ಒಮ್ಮೊಮ್ಮೆ ಪ್ರಪಂಚವನ್ನೇ ಸುಟ್ಟುರುಹುವಷ್ಟು ಸಿಟ್ಟು ಬರುವುದುಂಟು; ಆದರೆ ಆ ಸಿಟ್ಟನ್ನು ಯಾರಮೇಲೆ ತೋರಿಸಬೇಕೋ, ಅವರು ಎದುರಿಲ್ಲದಿದ್ದರೆ ಮಾಡುವುದೇನು? ಕೋಪಪಾತ್ರರು ಎದುರಿಲ್ಲದೇ, ಅದೇ ಸಮಯದಲ್ಲಿ ಅತ್ಯಂತ ಪ್ರೀತಿಪಾತ್ರರು ಎದುರಿದ್ದರೆ ಭುಗಿಲೇಳುವ ಬೆಂಕಿಯ ಮೇಲೆ ಹಿಮ ಚೆಲ್ಲಿದಂತಾಗದೇ?

ಅದಾಯಿತು ವಿಭಾಂಡಕರ ಸ್ಥಿತಿ!

‘ಸ್ತ್ರೀ’ ಎಂದರೆ ಏನೆಂದೇ ಅರಿಯದಂತೆ ತಾನು ಬಹುಕಷ್ಟದಲ್ಲಿ ಬೆಳೆಸಿದ ಮಗನನ್ನು ಕ್ಷಣದಲ್ಲಿ ಮೋಡಿ ಮಾಡಿದ ಮಾಯಾಂಗನೆಯ ಮೇಲೆ ಮಿತಿಮೀರಿದ ಕೋಪ; ಆದರೆ ಆಕೆ ಎದುರಿಲ್ಲ! ಅಮಾಯಕನಾದ, ಅತಿಶಯ ವಾತ್ಸಲ್ಯಪಾತ್ರನಾದ ತನ್ನ ಹೃದಯಸಂಜಾತನು ಕಣ್ಮುಂದಿದ್ದಾನೆ; ಕೋಪವನ್ನು ತೋರಲು, ನಡೆದ ಘಟನೆಯಲ್ಲಿ ಅವನ ತಪ್ಪೇನೂ ಇಲ್ಲ; ಪುತ್ರವಾತ್ಸಲ್ಯ ಬೇರೆ!

ವಿಭಾಂಡಕರೊಳಗಿನ ಮಹಾಕ್ರೋಧಕ್ಕೆ ಹೊರಬರಲು ಅಲ್ಲಿ ಎಡೆಯೇ ಇಲ್ಲ. ಏಕೆಂದರೆ ಮೊದಲ ಕರ್ತವ್ಯವಾಗಿ, ಕದಡಿದ ಮಗನ ಮನವನ್ನು ಮೊದಲಿನಂತಾಗಿಸಬೇಕಿದೆ. ಅವರ ಮುಂದಿದ್ದ ಪ್ರಶ್ನೆ; ಸ್ತ್ರೀ ಎಂದರೆ ಏನೆಂದೇ ಅರಿಯದವನನ್ನು ಏನೆಂದು ಮನವರಿಕೆ ಮಾಡುವುದು? ಬಾಹ್ಯಪ್ರಪಂಚದ ಕುರಿತು ಏನೊಂದೂ ತಿಳಿಯದಂತೆ ಮಗನನ್ನು ಬೆಳೆಸಿದುದೇ ತೊಡಕಾಯಿತೇನೋ ಎಂದು ಆ ತಂದೆಯು ಚಿಂತಿಸುವಂತಾಯಿತು. ಮುಗ್ಧತೆಯಿರುವಲ್ಲಿ ಮೋಸದ ಸಾಧ್ಯತೆಯೂ ಅಧಿಕವಲ್ಲವೇ?

ಕ್ಷಣ ಚಿಂತಿಸಿದ ವಿಭಾಂಡಕರು, ಈಗಲೂ ಪುಟ್ಟ ಮಗುವಿನ ಮನವನ್ನು ಹೊಂದಿರುವ ತನ್ನ ಮಗನನ್ನು ಮಾಯಾಂಗನೆಯ ಮೋಡಿಯಿಂದ ಹೊರತರಲು ಗುಮ್ಮನನ್ನು ಕರೆದರು!

ತನ್ನ ಮಗನಿಗೆ ಅವರು ಏನೆಂದರು ಗೊತ್ತೇ?

“ರಮ್ಯರೂಪವ ಧರಿಸಿ ರಾಕ್ಷಸರು ಬರುವರು ಮಗೂ! ಅವರು ತಪಸ್ವಿಗಳ ತಲೆ ತಿರುಗಿಸುವರು; ನೆಲೆ ತಪ್ಪಿಸುವರು‌! ಅವರೆಡೆ ನೋಡಕೂಡದು; ಅವರೊಡನೆ ಮಾತಾಡಕೂಡದು; ಒಡನಾಡಕೂಡದು. ಬೆರಳೂರಲು ನೆಲ ಕೊಟ್ಟರೆ ತಳವೂರಿ, ತಪಸ್ಸಿನ ತಳಪಾಯವನ್ನೇ ಕಳೆದುಬಿಡುವರು ಅವರು. ಅಂಥವರು ತೊಡುವ- ಕೊಡುವ, ಪರಿಮಳ ಬೀರುವ ಹೂವುಗಳು ವಿಷವೂಡುವ ಹಾವುಗಳು; ಕುಡಿದವರನ್ನು ಕೊಚ್ಚೆಗೇ ಕೊಚ್ಚೊಯ್ಯುವ ಆ ಪೇಯಗಳು ಮುನಿಗಳಿಗೆ ಅಪೇಯಗಳು; ರುಚಿರುಚಿಯ ಆ ಖಾದ್ಯಗಳು ತಪಸ್ಸಿನ ಮೇಲೆ ನಡೆಸಿದ ಕುಚೋದ್ಯಗಳು; ಝಗಮಗಿಸುವ ಆ ವಸ್ತ್ರಜಾಲವೆಂದರೆ ಅದು ಮಾಯಾಜಾಲ!
ತಪಸ್ಸಿದ್ಧಿಯನ್ನು ಸಂಪ್ರಾರ್ಥಿಸುವವನು ಕೌತುಕದ ರೂಪ ಧರಿಸಿ ಬರುವ ಈ ಕೇಡುಗಳ ಗಾಳಿಯೂ ಸೋಕದಂತಿರುವುದು ಕ್ಷೇಮ…”

ವಿಭಾಂಡಕರ ಈ ಮಾತುಗಳನ್ನು ಅವಧರಿಸುವಾಗ ಮಗುವಿಗೆ ಒಮ್ಮೆ ಗುಮ್ಮನ ತೋರಿಸುವ ಅಮ್ಮನ ನೆನಪಾಗದಿರದೇ?

ಆದರೆ ಆವರೆಗೆ ತಂದೆಯು ಹೇಳಿದುದೆಲ್ಲವನ್ನು ವೇದವಾಕ್ಯತುಲ್ಯವಾಗಿ ನಂಬಿಕೊಂಡಿದ್ದ ಋಷ್ಯಶೃಂಗನಿಗೆ ಅದೇಕೋ, ಈ ಮಾತುಗಳು ಮಾತ್ರ ಮನವರಿಕೆಯಾಗಲೇ ಇಲ್ಲ; ಅಂದು ಬಂದ ಆನಂದದ ಬ್ರಹ್ಮಚಾರಿಯಲ್ಲಿ ಆತನಿಗೆ ಒಂದಿನಿತೂ ಕೇಡು ಕಾಣಲಿಲ್ಲ. ಆ ವ್ಯಕ್ತಿಯನ್ನು ಕಣ್ಣಾರೆ ಕಂಡ ತನಗೆ ಕಾಣದ ಕೇಡು, ಕಾಣದ ತನ್ನ ತಂದೆಗೆ ಹೇಗೆ ಕಂಡಿತೋ ಅರ್ಥವಾಗಲೇ ಇಲ್ಲ. “ಹಾಗಲ್ಲವೇ ಅಲ್ಲ; ಅವನು ನೀನಂದುಕೊಂಡಹಾಗಿಲ್ಲವೇ ಇಲ್ಲ!” ಎಂದು ಅವನ ಅಂತರಂಗವು ಕೂಗಿ ಹೇಳುತ್ತಿತ್ತು.

ಅತ್ತ, ಹಾಲುಮನದ ಮಗನೊಡನೆ ಹಿಮಾಲಯದಂತೆ ತಂಪಾಗಿ ವ್ಯವಹರಿಸುತ್ತಿದ್ದ ವಿಭಾಂಡಕರ ಎದೆಯೊಳಗೆ ಅಗ್ನಿಪರ್ವತವು ಹೊಗೆಯಾಡುತ್ತಿತ್ತು. ತನ್ನ ಮುದ್ದುಗಿಣಿಯನ್ನು ಕಚ್ಚಿಕೊಂಡೊಯ್ಯಲು ಬಂದ ಕಾಗೆಯನ್ನು ಕಂಡೊಡನೆ ಕೆಂಡದಮಳೆಗರೆಯಲು ಕಾತರಿಸಿದ್ದರು ಅವರು. ಆದರದು ಕಂಡ ಮೇಲಿನ ಮಾತಲ್ಲವೇ?

ಕಂಡೊಡನೆ ದಂಡನೆಯು ಖಂಡಿತವೆಂಬುದನ್ನು ಚೆನ್ನಾಗಿ ಅರಿತಿದ್ದ ವಾರಾಂಗನೆಯೂ ಕೂಡ ತನ್ನ ಜೀವವನ್ನು ಎಡಗೈಯಲ್ಲಿರಿಸಿಕೊಂಡು, ಆಶ್ರಮದ ಮೇಲೆ ಬೀಸಿ ಬರುವ ಗಾಳಿಗೂ ಕಾಣದಂತೆ ಅವಿತುಕೊಂಡಿದ್ದಳು. ಕಾನನದಲ್ಲಿ ಮೊದಲಾಯಿತು ಕಣ್ಣಾಮುಚ್ಚಾಲೆಯಾಟ!

ಕಾರ್ಮೋಡದ ಮರೆಯಲ್ಲಿ ಅಡಗಿರುವ, ಅಮಾವಾಸ್ಯೆಯ ಮರುರಾತ್ರಿಯ ಚಂದ್ರರೇಖೆಯಂತೆ- ದೃಷ್ಟಿಪಥದ ಆಚೆಯೆಲ್ಲೋ ಅವಿತಿರುವ ಅಂಗನೆಯನ್ನು ಹುಡುಕಿಯೇ ಹುಡುಕಿದರು ವಿಭಾಂಡಕರು; ಗುಹಾಗರ್ಭಗಳಲ್ಲಿ, ಗಿರಿಶಿಖರಗಳಲ್ಲಿ, ಹಸಿರ ಮರೆಯಲ್ಲಿ, ಹೊಳೆಯ ಬಳಿಯಲ್ಲಿ ಹರಿದಾಡಿದವು ಆ ಹರಿಪಿಂಗಲನೇತ್ರಗಳು. ಮೂರು ಹಗಲು, ಮೂರು ರಾತ್ರಿ, ಮೂರಂಗುಲ ಬಿಡದೆ ವನಾಂತರವನ್ನು ಶೋಧಿಸಿದರೂ ವನಿತೆಯು ಮಾತ್ರ ಕಾಣಸಿಗಲೇ ಇಲ್ಲ! ಕಾಣುವುದು ಋಷಿಯ ಕೌಶಲ; ಕಣ್ಣಿಗೆ ಮಣ್ಣೆರೆಚುವುದು ಮಾಯೆಯ ಕೌಶಲ. ಋಷಿಯ ಕಾಣ್ಕೆಯನ್ನೂ ಮೀರಿ, ಕಣ್ಮರೆಯಾಗಿಯೇ ಉಳಿದ ವಾರಾಂಗನೆಯು ಸಾತ್ತ್ವಿಕಮಾಯೆಯು ಸಂತರನ್ನೂ ಗೆಲ್ಲಬಲ್ಲುದೆಂಬುದಕ್ಕೆ ಸಾಕ್ಷಿಯಾದಳು!

ತನ್ನನ್ನು ಹುಡುಕುವ ವಿಭಾಂಡಕರನ್ನು ವಾರಾಂಗನೆಯು ನೋಡುತ್ತಿದ್ದಳು; ಆದರೆ ತನ್ನನ್ನು ನೋಡುವ ವಾರಾಂಗನೆಯನ್ನು ವಿಭಾಂಡಕರು ನೋಡದಾದರು!

ಎಷ್ಟು ಹುಡುಕಿದರೂ ವಾರಾಂಗನೆಯು ಸಿಗದಾದಾಗ ಆಕೆಯು ಇಲ್ಲವೆಂದೇ ಭಾವಿಸಿ ಆಶ್ರಮಕ್ಕೆ ಮರಳಿದರು ವಿಭಾಂಡಕರು. ‘ಸದ್ಯ! ಬದುಕಿದೆ!’ ಎಂದು ನಿಟ್ಟುಸಿರಿಟ್ಟಳು ವಾರಾಂಗನೆ! ಆದರೆ ಆಕೆಯ ಗಮನವೆಲ್ಲವೂ ಆಶ್ರಮದಲ್ಲಿಯೇ ಕೇಂದ್ರೀಕೃತವಾಗಿತ್ತು. ವಿಭಾಂಡಕರು ಮತ್ತೆ ಆಶ್ರಮದಿಂದ ಹೊರಬರುವುದನ್ನೇ ಕಾಯುತ್ತಿದ್ದರು ಆಕೆಯ ಗುಪ್ತಚರರು.

ಒಳಗಿರುವುದೆಂದಿದ್ದರೂ ಹೊರಬರಲೇ ಬೇಕು; ಹೊರ ಹೋಗಿರುವುದು ಒಂದಲ್ಲ ಒಂದು ದಿನ ಒಳಬರಲೇ ಬೇಕು; ಅದು ಪ್ರಕೃತಿನಿಯಮ.

ವಿಭಾಂಡಕರು ಪರ್ಣಕುಟಿಯ ಉದರದಲ್ಲಿಯೇ ಕುಳಿತಿದ್ದರೆ ಅವರ ಹಾಗೂ ಅವರ ಮಗನ ಉದರದ ಪಾಡೇನು? ಕಂದ-ಮೂಲ-ಫಲಗಳ ಸಂಗ್ರಹಕ್ಕಾಗಿ ಅವರು ಕೊನೆಗೊಮ್ಮೆ ಕಂದನನ್ನು ಬಿಟ್ಟು ಹೊರಬರಲೇಬೇಕಾಯಿತು. ಅಷ್ಟೇ ಬೇಕಾಗಿತ್ತು ವಾರಾಂಗನೆಗೆ! ವಿಭಾಂಡಕರು ಹೊಟ್ಟೆ ತುಂಬುವ ಸಲುವಾಗಿ ಹೊರಹೋದುದು ವಾರಾಂಗನೆಯ ಹೃದಯ ತುಂಬಲು ಕಾರಣವಾಯಿತು. ಮುನಿಯ ‘ಉದರಂಭರಣ’ವು ಮಾನಿನಿಯ ‘ಹೃದಯಂಭರಣ’ವಾಗಿ ಪರಿಣಮಿಸಿತು!

ವಿಭಾಂಡಕರ ನಿರ್ಗಮನದ ಗುಪ್ತಚರರ ವರದಿಯನ್ನು ಆಲಿಸುತ್ತಿದ್ದಂತೆಯೇ ಆಶ್ರಮದೆಡೆಗೆ ಧಾವಿಸಿದಳಾ ಅಂತರಂಗ ಸುಂದರಿ.

ಇತ್ತ ‌ಆಶ್ರಮದಲ್ಲಿ, ಋಷ್ಯಶೃಂಗನ ಅಂತರಂಗವು ಅಂಗನೆಯಲ್ಲಿ ನೆಟ್ಟಿತ್ತು; ಆತ್ಮವು ಅವ್ಯಕ್ತವಾಗಿ ಅಂಗರಾಜ್ಯದೆಡೆಗೆ ನಡೆದಿತ್ತು; ಕಣ್ಣು ಮೊದಲೊಮ್ಮೆ ಕಂಡ ಕಾಮನಬಿಲ್ಲನ್ನು ಕಾಯುತ್ತಿತ್ತು. ಮತ್ತೆ ಬರುವೆನೆಂದು ಹೇಳಿಹೋಗದಿದ್ದರೂ ಮೊನ್ನೆ ಬಂದ ಕೌತುಕದ ವ್ಯಕ್ತಿ ಮತ್ತೊಮ್ಮೆ ಬಂದೇಬರುವನೆಂಬ ಭರವಸೆಯು ಭಾವದಲ್ಲಿ ಭದ್ರವಾಗಿ ಬೇರೂರಿತ್ತು!

ಭರವಸೆಯೇ ಭವಿಷ್ಯದ ತಾಯಿಯೆಂಬರು. ಸುಳ್ಳಾಗಲಿಲ್ಲವಾ ಮಾತು; ಅದೋ! ಅದೋ! ಆಶ್ರಮದ ಬಾಗಿಲಿನಲ್ಲಿ ಮತ್ತೊಮ್ಮೆ ಮೂಡುತ್ತಿದೆ ಕಾಮನಬಿಲ್ಲಿನ ತೋರಣ! ಋಷ್ಯಶೃಂಗನ ಕೌತುಕದ ಸಖನ ಪುನರಾಗಮನ!

 

~*~*~

(ಸಶೇಷ)

ಕ್ಲಿಷ್ಟ-ಸ್ಪಷ್ಟ:

  • ಹರಿಪಿಂಗಲನೇತ್ರ = ಹಳದಿ-ಕೆಂಪು ಛಾಯೆಯ ಕಣ್ಣುಗಳು; ವಾನರರಿಗೆ ಯಾ ಸಿಂಹಗಳಿಗೆ ಇರುವಂತೆ ಹಳದಿವರ್ಣಯುಕ್ತ ಕೆಂಪಗಿನ ಕಣ್ಣುಗಳು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ53ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box