ಇದು ವ್ಯಕ್ತಿ ಸಂತೋಷವಲ್ಲ.

ಇದು ಮನೆಯ ಸಂಭ್ರಮವಲ್ಲ.

ಇದು ಊರ ಹಬ್ಬವಲ್ಲ.

ಇದು ರಾಜ್ಯೋತ್ಸವ

ಸಮಸ್ತ ಕನ್ನಡ ನಾಡಿನ ಮಹೋತ್ಸವ

ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು.

ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ.

ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ…

ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ…

“ನಾನು”ವಿನ ಸ್ಥಾನದಲ್ಲಿ “ನಾವು” ಪ್ರತಿಷ್ಠೆಗೊಂಡರೆ…

ನನ್ನವರ ಸುಖಃ ದುಖಃಗಳು ನನ್ನಲ್ಲಿ ಪ್ರತಿಫಲಿತವಾಗುತ್ತದೆ.

ಆಗ…

ನನ್ನವರ ಸುಖಃ ನನ್ನ ಮುಖವನ್ನರಳಿಸುತ್ತದೆ.

ನನ್ನವರ ದುಖಃ ನನ್ನಲ್ಲಿ ಕಣ್ಣೀರಾಗಿ ಹರಿಯುತ್ತದೆ.

ನಮ್ಮ ಆತ್ಮ ವಿಸ್ತರಿಸಬೇಕು.

ಈ ಧರೆಯಲ್ಲಿ ನಮ್ಮ ಒಡನಾಡಿಗಳಾಗಲು ಅದೆಷ್ಟು ಜೀವರಾಶಿಗಳನ್ನು ಭಗವಂತ ಕಳುಹಿಸಿಕೊಟ್ಟಿದ್ದಾನೆ!!!

ಅವರೆಲ್ಲರಲ್ಲಿ ನಮ್ಮ ಆತ್ಮ ಹಬ್ಬಿ ಹರಡಿದರೆ…

ಸುತ್ತ ಮುತ್ತಲಿನ ಎಲ್ಲರ ಸುಖಃ ದುಖಃಗಳು ನಮ್ಮೆದೆಯ ಮೀಟುವಂತಿದ್ದರೆ…

ಅದೇ ಅದ್ವೈತವಲ್ಲವೇ?

ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಖಿತಃ |
ಉತ್ಸವೇ ಪರಿಸಂಪ್ರಾಪ್ತೇ
ಪಿತೇವ ಪರಿತುಷ್ಯತಿ ||– ವಾಲ್ಮೀಕಿ ರಾಮಾಯಣ

ತನ್ನ ಪ್ರಜೆಗಳ ದುಖಃಕ್ಕೆ ಕಂಬನಿ ಮಿಡಿಯುವ, ಅವರ ಸಂತಸದಲ್ಲಿ ಹೆತ್ತ ತಂದೆಯಂತೆ ಹಿರಿ ಹಿರಿ ಹಿಗ್ಗುವ ಶ್ರೀರಾಮ…
ವನವಾಸದ ಪಥದಲ್ಲಿ ತನ್ನೆಡೆಗೆ ಸಾಗಿ ಬಂದ ಶ್ರೀರಾಮನ ಹಸಿವಿಂಗಿಸಲು ಗುಹ ಔತಣವೀಯ ಬಂದರೆ…
ತನ್ನನ್ನು ಹೊತ್ತು ತಂದ ಕುದುರೆಗಳ ಹೊಟ್ಟೆ ತುಂಬಿಸಿ ಅದರಲ್ಲೇ ತೃಪ್ತನಾದ ಶ್ರೀರಾಮ…

ದ್ರೌಪದಿಯ ಅಕ್ಷಯ ಪಾತ್ರೆಯ ಒಂದಗಳು ಶ್ರೀಕೃಷ್ಣನ ಉದರ ಸೇರಿದರೆ ದೂರ್ವಾಸರು ಮತ್ತು ಅವರ ಶಿಷ್ಯರಿಗೆ ತೇಗು ಬರಬೇಕೇ?…

ನಾನು ನಾವಾಗಲಿ.

ನಾವು ನಾಡಾಗಲಿ.

ನಾನು – ನಾವು – ನಾಡುಗಳ ಪದೋನ್ನತಿಯೇ ನಿಜವಾದ ರಾಜ್ಯೋತ್ಸವ.

Facebook Comments Box