ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
(ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ)
ರಾಜ್ಯವೋ? ಸತ್ಯವೋ? ಯಾವುದಾದರೂ ಒಂದನ್ನ ಆರಿಸಿಕೊಳ್ಳಬೇಕು ಎನ್ನುವ ಸಂದರ್ಭ ಬಂದಾಗ ರಾಮನು ರಾಜ್ಯತ್ಯಾಗ ಮಾಡಿದ. ಸತ್ಯವನ್ನು ಆರಿಸಿಕೊಂಡ. ಯಾಕೆಂದರೆ ಸತ್ಯವು ಸತ್ಯ. ಯಾವುದಕ್ಕೆ ಮೂರು ಕಾಲದಲ್ಲಿಯೂ ಬಾಧೆ ಇಲ್ಲವೋ ಅದಕ್ಕೆ ಸತ್ಯ ಎಂಬುದಾಗಿ ಹೆಸರು. ಇತ್ತು, ಇದೆ ಮತ್ತು ಇರ್ತದೆ. ಅವಿನಾಶಿ ಅದು. ಶಾಶ್ವತ ಅದು. ಹಾಗಾಗಿ ಶಾಶ್ವತವಾದುದಕ್ಕಾಗಿ ಅಶಾಶ್ವತವಾದುದನ್ನು ತ್ಯಾಗ ಮಾಡಬೇಕು. ಅಶಾಶ್ವತವಾದುದಕ್ಕಾಗಿ ಶಾಶ್ವತವಾದುದನ್ನು ತ್ಯಾಗ ಮಾಡುವುದು ಜಾಣತನವಲ್ಲ. ಒಂದು ವೇಳೆ ತಾನೇ ಸತ್ಯವನ್ನು ತಪ್ಪಿ, ಮಾತನ್ನು ಮುರಿದು ರಾಜ್ಯವನ್ನು ಸ್ವೀಕಾರ ಮಾಡಿದರೆ ಪ್ರಜೆಗಳಿಗೆ ಏನು ಹೇಳಿದಂತೆ ಆಗ್ತದೆ? ಯಾವ ಮಾರ್ಗದರ್ಶನವನ್ನು ಕೊಟ್ಟಂತೆ ಆಗ್ತದೆ? ಎಂದೂ ಸತ್ಯವನ್ನು ಬಿಡದ ಕೋಸಲದ ಪ್ರಜೆಗಳಿಗೆ ನೀವು ಸುಳ್ಳನ್ನು ಹೇಳಬಹುದು ಎಂದಂತೆ ಆಗ್ತದೆ. ಅಲ್ಲವಾ? ಹಾಗಾಗಿ ಅಯೋಧ್ಯೆಯ ಚಕ್ರವರ್ತಿಯು, ದಶರಥನು ಪಟ್ಟದ ರಾಣಿಗೆ, ಮೂರು ಪಟ್ಟದ ರಾಣಿಯರ ಪೈಕಿ ಕಿರಿಯವಳಾಗಿರತಕ್ಕಂತಹ ಕೈಕೇಯಿಗೆ ಕೊಟ್ಟ ಮಾತೇನಿದೆ ಆ ಮಾತು ಮುರಿದು ಹೋಗಬಾರದು. ಹಾಗೆಯೇ ತಾನು ತನ್ನ ಚಿಕ್ಕತಾಯಿ ಕೈಕೇಯಿಗೆ ಮಾತು ಕೊಟ್ಟಿದಾನೆ: ನಿನ್ನ ಮಾತನ್ನ ನಾನು ನಡೆಸಿಕೊಡ್ತೇನೆ. ಅದೂ ಮುರಿದು ಹೋಗಬಾರದು ಎಂದು.
ರಾಜ್ಯ ಬೇಡ ಅಂತಲ್ಲ. ಸುಖ – ಭೋಗಗಳಿಗೆ ಬೇಡ. ಪಾರಂಪರಿಕವಾಗಿ ಬಂದಂತಹ ಕರ್ತವ್ಯಪಾಲನೆಗಾಗಿ ರಾಜ್ಯ ಬೇಕಾಗುವಂಥದ್ದು. ಅದು ಸತ್ಯದ ಮಾರ್ಗದಲ್ಲಿ ಬರಬೇಕು ಎನ್ನುವಂಥದ್ದು ತುಂಬಾ ಮುಖ್ಯವಾದದ್ದು ರಾಮನಿಗೆ. ಹಾಗಾಗಿ ಹದಿನಾಲ್ಕು ವರ್ಷ ವನವಾಸ ಪೂರೈಸಿ ಬಂದ ಬಳಿಕವೂ ಭರತನು ಆ ಮಾತನ್ನು ರಾಮನಿಗೆ ಹೇಳಬೇಕಾಗಿ ಬರ್ತದೆ. ರಾಮನು ಸತ್ಯ ಪರಾಕ್ರಮ. ಅಂತಹ ರಾಮನನ್ನು ಕುರಿತು ತಲೆ ಮೇಲೆ ಕೈಮುಗಿದು ಭರತನು ಹೇಳ್ತಾನೆ – “ಅಣ್ಣಾ! ಮಾತು ನಡೆದಿದೆ. ನನ್ನ ನಿನ್ನ ತಂದೆಯು ನನ್ನ ತಾಯಿಗೆ ಕೊಟ್ಟ ಮಾತು ನಡೆದಿದೆ. (ಹದಿನಾಲ್ಕು ವರ್ಷ ರಾಮನು ವನವಾಸ ಮಾಡ್ಬೇಕು. ಭರತನಿಗೆ ರಾಜ್ಯ ಹೋಗಬೇಕು.) ದಶರಥನು ಕೈಕೇಯಿಗೆ ಕೊಟ್ಟ ಎರಡು ವರಗಳ ಪೈಕಿ ಒಂದನೆಯದನ್ನು ನೀನೇ ನಡೆಸಿದ್ದೀಯೆ. ಹದಿನಾಲ್ಕು ವರ್ಷದ ವನವಾಸವನ್ನು ಪೂರ್ತಿ ಮಾಡಿದೀಯೆ. ಇನ್ನೊಂದು ನಾನು ನಡೆಸಲಿಕ್ಕೆ ಇರುವಂಥದ್ದು. ಅದು ರಾಜ್ಯವು ಭರತನಿಗೆ ಹೋಗ್ಬೇಕು ಎನ್ನುವುದು. ರಾಜ್ಯವು ಭರತನಿಗೆ ಹೋಗಬೇಕು ಎಂಬುದಾಗಿ ಇದೆಯೇ ಹೊರತು, ಭರತನೇ ಯಾವಾಗಲೂ ರಾಜ್ಯವಾಳಬೇಕೆಂದೇನೂ ಇಲ್ಲ. ಸೂಕ್ಷ್ಮವನ್ನು ಗಮನಿಸಿ. ನನ್ನಮ್ಮನಿಗೆ ಏನು ಸಲ್ಲಬೇಕಿತ್ತೋ ಅದು ಸಂದಿದೆ. ಈ ರಾಜ್ಯವು ನನಗೆ ಕೊಡಲ್ಪಟ್ಟಿದೆ. ಪ್ರಾಪ್ತವಾದ ರಾಜ್ಯವನ್ನು ಹದಿನಾಲ್ಕು ವರ್ಷಗಳ ಕಾಲ ಕಾಪಾಡಿ ಹಾಗೆಯೇ ನಿನಗೆ ಸಮರ್ಪಣೆ ಮಾಡ್ತಾ ಇದ್ದೇನೆ. ಹೇಗೆ ನೀನು ತಂದೆಯ ಮಾತಿನಂತೆ ಈ ಸಮೃದ್ಧವಾಗಿರತಕ್ಕಂತಹ ಅಯೋಧ್ಯೆಯನ್ನು ನನಗೆ ಕೊಟ್ಟುಬಿಟ್ಟೆಯೋ ಅದೇ ರೀತಿಯಾಗಿ ನಾನು ಇದನ್ನು ನಿನಗೆ ಪ್ರತ್ಯರ್ಪಣೆ ಮಾಡ್ತಾ ಇದ್ದೇನೆ. ಸ್ವೀಕಾರ ಮಾಡು. ಯಾಕೆಂದರೆ ಯಾರು ಯಾವುದನ್ನು ಮಾಡಬೇಕೋ ಅವರೇ ಅದನ್ನು ಮಾಡ್ಬೇಕು. ಒಂದು ದೊಡ್ಡ ಎತ್ತು ಹೊರಬಹುದಾದ ಭಾರವನ್ನು ಕರು ತಾನು ಹೊರ್ತೇನೆ ಎಂಬುದಾಗಿ ಹೇಳಬಾರದು. ಹೆಗಲು ಮುರಿದು ಹೋದೀತು. ನೀನು ಮಹಾವೃಷಭವಾದರೆ ನಾನೊಂದು ಕರು. ನೀನು ಮಾಡಬೇಕಾದ ಕಾರ್ಯ ಇದು. ಇದು ಅಯೋಧ್ಯೆಯ ಭಾರ ಮಾತ್ರವಲ್ಲ, ಕೋಸಲದ ಭಾರ ಮಾತ್ರವಲ್ಲ, ವಿಶ್ವದ ಭಾರ. ಆ ಭಾರವನ್ನು ಹೊರಬೇಕಾದವನು ನೀನು ಹೊರತು ನಾನಲ್ಲ. ಹಾಗೆಯೇ ಹಂಸದ ಮಾರ್ಗವನ್ನು ಗರ್ದಭ ಅನುಸರಿಸಲಾರದು. ಇಲ್ಲ, ಈ ರಾಜ್ಯವನ್ನು ನಾನು ಕಾಪಾಡಲಾರೆ, ನೀನೇ ಕಾಪಾಡಬೇಕು. ಒಂದು ವೇಳೆ ಆಣೆಕಟ್ಟು ಮುರಿದು ಹೋದರೆ ನೀರನ್ನು ತಡೆಹಿಡಿಯಬಲ್ಲವರಾರು? ಯಾರಿಗೂ ಸಾಧ್ಯವಿಲ್ಲ. ಹಾಗೊಂದು ವೇಳೆ ಸಾಧ್ಯವಿದ್ದರೆ ಅಘಟಿತ ಘಟನೆಯನ್ನು ಮಾಡಬಲ್ಲಂತಹ ರಾಮನಿಗೆ ಮಾತ್ರ ಸಾಧ್ಯ. ಹಾಗೇ ನೀನೊಂದು ಆಣೆಕಟ್ಟು, ನೀನಿಲ್ಲವಾದರೆ ಈ ರಾಜ್ಯವನ್ನು ಯಾರೂ ಕೂಡ ರಕ್ಷಣೆ ಮಾಡೋದಕ್ಕೆ ಸಾಧ್ಯವಿಲ್ಲ. ನಾನು ಮಾಡಿದ್ದರೂ ನಿನ್ನ ತಪಸ್ಸಿನಿಂದ, ನಿನ್ನ ತೇಜಸ್ಸಿನಿಂದ, ನಿನ್ನ ಪ್ರಭಾವದಿಂದ. ಹಾಗಾಗಿ ಈ ರಾಜ್ಯವನ್ನು ಯಾರಾದರೂ ಕಾಪಾಡುವುದಾದರೆ ನೀನೇ ಕಾಪಾಡುವಂಥದ್ದು. ಎಂಬುದಾಗಿ ಹೇಳ್ತಾನೆ ಭರತ.
ಇನ್ನೊಂದು ಉದಾಹರಣೆ ಕೊಡ್ತಾನೆ. ಮನೆಯ ಹೂದೋಟದಲ್ಲಿ ಒಂದು ಮಹಾವೃಕ್ಷವನ್ನು ನಾವು ನೆಟ್ಟು ಬೆಳೆಸ್ತೇವೆ. ನೆಡುವುದು ಬೀಜವನ್ನು. ನೆಟ್ಟ ಬೀಜ ಅಂಕುರಿಸಿ ಹೊರಗೆ ಬರ್ತದೆ. ಗಿಡವಾಗ್ತದೆ, ಮರವಾಗ್ತದೆ. ರೆಂಬೆಗಳು, ಶಾಖೆಗಳು, ಉಪಶಾಖೆಗಳು, ಅಸಂಖ್ಯಾತ ಎಲೆಗಳು, ಹೂವುಗಳು ಹೀಗೆ ಒಂದು ಚಿಕ್ಕ ಬೀಜವು ಮಹಾವೃಕ್ಷವಾಗಿ ಬೆಳೀತದೆ ಅಂದುಕೊಳ್ಳಿ. ಬೆಳೆಸುವವನು ಯಾತಕ್ಕೋಸ್ಕರ ಬೆಳೆಸ್ತಾ ಇರ್ತಾನೆ? ಒಂದು ದಿನ ಹಣ್ಣು ಕೊಡ್ತದೆ ಅದು. ಆ ಹಣ್ಣನ್ನು ನಾನು ಸವಿಯಬೇಕು. ಇದೇ ಕಾರಣ ತಾನೇ. ಹೀಗೆ ಹಣ್ಣಿನ ವೃಕ್ಷವೊಂದನ್ನು ಹಣ್ಣಿಗಾಗಿ ಯಾರಾದರೂ ನೆಟ್ಟು ಬೆಳೆಸಿದ್ರೆ ಆ ಬೀಜ ಅಂಕುರಿಸಿತು, ಬೆಳೆಯಿತು, ವೃಕ್ಷವಾಯಿತು, ಹೂ ಬಿಟ್ಟಿತು, ಹಣ್ಣು ಬಿಡದಿದ್ರೆ ಹೇಗೆ? ನೀನೊಂದು ಕಲ್ಪವೃಕ್ಷ. ಅಯೋಧ್ಯೆಯ ಅರಮನೆ, ಕೋಸಲ, ಮತ್ತು ಅನೇಕ ಮಹಾಪುರುಷರು, ಮಹಾತ್ಮರು, ತಮ್ಮ ತಪಸ್ಸನ್ನು ಧಾರೆಯೆರೆದು ರಾಮನೆಂಬ ಕಲ್ಪವೃಕ್ಷವನ್ನು ಬೆಳೆಸಿದಾರೆ. ಅದು ಅಂಕುರಿಸಿದೆ, ಗಿಡವಾಗಿದೆ, ಮರವಾಗಿದೆ, ಹೂವುಗಳೂ ಬಂದಿದೆ. ಇನ್ನು ಹಣ್ಣೊಂದು ಬರಲಿಕ್ಕೆ ಬಾಕಿ. ಆ ಹಣ್ಣು ಯಾವುದು? ರಾಮರಾಜ್ಯ. ಹಣ್ಣನ್ನು ವೃಕ್ಷ ಕೊಡದಿದ್ದರೆ ಹೇಗೆ? ಎಂಬುದಾಗಿ ಭರತನು ಒಂದು ರೀತಿಯಲ್ಲಿ ಕಟ್ಟಿ ಹಾಕ್ತಾನೆ. ಇಡೀ ಪ್ರಪಂಚಕ್ಕೆ ರಾಮವೃಕ್ಷದ ಫಲ ರಾಮರಾಜ್ಯವು ಪ್ರಾಪ್ತವಾಗಬೇಕಿದೆ. ಆ ಹಣ್ಣನ್ನು ನೀನು ಕೊಡದಿದ್ದರೆ ಹೇಗೆ? ಎಲ್ಲಿಯಾದರೂ ವೃಕ್ಷ ತನಗಾಗಿ ಹಣ್ಣು ಬಿಡ್ತದಾ? ತಾನು ಬಿಟ್ಟ ಹಣ್ಣನ್ನು ತಾನೇ ತಿನ್ತದಾ? “ಪರೋಪಕಾರಾಯ ಫಲಂತಿ ವೃಕ್ಷಾಃ” ಯಾವ ವೃಕ್ಷವೂ ಕೂಡ ತಾನು ಬಿಟ್ಟ ಹಣ್ಣನ್ನು ತಾನೇ ತಿಂದಿಲ್ಲ. ನೆಟ್ಟವರಿಗೆ ಕೊಟ್ಟಿದೆ. ಅಥವಾ ಪ್ರಾಣಿ-ಪಕ್ಷಿ-ಮೃಗಗಳಿಗೆ ಕೊಟ್ಟಿದೆ. ಹಾಗೆ ರಾಮಕಲ್ಪವೃಕ್ಷದ ಫಲವು ಪ್ರಪಂಚಕ್ಕೆ ಸಿಗ್ಬೇಕಾಗ್ತದೆ. ಹಾಗಾಗಬೇಕು ಅಂದ್ರೆ ನೀನು ಸಿಂಹಾಸನವನ್ನು ಏರ್ಬೇಕು. ನಾವೆಲ್ಲ ನಿನ್ನ ಭಕ್ತರು, ಭೃತ್ಯರು. ಆ ಸ್ಥಾನ ನಮಗೆ ತುಂಬಾ ಹಿತವಾಗಿದೆ. ಈ ರಾಜ, ರಾಜಾಧಿರಾಜ ಎಲ್ಲಾ ಬೇಡ ನಮ್ಗೆ. ನನ್ನ ಸಿಂಹಾಸನ ಯಾವುದು? ನಾನು ಕೇಳಬೇಕಾದ ವರ ಯಾವುದು? ರಾಮ ಭಕ್ತ ಭರತ. ರಾಮ ಸೇವಕ ಭರತ. ಈ ಪದವಿ ನನಗೆ ಬೇಕಾಗುವಂಥದ್ದು. ಹಾಗಾಗಿ ಆ ಪದವಿಗಾಗಿ, ನಮಗಾಗಿ ನೀನು ಪಟ್ಟವನ್ನೇರಬೇಕು. ನೀನು ಅಯೋಧ್ಯೆಯ, ಸೂರ್ಯವಂಶದ ಅದ್ಭುತವಾದ ಸಿಂಹಾಸನವನ್ನೇರಬೇಕು, ರಾಜ್ಯಾಭಿಷೇಕವಾಗ್ಬೇಕು. ಅದನ್ನು ಜಗತ್ತು ನೋಡ್ಬೇಕು. ಪಟ್ಟಾಭಿಷೇಕವಾದಾಗ ನಿನಗೆ ತಂಪು. ಅದಕ್ಕಿಂತ ಮಿಗಿಲಾಗಿ ಪ್ರಪಂಚಕ್ಕೇ ತಂಪು. ಹಾಗಾಗಿ ಅಭಿಷೇಕದ ಧಾರೆಯಿಂದ ತೋಯ್ದ ನಿನ್ನನ್ನು ಪ್ರಪಂಚ ನೋಡ್ಬೇಕು. ತಂಪು ಮಾತ್ರವಲ್ಲ ಬೆಳಕು ಕೂಡಾ ಹೌದು. ಸೂರ್ಯಸಿಂಹಾಸನವನ್ನು ಏರಿದರೆ ಮತ್ತೊಂದು ಸೂರ್ಯನಂತೆ ಕಂಗೊಳಿಸ್ತೀಯೆ. ನಿನ್ನ ಪ್ರಭೆ ಇಡೀ ಪ್ರಪಂಚವನ್ನು ಬೆಳಗ್ತದೆ. ಮಧ್ಯಾಹ್ನದ ಹೊತ್ತಿನಲ್ಲಿ ದೀಪ್ತತೇಜಸನಾದ ಸೂರ್ಯನಂತೆ ಇಡೀ ಜಗತ್ತನ್ನ ಬೆಳಗಬೇಕು ನೀನು. ಪ್ರಾತಃಕಾಲದಲ್ಲಿ ನಿನ್ನ ಪ್ರಬೋಧ ಹೇಗಾಗಬೇಕು ಅಂದ್ರೆ ಮಂಗಳವಾದ್ಯಗಳಿಂದ ನೀನು ಎಚ್ಚೆತ್ತುಕೊಳ್ಬೇಕು. ನಿನ್ನ ದಿನ ಮಂಗಳವಾದರೆ ಪ್ರಪಂಚವೆಲ್ಲ ಮಂಗಲ. ಬ್ರಹ್ಮ ಸ್ತೋತ್ರ ಮಾಡುವಾಗ ಹೇಳಿದಾನೆ ಅಲ್ವಾ, ನೀನು ಕಣ್ಣು ಬಿಟ್ಟರೆ ಪ್ರಪಂಚಕ್ಕೆ ಅದು ಹಗಲು, ನೀನು ಕಣ್ಮುಚ್ಚಿದರೆ ಪ್ರಪಂಚಕ್ಕೆ ಅದು ರಾತ್ರಿ ಎಂದು. ಹಾಗಾಗಿ ನೀನು ಕಾಡಿನಲ್ಲಿ ಕಾಡುಪ್ರಾಣಿಗಳ ಶಬ್ಧದ ಮೂಲಕವಾಗಿ ಎಚ್ಚೆತ್ತುಕೊಳ್ಳುವುದಲ್ಲ, ಅದರ ಬದಲು ಅಯೋಧ್ಯೆಯ ಅರಮನೆಯ ಮಂಗಳವಾದ್ಯಗಳ ಮೂಲಕ ನಿನ್ನ ತಾಯಂದಿರ, ಸೀತೆಯ ಆಭರಣದ ಸದ್ದಿನ ಮೂಲಕವಾಗಿ ಎಚ್ಚೆತ್ತುಕೊಳ್ಬೇಕು ನೀನು. ಇಡೀ ಪ್ರಪಂಚಕ್ಕೆ ನಿನ್ನ ಆ ಧ್ವನಿ ಮಂಗಲವಾಗ್ಬೇಕು. ಅದಾಗ್ಬೇಕು ಅಂದ್ರೆ ನೀನು ರಾಜನಾಗ್ಬೇಕು. ಎಲ್ಲಿಯವರೆಗೆ ಅಂದ್ರೆ, ಎಲ್ಲಿಯವರೆಗೆ ಜ್ಯೋತಿಶ್ಚಕ್ರವು ಭ್ರಮಿಸ್ತಾ ಇರ್ತದೋ, ಎಲ್ಲಿವರೆಗೆ ಭೂಮಿ ಇದೆಯೋ ( ಸಮಸ್ತ ಭೂಮಂಡಲಕ್ಕೂ ಮತ್ತು ಭೂಮಿ ಯಾವ ಕಾಲದವರೆಗೆ ಇರ್ತದೋ ) ಅಲ್ಲಿಯವರೆಗೆ ನೀನು ದೊರೆಯಾಗ್ಬೇಕು ಎಂಬುದಾಗಿ ಇಷ್ಟು ದೀರ್ಘವಾಗಿ ಭರತ ರಾಮನನ್ನು ಪ್ರಾರ್ಥನೆ ಮಾಡಿಕೊಳ್ತಾನೆ. ರಾಮ ಒಂದೇ ಶಬ್ದದ ಉತ್ತರ ಕೊಡ್ತಾನೆ. “ತಥಾ”. ಕನ್ನಡದಲ್ಲಿ ಹಾಗೆಯೇ ಆಗಲಿ ಅಂತ.
ಇಷ್ಟು ಆಗುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಳು ಪ್ರಾರಂಭವಾದವು. ಶತ್ರುಘ್ನನು ದಿವಾಕೀರ್ತಿಗಳನ್ನ (ಕೇಶಪ್ರಸಾದನ ಮಾಡುವವರು) ಕರೆಸ್ತಾನೆ. ರಾತ್ರಿ ಆ ಕೆಲಸ ಮಾಡೋದಿಲ್ಲ, ಆ ಶಬ್ದವನ್ನೂ ಉಪಯೋಗಿಸಬಾರದಂತೆ. ಅವರೆಲ್ಲ ರಾಮನನ್ನು ಪೂಜೆ ಮಾಡಿದರು. ತಮ್ಮ ಉಪಕರಣಗಳ ಮೂಲಕವಾಗಿ ರಾಮನಿಗೊಂದು ಅದ್ಭುತವಾದ ಸೇವೆ ಮಾಡಿದರು. ಆದರೆ ರಾಮ ಹೇಗೆ ಅಂದ್ರೆ; ಮೊದಲು ಭರತನಿಗಾಗ್ಬೇಕಂತೆ, ನಂತರ ಲಕ್ಷ್ಮಣನಿಗಾಗ್ಬೇಕಂತೆ, ನಂತರ ಸುಗ್ರೀವನಿಗಾಗ್ಬೇಕಂತೆ, ವಿಭೀಷಣನಿಗೂ ಆಗ್ಬೇಕು ಎಲ್ಲರಿಗೂ ಆದ್ಮೇಲೆ ತಾನು ಮಾಡಿಸಿಕೊಂಡ. ಅದು ರಾಮ. ಸೀತೆಯೊಡನೆ ತನ್ನ ವಿವಾಹವಾಗ್ಬೇಕಾದ್ರೆ ಮುರಿದ ಅಹಲ್ಯಾ ಗೌತಮರ ದಾಂಪತ್ಯ ಕೂಡ್ಬೇಕು. ತಾನು ಚಕ್ರವರ್ತಿಯಾಗುವ ಮೊದಲು ವಾನರ ಚಕ್ರವರ್ತಿಯಾಗಿ ಸುಗ್ರೀವನಿಗೆ ಪಟ್ಟಾಭಿಷೇಕವಾಗ್ಬೇಕು. ತಾನೇ ಮುಂದೆ ನಿಂತು ಮಾಡಿಸ್ತಾನೆ. ರಾಕ್ಷಸ ಚಕ್ರವರ್ತಿಯಾಗಿ ವಿಭೀಷಣನಿಗೆ ಪಟ್ಟಾಭಿಷೇಕವಾಗ್ಬೇಕು. ಎರಡೂ ಆದ್ಮೇಲೆ ತನಗೆ. ಮೊದಲು ಸೇವಕರಿಗೆ ಆಮೇಲೆ ತನಗೆ. ಧರ್ಮಶಾಸ್ತ್ರದಲ್ಲಿಯೂ ಹಾಗೆ ಇದೆ. ನಿತ್ಯ ಯಜಮಾನ, ಯಜಮಾನಿಯ ಊಟ ಮಾಡ್ಬೇಕಾದ್ರೆ ಮೊದಲು ಆಳುಕಾಳುಗಳ ಊಟವಾಗ್ಬೇಕಂತೆ. ರಾಮನು ಜೀವನದಲ್ಲಿ ಅದನ್ನ ಜಾರಿಗೆ ತಂದಿದಾನೆ. ಹಾಗಾಗಿ ಅವರಿಗೆಲ್ಲ ಆದಮೇಲೆ ರಾಮನ ಕೇಶವನ್ನು ಪ್ರಸಾಧನಗೊಳಿಸಲಾಯಿತು. ಜಟೆಯನ್ನು ಬಿಡಿಸಿ, ಅದಕ್ಕೆ ಕೊಡಬೇಕಾದ ಎಲ್ಲಾ ಸಂಸ್ಕಾರಗಳನ್ನು ಕೊಟ್ಟು, ಬಳಿಕ ವ್ರತಸ್ನಾನವನ್ನು ಮಾಡಿ ಆತನನ್ನು ಉತ್ತಮೋತ್ತಮವಾದ ಅನುಲೇಪನಗಳಿಂದ ಲೇಪಿಸಿದರು. ಅದರ ಬಳಿಕ ಒಳ್ಳೊಳ್ಳೆ ಮಾಲೆಗಳನ್ನ ಹಾಕ್ತಾರೆ. ಬಳಿಕ ರಾಜಯೋಗ್ಯವಾದ, ಇಕ್ಷ್ವಾಕು ವಂಶಕ್ಕೂ, ಇಕ್ಷ್ವಾಕು ವಂಶದ ರಾಜನಿಗೂ ಸಲ್ಲಬಹುದಾಗಿರತಕ್ಕಂತಹ ಉತ್ತಮೋತ್ತಮವಾದ ಪಟ್ಟ ವಸ್ತ್ರವನ್ನು ಧಾರಣೆ ಮಾಡ್ತಾನೆ ರಾಮ. ಆಗ ಲಕ್ಷ್ಮಿಯಂತೆ ಕಂಗೊಳಿಸಿದ. ಸೀತೆಯೂ ಲಕ್ಷ್ಮಿಯೇ, ರಾಮನ ರಾಜಶೋಭೆಯೂ ಲಕ್ಷ್ಮಿಯಂತೆ. ತನ್ನ ಸಿರಿಯಿಂದ ಕಂಗೊಳಿಸಿದನು ರಾಮ.
ಮೊದಲು ರಾಮ ಹೇಗೆ ತಪಸ್ವಿ ವೇಷದಲ್ಲಿ ಕಂಗೊಳಿಸ್ತಾ ಇದ್ದನೋ, ಹಾಗೇ ತುಂಬಾ ಶೋಭಾಯಮಾನವಾಗಿ ಈಗ್ಲೂ ಕಾಣ್ತಾ ಇದ್ದಾನೆ. ಆದರೆ ಅದು ಬೇರೆ ಶೋಭೆ, ಇದು ಬೇರೆ ಶೋಭೆ. ಬಳಿಕ ಸೀತೆಗೆ ಮನೋಹರವಾದ ಅಲಂಕಾರವನ್ನು ದಶರಥನ ಪತ್ನಿಯರು ತಾವೇ ಕೈಯಾರೆ ಮಾಡಿದರು. ಆಮೇಲೆ ವಾನರ ನಾರಿಯರಿಗೆಲ್ಲ ಕೌಸಲ್ಯೆ ತಾನೇ ಮುಂದೆ ನಿಂತು ಅಲಂಕಾರ ಮಾಡಿಸ್ತಾಳೆ. ಏತನ್ಮಧ್ಯೆ, ಶತ್ರುಘ್ನನು ರಾಮನ ರಥವನ್ನು ಸಜ್ಜುಗೊಳಿಸಿದ್ದಾನೆ. ಯಾಕಂದ್ರೆ, ನಂದಿಗ್ರಾಮದಿಂದ ಅಯೋಧ್ಯೆಯ ವರೆಗಿನ ಒಂದು ಕ್ರೋಶವನ್ನು ರಾಮನು ಪ್ರಯಾಣ ಮಾಡ್ಬೇಕಿದೆ. ಪ್ರಧಾನ ಮಂತ್ರಿಯೂ, ಪ್ರಧಾನ ಸಾರಥಿಯೂ ಆದ ಸುಮಂತ್ರನು ಸರ್ವಾಂಗ ಶೋಭಾಯಮಾನವಾದ ರಾಜರಥವನ್ನು ಅಣಿಗೊಳಿಸಿ ತಂದ. ದಿವ್ಯವಾದ, ಸೂರ್ಯಮಂಡಲದಂತಿದ್ದ, ಈ ಭೂಮಿಯಲ್ಲೇ ಸರ್ವಶ್ರೇಷ್ಠ ಅನ್ನತಕ್ಕಂತ ಉತ್ತಮೋತ್ತಮವಾದ, ತನಗೆ ಸಲ್ಲುವ ರಥವನ್ನು ಆ ಸತ್ಯಪರಾಕ್ರಮ, ಮಹಾಬಾಹು ರಾಮನು ಏರಿದನು. ರಾಮನ ರಥದ ಹಿಂದೆ ಮಂಗಲಸ್ನಾನ ಮಾಡಿ, ಅಯೋಧ್ಯೆಯಿಂದ ಕೊಟ್ಟ ವಸ್ತ್ರ, ಕುಂಡಲಗಳನ್ನೂ ಧರಿಸಿ ಶೋಭಾಯಮಾನವಾಗಿ ಸುಗ್ರೀವ ಹನುಮಂತರು ಬರ್ತಾ ಇದ್ದಾರೆ. ಏತನ್ಮಧ್ಯೆ ಅಲಂಕೃತಳಾದ ಸೀತೆಯು ವಾನರ ನಾರಿಯರ ಜೊತೆ ಅಯೋಧ್ಯೆಯನ್ನು ನೋಡ್ಲಿಕ್ಕೆ ಮತ್ತು ತೋರಿಸ್ಲಿಕ್ಕೆ ಹೊರಟಳು.
ಅತ್ತ ಅಯೋಧ್ಯೆಯಲ್ಲಿ ಮಂತ್ರಾಲೋಚನೆ ಪ್ರಾರಂಭವಾಗಿದೆ. ಅಷ್ಟ ಸಚಿವರು ಸೇರ್ಕೊಂಡಿದ್ದಾರೆ. ವಸಿಷ್ಠ, ವಾಮದೇವ, ಕಾಶ್ಯಪ, ಜಾಬಾಲಿ ಮೊದಲಾದ ಋಷಿಮುನಿಗಳೂ ಇದ್ದಾರೆ. ರಾಮನಿಗಾಗಿ, ರಾಜಧಾನಿಯ ಅಭಿವೃದ್ಧಿಗಾಗಿ ಚಿಂತನೆ ನಡೆಸಿದ್ರು. ರಾಮನ ಪಟ್ಟಾಭಿಷೇಕ ಹೇಗೆ ಆಗ್ಬೇಕು? ಅಯೋಧ್ಯೆ ಹೇಗೆ ಒದಗಿ ಬರ್ಬೇಕು? ಎನ್ನುವ ಕುರಿತು ಆಲೋಚನೆಗಳನ್ನು ಅಯೋಧ್ಯೆಯ ಮಂತ್ರಿಗಳು ಪುರೋಹಿತರನ್ನು ಮುಂದಿಟ್ಟುಕೊಂಡು ಮಾಡ್ತಾ ಇದ್ದಾರೆ. ವಸಿಷ್ಠರು ಈ ಎಲ್ಲ ಕಾರ್ಯಕ್ರಮಗಳನ್ನು ನಿರ್ವಹಿಸಿಕೊಡಬೇಕೆಂದು ತೀರ್ಮಾನವಾಯ್ತು ಕೊನೆಯದಾಗಿ. ಮತ್ತೆ, ರಾಮ ಬರುವ ಚಂದವನ್ನು ನೋಡಲು ತವಕವುಳ್ಳವರಾಗಿ ಧಾವಿಸಿದ್ದಾರೆ ನಂದಿಗ್ರಾಮದ ಕಡೆಗೆ. ಅತ್ತ ರಾಮನು ಶ್ರೇಷ್ಠವಾದ, ತನ್ನ ಪ್ರೀತಿಯ ಕುದುರೆಗಳನ್ನು ಕಟ್ಟಿರತಕ್ಕಂತ, ರಥವನ್ನೇರಿ ಅಯೋಧ್ಯೆಯ ಕಡೆ ಪ್ರಯಾಣ ಮಾಡತಾ ಇದ್ದಾನೆ. ಆ ಸಮಯದಲ್ಲಿ ಭರತನೇ ರಾಮನ ಸಾರಥ್ಯವನ್ನು ಮಾಡ್ತಾನೆ. ಶತ್ರುಘ್ನ ಶ್ವೇತಚ್ಛತ್ರವನ್ನು ಹಿಡ್ಕೊಳ್ತಾನೆ. ಹಾಗೇ ಚಾಮರ-ವ್ಯಜನಗಳಲ್ಲಿ ಒಂದು ವ್ಯಜನವನ್ನು ಲಕ್ಷ್ಮಣ ಹಿಡ್ಕೊಂಡು ಬೀಸ್ತಾ ಇದ್ದಾನೆ. ಇನ್ನೊಂದು ವ್ಯಜನವನ್ನು ವಿಭೀಷಣ ಹಿಡ್ಕೊಂಡ. ಆಕಾಶದಲ್ಲಿ ದೇವತೆಗಳು, ಋಷಿಗಳು ರಾಮನ ಸ್ತೋತ್ರ ಮಾಡ್ತಾ ಇದ್ದಾರೆ.
ಏತನ್ಮಧ್ಯೆ ಸುಗ್ರೀವನು ರಾಮನ ಪಟ್ಟದ ಆನೆಯನ್ನು ಏರ್ತಾನೆ. ಅಯೋಧ್ಯೆಯಲ್ಲಿ 9,000 ಯುದ್ಧದ ಆನೆಗಳಿವೆ! ಎಲ್ಲವನ್ನೂ ಒಂದೊಂದು ಕಪಿನಾಯಕರು ಏರ್ಕೊಂಡಿದ್ದಾರೆ. ರಾಮನು ಅವರನ್ನು ತನಗಿಂತ ಮೇಲೆ ಕೂರಿಸಿದ್ದಾನೆ. ಕಪಿಗಳೆಲ್ಲರೂ ಸಂಕೋಚದಿಂದ ಮನುಷ್ಯ ರೂಪ ಧಾರಣೆ ಮಾಡಿದ್ರಂತೆ. ಶಂಖನಾದ, ಭೇರಿ ನಾದ, ಮಂಗಲವಾದ್ಯಗಳ ಘೋಷ, ಇವೆಲ್ಲದರ ನಡುವೆ ಪ್ರಾಸಾದ ಮಾಲೆಯಿಂದ ಶೋಭಿತವಾದಂತಹ ಅಯೋಧ್ಯೆಯ ಕಡೆಗೆ ರಾಮನು ಹೋಗ್ತಾ ಇದ್ದಾನೆ. ಅಯೋಧ್ಯೆಯ ಪ್ರಜೆಗಳು ರಾಮನನ್ನು ನೋಡ್ತಾರೆ, ಸ್ವಾಗತ ಮಾಡ್ಲಿಕ್ಕೆ ಬಳಗ ಸಹಿತವಾಗಿ ಓಡಿ ಬರ್ತಾ ಇದ್ದಾರೆ. ಇಡೀ ತನ್ನ ಪರಿವಾರ ಸಮೇತನಾಗಿ ರಾಮನು ಅಯೋಧ್ಯೆಯ ಕಡೆಗೆ ಬರ್ತಾ ಇದ್ರೆ, ನೋಡಿ ಕಣ್ತುಂಬಿಸಿಕೊಂಡರು ಅಯೋಧ್ಯಾವಾಸಿಗಳು. ಆಮೇಲೆ ಮೆರವಣಿಗೆಯಲ್ಲಿ ಜೊತೆ ಸೇರಿಕೊಳ್ತಾರೆ. ಬಂದು ಅಭಿನಂದಿಸಿದ ಒಬ್ಬೊಬ್ಬರನ್ನೂ ಮಾತನಾಡಿಸ್ತಾನೆ ರಾಮ. ಸಂತೋಷವಾಗಿದ್ದಾರೆ ಎಲ್ರೂ ಕೂಡ. ರಾಮನ ಮುಂದೆ ಮಂಗಲಾರ್ಥವಾಗಿ ಅಕ್ಷತೆ, ಬಂಗಾರ ಹಿಡ್ಕೊಂಡು ಹೋಗ್ತಿದ್ರು, ಮಂತ್ರೋಚ್ಛಾರಣೆ ಮಾಡ್ತಿದ್ರು, ಮೋದಕವನ್ನು ಕೈಯಲ್ಲಿ ಹಿಡ್ಕೊಂಡ ಪ್ರಜೆಗಳು, ಬ್ರಾಹ್ಮಣರು, ಕನ್ಯೆಯರು, ಗೋವುಗಳು ಇವರೆಲ್ಲ ಮುಂದಕ್ಕೆ ಹೋಗ್ತಾರೆ.
ಪ್ರಯಾಣ ಮಾಡ್ತಾ ಇರುವಾಗಲೇ ರಾಮನು ತನ್ನ ಕಥೆಯನ್ನೆಲ್ಲ ಹೇಳಿದ್ನಂತೆ ಅಕ್ಕಪಕ್ಕ ಇರುವವರಿಗೆ. ವಾನರಸೇನೆಯ ಸೇವೆಯ ಬಗ್ಗೆ; ಹನುಮಂತನ ಕಾರ್ಯಗಳನ್ನು ಅವಶ್ಯವಾಗಿ ಹೇಳಿದನಂತೆ ರಾಮ. ಆಮೇಲೆ ವಿಭೀಷಣನ ಶರಣಾಗುವಿಕೆ, ಸೇವೆ ಎಲ್ಲ ಕಥೆ ಹೇಳ್ತಾ ಇದ್ದಾನೆ. ಎಲ್ಲರಿಗೂ ಆಶ್ಚರ್ಯ. ಅಯೋಧ್ಯೆಯಿಂದ ಒಂದು ಚಿಕ್ಕಾಸನ್ನೂ ಒಂದು ಸೈನಿಕನನ್ನೂ ತಗೊಳ್ಳಲಿಲ್ಲ, ಲಂಕೆಯನ್ನು ಗೆದ್ದ, ಚಿಕ್ಕಾಸನ್ನೂ ತೆಗೆದುಕೊಳ್ಲಿಲ್ಲ, ಅದು ರಾಮ. ಈ ಅದ್ಭುತ ಸಾಹಸಕಾರ್ಯಗಳ ಕಥೆ ಹೇಳ್ತಾ ಇರುವಾಗಲೇ ಆ ಮಹಾತೇಜಸ್ವಿಯು ಅಯೋಧ್ಯೆಯನ್ನು ಪ್ರವೇಶಿಸ್ತಾನೆ. ಸುತ್ತ ವಾನರರಿದ್ದಾರೆ. ಅಯೋಧ್ಯೆ ಹೃಷ್ಟ-ಪುಷ್ಟ ಜನರಿಂದ ತುಂಬಿದೆ. ರಾಮನು ಒಳ ಬರುತ್ತಿದ್ದಂತೆಯೇ ಇಡೀ ಅಯೋಧ್ಯೆಯಲ್ಲಿ ಧ್ವಜಪತಾಕೆಗಳೆದ್ದವು ರಾಮನ ಗೌರವಾರ್ಥವಾಗಿ. ಹೀಗೆ, ನಗರ ಮಧ್ಯದಲ್ಲಿ ಮೆರವಣಿಗೆ ಮಾಡಿ ರಾಮನು ತನ್ನ ತಂದೆಯ ಮನೆ(ರಾಜಗೃಹ)ಯನ್ನು ಪ್ರವೇಶ ಮಾಡ್ತಾನೆ.
ಮತ್ತೆ ಭರತನನ್ನು ಕರೆದು ವಸತಿಯ ವ್ಯವಸ್ಥೆ ಸಲುವಾಗಿ ರಾಮ ಹೇಳ್ತಾನೆ, ‘ನನ್ನ ಮನೆ(ರಾಮ ಭವನ)ಯನ್ನು ಸುಗ್ರೀವನಿಗೆ ಬಿಟ್ಟುಕೊಡು. ಅದಕ್ಕಿಂತ ಮೊದಲು ಕೌಸಲ್ಯೆ, ಕೈಕೇಯಿ, ಸುಮಿತ್ರೆಯರಿಗೆ ನನ್ನ ಪರಿವಾಗಿ ಅಭಿವಾಧನ ಮಾಡು’ ಎಂಬುದಾಗಿ ಹೇಳಿ ರಾಮನು ತನ್ನ ಕಾರ್ಯದಲ್ಲಿ ಮುಂದುವರೀತಾನೆ. ಭರತನು ಸುಗ್ರೀವನ ಕೈಹಿಡಿದು ಕರ್ಕೊಂಡು ಬಂದು ರಾಮಭವನವನ್ನು ಪ್ರವೇಶ ಮಾಡ್ತಾನೆ. ಹೊಸದಾದ ಪರ್ಯಂಕವನ್ನು, ಆಸನ ತಂದರು. ಶತ್ರುಘ್ನ ಸ್ವಯಂ ನಿಂತು ಎಲ್ಲ ಕಾರ್ಯವನ್ನು ಮಾಡಿಸ್ತಾ ಇದ್ದಾನೆ. ಸುಗ್ರೀವ ರಾಮನ ಮನೆಯಲ್ಲಿಯೇ ಉಳ್ಕೊಂಡ.
ಏತನ್ಮಧ್ಯೆ, ಲಕ್ಷ್ಮಣ ಸುಗ್ರೀವನಿಗೆ ಸೂಚನೆಯನ್ನು ಕೊಡ್ತಾನೆ, ‘ರಾಮನಿಗೆ ಅಭಿಷೇಕವಾಗಬೇಕು. ಸಮಯ ತುಂಬ ಕಡಿಮೆಯಿದೆ. ಸುಮಾರು 500 ನದಿ-ಸಮುದ್ರಗಳಿಂದ ನೀರು ತರ್ಬೇಕು. ಇದು ಯಾರಾದ್ರು ನಿನ್ನ ಕಡೆಯವರು ಮಾಡ್ಬಹುದು ಹೊರತು ನಮ್ಮ ಕಡೆಯವರು ಮಾಡೋಕ್ಕೆ ಸಾಧ್ಯ ಇಲ್ಲ. ನಿನ್ನದೇ ಹೊಣೆಗಾರಿಕೆ ಇದು’. ಅವನು ಸಂತೋಷವಾಗಿ ಒಪ್ಪಿಕೊಂಡ. ಅವನ ಬಳಿ ಸಾವಿರಾರು ವಿಮಾನಗಳಿವೆ. ನಾಲ್ಕು ಸ್ವರ್ಣಘಟಗಳನ್ನು ನಾಲ್ವರು ವಾನರರಿಗೆ ಒಪ್ಪಿಸಿ, ‘ನಾಳೆ ಬೆಳಗಾಗುವ ಹೊತ್ತಿಗೆ ನಾಲ್ಕೂ ಸಮುದ್ರಗಳ ನೀರು, ಎಲ್ಲಾ ಪುಣ್ಯನದಿಗಳ ಜಲ ಇಲ್ಲಿರ್ಬೇಕು. ಒಂದೇ ದಿನ ಅವಕಾಶ’ ಎಂಬಯದಾಗಿ ಅಪ್ಪಣೆ ಮಾಡ್ತಾನೆ ಸುಗ್ರೀವ. ವಾನರರು, ಆ ಸ್ವರ್ಣ ಘಟಕವನ್ನು ಹಿಡಿದು ಹಾರಿದ್ರು ಎಲ್ಲರೂ ಆಕಾಶಕ್ಕೆ. ಅಯೋಧ್ಯೆಗೆ ಬಂದ ಮೇಲೆ ಹಾರುವ ಅವಕಾಶ ಇರಲಿಲ್ಲ. ಗಂಭೀರವಾಗಿ ಇರಬೇಕಾಗಿತ್ತು. ಅವಕಾಶ ಸಿಕ್ಕಿದ್ದೇ ಹಾರಿದ್ರು. ಜಾಂಬವಂತ, ಸುಶೇಣ, ವೇಗದರ್ಶಿ, ಋಷಭ ಮತ್ತು ಇನ್ನೂ ಇತರೇ ಕಪಿನಾಯಕರು.
ನಮ್ಮ ಮಠದ ರಾಮಾಯಣ ಮಹಾಸತ್ರದ ಸಮಯದಲ್ಲಿ ನಡೆದ ರಾಮಪಟ್ಟಾಭಿಷೇಕಕ್ಕೆ ಐನೂರು ಪುಣ್ಯ ನದಿಗಳಿಂದ ನೀರು ತಂದಿದ್ದೆವು. ಹುಡುಕಿ ಹುಡುಕಿ ಐನೂರು ಪಾರಂಪರಿಕ ಪುಣ್ಯ ನದಿಗಳಿಂದ ನೀರು ತಂದಿದ್ದೆವು. ಐನೂರು ಪುಣ್ಯ ನದಿಗಳಿಂದ ನೀರು ತಂದರು ವಾನರನಾಯಕರು. ಅವರ ಸೇವೆ ಮುಗಿದಿಲ್ಲ ಮತ್ತು ಪಟ್ಟಾಭಿಷೇಕದ ಸಮಯದಲ್ಲೂ ಅವರ ಸೇವೆ. ಪೂರ್ವ ಸಮುದ್ರದ ನೀರನ್ನು ತಂದವನು ಸುಶೇಣ, ಸತ್ವ ಸಂಪನ್ನನಾದವನು. ಋಷಭ, ದಕ್ಷಿಣ ಸಮುದ್ರದ ನೀರನ್ನು ತಂದ. ಆ ನೀರಿನಲ್ಲಿ ರಕ್ತಚಂದನದ ಮರದ ಅಂಶವನ್ನು ಹಾಕಿಕೊಂಡಿದ್ದ. ಗವಯನು ರತ್ನಕುಂಭದಲ್ಲಿ ನೀರನ್ನು ತಂದ ಪಶ್ಚಿಮ ಸಮುದ್ರದಿಂದ. ಉತ್ತರ ಸಮುದ್ರದಿಂದ ನಲ ನೀರನ್ನು ತಂದ. ನಲ ಎಂದರೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದವನು. ರಾಮನು ಆ ಸೇತುವೆಯನ್ನು ನಲಸೇತು ಅಂತ ಹೇಳಿದರೇ, ನಾವು ಅದನ್ನು ರಾಮಸೇತು ಎಂದು ಕರೆದೆವು. ಆ ಸೇತುವಿಗೆ ಹೇತುವಾಗಿರತಕ್ಕಂತಹ ನಲನು ಉತ್ತರ ದಿಕ್ಕಿನ ಸಮುದ್ರದಿಂದ ತಂದ. ಹಾಗೇ ದಕ್ಷಿಣ ದಿಕ್ಕಿನ ಸಮುದ್ರದಲ್ಲಿ ಒಂದು ಕಾರ್ಯ (ನಲಸೇತು), ಉತ್ತರ ದಿಕ್ಕಿನ ಸಮುದ್ರದಲ್ಲಿ ಒಂದು ಕಾರ್ಯ (ಸಮುದ್ರದ ನೀರು). ಇದು ಆಗುತ್ತಿದ್ದಂತೆ, ಶತ್ರುಘ್ನನು ಸಚಿವರೊಡಗೂಡಿ ವಸಿಷ್ಠರ ಪಾದಸನ್ನಿಧಿಯನ್ನು ಸೇರಿ, ಪಟ್ಟಾಭಿಷೇಕವನ್ನು ನೆರವೇರಿಸಿ ಎಂದು ಪ್ರಾರ್ಥನೆ ಮಾಡುತ್ತಾನೆ. ಪುಣ್ಯಜಲ, ಪುಣ್ಯ ತೀರ್ಥದಿಂದ ನೀರು ಬರುವುದಕ್ಕೇ ಕಾಯ್ತಾ ಇದ್ದ ಶತ್ರುಘ್ನ. ಅದು ಬಂದದ್ದೇ ವಸಿಷ್ಠರಲ್ಲಿ ವಿನಂತಿ ಮಾಡಿಕೊಳ್ತಾನೆ. ವೃದ್ಧ ವಸಿಷ್ಠರು, ಅವರನ್ನು ವೃದ್ಧರು ಎಂದು ಸಂಬೋಧನೆ ಮಾಡಿದ್ದಾರೆ ವಾಲ್ಮೀಕಿ ರಾಮಾಯಣದಲ್ಲಿ ಯಾಕೆಂದ್ರೆ ಅವರು ಎಷ್ಟು ವೃದ್ಧರು ಎಂದರೆ ವರ್ಣನಾತೀತ. ಇಡೀ ಸೂರ್ಯವಂಶಕ್ಕೇ ಗುರು. ಪಟ್ಟಾಭಿಷೇಕ ಅವರಿಗೆ ಲೀಲಾಜಾಲ. ಎಷ್ಟೋ ರಾಜರುಗಳಿಗೆ ಪಟ್ಟಾಭಿಷೇಕ ಮಾಡಿದ್ದಾರೆ. ಅವರಿಗೆ ಪೌರೋಹಿತ್ಯ ಅಷ್ಟೊಂದು ಇಷ್ಟ ಇರಲಿಲ್ಲ. ಆದರೆ ಮುಂದೆ ರಾಮ ಹುಟ್ಟಿ ಬರುತ್ತಾನೆ, ಅವನ ಪೌರೋಹಿತ್ಯ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಅವರು ಪೌರೋಹಿತ್ಯವನ್ನು ಒಪ್ಪಿಕೊಂಡಿದ್ದರು. ಅಂತಹ ಆದಿ ವೃದ್ಧ ವಸಿಷ್ಠರು ಯತ್ನಪೂರ್ವಕವಾಗಿ, ಪ್ರತಿಯೊಂದು ವಿಧಿಯನ್ನು ಎಷ್ಟು ಚೆನ್ನಾಗಿ ಮಾಡಬಹುದೋ ಅಷ್ಟು ಚೆನ್ನಾಗಿ ಮತ್ತು ಸುವ್ಯವಸ್ಥಿತಿವಾಗಿ ಋಷಿಗಳೊಡನೆ, ಬ್ರಾಹ್ಮಣರೊಡಗೂಡಿ ಅಭೀಷೇಕಕ್ಕೆ ಅಣಿ ಇಡ್ತಾರೆ.
ಮೊಟ್ಟಮೊದಲು ಅಯೊಧ್ಯೆಯ ರತ್ನಪೀಠದಲ್ಲಿ ಸೀತಾ ರಾಮರನ್ನು ವಸಿಷ್ಠರೇ ಕುಳ್ಳಿರಿಸಿದರು. ಇದು ರಾಮನ ಪೀಠಾರೋಹಣ. ಈರ್ವರೂ ಕೂರಬೇಕು. ಅಧಿರಾಜನಾಗಿ ಶ್ರೀರಾಮ, ಅಭಿರಾಜ್ಞಿಯಾಗಿ ಸೀತೆ. ಹಾಗಾಗಿ ಇಬ್ಬರಿಗೂ ಅಭಿಷೇಕ ಮಾಡುತ್ತೇವೆ. ಬಳಿಕ ವಸಿಷ್ಠರು, ವಾಮದೇವರು, ಜಾಬಾಲಿಗಳು, ಕಾತ್ಯಾಯನರು, ಸುಯಜ್ಞರು (ಗೌತಮರ ಮಗ) ಮತ್ತು ಗೌತಮರು ವಿಧೇಯ ಇವರೆಲ್ಲರೂ ಕೂಡಿಕೊಂಡು ರಾಮನಿಗೆ ಅಭಿಷೇಕ ಮಾಡಿದ್ರು. ವಸುಗಳು ದೇವರಾಜನಿಗೆ ಅಭಿಷೇಕ ಮಾಡಿದ ಹಾಗೇ. ಭುವಿಯ ಘಟನೆಗೆ ದಿವಿಯ ಉದಾಹರಣೆ. ಇಡೀ ರಾಮಾಯಣ ಹಾಗೇ. ರಾಮಭದ್ರಾಚಾರ್ಯರು ಹೇಳುತ್ತಿದ್ದರು. ಎಲ್ಲಿ ನೋಡಿದರೂ ಸ್ವರ್ಗದ ಉದಾಹರಣೆ. ಯಾಕೆಂದ್ರೆ ಅವನೇ ಇಲ್ಲಿಗೆ ಬಂದಿದ್ದು, ದೇವದೇವನೇ ಬಂದಿದ್ದು ಭೂಮಿಗೆ. ದೇವರುಗಳೇ ವಾನರರಾಗಿ ಮತ್ತು ರಾಮನ ಸಹಚರರಾಗಿ ಬಂದಿದ್ದು. ವಸಿಷ್ಠರು ತಿಳಿಯಾದ ಸುಗಂಧಭರಿತವಾದ ಪುಣ್ಯಜನದಿಂದ ರಾಮನಿಗೆ ರಾಜ್ಯಾಭಿಷೇಕವನ್ನು ನೆರವೇರಿಸಿದರು. ಮೊದಲು ಋತ್ವಿಜರು, ಆಮೇಲೆ ಬ್ರಾಹ್ಮಣರು, ಬಳಿಕ ಕನ್ಯೆಯರು. ಆ ಕಾಲದಲ್ಲಿ ಪಟ್ಟಾಭಿಷೇಕದ ವಿಧಿ ನಡೆದಿದ್ದು ಹೇಗೆ ಅಂದ್ರೆ ಮೊದಲು ಬ್ರಾಹ್ಮಣೋತ್ತಮರಾದ ಬಳಿಕ, ಕನ್ಯೆಯರು, ನಂತರ ಮಂತ್ರಿಗಳು, ಆಮೇಲೆ ಸೈನಿಕರು, ಆಮೇಲೆ ವೈಶ್ಯರು ಅಭಿಷೇಕ ಮಾಡಿದ್ರು ಆ ಸಂದರ್ಭದಲ್ಲಿ. ಇಷ್ಟೇ ಅಲ್ಲ, ದೇವತೆಗಳು ಕೂಡ, ನಾಲ್ವರು ಲೋಕಪಾಲರು, ಪೂರ್ವದಿಕ್ಕಿನ ಅಧಿಪತಿ ಇಂದ್ರ, ದಕ್ಷಿಣ ದಿಕ್ಕಿನ ಅಧಿಪತಿ ಯಮ, ಪಶ್ಚಿಮ ದಿಕ್ಕಿನ ಅಧಿಪತಿ ವರುಣ, ಉತ್ತರ ದಿಕ್ಕಿನ ಅಧಿಪತಿ ಕುಬೇರ. ಗಗನ ಮಂಡಲದಲ್ಲಿ ಕೂಡಿದ್ದಾರೆ ಎಲ್ಲರೂ. ದೇವತೆಗಳು ಸರ್ವೌಷಧಿರಸಗಳನ್ನು ತಂದ್ರು. ಅಮೃತ ಹುಟ್ಟಿದ್ದು, ಸರ್ವೌಷಧಿಗಳನ್ನು ಸಮುದ್ರದಲ್ಲಿ ಹಾಕಿ ಕಡೆದದ್ದರಿಂದ. ದೇವತೆಗಳು, ಎಲ್ಲ ಔಷಧಿಗಳನ್ನು ತಂದು ಮೇಲೆ ಆಕಾಶದಲ್ಲೇ ನೆರೆದು, ಅಭಿಷೇಕವನ್ನು ಮಾಡಿದರು. ಅದು ನಿಜವಾದ ರಾಜ್ಯಾಭಿಷೇಕ ಮತ್ತು ನಿಜವಾದ ರಾಜ ರಾಮನೇ, ಇಂದಿಗೂ ಅವನೇ. ನಿಜವಾದ ರಾಜತ್ವ ರಾಮನಿಗೆ ಮಾತ್ರವೇ ಸಲ್ಲುವಂತಹದ್ದು.
ಅಭಿಷೇಕದ ಬಳಿಕ ಕಿರೀಟಧಾರಣೆ. ರತ್ನಶೋಭಿತವಾದ ಆ ಕಿರೀಟವನ್ನು ಪೂರ್ವಕಾಲದಲ್ಲಿ ಬ್ರಹ್ಮನೇ ನಿರ್ಮಾಣಮಾಡಿದ್ದಂತೆ. ಧರೆಯ ಮೊಟ್ಟಮೊದಲ ದೊರೆ ಮನುವಿಗೆ ಇದೇ ಕಿರೀಟವನ್ನಿಟ್ಟು ಅಭಿಷೇಕ ಮಾಡಲಾಗಿತ್ತು. ಸರಯೂ ತೀರದಲ್ಲಿ ಅಯೋಧ್ಯೆಯನ್ನು, ಜಗತ್ತಿನ ಮೊದಲ ಚಕ್ರವರ್ತಿ, ಮನು ಕಟ್ಟಿದ್ದು. ತದನಂತರ ಸಾಲಾಗಿ ಎಲ್ಲ ಚಕ್ರವರ್ತಿಗಳಿಗೆ ಆ ಕಿರೀಟವನ್ನೇ ಇಟ್ಟಿದ್ದಾರೆ. ಪಾರಂಪರಿಕವಾಗಿ ದಶರಥನಿಗೂ ಅದೇ ಕಿರೀಟವನ್ನು ಇಡಲಾಗಿತ್ತು. ಅವಿಚ್ಛಿನ್ನ ರಾಜ ಪರಂಪರೆ. ಆ ಸಭೆಯಲ್ಲಿ ಒಂದು ಕಡೆ ರತ್ನಾಲಂಕೃತವಾದ ಪೀಠ, ಇನ್ನೊಂದು ಕಡೆ ಮಹಾಜನಗಳಿಂದ ಭೂಷಿತ. ವಸಿಷ್ಠರು, ವಾಮದೇವರು ಕಾತ್ಯಾಯನರು, ಸುವಜ್ಞರು, ಸುಗ್ರೀವ, ವಿಭೀಷಣ ಮತ್ತು ಮಂತ್ರಿಗಳು. ಅನೇಕ ಸಾಮಂತ ರಾಜರು. ಆ ಪೀಠದಲ್ಲಿ ರಾಮನನ್ನು ಕುಳ್ಳಿರಿಸಿ ಅಭಿಷೇಕ ಮಾಡಿ ಆಗಿದೆ. ಕಿರೀಟ ಧಾರಣೆ ಮಾಡಿಸಿ ಆಗಿದೆ ಸ್ವಯಂ ವಸಿಷ್ಠರಿಂದ. ಜೊತೆಗೆ ಆಭರಣಗಳನ್ನು ತೊಡಿಸ್ತಾರೆ, ಜೊತೆಗೆ ಋತ್ವಿಜರು ಮತ್ತು ಬ್ರಾಹ್ಮಣರು. ರಾಮ ಸೀತೆಯರು ಎಷ್ಟು ಶೋಭಾಯಮಾನವಾಗಿ ಕಾಣ್ತಾ ಇದ್ದಾರೆ. ರಾಮನ ಒಂದು ಕೈ ಅಭಯ ಹಸ್ತವಾಗಿದ್ದರೆ, ಇನ್ನೊಂದು ಕೈ ಸೀತೆಯನ್ನು ಬಳಸಿದೆ. ಹಾಗೇ ಬಳಿ ಹನುಮಂತ, ಪಕ್ಕದಲ್ಲೇ ಜಾಂಬವಂತ. ಜಾಂಬವಂತನ ಪಕ್ಕದಲ್ಲಿ ಸ್ವಲ್ಪ ನೀಲಿ ಬಣ್ಣದಲ್ಲಿ ಇದ್ದವನು ಸುಗ್ರೀವ. ಈಚೆ ತುದಿಯಲ್ಲಿ ವಿಭೀಷಣ. ಋಷಿಗಳು ಇದ್ದಾರೆ. ಸ್ವಲ್ಪ ಬಿಳಿ ಗಡ್ಡ ಇದ್ದವರು ವಸಿಷ್ಠರು. ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಇದ್ದಾರೆ. ಇಬ್ಬರ ಕೈಯಲ್ಲಿ ಚಾಮರ ಇದೆ.
ಕಿರೀಟಧಾರಣೆಯಾದದ್ದು ಪುಷ್ಯ ನಕ್ಷತ್ರದಲ್ಲಿ, ಅದು ವಿಶೇಷ. ದಶರಥ ನಿಶ್ಚಯಿಸಿದ ಮುಹೂರ್ತ ಅದೇ ನಕ್ಷತ್ರದಲ್ಲಿ ರಾಮನ ಪಟ್ಟಾಭಿಷೇಕ. ಪುಷ್ಯ ಯೋಗಕ್ಕೆ ಸಮಾನವಾಗಿ ರಾಮ ಇರ್ತಾನೆ ಎಂದು ಹನುಮಂತ ಹೇಳಿದ್ದ. ಶತ್ರುಘ್ನ ಶ್ವೇತಛತ್ರವನ್ನು ಹೇಳಿದ್ದ. ಎರಡು ವ್ಯಜನಗಳು, ಒಂದನ್ನು ಸುಗ್ರೀವ ಹಿಡಿದ್ದರೇ ಇನ್ನೊಂದು ವಿಭೀಷಣ. ಮಾನವ ಚಕ್ರವರ್ತಿಯ ಪಟ್ಟಾಭಿಷೇಕಕ್ಕೆ, ಒಂದು ಕಡೆ ರಾಕ್ಷಸ ಚಕ್ರವರ್ತಿಯು ವ್ಯಜನ ಹಿಡಿದಿದ್ದರೇ ಇನ್ನೊಂದು ವ್ಯಜನವನ್ನು ವಾನರ ಚಕ್ರವರ್ತಿ ಹಿಡಿದಿದ್ದ. ಮೂರು ಕೇಂದ್ರಗಳು, ಅಯೋಧ್ಯೆ, ಕಿಷ್ಕಿಂಧೆ ಮತ್ತು ಲಂಕೆ. ಭಾರತದ ಉತ್ತರದ ತುದಿಗೆ ಅಯೋಧ್ಯೆ – ಮಾನವ ಸಾಮ್ರಾಜ್ಯ, ಭಾರತದ ಮಧ್ಯದಲ್ಲಿ ಕಿಷ್ಕಿಂಧೆ – ಕರ್ನಾಟಕ ಮಧ್ಯದಲ್ಲಿ, ಹಂಪೆ – ವಾನರ ಸಾಮ್ರಾಜ್ಯ, ಆಚೆ ತುದಿ ಲಂಕೆಯಲ್ಲಿ ರಾಕ್ಷಸ ಸಾಮ್ರಾಜ್ಯ. ಈ ಮೂರು ಸಾಮ್ರಾಜ್ಯಗಳ ಕಥೆಯೇ ರಾಮಾಯಣ. ಅಯೋಧ್ಯೆಯಲ್ಲಿ ಆರಂಭವಾಗಿ ಕಿಷ್ಕಿಂಧೆಯಲ್ಲಿ ಮುಂದುವರಿದು, ಲಂಕೆಯಲ್ಲಿ ಪಕ್ವ ಹಂತಕ್ಕೆ ಹೋಗಿ, ಅಯೋಧ್ಯೆಯಲ್ಲಿ ಪರ್ಯವಸಾನ, ಇದು ರಾಮಾಯಣ. ತ್ರೀಕೋಣ, ತ್ರಿವೇಣಿ ಸಂಗಮವೇ ರಾಮಾಯಣ.
ಏತನ್ಮಧ್ಯೆ ವಾಯುದೇವ ಮಾಲೆ ಹಿಡಿದುಕೊಂಡು ಬರ್ತಾ ಇದ್ದಾನೆ. ನರ ಚಕ್ರವರ್ತಿ ಪಟ್ಟಾಭಿಷೇಕ ಸಂದರ್ಭದಲ್ಲಿ ದೇವಲೋಕದಿಂದ ಉಡುಗೊರೆ ಬಂದಿದೆ. ಆ ಬಂಗಾರದ ಮಾಲೆಯಲ್ಲಿ ನೂರು ಕಮಲಗಳಿರುವ ಆ ಬಂಗಾರದ ಮಾಲೆಯನ್ನು ವಾಯುವು ಇಂದ್ರನ ಸೂಚನೆಯ ಮೇರೆಗೆ ರಾಮನಿಗೆ ತೊಡೆಸುತ್ತಾನೆ. ಆ ಮಾಲೆಯಲ್ಲಿ ಉತ್ತಮೋತ್ತಮ, ಅನರ್ಘ್ಯ ರತ್ನಗಳು. ದೇವತೆಗಳೂ, ಗಂಧರ್ವರು ಹಾಡಿದರು. ಅಪ್ಸರೆಯರು ನರ್ತಿಸಿದರು. ಈ ಪರಿಯ ಪಟ್ಟಭಿಷೇಕಕ್ಕೆ ರಾಮನೇ ಅರ್ಹ. ಇದು ಆಗುತ್ತಿರುವಂತೇ, ಭೂಮಿಯ ಎಲ್ಲ ಸ್ವಸ್ತಿಗಳು ತಂಪಾದವು ಹೊಸದಾದವು. ರಾಮನ ತಲೆಯ ಮೇಲೆ ನೀರೆರೆಯುತ್ತಿದ್ದಾರೆ, ಜಗತ್ತಿನ ಸ್ವಸ್ತಿಗಳು ತಂಪಾಗುತ್ತಿವೆ. ಯಾಕೆಂದ್ರೆ ಎಲ್ಲ ಬೇರುಗಳ ಮೂಲ ಅವನೇ. ಎಲ್ಲ ಸಸ್ಯಗಳು ತಂಪಾದವು, ಹೂವುಗಳು ಬಂದವು. ಇಡೀ ಪ್ರಪಂಚ ಆಚರಣೆ ಮಾಡಿದೆ. ಪ್ರಕೃತಿ ಸಂಭ್ರಮಿಸಿದ. ಸಸ್ಯ, ಪ್ರಾಣಿ ಎಲ್ಲರು ಪಟ್ಟಾಭಿಷೇಕವನ್ನು ನೋಡಿ ಹರ್ಷಿಸಿದೆ. ಸಂಭ್ರಮ ವ್ಯಕ್ತವಾಗಿವೆ. ಒಂದು ಲಕ್ಷ ಆನೆಗಳನ್ನು ದಾನ ಮಾಡಿದನು, ಒಂದು ಲಕ್ಷ ಆಗ ತಾನೇ ಕರು ಹಾಕಿದ ಗೋವುಗಳನ್ನು ದಾನ ಮಾಡಿದನು. ನೂರು ಲಕ್ಷಣಯುಕ್ತ ಅಪರೂಪದ ನಂದಿಗಳು. ಮೂವತ್ತು ಕೋಟಿ ಚಿನ್ನದ ನಾಣ್ಯಗಳನ್ನು ಹಂಚುತ್ತಾನೆ. ಮತ್ತು ನಾನಾ ಪ್ರಕಾರದ ಆಭರಣಗಳು ಮತ್ತು ವಸ್ತ್ರಗಳನ್ನು ದಾನ ಮಾಡಿದನು. ಎಲ್ಲವೂ ಅನರ್ಘ್ಯ ಅಮೂಲ್ಯ ವಸ್ತ್ರಗಳನ್ನು ದಾನಮಾಡಿದನು. ತನ್ನ ಸೇವಕರಿಗೆ ಉಡುಗೊರೆಯನ್ನು ಕೊಟ್ಟ. ಸುಗ್ರೀವನಿಗೆ ಏನು ಕೊಟ್ಟ – ಒಂದು ಕಾಂಚನ ಮಾಲೆ. ಆ ಮಾಲೆ ಸೂರ್ಯ ಕಿರಣದಂತೆ ಪರಿಶೋಭಿತವಾಗಿತ್ತು ಮತ್ತು ಅನರ್ಘ್ಯ ಮಣಿಗಳು.
ಅಂಗದನಿಗೆ ಅಂಗದಗಳನ್ನು ಕೊಟ್ಟ – ಅಂಗದ ಅಂದ್ರೆ ತೋಳುಬಂಧ. ಅವನು ಹೆಸರಿಗೆ ತಕ್ಕಂತಹ ಉಡುಗೊರೆ, ಆ ಅಂಗದಗಳು ಹೇಗಿದ್ದವು ಅಂದ್ರೆ ವೈಢೂರ್ಯದ ಮಣಿಗಳಿಂದ ಶೋಭಿತವಾಗಿತ್ತು. ರಾಮನಿಗಾಗಿ ಅಂಗದ ಘನಘೋರ ಯುದ್ಧವನ್ನು ಮಾಡಿದ್ದಾನೆ. ಅಂಗದನ ತಂದೆ ವಾಲಿಯನ್ನು ರಾಮನೇ ಕೊಂದವನು, ಆದರೆ ಅಂಗದನಿಗೆ ರಾಮನ ಮೇಲೆ ಭಕ್ತಿ ಇದೆ. ಆದರೆ ಅಂಗದನಿಗೆ ರಾಮನೇ ತಂದೆ. ರಾಮ ಯಾವಾಗಲೂ ಮಗು ಎಂದೇ ಸಂಭೋಧಿಸುತ್ತಾನೆ. ಇದು ಕೇವಲ ರಾಮನಿಗೇ ಸಾಧ್ಯ. ಸೀತೆಗೆ ಮುತ್ತಿನ ಹಾರವನ್ನು ಕೊಡ್ತಾನೆ, ಅದು ಚಂದ್ರರಶ್ಮಿಯಂತೆ ಕಾಣುತಿತ್ತು. ಗ್ರಹಗಳಲ್ಲಿ ಚಂದ್ರ ಸ್ತ್ರೀತ್ವವನ್ನು ಪ್ರತೀಕಿಸ್ತಾನೆ. ಹನುಮಂತನಿಗೆ? ಎರಡು ಜೊತೆ ಒಳ್ಳೆ ಬಟ್ಟೆ ಕೊಟ್ಟನಂತೆ. ಧೂಳು ಮುಟ್ಟದ ದಿವ್ಯವಾದ ಬಟ್ಟೆ. ಹನುಮಂತನಿಗೆ ಮೈತುಂಬ ಆಭರಣಗಳನ್ನು ತೊಡಿಸಿ ಸಂತೋಷ ಪಟ್ಟನಂತೆ. ತಲೆಯಿಂದ ಕಾಲಿನವರೆಗೆ ಇರುವಂತಹ ಆಭರಣಗಳನ್ನು ತೊಡಿಸಿ ಸಂತೋಷ ಪಟ್ಟ. ಈ ಆಭರಣಗಳನ್ನು ಕೊಟ್ಟಿದ್ದು ಯಾರು ಅಂದ್ರೆ, ಸೀತೆ ಕೊಟ್ತಿದ್ದು. ರಾಮ ಎಲ್ಲರಿಗೂ ಕೊಟ್ಟ ಆದರೆ ಸೀತೆ ಒಬ್ಬನಿಗೆ ಮಾತ್ರ ಕೊಟ್ಟಿದ್ದು. ತಾಯಿಗೆ ತನ್ನ ಮಕ್ಕಳಿಗೆ ಆಭರಣಗಳನ್ನು ತೊಡಿಸಿ ಸಂತೋಷ ಪಡುವ ಹಾಗೇ ಒಳ್ಳೆಯ ಎರಡು ಜೊತೆ ಬಟ್ಟೆಗಳು ಮತ್ತು ಮೈತುಂಬ ಆಭರಣಗಳನ್ನು ಹನುಮಂತನಿಗೆ ಕೊಟ್ಟಳು. ಮಧ್ಯ ಮಧ್ಯದಲ್ಲಿ, ಆ ಕಾರ್ಯವನ್ನು ಮಾಡುವಾಗ, ಹನುಮಂತನನ್ನು ಮತ್ತು ರಾಮನನ್ನು ನೋಡ್ತಿದ್ದಳು. ತನ್ನ ಮುತ್ತಿನ ಹಾರವನ್ನು, ರಾಮ ಕೊಟ್ಟಿದ್ದು, ತನ್ನ ಕೊರಳಿನಿಂದ ತೆಗೆದು ಎಲ್ಲ ವಾನರ ನಾಯಕರನ್ನು ನೋಡಿದಳು ಮತ್ತು ರಾಮನನ್ನು ನೋಡಿದಳು. ಪುನಃ ಎಲ್ಲ ವಾನರ ನಾಯಕರನ್ನು ನೋಡಿದಳು ಮತ್ತು ರಾಮನನ್ನು ನೋಡಿದಳು. ಪದೇ ಪದೇ ಹೀಗೆ ಮಾಡ್ತಾ ಇದ್ದಾಳೆ. ಈ ಕೋಸಲ ದೇಶದವರಿಗೆ ಬಾಯಿಬಿಟ್ಟು ಹೇಳಬೇಕೂಂತ ಇಲ್ಲ, ಸನ್ನೆ ಮೂಲಕ ಅರ್ಥ ಮಾಡಿಕೊಳ್ಳುವಂತಹ ಇಂಗಿತಜ್ಞರು. ರಾಮನಿಗೆ ಕೂಡಲೇ ಗೊತ್ತಾಯಿತು ಸೀತೆ ಏನು ಕೇಳ್ತಾ ಇದ್ದಾಳೆ. ಅವಳು ಇದನ್ನು ಯಾರಿಗೆ ಕೊಡಲಿ ಎಂದು ಕೇಳ್ತಾ ಇದ್ದಾಳೆ. ರಾಮ ಸೀತೆಗೆ ಹೇಳಿದನಂತೆ. ಸಂಜ್ಞಯಲ್ಲೇ ರಾಮ ಹೇಳಿದ, ನಿನಗೆ ಯಾರ ಮೇಲೆ ಸಂತೊಷ ಇದೆಯೋ ಅವರಿಗೇ ಕೊಡು. ಯಾರಲ್ಲಿ ಈ ಗುಣಗಳು ನಿತ್ಯ ಇವೆಯೋ – ಏನದು? ತೇಜಸ್ಸು ಇದೆಯೋ, ಧೃತಿ ಇದೆಯೋ, ಯಶಸ್ಸು ಇದೆಯೋ, ಸಾಮರ್ಥ್ಯ ಇದೆಯೋ, ವಿನಯ ಇದೆಯೋ, ನಯ ಇದೆಯೋ, ಪೌರುಷ ಇದೆಯೋ, ವಿಕ್ರಮ ಇದೆಯೋ, ಬುದ್ಧಿ ಇದೆಯೋ ಅಂತಹ ವಾಯುಪುತ್ರನಿಗೆ ಸೀತೆ ಆ ಹಾರವನ್ನು ಕೈ ಎತ್ತಿ ಕೊಟ್ಟಳು. ಹನುಮಂತನ ಕಣ್ಣಿನಲ್ಲಿ ನೀರು. ಹನುಮಂತನ ವಿಷಯದಲ್ಲಿ ಕಣ್ತುಂಬ ಪ್ರೀತಿಯನ್ನು ತುಂಬಿಕೊಂಡು ಆ ಮುತ್ತಿನ ಹಾರವನ್ನು ಸೀತೆ ಹನುಮಂತನಿಗೆ ಕೊಟ್ಟಳು. ಪಟ್ಟ ಏರುವಾಗ ರಾಮ ಕೊಟ್ಟ ಹಾರವನ್ನು ಸೀತೆ ಹನುಮಂತನಿಗೆ ಕೊಟ್ಟಳು. ಸೀತೆಗೆ ಹನುಮಂತನ ಮೇಲೆ ಯಾವ ಭಾವ ಇರಬಹುದು. ಉಳಿದ ವಾನರರಿಗೆ ಅಸಮಾಧನ ಆಗುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಗೊತ್ತು ಅವನಿಗೇ ಸಲ್ಲಬೇಕು ಎಂದು. ಎಲ್ಲರಿಗೂ ಸಂತೋಷವೇ. ಹನುಮಂತನ ಕಣ್ಣಿನ ಅಂಚಿನಲ್ಲಿರುವ ಮುತ್ತು.
ಹನುಮಂತ ಆ ಮಾಲೆಯನ್ನು ಆ ಕ್ಷಣದಲ್ಲಿ ಧಾರಣೆ ಮಾಡಿ, ಶೋಭಿಸಿದನು. ಬಂಗಾರದ ಬೆಟ್ಟದ ಶಿಖರದ ಮೇಲೆ ಬೆಳ್ಳಿ ಮೋಡ ಸುತ್ತುವರೆದಿದೆ. ಅದರ ಮೇಲೆ ಬೆಳದಿಂಗಳು ಬಿದ್ದಿದೆ. ಹೀಗೆ ಕಂಡ ಹನುಮಂತ. ವಿಭೀಷಣ, ಸುಗ್ರೀವ, ಜಾಂಬವಂತ, ಅಂಗದ ಎಲ್ಲರೂ ರಾಮನಿಂದ ಅತ್ಯದ್ಭುತವಾಗಿ ಸತ್ಕರಿಸಲ್ಪಟ್ಟು ಬಳಿಕ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ಸುಗ್ರೀವ ಕಿಷ್ಕಿಂಧೆಗೆ, ವಿಭೀಷಣ ಲಂಕೆಗೆ. ವಿಭೀಷಣನದ್ದೊಂದು ವಿಶೇಷವಿದೆ. ವಿಭೀಷಣನಿಗೆ ರಾಮ ಕುಲಧನವನ್ನು ಕೊಟ್ಟ ಎಂದು ವಾಲ್ಮೀಕಿಗಳು ಉಲ್ಲೇಖ ಮಾಡ್ತಾರೆ. ಇಕ್ಷ್ವಾಕುವಂಶದ ಸಂಪತ್ತನ್ನು ಕೊಟ್ಟ, ಕುಲದೇವರಾದ ಜಗನ್ನಾಥನ ಮೂರ್ತಿಯನ್ನೇ ಕೊಟ್ಟ ಎಂದು ಹೇಳುತ್ತಾರೆ. ಯಾಕೆ ಕೊಟ್ಟನು ಎಂದರೆ ಹೋಗಲಿಕ್ಕೇ ಒಪ್ಪಲಿಲ್ಲವಂತೆ ವಿಭೀಷಣ. ಎಷ್ಟು ದಿನವಾದರೂ ಹೊರಡಲಿಲ್ಲವಾದ್ದರಿಂದ ರಾಮನು ವಿಭೀಷಣನಿಗೆ ಕೊಟ್ಟ. ಬಳಿಕ ರಾಮರಾಜ್ಯವಾಯಿತು. ಶತ್ರುಗಳ್ಯಾರೂ ಇಲ್ಲ. ಅತಿಶಯವಾದ ಶೋಭೆಯಿಂದ ಕಂಗೊಳಿಸಿತು ಅಯೋಧ್ಯೆ.
ರಾಮ ಮಹಾರಾಜ. ಲಕ್ಷ್ಮಣನಿಗೆ ತುಂಬಾ ಒತ್ತಾಯ ಮಾಡಿದನು ರಾಮ ಯುವರಾಜನಾಗೆಂದು. ಏನೇನು ಮಾಡಿದರೂ ಲಕ್ಷ್ಮಣ ಒಪ್ಪಲಿಲ್ಲ. ನಾನೇನಿದ್ದರೂ ನಿನ್ನ ಕಾಲಬುಡದಲ್ಲಿ. ಸ್ಥಾನ, ಯುವರಾಜಪಟ್ಟ ಅದು ನನಗಲ್ಲ. ನಾನು ನಿನ್ನ ಸೇವಕ, ಹಾಗೇ ನನ್ನನ್ನು ಇಟ್ಟುಕೋ. ಎಂದೂ ನಾನು ಅರಸನಾಗೋದಿಲ್ಲ. ಅರಸೊತ್ತಿಗೆಯ ಒಂದಂಶವೂ ಬೇಡ ಎಂದು ಲಕ್ಷ್ಮಣ ಸೇವಕನಾಗಿಯೇ ಉಳಿದ ಎಂದು ವಾಲ್ಮೀಕಿಗಳು ಹೇಳಿದ್ದಾರೆ. ಅದು ರಾಮನಿಗೂ ಗೊತ್ತಿತ್ತು. ನಂತರ ಭರತನನ್ನು ಕರೆದು ನೀನು ಯುವರಾಜನಾಗು ಎಂದನು ರಾಮ. ಭರತ ಹೇಗೆ ಅಂದರೆ, ನೀನು ಹೇಗೆ ಹೇಳುತ್ತೀಯೋ ಹಾಗೆ. ನನ್ನದೇನಿದೆ, ನೀನಿಟ್ಟಂತೆ ಇರ್ತೇನೆ. ನಿನ್ನ ಜಾಗದಲ್ಲಲ್ಲ. ನಿನ್ನ ಬಳಿಕ, ನೀನು ಎಲ್ಲಿ ಕೂರಲಿಕ್ಕೆ ಹೇಳ್ತೀಯೋ ಅಲ್ಲಿ ನಾನಿರುತ್ತೇನೆ. ಇದು ಭರತನ ಭಾವ. ಎರಡೂ ಚೆನ್ನಾಗಿದೆ. ಹೀಗೆ ಭರತನ ಯೌವರಾಜ್ಯಾಭಿಷೇಕವೂ ನಡೆಯುವುದು. ನೂರು ಅಶ್ವಮೇಧ ಯಾಗಗಳನ್ನು ಮಾಡ್ತಾನೆ ರಾಮ. ಹನ್ನೊಂದು ಸಾವಿರ ವರ್ಷ ಈ ಲೋಕದಲ್ಲಿ ರಾಮನ ಅವಧಿ. ಬಹಳ ಕಡಿಮೆ. ದಶರಥ ಅರವತ್ತು ಸಾವಿರ ವರ್ಷ. ಅನೇಕಾನೇಕ ಯಜ್ಞಗಳನ್ನು ರಾಮನು ನೆರವೇರಿಸುತ್ತಾನೆ.
ರಾಮನ ಆಳ್ವಿಕೆಯ ಅವಧಿಯಲ್ಲಿ ಯಾರೊಬ್ಬರೂ ವಿಧವೆಯರಿರಲಿಲ್ಲ. ಯಾರಿಗೂ ಯಾವ ಅನರ್ಥವೂ ಆಗೋದಿರಲಿ, ಮುಟ್ಟಲೇ ಇಲ್ಲ. ಅಕಾಲಮೃತ್ಯು ಯಾರಿಗೂ ಬರಲಿಲ್ಲ. ಹಿರಿಯರು ಕಿರಿಯರ ಉತ್ತರ ಕ್ರಿಯೆ ಮಾಡುವಂತ ಸಂದರ್ಭ ಬರಲಿಲ್ಲ. ಎಲ್ಲರೂ ಸಂತೋಷದಿಂದ ಇದ್ದರು. ಮನುಷ್ಯರು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮರಗಿಡಗಳು ಸಂತಸವಾಗಿದ್ದವು. ಯಾರೂ ಯಾರನ್ನೂ ನೋಯಿಸಲಿಲ್ಲ. ಅದು ರಾಮರಾಜ್ಯ. ಮನೆತುಂಬ ಮಕ್ಕಳು, ತುಂಬ ವಯಸ್ಸಿನವರೆಗೂ ಬಾಳಿದರು. ಅಕಾಲಮೃತ್ಯು ಬರಲಿಲ್ಲ. ಶೋಕವಿಲ್ಲ. ಎಲ್ಲರ ಬಾಯಲ್ಲಿ ರಾಮಕಥೆ. ಜಗತ್ತೆಲ್ಲವೂ ರಾಮಮಯವಾಯಿತು. ಎಲ್ಲಿಯೂ ರಾಮ, ಎಲ್ಲರಲ್ಲಿಯೂ ರಾಮ, ಜಗತ್ತು ರಾಮಮಯವಾಗಿ ಹೋಯಿತು. ಗಿಡಮರಗಳು, ಬಳ್ಳಿಗಳು ನಿತ್ಯಪುಷ್ಪ, ನಿತ್ಯಫಲ. ಕಾಲಕ್ಕೆ ತಕ್ಕ ಹಾಗೆ, ಕಾಲಕ್ಕೆ ತಕ್ಕಷ್ಟು ಮಳೆ ಬಂತು. ಅತಿವೃಷ್ಟಿಯೂ ಇಲ್ಲ, ಅನಾವೃಷ್ಟಿಯೂ ಇಲ್ಲ. ಎಂದೂ ಮಾರುತನು ಚಂಡಮಾರುತನಾಗಲಿಲ್ಲ. ಎಲ್ಲರೂ ವ್ಯವಸ್ಥಿತವಾಗಿ ಜೀವನ ಮಾಡುತ್ತಾ ಸಂತುಷ್ಟರಾಗಿದ್ದರು. ಎಲ್ಲ ಪ್ರಜೆಗಳೂ ಧರ್ಮನಿಷ್ಠರಾಗಿದ್ದರು. ಯಾರೂ ಸುಳ್ಳು ಹೇಳುವವರಿರಲಿಲ್ಲ. ಇಂತಹ ರಾಜ್ಯ ಬಹುಕಾಲ ನಡೆಯಿತು. ಇದು ರಾಮರಾಜ್ಯ. ಇದು “ರಾಮಾಯಣ”.
ಇದಕ್ಕೂ ಮುಂದಿನದು ಫಲಶೃತಿ. ಈ ರಾಮಚರಿತವನ್ನು ಯಾರು ಕೇಳ್ತಾರೋ, ಯಾರು ಪಠಿಸ್ತಾರೋ, ಯಾರು ಅನುಸಂಧಾನ ಮಾಡ್ತಾರೋ, ಅವರು ಧನ್ಯರು. ನಿಜವಾದ ಸಂಪತ್ತು ಸಿಕ್ಕಿದಾಗ ಬರುವ ಭಾವ ಧನ್ಯತೆ. ಕೀರ್ತಿಯನ್ನು, ಆಯಸ್ಸನ್ನು ಕೊಡುತ್ತದೆ. ದೊರೆಗಳಿಗೆ ವಿಜಯವನ್ನು ಕೊಡುವುದು ರಾಮಾಯಣ. ಇದೇ ಮೊದಲ ಕಾವ್ಯ. ಇದಕ್ಕಿಂತ ಮೊದಲು ಕಾವ್ಯ ಎನ್ನುವಂಥದ್ದು ಇಲ್ಲ. ಇದನ್ನು ಯಾರು ಕೇಳ್ತಾನೋ, ಪಾಪದಿಂದ ಮುಕ್ತನಾಗ್ತಾನೆ. ಯಾವ ದುಃಖ ಬಂದರೂ ಪಾಪದಿಂದ ಬರುತ್ತದೆ. ಜೀವಗಳ ಪಾಪವನ್ನು ಕಳೆಯುತ್ತದೆ ಈ ರಾಮಾಯಣ. ಲೌಕಿಕವಾಗಿಯೂ, ಮಕ್ಕಳು ಬೇಕಾದವರಿಗೆ ಮಕ್ಕಳನ್ನು ಕೊಡುತ್ತದೆ. ರಾಮಾಭಿಷೇಕದ ಕಥೆಯನ್ನು ಕೇಳಿದವರಿಗೆ, ಪುತ್ರಪೌತ್ರರು, ಧನಧಾನ್ಯಗಳು ಪ್ರಾಪ್ತವಾಗುತ್ತದೆ. ಯಾವುದೇ ಸ್ತ್ರೀಯರು ರಾಮಾಯಣವನ್ನು ಕೇಳಿದರೆ, ರಾಮನಂತೆ, ಲಕ್ಷ್ಮಣನಂತೆ, ಭರತನಂತೆ, ಶತ್ರುಘ್ನನಂತಿರುವ ಮಕ್ಕಳು ಹುಟ್ಟುತ್ತಾರೆ. ಹಾಗೇ ಬಾಳುತ್ತಾರೆ. ಆನಂದ ಪ್ರಾಪ್ತಿಯಾಗುತ್ತದೆ. ಕೋಪವನ್ನು ಗೆದ್ದು, ಶ್ರದ್ಧೆಯಿಂದ ಯಾರು ಈ ರಾಮಾಯಣವನ್ನು ಕೇಳುತ್ತಾನೋ, ಅವನು ಬದುಕಿನಲ್ಲಿ ಬರುವ ತೊಂದರೆಗಳು, ತೊಡಕುಗಳು, ವಿಘ್ನಗಳನ್ನು ದಾಟುತ್ತಾನೆ. ಬಂಧುವಿಯೋಗವಾಗಿದ್ದಲ್ಲಿ ಬಂಧು ಬಾಂಧವರನ್ನು ಹೊಂದುತ್ತಾರೆ. ಇಷ್ಟೇನು, ನೀವೇನು ಕೇಳುತ್ತೀರೋ, ಅದನ್ನು ಕೊಡಬಲ್ಲದು ರಾಮಾಯಣ. ಯಾರು ರಾಮಾಯಣವನ್ನು ಕೇಳ್ತಾ ಇರ್ತಾರೋ, ರಾಮಾಯಣವು ಅವರ ಮನೆಯಲ್ಲಿರುವ ವಿಘ್ನಕಾರೀ ಶಕ್ತಿಗಳನ್ನು ಇಲ್ಲವಾಗಿಸುತ್ತದೆ. ಪ್ರಯಾಣ ಹೊರಟಾಗ, ರಾಮಾಯಣವನ್ನು ಅನುಸಂಧಾನ ಮಾಡಿದರೆ, ಕ್ಷೇಮವಾಗಿ ಮನೆಯನ್ನು ತಲುಪುತ್ತೇವೆ. ರಜಸ್ವಲೆಯ ಸ್ತ್ರೀಯರು ರಾಮಾಯಣವನ್ನು ಕೇಳಿದರೆ, ಉತ್ತಮೋತ್ತಮವಾದ ಮಕ್ಕಳಿಗೆ ತಾಯಂದಿರಾಗುತ್ತಾರೆ.
ಸಂಪೂರ್ಣ ರಾಮಾಯಣವನ್ನು ಕೇಳಿ. ಅಂತವರ ವಿಷಯದಲ್ಲಿ ರಾಮನು ಸಂಪ್ರೀತನಾಗಿರುತ್ತಾನೆ. ರಾಮನೆಂದರೆ ಸನಾತನ, ಸದಾತನನಾದ ಶ್ರೀವಿಷ್ಣು. ಆದಿದೇವ ಅವನು. ಪ್ರಭು ನಾರಾಯಣ ಅವನು ರಾಮನಾಗಿ, ಲಕ್ಷ್ಮಣನು ಆದಿಶೇಷನಾಗಿ ಬಂದಿರುವಂಥದ್ದು. ಆಯುಸ್ಸು, ಆರೋಗ್ಯ, ಯಶಸ್ಸು, ಸೌಭ್ರಾತೃತ್ವ, ಬುದ್ಧಿಯನ್ನು ಕೊಡುತ್ತದೆ ರಾಮಾಯಣ. ಕೊಟ್ಟಕೊನೆಯಲ್ಲಿ, ಈ ಶ್ಲೋಕವಿದೆ. “ಏವಮೇತತ್ ಪುರಾವೃತ್ತಂ”, ಕಥೆಯಲ್ಲ ಇದು. ಇದು ಹೀಗೆ ನಡೆಯಿತು. ಪುರಾಣವಲ್ಲ, ಇತಿಹಾಸವಿದು. “ಭದ್ರಮಸ್ತುವಃ” ಇದನ್ನು ಕೇಳಿದವರಿಗೆ ಮಂಗಲವಾಗುವುದು. ಇತರರಿಗೂ ಹೇಳು ರಾಮಾಯಣವನ್ನು. ಹೇಳಿದರೆ, “ಪ್ರವ್ಯಾಹರತ ವಿಸ್ರಬ್ಧಂ, ಬಲಂ ವಿಷ್ಣೋಃ ಪ್ರವರ್ಧತಾಮ್”. ನಮ್ಮ ಬದುಕಿನಲ್ಲಿರುವ ರಾವಣಬಲವು ಹೋಗಿ ವಿಷ್ಣುವಿನ ಬಲ ಹೆಚ್ಚಿಸುವದು. ಯಾರು ರಾಮಾಯಣವನ್ನು ಬರೆಯುತ್ತಾರೋ, ಅವರ ವಾಸ ಕೈಲಾಸ. ಅಥವಾ ಅವರು ಎಲ್ಲಿ ವಾಸ ಮಾಡುತ್ತಾರೋ, ಅಲ್ಲಿ ವೈಕುಂಠ ಸಿಗುವುದು. ಜೀವಿಗಳಿಗೆ ರಾಮಾಯಣಪ್ರಸರಣದ ಕಾರ್ಯ ಮಾಡಬೇಕು.
ಹೀಗೆ 154 ದಿನಗಳ ಧಾರಾರಾಮಾಯಣ ಸಾಕ್ಷಾತ್ ರಾಮನ ಸಮ್ಮುಖದಲ್ಲಿ, ರಾಮನ ದ್ವಾರದಲ್ಲಿ ಇಡೀ ರಾಮಕಥೆ ನಡೆದಿದೆ. ಹನುಮತ್ಪೀಠದ ಹನುಮನ ಸಾನ್ನಿಧ್ಯದಲ್ಲಿ ಧಾರಾರಾಮಾಯಣ ಮುಗಿದಿದೆ. ಇದಕ್ಕೊಂದು ಸಂಕಲ್ಪವೂ ಇದೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆಗಾಗಿ. ಸ್ಥಾಪಿತವಾಗಿ, ಭಾರತವನ್ನೂ, ವಿಶ್ವವನ್ನೂ ಬೆಳಗಬೇಕು ಅದು. ಭಾರತದ ಅಪೂರ್ವವಾದ ವಿದ್ಯೆ ಕಲೆಗಳನ್ನು ಬೆಳೆಸಬೇಕು. ಕೋಟ್ಯಂತರ ವಿದ್ಯಾರ್ಥಿಗಳನ್ನ ಬೆಳಗಿಸಬೇಕು. ಈ ಸಮಗ್ರ ರಾಮಾಯಣದ ಕಥನ, ಶ್ರವಣ, ಅನುಸಂಧಾನ, ಕೀರ್ತನದ ಮಹಾತಪಸ್ಸಿನಿಂದ ಬರುವ ಪುಣ್ಯದ ಬಲದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮೂಡಿಬರಲಿದೆ.
ಹರೇರಾಮ
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply