ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಭುವಿಯವರು ದಿವಿಯವರನ್ನು ಹಾಡಿಹೊಗಳುವುದು ಪದ್ಧತಿ. ಆದರೆ ರಾವಣ ಸಂಹಾರ ಎಂತಹ ಚಮತ್ಕಾರವನ್ನ ಮಾಡಿದೆ ಅಂದರೆ ದಿವಿಯವರು ಭುವಿಯವರ ಗುಣ ಕರ್ಮಗಳನ್ನು ಹಾಡಿ ಹೊಗಳ್ತಾ ಇದಾರೆ. ದೇವಗಂಧರ್ವದಾನವರು ಪರಮರ್ಶಿಗಳು ಯಕ್ಷಕಿನ್ನರರು ಯುದ್ಧ ನೋಡ್ಲಿಕ್ಕೆ ಬಂದವರು ಮರಳುವಾಗ ಹಾಡಿ ಹೊಗಳಿದರು. ರಾಮಾಯಣ ಯುದ್ಧದ ಮಹತಿಯನ್ನು ಹಾಡಿ ಹೊಗಳಿದರು. ರಾವಣನ ಘೋರ ವಧೆ, ರಾಘವನ ಅದ್ಭುತ ಪರಾಕ್ರಮ, ವಾನರರ ಘೋರ ಯುದ್ಧ, ಸುಗ್ರೀವನ ವಿಶಿಷ್ಟವಾದ ಸಲಹೆಗಳು, ಮಾರುತಿಯ ಮತ್ತು ಲಕ್ಷ್ಮಣನ ಪ್ರೀತಿ, ವೀರತ್ವ ಇವುಗಳನ್ನ ಹಾಡಿ ಹೊಗಳ್ತಾ ಹೊಗಳ್ತಾ ಅವರು ಸಂತುಷ್ಟರಾಗಿ ತಮ್ಮ ತಮ್ಮ ಸ್ಥಾನಗಳಿಗೆ ಹೊರಟು ಹೋದರು. ಬಳಿಕ ರಾಮನು ಇಂದ್ರ ಕೊಟ್ಟಂತಹ ಅಗ್ನಿಪ್ರಭೆಯ ದಿವ್ಯ ರಥವನ್ನು ಮತ್ತು ಮಾತಲಿಯನ್ನು ಗೌರವಿಸಿ ಕಳುಹಿಸಿಕೊಡ್ತಾನೆ. ಮಾತಲಿ ರಾಮನ ಆಶೀರ್ವಾದವನ್ನ ಪಡೆದು ರಥವನ್ನೇರಿ ದಿವಿಯನ್ನೇರ್ತಾನೆ.

ಇಷ್ಟಾದ ಬಳಿಕ ರಾಮನು ಪರಮಪ್ರೀತನಾಗಿ ಸುಗ್ರೀವನನ್ನು ಬಾಚಿ ತಬ್ಬಿದ. ಅವನ ಸುತ್ತ ವಾನರ ನಾಯಕರು. ವಾನರರು ಎಲ್ಲಿ ಬೀಡುಬಿಟ್ಟಿದ್ದರೋ ಆ ಸೇನಾಪ್ರದೇಶಕ್ಕೆ ರಾಮನು ವಾನರ ನಾಯಕರೊಡಗೂಡಿ ತೆರಳ್ತಾನೆ. ಬಳಿಕ ಬಳಿಯಿದ್ದ ಲಕ್ಷ್ಮಣನಿಗೆ ರಾಮ ಸೂಚನೆ ಕೂಡ್ತಾನೆ. ತಮ್ಮ, ಲಂಕೆಗೆ ಹೋಗು. ವಿಭೀಷಣನ ರಾಜ್ಯಾಭಿಷೇಕವನ್ನು ನೆರವೇರಿಸು. ಒಂದು ಬಾರಿ ನಾವು ಮಾಡಿಯಾಗಿದೆ. ಆದರೆ ಈಗ ಲಂಕೆಯಲ್ಲಿ ರಾಕ್ಷಸರ ಸಮ್ಮುಖದಲ್ಲಿ ರಾಜ್ಯಾಭಿಷೇಕವನ್ನು ನೆರವೇರಿಸು. ಅವನು ಅನುರಕ್ತ, ಭಕ್ತ ಮತ್ತು ನನಗೆ ಯುದ್ಧದಲ್ಲಿ ಬಹಳ ಸೇವೆ ಮಾಡಿದಾನೆ. ಹಾಗಾಗಿ ನನ್ನ ಈ ಕ್ಷಣದ ಅತ್ಯಂತ ದೊಡ್ಡ ಬಯಕೆ ಯಾವುದು ಅಂದ್ರೆ ವಿಭೀಷಣನಿಗೆ ಲಂಕಾಧಿಪತಿಯಾಗಿ ಅಭಿಷೇಕವಾಗ್ಬೇಕು ಎಂದಾಗ ಸುವರ್ಣದ ಕುಂಭವನ್ನು ತೆಗೆದುಕೊಂಡ ಸೌಮಿತ್ರಿ ವಾನರ ನಾಯಕರನ್ನು ಕರೆದು ಹೋಗಿ ಸಮುದ್ರದಿಂದ ನೀರನ್ನು ತನ್ನಿ ಎಂಬುದಾಗಿ ಸೂಚನೆ ಮಾಡ್ತಾನೆ. ಅವರು ಬಹಳ ವೇಗವಾಗಿ ಹೋಗಿ ಸಮುದ್ರದಿಂದ ನೀರನ್ನು ತಂದರು. ಬಳಿಕ ಲಂಕೆಗೆ ಹೋಗಿ ವಿಭೀಷಣನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಸ್ವರ್ಣಕುಂಭದ ಸಮುದ್ರಜಲದ ಅಭಿಷೇಕವನ್ನು ಮಾಡ್ತಾನೆ ಲಕ್ಷ್ಮಣ. ಸುತ್ತ ರಾಕ್ಷಸರು ಸೇರಿದಾರೆ. ವಿಭೀಷಣನ ನಾಲ್ವರು ಅಮಾತ್ಯರು – ಅನಿಲ, ಅನಲ, ಹರ, ಸಂಪಾತಿ ಇವರಿಗೆ ವಿಭೀಷಣ ದೊರೆಯಾದುದನ್ನು ಕಂಡು ಎಲ್ಲಿಲ್ಲದ ಸಂತೋಷವಾಯ್ತಂತೆ. ಲಂಕೆಯಲ್ಲಿದ್ದ ವಿಭೀಷಣನ ಭಕ್ತರು ಅವರೂ ಬಹಳ ಸಂತೋಷಪಟ್ಟರಂತೆ. ರಾಜ್ಯಾಭಿಷೇಕವಾಗ್ತಿದ್ದಂತೆ ತನ್ನ ಪ್ರಜೆಗಳನ್ನು ಸಂತೈಸಿದ ವಿಭೀಷಣ. ಅದಾದ ಕೂಡಲೇ ರಾಮನ ಸಮೀಪಕ್ಕೆ ಹೋಗ್ತಾನೆ. ವಿಭೀಷಣನ ಪ್ರಜೆಗಳು ವಿಭೀಷಣನಿಗೆ ಒಪ್ಪಿಸಿದ ಮಂಗಲದ್ರವ್ಯಗಳನ್ನೆಲ್ಲ ತಂದು ರಾಮನಿಗೆ ಒಪ್ಪಿಸ್ತಾನೆ ವಿಭೀಷಣ. ರಾಮ ವಿಭೀಷಣನನ್ನು ನೋಡ್ತಾನೆ. ಪಟ್ಟಾಭಿಷೇಕವಾಗಿದೆ ವಿಭೀಷಣನಿಗೆ. ಸಂತೋಷಪಟ್ಟ ರಾಮ. ವಿಭೀಷಣನ ಸಂತೋಷಕ್ಕಾಗಿ ಅವನು ಸಮರ್ಪಿಸಿದ ಮಂಗಲದ್ರವ್ಯಗಳನ್ನು ಸ್ವೀಕಾರ ಮಾಡಿದ ರಾಮ.

ಪಕ್ಕದಲ್ಲಿ ಕೈಮುಗಿದು ನಿಂತಿದಾನೆ ಹನುಮಂತ. ಅವನಿಗೆ ರಾಮನು ಸೂಚನೆ ಕೊಡ್ತಾನೆ ಲಂಕೆಗೆ ಹೋಗು. ಸೀತೆಯನ್ನು ಕಾಣು. ಅದಕ್ಕೂ ಮೊದಲು ಒಂದು ಸೂಚನೆ ಕೊಡ್ತಾನೆ ರಾಮ – ಲಂಕೆಯ ಮಹಾರಾಜನಾದ ವಿಭೀಷಣನ ಅನುಮತಿ ಪಡೆದುಕೊಂಡು. ರಾವಣನ ಮನೆಗೆ ಹೋಗಿ ಸೀತೆಗೆ ಈ ವಿಜಯ ವಾರ್ತೆಯನ್ನು ಅರುಹು. ಅಭಿನಂದಿಸು ವೈದೇಹಿಯನ್ನು. ಆಕೆಗೆ ಹೇಳು – ನಾನು ಕುಶಲಿಯಾಗಿದ್ದೇನೆ. ಸುಗ್ರೀವ, ಲಕ್ಷ್ಮಣ ಎಲ್ಲ ಖುಷಿಯಾಗಿದ್ದಾರೆ. ಮಾತ್ರವಲ್ಲ ರಾವಣನು ಹತನಾಗಿದ್ದಾನೆ. ಗೆಲ್ಲುವವರಲ್ಲಿ ಅಗ್ರಗಣ್ಯನೇ ಹನುಮಂತನೇ ಇದೊಂದು ಕಾರ್ಯವನ್ನು ಗೆದ್ದು ಬಾ ಎಂಬುದಾಗಿ ಹೇಳಿ ಮೈಥಿಲಿಗೆ ಪ್ರಿಯವನ್ನು ಹೇಳಿ, ಆಕೆಯ ಸಂದೇಶವನ್ನು ಕೇಳಿ ಬಾ ಇಲ್ಲಿ. ಹನುಮಂತ ಲಂಕೆಯನ್ನು ಪ್ರವೇಶ ಮಾಡ್ತಾನೆ. ರಾಕ್ಷಸರು ಇವನಿಗೆ ಪ್ರಣಾಮ ಮಾಡ್ತಿದಾರಂತೆ. ಕಾಲ ಹೇಗೆ ಬದಲಾಗ್ತದೆ ನೋಡಿ, ಇಲ್ಲಿಯೇ ಬಾಲಕ್ಕೆ ಬೆಂಕಿ ಹಚ್ಚಿ ಮೆರವಣಿಗೆ ಮಾಡಿದ್ರು.

ಕೆಲವೇ ದಿನಗಳ ಹಿಂದಿನ ಪರಿಸ್ಥಿತಿ ಅದು. ಆದರೆ ಈಗಿ‌ನ ಪರಿಸ್ಥಿತಿ ಹೇಗಿದೆ ಅಂದ್ರೆ ಹನುಮಂತನನ್ನು ಎಲ್ಲ ಗೌರವದಿಂದ ನೋಡ್ತಾ ಇದ್ದಾರೆ ರಾಕ್ಷಸರು. ಅವರ ನಡುವೆ ಹನುಮಂತ ಗಾಂಭೀರ್ಯದಲ್ಲಿ ರಾವಣನ ಮನೆಯನ್ನು ಪ್ರವೇಶ ಮಾಡ್ತಾನೆ. ಅಶೋಕಾವನಕ್ಕೆ ಹೋಗಿ ಅಲ್ಲಿ ಆತಂಕಕ್ಕೆ ಒಳಗಾದ ರೋಹಿಣಿಯಂತೆ ಮರದ ಬುಡದಲ್ಲಿ ಸಪ್ಪೆಯಾಗಿ ಕುಳಿತ ಸೀತೆ, ಸುತ್ತ ರಾಕ್ಷಸಿಯರು.‌ ಸೀತೆಯನ್ನು ಹೋಗಿ ಕಾಣ್ತಾನೆ ವಿನೀತನಾಗಿ ಹನುಮಂತ ಪೂರ್ತಿ ಸಣ್ಣ ರೂಪವನ್ನು ಧರಿಸಿ ಅಭಿವಾದನ ಮಾಡ್ತಾನೆ. ಸೀತೆ ಹನುಮಂತನನ್ನು ಕಂಡು ಏನೂ ಮಾತೇ ಆಡಲಿಲ್ಲ. ಆದ್ರೆ ಕ್ಷಣಮಾತ್ರದಲ್ಲಿ ಅವಳ ಆನಂದ ವ್ಯಕ್ತವಾದ ಇದೆ. ಅವಳ ಸೌಮ್ಯ ಮುಖವನ್ನು ಕಂಡ ಹನುಮಂತ ಮೆಲ್ಲ ಕಥೆ ಶುರು ಮಾಡಿದ್ನಂತೆ. ರಾಮ ಹೇಳಿದ್ದನ್ನೆಲ್ಲ ಹೇಳ್ತಾನೆ. ಮೊದಲು,”ರಾಮನು ಕುಶಲಿ, ಸುಗ್ರೀವ ಲಕ್ಷ್ಮಣರು, ವಿಭೀಷಣ, ವಾನರ ನಾಯಕರು ಎಲ್ಲರೂ ಕುಶಲಿಗಳು. ‘ನಾನು ಕುಶಲವಾಗಿದ್ದೇನೆ’ ಅಂತ ನಿನಗೆ ಹೇಳ್ಬೇಕು ಅಂತ ಹೇಳಿದ್ದಾನೆ ರಾಮ. ಕಾರ್ಯಸಾಧನೆಯಾಗಿದೆ. ರಾಮನೀಗ ಸಫಲನಾಗಿದ್ದಾನೆ, ಶತ್ರುವನ್ನು ಕೊಂದಿದ್ದಾನೆ. ಅದಕ್ಕೆ‌ವಿಭೀಷಣನ ಸಹಾಯ ತುಂಬ ಇತ್ತು. ವಾನರರ ಸೇವೆ ಕೂಡ ಇತ್ತು. ಹಾಗೇ ವಿಭೀಷಣ, ಸುಗ್ರೀವ, ಲಕ್ಷ್ಮಣ.. ಲಕ್ಷ್ಮಣನ ಯುದ್ಧ ತಂತ್ರ ಇದೆಲ್ಲ ಸೇರಿ ರಾವಣನ ಸಂಹಾರವಾಗಿದೆ ದೇವಿ..” ಎಂಬುದಾಗಿ ಹೇಳಿ, ‘ರಾಮನ ಮಾತುಗಳನ್ನು ನಿನಗೆ ಹೇಳ್ತೇನೆ ಈಗ. ಈ ಮಾತುಗಳನ್ನು ಹೇಳುವಾಗ ಪರಮಪ್ರೀತನಾಗಿದ್ದ ರಾಮ. “ಪರಮಾನಂದದಲ್ಲಿ ಮುಳುಗೆದ್ದಿದ್ದೇನೆ. ದೇವೀ, ನಿನಗೊಂದು ಮಾತನ್ನು ಹೇಳ್ತೇನೆ, ನಿನ್ನನ್ನು ಆದರಿಸಿದ್ದೇನೆ, ನಿನ್ನನ್ನು ಮಾನಿಸ್ತಾ ಇದ್ದೇನೆ, ಯಾಕಂದ್ರೆ ‌ರಾವಣನ ಬಂಧಿಯಲ್ಲ‌ ನೀನು. ನಿನ್ನ ಸ್ಥಾನಮಾನಗಳೇ ಬೇರೆ ಈಗ. ಧರ್ಮಜ್ಞೆಯೇ, ದೇವರು ದೊಡ್ಡವನು. ಬದುಕಿದ್ದೀಯೆ ನೀನು ಇನ್ನೂ ಕೂಡ. ನನಗೆ ದೊಡ್ಡ ಜಯ ಉಂಟಾಗಿದೆ ಸೀತೆ. ಹಾಗಾಗಿ, ನಿಶ್ಚಿಂತಳಾಗು ನೀನು, ಸಂತೋಷವನ್ನು ತಾಳು, ಎಲ್ಲ ವ್ಯಥೆಯನ್ನು ಬಿಡು. ರಾವಣನ ಮರ್ಧನವಾಗಿದೆ. ಲಂಕೆಯು ನನ್ನ ವಶ. ಅಂದ್ರೆ, ಲಂಕೆಯು ನಿನ್ನ ವಶ ಈಗ! ನಿನ್ನನ್ನು ಮರಳಿ ಪಡೆದುಕೊಳ್ಳಬೇಕು ಎಂಬ ಕಾರಣಕ್ಕೆ ಆ ನಿರ್ಧಾರದಲ್ಲಿ ದೃಢವಾಗಿದ್ದ ನಾನು ಅಂದಿನಿಂದ ಇಂದಿನವರೆಗೆ ನಿದ್ದೆಯನ್ನೇ ಮಾಡಿಲ್ಲ. ಪ್ರತಿಜ್ಞೆಯನ್ನು ಪೂರ್ತಿಗೊಳಿಸಿದೆ. ರಾವಣ ವಧೆಯಾಯಿತು. ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಈ ಕಾರ್ಯವನ್ನು ಮಾಡಲಾಯ್ತು. ನೀನೇನೂ ಗಾಬರಿ ಮಾಡ್ಕೊಳ್ಬೇಡ. ಶತ್ರುವಿನ ಮನೆಯಲ್ಲಿದ್ದೇನೆ, ಏನೋ ಎತ್ತವೋ ಮುಂದೆ?! ಎಂಬ ಹಾಗೆ ಯಾವ ಗಾಬರಿಯೂ ಬೇಡ. ಯಾಕಂದ್ರೆ ಲಂಕಾಧಿಪತ್ಯವು ಈಗ ವಿಭೀಷಣನದ್ದು. ಹಾಗಾಗಿ ಸಮಾಧಾನ ಪಡು. ನೀನೀಗ ನಿನ್ನ ಮನೆಯಲ್ಲೇ ಇದ್ದೀಯೆ. ಹಾಗೇ, ಈ ನವ ಲಂಕಾಧಿಪತಿ ನಿನ್ನ ಬಳಿಗೆ ಬರ್ತಾನೆ. ಶುದ್ಧ ಪ್ರೀತಿ, ಗೌರವದ ಭಾವದಲ್ಲಿ..” ಹೀಗೆ ಹನುಮಂತ ರಾಮನ ವಚನವನ್ನು ಅನುವಾದ ಮಾಡಿ ಸೀತೆಗೆ ಹೇಳುವಾಗ ಸಂತೋಷವನ್ನು ತಡೆಯಲಾರದೇ ಎದ್ದು ನಿಂತು ಬಿಟ್ಟಳು ಸೀತೆ.

ಮಾತೇ ಹೋಗ್ಬಿಟ್ಟಿದೆ ಪರಮಾನಂದದಲ್ಲಿ. ಪ್ರತ್ಯುತ್ತರ ಕೊಡದ ಸೀತೆಯನ್ನು ಕಂಡು ಹನುಮಂತನಿಗೆ ಸಮಸ್ಯೆಯಾಯ್ತಂತೆ. ‘ಏನು ಯೋಚನೆ ಮಾಡ್ತಿದ್ದೀಯೆ? ಯಾಕೆ ಮಾತಾಡ್ತಿಲ್ಲ ನೀನು?’ ಎಂದಾಗ ಸೀತೆ ಗದ್ಗದಿತ ಧ್ವನಿಯಲ್ಲಿ ಪರಮಪ್ರೀತಿಯಿಂದ ಕೂಡಿದವಳಾಗಿ ಹನುಮಂತನಿಗೆ ಹೇಳಿದ್ಳಂತೆ, ‘ನಿರ್ವಾಕ್ಯಳಾದೆ, ನನ್ನ ಪತಿಯ ವಿಜಯದ ಪ್ರಿಯವಾರ್ತೆಯನ್ನು ಕೇಳಿ, ಹರ್ಷವು ಮಿತಿಮೀರಿ ಮಾತು ಹಿಂದೆ ಹೋಯಿತು. ಹನುಮಂತ, ಈಗ ನನ್ನ ಚಿಂತೆ ಏನು ಅಂದ್ರೆ, ನಿನಗೇನು ಕೊಡ್ಲಿ? ಇಂಥಾದ್ದೊಂದು ಪ್ರಿಯವನ್ನು ನನಗೆ ಹೇಳಿದ್ದಕ್ಕಾಗಿ ಇಕ್ಷ್ವಾಕು ವಂಶದ ರಾಣಿಯಾಗಿ ನಿನಗೇನಾದ್ರು ಕೊಡ್ಬೇಕು. ಏನು ಕೊಡಲಿ? ಇಡೀ ಜಗತ್ತಿನಲ್ಲಿ ಈ ನಿನ್ನ ಪ್ರಿಯವಾರ್ತೆಗೆ ಪ್ರತಿಯಾಗಿ ಕೊಡಬಲ್ಲ ವಸ್ತು ನನಗೆ ಕಾಣ್ತಾ ಇಲ್ಲ.’ ಎಂದಾಗ ಹನುಮಂತ ಕೈಮುಗಿದು ಹೇಳಿದ್ನಂತೆ, ‘ನೀನಿಷ್ಟು ಹೇಳಿದ್ಯಲ್ಲಾ, ಬಂತು ನನಗೆ. ಪತಿಯ ಪ್ರಿಯಹಿತಗಳಲ್ಲಿ ನಿರಂತರ ಯುಕ್ತಳಾದವಳೇ, ನೀನು ಮಾತ್ರ ಹೀಗೆ ಹೇಳೋಕ್ಕೆ ಸಾಧ್ಯ. ಎಷ್ಟು ಪ್ರೀತಿ ತುಂಬಿದೆ ಈ ಮಾತಿನಲ್ಲಿ! ಈ ನಿನ್ನ ಮಾತೇ ಸ್ವರ್ಗಾಧಿಪತ್ಯಕ್ಕಿಂತ ದೊಡ್ಡದು. ರಾವಣನನ್ನು ರಾಮನು ಕೊಂದು ನಿಂತ ದೃಶ್ಯ ನೋಡಿದಾಗಲೇ ನನಗೆ ದೇವರಾಜ್ಯ ಸಿಕ್ಕಿದಂತಾಗಿದೆ. ಅದಕ್ಕಿಂತ ಹೆಚ್ಚೇನೂ ಬೇಡ ನನಗೆ’.

ಸೀತೆಗೆ ತುಂಬ ಸಂತೋಷವಾಗಿದೆ, ಪ್ರಶಂಸೆ ಮಾಡ್ತಾಳೆ. ‘ಎಷ್ಟು ಮಧುರವಾದ ಮಾತುಗಳನ್ನಾಡ್ತೀಯೆ! ಅತಿಲಕ್ಷಣ ಸಂಪನ್ನ ಮಾತುಗಳು! ಇಂಥಾ ಮಾತನ್ನು ನೀನು ಮಾತ್ರ ಆಡ್ಬಹುದು. ಮತ್ಯಾರು ಆಡಲಿಕ್ಕೆ ಸಾಧ್ಯ? ವಾಯುವಿನ ಪ್ರಶಂಸನೀಯ ಪುತ್ರ ನೀನು, ಪರಮ ಧರ್ಮಾತ್ಮ ನೀನು. ನಿನ್ನ ಬಲ, ನಿನ್ನ ಶೌರ್ಯ, ನಿನ್ನ ವಿದ್ಯೆ, ನಿನ್ನ ಸತ್ವ, ನಿನ್ನ ವಿಕ್ರಮ, ನಿನ್ನ ದಕ್ಷತೆ, ನಿನ್ನ ತೇಜಸ್ಸು, ನಿನ್ನ ಕ್ಷಮೆ, ನಿನ್ನ ಧೈರ್ಯ, ನಿನ್ನ ವಿನಯ ಯಾರಿಗಿದೆ? ಇಷ್ಟೆಲ್ಲ ಗುಣಗಳು ಒಬ್ಬನಲ್ಲಿ! ನಮ್ಮ ಪ್ರಭು ರಾಮನಂತೆಯೇ ನೀನು’ ಎಂಬುದಾಗಿ ಪ್ರಶಂಸೆ ಮಾಡ್ತಾಳೆ. ಅಷ್ಟೊತ್ತಿಗೆ ಏನೋ ನೆನಪಾಯ್ತು ಹನುಮಂತನಿಗೆ. ಕೈಮುಗಿದು, ‘ಈ ರಾಕ್ಷಸಿಯರನ್ನು ಕೊಲ್ಲಲಾ?’ ಅಂತ ಅವರ ಮುಂದೆಯೇ ಕೇಳ್ತಾನೆ. ‘ಯಾಕಂದ್ರೆ ನಾನು ಆ ದೃಶ್ಯವನ್ನು ನೋಡಿದ್ದೇನೆ. ಎಷ್ಟು ನಿನ್ನನ್ನು ಪೀಡಿಸ್ತಾ ಇದ್ರು! ಆ ಕ್ರೌರ್ಯವನ್ನು ಕಣ್ಣಾರೆ ಕಂಡಿದ್ದೇನೆ. ಈಗ ತೀರಿಸಿ ಬಿಡ್ತೇನೆ ಅದನ್ನು. ನನ್ನ ಪತಿಯೇ ನನ್ನ ದೇವರು ಎಂಬ ಭಾವದಲ್ಲಿ ನೀನಿದ್ದೆ. ನಿನಗೆಷ್ಟು ಕಷ್ಟ ಇತ್ತು! ಇವರು ಕೊಟ್ಟ ಉಪದ್ರವ ಎಷ್ಟು!? ಒಂದು ದಿನ ನೋಡಿದ್ದೇನೆ ನಾನು. ಇಡೀ ವರ್ಷ ಮಾಡಿದ್ದಾರೆ ಅವರು. ಘೋರ ರೂಪಿಣಿಯರು. ಒಂದು ಒಳ್ಳೆದನ್ನು ಮಾತಾಡಿದ್ದುಂಟಾ ಇವರು? ಹಾಗಾಗಿ, ಇದೊಂದು ವರ ನೀನು ಕೊಡ್ತೀಯಾ? ಎಂದು ಕೇಳ್ತಾನೆ ಸೀತೆಯನ್ನು. ಏನು ಮಾಡ್ತಾನಂತೆ? ಅಂದ್ರೆ, ಮುಷ್ಠಿಗಳಿಂದ, ಅಂಗೈಗಳಿಂದ, ಕಾಲಿನಿಂದ ಬಡೀತೇನೆ, ಒದೀತೇನೆ ಕೆಲವರಿಗೆ‌. ಬೇರೆ ಬೇರೆ ರೀತಿ ಕೊಲ್ಲಲಿಕ್ಕೆ ಬರ್ತದೆ. ಅದನ್ನೆಲ್ಲ ಮಾಡ್ತೇನೆ. ಇವರು ಅರ್ಹರು ಅದಕ್ಕೆ. ಕೆಲವರನ್ನು ಮಂಡಿಯಿಂದ ತಿವೀತೇನೆ. ಇನ್ನು ಕೆಲವರನ್ನು ಕಚ್ಚಿ ಹರೀತೇನೆ. ಕಿವಿ ಮೂಗುಗಳನ್ನು ತುಂಡು ಮಾಡಿ ಎಸೆದುಬಿಡ್ತೇನೆ. ಇನ್ನು ಕೆಲವರ ಕೂದಲನ್ನು ಕಿತ್ತು ಬಿಡ್ತೇನೆ. ಹಾಗೇ ಉಗುರುಗಳಿಂದ ಕೆಲವರನ್ನು, ಹೀಗೆಲ್ಲ ಮಾಡಿ ಸಾಯಿಸ್ತೇನೆ. ಯಾಕಂದ್ರೆ ನಿನಗೆ ಕ್ಲೇಶ ಕೊಟ್ಟಿದ್ದಾರೆ ಅವರು ನಾನಾ ರೀತಿಯಲ್ಲಿ. ನಿನ್ನ ಅಪರಾಧಿನಿಯರನ್ನು ನಾನು ಸುಮ್ಮನೆ ಬಿಡ್ತೇನಾ?

ಹೆದರಿ ಹೋಗಿದ್ದಾರೆ ರಾಕ್ಷಸಿಯರು. ಸೀತೆಗೆ ಮಾತ್ರ ರಾಮನದ್ದೇ ನೆನಪು.

ಹೀಗೆ ಹನುಮಂತನು ಹೇಳಿದಾಗ ಧರ್ಮಯುಕ್ತವಾದ ಮಾತನ್ನು ಸೀತೆ ಆಡಿದಳು, ‘ಹನುಮಂತ, ರಾವಣನ ಅಪ್ಪಣೆ ಪ್ರಕಾರ ಮಾಡಿದ್ದೇ ಹೊರತು ಅವರು ಬೇಕೂಂತ ಮಾಡಿಲ್ಲ. ನೋಡು, ಅವನು ರಾಜ, ಇವರು ಆಳುಗಳು; ಏನು ಮಾಡ್ತಾರೆ ಪಾಪ? ಅವರ ಮೇಲೆ ಯಾಕೆ ಸಿಟ್ಟು ಮಾಡ್ಬೇಕು? ಇದು ನನ್ನ ಹಣೆಬರಹ. ಅದಕ್ಕೆ ಹೀಗಾಯ್ತು. ಅವರದೇನು ತಪ್ಪಿಲ್ಲ. ನನಗೆ ದುರ್ದೆಸೆ ಬಂದಿತ್ತು. ಅದಕ್ಕಾಗಿ ನಾನು ಅದನ್ನೆಲ್ಲ ಸಹಿಸಿದೆ. ಈಗವನು ಸತ್ತನಲ್ಲ, ಇನ್ನು ಮಾಡೋದಿಲ್ಲ ಅವರು. ಬಿಟ್ಟುಬಿಡು ಅವರನ್ನ’ ಎಂಬುದಾಗಿ ಅದ್ಭುತವಾಗಿ ಹೇಳಿದಳು. ಅದಕ್ಕೆ ಅವನಿಗೆ ಸಮಾಧಾನವಿಲ್ಲ. ಆಕೆ ಮತ್ತೆ ಹುಲಿ-ಕರಡಿಯ ಸಂಭಾಷಣೆಯ ಕಥೆಯೊಂದನ್ನು ಹೇಳಿ ಸಮಾಧಾನ ಪಡಿಸ್ತಾಳೆ ಸೀತೆ. ಮಾತ್ರವಲ್ಲ, ಸೂಕ್ತಿಯೊಂದನ್ನೂ ಹೇಳ್ತಾಳೆ. ‘ಇನ್ನೊಬ್ಬರು ಹೇಳಿ ತಪ್ಪು ಮಾಡಿದ್ರೆ ಸಂತರಾದವರು ಅವರ ಮೇಲೆ ಬೇಜಾರು ಮಾಡ್ಕೊಳ್ಳೋದಿಲ್ಲ. ನಾವ್ಯಾಕವರಿಗೆ ಕೆಟ್ಟದ್ದು ಮಾಡ್ಬೇಕು? ಮಾಡ್ಬಾರ್ದು.’ ಅದಕ್ಕೆ ಹೇಳಿದ್ನಂತೆ ಹನುಮಂತ, ‘ರಾಮನೂ ನಿನ್ನ ಹಾಗೇ ಮಾತನಾಡೋದು, ನೀನು ಅವನಿಗೆ ಸರೀ ಇದೀಯೇ’ ಅಂತ. ಆದರೆ ಆ ವಾಕ್ಯವೇ ಸಾಕು ರಾಕ್ಷಸಿಯರಿಗೆ!

ಮತ್ತೆ ಹನುಮಂತ ಸೀತೆಗೆ ಹೇಳ್ತಾನೆ, ‘ಆಗಲಿ, ಹೊರಟೆ ರಾಮನ ಬಳಿಗೆ, ಪ್ರತಿ ಸಂದೇಶವನ್ನು ಕೊಡು’ ಎಂಬುದಾಗಿ ಕೇಳಿದಾಗ ಸೀತೆ ಇಷ್ಟೇ ಹೇಳಿದಳಂತೆ, ‘ರಾಮನನ್ನ ನೋಡಬೇಕು’ ಅಷ್ಟೇ ಅವಳ ಸಂದೇಶ. ನೋಡುವಿಯಂತೆ, ರಾಮನ ಪೂರ್ಣಚಂದ್ರ ಮುಖವನ್ನು ಕಾಣುವಿಯಂತೆ. ಪಕ್ಕದಲ್ಲಿ ಲಕ್ಷ್ಮಣ. ದೇವತೆಗಳ ದೊರೆಯಂತೆ ಶೋಭಿಸ್ತಾ ಇರುವ ರಾಮನನ್ನು ನೀನು ಕಾಣುವಿಯಂತೆ’ ಎಂದು ಹೇಳಿ ಸಾಕ್ಷಾತ್ ಲಕ್ಷ್ಮಿಯಂತೆ ಆರಾಧಿಸ್ತಕ್ಕಂತ ಆ ಸೀತೆಯನ್ನು ಅಭಿವಂದಿಸಿ ಮಹಾವೇಗದಿಂದ ರಾಮನಿದ್ದಲ್ಲಿಗೆ ಹನುಮಂತ ಹೋಗ್ತಾನೆ. ಅಲ್ಲಿ ಹೋಗಿ ಸೀತೆ ಹೇಳಿದ್ದನ್ನೆಲ್ಲ ಹೇಳ್ತಾನೆ. ‌’ಯಾರ ಕಾರಣಕ್ಕಾಗಿ ಸೀತಾನ್ವೇಷಣೆ, ಸಮುದ್ರಕ್ಕೆ ಸೇತುವೆ ಕಟ್ಟಿದ್ದು, ಈ ಮಹಾಯುದ್ಧ, ಎಲ್ಲ ನಡೀತೋ, ಆ ಸೀತಾದೇವಿಯನ್ನು ನೋಡುವಿಯಂತೆ. ಶೋಕತಪ್ತಳಾಗಿದ್ದ ಆಕೆ ನಿನ್ನ ವಿಜಯ ವಾರ್ತೆಯನ್ನು‌ ಕೇಳಿದಾಗ ಅತ್ಯಾನಂದವನ್ನು ಹೊಂದಿದಳು. “ರಾಮನನ್ನು ನೋಡಬೇಕು ನಾನು”ಎಂಬುದಾಗಿ ಅಷ್ಟೇ ಹೇಳಿದಳು.’

ಇದನ್ನು ಕೇಳಿದ ಕೂಡಲೇ ರಾಮನು ಇದ್ದಕ್ಕಿದ್ದಂತೆ ಚಿಂತೆಯಲ್ಲಿ ಮುಳುಗಿ ಹೋದನು. ಕಣ್ಣಂಚಿನಲ್ಲಿ ನೀರು ಜಿನುಗಿತು. ರಾಮ ಮಾಡಿದ ರಾವಣ ಸಂಹಾರದ ಕಾರ್ಯಕ್ಕಿಂತ ದೊಡ್ಡ ಸವಾಲು ಮುಂದಿದೆ. ಅದು ಸೀತೆಯನ್ನು ಸೀತೆಯಾಗಿ ಪ್ರಪಂಚಕ್ಕೆ ಕೊಡಬೇಕು! ಸೀತೆ ಸರಿಯಾದ ಉದಾಹರಣೆಯಾಗಬೇಕು. ರಾಮ ಯಾವ ಕುಲದವನೋ ಅಲ್ಲಿನ ಕೆಲವು ನಿಯಮಗಳಿವೆ, ಕೆಲವು ಕಷ್ಟಗಳಿವೆ. ಹಾಗಾಗಿ ಅಲ್ಲಿವರೆಗೆ ಎಣಿಸದ ಮುಂದಿನ ಸಂದರ್ಭವನ್ನೆಣಿಸಿ ರಾಮನ ಕಣ್ಣಂಚಿನಲ್ಲಿ ನೀರು ಜಿನುಗಿತು. ಸುದೀರ್ಘ ನಿಟ್ಟಿಸಿರು ಬಿಟ್ಟ, ತಲೆ ಎತ್ತಿ ನೋಡಲೇ ಇಲ್ಲ. ಹತ್ತಿರದಲ್ಲಿದ್ದ ವಿಭೀಷಣನಿಗೆ ಮೆಲು ದನಿಯಲ್ಲಿ, ‘ಹೋಗು ವಿಭೀಷಣ, ತಲೆಗೆ ಮಿಂದಿರ್ತಕ್ಕಂತ, ದಿವ್ಯಾಭರಣಭೂಷಿತೆಯಾದ ಸೀತೆಯನ್ನು ತಡಮಾಡದೆ ಕರ್ಕೊಂಡು ಬಾ ನನ್ನ ಮುಂದೆ’ ಅಂತ ಹೇಳ್ತಾನೆ. ವಿಭೀಷಣ ತ್ವರೆ ಮಾಡಿದ. ಬಹುಬೇಗ ಅಂತಃಪುರಕ್ಕೆ ತೆರಳಿ, ತನ್ನ ಪರಿವಾರವನ್ನು ಕಳುಹಿಸಿ, ‘ನೀನು ದಿವ್ಯಾಭರಣಭೂಷಿತೆಯಾಗಿ ಪಲ್ಲಕ್ಕಿ ಏರಿ ಬರ್ಬೇಕಂತೆ, ನಿನ್ನೊಡೆಯ ನಿನ್ನನ್ನು ನೋಡ ಬಯಸಿದ್ದಾನೆ’ ಎಂದು ಹೇಳಿಸಿದನಂತೆ. ಆಗ ವಿಭೀಷಣನಿಗೆ ಹೇಳಿದ್ಳಂತೆ ಸೀತೆ, ‘ರಾಕ್ಷಸಾಧಿಪತಿ, ಹೀಗೇ ಬರ್ತೇನೆ. ಈ ಜಡೆಯನ್ನು ಪತಿಯೇ ಬಿಡಿಸುವುದು ಪದ್ಧತಿ. ಅದಕ್ಕನುಸರಿಸಿ ಹೀಗೆಯೇ ಬರ್ತೇನೆ ಗಂಡನ ಬಳಿಗೆ’. ಆಗ ವಿಭೀಷಣ ಹೇಳಿದ್ನಂತೆ, ‘ನಾನು ಹೇಳಿದ್ದಾದರೆ ವಿಷಯ ಬೇರೆ. ಆದ್ರೆ ಈ ಲೋಕದ ದೊರೆ ರಾಮ ಹೇಳಿದ್ದು. ಅವನು ಹೇಳಿದ ಹಾಗೇ ಮಾಡೋದು ಒಳ್ಳೇದು’ ಎಂದಾಗ ಸರೀ ಅಂತ ಸೀತೆ ಅದನ್ನೊಪ್ಪಿಕೊಂಡು ಹಾಗೆಯೇ ಮಾಡ್ತಾಳೆ. ಆಮೇಲೆ ವಿಭೀಷಣನ ಪರಿವಾರದ ಸ್ತ್ರೀಯರು ಸೀತೆಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ, ಅಪರೂಪದ ವಸ್ತ್ರಾಭರಣಗಳನ್ನು ತೊಡಿಸಿ, ಒಂದು ಸಾಲಂಕೃತವಾದ ವಿಶೇಷ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಅತ್ಯಂತ ಬೆಲೆಬಾಳುವ ವಸ್ತ್ರವನ್ನು ಆಕೆಗೆ ಹೊದೆಸಿ, ರಕ್ಷಕಭಟರಾಗಿ ಅನೇಕ ರಾಕ್ಷಸರನ್ನು ಸುತ್ತ ನಿಯೋಜಿಸಿ, ಆ ಪಲ್ಲಕ್ಕಿಯನ್ನು ವಿಭೀಷಣ ಕರೆತರ್ತಾನೆ ರಾಮನ ಬಳಿಗೆ.

ರಾಮನಿಗೆ ವಿಭೀಷಣ ಬಂದಿದ್ದು ಗೊತ್ತಾದ್ರೂ ಕೂಡ, ಚಿಂತೆಯಿಂದ ಹೊರಗೆ ಬರ್ತಾ ಇಲ್ಲ. ವಿಭೀಷಣ ತುಂಬಾ ಸಂತೋಷದಲ್ಲಿ ರಾಮನಿಗೆ ನಮಸ್ಕಾರ ಮಾಡಿ, ‘ಸೀತೆಯನ್ನು ಕರ್ಕೊಂಡು ಬಂದೆ’ ಎಂಬುದಾಗಿ ನಿವೇದನೆ ಮಾಡ್ತಾನೆ. ಇದ್ದಕ್ಕಿದ್ದಂತೆ ಮೂರು ಭಾವಗಳು ರಾಮನನ್ನು ಆವರಿಸಿದವು‌. ಮೊದಲನೆಯದು ಸೀತೆ ಬಂದ ಹರ್ಷ. ಆದರೆ ಅದರ ಜೊತೆಯಲ್ಲಿ ದೈನ್ಯ. ಮೂರ್ನೆಯದ್ದು ರೋಷ, ಪರಿಸ್ಥಿತಿಯ ಮೇಲೆ. ‘ಒಂದು ವರ್ಷದವರೆಗೆ ಸೀತೆ ರಾವಣನ ಮನೆಯಲ್ಲಿ ಇದ್ದಳು’ ಎಂಬ ವಿಷಯವನ್ನಾಧರಸಿ ಈ ಮೂರೂ ಭಾವಗಳು ರಾಮನಿಗೆ ಮುಸುಕಿದವು. ಪಕ್ಕದಲ್ಲಿ ವಿಭೀಷಣ ಇದ್ದಾನೆ. ರಾಮ ಯಾವುದೋ ಚಿಂತನೆಯಲ್ಲಿಯೇ ವಿಭೀಷಣನಿಗೆ ಹೇಳ್ತಾನೆ, ‘ಎಲೈ ರಾಕ್ಷಸಾಧಿಪತಿ, ನಿತ್ಯವೂ ನನ್ನ ವಿಜಯದ ಬಗ್ಗೆ ನಿನಗೆ ಆಸಕ್ತಿ. ಅಂಥವನೇ, ವೈದೇಹಿಯನ್ನು ಬೇಗ ನನ್ನ ಮುಂದೆ ಕರ್ಕೊಂಡು ಬಾ’ ಎಂದು ಹೇಳುವಾಗ ಆ ಮಾತಿನಲ್ಲಿ ಆನಂದವಿಲ್ಲ, ವಿಷಾದವಿದೆ. ವಿಭೀಷಣ ಹೋಗ್ತಾನೆ, ವಾನರ-ಕರಡಿಗಳ, ರಾಕ್ಷಸರ ಗುಂಪನ್ನು ಅರಮನೆಯ ಸಿಬ್ಬಂದಿಗಳ ಸಹಾಯದಿಂದ ಚದುರಿಸ್ತಾನೆ. ದೊಡ್ಡ ಶಬ್ದ ಕೇಳಿ ಬಂತು. ರಾಮನಿಗೆ ಕಿರಿಕಿರಿಯಾಯ್ತಂತೆ. ಸಹಿಸಲಿಲ್ಲ ರಾಮ ಅದನ್ನು.

ವಿಭೀಷಣನನ್ನು ದುರುಗುಟ್ಟಿ ನೋಡಿ ಕೋಪಗೊಂಡು ಮಾತಾಡ್ತಾನೆ, ‘ಯಾಕೆ ನೀನು ನನ್ನ ಜನರನ್ನು ಕ್ಲೇಶಗೊಳಿಸ್ತೀಯೆ? ನಿಲ್ಲಿಸು. ನೋಡು ವಿಭೀಷಣ, ಒಂದು ಹೆಣ್ಣಿಗೆ ಮನೆ, ವಸ್ತ್ರ, ರಾಜಸತ್ಕಾರ, ಪಲ್ಲಕ್ಕಿ ಇದೆಲ್ಲ ಯಾವುದೂ ಮರ್ಯಾದೆಯಲ್ಲ, ಆಭರಣವಲ್ಲ. ಒಂದು ಸ್ತ್ರೀಗೆ ಮರ್ಯಾದೆಯೆಂದರೆ ಅವಳ ನಡತೆ. ಆದರೆ ಮಹಾಕಷ್ಟಗಳಲ್ಲಿ, ವಿಘ್ನಗಳಲ್ಲಿ, ಸ್ವಯಂವರದಲ್ಲಿ, ಯಜ್ಞಗಳಲ್ಲಿ, ವಿವಾಹದಲ್ಲಿ, ಇಂಥಾ ಕೆಲವು ಸಂದರ್ಭಗಳಲ್ಲಿ ಸ್ತ್ರೀಯರನ್ನು ಕಂಡರೆ ದೋಷವಿಲ್ಲ. ಸೀತೆ ಯುದ್ಧದ ಮಧ್ಯೆ ಇದ್ದಾಳೆ ಮತ್ತು ದೊಡ್ಡ ಕಷ್ಟದಲ್ಲಿದ್ದಾಳೆ. ಈ ಸಮಯದಲ್ಲಿ ಆಕೆಯ ದರ್ಶನ ದೋಷವಲ್ಲ. ನಾನಿದ್ದೇನಲ್ಲ ಪಕ್ಕದಲ್ಲಿ! ಹಾಗಾಗಿ ಬೇಗ ಕರ್ಕೊಂಡು ಬಾ ಆಕೆಯನ್ನು. ಮಿತ್ರರ ಮಧ್ಯೆ ಇರ್ತಕ್ಕಂತ ನನ್ನನ್ನು ಸೀತೆಯು ನೋಡಲಿ’ ಎಂಬುದಾಗಿ ಹೇಳ್ತಾನೆ. ಆಗ ವಿಭೀಷಣನಿಗೆ ಆಲೋಚನೆ ಆರಂಭವಾಯ್ತಂತೆ. ಇದೇನು ಹೊಸ ಪರಿ? ವಿನೀತನಾಗಿ ಸೀತೆಯನ್ನು ರಾಮನ ಬಳಿ ಕರ್ಕೊಂಡು ಬರ್ತಾನೆ. ಆ ಸಂದರ್ಭದಲ್ಲಿ ರಾಮನ ಹಾವಭಾವಗಳಲ್ಲಿ ವ್ಯತ್ಯಾಸ ಕಂಡ ಮೂವರು ರಾಮನ ಪರಮಾಪ್ತರು ಅತಿಯಾಗಿ ವ್ಯಥೆಗೊಂಡರು : ಲಕ್ಷ್ಮಣ, ಸುಗ್ರೀವ ಮತ್ತು ಹನುಮಂತ. ಅವರಿಗೆ ‘ರಾಮನ ಮನಸ್ಸು ಬದಲಾಯ್ತಾ? ಸೀತೆಯ ಮೇಲೆ ಬೇಸರವಿದೆಯಾ? ಸೀತೆ ಬೇಡವಾದಳಾ ರಾಮನಿಗೆ? ಏನಾಯ್ತು ಆ ಪ್ರೀತಿ?’ ಎಂದೆನಿಸಿತು ಅವರಿಗೆ.

ಏತನ್ಮಧ್ಯೆ ಸೀತೆ ಬರ್ತಾ ಇದ್ದಾಳೆ. ಆಕೆಯ ಹಿಂದೆ ವಿಭೀಷಣ. ಆಕೆಗೆ ಸುತ್ತ ಜನ ಇದ್ದಿದ್ದರಿಂದ ವಿಪರೀತ ಲಜ್ಜೆಯಾಗಿದೆ. ವಸ್ತ್ರದಿಂದ ತನ್ನ ಮುಖವನ್ನು ಮುಚ್ಚಿಕೊಂಡು ಅಳ್ತಾ ತನ್ನ ಪತಿಯನ್ನು ಕರೆದಳು, ‘ಆರ್ಯಪುತ್ರಾ’ ಎಂಬುದಾಗಿ. ಆಕೆಗೆ ವಿಸ್ಮಯ ರಾಮನನ್ನು ಕಂಡು, ಪ್ರಹರ್ಷ, ಪ್ರೀತಿ. ಉಳಿದದ್ದು ಆಕೆಯ ಮನಸ್ಸಿಗೆ ಬಂದಿಲ್ಲ. ತನ್ನ ಪತಿಯ ಸೌಮ್ಯವಾದ ಮುಖವನ್ನು ನೋಡಿದಳು‌. ಅದಕ್ಕಿಂತಲೂ ಹೆಚ್ಚು ಸೌಮ್ಯತೆ ಆಕೆಯ ಮುಖವಿದೆ. ಸೀತೆಗೆ ಅಷ್ಟು ಕಾಲದ ಕ್ಲೇಶವು ಬಿಟ್ಟು ಹೋಯ್ತು ಒಂದು ಸರ್ತಿ. ಎಷ್ಟೋ ಕಾಲದ ಬಳಿಕ ಸೀತೆಯು ರಾಮನನ್ನು ನೋಡ್ತಾ ಇದ್ದಾಳೆ. ಉದಯಿಸಿದ ಪೂರ್ಣಚಂದ್ರನ ಕಾಂತಿ ಆ ಮುಖದಲ್ಲಿ. ಈಕೆಯೂ ಪೂರ್ಣಚಂದ್ರಮುಖಿಯೇ. ಪಕ್ಕದಲ್ಲಿದ್ದಾಳೆ ಸೀತೆ. ಸೀತೆಯನ್ನೊಮ್ಮೆ ನೋಡಿದ ರಾಮನು ತನ್ನೊಳಗಿನ ತುಮುಲವನ್ನು ಹೊರಹಾಕಿದನು. ತುಂಬ ಕಠಿಣ, ಗಂಭೀರವಾದ ಸಂದರ್ಭವಿದು!!

ರಾಮ ಒಮ್ಮೆಲೇ ಎಲ್ಲ ಹೇಳೋದಿಲ್ಲ. ‘ಶತ್ರುವನ್ನು ಕೊಂದು ನಿನ್ನನ್ನು ಗೆದ್ದೆ ನಾನು ಸೀತೆ. ಪುರುಷಪ್ರಯತ್ನವನ್ನು ಮಾಡಿದಂತಾಯಿತು ನಾನು. ಸೀತಾಪಹರಣಕ್ಕೆ, ಈ ಕುಲಕ್ಕೆ ಬಂದ ಅಪಚಾರಕ್ಕೆ ಪ್ರತೀಕಾರವಾಯಿತು. ರಾವಣನೆಂಬ ಮುಳ್ಳನ್ನು ಕಿತ್ತು ತೆಗೆದೆ ನಾನು. ಶ್ರಮ ಸಫಲ. ನಾನಿಲ್ಲದ ಹೊತ್ತಿನಲ್ಲಿ ಆ ಚಂಚಲಚಿತ್ತದ ರಾಕ್ಷಸ ಅಪಹರಿಸಿಕೊಂಡು ಹೋಗಿದ್ದು ನನ್ನ ಕೈಯಲ್ಲಿರಲಿಲ್ಲ. ದೈವ ಅದು. ನನ್ನ ಕೈಯ್ಯಲ್ಲಿದ್ದುದನ್ನು ಮಾಡಿದೆ. ಹನುಮಂತನ ಮಹತ್ಕರ್ಮ ಸಫಲ. ಸುಗ್ರೀವ ಯುದ್ಧದಲ್ಲಿ ಪರಾಕ್ರಮವನ್ನೂ ಮೆರೆದಿದ್ದಾನೆ, ನನಗೆ ಹಿತ ಸಲಹೆಗಳನ್ನು ಕೊಟ್ಟಿದ್ದಾನೆ. ಅವನ ಪರಿಶ್ರಮವೂ ಸಫಲ. ದೋಷಪೂರ್ಣನಾದ ತನ್ನ ಅಣ್ಣನನ್ನು ಬಿಟ್ಟು ನನ್ನ ಬಳಿಗೆ ಬಂದ ನನ್ನ ಭಕ್ತ ವಿಭೀಷಣನ ಪರಿಶ್ರಮವೂ ಸಫಲ’ ಎಂದು ಹೇಳ್ತಾನೆ. ವಂಶಕ್ಕೆ ಬಂದ ಕಲಂಕದ ಪರಿಮಾರ್ಜನೆ ಆಗಿದೆ ಎನ್ನುವ ರೀತಿಯಲ್ಲಿ. ಸೀತೆಗೆ ಅದೇನು ಅಂತ ಪೂರ್ತಿ ಮನಸ್ಸಿಗೆ ಬರ್ಲಿಲ್ಲ. ಇಷ್ಟು ಹೇಳ್ತಿರುವಾಗಲೇ ಸೀತೆಯ ಕಣ್ಣಲ್ಲಿ ನೀರು ಬಂತಂತೆ. ಜಿಂಕೆಯ ಹಾಗೆ ಕಣ್ಣುಗಳನ್ನು ಅರಳಿಸಿದಳು ಸೀತೆ.

ಯಾಕೋ ರಾಮನಿಗೆ ತುಂಬ ಕೋಪ ಬಂತು ಸನ್ನಿವೇಶದ ಅಥವಾ ತನ್ನ ಮೇಲೆಯೇ ಎನ್ನಬಹುದು! ಸೀತೆಯನ್ನು ನೋಡ್ಕೊಂಡು ಹೇಳಲಿಕ್ಕಾಗೋದಿಲ್ಲ. ಅಡ್ಡ ತಿರುಗಿತು ದೃಷ್ಟಿ. ಹುಬ್ಬುಗಳು ಗಂಟಿಕ್ಕಿತು. ‘ಅಗಸ್ತ್ಯ ಮುನಿಗಳು ದಕ್ಷಿಣ ದಿಕ್ಕನ್ನು ಗೆದ್ದಂತೆ ನಿನ್ನನ್ನು ಗೆದ್ದೆ ನಾನು ದೊಡ್ಡ ಪ್ರಯತ್ನದ ಮೂಲಕವಾಗಿ. ಆದ್ರೆ ಯಾರೂ “ರಾಮನು ಯಾವುದೋ ಕ್ಷುಲ್ಲಕ ಲಾಭಕ್ಕಾಗಿ, ಅಪೇಕ್ಷೆಗೋ ಕಾಮಕ್ಕೋ ಒಳಗಾಗಿ ಇದೆಲ್ಲ ಮಾಡಿದ” ಎಂದ ಭಾವಿಸುವುದು ಬೇಡ. ಕೃತ-ಪ್ರತಿಕೃತ ಇದು. ‘ನೀನು ಈಗ ನನಗೆ ಪ್ರತಿಕೂಲೆ. ಹೇಗೆಂದರೆ, ನೇತ್ರರೋಗ ಬಂದವನಿಗೆ ದೀಪವು ಹೇಗೆ ಪ್ರತಿಕೂಲವೋ ಹಾಗೆ.. ಈಗ ದೀಪದ್ದೇನು ತಪ್ಪು!? ಅವನ ಮನಸ್ಸಲ್ಲಿ ಬೇರೆ ಯಾವ ಭಾವವೂ ಇಲ್ಲ.

ಅವನದ್ದಲ್ಲ, ಅದರ ಹೊರತಾಗಿ ಬೇರೆ ಸಮಸ್ಯೆ ಇದೆ. ಮುಖ್ಯವಾಗಿ, ಪ್ರಪಂಚದ ಮುಂದೆ ರಘುವಂಶದ ಮುಂದೆ, ಚಾರಿತ್ರ್ಯದ ಪ್ರಶ್ನೆ ಇದೆ ಇಲ್ಲಿ. ಇದನ್ನು ಎರಡೂ ಕಡೆಯಿಂದ ನೋಡಬೇಕು. ಸೀತೆಯ ಕಡೆಯಿಂದ ನೋಡಿದರೆ, ಇದಕ್ಕಿಂತ ಶುದ್ಧ ಮತ್ತು ಪತಿವ್ರತೆಯಾಗಿ ಇರಲು ಸಾಧ್ಯವೇ ಇಲ್ಲ. ರಾಮನ ಕಡೆಯಿಂದ ನೋಡಿದರೇ, ಅವನಿಗೆ ಅವಳು ಹೇಗೆ ಎಂದು ಗೊತ್ತು. ಸಂಶಯ ರಾಮನಿಗೆ ಇರಬಹುದಾಗಿತ್ತು. ಸೀತೆ ಒಳ್ಳೆಯವಳೇ ಆದರೆ ರಾವಣ? ಅವನು ಒಳ್ಳೆಯವನಲ್ಲ. ಆ ಪ್ರಶ್ನೆ. ಸೀತೆ ಯಾವ ತಪ್ಪು ಮಾಡೊಲ್ಲ, ಮಾಡೋದೂ ಇಲ್ಲ. ರಾವಣ ಹಾಗಲ್ಲ. ಅವನು ಅವಳನ್ನು ಕದ್ದೊಯ್ದದ್ದು ಯಾಕೆ? ಉದ್ದೇಶ ಏನು? ರಾವಣನ ಮನೆಯೊಳಗೆ ಯಾರ ಅಡ್ಡಿ ಇದೆ. ಪ್ರಪಂಚವು ಸೀತೆ ಶುದ್ಧಳು ಎಂದು ಹೇಗೆ ಸ್ವೀಕಾರ ಮಾಡೋದು? ರಾಮ ಮತ್ತು ಸೀತೆಯರು ಸಾಮಾನ್ಯ ಪತಿ ಪತ್ನಿಯರಲ್ಲ. ಸಿಂಹಾಸನಕ್ಕೆ ಏರುವಂತ ಜೋಡಿ. ಮುಂದೆ ಹುಟ್ಟುವ ಮಗು ಸಿಂಹಾಸನ ಏರಬೇಕು. ಆ ಮಗುವನ್ನು ಸಮಾಜ ಶುದ್ಧ ಸಂತತಿಯಾಗಿ ಸ್ವೀಕಾರಮಾಡಬೇಕು. ಅಂದರೆ ತಂದೆ ತಾಯಿ ಇಬ್ಬರೂ ಶುದ್ಧರು ಎಂದು ಸಮಾಜ ಒಪ್ಪಿಕೊಳ್ಳಬೇಕು. ರಾಮನನ್ನು ನೋಡಿದ ಹಾಗೇ ಅವನ ಮಕ್ಕಳನ್ನು ನೋಡಬೇಕಾದರೆ ಏನಾದರೂ ಮಾಡಲೇಬೇಕು. ಸೂರ್ಯವಂಶ ಬಹಳ ಶುದ್ಧ ವಂಶ. ಇವತ್ತಿನ ಕಾಲದಲ್ಲಾದರೂ, ಒಂದು ವೇಳೆ ಹೀಗೆ ಆದರೆ? ನಿಮ್ಮ ಪ್ರತಿಕ್ರಿಯೆ ಏನು? ಉದಾ – ಒಂದು ಒಳ್ಳೆ ಗಂಡ ಹೆಂಡತಿ ಇದ್ದರು, ಹೆಂಡತಿಯನ್ನು ಒಬ್ಬ ಕೇಡುಗ ಅಪಹರಿಸಿ ತನ್ನ ಮನೆಯಲ್ಲಿ ೧ ವರ್ಷದವರೆಗೆ ಇಟ್ಟಿದ್ದರೇ ನೀವು ಏನು ವಿಚಾರಮಾಡುತ್ತಿದ್ದೀರಿ. ನಾವೂ ಕೂಡ ಸೀತೆಯನ್ನು ತಪ್ಪಿ ತಿಳಿದುಕೊಳ್ಳುತ್ತಿದ್ದೆವು. ನಾವು ನೀವು ಕೂಡ ತಪ್ಪು ತಿಳಿದುಕೊಳ್ಳುತ್ತಿದ್ದೆವು.

ಸೀತೆ ಸೀತೆಯಾಗಿ ಉಳಿಯಲಿಕ್ಕೆ ಮುಂದಿನ ಘಟನೆ ಸಾಕ್ಷಿ. ಒಂದು ಅರ್ಥದಲ್ಲಿ ಸೀತೆಯದು ದೊಡ್ಡ ತ್ಯಾಗ ಇದೆ. ಸೀತೆ ಅನುಭವಿಸಿದ್ದು ಶಬ್ದದಲ್ಲಿ ಹೇಳುವಂತಹದ್ದಲ್ಲ. ರಾಮನಾದ್ದರಿಂದ “ಸಂದೇಹ” ಅಂತ ಹೇಳಿದ. ಸಂದೇಹಕ್ಕೂ ಅವಕಾಶ ಇಲ್ಲ ಅಲ್ಲಿ, ಆದರೆ ಪ್ರಪಂಚಕ್ಕಾಗಿ ಇದು ಬೇಕು. “ನೀನು ನೇತ್ರರೋಗಿಗೆ ದೀಪದಂತೆ ಆದೆ. ಆದರೆ ಈ ಕುಲದ ಹಿನ್ನೆಲೆಯಲ್ಲಿ ನಿನ್ನನ್ನು ಮೊದಲಿನ ಹಾಗೆ ಸ್ವೀಕರಿಸಲಾರೆ. ಹಾಗಂತ ನಾನು ನಿನ್ನನ್ನು ನಿಗ್ರಹಿಸಲಾರೆ. ನೀನು ಜೀವನ ಇಡೀ ಕಷ್ಟಪಡಬೇಕು, ದುಃಖಪಡಬೇಕು ಎಂದು ಹೇಳಲಾರೆ. ನೀನು ನಿನ್ನ ಜೀವನ ಮಾಡು. ನೀನು ಯಾವ ವೈಭವದ ಜೀವನವನ್ನು ಮಾಡ ಬಯಸುತ್ತೀಯೋ ಅದನ್ನು ಮಾಡು, ಯಾವ ಸಂತೋಷ ಬೇಕಾದರೂ ಪಡು. ನೀನು ಅದಕ್ಕೆ ಸ್ವತಂತ್ರಳು. ಆದರೆ ರಾಮ ಮತ್ತೊಂದು ವಿವಾಹ ಆಗೋದಿಲ್ಲ. “ಸೀತೆಗೆ ರಾಮ ಅವಳು ಸ್ವೀಕಾರ ಮಾಡದೇ ಇರುವಂತಹ ಅವಕಾಶವನ್ನು ಕೊಡ್ತಾನೆ.” ಈ ಕುಲದ ಕಾರಣದಿಂದ ಸೀತೆಯನ್ನು ಸ್ವೀಕರಿಸುವಂತಿಲ್ಲ. ಇವತ್ತಲ್ಲ, ಮುಂದೆ ಏಂದಾದರೂ ಒಂದು ದಿನ ಈ ಪ್ರಶ್ನೆ ಬರಬಹುದು. ಮನೆಗೆ ಹೋಗಿ ಹೇಗೆ ಬೇಕಾದರೂ ಇರಬಹುದು ಎಂದು ಉದಾಹರಣೆಯಾಗುವುದಿಲ್ಲ ನಾನು. ನೀನು ಕೂಡ ಉದಾಹರಣೆಯಾಗುವಂತಿಲ್ಲ. ನೀನು ಅದೇ ಸ್ಥಾನಕ್ಕೆ ಬಂದಾಗ ಮಾತ್ರ ಉದಾಹರಣೆಯಾಗಿ ನಿನ್ನನ್ನು ನೋಡಬಹುದು. ಕೆಲವರು ಹೇಳಿದ ಹಾಗೆ ಬೆಂಕಿಯಲ್ಲಿ ಬೀಳಬೇಕು ಎಂದೇನೂ ಹೇಳುವುದಿಲ್ಲ ನಾನು. ನನ್ನ ಪರಿಮಿತಿ ಇದು ಮತ್ತು ನಾನು ನಿನ್ನನ್ನು ಸ್ವೀಕರಿಸಲಾರೆ. ರಾವಣ ನಿನ್ನನ್ನು ಎತ್ತಿಕೊಂಡು ಹೋಗಿದ್ದನ್ನು ಪ್ರಪಂಚ ನೋಡಿದೆ, ಪ್ರಪಂಚಕ್ಕೆ ಗೊತ್ತಿದೆ. ರಾವಣ ನಿನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದನ್ನು ಪ್ರಪಂಚ ಅರಿತಿದೆ. ಒಂದು ವರ್ಷ ಕಳೆದಿದೆ. ನಿನ್ನನ್ನು ಹೇಗೆ ಸ್ವೀಕಾರ ಮಾಡಲಿ ಇಕ್ಷ್ವಾಕು ವಂಶೀಯನಾಗಿ. ನಾನು ಇಷ್ಟೆಲ್ಲ ಯಾಕೆ ಮಾಡಿದೆ ಅಂದ್ರೆ ಕುಲದ ಕಲಂಕದ ಪರಿಮಾರ್ಜನೆಗಾಗಿ. ಕ್ಷತ್ರಿಯನಾಗಿ ಪ್ರತಿಕಾರ ಮಾಡಿದೆ. ಏನು ಮಾಡಬೇಕೋ ಅದನ್ನು ಮಾಡಿದೆ. ಇನ್ನು ಮುಂದೆ ನಾನು ಏನೇ ಮಾಡುವುದಾದರೆ ಧರ್ಮ ಅದನ್ನು ಒಪ್ಪಬೇಕು.”

ಪುನಃ ಹೇಳ್ತಾನೆ, “ನಿನ್ನಲ್ಲಿ ಯಾವ ದೋಷವೂ ಇರದೇ ಇರಬಹುದು. ಆದರೆ, ತನ್ನ ಮನೆಯಲ್ಲಿ ಇರುವಂತಹ ದಿವ್ಯರೂಪಿಣಿಯನ್ನು ನೋಡಿಯೂ ರಾವಣನು ಹೇಗೆ ಸುಮ್ಮನಿರಲು ಸಾಧ್ಯ?”. ಸೀತೆಗೆ ಕಷ್ಟ ಹೊಸದಲ್ಲ. ಎಲ್ಲವನ್ನೂ ಎದುರಿಸುವ ಧೈರ್ಯ ಇದೆ ಆದರೆ ರಾಮನ ಮುಖದಿಂದ ಈ ಮಾತುಗಳು ಬಂದವಲ್ಲ! ಎಷ್ಟೋ ಕಾಲದ ನಂತರ ಲಭಿಸಿದ ತನ್ನ ಪ್ರಿಯನಿಂದ ಇಂತಹ ಅಪ್ರಿಯವಾದ ಮಾತನ್ನು ಕೇಳಿದ ಸೀತೆ ನಡುಗಿದಳು. ಕಣ್ಣೀರು ಇಟ್ಟಳು. ಅವಳದ್ದೇನೂ ತಪ್ಪಿಲ್ಲ, ಅವಳಿಗೆ ಏನೂ ಚ್ಯುತಿ ಇಲ್ಲ. ರಾಮ ಅವಳನ್ನು ಹಾಗೇ ಸ್ವೀಕಾರ ಮಾಡಬಹುದಾಗಿತ್ತು. ಆದರೆ ಹಾಗೆ ಮಾಡಿದ್ದರೇ ರಾವಣನ ಮನೆಯಲ್ಲಿ ಒಂದು ವರ್ಷ ಇದ್ದಳು ಎನ್ನುವುದು ಜನಜನಿತವಾಗುತ್ತಿತ್ತು. ಇಷ್ಟು ಮಾಡಿದ ಬಳಿಕವೂ ಅಯೋಧ್ಯೆಯಲ್ಲಿ ಇದರ ಬಗ್ಗೆ ಚರ್ಚಿಸಲ್ಪಟ್ಟಿದೆ. ಗುಂಪು ಗುಂಪಾಗಿ ಸೀತೆಯ ಬಗ್ಗೆ, ರಾಮನ ಬಗ್ಗೆ ಮಾತನಾಡುತ್ತಾರೆ. ಸೀತೆ ಪರಮ ಸುಂದರಿ ಆಗಿದ್ದರಿಂದ, ಕಾಮಕ್ಕೆ ವಶನಾಗಿ, ಸೀತೆಯನ್ನು ರಾಮ ಸ್ವೀಕಾರ ಮಾಡಿದ ಎಂದು ಮಾತನಾಡುತ್ತಾರೆ. ಮಾತ್ರವಲ್ಲ, ರಾಮನೇ ಒಪ್ಪಿಕೊಂಡಿದ್ದಾನಲ್ಲ! ಹಾಗಾಗಿ ನಮ್ಮ ಹೆಂಡತಿಯರು ಹೀಗೆ ಮಾಡಿದರೆ ನಾವೂ ಒಪ್ಪಿಕೊಂಡರಾಯಿತು ಎನ್ನುವ ಭಾಷೆಯಲ್ಲಿ ಮಾತನಾಡುತ್ತಾರೆ. ರಾಮಾಯಣದ ಶಬ್ದಗಳು. ಇದನ್ನು ತಪ್ಪಿಸಲು ಚಾರಿತ್ರ್ಯದ ಬಗ್ಗೆ ಪರಿಶೀಲನೆ ಮಾಡುವುದು ಅಗತ್ಯವಾಗಿತ್ತು. ರಾಮ ಏನು ಹೇಳಿದನೋ ಅದು ಮನಃಪೂರ್ವಕವಾಗಿ ಅಲ್ಲ. ಸನ್ನಿವೇಶವನ್ನು ಅನುಸರಿಸಿ ಸೀತೆ ಹೇಗೆ ಮರಳಿ ಬರಬಹುದೋ ಅಂತಹ ಒಂದು ಸನ್ನಿವೇಶ ತಂದೊಡ್ಡುತ್ತಾನೆ ರಾಮ.

ರಾಮನ ಗಂಭೀರ ಮಾತುಗಳು, ಗಂಭೀರ ನೆಲೆ, ಸೀತೆಗೆ ಇನ್ನಷ್ಟು ನೋವನ್ನು ಉಂಟು ಮಾಡಿದವು. ಅವಳಿಗೆ ಯಾರೂ ಅವಳ ಶೀಲ ಚಾರಿತ್ರ್ಯದ ವಿಷಯದಲ್ಲಿ ಇಂತಹ ಮಾತುಗಳನ್ನು ಯಾರೂ ಮಾತನಾಡಿರಲಿಲ್ಲ. ಅವಳಿಗೆ ಬಾಣಗಳಿಂದ ಚುಚ್ಚಿದಂತೆ. ರಾಮ ಆಡಿದ್ದು ಎಲ್ಲಿ? ಅಂದ್ರೆ ಸುತ್ತಲೂ ಜನ ಇದ್ದಾರೆ. ಆದರೆ ರಾಮನಿಗೆ ಜನರ ಮಧ್ಯದಲ್ಲೇ ಇಂತಹ ವಿಷಯ ತೀರ್ಮಾನವಾಗಬೇಕು ಎಂದು. ಅವಳು ಸಂಕೋಚದಿಂದ ಮುದ್ದೆಯಾದಳು. ತುಂಬಾ ಅತ್ತಳು. ಕಣ್ಣೀರನ್ನು ಒರೆಸುತ್ತಾ, “ಯಾಕೆ ನನಗೆ, ಕಿವಿಯನ್ನು ಸೀಳುವಂತಹ ಮಾತಗಳನ್ನು ಆಡ್ತಾ ಇದ್ದೀಯೆ. ಯಾವ ಮಾತುಗಳೂ ನನಗೆ ಹೊಂದುವಂತಹದ್ದಲ್ಲ. ಸಂಸ್ಕಾರವಿಲ್ಲದವನು ಸಂಸ್ಕಾರವಿಲ್ಲದವಳಿಗೆ ಹೇಳುವ ಹಾಗೆ, ನನಗೆ ಹೇಳ್ತಾ ಇದ್ದೀಯಾ. ನಾನು ಹಾಗಿಲ್ಲ. ವಿಶ್ವಾಸ ತಾಳು, ನನ್ನ ಚಾರಿತ್ರ್ಯದ ಮೇಲಾಣೆ. ಹೆಣ್ಣುಮಕ್ಕಳಲ್ಲಿ ಹೀಗೆ ಇರುವವರು ಇದ್ದಿರಬಹುದು, ರಾವಣನ ಅಂತಃಪುರದಲ್ಲೇ ಇದ್ದಿರಬಹುದು. ನಾನು ಅದಲ್ಲ, ಶಂಕೆಯನ್ನು ಬಿಡು. ರಾವಣನ ಶರೀರ ಸ್ಪರ್ಶ ಆಗಿದೆ ಅವಳಿಗೆ. ಕದ್ದು ತರುವಾಗ ಶರೀರ ಸ್ಪರ್ಶ ಆಗಿದೆ ಆದರೆ ನಾನೇನು ಮಾಡಲಿ. ನನ್ನ ಇಚ್ಛೆ ಇರಲಿಲ್ಲ ಅಲ್ಲಿ. ನಾನು ವಿವಶಳಾಗಿದ್ದೆ, ಅಸಹಾಯಕಳಾಗಿದೀ. ಅಪರಾಧ ದೈವದ್ದು ನನ್ನದಲ್ಲ. ಯಾವುದು ನನ್ನ ಅಧೀನದಲ್ಲಿರಲ್ಲಿವೋ ಆ ವಿಷಯದಲ್ಲಿ ನಾನೇನು ಮಾಡಲಿ. ಆದರೆ ಯಾವುದು ನನ್ನ ವಶದಲ್ಲಿ ಇದೆಯೋ, ಹೃದಯ, ಅದು ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲಿಲ್ಲ”.

ಸೀತೆ ಶಂಕೆಯನ್ನು ಬಿಡು ಎಂದು ರಾಮನಿಗೆ ಹೇಳಿದ್ದರೂ, ಅದು ಅವನಿಗಾಗಿ ಅಲ್ಲ. ಇವಿಷ್ಟನ್ನು ಹೇಳಿ ಪುನಃ ಹೇಳ್ತಾಳೆ, “ನಿನಗೆ ನಾನು ಏನು ಎಂದು ಗೊತ್ತಿಲ್ಲವಾ? ನನಗೆ ನಿನ್ನಲ್ಲಿ, ನಿನಗೆ ನನ್ನಲ್ಲಿ ಭಾವ ಅಂಕುರಿಸಿದ್ದು ಒಟ್ಟಿಗೆ. ಒಂದೇ ಸಮಯದಲ್ಲಿ, ಕ್ಷಣ. ನಿನಗೆ ನಾನು ಏನು ಎಂದು ಗೊತ್ತಿಲ್ಲದಿದ್ದರೇ ಸೀತೆಯದ್ದು ಶಾಶ್ವತವಾಗಿ ಹತವಾಯಿತು. ಹನುಮಂತನನ್ನು ನೀನು ಕಳುಹಿಸಿ ಕೊಟ್ಟಾಗಲೇ ಹೇಳಬೇಕಾಗಿತ್ತು. ಸೀತೆ, ನಿನ್ನನ್ನು ನಾನು ಬಿಟ್ಟೆ ಎಂದು. ಅವನ ಮುಂದೇ ಪ್ರಾಣ ಬಿಡ್ತಾ ಇದ್ದೆ. ಈ ಕಥೆ ಅಲ್ಲಿಗೇ ಮುಗಿತಾ ಇತ್ತು. ಇಷ್ಟು ಶ್ರಮ ಬೇಕಾಗಿರಲಿಲ್ಲ. ಈ ಸೇತುವೆ, ಪ್ರಾಣವನ್ನೇ ಪಣಕ್ಕಿಟ್ಟು ಘನಘೋರ ಯುದ್ಧ, ಎಲ್ಲ ಬೇಕಾಗಿರಲಿಲ್ಲ. ನಿನ್ನ ಪ್ರಾಣ ಮಾತ್ರ ಅಲ್ಲ, ಸುಗ್ರೀವ, ವಿಭೀಷಣ, ಲಕ್ಷ್ಮಣ ಎಲ್ಲರ ಪ್ರಾಣ ಪಣಕ್ಕಿಟ್ಟು ಯಾಕೆ ಬೇಕಾಗಿತ್ತು. ಇದೆಲ್ಲ ನಿಷ್ಪಲವಾಯಿತು. ಆಗಲಿ ಬಿಡು. ನಿನಗೆ ಕೋಪವೇ ಹೆಚ್ಚಾಯಿತು. ಸಾಮಾನ್ಯ ಮನುಷ್ಯ ಹೀಗೆ ವರ್ತಿಸುತ್ತಾ ಇದ್ದ, ರಾಮನಲ್ಲ. ಆದರೆ ನೀನು ಸಾಮಾನ್ಯನಲ್ಲ, ನಾನೂ ಸಾಮಾನ್ಯಳಲ್ಲ. ನಾನು ಜನಕನ ಮಗಳು, ಜಾನಕಿ. ನನ್ನ ಜನ್ಮ ನಿನ್ನ ಮನಸ್ಸಿಗೆ ಬಂದಿಲ್ಲವಾ? ಭೂಮಿಯಲ್ಲಿ ಹುಟ್ಟಿ ಬಂದವಳು, ಅಯೋನಿಜೆ. ಅಲ್ಲಿಂದ ಇಲ್ಲಿಯವರೆಗಿನ ನನ್ನ ನಡತೆ, ನಿನಗೆ ಗೊತ್ತಿಲ್ಲವಾ? ಆದರೆ ಇದು ಯಾವುದಕ್ಕೂ ಬೆಲೆ ಇಲ್ಲದೇ ಹೋಯ್ತಾ? ಆವತ್ತು ನೀನು ಬಾಲಕ, ನಾನೂ ಬಾಲಿಕೆ. ಬಾಲವು ಬಾಲವನ್ನು ಕೈಹಿಡಿದಿತ್ತು. ಅಂದು ಹಿಡಿದ ಕೈಯನ್ನು ಬಿಟ್ಟೆಯಾ? ನನ್ನ ಭಕ್ತಿ, ನನ್ನ ಶೀಲ ಹಿಂದೆ ಹೋಯಿತು ಅಂತ ಆದ್ರೆ, ಈ ಸನ್ನಿವೇಶ ಬಂತು ಅಂತ ಆದ್ರೆ ನನಗೆ ಇರುವುದು ಒಂದೇ ದಾರಿ. ಅದು “ಅಗ್ನಿ”. (ಲಕ್ಷ್ಮಣನ ಕಡೆಗೆ ತಿರುಗಿ), ಲಕ್ಷ್ಮಣ ಚಿತೆಯನ್ನು ತಯಾರಿಸು. (ಸೀತೆಯೇ ಹೇಳಿದ್ದು). ಈ ಕಷ್ಟಕ್ಕೆ ಒಂದೇ ಚಿಕಿತ್ಸೆ, ಚಿತೆಯನ್ನು ತಯಾರಿಸು. ಇದು ಮಿಥ್ಯಾಪವಾದ. ಇಷ್ಟಾದ ಮೇಲೆ ನಾನು ಬದುಕಿ ಇರುವುದಿಲ್ಲ. ರಾಮನಿಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂತಾಯಿತು, ಎಲ್ಲರ ಎದುರು ನೀನು ಏನು ಬೇಕಾದರೂ ಮಾಡು ನಿನ್ನನ್ನು ಬಿಟ್ಟೆ ಎಂದು ರಾಮ ಹೇಳುವುದಾದರೇ, ನನಗೆ ಇರುವುದು ಒಂದೇ ದಾರಿ.”

ಅಗ್ನಿಯ ಸಹವಾಸ ಸುಖ ನನಗಿನ್ನು. ಹಾಗಾಗಿ ಚಿತೆಯನ್ನು ಸಿದ್ಧಪಡಿಸು ಎಂಬುದಾಗಿ ಲಕ್ಷ್ಮಣನ ಬಳಿ ಸೀತೆ ಆದೇಶ ಮಾಡಿದಾಗ ಲಕ್ಷ್ಮಣನಿಗೆ ಅದನ್ನು ತಡೆಯಲಿಕ್ಕೇ ಸಾಧ್ಯವಾಗ್ಲಿಲ್ಲ. ಆದರೆ ಇಲ್ಲಿ ರಾಮ ಸೀತೆಯ ಬಗ್ಗೆ ಸಂದೇಹ ಪಡ್ತಾ ಇಲ್ಲ. ಪ್ರಪಂಚ ಆ ಜಾಗದಲ್ಲಿದೆ. ಈಗ ರಾಮ ಆಡಿದ ಮಾತುಗಳು ಬುದ್ಧಿಪೂರ್ವಕವಲ್ಲ. ಅದು ಸನ್ನಿವೇಶದ ವಿಪರೀತ ಒತ್ತಡ ಹೊರತು ಬೇರೇನೂ ಅಲ್ಲ. ಸೀತೆಯಾಡಿದ ಮಾತುಗಳೂ ಹಾಗೆಯೇ. ಆದರೆ ಎಲ್ಲದಕ್ಕೂ ಫಲ ಬರ್ದೇ ಇರೋದಿಲ್ಲ. ಲಕ್ಷ್ಮಣನಿಗೆ ಸಂದಿಗ್ಧ! ಆ ಕೆಲಸ ಮಾಡಲಾರ ಅವನು ಆದರೆ ಸೀತೆ ಮಾಡು ಅಂತ ಹೇಳ್ತಿದ್ದಾಳೆ. ರಾಮನ ಮುಖ ನೋಡಿದ್ನಂತೆ. ರಾಮ ಏನೂ ಮಾತಾಡಲಿಲ್ಲ. ಆ ಮೌನ ಸಮ್ಮತಿ ಸೂಚಿಸಿತು. ಲಕ್ಷ್ಮಣ ಚಿತೆಯನ್ನು ಸಿದ್ಧಪಡಿಸ್ತಾನೆ.

ಧಗಧಗಿಸಿ ಉರೀತಾ ಇದೆ ಆ ಚಿತೆ. ಸೀತೆ ರಾಮನನ್ನು ಪ್ರದಕ್ಷಿಣೆ ಮಾಡ್ತಾಳೆ. ರಾಮನ ತಲೆ ತಗ್ಗಿತ್ತು. ಅಗ್ನಿಯ ಕಡೆ ಸರಿದು ಹೋಗ್ತಾಳೆ. ಒಂದು ಹೆಜ್ಜೆ ಮುಂದಿಡುವ ಮೊದಲು ಸೀತೆ ದೇವತೆಗಳಿಗೆ ನಮಸ್ಕಾರ ಮಾಡ್ತಾಳೆ, ಬ್ರಾಹ್ಮಣರಿಗೆ ನಮಸ್ಕಾರ ಮಾಡ್ತಾಳೆ, ಕರ ಜೋಡಿಸಿ ಅಗ್ನಿಗೆ ಈ ಮಾತನ್ನು ಹೇಳ್ತಾಳೆ, “ನನ್ನ ಹೃದಯವು ಎಂದೂ ರಾಮನಿಂದ ಅತ್ತಿತ್ತ ಸರಿಯದಿದ್ದರೆ, ಲೋಕಕ್ಕೆ ಸಾಕ್ಷಿ‌ ನೀನು, ನನ್ನನ್ನು ಉಳಿಸು. ನಿಜಕ್ಕೂ ನಾನು ಚಾರಿತ್ರ್ಯೈಯೇ ಆಗಿದ್ದರೆ ನೀನು ಲೋಕಕ್ಕೆ ಸಾಕ್ಷಿ. ಏನಾಗಿದೆಯೋ ನಿನಗೆ ಗೊತ್ತಿದೆ. ಏನಾಗದಿದ್ದರೂ ಕೂಡ ನಿನಗೆ ಗೊತ್ತಿದೆ, ಮಾತಿನಿಂದಲಾಗಲಿ ಮನಸ್ಸಿನಿಂದಲಾಗಲಿ ಕೃತಿಯಿಂದಾಗಲಿ ನಾನು ರಾಮನೆಂಬ ಸರ್ವಜ್ಞನನ್ನು ಬಿಟ್ಟು ಒಂದು ಕ್ಷಣವಾದರೂ ಅತ್ತಿತ್ತ ಹೋಗದಿದ್ದರೆ ಉಳಿಸು ನನ್ನನ್ನು. ಭಗವಾನ್ ಸೂರ್ಯ, ಭಗವಾನ್ ವಾಯು, ದಶದಿಶೆಗಳು, ಚಂದ್ರ, ಹಗಲು, ರಾತ್ರಿ, ಸಂಧ್ಯೆ, ಪೃಥಿವಿ, ಇವರೆಲ್ಲರಿಗೂ ನಾನು ಚಾರಿತ್ರ್ಯವ್ರತೆ ಎಂಬುದು ಗೊತ್ತಿದ್ದರೆ ಉಳಿಸಿ ನನ್ನನ್ನು.” ಎಂದು ಹೇಳಿ ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ನಿಸ್ಸಂಗವಾದ ಅಂತರಾತ್ಮದಿಂದ ಲೋಕದ ನಂಟನ್ನು ಕಡಿದು, ಯಾವ ಆಶೋತ್ತರಗಳೂ ಇಲ್ಲದೆ ಅಗ್ನಿಯನ್ನು ಪ್ರವೇಶಿಸಿದಳು.

ಆಗ ಬಾಲಕರು, ವೃದ್ಧರನ್ನು ಒಳಗೊಂಡು ಅಲ್ಲಿ ಸೇರಿದ್ದ ಜನಕೋಟಿ ಭಯಭೀತರಾಗಿ ನೋಡಿದರು ಆ ದೃಶ್ಯವನ್ನು. ಆಗ ಸೀತೆ ಅಪರಂಜಿಯ ಚಿನ್ನದಂತೆ ಬೆಳಗಿದಳು. ಅವಳ ಮೈಯ್ಯಲ್ಲಿದ್ದ ಚಿನ್ನದ ಒಡವೆಗಳೂ ಸಪ್ಪೆಯಾಯಿತು ಅವಳ ತೇಜಸ್ಸಿನ ಮುಂದೆ. ಸರ್ವಲೋಕದ ಸನ್ನಿಧಿಯಲ್ಲಿ ಸೀತೆ ಬೆಂಕಿಗೆ ಹಾರ್ತಾಳೆ. ಇಡೀ ಪ್ರಪಂಚವೇ ಆ ದೃಶ್ಯವನ್ನು ಯಜ್ಞಮಧ್ಯದಲ್ಲಿ ಪವಿತ್ರತಮವಾದ ಆಹುತಿ ಧಾರೆಯಂತೆ ಸೀತೆಯನ್ನು ನೋಡಿತು. ಅಲ್ಲಿ ಸೇರಿದ್ದ ಲಂಕೆಯ ಸ್ತ್ರೀಯರು ದುಃಖವನ್ನು ತಡೆಯಲಾರ್ದೆ ಕೂಗಿಕೊಂಡ್ರಂತೆ. ದೇವ ಗಂಧರ್ವರು ಆ ದೃಶ್ಯವನ್ನು ನೋಡಲು ಓಡಿ ಬಂದಿದಾರೆ. ವಾನರ ವೀರರ ಮತ್ತು ರಾಕ್ಷಸ ವೀರರ ಹಾಹಾಕಾರ ಕೇಳಿ ಬಂತಂತೆ. ರಾಮನ ಕಣ್ಣಿಂದ ಧಾರಾಕಾರವಾಗಿ ನೀರು. ಮನಸ್ಸು ಪೂರ್ತಿ ವಿಚಲಿತವಾಗಿದೆ. ಚಿಂತೆಯಿಂದ ರಾಮ ಹೊರಗೆ ಬರ್ಲಿಲ್ಲ. ಅವನ ಕಿವಿಗೂ ಈ ಹಾಹಾಕಾರ, ಆಕ್ರಂದನಗಳು ಬೀಳ್ತಾ ಇತ್ತು. ಆಗ ಇದ್ದಕ್ಕಿದ್ದಂತೆ ಗಗನದಲ್ಲಿ ದೇವತೆಗಳು ಗೋಚರಿಸ್ತಾರೆ.

ರಾವಣನ ದೊಡ್ಡಣ್ಣ, ಉತ್ತರದಿಕ್ಕಿನ ಒಡೆಯ ವಯಿಶ್ರವಣ(ಕುಬೇರ), ದಕ್ಷಿಣ ಪೂರ್ವ ಪಶ್ಚಿಮ ದಿಕ್ಕುಗಳ ಒಡೆಯರಾದ ಯಮ ಮಹೇಂದ್ರ ವರುಣರು, ಲೊಕೇಶ್ವರನಾದ ಮಹೇಶ್ವರ, ಬ್ರಹ್ಮದೇವರೂ ಬರ್ತಾರೆ. ಆ ಸ್ಥಳಕ್ಕೆ ಅವರೆಲ್ಲರೂ ಬಂದು, ರಾಮನ ಸನಿಹ ಬಂದು ತಮ್ಮ ಕೈಗಳನ್ನೆಲ್ಲ ಮೇಲಕ್ಕೆತ್ತಿ ರಾಮನನ್ನು ಪ್ರಶ್ನಿಸ್ತಾ, “ಸರ್ವಲೋಕಕ್ಕೆ ಕರ್ತ ನೀನು, ಸರ್ವಲೋಕಕ್ಕೆ ಶ್ರೇಷ್ಠ ನೀನು. ನಿನಗಿರುವ ಜ್ಞಾನ ಯಾರಿಗಿದೆ? ಸೀತೆಯು ಬೆಂಕಿಗೆ ಬೀಳುವುದನ್ನು ಹೇಗೆ ಉಪೇಕ್ಷಿಸಿದೆ? ಯಾರಿಗೋ ಸರಿಯಾಗಬಹುದು, ನಿನಗಲ್ಲ. ನೀನು ದೇವರ ದೇವ ಎಂಬುದನ್ನು ಯಾಕೆ ಮನಸ್ಸಿಗೆ ತಂದುಕೊಳ್ತಾ ಇಲ್ಲ? ಅಷ್ಟಾವಸುಗಳಲ್ಲೊಬ್ಬ, ಮೂರುಲೋಕಗಳ ಆದಿಕರ್ತ, ನಿನಗ್ಯಾರೂ ಪ್ರಭುವಿಲ್ಲ. ಹನ್ನೊಂದು ರುದ್ರರ ಪೈಕಿ ಎಂಟನೇ ರುದ್ರ ನೀನು. ‘ವೀರ್ಯವಾನ್’ ನೀನು, ಅಶ್ವಿನೀದೇವತೆಗಳು ನಿನ್ನ ಕಿವಿಗಳು, ಚಂದ್ರಸೂರ್ಯರು ನಿನ್ನ ಕಣ್ಣುಗಳು. ಲೋಕ ಹುಟ್ಟುವ ಮೊದಲು ನೀನಿದ್ದೆ, ಅಳಿದ ಮೇಲೆ ನೀನಿರ್ತೀಯೆ. ಇಂಥವನು ಸಾಮಾನ್ಯ ಮನುಷ್ಯರಂತೆ ಯಾಕೆ ಸೀತೆಯನ್ನು ಬೆಂಕಿಗೆ ಹಾರಲು ಬಿಟ್ಟೆ?” ಎಂದಾಗ ರಾಮ ಬ್ರಹ್ಮನನ್ನು ಉದ್ದೇಶಿಸಿ ಹೇಳಿದನಂತೆ, “ನಾನು ಮನುಷ್ಯ, ದಶರಥನ ಮಗ. ಇದಕ್ಕಿಂತ ಹೆಚ್ಚೇನೋ, ಅದರಾಚೆಗಿದ್ದನ್ನು ನೀವು ಹೇಳಿ”.

ಆಗ ಬ್ರಹ್ಮನು ರಾಮನಿಗೆ ಅವನಾರು ಎಂಬುದಾಗಿ ವಿವರಿಸ್ತಾನೆ. “ನೀನು ದೇವ ನಾರಾಯಣ. ನೀನು ಚಕ್ರಾಯುಧ, ನೀನು ಶ್ರೀಮಾನ್, ವ್ಯಾಪಕ, ಏಕಶೃಂಗ, ಆದಿವರಾಹ, ಆಗಿಹೋದ ಶತ್ರುಗಳನ್ನು ಗೆದ್ದವನು, ಇರುವ ಶತ್ರುಗಳನ್ನು ಗೆದ್ದವನು, ಮುಂದೆ ಬರುವ ಶತ್ರುಗಳನ್ನೂ ಗೆಲ್ಲುವವನು. ನೀನು ನಾಶವಿಲ್ಲದವನು, ಬ್ರಹ್ಮ, ಸತ್ಯ, ಆದಿ ಮಧ್ಯ ಅಂತ್ಯದಲ್ಲಿ ಗೋಚರಿಸುವವನು ನೀನು. ಸಮಸ್ತ ಲೋಕಗಳ ಪರಮಧರ್ಮ ನೀನು. ಚತುರ್ಭುಜ, ಚಾರುಕೇಶ, ಪುರುಷೋತ್ತಮ ನೀನು. ಅಜಿತ, ವಿಷ್ಣು, ಕೃಷ್ಣ ನೀನು. ನಿನಗಿರುವ ಬಲ ಯಾರಿಗಿದೆ? ಸೇನಾ ನೇತೃತ್ವ, ವೃಂದ ನೇತೃತ್ವ ನಿನ್ನಿಂದ ಬರ್ತಕ್ಕಂತದ್ದು. ನೀನು ಬುದ್ಧಿ, ಸತ್ವ, ಕ್ಷಮೆ, ಇಂದ್ರಿಯ ನಿಗ್ರಹ. ನೀನು ಪ್ರಳಯ ಸೃಷ್ಟಿ, ಉಪೇಂದ್ರ, ಮಧುಸೂಧನ, ಇಂದ್ರಕರ್ಮ, ಮಹೇಂದ್ರ, ಪದ್ಮನಾಭ, ನೀನು ಶರಣ್ಯ, ಶರಣ” ಹೀಗೆಲ್ಲ ದಿವ್ಯಮಹರ್ಷಿಗಳು ನಿನ್ನನ್ನು ಸ್ತುತಿ ಮಾಡಿದ್ದಾರೆ. ನಿನ್ನಿಂದ ಮಹಾವೃಷಭಕ್ಕೆ ಸಾವಿರ ಶೃಂಗಗಳಂತೆ. ಸಾಮವೇದ ನೀನು. ಮೂರುಲೋಕಕ್ಕೂ ಆದಿಕರ್ತ, ಸ್ವಯಂಪ್ರಭು ನೀನು. ಸಿದ್ಧರು, ಸಾಧ್ಯರಿಗೆ ಆಶ್ರಯ ಪೂರ್ವಜ ನೀನು. ನೀನು ಯಜ್ಞ, ಓಂಕಾರ, ನೀನು ಯಾರೂಂತ ಯಾರಿಗೂ ಗೊತ್ತಿಲ್ಲ. ಎಲ್ಲ ಭೂತಗಳಲ್ಲಿ, ಎಲ್ಲ ಪ್ರಾಣಗಳಲ್ಲಿ ನೀನಿರುವೆ. ಸಕಲ‌ ಚರಾಚರಗಳಲ್ಲಿ ನೀನಿದ್ದೀಯೆ. ಬ್ರಾಹ್ಮಣರು, ಗೋವುಗಳಲ್ಲಿ ವಿಶೇಷವಾಗಿ ನಿನ್ನ ಸಾನ್ನಿಧ್ಯವಿದೆ. ಎಲ್ಲ ದಿಕ್ಕುಗಳಲ್ಲಿಯೂ ನೀನಿದ್ದೀಯೆ. ಸಾವಿರ ಕಾಲುಗಳು, ನೂರು ತಲೆಗಳು, ಸಾವಿರ ಕಣ್ಣುಗಳು ನಿನಗೆ. ಎಲ್ಲ ಜೀವಗಳನ್ನೂ ಧರಿಸಿರುವವನು ನೀನು. ಈ ಪರ್ವತ ಸಹಿತ ಭೂಮಂಡಲವನ್ನೂ ನೀನೇ ಹೊತ್ತವನು ಕೂರ್ಮನಾಗಿ. ಭೂಮಿಯೆಲ್ಲವೂ ಮುಳುಗಿ ಹೋದ ಮೇಲೆ ಆದಿಶೇಷನಾಗಿ ನೀನಿರುವೆ. ನಾನು ನಿನ್ನ ಹೃದಯ. ನನ್ನ ಪತ್ನಿ ಸರಸ್ವತಿ ನಿನ್ನ ನಾಲಿಗೆ. ದೇವತೆಗಳು ನಿನ್ನ ರೋಮಗಳು. ನೀನು ಕಣ್ತೆರೆದರೆ ವಿಶ್ವಕ್ಕೇ ಹಗಲು, ಕಣ್ಮುಚ್ಚಿದರೆ ಅದು ರಾತ್ರಿ. ನಿನ್ನ ಉಸಿರು, ಭಾವಗಳೇ ವೇದಗಳು. ನೀನಿಲ್ಲದೆ ಯಾವುದೂ ಇಲ್ಲ. ಈ ಜಗತ್ತೆಲ್ಲ ನಿನ್ನ ಶರೀರ. ಭೂಮಿ ‌ನಿನ್ನ ಸ್ಥೆರ್ಯ, ಅಗ್ನಿ ನಿನ್ನ ಕೋಪ, ಚಂದ್ರ ನಿನ್ನ ಪ್ರೀತಿ. ಶ್ರೀವತ್ಸವು ಚಿಹ್ನೆ ನಿನಗೆ. ಅಂದು ನೀನು ಬಲಿಯ ಯಜ್ಞದಲ್ಲಿ ಮೂರು ಹೆಜ್ಜೆಯಲ್ಲಿ ಮೂರು ಲೋಕ ಅಳೆದವನು. ಬಲಿಯನ್ನು ಕಟ್ಟಿ ಇಂದ್ರನನ್ನು ಪುನಃ ಇಂದ್ರನನ್ನಾಗಿ ಮಾಡಿದವನು. ಸೀತೆಯು ಲಕ್ಷ್ಮಿ, ನೀನು ವಿಷ್ಣು. ರಾವಣನ ವಧೆಗಾಗಿ ಮನುಷ್ಯ ಶರೀರವನ್ನು ಪ್ರವೇಶ ಮಾಡಿದೆ. ನೀನು ಭೂಮಿಗೆ ಬಂದ ಕಾರ್ಯವಾಗಿದೆ.”

“ರಾವಣವಧೆ ಹಾಗೂ ರಾಮರಾಜ್ಯ ಇದು ರಾಮ ಬಂದು ಮಾಡುವ ಕಾರ್ಯ. ಈಗಾಗಲೇ ರಾವಣವಧೆಯಾಗಿದೆ. ರಾಮರಾಜ್ಯ ಮುಂದೆ ಆಗಬೇಕಾಗಿದೆ. ಸೀತೆಯ ಅವತಾರೀ ಕಾರ್ಯ ಹೆಚ್ಚಿನದಾಗಿ ಪೂರ್ತಿಯಾಗಿದೆ. ಪಂಚಭೂತಮಯೀ ಸೀತೆ. ಪೃಥ್ವಿಯಿಂದ ಎದ್ದು ಬಂದಳು. ಸಮುದ್ರ ಮಧ್ಯೆ ಕದ್ದೊಯ್ದಿಟ್ಟ ರಾವಣ. ಜಲ ಬಂತು. ಅಗ್ನಿಪ್ರವೇಶ ಮಾಡ್ತಾಳೆ, ಅಗ್ನಿ ಬಂತು. ವಾಯುಪುತ್ರ ರಾಮಸೀತೆಯರನ್ನು ಒಂದು ಮಾಡ್ತಾನೆ. ಈಗ ಆಕಾಶ ಬಾಕಿ ಇರುವುದು. ಹೀಗೆ ಕಾರ್ಯವಾದ್ದರಿಂದ ಮೂಲಸ್ವರೂಪಕ್ಕೆ ಹೋಗಬೇಕೆಂಬ ಸಮಯವಾಗಿದೆ ಎಂದು ಪೀಠಿಕೆಯನ್ನು ಹಾಕುತ್ತಾ, ನಿನ್ನ ಪರಾಕ್ರಮ, ದರ್ಶನ, ಸ್ತುತಿ ಅಮೋಘ. ಪುರಾಣಪುರುಷೋತ್ತಮ ನೀನು”. ಎಂದೆಲ್ಲ ಹೇಳಿ ಬ್ರಹ್ಮನು ಒಂದು ಸ್ತುತಿಯನ್ನು ಹೇಳಿದನು.

ಆಗ ಅಗ್ನಿದೇವನು ಆಕಾರತಾಳಿ ಸೀತೆಯನ್ನು ಎತ್ತಿ ತಂದನು. ಅಂದು ಹೇಗಿದ್ದಳೋ ಹಾಗೇ ಇರುವ ಸೀತೆಯನ್ನು ಎತ್ತಿಕೊಟ್ಟನು ಅಗ್ನಿದೇವ. ಸೀತೆಯನ್ನು ರಾಮನ ಮಡಿಲಲ್ಲಿಟ್ಟು, “ನಾನು ಲೋಕಸಾಕ್ಷಿ ಅಗ್ನಿದೇವ. ಇವಳು ನಿನ್ನವಳು ಸೀತೆ. ಇವಳಲ್ಲಿ ಯಾವ ಪಾಪವೂ ಇಲ್ಲ. ಮಾತಿನಿಂದಲಾಗಲಿ, ಮನಸ್ಸಿನಿಂದಾಗಲಿ ಅಥವಾ ಒಳ ಮನಸ್ಸಿನಿಂದಾಗಲೀ, ಕಣ್ಣಿಂದಲಾಗಲಿ ಯಾವುದರಿಂದಲೂ ನಿನ್ನನ್ನು ಬಿಟ್ಟು ಅತ್ತಿತ್ತ ಹೋಗಲಿಲ್ಲ. ಅವಳ ನಡತೆ ಅತ್ಯುತ್ಕೃಷ್ಠವಾದದ್ದು. ನಿನ್ನ ನಡತೆಗೆ ಸರಿಯಾದವಳು ಇವಳು. ಎಂದು ಹೇಳಿ, ರಾವಣ ಆಕೆಯನ್ನು ಅಪಹರಿಸಿ, ಅಶೋಕೆವನದಲ್ಲಿ ಗೌಪ್ಯವಾಗಿಟ್ಟು, ಎಷ್ಟೆಷ್ಟೋ ಆಮಿಷಗಳನ್ನೊಡ್ಡಿದರೂ, ಆಕೆ ನಿನ್ನ ಮೇಲಿಟ್ಟ ಮನಸ್ಸಿನಿಂದಲಾಗಿ ರಾವಣನ ಕಡೆಗೆ ತಿರುಗಿಯೂ ನೋಡಲಿಲ್ಲ. ರಾವಣ ಆಕೆಯ ಮನಸ್ಸಲ್ಲೂ ಕೂಡ ಬರಲಿಲ್ಲ. ಯಾಕೆ ಅಂದರೆ, ಸಂಪೂರ್ಣ ಮನಸ್ಸನ್ನು ನಿನ್ನಲ್ಲಿ ಇಟ್ಟುಬಿಟ್ಟಿದ್ದಳು ಸೀತೆ. ರಾವಣ ಎಷ್ಟು ಭಯಪಡಿಸಿದರೂ, ಎಂಥಹ ಆಮಿಷವನ್ನು ತೋರಿದರೂ, ರಾವಣನಿಗೆ ಆಕೆ ವಶವಾಗಲಿಲ್ಲ. ಈಕೆಯ ಭಾವ ಶುದ್ಧ, ದೇಹ ಶುದ್ಧ, ಮನಸ್ಸು ಶುದ್ಧ ನಿಷ್ಪಾಪಳಿವಳು. ಸ್ವೀಕರಿಸು.” ಇದು ಮನುಷ್ಯೋತ್ತಮನಾದ ರಾಮನಿಗೆ ಅಗ್ನಿದೇವನ ಅಪ್ಪಣೆ.

ತುಂಬ ಪ್ರೀತನಾದನು ರಾಮ. ದಳದಳನೆ ಕಣ್ಣೀರು ಸುರಿಯಿತು. ಮಾತನಾಡಲಿಲ್ಲ, ಚಿಂತೆಯನ್ನೇ ಮಾಡಿದ. ಹೀಗಂದೆನಲ್ಲಾ ಸೀತೆಗೆ ಎಂದು. ಹೀಗೆ ನಡೆಸಿಕೊಂಡೆನಲ್ಲಾ ಎಂಬ ಭಾವ. ಕೊನೆಗೆ ರಾಮನು ಹೇಳಿದನು, “ಮೂರು ಲೋಕದಲ್ಲಿ ಸೀತೆಯನ್ನು ಮೈಲಿಗೆ ಮಾಡಬಲ್ಲ ವಸ್ತುವಿಲ್ಲ. ಸೀತೆಗೆ ಪಾಪ ಬರಲಿಕ್ಕೆ ಸಾಧ್ಯವಿಲ್ಲ. ಮತ್ಯಾಕೆ ಹೀಗೆ ಮಾಡಿದ್ದು ಅಂದರೆ, ಲೋಕವು ನಾಳೆ ಮಾತಾಡೀತು, ರಾಮ ಬಾಲಿಶ, ಕಾಮಾತ್ಮ ಎಂದು ಮಾತಾಡಬಹುದು. ಸೀತೆಗಾಗಿ ಮಾಡಿದೆ ಈ ಕಾರ್ಯವನ್ನು ಎಂದನು. ನೀವೆಲ್ಲ ಹೇಳಿದಿರಿ, ಸೀತೆ ಪಾಪಳಲ್ಲ. ಪರಿಶುದ್ಧೆ ಎಂದು. ಸೀತೆಯೂ ಹೇಳಿದಳು. ಅದನು ನಾನು ಮೊದಲೇ ಬಲ್ಲೆ. ಸೀತೆಯ ಹೃದಯ ನನ್ನನ್ನು ಬಿಟ್ಟು ಎಲ್ಲೂ ಹೋಗದು. ಅದು ನನಗೆ ಗೊತ್ತು. ನನ್ನ ಚಿತ್ತದಲ್ಲಿ ಅವಳೇ ಇದ್ದಾಳೆ ಯಾವಾಗಲೂ, ನನ್ನ ಚಿತ್ತ ಹೇಗೋ ಅವಳ ಮನಸ್ಸು, ನಡವಳಿಕೆ ಹಾಗೇ. ಇದು ನನಗೂ ಗೊತ್ತು. ಮತ್ಯಾಕೆ ಹೀಗೆ, ಎಂದರೆ, ಈ ಲೋಕ ಅಷ್ಟೇ ಅಲ್ಲ ಮೂರು ಲೋಕಗಳೂ ಸೀತೆ ಏನು, ಎಂಥವಳು ಎಂಬುದನ್ನು ತಿಳಿದುಕೊಳ್ಳಲಿ. ಅದಕ್ಕಾಗಿ ಅಗ್ನಿಪ್ರವೇಶ ಮಾಡುವಾಗಲೂ ಸುಮ್ಮನಿದ್ದೆ. ಅಗ್ನಿ ಏನೂ ಮಾಡದು ಎಂದು ಗೊತ್ತು ರಾಮನಿಗೆ. ರಾವಣನ ಬಗ್ಗೆ ಕೂಡ ಒಂದು ಮಾತನ್ನಾಡ್ತಾನೆ. ಈ ಸೀತೆಯನ್ನು ರಾವಣ ಮುಟ್ಟಲಿಕ್ಕೆ ಸಾಧ್ಯವಿಲ್ಲ. ಸೀತೆಯನ್ನು ನಾನು ರಕ್ಷಣೆ ಮಾಡೋದಲ್ಲ, ಸೀತೆಯನ್ನು ಅವಳ ತೇಜಸ್ಸೇ ರಕ್ಷಣೆ ಮಾಡುತ್ತದೆ. ಸಮುದ್ರವು ಹೇಗೆ ತನ್ನ ಗಡಿದಾಟಿ ಬರಲಿಕ್ಕೆ ಸಾಧ್ಯವಿಲ್ಲವೋ, ಹಾಗೆ ರಾವಣ ಒಂದು ಗಡಿ ದಾಟಿ ಸೀತೆಯ ಬಳಿ ಬರಲು ಸಾಧ್ಯವಿಲ್ಲ. ಕೃತಿಯಿಂದ ಇರಲಿ, ಮನಸ್ಸಿನಿಂದಲೂ ಮುಟ್ಟಲು ಸಾಧ್ಯವಿಲ್ಲ. ಯಾಕೆಂದರೆ ಸೀತೆ ಅಗ್ನಿಯವಳು, ಪ್ರಜ್ವಲಿಸುವ ಅಗ್ನಿಶಿಖೆ.

ರಾಮ ಸೀತೆ ಅಗ್ನಿಪ್ರವೇಶ ಮಾಡುವಾಗ ಯಾಕೆ ಸುಮ್ಮನಿದ್ದ ಅಂದರೆ, ಇದೊಂದು ಸನ್ನಿವೇಶ ನೋಡಿ. ಹನುಮಂತ ಲಂಕೆಗೆ ಬೆಂಕಿಯಿಟ್ಟಾಗ, ತುಂಬ ಚಿಂತೆಯಾಯಿತು. ಸೀತೆಗೆ ಬೆಂಕಿ ತಾಗೀತೆ ಎಂದು ತುಂಬಾ ವ್ಯಥೆಪಟ್ಟ. ಕೊನೆಗೆ ಅವನು ಸಮಾಧಾನ ಮಾಡಿಕೊಂಡನು. ಹೇಗೆ ಅಂದರೆ, ಆಗ ಅವನ ಮನಸ್ಸಿಗೆ ಮೂರು ಸಂಗತಿಗಳು ಬಂತು. ಅಮಿತ ತೇಜಸ್ವಿ ರಾಮನ ಭಾರ್ಯೆ ಸೀತೆ. ಅವಳನ್ನು ಆಕೆಯ ಚಾರಿತ್ರ್ಯ ಕಾಯ್ತಾ ಇದೆ. ಅಗ್ನಿಯೂ ಅವಳನ್ನು ಮುಟ್ಟಲಾರ. ಒಂದನೇ ಭಾವ. ಅಗ್ನಿಯು ಅಗ್ನಿಯನ್ನು ಸುಡಲಿಕ್ಕೆ ಸಾಧ್ಯವಿಲ್ಲ. ಸೀತೆಯು ಅಗ್ನಿಯಂತೆ. ಇದು ಎರಡನೇಯದು. ಮೂರನೇಯದು, ಅಗ್ನಿ ಸೀತೆಯನ್ನು ಸುಡುವುದಿರಲಿ, ಸೀತೆಯೇ ಅಗ್ನಿಯನ್ನು ಸುಡಬಹುದು. ಇದನ್ನು ಹನುಮಂತ ಒಂದು ಬಾರಿ ಸೀತೆಯನ್ನು ನೋಡಿ ಆಡುತ್ತಿರುವಂಥದ್ದು. ಜೀವನಪೂರ್ತಿ ಸೀತೆಯ ಜೊತೆಗಿರುವ ರಾಮನಿಗೆ ಸೀತೆ ಯಾರು ಎಂದು ಗೊತ್ತಿಲ್ಲವಾ..? ಒಂದು ಬಾರಿ ಸೀತೆಯನ್ನು ನೋಡಿದ ಹನುಮನೇ ಇಂಥಹ ನಿರ್ಧಾರವನ್ನು ಹೇಳುತ್ತಾನೆ ಎಂದಾದರೆ, ಇಡೀ ದಿನ ತನ್ನಿಡೀ ಜೀವನವನ್ನು ಸೀತೆಯ ಜೊತೆ ಕಳೆದ ರಾಮನಿಗೆ ಸೀತೆ ಏನು ಎಂದು ಗೊತ್ತಿರಲಿಲ್ವಾ…? ಗೊತ್ತಿದೆ ಅಗ್ನಿ ಸೀತೆಯನ್ನು ಏನೂ ಮಾಡಲಾರ ಎಂದು. ಇದು ಅದಕ್ಕೊಂದು ಪರಿಹಾರವಷ್ಟೆ. ನನಗೆ ಯಾವ ಸಂದೇಹವೂ ಇಲ್ಲ, ತೇಜೋಮಯ ಸ್ವರೂಪಿಯಾದ ಸೀತೆಯನ್ನು ಯಾರೂ, ರಾವಣನೂ ಮುಟ್ಟಲಾರ. ಇದು ರಾಮನಿಗೆ ಗೊತ್ತು. ಇಲ್ಲದಿದ್ದರೆ, ರಾಮ ಸುಮ್ಮನಿರುತ್ತಿರಲಿಲ್ಲ.

ಕೊನೆಯಲ್ಲಿ ರಾಮ ಒಂದು ಮಾತನ್ನಾಡ್ತಾನೆ, ಸೀತೆ ಅಲ್ಲಿ ಸೇರುವವಳಲ್ಲ, ಲಂಕೆಗೆ ಸೇರುವವಳಲ್ಲ. ಬೇರೆ ಎಲ್ಲಿಯೂ ಸಲ್ಲುವವಳಲ್ಲ. ಅವಳು ಎಲ್ಲಿ ಸೇರುತ್ತಾಳೆ ಅಂದರೆ, ಅವಳು ನನಗೆ ಮಾತ್ರ ಸಲ್ಲುವವಳು. ಶುಭ ಪರಮಶುಭಳು ಸೀತೆ. ಸೀತೆಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ. ಸೂರ್ಯನನ್ನು ಸೂರ್ಯಪ್ರಭೆಯಿಂದ ಹೇಗೆ ಬೇರೆ ಮಾಡಲಿಕ್ಕೆ ಸಾಧ್ಯವಿಲ್ಲವೋ, ಹಾಗೆ ರಾಮನಿಂದ ಸೀತೆಯನ್ನು ಬೇರೆಮಾಡಲಿಕ್ಕೆ ಸಾಧ್ಯವಿಲ್ಲ. ಅವಳೂ ನಾನು ಬೇರೆಯಲ್ಲ, ಬಾಯಿಬಿಟ್ಟು ಹೇಳಿದನು ರಾಮ, ಸೀತೆಯನ್ನು ಬಿಡಲಾಗದು, ಸಾಧ್ಯವಿಲ್ಲ. ಅಷ್ಟೇ ಅಲ್ಲ, ಮೂರು ಲೋಕದಲ್ಲಿ ನಿನ್ನಷ್ಟು ಶುದ್ಧಳು ಯಾರು ಎಂದನು. ಸೀತೆಯನ್ನು ಬಳಿ ಕರೆದನು. ಆ ಸಮಯದಲ್ಲಿ ರಾಮನೇನು ಮಾಡಿದನೋ, ಅದನ್ನು ಅಲ್ಲಿ ಸೇರಿದವರು ಪ್ರಶಂಸಿಸಿದರು. ರಾಮ ಮಾಡಿದ್ದನ್ನು ರಾಮನ ಮರ್ಮಗಳನ್ನು ತಿಳಿದ ಸುಗ್ರೀವ, ಹನುಮಂತ, ಲಕ್ಷ್ಮಣನಿಗೆ ರಾಮ ಮಾಡಿದ್ದು ಸರಿಯಾಗಿದೆ ಎಂದೆನಿಸಿತು. ತನ್ನ ಪ್ರಿಯೆಯನ್ನು ತನ್ನಲ್ಲಿಗೆ ಕರೆದು, ತುಂಬ ಸುಖವನ್ನು ಅನುಭವಿಸಿದನು. ಎನ್ನುವಲ್ಲಿಗೆ ಇಂದಿನ ಧಾರಾರಾಮಾಯಣ ಮುಗಿಯಿತು. ಮುಂದೇನಾಯಿತು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments Box