ಮಂತ್ರಿಯಾದವನಿಗೆ ದೇಶದೊಳಗಿನ ವಿದ್ಯಮಾನಗಳು ತಿಳಿದಿರಬೇಕು. ಮಾತ್ರವಲ್ಲ, ವಿದೇಶಗಳ ವಿದ್ಯಮಾನಗಳೂ ತಿಳಿದಿರಬೇಕು. ಹಾಗೆಯೇ ಇದ್ದವರು ದಶರಥನ ಮಂತ್ರಿಗಳು. ಇದೋ ಅಯೋಧ್ಯೆಯ ಅಮಾತ್ಯರ ಕುರಿತಾದ ವಾಲ್ಮೀಕಿ ವಾಕ್ಯ:

ತೇಷಾಮವಿದಿತಂ ಕಿಞ್ಚಿತ್ ಸ್ವೇಷು ನಾಸ್ತಿ ಪರೇಷು ವಾ ।
ಕ್ರಿಯಮಾಣಂ ಕೃತಂ ವಾಪಿ ಚಾರೇಣಾಪಿ ಚಿಕೀರ್ಷಿತಮ್ ॥
(ವಾಲ್ಮೀಕಿರಾಮಾಯಣ – ಬಾಲಕಾಂಡ – ಅಧ್ಯಾಯ-೭ : ಶ್ಲೋಕ ೯-೧೦)

ಸ್ವಪಕ್ಷದಲ್ಲಿಯಾಗಲೀ ಪರಪಕ್ಷದಲ್ಲಿಯಾಗಲೀ, ಸ್ವದೇಶದಲ್ಲಿಯಾಗಲೀ ಪರದೇಶದಲ್ಲಿಯಾಗಲೀ ನಡೆದ, ನಡೆಯುತ್ತಿರುವ, ನಡೆಯಲಿರುವ ಸಕಲ ಸಂಗತಿಗಳನ್ನೂ ಗುಪ್ತಚರರ ಮೂಲಕ ತಿಳಿದು, ಅದಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದರು ಅವರು.

ಈ ವಿಷಯದಲ್ಲಿ ಮತ್ತುಳಿದ ಮಂತ್ರಿಗಳಿಗಿಂತ ಮತ್ತೊಂದು ಮೆಟ್ಟಿಲು ಮೇಲಿದ್ದನು ಸುಮಂತ್ರ. ಪರದೇಶದಲ್ಲಲ್ಲ, ಪರಲೋಕದಲ್ಲಿ; ಈ ಯುಗದಲ್ಲಲ್ಲ, ದೇವಯುಗದಲ್ಲಿ, ನಾಡಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ನಡೆದ ಮಹತ್ತ್ವದ ಸಂವಾದವೊಂದನ್ನು ತಿಳಿದುಕೊಂಡಿದ್ದನು ಅವನು! ಯಾವ ವಿಷಯದಲ್ಲಿ ದೊರೆಯಿಂದಾರಂಭಿಸಿ ಕೊನೆಯ ಪ್ರಜೆಯವರೆಗೆ ದೊಡ್ಡ ಪ್ರಶ್ನೆಯಿದ್ದಿತೋ ಸುಮಂತ್ರನ ಬಳಿ ಅದಕ್ಕೆ ಉತ್ತರವಿದ್ದಿತು. ದಶರಥನಿಗೆ ಸಂತಾನವು ಆಗುವುದು ಹೇಗೆ ಮತ್ತು ಯಾವಾಗ ಎಂಬುದನ್ನು ಬಹು ಮೊದಲೇ ಬಲ್ಲವನಾಗಿದ್ದ ಸುಮಂತ್ರನು ಸಮಯ ಬರುವವರೆಗೂ ತುಟಿ ಬಿಚ್ಚಿರಲಿಲ್ಲ. ಆ ಸಮಯವೀಗ ಬಂದಿತ್ತು. ದಶರಥನೆದೆಯಲ್ಲಿ ಅಶ್ವಮೇಧದ ಪ್ರೇರಣೆಯನ್ನು ತಂದಿತ್ತು. ಆದರೆ ಆ ಪ್ರೇರಣೆಯು ಫಲದಾಯಿಯಾಗಬೇಕಾದರೆ ಇದೇ ಸಮಯದಲ್ಲಿ ಮಹಾಮಹಿಮರೋರ್ವರ ರಂಗಪ್ರವೇಶವಾಗಬೇಕಿತ್ತು. ಅವರು ಬಾರದೇ ಅಶ್ವಮೇಧವು ನಡೆದರೂ ಫಲ ಬಾರದು! ಅವರೇ ವಿಭಾಂಡಕ ಸುತರಾದ ಋಷಿರತ್ನ ಋಷ್ಯಶೃಂಗರು. ಕೋಸಲದ, ಸೂರ್ಯಕುಲದ ಭವಿಷ್ಯವು ಅವರ ಮಂತ್ರಶಕ್ತಿಯಲ್ಲಿದೆ ಎಂಬುದನ್ನು ಮನಗಂಡಿದ್ದ ಸುಮಂತ್ರನು ಏಕಾಂತವನ್ನು ಸಾಧಿಸಿ, ಅವರ ಕುರಿತಾದ ಯುಗಾಂತರದ, ಲೋಕಾಂತರದ ವಿದ್ಯಮಾನವೊಂದನ್ನು ದಶರಥನಿಗೆ ಹೇಳತೊಡಗಿದನು.

‘ಪ್ರಭೂ! ಸೂರ್ಯಕುಲದ ಸಂತಾನದ ಕುರಿತಾದ, ಮತ್ತು ತಾವು ಸಂಕಲ್ಪಿಸಿರುವ ಅಶ್ವಮೇಧದ ಕುರಿತಾದ ಅತ್ಯಂತ ಮಹತ್ತ್ವದ ಮಾಹಿತಿಯೊಂದು ನನ್ನ ಬಳಿಯಿದೆ. ಅದು ದೇವಯುಗದ ದಿವ್ಯಸಭೆಯೊಂದರಲ್ಲಿ ನಡೆದ ಸಂವಾದ. ದೇವಯೋಗಿಯಾದ ಸನತ್ಕುಮಾರರು ಮಹಾಯೋಗಿಗಳಾದ ಮಹರ್ಷಿಗಳ ಸಭೆಯಲ್ಲಿ ಮಂಡಿಸಿದ್ದಾರೆ. ದೃಷ್ಟಿಯುಳ್ಳವರದೇ ಸಭೆಯದು; ಆದರೆ ಸನತ್ಕುಮಾರರ ದೃಷ್ಟಿ ಇನ್ನೆಲ್ಲೋ ನೆಟ್ಟಿದೆ! ಹಿಂದಿನದನ್ನೂ, ಇಂದಿನದನ್ನೂ, ಮುಂದಿನದನ್ನೂ ಎಂದು ಬೇಕಾದರೂ, ಎಲ್ಲಿಂದಲಾದರೂ ನೋಡಬಲ್ಲ ಕಣ್ಣಲ್ಲವೇ ಅವರದು!?

ಸಮ್ಮುಖದಲ್ಲಿರುವ ಮಹರ್ಷಿಗಳು ಯಾವುದನ್ನು ಕಾಣಲು ಹಗಲಿರುಳೂ, ಬದುಕಿಡೀ ತಪಿಸುವರೋ, ಪರಿತಪಿಸುವರೋ ಆ ವಿಶ್ವಪಾಲಕ ಶಕ್ತಿಯು ಮುಂದೊಂದು ದಿನ ಇಳೆಗಿಳಿದು ಬರುವುದನ್ನು ಸನತ್ಕುಮಾರರು ಈಗಲೇ ಕಾಣುತ್ತಿದ್ದಾರೆ. ಎಲ್ಲವೂ ತಾನೇ ಆಗಿದ್ದರೂ ಎಲ್ಲಿಯೂ ತೋರದ ಆ ತತ್ತ್ವವು ಎಲ್ಲರೆದುರು ಆಕೃತಿಯ ಅಂಗಿ ತೊಟ್ಟು, ತೋರಿಬರಲಿರುವುದನ್ನು ಆ ಸರ್ವದರ್ಶಿಯು ಕೌತುಕದ ಕಣ್ಣಲ್ಲಿ ಕಾಣುತ್ತಿದ್ದಾರೆ. ಎಂದೂ ಎರಡಿಲ್ಲದೆ, ಒಂದೇ ಒಂದಾಗಿ ಮೆರೆಯುವ ಆ ಶಕ್ತಿಯು ನಾಲ್ಕಾಗಿ, ನರರೂಪದಲ್ಲಿ ಮುಂದೊಂದು ದಿನ ಅಯೋಧ್ಯೆಯಲ್ಲಿ ಮೈದೋರುವುದನ್ನು ಇಂದೇ ಕಂಡು ಕಣ್ತಣಿಸಿಕೊಳ್ಳುತ್ತಿದ್ದಾರೆ! ಸಮ್ಮುಖದಲ್ಲಿರುವ ಸಂತಸಭೆಯೂ ‘ಸನತ್ಕುಮಾರರು ಏನನ್ನು ಕಾಣುತ್ತಿರುವರೋ? ಏನು ಹೇಳುವರೋ?’ ಎಂದು ಅತ್ಯಂತ ಕುತೂಹಲದಲ್ಲಿದೆ!

ಮುನಿಯ ಕಣ್ಣಲ್ಲಿರುವುದು ಬಾಯಲ್ಲಿ ಬರತೊಡಗಿತು. ಋಷಿಮಂಡಲವು ಮೈಯೆಲ್ಲ ಕಿವಿಯಾಗಿ ಕೇಳತೊಡಗಿತು. ಸನತ್ಕುಮಾರರು ಹೇಳಿದ್ದೇನು?

“ಸೂರ್ಯವಂಶದಲ್ಲಿ ಮುಂದೆ ದಶರಥನೆಂಬ ಚಕ್ರವರ್ತಿಯು ಉದಯಿಸುವನು. ಚಂದ್ರಮಂಡಲದಲ್ಲಿ ಅಸಂಖ್ಯ ಅಮೃತಕಿರಣಗಳ ನಡುವೆ ಒಂದೇ ಒಂದು ಕಲೆಯಿರುವಂತೆ, ಮಾನವಜೀವಿತದಲ್ಲಿ ಅನುಭವಿಸಬಹುದಾದ ಸಕಲಸೌಖ್ಯಗಳಿದ್ದರೂ ಅವನ ಬದುಕಿನಲ್ಲಿ ಕುಲಕ್ಕೊಂದು ಕುಡಿಯಿಲ್ಲದ ಒಂದೇ ಒಂದು ಕೊರೆ! ಅದೇ ಕೊರಗಿನಲ್ಲಿಯೇ ಆಯುಸ್ಸಿನ ಬಹ್ವಂಶವು ಕಳೆದ ಬಳಿಕ, ಒಂದು ದಿನ ಇದ್ದಕ್ಕಿದ್ದಂತೆ ವಿಧಿ ಬಂದು ಎದೆಯೊಳಗೆ ಹೇಳಿದಂತೆ, ಅವನು ಅಪತ್ಯಪ್ರಾಪ್ತಿಗಾಗಿ ಅಶ್ವಮೇಧವನ್ನು ಸಂಕಲ್ಪಿಸುವನು. ಸಾಕ್ಷಾತ್ ವಸಿಷ್ಠರೇ ಅವನಿಗೆ ಪುರೋಹಿತರಾಗಿದ್ದರೂ ಆ ಮಹಾಕಾರ್ಯವನ್ನು ಋಷಿವರ್ಯರಾದ ಋಷ್ಯಶೃಂಗರೇ ನಡೆಸಿಕೊಡಬೇಕು. ಅವರು ಅಯೋಧ್ಯೆಗೆ ಬಂದು ಆ ಯಾಗವನ್ನು ನೆರವೇರಿಸಿದಾಗ‌ ದಶರಥನಿಗೆ ಮೂಜಗವನ್ನು ಬೆಳಗುವ ನಾಲ್ವರು ಮಹಾಪುರುಷರು ಮಕ್ಕಳಾಗಿ ಜನಿಸುವರು. ಅವರು ಕೋಸಲವನ್ನು ಕುಶಲವಾಗಿರಿಸುವುದು ಮಾತ್ರವಲ್ಲ, ಲೋಕವನ್ನೇ ನಾಕವಾಗಿಸುವರು!

ಪ್ರಭೂ, ಸಂತಾನಾರ್ಥವಾಗಿ ತಾವು ಅಶ್ವಮೇಧವನ್ನು ಸಂಕಲ್ಪಿಸಿರುವುದು ಸಮುಚಿತವೇ ಆಗಿದೆ‌. ಆದರೆ ಋಷ್ಯಶಂಗರು ಅಂಗವಾಗದೇ ಆ ಯಾಗವು ಪೂರ್ಣವಾಗದು. ಅವರನ್ನು ಬರಮಾಡಿಕೊಳ್ಳಲು ಅಪ್ಪಣೆಯಾಗಲಿ.’

ಹೀಗೆ ದೇವಯುಗದಲ್ಲಿ, ದೇವಯೋಗಿಯೋರ್ವನು ದಿವ್ಯಾತ್ಮರುಗಳಿಗೆ ಹೇಳಿದ ದೈವರಹಸ್ಯವು ಕಾಲ-ದೇಶಗಳ ಬಹು ದೊಡ್ಡ ಅಂತರವನ್ನು ದಾಟಿ ಸುಮಂತ್ರನ ಕಿವಿಯನ್ನು ಹೊಕ್ಕು, ಎದೆಯಲ್ಲಿ ಅವಿತು ಕುಳಿತಿತ್ತು! ಅವನ ಮುಖದಿಂದ ಸರಿಯಾದ ಮುಹೂರ್ತದಲ್ಲಿ ಹೊರ ಹೊಮ್ಮಿ, ಜಗದ್ರಕ್ಷಕನನ್ನು ಜಗತ್ತಿಗೆ ಕರೆತರುವ ಪ್ರಕ್ರಿಯೆಯಾಗಲು ಕಾದು ಕುಳಿತಿತ್ತು! ಬರದ ಸಾವಿರ ವರ್ಷಗಳ ಬಳಿಕ ಮಳೆ ಬಂದಾಗ ಆವರೆಗೆ ಕಾದು ಕುಳಿತಿದ್ದ ಹುಲ್ಲಿನ ಬೀಜ ಒಮ್ಮೆಲೇ ಚಿಗುರುವಂತೆ, ಈಗ ಪ್ರಕಟಗೊಂಡಿತ್ತು.

ಸುಮಂತ್ರನ ನುಡಿಯಾಲಿಸಿದಾಗ ದಶರಥನಲ್ಲಿ ಆನಂದ~ಕುತೂಹಲಗಳು ಒಡಗೂಡಿ ಒಡಮೂಡಿದವು! “ಯಾರವರು ಋಷ್ಯಶೃಂಗರೆಂದರೆ? ಏನವರ ಮಹತಿ?” ದಶರಥನ ಜಿಜ್ಞಾಸೆಯು ಪ್ರಶ್ನೆಯಾಗಿ ಹೊರಹೊಮ್ಮಿತು.

ಸುಮಂತ್ರನು ಮಾರ್ನುಡಿದನು:
“ಯಾರ ಪ್ರವೇಶ ಮಾತ್ರದಿಂದ ಪ್ರಕೃತಿಯೇ ಪ್ರಸನ್ನಗೊಳ್ಳುವುದೋ, ಯಾರ ಸಂಸರ್ಗಕ್ಕಾಗಿ ಪಂಚಭೂತಗಳು ಕಾತರಿಸುವವೋ, ಯಾರ ಪಾದಸ್ಪರ್ಶಮಾತ್ರದಿಂದ ದಿವಿಯು ತಂಪಾಗಿ ಮಳೆ ಬಂದು, ಭುವಿಯು ತಂಪಾಗಿ ಬೆಳೆ ಬಂದು, ಜೀವರಾಶಿಗಳ ಒಡಲು ತಂಪಾಗಿ, ಲೋಕವು ತೃಪ್ತಿಯಲ್ಲಿ ನಕ್ಕು ನಲಿಯುವುದೊ, ಅವರೇ ಕ್ಷಾಮ ನೀಗಿ, ಕ್ಷೇಮ ನೀಡುವ ತಂಪಿನ ಸಂತ ಋಷ್ಯಶೃಂಗರು! ವಿಭಾಂಡಕ ಮಹಾಮುನಿಯ ಸುಪುತ್ರ. ನಿನ್ನ ಮಿತ್ರನಾದ ಅಂಗರಾಜ ರೋಮಪಾದನ ಜಾಮಾತಾ. ಅಂಗರಾಜನ ಸುತೆಗೆ ವರನಾದವರು‌. ಅಷ್ಟೇ ಅಲ್ಲ, ಬಹುಕಾಲದ ಬರ ನೀಗಿ ಅಂಗರಾಜ್ಯಕ್ಕೇ ವರವಾದವರು! ದೊರೆಯೇ, ನಿನ್ನ ಬದುಕಿನ ಬರ ನೀಗಿ ಸಂತಾನದ ವರವು ಬರಬೇಕಾದರೆ ಅಯೋಧ್ಯೆಗೆ ಋಷ್ಯಶೃಂಗರು ಬರಬೇಕು.

“ಋಷ್ಯಶೃಂಗರ ಪ್ರಭಾವದಿಂದಲಾಗಿ ಅಂಗರಾಜ್ಯದಲ್ಲಿ ಬಹುಕಾಲದಿಂದ ಬಾರದ ಮಳೆಯು ಬಂದಿತೇ? ಬರ ನೀಗಿತೇ?” ದಶರಥನ ಕುತೂಹಲವು ಬೆಳೆಯಿತು.
ಋಷ್ಯಶಂಗರು ಅಯೋಧ್ಯೆಗೆ ಬರಬೇಕಾದರೆ ಮೊದಲು ದೊರೆಯ ಎದೆಗೆ ಬರಬೇಕಲ್ಲವೇ? ಸುಮಂತ್ರನು ಮಳೆ ತಂದ ಮಹಾಪುರುಷನ ಮಹಾಚರಿತೆಯನ್ನು ದೊರೆಗೆ ಬಣ್ಣಿಸತೊಡಗಿದನು..

~*~*~

(ಸಶೇಷ)

ಕ್ಲಿಷ್ಟ-ಸ್ಪಷ್ಟ:

  • ಅಪತ್ಯಪ್ರಾಪ್ತಿ = ಸಂತಾನ ಪ್ರಾಪ್ತಿ
  • ಜಾಮಾತಾ = ಅಳಿಯ (ಮಗಳ ಗಂಡ)
  • ಕೊರೆ = ಕೊರತೆ
Facebook Comments Box