ಸಾರ್ಥಕ ಜೀವನಕ್ಕೆ ದಾರಿದೀಪ ~ ಜೀವಯಾನ ಪ್ರವಚನ – 7 ~ ಅಕ್ಷರರೂಪ
ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್’ನ ಗುರುಕುಲದ ವಿದ್ಯಾರ್ಥಿಗಳ ಜೀವನಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವುದಕ್ಕಾಗಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ ಜೀವಯಾನ ಪ್ರವಚನಮಾಲಿಕೆಯ ಅಕ್ಷರರೂಪ.
ನೂರು ಯೋಜನ ವಿಸ್ತಾರದ ಯಮಸಭೆ ಅತ್ಯಂತ ವೈಭವದಿಂದ ಕೂಡಿದೆ. ಅಲ್ಲಿ ಉನ್ನತಾಸನದಲ್ಲಿ ಯಮರಾಜ ಕುಳಿತಿದ್ದಾನೆ. ಆತ ಆ ಸಭೆಯ ಅಧ್ಯಕ್ಷ. ಹಾಗಾಗಿ ರತ್ನಪೀಠದಲ್ಲಿ ಬಹಳ ಎತ್ತರದಲ್ಲಿ ಮಂಡಿಸಿದ್ದಾನೆ ಯಮಧರ್ಮಪ್ರಭು. ಈಗ ಪ್ರಶ್ನೆ?,
ಪುಣ್ಯಕರ್ಮರು ಪೂರ್ವ, ಪಶ್ಚಿಮ, ಉತ್ತರ ಮಾರ್ಗಗಳಿಂದ ಯಮನ ಆಸ್ಥಾನವನ್ನು ಪ್ರವೇಶಿಸುವಾಗ ಯಮನ ಪ್ರತಿಕ್ರಿಯೆ ಹೇಗಿರುತ್ತದೆ?, ಎಂದು. ಏಕೆಂದರೆ ಆತನ ಸ್ಥಾನ ದೊಡ್ಡದು, ಮಹಿಮೆ ದೊಡ್ಡದು. ಎಲ್ಲರೂ ದೇಹತ್ಯಜಿಸಿ ಹೋಗಿ ಸೇರಬೇಕಾದಂತಹ ಸ್ಥಾನವದು. ದೇಹತ್ಯಜಿಸಿದ ಮೇಲೆ ಮಾತ್ರವಲ್ಲ, ಇಲ್ಲಿಯೂ ಕೂಡ ಅವನ ಕೈ ನಡೆಯುತ್ತದೆ. ಈ ಲೋಕದಲ್ಲಿನ ದುಃಖಗಳು, ರೋಗಗಳು, ದಂಡನೆಗಳು ಅಲ್ಲಿಂದ ನಿರ್ವಾಹವಾಗುವಂತಹದ್ದು. ಇಂತವನು ತನ್ನ ಸಭೆಗೆ ಪುಣ್ಯಕರ್ಮರು ಬಂದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ? ಎಂದರೆ, ಅದ್ಭುತವಾಗಿದೆ ಅದು.
ಯಮಸ್ಥಾನಾಗತಾಂ ದೃಷ್ಟ್ವಾ ಸ್ವಾಗತಂ ವದತೇ ಮುಹುಃ, ಎಂದರೆ ಯಮ ಆ ಪುಣ್ಯಾತ್ಮರು ಆಗಮಿಸುವಾಗ ಅವರಿಗೆ ತಾನೇ ಸ್ವಾಗತವನ್ನು ಹೇಳುತ್ತಾನೆ ಮತ್ತು ಸಮುತ್ಥಾನಂಚಕುರುತೇ, ತನ್ನ ಸಿಂಹಾಸನವನ್ನು ಬಿಟ್ಟು ಏಳುತ್ತಾನೆ. ಅಷ್ಟು ಮಾತ್ರವಲ್ಲ, ತೇಷಾಂ ಗಚ್ಛತಿ ಸಮ್ಮುಖಂ, ಅವರ ಸಮ್ಮುಖಕ್ಕೆ ಹೋಗುತ್ತಾನೆ. ಈ ರೀತಿಯ ಮೂರು ಹಂತಗಳಲ್ಲಿ ಪ್ರತಿಕ್ರಿಯೆಗಳನ್ನು ಯಮ ನೀಡುತ್ತಾನೆ. ಹೇಳುವಂಥದ್ದು, ಏಳುವಂಥದ್ದು ಮತ್ತು ಸಿಂಹಾಸನವನ್ನು ಬಿಟ್ಟು ಅವರ ಬಳಿ ಹೋಗುವಂಥದ್ದು. ಆ ಸಮಯದಲ್ಲಿ ಆತನಿಗೆ ಸೌಮ್ಯ ರೂಪವಿರುತ್ತದೆ. ಅದು ಹೇಗೆಂದರೆ ತದಾ ಚತುರ್ಭುಜೋ ಭೂತ್ವಾ, ಎಂದರೆ ಯಮನಿಗೆ ನಾಲ್ಕು ಕೈಗಳು ಆ ಸಮಯದಲ್ಲಿ ಇರುತ್ತದೆ. ಆದರೆ ಘೋರ ರೂಪದಲ್ಲಿ ಮೂವತ್ತೆರಡು ಕೈಗಳಿರುತ್ತವೆ. ಆ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಖಡ್ಗವನ್ನು ಹಿಡಿದಿರುತ್ತಾನೆ. ಈ ಸಮಯದಲ್ಲಿ ವಿಷ್ಣುವಿಗೂ ಮತ್ತು ಯಮನಿಗುರುವ ವ್ಯತ್ಯಾಸ ಏನೆಂದರೆ, ವಿಷ್ಣುವಿನ ಕೈಯಲ್ಲಿ ಪದ್ಮವಿರುತ್ತದೆ, ಯಮನ ಕೈಯಲ್ಲಿ ಖಡ್ಗವಿರುತ್ತದೆ. ವಿಷ್ಣುವಿನ ಕೈಯಲ್ಲಿ ಖಡ್ಗ ಇರುತ್ತದೆಯೋ? ಇಲ್ಲವೋ? ಇರುತ್ತದೆ. ವಿಷ್ಣುವಿನ ಖಡ್ಗದ ಹೆಸರು “ನಂದಕ”. ವಿಷ್ಣುವಿನ ಗದೆಗೆ “ಕೌಮೋದಕಿ” ಎಂದು ಹೆಸರು. ಶಿವನ ಧನಸ್ಸು “ಪಿನಾಕ”. ವಿಷ್ಣುವಿನ ಚಕ್ರ “ಸುದರ್ಶನ”. ಹಾಗೆ ಶಂಖ, ಚಕ್ರ, ಗದೆ ಮತ್ತು ಖಡ್ಗವನ್ನು ಯಮ ಸೌಮ್ಯರೂಪನಾಗಿರುವಾಗ ಹಿಡಿದಿರುತ್ತಾನೆ. ಅವನು ಪುಣ್ಯಕರ್ಮರಥಾನಾಂ, ಯಾರು ಪುಣ್ಯಕರ್ಮಗಳಲ್ಲಿ ನಿರತರಾಗಿರುತ್ತಾರೋ ಅವರ ವಿಷಯದಲ್ಲಿ ಸ್ನೇಹಾತ್ ಮಿತ್ರವದಾಚರೇತ್, ಸ್ನೇಹ ತುಂಬಿ ಮಿತ್ರರಂತೆ ವ್ಯವಹಾರ ಮಾಡುತ್ತಾನೆ. ಎಷ್ಟು ಅದ್ಭುತ ನೋಡಿ!. ಈ ಸೃಷ್ಟಿಯ Justice System ಏನಿದೆ ಅದರ ಸರ್ವಾಧ್ಯಕ್ಷ ಆತ. ಅಂತಹವನು ಒಂದು ಒಳ್ಳೆಯ ಕೆಲಸ ಮಾಡಿದವರು ಅವನ ಆಸ್ಥಾನಕ್ಕೆ ಬಂದರೆ ಆತನ ಪ್ರತಿಕ್ರಿಯೆ ಹಾಗೂ ಭಾವವನ್ನು ನೋಡಿ. ರಾಮಾಯಣ ಯಮನನ್ನು ಅಮಿತ್ರಕರ್ಷಣ ಎಂಬ ಶಬ್ದದಿಂದ ಕರೆದಿದೆ. “ಅಮಿತ್ರಕರ್ಷಣ”, ಎಂದರೆ ಯಾರು ಮಿತ್ರರಲ್ಲವೋ ಅವರನ್ನು ಕ್ಲೇಶಪಡಿಸುತ್ತಾನೆ. ಧರ್ಮಕ್ಕೆ ಆಕಾರ ಬಂದಾಗ ಯಮ ಎಂದು ಹೆಸರು. ಹಾಗಾಗಿ ಯಾರು ಧರ್ಮಕ್ಕೆ ಮಿತ್ರರಲ್ಲವೋ, ಧರ್ಮದ ಶತ್ರುಗಳು ಯಾರೋ ಅವರ ಪಾಲಿಗೆ ಕರ್ಷನಃ, ಎಂದರೆ ಅವರನ್ನು ಕ್ಲೇಶಪಡಿಸುತ್ತಾನೆ. ಯಾರು ಧರ್ಮನಿಷ್ಠರೋ ಅವರಿಗೆ ಯಮ ಪರಮಮಿತ್ರ. ಇಷ್ಟಕ್ಕೆ ಮುಗಿಯಲಿಲ್ಲ, ಬಂದವರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ನಮಸ್ಕಾರ ಮಾಡುತ್ತಾನೆ. ನಾವು ಪುಣ್ಯ ಮಾಡಿ ಈ ಲೋಕದಿಂದ ಆ ಲೋಕಕ್ಕೆ ಹೋದರೆ ನಮ್ಮ ಗೌರವ ಎಲ್ಲಿರುತ್ತದೆ ಎಂದರೆ, ಧರ್ಮಪ್ರಭು ಯಮರಾಜ ಸಿಂಹಾಸನ ಕೊಟ್ಟು, ನಮಸ್ಕಾರ ಮಾಡುತ್ತಾನೆ. ಸಿಂಹಾಸನಂ ಚ ದದತೇ ನಮಸ್ಕಾರಂ ಕರೋತಿ ಚ ಪಾದಾರ್ಘ್ಯಂ ಕುರುತೇ ಪಶ್ಚಾತ್, ಕಾಲಿಗೆ, ಕೈಗೆ ಮತ್ತು ಬಾಯಿಗೆ ನೀರನ್ನು ಹಾಕುತ್ತಾನೆ. ಇದಕ್ಕೆ ಪಾದ್ಯ, ಅರ್ಘ್ಯ, ಆಚಮನೀಯ ಎಂದು ಹೆಸರು. ಇಷ್ಟೇ ಅಲ್ಲದೇ ಸುಗಂಧವನ್ನು ಲೇಪಿಸಿ, ಅಲಂಕರಿಸಿ ಪೂಜೆ ಮಾಡುತ್ತಾನಂತೆ. ನಂತರ ಸಭೆಗೆ ಅವರ ಪರಿಚಯ ಮಾಡಿಸುತ್ತಾನೆ.ಭೋ ಸಭ್ಯಾಃ ನಮಸ್ಕುರ್ವಂತು, ಎಲೈ ಯಮಸಭೆಯ ಸಭಾಸದರೆ ನಮಸ್ಕಾರ ಮಾಡಿ. ಈ ಸಭೆಗೆ ಜ್ಞಾನಿಯ ಆಗಮನವಾಗಿದೆ. ಜ್ಞಾನಿಗಳಿಗೆ ವಿಶೇಷ ಮರ್ಯಾದೆ ಇಲ್ಲಿ. ಆತ್ಮಸಾಧನೆ ಮಾಡಿ, ತುದಿ ಮುಟ್ಟಿ ಯಾರು ಜ್ಞಾನವನ್ನು ಪಡೆದಿರುತ್ತಾರೋ, ಯಾರು ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದಾರೋ, ಯಾರು ದೇವರನ್ನು ನೋಡಿದ್ದಾರೋ ಅಂತವರು ಆ ಸಭೆಗೆ ಬಂದಾಗ ಅತ್ಯಂತ ಆದರದಿಂದ ನಮಸ್ಕಾರ ಮಾಡಿ, ಇವನು ನನ್ನ ಲೋಕದಲ್ಲಿ ಉಳಿಯುವವನಲ್ಲ, ಇವನು ಮೇ ಮಂಡಲಂ ಭಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ, ಯಮಮಂಡಲವನ್ನು ಭೇದಿಸಿ ಮೇಲೆ ಹೋಗುತ್ತಾನೆ. ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಬ್ರಹ್ಮಲೋಕಕ್ಕೆ ಎರಡು ಅರ್ಥ, ಒಂದು ಚತುರ್ಮುಖ ಬ್ರಹ್ಮನಲೋಕ. ಇನ್ನೊಂದು “ಬ್ರಹ್ಮೈವಲೋಕ”, ಬ್ರಹ್ಮನೇ ಲೋಕ. ಅಂದರೆ, ತ್ರಿಮೂರ್ತ ಲೋಕದ ಆಚೆಯಿರುವ ನಿರ್ಗುಣ ಪರಬ್ರಹ್ಮ. ಬ್ರಹ್ಮಲೋಕಕ್ಕೆ ಹೋಗುವ ಈತನನ್ನು ಗೌರವಿಸಿ ಎಂದು ಹೇಳಿ, ಒಂದೆರಡು ಕಿವಿ ಮಾತನ್ನು ಈ ಲೋಕಕ್ಕೂ ಮುಟ್ಟುವ ಹಾಗೆ ಯಮ ಹೇಳುತ್ತಾನೆ. ಅದೇನೆಂದರೆ; ಭೋಭೋ ಬುದ್ಧಿಮತಾಂ ಶ್ರೇಷ್ಠಾಃ ನರಕಕ್ಲೇಶ ಭೀರವಃ, ಎಲೈ ಬುದ್ಧಿವಂತರಲ್ಲಿ ಶ್ರೇಷ್ಠರಾದವರೇ, ಯಾರಿಗೆ ನರಕದ ಬಗ್ಗೆ ಭಯವಿದೆಯೋ ಆತನೇ ಜಾಣ. ರಾಮನಲ್ಲಿ ನವರಸಗಳನ್ನು ಹೇಳುತ್ತಾರೆ. ಕೇಳಿದ್ದೀರಾ ನೀವು? ಸೀತೆಯ ಜೊತೆ ವಿಹಾರ ಮಾಡುವಾಗ ಶೃಂಗಾರ, ಧನಸ್ಸು ಎತ್ತುವಾಗ ವೀರ, ಶೂರ್ಪನಖಿಯಲ್ಲಿ ಹಾಸ್ಯ, ಹಾಗೆಯೇ ಸೇತುವೆ ಕಟ್ಟುವಾಗ ಅದ್ಭುತ, ರಾವಣನನ್ನು ಧ್ವಂಸ ಮಾಡುವಾಗ ರೌದ್ರ. ಭಯಾನಕ ರಸ ಎಲ್ಲಿದೆ? ರಾಮನಿಗೆ ಭಯವಾಗುತ್ತಾ ? ಅಂದರೆ, ಪಾಪದ ವಿಷಯದಲ್ಲಿ ಭಯ. ಏಕೆಂದರೆ ಅದರ ಮುಂದಿನ ಹೆಜ್ಜೆ ನರಕ ಎಂದು. ಹಾಗಾಗಿ ಬುದ್ಧಿವಂತರಲ್ಲಿ ಬುದ್ಧಿವಂತರೇ, ನರಕದ ಬಗ್ಗೆ ಭಯ ಉಳ್ಳವರೇ ನೀವು ಒಳ್ಳೆ ಕೆಲಸ ಮಾಡಿದಿರಿ, ದೇವತ್ವವನ್ನ ಸಾಧನೆ ಮಾಡಿದಿರಿ. ನೀವು ಪುಣ್ಯಕರ್ಮಗಳನ್ನು ಮಾಡಿರುವಿರಿ. ನೀವು ದೇವತೆಯಾದಿರಿ. ನಿಮಗಿನ್ನು ತುಂಬಾ ಸುಖವೇ, ದುಃಖವಿಲ್ಲ. ಸುಖದತ್ತವಾದ ದೈವತ್ವವನ್ನು ನೀವು ಸಂಪಾದಿಸಿರುವಿರಿ. ಮನುಷ್ಯ ಜನ್ಮ ಎನ್ನುವಂತಹದ್ದು ತುಂಬಾ ದುರ್ಲಭ. ಶಾಸ್ತ್ರಗಳೂ ಹೇಳುತ್ತವೆ, ದಾಸವಾಣಿಯೂ ಹೇಳುತ್ತದೆ. ಮಾನವ ಜನ್ಮ ದೊಡ್ಡದು, ಇದ ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ, ಎಂದು. ಏಕೆಂದರೆ, ಒಬ್ಬ ಜೀವಿ ಮನುಷ್ಯ ಜನ್ಮ ಪಡೆಯುವುದಾದರೆ, ಅದರ ಹಿಂದೆ ದೊಡ್ಡ ಚರಿತ್ರೆಯೇ ಇದೆ. ನಮ್ಮ ಕಲ್ಪನೆಗೆ ಮೀರಿದ ಚರಿತ್ರೆ ಇದೆಯಂತೆ. ಎಂಬತ್ನಾಲ್ಕು ಲಕ್ಷ ಮೆಟ್ಟಿಲುಗಳನ್ನು ಹತ್ತಿ ಬಂದಿರುವುದು. ಆ ಒಂದೊಂದು ಮೆಟ್ಟಿಲುಗಳೂ ಒಂದೊಂದು ಜನ್ಮ. ಭಾರೀ ದೊಡ್ಡ ಯಾತ್ರೆ ಅದು. ತುಂಬಾ ಕಷ್ಟಪಟ್ಟು ಈ ಜನ್ಮಕ್ಕೆ ಬಂದಿರುವುದರಿಂದ ಸಾಧನೆ ಮಾಡುವುದಾದರೆ ಇಲ್ಲಿ ಮಾತ್ರ ಸಾಧ್ಯ. ಮೋಕ್ಷ, ಸ್ವರ್ಗವನ್ನು ಸಾಧನೆ ಮಾಡಲು ಮನುಷ್ಯರಿಂದ ಮಾತ್ರ ಸಾಧ್ಯ. ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳಿಂದ ಮತ್ತು ದೇವತೆಗಳವರೆಗೂ ಈ ಸಾಧನೆ ಅಸಾಧ್ಯ.
ಈ ಮನುಷ್ಯ ಜನ್ಮವನ್ನು ಹಾಳು ಮಾಡುವುದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಮಾನುಷಮ್ ದುರ್ಲಭಂ ಪ್ರಾಪ್ಯ, ದುರ್ಲಭವಾದ ಮನುಷ್ಯ ಜನ್ಮವನ್ನ ಪಡೆದು, ಶಾಶ್ವತವಾದುದನ್ನು, ಅಶಾಶ್ವತದಿಂದ ಶಾಶ್ವತವಾದದ್ದನ್ನು, ನಶ್ವರದಿಂದ ಈಶ್ವರನನ್ನು ಯಾರು ಸಾಧಿಸುವುದಿಲ್ಲವೋ ಆತ ನರಕಕ್ಕೆ ಹೋಗುತ್ತಾನೆ. ಅವನಿಗಿಂತ ಜಡ, ಮೂರ್ಖ ಯಾರು? ಅಂತ. ಇದೇ ಬುದ್ಧಿವಂತಿಕೆ. ಅಸ್ಥಿರವಾದ ಶರೀರದಿಂದ ಸ್ಥಿರವಾದ ಮುಕ್ತಿಯನ್ನು ಸಾಧಿಸಬೇಕು. ಯಮ ಒಂದು ಅಗ್ನಿವಿದ್ಯೆಯನ್ನು ನಚಿಕೇತನಿಗೆ ಹೇಳಿಕೊಟ್ಟಿದ್ದು ಅನಿತ್ಯವಾದುದು. ಅದರಿಂದ ಸ್ಥಿರವಾದ ಯಮಪದವಿಯನ್ನು ಯಮ ಪಡೆದಿದ್ದು. ಅದನ್ನೇ ಆತ ನಚಿಕೇತನಿಗೆ ಕೊಟ್ಟಿದ್ದು. ತಾನು ಯಾವುದರಿಂದ ಯಮನಾದೆನೋ ಮುಂದೆ ಜ್ಞಾನಿಯಾದೆನೋ ಅದನ್ನೇ ಕೊಟ್ಟಿದ್ದು ನಚಿಕೇತನಿಗೆ. ನಶ್ವರವಾದುದರಿಂದ ಈಶ್ವರನನ್ನು, ಶಾಶ್ವತವಾದುದನ್ನು ಸಾಧನೆ ಮಾಡುವುದಕ್ಕೆ ಯಮನೇ ಸ್ವಂತ ಉದಾಹರಣೆ. ಅಸ್ಥಿರ್ಯೇಣ ಶರೀರ್ಯೇಣ ಯಃ ಅಸ್ಥಿರೇಶ್ಚ ಧನಾಧಿಭಿಃ ಸಂಚಿನೋತಿ ಸ್ಥಿರಂ ಧರ್ಮಮ್, ಧರ್ಮ ಸ್ಥಿರ, ಧನ ಅಸ್ಥಿರ. ದೇಹ ಅಸ್ಥಿರ, ಆತ್ಮ ಸ್ಥಿರ. ಇದರಿಂದ ಅದನ್ನು ಸಾಧಿಸುವುದು. ಆಗ ನಿಜವಾಗಿ ಬುದ್ಧಿವಂತನಾಗುತ್ತೀಯ ಎಂಬುದು.
ಹೀಗೆ ಮಾಡಿ ಪುಣ್ಯಲೋಕವನ್ನು ಸೇರಿ, ಮುಕ್ತಿಗೆ ಹೋಗಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಣ್ಯಚೇತನರು ಒಂದು ಮಾತು ಏನನ್ನೂ ಹೇಳುವುದಿಲ್ಲ. ಅವರು ಆ ಸಭೆಗೆ ಪ್ರಣಾಮವನ್ನು ಸಲ್ಲಿಸಿ ಹೋಗುತ್ತಾರೆ, ಅಷ್ಟೇ. ಏಕೆಂದರೆ ಅವರ ದೃಷ್ಟಿ ಯಮಲೋಕಕ್ಕೂ ಮೇಲೆ ನೆಟ್ಟಿದೆ. ಏಕೆಂದರೆ ಅದಕ್ಕೂ ಮೇಲೆ ಬೇರೆ ಬೇರೆ ಲೋಕಗಳಿವೆ ಮತ್ತು ಮುಕ್ತಿಯಿದೆ. ಆ ಕಡೆಗೆ ಇದೆ ಅವರ ದೃಷ್ಟಿ. ಅವರು ಹೋಗುವಾಗ ದೇವತೆಗಳು ಸ್ತೋತ್ರ ಮಾಡುತ್ತಿರುತ್ತಾರೆ. ಮಹರ್ಷಿಗಳು ಅವರನ್ನು ಸ್ತುತಿಸಿ ಹಾಡಿ ಹೊಗಳುತ್ತಾರೆ. ಅವರು ವಿಮಾನವನ್ನು ಏರಿರುತ್ತಾರೆ. ಅವರ ಹಿಂದೆ ಮುಂದೆ ಕೂಡ ವಿಮಾನಗಳಿರುತ್ತವೆ. ವಿಮಾನಗಳ ಬಳಗವೇ ಇರುತ್ತದೆ. ಹಾಗಾಗಿ ಅದಕ್ಕಿಂತ ಮೇಲೆ ಬೇರೇನಿಲ್ಲ ಅಲ್ಲಿಗೆ ಅವರು ಸಾಗುತ್ತಾರೆ. ಯಮಧರ್ಮ ಎದ್ದು ಬಂದು ನಮಸ್ಕರಿಸುವಾಗ ಹೇಗಿರಬೇಕು ಇವರು? ಅದೂ ಕೂಡ ಇವರಿಗೆ ವಿಶೇಷವಲ್ಲ ಆ ರೀತಿಯಲ್ಲಿ ಇರುತ್ತಾರೆ. ಮೇಲಿನ ಪುಣ್ಯಲೋಕಗಳು ಮುಕ್ತಿ. ಆದರೆ, ಕೆಲವರು ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಕೆಲವೇ ಕೆಲವರು ಅವರಿಗೆ ಖುಷಿಯಾಗಿ ಯಮನ ಧರ್ಮಸಭೆಯಲ್ಲೇ ವಾಸಿಸುತ್ತಾರೆ. ಯಾವ ಲೋಕವೂ ಶಾಶ್ವತವಲ್ಲ, ಮುಕ್ತಿ ಮಾತ್ರ ಶಾಶ್ವತ. ಎಷ್ಟು ಕಾಲ ಅಲ್ಲಿ ಇರುತ್ತಾರೆ? ಎಂದರೆ, ಒಂದು ಕಲ್ಪದವರೆಗೆ ಅಲ್ಲೇ ಇರುತ್ತಾರೆ. ಒಂದು ಕಲ್ಪ ಎಂದರೆ ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ಹಗಲು ಎಂದರೆ ಹದಿನಾಲ್ಕು ಮನ್ವಂತರಗಳು ಅಥವಾ ಒಂದು ಸಾವಿರ ಮಹಾಯುಗ ಅಥವಾ ನಾಲ್ಕುನೂರಾಮೂವತ್ತೆರಡು ಕೋಟಿ ವರ್ಷಗಳು. ಅಷ್ಟು ಕಾಲದಲ್ಲಿ ಹದಿನಾಲ್ಕು ಮನುಗಳು ಭೂಮಿಯಲ್ಲಿ ರಾಜ್ಯಭಾರ ಮಾಡುತ್ತಾರೆ. ಇಷ್ಟು ಕಾಲ ಅಲ್ಲಿ ವಾಸಮಾಡಿದ ಬಳಿಕ ಮತ್ತೆ ಭೂಮಿಗೆ ಬರುತ್ತಾರೆ. ಮತ್ತೆ ಮನುಷ್ಯರಾಗುತ್ತಾರೆ. ಆಗ ಅವರು ಮಹಾಧನಿಗಳಾಗುತ್ತಾರೆ, ಸರ್ವಶಾಸ್ತ್ರವಿಶಾರದರಾಗಿರುತ್ತಾರೆ, ಸರ್ವಜ್ಞರಾಗುತ್ತಾರೆ, ಆದರೆ ಇಷ್ಟೆಲ್ಲಾ ಇದ್ದರೂ ಕೂಡ ಆತ್ಮಧ್ಯಾನವನ್ನು ಮಾಡಿ ಮುಕ್ತಿಗೆ ಹೋಗುತ್ತಾರೆ. ಆ ಜ್ಞಾನಿಗಳು ಮಾಡಿದ ಕೆಲಸವನ್ನು ಇವರು ಈಗ ಮಾಡುತ್ತಾರೆ. ಧರ್ಮರಾಜನ ಸಾನ್ನಿಧ್ಯದಲ್ಲಿ ಅಷ್ಟು ಕಾಲ ಅವರಿಗೆ ಸಿಕ್ಕಮೇಲೆ ಧರ್ಮ ಅವರಲ್ಲಿ ಊರಲೇಬೇಕು, ಧರ್ಮ ಅವರಲ್ಲಿ ಸ್ಥಿರವಾಗಿ ನೆಲೆಸಲೇಬೇಕು. ಅದರ ಕಾರಣದಿಂದ ಅವರು ಮುಕ್ತಿಯನ್ನು ಹೊಂದುತ್ತಾರೆ. ಇಷ್ಟೆಲ್ಲಾ ಆದ ನಂತರ ಅವರು ಯಮರಾಜನ ಆಸ್ಥಾನದಿಂದ ಮುಕ್ತಿಗೆ ತೆರಳುತ್ತಾರೆ. ಮಕ್ಕಳೇ ಇನ್ನೇನಿದರ ಫಲ ಹೇಳಬೇಕು. ಈ ವಿವರಗಳನ್ನು ಕೇಳಿದ್ದೀರಲ್ಲಾ, ಕೇಳಿದವರಿಗೆ ಏನಾಗುತ್ತದೆ?. ಇದಂ ಶೃಣ್ವನ್ನರೋ ಭಕ್ತ್ಯಾ ಧರ್ಮರಾಜಸಭಾಂ ವೃಜೇತ್, ಯಾರು ಈ ಎಲ್ಲಾ ವಿವರಗಳನ್ನು ಕೇಳುತ್ತಾನೋ ಅವನಿಗೆ ಯಮನ ಆಸ್ಥಾನಕ್ಕೆ ಹೋಗುವ ಅವಕಾಶವನ್ನು ಪಡೆಯುತ್ತಾರೆ. ಆತನ ಅಂತಃಪುಣ್ಯವನ್ನು ಇಷ್ಟರಿಂದಲೇ ಪಡೆಯುತ್ತಾನೆ. ಆದರೆ ಶ್ರದ್ಧೆಯಿಂದ, ಹೃದಯ ತೆರೆದು ಕೇಳಿರಬೇಕು. ಕೇಳಿದರೆ, ಸತ್ಕರ್ಮದಫಲ ಇದರಲ್ಲಿ ಇದೆ. ಹಾಗಾಗಿ ಒಮ್ಮೆ ಯಮನ ಸ್ಮರಣೆ ಮಾಡಿ ಮುಂದೆ ಹೋಗೋಣ.
ಯಮಾಯ ಧರ್ಮರಾಜಾಯ | ಮೃತ್ಯವೇ ಚಾಂತಕಾಯ ಚ |
ವೈವಸ್ವತಾಯ ಕಾಲಾಯ | ಸರ್ವ ಭೂತ ಕ್ಷಯಾಯ ಚ ||
ಔದಂಬರಾಯ ದಜ್ಞಾಯ | ನೀಲಾಯ ಪರಮೇಷ್ಠಿನೇ |
ವೃಕೋದರಾಯ ಚಿತ್ರಾಯ | ಚಿತ್ರಗುಪ್ತಾಯ ವೈ ನಮೋ ನಮಃ||
ಸ್ವರ್ಗ ನರಕಗಳು ಇಲ್ಲಿಯೇ ಇದೆ. ನಾವು ಈ ಲೋಕದಲ್ಲಿ, ಈ ಜನ್ಮದಲ್ಲಿ ಸುಖವನ್ನು ಅನುಭವಿಸುತ್ತೇವೆ. ಏನದು? ಅದು ಸ್ವರ್ಗದ ತುಣುಕು. ಕಷ್ಟ ಅನುಭವಿಸುತ್ತೇವೆ, ನೋವು ಅನುಭವಿಸುತ್ತೇವೆ ನರಕದ್ದೇ ಒಂದು ಭಾಗವದು. ನರಕದ ಹಾಗೂ ಸ್ವರ್ಗದ ಕೆಲವು ಅಂಶಗಳು ಇಲ್ಲಿ ಇದೆ. ನಾವು ಪಡುವ ಸುಖವೆಲ್ಲಾ ಸ್ವರ್ಗದ ಭಾಗ, ನಾವು ಪಡುವ ದುಃಖ, ಕಷ್ಟ, ರೋಗ ಇದೆಲ್ಲಾ ಯಮನ ಪರಿವಾರ. ಸಣ್ಣಪುಟ್ಟ ವಿಷಯಗಳನ್ನು ಇಲ್ಲಿಯೇ ವ್ಯವಸ್ಥೆ ಮಾಡುತ್ತಾನೆ ಆದರೆ ದೊಡ್ಡದು ಇದ್ದರೆ?, ಸಣ್ಣಪುಟ್ಟ ಪುಣ್ಯಗಳನ್ನು ಇಲ್ಲಿ ಅನುಭವಿಸಬಹುದು, ಸಣ್ಣ ಪುಟ್ಟ ಪಾಪಗಳನ್ನೂ ಇಲ್ಲಿ ಅನುಭವಿಸಬಹುದು. ಆದರೆ ಮಹಾಪುಣ್ಯವನ್ನು ಫಲವನ್ನು ಇಲ್ಲಿ ಅನುಭವಿಸಲು ಆಗುವುದಿಲ್ಲ, ಮಹಾಪಾಪದ ಫಲವನ್ನು ಕೂಡ ಇಲ್ಲಿ ಅನುಭವಿಸಲು ಆಗುವುದಿಲ್ಲ. ಏಕೆಂದರೆ ಶರೀರಕ್ಕೆ ತಡೆದು ಕೊಳ್ಳುವ ಶಕ್ತಿ ಇಲ್ಲ. ಒಂದು ಮಿತಿ ಇದೆ, ಅದಕ್ಕಿಂತ ಹೆಚ್ಚು ಸುಖ ಪಟ್ಟರೆ ಮೂರ್ಛೆ ತಪ್ಪಿ ಬೀಳುತ್ತಾನೆ ಅಥವಾ ಪ್ರಾಣವನ್ನೇ ಕಳೆದು ಕೊಳ್ಳುತ್ತಾನೆ. ಒಂದು ಉದಾಹರಣೆ ಇದೆ; ರಾಮಾಯಣದ ಯುದ್ಧ ಮುಗಿದಿದೆ. ರಾಮ ಗೆದ್ದಿದ್ದಾನೆ, ರಾವಣ ಅಳಿದು ಹೋಗಿದ್ದಾನೆ. ಈಗ ರಾಮ ಹಿಂತಿರುಗಿ ಅಯೋಧ್ಯೆಗೆ ಬರುತ್ತಾನೆ. ಪುಷ್ಪಕ ವಿಮಾನದಲ್ಲಿ, ಅವನು ಪ್ರಯಾಗದಲ್ಲಿ ಬಂದು ಇಳಿಯುತ್ತಾನೆ. ಭಾರದ್ವಾಜರ ಆಶ್ರಮ ಅದು, ಹನುಮಂತನನ್ನು ಮುಂದೆ ಕಳುಹಿಸಿ ಕೊಡುತ್ತಾನೆ. ಹೋಗಿ ಭರತನಿಗೆ ವಾರ್ತೆಯನ್ನು ಹೇಳು; ಮಿತ್ರರನ್ನು
ಒಡಗೂಡಿ ರಾಮ ಬರುತ್ತಿದ್ದಾನೆ ವನವಾಸವನ್ನು ಪೂರೈಸಿ ಎಂದು. ಹನುಮಂತ ಬಂದು ಭರತನಿಗೆ ವಿಷಯವನ್ನು ಹೇಳುತ್ತಾನೆ. ಅವನು ಬಂದು ನೋಡಿದಾಗ ಭರತ ತುಂಬಾ ದುಃಖದಲ್ಲಿದ್ದ. ಹನುಮಂತ ಹೇಳುತ್ತಾನೆ; ದಾರುಣವಾದ ದುಃಖವನ್ನು ಬಿಡು ಪ್ರಿಯವಾರ್ತೆಯನ್ನು ಹೇಳುತ್ತೇನೆ ಎಂದು ರಾಮ ಬರುವ ವಿಷಯವನ್ನು ಹೇಳಿದ. ರಾವಣನನ್ನು ಕೊಂದು ಸೀತೆ ಮತ್ತು ಮಿತ್ರರ ಜೊತೆಯಲ್ಲಿ ರಾಮ ಅಯೋಧ್ಯೆಗೆ ಬರುತ್ತಿದ್ದಾನೆ ಎಂದು ಹೇಳಿದ. ಆಗ ಏನಾಗಿತ್ತು ಗೊತ್ತಾ? ಆಗ ಭರತ ಬಿದ್ದುಬಿಟ್ಟ ಏವಮುಕ್ತೋ ಹನುಮಥಾ ಭರತೋ ಭ್ರಾತೃವತ್ಸಲಃ ಪಪಾತ ಸಹಸಾ ಕೃಷ್ಟಃ ಹರ್ಷಾನ್ಮೋಹಂ ಜಗಾಮಃ, ಹನುಮಂತ ಈ ವಿಷಯ ಹೇಳುತ್ತಿರುವಾಗಲೇ ಭ್ರಾತೃವತ್ಸಲನಾದ ಭರತ ಸಂತೋಷದಿಂದ ಬಿದ್ದೇಬಿಟ್ಟ. ರಾಮ ಬರುತ್ತಿದ್ದಾನೆ ಎಂಬ ವಿಷಯ ಅವನಿಗೆ ಸಂತೋಷವನ್ನು ಕೊಟ್ಟಿತು. ಈ ವಿಷಯ ಏನನ್ನು ಸೂಚಿಸುತ್ತದೆ? ಸಾಮಾನ್ಯವಾದ ವಿಷಯ ಅಲ್ಲ ಇದು. ಭರತ ವಿಷ್ಣುವಿನ ಒಂದು ಅಂಶ. ಸೂರ್ಯವಂಶೀಯ ಕ್ಷತ್ರಿಯ, ಮಹಾತ್ಮ ಅವನು. ಅವನಿಗೂ ಕೂಡ ರಾಮ ಬರುವ ಆನಂದವನ್ನು ತಡೆದು ಕೊಳ್ಳಲು ಸಾಧ್ಯವಾಗಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ, “Limit” ಮಿತಿ ಇದೆ. ಒಂದಿಷ್ಟು ಪ್ರಮಾಣದ ಸುಖವನ್ನು ಮಾತ್ರ ಈ ಶರೀರದಲ್ಲಿ ಅನುಭವಿಸಬಹುದು. ಹೆಚ್ಚಿನ ಸುಖವನ್ನು ಅನುಭವಿಸಲು ಆಗುವುದಿಲ್ಲ. ದುಃಖವು ಕೂಡ ಹಾಗೇ, ಅತ್ಯಂತ ಹೆಚ್ಚು ದುಃಖವಾದರೆ ಮನುಷ್ಯ ಉಳಿಯುವುದಿಲ್ಲ. ಹಾಗಾಗಿ ಅಂತಹಾ ಸುಖ ಅನುಭವಿಸಲು ಅಂತಹಾ ಶರೀರ ಬರುತ್ತದೆ, ಅಂತಹಾ ಲೋಕ ಬರುತ್ತದೆ. ಸ್ವರ್ಗಲೋಕ ದಿವ್ಯಶರೀರ. ಅಂತೆಯೇ ದುಃಖ ಅನುಭವಿಸಲು, ಏನೋ ಕೆಟ್ಟ ಕೆಲಸ ಮಾಡಿದ್ದಾನೆ, ಕ್ರೂರ ಕಾರ್ಯ ಮಾಡಿದ್ದಾನೆ ಅಂದರೆ ಅದಕ್ಕೆ ನರಕ. ಯಾತನಾಶರೀರ ಎಂದೇ ಒಂದು ಶರೀರ ಇದೆ. ಹೆಚ್ಚು ಹೆಚ್ಚು ಯಾತನೆ ಅನುಭವಿಸಲು ಸಾಧ್ಯ ಆ ಶರೀರದಲ್ಲಿ. ಅದು ಸಾಮಾನ್ಯ ಶರೀರದ ಹಾಗೆ ಅಲ್ಲ. ಹಾಗಾಗಿ ನರಕಲೋಕ ಎನ್ನುವಂತದ್ದು ಇರುವಂತಹದ್ದು.
ಈಗಿನ ಕಾಲದಲ್ಲಿ ಗಮನಿಸಿದರೆ, ಆ ಮೂರು ದ್ವಾರಗಳಲ್ಲಿ ಹೋಗುವವರ ಸಂಖ್ಯೆ ಕಮ್ಮಿ. ದಕ್ಷಿಣದ್ವಾರದಲ್ಲಿ ಹೋಗುವವರೇ ಹೆಚ್ಚು. ಹಾಗಾಗಿ ಅವರ ಮರಣ ಹೇಗಾಗುತ್ತದೆ? ಮರಣದ ನಂತರ ಅವರ ಪ್ರಯಾಣ ಹೇಗಾಗುತ್ತದೆ? ದಾರಿಯಲ್ಲಿ ಏನು ಸಿಗುತ್ತದೆ? ಅವರಿಗೆ, ಮತ್ತೆ ಯಮನ ಭೇಟಿ ಹೇಗಾಗುತ್ತದೆ?, ಯಮನ ಭೇಟಿ ಎಷ್ಟು ಕಷ್ಟಸಾಧ್ಯ ಅವರಿಗೆ, ಪಾಪಿಗಳಿಗೆ ಯಮನ ದರ್ಶನವೇ ಆಗುದಿಲ್ಲ. ನಾವು ಎಂತಹಾ ಪಾಪ ಮಾಡಿರುತ್ತೇವೆ ಎಂದರೆ ನಮಗೆ ಯಮನ ದರ್ಶನವೇ ಆಗುವುದಿಲ್ಲ. ಯಮನ ದರ್ಶನವಾಗಬೇಕಾದರೆ ನಾವು ಮಾಡಿದ ಪಾಪ ಸ್ವಲ್ಪ ಕಡಿಮೆ ಆಗಬೇಕು. ಹಾಗೇ ಪೆಟ್ಟು ತಿನ್ನಬೇಕು, ಒಂದಷ್ಟು ಕಷ್ಟ ಪಡಬೇಕು, ದುಃಖ ಅನುಭವಿಸಬೇಕು. ಹಾಗಾಗಿ ಯಮನ ತಲುಪುವ ದಾರಿ ಪಾಪಿಗಳಿಗೆ ಅತ್ಯಂತ ಕಷ್ಟವಾದದ್ದು, ಅತಿ ದಾರುಣ, ಅತಿ ಭಯಂಕರ. ಇದು ಯಾಕೆ? ಎಂದರೆ ಶಿಕ್ಷೆ, ರಕ್ಷೆಯನ್ನು ಪಡೆದುಕೊಳ್ಳಬೇಕು. ಆ ಯೋಗ್ಯತೆ ಬರಬೇಕು ಶರೀರಕ್ಕೆ. ೮೬000 ಯೋಜನಗಳ ದೂರ ನಡುವಿನಲ್ಲಿ ಹದಿನಾರು ಪಟ್ಟಣಗಳು. ಭೂಲೋಕದಿಂದ ಯಮಲೋಕ ತಲುಪುವ ಮಧ್ಯೆ ೧೬ ಪಟ್ಟಣಗಳು ಸಿಗುವಂತಹದ್ದು. ಒಂದು ಕಾಡು ಅದಕ್ಕೆ “ಅಸಿಪತ್ರವನ” ಎಂದು ಹೆಸರು. ಒಂದು ನದಿ ಅದಕ್ಕೆ “ವೈತರಣಿ” ಎಂದು ಹೆಸರು. ಇಷ್ಟನ್ನು ದಾಟಿದ ಬಳಿಕ ಯಮನ ಭೇಟಿ ಆಗುವಂತಹದ್ದು. ಆದರೆ ಇದನ್ನು ದಾಟುವಂತದ್ದು ಅದು ನರಕವೇ, ತುಂಬಾ ಕ್ಲೇಶಕರ. ಪಾಪಿಗಳು ಸಾಯಲು ನೂರು ದಾರಿಗಳಿವೆ. ಮೇಲೆಯಿಂದ ಬಿದ್ದು ಸಾಯಬಹುದು, ನೀರಿನಲ್ಲಿ ಮುಳುಗಿ, ಬೆಂಕಿಯಲ್ಲಿ ಸುಟ್ಟು ಸಾಯಬಹುದು ಅಥವಾ ಶತ್ರುಗಳು ಕೈ ಸಿಕ್ಕಿ ಚಿತ್ರಹಿಂಸೆ ಅನುಭವಿಸಿ ಸಾಯಬಹುದು. ಇರುವುದರಲ್ಲಿ ಸಾಮಾನ್ಯವಾದ ಸಾವಿನಬಗ್ಗೆ ಹೇಳುತ್ತಿದ್ದಾರೆ. ಅದೇ ತುಂಬಾ ಕ್ಲೇಶಕರ. ಹೇಗಿದೆ ಅದು? ಎಂದರೆ, ಒಂದು ವಯಸ್ಸಾದ ಮೇಲೆ ಮುಪ್ಪು ಬರುತ್ತದೆ. ಮುಪ್ಪು ಎನ್ನುವದು ಯಮನಅಂಶ. ಮುಪ್ಪು ಬಂದಾಗ ಆದಿ ಮತ್ತು ವ್ಯಾಧಿ ಒಟ್ಟಿಗೆ ಬರುತ್ತದೆ. ಶರೀರದಲ್ಲಿ ವ್ಯಾಧಿ ಬಂದಾಗ ಪ್ರತಿಭಟಿಸುವ ಶಕ್ತಿಯು ಕೂಡಾ ಕಡಿಮೆ ಆಗುತ್ತದೆ. ಮುಪ್ಪು ಬಂದಾಗ ನಮ್ಮ ರೂಪ ಹೋಗುತ್ತದೆ, ಕುರೂಪ ಬರುತ್ತದೆ, ಮತ್ತೆ ಶಕ್ತಿ ಹೋಗುತ್ತದೆ.
ಇನ್ನೊಂದು ಕಡೆ ಆದಿ, ಆದಿ ಎಂದರೆ ಚಿಂತೆ. ಆದರೆ ಬದುಕುವ ಆಸೆ ಮಾತ್ರ ಈಗಲೂ ಇರುತ್ತದೆ. ಆದಿವ್ಯಾಧಿ ಸಮಾಯುಕ್ತಂ ಜೀವಿತಾಷಾಸಮುತ್ಸುಖಂ. ಬಲಿಷ್ಠನಾದ ಕಾಲ. ಕಾಲಕ್ಕಿಂತ ಬಲಿಷ್ಠವಾದದ್ದು ಬೇರೆ ಯಾವುದೂ ಇಲ್ಲ, ಕಾಲೋಃ ದುರತಿಕ್ರಮಃ. ಅಂತಹ ಕಾಲ ಗೊತ್ತೇ ಆಗದಂತೆ ಹೊಂಚುಹಾಕಿ ಹತ್ತಿರ ಬಂದಿರುತ್ತಾನೆ. ಇಷ್ಟಾದರೂ ವೈರಾಗ್ಯವಿಲ್ಲ ಇನ್ನೂ ಬೇಕೆಂಬ ಹಪಹಪಿ. ಯಾರನ್ನು ತಾನು ಸಾಕಿದ್ದನೋ ಒಂದು ಕಾಲದಲ್ಲಿ ಅವರು ಈಗ ಇವನನ್ನು ಸಾಕುತಿದ್ದಾರೆ. ಕೆಲವೊಮ್ಮೆ ಚೆನ್ನಾಗಿ ಸಾಕುತ್ತಾರೆ ಇನ್ನೂ ಕೆಲವೊಮ್ಮೆ ನಾಯಿ ಪಾಡಾಗಿರುತ್ತದೆ. ಆಸ್ತೇ ಅವಮತ್ಯೋಪನ್ಯಸ್ಥಂ ಗೃಹಪಾಲ ಇವಾಹರನ್, ಗೃಹಪಾಲನಂತೆ ಇರುತ್ತಾನೆ. ಗೃಹಪಾಲ ಎಂದರೆ ಯಾರು? ಗೊತ್ತಾ ನಿಮಗೆ? ನಾಯಿ. ನಾಯಿಗೆ ಅವಮಾನ ಮಾಡುತ್ತಾರಲ್ಲ ಅದಕ್ಕೆ ತಿನ್ನು ಎಂದು ಎಸೆಯುತ್ತಾರೆ. ಹಾಗೆಯೇ ಕೆಲವು ಮುದುಕರ ಅವಸ್ಥೆ ಇರುತ್ತದೆ. ಅವರಿಗೆ ಪ್ರೀತಿಯಿಂದ ಆಹಾರವನ್ನು ಕೊಡುವುದಿಲ್ಲ. ಅವಮಾನಸಿ, ತಿರಸ್ಕರಿಸಿ ಕೊಟ್ಟ ಆಹಾರವನ್ನು ನಾಯಿಯಂತೆ ಸ್ವೀಕರಿಸುತ್ತಾರೆ. ಎಲ್ಲಾ ಕ್ಷೀಣ ಆಗಿದೆ. ರುಚಿ ಇಲ್ಲ, ಹಸಿವು ಕಡಿಮೆ ಆಗಿದೆ, ಆಹಾರ ಕಡಿಮೆ ಆಗಿದೆ, ಹೆಚ್ಚಾಗಿದ್ದು ಕಾಯಿಲೆ ಮಾತ್ರ. ಆಮಯಾವೀ, ಕಾಯಿಲೆ ಹೆಚ್ಚಾಗಿದೆ. ಇಂತಹವನು ಕೊನೆಯ ಹಂತಕ್ಕೆ ಬಂದಾಗ ಮರಣ ಶಯ್ಯೆ, ಸುತ್ತಲೂ ಬಂಧುಗಳು. ಪಂಚಪ್ರಾಣಗಳು ಶರೀರವನ್ನು ಬಿಟ್ಟು ಹೋಗಲು ತೀರ್ಮಾನಿಸಿದಾಗ ಉತ್ತಾರಃ, ಕಣ್ಣಾಲೆಗಳು ಮೇಲ್ಮುಖವಾಗಿ ತಿರುಗುತ್ತವೆ. ಕಫ ಶರೀರವನ್ನು ನಿರೋಧಗೊಳಿಸಿದೆ. ಕೊನೆ ಸಮಯ ಬಂದಾಗ ಉಸಿರಾಡಲು ಕಷ್ಟವಾಗುತ್ತದೆ. ಗಂಟಲಲ್ಲಿ ಗೊರ ಗೊರ ಸದ್ದು. ವಾಚ್ಯಮಾನೋಪಿನಬ್ರೂತೇ, ಮಾತನಾಡಲು ಸಾಧ್ಯವಾಗುದಿಲ್ಲ. ಯಾಕೆಂದರೆ ಅದಾಗಲೇ ಕಾಲಪಾಶ ಕೊರಳಿಗೆ ಬಿದ್ದಾಗಿದೆ. ಅವನ ಪರಿಸ್ಥಿತಿ ಹೇಗಾಗುತ್ತದೆ ಎಂದರೆ, ಸುತ್ತಮುತ್ತಲಿನವರ ಗೋಳು ಮತ್ತು ಇವನ ಗೋಳಿನಿಂದಾಗಿ ಅವನ ಬುದ್ಧಿಯೇ ನಷ್ಟವಾಗುತ್ತದೆ,
ಹೃದತಾಂ ಸ್ವಾನಂ ಉರ್ರ್ವೇದನಯಾ ಅಸ್ತಧೀಹಿ. ಆ ಸಂದರ್ಭದಲ್ಲಿ ದೈವೀಯ ದೃಷ್ಟಿ ಕೂಡಾ ಉಂಟಾಗುತ್ತದೆ. ಒಂದು ಕ್ಷಣ ಜಗತ್ತೆಲ್ಲಾ ಒಂದಾಗಿ ಕಾಣುತ್ತದೆ, ಏಕೀ ಭೂತಮ್ ಜಗತ್ಸರ್ವಂ. ಬಾಯಿ ಹೋಗುತ್ತದೆ, ನಾಲಿಗೆ ಬಿದ್ದುಹೋಗುತ್ತದೆ. ಕಣ್ಣು ಕಾಣಿಸದೆ, ಕಿವಿ ಕೇಳಿಸದೇ ಇಂದ್ರಿಯಗಳು ಕ್ಷಿಥಿಲವಾಗುತ್ತದೆ.
ದಶರಥ ಮರಣ ಸಮಯದಲ್ಲಿ ಹೇಳುತ್ತಾನೆ; ನನಗೆ ಕಣ್ಣು ಕಾಣಿಸುವುದಿಲ್ಲ ಕೌಸಲ್ಯೆ ಮುಟ್ಟು ನನ್ನನ್ನು. ಮರಣ ಸಮಯದಲ್ಲಿ ತನಗೆ ಏನೇನು ಆಗುತ್ತಿದೆ ಎಂಬುದನ್ನು ದಶರಥ ವರ್ಣನೆ ಮಾಡಿದ್ದಾನೆ. ರಾಮಾಯಣದಲ್ಲಿ ಉಲ್ಲೇಖ ಆಗಿದೆ ಅದು.
ಚೈತನ್ಯವು ಜಡವಾಗುತ್ತಾ ಬರುತ್ತದೆ. ಯಮದೂತರು ಯಾವಾಗ ಬಳಿಗೆ ಬರುತ್ತಾರೋ ಪ್ರಾಣಗಳು ತಮ್ಮ ಸ್ಥಾನವನ್ನು ಬಿಟ್ಟು ಏಳುತ್ತದೆ. ಶತವೃಶ್ಚಿಕದಷ್ಟಸ್ಯಾ ಯಾ ಪೀಡಾ ಸಾನುಭೂಯತೇ , ಆ ಸಮಯದಲ್ಲಿ ಒಂದು ನೂರು ಚೇಳುಗಳು ಒಟ್ಟಿಗೆ ಕಡಿದಷ್ಟು ನೋವು ಉಂಟಾಗುತ್ತದೆ. ವಿಪರ್ಯಾಸ ಏನೆಂದರೆ ಅವನಿಗೆ ಆ ಒಂದು ಕ್ಷಣ ಬಹಳ ದೀರ್ಘ ಎಂದು ಅನಿಸುತ್ತದೆಯಂತೆ. ಒಂದು ಕ್ಷಣ ಒಂದು ಕಲ್ಪದಂತೆ. ಸುಖವಿದ್ದಾಗ ಯುಗವು ಕ್ಷಣ ಆಗುತ್ತದೆ, ದುಃಖವಿದ್ದಾಗ ಕ್ಷಣ ಯುಗವಾಗುತ್ತದೆ. ಮುಖದಲ್ಲಿ ಜೊಲ್ಲು ಸುರಿಯುತ್ತದೆ. ಇಂತಹ ಕ್ಷಣದಲ್ಲಿ ಅವನ ಪ್ರಾಣವಾಯುಗಳು ಕೆಳಗಿನ ದ್ವಾರದಿಂದ ಹೊರಗೆ ಹೋಗುತ್ತದೆ.
ಪುಣ್ಯಕರ್ಮರಾದರೆ ವಾಯುಗಳು ಊರ್ಧ್ವದ್ವಾರಗಳಿಂದ ಹೊರಗೆ ಹೋಗುತ್ತದೆ. ಮನುಷ್ಯ ಶರೀರದಲ್ಲಿ ನವದ್ವಾರಗಳು. ಜೀವ ಹೋಗುವುದು ಎಂದರೆ ಏನು? ಅಂದರೆ, ಜೀವ ಪ್ರಾಣದಮೇಲೆ ಸಂಚರಿಸುವುದು. ಕೆಳಮುಖವಾಗಿ ಹೋದ ಎಂದರೆ ಅಧೋಲೋಕಗಳಿಗೆ ಹೋದ ಎಂದರ್ಥ. ಉತ್ತರದ ಕಡೆಗೆ ಊರ್ಧ್ವಲೋಕಗಳು, ದಕ್ಷಿಣದ ಕಡೆಗೆ ಅಧೋಲೋಕಗಳು. ಆ ಸಮಯದಲ್ಲಿ ಎರಡು ಭೀಕರ ಆಕೃತಿಗಳು ಅವನಿಗೆ ಗೋಚರಿಸುತ್ತದೆ. ಒಂದು “ಚಂಡ” ಇನ್ನೊಂದು “ಪ್ರಚಂಡ”. ಚಂಡ ಎಂದರೆ ಅತ್ಯಂತ ಕೋಪಿಷ್ಠ, ಪ್ರಚಂಡ ಅಂದರೆ ಇನ್ನಷ್ಟು ಕೋಪಿಷ್ಠ. ಭಯಜನಕವಾದ ರೂಪ. ಅವರ ಬಣ್ಣ ಕಾಗೆಯ ಬಣ್ಣವೇ, ಕಡುಕಪ್ಪು ಬಣ್ಣ. ಕೈಯಲ್ಲಿದೆ ಪಾಶ ಮತ್ತು ದಂಡ ಅವರೇ ಯಮಕಿಂಕರರು. ಗರ ಗರ ತಿರುಗುವ ಕಣ್ಣುಗಳು, ಇದು ಕೋಪ. ಅವನು ಮಾಡಿದ ಪಾಪಕ್ಕೆ ಬಂದಿರುವಂತಹ ಕೋಪ ಅದು. ಯಮದೂತರು ರಾಕ್ಷಸರಲ್ಲ, ಕೆಟ್ಟವರಲ್ಲ ಅವರು ಕರ್ತವ್ಯನಿರತರು. ಪಾಪದ ವಿಷಯದಲ್ಲಿ ಅವರ ಕೋಪ. ಕಟ ಕಟಾಯಿಸುವ ಹಲ್ಲುಗಳು, ಕೂದಲುಗಳೆಲ್ಲಾ ನೆಟ್ಟಗೆ ನಿಂತಿದೆ, ಕೋರೆ ಹಲ್ಲುಗಳು, ಉಗುರುಗಳು ಕತ್ತಿಯಂತೆ, ನಗ್ನರೂಪ, ಇಂತಹ ರೂಪದದರ್ಶನ ಪಾಪಿಗಳಿಗೆ ಆಗುವಂತಹದ್ದು. ಪುಣ್ಯಾತ್ಮನಿಗೆ, ಶಿವಭಕ್ತರಿಗೆ ಶಿವದೂತರ ದರ್ಶನ, ವಿಷ್ಣುಭಕ್ತರಿಗೆ ವಿಷ್ಣುದೂತನ ದರ್ಶನ ಆಗುತ್ತದೆ. ಅದೇ ಪುಣ್ಯ ಮಾಡಿದವನಿಗೆ ದೇವದೂತರು ಬರುತ್ತಾರೆ. ಆದರೆ ಇಲ್ಲಿ ಹಾಗಲ್ಲ.
ಯಮಕಿಂಕರರ ಆ ರೂಪ ಎಷ್ಟು ಘೋರ ಎನ್ನುವುದಕ್ಕೆ ಒಂದು ಪಂಕ್ತಿ; ಆ ಸಮಯದಲ್ಲಿ ಅವರಿಬ್ಬರನ್ನು ನೋಡಿ, ಬೆದರಿ ಬೆಚ್ಚಿ ಮಲಮೂತ್ರವನ್ನು ವಿಸರ್ಜನೆ ಮಾಡಿಕೊಳ್ಳುತ್ತಾನೆ. ಎಷ್ಟೋ ಜನ ಸಾಯುವವರಲ್ಲಿ ಈ ಅನುಭವಗಳನ್ನು ಕೇಳುತ್ತೇವೆ. ಇದು ಇನ್ನೂ ಪ್ರಾರಂಭ ಅಷ್ಟೇ, ಇದೇ ಇಷ್ಟು ಭೀಕರ. ಆ ಯಮದೂತರು ಕೊರಳಿಗೆ ಕಾಲಪಾಶವನ್ನು ಹಾಕುತ್ತಾರೆ. ಮನುಷ್ಯ ಶರೀರದ ಮಧ್ಯದಲ್ಲಿ “ನಾನು” ಇದ್ದಾನೆ. ಆ “ನಾನು”ವಿನ ಜಾಗ ಯಾವುದು? ಹೃದಯದ ಮಧ್ಯ ಭಾಗ. ಜೀವಕ್ಕೆ ಅವರವರ ಕೈಯ ಹೆಬ್ಬೆರಳಿನಷ್ಟು ಮಾತ್ರ ಆಕೃತಿ. ಹೆಬ್ಬೆರಳಿನಷ್ಟು ಆಕೃತಿ ಇರುವ ಜೀವದ ಕೊರಳಿಗೆ ಪಾಶವನ್ನು ಹಾಕುವಂತದ್ದು. ಯಮದೂತರು ಜೀವ ಎಳೆಯುವಾಗ ಅವನು ತನ್ನ ಮನೆಯನ್ನು ನೋಡುತ್ತಾನೆ, ಮಿತ್ರರನ್ನು, ಬಂಧುಗಳನ್ನು ನೋಡುತ್ತಿರುತ್ತಾನೆ. ಯಮದೂತರು ಯಾವ ಜೀವವನ್ನು ಎಳೆಯುತ್ತಾರೋ ಆ ದೇಹಕ್ಕೆ “ಯಾತನಾದೇಹ” ಎಂದು ಹೆಸರು. ಎಷ್ಟೂ ಯಾತನೆಯನ್ನು ಕೂಡ ಸಹಿಸಿಕೊಳ್ಳುತ್ತದೆ ಆ ದೇಹ. ಹೇಗೆಂದರೆ ಒಬ್ಬ ಕಳ್ಳನನ್ನು, ಸುಳ್ಳನ್ನನ್ನ, ಮಹಾಪರಾಧಿಯನ್ನು ರಾಜಭಟರು ಎಳೆದುಕೊಂಡು ಹೋಗುತ್ತಾರೋ ಹಾಗೇಯೇ ಯಮದೂತರು ಜೀವವನ್ನು ಎಳೆದುಕೊಂಡು ಹೋಗುತ್ತಾರೆ. ಪ್ರೀತಿಯಿಂದ ಕರೆದುಕೊಂಡು ಹೋಗುತ್ತಾರಾ? ಇಲ್ಲ. ತಸ್ಯೈವಂ ನಿಯಮಾನಸ್ಯ ದೂತಾಃ ಸಂತರ್ಜಯಂತಿ ಚ , ಹೆಜ್ಜೆ ಹೆಜ್ಜೆಗೆ ಹೆದರಿಸಿ, ಗದರಿಸಿ, ಬೈಯುತ್ತಾ ತೆಗೆದುಕೊಂಡು ಹೋಗುತ್ತಾರೆ. ಮುಂದಿನ ಕಷ್ಟಗಳ ಬಗ್ಗೆ ಈಗಲೇ ಮಾಹಿತಿ ಕೊಡುತ್ತಾರೆ. ಭಯವು ಕೂಡಾ ಶಿಕ್ಷೆಯೇ. ಎಷ್ಟು ವೇಗವಾಗಿ ಹೋಗುತ್ತಿದ್ದರೂ ಕೂಡಾ, ಬೇಗ ಬೇಗ ಹೋಗು ಎಂದು ದಬ್ಬುತ್ತಾರೆ. ದುಷ್ಟ ಯಮಲೋಕಕ್ಕೆ ಹೋಗಬೇಕು, ರೌರವಕ್ಕೆ ಹೋಗಬೇಕು ಎಂದು ಹೆದರಿಸಿ ಕರೆದೊಯ್ಯುತ್ತಾರೆ. ಆ ಭಯಕ್ಕೆ ಹೃದಯವೇ ಒಡೆದು ಹೋಗುತ್ತದೆ. ಅವನಿಗೆ ಎರಡು ಒಟ್ಟೊಟ್ಟಿಗೇ ಕೇಳುತ್ತಿರುತ್ತದೆಯಂತೆ. ಒಂದೆಡೆ ಬಂಧುಗಳ ರೋಧನೆ, ಇನ್ನೊಂದು ಕಡೆಯಿಂದ ಇವರ ಬೆದರಿಕೆ, ಬೈಗುಳ, ಜೊತೆಯಲ್ಲಿ ಪೆಟ್ಟು. ಪೆಟ್ಟಿಲ್ಲದೆ ಹೆಜ್ಜೆಯೇ ಇಲ್ಲ. ಹಾಗಾಗಿ, ಉಚ್ಚೈರ್ಹಾಹೇತಿ ವಿಲಪಂಸ್ಥಾಢ್ಯತೇ ಯಮಕಿಂಕರೈಃ, ಯಮಕಿಂಕರರು ಬಡಿಯುವಾಗ “ಹಾ! ಹಾ!” ಎಂದು ದೊಡ್ಡದಾಗಿ ಹಾಹಾಕಾರ ಮಾಡುತ್ತಾನೆ. ಆದರೆ ಯಾರಿಗೂ ಕೇಳಿಸುವುದಿಲ್ಲ. ಕೇಳಿಸುವುದು ಯಮಕಿಂಕರರಿಗೆ ಅವರಿಗೆ ಯಾವ ಕನಿಕರವೂ, ಪಶ್ಚಾತ್ತಾಪವೂ ಇಲ್ಲ.
ಪಾಪ ಯಾಕೆ ಮಾಡಬಾರದು ಎಂದರೆ ಇದೇ ಕಾರಣಕ್ಕೆ. ಆದರೆ ಇದ್ಯಾವುದು ಯಮಕಿಂಕರರಿಗೆ ಲೆಕ್ಕಕ್ಕಿಲ್ಲ. ಈ ಸಮಯದಲ್ಲಿ ನಡುಗುತ್ತಾ, ಎದೆ ಹೊಡೆದುಕೊಂಡು ಜೀವಮಾನದಲ್ಲಿ ಮಾಡಿದ ಇಡೀ ಪಾಪ ಕೆಲಸಗಳನ್ನು ನೆನಪು ಮಾಡಿಕೊಳ್ಳುತ್ತರಂತೆ. ಇವೆಲ್ಲವನ್ನೂ ಯಾಕೆ ಹೇಳುವುದು ಎಂದರೆ ನಾವು ಈ ಸ್ಥಿತಿಗೆ ಯಾವುದೇ ಕಾರಣಕ್ಕೂ ಹೋಗಬಾರದು. ನಾವು ಅಂತಹ ಪಾಪದ ಕೆಲಸಗಳನ್ನು ಮಾಡಬಾರದು.
ಆ ದಾರಿಯಾದರೂ ಹೇಗಿದೆ? ಎಂದರೆ, ಆ ದಾರಿಯಲ್ಲಿ ಹಸಿವು, ಬಾಯಾರಿಕೆ, ಕಾಡ್ಗಿಚ್ಚು, ಕಾದ ಮರಳು, ಗಾಳಿ, ಬಿಸಿಲು. ದಾರಿಯಲ್ಲಿ ತಿಂದು ಹಾಕುವ ನಾಯಿಗಳು. ಇದು ಯಮಮಾರ್ಗ. ಇವೆಲ್ಲದರ ಜೊತೆಗೆ ಮಾರ್ಗಮಧ್ಯದಲ್ಲಿ ಬೀಳುತ್ತಾ, ಏಳುತ್ತಾ, ಪ್ರಜ್ಞೆತಪ್ಪಿ ಬಿದ್ದು ಮತ್ತೆ ಪ್ರಜ್ಞೆಬಂದು ಹೀಗೆ ಆ ಪ್ರಯಾಣ ಆಗುವಂತಹದ್ದು. ಬಹಳ ಘೋರವಾಗಿರುವಂತಹ ಮಾರ್ಗ ಪಾಪಿಗಳದ್ದು. ಒಂದು ವಿಚಿತ್ರ ಎಂದರೆ, ಒಂದು ಬಾರಿ ಯಮಕಿಂಕರರು ಕೇವಲ ಎರಡು ರಿಂದ ಮೂರು ಘಳಿಗೆಯೊಳಗೆ ವಾಯುವೇಗದಲ್ಲಿ ಕರೆದುಕೊಂಡು ಹೋಗಿ ಇಡೀ ಯಮಲೋಕವನ್ನು ಮತ್ತು ಯಮನನ್ನು ತೋರಿಸಿ ಪುನಃ ಅಲ್ಲಿಗೆ ತಂದುಬಿಡುತ್ತಾರೆ. ಎರಡರಿಂದ ಮೂರು ಘಳಿಗೆ ಎಂದರೆ, ಕೇವಲ ಮುಕ್ಕಾಲು ಗಂಟೆಯಿಂದ ಒಂದೂಕಾಲು ಗಂಟೆ. ಇಷ್ಟೇ ಅವಧಿಯಲ್ಲಿ ಗಗನಮಾರ್ಗದಲ್ಲಿ ಬಹಳ ಬೇಗ ಒಂದು ಬಾರಿ ನರಕದ ರುಚಿತೋರಿಸಿ ಪುನಃ ಅವನು ಸತ್ತ ಸ್ಥಳದಲ್ಲಿಯೇ ತಂದು ಬಿಡುತ್ತಾರೆ. ಅವನಿಗೆ ಮುಂದೆ ಏನಾಗುತ್ತದೆ ಎನ್ನುವುದರ ಸ್ಪಷ್ಟಚಿತ್ರಣ ಸಿಕ್ಕಿರುತ್ತದೆ. ಈ ಸಮಯದಲ್ಲಿ ಯಾರೂ ನಿದ್ದೆ ಮಾಡಕೂಡದು ಎಂದು ಹೇಳುತ್ತಾರೆ. ಅದು ಏಕೆಂದರೆ, ಆತ್ಮ ತನ್ನ ದೇಹವನ್ನು ಸೇರುವ ಪ್ರಯತ್ನವನ್ನು ಮಾಡಿಯೇ ಮಾಡುತ್ತದೆ. ಪುನಃದೇಹಮಿಚ್ಛನ್, ಪುನಃ ದೇಹವನ್ನು ಸೇರುವ ಆಸೆ. ಆದರೆ ಆತ್ಮಕ್ಕೆ ಪುನಃ ಆ ದೇಹವನ್ನು ಹೋಗಿ ಸೇರಿಕೊಳ್ಳಲು ಆಗುವುದಿಲ್ಲ. ಆದರೆ ಯಾರಾದರೂ ಆ ಸಮಯದಲ್ಲಿ ನಿದ್ದೆ ಮಾಡಿದ್ದರೆ ಹೋಗಿ ಆ ದೇಹವನ್ನು ಸೇರಿಕೊಳ್ಳುತ್ತಾನೆ. ಹಾಗಾಗಿ ನಿದ್ದೆ ಮಾಡಬಾರದು ಎಂದು ರೂಢಿಯಲ್ಲಿ ಇರುವಂತಹದ್ದು.
ಮುಹೂರ್ತಮಾತ್ರಾತ್ವರಿತಂ ಯಮಂವೀಕ್ಷ್ಯಾ ಭಯಂ ಪುಮಾನ್| ಯಮಾಜ್ಞ್ಯಾ ಸಮಂ ದೂತೈಸ್ಪುನರಾಯಾತಿ ಕೇಚರಾಃ||, ಹಿಂತಿರುಗಿ ಬಂದಾಗ ತುಂಬಾ ದುಃಖ, ಹಸಿವು, ಬಾಯಾರಿಕೆ. ದೇಹದ ಆಸೆ, ತನ್ನವರು, ಮಕ್ಕಳು, ತನ್ನ ಮನೆ ಎಂಬ ಎಲ್ಲಾ ಆಸೆಗಳಿದ್ದರೂ ಉಪಯೋಗಕ್ಕೆ ಬರುವುದಿಲ್ಲ. ಮತ್ತು ತಾನು, ತನ್ನದು ಎಂದುಕೊಂಡದ್ದನ್ನು ಮುಟ್ಟಲಾಗುವುದಿಲ್ಲ.
ಏಕೆಂದರೆ ಇದ್ಯಾವುದೂ ಇವನದಲ್ಲ, ಆದರೆ ಅದರ ಪಾಶ ಹೋಗಿಲ್ಲ. ನೋವು ಹೋಗಿಲ್ಲ ಎಂದರ್ಥ.
ಅದಲ್ಲದೆ ಆ ದಾರಿಯಲ್ಲಿ ಯಾವ ಆಹಾರವೂ ಇರುವುದಿಲ್ಲ. ಪೂರ್ವ, ಪಶ್ಚಿಮ ದಾರಿಯಲ್ಲಿ ಅಲ್ಲಲ್ಲಿ ಅಮೃತದ ಸರೋವರವಿರುತ್ತದೆ. ಹಸಿದರೂ, ಬಾಯಾರಿದರೂ ಅಥವಾ ಹಸಿಯದೆ ಇದ್ದರೂ ಅಮೃತದ ಲಾಭ ಇದೆ ಅಲ್ಲಿ. ಆದರೆ ದಕ್ಷಿಣದ ದಾರಿಯಲ್ಲಿ ಏನೇನೂ ಇಲ್ಲ. ಮತ್ತೆ ಏನು ತಿನ್ನುತ್ತಾನೆ? ಅಂದರೆ, ಮಕ್ಕಳು ಕೊಟ್ಟ ಪಿಂಡವನ್ನು ಮಾತ್ರ ತಿನ್ನಬಹುದು. ಅದಕ್ಕಾಗಿಯೇ ಈ ಅಪರಕ್ರಿಯೆ ಎಂಬಂತಹ ಕ್ರಮ ಇರುವುದು. ಮಕ್ಕಳು ಆ ಸಮಯದಲ್ಲಿ ಮಾಡಿದ ದಾನದ ಫಲವಾಗಿ ತಂಪನ್ನು ಅನುಭವಿಸುತ್ತಾನೆ.
ನಾನು ಸಾಯುತ್ತೇನೆ ಎಂದು ಗೊತ್ತಾದರೆ ಅಂತವನು ಕೂಡಾ ದಾನವನ್ನು ಮಾಡಬಹುದು. ಸ್ನಾನವನ್ನು ಮಾಡಿ ವಿಷ್ಣುಅಷ್ಟೋತ್ತರ ಹೇಳಿ, ಎಳ್ಳು, ಚಿನ್ನ ದಾನ, ಗೋದಾನ ಮುಂತಾದವುಗಳನ್ನು ಮಾಡುವಂತದ್ದು ಇದೆ. ಸ್ವತಃ ಅವನಿಗೆ ಆಗದಿದ್ದರೂ, ಅವನ ಮಕ್ಕಳು ಮುಂದೆ ದಾನ ಮಾಡಬಹುದು. ದಾನ ಮಾಡಿದರೆ ಸುಖ ಇದೆ ಇಲ್ಲದಿದ್ದರೆ ಇಲ್ಲ. ಅದಕ್ಕೂ ಮೀರಿ ಅತಿ ಪಾಪಿಯಾದರೆ ಅವರು ಪಿಂಡ ಕೊಟ್ಟರೂ ಕೂಡ ಸಿಗುವುದಿಲ್ಲವಂತೆ. ಪರಲೋಕ ಇಲ್ಲ ಎನ್ನುವವನಿಗೆ ಅಥವಾ ನಾಸ್ತಿಕನಿಗೆ ಪಿಂಡಸಿಕ್ಕರೂ ಅದನ್ನು ತಿಂದ ತೃಪ್ತಿ ಇರುವುದಿಲ್ಲವಂತೆ. ಪಾಪಿನಾಂ ನೋಪತಿಷ್ಟಂತಿ ದಾನಂ ಶ್ರಾದ್ಧಂ ಜಲಾಂಜಲೀಃ, ದಾನ, ಶ್ರಾದ್ಧ, ಜಲಾಂಜಲೀ ಯಾವುದೂ ಕೂಡ ಅವರಿಗೆ ಲಭಿಸುವುದಿಲ್ಲ. ಹಸಿವು, ಬಯಾರಿಕೆಯಲ್ಲಿಯೇ ಇರಬೇಕಾಗುತ್ತದೆ. ಹಾಗಾಗಿ ಪಿಂಡಕೊಡುವ ಒಂದು ಪದ್ಧತಿ ಇದೆ.
ದಿನಕ್ಕೆ ಒಂದರಂತೆ ಹತ್ತು ದಿನವೂ ಕೂಡ ಪಿಂಡಕೊಡಬೇಕು. ಪಿಂಡ ಕೊಟ್ಟಾಗ ಅವನಿಗೆ ಹೊಸದೊಂದು ಶರೀರದ ಸೃಷ್ಟಿ ಆಗುತ್ತದೆಯಂತೆ. ಅದರಲ್ಲಿ ಒಂದನೇ ದಿನ ತಲೆ, ಎರಡನೆ ದಿನ ಕೊರಳು ಮತ್ತು ಭುಜ, ಮೂರನೇ ದಿನ ಹೃದಯ, ನಾಲ್ಕನೇ ದಿನ ಬೆನ್ನು, ಐದನೇ ದಿನ ನಾಭಿ, ಆರನೇ ದಿನ ಸೊಂಟ, ಏಳನೇ ದಿನ ತೊಡೆಗಳು ಅಂದರೆ ಊರುಗಳು ಮತ್ತು ಮೊಣಕಾಲು, ಪಾದಗಳು, ಹಾಗೂ ಹತ್ತನೇ ದಿನ ಹಸಿವೆ, ಬಾಯಾರಿಕೆ ಉಂಟಾಗುತ್ತದೆ ಆ ದೇಹಕ್ಕೆ. ಹೀಗೆ ಹತ್ತು ದಿನದಲ್ಲಿ ಹಸ್ತದಷ್ಟು ಅಂದರೆ ಒಂದು ಮೊಳದಷ್ಟು ಪ್ರಮಾಣದ ದೊಡ್ಡ ಶರೀರ ಉಂಟಾಗುತ್ತದೆ. ಆ ಪಿಂಡದಲ್ಲೂ ಕೂಡ ಪಾಲಿದೆಯಂತೆ. ಎರಡುಭಾಗ ದೇಹಕ್ಕೆ, ಒಂದು ಭಾಗ ಯಮದೂತರಿಗೆ, ಒಂದು ಭಾಗ ಇವನಿಗೆ. ಯಮದೂತರಿಗೆ ಒಂದು ಭಾಗ ಹೋದರೆ ಸ್ವಲ್ಪ ಆರಾಮಗುತ್ತದೆ, ಇಲ್ಲದಿದ್ದರೆ ಕಷ್ಟ ಹೆಚ್ಚಾಗುತ್ತದೆ. ಇಂಥಹದ್ದೊಂದು ಕ್ಲೇಶ. ಹೀಗೆ ಹನ್ನೆರಡು ದಿನಗಳ ಕಾಲ ಈ ಲೋಕದಲ್ಲಿ, ಆ ಮನೆ ಹತ್ತಿರ ಇದ್ದುಕೊಂಡು ಮತ್ತೆ ಹದಿಮೂರನೇ ದಿನ ಮತ್ತೆ ಹೊರಡಬೇಕು ಅವನು. ಅಲ್ಲಿಂದ ಪ್ರಯಾಣ ಆರಂಭ. ಕುತ್ತಿಗೆಗೆ ಹಗ್ಗವನ್ನು ಹಾಕಿದ ಮಂಗನಂತೆ ಅವನ ಸ್ಥಿತಿ ಇರುತ್ತದೆ. ೮೬೦೦೦ ಯೋಜನ ಅದೇ ರೀತಿ ಪ್ರಯಾಣ ಮಾಡಬೇಕಾಗುತ್ತದೆ. ಒಂದು ದಿನಕ್ಕೆ ೨೪೭ ಯೋಜನ ಪ್ರಯಾಣ ಮಾಡುತ್ತಾನಂತೆ. ಹದಿನಾರು ನಗರಗಳು ಮಧ್ಯಸಿಗುವಂತದ್ದು. ಮೊದಲನೆಯದು ಸೌಮ್ಯಪುರ. ‘ಸೌಮ್ಯ’ ಅಂದರೆ ಸೌಮ್ಯ ಅಲ್ಲ, ಮುಂದಿನದ್ದಕ್ಕೆ ಹೋಲಿಸಿದರೆ ಅದು ಸೌಮ್ಯ. ಸೌಮ್ಯಪುರ, ಸೌರಿಪುರ, ನಗೇಂದ್ರಭವನ, ಶೀಲಾಗಮ, ಕಂದರ್ವಪುರ, ಕೌಂಚಪುರ, ಕ್ರೂರಪುರ, ವಿಚಿತ್ರಭವನ, ಭಃಹ್ವಾಪದಪುರ, ದುಃಖದಪುರ, ನಾನಾಕ್ರಂದಪುರ, ಸುದಪ್ತಭವನ, ರೌದ್ರಪುರ, ಭಯೋವರ್ಷಣಪುರ, ಶೀತಾಢ್ಯಾಪುರ, ಬಹುಭೀತಿಪುರ, ಹದಿನೇಳನೇಯದೇ ಸೈಂಯಮಿನಿ ಪಟ್ಟಣ. ಇದು ಹದಿನಾರು ಊರುಗಳು. ೨೦೦೦ ಯೋಜನದ ಅಸಿಪತ್ರವನ ಎಂಬಂತಹ ಒಂದು ಕಾಡು, ನೂರು ಯೋಜನಗಳ ವೈತರಣಿ ನದಿ ಇಷ್ಟು ದಾಟಿಕೊಂಡು ಹೋಗ ಬೇಕು ಯಮನ ಊರಿಗೆ. ಅಲ್ಲಿಗೆ ಹೋದ ಮೇಲೆ ಅವನ ಹಣೆಬರಹ ನಿರ್ಧಾರವಾಗುವುದು.
ಇವೆಲ್ಲವೂ ಕೂಡ ಪುರಾಣ ರೂಪದಲ್ಲಿ ವ್ಯಾಸರು ಸಂಗ್ರಹ ಮಾಡಿದಂತಹ ಮಹಾವಿಷ್ಣುವಿನ ವಚನಗಳು.
ಆ ದಾರಿಯಲ್ಲಿ ವೃಕ್ಷದ ನೆರಳಿಲ್ಲ, ನೀರಿಲ್ಲ, ಊಟ ಇಲ್ಲ. ಹನ್ನೆರಡು ಸೂರ್ಯರ ಬಿಸಿಲು, ಕೆಲವು ಬಾರಿ ಚಳಿಗಾಳಿ, ಮುಳ್ಳುಗಳು, ಸರ್ಪಗಳು, ಸಿಂಹಗಳು, ವ್ಯಾಘ್ರಗಳು, ನಾಯಿಗಳು. ಅವು ಕಚ್ಚುವುದು ಅವುಗಳ ದಾಳಿ ಇಂತಹದ್ದೆಲ್ಲಾ ಇದೆ. ಆ ಅಸಿಪತ್ರ ವನದಲ್ಲಿ ಎಲೆಗಳು ಎಂದರೆ ಕತ್ತಿಗಳು. ಓಡುತ್ತಾ ಹೋಗುವಾಗ ಮೈಗೆ ತಗುಲಿದರೆ ಚ್ಛಿನ್ನ ಭಿನ್ನವಾಗಬೇಕಾಗುತ್ತದೆ. ಹೋದಲ್ಲೆಲ್ಲಾ ಕತ್ತರಿಸುತ್ತಾ ಹೋಗುತ್ತದೆ. ಹಾಗಾಗಿ ಅಸಿಪತ್ರವನ ಎಂದು ಹೆಸರು. ಎರಡುಸಾವಿರ ಯೋಜನದ ವಿಸ್ತಾರ, ಅನಂತರದಲ್ಲಿ ಯಮನೂರು. ಆ ವನದಲ್ಲಿ ಕಾಗೆ, ಗೂಬೆ, ಹದ್ದು, ಜೇನುನೊಣ ಅಂಧಕೂಪಗಳು, ಕುರುಡುಗತ್ತಲೆ, ಬಾವಿಗಳು, ಕತ್ತಲೆಯಲ್ಲಿ ಮುಳ್ಳಿನ ಮೇಲೆ ನಡೆಯುವಂತದ್ದು , ಬಾವಿಯಲ್ಲಿ, ನೀರಿನಲ್ಲಿ ಮುಳುಗುವಂತದ್ದು. ಕೆಲವು ಕಡೆ ಕೆಸರು ಆ ಕೆಸರಲ್ಲಿ ಜಿಗಣೆಗಳು. ಇದನ್ನು ದಾಟಿದ ಮೇಲೆ ಕೆಲವು ದಾರಿಗಳಲ್ಲಿ, ಕಾದ ಮರಳು, ಕಾದ ತಾಮ್ರ, ಕಾದ ಕೆಂಡ ನಡೆದುಕೊಂಡು ಹೋಗಬೇಕು ಅದರ ಮೇಲೆ. ಉಸಿರುಕಟ್ಟುವಂತೆ ಪೂರ್ತಿ ಹೊಗೆ, ಕೆಲವು ಕಡೆ ಕಲ್ಲಿನ ಮಳೆ, ಕೆಂಡದ ಮಳೆ, ಉಪ್ಪುನೀರಿನ ಮಳೆ, ಬಿಸಿ ನೀರಿನ ಮಳೆ, ರಕ್ತದ ಮಳೆ, ಶಸ್ತ್ರದ ಮಳೆ. ಮಹಾಪ್ರಪಾತಗಳು, ಕಷ್ಟದಿಂದ ಹತ್ತುವಂತಹ ಬಂಡೆಗಳು, ಕೀವು ಮತ್ತು ರಕ್ತ ತುಂಬಿದ ಮಡುಗಳು. ಇವನ್ನೆಲ್ಲಾ ಸಹಿಸಿಕೊಂಡು ದಾಟಿಕೊಂಡು ಸಾಗಬೇಕು.
ಇವನ್ನೆಲ್ಲಾ ನಾವು ಏಕೆ ತಿಳಿದುಕೊಳ್ಳಬೇಕು ಎಂದರೆ, ಈ ಮಾರ್ಗದಲ್ಲಿ ನಾವು ಹೋಗುವಂತೆ ಆಗಬಾರದು. ಈಗ ದಾರಿ ತಪ್ಪಿದೆವು ಅಂದರೆ, ಮುಂದೆ ಸರಿಯಾಗಲು ಸಾಧ್ಯವಿಲ್ಲ. ಇದು ಏನಪ್ಪಾ? ಎಂದು ತಿಳಿದುಕೊಳ್ಳಬೇಡಿ. ನಾವು ತಪ್ಪು ದಾರಿಯಲ್ಲಿ ಹೋದರೆ ಇವೆಲ್ಲವೂ ಕೂಡ ಒಂದಲ್ಲಾ ಒಂದು ದಿನ ಕಟ್ಟಿಟ್ಟ ಬುತ್ತಿ. ಹಾಗಾಗಿ ಕಟು ಸತ್ಯವನ್ನು ನಾವು ಅರ್ಥಮಾಡಿಕೊಳ್ಳದೇ ಇದ್ದರೆ ನಮಗೆ ಅದನ್ನು ಎದುರಿಸಲು ಆಗುವುದಿಲ್ಲ. ಯಾವ ಆಪತ್ತು ದೂರದ್ದೋ ಅದು ಮೊದಲೇ ಗೊತ್ತಾಗುತ್ತದೆಯೋ ಅದನ್ನು ಎದುರಿಸುವುದು ಸುಲಭ. ಅದುವೇ ಮುಂದಾಲೋಚನೆ, ದೂರದೃಷ್ಟಿ. ನಾವು ನಿಮಗೆ ಮೊದಲ ದಿನ ಕೊಟ್ಟ ಉದಾಹರಣೆಯಂತೆ ದೂರದಲ್ಲಿ ಸರ್ಪವಿದೆ ಅಥವಾ ಮುಳ್ಳಿದೆ ಎಂದರೆ ತಪ್ಪಿಸಿಕೊಳ್ಳಬಹುದು. ಮುಂದೆ ಕಷ್ಟ ಇದೆ ಎಂದು ತಿಳಿದಾಗ ನಾವು ಎಚ್ಚೆತ್ತುಕೊಳ್ಳಬಹುದು. ಮಕ್ಕಳೇ ನೀವಿನ್ನೂ ಚಿಕ್ಕವರು ಈಗಿಂದಲೇ ಧರ್ಮಾತ್ಮರಾಗಿ ಬದುಕಬೇಕು. ಸರಿ ಯಾವುದು, ತಪ್ಪು ಯಾವುದು? ಎಂಬುದನ್ನು ಸರಿಯಾಗಿ ಅರಿತಿರಬೇಕು. ಆಗ ಮೂರು ದ್ವಾರಗಳು ನಿಮ್ಮ ಮುಂದೆ ತೆರೆದುಕೊಳ್ಳುವುದು ಪೂರ್ವ, ಪಶ್ಚಿಮ, ಉತ್ತರ.
ಜೀವನ ಮುಂದೆ ಏನಾಗುತ್ತದೆ?, ನಾವು ಈಗ ಹೇಗೆ ಬದುಕಿದರೆ ಮುಂದೆ ಏನಾಗುತ್ತದೆ ಎಂಬುದು ಇದರಿಂದ ತಿಳಿಯಬಹುದು.
ಇದು ಅಸಿಪತ್ರವನ ಅತ್ಯಂತ ಘೋರವಾಗಿರುವಂತಹದ್ದು. ಈ ಎಲ್ಲಾ ಮಾರ್ಗದ ಬಗ್ಗೆ ಕೊಂಚ ತಿಳಿದ ನಂತರ ಮುಂದಿನ ಪ್ರವಚನದಲ್ಲಿ ಮುಕ್ತಿಮಾರ್ಗದ ಬಗ್ಗೆ ತಿಳಿಯೋಣ. ಜೀವ ಇದ್ದಾಗ ದೇವರಭಕ್ತಿಯನ್ನು ಮಾಡಿದರೆ, ಅಥವಾ ಯಾವುದಾದರೂ ಯೋಗ ಬಳಸಿ ದೇವರಧ್ಯಾನವನ್ನು ಮಾಡಿದರೆ, ಹಠಯೋಗದಿಂದಲೋ, ರಾಜಯೋಗದಿಂದಲೋ ಹೀಗೆ ಯಾವುದಾದರೂ ಯೋಗದಿಂದ ಭಗವಂತನನ್ನು ಧ್ಯಾನಮಾಡಿದರೆ ತುಂಬಾ ಬೇಗ ಮುಕ್ತಿಮಾರ್ಗವನ್ನು ತಲುಪಬಹುದು. ಇವೆಲ್ಲವನ್ನೂ ನೀವು ಈ ವಯಸ್ಸಿನಲ್ಲಿಯೇ ತಿಳಿದುಕೊಳ್ಳಬೇಕು. ಇವುಗಳ ಬಗ್ಗೆ ಮುಂದಿನ ಪ್ರವಚನದಲ್ಲಿ ತಿಳಿಯೋಣ.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply