ಪು ಎಂದು ತಿಳಿದವರಿಗೂ ತಿಳಿಯದೇ ಹೋಯಿತಲ್ಲಾ ? ಹೇ ರಾಮ್!