ಎಲ್ಲಿದ್ದೆವು ನಾವು?! ಯಮನ ಸಭೆಯಲ್ಲಿ. ಯಮನ ಸಭೆಗೆ ಹೋಗಬೇಕಾದರೆ ಭಾರಿ ಯೋಗ, ಪುಣ್ಯ ಬೇಕು. ಯಮನೇ ನಚಿಕೇತನಿಗೆ ಹೇಳುತ್ತಾನೆ.
ಇಂತಹದ್ದೊಂದು ಪ್ರಶ್ನೆ ಹುಟ್ಟುವುದು ಕೂಡಾ ಒಂದು ಪುಣ್ಯದಿಂದ. ಅದು ಹುಟ್ಟುವುದೇ ಒಂದು ಆಶ್ಚರ್ಯ!. ಆಮೇಲೆ ಆ ಪ್ರಶ್ನೆಗೆ ಉತ್ತರ ಹೇಳುವವನು ಸಿಕ್ಕುವುದು ಕೂಡಾ ಆಶ್ಚರ್ಯ. ಹೇಳಿದ ಉತ್ತರವನ್ನು ಕೇಳಿ ಪಾಲನೆ ಮಾಡುವುದು ಕೂಡಾ ದೊಡ್ಡ ಆಶ್ಚರ್ಯ. ಇಂತಹ ವಿಷಯಗಳ ಅನುಸಂಧಾನ ಆಗಬೇಕಾದರೆ ತುಂಬಾ ದೊಡ್ಡ ಪುಣ್ಯಗಳು ಬೇಕು. ದೇವರು ಅನುಗ್ರಹ ಮಾಡಿ ನಮಗೆ, ನಿಮಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿದ್ದಾನೆ.
ಯಮನ ಸಭೆ ಅದು ಹೇಗಿದೆ? ಅಂದರೆ, ತಸ್ಮಿನ್ ಅಸ್ತಿ ಸಭಾದಿವ್ಯಾ
ಶತಯೋಜನಮಾಯತ
ಯಮನ ನಗರದ ಹೆಸರು “ಸಂಯಮಿನಿ”. ಆ ಪಟ್ಟಣವು ಸಹಸ್ರಾರು ಯೋಜನಗಳ ವಿಸ್ತಾರವನ್ನು ಹೊಂದಿತ್ತು, ಅವನ ಸಭಾಸ್ಥಾನವು ನೂರು ಯೋಜನಗಳಷ್ಟು ಇತ್ತು. ಅತೀ ವಿಶಾಲವಾದ ಬೃಹತ್ ಸಭೆ, ವಿರಾಟ್ ಸಭೆ. ಆ ಸಭೆಯಲ್ಲಿ ‘ಅರ್ಕಪ್ರಕಾಶವಿತ್ತು’, ಎಂದರೆ, ಸೂರ್ಯೋದಯ ಇಲ್ಲದಿದ್ದರೂ ಕೂಡಾ ಆ ಸಭೆಗೆ ಸಹಜವಾಗಿ ಸೂರ್ಯನಂತಹ ಪ್ರಭೆಯಿತ್ತು.
ಸರ್ವತಃ ಕಾಮರೂಪಿಣೀ ಎಂದರೆ, ಅದೊಂದು ಕೌತುಕ.
ಸಭೆಯ ಯಾವ ಭಾಗದಲ್ಲಿ ನಾವು ಇರುತ್ತೇವೋ, ನಮ್ಮ ಇಚ್ಛೆಯಂತೆ ಆ ಭಾಗವು ಬದಲಾಗುತ್ತದೆ, ನಮಗೆ ಬೇಕಾದ ರೂಪವನ್ನು ತಾಳುತ್ತದೆ.
ಉದಾಹರಣೆಗೆ; ಈಗ ಸರ್ಕಾರಗಳು ಬದಲಾಗಿ ಹೊಸ ಸರ್ಕಾರಗಳು ಬರುತ್ತವೆ. ಹೊಸ ಮಂತ್ರಿ ಬರುತ್ತಾನೆ. ಬಂಗಲೆಗಳು ಹಳೆಯದೇ ಆಗಿರುತ್ತವೆ. ಹೊಸ ಮಂತ್ರಿಯು ಅದರಲ್ಲಿ ತನಗೆ ಬೇಕಾದ ಬದಲಾವಣೆಗಳನ್ನು ಮಾಡುತ್ತಾನೆ.
ಆದರೆ, ಯಮನ ಸಭೆಯಲ್ಲಿ ಅಷ್ಟೆಲ್ಲಾ ಕೆಲಸವಿಲ್ಲ. ಇದು ಹೀಗೆ ಇರಬೇಕಿತ್ತೆಂದು ನೆನೆಸಿದರೆ ಅದು ಬದಲಾಗುತ್ತದೆ. ಅಂತಹ ಅದ್ಭುತವಾದ ಸಭೆ ಅದು. ಎಲ್ಲಿಂದ ಎಲ್ಲಿಗೆ ಹೋದರೂ ಕೂಡಾ ಸಭಾಸದರ ಇಚ್ಛೆಗನುಸಾರವಾಗಿ ರೂಪ ಬದಲಾಗುವಂತಹ ಅದ್ಭುತತೆ ಆ ಸಭೆಗಿದೆ.
ನಾತಿಶೀತಾ, ನಾಜಾತ್ಯುಷ್ಣಾ ಏನು ಹಾಗಂದರೆ? ತುಂಬಾ ತಂಪಲ್ಲ, ತುಂಬಾ ಬಿಸಿಯೂ ಅಲ್ಲ. ಅಲ್ಲಿ ತಂಪಿದೆಯಾದರೂ, ಜಾಸ್ತಿ ತಂಪಿಲ್ಲ. ಬಿಸಿಯಿದ್ದರೂ, ಜಾಸ್ತಿ ಉಷ್ಣತೆಯಿಲ್ಲ. ಅಂದರೆ, ಯಾವುದೂ ಅತಿಯಲ್ಲ. ‘ಜೀವನದಲ್ಲಿ ಯಾವುದೂ ಅತಿಯಾಗಬಾರದು’.
ಉದಾಹರಣೆಗೆ, ಹಾಲು ತುಂಬಾ ಒಳ್ಳೇದು. ಹಾಗೆಂದು, ವಿಪರೀತವಾಗಿ ಕುಡಿದುಬಿಟ್ಟರೆ ಕಫಕ್ಕೆ ಕಾರಣ. ಅಂತೆಯೇ, ಸಭೆಯ ಶೀತ-ಉಷ್ಣಗಳು ಹಿತವಾಗುವಂತೆ ಇದ್ದವು.
ಮನಸೋ ಅತ್ಯಂತ ಹರ್ಷಿಣೀ, ಆ ಸಭೆಯು ಮನಸ್ಸಿಗೆ ತುಂಬಾ ಹರ್ಷವನ್ನು ಉಂಟುಮಾಡುತ್ತಿತ್ತು. ಆ ಸಭೆಯಲ್ಲಿ, ನ ಶೋಕಃ, ನ ಜರಾ, ನೈವಕ್ಷುತ್ಪಿಪಾಸೇ, ನ ಚ ಅಪ್ರಿಯಂ. ಅಂದರೆ, ಆ ಸಭೆಯಲ್ಲಿ ದುಃಖವಿಲ್ಲ, ಮುಪ್ಪು ಇಲ್ಲ, ಹಸಿವು, ಬಾಯಾರಿಕೆಗಳೂ ಇರಲಿಲ್ಲ. ಅಲ್ಲಿ ಅಪ್ರಿಯವಾದಂತಹ ಸಂಗತಿಗಳಿರಲಿಲ್ಲ. ಎಲ್ಲವೂ ಪ್ರಿಯವೇ ಆ ಸಭೆಯಲ್ಲಿ. ಮಾತ್ರವಲ್ಲ, ಸರ್ವೇ ಕಾಮಾಸ್ಥಿತಾಯಸ್ಯಾಂ, ಎಲ್ಲಾ ಅಪೇಕ್ಷೆಗಳಿಗೂ ಅಲ್ಲಿ ಆಸ್ಪದವಿದೆ. ಅಲ್ಲಿ ನಾವು ಏನೇನು ಬಯಸುತ್ತೇವೋ, ಅದೆಲ್ಲಾ ಲಭ್ಯವಿತ್ತು. ಎರಡು ಬಗೆಯಲ್ಲಿ ಬಯಸಬಹುದು, “ದಿವ್ಯ ಹಾಗೂ ಮಾನುಷ”. ಈ ಲೋಕದಲ್ಲಿ ಸಿಗುವ ಸುಖ ಏನೇನು ಇದೆಯೋ ಅವೆಲ್ಲವೂ ಸಿಗುತ್ತದೆ ಅಲ್ಲಿ. ಮಾತ್ರವಲ್ಲ, ಆ ಮೇಲಿನ ಲೋಕಗಳಲ್ಲಿ ಸಿಗುವ ಸುಖಗಳೆಲ್ಲವೂ ಕೂಡಾ ಅಲ್ಲಿ ಲಭ್ಯ. ಹಾಗಾಗಿ ದಿವ್ಯ ಸುಖಗಳು, ಮಾನುಷ ಸುಖಗಳು, ಯಾವುದನ್ನು ಬಯಸುತ್ತೇವೋ ಅದೆಲ್ಲವೂ ಆ ಸಭೆಯಲ್ಲಿ ಲಭ್ಯ.
ಭಕ್ಷ್ಯಂ ಭೋಜ್ಯಂ ಪ್ರಭೂತಂ
ರಸವಚ್ಛಾಂ ಪ್ರಭೂತಂ, ಯಮನ ಸಭೆಯಲ್ಲಿ ರಸವತ್ತಾದ ಭಕ್ಷ್ಯ, ಭೋಜ್ಯ ಬೇಕಾದಷ್ಟು ಇದೆ. ಮತ್ತು ಯಾವ ಮೂಲೆಗೆ ಹೋದರೂ, ಯಾವ ಹೊತ್ತಿಗೆ ಕೇಳಿದರೂ, ಬಯಸಿದರೂ ಕೂಡ ಬಗೆಬಗೆಯ ರುಚಿಕರವಾದ ತಿಂಡಿಗಳು, ತೀರ್ಥಗಳು ಲಭ್ಯವಾಗುತ್ತದೆ. ರಸವಂತಿಚ ತೋಯಾನಿ,
ಯಮ ಲೋಕದ ನೀರು ಕೂಡಾ ತುಂಬಾ ರುಚಿಯಂತೆ. ತಣ್ಣೀರು ಬೇಕಾದರೆ ತಣ್ಣೀರು, ಬಿಸಿನೀರು ಬೇಕಾದರೆ ಬಿಸಿನೀರು. ಅವೆರಡಕ್ಕೂ ಅಲ್ಲಿ ಒಳ್ಳೆಯ ರುಚಿಯಂತೆ. ಹಾಗೆಯೇ ಅಲ್ಲಿ ಕಿವಿಗಳಿಗೆ ಹಿತವಾದ ಶಬ್ದಗಳು ಕೇಳಿಬರುತ್ತವೆ. ಕಣ್ಣಿಗೆ ಹಿತವಾದ ದೃಶ್ಯಗಳು ಗೋಚರಿಸುತ್ತವೆ. ಮೂಗಿಗೆ ಪವಿತ್ರವಾದ ಪರಿಮಳ ಬರುತ್ತದೆ. ಪುಣ್ಯಾಶಬ್ದಾದಯಸ್ತಸ್ಯಾಂ, ಅಲ್ಲಿ ಕೇಳಿಬರುವ ಶಬ್ದಗಳು, ಅಲ್ಲಿ ಕಾಣುವ ದೃಶ್ಯಗಳು, ಅಲ್ಲಿ ಬರುವ ಪರಿಮಳ ಇವೆಲ್ಲಾ ತುಂಬಾ ಪವಿತ್ರವಾಗಿರುವಂತಹದ್ದು ಎಂಬುದಾಗಿ ಹೇಳಲಾಗಿದೆ. ನಿತ್ಯಂಕಾಮಫಲದ್ರುಮಾಃ , ಯಮ ಲೋಕದಲ್ಲಿ ಕೂಡಾ ಮರಗಿಡಗಳಿವೆಯಂತೆ. ಆದರೆ ಅಲ್ಲಿ ಬಿಡುವ ಹಣ್ಣುಗಳು ಯಾವುದು ಗೊತ್ತಾ? ನಮ್ಮ ಅಪೇಕ್ಷೆಗಳು. ಅವುಗಳು ಬಯಸಿದ್ದನ್ನು, ಅಪೇಕ್ಷಿಸಿದ್ದನ್ನು ಕೊಡುತ್ತವೆ. ಎಷ್ಟು ಚೆನ್ನಾಗಿದೆ ಯಮನ ಸಭಾಸ್ಥಾನ!. ಆಮೇಲೆ, ಅಸಂಬಾಧಾ ಚ ಸಾತಾರ್ಕ್ಷ್ಯಾ, ಎಂದರೆ ಸಭೆಯಲ್ಲಿ ವಿಶಾಲವಾಗಿರತಕ್ಕಂತಹ ಸ್ಥಳಾವಕಾಶವೂ ಇದೆ. ಎಲ್ಲೂ ಇಕ್ಕಟ್ಟಿಲ್ಲ. ಹಾಗೇ ಸಭೆಯು ಬಹಳ ಸೊಗಸಾಗಿದೆ. ಕಾಮಾಗಮಾ ಸಭಾ ಎಂದರೆ, ಆ ಸಭೆಯು ಬರಲು ಮತ್ತು ಹೋಗಲು ಇಷ್ಟ ಆಗುವಂತೆ ಇದೆ. ಇಷ್ಟೆಲ್ಲಾ ವೈಶಿಷ್ಟ್ಯಗಳಿದ್ದರೆ ಇಷ್ಟವಾಗದೇ ಇದ್ದೀತೆ?
ಇಷ್ಟೆಲ್ಲಾ ಆಗೋಕೆ ಏನು ಕಾರಣ? ಅಂದರೆ, ದೀರ್ಘಕಾಲಂ ತಪಃಸ್ತಪ್ತ್ವಾ ನಿರ್ಮಿತಾ ವಿಶ್ವಕರ್ಮಣಾ, ವಿಶ್ವಕರ್ಮ ಕ್ಷಣಮಾತ್ರದಲ್ಲಿ ಏನನ್ನೂ ಕೂಡಾ ನಿರ್ಮಾಣ ಮಾಡಬಲ್ಲ ದೇವಶಿಲ್ಪಿ ಅವನು. ಅಂತಹ ವಿಶ್ವಕರ್ಮನೂ ಕೂಡ ದೀರ್ಘಕಾಲ ತಪಸ್ಸು ಮಾಡಿ, ಆ ತಪಸ್ಸಿನ ಪುಣ್ಯದ ಫಲದಿಂದ ಯಮಲೋಕವನ್ನು, ಯಮಸಭೆಯನ್ನು ನಿರ್ಮಿಸಿದ್ದಾನಂತೆ. ಹಾಗಾಗಿ ಆ ಸಭೆ ಅಷ್ಟು ಮನೋಜ್ಞವಾಗಿದೆ. ಅಂತಹ ಯಮನ ಸಭೆಯಲ್ಲಿ ಯಾರೆಲ್ಲಾ ಇರುತ್ತಾರೆ? ಅಲ್ಲಿ ಇರಲು ಯಾರು ಅರ್ಹರು? ಮುಖ್ಯವಾದ ಸಭಾಸದರು ಯಾರು? ಎಂಬುದನ್ನು ಹೇಳುತ್ತಾರೆ. ತಾಂ ಉಗ್ರ ತಪಸೋಯಾಂತೀ ಅಂದರೆ, ಉಗ್ರತಪಸ್ವಿಗಳು ಆ ಸಭೆಗೆ ಹೋಗಲು ಅರ್ಹರು. ಸುವ್ರತಾಃ, ವ್ರತಗಳನ್ನು ಚೆನ್ನಾಗಿ ಆಚರಣೆ ಮಾಡಿರುವಂತವರು. ಬೇರೆ ಬೇರೆ ರೀತಿಯ ವ್ರತಗಳಿರುತ್ತವೆ, ಅವುಗಳನ್ನು ಚೆನ್ನಾಗಿ ಪಾಲಿಸುವವರು. ಅವರಿಗೆ ಅಲ್ಲಿ ಪ್ರವೇಶವಿದೆ. ‘ವ್ರತ’ ಎಂದರೆ ಭಾವಿ ಶುಭಕ್ಕಾಗಿ ನಮಗೆ ನಾವೇ ಹಾಕಿಕೊಳ್ಳುವ ನಿಯಮ. ಸತ್ಯವಾದಿನಃ, ಅಂದರೆ ಲೋಕದಲ್ಲಿ ಸುಳ್ಳನ್ನೇ ಹೇಳದೆ ಸದಾ ಸತ್ಯವನ್ನು ಹೇಳುವವರಿಗೆ ಯಮಸಭೆಯಲ್ಲಿ ಪ್ರವೇಶವಿದೆ. ಶಾಂತಾಃ, ಎಂದರೆ ಶಾಂತರಾದವರು. ಮನಸ್ಸು ತರಂಗವಿಲ್ಲದ ಸಮುದ್ರದಂತೆ, ಮಾನಸ ಸರೋವರದಂತೆ ಶಾಂತವಾಗಿರಬೇಕು. ಅಂತವರಿಗೆ ಪ್ರವೇಶವಿದೆ. ಸನ್ಯಾಸಿನಃ, ಎಂದರೆ ಯಾರು ವಿರಕ್ತರಾಗಿ ಎಲ್ಲವನ್ನೂ ತ್ಯಾಗ ಮಾಡಿ ಭಗವಂತನಲ್ಲಿ ಮನಸ್ಸಿಟ್ಟವರಿಗೆ ಪ್ರವೇಶವಿದೆ. ಸಿದ್ಧಾಃ, ಎಂದರೆ ಸಾಧನೆಮಾಡಿ ಸಿದ್ಧಿಯನ್ನು ಪಡೆದವರು. ಮತ್ತು ಪವಿತ್ರವಾದ ಕರ್ಮವನ್ನು ಆಚರಿಸುವವರು. ಉದಾಹರಣೆಗೆ; ಅಶ್ವಮೇಧ ಯಾಗವನ್ನು ಮಾಡಿ ಪಾಪವನ್ನು ಕಳೆದುಕೊಂಡು ಪವಿತ್ರರಾಗಿರುವಂತವರು.
ಈ ಮೇಲಿನ ಎಲ್ಲರೂ ಸರ್ವೇ ಭಾಸ್ವರದೇಹಾಸ್ತೇ, ಎಂದರೆ ಅವರ ಶರೀರಗಳು ಸಹಜವಾಗಿ ಥಳಥಳ ಹೊಳೆಯುತ್ತವೆ. ಇವರೆಲ್ಲರೂ ಅಲಂಕೃತಾಃ, ಎಂದರೆ ಆಭರಣವನ್ನು ಧರಿಸುತ್ತಾರೆ. ವಿರಜಾಂಬರಾಃ, ಎಂದರೆ ಅವರ ಬಟ್ಟೆಗಳಿಗೆ ಧೂಳು ಮುಟ್ಟದು. ಇವೆಲ್ಲಾ ಹೇಗೆ ಸಾಧ್ಯವೆಂದರೆ, ಕೃತೈಶ್ಚ ಕರ್ಮಭಿಃ ಪುಣ್ಯೈಃ, ಎಂದರೆ ಅವರು ಬದುಕಿದ್ದಾಗ ಮಾಡಿದ ಪುಣ್ಯಕರ್ಮಗಳು. ಅದರ ಫಲವಾಗಿ ಅವರಿಗೆ ಅಂತಹ ಶರೀರಗಳು, ವಸ್ತ್ರಗಳು, ಆಭರಣಗಳು ಬಂದಿವೆ. ಅವರು ಆ ಸಭೆಯನ್ನು ಅಲಂಕರಿಸುತ್ತಾರೆ.
ಇನ್ನು ಆ ಸಭೆಯ ಅಧ್ಯಕ್ಷ ಯಾರು? ಹೇಗಿರುತ್ತಾನೆ ಅಂದರೆ, ತಸ್ಯಾಂಸ ಧರ್ಮೋ ಭಗವಾನ್ ಆಸನೈಃ ಅನುಪಮೈಃ ಶುಭೇ, ಧರ್ಮವೇ ಅವನು, ಧರ್ಮಕ್ಕೆ ಆಕಾರ ಬಂದಂತೆ, ಧರ್ಮವೇ ಮೂರ್ತಿ ತಾಳಿದಂತೆ ಭಗವಂತ ಯಮದೇವ ಅಲ್ಲಿ ಉಚ್ಛ ಆಸನದಲ್ಲಿ ಕುಳಿತಿದ್ದಾನೆ. ಆ ಆಸನ ಅನುಪಮವಾಗಿದೆ. ಅದಕ್ಕೆ ಹೋಲಿಕೆಯೇ ಇಲ್ಲ. “ಶುಭೇ” ಎಂದರೆ ಶುಭವಾಗಿದೆ. ತುಂಬಾ ವಿಶಾಲವಾಗಿರುವ ಆಸನ ಏಕೆಂದರೆ ಯಮದೇವನೂ ಅಷ್ಟೇ ವಿಶಾಲವಾಗಿದ್ದಾನೆ. ಯಮ ತನ್ನ ಘೋರ ರೂಪವನ್ನು ತಾಳಿನಿಂತರೆ ಅವನ ಎತ್ತರ ಮೂವತ್ತೆರಡು ಯೋಜನ. ಆಕಾಶವನ್ನು, ಮೋಡಗಳನ್ನು ಮುಟ್ಟುವಂತಹ ರೂಪ ಯಮಧರ್ಮರಾಜನದು. ಹಾಗಾಗಿ ಅವನಿಗೆ ತಕ್ಕಂತೆ ಸಿಂಹಾಸನ ಇದೆ ಆ ಸಭೆಯಲ್ಲಿ. ಆ ಆಸನ ಸರ್ವರತ್ನೈಃಸುಮಂಡಿತೇ, ಎಂದರೆ ಎಲ್ಲಾ ರತ್ನಗಳಿಂದ ಅಲಂಕೃತವಾಗಿದೆ. ಆ ಆಸನದಲ್ಲಿ ಕುಳಿತು ಸಭೆಯನ್ನು ನಡೆಸುತ್ತಾನೆ. ಆತನ ತಲೆಯ ಮೇಲೆ “ಶ್ವೇತಚ್ಛತ್ರ”. ಮೊದಲೇ ಪ್ರಕಾಶಮಾನವಾಗಿರುವ ಆತನ ಮುಖಕ್ಕೆ ಮತ್ತಷ್ಟು ಶೋಭೆಯನ್ನು ನೀಡುತ್ತಿದೆ. ಆ ಸಭೆಯಲ್ಲಿ ಯಮನದ್ದು ಸೌಮ್ಯರೂಪ. ಅಲ್ಲಿ ಆತ ಕ್ರೂರನಾಗಿ, ಘೋರನಾಗಿ ಕಾಣಿಸಿಕೊಳ್ಳುವುದಿಲ್ಲ. ಆತ ಅಲ್ಲಿ ಕುಂಡಲಾಲಂಕೃತನಾಗಿರುತ್ತಾನೆ. ಮಹಾಕಿರೀಟವನ್ನು ಧರಿಸಿದ್ದಾನೆ. ಆ ಮಹಾಕಿರೀಟ ಆತನಿಗೆ ಬ್ರಹ್ಮ ಕೊಟ್ಟ ಹೊಣೆಗಾರಿಕೆ. ಆ ಕಿರೀಟ ಕೂಡ ಬ್ರಹ್ಮದತ್ತ. ಸರ್ವಾಲಂಕಾರ ಸಂಯುಕ್ತಾಃ, ಎಲ್ಲಾ ಅಲಂಕಾರಗಳಿಂದ ಅವನು ಶೋಭಿಸುತ್ತಿದ್ದಾನೆ. ಭುಜಗಳಲ್ಲಿ ಕೇಯೂರಗಳಿವೆ, ಅಂಗದವಿದೆ, ಕೈಯಲ್ಲಿ ಕಂಕಣವಿದೆ, ಸೊಂಟಕ್ಕೆ ಡಾಬು ಅದಕ್ಕೆ ‘ಮೇಖರ’ ಎನ್ನುತ್ತಾರೆ, ಅದು ಇದೆ. ಹೀಗೆ ಆಪಾದಮಸ್ತಕ, ಸರ್ವಾಲಂಕಾರಭೂಷಿತನಾಗಿದ್ದಾನೆ. ಆದರೆ ಅವನ ಬಣ್ಣ ಕಪ್ಪು. ಕಾಡಿಗೆಯ ಬಣ್ಣ ಯಮನದ್ದು. ಆತ ಕೃಷ್ಣವರ್ಣ. ಏಕೆಂದರೆ ಅವನು ಮಾಡುವ ಕೆಲಸಗಳಿಗೆ ತಮೋಗುಣ ಬೇಕಾಗುತ್ತದೆ. ಅಂತಹವರನ್ನೇ ಆತ ನಿಭಾಯಿಸಬೇಕಾಗುತ್ತದೆ. ಹಾಗಾಗಿ ಆ ತಮಸ್ಸಿನ ಗುಣದ ಬಣ್ಣವಾದ ಕಪ್ಪು ಬಣ್ಣದವನಾಗಿದ್ದಾನೆ. ಆತ ಮಳೆಗಾಲದ ಮೋಡದಂತೆ ಕಾಣುತ್ತಾನೆ. ಆತನ ಸುತ್ತಲೂ ಅಪ್ಸರೆಯರು ಆತನಿಗೆ ಚಾಮರದಿಂದ ಗಾಳಿ ಬೀಸುತ್ತಿರುತ್ತಾರೆ. ಆ ಸಭೆಯಲ್ಲಿ ಯಮನೊಟ್ಟಿಗೆ ಆತನ ಪರಿವಾರವಿದೆ. ಪರಿವಾರವೆಂದರೆ ಅಪ್ಸರೆಯರು ಮತ್ತು ಗಂಧರ್ವರು. ಅವರು ಗೀತ, ವಾದ್ಯ, ನೃತ್ಯಗಳಿಂದ ಸೇವೆ ಮಾಡುತ್ತಿರುತ್ತಾರೆ. ಇವರೆಲ್ಲಾ ಯಾವಾಗಲೂ ಇದ್ದೇ ಇರುತ್ತಾರೆ. ಇವರೊಂದಿಗೆ ಆತನ ಪರಿವಾರದವನೇ ಆದ ಪಾಶಹಸ್ತನಾದ “ಮೃತ್ಯು” ಇರುತ್ತಾನೆ. “ಕಾಲ”, ಕಾಲ ಎಂದರೇನು? ಅದೊಂದು ಲೆಕ್ಕ ಅಲ್ಲವಾ. ಹಾಗಾಗಿ ಕಾಲಪುರುಷ, ಚಿತ್ರ ಮತ್ತು ಚಿತ್ರಗುಪ್ತರೂ ಅಲ್ಲೇ ಇದ್ದಾರೆ. ಊಟಮಾಡುವಾಗ ಪರಿಶೇಚನೆ ಮಾಡುತ್ತೇವೆ. ಚಿತ್ರಾಯ ಸ್ವಾಹಾ, ಚಿತ್ರಗುಪ್ತಾಯ ಸ್ವಾಹಾ, ಯಮಾಯ ಸ್ವಾಹಾ, ಯಮಧರ್ಮರಾಜಾಯ ಸ್ವಾಹಾ ಎನ್ನುತ್ತಾ ಇಂತಹ ಪುಣ್ಯಪುರುಷನನ್ನು, ಅವನ ಪರಿವಾರವನ್ನು ಸ್ಮರಣೆ ಮಾಡಿಕೊಳ್ಳುವುದು. ಅದು ಏಕೆಂದರೆ ಒಂದೊಂದು ಅಗಳು ಕೂಡ ಅವನ ಕೃಪೆ, ಅವನ ಲೆಕ್ಕ. ಹಾಗಾಗಿ ದಾನೇ ದಾನೇ ಮೇ ಲಿಖಾ ಹೈ ಖಾನೇವಾಲೇ ಕಾ ನಾಮ್, ಯಾರು ಎಷ್ಟು ತಿನ್ನಬೇಕು ಎನ್ನುವುದು ಬರೆದಿರುತ್ತದೆ. ಬೇಗ ಬೇಗ ಜಾಸ್ತಿ ತಿಂದರೆ ಬೇಗ ಆಯುಷ್ಯ ಮುಗಿಯುತ್ತದೆ. ಕಡಿಮೆ ತಿಂದರೆ ಹೆಚ್ಚು ಕಾಲ ಬಾಳಬಹುದು.
ಹಾಗೆಯೇ ಯಮಭಟರೂ ಅಲ್ಲಿದ್ದಾರೆ. ಅವರ ಕೈಯಲ್ಲಿ ಪಾಶ, ದಂಡಗಳಿವೆ. ಅವರು ಉಗ್ರರು, ತೀಕ್ಷ್ಣ ಸ್ವಭಾವದವರು. ಆದರೆ ವಶವರ್ತಿಗಳು, ಎಂದರೆ ಯಮನ ಆಜ್ಞೆಯನ್ನು ಪಾಲಿಸುವವರು. ಆತ್ಮತುಲ್ಯಬಲೈಃ, ಎಂದರೆ ಸ್ವಭಾವದಲ್ಲಿ ಯಮನಿಗೆ ಹೊಂದುವವರು. ಅಂತಹ ಮಹಾಭಟರಿಂದ, ಸುಭಟರಿಂದ ಯಮಧರ್ಮ ಸುತ್ತುವರೆಯಲ್ಪಟ್ಟಿದ್ದಾನೆ. ಅದು ಪಿತೃಲೋಕ. ಯಮಲೋಕಕ್ಕೆ ಪಿತೃಲೋಕ ಎಂದು ಕರೆಯುತ್ತಾರೆ. ಯಮನನ್ನು ಪಿತೃಪತಿ ಎಂದು ಕರೆಯುತ್ತಾರೆ. ಅಲ್ಲಿ ಪಿತೃದೇವತೆಗಳ ಸಾನ್ನಿಧ್ಯವಿದೆ. ಪಿತೃದೇವತೆಗಳೆಂದರೆ ಇಂದ್ರಾದಿ ದೇವತೆಗಳ ಪಿತೃಗಳು. ಅವರು ಆಯುಧಗಳನ್ನು ಹಿಡಿದಿರುವುದಿಲ್ಲ. ಅವರು ಬಿಳಿ ಬಟ್ಟೆ ಧರಿಸಿರುತ್ತಾರೆ, ಜೋಪಡಿ ಧಾರಣೆ ಮಾಡಿರುತ್ತಾರೆ. ತುಂಬಾ ಶುಭವಾದ ಆಕಾರ ಪಿತೃಗಳದ್ದು. ಅವರ ಅನುಗ್ರಹವಿಲ್ಲದೇ ಜೀವನ ಮುಂದಕ್ಕೆ ಸಾಗುವುದಿಲ್ಲ. ಅವರಲ್ಲಿ ಏಳು ಗುಂಪುಗಳಿವೆ- ಅಗ್ನಿಶ್ವಾಂತ, ಪರೀಶದ, ವೈರಾಜ, ಸೋಮಪ, ಹವಿಶ್ಮಂತ, ಆಜ್ಯಪ, ಸುಖಾದೀನ. ಇವರೆಲ್ಲರೂ ಯಮನ ಸಭೆಯಲ್ಲಿ ಉಪಸ್ಥಿತರಿರುವವರು. ಕೆಲವರು ಪ್ರಕಟವಾಗಿಯೂ, ಕೆಲವರು ಅಮೂರ್ತರಾಗಿಯೂ ಅಲ್ಲೇ ಗಾಳಿಯಲ್ಲಿ ಕರಗಿ ಹೋಗಿದ್ದಾರೆ. ಅವರು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಆದರೆ ಇರುತ್ತಾರೆ. ಆ ಯಮಸಭೆಯಲ್ಲಿ ಮಹರ್ಷಿಗಳಾದ ಅತ್ರಿ, ವಸಿಷ್ಠರು, ಪುಲಹ, ದಕ್ಷ, ಕೃತು, ಅಂಗೀರಸರು, ಜಮದಗ್ನಿ, ಭೃಗು, ಪುಲಸ್ತ್ಯ, ಅಗಸ್ತ್ಯ, ನಾರದರು ಇದ್ದಾರೆ. ಅಸಂಖ್ಯಾತ ಋಷಿಗಳೂ ಇದ್ದಾರೆ. ಅನೇಕ ಧರ್ಮಶಾಸ್ತ್ರದ ಮರ್ಮವನ್ನು, ಯಾವುದು ತಪ್ಪು ಯಾವುದು ಸರಿ ಎಂಬ ಸೂಕ್ಷ್ಮಗಳನ್ನು ಬಲ್ಲವರು ಅಂತವರು ಕೂಡಾ ಬ್ರಹ್ಮನ ಆಜ್ಞೆಯಂತೆ ಯಮನ ಸಭೆಯಲ್ಲಿ ಆತನ ಸೇವೆಯನ್ನು ಮಾಡುತ್ತಾರೆ. ಹಾಗೆಯೇ ರಾಜರು ಕೂಡಾ ಇದ್ದಾರಂತೆ ಅಲ್ಲಿ. ಸೂರ್ಯವಂಶ ಮತ್ತು ಚಂದ್ರವಂಶಕ್ಕೆ ಸೇರಿದ ದೊಡ್ಡ ದೊಡ್ಡ ಚಕ್ರವರ್ತಿಗಳು ಅಲ್ಲಿರುತ್ತಾರೆ. ಏಕೆಂದರೆ ಯಮನ ಕೆಲಸವನ್ನು ಅವರು ಭೂಲೋಕದಲ್ಲಿ ಮಾಡುತ್ತಾರೆ. ಹಾಗಾಗಿ ಯಮ ಅಲ್ಲಿ ಧರ್ಮನಿರ್ಣಯ ಮಾಡುವಾಗ ಅವನಿಗೆ ಸಲಹೆ ನೀಡುವುದಕ್ಕೆ ಚಕ್ರವರ್ತಿಗಳು ಆ ಸಭೆಯಲ್ಲಿ ಇರುತ್ತಾರೆ. ಮನು, ದಿಲೀಪ, ಮಾಂಧಾತ, ಸಂಗರಣ, ಭಗೀರಥ, ಅಂಬರೀಶ, ಅನರಣ್ಯ ಅವನಂತವರು ಅಲ್ಲಿ ಇರುತ್ತಾರೆ.
ಅನರಣ್ಯ ಯಾರು ಗೊತ್ತಾ? ರಾಮನ ಪೂರ್ವಜ. ಬಹಳ ದೊಡ್ಡ ಚಕ್ರವರ್ತಿ. ಈತನ ಕಾಲದಲ್ಲಿ ಲೋಕ ರಾಮರಾಜ್ಯದಂತೆಯೇ ಇತ್ತಂತೆ. ರಾವಣನಿಗೂ ಮತ್ತು ಅನರಣ್ಯನಿಗೂ ಯುದ್ಧವಾಗುತ್ತದೆ. ಈತ ರಾವಣನಿಂದ ಹತನಾಗುತ್ತಾನೆ. ಸಾಯುವ ಮುನ್ನ ಈತ ರಾವಣನಿಗೆ ಹೇಳಿ ಹೋಗುತ್ತಾನೆ. ಮುಗಿಯಿತು ಎಂದುಕೊಳ್ಳಬೇಡ ರಾವಣ, ರಾಮನೆಂಬುವವನು ನನ್ನ ವಂಶದಲ್ಲಿ ಹುಟ್ಟಿಬರುತ್ತಾನೆ. ನಿನ್ನ ಊರಿಗೆ ಬಂದು ನಿನ್ನನ್ನು ಮತ್ತು ನಿನ್ನೆಲ್ಲವನ್ನೂ ನಾಶ ಮಾಡುತ್ತಾನೆ, ಎಂದು ರಾಮನ ಬಗ್ಗೆ ಹೇಳುತ್ತಾನೆ. ಈತನಿಗೆ ಅಂತಹ ಮುಂದಾಲೋಚನೆ ಇತ್ತು. ಮುಂದೆ ಆಗುವುದನ್ನು ಇಂದೇ ಹೇಳುತ್ತಾನೆ. ಅಂತಹ ಅನರಣ್ಯ ಯಮನ ಸಭೆಯಲ್ಲಿ ಇದ್ದನು.
ಹಾಗೆಯೇ ಚಂದ್ರವಂಶದವರು ಯಯಾತಿ, ನಹುಷ, ಪುರು, ದುಷ್ಯಂತ, ಶಿಬಿ ಇಂತಹವರು ನಲ, ಭರತ, ಶಂತನು, ಪಾಂಡು, ಕಾರ್ತವೀರ್ಯಾರ್ಜುನರಂತಹ ಆದರ್ಶ ರಾಜರುಗಳು ಧರ್ಮದಿಂದ, ಆದರ್ಶದಿಂದ ರಾಜ್ಯಭಾರ ಮಾಡಿದವರು ಗತಿಸಿದ ಬಳಿಕ ಯಮನ ಸಭೆಯಲ್ಲಿ ಸಭಾಸದರಾಗುತ್ತಾರೆ. ಅಂತಹ ಸ್ಥಾನಕ್ಕೆ ಹೋಗಬೇಕಾದರೆ ಅವರು ಅಶ್ವಮೇಧ ಯಾಗವನ್ನು ಒಂದಲ್ಲ, ಅನೇಕ ಬಾರಿ ಮಾಡಿರಬೇಕು. ಅಂಥವರು ಯಮನ ಸಭೆಯಲ್ಲಿ ಸಭಾಸದರಾಗಿರುತ್ತಾರೆ. ಯಮನ ಸಭೆಯಲ್ಲಿ, ಧರ್ಮ ಏವ ಪ್ರವರ್ತತೇ. ಧರ್ಮಕ್ಕೆ ಮಾತ್ರ ಸ್ಥಾನ. ಸಭೆಯಲ್ಲಿ ಅಧರ್ಮಕ್ಕೆ ಜಾಗ ಇಲ್ಲ. ಸಭಾಯಾಂ ಧರ್ಮರಾಜಸ್ಯ ಧರ್ಮ ಏವ ಪ್ರವರ್ತತೇ. ಧರ್ಮವೊಂದೇ ನಡೆಯುವಂಥದ್ದು, ಅಧರ್ಮಕ್ಕೆ ಆಸ್ಪದವೇ ಇಲ್ಲ. ಆದರೆ ಈ ಭೂಲೋಕದ ಸಭೆಗಳಲ್ಲಿ, ಸತ್ಯ, ಸುಳ್ಳು, ಧರ್ಮ, ಅಧರ್ಮ ಎಲ್ಲ ನಡೆಯುತ್ತದೆ. ಆದರೆ ಅಲ್ಲಿ ಧರ್ಮವನ್ನು ಬಿಟ್ಟು ಮತ್ತೆ ಯಾವುದಕ್ಕೂ ಜಾಗವಿಲ್ಲ. ನ ತತ್ರ ಪಕ್ಷಪಾತೋಸ್ತಿ, ಅಲ್ಲಿ ಯಾವುದೇ ಪಕ್ಷಪಾತವಿಲ್ಲ. ಈ ಲೋಕದ ಸಭೆಗಳಲ್ಲಿ ಆಗತ್ತೆ. ಯಾರೋ ಒಬ್ಬನು ಯೋಗ್ಯನಲ್ಲ, ಆದರೆ ನಮ್ಮ ಬಾವನೆಂಟ, ಅವನಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಇರುತ್ತದೆ. ಅಂಥದ್ದೆಲ್ಲ ನಡೆಯುತ್ತೆ ಇಲ್ಲಿ. ಆದರೆ ಯಮನ ಸಭೆಯಲ್ಲಿ ಸರಿಯೋ ಸರಿ, ತಪ್ಪೋ ತಪ್ಪು. ಅವನು ಯಾರೇ ಆಗಿರಲಿ. ನಾನೃತಂ, ಯಮನ ಸಭೆಯಲ್ಲಿ ಸುಳ್ಳಿಲ್ಲ. ಅಲ್ಲಿ ಸುಳ್ಳಿನ ಬುದ್ಧಿಯೂ ಇರಲ್ಲ, ಆಡುವುದಕ್ಕೂ ಆಗಲ್ಲ. ನ ಚ ಮತ್ಸರಃ, ಒಬ್ಬರನ್ನು ಕಂಡರೆ ಮತ್ತೊಬ್ಬನಿಗೆ ಹೊಟ್ಟೆಕಿಚ್ಚು, ಅವನಿಗೆ ಭಾಷಣದ ಅವಕಾಶವಿತ್ತು ತನಗಿಲ್ಲ, ಅವನು ಮಿಂಚಿದ, ನಾನು ಮಾತ್ರ ಮೂಲೆಯಲ್ಲಿ ಕೂತಿದ್ದೇನೆ ಎಂಬ ಮತ್ಸರದ ಭಾವ ಯಮನ ಸಭೆಯಲ್ಲಿ ಇಲ್ಲ. ಎಲ್ಲ ಜ್ಞಾನಿಗಳೇ. ಸರ್ವೇ ಶಾಸ್ತ್ರವಿದಃ, ಎಲ್ಲರೂ ಧರ್ಮಪರಾಯಣರು. ಧರ್ಮವೇ ಸರ್ವಸ್ವ. ಅಂತವರು ಯಮನ ಉಪಾಸನೆ ಮಾಡ್ತಾರೆ. ಇದು ಯಮನ ಸಭೆಯ ರೀತಿ.
ಯಮಲೋಕಕ್ಕೆ ನಾಲ್ಕು ದ್ವಾರಗಳು. ಆದರೆ ಮೂರು ದ್ವಾರಗಳಿಂದ ಹೋದವರಿಗೆ ಮಾತ್ರ ಇಲ್ಲಿ ಕೂರಲು ಅವಕಾಶ. ಪೂರ್ವ, ಪಶ್ಚಿಮ, ಉತ್ತರ ಈ ಮೂರು ದ್ವಾರಗಳಿಂದ ಪ್ರವೇಶ ಮಾಡಿದವರು ಮಾತ್ರವೇ ಯಮನ ಈ ಸಭೆಗೆ ಹೋಗುತ್ತಾರೆ. ದಕ್ಷಿಣ ದ್ವಾರದಲ್ಲಿ ಹೋದವರ ಕಥೆಯೇ ಬೇರೆ. ಹಾಗೆಯೇ, ನತಾಮ್ ಪಶ್ಯಂತಿ ಯೇ ಪಾಪಾಃ ದಕ್ಷಿಣೇನ ಪಥಾಗತಃ, ಪಾಪಿಗಳು ದಕ್ಷಿಣ ದ್ವಾರದಿಂದ ಹೋದವರು ಆ ಸಭೆಯನ್ನು ನೋಡುವುದಿಲ್ಲ. ಪಾಪಿ ಯಾರು ಎಂದರೆ, ಯಾರಲ್ಲಿ ಪಾಪ ಇದೆಯೋ ಅವನು ಪಾಪಿ. ಇನ್ನು ಆಪಾದಮಸ್ತಕ ಪಾಪವೇ ತುಂಬಿದ್ದರೇ ಅವನೇ ಪಾಪಿ. ಅಂತವರನ್ನು ಆ ವ್ಯವಸ್ಥೆ ಒಳಗೆ ತೆಗೆದುಕೊಳ್ಳುವುದಿಲ್ಲ.
ಯಮಲೋಕದ ಪೂರ್ವದ ದಾರಿ ಹೇಗಿದೆ ಅಂದರೆ, ಸರ್ವ ಭೋಗ ಸಂಯುತಃ, ಎಲ್ಲಾ ಸುಖಗಳು ಆ ದಾರಿಯಲ್ಲಿಯೇ ಇವೆಯಂತೆ. ಪಾರಿಜಾತ ನರುಚ್ಛಾಯಚ್ಚಾದಿತೋ, ದೇವಲೋಕದ ಪಾರಿಜಾತ, ಕೇಳಿದ್ದನ್ನು ಕೊಡುವ ಮರದ ನೆರಳು ಇಡೀ ದಾರಿಯಲ್ಲಿ. ರತ್ನಮಂಡಿತಃ, ರತ್ನದ ಹಾದಿಯಂತೆ. ವಿಮಾನ ಗಣ ಸಂಕೀರ್ಣಃ, ಅಲ್ಲಲ್ಲಿ ವಿಮಾನಗಳು. ವಿಮಾನಗಳಲ್ಲಿ ಹೋಗಬಹುದು. ಹಂಸಾವಲಿ ವಿರಾಜಿತಃ, ಹಂಸಗಳು ಅಲ್ಲೆಲ್ಲ. ವಿದ್ರುಮಾ ರಾಮ ಸಂಕೀರ್ಣ, ಹವಳದ ಉದ್ಯಾನಗಳು. ಅಮೃತ ದ್ರವ, ಎಲ್ಲೆಂದರಲ್ಲಿ ಬಾಯಾರಿಕೆಗೆ ಅಮೃತವನ್ನೇ ಕುಡಿಯಬಹುದು. ಅಂತಹ ಅವಕಾಶ ಪೂರ್ವ ಮಾರ್ಗದಲ್ಲಿದೆ. ಅಲ್ಲಿ ಯಾರು ಹೋಗುತ್ತಾರೆ? ಅಲ್ಲಿ ಬ್ರಹ್ಮರ್ಷಿಗಳು, ರಾಜರ್ಷಿಗಳು. ಅಮಲಾಃ ಪುಣ್ಯಾಃ, ಪಾಪವೇ ಇಲ್ಲದಂತವರು ಹೋಗುತ್ತಾರೆ. ಅಪ್ಸರೆಯರು, ಗಂಧರ್ವರು, ವಿದ್ಯಾಧರರು ಮತ್ತು ಮಹೋರಗರು ಆ ದಾರಿಯಲ್ಲಿ ಹೋಗುತ್ತಾರಂತೆ. ದೇವತಾರಾಧಕಾಃ, ಈ ಲೋಕದಲ್ಲಿ ಯಾರು ದೇವತೆಗಳನ್ನು ಆರಾಧನೆ ಮಾಡುತ್ತಾರೋ ಅವರಿಗೆ ಆ ದಾರಿ ತೆರೆದಿದೆ. ಶಿವಭಕ್ತಿ ಪಾರಾಯಣಾಃ, ಯಾರು ಶಿವನ ಭಕ್ತರೋ, ನಿಜವಾದ ಭಕ್ತಿ ಉಳ್ಳವರು ಅಲ್ಲಿ ಹೋಗುತ್ತಾರಂತೆ. ಮತ್ಯಾರು ಹೋಗುತ್ತಾರೆ ಅಂದರೆ, ಬಿರು ಬೇಸಿಗೆಯಲ್ಲಿ ಯಾರು ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಾರೋ, ತಮಗೆ ಬೇಕಾದವರಿಗೆ ಅಲ್ಲ, ಸಂಬಂಧವೇ ಇಲ್ಲದವರಿಗೆ, ದಾರಿಹೋಕರಿಗೆ, ಮಾರ್ಗ ಮಧ್ಯದಲ್ಲಿ ಬಾಯಾರಿ ಬಳಲಿದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವವರಿಗೆ ಆ ದಾರಿ ತೆರೆಯುತ್ತದೆ. ಮಾಘೇ ಕಾಷ್ಠ ಪ್ರದಾಯಿನಃ, ಚಳಿಗಾಲದಲ್ಲಿ ಮಿತಿ ಮೀರಿದ ಚಳಿಯಿದ್ದಾಗ, ಕಷ್ಟಪಡುವವರಿಗೆ ಮೈ ಬೆಚ್ಚಗೆ ಮಾಡಿಕೊಳ್ಳಲು ವ್ಯವಸ್ಥೆ ಮಾಡುವಂತವರು. ಬೆಂಕಿಯೋ ಅಥವಾ ಬಟ್ಟೆಯೋ ಅಂಥದ್ದನ್ನೆಲ್ಲ ಕೊಟ್ಟು, ಆ ಚಳಿಯಿಂದ ರಕ್ಷಣೆ ಕೊಡತಕ್ಕಂಥವರು. ಇದು ಉದಾಹರಣೆ. ಅಂತಹ ಉಪಕಾರಿಗಳಿಗೆ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಂತವರಿಗೆ ಆ ದಾರಿ ತೆರೆಯುತ್ತದೆ. ಹಾಗೆಯೇ, ಮಳೆಗಾಲ ಬಂದಾಗ ವಿರಕ್ತರು, ಸನ್ಯಾಸಿಗಳು ಅಂತಹವರಿಗೆ ಚಾತುರ್ಮಾಸ್ಯ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡುವಂತವರು, ಅವರಿಗೆ ಆಶ್ರಯ ಕಲ್ಪನೆ ಮಾಡಿ, ಇಡೀ ಚಾತುರ್ಮಾಸ್ಯ ವ್ರತವನ್ನು ನಡೆಯುವಂತೆ ಮಾಡತಕ್ಕಂತವರು, ದಾನಮಾನ ಮಾಡುವವರು, ಅವರಿಗೂ ಆ ದಾರಿ ತೆರೆದಿದೆ. ಅಷ್ಟು ಮಾತ್ರವಲ್ಲ, ಯಾರಾದರೂ ನೊಂದವರಿಗೆ ಸಮಾಧಾನ ಮಾಡುವಂತವರು, ದುಃಖಿತಸ್ಯ ಅಮೃತಮ್ ಬ್ರೂತೇ, ಅಮೃತ ಸದೃಶವಾದ ಮಾತನ್ನು ದುಃಖಿತನ ಬಳಿ ಹೋಗಿ ಆಡತಕ್ಕಂತವರು, ಹಾಗೆಯೇ, ಆಶ್ರಯ ಕೊಡುವವರು. ಸತ್ಯ-ಧರ್ಮರಥಾಃ, ಸತ್ಯ ಧರ್ಮಗಳಲ್ಲಿ ನಿರತರಾದವರು. ಕ್ರೋಧ, ಲೋಭ ಇಲ್ಲ. ಸಿಟ್ಟು ಬಿಟ್ಟವರು ಮತ್ತು ಲೋಭವನ್ನು ಮೀರಿದವರು. ಪಿತೃಮಾತೃಶ್ರೀಯ ಭಕ್ತಾಃ, ತಂದೆ-ತಾಯಿಯಲ್ಲಿ ಭಕ್ತಿಯನ್ನು ಇಟ್ಟವರು. ಯಾರು ತಂದೆ-ತಾಯಿಯ ಸೇವೆಯನ್ನು ಮಾಡುತ್ತಾರೋ ಅಂತವರು. ಇದಕ್ಕೊಂದು ಉದಾಹರಣೆ; ಶ್ರವಣಕುಮಾರ. ಕಣ್ಣು ಕಾಣದ ವೃದ್ಧ ತಂದೆ-ತಾಯಿಯರ ಸೇವೆಯನ್ನು ಶ್ರವಣಕುಮಾರ ಪರಿ ಪರಿಯಾಗಿ ಮಾಡುತ್ತಾನೆ. ಮೃಗಗಳು ನೀರು ಕುಡಿಯುವಾಗ ಬೇಟೆಯಾಡಬೇಕು ಎಂದು ದಶರಥ ಮರೆಯಲ್ಲಿ ನಿಂತು ಕಾಯುತ್ತಿದ್ದ. ಆಗ ಅವನಿಗೊಂದು ಶಬ್ದ ಕೇಳಿಬಂತು. ಶ್ರವಣಕುಮಾರ ತನ್ನ ವೃದ್ಧ ತಂದೆ-ತಾಯಿಯರಿಗೆ ಘಟವನ್ನು ತಂದು ನೀರು ತುಂಬಿಸುತ್ತಾ ಇದ್ದ. ಆದರೆ ದಶರಥ ಅದು ಯಾವುದೋ ಕಾಡುಪ್ರಾಣಿಯೆಂದು ಭಾವಿಸಿ, ಶಬ್ದವೇಧಿ ಮೂಲಕ ಬಾಣವನ್ನು ಪ್ರಯೋಗಮಾಡಿ, ಆತನ ಸಾವಿಗೆ ಕಾರಣನಾಗುತ್ತಾನೆ. ಆಗಲೂ ಶ್ರವಣಕುಮಾರ ಬಾಯಾರಿದ ತನ್ನ ಪಾಲಕರಿಗೆ ನೀರು ಕೊಡು ಎನ್ನುತ್ತಾನೆ. ದಶರಥ ಅವರಿಗೆ ನೀರನ್ನು ಕೊಟ್ಟು, ವಿಷಯ ತಿಳಿಸಿ ಅವರನ್ನು ಅಂತಿಮ ದರ್ಶನಕ್ಕಾಗಿ, ಸ್ಪರ್ಶಕ್ಕಾಗಿ ಶವದ ಬಳಿ ಕರೆತಂದಾಗ ಅವರು ತುಂಬಾ ದುಃಖಪಡುತ್ತಾರೆ. ಆಗ ಅಲ್ಲೊಂದು ದೃಶ್ಯ ನಡೆಯುತ್ತದೆ. ಏನೆಂದರೆ, ಶ್ರವಣಕುಮಾರ ಆ ಶವದಿಂದ ಮೇಲೆದ್ದು ದಿವ್ಯರೂಪವನ್ನು ಧರಿಸಿ, ತಾನು ಮಾಡಿದ ತಂದೆತಾಯಿಯ ಸೇವೆಯ ಫಲದಿಂದ ದಿವ್ಯರೂಪವನ್ನು ತಾಳಿ, ದೇವತಾಪುರುಷನಾಗಿ ಆಕಾಶಕ್ಕೆ ಏರುತ್ತಾನೆ. ಆತನನ್ನು ಕರೆದೊಯ್ಯಲು ದೇವತೆಗಳ ದೊರೆ ಇಂದ್ರನೇ ವಿಮಾನವನ್ನು ತೆಗೆದುಕೊಂಡು ಬಂದಿದ್ದ. ಆದರೆ ಅವನು ಸ್ವರ್ಗಕ್ಕೆ ಹೋಗುವ ಮುನ್ನ ದಿವ್ಯರೂಪವನ್ನು ತನ್ನ ತಂದೆ-ತಾಯಿಯರಿಗೆ ಗೋಚರಿಸಿ, ಅವರೊಂದಿಗೆ ಆತ ಮಾತನಾಡುತ್ತಾನೆ. ಅವರನ್ನು ಸಂತೈಸುತ್ತಾನೆ. ನೋಡಿ, ನನಗಿಷ್ಟು ಒಳ್ಳೆಯದಾಗಿದೆ, ಆ ಶರೀರ ಹೋಗಿ ಈ ದಿವ್ಯ ಶರೀರ ಬಂತು. ಈ ಮನುಷ್ಯ ಶರೀರ ತುಂಬಾ ದುರ್ಬಲ. ದೇವತಾ ಶರೀರದ ಎದುರು ಇದರ ಆಯುಸ್ಸು ತುಂಬಾ ಕಡಿಮೆ. ಹಾಗಾಗಿ, ತಂದೆ-ತಾಯಿಯರನ್ನು ಸಂತೈಸುತ್ತಾ ಆತ ಹೇಳುತ್ತಾನೆ, ನಿಮ್ಮ ಕಾರಣದಿಂದ, ನಿಮ್ಮ ಸೇವೆಯಿಂದ ನನಗೆ ಈ ಸ್ಥಾನ ಪ್ರಾಪ್ತವಾಯಿತು. ಆತ ತಪಸ್ಸು, ಯಾಗ, ದಾನ ಮಾಡಿರಲಿಲ್ಲ. ಆತ ಮಾಡಿದ್ದು ತನ್ನ ವೃದ್ಧ ಮತ್ತು ಅಂಧ, ಅಶಕ್ತ ತಂದೆ-ತಾಯಿಯರ ಸೇವೆ ಮಾತ್ರ. ನೀವೂ ಬರ್ತೀರಿ ನನ್ನ ಹಿಂದೆ, ಅತ್ಯಲ್ಪ ಸಮಯದಲ್ಲಿ ನಾನಿರುವಲ್ಲಿಗೆ ನೀವು ಕೂಡಾ ಬರುತ್ತೀರಿ. ಬೇಜಾರು ಮಾಡಬೇಡಿ ಅಂತಹೇಳಿ, ದಿವ್ಯವಿಮಾನದಲ್ಲಿ ಕ್ಷಿಪ್ರ ಗತಿಯಲ್ಲಿ ಸ್ವರ್ಗವನ್ನೇರಿದನಂತೆ ಶ್ರವಣಕುಮಾರ. ಇಂತವರಿಗೆ ಆ ದಾರಿ. ಯಮಲೋಕದ ಪೂರ್ವದಾರಿ ಇಂತಹ ಪಿತೃಮಾತೃ ಸೇವೆ ಮಾಡಿದವರಿಗೆ.
ಹಾಗೆಯೇ ಇನ್ನೊಂದು, ಗುರುಶುಶ್ರೂಷಣೇರಥಾಃ, ಯಾರು ಗುರು ಸೇವೆ ಮಾಡುತ್ತಾರೋ ಅವರಿಗೆ ಯಮಲೋಕದ ಪೂರ್ವದ್ವಾರ ತೆರೆದಿರುತ್ತದೆ. ಯಮನ ಸಭೆಯಲ್ಲಿ ಅವಕಾಶ ದೊರೆಯುತ್ತದೆ. ಅಂತಹ ಗುರುಸೇವೆಗೆ ಒಂದು ಉದಾಹರಣೆ; ಶಬರಿ. ಆಕೆಗೆ ರಾಮನ ದರ್ಶನವಾಗಲು ಕಾರಣ ಆಕೆ ಮಾಡಿದ ಗುರುಸೇವೆ. ಆಕೆಯನ್ನು ಸಿದ್ಧ ಎಂದು ಕರೆಯುತ್ತಿರುತ್ತಾರೆ ಏಕೆಂದರೆ ಅವಳು ಸಿದ್ಧಳು ದೇವಲೋಕ ಸೇರಲು. ರಾಮನನ್ನು ನೋಡಿ ಅವಳು ಹೇಳುತ್ತಾಳೆ, ಚಕ್ಷುಷಾ ತವ ಸೌಮ್ಯೇನಪೂತಾಸ್ಮೀ, ನಿನ್ನ ನೋಟದಿಂದ ನಾನು ಪವಿತ್ರಳಾಗಿಬಿಟ್ಟೆ. ನಿನ್ನ ಕೃಪೆಯಿಂದ ದಿವ್ಯಲೋಕವನ್ನು ಸೇರುತ್ತೇನೆ ಎಂದು ಹೇಳಿ, ಅವಳು ತನ್ನ ಗುರುಗಳ ಬಗ್ಗೆ ಹೇಳುತ್ತಾಳೆ. ನಾನು ತುಂಬಾ ದೊಡ್ಡ ತಪಸ್ವಿಗಳಾದ ಮತಂಗಮುನಿಗಳ ಸೇವೆ ಮಾಡುತ್ತಾ ಇದ್ದೆ. ಚಿತ್ರಕೂಟಕ್ಕೆ ನೀನು ಬರುತ್ತೀಯ ಎಂದು ಅವರು ನನ್ನನು ಕರೆದು ಹೇಳಿದರು. ನಾವು ಹೊರಟೆವು, ನಮ್ಮ ಆಯಸ್ಸು ಕಳೆಯಿತು. ಆದರೆ ನೀನು ಇಲ್ಲಿಯೇ ಇರು, ರಾಮ ಬರುತ್ತಾನೆ. ಶಬರಿಗೆ ರಾಮ ಬರುತ್ತಾನೆ ಎಂದು ಹೇಳಿದವರು ಆಕೆಯ ಗುರುಗಳು. ಇತಸ್ಥೇ ದಿವಮಾರೂಢಾಃ ಯಾನಹಂ ಪಯಾಚಾರಿಶಂ ನಾನು ಯಾರ ಸೇವೆಯನ್ನು ಮಾಡುತ್ತಿದ್ದೆನೋ, ಆ ಗುರುಗಳು ದಿವ್ಯವಿಮಾನವನ್ನೇರಿ ಸ್ವರ್ಗಕ್ಕೆ ಹೊರಡುವಾಗ, ನನಗೆ ಸೂಚನೆ ಕೊಟ್ಟರು. ಅವರು ಹೇಳಿದರು, ತೇ ಸುಪುಣ್ಯಂ ಇಮಮಾಶ್ರಮಂ ರಾಮಃ ಆಗಮಿಷ್ಯತಿ, ಇಲ್ಲಿ ರಾಮ ಬರ್ತಾನೆ. ರಾಮನಿಗೆ ನೀನು ಸೇವೆ ಮಾಡಬೇಕು, ಆತಿಥ್ಯವನ್ನು ಮಾಡಬೇಕು. ಅದರ ಫಲವಾಗಿ ನೀನು ಪುಣ್ಯಲೋಕಗಳಿಗೆ ಹೋಗುತ್ತೀಯಾ. ಎಂತಹ ಲೋಕ ಎಂದರೆ ಎಷ್ಟು ಕಾಲ ಇದ್ದರೂ ಆ ಪುಣ್ಯಗಳು ಮುಗಿಯದಂತಹ ಲೋಕಗಳು. ಸಾಮಾನ್ಯವಾಗಿ ಈ ಸ್ವರ್ಗಲೋಕಗಳಲ್ಲಿ ಪುಣ್ಯ ಖಾಲಿಯಾದ ನಂತರ ಮತ್ತೆ ಕೆಳಗಿಳಿದು ಬರಬೇಕಾಗುತ್ತದೆ. ಕ್ಷೀಣೇ ಪುಣ್ಯೇ ಮರ್ತ್ಯ ಲೋಕಂ ವಿಶಂತಿ, ಪುಣ್ಯ ಖಾಲಿ ಆದಮೇಲೆ ಈ ಲೋಕಕ್ಕೆ ಮತ್ತೆ ಬರಲೇಬೇಕು. ಆದರೆ ಶಬರಿಗೆ ಪ್ರಾಪ್ತವಾಗುವ ಲೋಕ ಅಕ್ಷಯ. ಅವುಗಳಿಗೆ ಕ್ಷಯವಿಲ್ಲ. ಇದೆಲ್ಲಾ ಹೇಳಿ, ರಾಮನ ಜೊತೆ ಸಂವಾದ ಮಾಡಿ ಅವನಿಗೆ ಎಲ್ಲವನ್ನ ತೋರಿಸುತ್ತಾಳೆ. ಅವಳ ಗುರುಗಳು ಇಂತವರು ಎಂದರೆ, ಅವರ ಬೆವರಿನ ಹನಿಗಳು ಬಿದ್ದಲ್ಲಿ ಹೂವುಗಳು ಅರಳಿದ್ದವಂತೆ. ಆ ಹೂವುಗಳು ಹದಿನಾಲ್ಕು ವರ್ಷಗಳಾದರೂ ಬಾಡಿಲ್ಲ. ಅವರು ದಿವಿಯನ್ನೇರುವಾಗ ತೊಳೆದು ಒಣಗಲು ಹಾಕಿದ ಬಟ್ಟೆ ಇಂದಿಗೂ ಒದ್ದೆಯಾಗಿಯೇ ಇವೆಯಂತೆ. ಅವರ ಅಂತಹ ಪ್ರಭಾವಗಳನ್ನು ಆಕೆ ತೋರಿಸುತ್ತಾಳೆ. ಅವರಿಗೆ ಸಪ್ತಸಮುದ್ರಗಳಲ್ಲಿ ಸ್ನಾನ ಮಾಡಬೇಕೆಂಬ ಆಸೆ ಇತ್ತಂತೆ. ಆದರೆ ಹೋಗುವ ಬಲವಿರಲಿಲ್ಲ. ಹಾಗಾಗಿ ಅವರು ಇರುವಲ್ಲಿಯೇ ಸಮುದ್ರಗಳೇ ಬಂದವಂತೆ. ಇವೆಲ್ಲವನ್ನೂ ಹೇಳಿ, ಆಕೆ ರಾಮನ ಬಳಿ ನಾನು ಹೂರಡಲಾ? ಎಂದು ಅನುಮತಿ ಕೇಳುತ್ತಾಳೆ. ಅನುಜ್ಞಾತಾ ತು ರಾಮೇಣ, ರಾಮ ಒಪ್ಪಿಗೆ ಕೊಟ್ಟ ಮೇಲೆ ಅಲ್ಲಿಯೇ ಸ್ಥಾಪಿಸಿದ ಅಗ್ನಿಯಲ್ಲಿ ತನ್ನನ್ನು ತಾನು ಹೋಮ ಮಾಡುತ್ತಾಳೆ ಅವಳು. ಅಲ್ಲಿ ಒಂದು ಕೌತುಕ ನಡೆಯುತ್ತದೆ. ಯಾವ ಅಗ್ನಿಕುಂಡದಲ್ಲಿ ಶಬರಿ ತನ್ನನ್ನು ತಾನು ಹೋಮ ಮಾಡುತ್ತಾಳೋ ಅಲ್ಲಿಂದಲೇ ಆಕೆ ಎದ್ದು ಬರುತ್ತಾಳೆ. ಎದ್ದು ಬರುವಾಗ, ದಿವ್ಯಾಭರಣಸಂಯುಕ್ತಾ, ದಿವ್ಯವಾದ ಆಭರಣಗಳನ್ನು, ಮಾಲೆಗಳನ್ನು ಧಾರಣೆ ಮಾಡಿದ್ದಾಳೆ. ಅನುಲೇಪನಾ, ದಿವ್ಯಗಂಧಪೂಸಿತಳು ಅವಳು, ದಿವ್ಯಾಂಬರಧರಾ, ದಿವ್ಯವಾದ, ಸೊಗಸಾದ ವಸ್ತ್ರಗಳನ್ನು ಧಾರಣೆ ಮಾಡಿದ್ದಾಳೆ. ಭಭೂವಪ್ರಿಯದರ್ಶನಾ, ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ರೂಪ ಆಕೆಗೆ ಬಂತು. ವಿರಾಜಯಂತಿ ತಮ್ ದೇಶಂ ವಿದ್ಯುತ್ಸೌದಾಮಿನೀಯಥಾಂ, ತನ್ನ ಪ್ರಭೆಯಿಂದ ಆ ಇಡೀ ಪ್ರದೇಶವನ್ನು ಬೆಳಗಿದಳಂತೆ. ಆಕೆಯ ಮೈಯಿಂದ ಹೊಮ್ಮಿದ ಪ್ರಭೆಗೆ ಕಾಡಿಗೆ ಕಾಡೇ ಬೆಳಗಿತು. ಅಂತಹ ಶಬರಿ ಮನೋಹರವಾದ ರೂಪಧಾರಣೆ ಮಾಡಿ ಆಕೆಯ ಗುರುಗಳ ಬಳಿ ಹೋಗುತ್ತಾಳೆ. ಅಲ್ಲಿಂದ ಮುಕ್ತಿಗೆ ಪ್ರಯಾಣ. ಇದು ಉತ್ತಮ ಗತಿ, ಸ್ವರ್ಗತಿ. ಇದು ಯಾವುದರಿಂದ ಬಂದಿದ್ದು? ಗುರುವಿನಿಂದ. ಹಾಗಾಗಿ ಯಾರು ಗುರು ಸೇವೆ ಮಾಡುತ್ತಾರೋ ಅವರಿಗೆ ಈ ಲೋಕಗಳು. ಹೀಗೆ ಇನ್ನು ತುಂಬಾ ಇದೆ. ಭೂಮಿದಾನ ಮಾಡಿದವರು, ಗೋದಾನ ಮಾಡಿದವರು, ಗೃಹದಾನ ಮಾಡಿದವರು, ವಿದ್ಯಾದಾನ ಮಾಡುವವರು, ಯಾವ ಅರಿವನ್ನು ಕೊಟ್ಟರೆ ಜೀವಕ್ಕೆ ಶ್ರೇಯಸ್ಸು ಆಗುವುದೋ ಅಂತಹ ವಿದ್ಯೆ ಕೊಟ್ಟವರು. ಪುರಾಣ ವಕ್ತು ಶ್ರೋತಾರಃ, ಪುರಾಣಗಳನ್ನು ಹೇಳುವವರು ಮತ್ತು ಕೇಳುವವರು, ಪಾರಾಯಣ ಪರಾಯಣಃ, ಸರಿಯಾದ ರೀತಿಯಲ್ಲಿ ಪಾರಾಯಣ ಮಾಡುವವರು, ಏತೇ ಸುಕೃತಿನಶ್ಚಾನ್ಯೇ ಪೂರ್ವದ್ವಾರೇ ವಿಶಂತಿ ಚ ಇವರೆಲ್ಲಾ ಪೂರ್ವದ್ವಾರದಲಿ ಇರುವವರು. ಮುಖ್ಯವಾಗಿ ಏನೆಂದರೆ ಬುದ್ಧಿ ಶುದ್ಧವಾಗಿರಬೇಕು. ಬುದ್ಧಿ ಕಲುಷಿತವಾದವರಿಗೆ ಇಲ್ಲಿ ಪ್ರವೇಶವಿಲ್ಲ. ಸುಶೀಲಾಃ, ನಡತೆ ಶುದ್ಧವಾಗಬೇಕು. ಯಾರ ನಡತೆ ಮತ್ತು ಬುದ್ಧಿ ಶುದ್ಧವೋ ಅವರಿಗೆ ಯಮಲೋಕದ ಪೂರ್ವದ್ವಾರದಿಂದ ಪ್ರವೇಶ. ಅವರಿಗೆ ಶೇಯಸ್ಸು.
ಇನ್ನೂ ಎರಡು ದ್ವಾರಗಳಿವೆ. ಅದನ್ನು ಮುಂದೆ ನೋಡೋಣ. ಆದರೆ ಮುಖ್ಯವಾಗಿ ನಾವು ನಿಮಗೆ ಹೇಳಬೇಕಾಗಿರುವುದು ಏನೆಂದರೆ, ಪುಣ್ಯಕರ್ಮಗಳನ್ನು ಮಾಡಿದಾಗ ಮುಂದೆ ಏನಾಗುತ್ತದೆ? ಇದು ಮುಂದಾಲೋಚನೆ, ದೂರದೃಷ್ಟಿ. ಏಕೆಂದರೆ ಜೀವಯಾನ – ಈ ಜೀವ ದೇಹವನ್ನು ಬಿಟ್ಟು ಯಾನಮಾಡುವಾಗ ಎಲ್ಲಿಗೆ ಹೋಗಬೇಕು?, ಹೇಗೆ ಹೋಗಬೇಕು?, ಆ ದಾರಿ ಹೇಗಿರಬೇಕು? ಎಂಬುದನ್ನು ಈಗಲೇ ತೀರ್ಮಾನ ಮಾಡಲು ಸಾಧ್ಯ. ನಮ್ಮ ಭವಿಷ್ಯವನ್ನು ನಾವು ನಿರ್ಮಾಣ ಮಾಡಲು ಸಾಧ್ಯ. ನಾವು ಉದಾಹರಣೆ ನೀಡಿದೆವಲ್ಲಾ ಗೋದಾನ, ವಿದ್ಯಾದಾನ, ಗುರುಸೇವೆ, ತಂದೆತಾಯಿ ಸೇವೆ, ಶಿವಭಕ್ತಿ ಅಂತಹ ಕೆಲಸಗಳನ್ನು ಮಾಡಿದರೆ, ಇವೆಲ್ಲಾ ನೀವು ಮಾಡತಕ್ಕಂತಹ ಕೆಲಸಗಳು ಮಕ್ಕಳೇ. ಇಂತಹ ಸೇವೆಗಳನ್ನು ಮಾಡಿದರೆ ಮುಂದೆ ನಿಮಗೆ ಒಳ್ಳೆಯದಾಗುತ್ತದೆ. ಎಷ್ಟು ಮುಂದೆ? ಅಂದರೆ, ನಿಮ್ಮ ಕಣ್ಣಿಗೆ ಕಾಣದಷ್ಟು ಮುಂದೆ ಹೋದಾಗ ಅಲ್ಲಿ ನಿಮಗೆ ಒಳ್ಳೆಯದಿರುತ್ತದೆ. ಬದುಕಿರುವಾಗಲು ಕೂಡಾ ಒಳ್ಳೆಯದೇ ಆಗುತ್ತದೆ ಆದರೆ ನಮಗೆ ಅತಿಯಾದ ಅವಶ್ಯಕತೆ ಇರುವ ಕಾಲ ಬರುತ್ತದಲ್ಲಾ, ದೇಹವೇ ಇಲ್ಲ ಎನ್ನುವಂತಹ ಕಾಲ ಬರುತ್ತದಲ್ಲಾ ಆಗ ನಿಜವಾದ ಶ್ರೇಯಸ್ಸು ಉಂಟಾಗುತ್ತದೆ. ಹಾಗಾಗಿ ಇವೆಲ್ಲವನ್ನೂ ಕೂಡಾ ನಾವು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಬೇಕು.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply