॥ ಹರೇರಾಮ ॥

ಇತ್ತ…

ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…

ಅತ್ತ…

ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …

ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…

ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…

ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..

ಅದು ಮುತ್ತಿನ ಅವತಾರ…


ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…

ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…

ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!

ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…

ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!

ನಾರದರ ಮುಖದ ಮುಗಿಲಿನಿಂದ ಹೊರಹೊಮ್ಮಿದ ರಾಮ ಕಥಾ ಬಿಂದುಗಳು ವಾಲ್ಮೀಕಿಯ ಹೃದಯ ಗರ್ಭವನ್ನು ಸೇರಿ ರಾಮಾಯಣವೆಂಬ ರತ್ನಾಕರವನ್ನೇ ನಿರ್ಮಿಸಿದವು…!

ಮುತ್ತು ಮೂಡುವ ಮೊದಲು ಕಪ್ಪೆಚಿಪ್ಪು ಬಹಳ ಜನರಿಗೆ ಬೇಡ…

ಆದರೆ ಚಿಪ್ಪಿನೊಡಲೊಳಗಾಯಿತೋ ಒಮ್ಮೆ ಮುತ್ತಿನ ಸೃಷ್ಟಿ…

ಆದರ-ಅಭಿಲಾಷೆಗಳೊಡನೆ ಅತ್ತ ಹರಿಯುವುದು ಅಖಿಲ ವಿಶ್ವದ ದೃಷ್ಟಿ…!

ಇದರಂತೆಯೇ ಒಂದು ಸಮಯದಲ್ಲಿ ವಾಲ್ಮೀಕಿಗಳು ಜಗತ್ತಿನ ಪಾಲಿಗೆ ಬೇಡ…!

ಆದರೆ ಒಮ್ಮೆ ಅವರ ಎದೆಯಾಳದಲ್ಲಿ ರಾಮಾಯಣದ ಪ್ರಾದುರ್ಭಾವವಾಯಿತೋ…ಲೋಕವೆಲ್ಲ ಕೊಂಡಾಡಿತು ಅವರನ್ನು ಆದಿಕವಿಯೆಂದು…!!

ವಾಲ್ಮೀಕಿಯ ಮನವೆಂಬ ಹದವಾದ ಅಮೃತಭೂಮಿಯಲ್ಲಿ ರಾಮ ಕಥಾನಕವೆಂಬ ಅಮೃತ ಬೀಜಾವಾಪಗೈದರು ನಾರದರು…

ಅದು ಅಂಕುರಿಸಿ ಟಿಸಿಲೊಡೆದು, ಗಿಡವಾಗಿ, ಮರವಾಗಿ, ಹೆಮ್ಮರವಾಗಿ, ಕಾಂತಾರವಾಗಿ, ಅಸಂಖ್ಯ ರಾಮಾಯಣಗಳಾಗಿ ಇಂದು ವ್ಯಾಪಿಸಿದೆ ಧರೆಯೆಲ್ಲವನ್ನು..!!

ಪಾತ್ರವೆಂದರೆ ಹೀಗಿರಬೇಕು..!

ಸಂಸ್ಕೃತದಲ್ಲಿ ಪಾತವೆಂದರೆ ಬೀಳುವುದು… ತ್ರಾಣವೆಂದರೆ ಕಾಪಾಡುವುದು…

ಇವೆರಡು ಸೇರಿ ನಿರ್ಮಾಣಗೊಂಡ ಪಾತ್ರ ಶಬ್ದ…

ತನ್ನುಡಿಯಲ್ಲಿ ಬಿದ್ದುದನ್ನು ಹಾಳುಗೆಡವದೇ, ಉಳಿಸಿ ಬೆಳೆಸಿಕೊಳ್ಳುವುದೇ ಪಾತ್ರತ್ವ..

ನೆಲಕ್ಕೆ ಚೆಲ್ಲಿದ ಹಾಲು ಆಗುವುದು ಹಾಳು…

ಅದೇ ಕಂಚಿನ ಪಾತ್ರವಾದರೆ ತನ್ನೊಳಗೆ ನಿಕ್ಷಿಪ್ತವಾದ ಹಾಲನ್ನು ಹಾಳು ಮಾಡದು…ಮಾತ್ರವಲ್ಲ…ಹಾಲಿನ ಗುಣ ವೃದ್ದಿ ಮಾಡುವುದು..!

ಪಾತ್ರತ್ವ ಎಂದರೆ ಇದುವೇ…!

ಧನ್ಯರಲ್ಲವೇ  ವಾಲ್ಮೀಕಿಯಂತಹ ಪಾತ್ರರನ್ನು ಪಡೆದ ನಾರದರು…?

ಧನ್ಯರಲ್ಲವೇ ನಾರದರಂತಹ ದಾತೃವನ್ನು ಪಡೆದ ವಾಲ್ಮೀಕಿಗಳು…?

ಧನ್ಯಧನ್ಯರಲ್ಲವೇ ‘ರಾಮಾಯಣ’ವನ್ನು ಪಡೆದ ನಾವೆಲ್ಲರೂ…?

|| ಹರೇರಾಮ ||

Facebook Comments Box