ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
“ಬದುಕು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು”. ಕಪಿಗಳಿಗೀಗ ಬಿಲದ ವಾಸದ ಅನುಭವವಿದಾಗಿದೆ. ಆರಂಭದಲ್ಲಿ ಬೆದರದೆ ಏನೂ ಕಾಣದ ಕತ್ತಲೆ, ಮತ್ತೆ ಏನೂ ಕಾಣದಷ್ಟು ಬೆಳಕು ; ಆದರೆ ಒಳ ಹೊಕ್ಕಾಗ ವಿಚಿತ್ರ ಲೋಕವೇ ಇದೆ.

ಅಲ್ಲಿ ಕಪಿಗಳು ಸ್ವರ್ಣ ನಗರಿಯನ್ನು ನೋಡಿದರು. ಅಲ್ಲಿ ಬಂಗಾರದ ‘ ಗಳು, ಹವಳದ ಮಣಿಗಳಂತಿರುವ ಹೂ- ಹಣ್ಣು, ಹಂಪಲುಗಳು, ಸುತ್ತಲೂ ಹಾರಾಡುವ ಬಂಗಾರದ ದುಂಬಿಗಳು, ಚಿನ್ನದ ಒಡವೆಗಳಿಂದ ಅಲಂಕೃತವಾದ ವೃಕ್ಷಗಳು, ಬಾಲಸೂರ್ಯನಂತೆ ಹೊಳೆಯುವ ತಾವರೆಗಳು, ಸ್ವರ್ಣ ಪದ್ಮ, ಚಿನ್ನದ ಮೀನುಗಳು, ಆಮೆಗಳು, ಬಂಗಾರದ ಭವನ, ಮುತ್ತಿನಿಂದ ಅಲಂಕೃತವಾದ ಕಿಟಕಿಗಳು, ರತ್ನ – ವರ್ಣಗಳಿಂದ ಚಿತ್ರಿತವಾದ ಶಯನಾಸನಗಳು, ಬಣ್ಣ ಬಣ್ಣದ ಉಣ್ಣೆಗಳು ಮತ್ತು ಬಣ್ಣ ಬಣ್ಣದ ರಾಶಿ ವಸ್ತ್ರಗಳು, ಚಂದನ, ಗಂಧ ಮೊದಲಾದ ಸುವಸ್ತುಗಳು, ರುಚಿ-ಶುಚಿಯಾದ ಖಾದ್ಯಗಳು, ಫಲ-ಕಂದ ಮೂಲಗಳು, ಶ್ರೇಷ್ಠವಾದ ಬಗೆ ಬಗೆಯ ಪೇಯಗಳು ಹೀಗೆ ಎಲ್ಲವೂ ಇದ್ದರೂ…ಅಲ್ಲಿ ಯಾರೂ ಇಲ್ಲ ; ನಿರ್ಜನ.

ಪ್ರಾಣ ಹೋಗುವಷ್ಟು ಹಸಿವೆ ಬಾಯಾರಿಕೆಗಳಿದ್ದರೂ, ಕಪಿಗಳು ಸೀತೆಯನು ಹುಡುಕುತ್ತಾ ಕಂಡದ್ದು… ಇಂತಹ ಅದ್ಭುತ ಲೋಕವನು. ಆದರೂ ಅಲ್ಲಿ ಯಾರೂ ಇಲ್ಲ. ಹೀಗೆ ಮುಂದಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಸನಿಹದಲ್ಲಿ ಸ್ತ್ರೀ ರೂಪವೊಂದು ಕಂಡಿತು. ನಾರುಮಡಿಯನು ಉಟ್ಟುಕೊಂಡು ಕೃಷ್ಣಾಜಿನವನು ಹೊದ್ದುಕೊಂಡಿದ್ದಾಳೆ. ತಪಸ್ವಿನಿ, ಆಹಾರ, ನೇಮ-ನಿಯಮಗಳಿಂದ ಕೂಡಿದ ತಾಪಸಿ, ಅಲ್ಲಿರುವ ವಸ್ತುಗಳಿಂದ ಹೆಚ್ಚು ಕಾಂತಿ ಅವಳಿಗಿತ್ತು. ಅವಳು ಆ ವನವನು ಬಳಸುತ್ತಿಲ್ಲ. ಆದರೆ ಮೊದಲು ಆಕೆಯನ್ನು ನೋಡಿ ಬೆದರಿದ ಕಪಿಗಳು ವಿಸ್ಮಯಗೊಂಡಿದ್ದರು.

ಆಗ ಹನುಮಂತನು ಮುಂದೆ ಬಂದು, ನಮಸ್ಕರಿಸಿ, ಆ ವೃದ್ಧೆ ತಪಸ್ವಿಯನು ಇದು ಯಾರದ್ದು ಭವನ? ಈ ಹೇಮ ಯಾರದ್ದು? ಎಂದು ಪ್ರಶ್ನಿಸಿದನು ಮತ್ತು ಜೊತೆಗೆ ತಮ್ಮ ಪ್ರಸ್ತುತ ಪರಿಚಯವನು ಮಾಡಿದನು.

ಹಸಿವು ಬಾಯಾರಿಕೆಗಳಿಂದ ಬಳಲಿ ಬಂದ ನಾವು, ಈ ವಿಚಿತ್ರವಾದ ಸಂಗತಿಗಳನ್ನು ನೋಡಿ ನಮ್ಮವರು ಬೆದರಿದ್ದಾರೆ, ಅಪ್ರತಿಜ್ಙರಾಗಿದ್ದಾರೆ. ಯಾರ ತೇಜಸ್ಸಿನಿಂದ ಈ ವೃಕ್ಷಗಳಿಗೆ ಬಂಗಾರದ ತೇಜಸ್ಸು ಬಂತು? ಈ ಬಿಲದೊಳಗಿರುವ ಏಳುಪ್ಪರಿಗೆಯ ಮನೆ, ಮುಕ್ತಾ ಮಣಿಯ ಅಲಂಕಾರ ಇದೆಲ್ಲಾ ಯಾರದು? ನೀನು ಯಾರು? ತಾಪಸಿಯಾದ ನೀನು ಯಾರು? ಏನಿದು ಅನುಭವ? ಎಂದು ಹನುಮಂತನು ಪ್ರಶ್ನಿಸುವನು.

ಆಗ ಸಮಸ್ತ ಜೀವಗಳ ಹಿತವನ್ನು ಬಯಸುವವಳು, ಧರ್ಮ – ಚಾರಿಣಿ, ಒಳಿತಿನಲ್ಲಿ ಮನಸ್ಸಿಟ್ಟವಳು ಬಿಲದ ಪರಿಚಯವನ್ನು ಮಾಡಿಕೊಡುವಳು.

ಮಾಯಾ ಮಯನು ನಿರ್ಮಿಸಿದ ಸ್ವರ್ಣಮಯವಾದ ಕಾಂಚಾನ ನಗರವಿದು. ಮಯ ಎಂಬುವ ಅಸುರ ಶಿಲ್ಪಿ. ರಾವಣನಿಗೆ ಹೆಣ್ಣು ಕೊಟ್ಟ ಮಾವ. ಆತ ಸಾವಿರ ವರುಷಗಳ ಕಾಲ ತಪಸ್ಸನ್ನು ಮಾಡಿ,”ಶುಕ್ರನ ಸಂಪತ್ತೆಲ್ಲವೂ ಬರಲಿ” ಎಂಬುದಾಗಿ ವರವನ್ನು ಕೇಳಿದ. ನಂತರ ಈ ಬಿಲವನ್ನು ನಿರ್ಮಿಸಿ ಕೆಲಕಾಲ ಅವನಲ್ಲಿ ಸುಖವಾಗಿದ್ದ.
ಹೀಗೆ ಬಯಸಿದ್ದನ್ನು ಅನುಭವಿಸುವಾತ. ನಂತರ ದೇವಲೋಕದ ಅಪ್ಸರೆಯಾದ ಹೇಮೆಯನು ಬಯಸಿದ ಮತ್ತು ಅವಳಲ್ಲಿ ನಿರತನಾದ. ಇದನ್ನು ತಿಳಿದ ಇಂದ್ರನು ಸಹಿಸಲಾರದೆ ಮಯನ ಮೇಲೆ ಆಕ್ರಮಣವನು ಮಾಡಿ, ಮಯನನ್ನು ಕೊಂದನು. ಆಗ ಕಾಂಚಾನ ವನವು ಅನಾಥವಾಯಿತು. ಅನಂತರ ಚತುರ್ಮುಖ ಬ್ರಹ್ಮನು ಹೇಮೆಗೆ ಈ ವನವನ್ನು ನೀಡಿದ. ಆದರೆ ನಾನು ಹೇಮೆಯಲ್ಲ. ನಾನು ಮೇರು ಸಾವರ್ಣಿಯ ಮಗಳು ‘ಸ್ವಯಂಪ್ರಭಾ’ . ನೃತ್ಯ – ಗೀತ ವಿಶಾರದೆಯಾದ ಹೇಮೆಯು ನನ್ನ ಪ್ರಿಯ ಸಖಿ. ಅವಳ ಪ್ರಿಯ ಸಖಿಯಾದ ಕಾರಣ ಇದನ್ನು ರಕ್ಷಿಸುತ್ತಿದ್ದೇನೆ.

ಯಾರು ನೀವೆಲ್ಲ? ನೀವು ಯಾಕೆ ಕಾಡು-ಮೇಡು ಅಲೆಯುತ್ತಿದ್ದೀರಿ? ನಿಮಗೆ ಇಲ್ಲಿನ ದಾರಿ ತೋರಿದವರು ಮತ್ತು ದಾರಿಯ ಗುರುತು ಹೇಗೆ ಸಿಕ್ಕಿತು? ಎಂಬುದಾಗಿ ಹೇಳಿ ಆದರೆ ಅದಕ್ಕಿಂತ ಮೊದಲು ನಿಮ್ಮ ಬಾಯಾರಿಕೆ ಹಸಿವುಗಳನು ನೀಗಿಸಿಕೊಳ್ಳಿ. ಕುಡಿಯಲು ಶುಚಿಯಾದ ನೀರಿದೆ, ರುಚಿಯಾದ ಪೇಯಗಳು, ಭೋಜನವಿದೆ. ಕಂದಮೂಲ ಫಲಗಳಿವೆ… ಸೇವಿಸಿ ಎಂದಾಗ ಕಪಿಗಳು ತಮ್ಮ ಹಸಿವು ನೀರಡಿಕೆಗಳನು ನೀಗಿಸಿಕೊಂಡರು. ಮತ್ತು ವಿಶ್ರಾಂತಿಯನು ಪಡೆದರು.

ಅವರ ವಿಶ್ರಾಂತಿಯ ಬಳಿಕ ಆ ತಾಪಸಿಯು ನಿಮ್ಮ ಹಸಿವು ಬಾಯಾರಿಕೆಗಳು ನೀಗಿತೇ? ನೀಗಿದ್ದಲ್ಲಿ ನಾನು ಒಂದು ಕೇಳುತ್ತೇನೆ. ನೀವು ಹೇಳಬಹುದಾದರೆ ಮತ್ತು ನಾನು ಕೇಳಬಹುದಾಗಿದ್ದರೆ ಹೇಳಿ ಎಂದಾಗ ಹನುಮಂತ ಇಡೀ ಕಥೆಯನ್ನು ಹೇಳಿದ.

ಸರ್ವ ಲೋಕದ ದೊರೆ, ಮಹೇಂದ್ರ, ವರುಣನಂತಿರುವ ಪ್ರಭು ರಾಮ, ದಶರಥ ತನಯ ಕಾಣಾಂತರಗಳಿಂದ ದಂಡಕಾರಣ್ಯ ಸೇರುವಂತಾಯಿತು; ಜೊತೆಗೆ ಪ್ರಿಯೆ ಸೀತೆ ಮತ್ತು ಅನುಜ ಲಕ್ಷ್ಮಣ. ಆದರೆ ಸೀತೆಯನು ಅವಳ ಇಚ್ಛೆಗೆ ವಿರುದ್ಧವಾಗಿ ಅಪಹರಣವು ನಡೆದಿದೆ. ಸುಗ್ರೀವ ನಮ್ಮ ವಾನರ ಮುಖ್ಯಸ್ಥ. ಕಿಷ್ಕಿಂಧೆಯ ಅಧಿಪತಿ. ಅವನ ನೇತೃತ್ವದಲ್ಲಿ ರಾಮನಿಂದ ಕಳುಹಿಸಲ್ಪಟ್ಟ ನಾವು ಈ ಕಡೆಗೆ ಬಂದವರು. ಕುಸುಮ ಕೋಮಲೆಯನು ಪರಮ ಪಾತಕಿಯಿಂದ ರಕ್ಷಿಸಬೇಕು. ಮರದ ಬುಡದಲ್ಲಿ ಕಾಲುಚಾಚಿ ಕೂತಿದ್ದೆವು, ಮುಖದ ಬಣ್ಣ ಮಾಸಿತ್ತು, ಚಿಂತೆಯು ಆವರಿಸಿತ್ತು, ಚಿಂತಾ ಸಾಗರವನು ದಾಟಲಾರದೆ ಒಂದು ಹೊತ್ತು ಗಮನಿಸಿದಾಗ ಈ ಬಿಲದಿಂದ ಜಲಚರ ಪಕ್ಷಿಗಳು ನೆನೆದ ರೆಕ್ಕೆಯಲಿ ಹಾರಿ ಬರುವಾಗ ಇಲ್ಲಿ ನೀರಿದೆ ಎಂದು ಖಚಿತವಾಯಿತು. ಆ ಕಾರಣಕ್ಕೆ ಈ ಬಿಲವನ್ನು ಪ್ರವೇಶ ಮಾಡಿದೆವು.

ಈ ಗಾಡಾಂಧಕಾರಕ್ಕೆ ತಲುಪಿದ ನಂತರ ನೋಡಿದ್ದು ಈ ಅದ್ಭುತ ಲೋಕ, ನಿನ್ನ ದರ್ಶನ ಆಯಿತು, ನೀನಂತೂ ಆತಿಥ್ಯ ಧರ್ಮಕ್ಕೆ ದೇವತೆಯಂತಿದ್ದೀಯ. ಅನ್ನ, ನೀರುಗಳನ್ನು ಕೊಟ್ಟು ನಮ್ಮ ಹಸಿವೆಯನು ನೀಗಿಸಿದೆ. ಇಲ್ಲದಿದ್ದರೆ ಜೀವವೇ ಹೊರಟು ಹೋಗುತ್ತಿತ್ತು. ನಿನ್ನಿಂದ ಮಹದುಪಕಾರವಾಯಿತು. ಆದ್ದರಿಂದ ಹೇಳು ನಿನಗೇನು ನಾವು ಪ್ರತ್ಯುಪಕಾರ ಮಾಡಬೇಕು? ಎಂದು ಕೇಳಿದಾಗ, ಆಕೆ ನಕ್ಕು… ನನಗೆ ತುಂಬಾ ಖುಷಿಯಾಗಿದೆ. ನನಗೆ ಧರ್ಮವೇ ಬದುಕು, ಉಸಿರಾಟ ಎಲ್ಲವೂ ಮತ್ತು ಧರ್ಮವೇ ನನಗೆ ಎಲ್ಲವನು ಕೊಟ್ಟಿದೆ ಹಾಗೂ ಕೊಡುತ್ತದೆ. ಧರ್ಮವೇ ನನಗೆ ಕಾಮಧೇನು ಎಂಬುದಾಗಿ ಆಕೆಯು ಧರ್ಮದ ಮಹತ್ವನ್ನು ಕೊಂಡಾಡುವಳು.

ಆಗ ಹನುಮಂತನು ಆ ತಾಪಸಿಯು ಸಂಭೋಧಿಸಿ, ಮುಂದುವರೆದು – ಸ್ವಯಂಪ್ರಭೆ… ನಾವೂ ಧರ್ಮ – ಚಾರಿಗಳು. ಈ ಬಿಲದಲ್ಲೇ ಒಂದು ತಿಂಗಳು ಕಳೆದು ಹೋಗಿದೆ. ನಮಗೆ ಒಂದು ಅವಧಿಯನ್ನು ನಿಗದಿ ಮಾಡಲಾಗಿದೆ. ಒಂದು ತಿಂಗಳು ದಾಟಿ ಕಿಷ್ಕಿಂಧೆಗೆ ಬರಿಗೈಯಲ್ಲಿ ಹೋದರೆ ಮೃತ್ಯು ದಂಡ. ಈ ಬಿಲದೊಳಗೆ ಸುತ್ತಾಡಿ ಒಂದು ತಿಂಗಳು ಕಳೆದು ಹೋಗಿದೆ. ನಮಗಿನ್ನು ಆಯಸ್ಸು ಗತಿಸಿ ಹೋಗಿದೆ. ಅಂತಹ ನಮ್ಮನ್ನು ಕಾಪಾಡುವೆಯಾ?!

ನಾವು ಮಾಡಬೇಕಾದ ಮಹತ್ಕಾರ್ಯವಾದ ಸೀತಾನ್ವೇಷಣೆಯು ಉಳಿದಿದೆ. ಆದ್ದರಿಂದ ಈ ಬಿಲದಿಂದ ಹೊರಗೆದಾಟಿಸು ಎಂದಾಗ… ಸ್ವಯಂಪ್ರಭೆಯು – ಬಂದವರು ಇಲ್ಲಿಂದ ಜೀವಂತ ಹೋಗುವ ಪ್ರಶ್ನೆಯೇ ಇಲ್ಲ, ಆದರೆ ನಿಮ್ಮನ್ನು ನಾವು ರಕ್ಷಿಸುವೆ. ಮಯನ ರಚನೆಯೇ ಹಾಗೆ. ಇಲ್ಲಿಗೆ ಬಂದವರು ಬದುಕಿ ಹೊರಗೆ ಹೋಗದಂತೆ ರಚನೆ. ಆದರೆ ಅದನ್ನು ಮೀರಿರುವ ತಪಸ್ಸು ನನ್ನದು. ಆದ್ದರಿಂದ ನಾನು ನಿಮ್ಮನ್ನು ಹೊರಗೆ ಕಳುಹಿಸುವೆ.

ನಂತರ ಕಪಿವೀರರುಗಳನು ಕಣ್ಣು ಮುಚ್ಚಲು ಹೇಳುವಳು. ಯಾವಾಗ ಅವರು ತಮ್ಮ ಕೈಗಳಿಂದ ಗಟ್ಟಿಯಾಗಿ ಮುಚ್ಚಿದರೋ ಆಗ ಕಣ್ಣು ಮುಚ್ಚಿ ತೆರೆಯುವಷ್ಟರಲಿ ಗುಹೆಯಿಂದ ಹೊರಗಿದ್ದರು ಮತ್ತು ಸ್ವಯಂಪ್ರಭೆಯು ಜೊತೆಗಿದ್ದಳು. ಇದು ವಿಂಧ್ಯ ಗಿರಿ. ಅತ್ತ ಮುಂದೆ ಕಾಣುತ್ತಿರುವುದು ಸಮುದ್ರ ಎಂದು ಸ್ಥಳ ಪರಿಚಯ ಮಾಡಿದಳು. ಒಳ್ಳೆಯದಾಗಲಿ ಎಂದು ಹರಸಿ ತಾನು ಬಿಲವನ್ನು ಸೇರುವಳು.

ದೊಡ್ಡ ದೊಡ್ಡ ಸಮುದ್ರದಲೆಗಳ ಶಬ್ದ. ಕಪಿಗಳು ಸಮುದ್ರವನು ವೀಕ್ಷಿಸಿದರು. ಹೂ ಬಿಟ್ಟ ಬನದ ಚಂದವನ್ನು ನೋಡಿ ದಿಗಿಲುಗೊಂಡವು. ಕಾಲವು ವಸಂತಋತುವನು ಸಮೀಪಿಸುತ್ತಿದೆ. ಒಂದು ತಿಂಗಳು ಕಳೆದಿದೆ…ಸೀತೆಯನ್ನು ಕಂಡಿಲ್ಲವೆಂದು ಭಯ ಮತ್ತು ಶಂಕೆಯಿಂದ ಕಪಿಗಳು ಇದ್ದವು.

ಆಗ ಅಂಗದನನು ಹಿರಿಯ ಕಪಿಗಳನು ಗುರುತಿಸಿ, ಗೌರವಿಸಿ, ಮಧುರ ಮಾತುಗಳಿಂದ ವಿಚಾರವನು ವಿಮರ್ಶಿಸಿದ. ಪುಷ್ಠ ಮತ್ತು ದೀರ್ಘವಾದ ಭುಜಗಳುಳ್ಳ ಅಂಗದನು ಒಂದು ವಿಚಾರವನ್ನು ಹೇಳುವನು.

ನಾವು ಹೊರಟಿರುವ ಕಾರ್ಯದ ಗಡುವು ಮುಗಿದಿದೆ. ಸುಗ್ರೀವ, ರಾಮನ ಪ್ರಿಯ ಆಕಾಂಕ್ಷಿಗಳು, ಕಪಿವೀರರು ನೀವು. ಅಂತಹ ನೀವು ನನ್ನನ್ನು ಮುಂದಿಟ್ಟುಕೊಂಡು ಕಪಿರಾಜನ ಆಜ್ಞೆಯಂತೆ ಹೊರಟು ಬಂದವರು. ಆದರೆ ಈಗಿನ ಪರಿಸ್ಥಿತಿ “ಕಾರ್ಯ ಪೂರೈಸದೇ ಇರುವುದರಿಂದ ಮರಣವು ಸಿದ್ಧವಾಗಿದೆ. ಕಪಿರಾಜನ ಆದೇಶವನು ಪಾಲಿಸದವರಿಗೆ ಬದುಕುಂಟೇ.? ಸುಗ್ರೀವನೇ ಸ್ವಯಂ ನಿಶ್ಚಯಿಸಿದ. ಸಮಯವು ದಾಟಿರುವುದರಿಂದ ಇಲ್ಲಿಯೇ ಅದಕ್ಕೆ ಪ್ರಾಯೋಪವಿಷವನ್ನು ಮಾಡೋಣ. ದರ್ಭೆಯನು ಹಾಸಿ; ಅನ್ನ ನೀರು ತ್ಯಜಿಸಿ ಕೂರೋಣ. ಅಲ್ಲಿಯೂ ಹೋದರು ಸಾವು, ಇಲ್ಲಿಯಾದರೂ ಸಾವು. ಆದ್ದರಿಂದ ಇಲ್ಲಿಯೇ ಸಾಯೋಣ.

ನನಗೆ ಪಟ್ಟವನು ಕೊಟ್ಟಿದ್ದು ಸುಗ್ರೀವನಲ್ಲ. ನರೇಂದ್ರನಾದ ಪ್ರಭು ಶ್ರೀರಾಮ. ರಾಮನಿಗೆ ನನ್ನ ಮೇಲೆ ವಾತ್ಸಲ್ಯ ಇದೆ, ಆದರೆ ಸುಗ್ರೀವನಿಗೆ ಇಲ್ಲ. ಮಾತ್ರವಲ್ಲ ಹಳೆ ವೈರವಿದೆ.

ಹಾಗಿರುವಾಗ ನನಗೆ ಘೋರ ಶಿಕ್ಷೆಯನ್ನು ಕೊಡದಿರುವನೇ…!? ಇದು ಪವಿತ್ರವಾದ ಸಮುದ್ರ ತೀರ. ಆದ್ದರಿಂದ ತಪಸ್ಸಿನ ಮೂಲಕವಾಗಿ ಪ್ರಾಣ ತ್ಯಾಗ ಮಾಡುತ್ತೇನೆ. ಈಗ ಅವಧಿ ಮುಗಿದಿದೆ. ಸೀತೆ ಸಿಕ್ಕಿಲ್ಲ, ಬೇರೇನು ಹೊಳೆಯುತ್ತಿಲ್ಲ ಎಂದಾದಾಗ ಅಂಗದ ಮೃತ್ಯು ಮುಖನಾಗಿ ಬಿಟ್ಟಿದ್ದಾನೆ. ನಾಯಕನು ಧೃತಿಗೆಟ್ಟಾಗ ಹಿಂಬಾಲಕರು ಧೃತಿಗೆಡುತ್ತಾರೆ. ರಾಮನ ಮನಸು ಪೂರ್ತಿ ಸೀತೆಯಲ್ಲಿ ನೆಟ್ಟಿದೆ. ಆದರೆ ವಾನರರಿಗೆ ಗುಟುಕು ಆಸೆ-ಹೇಗಾದರೂ ಮಾಡಿ ಸೀತೆಯ ಸುದ್ದಿಯನ್ನಾದರೂ ತೆಗೆದುಕೊಂಡು ಹೋಗೋಣ. ಹಾಗೆಯೇ ನೇರವಾಗಿ ಹೋದರೆ ಮೃತ್ಯುವಿನ ಬಾಯಿಗೆ ಹೋದಂತೆ ಹೀಗೆ.

ಆಗ ಭಯಗೊಂಡ ಕಪಿಗಳಿಗೆ ತಾರನು ಹೊಸದೊಂದು ಉಪಾಯ ಮಾಡಿದ. ಪುನಃ ಸ್ವಯಂಪ್ರಭೆ ಇರುವ ಗುಹೆಗೆ ಹೋಗೋಣ, ಅಲ್ಲಿಗೆ ಯಾರೂ ಬರಲಾರರು ಎಂದನು.

ಸೀತೆಯ ಹುಡುಕಲು ಹೊರಟ ಗುಂಪು ಹಾದಿ ತಪ್ಪುತ್ತಿದೆ. ಒಟ್ಟಾಗಿ ಉಳಿದ ಕಪಿಗಳೆಲ್ಲರೂ ತಾರ ಮತ್ತು ಅಂಗದನಲ್ಲಿ ಬದುಕುವ ದಾರಿ ಹುಡುಕಿ ಎಂದರು. ಇದನ್ನೆಲ್ಲಾ ನೋಡುತ್ತಾ, ಹನುಮಂತನು ಗಮನಿಸುತ್ತಿದ್ದಾನೆ. ತಾರನ ಮಾತುಗಳನು ಕೇಳಿ ಕಪಿ ರಾಜ್ಯವು ಅಪಹರಣವಾಯಿತು ಎಂದು ಅರಿತ. ಅಂಗದನನು ಅವಲೋಕಿಸಿದ. ಅವನಿಗೆ ರಾಜನಾಗುವ ಎಲ್ಲಾ ಲಕ್ಷಣಗಳಿವೆ. ಆದರೆ ಆತ ಇನ್ನೂ ಪಕ್ವವಾಗಿಲ್ಲ. ಅಷ್ಟ ಗುಣಗಳಾದ ಬುದ್ಧಿ, ಕಾಲ ದೇಶಗಳ ಪರಿಜ್ಞಾನ, ದೃಢತ್ವ, ಸರ್ವಕ್ಲೇಶಗಳ ಸಹಿಷ್ಣು, ವೇದ – ವಿಜ್ಞಾನ ಅರಿತವ, ಸರಳತೆ, ಅರಿ ಸಂವಾದಿತ, ಶೌರ್ಯ, ಶಕ್ತಿಯ ಅರಿವುಳ್ಳವ, ಕೃತಜ್ಞತೆ ಭಾವವಿರುವವ, ಅಸಹನೆ ಇಲ್ಲದವ ಇವೆಲ್ಲವೂ ಮಹಾರಾಜನಿಗಿರಬೇಕಾದ ಗುಣಗಳು ಮತ್ತು ಇವೆಲ್ಲವೂ ಅಂಗದನಲ್ಲಿದೆ.

ಕ್ಷಣ ಕ್ಷಣಕ್ಕೂ ಆತನ ತೇಜಸ್ಸು ಶುಕ್ಲ ಪಕ್ಷದ ಚಂದ್ರನಂತೆ ಹೆಚ್ಚುತ್ತಾ ಇದೆ. ಇದೆಲ್ಲಾ ಒಳ್ಳೆಯದು ಆದರೆ ಸದ್ಯಕ್ಕೆ ತಾರನ ಮಾತನ್ನು ಕೇಳುತ್ತಿದ್ದಾನೆ. ಇದು ಇಂದ್ರನು ಶುಕ್ರನ ಮಾತನು ಕೇಳಿದಂತಾಗುವುದೆಂದು ಹನುಮಂತನಿಗೆ ಭಾಸವಾಯಿತು. ಇದನ್ನೆಲ್ಲಾ ಗಮನಿಸಿದ ಹನುಮಂತ ಬೇಧದಿಂದ ಕಪಿಗಳನ್ನು ಅಂಗದನಿಂದ ಬೇಧಿಸಿದ ಮತ್ತು ಅಂಗದನೊಂದಿಗೆ ಕೋಪಿಸಿದ.

ಮುಂದುವರೆದು ಅಂಗದನಿಗೆ ಈ ರೀತಿ ಹೇಳಿದ- ನೀನು ತಂದೆಗಿಂತಲೂ ಯುದ್ಧದಲ್ಲಿ ಸಮರ್ಥ, ಕಪಿ ರಾಜ್ಯವನು ತಂದೆಯನು ಪಾಲಿಸಿದಂತೆ ರಾಜ್ಯವ ಪಾಲಿಸುವೆ. ಇದರಲ್ಲಿ ಸಂಶಯವಿಲ್ಲ. ಆದರೆ ಈಗ ಅಲ್ಲ. ಸದ್ಯಕ್ಕೆ ನಿನ್ನ ಮಾತನ್ನು ಕೇಳಲಾರರು, ಚಂಚಲತೆಯಿಲ್ಲದವರು ನಿನ್ನ ಜೊತೆಗಿರುವರು. ಸಾಮ, ಧಾನ, ದಂಡ, ಬೇಧಗಳಿಂದ ಸುಗ್ರೀವನಿಂದ ಬೇರ್ಪಡಿಸಲು ಸಾಧ್ಯವಿಲ್ಲ.

ನೀನು ನಿನ್ನ ಶಕ್ತಿಯೇನೆಂದು ಅರಿತುಕೊಳ್ಳುಬೇಕು, ಸುಗ್ರೀವನ ಜೊತೆಗೆ ರಾಮ-ಲಕ್ಷ್ಮಣರಿದ್ದಾರೆ, ನೀನು ಹೇಳಿದೆಯಲ್ಲಾ ಬಿಲ ಅಭೇದ್ಯವೆಂದು ; ಆದರೆ ಲಕ್ಷ್ಮಣನ ಬಾಣಗಳಿಗೆ ಅದು ದೊಡ್ಡ ಕೆಲಸವಲ್ಲ. ಲಕ್ಷ್ಮಣನು ಬಾಣ ಪ್ರಯೋಗ ಮಾಡಿದರೆ ಈ ಬಿಲವು ಎಳೆಯ ದೊನ್ನೆಯಂತೆ ಹರಿದು ಹೋಗುತ್ತದೆ.

ಹೇ ಅಂಗದ ಲಕ್ಷ್ಮಣನ ಬಳಿ ಎಂತಹ ಬಾಣಗಳಿವೆ ತಿಳಿದಿದೆಯೋ? ನನಗಂತೂ ತಿಳಿದಿದೆ. ಸುಮ್ಮನೇತಕೆ ಲಕ್ಷ್ಮಣನ ಬಾಣಕ್ಕೆ ತುತ್ತಾಗುವೆ? ಮತ್ತು ನೀನು ಹೋಗಿ ಆ ಬಿಲದೊಳಗೆ ಹೊಕ್ಕರೆ ಈಗಲೇ ಬಿಟ್ಟು ಹೋಗುವ ಈ ಕಪಿಗಳು, ನಿತ್ಯ ಭಯ, ಹಸಿವು ಕ್ಲೇಶಗಳ ಮಧ್ಯೆ ಬದುಕುವಂತಾದಾಗ ಎಲ್ಲರೂ ಬಿಟ್ಟು ಹೋಗುವರು. ಒಂದು ಹುಲ್ಲು ನಲುಗಿದರೆ ನಡುಗುವ ಬದುಕಿನಂಥಾ ಬದುಕನು ಬದುಕಬೇಕೆ ನೀನು? ಅಂಥಾ ಬದುಕು ಬೇಕಾ? ಮಾತಿಗೆ ತಪ್ಪಿದರೆ ಲಕ್ಷ್ಮಣನ ಬಾಣಗಳಿಗೆ ಬಲಿಯಾಗುವುದು ನಿಶ್ಚಯ. ಅದೇ ನಾವೆಲ್ಲರೂ ಕಿಷ್ಕಿಂಧೆಗೆ ಮರಳಿದರೆ ಖಂಡಿತವಾಗಿಯೂ ನಿನಗೆ ಕೇಡು ಮಾಡಲಾರ, ಸುಗ್ರೀವ ಧರ್ಮಕಾಮ, ಅವನಿಗೆ ಪ್ರೀತಿ ಮುಖ್ಯ, ಶುದ್ಧ ಪ್ರತಿಜ್ಞ, ನಿನಗಾಗಿ, ತಾರೆಗಾಗಿ ಪ್ರಾಣಕೊಟ್ಟಾನು ಏಳು ಹೋಗೋಣ ಎಂದಾಗ ಅಂಗದ ಬಿಲ ಪ್ರವೇಶದ ಯೋಜನೆಯನು ಕೈ ಬಿಟ್ಟರು ಆದರೆ ಅಂಗದನಿಗೆ ಕಾರ್ಯವನು ಬಿಡಲು ಮನಸ್ಸಿಲ್ಲ.

ಆದರೂ ಒಂದಿಷ್ಟು ಅಸಮಾಧಾನ ಇಲ್ಲಿ ಅಂಗದನೊಳು ವಾಲಿಯ ಸಿದ್ಧಾಂತವೇ ಇದೆ. ಜೀವಿಸಿರುವಾಗ ಪ್ರಿಯ ಮಹಿಷಿಯನು ಸ್ವೀಕಾರ ಮಾಡಿದವನಿಗೆ ಧರ್ಮ ಏನು ಗೊತ್ತು? ನಂತರ ಮುಂದುವರೆದು-

ರಾಮ ಎಂದರೆ ಧರ್ಮನಿಷ್ಠ, ರಾಮ ಹೇಳಿದ ಕಾರ್ಯವನು ಮರೆತ ಸುಗ್ರೀವನು ಇನ್ನೇನನು ನೆನಪಿಟ್ಟುಕೊಂಡಾನು? ಆತ ಪಾಪ ಹೀನ, ಸ್ಮೃತಿ ಹೀನ. ಅಂಥವನ ಕುಲದಲ್ಲಿ ನಾವು ಉಳಿಯಲು ಸಾಧ್ಯವೇ? ವಿಶ್ವಾಸವನ್ನು ಅವನಲ್ಲಿಡಬೇಕೆ? ನಾನು ಶತ್ರುವಿನ ಮಗ, ಸಿಂಹಾಸನವನು ಕೊಟ್ಟಾನೇ? ಈಗಂತೂ ನನ್ನಿಂದ ಗುಟ್ಟು ಹೊರ ಬಿದ್ದಿತು. ನಾನು ಅಕ್ಷರ ಸಹ ಈಗ ಅನಾಥ, ನನ್ನನ್ನು ಕೊಲ್ಲದಿದ್ದರೆ ರಹಸ್ಯ ಬಂಧನದಲ್ಲಿರಿಸಿಯಾನು, ಆತನು ಕ್ರೂರ, ಘಾತುಕ. ರಾಜ್ಯಕ್ಕಾಗಿ ನನ್ನನ್ನು ಗೃಹ ಬಂಧನ ಮಾಡಬಹುದು, ನೀವು ಪ್ರಾಣೋಪವಿಷವನು ಮಾಡಬೇಕೆಂದೇನಿಲ್ಲ. ನೀವು ಮರಳಿ ಕಿಷ್ಕಿಂಧೆಗೆ ತೆರಳಿ, ನನ್ನನು ಪ್ರಾಣತ್ಯಾಗ ಮಾಡಲು ಬಿಟ್ಟು ಬಿಡಿ. ಇದೋ ನಾನು ಪ್ರತಿಜ್ಞೆ ಮಾಡಿ ಹೇಳುತ್ತಿದ್ದೇನೆ ಎಂದು ತನ್ನ ವಿದಾಯದ ಮಾತನ್ನು ಹೇಳಿದನು. ರಾಮ-ಲಕ್ಷ್ಮಣರಿಗೆ ನನ್ನ ಪ್ರಣಾಮಗಳನು ಹೇಳಿ, ಚಿಕ್ಕಪ್ಪನಿಗೂ ನನ್ನ ವಂದನೆಗಳು, ನನ್ನ ತಾಯಿ ತಾರೆಗೂ ಪ್ರಣಾಮಗಳನು ತಿಳಿಸಿ ಎಂದು ಹೇಳಿ; ವೃದ್ಧ ವಾನರರಿಗೆ ನಮಸ್ಕಾರ ಮಾಡಿ, ನೆಲದ ಮೇಲೆ ದರ್ಭೆಯನು ಹರಡಿ, ಪ್ರಾಣೋಪವಿಷಕ್ಕಾಗಿ ಮಲಗಿದನು. ಆಗ ಉಳಿದ ವಾನರರಿಗೆ ಅತೀವ ದುಃಖವಾಯಿತು. ಇದ್ದಕ್ಕಿದ್ದಂತೆ ಎಲ್ಲರೂ ಸುಗ್ರೀವನನು ನಿಂದಿಸಿ, ವಾಲಿಯನ್ನು ಹೊಗಳಲಾರಂಭಿಸಿದರು ಮತ್ತು ಅಂಗದನನು ಸುತ್ತುವರೆದು, ಉಳಿದ ವಾನರರು ಸಾವನ್ನು ಪ್ರತೀಕ್ಷೆ ಮಾಡಿ ಸಮುದ್ರದ ಉತ್ತರ ದಿಕ್ಕಿಗೆ ಮುಖಮಾಡಿ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಕುಳಿತರು.

ಅವರ ಆಕ್ರಂದನವು ಪ್ರತಿಧ್ವನಿಸುತ್ತಿತ್ತು. ಇದನ್ನು ಆ ಹಳೇ ಮುದಿ ಗೃದ್ಧ ನೋಡಿದ ಮತ್ತು ತನಗೆ ಇನ್ನು ಬಹಳ ಸಮಯಗಳವರೆಗೆ ಆಹಾರ ಸಮಸ್ಯೆಯಿಲ್ಲ ಎಂದು ಕಪಿಗಳ ಮುಂದೆ ಹೇಳಿತು.

ಆ ಮುದಿ ಗೃದ್ಧ ಯಾರು? ಎಂಬುದಾಗಿ ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box