ಪ್ರಜೆಗಳು ಮತ್ತು ರಾಜನ ಅದ್ವೈತವೇ ರಾಜ್ಯ. ಆ‌ ಅದ್ವೈತವು‌ ಸಾಧಿಸಲ್ಪಡುವ ಕ್ರಮ ಹೀಗೆ:
ಪ್ರಜೆಗಳ ಸುಖವೇ ರಾಜನ ಸುಖವಾಗಬೇಕು; ಪ್ರಜೆಗಳ ದುಃಖವು ರಾಜನ ದುಃಖವಾಗಬೇಕು; ಇದು ರಾಜಧರ್ಮ. ರಾಜನು ರಾಜಧರ್ಮವನ್ನು ಪಾಲಿಸಿದಾಗ ಪ್ರಜೆಗಳೂ ರಾಜನಲ್ಲಿ ಅದ್ವೈತಭಾವವನ್ನು ತಾಳುತ್ತಾರೆ; ರಾಜನ ಸುಖವನ್ನು ತಮ್ಮ ಸುಖವೆಂದು, ರಾಜನ ಕಷ್ಟವನ್ನು ತಮ್ಮದೇ ಕಷ್ಟವೆಂದು ಸ್ವೀಕರಿಸುತ್ತಾರೆ. ಅದು ರಾಜಧರ್ಮವು ಪ್ರಜಾದರ್ಪಣದಲ್ಲಿ ಪ್ರತಿಫಲಿಸುವ ರೀತಿ; ಅಲ್ಲಿ ರಾಜ್ಯಾದ್ವೈತದ ಪೂರ್ಣತೆ!

ದಶರಥ ಮತ್ತು ಅವನ ಪ್ರಜೆಗಳ ನಡುವೆ ಅದೇ ಬಗೆಯ ಅದ್ವೈತವಿತ್ತು; ಪ್ರಜೆಗಳ ಕಷ್ಟ-ಸುಖಗಳನ್ನು ತನ್ನದೆಂದೇ‌ ಭಾವಿಸಿ,‌ ಸ್ಪಂದಿಸುತ್ತಿದ್ದ ದಶರಥನಲ್ಲಿ – ಪ್ರಜೆಗಳೂ ಅದ್ವೈತದ ಪ್ರತಿಸ್ಪಂದವನ್ನೇ ಹೊಂದಿದ್ದರು. ಮಕ್ಕಳಿಲ್ಲದಿರುವ ಕೊರತೆ ದಶರಥನದಾದರೂ ಕೊರಗು ರಾಜ್ಯಕ್ಕೇ ಬಾಧಿಸುತ್ತಿತ್ತು; ಆದುದರಿಂದಲೇ ಸಂತಾನದ ಬರ ನೀಗಬಲ್ಲ ಋಷ್ಯಶೃಂಗರನ್ನು ದೊರೆಯು ಒಲಿಸಿ ಅಯೋಧ್ಯೆಗೆ ಕರೆತರುತ್ತಿರುವ ಸುವಾರ್ತೆಯು ಪ್ರಜೆಗಳಿಗಾಯಿತು ಕಿವಿಗಿಂಪು; ಇದೀಗ ಶಂಖ-ದುಂದುಭಿಗಳ ನಿರ್ಘೋಷದ ನಡುವೆ ಜನೇಶ್ವರನು ಮುನಿಜನೇಶ್ವರನನ್ನು ಮನೆಯೊಳಗೆ ಕರೆದೊಯ್ಯುವ ಸುದೃಶ್ಯವು ಪ್ರಜಾಜನರೆಲ್ಲರ ಕಣ್ತಂಪು!

ಅಂತರಂಗಕ್ಕೆ ಬಂದ ಮುನಿಯನ್ನು ಅಂತಃಪುರಕ್ಕೆ ಕರೆದೊಯ್ದನು ದೊರೆ. ಅಲ್ಲಿ ಆ ಧರ್ಮಮೂರ್ತಿಯನ್ನು ದಿವ್ಯಪೀಠದಲ್ಲಿ ಕುಳ್ಳಿರಿಸಿ, ದೇವರಿಗೆ – ದೊರೆಗೆ – ಗುರುವಿಗೆ ಸಲ್ಲಬಹುದಾದಂತೆ ಸಂಪೂಜಿಸಿದನು ಏಕೋಭಾವದಲ್ಲಿ*! ತೃಪ್ತಿಯಾಗುವಷ್ಟು ಮೃಷ್ಟಾನ್ನವುಂಡಾಗ ಉದರ ತುಂಬುವಂತೆ ಮನಸ್ತೃಪ್ತಿ ಪೂಜಿಸಿ ಹೃದಯ ತುಂಬಿತು ದೊರೆಗೆ; ಒಳಗೊಳಗೇ ಕೃತಕೃತ್ಯಭಾವ! ಮನೆಯೊಳಗೆ ಮುನಿ ಬಂದ ಮೇಲೆ, ಇನ್ನು ಕೊರತೆಗಳಾವವೂ ಅಲ್ಲಿ ಉಳಿಯಲಾರವೆಂಬ ದೃಢ ವಿಶ್ವಾಸ! ಕೃಪಾಕಿರಣವು ಒಳಬಂದ ಬಳಿಕ, ಮತ್ತಿನ್ನು ಕೊರತೆಯ ಕತ್ತಲೆಗೆ ಇರವುಂಟೇ? ಮನೆ-ಮನಗಳೊಳಗೆ ಮುನಿ ಬಂದ ಮೇಲೆ ಅಭಾವಗಳಿಗೆ ಭಾವವುಂಟೇ?

ಗತಂ ಪಾಪಂ ಗತಂ ದುಃಖಂ ಗತಂ ದಾರಿದ್ರ್ಯಮೇವ ಚ |
ಆಗತಾ ಸುಖಸಂಪತ್ತಿಃ ಪುಣ್ಯೋಹಂ ತವ ದರ್ಶನಾತ್ ||
ಕಳೆಯಿತು ಪಾಪ; ಕಳೆಯಿತು ದುಃಖ, ಕಳೆಯಿತು ದಾರಿದ್ರ್ಯ ।
ಪ್ರವಹಿಸಿ ಬಂದವು ಸುಖ ಸಂಪದಗಳು 
ತವ ದರುಶನದೊಳು ಜೀವನ ಪಾವನ ॥ – ಹೀಗಾಯ್ತು ದಶರಥನ ಭಾವ!

ಸುದೀರ್ಘ-ಸಂತಾನಸಮರದಲ್ಲಿ ತಾನಿನ್ನು ಗೆದ್ದೆನೆಂಬ ಭಾವವು ಬೀಗಿಸಿತು, ಮುನಿಯಡಿಗೆ ಮತ್ತೊಮ್ಮೆ ಬಾಗಿಸಿತು ದಶರಥನ…

ಇದು ಋಷ್ಯಶೃಂಗರನ್ನು ಆದರಿಸಿ ದೊರೆಗೆ ದೊರೆತ ಸಂತೋಷವಾದರೆ ಮುನಿಭಾಸ್ಕರನ ಛಾಯೆಯೇ ಆದ ಶಾಂತೆಯ ಸತ್ಕರಿಸಿದ ಸತಿಯರ ಸಂತೋಷವೇನೂ ಕಡಿಮೆಯದಲ್ಲ. ಎಳೆಯ ವಯಸ್ಸು – ಬೆಳೆದ ತಪಸ್ಸು! ಋಷ್ಯಶೃಂಗರಿಗೆ ಸರ್ವಾತ್ಮನಾ* ಸಲ್ಲುವಳಾಕೆ! ವಾಮನನ ಆವಿರ್ಭಾವವನ್ನು ಕಂಡ ಮುನಿಗಳ ಸಂತೋಷಕ್ಕೆ ಸದೃಶವಾದ ಸಂತೋಷವನ್ನು ಕಂಡರು ಸಮ್ರಾಟನ ಸತಿಯರು, ಶಾಂತೆಯ ಪ್ರಶಾಂತ~ಸಂಪ್ರೀತ ಸಂದರ್ಶನದಿಂದ.

ತನ್ನಲ್ಲಿ ಇರದುದನ್ನು ಪರರಿಗೆ‌ ನೀಡಲು ಸಾಧ್ಯವೇ!? ಸ್ವಯಂಸಂತುಷ್ಟನಲ್ಲದವನು ಎಂದಿಗಾದರೂ ಪರರಿಗೆ ಸಂತೋಷವನ್ನು ನೀಡಲುಂಟೇ? ದಶರಥನ- ಅರಮನೆಯ- ಅಯೋಧ್ಯೆಯ ಆನಂದಕ್ಕೆ ಕಾರಣೀಭೂತರಾದ ಮುನಿದಂಪತಿಗಳು ಪ್ರೇಮಾದರಗಳ ಹೊಳೆಯೇ ಹರಿಯುವ ಆ ವಾತಾವರಣದಲ್ಲಿ ತಾವೂ ಸಾಂದ್ರ-ಸಮಾಧಾನದಲ್ಲಿ ಸುಖಿಸಿದರು. ಶಾಂತೆಗೆ ದಶರಥನಲ್ಲಿ ರೋಮಪಾದನೇ ತೋರಿದರೆ ಋಷ್ಯಶೃಂಗರಿಗೆ ಅಯೋಧ್ಯೆಯು ಅಂಗ* ಸೌಖ್ಯವನ್ನು, ಜೊತೆಗೆ‌ ಅಂತರಂಗ ಸೌಖ್ಯವನ್ನೂ ನೀಡಿತ್ತು!

ಇದೆಲ್ಲವೂ ಚೆಂದವೇ ಆಯಿತು; ಆದರೆ ಬಂದ ಕಾರ್ಯ?

ಅಶ್ವಮೇಧವೆಂದು ಎಂದು ದಶರಥನೂ ಕೇಳಲಿಲ್ಲ; ಋಷ್ಯಶೃಂಗರೂ ತಾವಾಗಿ ಏನನ್ನೂ ಹೇಳಲಿಲ್ಲ!
ಸಮಯವು ಸರಿಯುತ್ತಲೇ ಇತ್ತು; ದಿನಗಳು ಉರುಳುತ್ತಲೇ ಇದ್ದವು! ಆಗಲೇಬೇಕಾದ ಕಾರ್ಯವು ಇನ್ನೂ ಕಾಯುತ್ತಲೇ ಇತ್ತು!

ಅದೇಕೆ?

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

  • ಏಕೋಭಾವ = ಏಕತಾನತೆ, ವಿಚಲಿತನಾಗದ ಒಂದೇ ಭಾವ-ದೃಷ್ಟಿ
  • ಸರ್ವಾತ್ಮನಾ = ಎಲ್ಲ ರೀತಿಯೊಳಗೂ.
  • ಅಂಗ ಸೌಖ್ಯ = ಅಯೋಧ್ಯೆಯಲ್ಲಿ ಅಂಗರಾಜ್ಯದಂತೆಯೇ  ಹಿತವಾದ ಸೌಖ್ಯವಿತ್ತು ಎಂಬ ಅರ್ಥವೊಂದು;
    ಷೋಡಶೋಪಚಾರ ಸಹಿತ ಬಾಹ್ಯಹಿತವನ್ನೀಯುವ ಉಪಚಾರವಿತ್ತು ಎಂಬ ಅರ್ಥವಿನ್ನೊಂದು.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ62ನೇ ರಶ್ಮಿ.

 

61 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box