ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಹಿಂದಿನ ಕಥೆಯಲ್ಲಿ ಹನುಮಂತ ಓಷಧ ಪರ್ವತವನ್ನು ಎತ್ತು ತಂದಿದ್ದನ್ನು ಕೇಳಿದ್ದೇವೆ. ನಿಜವಾಗಿ ರಾಮಾಯಣದಲ್ಲಿ ಹನುಮಂತನು ಎರಡು ಬಾರಿ ಓಷಧ ಪರ್ವತವನ್ನು ಎತ್ತು ತಂದಿದ್ದಾನೆ. ಒಂದು ಬಾರಿ ರಾಮಲಕ್ಷ್ಮಣ ಸಹಿತ ಸಮಸ್ತ ಕಪಿಸೇನೆಯ ಪರವಾಗಿ ಹಾಗೂ ಇನ್ನೊಂದು ಬಾರಿ ಲಕ್ಷ್ಮಣನಿಗಾಗಿ. 67 ಕೋಟಿ ಕಪಿಗಳನ್ನು ಇಂದ್ರಜಿತು ಬ್ರಹ್ಮಾಸ್ತ್ರದ ಮೂಲಕವಾಗಿ ಸಂಹರಿಸಿರುತ್ತಾನೆ. ಒಬ್ಬನೇ ಉಳಿದಿದ್ದು ಹನುಮಂತ, ರಾಮಲಕ್ಷ್ಮಣರು ಕೂಡ ಎಚ್ಚರದಲ್ಲಿಲ್ಲ. ಹಾಗಿರುವಾಗ ಉಳಿದ ಒಬ್ಬನೇ ಹನುಮಂತ ಎಲ್ಲರನ್ನೂ ಸಂಜೀವನಗೊಳಿಸುತ್ತಾನೆ. ಎಲ್ಲರನ್ನೂ ಮೊದಲಿನ ಹಾಗೆ ಮಾಡುತ್ತಾನೆ ಎಲ್ಲರನ್ನೂ ಪುನಹ ಯುದ್ಧಕ್ಕೆ ಅಣಿ ಮಾಡುತ್ತಾನೆ. ಇಂತಹವರು ಕೋಟ್ಯಂತರ ಜೀವಿಗಳಿಗೆ ಸಮಾನ ಅಥವಾ ಮಿಗಿಲು. 67 ಕೋಟಿಗೆ ಒಬ್ಬ. ಅಂತಹ ಒಂದು ಅದ್ಭುತವಾಗಿರುವ ವ್ಯಕ್ತಿತ್ವ ಹನುಮನದು. ಲಕ್ಷ್ಮಣನಿಗೆ ಏನು ರಾಮನಿಗೆ ಜೀವ ಕೊಟ್ಟವನು. ಹಾಗಾಗಿ ತಾನೇ ಹನುಮಂತ ರಾಮನಿಗೆ ಅಷ್ಟು ಪ್ರಿಯವಾಗಿರುವವ. ಅವನು ಸೇವಕ. ಹನುಮಂತ ಎಂದರೆ ದೊರೆಯೂ ಅಲ್ಲ, ಪ್ರಧಾನ ಸಚಿವನೂ ಅಲ್ಲ. ಗುರುತಿಸುವುದು ರಾಮದಾಸ, ರಾಮಬಂಟ ಎಂಬುದಾಗಿ. ನೀವು ಬಂಟ ಆಗಿರಿ, ಸೇವಕರಾಕಿರಿ. ಅದಲ್ಲ ವ್ಯಕ್ತಿತ್ವ ಎಂದರೆ. ನೀವು ನಡೆದುಕೊಳ್ಳುವುದು ಹೇಗೆ ಎನ್ನುವುದರ ಮೇಲೆ, ನೀವು ಮಾಡುವ ಸಾಧನೆ ಏನು ಎನ್ನುವುದರ ಮೇಲೆ ಜಗತ್ತು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತದೆ. ಪದವಿಗಳ ಮೇಲೆ ಅಲ್ಲ ಎನ್ನುವುದಕ್ಕೆ ಹನುಮಂತನೇ ಸಾಕ್ಷಿ. ಹಾಗಾಗಿ ಹನುಮ ಲಂಕೆಗೆ ತನ್ನ ಪರಿಚಯ ಕೊಟ್ಟಿದ್ದು “ದಾಸೋಹಂ ರಾಮಚಂದ್ರಸ್ಯ” ಎಂಬುದಾಗಿ. ಕೋಸಲೇಂದ್ರನ ದಾಸ ನಾನು. ರಾಮನ ಸ್ವತ್ತು ನಾನು, ರಾಮನ ಅಂಶ ನಾನು. ಹಾಗೆ ಹನುಮಂತನದು ಆತ್ಮಾರ್ಪಣೆ. ಲಂಕಾದಹನ 2 ಗೊತ್ತಿಲ್ಲ ನಮಗೆ ಒಂದೇ ಗೊತ್ತಿರೋದು. ಲಂಕಾದಹನ ಒಮ್ಮೆ ಹನುಮಂತ ಮಾಡಿದ್ದು ಇನ್ನೊಮ್ಮೆ ಎಲ್ಲರೂ ಸೇರಿ ಮಾಡಿದ್ದು.
ಸಾವಿನಿಂದ ಎದ್ದು ಬಂದ ಸುಗ್ರೀವ ಮೊಟ್ಟ ಮೊದಲು ಮಾಡಿದ್ದು ಏನು ಎಂದರೆ ಹನುಮಂತ ಯಾಕೆ ನಾವು ಲಂಕೆಯನ್ನು ನುಗ್ಗಬಾರದು…? ಸುಮ್ಮನೆ ನುಗ್ಗುವುದಲ್ಲ, ಅಗ್ನಿ ಹಸ್ತರಾಗಿ ನುಗ್ಗೋಣ. ಸುಗ್ರೀವ ಹೇಳಿದನು ನುಗ್ಗಿ ಲಂಕೆಯನ್ನು ಭಸ್ಮ ಮಾಡೋಣ. ರಾತ್ರಿ ಆಗಿದೆ, ಕೈಯಲ್ಲಿ ಕಪಿ ನಾಯಕರು ಕೊಳ್ಳಿಯನ್ನು ಹಿಡಿದು ಲಂಕೆಯನ್ನು ನುಗ್ಗಿದರು. ಬಾಗಿಲು ಕಾಯುವ ರಾಕ್ಷಸರು ಓಡಿಹೋದರು ವಾನರ ಸೈನ್ಯವನ್ನು ಕಂಡು. ಲಂಕೆಗೆ ಬೆಂಕಿ ಕೊಟ್ಟರು. ಸಣ್ಣ ಮನೆಗಳಿಗೆ, ದೊಡ್ಡ ಮನೆಗಳಿಗೆ, ರಾಜರಿಗೆ ಸಂಬಂಧಪಟ್ಟ ಮನೆಗಳು ಎಲ್ಲದಕ್ಕೂ ಬೆಂಕಿಕೊಡ್ತಾ ಇದ್ದಾರೆ. ಸುಟ್ಟುರಿದು ಹೋಗುತ್ತಿದೆ ಲಂಕೆ. ಭೋಗದೃವ್ಯಗಳು ಸುಟ್ಟುಹೋದವು. ಅಲ್ಲಿ ಏನಿದೆಯೋ ಅದೆಲ್ಲವೂ ಬೆಂಕಿಗಾಹುತಿಯಾದವು. ಯುದ್ಧಸಾಮಗ್ರಿಗಳನ್ನೂ ಸುಟ್ಟರು. ಲಂಕೆಗೆ ಲಂಕೆಯೇ ಬೆಂಕಿ ಹೊತ್ತಿ ಉರಿಯುವಾಗ ಎಷ್ಟೋ ಮಂದಿ ರಾಕ್ಷಸಿಯರು ರಾಕ್ಷಸರು ಕೂಡಾ ಬೆಂಕಿಗೆ ಆಹುತಿಯಾದರು. ಹೊತ್ತಿ ಉರಿಯುತ್ತಿರುವ ಬೆಂಕಿಯ ಲಂಕೆಯು ಭಯಂಕರವಾಗಿ ಕಂಡಿತು. ಕಲ್ಪನೆ ಮಾಡಿಕೊಳ್ಳಿ! ಬೆಟ್ಟದ ತುತ್ತ ತುದಿಯಲ್ಲಿರುವ ಲಂಕೆ ಸಮುದ್ರದ ಮಧ್ಯದಲ್ಲಿ ಬೆಂಕಿ ಹೊತ್ತು ಉರಿಯುವಾಗ ಹೇಗೆ ಕಾಣುತ್ತಿರುವುದು ಉಳಿಸಿಕೊಳ್ಳಿ. ಸಾಗರದ ಜಲವು ಕೆಂಪಗೆ ತೋರಿತು. ರಾಕ್ಷಸರ ಕೂಗು 10 ಯೋಜನ ದೂರ ಕೇಳಿತು. ಬೆಂಕಿಯಲ್ಲಿ ಸುಟ್ಟು ಹೋಗುವವರ ಕೂಗು, ವಾನರರ ಘರ್ಜನೆ ಪ್ರತಿಯಾಗಿ ರಾಕ್ಷಸರ ಘರ್ಜನೆಗಳು ಸೇರಿ ಹತ್ತು ದಿಕ್ಕುಗಳೂ ಸೇರಿ ಭೂಮಂಡಲವನ್ನು ಮಾರ್ಮೊಳಗಿಸಿತ್ತು. ಆ ಸಮಯದಲ್ಲಿ ರಾಮಲಕ್ಷ್ಮಣರು ತಮ್ಮ ಧನುಸ್ಸನ್ನು ತೆಗೆದುಕೊಂಡರು. ರಾಮ ತನ್ನ ಧನಸ್ಸನ್ನು ಠೇಂಕರಿಸಿದನು. ರಾಕ್ಷಸರಿಗೆ ಭಯವನ್ನುಂಟು ಮಾಡುವ ಜ್ಯಾ ನಿನಾದವದು. ರಾಕ್ಷಸರು ಕೂಗುತ್ತಿದ್ದಾರೆ, ವಾನರರು ಕೂಗುತ್ತಿದ್ದಾರೆ, ಇದನ್ನು ಮೀರಿ ರಾಮನ ಧನುಷ್ಠೇಂಕಾರ ಕೇಳಿತು. ರಾಮನ ಧನುಷ್ಠೇಂಕಾರದಲ್ಲಿ ಎರಡು ಸೈನ್ಯದ ಕೂಗು ಮುಳುಗಿಹೋಯಿತು. ಯಾಕೆ ರಾಮ ಧನುಷ್ಠಂಕಾರ ಮಾಡಿದನು ಎಂದರೆ ಯುದ್ಧಕ್ಕೆ ಆಹ್ವಾನ ನೀಡಲು ಧನುಷ್ಠಂಕಾರ ಮಾಡೋದು. ಧರ್ಮವಿದು. ಎದುರಾಳಿಗಳಿಗೆ ಯುದ್ಧದ ಸ್ಪಷ್ಟ ಸೂಚನೆಯನ್ನು ನೀಡುವುದು ಧರ್ಮ. ಅದಕ್ಕಾಗಿ ರಾಮನು ಧನುಷ್ಠೇಂಕಾರವನ್ನು ಮಾಡಿರುವಂತದ್ದು. ಲಂಕೆಯ ಪ್ರಧಾನ ಗೋಪುರವನ್ನು ತನ್ನ ಬಾಣಗಳಿಂದ ಒಡೆದು ಕೆಡಗುತ್ತಾನೆ ರಾಮ. ಅದು ರಾವಣನ ಸ್ವಾಭಿಮಾನಕ್ಕೆ ಕೊಟ್ಟ ಪೆಟ್ಟು. ಬಳಿಕ ಉಪ್ಪರಿಗೆಯ ಮೇಲೆ ರಾಮನ ಬಾಣಗಳು ಕಾಣಿಸಿಕೊಂಡವು. ಪ್ರತಿಯೊಂದು ಬಾಣದ ಮೇಲೂ ರಾಮನಾಮ ಇರುತ್ತದೆ. ರಾಮ ನಾಮಾಂಕಿತ ಬಾಣಗಳ ದರ್ಶನವಾಯಿತು ರಾಕ್ಷಸರಿಗೆ. ರಾಕ್ಷಸರು ಎಚ್ಚೆತ್ತರು ಆಗ. ರಾಕ್ಷಸ ಸೇನೆಯು ಯುದ್ಧಕ್ಕೆ ಸಜ್ಜಾಯಿತು. ಅತ್ತ ರಾಮನ ಧನುಷ್ಠೇಂಕಾರ ಇತ್ತ ಇರುವ ರಾವಣನನ್ನು ಎಬ್ಬಿಸಿತು.
ರಾವಣನಿಗೆ ಕೋಪ ಬಂತು. ಆರು ಮಹಾರಾಕ್ಷಸರಿಗೆ ಆಜ್ಞೆ ಹೊರಡಿಸಿದನು, ಯುದ್ಧ ಮಾಡಿ ಹೋಗಿ ಎಂದು. ಅದರಲ್ಲಿ ಮುಖ್ಯವಾಗಿ ರಾವಣನ ಮಕ್ಕಳ ಪೈಕಿಯವರು ಕುಂಭ ಮತ್ತು ನಿಕುಂಭ. ಕುಂಭ ಅಣ್ಣ, ತಮ್ಮ ನಿಕುಂಭ, ಕುಂಭ ವೀರ. ನಿಕುಂಭ ಮಹಾವೀರರಲ್ಲೋರ್ವ. ರಾವಣ, ಕುಂಭಕರ್ಣ, ಇಂದ್ರಜಿತು, ನಿಕುಂಭ. ಯುದ್ಧ ಪ್ರಾರಂಭವಾಯಿತು. ಲಂಕೆಯ ಬೆಂಕಿಯ ಬೆಳಿಕಿನಲ್ಲಿ ಯುದ್ಧ ನಡೆಯಿತು. ಸಮರಸನ್ನದ್ಧವಾಗಿ ಬಂದಿತು ರಾಕ್ಷಸಸೈನ್ಯ. ವಾನರ ಸೇನೆಯು ರಾಕ್ಷಸ ಸೇನೆಯನ್ನು ಎದುರಿಸಿತು. ವಾನರ ಕಡೆಗೆ ವಿಜಯದ ಆತ್ಮವಿಶ್ವಾಸವಿತ್ತು. ಉಭಯ ಬಲಗಳ ಮಧ್ಯೆ ಸಮರ ನಡೆಯಿತು. ಏತನ್ಮಧ್ಯೆ ಕಂಪನ ಎಂಬ ರಾಕ್ಷಸನು ಅಂಗದನನ್ನು ಯುದ್ಧಕ್ಕೆ ಕರೆದನು. ಕಂಪನನ ಗಧಾಪ್ರಹಾರಕ್ಕೆ, ಅಂಗದನ ಶೃಂಗಪ್ರಹಾರ ಉತ್ತರ. ಪರಿಣಾಮ ಕಂಪನ ಇನ್ನಿಲ್ಲ. ಆ ಬಳಿಕ ಶೋಣಿತಾಕ್ಷ, ವಿರೂಪಾಕ್ಷ ಮತ್ತು ಪ್ರಜಂಗ ಈ ಮೂವರು ರಾಕ್ಷಸರು ಅಂಗದನ ಮೇಲೆ ಧಾಳಿ ಮಾಡಿದಾಗ, ಮೈಂದದ್ವಿವಿದರು ಅಂಗದನ ಜೊತೆಗೂಡಿ ಯುದ್ಧಮಾಡಿದರು. ಅಂಗದ ಪ್ರಜಂಗನನ್ನು ಕೊಂದನು. ಅತ್ತು ವಿರೂಪಾಕ್ಷನು ಯುದ್ಧ ಮುಂದುವರಿಸಿದನು. ದ್ವಿವಿದನಿಗೂ ವಿರೂಪಾಕ್ಷನಿಗೂ ಯುದ್ಧ ನಡಿತಿದೆ. ಆಗ ಶೋಣಿತಾಕ್ಷ ಹೋಗಿ ದ್ವಿವಿದನ ಮೇಲೆ ಖಡ್ಗ ಪ್ರಯೋಗ ಮಾಡ್ತಾನೆ. ಆಗ ಮೈಂದ ಸಹಾಯಕ್ಕೆ ಬಂದಾಗ ಸತ್ತನು. ಯುದ್ಧದಲ್ಲಿ ದ್ವಿವಿದನು ಶೋಣಿತಾಕ್ಷನನ್ನು, ಮೈಂದ ವಿರೂಪಾಕ್ಷನನ್ನು ಗಾಢವಾಗಿ ಹಿಡಿದಪ್ಪಿಕೊಂಡು ಕೊಂದನು. ಹೀಗೆ ಎಲ್ಲ ರಾಕ್ಷಸ ಸೇನೆ ಸತ್ತಾಗ ಕುಂಭ ಸಿಟ್ಟುಗೊಂಡನು, ಬಳಿಕ ಯುದ್ಧವನ್ನಾರಂಭಿಸಿದನು. ಕುಂಭ ಧನುರ್ವಿದ್ಯಾಪ್ರವೀಣ. ಕುಂಭನ ಧನಸ್ಸು ಇಂದ್ರಧನಸ್ಸಿನ ಹಾಗೆ ಶೋಭಿಸಿತು. ಒಂದೇ ಬಾಣದಿಂದ ದ್ವಿವಿದನನ್ನು ಕೆಡವಿದನು ಕುಂಭ. ಮೈಂದ ಇದನ್ನು ನೋಡಿ, ದೊಡ್ಡ ಬಂಡೆಯನ್ನು ಕುಂಭನ ಮೇಲೆಸೆದನು. ಐದು ಬಾಣಗಳಿಂದ ಕುಂಭ ಅದನ್ನು ಚೂರುಮಾಡಿದನು. ಕುಂಭನು ಒಂದೇ ಬಾಣದಿಂದ ಮೈಂದನನ್ನು ಕೆಡವಿದ. ಅಂಗದ ಗಮನಿಸಿದನು. ಮೈಂದ ದ್ವಿವಿದರ ಪಥನವನ್ನು ಕಂಡು, ಬಾಣಗಳ ಧಾರೆಯನ್ನು ಅಂಗದನ ಮೇಲೆ ಪ್ರಯೋಗಿಸಿದ ಕುಂಭ. ಏನು ಆಗಲಿಲ್ಲ. ಹಾಗೆ ಅಂಗದನೂ ಬಾಣಪ್ರಯೋಗಿಸಿದಾಗ, ವಿಚಲಿತನಾಗಲಿಲ್ಲ ಕುಂಭನು. ಅಂಗದನ ಹುಬ್ಬಿನ ಮೇಲೆ ಕುಂಭ ಬಾಣಪ್ರಯೋಗಿಸಿದಾಗ, ರಕ್ತ ಪ್ರವೇಶ ಮಾಡಿತು ಅಂಗದ ಕಣ್ಣುಗಳಿಗೆ. ಒಂದೇ ಕೈಯಿಂದ ಮರವನ್ನು ಕಿತ್ತು ಅಂಗದ ಎಸೆಯುವಷ್ಟರಲ್ಲಿ ಕುಂಭನು ಬಾಣಪ್ರಯೋಗಿಸಿ ಮರವನ್ನು ಬೇಧಿಸಿದನು. ಅಂಗದನಿಗೆ ಯುದ್ಧದಲ್ಲಿ ಹಿನ್ನಡೆಯಾಗ್ತಾ ಇದೆ ಎಂದು ತಿಳಿದು, ಜಾಂಬವಂತನಿಗೆ ಕರೆ ಕೊಟ್ಟು, ಕಪಿಗಳನ್ನು ಕರೆದುಕೊಂಡು ಹೋಗು ಅಂಗದನ ಬೆಂಬಲಕ್ಕೆ ಎಂದನು ರಾಮ. ಕುಂಭನ ಬಾಣಪ್ರಯೋಗ ಹೇಗಿತ್ತೆಂದರೆ, ಕಪಿಗಳಿಗೆ ಅಂಗದನ ಹತ್ತಿರ ಬರಲೂ ಬಿಡಲಿಲ್ಲ. ಆಗ ಸುಗ್ರೀವನೇ ಧಾವಿಸಿ ಬರ್ತಾನೆ. ಬಳಿಕ ಕುಂಭನ ಮೇಲೆ ಆಕ್ರಮಿಸಿದನು. ನಾನಾ ಪ್ರಕಾರದ ಪರ್ವತಗಳನ್ನ ಸುಗ್ರೀವ ಎಸೆದರೂ, ಅದನ್ನೆಲ್ಲ ಧ್ವಂಸ ಮಾಡಿದನು ಕುಂಭಕರ್ಣನ ಮಗ ಕುಂಭ. ಸುಗ್ರೀವ ವ್ಯಥೆ ಪಡದೇ, ಅವನ ಮೇಲೆ ಬಾಣಪ್ರಯೋಗವಾದರೂ, ಕುಂಭನಿಗೆ ಧನುಸ್ಸಿಲ್ಲದಂತೆ ಮಾಡಿದನು.
ಕುಂಭನ ಕುರಿತು ಸುಗ್ರೀವ ಮಾತನಾಡಿದನು, “ನಿನ್ನ ವೀರತ್ವ, ಬಾಣದ ವೇಗ ಅದ್ಭುತ. ನೀನು ಪ್ರಹ್ಲಾದ, ಕುಬೇರನಿಗೂ, ಇಂದ್ರನಿಗೂ ಸಮಾನ ಯುದ್ಧದಲ್ಲಿ. ಕುಂಭಕರ್ಣನ ಮಗನೇ ಹೌದು ನೀನು. ನನ್ನ ಪರಾಕ್ರಮವನ್ನೂ ನೋಡು. ವರದಾನದ ಬಲ ರಾವಣನದು, ಆದರೆ ನಿನ್ನ ಅಪ್ಪನದು ಸ್ವಂತ ಸಾಮರ್ಥ್ಯ. ರಾಕ್ಷಸಲೋಕಕ್ಕೆ ಶೃಂಗ ನೀನು. ಅಪ್ರತಿಮ ಕಾರ್ಯವನ್ನು ಮಾಡಿದ್ದೀಯ ನೀನು. ನೀನು ಬಳಲಿದ ಹೊತ್ತಿನಲ್ಲಿ ನಿನ್ನನ್ನು ಕೊಂದರೆ, ನಮ್ಮ ರಾಮ ಒಪ್ಪುವುದಿಲ್ಲ. ವಿಶ್ರಾಂತಿ ಬೇಕಾದರೆ ತೆಗೆದುಕೊ ” ಎಂದನು ಸುಗ್ರೀವ. ಆಗ ಕುಂಭನು ರಥವಿಳಿದು ಬಂದು ಮಲ್ಲಯುದ್ಧಕ್ಕೆ ತಯಾರಾದನು. ಏತನ್ಮಧ್ಯೆ ಸುಗ್ರೀವ ಕುಂಭನನ್ನು ಸಮುದ್ರಕ್ಕೆ ಎಸೆದನು. ಸುಗ್ರೀವನಿರುವಲ್ಲಿಗೆ ಕುಂಭ ಎದ್ದು ಬಂದನು. ಬಂದು ವಜ್ರಮುಷ್ಠಿಯಿಂದ ಸುಗ್ರೀವನ ವಕ್ಷಸ್ಥಲಕ್ಕೆ ಹೊಡೆದಾಗ, ಚರ್ಮವು ಕಿತ್ತುಹೋಯಿತು ಸುಗ್ರೀವನದ್ದು. ರಕ್ತ ಸುರಿಯಿತು. ಮೂಳೆಗೆ ಪೆಟ್ಟುಬಿದ್ದರೂ, ಸುಗ್ರೀವ ವಿಚಲಿತನಾಗಲಿಲ್ಲ. ಸುಗ್ರೀವನೂ ಮುಷ್ಠಿ ಕಟ್ಟಿದನು. ತನಗೆಲ್ಲಿ ಕುಂಭ ಪ್ರಹರಿಸಿದನೋ, ಅದೇ ಜಾಗದಲ್ಲಿ ಸುಗ್ರೀವ ಮುಷ್ಠಿಪ್ರಯೋಗ ಮಾಡಿದಾಗ ಕುಂಭ ಮತ್ತೆ ಏಳಲಿಲ್ಲ, ಸತ್ತನು. ನಿಕುಂಭ ನೋಡಿದನು. ಸುಗ್ರೀವನನ್ನು ಸುಡುವಂತೆ ನೋಡಿದನು. ತನ್ನ ವಿಶೇಷವಾದ ಪರಿಘವನ್ನು ಮೇಲೆತ್ತಿದನು. ಯಮದಂಡದಂತಿದೆ. ಆ ಪರಿಘವನ್ನು ಗರಗರನೆ ತಿರುಗಿಸಿ, ಘರ್ಜಿಸಿದನು ನಿಕುಂಭ. ಕಪಿಗಳಿಗೆ ನಿಕುಂಭನು ಪ್ರಳಯಕಾಲದ ಅಗ್ನಿಯಂತೆ ಕಂಡನು. ಅವನ ಗರ್ಜನೆಗೆ ಕಪಿಗಳೂ, ರಾಕ್ಷಸರು ಸ್ತಬ್ದವಾಗಿ ನಿಂತರು. ಆಗ ಸರಿಯಾಗಿ ನಿಕುಂಭನ ಎದುರು ನಿಂತನು ಹನುಮಂತ. ದುಪ್ಪಟ್ಟು ಸಿಟ್ಟು ಬಂತು ನಿಕುಂಭನಿಗೆ. ಎಲ್ಲ ಶಕ್ತಿಯನ್ನು ಬಳಸಿ, ಹನುಮನ ವಕ್ಷಸ್ಥಲದಲ್ಲಿ ಪರಾಕ್ರಮದಿಂದ ನಿಕುಂಭನು ಅಪ್ಪಳಿಸಿದಾಗ, ಪರಿಘಾಯುಧ ಪುಡಿಪುಡಿಯಾಯಿತು. ಮುಷ್ಟಿಕಟ್ಟಿ ನಿಕುಂಭನ ಎದೆಯಲ್ಲಿ ಹನುಮನು ಹೊಡೆದಾಗ, ರಕ್ತಚಿಮ್ಮಿತು. ಆಗ ನಿಕುಂಭ ಹನುಮಂತನನ್ನು ಎತ್ತಿದನು. ಕಪಿಗಳು ಸ್ತಬ್ದರಾದರು. ರಾಕ್ಷಸರು ಕೂಗಿಕೊಂಡರು ಸಂತಸದಿಂದ. ಎತ್ತುಕೊಂಡು ಹೋಗುವಾಗ, ಹನುಮಂತನು ಅವನಿಗೆ ಗುದ್ದಿ, ತನ್ನನ್ನು ತಾನೆ ಬಿಡಿಸಿಕೊಂಡು ಭೂಮಿಯಲ್ಲಿ ಹಾರಿದನು. ಕೋಪದಿಂದ ಆಕಾಶಕ್ಕೆ ಹಾರಿ, ನಿಕುಂಭನನ್ನು ಬೀಳಿಸಿ, ಬರಿಗೈಯಿಂದ ನಿಕುಂಭನ ತಲೆಯನ್ನು ಕಿತ್ತಿದನು ಹನುಮಂತ, ಅಲ್ಲಿಗೆ ನಿಕುಂಭ ಹತನಾದನು. ಮುಂದಿನ ಯುದ್ಧ ರಾಮನನ್ನು ಕಾಯ್ತಾ ಇದೆ. ಮುಂದಿನ ರಾಕ್ಷಸ ಮಕರಾಕ್ಷ.
ರಾವಣನು ಖರನ ಮಗನಾದ ಮಕರಾಕ್ಷನನ್ನು ಕಳುಹಿಸಿದನು. ಅವನು ಯುದ್ಧಕ್ಕೆ ಬರುವಾಗ ಅಪಶಕುನಗಳಾದವು. ಯುದ್ಧದ ಧ್ವಜವೇ ಬಿತ್ತು. ಗಾಳಿ ಪ್ರತಿಕೂಲ. ಯಾವುದನ್ನೂ ಲೆಕ್ಕಿಸದೆ, ಮುಂದೆ ಹೋದನು ಮಕರಾಕ್ಷ. ಹಿಮ್ಮೆಟ್ಟಿದನು ವಾನರರನ್ನು. ಕಪಿಗಳು ಓಡ್ತಾ ಇದಾರೆ. ಅದನ್ನು ಕಂಡ ರಾಮ, ಬಾಣಗಳ ಮಳೆಗರೆದು ರಾಕ್ಷಸರನ್ನು ಹಿಮ್ಮೆಟ್ಟಿ ವಾನರರನ್ನು ಸಂತೈಸಿದನು. ಮಕರಾಕ್ಷ ರಾಮನನ್ನು ಹುಡುಕಿದನು ಯುದ್ಧಕ್ಕಾಗಿ. ಕೊನೆಗೆ ರಾಮಲಕ್ಷ್ಮಣರನ್ನು ಕಂಡು, ಕೂಗಿ ಕರೆದನು ಮಕರಾಕ್ಷ. ನಿನಗೆ ಯಾವುದು ಅಭ್ಯಾಸವಿದೆಯೋ ಅದರಲ್ಲೇ ಯುದ್ಧಮಾಡು ಎಂದು ಲೋಕೈಕವೀರ ರಾಮನಿಗೆ ಕೇಳುತ್ತಾನೆ ಮಕರಾಕ್ಷ. ನಕ್ಕನು ರಾಮ, ಯುದ್ಧದ ಹೊತ್ತಿನಲ್ಲಿ ಮಾತಲ್ಲ, ಪರಾಕ್ರಮ ಬೇಕು. ನಿನ್ನಪ್ಪನನ್ನು ಕೊಂದವನು ನಾನೇ, ರಾಮ ಎಂದನು ರಾಮ. ಆಗ ಬಾಣಗಳ ಮಳೆಗರೆದನು ಮಕರಾಕ್ಷ. ಆದರೆ ಒಂದು ಬಾಣವೂ ರಾಮನನ್ನು ತಾಗಲಿಲ್ಲ. ಕ್ರುದ್ಧನಾದ ರಾಮನು ಧನುಸ್ಸನ್ನ, ರಥವನ್ನ ಧ್ವಂಸಮಾಡಿದನು. ಮಕರಾಕ್ಷ ಶೂಲಪ್ರಯೋಗ ಮಾಡಿದನು. ಅದನ್ನು ರಾಮ ಒಂದು ಬಾಣದಿಂದ ಕತ್ತರಿಸಿದನು. ಒಂದೇ ಬಾಣದಿಂದ ಮಕರಾಕ್ಷನನ್ನು ಕೊಂದನು ರಾಮ. ರಾವಣನನ್ನು ಬಿಟ್ಟು, ಇನ್ನುಳಿದವನು ಇಂದ್ರಜಿತು ಒಬ್ಬನೇ. ಹೋಗು ಯುದ್ಧಮಾಡು, ರಾಮಲಕ್ಷ್ಮಣರನ್ನು ಗೆದ್ದು ಬಾ ಎಂದು ರಾವಣನು ಕಳುಹಿಸಿದಾಗ, ನಿಕುಂಬಲೆಗೆ ಬಂದು ಹೋಮ ಮಾಡಿದನು ಇಂದ್ರಜಿತು. ಅದನ್ನು ಮಾಡಿ ಹೊರಡುವುದೆಂದು ಆಲೋಚಿಸಿದನು. ಹೋಮದಲ್ಲಿ ವಿಜಯಸೂಚನೆಗಳಾದವು. ಅದೃಶ್ಯ ರಥವನ್ನೇರಿದನು ಇಂದ್ರಜಿತು. ಬ್ರಹ್ಮಾಸ್ತ್ರವೂ ಇರುವ ರಥವಿದು. ರಾಕ್ಷಸರನ್ನುದ್ದೇಶಿಸಿ, ಇಂದು ಭೂಮಿಯನ್ನು ವಾನರಶೂನ್ಯ ಮಾಡುವೆ. ರಾಮಲಕ್ಷ್ಮಣರನ್ನು ಇಲ್ಲವಾಗಿಸುವೆ ಎಂದು ನೇರವಾಗಿ ರಾಮಲಕ್ಷ್ಮಣರೆಡೆಗೆ ಧಾವಿಸಿದನು ಅದೃಶ್ಯನಾಗಿ. ರಾಮಲಕ್ಷ್ಮಣರು ಮನದಿಂದ ಸ್ಮರಿಸಿ ದಿವ್ಯಾಸ್ತ್ರಗಳನ್ನು ಉಪಯೋಗಿಸಿದರು. ಆದರೆ ಇಂದ್ರಜಿತುವನ್ನು ಸೇರಲಿಲ್ಲವದು. ಅದೃಶ್ಯವಾಗಿ ರಾಮನ ಮೇಲೆ ಬಂಡೆಗಳ ಮಳೆಗರೆದನು ಇಂದ್ರಜಿತನು. ಆಗ ರಾಮಲಕ್ಷ್ಮಣರ ಬಾಣಪ್ರಯೋಗವು ಇಂದ್ರಜಿತುವನ್ನು ತಲುಪಿದವು. ಹೋಗುವಾಗ ಸರಿಯಾಗಿದ್ದ ಬಾಣಗಳು ಕೆಳಗೆ ಬರುವಾಗ, ರಕ್ತಸಿಕ್ತವಾದವು. ಇಂದ್ರಜಿತು ಕಳುಹಿಸಿದ ಬಾಣಗಳನ್ನು ನೋಡಿಕೊಂಡು, ರಾಮಲಕ್ಷ್ಮಣರು ಅದನ್ನು ಬೇಧಿಸಿದರು.
ಎಲ್ಲೂ ಕಾಣ್ತಾ ಇಲ್ಲ ಇಂದ್ರಜಿತು. ಬಾಣಗಳು ಬರ್ತಾ ಇವೆ. ಲಕ್ಷ್ಮಣನ ಕೋಪ ಮಿತಿಮೀರಿತು. ಅನೇಕ ಕಪಿಗಳು ಹತರಾದರು. ರಾಮಲಕ್ಷ್ಮಣರಿಗೆ ಗಾಯಗಳಾದವು. ಸರ್ವರಾಕ್ಷಸರ ಸಂಹಾರವನ್ನು ಸಂಕಲ್ಪಿಸಿ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತೇನೆ ಎಂದನು ಲಕ್ಷ್ಮಣ. ಮೋಸದಿಂದ ಯಾಕೆ ಯುದ್ಧ ಮಾಡಬೇಕು ಎದುರು ಬರಲಿ ಎಂದನು ಲಕ್ಷ್ಮಣ. ಆಗ ರಾಮ, ನಮ್ಮ ಲಕ್ಷ್ಯ ಇಂದ್ರಜಿತು. ನಮಗೆ ಬಾಣ ಪ್ರಯೋಗ ಮಾಡುವ ನಮ್ಮೆದುರಾಳಿಯ ಮೇಲೆ ಮಾತ್ರ ನಮ್ಮ ಯುದ್ಧ ನಡೆಯಬೇಕು, ಉಳಿದ ರಾಕ್ಷಸರ ಮೇಲಲ್ಲ. ನಿರಪರಾಧಿ ರಾಕ್ಷಸರಿರಬಹುದು. ಯುದ್ಧ ನಿಯಮವನ್ನು ಸ್ಮರಣೆ ಮಾಡು. ನಮ್ಮೊಡನೆ ಯುದ್ಧಕ್ಕೆ ಬರದವನನ್ನು ಕೊಲ್ಲಕೂಡದು. ಬಂದು ಶರಣಾಗತರಾದವರನ್ನು, ಪಲಾಯನಮಾಡುವರನ್ನು, ಬೇರೆಯ ಗಮನದಲ್ಲಿದ್ದವನನ್ನು ಕೊಲ್ಲಬಾರದು. ಯುದ್ಧಮಾಡುತ್ತಿರುವವನನ್ನು ಮಾತ್ರ ಕೊಲ್ಲಬೇಕು. ನಮ್ಮ ದಿವ್ಯಾಸ್ತ್ರಗಳಿಗೆ ಇಂದ್ರಜಿತುವನ್ನು ಹುಡುಕಿ ಕೊಲ್ಲಲು ಹೇಳೋಣ. ಇಂದ್ರಜಿತು ಭೂಮಿಯನ್ನು, ಪಾತಾಳವನ್ನು, ಆಕಾಶವನ್ನೂ ಎಲ್ಲೇ ಹೊಕ್ಕಿ ಅಡಗಿದ್ದರೂ, ನನ್ನ ಅಸ್ತ್ರಕ್ಕೆ ಸಿಕ್ಕಿ ಸಾಯಬೇಕು ಅವನು. ಹೀಗೆ ಹೇಳಿದ ರಾಮನು ಇಂದ್ರಜಿತುವನ್ನು ಹುಡುಕಿದನು. ಆಗ ಬೆದರಿ ಯುದ್ಧಭೂಮಿಯಿಂದಲೇ ಓಡಿದನು ಇಂದ್ರಜಿತು. ಅಂದೇ ಸತ್ತುಹೋದ ರಾಕ್ಷಸರನ್ನು ನೆನೆದುಕೊಂಡು, ಯುದ್ಧಕ್ಕೆ ಮತ್ತೆ ಹೋಗಬೇಕೆಂದು ಅಂದುಕೊಂಡನು ಇಂದ್ರಜಿತು. ಆದರೆ ಮತ್ತೆ ಮಾಯೆಯಿಂದ ಹೋಗಬೇಕೆಂದರೆ ಹೋಮ ನಡೆಯಬೇಕು. ಅಲ್ಲಿಯವರೆಗೆ ರಾಕ್ಷಸರ ಸಂಹಾರ ಮಾಡ್ತಾರೆ ವಾನರರು. ಅದಕ್ಕಾಗಿ ಒಂದು ಉಪಾಯ ಮಾಡಿದನು ಇಂದ್ರಜಿತು. ಪಶ್ಚಿಮದ್ವಾರದಿಂದ ಹೊರಬರುತ್ತಾನೆ. ಅಲ್ಲಿ ಹನುಮಂತ ಇದ್ದನು. ಬರುವಾಗ ಇಂದ್ರಜಿತುವಿನ ರಥದಲ್ಲಿ ಸೀತೆ. ಮಾಯಾಸೀತೆ. ಮಾಯಾಸೀತೆಯನ್ನಿಟ್ಟುಕೊಂಡು ಒಂದು ಆಟವನ್ನು ಆಡ್ತಾನೆ ಇಂದ್ರಜಿತು. ಇದನ್ನ ರಾಮಲಕ್ಷ್ಮಣರು ಹೇಗೆ ಎದುರಿಸುತ್ತಾರೆ…!!? ವಿಭೀಷಣನ ಅತಿಮುಖ್ಯ ಘಟ್ಟವಿದು. ವಿಭೀಷಣನ ಸರ್ವೋಪರಿ ಸೇವೆಯನ್ನು ಮುಂದೆ ಕೇಳುತ್ತೇವೆ. ಇಂದ್ರಜಿತುವಿಗೆ ಹೋಮ ಮಾಡಲು ಸಮಯ ಬೇಕಾಗಿದೆ.
ಮುಂದೇನಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply