ಲೋಕಪಾಲಕರೆಲ್ಲರೂ ಸೇರಿ ಲೋಕಕರ್ತನಲ್ಲಿ ಮೊರೆಯಿಟ್ಟ ಪರಿಯಿದು:
“ಭಗವನ್! ತ್ವತ್-ಪ್ರಸಾದೇನ ರಾವಣೋ ನಾಮ ರಾಕ್ಷಸಃ |
ಸರ್ವಾನ್ ನೋ ಬಾಧತೇ ವೀರ್ಯಾತ್ ಬಾಧಿತುಂ ತಂ ನ ಶಕ್ನುಮಃ ||
(ವಾಲ್ಮೀಕಿ ರಾಮಾಯಣ, ಬಾಲಕಾಂಡ, ಪಂಚದಶ ಸರ್ಗಃ, ಶ್ಲೋಕ-೬)
“ಕಡು ಕಷ್ಟದಲ್ಲಿರುವೆವು ಭಗವಂತಾ! ಬಲ-ದರ್ಪಗಳಿಂದ ಉರಿದು ಮೆರೆಯುವ ರಾವಣನೆಂಬ ರಕ್ಕಸನು ನಮ್ಮನ್ನು ನಾನಾ ಪ್ರಕಾರವಾಗಿ ಪೀಡಿಸುತ್ತಿದ್ದಾನೆ.
ದುಷ್ಟಶಿಕ್ಷಣ~ಶಿಷ್ಟರಕ್ಷಣಕ್ಕಾಗಿ ನಿನ್ನಿಂದಲೇ ಸೃಷ್ಟಿಯಾದವರು ನಾವಾದರೂ, ನೀನಿತ್ತ ದಿವ್ಯಪದವಿ- ನೀನೇ ನೀಡಿದ ದಿವ್ಯಸಾಮರ್ಥ್ಯಗಳಿಂದ ಸಮನ್ವಿತರಾದವರು ನಾವಾದರೂ, ಲೋಕಕಂಟಕನಾದ ದಶಕಂಠನ ದಮನವು ನಮಗೆ ಅನಿವಾರ್ಯ-ಕರ್ತವ್ಯವೇ ಆಗಿದ್ದರೂ, ಅವನು ಏನೇನು ಮಾಡಿದರೂ- ಏನೇನೂ ಮಾಡಲಾರದೆ ಕೈಚೆಲ್ಲಿ ಕುಳಿತುಕೊಳ್ಳುವ ದುರವಸ್ಥೆ ನಮ್ಮದಾಗಿದೆ…
“ಏಕೆಂದರೆ, ರಾವಣನನ್ನು ಎದುರಿಸುವುದೆಂದರೆ ನಿನ್ನನ್ನು ಎದುರಿಸಿದಂತೆಯೇ ಆಗಿದೆ! ರಾವಣನ ರಕ್ಕಸ-ತೊಗಲಿನ ‘ಒಳಗೆ’ ನಿನ್ನ ವಂಶವಾಹಿನಿಯು ಹರಿಯುತ್ತಿದ್ದರೆ, ‘ಮೇಲೆ’ ನಿನ್ನ ವರವು ವಜ್ರಕವಚವಾಗಿ ವಜ್ರಾಯುಧ-ಪ್ರಹಾರಗಳಿಂದಲೂ ಅವನನ್ನು ಕಾಪಿಡುತ್ತಿದೆ!”
“ಸೃಷ್ಟೀಶ್ವರರಾದರೇನು, ಸೃಷ್ಟಿ-ಸಂವಿಧಾನವನ್ನು ಮೀರುವಂತಿಲ್ಲವಲ್ಲವೇ? ಆದುದರಿಂದ ‘ಅಮರರಿಂದ ಮರಣವಿಲ್ಲ!’ ಎನ್ನುವ ನಿನ್ನ ವರದ ಗೆರೆಯನ್ನು ಮೀರಲಾರದೆ, ಆದುದರಿಂದಲೇ ರಾವಣನ ಮರಣವನ್ನು ಸಾಧಿಸಲಾಗದೆ ತೊಳಲಾಡುತ್ತಲಿರುವೆವು. ಆದರೆ ಆ ದುರುಳನು ಮಾತ್ರ ಲೋಕಮರ್ಯಾದೆಯ ಎಲ್ಲ ಗೆರೆಗಳನ್ನು ಮೀರಿ ವ್ಯವಹರಿಸುತ್ತಿದ್ದಾನೆ!”
“ಅವರನ್ನು ಕಂಡೊಡನೆಯೇ ಸಮಾಧಾನ; ಅದು ಮಹಾತ್ಮರ ಲಕ್ಷಣ. ಯಾರನ್ನು ಕಂಡೊಡನೆಯೇ ಕಂಪನವೋ – ಅವರೇ ದುರಾತ್ಮರು. ರಾವಣನನ್ನು ಕಾಣುವ ಮಾತಿರಲಿ, ಅವನ ನೆನಪಾದರೆ ಸಾಕು- ತ್ರಿಭುವನದ ಸಮಸ್ತ ಜೀವಗಳೂ ಕಂಪಿಸುವವು! ತಾ ಬರುವ ಮುನ್ನವೇ ಭಯ ತರುವ, ಗಾಳಿ ಸೋಕಿದರೆ ಸಾಕು- ಜೀವಗಳ ಉಸಿರೇ ನಿಲ್ಲಿಸುವ ಮಹಾಭೂತವಾಗಿಬಿಟ್ಟಿದ್ದಾನೆ ನಿನ್ನ ಪ್ರಪೌತ್ರ!”*
“ಇನ್ನೊಂದು ಜೀವಕ್ಕೆ ಮುಳ್ಳಾಗುವ ಹಕ್ಕು ಯಾವ ಜೀವಕ್ಕೂ ಇಲ್ಲ; ಅದು ಸೃಷ್ಟಿ-ಸಂವಿಧಾನ. ಆದರೆ ಮುಕ್ಕೋಟಿ ದೇವತೆಗಳಿಗೆ- ಮಾತ್ರವಲ್ಲ, ಮೂಜಗದ ಅನಂತ ಜೀವಗಳಿಗೆ ದಶಕಂಠನು ತಾನೊಬ್ಬನೇ ಕಂಟಕನಾಗಿ ಪರಿಣಮಿಸಿದ್ದಾನೆ!”
“ಏಳ್ಗೆಯು ಯಾವುದೇ ಜೀವದ ಮೊದಲ ಹಕ್ಕು; ಆದರೆ ರಾವಣನ ದೆಸೆಯಿಂದಲಾಗಿ, ಇಂದು ಉನ್ನತಿಯೇ ಅವನತಿಯ ಸೋಪಾನವಾಗಿ ಸಂದಿದೆ! ಯಾರಿಗೇ ಬಹಳವಾದ ಒಳಿತಾದರೂ, ಭಾಗ್ಯೋದಯವನ್ನು ಯಾರೇ ಕಂಡರೂ ರಾವಣನು ಸಹಿಸಲಾರ! ಸಾಧಕರನ್ನು ಬಾಧಿಸಲು ಅವನಿಗೆ ಕಾರಣವೇ ಬೇಕಾಗಿಲ್ಲ! ತಾನಾಗಿಯೇ ಕಾಲುಕೆರೆದು ಕಲಹ ಕರೆದು, ದಿನಕ್ಕೊಬ್ಬರನ್ನಾದರೂ- ನಿನ್ನ ಸೃಷ್ಟಿಗೆ ಭೂಷಣರಾದಂಥವರನ್ನು – ಮುಗಿಸದಿದ್ದರೆ ಅವನ ದಿನಚರಿಯೇ ಮುಗಿಯದು!”
“ಪರರ ಏಳ್ಗೆಯನ್ನು ಕಂಡಾಗ- ಸಜ್ಜನನಾದರೆ ಮುದಗೊಳ್ಳುತ್ತಾನೆ; ದುರ್ಜನನಾದರೆ ಕರುಬುತ್ತಾನೆ. ಮತ್ಸರವನ್ನೇ ಮನದ ಮೂಲಭಾವವಾಗಿಸಿಕೊಂಡಿರುವ ದಶಾನನನು ದುರ್ಜನರ ಕುಲಗುರುವೆನಿಸಿಬಿಟ್ಟಿದ್ದಾನೆ!”
ರಾವಣನ ಸಹಜಸ್ವಭಾವವಾದ ಜೀವದ್ವೇಷವು ಬರಬರುತ್ತಾ ಸರ್ವದ್ವೇಷವಾಗಿ ಮಾರ್ಪಟ್ಟಿದೆ!
- ರಾವಣನಿಗೆ ತನ್ನ ಸಾಕ್ಷಾತ್ ಸಹೋದರನೂ, ಧನೇಶ್ವರನೂ- ಯಕ್ಷಜನೇಶ್ವರನೂ ಆದ ಕುಬೇರನನ್ನು ಕಂಡರಾಗದು!
- ಲೋಕಧಾರಣ-ಪೋಷಣ-ಕಾರಣರಾದ ದೇವತೆಗಳೆಲ್ಲರೂ ಅವನ ವೈರಿಗಳು!*
- ತ್ರಿಲೋಕ-ನಿಯಾಮಕನಾದ ದೇವರಾಜನಂತೂ ಅವನ ಪರಮವೈರಿ!
- ಸರ್ವಭೂತಹಿತೈಷಿಗಳಾದ ಋಷಿಗಳ ರಕ್ತಮಾಂಸಗಳು ಅವನ ಪ್ರಿಯಭೋಜನ!
- ಲೋಕಕ್ಷೇಮಕಾಮರಾಗಿ ಜಪಹೋಮಗಳನ್ನು ನಡೆಸುವ ವಿಪ್ರೋತ್ತಮರ ಹಿಂಸೆ-ಹನನಗಳು ಅವನ ದಿನಚರಿ!
- ಯಕ್ಷ-ಗಂಧರ್ವರ, ಕಿನ್ನರ-ಕಿಂಪುರುಷರ ನೆರಳು ಕಂಡರೆ ಅವನಿಗೆ ಆಗದು!
- ಧರ್ಮಮೂರ್ತಿಗಳೂ, ಧುರಧೀರರೂ ಆದ ಧರೆಯ ದೊರೆಗಳೆಲ್ಲರೂ ದಶಶಿರನ ಶರಗಳಿಗೆ ಶಿರಗೊಟ್ಟು ಪರಲೋಕ ಸೇರಿದ್ದಾರೆ; ವರ-ವೃಷಭಗಳೆಲ್ಲವನ್ನೂ ಹೆಬ್ಬುಲಿಯು ಕೊಂದು ಕಳೆದ ಬಳಿಕ ಶೂನ್ಯವಾಗುಳಿದ ಗೋಷ್ಠದಂತಾಗಿದೆ* ಧರಣಿಯ ದಾರುಣಾವಸ್ಥೆ!
- ಪಾತಾಲದೆಡೆಯಲ್ಲಿ ತಮ್ಮ ಪಾಡಿಗೆ ತಾವಿರುವ ನಾಗರ ಹೆಡೆ ಮುರಿಯಲಾಗಿದೆ!
- ಕೊನೆಗೆ ತನ್ನದೇ ಜಾತಿಯವರನ್ನೂ ರಾವಣನು ಬಿಟ್ಟಿಲ್ಲ! ಅವನ ಊಳಿಗಗೈವ ಅಸುರರು ಮಾತ್ರವೇ ಅವನಿಯಲ್ಲಿ ಇಂದು ಉಳಿದುಕೊಂಡಿರುವುದು! ಮತ್ತೆಲ್ಲರೂ ಮತ್ತವಾರಣದರ್ಪದ* ರಾವಣನ ಕಾಲ್ಕೆಳಗಿನ ಧೂಳಾಗಿದ್ದಾರೆ!”
“ಸೌಂದರ್ಯವು ಸ್ತ್ರೀಯರಿಗೆ ಭೂಷಣ; ಪೌರುಷವು ಪುರುಷರಿಗೆ ಭೂಷಣ; ಆದರೆ ಇಂದು ಅವೆರಡೂ ಸ್ತ್ರೀ-ಪುರುಷರ ಪ್ರಾಣಹರಣದ ಕಾರಣಗಳಾಗಿವೆ!
ಚೆಲುವೆಯರ ಸುಳಿವು ಸಿಕ್ಕರೆ ಅವರ ಅಪಹರಣ ನಿಶ್ಚಿತ; ವೀರರ ಇರವು ತಿಳಿದರೆ ಅವರ ಅಪಮರಣ ಖಂಡಿತ; ವಿಕ್ರಮ-ಸೌಂದರ್ಯಗಳಿಗೆ ಸಿಗುವ ಉಡುಗೊರೆಗಳೆಂದರೆ ಮರಣ-ಹರಣಗಳು! ರಾವಣಶಕೆಯಲ್ಲಿ ಪರಾಕ್ರಮವು ಶವವಾಗುವ ದಾರಿಯಾದರೆ, ಚೆಲುವು ಜೀವಚ್ಛವವಾಗುವ ದಾರಿಯಾಗಿದೆ!
ಪರಾಕ್ರಮಿಗಳು ಪಲಾಯನ-ಪ್ರಾಣಹರಣಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿದೆ; ಮಾನಿನಿಯರು ಮರಣ-ಮಾನಹರಣಗಳಲ್ಲಿ ಒಂದನ್ನು ಒಪ್ಪಿಕೊಳ್ಳಬೇಕಾಗಿದೆ! ಬದುಕುವ ಅವಕಾಶವಿರುವುದು ಹೇಡಿ-ಕುರೂಪಿಗಳಿಗೆ ಮಾತ್ರವಾಗಿಬಿಟ್ಟಿದೆ!”
‘ಒಬ್ಬ ಅಳಿದರೆ ಕೋಟಿ ಜೀವಗಳು ಅರಳುವವು’ ಎಂದಾದರೆ ಅಂಥವನಿಗೆ ಬದುಕುವ ಹಕ್ಕೇ ಇಲ್ಲ! ಆದುದರಿಂದ ಶುಭದ ಶತ್ರುವಾದ, ಶಿಷ್ಟರ ಕಷ್ಟವೇ ಆದ ರಾವಣನ ಮರಣದ ಮಾರ್ಗ ತೋರಿಸು; ಒಳ್ಳೆಯವರು ಯಾರೂ ಉಳಿಯಬಾರದು ಎಂಬುದೇ ಯಾರ ಸಿದ್ಧಾಂತವೋ ಅಂಥವನ ಅಂತ್ಯವಾಗದಿದ್ದರೆ ಪ್ರಪಂಚವೇ ಅಂತ್ಯವಾದೀತು!!
ಬ್ರಹ್ಮ, ತನ್ನ ನಾಲ್ಕು ಮೊಗಗಳ ಎಂಟೂ ಕಿವಿಗಳನ್ನು ಜಗದಗಲ ತೆರೆದು ಆಲಿಸುತ್ತಿದ್ದಂತೆಯೇ, ದೇವತೆಗಳು ತಮ್ಮ ಮೊರೆಯ ಮಂಡನೆಯನ್ನು ಮುಂದುವರಿಸಿದರು..
(ಸಶೇಷ)
~*~
*ಕ್ಲಿಷ್ಟ~ಸ್ಪಷ್ಟ:
- ಗೋಷ್ಠ = ಗೋಶಾಲೆ / ಹಟ್ಟಿ. ಕೊಟ್ಟಿಗೆ. ಗೋಷ್ಠ/ಗೋಷ್ಠಕ=ತತ್ಸಮ, ಕೊಟ್ಟಿಗೆ=ತದ್ಭವ
- ಮತ್ತವಾರಣ = ಮದವೇರಿದ ಆನೆ.
*ತಿಳಿವು~ಸುಳಿವು:
- <ಲೋಕರಾವಣಃ> : ರಾವಣ ಎಂದರೆ ಆಕ್ರಂದನ ಎಂಬ ಅರ್ಥವಿದೆ. ರಾವಣೋ ಲೋಕರಾವಣಃ ಎಂಬಲ್ಲಿ ರಾವಣನು ಲೋಕವನ್ನೇ ಆಕ್ರಂದಿಸುವಂತೆ ಮಾಡಿದವನು ಎಂಬರ್ಥ.
- <ಬ್ರಹ್ಮನ ಪ್ರಪೌತ್ರ> = ರಾವಣನು ಬ್ರಹ್ಮನ ಪ್ರಪೌತ್ರನೆಂಬುದು ಅಚ್ಚರಿ ಆದರೂ ಸತ್ಯವಿಚಾರ.
ಬ್ರಹ್ಮಮಾನಸ ಪುತ್ರ ಪುಲಸ್ತ್ಯರ ಮಗ, ಅಂದರೆ ಬ್ರಹ್ಮನ ಪೌತ್ರ ವಿಶ್ರವಸು. ವಿಶ್ರವಸುವಿನ ಪುತ್ರ ರಾವಣ. ಹಾಗಾಗಿ ರಾವಣನು ಬ್ರಹ್ಮನ ಪ್ರಪೌತ್ರ. - <ಲೋಕಧಾರಣ~ಪೋಷಣ-ಕಾರಣ ದೇವತೆಗಳು> = ಧಾರಣ ಎಂದರೆ ಉಳಿವಿಗೆ ಕಾರಣರಾದ. ಪೋಷಣ ಎಂದರೆ ಬೆಳೆಯುವಿಕೆಗೆ ಕಾರಣರಾದ. ಧಾರಣ & ಪೋಷಣ ಎಂಬುದು ಜೀವಚೈತನ್ಯದ ಎರಡು ಅನಿವಾರ್ಯ ದೈವಕೃಪೆ.
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 73ನೇ ರಶ್ಮಿ.
72 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.
ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.
April 29, 2018 at 6:51 AM
ದುಷ್ಟರಿಗೆ ಶಿಕ್ಷೆಯಾಗದಿದ್ದರೆ ಶಿಷ್ಟರು ಬದುಕುವುದು ಕಷ್ಟ…. ದುಷ್ಟರಲ್ಲೇ ಸರ್ವ ಶ್ರೇಷ್ಠ ದುಷ್ಟ ರಾವಣನಾದ.ಅವನು ಮಾಡಿದ ಪಾಪ ಒಂದಲ್ಲ ಎರಡಲ್ಲ… ನೊಂದ ಮನಸ್ಸಿನ ಶಾಪ ತಟ್ಟದೇ ಇದ್ದಿತೆಂದು? ಪ್ರಪಂಚದ ಉಳಿವಿಗೆ,ಒಳಿತಿಗೆ ರಾವಣ ಸಾಯಲೇಬೇಕಾಗಿತ್ತು….
#ರಾಮರಶ್ಮಿ