|| ಹರೇರಾಮ ||

ರಾಮಾಯಣ ಆರಂಭವಾಗುವುದು ಹೀಗೆ..

” ತಪ:ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಂ | ವಾಲ್ಮೀಕಿಃ ಪರಿಪಪ್ರಚ್ಛ ನಾರದಂ ಮುನಿಪುಂಗವಂ || “

“ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರೂ, ಮಾತು ಬಲ್ಲವರಲ್ಲಿ ಮಿಗಿಲಾದವರೂ ಆದ ನಾರದರೆಂಬ ಶ್ರೇಷ್ಠ ಮುನಿಯಲ್ಲಿ ತಪಸ್ವಿಗಳಾದ ವಾಲ್ಮೀಕಿಗಳು ಪರಿಪ್ರಶ್ನೆಗೈದರು..”

ನಾರದರಲ್ಲಿ ಮೂರು ವಿಶೇಷಗಳನ್ನು ಗುರುತಿಸಿದೆ ಈ ಕವಿತೆ…

೧. ತಪಸ್ಸು,

೨. ಸ್ವಾಧ್ಯಾಯ,

೩. ವಾಗ್ಮಿತ್ವ.

ತಪಸ್ಸಿನ ಮೂಲಕ ತನ್ನೆಲ್ಲ ದೋಷಗಳನ್ನು ಕಳೆದುಕೊಂಡು..

ಸ್ವಾಧ್ಯಾಯದ ಮೂಲಕ ತನ್ನನ್ನೇ ತಾನರಿತು..

ವಾಗ್ಮಿತೆಯ ಮೂಲಕ ತನ್ನರಿವನ್ನು ಜೀವಕೋಟಿಗೆ ವಿತರಿಸಬಂದವರು ನಾರದರು..

ಇದೇ ಕವಿತೆ ವಾಲ್ಮೀಕಿಗಳನ್ನು ಬಣ್ಣಿಸುವುದು ‘ತಪಸ್ವೀ’ ಎಂಬ ಒಂದೇ ಒಂದು ವಿಶೇಷಣದಿಂದ..

ತಪಸ್ಸೆಂದರೆ ತಾಪ..
ಅದೊಂದು ಬಗೆಯ ಕಾವು..
ಚಿನ್ನದಲ್ಲಿರುವ ಚಿನ್ನವಲ್ಲದ್ದನ್ನು ಸುಡಲು ಬೇಕೇ ಬೇಕಲ್ಲವೇ ಕಾವು..?
ಹೊನ್ನು, ಕಾವು ಕಂಡ ಮೇಲಲ್ಲವೆ ಸು-ವರ್ಣವಾಗಿ ಕಂಗೊಳಿಸುವುದು..?
ತಪಸ್ಸೂ ಕೂಡ ಪ್ರಕೃತಿಯಲ್ಲಿ ಒಂದು ಬಗೆಯ ತಾಪವನ್ನೇರ್ಪಡಿಸುತ್ತದೆ…
ತನ್ಮೂಲಕ ದೋಷಗಳನ್ನೆಲ್ಲ ದಹಿಸಿ ಜೀವಿಯನ್ನು ಪರಿಶುದ್ಧಗೊಳಿಸುತ್ತದೆ…!

ನಾರದರು ಬರುವ ಮುನ್ನ ತೀವ್ರತರ ತಪದಿಂದ ತನ್ನೊಳಗಿನ ಸರ್ವದೋಷಗಳನ್ನೂ ಕಳೆದುಕೊಂಡು ಪರಿಶುದ್ಧರಾಗಿ ಸಿದ್ಧರಾಗಿದ್ದರು ವಾಲ್ಮೀಕಿಗಳು…!

ಪಾತ್ರದಲ್ಲಿ ಏನಾದರೂ ಒಳ್ಳೆಯದನ್ನು ತುಂಬಬೇಕಾದರೆ ಮೊದಲು ಅದನ್ನು ತೊಳೆದು ಶುದ್ಧ ಮಾಡಬೇಕಲ್ಲವೇ..?
ಕಲ್ಮಷ ತುಂಬಿರುವ ಪಾತ್ರದಲ್ಲಿ ಒಳ್ಳೆಯದೇನನ್ನದರೂ ತುಂಬಿದರೆ ಅದು ಒಳ್ಳೆಯದಾಗಿ ಉಳಿಯುವುದಾದರೂ ಹೇಗೆ..?

ತಪದ ಮೂಲಕ ತೊಳೆಯಲ್ಪಟ್ಟಿದ್ದ, ಕಲ್ಮಷ ಕಳೆದು ಬರಿದಾಗಿದ್ದ, ವಾಲ್ಮೀಕಿಗಳ ಅಂತರಂಗವೆಂಬ ಪಾತ್ರದಲ್ಲಿ ಶ್ರೀರಾಮಾಯಣವನ್ನು ತುಂಬಿದರು ನಾರದರು…!

ಇಲ್ಲಿ ನಮಗೊಂದು ಸಂದೇಶವಿದೆ…

ವಾಲ್ಮೀಕಿಯ ರಾಮಾಯಣ ನಮ್ಮದಾಗಬೇಕಾದರೆ ವಾಲ್ಮೀಕಿಯ ದಾರಿ ನಮ್ಮದಾಗಬೇಕು..

ಅದೆಷ್ಟು ಕಾಲವಾಯಿತೋ… ನಾವು ನಮ್ಮೊಳಮನೆಯನ್ನು ತೊಳೆಯದೆಯೇ…!
ಹೊರಜಗತ್ತಿನ ಕಸಕಡ್ಡಿಗಳು – ಬೇಡದ ಸಂಗತಿಗಳು ಅದೆಷ್ಟು ಕಾಲದಿಂದ ನಮ್ಮೊಳತುಂಬಿಕೊಂಡಿವೆಯೋ..!!

ಅವುಗಳ ಜೊತೆಗೆ ರಾಮಾಯಣವೂ ಸೇರಿದರೆ ರಾಮಾಯಣದ ನೈಜರೂಪ ಮನಸ್ಸಿಗೆ ಬರುವುದಾದರೂ ಎಂತು..?

ಹುಳಿಪಾತ್ರದಲ್ಲಿಟ್ಟ ಹಾಲು ಹಾಳೆನಿಸಿದರೆ…
ಮೆಣಸಿನ ಪಾತ್ರದಲ್ಲಿಟ್ಟ ಹಾಲು ಖಾರವೆನಿಸಿದರೆ…
ಅದು ಹಾಲಿನ ತಪ್ಪಲ್ಲ…!

ಹಾಗೆಯೇ ಪೂರ್ವಾಗ್ರಹಗಳಿಂದ ಕಲುಷಿತವಾದ ನಮ್ಮ ಮನಸ್ಸಿಗೆ ರಾಮಾಯಣ ಏನೇನೋ ಆಗಿ ತೋರಿದರೆ…
ಅದು ರಾಮಾಯಣದ ತಪ್ಪಲ್ಲ…!

ಶುಚಿಯಲ್ಲದ ಕಣ್ಮನಗಳಿಂದ ರಾಮಾಯಣವನ್ನು ನೋಡಿದ್ದೇ ಅದರ ಹಲವು ಬಗೆಯ ಅಪಾರ್ಥ,ಅಪವ್ಯಾಖ್ಯಾನ,ಅಪಪ್ರಚಾರಗಳಿಗೆ ಕಾರಣವಾಯಿತು..!

ಶುದ್ಧ ದೃಷ್ಟಿಗೆ ರಾಮಾಯಣದ ಶುದ್ಧರೂಪ ಗೋಚರಿಸುವುದು….
ಕಲುಷಿತ ದೃಷ್ಟಿಗೆ…………………………???????????????????


ರಾಮಾಯಣದ ಸಿದ್ಧತೆಯೆಂದರೆ………………ಅದು ದೃಷ್ಟಿಯ ಶುದ್ಧತೆ…!!!

|| ಹರೇರಾಮ ||


Facebook Comments Box