ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ನೇರವಾದ ದಾರಿಯಲ್ಲಿ ಹೋಗಿ ಗುರಿಯನ್ನು ತಲುಪಬೇಕಾದರೆ, ಬೇಕಾದ ಫಲವನ್ನು ಪಡೆಯಬೇಕಾದರೆ, ಅರ್ಹತೆ ಬೇಕಾಗ್ತದೆ, ಸಾಮರ್ಥ್ಯ ಬೇಕಾಗ್ತದೆ. ಅದು ಎರಡೂ ಇಲ್ಲದಿರುವಾಗ ಇರುವುದೇ ಅಡ್ಡದಾರಿ, ಮೋಸದ ದಾರಿ, ಮಾಯೆಯ ದಾರಿ. ಇಂದ್ರಜಿತುವಿಗೆ ನೇರವಾಗಿ ಎದುರು ನಿಂತು, ತನ್ನ ಹೆಸರು, ಗೋತ್ರ, ಪ್ರವರ ಹೇಳಿ ಯುದ್ಧಾಹ್ವಾನ ಮಾಡುವಂತಹ ಶಕ್ತಿ ಇಲ್ಲ. ರಾಮ ಲಕ್ಷ್ಮಣರೊಂದಿಗೆ ಯುದ್ಧ ಮಾಡಿ ಗೆಲ್ಲಲು ಸಾಧ್ಯ ಇಲ್ಲ ಅಂತ ಅವನಿಗೂ ಗೊತ್ತು. ಹಾಗಾಗಿ ಪುನಃ ಇನ್ನೊಂದು ಮಾಯೆಯ ಮಾರ್ಗವನ್ನು ಆಶ್ರಯಿಸಿದನು. ಯುದ್ಧ ಮಾಡದೆ ಅವನಿಗೆ ಬೇರೆ ದಾರಿ ಇಲ್ಲ ಹಾಗಾಗಿ ಪಶ್ಚಿಮ ದ್ವಾರದಿಂದ ಮತ್ತೆ ಹೊರಗೆ ಬಂದ. ಲಂಕೆಯಿಂದ ಪಶ್ಚಿಮ ದ್ವಾರದ ಜವಾಬ್ದಾರಿ ಇಂದ್ರಜಿತುವಿನದ್ದು ಮತ್ತು ರಾಮನ ಕಡೆಯಿಂದ ಪಶ್ಚಿಮ ದ್ವಾರದ ಜವಾಬ್ದಾರಿ ಹನುಮಂತನದ್ದು. ರಥದಲ್ಲಿ ಮಾಮೂಲಿ ಇರುವುದೆಲ್ಲವೂ ಇತ್ತು. ಭಲ್ಲೆಗಳು, ಬಾಣಗಳು, ಬಿಲ್ಲುಗಳು, ಖಡ್ಗಗಳು ಆದರೆ ಒಂದು ಹೆಚ್ಚುವರಿ ವಿಶೇಷ ಅದರಲ್ಲಿ ಇತ್ತು. ಯಾವುದು ಅಂದ್ರೆ “ಸೀತೆ”. ಸೀತೆ ಹೌದು, ಇದ್ದದ್ದು ಹೌದು ಆದರೆ ಅದು ನಿಜವಾದ ಸೀತೆ ಅಲ್ಲ, ಮಾಯಾ ಸೀತೆ. ಸೀತೆಯಂತೆ, ಸೀತೆ ಅಲ್ಲದ ಒಂದು ಆಕೃತಿ. ಅವಳನ್ನು ತರಲಿಕ್ಕೆ ಅವನ ಅಪ್ಪನೇ ವಿರೋಧ ಮಾಡ್ತಾನೆ, ಹಾಗಾಗಿ ಮಾಯಾ ಸೀತೆಯನ್ನು ರಥದಲ್ಲಿ ಇಟ್ಟು, ಅದನ್ನು ಪಶ್ಚಿಮ ದ್ವಾರದಲ್ಲಿ ಇಟ್ಟು ಆ ಕಪಿಗಳ ಮುಂದೆ ವಧಿಸಲಿಕ್ಕೆ ತೀರ್ಮಾನ ಮಾಡ್ತಾನೆ ಇಂದ್ರಜಿತು. ಆ ದುರ್ಮತಿಯು ಯಾಕೆ ಹೀಗೆ ಯೋಚನೆ ಮಾಡಿದ ಅಂದ್ರೆ, ಕಪಿಗಳ ದಿಕ್ಕು ತಪ್ಪಿಸಬೇಕು, ಅವರನ್ನು ವಂಚಿಸಬೇಕು. ಯಾಕೆ ದಿಕ್ಕು ತಪ್ಪಿಸಬೇಕು ಅಂದ್ರೆ, ಹೋಮ ಮಾಡಲಿಕ್ಕೆ. ಅವನ ವಾಮಾಚಾರದ ಹೋಮ ಮಾಡಿದರೇ ಅವನಿಗೆ ಮಾಯೆಯ ಶಕ್ತಿಗಳೆಲ್ಲವೂ ಬರ್ತದೆ. ಹೋಮ ಮಾಡಲಿಕ್ಕೆ ಕದನ ವಿರಾಮ ಬೇಕು. ಒಂದಿಷ್ಟು ಹೊತ್ತು ಯುದ್ಧ ನಡಿಯಬಾರದು. ಸೀತೆಯ ವಧೆ ಆಯಿತು ಅಂತ ಗೊತ್ತಾದರೆ ರಾಮನೇ ವಿಚಲಿತನಾಗ್ತಾನೆ. ಒಂದಿಷ್ಟು ಹೊತ್ತು ಸಿಗುತ್ತದೆ ಅನ್ನೋದು ಒಟ್ಟು ಕಾರ್ಯತಂತ್ರ.
ಇಂದ್ರಜಿತು ದ್ವಾರದಿಂದ ಹೊರಗೆ ಬಂದಂತೆ, ಕುಳಿತ ಕಪಿಗಳೆಲ್ಲ ನಿಂತುಕೊಂಡ್ರು, ನಿಂತುಕೊಂಡ್ರು ಅನ್ನೋದಕ್ಕಿಂತ ನೆಗೆದರು ಅನ್ನಬಹುದು. ಅವನನ್ನು ನೋಡಿದ ವಾನರರು ಬಂಡೆಗಳನ್ನ ಕೈಗೆತ್ತಿಕೊಂಡ್ರು. ಎಲ್ಲರ ಮುಂದೆ ಹನುಮಂತ. ಅವನ ಕೈಯಲ್ಲಿ ಮಹಾ ಪರ್ವತ ಶೃಂಗ. ಇನ್ನೇನು ಆ ಶೃಂಗವನ್ನು ಅವನ ಮೇಲೆ ಎತ್ತಿ ಬಿಸಾಕಬೇಕು ಅನ್ನುವುದರಲ್ಲಿ ಹನುಮಂತನ ಕಣ್ಣಿಗೆ ಕಂಡಿದ್ದು ಆ ದೃಶ್ಯ. ಹಿಂದೆ ಸುಂದರ ಕಾಂಡದಲ್ಲಿ ಅಶೋಕವನದಲ್ಲಿ ಕಂಡಿದ್ದನಲ್ಲ ಆ ದೃಶ್ಯ. ಅದೇ ಆಕೃತಿ, ಅದೇ ಭಾವ, ಅದೇ ಆಭೂಷಣಗಳು, ಅದೇ ದುಃಖ, ಬಿಡಿಸಿದ ಜಡೆ, ತುಂಬಿದ ದೈನ್ಯ, ಉಪವಾಸದಿಂದ ಕರಗಿದ ದೇಹ, ಮಾಸಿದ ಬಟ್ಟೆ, ಶರೀರಕ್ಕೆ ಸಂಸ್ಕಾರವನ್ನು ಕೊಡದೇ ಎಷ್ಟೋ ತಿಂಗಳು ಕಳೆದಿದೆ, ವರ ನಾರಿ ಅವಳು ಆದರೆ ಗ್ರಹಣ ಹಿಡಿದ ಹಾಗೆ ಇದ್ದಾಳೆ. ಒಂದು ಸಲ ನೋಡಿದನಂತೆ, ಇನ್ನೊಂದು ಸಲ ನೋಡಿದನಂತೆ, ಮತ್ತೊಂದು ಸಲ ನೋಡಿದನಂತೆ, ಕಣ್ಣು ಅಗಲಿಸಿ, ಕಣ್ಣು ಕಿರಿದು ಮಾಡಿ ನೋಡಿದನಂತೆ, ಸೀತೆ. ಅದನ್ನು ಕಂಡಾಗ ಧಾರೆ ಧಾರೆಯಾಗಿ ಕಣ್ಣಲ್ಲಿ ನೀರಿಳಿಯಿತು. ವ್ಯಥೆ ಆವರಿಸಿತು. ಒಂದು ಸಲ ಆಶ್ಚರ್ಯವೂ ಆಯಿತು, ಇಲ್ಲಿ ಸೀತೆಗೆ ಏನು ಕೆಲಸ? ಏನು ಯೋಜನೆ ಇವನದ್ದು ಎನ್ನುವ ದೊಡ್ಡ ಪ್ರಶ್ನೆ ಹನುಮಂತನನ್ನು ಆವರಿಸಿತು. ಏನೇ ಇರಲಿ ಎಂದು ಹನುಮಂತ ರಥದ ಕಡೆಗೆ ಧಾವಿಸ್ತಾನೆ. ಆಗ ಇಂದ್ರಜಿತು ಕ್ರುದ್ಧನಾಗಿ ಕತ್ತಿಯನ್ನು ಹೊರಗೆ ತೆಗೆದು, ಆ ಮಾಯಾ ಸೀತೆಯ ಮುಡಿಯನ್ನು ಗಟ್ಟಿಯಾಗಿ ಹಿಡಿದನಂತೆ. ಹನುಮಂತನಿಗೆ ಕಂಡಿತು ಅದು, ಅದೇ ತಾನೇ ಬೇಕಾಗಿದ್ದು ಇಂದ್ರಜಿತುವಿಗೆ. ಇವರೆಲ್ಲ ನೋಡ ನೋಡುತ್ತಿದ್ದಂತೆ ಒಂದು ಏಟು ಕೊಟ್ಟನಂತೆ ಆಕೆಗೆ. ಹನುಮಂತನಿಗೆ ಇದ್ದಕ್ಕಿದ್ದಂತೆ ದೈನ್ಯ ಬಂದು ಕಣ್ಣೀರು ಇಳಿಯಿತು. ಶೋಕ ಮತ್ತು ಕ್ರೋಧವು ಅವನನ್ನು ಆವರಿಸಿತು. ಇಂದ್ರಜಿತುವನ್ನು ಉದ್ದೇಶಿಸಿ ಹನುಮಂತನು ಸುಡುನುಡಿಯನ್ನು ಆಡಿದನು, “ದುರಾತ್ಮನೇ, ಸೀತೆಯ ಮುಡಿ ಹಿಡಿಯುತ್ತೀಯಾ? ಮೃತ್ಯುವಿಗಾಗಿ ಈ ಕೆಲಸ ಮಾಡುತ್ತಿದ್ದೀಯಾ? ಬ್ರಹ್ಮರ್ಷಿಯ ಕುಲದಲ್ಲಿ ಹುಟ್ಟಿದ್ದವನು, ಪುಲಸ್ತ್ಯರ ಮೊಮ್ಮಗ ರಾವಣ, ಅವನ ಮಗ ನೀನು, ವಿಶ್ರವಸರ ಮೊಮ್ಮಗ ನೀನು. ರಾಕ್ಷಸರ ಕುಲದಲ್ಲಿ ಹುಟ್ಟಿದ್ದೇ ಹೌದು, ಅದೇ ನಿನ್ನ ಜಾತಿ ಎಂಬುದನ್ನು ತೋರಿಸ್ತಾ ಇದ್ದೀಯಾ. ಇಂತಹ ಪಾಪ ಕೆಲಸ ಮಾಡುವ ನಿನಗೆ ಧಿಕ್ಕಾರ. ಕ್ರೂರ, ನೀಚ, ನಡತೆಗೆಟ್ಟವನೇ, ಅನಾರ್ಯ ಬುದ್ಧಿ ಎಂದೆಲ್ಲ ಹೇಳಿದ ಹನುಮಂತನಿಗೆ ವಾಕ್ಯವನ್ನು ಪೂರ್ತಿ ಮಾಡಲಿಕ್ಕೆ ಆಗಲಿಲ್ಲ. ಸೀತೆ ಏನು ಮಾಡಿದಳು ನಿನಗೆ? ತನ್ನ ಮನೆಯನ್ನೂ, ರಾಜ್ಯವನ್ನೂ ಕೊನೆಗೆ ತನ್ನ ರಾಮನಿಂದಲೂ ದೂರವದವಳು. ನೀನ್ಯಾಕೆ ಕೊಲ್ಲಬೇಕು ಸೀತೆಯನ್ನು. ಒಂದು ವೇಳೆ ಸೀತೆಯನ್ನು ಕೊಂದಿದ್ದೇ ಆದರೆ, ಹೆಚ್ಚು ಸಮಯ ನೀನು ಬದುಕಿ ಉಳಿಯುವುದಕ್ಕೆ ಸಾಧ್ಯ ಇಲ್ಲ. ಸತ್ತ ಮೇಲೂ ನಿನಗೆ ಒಳ್ಳೆಯದಾಗುವುದಿಲ್ಲ. ಸ್ತ್ರೀ ಘಾತುಕರಿಗೆ ಒಳ್ಳೆಯ ಲೋಕಗಳಿಲ್ಲ, ಮುಂದೆಯೂ ಕೂಡ. ತಪ್ಪಿರಲಿ ಸರಿ ಇರಲಿ, ಸ್ತ್ರೀಗೆ ತೊಂದರೆ ಕೊಟ್ಟವರು ಅಥವಾ ಕೊಂದವರು ಎಂತಹ ಲೋಕಕ್ಕೆ ಹೋಗ್ತಾರೆ ಅಂದ್ರೆ ಜಿಗುಪ್ಸೆಪಡುವಂತಹ ಲೊಕಕ್ಕೆ ಹೋಗ್ತಾರೆ. ಸ್ತ್ರೀಯ ಬಗ್ಗೆ ಆ ಕಾಲದಲ್ಲಿ ಎಂತಹ ಭಾವನೆ ಇತ್ತು ಎನ್ನುವುದಕ್ಕೆ ಇದು ಸೂಚನೆ. ಬ್ರಹ್ಮಹತ್ಯೆ ಮಾಡಿದ ಪಾಪಿ ಕೂಡ ಜಿಗುಪ್ಸೆ ಪಡುವಂತಹ ಲೋಕಕ್ಕೆ ಹೋಗ್ತಾನೆ, ಸ್ತ್ರೀ ಹಂತಕ. ಹನುಮಂತ ಇಷ್ಟು ಹೇಳಿ, ಸೀತೆಯನ್ನು ವಿಮೋಚನೆಗೊಳಿಸಬೇಕು ಎಂದು ಅತ್ತ ಧಾವಿಸಿದ. ಅವನ ಹಿಂದಕ್ಕೆ ವಾನರ ಸೇನೆ. ವಾನರ ಸೇನೆಯನ್ನು ರಾಕ್ಷಸರ ಸೇನೆ ತಡೆಯಿತು.
ಏತನ್ಮಧ್ಯೆ ಇಂದ್ರಜಿತು ವಾನರ ಸೇನೆಯ ಮೇಲೆ ಬಾಣಗಳ ಮಳೆಯನ್ನೇ ಸುರಿದ ಮತ್ತು ಹನುಮಂತನಿಗೆ ಹೇಳಿದ, ನೀನು ಸುಗ್ರೀವ ಯಾರಿಗಾಗಿ ಬಂದಿದ್ದೀರೋ ಅಂತವಳನ್ನು ನಿನ್ನ ಕಣ್ಮುಂದೇ ಕೊಲ್ತೇನೆ. ಅವಳ ನಂತರ, ರಾಮನನ್ನೂ, ಲಕ್ಷ್ಮಣನನ್ನೂ, ನಿನ್ನನ್ನೂ, ಸುಗ್ರೀವನನ್ನೂ, ಅನಾರ್ಯ ವಿಭೀಷಣನನ್ನು ಕೊಲ್ಲುವೆ. ಸ್ತ್ರೀಯನ್ನು ಕೊಲ್ಲುವ ಧರ್ಮಶಾಸ್ತ್ರ ಹೇಳಿದೆಯಲ್ಲ! ಅದೆಲ್ಲ ನನಗಿಲ್ಲ. ನನ್ನ ಧರ್ಮಶಾಸ್ತ್ರ ಏನು ಹೇಳ್ತದೆ ಅಂದ್ರೆ, ಶತ್ರುವನ್ನು ಕೊಲ್ಲು. ಅಷ್ಟೇ! ಏನು ಮಾಡಿಯಾದರೂ ಶತ್ರುವನ್ನು ನಾಶ ಮಾಡಲೇ ಬೇಕು ಎನ್ನುವವನು ನಾನು. ಎಂದು ಹೇಳಿ, ಆ ಮಾಯಾ ಸೀತೆ ರೋಧಿಸ್ತಾ ಇರುವಾಗಲೇ, ಖಡ್ಗದಿಂದ ಕೊಂದೇ ಬಿಟ್ಟ. ಯಜ್ಞೋಪವೀತ ಆಕಾರದಲ್ಲಿ, ಎಡ ಹೆಗಲಿನಿಂದ ಆರಂಭಿಸಿ ಶರೀರದ ಬಲಭಾಗಕ್ಕೆ ಬರುವ ಹಾಗೆ ಸೀತೆಯನ್ನು ಖಡ್ಗದಿಂದ ಕತ್ತರಿಸಿ ಕೆಡವಿದ. ಆಕೆಯನ್ನು ಕಡಿದು ದೂಡಿದಾಗ, ಮಾಯಾ ಸೀತೆ ನೆಲಕ್ಕೆ ಬಂದು ಬಿದ್ದಿದ್ದಾಳೆ. ಇಷ್ಟು ಮಾಡಿ ಅಟ್ಟಹಾಸ ಮಾಡಿದನಂತೆ. ನೋಡು ನನ್ನ ಕೋಪಕ್ಕೆ ಬಲಿಯಾದ ಸೀತೆಯನ್ನು. ಸೀತೆಯನ್ನು ಹುಡುಕಿದಿರಿ, ಸೇತುವೆಯನ್ನು ಕಟ್ಟಿದಿರಿ, ಏನಾಯಿತು? ನಿಮ್ಮ ಇಡೀ ಪರಿಶ್ರಮ ವ್ಯರ್ಥ, ಮಾಡಿದ್ದೆಲ್ಲ ದಂಡ ಎಂದು ಬಹಳ ಆನಂದವಾಗಿದೆ ಎಂದು ತೋರಿಸಿ, ನಕ್ಕ. ವಾನರರು ಆ ದೃಶ್ಯವನ್ನು ಕಂಡು ಬುದ್ಧಿಯೇ ಭ್ರಮಿಸಿತು. ಅವರಿಗೆ ಏನು ಮಾಡಬೇಕೆಂದೇ ಅರ್ಥ ಆಗಲಿಲ್ಲ. ವಾನರ ಸೇನೆ ಚದುರಿ ಹೋಯಿತು. ಅತ್ತ ಇತ್ತ ಧಾವಿಸಿದರು. ವಾನರರು ಹೆದರಿ ಓಡಿ ಹೋಗುತ್ತಿದ್ದಾರೆ ಅಂತ ತಿಳಿದು, ಹನುಮಂತ, ಚದುರಿ ಹೋಗುವ ವಾನರರಿಗೆ ಹೇಳಿದ, ಯಾಕ್ರೋ ಮುಖ ಬಾಡಿತು ನಿಮ್ಮದು? ಎಲ್ಲಿಗೆ ಹೋಯಿತು ನಿಮ್ಮ ಶೂರತ್ವ? ಬನ್ನಿ ನನ್ನ ಹಿಂದೆ, ನಾನು ಮುಂದೆ ನಿಂತು ಯುದ್ಧ ಮಾಡ್ತೇನೆ ಎಂದಾಗ ಎಲ್ಲ ವಾನರರು ಅವನ ಹಿಂದೆ ಬಂದರಂತೆ. ಹನುಮಂತ ತನ್ನ ಬಲದೊಡಗೂಡಿ ರಾಕ್ಷಸ ಸೇನೆಯನ್ನು ಧ್ವಂಸ ಮಾಡಿ ಬಿಟ್ಟನು. ಹನುಮಂತನ ಪರಾಕ್ರಮ ಇಮ್ಮಡಿ ಆಯಿತು. ಆ ಸಮಯದಲ್ಲಿ ಹನುಮಂತ ಕಾಲನಂತೆ, ಹಂತಕನಂತೆ, ಯಮನಂತೆ ಗೋಚರಿಸಿದ ರಕ್ಕಸರ ಪಾಲಿಗೆ. ಸೀತೆಯನ್ನು ನೆಲದ ಮೆಲೆ ಬಿದ್ದದ್ದನ್ನು ನೋಡಿ, ದೊಡ್ಡ ಬಂಡೆಯನ್ನು ಇಂದ್ರಜಿತುವಿನ ರಥದತ್ತ ಎಸೆಯುತ್ತಾನೆ ಹನುಮಂತ. ಅದನ್ನು ನೋಡಿ ಇಂದ್ರಜಿತುವಿನ ಬುದ್ಧಿವಂತ ಸಾರಥಿ, ಬಹಳ ಕುಶಲತೆಯಿಂದ ರಥದ ಗತಿಯನ್ನು ಬದಲಾಯಿಸುತ್ತಾನೆ. ರಥವನ್ನು ಬೇರೆಕಡೆ ಕೊಂಡೊಯುತ್ತಾನೆ. ಹನುಮಂತ ಎಸೆದ ಆ ಶಿಲೆಯ ವೇಗ ಏಷ್ಟಿತ್ತು ಅಂದ್ರೆ, ನೆಲವನ್ನು ಬಗೆದು ಒಳಗೆ ಹೊಕ್ಕಿತು. ಇಂದ್ರಜಿತುವಿಗೆ ಏನೂ ಆಗಲಿಲ್ಲ ಆದರೆ ಅಲ್ಲಿಯ ರಾಕ್ಷಸ ಸೈನ್ಯ ಧ್ವಂಸವಾಯಿತು. ವಾನರ ಸೇನೆಯೂ ತಮ್ಮ ತಮ್ಮ ಕೈಯಲ್ಲಿ ಮರ, ಬಂಡೆಗಳನ್ನು ಎತ್ತಿಕೊಂಡು ರಾಕ್ಷಸ ಸೈನ್ಯದ ಕಡೆಗೆ ಧಾವಿಸ್ತಾರೆ. ಅವುಗಳ ಮಳೆಗರೆದರು ವಾನರರು.
ಇಂದ್ರಜಿತು ನೋಡಿದ, ತನ್ನ ಸೈನ್ಯ ಧರಾಶಾಯಿಯಾಗಿದೆ. ಸಿಟ್ಟು ಬಂತು ಅವನಿಗೆ. ಧನಸ್ಸನ್ನು ತೆಗೆದುಕೊಂಡು ಬಾಣ ಜಾಲಗಳನ್ನು ಸೃಷ್ಟಿ ಮಾಡ್ತಾನೆ. ಅನೇಕ ಕಪಿ ನಾಯಕರನ್ನು ಸಂಹಾರ ಮಾಡ್ತಾನೆ. ಏತನ್ಮಧ್ಯೆ ಹನುಮಂತ ರಾಕ್ಷಸ ಸೈನ್ಯವನ್ನು ಮರ್ದಿಸಿ ಬಿಟ್ಟನು. ಸಿಟ್ಟು ಕ್ರೋಧದಿಂದ ರಾಕ್ಷಸ ಸೈನ್ಯವನ್ನು ಧ್ವಂಸ ಮಾಡಿ ತನ್ನ ಸೈನ್ಯಕ್ಕೆ ಹೇಳಿದನಂತೆ, ಹೋಗೋಣ. ಇದು ಪ್ರಯೋಜನ ಇಲ್ಲ, ಯಾರಿಗಾಗಿ ಯುದ್ಧ, ಯಾತಕ್ಕೆ ಯುದ್ಧ, ಮೂಲ ಉದ್ದೇಶವೇ ನಾಶವಾಗಿದೆ. ಈ ಯುದ್ಧ ಸೀತೆಗಾಗಿ ಆಗಿತ್ತು, ಅವಳೇ ಇಲ್ಲದ ಮೇಲೆ ಯಾತಕ್ಕೆ ಇನ್ನು ಈ ಯುದ್ಧ. ಹೋಗಿ ರಾಮನಿಗೂ ಸುಗ್ರೀವನಿಗೂ ಈ ಮಾತನ್ನು ನಿರೂಪಿಸೋಣ ಎಂದು ಹೊರಟನು. ಎಲ್ಲ ವಾನರ ಸೇನೆಯು ಹಿಂಬಾಲಿಸಿತು. ಹನುಮಂತ ಆ ಕಡೆಗೆ ಹೋಗಿದ್ದೇ ಹೋಗಿದ್ದು, ಇಂದ್ರಜಿತು ನಿಕುಂಬಿಲದ ಕಡೆಗೆ ಓಡಿದ. ಲಂಕೆಯ ಪಶ್ಚಿಮದ್ವಾರದಲ್ಲಿ ಭದ್ರಕಾಳಿಯ ಸ್ಥಾನವಿದೆ. ಸುತ್ತ ಕಾಡಿದೆ. ಅದಕ್ಕೆ ನಿಕುಂಬಿಲ ಅಂತ ಕರೀತಾರೆ. ಅಲ್ಲಿಗೆ ಹೋಗಿ ವಾಮಾಚಾರದ ಹೋಮ ಮಾಡಲಿಕ್ಕೆ ಪ್ರಾರಂಭ ಮಾಡಿದ. ಅಗ್ನಿ ಪ್ರಜ್ವಲಿಸಿತು. ಮಾಂಸವನ್ನೂ ರಕ್ತವನ್ನೂ ಅಗ್ನಿಗೆ ಸುರಿತಾ ಇದ್ದಾನೆ. ಹೋಮದ ಫಲವೂ ಮಾಂಸ ಶ್ರೋಣಿತವೇ. ಜೊತೆಗೆ ಇನ್ನೂ ರಾಕ್ಷಸರಿದ್ದಾರೆ, ಇವನ ಜೊತೆ ಇದ್ದು ಇಂತಹ ಹೋಮ ಮಾಡಿದ ಅನುಭವ ಉಳ್ಳವರೇ. ಹೋಮ ಮಾಡುವಷ್ಟು ಸಮಯ ಇಂದ್ರಜಿತುವಿಗೆ ಸಿಕ್ಕಿದರೆ ಸಾಕು, ಅವನಿಗೆ ಶಕ್ತಿ ಬಂದು ಅದೃಶ್ಯನಾಗಿ ಬರ್ತಾನೆ ಯುದ್ಧಕ್ಕೆ. ಉತ್ತರದ್ವಾರದಲ್ಲಿ ರಾಮ, ಹನುಮಂತ ಪಶ್ಚಿಮ ದ್ವಾರದಲ್ಲಿ. ರಾಮನಿಗೆ ಪಶ್ಚಿಮ ದ್ವಾರದಿಂದ, ಸಾಮಾನ್ಯ ಯುದ್ಧಕ್ಕಿಂತ ಭಯಂಕರವಾದ ಶಬ್ದ ಕೇಳಿಬರ್ತಾ ಇದೆ. ಜಾಂಬವಂತನನ್ನು ಕರೆದು ರಾಮ ಹೇಳೀದ, “ಹನುಮಂತ ಏನೋ ದೊಡ್ಡ ಕೆಲಸ ಮಾಡ್ತಾ ಇದ್ದಾನೆ, ದೊಡ್ಡ ಯುದ್ಧ ಧ್ವನಿ ಕೇಳ್ತಾ ಇದೆ, ನೀನು ಹೋಗಿ ಅವನಿಗೆ ಸಹಾಯ ಮಾಡು”. ಜಾಂಬವಂತ ಭಲ್ಲೂಕಸೇನೆಯೊಡಗೂಡಿ ಆ ಕಡೆಯಿಂದ ಬರ್ತಾ ಇದ್ದಾನೆ, ಹನುಮಂತ ವಾನರಸೇನೆಯೊಡಗೂಡಿ ಬರ್ತಾ ಇದ್ದಾನೆ. ಪರಸ್ಪರ ಭೇಟಿ ಆದರೂ ದುಃಖಿತ ಹನುಮಂತ ಏನೂ ಮಾತನಾಡಲಿಲ್ಲ. ಜಾಂಬವಂತನನ್ನು ಕರೆದುಕೊಂಡು ರಾಮನ ಬಳಿಗೆ ಹೋಗಿ ಎಲ್ಲ ಹೇಳಿಬಿಟ್ಟ ಹನುಮಂತ, “ಪ್ರಭು ಇಂದ್ರಜಿತುವಿನೊಂದಿಗೆ ಘೋರ ಯುದ್ಧ ಮಾಡ್ತಾ ಇದ್ದೆವು. ನಮ್ಮ ಕಣ್ಮುಂದೆ ಅಳುವ ಸೀತೆಯನ್ನು ಕೊಂದನು ಇಂದ್ರಜಿತು. ಆ ದೃಶ್ಯವನ್ನು ಕಂಡು ನನ್ನ ಬುದ್ಧಿಯೇ ಭ್ರಮಿಸಿತು ವಿಶಾದವು ಆವರಿಸಿತು. ನಿನಗೆ ಹೇಳಲೆಂದೇ ನಾನು ಬದುಕಿದ್ದೇನೆ.” ರಾಮನ ಕಡೆಯಿಂದ ಏನೂ ಪ್ರತಿಕ್ರಿಯೆಯೇ ಇಲ್ಲ. ಯಾಕೆಂದ್ರೆ, ಇಂತಹ ಘೋರ ವಾರ್ತೆಯನ್ನು ಕೇಳಿ, ರಾಮನ ಪ್ರಜ್ಞೆ ಅಳಿಯಿತು. ಎಚ್ಚರ ತಪ್ಪಿ ಧರೆಗೆ ಒರಗಿದನು ರಾಮ. ಇತರ ಕಪಿನಾಯಕರು ಕೂಡಲೇ ರಾಮನನ್ನು ಸುತ್ತುವರಿದರು. ನೀರು ಸಂಪಡಿಸುತ್ತಾ ಇದ್ದಾರೆ ಅವನ ಮುಖಕ್ಕೆ. ಅದು ಹೇಗೆ ಕಣಿಸ್ತಾ ಇತ್ತು ಅಂದ್ರೆ, ಜ್ವಾಲೆಯ ಮೇಲೆ ನೀರು ಸಿಂಪಡಿಸಿದಂತೆ. ಆ ಸಮಯದಲ್ಲೂ ರಾಮನ ಕಾಂತಿ ಕಡಿಮೆ ಆಗಲಿಲ್ಲ, ಇವರಿಗೆ ಮುಟ್ಟಲಿಕ್ಕೂ ಧೈರ್ಯ ಇಲ್ಲ ಕಪಿಗಳಿಗೆ. ತನ್ನ ಎರಡೂ ಬಾಹುಗಳಿಂದ ಲಕ್ಷ್ಮಣನು ರಾಮನನ್ನು ತಬ್ಬಿ ಕೊಳ್ತಾನೆ. ಲಕ್ಷ್ಮಣನು ಧರ್ಮವನ್ನೇ ನಿಂದಿಸಿದನಂತೆ. ಧರ್ಮಕ್ಕಾಗಿ ಎಲ್ಲವನ್ನೂ ಮಾಡಿದ ರಾಮ, ರಾಜ್ಯವನ್ನೂ ಬಿಟ್ಟ ರಾಮ, ಇಷ್ಟೆಲ್ಲ ಕಷ್ಟ ಪಟ್ಟ ರಾಮನನ್ನು ನೋಡಿ ಲಕ್ಷ್ಮಣನು ಧರ್ಮವನ್ನೇ ನಿಂದಿಸಿದನು. ಅವನ ರಾಮ ಪ್ರೀತಿ ಎಂತಹದ್ದು ಅಂದ್ರೆ ರಾಮನೇ ಸರ್ವಸ್ವ, ಧರ್ಮ ಏನೂ ಅಲ್ಲ ಅವನಿಗೆ. ಧರ್ಮವೆತ್ತ ಲಕ್ಷ್ಮಣನಿಗೆ ಧರ್ಮದ ಮೇಲೆ ಜಿಗುಪ್ಸೆ, ತಿರಸ್ಕಾರ ಬಂತಂತೆ. ಎಲ್ಲಿದೆ ಧರ್ಮ ಅಂತ ಕೇಳ್ತಾನೆ.
ಬಹಳ ವಿಲಾಪಿಸಿದ ನಂತರ ಆ ಆಕ್ರೋಶ ಇಂದ್ರಜಿತುವಿನ ಮೇಲೆ ತಿರುಗಿತು ಮತ್ತು ಹೇಳಿದ, “ಅಣ್ಣ ನಿನಗಾದ ಈ ಅನ್ಯಾಯವನ್ನು ಧನಸ್ಸಿನಿಂದ ತೀರೀಸುತ್ತೆನೆ. ಇಂದು ನನ್ನ ಧನಸ್ಸು ಮಾತಾಡ್ತದೆ. ಏಳು ನರಸಿಂಹ, ದೀರ್ಘಬಾಹುವೇ, ಧೃಢ ವೃತನೇ ಏಳು ಮೇಲೆ. ನಿನ್ನೊಳಗಿನ ಪರಮ ಚೈತನ್ಯ ಮರೆತು ಹೋಯಿತೇ, ಏಳು. ನಾನು ಸೀತೆಯ ವಧೆಯ ಪ್ರತಿಕಾರ ಮಾಡ್ತೇನೆ, ಲಂಕೆಯನ್ನು ಧೂಳೆಬ್ಬಿಸುತ್ತೇನೆ” ಎಂದು ಘರ್ಜಿಸುತ್ತಾ ಇದ್ದಾನೆ. ಅಷ್ಟೋತ್ತಿಗೆ ವಿಭೀಷಣ ಹೆಮ್ಮೆಯಿಂದ ಬರ್ತಾ ಇದ್ದಾನೆ. ಜೊತೆಗೆ ಅವನ ನಾಲ್ವರು ಸಚಿವರು. ಬಂದು ನೋಡಿದರೆ ವಿಚಿತ್ರ ದೃಶ್ಯ. ರಾಮ ಮಲಗಿದ್ದಾನೆ, ಅವನನ್ನು ತಬ್ಬಿ ಹಿಡಿದು ಲಕ್ಷ್ಮಣ ಅಳ್ತಾ ಇದ್ದಾನೆ, ರೋಷವನ್ನೂ ತಾಳಿದ್ದಾನೆ. ಸುತ್ತಲೂ ಅಳ್ತಾ ಕೂತಿದ್ದ ವಾನರ ನಾಯಕರು. ಏನಾಯಿತು ಎಂದು ಆತಂಕದಿಂದ ಕೇಳಿದಾಗ, ಲಕ್ಷ್ಮಣ ವಿವರಣೆ ಕೊಡ್ತಾನೆ, “ಇಂದ್ರಜಿತು ಸೀತೆಯನ್ನು ಕೊಂದ ಎಂದು ಹನುಮಂತ ಹೇಳಿದ. ಅದನ್ನು ಕೇಳಿ ನನ್ನ ಅಣ್ಣ ಮೂರ್ಛೆ ಬಿದ್ದ.” ರಾಮನಿಗೆ ಸೀತೆಯ ಮೇಲೆ ಎಷ್ಟು ಪ್ರೀತಿಯಿತ್ತು, ರಾಮನ ನಿಜವಾದ ಅಂತಃಕರಣ ಯಾವುದು ಎಂದು ಇದರಿಂದ ಗೊತ್ತಾಗುತ್ತದೆ. ಲಕ್ಷ್ಮಣ ಇನ್ನೂ ಹೇಳ್ತಾ ಇದ್ದಾನೆ, ಅಷ್ಟರಲ್ಲಿ ವಿಭೀಷಣ ಲಕ್ಷ್ಮಣನ ಮಾತನ್ನು ನಿಲ್ಲಿಸಿದ. ರಾಮನಿಗೆ ಅರ್ಧ ಎಚ್ಚರ ಅರ್ಧ ಮೂರ್ಛೆ ಆ ಸ್ಥಿತಿಯಲ್ಲಿ ಇದ್ದಾನೆ. ವಿಭೀಷಣ ರಾಮನಿಗೆ ಹೇಳಿದ, “ಪ್ರಭು, ಈಗ ಹನುಮಂತ ಹೇಳಿದ ವಿಷಯ ನಿಜವಲ್ಲ! ಸಮುದ್ರವನ್ನು ಒಣಗಿಸಲಾಗಿದೆ ಎಂದಾಗ ಹೇಗೆ ನಂಬಬಹುದೋ ಹಾಗೇ ಇದು. ಸಮುದ್ರವನ್ನು ಒಣಗಿಸಿದ್ದಷ್ಟೇ ಸುಳ್ಳು ಇದು. ನನಗೆ ಗೊತ್ತು, ರಾವಣನ ಮನಸ್ಸು ಏನು ಎಂಬುದು. ಅವನು ಸೀತೆಯನ್ನು ಎಂದೂ ಕೊಲ್ಲುವುದಿಲ್ಲ ಅದು ನಿಶ್ಚಿತ. ನಾನೇ ಎಷ್ಟೋ ಸಲ ಸೀತೆಯನ್ನು ಬಿಟ್ಟು ಕೊಡು ಎಂದು ಎಷ್ಟು ಬಾರಿ ಹೇಳಿದ್ದೇನೆ. ಅದನ್ನು ಒಪ್ಪಲಿಲ್ಲ. ಅವನ ವ್ಯವಸ್ಥೆ ಹೇಗಿದೆ ಅಂದ್ರೆ, ಇಂದ್ರಜಿತುವೇ ಆದರೂ ಅವಳನ್ನು ಮುಟ್ಟುವ ಹಾಗಿಲ್ಲ ಲಂಕೆಯಲ್ಲಿ. ರಾವಣ ಜೀವಂತ ಇರುವವರೆಗೆ ಸಾಮ ದಾನ ದಂಡ ಭೇದ ಯಾವುದೇ ರೀತಿಯಲ್ಲಿ, ಯಾರೇ ಆದರೂ ಸೀತೆಯನ್ನು ನೋಡುವಂತೆಯೂ ಇಲ್ಲ, ಏನೂ ಮಾಡುವಂತೆಯೂ ಇಲ್ಲ. ಇದು ಅವನ ಮಾಯೆ. ಅವನು ಹೇಗೆ ಯೋಚಿಸಬಲ್ಲ, ಹೇಗೆ ನಡವಳಿಕೆ ಏನು ಎನ್ನುವುದು ನನಗೆ ಗೊತ್ತು. ಅವನು ಯಾಕೆ ಹೀಗೆ ಮಾಡಿದ ಎಂದೂ ಗೊತ್ತು, ಅವನಿಗೆ ಹೋಮ ಮಾಡಬೇಕಾಗಿದೆ ಅದಕ್ಕೆ ಹೀಗೆ ಮಾಡಿದ. ನಿನಗೆ ಹೆದರಿ ಲಂಕೆಗೆ ಓಡಿದನಲ್ಲ! ನಿನ್ನನ್ನು ಎದುರಿಸಲು ಮಾಯಾವಿದ್ಯೆಗಳನ್ನು ಪಡೆಯಲು ಹಾಗೆ ಮಾಡಿದ. ಇದು ಅವನ ತಂತ್ರ. ಆ ರಾಕ್ಷಸನು ನಿಕುಂಭಿಲೆಗೆ ಹೋಗಿದ್ದಾನೆ. ರಾಮ, ಒಂದು ವೇಳೆ ಅವನು ಈ ಹೋಮ ಮುಗಿಸಿ ಬಂದ ಎಂದರೆ ಅವನನ್ನು ಎದುರಿಸುವುದು ಕಷ್ಟ. ಇದು ಮಾಯೆ ಮತ್ತು ಎಚ್ಚರವಾಗಿರಬೇಕು. ನಾವು ಈಗ ಏನು ಮಾಡಬೇಕು ಎಂದರೇ ಸೇನಾ ಸಮೇತರಾಗಿ ನಾವೆಲ್ಲ ಹೋಮ ಮಾಡುವಲ್ಲೇ ಹೋಗಬೇಕು ಮತ್ತು ಅವನಿಗೆ ಹೋಮ ಮುಗಿಸಲು ಬಿಡಬಾರದು, ಇದೇ ದಾರಿ. ಪ್ರಭು, ಸಂತಾಪವನ್ನು ಬಿಡು. ಸೀತೆಯ ವಧೆ ಆಗಲಿಲ್ಲ. ನೀನೊಬ್ಬ ಮಂಕಾದರೇ ವಾನರ ಸೈನ್ಯದ ಚೈತನ್ಯವೇ ಉಡುಗಿ ಹೋಗುತ್ತದೆ. ನಮ್ಮೆಲ್ಲರ ಪ್ರಾಣ ನೀನು. ನೀನು ಇಲ್ಲೇ ಇರು, ಲಕ್ಷ್ಮಣನನ್ನು ಕಳುಹಿಸಿ ಕೊಡು ಮತ್ತು ನಾನು ಯಾರ್ಯಾರು ಬೇಕೆಂದು ಸೇನೆಯನ್ನು ಆರಿಸ್ತೆನೆ. ಲಕ್ಷ್ಮಣನು ತನ್ನ ಬಾಣಗಳ ಮೂಲಕ ಆ ಹೋಮವನ್ನು ನಿಲ್ಲಿಸ್ತಾನೆ. ಲೋಕಕ್ಷೇಮಕ್ಕೆ ಇರುವ ಹೋಮ ಅಲ್ಲ, ಕ್ಷೋಭೆಯ ಹೋಮ ಇದು. ನಿನ್ನ ಚೈತನ್ಯವನ್ನು ಲಕ್ಷ್ಮಣ ಇಟ್ಟು ಕಳುಹಿಸಿ ಕೊಡು. ಒಂದು ವೇಳೆ ಹೋಮ ಮುಗಿದುಬಿಟ್ರೆ ತುಂಬಾ ಕಷ್ಟ. ಅವನನ್ನು ಹಿಡಿಯಲು ಸಾಧ್ಯವಿಲ್ಲ.” ಆದರೆ ರಾಮನಿಗೆ ಆದ ಆಘಾತದಲ್ಲಿ ವಿಭೀಷಣ ಏನು ಹೇಳಿದ ಎಂದು ಅರ್ಥ ಆಗಲೇ ಇಲ್ಲ, ಸ್ವಲ್ಪ ಸುಧಾರಿಸಿಕೊಂಡು ರಾಮ ವಿಭೀಷಣನನ್ನು ಕೇಳ್ತಾನೆ, “ರಾಕ್ಷಸೇಂದ್ರ ಏನು ಹೇಳಿದೆ? ಪುನಃ ಹೇಳು”.
ವಿಭೀಷಣ ಕಥೆಯನ್ನು ಹಿಂದಿನಿಂದ ಶುರುಮಾಡಿದ, “ನೀನು ನನಗೆ ಸೈನ್ಯದ ವ್ಯವಸ್ಥೆ ಮಾಡು ಎಂಬುದಾಗಿ ನನಗೆ ಆಜ್ಞೆ ಮಾಡಿದ್ದೆ, ಆ ಕೆಲಸ ಮುಗಿಸಿ ಬಂದಾಗ ಅಕಾರಣವಾಗಿ ನೀನು ಪರಿತಪಿಸುತ್ತಾ ಇದ್ದದ್ದನ್ನು ನೋಡಿದೆ. ನಿನ್ನ ಸಂತಾಪದಿಂದ ನಮಗೂ ಸಂತಾಪವಾಗಿದೆ. ಪ್ರಭುವೇ! ಇದು ನಿಜವಾದ ಸುದ್ದಿ ಅಲ್ಲ. ಇದರಿಂದ ಶತ್ರುಪಕ್ಷದ ಬಲ ಹೆಚ್ಚಾಗಬಹುದು ಹೊರತಾಗಿ ನಮ್ಮ ಸೈನ್ಯದ ಬಲ ಅಲ್ಲ. ಕರ್ತವ್ಯಕ್ಕೆ ಮಹತ್ವವನ್ನು ಕೊಡು. ಸೀತೆಯನ್ನು ನಾವು ಮರಳಿ ಪಡೆಯಬೇಕಲ್ಲ, ರಾವಣನನ್ನು ಕೊಲ್ಲಬೇಕಲ್ಲ! ಹೌದಾದರೆ ಏಳು. ಏನು ಮಾಡಬೇಕೆಂದು ನಾನು ಹೇಳ್ತನೆ. ತನ್ನ ಬಾಣಗಳಿಂದ ಹೋಮವನ್ನು ನಿಲ್ಲಿಸಬೇಕು. ಯಾಕೆಂದ್ರೆ ಇಂದ್ರಜಿತುವಿಗೆ ಬ್ರಹ್ಮನ ವರದಾನವಿದೆ. ಆ ಹೋಮ ಮುಗಿಯುತ್ತಿದ್ದಂತೆ, ಬ್ರಹ್ಮಾಸ್ತ್ರ, ಕುದುರೆಗಳು ಮತ್ತು ರಥ ಇವೆಲ್ಲವೂ ಪ್ರಾಪ್ತವಾಗುತ್ತದೆ ಅವನಿಗೆ. ಆಗ ಅವನನ್ನು ಯುದ್ಧದಲ್ಲಿ ಗೆಲ್ಲುವುದು ಕಷ್ಟ. ಒಂದು ವೇಳೆ ಹೋಮ ಪೂರ್ತಿ ಆದರೆ, ನಾವೆಲ್ಲ ಸತ್ತೆವು ಅಂತ್ಲೇ ಅರ್ಥ. ಅವನಿಗೆ ಬ್ರಹ್ಮನ ವರ ಯಾವ ರೀತಿ ಇದೆ ಅಂದ್ರೆ, ನಿಕುಂಬಿಲೆಗೆ ಹೋಗಿ ಹೋಮವನ್ನು ಮಾಡುವ ಮೊದಲು ಯಾರಾದರೂ ಇಂದ್ರಜಿತುವನ್ನು ಕೊಲ್ಲಲು ಸಮರ್ಥನಿರುವವನು, ಯುದ್ಧಕ್ಕೆ ಬಂದ್ರೆ, ಮಾತ್ರ ಇಂದ್ರಜಿತುವನ್ನು ಕೊಲ್ಲಬಲ್ಲ. ಹಾಗೆಯೇ ಬ್ರಹ್ಮನು ಅವನಿಗೆ ವರದೊಟ್ಟಿಗೆ ವಧವನ್ನೂ ಕೊಟ್ಟಿದ್ದಾನೆ. ಏನದು ಅಂದ್ರೆ ಇಂದ್ರಜಿತುವನ್ನು ಕೊಲ್ಲುವುದಾದರೆ ಹೋಮ ಮಾಡುವುದ್ದಕ್ಕಿಂತ ಮೊದಲು ಕೊಲ್ಲಬೇಕು. ರಾವಣನಿಗೆ ಕೊಟ್ಟ ವರ ಏನೆಂದರೆ, ಮನುಷ್ಯರು ಮತ್ತು ಮರ್ಕಟಗಳಿಂದ ಉಳಿದು ಬೇರೆ ಯಾರಿಂದಲೂ ಅವನಿಗೆ ಮರಣ ಬರಬಾರದು. ಅದರ ಅರ್ಥ ಅವನನ್ನು ಮನುಷ್ಯರು ಮತ್ತು ಮರ್ಕಟಗಳೇ ಕೊಲ್ಲಬೇಕು. ಹಾಗೆಯೇ ಇಂದ್ರಜಿತುವನ್ನು ಕೊಲ್ಲಲು ಲಕ್ಷ್ಮಣನನ್ನು ಕಳುಹಿಸಿಕೊಡು”. ಆಗ ರಾಮ ಹೇಳಿದ, “ನನಗೂ ಅವನು ರೌದ್ರ ಅಂತ ಗೊತ್ತು, ಮಹಾಮಾಯೆಯನ್ನು ಆಶ್ರಯಿಸಿದ್ದಾನೆ ಅಂತಲೂ ಗೊತ್ತು. ನಾವು ಋಜುಮಾರ್ಗಿಗಳು.” ಇಂದ್ರಜಿತುವಿನ ಮಾಯಾ ಬಲವನ್ನು ಅನುಸಂಧಾನ ಮಾಡಿ ರಾಮ ಲಕ್ಷ್ಮಣನಿಗೆ ಹೊರಡಲಿಕ್ಕೆ ಹೇಳಿದ. ವಾನರೇಂದ್ರ, ಸುಗ್ರೀವ,ಯೂಥಪತಿಗಳು, ಅಂಗದ ಮತ್ತು ಹನುಮಂತನನ್ನು ಕರೆದುಕೊಂಡು ಹೋಗಲಿಕ್ಕೆ ಹೇಳಿದ. ಉಪಾಯಗಳನ್ನು ಹೇಳಲಿಕ್ಕೆ ಜಾಂಬವಂತ ಇದ್ದರೆ, ಅದನ್ನು ಜಾರಿ ಗೊಳಿಸಲು ಹನುಮಂತ ಇದ್ದ. ಉಳಿದ ಸೇನೆಯನ್ನು ಕೂಡಿಕೊಂಡು ನಿಕುಂಭಿಲೆಗೆ ಲಕ್ಷ್ಮಣ ಹೋಗಲಿ ಎಂದು ರಾಮ ಆಜ್ಞೆ ಕೊಟ್ಟ. ಅವರೊಂದಿಗೆ ವಿಭೀಷಣ. ವಿಭೀಷಣನಿಗೆ ಆ ದಾರಿ ಮತ್ತು ಜಾಗ ಗೊತ್ತ್ರು. ಇಂದ್ರಜಿತು ಹೇಗೆ ಹೋಮ ಮಾಡ್ತಾನೆ, ಯಾರ್ಯಾರು ಇದ್ದಾರೆ ಅಲ್ಲಿ, ಎಂಬುದೆಲ್ಲ ವಿಭೀಷಣನಿಗೆ ಗೊತ್ತು. ತನ್ನ ಪರಾಕ್ರಮವನ್ನು ಜಾಗ್ರತೆ ಗೊಳಿಸಿಕೊಂಡು, ಧನಸ್ಸುಗಳನ್ನು, ಬಾಣಗಳನ್ನು ತೆಗೆದುಕೊಂಡು, ಲಕ್ಷ್ಮಣ ಎದ್ದ. ಎದ್ದು ರಾಮನ ಪಾದಗಳಿಗೆ ಸಂತೋಷದಿಂದ ಎರಗಿ, ಇಂದ್ರಜಿತುವಿನ ಮೃತ್ಯುಗೆ ನಾನೇ ಕಾರಣ ಎಂದು ರಾಮನಿಗೆ ಭರವಸೆಯನ್ನು ಕೊಟ್ಟು, ರಾಮನಿಗೆ ಪ್ರದಕ್ಷಿಣೆಯನ್ನು ಹಾಕಿ, ತ್ವರಿತವಾಗಿ ನಿಕುಂಬಿಲೆಗೆ ಹೊರಟ. ಲಂಕೆಯಲ್ಲಿ ರಾವಣ ಆಡಳಿತವಾದರೆ, ನಿಕುಂಬಿಲೆಗೆ ಇಂದ್ರಜಿತುವಿನದ್ದೇ ಆಡಳಿತ. ಹನುಮಂತ, ಸುಗ್ರೀವ, ಜಾಂಬವಂತ ಮತ್ತು ವಿಭೀಷಣ ಮತ್ತು ಅವರ ಸೈನ್ಯ ಒಡಗೂಡಿ ಲಕ್ಷ್ಮಣನ ಹಿಂದೆ ಹೊರಟರು.
ಸುಮಾರು ದೂರ ಹೋದಮೇಲೆ, ನಿಕುಂಬಿಲೆಯಲ್ಲಿ ನಡೆಯುವ ಹೋಮಯನ್ನು ಕಾಯುವ ರಾಕ್ಷಸ ಸೈನ್ಯ ಕಂಡರು. ಇಂದ್ರಜಿತುವಿನ ಮಾಯಾ ಯೋಗಕ್ಕೆ ನನ್ನ ಬ್ರಹ್ಮವಿಧಾನ ಉತ್ತರ. ಇಂದ್ರಜಿತು ಮಾಯಾವಿಧಾನದಿಂದ ಗೆಲ್ಲಲು ಪ್ರಯತ್ನ ಮಾಡ್ತಾನೆ, ಲಕ್ಷ್ಮಣ ಸೀದಾ ಮಾರ್ಗ, ಬ್ರಹ್ಮವಿಧಾನದಿಂದ. ಲಕ್ಷ್ಮಣ ಸದಾಚಾರದಿಂದ ಗೆಲ್ಲಲು ಪ್ರಯತ್ನ ಮಾಡಿದರೇ, ಇಂದ್ರಜಿತು ವಾಮಾಚಾರದಿಂದ. ವಿಭೀಷಣ ಲಕ್ಷ್ಮಣನಿಗೆ ಹೇಳಿದ, “ಈ ಸೇನೆಯನ್ನು ಭೇದಿಸು. ಎದ್ದು ಬರುವ ಇಂದ್ರಜಿತುವನ್ನು ಸಂಹಾರ ಮಾಡು. ಇದು ನನಗೆ ನಿನಗೆ ಅಂತ ಅಲ್ಲ, ಇಡೀ ಪ್ರಪಂಚಕ್ಕೆ ಕೇಡಿ ಅವನು”. ಬಾಣಗಳ ಮಳೆಗರೆದ ಸೈನ್ಯದ ಮೇಲೆ. ಕಪಿ ಕರಡಿಗಳು ಬೆಟ್ಟದ ತಲೆಯಿಂದ ಶುರುಮಾಡಿ, ಉಗುರಿನವರೆಗೂ ಅವರ ಆಯುಧ. ರಾಕ್ಷಸ ಸೇನೆಯ ಮೇಲೆ ಮುಗಿಬಿದ್ದಿತು ವಾನರ ಸೇನೆ. ಭಯಂಕರ ಯುದ್ಧ ನಡೆಯಿತು. ರಾಕ್ಷಸರಲ್ಲೂ ಭಯ ಆವರಿಸಿತು. ಇಂದ್ರಜಿತು ಹೋಮ ಮಾಡ್ತಾ ಇದ್ದಾನೆ ಆದರೆ ಸಮಾಧಾನ ಇಲ್ಲ. ಕಣ ಕಣ ಶಬ್ದ ಕೇಳ್ತಾ ಇದೆ ಪಕ್ಕದಲ್ಲಿ. ಹೋಮ ಮಾಡುವಾಗ ಬಹಳ ಏಕಾಗ್ರತೆ ಬೇಕಾಗುತ್ತದೆ ಮತ್ತು ಹೇಗೆ ಮಾಡಬೇಕೋ ಹಾಗೇ ಮಾಡಬೇಕು. ಆದರೆ ಇವನಿಗೆ ನೆಮ್ಮದಿಯೇ ಇಲ್ಲ ಹೋಮ ಮಾಡುವಾಗ. ರಾಕ್ಷಸರಿಗೆ ಆಗಿದ್ದೇನು? ಅವರು ಲೋಕಕ್ಕೆ ಮಾಡಿದ್ದೇ ಅವರಿಗೆ ಆಗಿದ್ದು. ಕೊಟ್ಟದ್ದೇ ತಿರುಗಿ ಬಂದದ್ದು. ಹೋಮ ಮಾಡ್ತಾ ಇರುವಾಗ ಆಚೆ ಈಚೆ ಕುಳಿತ ರಾಕ್ಷಸರ ಮುಖ ನೋಡಿದ್ರೆ, ಕಂಗಾಲಾದವರ ಹಾಗೇ ಕಾಣ್ತಾರೆ. ಭಯಂಕರ ಯುದ್ಧ ನಡೀತಾ ಇದ್ದೆ. ಅವನ ಉಪನಾಯಕರು ಬಂದು ಇಂದ್ರಜಿತುವಿನ ಕಿವಿಯಲ್ಲಿ ಹೇಳಿದರು, ಸೈನ್ಯ ಧ್ವಂಸವಾಗ್ತಾ ಇದೆ. ನೀನು ಏಳದೇ ಇದ್ರೆ, ಇನ್ನು ಏನೂ ಉಳಿಯುವುದಿಲ್ಲ ಇನ್ನು ಸ್ವಲ್ಪ ಹೊತ್ತಿಗೆ. ತನ್ನ ಸೇನೆಯು ವಿಷಣ್ಣವಾಗಿದೆ ಎಂದು ತಿಳಿದ ಇಂದ್ರಜಿತು, ಬೇರೆ ದಾರಿ ಇಲ್ಲದೆ, ಹೋಮ ಪೂರ್ತಿ ಆಗುವ ಮೊದಲೇ ಎದ್ದನು. ಹೊರಗೆ ಬಂದು ರಥವನ್ನು ಏರಿದ. ತನ್ನ ಧನಸ್ಸನ್ನು ಕೈಗೆತ್ತಿಕೊಂಡ, ಕೆಂಪು ಕಣ್ಣು. ಅವನನ್ನು ನೋಡಿದ್ದೇ ರಾಕ್ಷಸರು ಅವನನ್ನು ಸುತ್ತುವರಿದರು. ಎಲ್ಲರಿಗೂ ಶಕ್ತಿ ಬಂದಂತಾಗಿ ಪುನಃ ಯುದ್ಧಕ್ಕೆ ಸನ್ನದ್ಧರಾದರು. ಹನುಮಂತ, ಪ್ರಲಯ ಕಾಲದ ಅಗ್ನಿಯಂತೆ, ದೊಡ್ದ ದೊಡ್ದ ಮರಗಳನ್ನು ಹಿಡಿದು ರಾಕ್ಷಸರನ್ನು ಧ್ವಂಸ ಮಾಡ್ತಾ ಇದ್ದಾನೆ. ಒಂದೊಂದು ಮರಕ್ಕೂ ಲಕ್ಷಗಟ್ಟಲೆ ರಾಕ್ಷಸರನ್ನು ಸದೆಬಡೆಯುತ್ತಿದ್ದಾನೆ. ರಾಕ್ಷಸರು ಕೂಡ ತಮ್ಮ ಬಾಣಗಳು, ಭರ್ಚಿ, ಭಲ್ಲೆಗಳು, ಪಟ್ಟಸಗಳು, ಗದೆಗಳು, ಶತಗ್ನಿಗಳು, ಮುದ್ರಗಳು, ಮುಷ್ಠಿಗಳು ಇವುಗಳಿಂದ ಹನುಮಂತನ ಮೇಲೆ ಪ್ರಯೋಗ ಮಾಡ್ತಾ ಇದ್ದಾರೆ. ಅವನಿಗೆ ಏನೂ ಆಗ್ತಾ ಇಲ್ಲೆ. ಅವನು ವಜ್ರಕಾಯ. ಇದೆಲ್ಲ ದೂರದಿಂದ ಇಂದ್ರಜಿತು ನೋಡ್ತಾನೆ. ದೊಡ್ಡ ಪರ್ವತದ ಹಾಗೆ ಕಾಣ್ತಾ ಇದ್ದಾನೆ ಹನುಮಂತ. ಅವನು ಏಕಪ್ರಕಾರವಾಗಿ ಒಂದೇ ಸಮನೆ ರಾಕ್ಷಸರನ್ನು ಧ್ವಂಸ ಮಾಡ್ತಾ ಇದ್ದಾನೆ. ಇಂದ್ರಜಿತು ತನ್ನ ಸಾರಥಿಗೆ ಹನುಮಂತ ಇರುವ ಕಡೆ ಹೋಗಲಿಕ್ಕೆ ಹೇಳ್ತಾನೆ. ಹನುಮಂತ ಮತ್ತು ಇಂದ್ರಜಿತು ಎದುರು ಬದುರು.
ನಾನಾಪ್ರಕಾರದ ಶಸ್ತ್ರಾಭಿಷೇಕವನ್ನು ಹನುಮಂತನ ಮೇಲೆ ಮಾಡಿದ ಇಂದ್ರಜಿತು. ಅದನ್ನೆಲ್ಲ ಸ್ವೀಕಾರ ಮಾಡಿದ ಹನುಮಂತ. ನೀನು ರಾವಣನ ಮಗನೇ ಹೌದಾದರೇ ಬಾ ನನ್ನೊಡನೆ ಯುದ್ಧಕ್ಕೆ ಬಾ. ನಿನ್ನನ್ನು ಜೀವಂತವಾಗಿ ಹೋಗಲಿಕ್ಕೆ ಬಿಡೋದಿಲ್ಲ. ಅಷ್ಟೇಲ್ಲ ನಿನ್ನಲ್ಲಿ ತಾಕತ್ತಿದ್ದರೆ, ಧನಸ್ಸನ್ನು ಕೆಳಗೆ ಇಟ್ಟು, ಬಾಹು ಯುದ್ಧಕ್ಕೆ ಬಾ ಎಂದು ಹನುಮಂತ ಆಹ್ವಾನ ಮಾಡುತ್ತಾ ಇದ್ದಾನೆ. ನನ್ನ ಮುಷ್ಟಿಯ ತೀವ್ರತೆ ಏನು ಎಂದು ಗೊತ್ತಾಗುತ್ತದೆ. ಅದರ ರುಚಿ ಏನು ಎಂದು ನಿನ್ನಪ್ಪನಿಗೆ ಗೊತ್ತು ಎಂದು ಇಂದ್ರಜಿತುವಿಗೇ ಆಹ್ವಾನ ಮಾಡ್ತಾ ಇದ್ದಾನೆ. ಹನುಮಂತ ಯುದ್ಧಕ್ಕೆ ಸನ್ನದ್ಧನಾಗ್ತಾ ಇದ್ದಾನೆ, ವಿಭೀಷಣ ಲಕ್ಷ್ಮಣನಿಗೆ ಹೇಳಿದ, “ಆ ಇಂದ್ರಜಿತು ಹನುಮಂತನನ್ನು ಕೊಲ್ಲುವ ಸಂಕಲ್ಪದಲ್ಲಿ ಹೋಗಿದ್ದಾನೆ. ಬಿಡಬೇಡ ಅವನನ್ನು.” ಎಂದು ವಿಭೀಷಣ ಲಕ್ಷ್ಮಣನನ್ನು ಇಂದ್ರಜಿತು ಇರುವೆಡೆಗೆ ಕರೆದುಕೊಂಡು ಹೋದ. ಇದು ರಾಮನಿಗೆ ವಿಭೀಷಣ ಮಾಡಿದ ಬಹು ದೊಡ್ಡ ಸೇವೆ. ಇಂದ್ರಜಿತುವಿನ ಸಂಹಾರದಲ್ಲಿ ವಿಭೀಷಣನ ಪಾತ್ರ ಬಹು ದೊಡ್ಡದು. ಲಕ್ಷ್ಮಣನಿಗೆ ಕಾಡನ್ನು ತೋರಿಸಿ ಹೇಳಿದ, “ಇದೇ ನಿಕುಂಬಿಲೆ. ಅಲ್ಲಿ ಮಧ್ಯ ಇರುವುದೇ ಭದ್ರಕಾಳಿ ದೇವಸ್ಥಾನ. ಅಲ್ಲೊಂದು ಆಲದ ಮರ ಇದೆ. ಅದರ ಕೆಳಗೆ ಕುಳಿತುಕೊಂಡು ಹೋಮ ಮಾಡ್ತಾನೆ. ಇಂದ್ರಜಿತು ಇಲ್ಲಿ ಭೂತಗಳಿಗೆ ಬಲಿಯನ್ನು ಕೊಟ್ಟು ಯುದ್ಧಕ್ಕೆ ಬರ್ತಾನೆ ಅದೃಶ್ಯನಾಗಿ. ಅವನನ್ನು ಆ ಆಲದ ಮರದ ಕಡೆಗೆ ಹೋಗಲು ಬಿಡಬೇಡ, ಯಾವುದೇ ಕಾರಣಕ್ಕೂ ಎಂದು ಲಕ್ಷ್ಮಣನಿಗೆ ವಿಭೀಷಣ ಹೇಳಿದ. ಆ ಆಲದ ಮರದ ಪರಿಸರಕ್ಕೆ ಹೋಗಿ ಲಕ್ಷ್ಮಣನು ಧನುಷ್ಠೇಂಕಾರ ಮಾಡಿ ಯುದ್ಧಾಹ್ವಾನ ಮಾಡಿದ. ಠೇಂಕಾರ ಮಾಡಿದ ಕ್ಷಣ ಮಾತ್ರದಲ್ಲಿ ಇಂದ್ರಜಿತುವಿನ ರಥ, ಹನುಮಂತನನ್ನು ಬಿಟ್ಟು, ಲಕ್ಷ್ಮಣನ ಎದುರು ನಿಂತಿತು. ಇಂದ್ರಜಿತುವಿನ ರಥ ಬರುತ್ತಿದ್ದಂತೆಯೇ, ಲಕ್ಷ್ಮಣ ವಿಧಿಪೂರ್ವಕ ಆಮಂತ್ರಣ ಕೊಟ್ಟ, “ಇಂದ್ರಜಿತು, ಬಾ ಯುದ್ಧಕ್ಕೆ ನಾನು ನಿನ್ನನ್ನು ಆಹ್ವಾನಿಸುತ್ತಿದ್ದೇನೆ. ಏಕಪಕ್ಷೀಯ ಯುದ್ಧ ಆಗಬಾರದು, ನಿನ್ನ ಪೂರ್ತಿ ಶಕ್ತಿಯನ್ನು ತೊರಿಸು.” ಇಂದ್ರಜಿತುವಿಗೆ ಈ ಯುದ್ಧದ ಭವಿಷ್ಯ ಏನಾಗಬಹುದು ಎಂದು ಖಚಿತ ಇಲ್ಲ. ಏನು ಬೇಕಾದರೂ ಆಗಬಹುದು. ಅವನಿಗೆ ವಿಭೀಷಣನ ಮೇಲೆ ಸಿಟ್ಟು ಬಂತಂತೆ. ವಿಭೀಷಣನನ್ನು ಕಂಡದ್ದೇ ಇಂದ್ರಜಿತು ಕಿಡಿ ನುಡಿಗಳನ್ನು ಆಡ್ತಾನೆ,”ಇಲ್ಲೇ ಹುಟ್ಟಿ ಬೆಳೆದು, ಲಂಕೆಯ ಅನ್ನ ತಿಂದು, ನನ್ನ ತಂದೆಯ ನೇರ ಸಹೋದರನಾಗಿ ನನಗೆ ದ್ರೋಹ ಮಾಡ್ತಾ ಇದ್ದೀಯಾ? ನೀನು ನನ್ನ ಚಿಕ್ಕಪ್ಪ.” ಆ ದಿವಸ ಚಿಕ್ಕಪ್ಪ ಎನ್ನುವ ಭಾವನೆ ಇಲ್ಲದೇ ಅವಮಾನ ಮಾಡಿದ್ದ ಆದ್ರೆ ಇಂದು ಅವನಿಗೆ ಸಂಬಂಧ ನೆನಪಾಯಿತು. ಮುಂದುವರಿಸುತ್ತಾ ಹೇಳ್ತಾನೆ, “ನಾನು ನಿನ್ನ ಮಗ ಅಲ್ವಾ? ನನ್ನ ಬಗ್ಗೆ ಪ್ರೀತಿ ಇಲ್ವಾ? ನಾವು ಒಂದೇ ವಂಶ, ಕುಲದವರು. ನಿನಗೆ ಜಾತಿ ಅಭಿಮಾನ ಬೇಡವೇ? ಇದೆಲ್ಲ ಹೋಗಲಿ ನಿನಗೆ ಧರ್ಮವೇ ಇಲ್ಲವಲ್ಲ. ನಿನ್ನಿಂದ ಧರ್ಮಕ್ಕೆ ಕಲಂಕ ಆಗ್ತಾ ಇದೆ. ಚಿಕ್ಕಪ್ಪ! ಇದು ನಿನಗೇ ತೊಂದರೆ. ನನಗೆ ನಿನ್ನ ಬಗ್ಗೆ ಅನುಕಂಪ ಆಗ್ತಾ ಇದೆ. ನಿನ್ನ ಬುದ್ಧಿ ಕೆಟ್ಟು ಹೋಗಿದೆ. ನಾಳೆ ಸತ್ಪುರುಷರು ನಿನ್ನ ಬಗ್ಗೆ ಏನು ಹೇಳಿಯಾರು? ನೀನು ಅಣ್ಣನಿಗೆ ದ್ರೋಹ ಮಾಡಿದವನು ಎಂದು ಹೇಳೋದಿಲ್ವಾ? ಅದೂ ಅಲ್ಲದೇ ಸ್ವಜನರನ್ನು ಬಿಟ್ಟು ಪರಜನರ ಊಳಿಗವನ್ನು ಮಾಡ್ತಾ ಇದ್ದೀಯಾ. ಚಿಕ್ಕಪ್ಪ! ಶತ್ರುಗಳು ಒಳ್ಳೆಯವರಾಗಿದ್ದರೂ, ಗುಣವಂತರಾಗಿದ್ದರೂ, ಶ್ರೇಷ್ಥರಾಗಿದ್ದರೂ ಬೇಡ ಅವರ ಸಹವಾಸ. ನಮ್ಮವರು ಕೆಟ್ಟವರಾಗಿದ್ದರೂ ಅವರೇ ವಾಸಿ.” ಇದೆಲ್ಲ ಹೇಳಿ ಒಂದು ರೀತಿಯಲ್ಲಿ ಇಂದ್ರಜಿತು ಶತ್ರುಗಳು ಒಳ್ಳೆಯವರು ಎಂದು ಒಪ್ಪಿಕೊಳ್ಳುತ್ತಿದ್ದಾನೆ. ಸಂಶಯ ಹುಟ್ಟು ಹಾಕಲು ಪ್ರಯತ್ನ ಮಾಡ್ತಾನೆ ಮತ್ತು ಎಲ್ಲ. ಇನ್ನೂ ಹೇಳ್ತಾನೆ, “ಶತ್ರು ಎಂದಿದ್ದರೂ ಶತ್ರುವೇ. ನಮ್ಮವರು ಯಾವಾಗಲೂ ನಮ್ಮವರೇ. ನಮ್ಮವರೆಲ್ಲರನ್ನೂ ಕೊಂದಾದ ಮೇಲೆ ನಿನ್ನನ್ನು ಕೊಲ್ಲುವುದಿಲ್ಲ ಎಂದು ಯಾವ ಭರವಸೆ? ರಾಮನೇ ನಿನ್ನನ್ನು ನಾಶ ಮಾಡಬಹುದು. ನಮ್ಮವನಾಗಿ ಹೀಗೆ ಮಾಡುವುದಾ?” ರಾವಣಗಿಂತ ಅಪಾಯಕಾರಿ ಇಂದ್ರಜಿತು. ಶತರಾವಣ ಅವನು. ರಾವಣನಿಗಿಂತಲೂ ಕೆಟ್ಟವನು.
ಅದಕ್ಕೆ ವಿಭೀಷಣ ಹೇಳಿದ, “ಇಂದ್ರಜಿತು, ನೀನು ನನ್ನನ್ನು ಇವತ್ತು ನೋಡುವುದಾ? ನನ್ನ ಸ್ವಭಾವ ಏನು? ನನ್ನ ಶೀಲ ಏನು? ಗೊತ್ತಿಲ್ಲವಾ ನಿನಗೆ? ಚಿಕ್ಕಪ್ಪ ಎಂದು ಕರೆದರೆ ಆಗಲಿಲ್ಲ, ಚಿಕ್ಕಪ್ಪನಿಗೆ ಕೊಡುವ ಗೌರವ ಕೊಟ್ಟಿದ್ದೆಯಾ ನೀನು ಇದಕ್ಕಿಂತ ಮೊದಲು? ಹೌದು ನಾನು ರಾಕ್ಷಸನ ಕುಲದಲ್ಲೇ ಹುಟ್ಟಿದ್ದೇನೆ. ಅಧರ್ಮ ನಿರತರು, ಕ್ರೂರ ಕರ್ಮಿಗಳು, ಅನ್ಯಾಯಗಾರರು ಅಂತಹ ರಾಕ್ಷಸ ಕುಲದಲ್ಲಿ ಹುಟ್ಟಿದ್ದೇನೆ. ಆದರೆ ನನ್ನ ಶೀಲ, ನನ್ನಗುಣ, ರಾಕ್ಷಸ ಶೀಲ ಅಲ್ಲ. ನನ್ನ ಜಾತಿ ರಾಕ್ಷಸ ಜಾತಿ, ಕುಲ – ರಾಕ್ಷಸ ಕುಲ ಆದರೆ ನನ್ನ ಶೀಲವಾಗಲಿ ಸ್ವಭಾವವಾಗಲಿ ರಾಕ್ಷಸ ಕುಲದ್ದಲ್ಲ. ಹಾಗಾಗಿ ನನ್ನನ್ನು ಪಕ್ಕದಲ್ಲಿ ಇಟ್ಟಿದ್ರಿ ಯಾವಾಗಲೂ. ನೀವು ಕೌರ್ಯದಿಂದ ಸಂತೊಷಪಡತಕ್ಕಂತವರು. ಯಾರನ್ನು ಕೊಂದು ಸಂತೋಷ ಪಡ್ತೀರಿ, ಯಾರನ್ನಾದರೂ ದೋಚಿ ಸಂತೋಷ ಪಡ್ತಾ ಇದ್ದೀರಿ, ಇನ್ನೊಬ್ಬರ ಹಿಂಸೆಯಲ್ಲಿ ಆನಂದ ಪಡ್ತೀರಿ. ನಿಮ್ಮ ಸಂತೋಷಕ್ಕೆ ಅಧರ್ಮವನ್ನೂ ಅಶ್ರಯಿಸುತ್ತೀರಿ. ಕೆಟ್ಟದ್ದು ಮಾಡಿ ಸಂತೋಷ ಪಡ್ತೀರಿ. ನನ್ನ ಸ್ವಭಾವ ಅದಲ್ಲ. ಪಾಪದಿಂದ ರಮಿಸುವವನು ನಾನಲ್ಲ. ಲಂಕೆಯನ್ನು ಬಿಟ್ಟು ಬಂದೆ, ನಿಮಗೆ ದ್ರೋಹ ಮಾಡಿದೆ ಎಂದು ನೀನು ಹೇಳಿದೆ. ನಾನೇನು ಬಿಟ್ಟು ಬಂದಿದ್ದೇನಾ? ನನ್ನನ್ನು ದೂಡಿದ್ದು ಲಂಕೆಯಿಂದ. ತಮ್ಮ ಕೆಟ್ಟವನಾದರೂ ಕೂಡ, ಮನೆಯಿಂದ ಹೊರಗೆ ಹಾಕುವುದಿಲ್ಲ. ನನ್ನನ್ನು ಯಾಕೆ ಹೊರಗೆ ಹಾಕಿದ? ನನ್ನನ್ನು ತುಂಬಿದ ಸಭೆಯಲ್ಲಿ ಯಾಕೆ ಅಪಮಾನ ಮಾಡಿದ ನಿನ್ನ ಅಪ್ಪ. ನೀನು ಏನು ಹೇಳ್ತಾ ಇದ್ದೀಯೋ ಅದು ನಿನ್ನ ಅಪ್ಪನಿಗೆ ಅನ್ವಯವಾಗುವಂತಹದ್ದು, ನನಗಲ್ಲ. ರಾವಣನನ್ನು ನಾನು ತ್ಯಾಗ ಮಾಡಬೇಕು. ಬೇರೆ ದಾರಿ ಇಲ್ಲ. ಯಾಕೆಂದ್ರೆ ಅವನು ಧರ್ಮವನ್ನು ಬಿಟ್ಟಿದ್ದಾನೆ! ಸ್ವಭಾವದಿಂದ ಧರ್ಮವನ್ನು ಬಿಟ್ಟವನು. ಕೆಟ್ಟದ್ದನ್ನು ಮಾಡಲು ಹೊರಟವನನ್ನು, ಅಣ್ಣನಾಗಲೀ, ತಮ್ಮನಾಗಲೀ ಬಿಟ್ಟು ಬಿಡಲೇ ಬೇಕು. ಮೈಮೇಲೆ ಬಿದ್ದ ಸರ್ಪವನ್ನು ಕೊಡವಿ ದೂರ ಎಸೆಯುವಂತೆ, ಇಂತಹ ಪಾಪಿಯನ್ನು ಬಿಟ್ಟು ದೂರ ಇರುವುದೇ ಒಳ್ಳೆಯದು. ಹಿಂಸೆ ಒಳ್ಳೆಯದಾ? ಅಲ್ಲ, ಇನ್ನೊಬ್ಬರ ಸ್ವತ್ತನ್ನು ಅಪಹರಿಸುವಂತಹದ್ದು? – ಶುಭವಲ್ಲ, ಪರಸ್ತ್ರೀಗೆ ತೊಂದರೆ ಮಾಡುವುದು ಇದು ಪುಣ್ಯವೋ ಪಾಪವೋ? ನಮ್ಮಣ್ಣ ಮಾಡುವುದೇ ಅದನ್ನು. ಇಂತವರನ್ನು ದೂರ ಇಡುವುದೇ ಒಳ್ಳೆಯದು. ಬೆಂಕಿ ಹತ್ತಿದ ಮನೆಯನ್ನು ಬಿಡಬೇಕೋ ಅಥವಾ ಅಲ್ಲಿಯೇ ಉಳಿಯಬೇಕೊ. ನಿಮ್ಮ ಅಪ್ಪ ಬೆಂಕಿ ಹತ್ತಿದ ಮನೆ. ಭ್ರಮೆ, ಮಹರ್ಷಿಗಳ ವಧೆ, ಎಲ್ಲ ದೇವತೆಗಳ ಜೊತೆಗೆ ಕಲಹ, ಕೋಪ, ದುರಭಿಮಾನ, ಅನಗತ್ಯವಾಗಿ ವೈರಿತ್ವ, ಅನುಕೂಲವಾಗಿರುವವರೊಟ್ಟಿಗೆ ಪ್ರತಿಕೂಲ. ಈ ದೋಷಗಳು, ಇರುವ ೪-೬ ಒಳ್ಳೆ ಗುಣಗಳನ್ನು ಮುಚ್ಚಿದವು. ಈ ದೋಷಗಳ ಕಾರಣದಿಂದ ಐಶ್ವರ್ಯ ನಾಶವಾದವು, ಅಧಿಕಾರ ನಾಶವಾದವು, ನಮ್ಮೆಲ್ಲರ ಜೀವಿತವೇ ನಾಶವಾದವು. ಈ ದೊಷಗಳಿಂದ ನಮ್ಮಣ್ಣ ನಾಶವನ್ನು ಹೊಂದುತ್ತಾನೆ. ಈ ಗುಣಗಳ ಕಾರಣದಿಂದ ನಾನು ಬಿಟ್ಟು ಬರಲೇ ಬೇಕಾಯ್ತು.
ಭವಿಷ್ಯ ಹೇಳ್ತೇನೆ. ಲಂಕೆ, ಲಂಕೆಯಾಗಿ ಉಳಿಯುವುದಿಲ್ಲ. ನೀನು ಉಳಿಯುವುದಿಲ್ಲ, ನಿನ್ನ ಅಪ್ಪನೂ ಇರುವುದಿಲ್ಲ. ದುರಹಂಕಾರಿ ನೀನು, ತಿಳುವಳಿಕೆ ಬೆಳೆದಿಲ್ಲ, ಸರಿಯಾಗಿ ಶಿಕ್ಷಣ ಸಿಕ್ಕಿಲ್ಲ. ಈಗ ಕಾಲ ಪಾಶ ನಿನ್ನ ಕುತ್ತಿಗೆಯನ್ನು ಸುತ್ತಿದೆ. ಅದು ಏನು ಹೇಳ್ತಿಯೂ ಹೇಳೂ. ನಿನಗೆ ಬರುವ ಶಬ್ದವನ್ನೆಲ್ಲ ಹಾಕಿ ನನ್ನನ್ನು ಬೈದೆ. ಆದರೆ ಮತ್ತೆ ನೀನು ಆಲದ ಮರದ ಬುಡಕ್ಕೆ ಹೋಗಲು ಅವಕಾಶ ಇಲ್ಲ. ರಾಮ ಲಕ್ಷ್ಮಣರಿಗೆ ಎಷ್ಟು ಅನ್ಯಾಯ ಮಾಡಿದೆ ನೀನು, ನಿನ್ನ ಅಪ್ಪನೂ ಅನ್ಯಾಯ ಮಾಡಿದ. ಮಾಡಿದ ಪಾಪಕ್ಕೆ ಫಲ ಬರ್ತದೆ. ಬಾ ಲಕ್ಷ್ಮಣನ ಜೊತೆಗೆ ಯುದ್ಧ ಮಾಡು. ಸತ್ತ ಮೇಲೆ ಪುರುಸೊತ್ತಿನಲ್ಲಿ ಎಷ್ಟು ಬೇಕಾದರೂ ಹೋಮ ಮಾಡು. ನಿನ್ನ ಪ್ರಕಾರ ಈ ಹೋಮ ದೇವತಾ ಕಾರ್ಯ. ಅದನ್ನು ಅಲ್ಲಿ ಹೋಗಿ ಮಾಡು. ಲಕ್ಷ್ಮಣನ ಕೈಯಲ್ಲಿ ಬದುಕಲಾರೆ.” ಎಂದು ತಿರುಗಿ ಗದರಿದ ವಿಭೀಷಣ. ವಿಭೀಷಣ ಕರ್ತವ್ಯ ನಿಷ್ಠ ಮತ್ತು ನಿಷ್ಠುರವಾದಿ. ಅವನ ಬಗ್ಗೆ ಬೇರೆಯೇ ಕಲ್ಪನೆ ಇದೆ. ಇಂದ್ರಜಿತುವಿಗೆ ಏನು ಹೇಳಬೇಕೊ ಗೊತ್ತಾಗಲಿಲ್ಲ. ಅಂತೂ ಯುದ್ಧಕ್ಕೆ ಮುಂದಾದ ಇಂದ್ರಜಿತು. ಯುದ್ಧಕ್ಕೆ ಮೊದಲು ವಾಕ್ ಸಮರ ಇಂದ್ರಜಿತು ಮತ್ತು ಲಕ್ಷ್ಮಣನ ಮಧ್ಯೆ ನಡೆಯಿತು. ನಿಜವಾಗಿ ಲಕ್ಷ್ಮಣ ಇಂದ್ರಜಿತುವನ್ನು ಯುದ್ಧಕ್ಕೆ ಕರೆದದ್ದು, ಆದರೆ ಇಂದ್ರಜಿತು ಲಕ್ಷ್ಮಣನನ್ನು ಬಿಟ್ಟು ವಿಭೀಷಣನ ಜೊತೆ ಮಾತನಾಡುತ್ತಿದ್ದಾನೆ. ಸಿಟ್ಟನ್ನು ಎಷ್ಟು ದಿನದಿಂದ ಮನಸ್ಸಿನಲ್ಲಿ ಇಟ್ಟುಕೊಂಡಿದ್ದನೋ, ಬಾಯಿಗೆ ಬಂದದ್ದನ್ನು ಅಂದು, ಅನಿವಾರ್ಯವಾಗಿ, ಅಂತೂ ವಿಭೀಷಣನನ್ನು ಬಿಟ್ಟು ಲಕ್ಷ್ಮಣನ ಕಡೆಗೆ ತಿರುಗಿದ. ಆಗ ಲಕ್ಷ್ಮಣ ಉದಯಪರ್ವತದ ಮೇಲೆರಿದ ರವಿಯಂತೆ, ಹನುಮಂತನ ಮೇಲೆರಿ ಕುಳಿತಿದ್ದ. ರಥದ ಮೇಲೆ ಇಂದ್ರಜಿತು, ಹನುಮಂತನ ಮೇಲೆ ಲಕ್ಷ್ಮಣ. ಹೀಗೆ ಅವರಿಬ್ಬರೂ ಪರಸ್ಪರ ಮುಖಾಮುಖಿಗಳಾದರು.
ಮುಂದೇನಾಯಿತು ಅದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply