ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಾಮಾನ್ಯವಾಗಿ ಒಬ್ಬರಿಗೆ ಒಂದು ಹೆಸರಿಡುವ ಕ್ರಮ, ಕೆಲವೊಮ್ಮೆ ಒಬ್ಬರಿಗೆ ಎರಡು ಹೆಸರಿಡೊದುಂಟು. ಉದಾ: ಶಿವರಾಮ. ಶಿವ ಒಂದು ದೇವನ ಹೆಸರು, ರಾಮ ಇನ್ನೊಂದು ದೇವನ ಹೆಸರು. ಇದ್ಯಾಕೆ ಒಬ್ಬರಿಗೆ ಎರಡೂ ದೇವರ ಹೆಸರನ್ನು ಇಡ್ತಾರೆ ಯಾಕೆಂದ್ರೆ ಇದು ಎರಡೂ ಒಂದೇ. ಆ ಎರಡು ಹೆಸರು ಪರಸ್ಪರ ಸಮಾನ್ವಿತ. ಹಾಗಾಗಿ ಈ ಹೆಸರನ್ನು ಇಡುವ ರೂಢಿ ಇದೆ. ಶಿವನಿಗೂ ರಾಮನಿಗೂ ಅಬೇಧ್ಯವಾದಂತಹ ಬಾಂಧವ್ಯ. ಗಿರಿಜೆಗೆ ಶಿವ ಉಪದೇಶ ಮಾಡಿದ್ದು ರಾಮತಾರಕವನ್ನು. ತನ್ನ ಉಪದೇಶ ಅಥವಾ, ಪಂಚಾಕ್ಷರೀ ಉಪದೇಶ ಮಾಡಲಿಲ್ಲ. ಕಾಶಿಯಲ್ಲಿ ಮರಣ ಹೊಂದಿದವರಿಗೆ ಮುಕ್ತಿ ಯಾಕೆ ಎಂದ್ರೆ ಮರಣ ಕ್ಷಣದಲ್ಲಿ ಅವರ ಬಲ ಕಿವಿಯಲ್ಲಿ ಶಿವನ ರಾಮತಾರಕವನ್ನು ಉಪದೇಶ ಮಾಡ್ತಾರೆ. ಹಾಗಾಗಿ ಶವಯಾತ್ರೆಯಲ್ಲಿ “ರಾಮ ನಾಮ ಸತ್ಯ ಹೈ, ರಾಮ ನಾಮ ಸತ್ಯ ಹೈ” ಎಂಬುದಾಗಿ ಹೇಳ್ತಾ ಮಾಡ್ತಾರೆ. ಇದು ಶಿವನ ಕಡೆಯಿಂದ ಆದ್ರೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಮೊದಲು ರಾಮನು ಶಿವನ ಉಪಾಸನೆಯನ್ನು ಮಾಡಿದ, ರಾಮೇಶ್ವರವನ್ನು ಸ್ಥಾಪನೆ ಮಾಡಿದ ಎಂಬುದಾಗಿ ಕೇಳಿದ್ದೇವೆ. ಮಾತ್ರವಲ್ಲ, ರಾವಣ ಸಂಹಾರದ ಬಳಿಕ, ಯುದ್ಧ ಮುಗಿದ ಮೇಲೆ ರಾಮನ ಮುಂದೆ ಪ್ರಕಟನಾದವನು ಪರಮೇಶ್ವರ. ಬ್ರಹ್ಮ ರಾಮನಿಗೆ ತಾನು ಯಾರು ಎಂದು ತೋರಿಸಿಕೊಟ್ಟಿದ್ದಾನೆ. ರಾಮನಿಗೆ ರಾಮನ ಸ್ವರೂಪವನ್ನು, ಬ್ರಹ್ಮ ಪ್ರಕಟಪಡಿಸಿದರೆ, ಶಿವ, ರಾಮನ ಹಿಂದಿನ ಮತ್ತು ಮುಂದಿನ ಕರ್ತವ್ಯಗಳು ಏನು ಎಂಬುದನ್ನು ರಾಮನಿಗೆ ಹೆಳ್ತಾನೆ. ಅದೇ, ಷಡರ್ಧನಯನ ಅಂದ್ರೆ – ಆರರ ಅರ್ಧ ಅಂದ್ರೆ ಮೂರು ಕಣ್ಣುಳವನು ಎಂಬುದಾಗಿ ಉದ್ದೇಶಿಸುತ್ತಾನೆ. ರಾಮ ಕೂಡ ತನಗೆ ಶಿವನ ಉದಾಹರಣೆಯನ್ನು ಕೊಟ್ಟಿಕೊಳ್ಳುತ್ತಾನೆ. ರಾವಣನ ಮೂಲಬಲವನ್ನು ಏಕಾಂಗಿಯಾಗಿ ಸಂಹಾರ ಮಾಡಿದ ಬಳಿಕ, ರಾಮ ಹೇಳಿದ್ದೇನು ಅಂದ್ರೆ, ಇದನ್ನು ನಾನು ಮಾಡಬಹುದು ಅಥವಾ ಮೂರುಕಣ್ಣಿನ ಶಿವ ಮಾಡಬಹುದು ಇನ್ಯಾರೂ ಮಾಡಲು ಸಾಧ್ಯವಿಲ್ಲ. ಶಿವನ ಹೋಲಿಕೆಯನ್ನು ಕೊಡ್ತಾನೆ. ಗಾಢ ಬಂಧ ಇಬ್ಬರಲ್ಲಿಯೂ. ಶಿವನಿಗೆ ತುಂಬಾ ಪ್ರೀಯ ರಾಮ. ಶಿವರಾತ್ರಿಯಲ್ಲಿ ರಾಮನ ಅನುಸಂಧಾನ ಮಾಡಿದರೆ ತುಂಬಾ ವಿಶೇಷ. ಶಿವನಿಗೆ ಪಂಚಾಕ್ಷರೀ ಮಾಡಿದ್ದಕ್ಕಿಂತ ಹೆಚ್ಚು ಸಂತೋಷವಾಗಬಹುದು. ಹಾಗೆಯೇ ಶಿವ ಅವತಾರ ಆದಂತಹ ಮಾರುತಿ, ಶಿವಪುರಾಣದಲ್ಲಿ, ಶಿವನೇ ಮಾರುತಿಯಾಗಿ ಬಂದಿದ್ದಾನೆ ಅಂತಲೂ ಹೇಳಿದೆ. ಆ ಮಾರುತಿ ರಾಮನ ಅತ್ಯಂತ ಹತ್ತಿರದವನು. ಇದೆಲ್ಲವೂ ಸೂಚಿಸುತ್ತದೆ, ರಾಮ ಮತ್ತು ಶಿವನ ಮಧ್ಯ ಇರುವ ಬಂಧ.

ರಾವಣ ಸಂಹಾರದ ನಂತರ ರಾಮನ ಮುಂದೆ ಶಿವನ ಪ್ರತ್ಯಕ್ಷನಾಗಿ ಮಾತನಾಡುತ್ತಿದ್ದಾನೆ, ಆ ಮಾತುಗಳು ಹಿಂದೆ ಮತ್ತು ಮುಂದಿನ ಸಮಾಚಾರವನ್ನು ಸೇರಿಸಿ ಹೇಳುವಂತಹದ್ದು, ನೆನಪು ಮಾಡುವಂತಹದ್ದು. ರಾಮನನ್ನು ಬಣ್ಣಿಸಿದಷ್ಟು ಶಿವನಿಗೆ ತೃಪ್ತಿ ಇಲ್ಲ. ಹಾಗಾಗಿ, ರಾಮನಿಗೆ, ಅನೇಕ ಸಂಬೋಧನೆಗಳನ್ನು ಮಾಡ್ತಾನೆ, “ಕಮಲದ ಕಣ್ಣಿನವನೇ, ಮಹಾಬಾಹುಗಳುಳ್ಳವನೇ, ವಿಶಾಲ ವಕ್ಷಸ್ಥಳದವನೇ, ಶತ್ರುಮರ್ಧನನೇ, ಎಷ್ಟು ದೊಡ್ಡ ಕೆಲಸ ಮಾಡಿದ್ದೀ. ನೀನು ಈ ಲೋಕಕ್ಕೆ ಬಂದು, ಯಾರಿಗೂ ಸಾಧ್ಯ ಇರದೇ ಇರುವಂತಹ ಕೆಲಸವನ್ನು ಮಾಡಿದ್ದೀ. ಲೋಕಕ್ಕೆಲ್ಲ ಇನ್ನು ಮುಂದೆ ನಿರಾಳ, ನೆಮ್ಮದಿ. ಲೋಕಕ್ಕೆ ಕವಿದ ಕತ್ತಲೆಯನ್ನು ನೀನು ಅತ್ತ ತಳ್ಳಿದೆ. ಸೂರ್ಯನಾಗಿ ಬಂದೆ. ರಾವಣನನ್ನು ಬಹಳ ಜನ ಶಿವ ಭಕ್ತ ಶಿವಭಕ್ತ ಎಂದು ಕರೀತಾರೆ. ಸ್ವತಃ ಶಿವ ಮಾತ್ರ ರಾವಣನ ಬಗ್ಗೆ ಬೇರೆ ತರಹ ಹೇಳ್ತಾನೆ. ರಾವಣ ಪ್ರಪಂಚಕ್ಕೆ ಕೊಟ್ಟಿದ ಭೀತಿ, ಅದು ಕತ್ತಲೆ. ಆ ಕತ್ತಲೆಗೆ ನೀನು ಬೆಳಕಾಗಿ ಬಂದೆ. “ಅದು ಹಿಂದೆ ಆದದ್ದು”. ಮುಂದೆ? ಅಯೋಧ್ಯೆಗೆ ಹೋಗು, ಭರತನನ್ನು ಸಂತೈಸು. ಭರತ ದೀನನಾಗಿ ನಿನಗಾಗಿ ಕಾತರಿಸಿದ್ದಾನೆ. ಹಾಗೇ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೆಯಿಯನ್ನೂ ಸಂತೈಸು. ಅಯೋಧ್ಯಾಧಿಪತಿ ಆಗು, ರಾಜಾರಾಮನಾಗು. ನೀನು ಸಿಂಹಾಸನವನ್ನು ಏರಿದರೇ ಸಂತೊಷ ಪಡುವಂತಹ ಅನೇಕ ಜೀವಗಳಿವೆ. ಬಳಿಕ ಇಕ್ಷ್ವಾಕು ವಂಶವನ್ನು ಮುಂದುವರಿಸು, ಸೀತೆಯಲ್ಲಿ ಸಂತತಿಯನ್ನು ಪಡೆ. ನಿನ್ನ ವಂಶಕ್ಕೆ ಭೂಮಿಯನ್ನು ಹಂಚಿ, ಅಶ್ವಮೇಧಯಾಗವನ್ನು ಮಾಡಿ, ಪುಣ್ಯಕೀರ್ತಿಯನ್ನು ಪಡೆ.” ರಾಮನ ನಾಮ ಪುಣ್ಯವನ್ನು ಕಳೆಯುವಂತಹದ್ದು. ಅವನನ್ನು ಕೊಂಡಾಡಿದ್ದರಿಂದ ಅವನಿಗೆ ಶ್ರೇಯಸ್ಸು ಅಂತ ಅಲ್ಲ, ಅದು ನಮಗೆ ಶ್ರೇಯಸ್ಸು. ಇನ್ನು ಮುಂದುವರಿಸುತ್ತಾ, “ಅಂತಹ ಅನುತ್ತಮವಾದ ಕೀರ್ತಿಯನ್ನು ಪಡೆ, ದಾನ ಧರ್ಮವನ್ನು ಮಾಡು, ಬಳಿಕ ದೇವಲೋಕವನ್ನು ಏರು. ದೇವ ದೇವ ನೀನು, ನಿನ್ನ ಮೂಲಸ್ವರೂಪಕ್ಕೆ ಬಾ”.

ಮಾತ್ರವಲ್ಲ, ಶಿವ, ರಾಮನಿಗೆ ಅವನ ತಂದೆಯನ್ನು ತೋರಿಸಿ ಕೊಡ್ತಾನೆ. “ಆ ಲೋಕದಲ್ಲಿ ಯಾರು ನಿನ್ನ ತಂದೆ, ಯಾರು ನಿನ್ನ ಗುರು? ಅಲ್ಲಿ ನೀನೇ ಆದಿ ಜನಕ ಮತ್ತು ಗುರು. ಈ ಲೋಕದಲ್ಲಿ ನಿನಗೆ ತಂದೆ ಆಗಿದ್ದವನು ಗುರು ಆಗಿದ್ದವನು, ದಶರಥ, ನಿನ್ನ ತಂದೆ ವಿಮಾನವನ್ನು ಏರಿ ಸ್ವರ್ಗದಿಂದ ಬಂದಿದ್ದಾನೆ. ನಿನ್ನ ಕಾರಣದಿಂದ ಅವನಿಗೆ ಸ್ವರ್ಗ ಲೋಕ ಪ್ರಾಪ್ತಿಯಾಯಿತು. ದಶರಥನು ಸತ್ಯವಂತನಾಗಿ ಇರುವಂತೆ ನೀನು ನೋಡಿಕೊಂಡೆ. ಅವನು ಕೊಟ್ಟ ಮಾತನ್ನು ನೀನು ಉಳಿಸಿದೆ. ಅದರ ಫಲದಿಂದಲಾಗಿ ದಶರಥನಿಗೆ ಸ್ವರ್ಗ ಪ್ರಾಪ್ತಿಯಾಯಿತು. ಅವನು ರಾಮನ ತಂದೆ ಎನ್ನುವುದು ಒಂದೇ ಕಾರಣ ಸಾಕಾಯಿತು ಸ್ವರ್ಗ ಪ್ರಾಪ್ತಿಯಾಗಲು. ನೀನು ಮತ್ತು ಲಕ್ಷ್ಮಣ ಇಬ್ಬರೂ ಅವನಿಗೆ ಅಭಿವಾದನೆ ಮಾಡಿ. ತೀರಿಹೋದ ಮಾತ್ರಕ್ಕೆ ಸಂಬಂಧವೂ ತೀರಿ ಹೋಗುವುದಿಲ್ಲ. ಮೃತ್ಯುವಿನ ನಂತರವೂ ಸಂಬಂಧ ತೀರಿ ಹೋಗೋದಿಲ್ಲ, ಕಳೆದು ಹೋಗುವುದಿಲ್ಲ. ನಮ್ಮ ಸಂಸ್ಕೃತಿ ಅಂತಹದ್ದು. ಮೃತ್ಯುವಿನ ನಂತರವೂ ಬಾಂಧವ್ಯ ಮುಂದುವರಿಯುತ್ತದೆ. ಹಾಗಾಗಿ ನಾವು ಶ್ರಾದ್ಧವನ್ನು ಮಾಡ್ತೆವೆ. ತರ್ಪಣ ಕೊಡ್ತೆವೆ, ಪಿಂಡ ಪ್ರದಾನ ಮಾಡ್ತೆವೆ.”

ರಾಮ ಆಗ ತಲೆ ಎತ್ತಿ ನೋಡಿದ. ವಿಮಾನದ ಶಿಖರವನ್ನು ಏರಿ ಶೋಭಿಸುತ್ತಾ ಇದ್ದಾನೆ, ರಾಜಾ ದಶರಥ. ಸ್ವಯಂ ಪ್ರಕಾಶಮಾನನಾಗಿ ಶೋಭಿಸ್ತಾ ಇದ್ದಾನೆ. ವಸ್ತ್ರಗಳು ದಿವ್ಯವು. ಧೂಳು ಮುಟ್ಟದ ಶುಭ್ರ ವಸ್ತ್ರ. ಹೆಚ್ಚು ಪುಣ್ಯ ಮಾಡಿ ದೇವಲೋಕಕ್ಕೆ ಹೋದರೆ ಅಂತಹ ಬಟ್ಟೆಯನ್ನು ಉಡುವ ಸಾಧ್ಯತೆ ಇದೆ. ಹದಿನಾಲ್ಕು ವರ್ಷದ ನಂತರ ಗತಿಸಿದ ತಂದೆಯನ್ನು ರಾಮನು ನೋಡ್ತಾ ಇದ್ದಾನೆ ಮತ್ತು ದಶರಥ ತನ್ನ ಮಗನನ್ನು ನೋಡ್ತಾ ಇದ್ದಾನೆ. ದಶರಥ ಮಗನ ಬಗ್ಗೆ ಹಾತೊರಿಸಿ, ಕಷ್ಟ ಪಟ್ಟು ಗತಿಸಿದ್ದ. ಆ ಒಂದು ಸಂಕಟಕ್ಕೆ ತಂಪು ಸಿಗ್ತಾ ಇದೆ. ಸಾಕ್ಷಾತ್ ಶಿವನೇ ತಂದೆ ಮಗನನ್ನು ಒಟ್ಟಿಗೆ ಸೇರಿಸ್ತಾ ಇದ್ದಾನೆ. ಅಪರೂಪ. ರಾಮನು ತಂದೆಗೆ ಪ್ರಣಾಮ ಮಾಡ್ತಾ ಇದ್ದಾನೆ. ದಶರಥನಿಗೆ ಎಷ್ಟೋ ಸಂತೋಷ. ತಾನು ಯಾವುದರ ಬಗ್ಗೆ ಹಾತೊರಿಸಿದ್ದನೋ ಅಂತಹ ದೃಶ್ಯ ಇನ್ನು ನೆರವೇರಲಿದೆ, ರಾಮನು ಇನ್ನು ದೊರೆ ಆಗ್ತಾನೆ. ಮಗನನ್ನು ಹತ್ತಿರ ಬರಸೆಳೆದುಕೊಳ್ಳುತ್ತಾನೆ. ಜೀವಕ್ಕಿಂತ ಮಿಗಿಲು ರಾಮನೆಂದರೆ. ತನ್ನ ಮಡಿಲೇರಿಸಿ ಕುಳ್ಳಿರಿಸಿಕೊಂಡು, ಆಮೇಲೆ ಮಾತನಾಡಿದನಂತೆ. ಅಷ್ಟು ಪ್ರೀತಿ. ದಶರಥ ಹೇಳಿದ, “ಮಗು ನನಗೆ ಸ್ವರ್ಗ ಸಿಕ್ಕಿದೆ, ಅಲ್ಲಿ ನನಗೆ ಬಹಳ ಗೌರವ ಇದೆ. ದೇವತೆಗಳು, ಋಷಿಗಳು ಮತ್ತು ದೇವರ್ಷಿಗಳೂ ಗೌರವಿಸುತ್ತಿದ್ದಾರೆ. ಎಲ್ಲ ನಿನ್ನಿಂದ. ಮಗನೇ! ನೀನಿಲ್ಲದೆ ನನಗೆ ಸ್ವರ್ಗ ಸಪ್ಪೆ. ನನಗೆ ಆ ಸ್ವರ್ಗಸುಖವೂ ಬೇಡ, ಗೌರವವೂ ಬೇಡಾ. ನನಗೆ ನಿನ್ನ ಸಹವಾಸ ಮತ್ತು ಒಡನಾಟ ಮಾತ್ರ ಸಾಕು.” ಈ ಮಾತಿನಿಂದ ಒಂದು ಮಾತು ಸ್ಪಷ್ಟ, ರಾಮನೆಂದರೆ ಸ್ವರ್ಗಕ್ಕಿಂತ ಮಿಗಿಲು. ರಾಮನೆಂದರೆ ವೈಕುಂಠ ಹಾಗಾಗಿ ಸ್ವರ್ಗಕ್ಕಿಂತ ಮಿಗಿಲು. ಸ್ವರ್ಗಕ್ಕೂ ವೈಕುಂಠಕ್ಕೂ ಎಲ್ಲಿಯ ಹೋಲಿಕೆ? ಮುಂದುವರಿಸುತ್ತಾ, “ಕೈಕೇಯಿ ಹೇಳಿದ ಮಾತು ಇನ್ನೂ ನನಗೆ ನೆನಪಿದೆ. ಅವೆಲ್ಲವೂ ನನ್ನ ಹೃದಯದಲ್ಲಿ ಹಾಗೆಯೇ ಇದೆ. ಹದಿನಾಲ್ಕು ವರ್ಷದ ವನವಾಸ, ರಾಕ್ಷಸರ ಜೊತೆಗೆ ಸಂಘರ್ಷ, ಆದರೂ ನೀನು ಕುಶಲವಾಗಿ ಇದ್ದೀಯಾ ಅದನ್ನು ನೋಡಿ ನನಗೆ ಸಮಾಧಾನವಾಗ್ತಾ ಇದೆ. ಇವತ್ತು ಆ ದುಃಖದಿಂದ ಬಿಡುಗಡೆ ಆಯಿತು. ಮಗು! ನೀನು ಅರಿಯೆ, ನಿನ್ನ ಕಾರಣದಿಂದ ನಾನು ಸ್ವರ್ಗಕ್ಕೆ ಬಂದಿದ್ದೇನೆ. ಅಷ್ಟಾವಕ್ರನನ್ನು, ಕಹೋವಲನು ಪಾರು ಮಾಡಿದಂತೆ.”

ಕಹೋಲನೆಂಬ ಬ್ರಾಹ್ಮಣೋತ್ತಮ. ಅವನಿಗೆ ಅಷ್ಟಾವಕ್ರನೆಂಬ ಮಗ. ಆ ಮಗು ಗರ್ಭದಲ್ಲಿ ಇದ್ದಾಗಲೇ ಅಪ್ಪ ವೇದ ಹೇಳ್ತಾ ಇದ್ದುದನ್ನು ಕೇಳಿ, ಅದು ಗರ್ಭದಲ್ಲಿರುವಾಗಲೇ ಅಪ್ಪನನ್ನು ತಿದ್ದಿತಂತೆ ಹೀಗಲ್ಲ ಹಾಗೆ ಎಂದು. ಅಪ್ಪ ಶಾಪ ಕೊಟ್ಟ ಮಗನಿಗೆ ಅಷ್ಟಾವಕ್ರನಾಗು ಎಂದು. ಎಂಟು ಅಂಗ ವಕ್ರ ಇತ್ತಂತೆ ಆ ಮಗುವಿಗೆ. ನಂದಿ ಎನ್ನುವ ಪಂಡಿತ ಪಣ ಇಟ್ಟು ಕಹೋಲನನ್ನು ಸೋಲಿಸ್ತಾನೆ. ಪದ್ದತಿ ಏನು ಅಂದ್ರೆ, ಸೋತವನನ್ನು ಗೆದ್ದವನು, ಕೈಕಾಲು ಕಟ್ಟಿ, ನೀರಿಗೆ ಹಾಕಬೇಕು ಎಂದು. ಹಾಗೇ ಕಹೋಲನನ್ನು ನೀರಿಗೆ ಹಾಕಲಾಯಿತು. ನಂದಿ ಎನ್ನುವವನು ವರುಣನ ಪುತ್ರ. ನೀರಿನೊಳಗೆ ಹೋಮ ಆಗ್ತಾ ಇದೆ. ಆ ಯಾಗ ಮಾಡಲು ಬ್ರಾಹ್ಮಣರು ಬೇಕು. ಹಾಗಾಗಿ ನಂದಿ ಬ್ರಾಹ್ಮಣರೊಡನೆ ವಾದ ಮಾಡಿ, ಅವರನ್ನು ಸೋಲಿಸಿ ನೀರಿಗೆ ಹಾಕ್ತಾನೆ. ಕೊಲ್ಲಲಿಕ್ಕಾಗಿ ಅಲ್ಲ, ಹೋಮಕ್ಕೆ ಋತ್ವಿಜರಾಗಿ. ಮಗ ಅಷ್ಟವಕ್ರ ಹುಟ್ಟಿ ದೊಡ್ಡವನಾಗಿ ನಂದಿಯ ಜೊತೆಗೆ ವಾದ ಮಾಡಿ ಗೆಲ್ತಾನೆ. ತಂದೆಯನ್ನು ಬಿಡುಗಡೆ ಮಾಡ್ತಾನೆ.

ದಶರಥ ಇದೇ ಉದಾಹರಣೆಯನ್ನು ಕೊಟ್ಟು ಹೇಳ್ತಾನೆ,”ನನ್ನನ್ನು ನೀನು ಸ್ವರ್ಗ ಸಿಗುವಂತೆ ಮಾಡಿ ಪಾರು ಮಾಡಿದೆ. ಮೊದಲು ಗೊತ್ತಿರಲಿಲ್ಲ ಈಗ ಗೊತ್ತಾಯಿತು, ಇದೆಲ್ಲ ರಾವಣನ ಸಲುವಾಗಿ ಆಗಿದ್ದಂತೆ. ದೇವತೆಗಳು ಹೇಳ್ತಾ ಇದ್ದಾರೆ. ಧನ್ಯೆ ಕೌಸಲ್ಯೆ. ಯಾಕೆಂದರೆ ವನವಾಸವನ್ನು ಪೂರೈಸಿ ಮನಗೆ ಬರುವ ನಿನ್ನನ್ನು ಸಂತೋಷವಾಗಿ ಕಾಣ್ತಾಳಲ್ಲ! ಅಯೋಧ್ಯೆಯ ಜನರು ಧನ್ಯರು. ನನಗೆ ಯೋಗ ಇಲ್ಲ. ನನಗೆ ಒಂದು ಆಸೆ, ನೀನು ಮತ್ತು ಭರತ ಸೇರುವುದನ್ನು ನೋಡಬೇಕು. ಭರತ ಎಂತಹ ಧರ್ಮಚಾರಿ, ಎಷ್ಟು ಶುದ್ಧ ಅವನು! ಅಂತಹ ಭರತ ಮತ್ತು ನೀನು ಸೇರುವ ಸನ್ನಿವೇಶ ಎಷ್ಟು ಚಂದ. ಮಗು! ನನ್ನ ವಾಕ್ಯದಂತೆ ಹದಿನಾಲ್ಕು ವರ್ಷ ವನವಾಸವನ್ನು ಪೂರೈಸಿದ್ದೀಯೆ. ರಾವಣ ವಧೆ ಮತ್ತು ನನ್ನ ವಾಕ್ಯ ಪರಿಪಾಲನೆ, ಈ ನಿನ್ನ ಮಹಾಕರ್ಮ ಇಂದು ಮುಂದು ಎಂದೆಂದೂ ಶ್ಲಾಘನೀಯವಾಗಿರತಕ್ಕಂತಹದ್ದು. ತಮ್ಮಂದಿರೊಡಗೂಡಿ ರಾಜ್ಯಸ್ಥನಾಗಿ ದೀರ್ಘಾಯುಸ್ಸನ್ನು ಹೊಂದು.” ಎಂದು ಆಶೀರ್ವಾದ ಮಾಡ್ತಾನೆ. ಆಗ ರಾಮ ಕೈ ಮುಗಿದು ಒಂದೇ ಮಾತನ್ನು ಕೆಳ್ತಾನೆ, “ಅಪ್ಪ! ಪ್ರಸನ್ನ ನಾಗು, ಧರ್ಮಜ್ಞ ನೀನು. ಕೈಕೇಯಿ ಮತ್ತು ಭರತನಿಗೆ ಒಂದು ಶಾಪ ಕೊಟ್ಟಿದ್ದೆ ನೀನು. “ಅಗ್ನಿಸಾಕ್ಷಿಯಾಗಿ ಹಿಡಿದ ಕೈಯನ್ನು ಮತ್ತು ನಿನ್ನ ಮಗನನ್ನು ನಾನು ಬಿಟ್ಟೆ. ರಾಜ್ಯಸಿಕ್ಕಿದರೆ ಭರತನಿಗೆ ಸಂತೋಷವಾಗುವುದಾದರೆ ಅವನು ನನ್ನ ಮಗನಲ್ಲ. ಅವನು ಕೊಟ್ಟ ಪಿಂಡ ಮತ್ತು ಶ್ರಾದ್ಧ ನನಗೆ ಸಿಗದೇ ಇರಲಿ ” ಎಂದು. ಆ ಶಾಪವನ್ನು ಹಿಂದೆ ತೆಗೆದುಕೊ. ಕೈಕೇಯಿ ನಿನ್ನ ಪತ್ನಿ ಮತ್ತು ಭರತ ನಿನ್ನ ಮಗ ಎಂದು ಮರಳಿ ಸ್ವೀಕಾರ ಮಾಡು. ಎಂದನು ರಾಮ. ರಾಮ ಏನು ಎಂದು ಗೊತ್ತಾಗುತ್ತೆ ನಮಗೆ. ತನಗೆ ತೊಂದರೆ ಮಾಡಿದ ಕೈಕೇಯಿಯ ಮೇಲೆ ಎಷ್ಟು ಕನಿಕರ. ತನ್ನ ಚಿಕ್ಕತಾಯಿಯ ಬಗ್ಗೆ ಎಷ್ಟು ಆದರ. ತಂದೆಯೊಡನೆ ಆದದ್ದು ಅನೀರೀಕ್ಷಿತ ಸಮಾಗಮ, ಅದರಲ್ಲೂ ಕೇಳಿದ್ದೇನು ಅಂದ್ರೆ ತನ್ನ ಚಿಕ್ಕತಾಯಿಯ ಬಗ್ಗೆ. ದಶರಥ ಆಯಿತು ಎಂದು ಒಪ್ಪಿಕೊಂಡನಂತೆ. ತನ್ನ ಪ್ರೀತಿಯ ಪುತ್ರ, ಅಪರೂಪಕ್ಕೆ ಕೇಳಿದ್ದಾನೆ, ಆಯಿತು ಎಂದು ಅಂಗೀಕರಿಸಿದ. ಕೈಕೇಯಿ ತನ್ನ ಪತ್ನಿ ಮತ್ತು ಭರತ ತನ್ನ ಪುತ್ರ ಎಂದು ಒಪ್ಪಿಕೊಳ್ಳುತ್ತಾನೆ ದಶರಥ.

ಬಳಿಕ ಲಕ್ಷ್ಮಣನನ್ನು ಗಾಢವಾಗಿ ತಬ್ಬಿಕೊಂಡು, “ರಾಮನ ಸೇವೆಯನ್ನು, ಎಷ್ಟು ಭಕ್ತಿಯಿಂದ ಪ್ರೀತಿಯಿಂದ, ಮಾಡಿದೆ ನೀನು, ಸೀತೆಯದ್ದು ಕೂಡ. ತುಂಬಾ ಸಂತೋಷ. ನೀನು ಎಲ್ಲ ಯಜ್ಞ ಮಾಡಿದಂತಾಯಿತು, ತಪಸ್ಸನ್ನು ಮಾಡಿದ ಹಾಗಾಯಿತು. ಧರ್ಮದ ಫಲ ನಿನಗೆ ಪ್ರಾಪ್ತವಾಯಿತು, ಕೀರ್ತಿವಂತನಾದೆ, ನಿನ್ನ ಹೆಸರು ಶಾಶ್ವತವಾಯಿತು. ನೋಡು ಲಕ್ಷ್ಮಣ, ರಾಮನು ಒಲಿದರೇ ಸ್ವರ್ಗವೂ ದುರ್ಲಭವಲ್ಲ, ನೀನು ದೊಡ್ದವನಾಗ್ತೀಯೆ. ನಿನಗೆ ಹಿರಿಮೆ ಗರಿಮೆ ಬರುವುದು ಅವನಿಂದ. ಇನ್ನೂ ಸೇವೆ ಮಾಡು. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಸೇವೆ ಮಾಡು. ರಾಮನೆಂದರೆ ಸಮಸ್ತ ಪ್ರಪಂಚದ ಹಿತಕಾಮಿ, ಸಮಸ್ತ ಲೋಕದ ಶ್ರೇಯಸ್ಸನ್ನು ಬಯಸುವವನು. ರಾಮನನ್ನು, ದೇವತೆಗಳು ಬಂದು ಪೂಜೆ ಮಾಡ್ತಾ ಇದ್ದಾರೆ. ರಾಮನೆಂದರೆ ಸುಲಭವಾಗಿ ತಿಳಿಯದ ಭವ್ಯ ಎನಿಸಿಕೊಳ್ಳುವ ಪರಬ್ರಹ್ಮ. ರಾಮನೆಂದರೆ ದೇವತೆಗಳ ಹೃದಯ, ಗುಹ್ಯ, ಗುಟ್ಟು, ರಹಸ್ಯ. ದೇವರಹಸ್ಯ, ಅಂತಃಕರಣ, ಅಂತರಾತ್ಮ. ಪರಮಪುರುಷನ ಸೇವೆಯನ್ನು ಮಾಡಿ ಬಹಳ ಪುಣ್ಯ ಮತ್ತು ಕೀರ್ತಿಯನ್ನು ಸಂಪಾದನೆಯನ್ನು ಮಾಡಿದೆ.” ಎಂದು ಹೇಳಿ ಸೀತೆಯ ಕಡೆಗೆ ತಿರುಗುತ್ತಾನೆ. ಸೀತೆಯೂ ಕೈಮುಗಿದು ನಿಂತಿದ್ದಾಳೆ. ಅವಳನ್ನು ನೋಡಿ ದಶರಥ ಒಂದೇ ಮಾತನ್ನು ಹೇಳಿದ, “ರಾಮ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದನಲ್ಲ! ಆ ಕುರಿತು ನೀನು ಬೇಸರವನ್ನು ಮಾಡಬಾರದು. ಯಾಕೆಂದ್ರೆ ಇದು ನಿನ್ನ ಒಳಿತಿಗಾಗಿ. ದೇವತೆಗಳ ಮೂಲಕ ನನಗೆ ತಿಳಿದುಬಂದದ್ದು ಏನೆಂದ್ರೆ, ನೀನು ಶುದ್ಧಳೇ ಆದರೆ ಈ ಘಟನೆಯಿಂದಾಗಿ ನೀನು ಪರಮಶುದ್ಧಳಾದೆ. ಮಾತ್ರವಲ್ಲ, ನೀನು ಎಷ್ಟು ಶುದ್ಧಳೆಂದು ಇಡೀ ಪ್ರಪಂಚಕ್ಕೇ ಗೊತ್ತಾಯಿತು, ಶಾಶ್ವತವಾಗಿ ಸ್ಥಾಪಿತವಾಯಿತು. ರಾಮ ತನ್ನ ಮೇಲೆ ಮಾತನ್ನು ತೆಗೆದುಕೊಂಡು ಸೀತೆಗೆ ಶಾಶ್ವತ ಶ್ರೇಯಸ್ಸನ್ನು ಮಾಡಿದ. ಸೀತೆ ಒಳ್ಳೆಯವಳಾದರೂ, ರಾವಣ ಒಳ್ಳೆಯವನಲ್ಲ ಎಂಬ ಮಾತು ಬಂದಿತ್ತಲ್ಲ! ರಾವಣ ಮುಟ್ಟುವ ಹಾಗಿಲ್ಲ ಯಾಕೆಂದ್ರೆ ಅವನಿಗೆ ಶಾಪ ಇದೆ. ಆದರೆ ಈ ಮಾತು ಎಲ್ಲರಿಗೂ ಗೊತ್ತಿಲ್ಲ. ಜನ ಕೆಟ್ಟದ್ದನ್ನೇ ಯೋಚನೆ ಮಾಡ್ತಾರೆ. ಒಳಿತನಲ್ಲಿಯೂ ಕೆಟ್ಟದ್ದನ್ನು ಯೋಚನೆ ಮಾಡ್ತಾರೆ. ಇದನ್ನು ಮಾಡುವಾಗ ರಾಮ ನಿನ್ನ ಹಿತೈಷಿ ಆಗಿದ್ದ. ನಿನಗೆ ನಾನು ಇನ್ನು ಏನು ಹೇಳುವಂತಿದೆ? ಪತಿ ಸೇವೆಯನ್ನು ಮಾಡು ಎಂದು ಹೇಳುವ ಅವಶ್ಯಕತೆ ಇಲ್ಲ. ಅದು ಅಭಾಸ ಆದೀತು. ಆದರೂ ನನ್ನ ಕರ್ತವ್ಯ ಎಂದು ಹೇಳುತ್ತೇನೆ. ರಾಮನು ನಿನ್ನ ದೇವರು. ಎಂದು ದಶರಥ ಸೊಸೆಯನ್ನು ಸಂತೈಸುತ್ತಾನೆ. ದಶರಥನು ತನ್ನಿಬ್ಬರು ಮಕ್ಕಳನ್ನು ಸೊಸೆಯನ್ನೂ ಹರಸಿ ಇಂದ್ರಲೋಕಕ್ಕೆ ಹೊರಟು ಹೋಗುತ್ತಾನೆ.

ಈಗ ರಾಮನಲ್ಲಿ ಇಂದ್ರ ಹೇಳಿದ, “ನಿನ್ನ ಮುಂದೆ ನಾವು ಬಂದು ನಿಂತಿದ್ದೇವೆ. ಏನೂ ವರವನ್ನು ಕೊಡದೆ ಹೋಗುವ ಹಾಗಿಲ್ಲ. ಹಾಗಾಗಿ ಒಂದು ವರವನ್ನು ಕೇಳು.” ರಾಮನ ಶ್ರೇಷ್ಠತೆ ಏನು ಅಂದ್ರೆ, ವರವನ್ನು ಕೇಳು ಹೇಳಿದ್ರೆ ಸ್ವಂತ ಬಗ್ಗೆ ಏನೂ ನೆನಪಾಗೋದಿಲ್ಲ. ರಾಮ ಹೇಳಿದ, “ನಿಜಕ್ಕೂ ನನ್ನಲ್ಲಿ ಪ್ರೀತಿ ಇದೆಯಾದರೆ ನನಗಾಗಿ ಹೋರಾಡಿ ಮಡಿದ ಕಪಿ ಕರಡಿಗಳು ಮತ್ತು ಗೋಪುಚ್ಛರುಗಳನ್ನು ಬದುಕಿಸು, ಯಾರು ಅಂಗಾಂಗಳನ್ನು ಕಳೆದುಕೊಂಡಿದ್ದಾರೋ ಅವರು ಮೊದಲಿನಂತೆ ಆಗಲಿ, ಮತ್ತೆ ತಮ್ಮ ಹೆಂಡತಿ ಮಕ್ಕಳ ಜೊತೆ ಸೇರುವಂತೆ ಆಗಲಿ, ಯಾಕೆಂದ್ರೆ ಅವರಿಗೆ ತಮ್ಮ ಪ್ರಾಣವೂ ಲೆಕ್ಕವಲ್ಲ ಅಷ್ಟು ನನ್ನ ಮೇಲೆ ಪ್ರೀತಿ. ಎಲ್ಲಿ ಹೋಗ್ತಾರೋ ಬರ್ತಾರೋ ಅಲ್ಲಿ ಅವರಿಗಾಗಿ ಕಂದ ಮೂಲ ಫಲಗಳೂ ಮೂರು ಇರಬೇಕು. ಕಾಲವಲ್ಲದಿದ್ದರೂ ಕೂಡ ಅವರಿಗೆ ಯಾವುದು ಬೇಕು ಅವರಿಗೆ ಸಿಗಲಿ. ಅವರಿಗೆ ಯಾವ ರೋಗವೂ ಇರಬಾರದು ಆ ರೀತಿ ಅವರಿಗೆ ಆಶೀರ್ವದಿಸು.” ಎಂಬುದಾಗಿ ರಾಮ ವರವನ್ನು ಕೇಳ್ತಾನೆ. ಒಂದು ಸರ್ತಿ ಇಂದ್ರನಿಗೇ ದಿಗಿಲಾಯಿತಂತೆ. ಇಷ್ಟು ದೊಡ್ಡ ವರವನ್ನು ಕೊಟ್ಟು ಅಭ್ಯಾಸವೇ ಇಲ್ಲ. ನೀನು ಕೇಳಿದ್ದೀಯಾ ಮತ್ತು ನನ್ನ ಮಾತು ಸುಳ್ಳಾಗುವುದು ಬೇಡ. ಹಾಗಾಗಿ ಈ ವರವನ್ನು ಕೊಟ್ಟೆ ಎಂದನಂತೆ. ಆವಾಗ ಎಲ್ಲರೂ ಎದ್ದು ಬಂದರು. ಭವಿಷ್ಯದಲ್ಲೂ ಅವರಿಗೆ ಯಾವುದೂ ಕೊರತೆ ಆಗಲಿಲ್ಲ. ರಾಮ ಪೂರ್ಣ ಕಾಮ, ಇಂತಹ ಯೋಚನೆ ರಾಮನಿಗೇ ಬರಬಹುದು. ಬೇರೆಯವರಿಗಾಗಿ ಅವನ ಜೀವನ. ಸ್ವಯಂ ಪರಿಪೂರ್ಣ ಅವನಿಗೇನೂ ಬೇಡ. ತುರಿಯಾವಸ್ಥೆಗೆ ಹೋದಾಗ, ಅಲ್ಲಿಂದ ಹರಿಯುವ ಅಮೃತ, ಎಲ್ಲ ಪ್ರಾಣಶಕ್ತಿಗಳಿಗೆ ಚೈತನ್ಯವನ್ನು ಕೊಡ್ತದೆ ಅಂತ ಬಲ್ಲವರು ಹೇಳ್ತಾರೆ. ಅದನ್ನು ಸೂಚಿಸುವಂತಹದ್ದು ಈ ಘಟನೆ.

ಆ ಕಪಿಗಳಿಗೆಲ್ಲ ಆಶ್ಚರ್ಯ ಆಗೋಯ್ತಂತೆ. ಬಂದು ರಾಮನಿಗೆ ಅಭಿವಾದನೆಯನ್ನು ಮಾಡ್ತಾರೆ. ಬಳಿಕ ದೇವತೆಗಳು ಮುಂದಿನ ಕರ್ತವ್ಯದ ಕಡೆಗೆ ಗಮನ ಕೊಡ್ತಾರೆ. “ಅಯೋಧ್ಯೆಗೆ ಹೋಗಿ ಬಾ ಮತ್ತು ಈ ವಾನರರನ್ನು ಅವರವರ ನಾಡಿಗೆ ಕಳಿಸಿ ಕೊಡು. ಮೈಥಿಲಿಯನ್ನು ಸಂತೈಸು. ದೇವತೆಗಳಿಗೆ ಅವಳ ಚಿಂತೆ. ಭರತನನ್ನು ಸಮಾಧಾನ ಮಾಡು. ಪುರಜನರನ್ನೂ ಸಂತೈಸು. ಅವರೂ ನಿನ್ನ ನಿರೀಕ್ಷೆಯಲ್ಲಿದ್ದಾರೆ. ” ಎಂಬುದಾಗಿ ಹೇಳಿ ದೇವತೆಗಳು ತಮ್ಮ ಸ್ವಸ್ಥಾನಕ್ಕೆ ಸೇರಿದರು. ಆ ರಾತ್ರಿ ರಾಮ ಅಲ್ಲಿಯೇ ವಾಸ ಮಾಡ್ತಾನೆ. ಮರುದಿನ ರಾಮ ಎದ್ದು ಪ್ರಾತಃಕಾಲದ ಕೆಲಸವನ್ನು ಪೂರೈಸಿದ್ದಾನೆ. ವಿಭೀಷಣ ಬಂದು ರಾಮನಿಗೆ ನಮಸ್ಕಾರ ಮಾಡಿ ಕೇಳಿದ, “ನಿನ್ನ ಸೇವೆ ಮಾಡಬೇಕು. ಪ್ರತಿಕರ್ಮ ಮಾಡಬೇಕು. (ಪ್ರತಿಕರ್ಮ ಅಂದ್ರೆ, ಎಷ್ಟೋ ಕಾಲದ ವನವಾಸ, ವ್ರತ ಎಲ್ಲ ಮಾಡಿದ ಮೇಲೆ, ಒಂದು ಮಂಗಲ ಸ್ನಾನ ಮಾಡಿ, ಅಲಂಕಾರ ಮಾಡುವುದು. ರಾಮ ಅಲಂಕಾರ ಮಾಡದೇ ಎಷ್ಟೋ ಸಮಯವಾಗಿದೆ. ಜಟೆಯನ್ನು ಬಿಟ್ಟು ಪುನಃ ರಾಜತ್ವಕ್ಕೆ ಹೋಗಲು). ದಿವ್ಯವಾಗಿರತಕ್ಕಂತಹ ಸ್ನಾನ, ಆಭರಣಗಳು, ಬಟ್ಟೆಗಳು, ಇವೆಲ್ಲವೂ ಆಗಬೇಕು ನಿನಗೆ. ನನಗೆ ಏನೂ ಬೇಡ ಆದರೆ ನನ್ನ ಮೇಲೆ ಕೃಪೆ ತೋರಿಸಿ, ಸ್ವೀಕರಿಸು” ಎಂದು ಕೇಳಿದಾಗ ರಾಮ,”ಸುಗ್ರೀವನಿಗೆ, ಅಂಗದನಿಗೆ, ಹನುಮಂತನಿಗೆ, ಜಾಂಬವಂತನಿಗೆ ಮಾಡಿಸು. ನನಗೆ ಅಲ್ಲಿ ಭರತ ಕಾಯ್ತಾ ಇದ್ದಾನೆ. ಸುಖವಾಗಿ ಇರಬೇಕಾದ ಸುಕುಮಾರ ಭರತ ನನಗಾಗಿ ಬೇಯ್ತಾ ಇದ್ದಾನೆ. ಹಾಗಾಗಿ ನನಗೆ ಅವನನ್ನು ಬಿಟ್ಟು ಯಾವ ಸ್ನಾನವೂ ಬೇಡ. ಯಾವ ಉಪಚಾರವೂ ಬೇಡ. ನಾನು ಮೊದಲು ಭರತನನ್ನು ಕಾಣಬೇಕು. ಅಯೋಧ್ಯೆಗೆ ಬಹಳ ದೂರದ ದಾರಿ, ಹೊರಟೆ ನಾನು” ಎಂದಾಗ ವಿಭೀಷಣ ಹೇಳಿದ, “ನಾನು ನಿನ್ನನ್ನು ಕೂಡಲೇ ತಲುಪಿಸಬಲ್ಲೆ. ಪುಷ್ಪಕವಿಮಾನ ಇದೆ. ನಿನಗಾಗಿ ಇಟ್ಟುಕೊಂಡಿದ್ದೇನೆ. ನಿನ್ನನ್ನು ಅಯೋಧ್ಯೆಗೆ ಕಳುಹಲು ಬೇಕು ಅದಕ್ಕಾಗಿ ನಿನಗಾಗಿ ಪುಷ್ಪಕ ವಿಮಾನವನ್ನು ಇಟ್ಟುಕೊಂಡಿದ್ದೇನೆ. ಆ ವಿಮಾನವನ್ನು ಏರಿ ತ್ವರಿತವಾಗಿ ಅಯೋಧ್ಯೆಗೆ ಹೋಗಬಹುದು. ಆದರೆ ಈಗ ನನ್ನ ಉಪಚಾರವನ್ನು ಸ್ವೀಕರಿಸು. ನನ್ನ ಮೇಲೆ ದಯೆ ಇಲ್ಲವೇ? ನನ್ನ ಮೇಲೆ ಅನುಗ್ರಹ ಇಲ್ಲವಾ? ನನ್ನಲ್ಲಿ ಒಳ್ಳೆ ಗುಣಗಳನ್ನು ಕಂಡಿಲ್ಲವೇ? ನನ್ನ ಮೇಲೆ ಪ್ರೀತಿ ಇದೆ ಅಂದ್ರೆ, ಇಲ್ಲಿ ಉಳಿದು ನನ್ನ ಉಪಚಾರವನ್ನು ಸ್ವೀಕರಿಸು. ಲಂಕೆ ನಿನಗೆ ತುಂಬಾ ದುಃಖವನ್ನು ಕೊಟ್ಟಿದೆ. ಒಂದಿಷ್ಟಾದರೂ ಪರಿಹಾರ ಮಾಡುವ. ನಿನಗೆ, ಸೀತೆಗೆ ಮತ್ತು ಲಕ್ಷ್ಮಣನಿಗೆ ಎಲ್ಲ ರೀತಿಯ ಉಪಚಾರವನ್ನು ಮಾಡಬೇಕು. ಅದಕ್ಕೆ ಅವಕಾಶ ಕೊಡು.” ಎಂದು ಪ್ರೀತಿಯಿಂದ ಕಟ್ಟಿ ಹಾಕಲಿಕ್ಕೆ ಪ್ರಯತ್ನ ಮಾಡ್ತಾನೆ.

ರಾಮ ಹೇಳಿದ, “ನೀನು ಏನು ಸತ್ಕಾರ ಮಾಡಲಿಲ್ಲ. ಎಷ್ಟು ಗೌರವ ಕೊಟ್ಟಿದ್ದೀಯೆ. ಅಣ್ಣನನ್ನು ಬಿಟ್ಟು ನನ್ನನ್ನು ಸೇರಿದೆ. ನನಗಾಗಿ ಯುದ್ಧ ಮಾಡಿದ್ದೀಯೆ. ಸಮಯ ಸಮಯಕ್ಕೆ ಯೋಗ್ಯವಾದ ಸಲಹೆಗಳನ್ನು ಕೊಟ್ಟಿದ್ದಿಯಾ. ನಿನ್ನ ಕಾರಣದಿಂದಲೇ ಯುದ್ಧದಲ್ಲಿ ಗೆಲುವಾಗಿದ್ದು ನಮಗೆ. ನಿನ್ನ ಹೃದಯ, ನಿನ್ನ ಭಾವ ನಿನ್ನ ಕಾರ್ಯ ಇದೆಲ್ಲ ನನಗೆ ಅತ್ಯಂತ ಪ್ರೀತಿ. ಮತ್ತೆ ವಿಭೀಷಣ ನಿನ್ನ ಮಾತನ್ನು ಯಾವ ಕಾಲಕ್ಕೂ ನಡೆಸಬೇಕು. ನೀನು ಕೇಳಿದೆ ಅಂದ್ರೆ ರಾಮ ಇಲ್ಲ ಅಂತ ಹೇಳಲಾರ. ಆದರೆ, ನನಗೆ ಭರತನನ್ನು ಕಾಣುವ ತವಕ. ಯಾಕೆಂದ್ರೆ ಅಂದಿನ ದೃಶ್ಯ ನನ್ನ ಕಣ್ಣ ಮುಂದೆ ಕಟ್ಟುತ್ತಾ ಇದೆ. ನನ್ನನ್ನು ಮರಳಿ ಅಯೋಧ್ಯೆಗೆ ಕರೆದುಕೊಂಡು ಹೋಗಲು ಚಿತ್ರಕೂಟಕ್ಕೆ ಬಂದಿದ್ದ. ಆ ದಿವಸ, ಕೈ ಮುಗಿದ, ಕಾಲಿಗೆ ಬಿದ್ದ, ಕಣ್ಣಿರಿಟ್ಟ, ಕಾಲಿನ ಮೇಲೆ ತಲೆ ಇಟ್ಟು ಕೇಳಿದರೂ ನಾನು ಒಪ್ಪಲಿಲ್ಲ. ಅವನನ್ನು ನಾನು ಬರಿಗೈಯಲ್ಲಿ ಕಳುಹಿಸಿ ಬಿಟ್ಟೆ. ಎಷ್ಟು ಪ್ರೀತಿಯಿಂದ, ದೈನ್ಯದಿಂದ ಕೇಳೀದ್ದ. ಆದರೆ ನಾನು ಅವನಿಗೆ ಇಲ್ಲ ಎಂದು ಬಿಟ್ಟಿದ್ದೆ. ಯಾಕೆಂದ್ರೆ ಹದಿನಾಲ್ಕು ವರ್ಷ ಅವನು ಕೇಳಿದ್ದನ್ನು ನಡೆಸಲು ಸಾಧ್ಯ ಇರಲಿಲ್ಲ. ಸಿಕ್ಕ ಮೊದಲ ಅವಕಾಶದಲ್ಲಿ ಅವನನ್ನು ಕಾಣಬೇಕು. ಅವನ ಮಾತನ್ನು ನಡೆಸಿಕೊಡಬೇಕು. ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿಯನ್ನೂ ನೋಡಬೇಕು. (ಕೈಕೇಯಿಯನ್ನು ಬೇರೆ ಮಾಡಲಿಲ್ಲ, ಅದೇ ಸ್ವರ ಅದೇ ಮೊದಲಿನ ರೀತಿಯಲ್ಲಿ ಹೇಳ್ತಾನೆ). ಗುರುಗಳನ್ನು ಕಾಣಬೇಕು, ಸ್ನೇಹಿತರನ್ನ, ಪ್ರಜೆಗಳನ್ನ, ಪ್ರಜೆಗಳ ಮಕ್ಕಳನ್ನು ಕಾಣಬೇಕು. ಕಳುಹಿಸಿ ಕೊಡು, ಆ ವಿಮಾನದ ಬಗ್ಗೆ ಹೇಳಿದೆಯಲ್ಲ! ಅದನ್ನು ತರಿಸು. ಆದಷ್ಟು ಬೇಗ ಅಯೋಧ್ಯೆಗೆ ತೆರಳಬೇಕು. ಇನ್ನೇನಾಗಬೆಕು? ನಾನು ಯಾತಕ್ಕೆ ಲಂಕೆಗೆ ಬಂದಿದ್ದೆನೋ ಆ ಕಾರ್ಯವಾಗಿದೆ. ಕೆಲಸವಾದ ಮೇಲೆ ಅಲ್ಲಿ ನಿಲ್ಲಬಾರದು. ಬೇಸರ ಮಾಡಬೇಡ. ನಿನ್ನ ಒಪ್ಪಿಸಿಯೇ ಹೋಗುವುದು.”

ಅಂತೂ ವಿಭೀಷಣ ಲಂಕೆಗೆ ಹೋಗಿ ಗಡಿಬಿಡಿಯಲ್ಲಿ ವಿಮಾನವನ್ನು ತರ್ತಾನೆ. ವಿಮಾನವನ್ನು ರಾಮನೂ ನೋಡ್ತಾನೆ, ವಾನರರೂ ನೋಡ್ತಾರೆ. ವಿಸ್ಮಯವಾಯಿತು. ಅದ್ಭುತ ಅದು. ಸುಂದರಕಾಂಡದಲ್ಲಿ ಮತ್ತು ಇಲ್ಲಿಯೂ ಅದರ ವಿವರಣೆ ಬಂದಿದೆ. ವಿನಮ್ರನಾಗಿ ವಿಭೀಷಣ ಕೇಳ್ತಾನೆ. ಇನ್ನೇನು ಸೇವೆ ಆಗಬೇಕು ನನ್ನಿಂದ. ಲಕ್ಷ್ಮಣ ನೋಡ್ತಾ ಇದ್ದಾನೆ. ಕ್ಷಣ ಚಿಂತಿಸಿ ರಾಮ ಹೇಳೀದ, “ಇವರನ್ನೆಲ್ಲ ಸತ್ಕರಿಸು. ಇವರಿಗೆ ಉಡುಗೊರೆಗಳನ್ನು ಕೊಡು. ಯಾಕೆಂದ್ರೆ ನಾವೆಲ್ಲ ಸೇರಿಯೇ ಯುದ್ಧ ಗೆದ್ದಿದ್ದು. ನೀನು ಲಂಕಾಧಿಪತಿ ಆಗಲಿಕ್ಕೆ ಇವರೂ ಕಾರಣರು. ಪ್ರಾಣ ಭಯವನ್ನೂ ತ್ಯಜಿಸಿ ಯುದ್ಧ ಮಾಡಿದ್ದಾರೆ ಈ ವಾನರರು. ಅವರನ್ನು ಸತ್ಕರಿಸು. ವಿಭೀಷಣ ನಮ್ಮ ಕಾರ್ಯವನ್ನು ಗುರುತಿಸಿದ ಎಂದು ಅವರಿಗೆ ಸಂತೋಷವಾಗ್ತದೆ. ಮತ್ತು ಯಾರು ನಮಗಾಗಿ ಹೋರಾಡುತಾರೋ ಅವರನ್ನು ಸಂತೋಷ ಪಡಿಸಬೇಕು.” ಎಂಬುದಾಗಿ ಹೇಳಿ ಮಾಡಿಸ್ತಾನೆ. ವಿಭೀಷಣ ಎಲ್ಲರಿಗೂ ರತ್ನ ಭೂಷಣಗಳಿಂದ ಸತ್ಕರಿಸುತ್ತಾನೆ. ಅದನ್ನು ಕಣ್ಣಾರೆ ಕಂಡು, ತಾನು ಒಂದು ಚಿಕ್ಕಾಸನ್ನೂ ತೆಗೆದುಕೊಳ್ಳದೇ ರಾಮ, ಸೀತೆಯನ್ನು ಬಳಸಿ, ವಿಮಾನವನ್ನು ಏರಿದ. ಜೊತೆಗೆ ಲಕ್ಷ್ಮಣನೂ ಕೂಡ. ವಿಮಾನದಲ್ಲಿ ಕುಳಿತು ಎಲ್ಲ ವಾನರರಿಗೂ, ವಿಭೀಷಣನಿಗೂ ಹೇಳಿದನಂತೆ, “ಮಿತ್ರ ಕಾರ್ಯವನ್ನು ನೀವು ನೆರವೇರಿಸಿದ್ದೀರಿ. ಇನ್ನು ಕಿಷ್ಕಿಂಧೆಯನ್ನು ಸೇರಿ ಸುಖವಾಗಿ ಬಾಳಿ ಎಂದು ನನ್ನ ಅಪ್ಪಣೆ ಇದೆ.” ವಿಭೀಷಣನಿಗೆ ಹೇಳಿದ, “ನಾನು ಕೊಟ್ಟ ಲಂಕೆಯಲ್ಲಿ ಸುಖವಾಗಿ ಬಾಳು. ಸುರಾಸುರರು, ಬ್ರಹ್ಮಾಂಡದಲ್ಲಿ ಇರುವ ಯಾರೂ ನಿನ್ನನ್ನು ಎಂದೂ ಮುಟ್ಟಲಾರರು.” ಎಂದು ಹೇಳಿ ಹೋಗಿಬರಲೇ ಎಂದು ಕೇಳಿದಾಗ, ನಾವೂ ಬರಲೇ ಎಂದು ಕೇಳಿದರಂತೆ. ರಾಮ ಕರೆದಿಲ್ಲ ಆದರೆ ಇವರಾಗೇ ಕೇಳ್ತಾರೆ, “ಅಯೋಧ್ಯೆಯನ್ನು ನೋಡಬೇಕು ನಮ್ಮನ್ನು ಕರೆದುಕೊಂಡು ಹೋಗು. ನಗರವನ್ನೂ ಉದ್ಯಾನವನವನ್ನೂ ನೋಡಬೇಕು ಅಲ್ಲಿ ವಿಹರಿಸಬೇಕು. ಅದಕ್ಕಿಂತ ಹೆಚ್ಚಾಗಿ ಅಭಿಷೇಕ ಜಲದಿಂದ ನೆನೆದ ನಿನ್ನನ್ನು ಕಾಣಬೇಕು. ಸಿಂಹಾಸನದಲ್ಲಿ ಕುಳಿತು ಅಭಿಷೇಕ ಜಲದಿಂದ ನೆನೆದ ನಿನ್ನನ್ನು ಕಾಣಬೇಕು. ಮತ್ತು ಕೌಸಲ್ಯೆ, ನಿನ್ನನ್ನು ಹಡೆದ ತಾಯಿಯನ್ನು ನೋಡಬೇಕು. ಬಂದು ನಮಸ್ಕಾರ ಮಾಡಬೇಕು ಅವಳಿಗೆ. ನಾವು ಹೆಚ್ಚು ದಿನ ಉಳಿಯುವುದಿಲ್ಲ. ನಮ್ಮ ಮನೆಗೆ ಬೇಗ ಹೋಗಿಬಿಡ್ತೆವೆ. ಒಂದು ಸಾರಿ ಆದರು ನಾವು ಬರುವುದೇ ಅಯೋಧ್ಯೆಗೆ.” ವಿಭೀಷಣ ಕೂಡ ಅವನೂ ಬರುತ್ತೇನೆ ಎಂದು ವಿನಂತಿಸಿಕೊಂಡ.

ಆಗ ರಾಮ ಹೇಳಿದನಂತೆ, “ನಿಮ್ಮನ್ನು ಬೀಳ್ಕೊಡುವುದು ನನಗೆ ಸಹ್ಯ ಅಂತ ಅಲ್ಲ, ವಿಮಾನದಲ್ಲಿ ಕುಳಿತು ಅಲ್ಲಿ ಆದಷ್ಟು ಬೇಗ ಹೋಗುವ ತವಕದಲ್ಲಿ ನಾನಿದ್ದೆ. ಬರ್ತೀರಿ ಅಂದ್ರೆ ಎಂತಹ ಸಂತೋಷ. ಸುಗ್ರೀವ ಬೇಗ ಏರು ವಿಮಾನವನ್ನು. ವಾನರರೂ ಬರಲಿ, ವಿಭೀಷಣ ನೀನು ಬಾ ನಿನ್ನ ಅಮಾತ್ಯರೂ ಬರಲಿ” ಎಂದು ಎಲ್ಲರನ್ನೂ ಕರೆದ. ಎಲ್ಲರೂ ವಿಮಾನವನ್ನು ಏರಿದರು. ಕುಬೇರನ ವಾಹನವು ರಾಮನ ಅನುಮತಿಯನ್ನು ತೆಗೆದುಕೊಂಡು ಎದ್ದಿತು. ಇಷ್ಟೆಲ್ಲ ಜನರನ್ನು ಕರೆದುಕೊಂಡರೂ ಕೂಡ ಪುಷ್ಪಕ ವಿಮಾನದಲ್ಲಿ ಜಾಗ ಕಡಿಮೆ ಆಗಲಿಲ್ಲವಂತೆ. ಎಲ್ಲರೂ ಒತ್ತಡ ಇಲ್ಲದೇ, ಸುಖವಾಗಿ ಕುಳಿತಿದ್ದರು. ಅದು ವಿಶೇಷ ಯಾಕೆಂದ್ರೆ ಪುಷ್ಪ ಅರಳುವ ಹಾಗೇ ಅದೂ ಅರಳುತ್ತದೆ. ಪಕ್ಕದಲ್ಲಿ ಸೀತೆ ಇದ್ದಾಳೆ, ರಾಮ ಸುತ್ತಲೂ ನೋಡ್ತಾನೆ. ಯಾಕೆ ನೋಡ್ತಾನೆ ಅಂದ್ರೆ ಸೀತೆಗೆ ತೋರಿಸಬೇಕು ಎಂದು. ಎಲ್ಲೆಡೆಗೆ ನೋಡಿ ರಾಮ ಒಂದೊಂದೇ ವಿವರಣೆ ಕೊಡಲಿಕ್ಕೆ ಆರಂಭ ಮಾಡ್ತಾನೆ. ಕೈಲಾಸ ಶಿಖರದಂತಹ, ತ್ರಿಕೂಟ ಶಿಖರದ ನೆತ್ತಿಯಲ್ಲಿ ಶೋಭಿಸುವ ಲಂಕೆಯನ್ನು ನೋಡು. ವಿಶ್ವಕರ್ಮ ನಿರ್ಮಿತ. ಬಳಿಕ ರಣಭೂಮಿಯನ್ನು ತೋರಿಸಿ, ಇದು ನಿನಗಾಗಿ ಯುದ್ಧ ನಡೆದಿರತಕ್ಕಂತಹ ರಣಭೂಮಿ. ಇಲ್ಲಿ ಕಪಿಗಳು ರಾಕ್ಷಸರು ಭಯಂಕರವಾಗಿ ಯುದ್ಧ ಮಾಡಿದ್ದಾರೆ. ರಾವಣನನ್ನು ತೋರಿಸಿ, ವರಬಲಾನ್ವಿತನಾಗಿ ಮೆರೆದಿದ್ದ ರಾವಣನು ಸತ್ತು ಬಿದ್ದಿದ್ದಾನೆ ಎಂದು ಹೇಳಿ ವಿಶೇಷವಾಗಿ ಹೇಳ್ತಾನೆ, “ಹೇ ಸೀತೆ! ನಿನಗಾಗಿಯೇ ನಾನು ರಾವಣನನ್ನು ಸಂಹಾರ ಮಾಡಿದೆ. ಅಲ್ಲಿ ನೋಡು ಕುಂಭಕರ್ಣ, ನಾನು ಸಂಹಾರಮಾಡಿದ್ದು ನಿನಗಾಗಿ. ಇದು ಹನುಮಂತ ಕೊಂದ ಧೂಮ್ರರಾಕ್ಷಸ. ಸುಶೇಣ ಸಂಹಾರ ಮಾಡಿದ ವಿದ್ಯುನ್ಮಾಲಿ. ಇದೋ ಲಕ್ಷ್ಮಣ ಸಂಹಾರ ಮಾಡಿದ ಇಂದ್ರಜಿತು. ಇದು ಅಂಗದ ಕೊಂದ ವಿಕಟ. ಅದು ವಿರೂಪಾಕ್ಷ, ಮಹಾಪಾಕ್ಷ, ಇದು ಅಕಂಪನ” ಎಂದೆಲ್ಲ ತೋರಿಸುತ್ತಾನೆ.

ಆಮೇಲೆ ಇನ್ನೊಂದು ಜಾಗ ತೋರಿಸಿ ಹೇಳ್ತಾನೆ. ಇದು ಮಂಡೋದರಿ ಅತ್ತ ಸ್ಥಳ. ರಾವಣನ ಇತರ ಪತ್ನಿಯರೊಂದಿಗೆ ಬಂದು ಮಂಡೋದರಿಯು ಅತ್ತ ಸ್ಥಳ ಇದು. ಅವಳ ದರ್ಶನ ವಿಶೇಷ ಹಾಗಾಗಿ ರಾಮನಿಗೆ ಅವಳ ಸ್ಮರಣೆ ಇದೆ. ವಿಮಾನ ಮುಂದಕ್ಕೆ ಹೋಗ್ತಾ ಇದ್ದಂತೆ, ಇಲ್ಲೇ ನಾವು ರಾತ್ರಿ ತಂಗಿದ್ದೆವು ಎಂದು ಸಮುದ್ರದ ತೀರವನ್ನು ತೋರಿಸುತ್ತಾನೆ. ಇದು ಸಾಗರ ತೀರ್ಥ, ಸ್ನಾನ ಘಟ್ಟ. ನೋಡು ಇದು ನೆಲ ಸೇತು. ನಿನಗಾಗಿ ನಾನು ಕಟ್ಟಿದ ಸೇತು. ತುಂಬಾ ಅಸಾಧ್ಯವೇ ಹೌದು ಅಂತಹ ಒಂದು ಕಾರ್ಯ ನಿನಗಾಗಿ ಮಾಡಿದೆ. ನೋಡು ಸಮುದ್ರ ಅಪಾರ, ಅನಂತ. ಮೈನಾಕ ಪರ್ವತವನ್ನು ತೋರಿಸಿ ರಾಮ ಹೇಳ್ತಾನೆ, “ಇದು ಹನುಮಂತನ ವಿಶ್ರಾಂತಿಗಾಗಿ ಎದ್ದು ಬಂದಿದೆ ಮೈನಾಕ ಪರ್ವತ.” ಅಷ್ಟರಲ್ಲಿ ಸಮುದ್ರವನ್ನು ದಾಟಿದರು. ಅದನ್ನು ತೋರಿಸಿ ನೋಡು ಶಿಬಿರಗಳು. ಈ ಶಿಬಿರಗಳಲ್ಲಿ ನಾವು ಸಮುದ್ರವನ್ನು ದಾಟುವ ಮೊದಲು ಉಳಿದುಕೊಂಡಿದ್ದೆವು. ಅಲ್ಲಿ ಸೇತುಬಂಧವೆಂಬ ತೀರ್ಥ, ರಾಮೇಶ್ವರವನು ತೋರಿಸಿ, “ಪ್ರಖ್ಯಾತ ತೀರ್ಥಕ್ಷೇತ್ರ” ಎಂದು ತೋರಿಸುತ್ತಾನೆ. ಇಲ್ಲಿ ಪರಶಿವನು ಪ್ರಸನ್ನನಾದನು, ಒಲಿದು ಬಂದನು. ಈ ವಿಭೀಷಣ ಬಂದು ನನ್ನನ್ನು ಕಂಡಿದ್ದು ಇಲ್ಲೆ. ಮುಂದೆ ಕಿಷ್ಕಿಂದೆ ಬಂತು. ರಾಮನು ಹೇಗೆ ಬಂದಿದ್ದನೋ ವಿಮಾನವು ಹಾಗೇ ಬರ್ತಾ ಇದೆ. ಬಂದ ದಾರಿ ಒಂದು ಗೆರೆ ಹಾಕಿದ ಹಾಗೇ ಇದೆ. ಆಕಸ್ಮಿಕವಾಗಿ ಈ ಸ್ಥಳಕ್ಕೆ ಬಂದಿದ್ದರೂ ಲಂಕೆಗಾಗೇ ಬಂದ ಹಾಗೇ ಇದೆ. ಭೂಮಿಯಲ್ಲಿ ಯಾವ ಕಡೆ ಬಂದಿದ್ದನೋ ಅದೇ ಮಾರ್ಗದಲ್ಲಿ ಆಕಾಶದಿಂದ ಹೋಗ್ತಾ ಇದೆ. ಇದು ಕಿಷ್ಕಿಂಧೆ, ಇದು ಸುಗ್ರೀವನ ನಗರಿ, ನಾನು ವಾಲಿಯನ್ನು ಸಂಹಾರ ಮಾಡಿದ್ದು ಇಲ್ಲೇ. ಅಲ್ಲಿಯವರೆಗೆ ಸೀತೆ ಮಾತಾಡಲಿಲ್ಲ. ಈಗ ಮಾತನಾಡಿದಳು,”ನನಗೆ ಸುಗ್ರೀವನ ಪತ್ನಿ ಮತ್ತು ವಾನರರ ಪತ್ನಿಯನ್ನು ನಾನು ನೋಡಬೇಕು.” ಅವರನ್ನು ಕರೆದುಕೊಂಡು ಅಯೋಧ್ಯೆಗೆ ಹೋಗಬೇಕು. ರಾಮ ಒಪ್ಪಿ, ಕಿಷ್ಕಿಂಧೆಯಲ್ಲಿ ವಿಮಾನವನ್ನು ಇಳಿಸಿ, ಸುಗ್ರೀವನಿಗೆ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಹೇಳಿದನಂತೆ. ಸುಗ್ರೀವ ಒಪ್ಪಿ ಮಹಲಿನೊಳಗೆ ಹೋಗಿ ತನ್ನ ಪತ್ನಿ ತಾರೆಗೆ ಎಲ್ಲರನ್ನೂ ಕರೆದುಕೊಂಡು ಬರಲು ಹೇಳಿದ. ನೀವೆಲ್ಲ ಅಯೋಧ್ಯೆಗೆ ಹೋಗಿ ಅವರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಬೇಕು ಎಂದು ಸೀತೆಯ ಅಪೇಕ್ಷೆ ಎಂದನಂತೆ. ಅವರನ್ನೆಲ್ಲ ಕರೆದುಕೊಂಡು ಸುಗ್ರೀವ ವಿಮಾನವನ್ನು ಏರಿದ. ಸೀತೆಯ ಕಾಳಜಿ ಅಂದ್ರೆ ನೋಡಿ. ಇಲ್ಲದಿದ್ದರೇ ಅವರನ್ನೆಲ್ಲ ಯಾರು ಕೇಳ್ತಾರೆ. ಅವರಿಗೆಲ್ಲ ಯೋಗ ನೋಡಿ.

ರಾಮ ಕಾಡಿಗೆ ಹೋದಾಗ, ಅಯೋಧ್ಯೆಯ ಸ್ತ್ರೀಯರು ಹೇಳ್ತಾರೆ, “ನಾವೆಲ್ಲ ಕಾಡಿಗೆ ಹೋಗುವ ರಾಮನ ಜೊತೆಗೇ ವಾಸ ಮಾಡುವ. ನಿಮ್ಮನ್ನೆಲ್ಲ ರಾಮ ನೋಡಿಕೊಳ್ತಾನೆ, ನಮ್ಮನ್ನೆಲ್ಲ ಸೀತೆ ನೋಡಿಕೊಳ್ತಾಳೆ.” ಅಯೋಧ್ಯೆಯಲ್ಲಿ ಹೆಣ್ಮಕ್ಕಳ ಯೋಗಕ್ಷೇಮವನ್ನು ಸೀತೆ ನೋಡಿಕೊಳ್ಳುತ್ತಿರಬಹುದು. ಅವರೆಲ್ಲ ವಿದ್ಯುಕ್ತವಾಗಿ ಅಲಂಕಾರ ಮಾಡಿಕೊಂಡು ಬಂದಿದ್ದರಂತೆ. ರಾಮಭದ್ರಾಚಾರ್ಯರು ಹಾಸ್ಯದಲ್ಲಿ ಯಾವಾಗಲೂ ಹೇಳೋರು, “ವಾನರರಿಗೆಲ್ಲ ಸೀತೆಯ ಬಗ್ಗೆ ಕುತೂಹಲ. ಎಷ್ಟು ಸುಂದರ ಇರಬಹುದು ಸೀತೆ ಎಂದು. ರಾಮನಂತವನು ಇಷ್ಟು ದುಃಖ ಪಡಬೇಕು, ಸಮುದ್ರಕ್ಕೆ ಸೇತುವೆ ಕಟ್ಟಬೇಕು ಅಂದ್ರೆ, ಸೀತೆ ಎಷ್ಟು ಸುಂದರಳಾಗಿರಬೇಕು” ನೋಡಿದಾಗ ತುಂಬಾ ನಿರಾಸೆ ಆಯಿತಂತೆ. ಮುಂದೆ ನೋಡಿದಾಗ ಸಮಾಧಾನ ಆಯಿತು ಆದರೆ ಆಕೆಯನ್ನು ಸುತ್ತಿ ನೋಡುವವರೆಗೆ ಅವರಿಗೆಲ್ಲ ನಿರಾಸೆ ಅಯಿತಂತೆ. ಅಂಗವಿಕಲೆ! ಬಾಲವೇ ಇಲ್ಲ ಸೀತೆಗೆ ಎಂದು” ಅದು ಅವರಿಗೆ ಸಹಜ, ಯಾಕೆಂದ್ರೆ ಅವರ ಸೌಂದರ್ಯದ ಕಲ್ಪನೆ ಹಾಗೆ.

ಮುಂದೆ ಋಷ್ಯಮೂಕ ಪರ್ವತದ ದರ್ಶನ ಆಯಿತು. ಇಲ್ಲಿ ನನ್ನ ಮತ್ತು ಸುಗ್ರೀವನ ಸಮಾಗಮ ಆಯಿತು. ನಾವಿಬ್ಬರೂ ಸಖರಾಗಿ ಒಪ್ಪಂದ ಮಾಡಿಕೊಂಡದ್ದು ಇಲ್ಲೇ. ವಾಲಿಯನ್ನು ಸಂಹಾರ ಮಾಡಿ ಕಪಿರಾಜನಾಗಿ ಮಾಡಬೇಕು ಮತ್ತು ಸುಗ್ರೀವ ಸೀತೆಯನ್ನು ಹುಡುಕುವುದಕ್ಕೆ ಪಡೆಯುವುದಕ್ಕೆ ಸಹಾಯ ಮಾಡಬೇಕು ಎಂದು ಒಪ್ಪಂದ ಮಾಡಿದ್ದೆವು. ಪಂಪಾಸರೋವರವನ್ನು ತೋರಿಸಿ, ರಾಮ ಹೆಳ್ತಾನೆ, “ಇದು ಪಂಪೆ. ಇಲ್ಲಿ ನಾನು ನಿನಗಾಗಿ ಇನ್ನಿಲ್ಲದಂತೆ ವಿಲಪಿಸಿದೆ.” “ನಿನಗಾಗಿ” ಎನ್ನುವ ಶಬ್ದ ರಾಮ ಮತ್ತೆ ಮತ್ತೆ ಬಳಸುತ್ತಾ ಇದ್ದಾನೆ. ಯಾಕೆಂದ್ರೆ ನಿನ್ನೆ ಹೇಳಿದ್ದನ್ನು ಪರಿಷ್ಕಾರ ಮಾಡ್ತಾ ಇದ್ದಾನೆ ರಾಮ. ಸೀತೆಯ ಮನಸ್ಸಿನಲ್ಲಿ ನಿಜ ಯಾವುದು ಎನ್ನುವುದನ್ನು ತೋರಿಸ್ತಾ ಇದ್ದಾನೆ. ಈ ಪಂಪೆಯ ತೀರದಲ್ಲಿ ಶಬರಿಯನ್ನು, ಬ್ರಹ್ಮಚಾರಿಣಿ, ಕಂಡೆ ಮತ್ತು ಅವಳು ಮುಕ್ತಿಯನ್ನು ಪಡೆದಳು. ಸ್ವಲ್ಪ ಮುಂದೆ ಹೋದಾಗ ಹೇಳಿದ ಇದು ಕಬಂಧನ ಸಂಹಾರ ಮಾಡಿದ ಸ್ಥಾನ. ಕಬಂಧನೇ ದಾರಿ ತೋರಿಸಿದ್ದು. ಅಲ್ಲಿಂದ ಮುಂದಕ್ಕೆ ವಿಮಾನ ಹೋದಾಗ, ಜನಸ್ಥಾನದ (ಈಗ ಅದು ಪಂಚವಟಿ) ಬಳಿಯಲ್ಲಿ ಇರುವ ಮರವನ್ನು ತೋರಿಸಿ ಹೇಳಿದ ಇಲ್ಲೇ ಜಟಾಯು ಮತ್ತು ರಾವಣನ ಘೋರ ಯುದ್ಧವಾದದ್ದು, ನಿನಗಾಗಿ. ನೀಚ ರಾವಣನಿಗೂ ಮಹಾತ್ಮನಾದ ಜಟಾಯುವಿಗೂ ಇಲ್ಲಿ ಮಹಾಯುದ್ಧ ಏರ್ಪಟ್ಟಿತ್ತು, ನಿನಗಾಗಿ. ಅಲ್ಲೇ ಪಕ್ಕದಲ್ಲಿ ಖರದೂಷಣರ ಯುದ್ಧ. ರಾಮನು ಏಕಾಂಗಿಯಾಗಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಖರದೂಷಣರನ್ನು ಒಂದುವರೆ ಮುಹೂರ್ತದಲ್ಲಿ ಧ್ವಂಸ ಮಾಡಿದ್ದನೋ ಆ ಖರದೂಷಣರ ಯುದ್ಧ ಭೂಮಿ. ಅದಾಗಿ ರಾಮಾಶ್ರಮ, ಪರ್ಣಶಾಲೆ. ಸುತ್ತ ವನ. ಇದು ನಮ್ಮ ಪರ್ಣಶಾಲೆ. ಅಲ್ಲಿಂದ ಎಲ್ಲವೂ ಸೀತೆಗೆ ಗೊತ್ತು. ಆ ಪರ್ಣಶಾಲೆಯನ್ನು ತೋರಿಸಿ, ನೋಡು ಇದು ಲಕ್ಷ್ಮಣ ಕಟ್ಟಿದ ಪರ್ಣಶಾಲೆ. ಇಲ್ಲಿ ಅನೇಕ ಕಾಲ ಸುಖವಾಗಿ ಇದ್ದೆವು. ಇಲ್ಲಿಂದ ತಾನೇ ರಾವಣ ನಿನ್ನನ್ನು ಬಲಾತ್ಕಾರವಾಗಿ ಕರೆದೊಯ್ದದ್ದು. ಪಕ್ಕದಲ್ಲೇ ಗೋದಾವರಿ ನದಿ. ಇಲ್ಲಿ ನಾವು ಸ್ನಾನ ಮಾಡ್ತಾ ಇದ್ದದ್ದು. ಅಲ್ಲಿಂದ ಮುಂದಕ್ಕೆ ಅಗಸ್ತ್ಯ ಆಶ್ರಮ, ಅಲ್ಲಿಂದ ಪಂಚವಟಿಗೆ ಬಂದದ್ದು, ಅದನ್ನು ತೋರಿಸ್ತಾನೆ. ಬಳಿಕ ಸುಕೀಶ್ರಾಮ, ಶರಭಂಗ ಆಶ್ರಮ, ಅಲ್ಲಿ ಇಂದ್ರ ದೇವತೆಯರೊಟ್ಟಿಗೆ ಬಂದಿದ್ದ. ಅಲ್ಲಿಂದ ಮುಂದೆ ವಿರಾಧವಧ ಆಗಿರತಕ್ಕಂತಹ ಸ್ಥಳ. ಅಲ್ಲಿಂದ ಮುಂದೆ ಅತ್ರಿಯ ಆಶ್ರಮ. ಅತ್ರಿ ಅನಸೂಯರ ಸ್ಥಾನ. ನಿನಗೆ ದಿವ್ಯವಾದ ಅನುಲೇಪನವನ್ನು, ವಸ್ತ್ರವನ್ನು, ಆಭರಣಗಳನ್ನು ಕೊಟ್ಟಿದ್ದಳು.

ಮತ್ತೂ ಮುಂದಕ್ಕೆ ಬಂದಾಗ ಚಿತ್ರಕೂಟ, ನೋಡು ಚಿತ್ರಕೂಟ ಪರ್ವತ ಹೇಗೆ ಶೋಭಿಸ್ತಾ ಇದೆ. ನಮ್ಮ ಪೂರ್ವ ನಿವಾಸ. ನನ್ನನ್ನು ಒಲಿಸಿ ಪುನಃ ಅಯೋಧ್ಯೆಗೆ ಕರೆದುಕೊಂಡು ಹೋಗಲಿಕ್ಕೆ ಇಲ್ಲಿ ತಾನೇ ಭರತ ಬಂದಿದ್ದು. ಅದಾಗಿ ಯಮುನಾ ನದಿ ಕಾಣಿಸುತ್ತದೆ, ಅದರ ಬದಿಗೆ ಭರದ್ವಾಜ ಆಶ್ರಮ. ಅಯೋಧ್ಯೆಯಿಂದ ಬಂದಾಗ ಭರದ್ವಾಜ ಆಶ್ರಮದಲ್ಲೇ ತಂಗಿದ್ದು. ಅಯೋಧ್ಯೆಯಿಂದ ಹೊರಟು ಮೊದಲಿನ ರಾತ್ರಿ ತಮಸಾ ತೀರದಲ್ಲಿ, ಮರುದಿನ ಕಾಡಿನಲ್ಲಿ ಮೂರನೇ ರಾತ್ರಿ ಭರದ್ವಾಜ ಆಶ್ರಮದಲ್ಲಿ. ಅಲ್ಲಿಂದ ಮುಂದೆ ಗಂಗೆ, ಗುಹನ ರಾಜಧಾನಿ, ಶೃಂಗಬೇರಪುರ. ಅದು ಆಗುತ್ತಿದ್ದಂತೆ, ಸರಯೂ ನದಿ. ವ್ಯೂಪಮಾಲಿನಿ, ಸಾಲಾಗಿ ವ್ಯೂಪಗಳಿವೆ ಅಂದ್ರೆ ಯಜ್ಞಶಾಲೆಗಳಿವೆ. ಯಜ್ಞ ಮಾಡಿದಲ್ಲಿ ವ್ಯೂಪಗಳನ್ನು ನೆಡುತಾರೆ. ಎಷ್ಟೋ ಯಜ್ಞಗಳು ಸರಯೂ ತೀರದಲ್ಲಿ ಆಗಿವೆ ಅವುಗಳ ಕುರುಹು ಉಳಿದುಕೊಂಡಿದೆ. ವ್ಯೂಪಮಾಲಿನಿಯಾದ ಸರಯೂ ನದಿ ನೋಡು. ಅಲ್ಲಿಂದ ಮುಂದಕ್ಕೆ ಅಯೋಧ್ಯೆ, ನನ್ನ ತಂದೆ ದಶರಥನ ರಾಜಧಾನಿ. “ವೈದೇಹಿ! ನೀನು ಮರಳಿ ಅಯೋಧ್ಯೆಗೆ ಬಂದೆ. ಹದಿನಾಲ್ಕು ವರ್ಷದ ಹಿಂದೆ ನೀನು ಹೊರಟಿದ್ದೆ ಪ್ರಣಾಮವನ್ನು ಮಾಡಿ, ಈಗಲೂ ಅಯೋಧ್ಯೆಗೆ ಪ್ರಣಾಮಗಳನ್ನು ಮಾಡು.” ಬರಿದಾದ ಅಯೋಧ್ಯೆ ಇಂದು ಶ್ರೀರಾಮನ ದರ್ಶನದಿಂದ ಹರ್ಷೋದ್ಗಾರ ಮಾಡೀತು”.

ಲಂಕೆಯಿಂದ ಹೊರಟ ಮೇಲೆ ರಾಮ ಸೀತೆಯನ್ನು ಬಿಟ್ಟು ಇನ್ಯಾರ ಜೊತೆಗೂ ಮಾತನಾಡಲಿಲ್ಲ. ಒಂದು ವರ್ಷದಲ್ಲಿ ಮಾತನಾಡುವುದು ಬಾಕಿ ಇತ್ತಲ್ಲ, ಒಂದೇ ಪ್ರಯಾಣದಲ್ಲಿ ಮುಗಿಸಿದ. ರಾಮ ಸೀತೆಗೆ ಇದು ಅಯೋಧ್ಯೆ ಎಂದು ಹೇಳುತ್ತಿದ್ದಂತೆ, ವಿಮಾನದಲ್ಲಿ ಇದ್ದವರೆಲ್ಲ, ವಿಭೀಷಣ, ಸುಗ್ರೀವ ಎಲ್ಲರೂ ಎದ್ದು ಬಿಟ್ಟರಂತೆ. ಎಲ್ಲರೂ ಅಯೋಧ್ಯೆಯನ್ನು ಬಗ್ಗಿ ಬಗ್ಗಿ ನೋಡಿದ್ದೇ ನೋಡಿದ್ದು. ನೋಡಿ ತಮ್ಮ ಕಣ್ಣನ್ನು ಧನ್ಯ ಮಾಡಿಕೊಂಡರು. ಎಲ್ಲರಿಗೂ ಕುತೂಹಲ ಯಾಕೆಂದ್ರೆ ರಾಮನ ಊರು ಎಂದು. ಕೌಸಲ್ಯೆ ಬಗ್ಗೆ, ಭರತನ ಬಗ್ಗೆ ಕುತೂಹಲ, ಗೌರವ. ಯಾಕೆಂದ್ರೆ ರಾಮ ನನ್ನವನು ಎಂದು ಆದಮೇಲೆ ಅವನಿಗೆ ಸಂಬಂಧ ಪಟ್ಟವರೆಲ್ಲರೂ ತಮ್ಮವರೇ. ಒಬ್ಬನನ್ನು ಒಪ್ಪಿಕೊಂಡರೇ ಅವನ ಪರಿವಾರವನ್ನೂ ಒಪ್ಪಿಕೊಳ್ಳಬೇಕು ಇಲ್ಲದಿದ್ದರೇ ಜಗಳ ಖಂಡಿತ. ರಾಮನ ಪರಿವಾರದವರನ್ನು, ವಾನರರು, ವಿಭೀಷಣ ಇವರೆಲ್ಲರೂ ಸ್ವೀಕಾರ ಮಾಡಿದ್ದಾರೆ. ಸಂತೋಷದಿಂದ ಅಯೋಧ್ಯೆಯನ್ನು ಕಣ್ತುಂಬಿಕೊಂಡರು. ನಮ್ಮ ನಿರೀಕ್ಷೆ ಏನು ಅಂದ್ರೆ, ರಾಮ ಅಯೋಧ್ಯೆಯಲ್ಲಿ ಇಳೀತಾನೆ ಎಂದು. ಅಲ್ಲ! ವಿಮಾನ ಕೊಂಚ ಹಿಂದಿರುಗಿತು. ಯಾಕೆಂದ್ರೆ ಇನ್ನೊಂದು ಪರೀಕ್ಷೆ ಆಗಬೇಕಾಗಿದೆ. ಅದು ಆದ ಮೇಲೆ ಅಯೋಧ್ಯೆ. ಆ ಇಡೀ ದಿವಸ ರಾಮ ಅಯೋಧ್ಯೆಯ ಪ್ರವೇಶ ಮಾಡಲಿಲ್ಲ. ಭಾವಾಮೃತದ ದರ್ಶನವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments Box