ಪಶ್ಚಿಮೋ ಮಾರ್ಗಃ ಆ ಮಾರ್ಗ ತುಂಬಾ ಚೆನ್ನಾಗಿದೆಯಂತೆ. ಮಾರ್ಗದ ತುಂಬಾ ರತ್ನ ಗೃಹಗಳಿವೆ, ರತ್ನ ಮಂದಿರಗಳಿವೆ, ಯಮನ ಆಸ್ಥಾನವನ್ನು ಸೇರುವ ಪಶ್ಚಿಮದ್ವಾರದಲ್ಲಿನ ರತ್ನಗೃಹಗಳಲ್ಲಿ ಯಮನ ಆಸ್ಥಾನಕ್ಕೆ ಹೋಗುವವರು ವಿಶ್ರಾಂತಿಯನ್ನು ಪಡೆಯಬಹುದು. ಹಾಗೆ ಮಧ್ಯದಲ್ಲಿ, ಇಡೀ ವರ್ಷವೂ ಅಮೃತರಸದಿಂದ ತುಂಬಿರುವಂತಹ ಸರೋವರಗಳಿಂದ ವಿರಾಜಿತವಾಗಿದೆ. ಐರಾವತದ ಕುಲದಲ್ಲಿ ಉದ್ಭವಿಸಿರುವಂತಹ ಆನೆಗಳಿವೆ. ಉಚ್ಚೈಶ್ರವಸ್ಸುವಿನ ವಂಶದಲ್ಲಿ ಹುಟ್ಟಿದ ಶ್ರೇಷ್ಠವಾದ ಅಶ್ವಗಳು. ಇಂತಹ ಆನೆಗಳನ್ನು, ಅಶ್ವಗಳನ್ನು ಏರಿ ಕೂಡ ಸಾಗಬಹುದು. ರತ್ನಮಂಜರಿಗಳಲ್ಲಿ ವಿಶ್ರಾಂತಿ ಪಡೆಯಬಹುದು. ಅಮೃತರಸವನ್ನು ಆಹಾರಕ್ಕಾಗಿ ಅಥವಾ ಬಾಯಾರಿಕೆಯ ಪರಿಹಾರಕ್ಕಾಗಿ ಸ್ವೀಕಾರ ಮಾಡಬಹುದು ಇಂತಹದೊಂದು ಪ್ರಶಸ್ತವಾದ ಮಾರ್ಗ. ಆ ಮಾರ್ಗದಲ್ಲಿ ಯಾರು ಹೋಗುತ್ತಾರೆ ಅಂದರೆ “ಆತ್ಮಪರರು”. ಆತ್ಮ ಸಾಕ್ಷಾತ್ಕಾರಕ್ಕಾಗಿ ಯಾರು ಪ್ರಯತ್ನವನ್ನು ಪಟ್ಟಿರುತ್ತಾರೋ ಅಂತವರಿಗೆ ಪಶ್ಚಿಮಮಾರ್ಗದಲ್ಲಿ ಪ್ರವೇಶ. ಹಾಗೆ ಸಚ್ಛಾಸ್ತ್ರಪರಿಪಾಲಕಾಃ, ಒಳ್ಳೆಯ ಶಾಸ್ತ್ರವನ್ನು ಪರಿಪಾಲನೆ ಮಾಡುವಂತವನಾಗಿರಬೇಕು. ಸಚ್ಛಾಸ್ತ್ರ ಅಂದರೆ ಯಾವುದು? ಒಳ್ಳೆಯ ಶಾಸ್ತ್ರ ಎಂದು. ಯಾವ ಶಾಸ್ತ್ರದ ಅಧ್ಯಯನ, ಅನುಷ್ಠಾನ ಪರಮಾತ್ಮನ ಕಡೆಗೆ ಕರೆದುಕೊಂಡು ಹೋಗುತ್ತೋ ಅಂತಹ ಶಾಸ್ತ್ರ, ಅಂತಹ ವಿದ್ಯೆಯನ್ನು ಅಧ್ಯಯನ ಮಾಡಿದವರು. ಅನನ್ಯ ವಿಷ್ಣು ಭಕ್ತರು. ಇನ್ನೊಂದಿಲ್ಲದೆ ಏಕಾಂತವಾಗಿ ವಿಷ್ಣುವನ್ನು ಯಾರು ಭಕ್ತಿಮಾಡುತ್ತಾರೆ ಅಂತವರು. ಆಮೇಲೆ ಗಾಯತ್ರೀಮಂತ್ರಜಾಪಕಾಃ , ಗಾಯತ್ರೀ ಮಂತ್ರವನ್ನು ಸರಿಯಾಗಿ ಜಪಿಸುವವರು. ಪರಹಿಂಸೆ ಮಾಡದವರು, ಜೀವನದಲ್ಲಿ ಇನ್ನೊಬ್ಬರಿಗೆ ಹಿಂಸೆ ಕೊಡದೇ ಇರುವಂತವರು. ‘ಪರದ್ರವ್ಯ’, ಅಂದರೆ ಪರರಸ್ವತ್ತನ್ನು ಅಪಹರಣ ಮಾಡದೇ ಇರುವಂತವರು. ‘ಪರವಾದ’, ಅಂದರೆ ಇನ್ನೊಬ್ಬರನ್ನು ವಾದಮಾಡಿ ಸೋಲಿಸುವಂತದು, ಇದೊಂದು ಚಪಲ. ಒಂದು ವಿಷಯವನ್ನು ತಿಳಿದುಕೊಳ್ಳುವುದಕ್ಕೋಸ್ಕರ ಪರಸ್ಪರ ಚರ್ಚೆ ಮಾಡಿದರೆ ಅದಕ್ಕೆ “ವಾದ” ಎಂದು ಹೆಸರು, ಅದು ತತ್ವ ಭುಭುತ್ಸುಕಥಾ. ಆದರೆ ಅದು ದಾರಿತಪ್ಪಿ ಹೋಗಿ ಇನ್ನೊಬ್ಬನನ್ನು ಸೋಲಿಸುವುದಕ್ಕೆ, ಅವಮಾನ ಮಾಡುವುದಕ್ಕೆ, ನಾನೇ ದೊಡ್ಡವನು ಎಂದು ತೋರಿಸುವುದಕ್ಕೆ ವಾದಿಸಿದರೆ ಅದಕ್ಕೆ “ಜಲ್ಪ” ಎಂದು ಕರೆಯುತ್ತಾರೆ. ಇಂತಹದ್ದನ್ನೆಲ್ಲಾ ಮಾಡದೆ ಇರುವವನಿಗೆ ಪಶ್ಚಿಮಮಾರ್ಗದಲ್ಲಿ ಅವಕಾಶ ಇದೆ. ಸ್ವದಾರನಿರತಾಃ, ಅಂದರೆ ತಮ್ಮ ತಮ್ಮ ಪತ್ನಿಯರಲ್ಲಿ ಅಥವಾ ಪತಿಯಲ್ಲಿ ಸಂಪೂರ್ಣ ಸಂತೋಷವನ್ನು ಹೊಂದಿ, ಪರಸತಿಯ ಹಿಂದೆ ಅಥವಾ ಪರಪತಿಯ ಹಿಂದೆ ಹೋಗದಿರುವಂತವರು, ವ್ಯಭಿಚಾರಿಗಳಲ್ಲದಿರುವವರು. ಹಾಗೆ ಸಂತಃ, ಒಳ್ಳೆಯವರಾಗಿರುವಂತವರು. ಸಾಗ್ನಿಕಾಃ, ಅಂದರೆ ಮೂರು ಅಗ್ನಿಗಳನ್ನಿಟ್ಟು. ದಕ್ಷಿಣಾಗ್ನಿ, ಗಾರ್ಹಪಥ್ಯ, ಆವುಹ್ಯ ಎಂಬ ಮೂರು ಅಗ್ನಿಗಳನ್ನು ಇಟ್ಟು ನಿತ್ಯ ಅಗ್ನಿಹೋತ್ರ ಮಾಡುವಂತವರು. ನಿತ್ಯ ಯಜ್ಞವನ್ನು ಮಾಡುವಂತವರು. ವೇದಪಾಠಕಾಃ, ವೇದಾಧ್ಯಯನ ಮಾಡತಕ್ಕಂತವರು. ಬ್ರಹ್ಮಚರ್ಯದ ವ್ರತವನ್ನು ಪಾಲನೆ ಮಾಡತಕ್ಕಂತವರು. ವಾನಪ್ರಸ್ಥಾಃ, ಅಂದರೆ ಕೂದಲು ಬಿಳಿಯಾದ ಮೇಲೆ, ಮೊಮ್ಮಗನ ಮುಖ ನೋಡಿದ ಮೇಲೆ, ಮಗನಿಗೆ ವೃತ್ತಿಕಲ್ಪನೆ ಆದಮೇಲೆ ಮನೆಯನ್ನು ಬಿಟ್ಟು ಕಾಡನ್ನು ಸೇರಿ ತಪೋಮಯವಾದ ಜೀವನವನ್ನು ಮಾಡಿ, ದೇಹವನ್ನು ತ್ಯಾಗ ಮಾಡುವಂತಹವರು ವಾನಪ್ರಸ್ಥರು.
ಜೀವನದಲ್ಲಿ ಒಂದು ಹಂತಬಂದಾಗ, ಮಗ ದೊಡ್ಡವನಾದ ಮೇಲೆ ಮನೆಯಲ್ಲಿ ಇರಬಾರದು. ಏನಾಗತ್ತೆ ಇದ್ದರೆ? Gereration gap ಬರತ್ತೆ. ಅಪ್ಪ ಹೇಳಿದ್ದು ಮಗನಿಗೆ ಆಗುವುದಿಲ್ಲ, ಮಗ ಹೇಳಿದ್ದು ಅಪ್ಪನಿಗೆ ಆಗುವುದಿಲ್ಲ. ಇಬ್ಬರೂ ತಿಳಿದವರೇ ಆದ್ದರಿಂದ ಒಬ್ಬರಿಗೊಬ್ಬರಿಗೆ ಅಭಿಪ್ರಾಯವೇ ಸರಿ ಬರುವುದಿಲ್ಲ. ಹಾಗಾಗಿ ‘ತೊಲಗೆಲ್ಲವೋ ಮನೆಯಿಂದ’ ಎಂಬ ಭಾವಬರದೇ, ಅದಕ್ಕಿಂತ ಮುಖ್ಯವಾಗಿ ಆಯಸ್ಸು ಮುಗಿಯುತ್ತಾ ಬಂತು ಎಂಬ ಭಾವ ಬರಬೇಕು. ಜೀವನದಲ್ಲಿ ಒಂದು ಹಂತ ಬಂದಾಗ ಪರಲೋಕದ ಸಿದ್ಧತೆ ಮಾಡಬೇಕು, ಶುರುವಿನಿಂದಲೇ ಮಾಡಬೇಕು. ಕೂದಲು ಬಿಳಿಯಾಗುವುದು, ಹಲ್ಲು ಬೀಳುವುದು, ಚರ್ಮಸುಕ್ಕಾಗುವುದು, ಬೆನ್ನುಬಾಗುವುದು ಇವೆಲ್ಲಾ ಯಮದೇವ ಕೊಡುವಂತಹ ಸೂಚನೆಗಳು. ಅದಕ್ಕಾಗಿ ನಾವು ಎಚ್ಚೆತ್ತುಕೊಳ್ಳಬೇಕು ಅದನ್ನು ಮರೆಮಾಚುವುದಲ್ಲ. ಮುಂದೆ ಏನು ಬೇಕು ಎನ್ನುವುದಕ್ಕೆ ತಯಾರಿ ಮಾಡಿಕೊಳ್ಳುವಂತಹದ್ದು ಎಂದು ಸೂಚನೆಯನ್ನು ಕೊಡುತ್ತಾನೆ. ಹಾಗೆ ಅಂತಹ ವಯಸ್ಸು ಬಂದಾಗ ವಾನಪ್ರಸ್ಥಕ್ಕೆ ಹೋಗಬೇಕು. ತಪಸ್ವಿನಃ, ತಪಸ್ವಿಗಳು. ತಪಸ್ವಿಗಳಲ್ಲಿ ಹಲವು ರೀತಿಯ ತಪಸ್ವಿಗಳು ಇದ್ದಾರೆ. ಕೆಲವರು ಪೂರ್ವಮಾರ್ಗದಲ್ಲಿ ಹೋಗುತ್ತಾರೆ. ಇನ್ನು ಕೆಲವು ರೀತಿಯ ತಪಸ್ವಿಗಳು ಪಶ್ಚಿಮಮಾರ್ಗದಿಂದ ಹೋಗುತ್ತಾರೆ. ಹಾಗೆ ಶ್ರೀಪಾದಸನ್ಯಾಸಪರಾಃ, ಕೆಲವರು ಸನ್ಯಾಸ ಸ್ವೀಕಾರ ಮಾಡುತ್ತಾರೆ. ಕೆಲವರು ಸನ್ಯಾಸವನ್ನು ಉಪಾಸನೆ ಮಾಡುತ್ತಾರೆ. ಇನ್ನು ಕೆಲವರು ಸನ್ಯಾಸಿಗಳನ್ನು ಉಪಾಸನೆ ಮಾಡುತ್ತಾರೆ. ಇನ್ನು ಕೆಲವರು ಆತ್ಮಸಾಧನೆ ಮಾಡುತ್ತಾ ಮಾಡುತ್ತಾ ಯಾವ ಸ್ಥಿತಿಗೆ ಬಂದಿರುತ್ತಾರೆ ಎಂದರೆ, ಅವರಿಗೆ ಯಾವುದೇ ವ್ಯತ್ಯಾಸವಿಲ್ಲ. ಸಮಲೋಷ್ಠಾಶ್ಮಕಾಂಚನತ್ವಾ, ಚಿನ್ನವು ಒಂದೇ, ಕಲ್ಲು ಒಂದೇ, ಮಣ್ಣು ಒಂದೇ. ಅವರು ಯಾವುದನ್ನೇ ನೋಡಿದರು ಆ ವಸ್ತುವಿನ ಒಳಗಿರುವ ಭಗವಂತನನ್ನು ನೋಡುತ್ತಾರೆ. ಹಾಗಾಗಿ ಅವರಿಗೆ ಎಲ್ಲರೂ ದೇವರಂತೇ ಕಾಣುತ್ತದೆ. ಜ್ಞಾನ, ವೈರಾಗ್ಯ ಸಂಪನ್ನರಾದಂತಹವರು. ಆಮೇಲೆ ಸರ್ವಭೂತಹಿತೇರತಾಃ, ಎಲ್ಲಾ ಜೀವಿಗಳಿಗೆ, ಪ್ರಾಣಿಗಳಿಗೆ ಹಿತವನ್ನು ಬಯಸುವಂತವರು. ಯಾರಾದರೂ ಒಬ್ಬರ ಬಗ್ಗೆ ದ್ವೇಷ ಭಾವನೆ ಇದ್ದರೆ ಈ ಮಾರ್ಗದಲ್ಲಿ ಪ್ರವೇಶವಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ಉಳ್ಳವರು. ಶಿವವಿಷ್ಣುವ್ರತಕರಾಃ, ಶಿವನಿಗೆ ಮತ್ತು ವಿಷ್ಣುವಿಗೆ ಸಂಬಂಧಪಟ್ಟ ವ್ರತಗಳನ್ನು ಸರಿಯಾಗಿ ಆಚರಣೆ ಮಾಡಿರುವಂತವರಿಗೆ ಪಶ್ಚಿಮಮಾರ್ಗದಿಂದ ಪ್ರವೇಶ ಸಿಗುತ್ತದೆ. ಕರ್ಮಬ್ರಹ್ಮಸಮರ್ಪಕಾಃ, ಅಂದರೆ ನಾವು ಮಾಡುವಂತಹ ಪ್ರತಿಯೊಂದು ಕಾರ್ಯವನ್ನು ದೇವರಿಗೆ ಅರ್ಪಣೆ ಮಾಡುವಂತಹದ್ದು.
ಮಕ್ಕಳೇ ಗಮನಿಸಬೇಕು ನೀವು ಇದನ್ನು. ನೀವೇನೇ ಕೆಲಸಗಳನ್ನು ಮಾಡಿ, ಮಾಡಿದ ಕೆಲಸಗಳನ್ನು ಭಗವಂತ ನಿನಗೆ ಅರ್ಪಿತ ಎಂದು ಅಂದುಕೊಂಡರೆ ಸಾಕು. ನಿನಗೇ ಸಮರ್ಪಿತಾ ಎಂದು ಭಾವಿಸುವುದು. ಅದನ್ನು ಅಭ್ಯಾಸ ಮಾಡಿ. ಇವರಿಗೆ ಕರ್ಮಬ್ರಹ್ಮ ಸಮರ್ಪಕರು ಎಂದು ಹೆಸರು. ಕರ್ಮವನ್ನು ಭಗವಂತನಲ್ಲಿ ಸಮರ್ಪಣೆ ಮಾಡುವಂತವರು. ನಾವು ಊಟ ಮಾಡುವಾಗ ಭಗವಂತನನ್ನು ನೆನೆಸಿ ಇದು ನಿನಗೆ ಅರ್ಪಿತ ಎಂದು ಊಟ ಮಾಡಿದರೆ, ಆ ಊಟ ನೈವೇದ್ಯವಾಗಿ, ಯಜ್ಞವಾಗಿ ಪರಿಣಮಿಸುತ್ತದೆ. ಇದನ್ನು ಮರೆಯದೇ ಮಾಡಬೇಕು. ಎಲ್ಲಾ ಕರ್ಮಗಳಲ್ಲಿಯೂ ಒಂದು ಸಮರ್ಪಣಾ ಭಾವ ಇದ್ದರೆ ಶುಭವಾದ ಪಶ್ಚಿಮಮಾರ್ಗದಲ್ಲಿ ಪ್ರವೇಶ ಸಿಗುತ್ತದೆ.
ಮನುಷ್ಯನಿಗೆ ಮೂರು ಋಣಗಳಿವೆಯಂತೆ. ಪಿತೃಗಳ ಋಣ, ದೇವತೆಗಳ ಋಣ, ಋಷಿಗಳ ಋಣ. ಪಿತೃಗಳ ಋಣ ಏಕೆಂದರೆ, ಪಿತೃಗಳು ಇಲ್ಲದಿದ್ದರೆ ನಾವು ಇರುತ್ತಿರಲಿಲ್ಲ. ಅವರು ನಮ್ಮ ಪೂರ್ವಜರು, ನಮ್ಮ ಜನ್ಮಕ್ಕೆ ಕಾರಣರಾದವರು. “ಹಿಂದೆ ಇಲ್ಲದಿದ್ದರೆ ಮುಂದೆ ಇಲ್ಲ” ಅದೇ ಅರ್ಥ. ಕಟ್ಟಡಕ್ಕೆ ಅಡಿಪಾಯ ಇದ್ದಂತೆ. ಅವರ ಋಣ ಇದೆ ನಮ್ಮ ಮೇಲೆ. ಇನ್ನು ದೇವತೆಗಳು, ಈ ಕಣ್ಣು, ಕಿವಿ, ಮೂಗು ಇವು ದೇವತೆ. ಗೊತ್ತಾ ನಿಮಗೆ?. ಮೂಗಿನಲ್ಲಿ ಅಶ್ವಿನಿ ದೇವತೆಗಳಿದ್ದಾರೆ, ಕಣ್ಣಿನಲ್ಲಿ ಸೂರ್ಯಚಂದ್ರರಿದ್ದಾರೆ. ನಾಲಿಗೆಯಲ್ಲಿ ಸರಸ್ವತಿ ಇದ್ದಾಳೆ. ಪ್ರತಿಯೊಂದು ಇಂದ್ರಿಯದಲ್ಲಿಯೂ ಕೂಡ ಒಂದೊಂದು ದೇವತೆಗಳಿದ್ದಾರೆ, ಸೂಕ್ಷ್ಮವಾಗಿ ಮತ್ತು ಅವ್ಯಕ್ತವಾಗಿ ಇದ್ದಾರೆ. ದೇವತೆಗಳು ಇರುವುದರಿಂದಲೇ ಈ ದೇಹವು ಕೆಲಸ ಮಾಡುತ್ತಿದೆ. ಇನ್ನು ಹೊರಗಡೆ ಪ್ರಪಂಚವನ್ನು ತೆಗೆದುಕೊಂಡರೆ ನೀರು, ಬೆಂಕಿ, ಗಾಳಿ, ಉಸಿರು, ಭೂಮಿ, ಇವೆಲ್ಲವೂ ದೇವತೆಗಳೇ, ಇವೆಲ್ಲದರ ಋಣ ಇದೆ ನಮ್ಮ ಮೇಲೆ.
ಇಳೆ ನಿನ್ನ ದಾನ, ಬೆಳೆ ನಿನ್ನ ದಾನ, ಸುಳಿದು ಸೂಸುವ ಗಾಳಿ ನಿನ್ನದಾನವಯ್ಯ| ನಿನ್ನ ದಾನವನುಂಡು, ನಿನ್ನ ಅನ್ನವನ್ನುಂಡು ಅನ್ಯರನ್ನು ಹೊಗಳುವ ಕುನ್ನಿಗಳ ನೇನೆಂಬೆ..?,
ಎಲ್ಲಾ ಭಗವಂತನ ಉಪಕಾರಗಳನ್ನು ತೆಗೆದುಕೊಂಡು ಇನ್ಯಾರನ್ನೋ ಹೊಗಳುತ್ತೇವೆ ಎಂದರೆ ಅದಕ್ಕಿಂತ ನಿಂದ್ಯವಾದದ್ದು ಬೇರೆ ಯಾವುದೂ ಇಲ್ಲ. ಋಷಿಗಳ ಋಣ ಕೂಡ ಇದೆ. “ಜ್ಞಾನ” ಎಂದು ಏನೇನು ಬಂದಿದೆಯೋ ಅದೆಲ್ಲವೂ ಋಷಿಗಳ ಋಣ. ಈ ಜನ್ಮದಲ್ಲಿ ನಾವು ಏನೇನು ತಿಳಿದುಕೊಂಡಿದ್ದೇವೋ ಅದೆಲ್ಲಾ ಋಷಿಗಳ ಋಣ. ತಲೆಯ ಭಾಗದಲ್ಲಿ ಸಪ್ತರ್ಷಿಗಳಿದ್ದಾರೆ ಎಂದು ಹೇಳುತ್ತಾರೆ. ಅವರ ಅನುಗ್ರಹ ಇಲ್ಲದಿದ್ದರೆ ಯಾವ ಜ್ಞಾನವೂ ನಮಗೆ ಬರುತ್ತಿರಲಿಲ್ಲ. ಅವರ ಋಣವನ್ನು ಹೇಗೆ ತೀರಿಸಬೇಕು? ಎಂದರೆ, ಅಧ್ಯಯನದ ಮೂಲಕ ಋಷಿಗಳ ಋಣವನ್ನು ತೀರಿಸಬೇಕು. ಮಕ್ಕಳೇ ನಿಮಗೆ ಸಂಬಂಧಪಟ್ಟಿದ್ದು ಇದು. ಸರಿಯಾದ ವಿದ್ಯೆಯನ್ನು ಚೆನ್ನಾಗಿ ಅಧ್ಯಯನ ಮಾಡಬೇಕು ಆಗ ಋಷಿ ಋಣ ತೀರುತ್ತದೆ. ಪಿತೃ ಋಣವನ್ನು ತೀರಿಸಬೇಕು ಎಂದರೆ, ಸಂತತಿಯನ್ನು ಪಡೆದು ವಂಶವನ್ನು ಮುಂದುವರಿಸಬೇಕು ಇಲ್ಲದಿದ್ದರೆ ಪಿತೃಗಳು ಪತನಗೊಳ್ಳುತ್ತಾರೆ. ಇನ್ನು ದೇವ ಋಣ ಪರಿಹಾರವೇನು? ಎಂದರೆ, ಪಂಚಯಜ್ಞ ಮತ್ತು ಅತಿಥಿ ಸತ್ಕಾರಗಳಿಂದ. ಪಂಚಯಜ್ಞ ಎಂದರೆ, ಗೃಹಸ್ಥನಾದವನು ಐದು ಯಜ್ಞಗಳನ್ನು ಮಾಡಬೇಕು. ಅವು ಅಧ್ಯಾಪನ ಮಾಡಬೇಕು, ಅಗ್ನಿ ಕಾರ್ಯವನ್ನು ಮಾಡಬೇಕು, ತರ್ಪಣದಿಂದ ಪಿತೃ ಯಜ್ಞ, ಭೂತಬಲಿ ಅಂದರೆ ದೇವರಿಗೆ ಅರ್ಪಿತವಾಗಿರುವ ಪ್ರಸಾದವನ್ನು ಸುತ್ತಮುತ್ತಲು ಇರುವ ಪ್ರಾಣಿ-ಪಕ್ಷಿ, ಕೀಟಗಳಿಗೆ ಒದಗಿಸಬೇಕು ಇದಕ್ಕೆ ಬಲಿಹರಣ ಎಂದು ಕರೆಯುತ್ತಾರೆ. ಮನುಷ್ಯನಾಗಬೇಕಾದರೆ ೮೪ ಲಕ್ಷ ಜನ್ಮಗಳನ್ನು ದಾಟಿ ಬರಬೇಕಂತೆ. ನಮಗಿಂತ ಎಲ್ಲೋ ತುಂಬಾ ಕೆಳಗಿದ್ದಾವೆ ಅವು, ಅವು ಕೂಡಾ ಮೇಲೆ ಬರಬೇಕು. ಹಾಗಾಗಿ ನಮ್ಮ ಮನೆಯ ಸುತ್ತಮುತ್ತ ಇರುವ ಪ್ರಾಣಿ-ಪಕ್ಷಿಗಳಿಗೆ, ಕ್ರಿಮಿ-ಕೀಟಗಳಿಗೆ ನಮ್ಮ ಮನೆಯ ದೇವರಪ್ರಸಾದ ಸೇರಬೇಕು ಅದು ಭೂತ ಯಜ್ಞ. ಇನ್ನು ಅತಿಥಿಸತ್ಕಾರ ಮನುಷ್ಯ ಯಜ್ಞ, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಬೇಕು. ಇದೆಲ್ಲಾ ಮಾಡಿದರೆ ಅವನಿಗೆ ಯಮಲೋಕದಲ್ಲಿ ಪಶ್ಚಿಮದ್ವಾರದಿಂದ ಪ್ರವೇಶ ಸಿಗುತ್ತದೆ. ಆಮೇಲೆ ಪಿತೃಗಳಿಗೆ ಶ್ರಾದ್ಧವನ್ನು ಕೊಟ್ಟರೆ ಅವರಿಗೆ ಅಲ್ಲಿ ಸಂತೃಪ್ತಿ ಆಗುತ್ತದೆ ಹಾಗೂ ನಮಗೆ ಇಲ್ಲಿ ಒಳ್ಳೆಯದಾಗುತ್ತದೆ. ಇದನ್ನು ಮಾಡದಿದ್ದರೆ ಅವರಿಗೆ ಅಲ್ಲಿ ಉಪವಾಸ ನಮಗೆ ಇಲ್ಲಿ ಕೇಡಾಗುತ್ತದೆ. ಎರಡು ಕಡೆ ಒಳ್ಳೆಯದಾಗಬೇಕು ಎಂದರೆ ಪಿತೃ ಕಾರ್ಯವನ್ನು ಮಾಡಲೇಬೇಕು. ದೇವಕಾರ್ಯಕ್ಕಿಂತ ಮೊದಲು ಪಿತೃ ಕಾರ್ಯವನ್ನು ಮಾಡಬೇಕು. ಪಿತೃ ಕಾರ್ಯ ಮಾಡದೇ ಇರುವಂತಹ ಮನೆ ಅದು ಮನೆಯಲ್ಲ, ಅಂತಹ ಮನುಷ್ಯ ಮನುಷ್ಯನಲ್ಲ. ನಮ್ಮ ಹಿಂದೆ ಇರುವ ಪರಂಪರೆಗೆ ತಪ್ಪದೇ ತರ್ಪಣವನ್ನೋ, ಶ್ರಾದ್ಧವನ್ನೋ ಮಾಡಲೇಬೇಕು. ಅನಿವಾರ್ಯವಾಗಿ ಮಾಡಲೇಬೇಕು ಯಾವುದೇ ಕಾರಣಕ್ಕೂ ಬಿಡಬಾರದು. ಇದನ್ನೆಲ್ಲಾ ಮಾಡಿದರೆ ಪಶ್ಚಿಮದ್ವಾರದಿಂದ ಪ್ರವೇಶ ಸಿಗುತ್ತದೆ.
ಕಾಲೇ ಸಂಧ್ಯಾಂ ಉಪಾಸಕಾಃ,
ಸರಿಯಾದ ಸಂಧ್ಯಾಕಾಲದಲ್ಲಿ ಸಂಧ್ಯಾವಂದನೆ ಮಾಡುವಂತವರು. ದೇವರ ಉಪಾಸನೆ ಮಾಡುವವರು. ಕಾಲಕ್ಕೆ ಸರಿಯಾಗಿ ಭಗವಂತನ ಉಪಾಸನೆಯನ್ನು ಮಾಡಬೇಕು. ಅವರವರ ರೀತಿಗಳು ಬೇರೆ ಬೇರೆ ಇರುತ್ತದೆ. ಪುರುಷರಿಗೆ ಒಂದು ರೀತಿ, ಮಹಿಳೆಯರಿಗೆ ಒಂದು ರೀತಿ ಇರಬಹುದು. ಆದರೆ ಸರಿಯಾದ ಸಂಧ್ಯಾಕಾಲದಲ್ಲಿ ಯಾರು ಭಗವಂತನ ಧ್ಯಾನವನ್ನು ಮಾಡುವುದಿಲ್ಲವೋ, ಯಾರು ಆ ವಿಹಿತವಾಗಿರುವಂತಹ ಸಂಧ್ಯಾಕಾಲದಲ್ಲಿ ಮಗ್ನರಾಗಿ ಇರುವುದಿಲ್ಲವೋ ಅಂತವರಿಗೆ ಅಲ್ಲಿ ಪ್ರವೇಶವಿಲ್ಲ. ಸಂಧ್ಯಾಕಾರ್ಯವನ್ನು ತಪ್ಪದೇ ಮಾಡಲೇಬೇಕು, ಮತ್ತು ಆ ಸಮಯದಲ್ಲೇ ಮಾಡಬೇಕು.
ಸಮಯ ಮೀರಿದೆ ಅದಕ್ಕೆ ಪ್ರಾಯಶ್ಚಿತ್ತವಾಗಿ ಇನ್ನೊಂದು ಅರ್ಘ್ಯ ಕೊಡುತ್ತೇನೆ ಅಂದರೆ ಆಗುವುದಿಲ್ಲ. ಕೊಡುವುದು ಸರಿ, ಸಮಯಕ್ಕೆ ತಡವಾದಾಗ ಮತ್ತೊಂದು ಅರ್ಘ್ಯ ಕೊಡುವುದು ಅನಿವಾರ್ಯವಾಗುತ್ತದೆ, ಆದರೆ ತಡವಾಗಬಾರದು. ಸರಿಯಾದ ಸಮಯಕ್ಕೇ ಮಾಡಬೇಕು.
ಉದಾಹರಣೆಗೆ;
ಒಂದು ಬಾಳೆಹಣ್ಣು ಅಥವಾ ಮಾವಿನ ಹಣ್ಣನ್ನು ಕೊಳೆತ ಮೇಲೆ ತಿನ್ನಬಹುದಾ? ಕಾಲ ಅತಿಕ್ರಮ ಆಗಿದೆ ಒಂದು ಪ್ರಾಯಶ್ಚಿತ್ತ ಮಾಡಿ ತಿನ್ನಿ ಅದನ್ನ ಅಂದರೆ ತಿಂತೀರಾ?
ಅನಿವಾರ್ಯವಾದಾಗ ಬೇರೆ, ಆದರೆ ಬೇಕು ಅಂತಲೇ ಮಾಡಿದಾಗ ಈ ಪ್ರಶ್ನೆ ಬರುತ್ತದೆ. ಪ್ರತಿಯೊಂದಕ್ಕೂ ಒಂದು ಕಾಲ ಇದೆ. ಊಟಕ್ಕೂ ಒಂದು ಕಾಲ ಇದೆ. ಊಟದ ಸಮಯ ಮೀರಿ, ಐದಾರು ತಾಸು ಬಿಟ್ಟು ಊಟ ಹಾಕಿದರೆ ಹೇಗಾಗಬಹುದು ಹೇಳಿ. ನಿದ್ರೆ ಮಾಡುವ ಸಮಯವನ್ನು ಬಿಟ್ಟು ತಡವಾಗಿ ನಿದ್ರೆ ಮಾಡಿದರೆ ಚೆನ್ನಾಗಿ ಇರುವುದಿಲ್ಲ. ಆಯಾ ಸಮಯಕ್ಕೇ ಆಗಬೇಕು ಅದು. ಬೆಳಿಗ್ಗೆ ಆರು ಗಂಟೆಗೆ ಮಲಗಿ, ಎರಡು ಅಥವಾ ಮೂರು ಗಂಟೆಗೆ ಏಳುವುದು, ರಾತ್ರಿಯಿಡೀ ಎಚ್ಚರವಾಗಿ ಇರುವಂತದ್ದು ಸರಿನಾ?. ನಿದ್ದೆ ಮಾಡುವ ಕಾಲಕ್ಕೆ ನಿದ್ರೆಯನ್ನು ಮಾಡಬೇಕು, ಊಟ ಮಾಡುವ ಕಾಲಕ್ಕೆ ಊಟವನ್ನು ಮಾಡಬೇಕು. ಧ್ಯಾನ ಮಾಡುವ ಕಾಲಕ್ಕೆ ಧ್ಯಾನ ಮಾಡಬೇಕು. ಅದರದೇ ಸಮಯಕ್ಕೆ ಮಾಡಬೇಕು. ಸಮಯಕ್ಕೆ ತುಂಬಾ ಮಹತ್ವವಿದೆ. ಯಾರು ಕಾಲಕ್ಕೆ ಮಹತ್ವ ಕೊಡುವುದಿಲ್ಲವೋ ಅಂತವನು ಉಳಿಯುವುದಿಲ್ಲ ಹಾಗೂ ಅವರಿಗೆ ಒಳ್ಳೆಯದಾಗುವುದಿಲ್ಲ.
ನೀಚಸಂಗ ವಿನಿರ್ಮುಕ್ತಾಃ,
ನೀಚ ಮನುಷ್ಯರ ಸಂಗವನ್ನ ಮಾಡಬಾರದು. ಯಾಕೆಂದರೆ ಅದರಿಂದ ಅವರ ಕೆಟ್ಟದ್ದು ನಮಗೆ ಪ್ರಕಟವಾಗಿ ಬರುತ್ತದೆ. ಉದಾಹಣೆಗೆ; ಅವನಿಗೆ ಏನೋ ವ್ಯಸನದ ಅಭ್ಯಾಸ ಇರಬಹುದು ಎಂದುಕೊಳ್ಳಿ, ಅವನು ಕುಡಿಯುತ್ತಾನೆ ಅಂದರೆ ನಮಗೂ ಆ ರೂಢಿ ಬರಬಹುದು, ಅವನು ಸುಳ್ಳು ಹೇಳುತ್ತಾನೆ, ಕದಿಯುತ್ತಾನೆ ಎಂದುಕೊಳ್ಳಿ ಅದು ನಮಗೂ ಬರಬಹುದು. ಇದೇ ರೀತಿ ಹಲವು ಕೆಟ್ಟ ಅಭ್ಯಾಸಗಳು ನಮಗೆ ಅವರಿಂದ ಬರಬಹುದು. ಅದಕ್ಕಿಂತ ಮುಖ್ಯವಾಗಿ ಈ ಪಾಪ ಹಾಗೂ ಪುಣ್ಯಗಳಿಗೆ ದಾಟುವ ಅಭ್ಯಾಸ ಇದೆಯಂತೆ. ಅವು ಒಬ್ಬರಿಂದ ಒಬ್ಬರಿಗೆ ದಾಟುತ್ತವೆ. ನಾವು ಯಾರೊಂದಿಗೆ ತುಂಬಾ ಒಡನಾಡುತ್ತೇವೋ ಅವರ ಪಾಪ ಪುಣ್ಯಗಳು ನಮಗೆ ದಾಟುತ್ತದೆ. ಈಗ ಗುರುಗಳ ಹತ್ತಿರ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಅವರ ಪುಣ್ಯ ನಮಗೆ ಬರುತ್ತದೆ, ಅವರ ಧರ್ಮ ನಮಗೆ ಬರುತ್ತದೆ. ಹಾಗೆ ಪಾಪಿಗಳ ಜೊತೆ ಓಡಾಡಿದರೆ ಅವನು ಮಾಡಿದ ಪಾಪಗಳಲ್ಲಿ ಒಂದಷ್ಟು ಪಾಲು ನಮಗೆ ಬರುತ್ತದೆ. ಎಲ್ಲರಿಗೂ ಬೇರೆ ಬೇರೆ ಆಸನಗಳನ್ನ ಯಾಕೆ ಇಡುತ್ತಾರೆ? ಅಂದರೆ, ಪಾಪಿಗಳ ಪಂಕ್ತಿಯಲ್ಲಿ ಒಂದೇ ಆಸನದಲ್ಲಿ ಕುಳಿತುಕೊಂಡರೆ ಆ ಪಾಪ ನಮಗೂ ಬರಬಹುದು ಎಂದು. ಹಾಗಾಗಿ ಯಾವತ್ತೂ ಸಾಧ್ಯವಾದಷ್ಟು ನಮ್ಮಷ್ಟಕ್ಕೆ ನಾವು ಇರಬೇಕು. ಅನಗತ್ಯವಾಗಿ ಇನ್ನೊಬ್ಬರನ್ನು ಮುಟ್ಟುವುದು, ಬೇರೆಯವರ ಒಟ್ಟಿಗೆ ಮಿತಿಮೀರಿ ಒಡನಾಟ ಮಾಡುವುದನ್ನು ಮಾಡಬಾರದು. ಅದರಲ್ಲಿಯೂ ಯಾರು ನೀಚರೋ, ಪಾಪಿಗಳೋ, ದುಷ್ಟರೋ ಅವರಿಂದ ದೂರ ಇರಬೇಕು. ಅವರ ಹೆಸರನ್ನು ಕೂಡ ಹೇಳಬಾರದು, ನೆನಪೂ ಮಾಡಿಕೊಳ್ಳಬಾರದು. ಅದೂ ಕೂಡ ದೋಷವೇ. ಆದರೆ ರಾಮನಂತವರನ್ನು, ಯುಧಿಷ್ಠಿರನಂತವರನ್ನು ನೆನಪು ಮಾಡಿಕೊಂಡರೆ ಸಾಕು ಪುಣ್ಯ ಬರುತ್ತದೆ. ಬೇರೆ ಏನೂ ಮಾಡದೇ ಅವರ ಸ್ಮರಣೆ ಮಾಡಿದರೆ ಅಲ್ಲಿಂದ ಚೈತನ್ಯ ನಮ್ಮೆಡೆಗೆ ಹರಿದು ಬರುತ್ತದೆ. ಹಾಗಾಗಿ
ನೀಚಸಂಗ ವಿನರ್ಮುಕ್ತಾಃ ಸತ್ಸಂಗತಿ ಪರಾಯಣಾಃ, ಸಜ್ಜನರ ಸಂಗ ಮಾಡುವಂತವರು, ದುರ್ಜನರ ಸಂಗ ಬಿಡುವಂತವರು. ಇಂತವರೆಲ್ಲಾ ವಿಮಾನವನ್ನು ಏರಿ, ದೇವದೂತರು, ಅಪ್ಸರೆಯರಿಂದ ಸೇವಿತರಾಗಿ ಪಶ್ಚಿಮ ಭಾಗದಲ್ಲಿ ಹಿಮಾಲಯವನ್ನು ಪ್ರವೇಶ ಮಾಡುತ್ತಾರೆ. ಇಡೀ ದಾರಿ ತುಂಬಾ ಸುಧಾಮೃತವನ್ನು ಪಾನ ಮಾಡುತ್ತಾ ಅವರ ಪ್ರಯಾಣ ನಡೆಯುತ್ತದೆ. ಧರ್ಮಮಂದಿರಂ ಪಶ್ಚಿಮದ್ವಾರೇ ವಿಶಂತೀ, ಅವರು ಪಶ್ಚಿಮ ದ್ವಾರದಿಂದ ದಿವ್ಯಲೋಕವನ್ನು ಸೇರುತ್ತಾರೆ.
ತಪಸ್ವಿ ಮತ್ತು ಉಗ್ರತಪಸ್ವಿಗೆ ಉದಾಹರಣೆ;
ರಾಮಾಯಣದಲ್ಲಿ ಶರಭಂಗ ಎಂದು ಒಬ್ಬ ತಪಸ್ವಿ ಬಗ್ಗೆ ಬರುತ್ತದೆ. ಕೇಳಿದ್ದೀರಾ ನೀವು? ಶರಭಂಗ ಎನ್ನುವ ಒಬ್ಬ ಮಹರ್ಷಿ. ಆತ ಎಂಥವನು ಅಂದರೆ, ರಾಮ ವನವಾಸದ ಸಮಯದಲ್ಲಿ ಅವರನ್ನು, ಅವರ ಆಶ್ರಮವನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ಹೋದಾಗ ಒಂದು ಕೌತುಕ ನಡೆಯುತ್ತಿರುತ್ತದೆ.
ಆಶ್ರಮಂ ಶರಭಂಗಸ್ಯ ರಾಘವೋ ಅಭಿಜಗಾಮಃ, ಶರಭಂಗರ ಆಶ್ರಮಕ್ಕೆ ರಾಮನು ಹೋದಾಗ, ಅಲ್ಲಿ ಆಶ್ರಮದ ಹೊರಗೆ ಒಂದು ಅದ್ಭುತ ನಡೆಯುತ್ತಿತ್ತು. ರಾಮನು ಸ್ವಲ್ಪ ದೂರದಿಂದ ಅದನ್ನು ನೋಡುತ್ತಾ ಇರುತ್ತಾನೆ. ಆ ಅದ್ಭುತ ಏನೆಂದರೆ, ಒಂದು ದಿವ್ಯರಥ ಆಕಾಶದಲ್ಲಿ ನಿಂತಿದೆ. ಭೂಮಿಯನ್ನು ಬಿಟ್ಟು ಗಗನದಲ್ಲಿ ಒಂದು ದಿವ್ಯರಥ ತೇಲುತ್ತಾ ಇದೆ. ಆ ರಥಕ್ಕೆ ಹಸಿರು ಬಣ್ಣದ ಕುದುರೆಗಳು. ಆ ರಥದಿಂದ ಒಬ್ಬ ಮಹಾನುಭಾವ ಇಳಿದು ಬರುತ್ತಾ ಇದ್ದಾನೆ. ಅಸಂಸ್ಪೃಶಂತಂ ವಸುಧಾಂ, ಅವನು ಭೂಮಿಯನ್ನು ಮುಟ್ಟದೇ, ಶರಭಂಗರ ಆಶ್ರಮದ ಕಡೆಗೆ ಹೋಗುತ್ತಾ ಇದ್ದನಂತೆ. ಅವನು ಯಾರೆಂದರೆ ವಿಭುದೇಶ್ವರಮ್, ದೇವತೆಗಳ ದೊರೆ. ಆ ರಥ ಇಂದ್ರನ ರಥವಾಗಿತ್ತು. ಆ ಬಣ್ಣದ ಕುದುರೆಗಳು ಇಂದ್ರನ ಕುದುರೆಗಳು. ರಾಮ ಇಂದ್ರನನ್ನು ನೋಡಿದಾಗ, ಅವನಿಗೆ ಇಂದ್ರ ಸೂರ್ಯನಂತೆ ಕಂಡ, ಅಗ್ನಿಯಂತೆ ಕಂಡ. ಅಷ್ಟು ತೇಜಸ್ವಿಯಾಗಿ ಇದ್ದ. ಇಂದ್ರ ರಥವನ್ನು ಇಳಿದು ಆಶ್ರಮದೆಡೆಗೆ ಹೋಗುತ್ತಾ ಇದ್ದಾನೆ, ಅವನ ಹಿಂದೆ ದೇವತೆಗಳು ಹಿಂಬಾಲಿಸುತ್ತಾ ಇದ್ದಾರೆ. ಅವನ ಆಭರಣಗಳಿಗೆಲ್ಲಾ ಅಪೂರ್ವವಾಗಿರುವಂತಹ ಪ್ರಭೆ, ಅವನ ವಸ್ತ್ರದಲ್ಲಿ ಕೊಂಚವೂ ಧೂಳಿಲ್ಲ. ದೇವತೆಗಳ ಲಕ್ಷಣ ಇದು, ಅವರ ವಸ್ತ್ರಗಳನ್ನು ಧೂಳು ಮುಟ್ಟುವುದಿಲ್ಲ. ಈ ಪೃಥ್ವಿ ಅವರನ್ನು ಮುಟ್ಟುವುದಿಲ್ಲ. ಅವರೂ ಭೂಮಿಯನ್ನು ಮುಟ್ಟುವುದಿಲ್ಲ, ಭೂಮಿಯ ಧೂಳು ಕೂಡ ಅವರನ್ನು ಮುಟ್ಟುವುದಿಲ್ಲ. ಅವನ ಹಾಗೆ ಇದ್ದ ಅನೇಕ ಅನೇಕ ದೇವತೆಗಳಿಂದ ಅವನು ಪೂಜಿಸಲ್ಪಡುತ್ತಾ ಇದ್ದಾನೆ. ಆ ರಥ ಅಂತರಿಕ್ಷದಲ್ಲಿ ಇದೆ, ಆಗ ತಾನೇ ಉದಯಿಸಿದ ಸೂರ್ಯನಂತೆ ಇದೆ. ಇಂದ್ರನಿಗೆ ಛತ್ರವನ್ನು ಹಿಡಿದಿದ್ದರು. ಆ ಛತ್ರ ಚಂದ್ರಮಂಡಲವನ್ನು ಹೋಲುವಷ್ಟು ಸೊಗಸಾಗಿ ಇತ್ತಂತೆ. ಆ ಛತ್ರಕ್ಕೆ ಚಿನ್ನದ ದಂಡದಿಂದ ಅಲಂಕಾರ. ಹಾಗೆ ಅಪ್ಸರೆಯರು ಅವನ ನೆತ್ತಿಗೆ ಗಾಳಿ ಬರುವಂತೆ ಚಾಮರಗಳಿಂದ ಗಾಳಿ ಬೀಸುತ್ತಾ ಇದ್ದಾರೆ. ಗಂಧರ್ವರು, ಅಮರರು, ಪರಮರ್ಷಿಗಳು ಇಂತವರೆಲ್ಲಾ ಉತ್ತಮೋತ್ತಮವಾಗಿರುವಂತಹ ಸ್ತೋತ್ರಗಳಿಂದ ಇಂದ್ರನನ್ನು ಸ್ತುತಿ ಮಾಡುತ್ತಾ ಇದ್ದಾರೆ. ಅದನ್ನು ಕಂಡು ರಾಮ ಲಕ್ಷ್ಮಣನಿಗೆ ಹೇಳುತ್ತಾನೆ, “ಇವನು ಇಂದ್ರನೇ ಇರಬೇಕು”, ಏಕೆಂದರೆ ನಾವೇನು ಇಂದ್ರನ ರಥ ಹೇಗಿರುತ್ತದೆ ಎಂದು ಕೇಳಿದ್ದೇವೋ ಅದೇ ಪ್ರಕಾರವಾಗಿದೆ ಇವೆಲ್ಲವೂ ಕೂಡ. ಅದ್ಭುತಂ ಪಶ್ಯ ಲಕ್ಷ್ಮಣಾ, ಈ ಅದ್ಭುತವನ್ನು ನೋಡು ಲಕ್ಷ್ಮಣ. ಬೆಳಗುವಂತಹ ಈ ಅದ್ಭುತವಾದ, ಆಕಾಶಗಾಮಿಯಾದ ರಥವನ್ನು ನೋಡು, ಈ ಕುದುರೆಗಳನ್ನು ನೋಡು. ಇವನು ಇಂದ್ರನೇ ಹೊರತು ಬೇರೆ ಯಾರೂ ಅಲ್ಲ. ಅವನ ಸುತ್ತ ಅನೇಕ ಪುರುಷರು ಇದ್ದಾರೆ. ಅವರೆಲ್ಲರೂ ಅವನ ಅಂಗರಕ್ಷಕರು. ನೂರಾರು ಜನ ಯುವಕರು, ಎಲ್ಲರ ಕೈಯಲ್ಲೂ ಖಡ್ಗ, ವಿಶಾಲವಾದ ವಕ್ಷಸ್ಥಲ, ಅವರ ಬಾಹುಗಳು ಪರಿಗಾಯುಧ ಇದ್ದಂತೆ ಇದೆ, ಕೆಂಪು ಬಟ್ಟೆ, ಅವರ ಪರಾಕ್ರಮ ಹೆಬ್ಬುಲಿಯಂತೆ, ಅವರ ಕೊರಳಲ್ಲಿ ಅಗ್ನಿಯನ್ನು ಹೋಲುವಂತಹ ಹಾರಗಳು, ಮನೋಹರವಾದ ರೂಪ, ಅವರ ವಯಸ್ಸು ಯಾವಾಗಲೂ ಇಪ್ಪತ್ತೈದು. ಲಕ್ಷ್ಮಣನಿಗೆ ರಾಮ ಹೇಳುತ್ತಾನೆ, ದೇವತೆಗಳ ವಯಸ್ಸು ಯಾವಾಗಲೂ ಇಪ್ಪತೈದು. ಅದು ಕಡಿಮೆಯೂ ಆಗುವುದಿಲ್ಲ, ಜಾಸ್ತಿಯೂ ಆಗುವುದಿಲ್ಲ. ಇವರೆಲ್ಲರೂ ದೇವತೆಗಳು, ಇಂದ್ರನ ಅಂಗರಕ್ಷಕರು. ಆ ಸಮಯದಲ್ಲಿ ರಾಮ, ಶರಭಂಗರ ಆಶ್ರಮದ ಬಳಿ ಹೋಗಲು ಪ್ರಯತ್ನ ಮಾಡುತ್ತಾನೆ, ಆಗ ಇಂದ್ರ ಅದೃಶ್ಯವಾಗುತ್ತಾನೆ. ಯಾಕೆಂದರೆ ರಾಮನ ಮುಂದೆ ಪ್ರಕಟವಾಗುವ ಸಮಯ ಇನ್ನೂ ಸನ್ನಿಹಿತವಾಗಿಲ್ಲ. ರಾವಣನ ಸಂಹಾರ ಆದಮೇಲೆ ಇಂದ್ರ ರಾಮನನ್ನು ಭೇಟಿಯಾಗಬೇಕೇ ಹೊರತು ಈಗ ಆಗುವಂತಿಲ್ಲ. ಹಾಗಾಗಿ ಶರಭಂಗರ ಜೊತೆ ಆಡಬೇಕಾದ ಮಾತುಗಳನ್ನು ಆಡಿ ಇಂದ್ರ ಕಣ್ಮರೆಯಾಗಿದ್ದಾನೆ, ರಾಮ ಆಶ್ರಮವನ್ನು ಪ್ರವೇಶ ಮಾಡುತ್ತಾನೆ. ರಾಮ ಶರಭಂಗರ ಬಳಿ ಅವರು ಬಂದವರು ಯಾರು? ಎಂದು ಕೇಳಿದಾಗ, ಶರಭಂಗ ರಾಮನಿಗೆ ಹೇಳುತ್ತಾನೆ; ರಾಮ, ಅದು ಇಂದ್ರ ಬಂದಿದ್ದು. ಆತ ಬಂದಿದ್ದು ಏಕೆಂದರೆ ನನ್ನನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಗಲು ಬಯಸಿದ್ದಾನೆ ಇಂದ್ರ ಎಂದು ಹೇಳುತ್ತಾರೆ. ಶರಭಂಗನ ಆಯಸ್ಸು ಒಂದು ಹಂತದಲ್ಲಿ ಮುಗಿದಿದೆ. ಅವನ ತಪಸ್ಸು ಎಂತಹದ್ದು ಅಂದರೆ, ಯಮಲೋಕಕ್ಕಿಂತ ಬಹಳ ಮುಂದೆ ಇದೆ ಬ್ರಹ್ಮಲೋಕ. ಮೋಕ್ಷಕ್ಕೆ ಒಂದೇ ಒಂದು ಹೆಜ್ಜೆ. ಅಲ್ಲಿಗೆ ಹೋಗುವ ಅರ್ಹತೆಯನ್ನು ನೀನು ಸಂಪಾದನೆ ಮಾಡಿದ್ದೀಯ, ಹಾಗಾಗಿ ಕರೆದುಕೊಂಡು ಹೋಗಲು ವಿಮಾನವನ್ನು ತಂದಿದ್ದೇನೆ ಬಾ ಹೋಗೋಣ ಎಂದು ಕರೆಯಲು ಬಂದಿದ್ದಾನೆ. ಮತ್ತೆ ನೀವು ಯಾಕೆ ಹೋಗಲಿಲ್ಲ? ಎಂದು ಕೇಳಿದ ರಾಮ. ಆಗ ಶರಭಂಗರು; ಇಲ್ಲ, ನಿನ್ನನ್ನು ನೋಡಬೇಕು ಎಂದು ಇತ್ತು ನನಗೆ ಅದಕ್ಕೇ ಹೋಗಲಿಲ್ಲ ಎಂದರು. ಹಾಗಿದ್ದರೆ ಬ್ರಹ್ಮಲೋಕಕ್ಕಿಂತ ವಿಶೇಷ ಎಂದಾಯಿತಲ್ಲವೇ ರಾಮನ ದರ್ಶನ. ಇಲ್ಲದಿದ್ದರೆ ತನ್ನ ತಪಸ್ಸಿನ ಮೂಲಕ ಬ್ರಹ್ಮಲೋಕವನ್ನು ಪಡೆದ ಮಹಾನುಭಾವ, ವಿಮಾನ ಬಂದಿದೆ, ದೇವತೆಗಳ ದೊರೆ ಕರೆದುಕೊಂಡು ಹೋಗಲು ಬಂದಿದ್ದಾರೆ, ಇಷ್ಟೆಲ್ಲಾ ಇದ್ದರೂ ಬರುವುದಿಲ್ಲ ಹೋಗು, ಆಮೇಲೆ ಬರುತ್ತೇನೆ ಎಂದು ಹೇಳಿದ್ದಾರೆ ಅಂದರೆ ಅಷ್ಟು ಶಕ್ತಿಯಿದೆ ಅವರಿಗೆ. ತಮ್ಮ ಆಯಸ್ಸನ್ನು ನಿಯಂತ್ರಣ ಮಾಡುವಂತಹ ಶಕ್ತಿ ಶರಭಂಗರಲ್ಲಿದೆ. ಯಮದೂತರು ಸುಳಿಯುವ ಹಾಗೂ ಇಲ್ಲ ಅಲ್ಲಿ. ಸಾಕ್ಷಾತ್ ದೇವೇಂದ್ರ ಬಂದರೂ ತೀರ್ಮಾನ ಮಾಡುವ ಶಕ್ತಿಯಿದೆ ಅವರಲ್ಲಿ. ಆದರೆ ಸಾಮಾನ್ಯ ಮನುಷ್ಯರಿಗೆ ಆ ಶಕ್ತಿಯಿಲ್ಲ, ಯಮ ಬಂದಾಗ ಆಮೇಲೆ ಬರುತ್ತೇನೆ ಎಂದು ಹೇಳಲು ಆಗುವುದಿಲ್ಲ.
ಕಾಲಪುರುಷ ಬಂದು ರಾಮನನ್ನು ಭೇಟಿಮಾಡಿ ಹೇಳುತ್ತಾನೆ; “ನೀನು ಎಷ್ಟು ಸಮಯ ಇರುತ್ತೇನೆ ಅಂತ ಹೇಳಿದ್ದೆಯೋ ಆ ಸಮಯ ಮುಗಿದಿದೆ, ನಿನ್ನ ಆಯಸ್ಸು ಮುಗಿದಿದೆ. ಈಗ ನನಗೆ ಏನು ಅಪ್ಪಣೆ? ಇಲ್ಲೇ ಇರುತ್ತಿಯೋ ಅಥವಾ ಪುನಃ ವೈಕುಂಠಕ್ಕೆ ಹೋಗಲು ವ್ಯವಸ್ಥೆ ಮಾಡುವ ಸೇವೆ ಮಾಡಬೇಕೋ ನಾನು” ಎಂದು. ಇವೆಲ್ಲಾ ಅವರ ಯೋಗ್ಯತೆ. ಕಾಲಾತೀತರು ಅವರು, ಕಾಲವನ್ನು ಮೀರಿರುವಂತವರು. ಶರಭಂಗನು ಕೂಡ ಅಂತವನೇ ಹೌದು. ಹಾಗಾಗಿ ಸಾಮಾನ್ಯ ಮನುಷ್ಯರಿಂದ ಸಾಧನೆ ಮಾಡಲು ಸಾಧ್ಯವಾಗದಂತಹ ಬ್ರಹ್ಮಲೋಕವನ್ನು ಗೆದ್ದಂತಹ ಶರಭಂಗ, ಅವಸರ ಮಾಡಬೇಡ, ನನಗೆ ರಾಮನನ್ನು ನೋಡಬೇಕು ಎಂದು ಹೇಳಿದ. ಅವನ ಮಹಿಮೆ ಎಂತದ್ದು ಅಂದರೆ, ಬರುವ ಮುನ್ನವೇ ಗೊತ್ತಾಯಿತು ಈಗ ರಾಮ ಬರುತ್ತಾನೆ ಎಂದು. ಈ ಕಣ್ಣು ನೋಡುವ ಮುನ್ನವೇ ಹೃದಯದ ಕಣ್ಣು ನೋಡುತಿತ್ತು ಅಂತವನು ಅವನು. ಹಾಗಾಗಿ,
ಬ್ರಹ್ಮಲೋಕಂ ನ ಗಚ್ಛಾಮಿ ತ್ವಾಂ ಅದೃಷ್ಟ್ವಾ ಪ್ರಿಯಾತಿಥಿಮ್, ಪ್ರಿಯನಾದ ಅತಿಥಿ ನೀನು, ನಿನ್ನನ್ನು ಕಾಣದೆ ನಾನು ಬ್ರಹ್ಮಲೋಕಕ್ಕೆ ಹೋಗಲಾರೆ. ಇನ್ನು ಪರವಾಗಿಲ್ಲ. ನಿನ್ನ ಭೇಟಿಯಾಯಿತು, ನಿನ್ನನ್ನು ನೋಡಿದೆ, ಧನ್ಯ ನಾನು. ಇನ್ನು ಹೊರಡಲೇ ನಾನು? ಎಂದು ಕೇಳಿದ ಶರಭಂಗ. ರಾಮ ಒಪ್ಪಿಗೆ ಕೊಟ್ಟಮೇಲೆ, ನೋಡುತ್ತಾ ಇರು ರಾಮ ನಾನು ಹೊರಟೆ ಈಗ ಎಂದು ಹೇಳಿ, ಅಲ್ಲಿಯೇ ಅಗ್ನಿಯನ್ನು ಪ್ರಜ್ವಲನಗೊಳಿಸಿದರು. ಹೇಗೆ ಸುಲಭವಾಗಿ ಯಾವುದೇ ಕಷ್ಟವಿಲ್ಲದೆ ಹಾವು ಪೊರೆಯನ್ನು ಬಿಡುತ್ತದೆಯೋ ಅದೇ ರೀತಿ ಸಹಜವಾಗಿ ಶರೀರವನ್ನು ತ್ಯಾಗ ಮಾಡುತ್ತೇನೆ ಎಂದು ಹೇಳಿ, ಅಗ್ನಿಯನ್ನು ಪ್ರಜ್ವಲನೆಗೊಳಿಸಿ, ಅದರಲ್ಲಿ ಕೆಲವು ಹೋಮಗಳನ್ನು ಮಾಡಿ, ದೇವತೆಗಳನ್ನು ಪ್ರೀತಿಗೊಳಿಸಿ ಬಳಿಕ ತನ್ನನ್ನೇ ಹೋಮ ಮಾಡುತ್ತಾನೆ ಶರಭಂಗ. ರಾಮ ನೋಡುತ್ತಿದ್ದಂತೆಯೇ ಅಗ್ನಿ ಶರಭಂಗನ ರೋಮವನ್ನು ಸುಡುತ್ತಾ ಇದೆ, ಕೂದಲುಗಳನ್ನು ಸುಡುತ್ತಾ ಇದೆ, ಅವನ ಸುಕ್ಕಾದ ಚರ್ಮವನ್ನು ಸುಡುತ್ತಾ ಇದೆ, ಅಸ್ತಿಯನ್ನು, ಮಾಂಸವನ್ನು ಸುಡುತ್ತಾ ಇದೆ. ಸೀತೆ, ಲಕ್ಷ್ಮಣರೊಡನೆ ರಾಮ ವಿಸ್ಮಿತನಾಗಿ ನೋಡುತ್ತಾ ಇದ್ದಾನೆ. ಆ ಅಗ್ನಿಯ ಮಧ್ಯದಿಂದ ಒಬ್ಬ ಎಳೇ ವಯಸ್ಸಿನ ಕುಮಾರ ದಿವ್ಯರೂಪದಿಂದ ಮೇಲೆದ್ದು ಬಂದನಂತೆ. ಯಾರದು? ಶರಭಂಗನೇ. ಅವನ ಮುಪ್ಪಿನ ಶರೀರವನ್ನು ತ್ಯಾಗ ಮಾಡಿ ಎಳೆಯ ವಯಸ್ಸಿನ ಮನೋಹರವಾದ, ಸುಂದರವಾದ ಶರೀರವನ್ನು ಧಾರಣೆ ಮಾಡಿ ಮೇಲಕ್ಕೆದ್ದು ಅಪೂರ್ವ ಕಾಂತಿಯಂತೆ ಬೆಳಗಿದ. ರಾಮನಿಂದ ಅನುಜ್ಞೆಯನ್ನು ಪಡೆದು ಆತ ಮೇಲಕ್ಕೆ ಏರುತ್ತಾನೆ. ದೇವಲೋಕವನ್ನೂ ದಾಟಿ ಬ್ರಹ್ಮಲೋಕವನ್ನು ಪ್ರವೇಶ ಮಾಡಿದಾಗ, ಸಾಕ್ಷಾತ್ ಬ್ರಹ್ಮದೇವನೇ ಬಾಗಿಲಿಗೆ ಬಂದು ಶರಭಂಗನನ್ನು ಸ್ವಾಗತ ಮಾಡುತ್ತಾನೆ. ಸುಸ್ವಾಗತಮಿತ್ಯುವಾಚಃ, ಬ್ರಹ್ಮನಿಗೇ ಸಂತೋಷವಾಯಿತಂತೆ. ನನ್ನ ಲೋಕಕ್ಕೆ ನೀನು ಬಂದೆಯಾ! ನಿನ್ನಂತವರು ನನ್ನ ಲೋಕಕ್ಕೆ ಬರಬೇಕು ಎಂದನಂತೆ.
ಹೀಗೆ ಆಗಬೇಕು ಜೀವಯಾನ. ನಾವು ಚೆನ್ನಾಗಿ ಬದುಕಿದರೆ, ಜೀವನದಲ್ಲಿ ನಾವು ದೇವರ ಉಪಾಸನೆಯನ್ನು ಸರಿಯಾಗಿ ಮಾಡಿದರೆ ಹೀಗೆ ಆಗುತ್ತದೆ.
ಇನ್ನು ಕೊನೆಯಲ್ಲಿ ಉತ್ತರಮಾರ್ಗ.
ಆ ಉತ್ತರಮಾರ್ಗವೂ ಕೂಡ ಈ ರಥಗಳಂತೆ. ಪಶ್ಚಿಮಮಾರ್ಗದಲ್ಲಿ ಆನೆಗಳು-ಕುದುರೆಗಳು. ಹಾಗೆ ಉತ್ತರಮಾರ್ಗದಲ್ಲಿ ತುಂಬಾ ಶೋಭಾಯಮಾನವಾದಂತಹ, ಅದ್ಭುತವಾದಂತಹ ರಥಗಳಂತೆ. ಆ ರಥವನ್ನೇರಿ ಪ್ರಯಾಣ ಮಾಡಬಹುದು. ಮತ್ತು ಅಲ್ಲಿ ಮನುಷ್ಯರು ಮೇನೆಯನ್ನು ಹೊತ್ತಿರುತ್ತಾರೆ. ಆ ಮೇನೆಯನ್ನು ಹತ್ತಿ ಕುಳಿತುಕೊಂಡು ಹೋಗಬಹುದು. ಅಲ್ಲಿರುವ ಮನುಷ್ಯರು ಎಂದರೆ ದೇವತೆಗಳು. ಅಲ್ಲಿ ದಾರಿ ಉದ್ದಕ್ಕೂ ಕಲ್ಪವೃಕ್ಷಗಳು, ಅವುಗಳ ಛಾಯೆ. ಅಲ್ಲಿಯೂ ಕೂಡ ಅಮೃತದ ಸರೋವರ ಇದೆ. ಆ ಮನೋಹರವಾದ ಸರೋವರದಲ್ಲಿ ಹಂಸಗಳು, ಚಕ್ರವಾಕಗಳು. ಅಲ್ಲಿ ಅಮೃತವನ್ನು ಪಾನ ಮಾಡಬಹುದು, ಸ್ನಾನ ಮಾಡಬಹುದು. ಅಲ್ಲಿಗೆ ಹೋಗುವವರು ಯಾರು?ವೈದಿಕರು. ವೈದಿಕಾಃ, ಅಂದರೆ ವೇದ ಮಾರ್ಗದಲ್ಲಿ ಜೀವನ ಮಾಡುವಂತವರು, ವೇದನಿಷ್ಠರು. ಅಭ್ಯಾಗತಪೂಜಕಾಃ, ಮನೆಗೆ ಅಭ್ಯಾಗತರನ್ನು ಕರೆದು ಅವರನ್ನು ಸತ್ಕರಿಸುವಂತವರು. ಹಾಗೆಯೇ ದುರ್ಗಾಭಾನ್ಮೋಶ್ಚಯೇ ಭಕ್ತಾಃ, ದುರ್ಗೆಯ ಉಪಾಸಕರು ಮತ್ತು ಸೂರ್ಯನನ್ನು ಉಪಾಸನೆ ಮಾಡುವಂತವರು ಈ ಉತ್ತರಮಾರ್ಗದಲ್ಲಿ ಹಿಮಾಲಯವನ್ನು ಪ್ರವೇಶ ಮಾಡುತ್ತಾರೆ. ಅದಷ್ಟೇ ಅಲ್ಲದೇ ಪರ್ವಕಾಲದಲ್ಲಿ ತೀರ್ಥಸ್ನಾನ ಮಾಡುವವರು. ಹುಣ್ಣಿಮೆ, ಅಮವಾಸ್ಯೆ, ಸಂಕ್ರಮಣ ಇನ್ನೂ ಬೇರೆ ಬೇರೆ ಪರ್ವಕಾಲಗಳಲ್ಲಿ ಯಾರು ಗಂಗೆಯಲ್ಲಿಯೋ, ತುಂಗೆಯಲ್ಲಿಯೋ, ಸಮುದ್ರದಲ್ಲಿಯೋ ತೀರ್ಥಸ್ನಾನ ಮಾಡುತ್ತಾರೋ ಅಂತವರು.
ಧರ್ಮಯುದ್ಧದಲ್ಲಿ ಯಾರು ದೇಹವನ್ನು ತ್ಯಾಗ ಮಾಡುತ್ತಾರೋ, ಧರ್ಮಕ್ಕಾಗಿ ಹೋರಾಡುತ್ತಾ ಹೋರಾಡುತ್ತಾ ಶತ್ರುವಿನ ಶಸ್ತ್ರದಿಂದ ಯಾರ ಮರಣ ಆಗುತ್ತದೆಯೋ ಅಂತವರು. ಉಪವಾಸ ಮಾಡಿ ದೇಹತ್ಯಾಗ ಮಾಡುವಂತವರು. ಜೈನರಲ್ಲಿ ಈಗಲೂ ಕೂಡ ಈ ಪದ್ಧತಿ ಇದೆ. ನಮ್ಮಲ್ಲಿ ಮೊದಲು ಈ ಪದ್ಧತಿ ತುಂಬಾ ಚೆನ್ನಾಗಿಯೇ ಇತ್ತು. “ಪ್ರಾಯೋಪ್ರವೇಶ” ಎಂದು ಕರೆಯುತ್ತಿದ್ದರು. ಸಾಕು ಎಂದೆನಿಸಿದರೆ ಅಲ್ಲಿಂದ ನಂತರ ಆಹಾರ ಸ್ವೀಕಾರ ಮಾಡುವುದಿಲ್ಲ. ಆಹಾರವನ್ನು ತ್ಯಾಗ ಮಾಡಿ ಉಪವಾಸದ ಮೂಲಕ ದೇಹತ್ಯಾಗ ಮಾಡುವಂತಹದ್ದು. ಅಂತವರಿಗೆ ಯಮಲೋಕದ ಉತ್ತರಮಾರ್ಗ.
ಯಾರು ಕಾಶಿಯಲ್ಲಿ ಮರಣ ಹೊಂದುತ್ತಾರೋ, ಯಾರು ಗೋಶಾಲೆಯಲ್ಲಿ, ಗೋವಿನ ಸನ್ನಿಧಿಯಲ್ಲಿ ಮರಣ ಹೊಂದುತ್ತಾರೋ ಅಂತವರು. ನೋಡಿ ಇಬ್ಬರಿಗೂ ಒಂದೇ ಫಲವಿದೆ. ಮಾತ್ರವಲ್ಲ ಗೋವಿಗಾಗಿ ಮರಣ ಹೊಂದುವಂತವರು. ಗೋವನ್ನು ಉಳಿಸುವ ಸಲುವಾಗಿ ಹೋರಾಡುತ್ತಾ ಹೋರಾಡುತ್ತಾ ಯಾರು ಪ್ರಾಣತ್ಯಾಗ ಮಾಡುತ್ತಾರೋ ಅಂತವರು. ಹಾಗೇ ಯಾರು ಪುಣ್ಯಜಲದಲ್ಲಿ ದೇಹತ್ಯಾಗ ಮಾಡುತ್ತಾರೋ, ಗಂಗೆಯಲ್ಲಿ ಮುಳುಗಿ ಪ್ರಾಣ ಬಿಡುವಂತವರು, ತೀರ್ಥಜಲದಲ್ಲಿ ಮುಳುಗಿ ಪ್ರಾಣ ಬಿಡುವಂತವರು. ಮತ್ತು ಯಾರು ನಿಜವಾದ ಅರ್ಥದ ಬ್ರಾಹ್ಮಣ ಅಥವಾ ಸದ್ಬ್ರಾಹ್ಮಣನಿಗಾಗಿ ದೇಹತ್ಯಾಗ ಮಾಡುತ್ತಾರೋ, ಯಾರು ತನ್ನ ಒಡೆಯನಿಗಾಗಿ ದೇಹತ್ಯಾಗ ಮಾಡುತ್ತಾರೋ, ಸ್ವಾಮಿಕಾರ್ಯ ಅಂದರೆ ಜೀವನ ಕೊಟ್ಟವನಿಗಾಗಿ ದೇಹತ್ಯಾಗ ಮಾಡುತ್ತಾರೋ ಅಂತವರು. ಯಾರು ಪುಣ್ಯಕ್ಷೇತ್ರ, ಮುಕ್ತಿಕ್ಷೇತ್ರಗಳಲ್ಲಿ ಮರಣ ಹೊಂದುತ್ತಾರೋ ಅಂತವರು. ಮುಕ್ತಿಕ್ಷೇತ್ರಗಳು ಯಾವುವೆಂದರೆ – ಅಯೋಧ್ಯಾ, ಮಥುರಾ, ಮಾಯಾ (ಹರಿದ್ವಾರ), ಕಾಶಿ, ಕಾಂಚಿ, ಅವಂತಿಕಾ (ಉಜ್ಜೈನಿ), ಪುರಿ ಹಾಗೂ ದ್ವಾರಕೆ. ಇವೆಲ್ಲಾ ಮೋಕ್ಷಪ್ರದವಾಗಿರುವಂತಹ ಪುರಿಗಳು. ಇವು ಮತ್ತು ಇಂತಹ ಮೋಕ್ಷದಾಯಕವಾಗಿರುವಂತಹ ಪುಣ್ಯಕ್ಷೇತ್ರಗಳಲ್ಲಿ ಮರಣವನ್ನು ಹೊಂದುತ್ತಾರೋ ಅಂತವರು. ಯೇ ಮೃತಾ ದೇವ ವಿದ್ವಂಸೇ, ಒಂದು ದೇವಸ್ಥಾನವನ್ನು ಒಡೆಯುತ್ತಿದ್ದಾರೆ. ಒಂದು ದೇವಸ್ಥಾನವನ್ನು ನಾಶ ಮಾಡುತ್ತಿದ್ದಾರೆ ಅದನ್ನು ಉಳಿಸುವ ಸಲುವಾಗಿ ಯಾರು ಪ್ರಾಣ ನೀಡುತ್ತಾರೋ ಅಂತವರು. ದೇವಸ್ಥಾನವನ್ನು ಒಡೆಯುವಂತಹ, ಮುರಿಯುವಂತಹ ಘಟನೆಗಳು ಎಷ್ಟೋ ನಡೆದಿವೆ ನಮ್ಮ ದೇಶದಲ್ಲಿ. ಅಂತಹ ಸಮಯದಲ್ಲಿ ಅದನ್ನು ಉಳಿಸಿಕೊಳ್ಳಲು ಹೋರಾಡುತ್ತಾ, ಹೋರಾಡುತ್ತಾ ಯಾರು ದೇಹವನ್ನೇ ತ್ಯಾಗ ಮಾಡುತ್ತಾರೋ ಅಂತವರು. ಸತ್ಪಾತ್ರಪೂಜಕರು ಅಂದರೆ, ಗೌರವ ಕೊಡಬೇಕೆಂದರೂ ಗೌರವಾರ್ಹರಿಗೆ ಗೌರವ ಕೊಡಬೇಕಂತೆ. ಯಾರು ಗೌರವಕ್ಕೆ ಅರ್ಹರೋ, ಯಾರು ಪೂಜೆಗೆ ಅರ್ಹರೋ ಅವರಿಗೆ ಪೂಜೆ ಮಾಡಿದರೆ ಸತ್ಪಾತ್ರಪೂಜಕರು. ಉದಾಹರಣೆಗೆ; ದೇವರು, ಗುರುಗಳು, ತಾಯಿ-ತಂದೆಯರು, ಹಿರಿಯರು. ಯಾರೋ ಅನುಷ್ಠಾನ ಮಾಡಿರುವಂತವರು, ಸಾಧನೆ ಮಾಡಿರುವವರು. ಇಂತಹ ಪೂಜೆಗೆ ಅರ್ಹರಾದವರಿಗೆ ಪೂಜೆ ಮಾಡಿದರೆ, ಅಂತವನಿಗೆ ಉತ್ತರದಮಾರ್ಗ ತೆರೆಯುತ್ತದೆ. ಮಾಡದೇ ಇದ್ದರೆ ದಕ್ಷಿಣದ ಮಾರ್ಗ ತೆರೆಯುತ್ತದೆ. ಅಷ್ಟೇ ವ್ಯತ್ಯಾಸ. ಮಹಾದಾನರಥಾಶ್ಚಯೇ, ಮಹಾದಾನಗಳನ್ನು ಮಾಡುವಂತವರು. ಹಿರಣ್ಯದಾನ ಎಂದರೆ ಸ್ವರ್ಣದಾನ ಮಾಡುವಂತದ್ದು, ಗೋದಾನ ಮಾಡುವಂತದ್ದು, ಇನ್ನೂ ಅನೇಕ ಮಹಾದಾನಗಳು ಇದೆ. ಅಂಥಹ ದೊಡ್ದ ದೊಡ್ದ ದಾನಗಳನ್ನು ಮಾಡುವಂತವರು. ಇವರೆಲ್ಲರೂ ಉತ್ತರದ್ವಾರದಿಂದ ಯಮನ ಆಸ್ಥಾನವನ್ನು ಪ್ರವೇಶ ಮಾಡುತ್ತಾರೆ. ಹೀಗೆ ಈ ಮೂರು ದ್ವಾರಗಳಿಂದ ಪುಣ್ಯಕರ್ಮರು ಯಮನ ಆಸ್ಥಾನವನ್ನು ಪ್ರವೇಶ ಮಾಡುತ್ತಾರೆ. ಇದೆಲ್ಲಾ ಅಲ್ಲದೆ, ಕೆಲವು ಬಾರಿ ಏನಾಗುತ್ತದೆ ಎಂದರೆ, ಈ ಮಹಾತ್ಮರ ಕೈಯಿಂದ ಅಥವಾ ಮಹಾತ್ಮರ ಕಣ್ಮುಂದೆ ದೇಹತ್ಯಾಗ ಆದರೆ ಅಂತವರಿಗೂ ಕೂಡ ಒಳ್ಳೆಯದಾಗುತ್ತದೆ. ಅಂತವರೂ ಮುಕ್ತರಾಗುತ್ತಾರೆ.
ನಿಮಗೆ ಕಬಂಧ ಅಂದರೆ ಗೊತ್ತಾ? ಹೊಟ್ಟೆಯಲ್ಲಿ ಬಾಯಿ, ಎದೆಯಲ್ಲಿ ಕಣ್ಣು, ಯಾಕೆಂದರೆ ಅವನಿಗೆ ತಲೆಯೇ ಇಲ್ಲ, ಕಾಲುಗಳೂ ಇಲ್ಲ. ಎರಡೂ ಕೈಗಳು ಎಷ್ಟು ಉದ್ದ ಅಂದರೆ, ಒಂದು ಯೋಜನ ದೂರ ಹೋಗುತ್ತದಂತೆ ಅದು ಅಷ್ಟು ಉದ್ದ. ನಾಲ್ಕಾರು ಮೈಲುಗಳಷ್ಟು ಹೋಗುವಂತಹ ಎರಡು ಕೈಗಳು. ಇಂತಹ ರೂಪ ಬೇಕೇ? ವಿವೃದ್ಧಮಶರೋಗ್ರೀವಂ, ‘ಅಶರೋಗ್ರೀವಂ’, ಎಂದರೆ ತಲೆಯೂ ಇಲ್ಲ, ಕೊರಳೂ ಇಲ್ಲ ಅಂತಹದ್ದು ಎಂದರ್ಥ. ಕಬಂಧಮುದರೇ ಮುಖಂ, ಉದರದಲ್ಲಿ ಮುಖ. ರೋಮಗಳೆಲ್ಲಾ ಮೊಳೆಗಳಿದ್ದಂತೆ, ಈಟಿಗಳಿದ್ದಂತೆ ಇವೆಯಂತೆ. ಅಗ್ನಿಜ್ವಾಲಾನಖಾಶೇನ, ಕಣ್ಣು ಹೇಗಿದೆಯೆಂದರೆ ಬೆಂಕಿಯ ಜ್ವಾಲೆ ಇದ್ದಂತೆ ಇವೆಯಂತೆ. ಒಂದೇ ಕಣ್ಣು, ದೊಡ್ದ ರೆಪ್ಪೆ. ಆ ಕಣ್ಣು ‘ಪಿಂಗಲವರ್ಣ'(ಹಿತ್ತಾಳೆ ಬಣ್ಣ). ಘೋರವಾದ ಕಣ್ಣು ಗರಗರ ತಿರುಗುತ್ತಿದೆಯಂತೆ, ಎಲ್ಲಾ ಕಡೆ ನೋಡುತ್ತಿದೆಯಂತೆ ಆ ಕಣ್ಣು. ಆಮೇಲೆ ಹೊಟ್ಟೆಯಿಂದ ಹೊರಗೆ ಬಂದಿರುವಂತಹ ಕೋರೆ ದಾಡೆಗಳು. ಎಂಥಹ ರೂಪ ನೋಡಿ! ಈ ಕಬಂಧನಿಗೆ ರಾಮ ಲಕ್ಷ್ಮಣರಿಂದ ಮುಕ್ತಿ ಆಗುತ್ತದೆ. ಅವನ ಶಾಪ ಇದ್ದದ್ದು ಕೂಡ ಹಾಗೆಯೇ. ರಾಮ ಬಂದು ನಿನ್ನ ಕೈ ಮುರಿಯಬೇಕು, ಆಗ ನಿನಗೆ ಮುಕ್ತಿ ಎಂದು. ಎಲ್ಲಿಯಾದರೂ ರಾಮಲಕ್ಷ್ಮಣರು ಸಿಕ್ಕಿ ಯಾರೆಂದು ಅವನು ಎರಡೂ ಕೈಗಳಿಂದ ಹುಡುಕುತ್ತಾ ಹುಡುಕುತ್ತಾ ಪ್ರಾಣಿಗಳನ್ನು ಹಿಡಿಯುತ್ತಿರುತ್ತಾನೆ. ಕಬಂಧನ ಪ್ರಾರ್ಥನೆಯ ಮೇರೆಗೆ ಅಗ್ನಿಸಂಸ್ಕಾರ ಮಾಡುತ್ತಾರೆ ರಾಮಲಕ್ಷ್ಮಣರು. ಅಗ್ನಿ ಸುಡಲೇ ಇಲ್ಲವಂತೆ, ಅಗ್ನಿಗೆ ಭಾರಿ ಕಷ್ಟ ಆಯಿತಂತೆ ಸುಡಲು. ಏಕೆಂದರೆ ತುಪ್ಪದ ದೊಡ್ದ ಮೂಟೆ ಇದ್ದಂತೆ ಇತ್ತು ಅವನ ಶರೀರ. ಹಾಗಾಗಿ ಮಂದಂ ದಹತಿ ಪಾವಕಃ, ಹಾಗಾಗಿ ನಿಧಾನವಾಗಿ ಸುಟ್ಟನಂತೆ ಅಗ್ನಿ. ಒಂದು ಹಂತ ಸುಟ್ಟ ಮೇಲೆ, ಆ ಚಿತೆಯಿಂದ ದಿವ್ಯಪುರುಷನೊಬ್ಬ ಮೇಲೆದ್ದ. ಎಲ್ಲೂ ಧೂಳಿಲ್ಲ ಆ ರೂಪದಲ್ಲಿ, ಆ ವಸ್ತ್ರಗಳಲ್ಲಿ. ದಿವ್ಯಮಾಲೆಯನ್ನು ಧಾರಣೆ ಮಾಡಿದ್ದಾನೆ, ದಿವ್ಯವಾದ ವಸ್ತ್ರಗಳನ್ನು ಧಾರಣೆ ಮಾಡಿದ್ದಾನೆ. ಖುಷಿಯೋ ಖುಷಿ ಅವನಿಗೆ, ತುಂಬಾ ಸಂತೋಷದಲ್ಲಿದ್ದಾನೆ. ಏಕೆಂದರೆ ಶಾಪದಿಂದ ಬಿಡುಗಡೆ ಆಗಿದೆ, ನಿಜರೂಪ ಸಿಕ್ಕಿದೆ ಅವನಿಗೆ. ಮತ್ತೆ ಮೊದಲಿನ ರೂಪ ಬಂದಿದೆ ಅವನಿಗೆ. ಅವನಿಗೊಂದು ಚಾಳಿ ಇತ್ತಂತೆ. ಏನೆಂದರೆ ಘೋರ ರೂಪ ಧಾರಣೆ ಮಾಡಿ ಸಿಕ್ಕಿದವರನ್ನೆಲ್ಲಾ ಬೆದರಿಸುವುದು. ಸ್ಥೂಲಶೀರ ಎಂಬಂತಹ ಒಬ್ಬ ಋಷಿ. ಆ ಋಷಿಯನ್ನು ಹೀಗೆ ಬೆದರಿಸಿದಾಗ, ಸಿಟ್ಟು ಬಂದು ‘ಖಾಯಂ ಹೇಗೆ ಇರು’, ಎಂದು ಶಾಪ ಕೊಟ್ಟನಂತೆ ಆ ಋಷಿ. ಅವನಿಗೊಂದು ವರ ಇತ್ತು. ಕಾಮರೂಪಿ ಅವನು. ಹಾಗಾಗಿ ಬೇಕಾದ ರೂಪತಾಳುವ ಶಕ್ತಿ ಇತ್ತು. ಆದರೆ ದುರುಪಯೋಗ ಮಾಡಿದ. ಒಬ್ಬ ತಪಸ್ವಿಯನ್ನು ಬೆದರಿಸಿದ. ‘ಹೀಗೇ ಇರು ನೀನು’, ಎಂಬ ಶಾಪಕ್ಕೊಳಗಾದ. ಹಾಗೆ ಬಂದಂತಹ ರೂಪ ಅದು ಕಬಂಧನಿಗೆ. ನಂತರ ಮತ್ತೂ ಕಥೆ ಇದೆ. ತಪಸ್ಸು ಮಾಡಿ ವರ ಪಡೆದುಕೊಂಡನಂತೆ. ಏನು ವರ? ಎಂದರೆ, ಆಯುಧಗಳಿಂದ ಮರಣ ಬರಬಾರದು. ದೀರ್ಘಾಯುಷ್ಯ ಬರಬೇಕು ಎಂದು. ಇಂದ್ರನ ಮೇಲೆ ದಂಡೆತ್ತಿ ಹೋದ. ಇಂದ್ರ ಅವನನ್ನು ಕೊಲ್ಲುವ ಹಾಗಿಲ್ಲ. ಏಕೆಂದರೆ ಆಯುಸ್ಸು ಇದೆ ಇನ್ನೂ ಕೂಡ. ಹಾಗಾಗಿ ವಜ್ರಾಯುಧದಿಂದ ಸರಿಯಾಗಿ ಪ್ರಹಾರ ಮಾಡಿದಾಗ ತಲೆ ಎದೆಯೊಳಗೆ ಹೋಯಿತಂತೆ. ಕೈಕಾಲು ಹೊಟ್ಟೆಯೊಳಗೆ ಬಂದು ಬಿಟ್ಟಿತು. ಒಂದು ಪಿಂಡದ ರೀತಿ ಆಯಿತು. ಆ ಕಬಂಧ ಅವನು. ಆಗ ನನ್ನ ಜೀವ ತೆಗೆ, ಜೀವ ತೆಗೆ ಎಂದು ಪ್ರಾರ್ಥಿಸಿದನಂತೆ; ಹೀಗೆ ಹೇಗೆ ಬದುಕಲಿ ನಾನು? ಎಂದು. ಆದರೆ ಜೀವತೆಗೆಯಲು ಸಾಧ್ಯ ಇಲ್ಲ, ಆಯುಸ್ಸು ಇನ್ನೂ ಮುಗಿದಿಲ್ಲ ಎಂದನಂತೆ ಇಂದ್ರ. ಮತ್ತೆ ಹೇಗೆ ಊಟ ಮಾಡುವುದು ನಾನು? ಎಂದಾಗ, ನಿನ್ನ ಎರಡು ಕೈಗಳು ಒಂದು ಯೋಜನದಷ್ಟು ಉದ್ದದ ಕೈಗಳಾಗಲಿ ಎಂದನಂತೆ ಇಂದ್ರ. ಕಾಲು ಇಲ್ಲವಲ್ಲಾ, ಆ ಕೆಲಸವನ್ನು ಕೈಯೇ ಮಾಡುತ್ತದೆ. ಮತ್ತೆ ಬಾಯಿ? ಎಂದಾಗ, ಬಾಯಿ ಹೊಟ್ಟೆಯಲ್ಲಿ. ಕಣ್ಣು?, ಅಲ್ಲೇ ಮೇಲೆ ಎದೆಯಲ್ಲಿ. ಮೂಗು?, ಮೂಗೇ ಇಲ್ಲ. ಅಂತಹ ಪರಿಸ್ಥಿತಿ. ಹಾಗಾಗಿ ತಮಾಷೆ ಮಾಡುವಾಗ ಹುಷಾರಾಗಿರಬೇಕು. ಏನಕ್ಕೆ ಏನೋ ಆಗಿ ಬಿಡಬಹುದು. ಅಗ್ನಿಸಂಸ್ಕಾರ ಮಾಡಿದಾಗ ಇಂತಹ ವಿಕಾರರೂಪಕ್ಕೆ ಅಂತಹ ಸುಂದರರೂಪ ಬಂತು. ಮತ್ತೆ ದಿವ್ಯವಿಮಾನ ಬಂತು ಅವನನ್ನು ಕರೆದುಕೊಂಡು ಹೋಗಲು. ವಿಮಾನೇಭಾಸ್ವರೇತಿಷ್ಠನ್, ಹಂಸಗಳು ಆ ವಿಮಾನವನ್ನು ಹೊತ್ತೊಯ್ಯುತ್ತಿದ್ದವಂತೆ. ಅಂತಹ ಸುಂದರವಾದ, ಮನೋಹರವಾದ ವಿಮಾನಬಂತು.
ಇದನ್ನೆಲ್ಲಾ ಗಮನಿಸಬೇಕು ನೀವು. ಮುಂದೆ ದಕ್ಷಿಣದ ಮಾರ್ಗದ ಬಗ್ಗೆ ಹೇಳಿದಾಗ ಗೊತ್ತಾಗುತ್ತದೆ ನಿಮಗೆ, ಅದೆಷ್ಟು ಕಷ್ಟ ಇದೆ ಎಂದು. ಅಲ್ಲಿ ವಿಮಾನ ಇಲ್ಲ; ೮೬,೦೦೦ ಯೋಜನಗಳು ಕೂಡಾ ಓಡಿಕೊಂಡು ಹೋಗಬೇಕು. ಬೆನ್ನ ಮೇಲೆ ಪೆಟ್ಟುಗಳು ಬೀಳುತ್ತಿರುತ್ತವೆ. ನೆಲ ಕಾದಿರುತ್ತದೆ. ಕೆಲವು ಬಾರಿ ಕೆಂಡದ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಕೆಲವು ಕಡೆ ಮುಳ್ಳುಗಳ ಮೇಲೆ, ಮೊಳೆಗಳ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಇಂತಹದ್ದು ಅಲ್ಲಿರುತ್ತದೆ. ಆ ಮಾರ್ಗದ ಜೊತೆ ಹೋಲಿಕೆ (compare) ಮಾಡಿದರೆ ನಮಗೆ ವ್ಯತ್ಯಾಸ ಗೊತ್ತಾಗುತ್ತದೆ. ತುಂಬಾ ದಾರುಣವಾಗಿರುವಂತದ್ದು ಅದು. ಏಕೆಂದರೆ ಅದೆಲ್ಲಾ ಪಾಪದ ಫಲ. ಮಾಡಿದ್ದುಣ್ಣೋ ಮಹರಾಯ. ಅದು ಅನ್ಯಾಯ ಅಲ್ಲ, ಕ್ರೌರ್ಯ ಅಲ್ಲ. ನಾವು ಮಾಡಿದ್ದನ್ನು ನಾವು ಉಣ್ಣುವುದು ಅಂತ. ಉಪಶಮನ (Treatment) ಅದು ಬೇರೇನೂ ಅಲ್ಲ. ಅದಕ್ಕೆ ಹೋಲಿಕೆ ಮಾಡಿದಾಗ ಈ ಮಾರ್ಗಗಳು ತುಂಬಾ ಸುಖಕರ. ಅಲ್ಲಿ ನೆರಳಿಲ್ಲ, ಅಲ್ಲಿ ಬಿಸಿಲು. ಭೂಮಿಯ ಪರಮಾವಧಿ ಬಿಸಿಲಿಗಿಂತ ಹನ್ನೆರಡು ಪಾಲು ಜಾಸ್ತಿ ಬಿಸಿಲು ಆ ದಾರಿಯಲ್ಲಿ. ಹಾಗಿದೆ ಅದು. ನಡೆದುಕೊಂಡು ಹೋಗುತ್ತಿದ್ದರೆ, ತಲೆಮೇಲೆ ಕಲ್ಲಿನ ಮಳೆ ಬೀಳುತ್ತದೆ. ಕಲ್ಲು ಎಂದರೆ ಸಾಮಾನ್ಯ ಕಲ್ಲಲ್ಲ, ವಜ್ರಗಳು. ಈ ದಾರಿಯಲ್ಲಿ ವಜ್ರದ ಆಭರಗಳನ್ನು ಧಾರಣೆ ಮಾಡಿಕೊಂಡು ಹೋದರೆ, ಅಲ್ಲಿ ತಲೆಯ ಮೇಲೆ ವಜ್ರ ಬೀಳುತ್ತಿರುತ್ತದೆ, ಅಂದರೆ ಅತಿ ಹೆಚ್ಚಿನ ನೋವು. ಹಾಗಿರುತ್ತದೆ ಆ ದಾರಿ.
ಇದನ್ನು ಯಾಕೆ ಹೇಳುತ್ತೇವೆ ಎಂದರೆ, ನಮ್ಮ ದಾರಿ ನಮಗೆ ಸ್ಪಷ್ಟ ಆಗಬೇಕು. ನಿಮಗೆ ಯಾರಿಗಾದರೂ ಅನ್ನಿಸಬಹುದು, ನಾವೆಲ್ಲಾ ಚಿಕ್ಕವರು, ಇಷ್ಟು ಬೇಗ ಅದೆಲ್ಲಾ ಯಾಕೆ? ಎಂದು. ಆದರೆ ನಿಮಗೊಂದು ಪ್ರಶ್ನೆ ಕೇಳುತ್ತೇವೆ. ನೀವೊಂದು ಊರಿಗೆ ಹೊರಟಿದ್ದೀರಿ ಅಂದುಕೊಳ್ಳಿ. ಶುರುವಿಗೆ ದಾರಿ ಸರಿ ಇರಬೇಕೋ ಬೇಡವೋ? ಆಲೋಚನೆ ಮಾಡಿ ನೀವು. ಹೊರಡುವಾಗಲೇ ದಾರಿ ತಪ್ಪಿಕೊಂಡರೆ, ಊರಿಗೆ ತಲುಪಲು ಸಾಧ್ಯವೇ? ಹಾಗಾಗುತ್ತದೆ ಜೀವನದಲ್ಲಿ. ಚಿಕ್ಕವರಿದ್ದಾಗಲೇ ದಾರಿ ಸರಿಯಾಗಬೇಕು. ನಮ್ಮ ಜೀವನ ಶುರು ಮಾಡುತ್ತಿದ್ದಾಗಲೇ ದಾರಿ ಸರಿ ಆಗಬೇಕು. ಆಗ ನಾವು ಗುರಿ ತಲುಪುತ್ತೇವೆ. ಆದರೆ, ಈಗಲೇ ದಾರಿ ತಪ್ಪಿದರೆ, ಮುಂದೆ ದಾರಿ ಸಿಗುವುದಿಲ್ಲ. ಸಂತೋಷದ ವಿಷಯ ಏನೆಂದರೆ, ಈ ಒಳ್ಳೆಯದೆಲ್ಲವನ್ನೂ ಸಾಧನೆ ಮಾಡಬಹುದು ನಾವು. ಅದಕ್ಕೆ ಅವಕಾಶ ಇದೆ ನಮ್ಮ ಜೀವನದಲ್ಲಿ. ನಿಮಗೆ ಎಂತಹ ಸುಖ ಬೇಕು ಮುಂದೆ ಎಂದು ತಿಳಿದು ಅದನ್ನು ಸಾಧನೆ ಮಾಡಬಹುದು. ಈ ಕಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಮುಂದೆ ಬರಬಹುದಾದಂತಹ, ಕಲ್ಪನೆಗೆ ಮೀರಿದ ಕಷ್ಟಗಳು ಅವು. ಊಹೆಗೂ ಮೀರಿದ ಕಷ್ಟಗಳು. ಅಂತಹ ಕಷ್ಟಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈಗಲೇ ಪ್ರಯತ್ನಪಟ್ಟರೆ ಸಾಧ್ಯ ಇದೆ ಅದು. ಹಾಗಾಗಿ ನಾವು ಈ ಪಾಠ ಆರಿಸಿಕೊಂಡೆವು. ಇದು ಜೀವನ ಪಾಠ ಮಾತ್ರ ಅಲ್ಲ; ಜೀವಯಾನದ ಪಾಠ ಇದು. ಇಡೀ ಜೀವನ ನಾವು ಹೇಗೆ ಬದುಕಬೇಕು ಎಂಬುದನ್ನು ತೋರಿಸುತ್ತದೆ ಇದು. ಮತ್ತೆ ಹೇಗೆ ಬದುಕಬಾರದು ಎಂಬುದನ್ನು ಕೂಡ ತೋರಿಸುತ್ತದೆ. ನಾವೊಂದು ಬಾರಿ ಯೋಚನೆ ಮಾಡಿದ್ದೆವು ಏನೆಂದರೆ, ದಕ್ಷಿಣಮಾರ್ಗದ ಪಾಠ ಮಾಡಬೇಕೋ, ಬೇಡವೋ? ಎಂದು. ಆದರೆ ಮಾಡಬೇಕು ಅನಿಸಿತು, ಯಾಕೆ ಗೊತ್ತಾ?. ರಾಮಾಯಣದಲ್ಲಿ ರಾವಣ, ಕುಂಭಕರ್ಣ, ಶೂರ್ಪನಖಿ, ಮಂಥರೆ ಇಂತವರನ್ನು ಬಿಟ್ಟರೆ ಕಥೆ ಮುಂದೆ ಹೋಗಲು ಸಾಧ್ಯವೇ? ಮತ್ತೆ ಅವರಿಂದ ಪ್ರಯೋಜನ ಏನು?. ರಾಮನ ಬಗ್ಗೆ, ಸೀತೆಯ ಬಗ್ಗೆ ಕೇಳಿದಾಗ ನಾವು ಹೇಗಿರಬೇಕೆಂದು ಗೊತ್ತಾಗುತ್ತದೆ. ಆದರೆ ನಾವು ಹೇಗಿರಬಾರದು ಎಂಬುದನ್ನು ಇವು ತಿಳಿಸುತ್ತವೆ. ದಕ್ಷಿಣದಮಾರ್ಗದ ಬಗ್ಗೆ ನಾವು ಯಾಕೆ ತಿಳಿದುಕೊಳ್ಳಬೇಕು ಅಂದರೆ, ನಾವಲ್ಲಿ ಹೋಗಬಾರದು ಎಂದು, ಹೋಗುವಹಾಗೆ ಆಗಬಾರದು ಎಂದು. ಆ ರೀತಿಯಲ್ಲಿ ಬದುಕಬಾರದು ನಾವು. ಕೆಟ್ಟ ಬದುಕನ್ನು ಬದುಕಿದರೆ, ಆ ದಾರಿಯಲ್ಲಿ ಹೋಗಬೇಕಾಗುತ್ತದೆ. ಅಷ್ಟು ಕಷ್ಟ ಇದೆ ಆ ದಾರಿ. ಆರಂಭದಿಂದಲೇ ಕಷ್ಟ ಅದು. ಸಾವಿನ ಕ್ಷಣದಿಂದಲೇ ಕಷ್ಟ, ಹಾಗಿದೆ ಅದು. ಉದಾಹರಣೆಗೆ; ಆ ರೀತಿಯಲ್ಲಿ ಸಾಯುವಾಗ ನೂರು ಚೇಳು ಒಟ್ಟಿಗೆ ಕಚ್ಚಿದ ನೋವಾಗುತ್ತದೆ ಅಂತೆ. ಅಲ್ಲಿಂದ ಆರಂಭ ಅದು. ನಿಮಗೆಲ್ಲ ಸಪ್ಪೆ ಅನ್ನಿಸಿರಬಹುದು. ನಾವು ನಿನ್ನೆ, ಮೊನ್ನೆಯಿಂದ ಪಶ್ಚಿಮಮಾರ್ಗ, ಉತ್ತರಮಾರ್ಗ, ಪೂರ್ವಮಾರ್ಗ ಎಂದು ಹೇಳುತ್ತಿದ್ದೇವಲ್ಲಾ. ಇದೆಲ್ಲಾ ಒಂತರಾ bore ಅಂತ ಅನ್ನಿಸಿರಬಹುದು. ಏನಪ್ಪಾ?! ಇದು ಎಂದು. ಆದರೆ ಆ ದಕ್ಷಿಣಮಾರ್ಗದ ಬಗ್ಗೆ ಕೇಳಿದ ಮೇಲೆ ಇದೆಲ್ಲಾ ತುಂಬಾ ರುಚಿಯಾಗಿರುತ್ತದೆ. ಈಗ ಏನು ಕೇಳಿದ್ದೀರೋ ಅದೆಲ್ಲಾ ಅಮೃತದ ಹಾಗೆ ಆಗುತ್ತದೆ ನಿಮಗೆ. ಮೊದಲೇ ಅದನ್ನು ಹೇಳಬಹುದಾಗಿತ್ತು, ಆದರೆ ಅದನ್ನು ನಿಮಗೆ ಕೇಳುವುದಕ್ಕೆ ಕಷ್ಟ ಆಗುತ್ತದೆ. ಕೇಳುವುದಕ್ಕೆ ಸುಲಭ ಇಲ್ಲ ಅದು. ಆದರೂ ಕೇಳಬೇಕು. ಆದರೂ ತಿಳಿದುಕೊಳ್ಳಬೇಕು. ಯಾಕೆ ತಿಳಿದುಕೊಳ್ಳಬೇಕು? ಅಂದರೆ, ಬುದ್ಧಿ ಬರಬೇಕು ನಮಗೆ. ದಾರಿ ತಪ್ಪಬಾರದು ನಾವು. ಕೆಲವು ಬಾರಿ ಯಮನಭೀತಿ, ರಾಮನ ಪ್ರೀತಿಗೆ ಕಾರಣ ಆಗುತ್ತದೆ. ನಮಗೆ ರಾಮನ ಪ್ರೀತಿ ಬೇಕಲ್ಲವೇ? ರಾಮನ ಮೇಲೆ ಪ್ರೀತಿ ಯಮನ ಭೀತಿಯಿಂದ ಬರುತ್ತದೆ. ಅದಕ್ಕಾಗಿ ನಮಗೆ ಅದೆಲ್ಲವೂ ಕೂಡ ಬೇಕಾಗುತ್ತದೆ. ಹಾಗಾಗಿ ನೀವು ಇದೆಲ್ಲವನ್ನೂ ಕೂಡ ಸರಿಯಾಗಿ ತಿಳಿದುಕೊಳ್ಳಬೇಕು.
ಹಾಗೇ ಇವತ್ತು ಮುಗಿಸುವುದಕ್ಕಿಂತ ಮುಂಚೆ, ಒಂದು ಪ್ರಶ್ನೆಗೆ ಉತ್ತರ ಕೊಟ್ಟು ಹೋಗುತ್ತೇವೆ. ಸೀತೆ ಅಗ್ನಿಪ್ರವೇಶ ಮಾಡಬೇಕಾದರೆ, ರಾಮ ಸುಮ್ಮನೆ ಇದ್ದ. ಕೆಲವರು ಏನು ತಿಳಿದುಕೊಂಡಿದ್ದಾರೆ ಎಂದರೆ, ರಾಮನೇ ಸೀತೆಗೆ ಅಗ್ನಿಪ್ರವೇಶ ಮಾಡಲು ಹೇಳಿದ ಎಂದು, ಆದರೆ ಹಾಗಲ್ಲ. ಅಗ್ನಿಪ್ರವೇಶ ಮಾಡಬೇಕು ಎಂಬುದು ಸೀತೆಯದ್ದೇ ತೀರ್ಮಾನ. ರಾಮ ಸುಮ್ಮನೆ ಇದ್ದ. ಯಾಕೆ ಸುಮ್ಮನೆ ಇರಬೇಕಾಗಿತ್ತು? ಎಂದು ತುಂಬಾ ಬೇಜಾರು ಮಾಡಿಕೊಳ್ಳುವವರು ಇದ್ದಾರೆ ಈ ಜಗತ್ತಿನಲ್ಲಿ. ಅವರ ಅವಗಾಹನೆಗೋಸ್ಕರ ಹೇಳುವಂತದ್ದು. ರಾಮನ ಕಣ್ಮುಂದೆ ಅಗ್ನಿಪ್ರವೇಶ ಅನೇಕ ಆಗಿವೆ. ಶಬರಿ, ಶರಭಂಗ ಹಾಗೇ ಕಬಂಧ ಕೂಡ ಹೌದು. ಕಬಂಧನಿಗೆ ಜೀವ ಹೋಗಿರಲಿಲ್ಲ. ಚಿತೆಯಲ್ಲಿಟ್ಟಾಗ ಹೋಗುವ ಜೀವ ಕೂಡ ಅಲ್ಲ ಅದು. ಹಾಗಾಗಿ ಈ ಮೂರು ಅಗ್ನಿಪ್ರವೇಶಗಳು ರಾಮನ ಕಣ್ಮುಂದೆ ಆಗಿವೆ. ಇವರ ಅಗ್ನಿಪ್ರವೇಶಕ್ಕೆ ರಾಮ ಯಾಕೆ ವಿಚಲಿತನಾಗಲಿಲ್ಲ? ಯಾಕೆ ಒಪ್ಪಿಗೆ ಕೊಟ್ಟ?. ಶಬರಿ ಅನುಮತಿ ಕೇಳುತ್ತಾಳೆ, ಶರಭಂಗನೂ ಅನುಮತಿ ಕೇಳುತ್ತಾನೆ. ಅನುಮತಿ ಯಾಕೆ ಕೊಟ್ಟ ರಾಮ? ಅಯ್ಯೋ, ಪಾಪ ಎಂದು ಯಾಕೆ ತಪ್ಪಿಸಲಿಲ್ಲ ರಾಮ?, ಅಗ್ನಿಗೆ ಹಾರಿದಾಗ ಯಾಕೆ ಶರಭಂಗನನ್ನು ಬೆಂಕಿಯಿಂದ ಹೊರಗೆತರಲಿಲ್ಲ ರಾಮ?. ಏಕೆಂದರೆ ತೊಂದರೆ ಮಾಡಿದಂತಾಗುತ್ತದೆ. ಅಗ್ನಿಪ್ರವೇಶದಿಂದ ಅವನಿಗೆ ಆ ದಿವ್ಯಶರೀರ ಬಂತು, ದಿವ್ಯಲೋಕ ಪ್ರಾಪ್ತಿವಾಯಿತು. ಅಗ್ನಿಪ್ರವೇಶ ಎಂದರೆ ಕೆಟ್ಟದಲ್ಲ. ಅಗ್ನಿಪ್ರವೇಶ ಮಾಡಿಯೂ ಸುಡದೆ ಇದ್ದವರು ಇರುತ್ತಾರೆ, ಸೀತೆಯಂತವರು. ಅಗ್ನಿಪ್ರವೇಶ ಮಾಡಿ ಈ ಶರೀರ ಬಿಟ್ಟು ದಿವ್ಯಶರೀರವನ್ನು ಧಾರಣೆ ಮಾಡಿದವರೂ ಇದ್ದಾರೆ. ಅಗ್ನಿಪ್ರವೇಶದ ಬಗ್ಗೆ ಗೊತ್ತಿಲ್ಲದೇ ಇರುವ ಕಾಲ ಇದು. ಈ ಕಾಲ ಎಂತಹ ಕಾಲ ಎಂದರೆ, ಅಜ್ಞಾನದ ಕಾಲ ಇದು. ಅಗ್ನಿಪ್ರವೇಶದಲ್ಲಿ ಎಷ್ಟು ಬಗೆಗಳಿವೆ? ಯಾರನ್ನು ಅಗ್ನಿ ಏನೂ ಕೂಡ ಮಾಡುವುದಿಲ್ಲ? ಅನ್ನುವುದು ಗೊತ್ತಿಲ್ಲ ಇವತ್ತು. ಸೀತೆ ಬಗ್ಗೆ ಹನುಮಂತ ಹೇಳುತ್ತಾನೆ, ಅಪಿಸಾನಿರ್ಧಹೇದಗ್ನಿಂ ನಥಾಮಗ್ನಿಃ ಪ್ರದಕ್ಷತೀ, ಅವಳೇ ಬೆಂಕಿಯನ್ನು ಸುಟ್ಟು ಬಿಟ್ಟಾಳು. ಬೆಂಕಿ ಅವಳನ್ನು ಸುಡುವುದಿಲ್ಲ. ಒಂದು ಬಾರಿ ನೋಡಿದ ಹನುಮಂತ ಹೇಳುವಂತದ್ದು ಇದು. ನಾಗ್ನಿರಗ್ನೋಪ್ರವರ್ತತೇ, ಅಗ್ನಿ ಬೇರೆಲ್ಲವನ್ನು ಸುಡುತ್ತದೆ, ಆದರೆ ಅಗ್ನಿ ಅಗ್ನಿಯನ್ನು ಸುಡುವುದಿಲ್ಲ. ಸೀತೆ ಎಂದರೆ ಅಗ್ನಿ ಎಂಬುದಾಗಿ ಹನುಮಂತ ಹೇಳುತ್ತಾನೆ. ಹನುಮಂತ ಪ್ರತ್ಯಕ್ಷದರ್ಶಿ ಕೂಡ ಹೌದು. ರಾವಣನ ಮನೆಗೆ ಹನುಮಂತ ಬೆಂಕಿ ಕೊಟ್ಟ. ಪೂರ್ತಿಯಾಗಿ ಸುಟ್ಟಿತು. ಅದರೊಳಗೇ ಇದ್ದಿದ್ದು ಅಶೋಕವನ. ಸುಡುವುದಿಲ್ಲ ಅದು. ಸೀತೆಯ ಪ್ರದೇಶ ಸುಡುವುದಿಲ್ಲ. ಅಗ್ನಿಗೆ ಅಗ್ನಿಯನ್ನು ಸುಡುವ ಶಕ್ತಿ ಇಲ್ಲ. ಸೀತೆ ಎಂದರೆ ಅಗ್ನಿ ಇದ್ದಂತೆ. ರಾಮನಿಗೆ ಗೊತ್ತಿಲ್ಲವೇ ಅದು? ಒಂದು ಬಾರಿ ನೋಡಿದ ಹನುಮಂತನಿಗೆ ಗೊತ್ತಿರುವ ವಿಷಯ, ಜೀವನ ಪೂರ್ತಿ ಜೊತೆಗಿರುವ ರಾಮನಿಗೆ ಗೊತ್ತಿಲ್ಲವೇ? ಹಾಗಾಗಿ ಇಂತಹ ಕಾರಣಗಳು ಇರುತ್ತವೆ. ಮಾಡಿದ್ದರಿಂದ ಆಗುವಂತಹ ಶುಭಗಳು ಇವು. ಅಗ್ನಿಪ್ರವೇಶದಿಂದ ಈ ಪ್ರಪಂಚದಲ್ಲಿ ಸೀತೆಯ ವ್ಯಕ್ತಿತ್ವವೇ ಬೇರೆಯಾಯಿತು. ಇಲ್ಲದೇ ಇದ್ದರೆ ನಾವು ನೀವುಗಳು ತಪ್ಪು ತಿಳಿದುಕೊಳ್ಳುತ್ತಿದ್ದೇವೋ ಏನೋ ಸೀತೆಯ ಬಗ್ಗೆ. ಅದಾಗಿದ್ದಾದರಿಂದಾಗಿ ಸೀತೆ ಎಂತವಳು ಎಂದು ಮೂರು ಲೋಕಕ್ಕೂ ತಿಳಿಯುವಂತಾಯಿತು. ಅಂತಹ ಸೂಕ್ಷ್ಮಗಳು ಇರುತ್ತವೆ. ಹಾಗಾಗಿ ಈ ಅಗ್ನಿಪ್ರವೇಶವನ್ನು ಒಂದು ಬಾರಿ ನಾವು ನೆನಪಿಸಿಕೊಂಡೆವು. ನಾಳೆ ಮುಂದಿನ ಭಾಗವನ್ನು ಅವಲೋಕನ ಮಾಡೋಣ. ಆ ಭಾಗವೂ ಕೂಡ ತುಂಬಾ ಗಂಭೀರವಾಗಿರುವಂತಹದ್ದೇ. ಜೀವನಕ್ಕೆ ಬೇಕಾಗಿರುವಂತಹದ್ದೇ. ಆದರೆ ಹೇಗೆ ಬದುಕಬಾರದು ಎಂಬುದಕ್ಕೆ ದಾರಿದೀಪ ಆಗುವಂತಹ ಭಾಗ ಅದು. ನೀವೆಲ್ಲಾ ತಯಾರಾಗಿ ಬನ್ನಿ. ಯಾವುದಕ್ಕೆ ಎಂದರೆ, ನಾವು ಹಾಗೆ ಆಗುವುದಿಲ್ಲ ಎಂದು. ಆ ರೀತಿ ಮನಃಸಂಕಲ್ಪ ಮಾಡಿಕೊಂಡು ಬರಬೇಕು ನೀವು. ಆ ಭಾಗವನ್ನು ಕೂಡ ಕೇಳಬೇಕು.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply