ಬೀಜವನ್ನು ಮರುಭೂಮಿಯಲ್ಲಿ ಹಾಕಬಾರದು; ಯಾಕೆಂದರೆ ಮರುಭೂಮಿಯಲ್ಲಿ ಹಾಕಿದರೆ ಬೀಜ ಸುಟ್ಟು ಹೋಗುತ್ತದೆ; ಸತ್ತು ಹೋಗುತ್ತದೆ. ಅದರಿಂದ ಗಿಡ ಬರುವುದಿಲ್ಲ; ಬೆಳೆ ಬೆಳೆಯುವುದಿಲ್ಲ. ಆದರೆ ಒಳ್ಳೆ ಫಲವತ್ತಾದ ಭೂಮಿಯಲ್ಲಿ ಹಾಕಿದರೆ ಸಮೃದ್ಧವಾಗಿ ಬೆಳೆದು; ಒಳ್ಳೆಯ ಬೆಳೆಯನ್ನು, ಒಳ್ಳೆಯ ಫಲವನ್ನು ಕೊಡುತ್ತದೆ. ನೀವೆಲ್ಲಾ ಮರುಭೂಮಿಯ ಥರ ಇಲ್ಲ; ನೀವೆಲ್ಲಾ ಫಲವತ್ತಾದ ಭೂಮಿಯ ಥರ ಇದ್ದೀರಿ. ಹಾಗಾಗಿ ವಿದ್ಯೆಯ ಬೀಜಗಳನ್ನು; ಜ್ಞಾನದ ಬೀಜಗಳನ್ನು ನಿಮ್ಮಲ್ಲಿ ನೆಡಬಹುದು.
ಒಂದು ಪ್ರಶ್ನೆ ಎಲ್ಲಾ ಕಡೆಯಲ್ಲಿ ಓಡಾಡುತ್ತಿದೆ. ಅದು ಏನೆಂದರೆ ನಚಿಕೇತ ಹೇಗೆ ನಡೆದುಕೊಂಡು ಹೋದ?! ಯಮಲೋಕಕ್ಕೆ ಹೇಗೆ ಹೋದ?! ಯಾವ ರೀತಿಯಲ್ಲಿ ಹೋದ?! ತುಂಬಾ ದೂರ ಇದೆ ಮತ್ತೆ ಅಲ್ಲಿಗೆ ಹೋಗುವುದು ಹೇಗೆ; ಹೋಗಿ ತಲುಪುವುದು ಹೇಗೆ ಅಲ್ಲಿಗೆ ಅಂತ. ಯಮಲೋಕಕ್ಕೆ ದೂರ ಎಷ್ಟು ಗೊತ್ತಾ ಇಲ್ಲಿಂದ? ಮಧ್ಯೆ ವೈತರಣಿ ಎಂಬ ನದಿ ಬರುತ್ತದೆ, ಅದರ ಲೆಕ್ಕ ಬಿಟ್ಟು ಎಂಬತ್ತಾರು ಸಾವಿರ (೮೬,೦೦೦) ಯೋಜನಗಳು. ಪಾಪಿ ಹೋಗಬೇಕಾದರೆ ಇಷ್ಟೂ ದೂರವೂ ನಡೆದುಕೊಂಡೇ ಹೋಗಬೇಕಂತೆ. ಈ ದೂರವನ್ನು ನಚಿಕೇತ ಹೇಗೆ ಕ್ರಮಿಸಿದ? ಹೇಗೆ ಅಲ್ಲಿ ಹೋಗಿ ಸೇರಿದ ಅಂದರೆ, ಅದು ಬೇರೆಯೇ ಪ್ರಪಂಚ; ಬೇರೆಯೇ ಲೋಕ ಅದು. ನಾವು ಈ ಲೋಕದಲ್ಲಿ ಓಡಾಡಿದ ಹಾಗೆ ಆ ಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಉದಾಹರಣೆಗೆ, ದೇಹವನ್ನು ತ್ಯಜಿಸಿ ಯಮಲೋಕಕ್ಕೆ ಹೋಗುವಾಗ ಕಾಲಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ; ರೀತಿ ಬದಲಾಗುತ್ತದೆ. ಈ ಭೂಲೋಕದ ವ್ಯವಹಾರ ಒಂದು ರೀತಿಯಲ್ಲಿ; ಈ ಭೂಲೋಕವನ್ನು ಮೀರಿ ಬೇರೆ ಲೋಕಗಳಿಗೆ ಹೋಗುವುದಾದರೆ ಅದು ತುಂಬ ಬೇರೆ ರೀತಿಯಾಗುತ್ತದೆ. ಹಾಗಾಗಿ, ಇಲ್ಲಿ ನಾವು ಹೋಗಲು ಲೆಕ್ಕ ಹಾಕಿದ ರೀತಿ ಅಲ್ಲಿ ಅನ್ವಯ ಆಗಬೇಕಾಗಿಲ್ಲ. ಕ್ಷಣ ಮಾತ್ರದಲ್ಲಿಯೂ ಹೋಗಬಹುದು; ತುಂಬಾ ಸಮಯವೂ ಕೂಡ ತೆಗೆದುಕೊಳ್ಳಬಹುದು. ಗತಿಸಿ ಹೋದವನಿಗೆ ಕೇವಲ ೨ ರಿಂದ ೩ ಘಳಿಗೆಯೊಳಗಡೆ ಯಮದೂತರು ಇಡೀ ಯಮಲೋಕದ ದರ್ಶನ ಮಾಡಿಸಿ ತಂದು ಪುನಃ ಸತ್ತಂತಹ ಸ್ಥಳಕ್ಕೆ ತಂದು ಬಿಡುತ್ತಾರಂತೆ. ಇದು ಸಾಧ್ಯ! ಅದೇ ಪುನಃ ಆತ (ಜೀವ) ಇಲ್ಲಿಂದ ಪ್ರಯಾಣ ಆರಂಭಿಸಿದಾಗ ಒಂದು ವರ್ಷ ಬೇಕಾಗುತ್ತದೆ ಯಮನ ಪಟ್ಟಣ ತಲುಪಲು. ಹಾಗಾಗಿ ನಾವು ಈ ದೃಷ್ಟಿಯಿಂದ ನೋಡಬಾರದು; ಈ ದೃಷ್ಟಿಗೆ ಯಮ ಗೋಚರಿಸುವುದಿಲ್ಲ; ಯಮಲೋಕವೂ ಗೋಚರಿಸುವುದಿಲ್ಲ. ಈ ತರ್ಕಗಳು ಅನ್ವಯ ಆಗುವುದಿಲ್ಲ. ಉದಾಹರಣೆಗೆ, ಸೂಕ್ಷ್ಮ ಜೀವಿಗಳು ಇವೆ; ಬ್ಯಾಕ್ಟೀರಿಯಾ ಇದೆ; ಅದು ಬರಿಗಣ್ಣಿಗೆ ಕಾಣಿಸುವುದಿಲ್ಲ. ನೀರಿನಲ್ಲಿ ಯಾವುದೋ ಒಂದು ಬ್ಯಾಕ್ಟೀರಿಯಾ ಇದೆ, ಕುಡಿಯಬಾರದು ಅಂದರೂ ನಮಗೆ ಕಣ್ಣಿಗೆ ಅದು ಕಾಣಿಸುವುದಿಲ್ಲ. ಅದಕ್ಕೆ ಬೇರೊಂದು ದೃಷ್ಟಿ ಬೇಕು. ಸೂಕ್ಷ್ಮದರ್ಶಕ ಯಂತ್ರ ಬೇಕು. ಹಾಗೇ ಯಮನ ಪ್ರಪಂಚವನ್ನು ನೋಡಲು, ಅಲ್ಲಿಗೆ ಹೋಗಲು ಬೇರೆಯೇ ದೃಷ್ಟಿ ಬೇಕು; ಬೇರೆಯೇ ನೋಟ ಬೇಕು. ಆದರೆ ಈ ಲೆಕ್ಕ ಬರುವುದಿಲ್ಲ ಅಲ್ಲಿ ಅನ್ನುವುದು ಈ ಸಮಯದಲ್ಲಿ ನೆನಪಿರಬೇಕು.
ನಚಿಕೇತನಿಗೆ ಅಲ್ಲಿಗೆ ಹೋಗಲು ಸಾಧ್ಯ ಆಯಿತು. ಯಾಕೆಂದರೆ ಅವನು ಸಾಮಾನ್ಯ ಬಾಲಕ ಅಲ್ಲ. ನಾವು ನಾವುಗಳು ನಮ್ಮನ್ನು ಸ್ಪೆಷಲ್ ಎಂದು ಅಂದುಕೊಂಡಿದ್ದೇವೆ. ಆದರೆ ನಚಿಕೇತನಂತಹವರು ನಿಜವಾಗಿ ಸ್ಪೆಷಲ್. ಹಾಗಾಗಿ ಆ ಶಕ್ತಿ; ಆ ಚೈತನ್ಯ ಅವನಿಗೆ ಇತ್ತು. ಮತ್ತೆ ಜೊತೆಯಲ್ಲಿ ದೈವ ಸಹಾಯ ಇತ್ತು.
ಮೂರು ಹಗಲು, ಮೂರು ರಾತ್ರಿ ನಚಿಕೇತನನ್ನು ಉಪವಾಸ ಕೆಡವಿದ್ದರ ಫಲ ಏನೆಂದರೆ ಯಮನಂತಹ ಯಮನೇ ಸೊನ್ನೆಯಾಗಿ ಬಿಡುತ್ತಾನೆ. ನೇರವಾಗಿ ಅವನು ಮಾಡಿದ್ದಲ್ಲ; ಆದರೆ ಅವನ ಮನೆಯಲ್ಲಿ ಆಗಿದೆ. ಗೊತ್ತಿದ್ದರೂ, ಗೊತ್ತಿಲ್ಲದಿದ್ದರೂ ಬೆಂಕಿ ಮುಟ್ಟಿದರೆ ಸುಡುತ್ತದೆ. ಅತಿಥಿ ಅಂದರೆ ಬೆಂಕಿ. ಹಾಗಾಗಿ ಅವನದೆಲ್ಲವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ. ಮಕ್ಕಳೆಂದರೆ ಭವಿಷ್ಯ; ಪಶುಗಳು ಅಂದರೆ ಉಪಕರಣಗಳು; ಸಾಧುಕೃತ್ಯ ಅಂದರೆ ಅವನ ಇಡೀ ಪುಣ್ಯ ಸಂಚಯ. ಮುಂದೆ ಶುಭವೇ ಇಲ್ಲ, ಏಕೆಂದರೆ ಏನೇ ಶುಭ ಆಗಬೇಕಾದರೆ ಪುಣ್ಯ ಇರಬೇಕಾಗುತ್ತದೆ; ಇಡೀ ಶುಭವೇ ಹೋದರೆ ಮುಂದೆ ಪುಣ್ಯವೇ ಇಲ್ಲ ಯಮನಿಗೆ. ಶುಭಾಶುಭಗಳನ್ನು ಕೊಡುವ ಯಮನಿಗೆ ಮುಂದೆ ಶುಭವೇ ಇಲ್ಲ. ಹೀಗಾಗುವ ಸಂದರ್ಭ ಬಂತು. ಇದರಿಂದ ಪಾರಾಗಲು ಯಮ ಒಂದು ದಾರಿಯನ್ನು ಹುಡುಕುತ್ತಾನೆ; ಏನೆಂದರೆ, ಮೂರು ವರಗಳನ್ನು ಕೊಡುವಂತಹ ಉಪಾಯ; ನಚಿಕೇತನನ್ನು ಶಾಂತ ಮಾಡುವುದಕ್ಕೆ; ನಚಿಕೇತಾಗ್ನಿಯನ್ನು ಶಮನ ಮಾಡುವುದಕ್ಕೆ. ನಚಿಕೇತನಿಗೆ ಮೂರು ದಿನದ ಉಪವಾಸದಲ್ಲಿ ಏನು ತಾಪ ಆಗಿರಬಹುದೋ ಆ ತಾಪವನ್ನು ತಣಿಸಲು ಯಮ ಮೂರು ವರಗಳನ್ನು ನಚಿಕೇತನಿಗೆ ಕೊಡಲು ಮುಂದಾಗುತ್ತಾನೆ. “ತಿಸ್ರೋ ರಾತ್ರೀಃ ಯದವಾತ್ಸೀರ್ಗೃಹೇಮಿ ಅನಶ್ನನ್ ಬ್ರಹ್ಮನ್ ಅತಿಥಿಃ ನಮಸ್ಯಃ”
ತಿಸ್ರೋ ರಾತ್ರೀಃ – ಮೂರು ರಾತ್ರಿಗಳ ಕಾಲ
ಯದವಾತ್ಸೀಃ ಗೃಹೇಮಿ – ನನ್ನ ಗೃಹದಲ್ಲಿ ನೀನು ವಾಸ ಮಾಡಿದ್ದೀಯ,
ಅನಶ್ನನ್ – ಊಟ, ಉಪಹಾರಗಳಿಲ್ಲದೆ;
ಬ್ರಹ್ಮನ್ – ನೀನು ಬ್ರಹ್ಮ ಸ್ವರೂಪಿ; ಬ್ರಹ್ಮಚಾರಿ ನೀನು,
ಅತಿಥಿಃ ನಮಸ್ಯ – ಅತಿಥಿ ನೀನು; ಅತಿಥಿ ಆದ ಕೂಡಲೇ ನಮಸ್ಕಾರಕ್ಕೆ ಯೋಗ್ಯನಾಗುತ್ತಾನೆ; ಪೂಜೆಗೆ ಯೋಗ್ಯನಾಗುತ್ತಾನೆ ಅವನು.
“ನಮಸ್ತೇಸ್ತು ಬ್ರಹ್ಮನ್ ಸ್ವಸ್ತಿಮೇಸ್ತು ತಸ್ಮಾತ್ ಪ್ರತಿ ತ್ರೀನ್ವರಾನ್ ವೃಣೀಶ್ವ”
ನಮಸ್ತೇಸ್ತು ಬ್ರಹ್ಮನ್ – ನಚಿಕೇತನಿಗೆ ಯಮ ನಮಸ್ಕಾರ ಮಾಡುತ್ತಾನೆ. ಬ್ರಹ್ಮಸ್ವರೂಪನೇ ನಿನಗೆ ನಮಸ್ಕಾರ.
ಸ್ವಸ್ತಿಮೇಸ್ತು – ನನಗೆ ಒಳ್ಳೆಯದಾಗಲಿ.
ತಸ್ಮಾತ್ ಪ್ರತಿ ತೀನ್ವರಾನ್ ವೃಣೀಶ್ವ – ಈ ಮೂರು ದಿನದ ಉಪವಾಸಕ್ಕೆ ಪ್ರತಿಯಾಗಿ ಮೂರು ವರಗಳನ್ನು ಯಾಚಿಸು.
ಯಮನಿಗೂ ನಿಯಮಗಳಿವೆ. ನಿಯಮಗಳು ಕೇವಲ ನಮಗೆ ಮಾತ್ರವಲ್ಲ, ಯಮನಿಗೂ ಅನ್ವಯ ಆಗುತ್ತವೆ. ಇನ್ನೊಂದು ಸಂಗತಿ ಏನೆಂದರೆ ಯಮರಾಜ ಕಟುಕನಲ್ಲ. ನಮಗೆಲ್ಲಾ ಯಮ ಎಂದರೆ ಭೀಕರ, ಕ್ರೂರ ಎಂಬ ಚಿತ್ರಣವಿದೆ. ಆದರೆ ಹಾಗೇನಲ್ಲ, ಯಮನಿಗೆ ಹೃದಯವಿದೆ. ನಚಿಕೇತನ ಹಸಿವಿಗೆ ಸ್ಪಂದಿಸುವ ಅವನ ಮಾತೃ ಹೃದಯ ಇದಕ್ಕೆ ಸಾಕ್ಷಿ. ಕಠೋರತೆ ಇಲ್ಲ ಅಂತಲ್ಲ, ಕರ್ತವ್ಯದ ನೇರದಲ್ಲಿ ಕಠೋರತೆ ಇದೆ; ಆದರೆ ಉಳಿದಂತೆ ಕಠೋರನಲ್ಲ ಅವನು. ದೇವತೆ ಅವನು. ಪಾಪಗಳ ವಿಷಯದಲ್ಲಿ ಕಠೋರ. ಮಾಡಿದ ತಪ್ಪುಗಳಿಗೆ ದಂಡನೆ ಅದು. ಉದಾಹರಣೆಗೆ, ದೇಹದೊಳಗಡೆ ಒಂದು ಗಡ್ಡೆ ಆಗಿದೆ, ಅದನ್ನು ತೆಗೆಯಲೇ ಬೇಕು. ನನ್ನೊಳಗೆ ನೀನು ಹುಟ್ಟಿ ಬಂದಿದ್ದೀಯ, ನೀನಿಲ್ಲೆ ಇರು ಎಂದು ಅದನ್ನು ನಾವು ಪ್ರೀತಿಯಿಂದ ಇಟ್ಟುಕೊಳ್ಳುತ್ತೇವೆಯೇ? ತಾಯಿ ತನ್ನ ಮಗುವನ್ನು ಪ್ರೀತಿ ಮಾಡುತ್ತಾಳೆ; ತನ್ನ ಹೊಟ್ಟೆಯಲ್ಲಿ ಹುಟ್ಟಿದೆ, ತನ್ನ ಕಂದ, ತನ್ನ ಜೀವ, ತನ್ನ ಬಂಗಾರ ಎಂದು. ಅದೇ ಥರ ಹೊಟ್ಟೆಯೊಳಗೆ ಗಡ್ಡೆ ಆದರೆ ಪ್ರೀತಿ ಮಾಡುತ್ತೇವೆಯೇ? ತೆಗೆಯುತ್ತೇವೆ ಅದನ್ನು. ತೆಗೆಯಬೇಕಾದರೆ ಹಾಗೆ ಹೋಗುವುದಿಲ್ಲ ಅದು, ಅದಕ್ಕೆ ಶಸ್ತ್ರ ಬೇಕು; ಶಸ್ತ್ರಚಿಕಿತ್ಸೆ ಬೇಕು; ವೈದ್ಯ ಬೇಕು. ಆ ಹೊತ್ತಿಗೆ ಪಾಪ, ಹೊಟ್ಟೆ ಕೊಯ್ಯಬೇಕಲ್ಲ ಎಂದು ವೈದ್ಯನಿಗೆ ಕನಿಕರ ಬಂದು ಬಿಟ್ಟರೆ ಒಳ್ಳೆದಾಗುತ್ತದೆಯೇ? ಹಾಗಾಗಿ ವೈದ್ಯನ ಕನಿಕರಕ್ಕೆ ರೂಪ ಯಾವುದೆಂದರೆ ಚಾಕುವಿನಿಂದ ಅದನ್ನು ಕತ್ತರಿಸುವುದು. ಯಾಕೆಂದರೆ ಅದನ್ನು ಮಾಡದೆ ಗಡ್ಡೆಯನ್ನು ಹೊರಗೆ ತೆಗೆದು ಹಾಕಲು ಸಾಧ್ಯವಿಲ್ಲ. ಯಮ ಎಂದರೂ ಹಾಗೆ. ಯಮ ಎಂದರೆ ವೈದ್ಯ; ಶಸ್ತ್ರಚಿಕಿತ್ಸೆ ಮಾಡುತ್ತಾನೆ ಜೀವಗಳಿಗೆ; ಆತ್ಮಕ್ಕಂಟಿದ ಪಾಪವನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದು ಹಾಕುತ್ತಾನೆ. ಅಂತಹ ಕರುಣಾಳು ವೈದ್ಯ. ಅವನ ಕ್ರೂರತೆ, ಕಠೋರತೆ ಕೂಡ ಕರುಣೆಯೇ; ಬೇರೆ ಏನೂ ಅಲ್ಲ. ಯಮನ ಇನ್ನೊಂದು ಮುಖ, ವ್ಯಕ್ತಿತ್ವ ಇದೆಯಲ್ಲ ಅದು ಈ ಪ್ರಕರಣದಲ್ಲಿ ಗೊತ್ತಾಗುವಂತಹದ್ದು. ಯಮನಲ್ಲಿ ಎಂತಹ ಒಂದು ಭಾವ ಇದೆ; ಮತ್ತೆ ಎಂತಹ ಧರ್ಮನಿಷ್ಠೆ ಇದೆ ಅವನಲ್ಲಿ; ನಿಯಮಗಳನ್ನು ಅವನು ಹೇಗೆ ಪಾಲಿಸುತ್ತಾನೆ ಎಂಬುದು ಗೊತ್ತಾಗುತ್ತದೆ ಇಲ್ಲಿ. ಯಮ ಎಂದರೆ ನಿಯಮ. ಆ ನಿಯಮಗಳಿಗೆ ವ್ಯತ್ಯಾಸವೇ ಇಲ್ಲ. ಉದಾಹರಣೆಗೆ, ಒಂದು ಜೀವ ತೆಗೆದುಕೊಂಡು ಹೋಗಬೇಕು; ಆಯಸ್ಸು ಮುಗಿದಿದೆ, ಒಂದು ಕಾಫಿ ಕುಡಿದು ಬರುತ್ತೇನೆಂದರೆ ಬಿಡುತ್ತಾನ ಯಮ? ಇಲ್ಲ, ಸಮಯ ಮುಗಿಯಿತು ಎಂದರೆ ಮುಗಿಯಿತು. ರಾಜನಾಗಲಿ, ರಂಕನಾಗಲಿ, ಏನೂ ವ್ಯತ್ಯಾಸವಿಲ್ಲ.
ಹಾಗೇ ಮೂರು ವರಗಳನ್ನು ಕೇಳು ಅಂದಾಗ, ನಚಿಕೇತ ಒಂದೊಂದಾಗಿ ವರಗಳನ್ನು ಕೇಳುತ್ತಾನೆ. ಒಂದನೆಯ ವರ ಏನೆಂದರೆ,
ಶಾಂತಸಂಕಲ್ಪಸ್ಸುಮನಾಯತಾಸ್ಯಾತ್
ವಿಹಿತಮನ್ಯುರ್ಗೌತಮೋಮಾಭಿ ಮೃತ್ಯೋ |
ತ್ವತ್ಪ್ರಸಿಷ್ಟಂ ನಾಭಿವಧೇತ್ಪ್ರತೀತಃ
ಏತತ್ರಯಾಣಾಮ್ ಪ್ರಥಮಂ ವರಂ ವೃಣೇ ||
ಎಂಬುದಾಗಿ ಮೊಟ್ಟ ಮೊದಲ ವರ ಕೇಳಿದ. “ನಮ್ಮ ಅಪ್ಪ ಶಾಂತನಾಗಬೇಕು; ನಮ್ಮ ಅಪ್ಪನಿಗೆ ಒಳ್ಳೆಯ ಮನಸ್ಸು ಬರಬೇಕು; ನಮ್ಮಪ್ಪ ನೀನು ಕಳುಹಿಸಿಕೊಟ್ಟ ನನ್ನನ್ನು ನೋಡಿ ಪ್ರೀತಿಯಿಂದ ಮಾತನಾಡಿಸಬೇಕು; ನನ್ನ ಮೇಲೆ ಅವನಿಗೆ ಕೋಪ ಉಳಿಯಬಾರದು;” ಇದು ಮೊದಲನೆಯ ವರ. ಸೂಕ್ಷ್ಮವಾಗಿ ಗಮನಿಸಿದಾಗ ಈ ವರದಲ್ಲಿ ಎರಡು ಅಂಶ ಸೇರಿದೆ. ಒಂದು ಅಂಶ ಏನೆಂದರೆ, ನಚಿಕೇತ ಮತ್ತೆ ವಾಪಸ್ಸು ಹೋಗಬೇಕು; ಮನೆಗೆ ಹೋಗಿ ತಂದೆಯನ್ನು ಭೇಟಿ ಮಾಡಬೇಕು. ನಚಿಕೇತ ಇಹಲೋಕಕ್ಕೆ ಮರಳುವಂತಹದ್ದು ವರದ ಒಂದು ಭಾಗ. ಇನ್ನೊಂದು ಭಾಗ ಅಪ್ಪನ ಸಿಟ್ಟು ಇಳಿಯಬೇಕು; ಒಳ್ಳೆಯ ಮನಸ್ಸು ಬರಬೇಕು ಅಪ್ಪನಿಗೆ. ಸಿಟ್ಟಿದ್ದರೆ ಒಳ್ಳೆಯ ಮನಸ್ಸು ಅಲ್ಲ ಅದು, ಮನಸ್ಸು ಕೆಟ್ಟಿದೆ ಅಂಥ ಅರ್ಥ ಅದಕ್ಕೆ. ಕೆಟ್ಟ ಮನಸ್ಸಲ್ಲ; ಸುಟ್ಟ ಮನಸ್ಸಲ್ಲ; ಶುಭವಾದ ಮನಸ್ಸು, ಹೂವಿನಂತಹ ಮನಸ್ಸು ಬರಬೇಕು. ಸುಮನಃ ಶಬ್ಧಕ್ಕೆ ಹೂವು ಅಂತಲೂ ಅರ್ಥವಿದೆ.
ಸುಮನಾಯತಾಸ್ಯಾತ್ – ಹೂ ಮನಸ್ಸು ಬರಬೇಕು ಅಪ್ಪನಿಗೆ ಅಂತ. ಇದು ಹೇಗಾಯಿತು ಗೊತ್ತಾ? ಟೂ ಇನ್ ಒನ್ ಅಂತ ಆಯಿತು. ಕೇಳಿದ್ದು ಒಂದೇ ವರ, ಆದರೆ ಸಿಕ್ಕಿದ್ದು ಎರಡು ವರ. ಆ ರೀತಿ ಇದೆ ಇದು.
ಒಂದು ಕಥೆ ಇದೆ, ಯಾರೋ ಒಬ್ಬ ಕುರುಡ, ಅವನಿಗೆ ಮಕ್ಕಳು ಆಗಿರಲಿಲ್ಲ. ಬಡವ ಬೇರೆ. ತಪಸ್ಸು ಮಾಡುತ್ತಾನೆ. ತಪಸ್ಸು ಮಾಡಿ ವರ ಕೇಳುವ ಹೊತ್ತು ಬಂದಾಗ, ದೇವರು ಪ್ರತ್ಯಕ್ಷವಾಗಿ ಒಂದು ವರ ಕೇಳು ಎಂದು ಹೇಳುತ್ತಾನೆ. ಒಂದು ವರ ಎಂದರೆ, ಯಾವುದನ್ನು ಕೇಳುವುದು ಎನ್ನುವ ಚಿಂತನೆ ಅವನಿಗೆ, ಕಣ್ಣು ಕೇಳುವುದೋ, ಮಕ್ಕಳನ್ನು ಕೇಳುವುದೋ, ಐಶ್ವರ್ಯ ಕೇಳುವುದೋ; ಏನನ್ನು ಕೇಳುವುದು ಎಂದು ತುಂಬಾ ತಲೆ ಕೆಡಿಸಿಕೊಂಡು, ಏನು ವರ ಕೇಳಿದ ಗೊತ್ತಾ? ನನ್ನ ಮೊಮ್ಮಗನ ಮೊಮ್ಮಗನು ಚಿನ್ನದ ಬಟ್ಟಲಲ್ಲಿ ಊಟ ಮಾಡುವುದನ್ನು ನಾನು ನೋಡಬೇಕು ಎಂದು. ಎಲ್ಲಾ ಇದೆ ಈ ವರದಲ್ಲಿ. ನೋಡಬೇಕೆಂದರೆ, ಕಣ್ಣು ಬಂತು ಅವನಿಗೆ; ಮೊಮ್ಮಗನ ಮೊಮ್ಮಗ ಅಂದರೆ, ಸಂತಾನ, ಆಯುಸ್ಸು ಬಂತು; ಚಿನ್ನದ ಬಟ್ಟಲು ಅಂದರೆ, ಐಶ್ವರ್ಯ ಬಂತು. ತ್ರೀ ಇನ್ ಒನ್ ಅದು. ಅಂತಹ ವರ ಅದು. ಹಾಗೇ ನಚಿಕೇತ ಕೇಳಿದ್ದು ಕೂಡ ಹಾಗೆ, ಎಷ್ಟೊಂದು ಜಾಣ ನಚಿಕೇತ! ವಾಪಸ್ಸು ಮನೆಗೆ ಹೋಗುವ ವ್ಯವಸ್ಥೆಯನ್ನೂ ಮಾಡಿಕೊಂಡ, ಜೊತೆಗೆ ಅಪ್ಪನ ಕೋಪ ಶಾಂತ ಮಾಡಬೇಕು. “ಮೃತ್ಯವೇ ತ್ವಾಂ ದದಾಮಿ” ಎನ್ನುವಂತಹ ಅಪ್ಪನ ಕೋಪ. ನಿನ್ನನ್ನು ಸಾವಿಗೆ ಕೊಟ್ಟು ಬಿಟ್ಟೆ ಎಂಬಂತಹ ಅಪ್ಪನ ಕೋಪ ನಚಿಕೇತನಿಗೆ ಮನಸ್ಸಲ್ಲಿ ಇದೆ. ಹಾಗಾಗಿ ಅವನು ಆ ವರವನ್ನು ಕೇಳುತ್ತಾನೆ. ಅದಕ್ಕೆ ಯಮ ಆಯಿತು ಎಂದು ಉತ್ತರಿಸಿದನಂತೆ. “ಯಥಾ ಪುರಸ್ತಃದ್ಭವಿತಾ ಪ್ರತೀತಃ” ಮೊದಲು ಹೇಗೆ ನಿಮ್ಮಪ್ಪ ಪ್ರೀತಿಯಿಂದ, ವಿಶ್ವಾಸದಿಂದ ಇದ್ದನೋ, ಹಾಗೆ ಆಗುತ್ತಾನೆ ಅವನು. ಹಾಗೇ
“ಸುಖಂ ರಾತ್ರೀಶ್ಶೈತಾವಿಹಿತಮನ್ಯುಃ ತ್ವಾಂ ದದೃಶವಾನ್ ಮೃತ್ಯು ಮುಖಾತ್ಪ್ರಮುಕ್ತಮ್” ಮೃತ್ಯುವಿನ ಮುಖದಿಂದ ಹೊರಗೆ ಬಂದ; ಮೃತ್ಯುವಿನ ಬಾಯಿಗೆ ಹೋಗಿ ಹೊರಗೆ ಬಂದ ನಿನ್ನನ್ನು ಕಂಡ ನಿನ್ನ ತಂದೆ, ವಿಹಿತಮನ್ಯುಃ – ತನ್ನ ಕೋಪವನ್ನು, ತಾಪವನ್ನು ಎಲ್ಲಾ ಕಳೆದುಕೊಂಡು ಶಾಂತನಾಗಿ ಸುಖವಾಗಿ, ರಾತ್ರೀಶ್ಶೈತಾ – ನಿದ್ದೆ ಮಾಡುತ್ತಾನೆ ಒಳ್ಳೆಯ ರೀತಿಯಲ್ಲಿ; ಪ್ರೀತಿಯಿಂದ ಇರುತ್ತಾನೆ ನಿನ್ನ ಜೊತೆಯಲ್ಲಿ ಎಂಬುದಾಗಿ ವರವನ್ನು ಕೊಟ್ಟ.
ಮೊದಲ ವರ ಇಹಲೋಕಕ್ಕಾಗಿ; ಮೊದಲ ವರ ತನ್ನ ತಂದೆಗಾಗಿ. ಈ ವರದ ಪ್ರಯೋಜನ ಯಾರಿಗೆ? ನಚಿಕೇತನ ತಂದೆಗೆ ಪ್ರಯೋಜನ. ಯಾಕೆಂದರೆ, ನಚಿಕೇತ ಇವುಗಳನ್ನು ಮೀರಿದ್ದ, ಇವುಗಳನ್ನು ದಾಟಿದ್ದ ಎಂಬುದು ಗೊತ್ತಾಗುತ್ತದೆ ನಮಗೆ ಮುಂದೆ. ಮುಂದಿನ ವರಗಳನ್ನೆಲ್ಲ ನೋಡಿದರೆ, ನಚಿಕೇತ ತುಂಬಾ ಸೀಮಿತ ಎಂದು ಅನಿಸುವುದಿಲ್ಲ ನಮಗೆ. ಹಾಗಾಗಿ ಈ ವರದ ಫಲ ಅವನ ತಂದೆಗೆ. ತಂದೆಗೆ ಎರಡು ಲಾಭ; ಒಂದು ನಚಿಕೇತ ಮರಳಿ ಸಿಗುವಂತಹದ್ದು. ಇನ್ನೊಂದು ಒಳ್ಳೆಯ ಮನಸ್ಸು ಬರುವಂತಹದ್ದು. ಅವನ ತಂದೆಯ ಸಮಸ್ಯೆ ಏನು ಹೇಳಿ? ಮನಸ್ಸು ಚೆನ್ನಾಗಿಲ್ಲ, ಅದೇ ಸಮಸ್ಯೆ. ಮನಸ್ಸು ಚೆನ್ನಾಗಿದ್ದರೆ, ಅಂತಹ ಹಸುಗಳನ್ನು ದಾನ ಕೊಡುತ್ತಾನೆಯೋ? ಹಾಲು ಕೊಡುವಷ್ಟು ಕೊಟ್ಟಾಗಿದೆ, ಹುಲ್ಲು ತಿನ್ನುವಷ್ಟು ತಿಂದಾಗಿದೆ, ನೀರು ಕುಡಿಯುವಷ್ಟು ಕುಡಿದಾಗಿದೆ; ಕಣ್ಣು, ಕೈ, ಕಾಲು ಯಾವುದೂ ಸರಿ ಇಲ್ಲ, ಇಂತಹ ಹಸುಗಳನ್ನು ದಾನ ಕೊಡಬೇಕಾದರೆ ಒಳ್ಳೆಯ ಮನಸ್ಸಿದೆ ಎನ್ನಲು ಸಾಧ್ಯವೇ? ಏನೋ ಮನಸ್ಸು ವ್ಯತ್ಯಾಸ ಆಗಿದೆ ಅಲ್ಲಿ. ಹಾಗಾಗಿ ಅವನ ಮನಸ್ಸು ಒಳ್ಳೆದಾಗುವಂತದ್ದು ಜೊತೆಗೆ ಮಗ ಮತ್ತೆ ಮರಳಿ ಮನೆಗೆ ಬರುವಂತಹದ್ದು. ಅವನ ಚ್ಯುತಿ ತಪ್ಪಿನಿಂದ ಆಗಿರುವಂತದ್ದು ಅದು. ಮೃತ್ಯುವಿಗೆ ಕೊಟ್ಟೆ ನಿನ್ನನ್ನು ಎಂದು, ಸಿಟ್ಟಿಗೆ ಬುದ್ಧಿ ಕೊಟ್ಟು ಹೇಳಿರುವಂತಹ ಮಾತು ಅದು. ಮಿಸ್ಟೇಕ್ ಅಲ್ಲ ಅದು, ಬ್ಲಂಡರ್; ಸಣ್ಣ ತಪ್ಪಲ್ಲ ಅದು, ಮಹಾಪರಾಧ. ಅದೂ ಕೂಡ ಶಮನಗೊಂಡು, ತಂದೆಗೆ ಮಗ ಸಿಗುವಂಥಹದ್ದು ಬಹಳ ದೊಡ್ಡ ವರ ಅದು. ಮತ್ತೆ ನಚಿಕೇತ ತನ್ನ ತಂದೆಗೆ ತನ್ನ ಬಗ್ಗೆ ಒಳ್ಳೆಯ ಮನಸ್ಸು ಬರಬೇಕು, ಪ್ರೀತಿ ಬರಬೇಕು ಎಂದು ಕೇಳಿದ. ಅಲ್ಲೊಂದು ಸಂದೇಶ ಇದೆ ನಮಗೆ. ಅದೇನೆಂದರೆ, “ತಂದೆ ತಾಯಿಯ ಆಶೀರ್ವಾದ ಬೇಕು”. ತಂದೆ, ತಾಯಿ, ಗುರು; ಈ ಮೂರು ಕಣ್ಣಿಗೆ ಕಾಣುವ ದೇವತೆಗಳು. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ.ಅತಿಥಿದೇವೋಭವವೂ ಹೌದು. ಆದರೆ ಪ್ರಸಿದ್ಧವಾದದ್ದು ತಂದೆ, ತಾಯಿ, ಗುರು. ಈ ಮೂವರ ಆಶೀರ್ವಾದ ಬೇಕು. ಒಂದು ಘಟನೆ ನಡೆದೇ ಹೋಯಿತು ಎಂದುಕೊಳ್ಳಿ, ಮಠದಲ್ಲಿ ಒಂದು ಮಾತಿದೆ ತಪ್ಪು ಯಾರದ್ದೇ ಇರಲಿ ಶಿಷ್ಯರು ಕಾಯಿಯನ್ನು ಇಡಬೇಕು. ಅದರ ಅರ್ಥ ಗುರು ತಪ್ಪು ಮಾಡುತ್ತಾನೆ ಎಂದಲ್ಲ. ಹಾಗೊಮ್ಮೆ ನಿಮ್ಮ ಮನಸ್ಸಿನಲ್ಲಿ ತಪ್ಪು ಗುರುಗಳದ್ದೇ ಎಂಬ ಭಾವವಿದ್ದರೂ ಕೂಡಾ ಕಾಯಿ ಇಡಬೇಕಾದವನು ಶಿಷ್ಯನೇ. ಹಾಗೇ ಯಾರದ್ದೇ ತಪ್ಪಿರಲಿ ನಾವು ಇರುವ ಹಾಗೇ ಇರಬೇಕು, ನಾವು ನಡೆವಂತೆ ನಡೆದುಕೊಳ್ಳಬೇಕು, ಏಕೆಂದರೆ ಆಶೀರ್ವಾದ ನಮಗೆ ಬೇಕು. ನಮ್ಮ ಆಶೀರ್ವಾದ ನಮ್ಮ ಅಪ್ಪ ಅಮ್ಮಂದಿರಿಗೆ ಬೇಕಾ? ಶಾಸ್ತ್ರಗಳು ತಂದೆತಾಯಿಯರ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಮಕ್ಕಳಿಗೆ ಹೇಳುವಂತಹದ್ದು. ಏನೋ ಒಂದು ಘಟನೆ ನಡೆದು ಹೋಗುತ್ತದೆ, ಏನೋ ಒಂದು ಮಾತು ಬರುತ್ತದೆ, ಮಾತು ಹೋಗುತ್ತದೆ, ತಪ್ಪು ನಿಮ್ಮದಿಲ್ಲ ಎಂದುಕೊಳ್ಳಿ ಆದರೂ ಕೂಡಾ ನೀವು ಅವರನ್ನು ಒಲಿಸಿಕೊಳ್ಳಬೇಕು. ನೀವು ಅವರ ಮನಸ್ಸನ್ನು ಸಂತೋಷಪಡಿಸಬೇಕು. ಆ ಭಾದ್ಯತೆ, ಆ ಕರ್ತವ್ಯ ನಿಮಗಿದೆ. ಅವರ ಆಶೀರ್ವಾದ ಇಲ್ಲದಿದ್ದರೆ ಜೀವನದಲ್ಲಿ ಒಳ್ಳೆಯದಾಗುವುದಿಲ್ಲ. ಜೀವಕ್ಕೆ ಶ್ರೇಯಸ್ಸು ಆಗುವುದಿಲ್ಲ. ಹಾಗಾಗಿ ತಂದೆಯ ಆಶೀರ್ವಾದ ಮುಖ್ಯ. ಅದಕ್ಕಿಂತ ಮುಖ್ಯ ತಾಯಿಯ ಆಶೀರ್ವಾದ. ಇನ್ನೂ ಮುಖ್ಯ ಗುರುವಿನ ಆಶೀರ್ವಾದ. ಮೂರೂ ಕೂಡಾ ಬಹಳ ಮುಖ್ಯವೇ. ಯಾವುದು ಹೆಚ್ಚು ಯಾವುದು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತು ಎಲ್ಲಕ್ಕಿಂತ ತುಂಬಾ ಮುಖ್ಯವಾದದ್ದು, ರಾಮನ ಭಾಷೆಯಲ್ಲಿ ಹೇಳುವುದಾದರೆ, ಸೀತೆಗೆ ರಾಮ ತಾನು ವನವಾಸಕ್ಕೆ ಹೊರಟೆ ಎಂದು ಹೇಳುವಾಗ ಈ ಮಾತನ್ನು ಹೇಳುತ್ತಾನೆ; ಪ್ರತ್ಯಕ್ಷವಾದ ದೇವರು ಇದು. ಇದನ್ನು ಆರಾಧನೆ ಮಾಡದೇ ಅಪ್ರತ್ಯಕ್ಷವಾದ ದೇವರನ್ನ ಆರಾಧನೆ ಮಾಡುವುದರಲ್ಲೇನಿದೆ!? ಕಣ್ಣಿಗೆ ಕಾಣದ ದೇವರನ್ನು ನಾವು ಆರಾಧನೆ ಮಾಡುತ್ತೇವೆ, ಆದರೆ ಕಾಣುವ ದೇವರನ್ನು ಮೊದಲು ಆರಾಧನೆ ಮಾಡಬೇಡವೇ? ಹಾಗಾಗಿ “ಪ್ರತ್ಯಕ್ಷ ದೈವತಾಃ”. ಪಿತೃ, ಮಾತೃ, ಗುರು ಶಾಪಗ್ರಸ್ಥನಿಗೆ ಇಹ, ಪರಗಳಿಲ್ಲ. ಹಾಗಾಗಿ ಆಶೀರ್ವಾದ ಬೇಕು ಎನ್ನುವ ಸಂದೇಶ ನಚಿಕೇತನದ್ದಾಗಿದೆ.
ಎರಡನೇ ವರ, ನಚಿಕೇತ ಏನು ಕೇಳಿದ? ಎಂದರೆ “ಯಮರಾಜ ನಿನ್ನನ್ನ ದಾಟಿ ಹೋಗುವುದು ಹೇಗೆ? ನಿನ್ನಿಂದ ಶಿಕ್ಷೆಗೆ ಒಳಗಾಗದೆ ಇರುವುದು ಹೇಗೆ? ನಿನ್ನದು ಯಮಲೋಕ, ನರಕಲೋಕ; ಸ್ವರ್ಗಲೋಕಕ್ಕೆ ಹೋಗಬೇಕು, ಸೇತುವೆ ಕಟ್ಟಿಕೊಡುತ್ತೀಯಾ?” ಎಂದು ಕೇಳುತ್ತಾನೆ ನಚಿಕೇತ. ಬೇಡ ಒಂದು ವಿಮಾನ, ಆ ವಿಮಾನದಲ್ಲಿ ಕುಳಿತು ನಿನ್ನ ಭೇಟಿಯಾಗದೇ ಸ್ವರ್ಗಕ್ಕೆ ಹೋಗಬೇಕು, ಅಲ್ಲಿ ವಾಸ ಮಾಡಬೇಕು, ಅಂತಹದ್ದೊಂದು ವಿದ್ಯೆ ಹೇಳಿಕೊಡುತ್ತೀಯಾ?
ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ
ನತತ್ರತ್ವಂ ನಜರಯಾಬಿಭೇತಿ
ಉಭಯೀತೀರ್ತ್ವಾ ಅಶಯಾನಾ ಪಿಪಾಸೀ
ಶೋಕಾತಿಗೋಮೋದತೇ ಸ್ವರ್ಗಲೋಕೇ||
ನಚಿಕೇತ ಯಮನಿಗೆ ಹೇಳುತ್ತಾನೆ; ಯಮ ಅಂದರೆ ಭಯ, ಸ್ವರ್ಗಲೋಕದಲ್ಲಿ ಭಯವಿಲ್ಲವಂತೆ. ಹಾಗಾಗಿ ಸ್ವರ್ಗ ಬೇಕು. ನೀನಿಲ್ಲ ಅಲ್ಲಿ, ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ ನಿನ್ನ ಕಾಟ ಇಲ್ಲ ಅಲ್ಲಿ. ಕಾಟ ಅನ್ನುವುದು ಸಂಸ್ಕೃತದ ಕಷ್ಟ ಶಬ್ದದಿಂದ ಬಂದಿದೆ. ಕಷ್ಟ ಎಂದು ಹೇಳಲು ಕಷ್ಟವಾಗಿ ಕನ್ನಡದಲ್ಲಿ ಅದು ಕಾಟ ಆಗಿದೆ. ಯಮಲೋಕದ ಕಷ್ಟಗಳು, ಹಿಂಸೆಗಳು ಅಲ್ಲಿ ಸ್ವರ್ಗಲೋಕದಲ್ಲಿ ಇಲ್ಲ. “ನತತ್ರತ್ವಂ ನಜರಯಾಬಿಭೀತಿ ಉಭಯೀತೀರ್ತ್ವಾ ಅಶನಾಯಾ ಪಿಪಾಸೀ”, ಅಲ್ಲಿ ಮುಪ್ಪು ಇಲ್ಲವಂತೆ. ಯಮ ಇಲ್ಲ ಎಂದರೆ ಸಾವಿಲ್ಲ ಅಂತ, ಮುಪ್ಪೂ ಇಲ್ಲವಂತೆ ಅಲ್ಲಿ. ಹಸಿವಿಲ್ಲ, ಬಯಾರಿಕೆಯಿಲ್ಲ ಸ್ವರ್ಗಲೋಕದಲ್ಲಿ. ಹಾಗೆಂದರೆ ತಿನ್ನಲಿಕ್ಕೆ ಏನೂ ಇಲ್ಲ ಅಂತಲ್ಲ, ಅಮೃತ ಊಟ ಮಾಡಬಹುದು ಅಲ್ಲಿ.
“ಶೋಕಾತಿಗೋಮೋದತೇ ಸ್ವರ್ಗಲೋಕೇ”, ಎಲ್ಲದಕ್ಕಿಂತ ಹೆಚ್ಚಾಗಿ ಶೋಕ ಇಲ್ಲ, ಬೇಜಾರೇ ಆಗುವುದಿಲ್ಲವಂತೆ ಅಲ್ಲಿ.
ದುಃಖವೇ ಇಲ್ಲ. ಸ್ವರ್ಗಲೋಕದಲ್ಲಿ ಅನವರತ ಸಂತೋಷ ಪಡುತ್ತಾನೆ. ಸಂತೋಷದ ಸರಣಿ, ಮಧ್ಯ ಎಲ್ಲೂ ದುಃಖ ಇಲ್ಲ. ಇಂತಹದ್ದು ಸ್ವರ್ಗಲೋಕದಲ್ಲಿ ಒಂದು ಅನುಭವ ಇದೆಯಂತೆ. ಹಾಗಾಗಿ ಆ ಸ್ವರ್ಗ ಲೋಕಕ್ಕೆ ಹೋಗುವ ದಾರಿಯನ್ನು ಹೇಳಿಕೊಡು ಎಂದು ಕೇಳಿದನಂತೆ.
ನಚಿಕೇತ ಏನು ಕೇಳಬಹುದಿತ್ತು!? ನನ್ನನ್ನು ಸ್ವರ್ಗಲೋಕಕ್ಕೆ ಕಳಿಸಿಕೊಡು ಈಗಲ್ಲ, ಸತ್ತಮೇಲೆ. ನನ್ನನ್ನ ನೀನು ನರಕಕ್ಕೆ ಹಾಕಬೇಡ ಸ್ವರ್ಗಲೋಕಕ್ಕೆ ಕಳಿಸಿಕೊಡು ಎಂದು, ಆದರೆ ಆತ ಅದನ್ನ ಕೇಳುವುದಿಲ್ಲ. ಸ್ವರ್ಗಕ್ಕೆ ಸೋಪಾನ ಕಟ್ಟುವ ಪ್ರಯತ್ನ ಮಾಡುತ್ತಾನೆ. ತನಗಾಗಿ ಅಲ್ಲ, ಜನರಿಗಾಗಿ ಕೇಳಿದ ವರ ಅದು.
ಸತ್ವಮಗ್ನ್ಯಂ ಸ್ವರ್ಗ್ಯ ಮಧ್ಯೇಷ ಮೃತ್ಯೋಃ, ಯಾವ ಒಂದು ಪ್ರಕ್ರಿಯೆಯನ್ನು ಬಳಸಿದರೆ ಸ್ವರ್ಗಕ್ಕೆ ಜನ ಹೋಗಬಹುದೋ, ಯಾವ ವಿದ್ಯೆ ಬಳಸಿ, ಯಾವ ಯಜ್ಞವನ್ನು ಮಾಡಿದರೆ ತನ್ಮೂಲಕವಾಗಿ ಮನುಷ್ಯ ಸ್ವರ್ಗಕ್ಕೆ ಹೋಗುತ್ತಾನೋ ಅಂತಹ ಅಗ್ನಿವಿದ್ಯೆಯನ್ನು, ಅಂತಹ ಒಂದು ವಿಶಿಷ್ಟವಾದ ಯಜ್ಞ ಪ್ರಕ್ರಿಯೆಯನ್ನು ನನಗೆ ಉಪದೇಶ ಮಾಡು. ಈ ಲೋಕದಲ್ಲಿ ಎಷ್ಟೋ ಮಂದಿ ಸ್ವರ್ಗಕ್ಕೆ ಹೋಗುವಂತಹ ಅಪೇಕ್ಷೆ ಉಳ್ಳವರಾಗಿರುತ್ತಾರೆ ಅಥವಾ ಹೋಗಬೇಕು. ಅವರಿಗಾಗಿ ಒಂದು ದಾರಿಯನ್ನು ತೆರೆಯೋಣ. ಯಮಲೋಕದ ಕಡುಕಷ್ಟಗಳನ್ನು ಅನುಭವಿಸದೇ ಸ್ವರ್ಗಲೋಕಕ್ಕೆ ಜನಗಳು ಹೋಗುವಂತೆ ಅದಕ್ಕೆ ಬೇಕಾದಂತಹ ಒಂದು ಪ್ರಕ್ರಿಯೆಯನ್ನು ಲೋಕದಲ್ಲಿ ಚಾಲ್ತಿಗೆ ತರೋಣ. ಯಮನಲ್ಲಿ ಕೇಳಿದ ವರ ಎಂತಹದ್ದು ನಚಿಕೇತ ಎಂದರೆ, ನಿನ್ನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯಮನಲ್ಲೇ ಕೇಳಿದ್ದು. ಹಾಗಾಗಿ
ಸ್ವರ್ಗಲೋಕಾ ಅಮೃತತ್ವಂ ಭಜಂತೇ
ಏತದ್ವಿತೀಯೇನವಿರಣೀ ವರೇಣ
ಸತ್ವಮಗ್ನಿಂ ಸ್ವರ್ಗ್ಯಮಧ್ಯೇಷ ಮೃತ್ಯೋಃ
ಅಂತಹ ಒಂದು ವಿದ್ಯೆ ಏನು? ವಿಶಿಷ್ಟವಾಗಿರತಕ್ಕಂತಹ ಅಗ್ನಿಯಿಂದ ಸಾಧಿಸಬೇಕಿರುವಂತಹ ವಿದ್ಯೆಯನ್ನು ಉಪದೇಶ ಮಾಡು. ಅಂತ ಕೇಳಿದಾಗ, ಯಮ ಸಂತೋಷದಿಂದ ಆ ವಿದ್ಯೆಯನ್ನು ಉಪದೇಶ ಮಾಡುತ್ತಾನೆ.
ಪ್ರತೇ ಬ್ರವೀಮಿತದುಮೇ ನಿಬೋಧ, ನಿನಗೆ ಹೇಳಿಕೊಡ್ತೇನೆ, ಉಪದೇಶ ಮಾಡುತ್ತೇನೆ ಸ್ವೀಕಾರ ಮಾಡು. ಯಾಕೆಂದರೆ ಯಮ ಯಮನಾಗಿದ್ದು ಅದೇ ವಿದ್ಯೆಯ ಮೂಲಕವಂತೆ. ಅದನ್ನ ಬಳಸಿಕೊಂಡೇ ಯಮ, ಯಮಪದವಿಯನ್ನು ಸಂಪಾದನೆ ಮಾಡಿದನಂತೆ ಮತ್ತೆ ಮುಂದೆ ಮುಕ್ತಿ ಪದವಿಗೂ ಕೂಡಾ ದಾರಿ ಮಾಡಿಕೊಂಡಿದ್ದಾನಂತೆ. ಹಾಗಾಗಿ ಆ ವಿದ್ಯೆಯನ್ನು, ಆ ಅಗ್ನಿಯನ್ನು ನಚಿಕೇತನಿಗೆ ಯಮ ಉಪದೇಶ ಮಾಡುತ್ತಾನೆ. ಅದೊಂದು ಪ್ರಕ್ರಿಯೆ ಅದಕ್ಕೆ ಬೇಕಾದ ಅನೇಕ ಸಲಕರಣೆಗಳು, ಉದಾಹರಣೆಗೆ ಇಟ್ಟಿಗೆಗಳು ‘ಇಷ್ಟಕ’ ಎಂದು ಕರೆಯುತ್ತೇವೆ, ಯಜ್ಞದಲ್ಲಿ ಬೇಕಾಗುವಂತಹದ್ದು. ಅವುಗಳನ್ನು ಒಂದು ವಿಶಿಷ್ಟವಾದ ಕ್ರಮದಲ್ಲಿ ಜೋಡಿಸಬೇಕಾಗುತ್ತದೆ. ಅಂತಹದ್ದೇ ಬೇರೆ ಬೇರೆ ಇರುತ್ತವೆ. ಎಲ್ಲಾ ಪ್ರಕ್ರಿಯೆ ಹೇಳಿದರೆ ತುಂಬಾ ಸಂಕೀರ್ಣ (complicated) ಅದು. ಅದೆಲ್ಲವನ್ನೂ ಯಮನಿಗೆ ಹಾಗೆಯೇ ತಿರುಗಿ ಹೇಳಿದನಂತೆ ನಚಿಕೇತ. ಏಕಪಾಠಿ ಅವನು, ಏಕಸಂದಿಗ್ರಾಹಿ. ಒಮ್ಮೆ ಯಮ ಹೇಳಿಕೊಟ್ಟರೆ ಮರುಕ್ಷಣದಲ್ಲಿ ಅವನು ಯಾವ ಪ್ರಕ್ರಿಯೆ, ಉದಾಹರಣೆಗೆ ಇಟ್ಟಿಗೆಗಳು ಯಾವುದು ಬೇಕು? ಎಷ್ಟು ಬೇಕು? ಹೇಗೆ ಬೇಕು? ಆ ರೀತಿ ಒಟ್ಟೂ ಇಡೀ ಯಜ್ಞಕ್ಕೆ ಏನು ಪ್ರಕ್ರಿಯೆ ಬೇಕು, ಹೇಗೆ ಎಂಬುದನ್ನು ಯಮನಿಗೆ ಒಪ್ಪಿಸಿದಾಗ ಸಂತೋಷ ಆಗಿಹೋಯ್ತು ಯಮನಿಗೆ. ಇನ್ನೊಂದು ವರ ಕೊಟ್ಟನಂತೆ ನಚಿಕೇತನಿಗೆ. ಬೇಕಾದ ವರ ಕೇಳು ಅಂತಲ್ಲ, ತಾನೇ ವರ ಕೊಡುತ್ತಾನೆ. ಈ ಅಗ್ನಿ ನಿನ್ನ ಹೆಸರಿನಲ್ಲೇ ಪ್ರಸಿದ್ಧವಾಗಲಿ “ನಾಚಿಕೇತಾಗ್ನಿ” ಎಂದೇ ಈ ಅಗ್ನಿ ಪ್ರಸಿದ್ಧವಾಗಲಿ, ಎಂದು ಹೇಳಿ ಒಂದು ರತ್ನ ಮಾಲೆಯನ್ನೂ ಸಹ ಕೊಡುತ್ತಾನೆ. “ಸೃಂಕಾಂ” ಅಂದರೆ ವಿಶಿಷ್ಟವಾಗಿರತಕ್ಕಂತಹ ಒಂದು ರತ್ನಮಾಲಿಕೆಯನ್ನು ಕೂಡಾ ಆಶೀರ್ವಾದದ ರೂಪದಲ್ಲಿ ಕೊಡುತ್ತಾನೆ. ಯಮ ಕೊರಳಿಗೆ ಪಾಶ ಹಾಕಿ ಎಳೆಯುವುದು ಗೊತ್ತು, ಆದರೆ ನಚಿಕೇತ ಎಂತವನು ನೋಡಿ ಕೊರಳಿಗೆ ರತ್ನಮಾಲಿಕೆಯನ್ನು ಹಾಕಿಸಿಕೊಡಿದ್ದಾನೆ ಯಮನ ಕೈಯಿಂದ.
ಒಂದನೇ ವರ ಇಹಲೋಕ; ಎರಡನೇ ವರ ಸ್ವರ್ಗಲೋಕ; ಎಂತಹ ವರಗಳನ್ನು ಕೇಳುತ್ತಾನೆ ಅಂದರೆ, ವಾಮನ ತ್ರಿವಿಕ್ರಮನಾಗಿ ಮೂರು ಲೋಕ ಅಳೆದಂತೆ ಆಯಿತು ಇದು. ಹಾಗಾಗಿ ಎರಡು ವರಗಳಿಂದ ಎರಡು ಲೋಕ. ಒಂದು ಇಹಲೋಕದ ಸುಖ, ಇನ್ನೊಂದು ಪರಲೋಕದ ಸ್ವರ್ಗಲೋಕದ ಸುಖ. ಇವೆರಡೂ ವರವನ್ನೂ ಕೂಡಾ ಪಡೆದುಕೊಂಡ ನಚಿಕೇತ. ಆದರೆ ಎರಡೂ ಕಡೆ ಸ್ವಾರ್ಥ ಇಲ್ಲ.
ಇನ್ನೀಗ ಮೂರನೇ ವರ ಕೇಳಿದ ನಚಿಕೇತ. ಏನು ಕೇಳಿದ?
ಏಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ
ಅಸ್ತಿ ಇತ್ಯೇಕೇ ನಾಯಮಸ್ತೀತಿ ಚೈಕೇ|
ಏತದ್ವಿದ್ಯಾ ಮನುಶಿಷ್ಟಸ್ತ್ವಯಾಹಂ ವರಾಣಾಮೇಷ ವರಸ್ತೃತೀಯಃ|
ಮೂರನೇ ವರ ಒಂದು ಮಾಹಿತಿ ಕೇಳುತ್ತಾನೆ ಅಷ್ಟೇ ನಚಿಕೇತ. ಆ ಮಾಹಿತಿ ಅವನೊಬ್ಬನಿಗೇ ಸಂಬಂಧ ಪಟ್ಟಿದ್ದಲ್ಲಾ. ಈ ಪ್ರಪಂಚದ ಸಕಲ ಜೀವಿಗಳಿಗೂ ಸಂಬಂಧಪಟ್ಟಿರತಕ್ಕಂತಹ ಒಂದು ಮಾಹಿತಿಯನ್ನು ಕೇಳುತ್ತಾನೆ. ಆದರೆ ಆ ಮಾಹಿತಿಯನ್ನ ಕೊಡುವುದಕ್ಕೆ ಬಹಳ ಕಷ್ಟವಾಯಿತಂತೆ ಯಮನಿಗೆ. ಆ ಮಾಹಿತಿ ಏನು? ಎಂದರೆ, ಒಂದು ವಿಚಿಕಿತ್ಸೆ. ಒಂದು ಜಿಜ್ಞಾಸೆ ಈ ಲೋಕದಲ್ಲಿ ಇದೆ. ಅದು ಏನಪ್ಪಾ? ಎಂದರೆ, ಈ ಮನುಷ್ಯ ಸತ್ತವನು ಮುಂದೆ ಏನಾಗುತ್ತಾನೆ? ಅವನು ಇದಾನೋ? ಇಲ್ಲವೋ?! “ಏಯಂ ಪ್ರೇತೇ”, ಪ್ರೇತೇ ಅಂದರೆ ಸತ್ತ ಮನುಷ್ಯ. “ಪ್ರೇತೇ ಮನುಷ್ಯೇ ವಿಚಿಕಿತ್ಸಾ”, ಸತ್ತ ಮನುಷ್ಯನ ವಿಷಯದಲ್ಲಿ ಒಂದು ವಿಚಿಕಿತ್ಸೆ ಒಂದು ಜಿಜ್ಞಾಸೆ. ಏನು ಜಿಜ್ಞಾಸೆ? ಎಂದರೆ,
“ಅಸ್ತಿ ಇತ್ಯೇಕೇ ನಾಯಮಸ್ತೀತಿ ಚೈಕೇ”,
ಅಸ್ತಿಯಂತೆ ಕೆಲವರು, ನಾಸ್ತಿಯಂತೆ ಕೆಲವರು. ಅಸ್ತಿ ಎಂದವರು ಆಸ್ತಿಕರಾದರು. ನಾಸ್ತಿ ಎಂದವರು ನಾಸ್ತಿಕರಾದರು.
“ನಾಸ್ತಿ ಪರಲೋಕಃ” ಪರಲೋಕವಿಲ್ಲ. ಸತ್ತನಂತರ ಬದುಕಿಲ್ಲ ಅವರೇ ನಾಸ್ತಿಕರು. ಇದೆ ಎಂದಾದರೆ ಆಸ್ತಿಕ ಅವನು. ಚಾರ್ವಾಕರು ಏನು ಹೇಳುತ್ತಾರೆ ಎಂದರೆ ಸತ್ತ ಮೇಲೆ ಮುಗಿಯಿತು, ಮುಂದೇನೂ ಇಲ್ಲ. ಹಾಗಾಗಿ “ಋಣಂ ಕೃತ್ವಾ ಘೃತಂ ಪಿಬೇತ್” ಸಾಲ ಮಾಡು ತುಪ್ಪ ಕುಡಿ ಅಂತ. ಸಾಲ ತೀರಿಸಲು ಆಗದೇ ಹೋದರೆ? ತೀರಿಸಬೇಡಾ. ಅಸಲಿ ವಿಷಯ ಏನೆಂದರೆ ಸಾಲ ತೀರಿಸಲೇಬೇಡ ಮೋಸ ಮಾಡು. ‘ಋಣ’ ಆಗಿ ಉಳಿದುಬಿಡುತ್ತದೆ. ಪುರಾಣಗಳು ಹೇಳುವ ಪ್ರಕಾರ ಸಾಲಮಾಡಿ ತೀರಿಸದವನು ಯಮಲೋಕದಲ್ಲಿ ಬದುಕಿರುವಾಗಲೇ ಅವನ ಮಾಂಸವನ್ನು ಕಿತ್ತು ಕೊಡಲಾಗುತ್ತದೆಯಂತೆ. ನೀನು ಬದುಕಿರುವಾಗ ಕೊಟ್ಟಿರಲಿಲ್ಲ, ತೀರಿಸಲಿಲ್ಲ ಅಲ್ಲವಾ? ತೀರಿಸಲು ಇದೋ ಈಗ ಅವನ ದೇಹ ಭಾಗವನ್ನು ಕಿತ್ತು ಕೊಡುತ್ತಾರಂತೆ.
ಹೀಗೆಲ್ಲಾ ಆಗುವುದನ್ನು ತಪ್ಪಿಸಿಕೊಳ್ಳಬೇಕು ಅಂದರೆ ಆತ ಋಣವನ್ನ, ಸಾಲವನ್ನ ತೀರಿಸಬೇಕು ಅಂತ ಹೇಳಿದರೆ, ಚಾರ್ವಾಕರು ಹೇಳುವುದು ಏನೆಂದರೆ ಬಿಡು ಬಿಡು ಹಾಗೆಲ್ಲಾ ಏನಿಲ್ಲ. ಸತ್ತರೆ ಮುಗಿಯಿತು ಅಂತ ಕೆಲವರು, ಇನ್ನು ಕೆಲವರು ಹೀಗಿಲ್ಲ. ಸತ್ತಲ್ಲಿಗೆ ಮುಗಿಯುವುದಿಲ್ಲ, ಸತ್ತಮೇಲೂ ಬದುಕಿದೆ. ಈಗ ದೇಹವೇ ನಾನು ಅಂತಾದರೆ ಅದು ಸರಿ. ಏಕಂದರೆ ದೇಹ ಹೋಗಿಬಿಡುತ್ತದೆ. ಅಂದರೆ ಸುಟ್ಟುಬಿಡುತ್ತಾರೆ, ಇಲ್ಲಾ ಮಣ್ಣಲ್ಲಿ ಹೂಳುತ್ತಾರೆ, ದೇಹ ಉಳಿಯುವುದಿಲ್ಲ ಅಲ್ಲವಾ!? ದೇಹವೇ ನಾನು ಅಂತಾದರೆ ಮಾತ್ರ ಚಾರ್ವಾಕರ ಸಿದ್ಧಾಂತ ಸತ್ಯ ಆಗುವಂತಹದ್ದು. ಆದರೆ ಎಲ್ಲರೂ ಗಮನಿಸಬೇಕು ಸತ್ತಾಗ ದೇಹದ ಎಲ್ಲಾ ಭಾಗಗಳೂ ಅಲ್ಲೇ ಉಳಿದಿರುತ್ತವೆ ಅಲ್ಲವಾ?. ಸಹಜವಾಗಿ ಸತ್ತರೆ ದೇಹ ಅಲ್ಲೇ ಇರುತ್ತದೆ. ಹೋಗಿದ್ದು ಬೇರೆ, ದೇಹ ಅಲ್ಲ ಅದು. ವ್ಯತ್ಯಾಸ ಏನು? ಅಂದರೆ ಉಸಿರಾಡುತ್ತಿದ್ದ, ಈಗ ಸತ್ತಮೇಲೆ ಉಸಿರಿಲ್ಲ. ಉಸಿರು ಅಂದರೇನು? ಗಾಳಿ. ಗಾಳಿ ಈಗಲೂ ಓಡಾಡುತ್ತಾ ಇದೆ. ಆದರೆ ಆ ಉಸಿರಾಟದ ಹಿಂದಿನ ಶಕ್ತಿ, ತತ್ವ ಇಲ್ಲ. ಭಾವನೆಗಳಿಲ್ಲ, ಯಾರಿಗೆ ಭಾವನೆಗಳು ಉಂಟಾಗುತ್ತಿದ್ದವೋ ಅವನಿಲ್ಲ. ಶಾಂತವಾದ ಮರಣವಾದರೆ ಸತ್ತಮೇಲೆ ಕೂಡಾ ಆತ ಬದುಕಿರುವಂತೆಯೇ ಕಾಣುತ್ತಾರೆ ನೋಡುವುದಕ್ಕೆ. ಜೀವ ಹೋಗಿದೆ ಅಂತಲೂ ತಿಳಿಯದು. ಯಾವುದಕ್ಕೆ ಭಾವನೆಗಳು ಆಗುತ್ತಿತ್ತೋ ಅದಿಲ್ಲ ಅಂತ. ಅದು ಉಂಟು ಆಮೇಲೂ ಕೂಡಾ ಅದು ನಿಜವಾದದ್ದು. ಅದು ಬೇರೆ ದೇಹ ಪಡೆದುಕೊಳ್ಳುತ್ತದೆ. ಬೇರೆ ಲೋಕಕ್ಕೆ ಹೋಗುತ್ತದೆ. ಅಲ್ಲಿ ಬೇರೆ ಸುಖದುಃಖಗಳನ್ನು ಅನುಭವಿಸಲು ಶುರು ಮಾಡುತ್ತದೆ. ಹೊಸ ಜೀವನ ಶುರು ಮಾಡುತ್ತದೆ ಅದು.
ಆಸ್ತಿಕರು ಮತ್ತು ನಾಸ್ತಿಕರು. ಈ ಪ್ರಶ್ನೆ ಇಟ್ಟಿದ್ದು ನಚಿಕೇತ ಯಮನ ಮುಂದೆ. “ವರಾಣಾಮೇಶ ವರಸ್ತೃತೀಯ” ನೀವು ನಿಮ್ಮನ್ನು ಆ ಜಾಗದಲ್ಲಿ ಕಲ್ಪನೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲನೇ ವರ ಏನು ಕೇಳುತ್ತಿದ್ದಿರಿ? ನಿಷ್ಪಕ್ಷಪಾತದಿಂದ ಒಮ್ಮೆ ಯೋಚಿಸಬೇಕು ಒಂದನೇ ವರ ಎರಡನೇ ವರ ಮತ್ತು ಮೂರನೇ ವರ ನೀವೇನು ಕೇಳುತ್ತಿದ್ದಿರಿ, ಇದನ್ನು ಕೇಳುತ್ತಿದ್ದೀರಾ? ಅಂದರೆ ನಚಿಕೇತನ ಸ್ಥರ ಯಾವುದು ನಚಿಕೇತನದ್ದು ಅಂತ. ಬಾಲಕನಾದರೂ ಕೂಡಾ ಅವನ ಪ್ರಜ್ಞೆ ಎಂತಹದ್ದು ಅಂತ. ಅಂತಹ ಪ್ರಜ್ಞೆ ನಮಗೆ ಬರಬೇಕು. ಜೀವಯಾನ ಅಂದರೆ ಅದರ ಮರ್ಮ ಈ ಪ್ರಶ್ನೆಯಲ್ಲಿ ಅಡಗಿದೆ. ಈ ಪ್ರವಚನ ಸರಣಿಗೆ ಹೆಸರು ಜೀವಯಾನ. ಇಷ್ಟು ಹೊತ್ತು ಕಡೆದು ಕಡೆದು ಈಗ ಒಂದು ಸಲ್ಪ ಬೆಣ್ಣೆ ಕಾಣುತ್ತಿದೆ. ಇದೇ ಜೀವಯಾನ ಎಂದರೆ. ಸತ್ತ ಬಳಿಕ ಏನಾಗುತ್ತದೆ? ಜೀವ ಎತ್ತಲೋ ಹೋಗುತ್ತದೆ. ಸತ್ತ ಬಳಿಕ ಮಾತ್ರವಲ್ಲ ಈಗಲೂ ಇದೆ ಅದು. ಒಂದು ಊರಿಂದ ಇನ್ನೊಂದು ಊರಿಗೆ ಹೋಗುತ್ತೀರಿ ಅಲ್ಲವಾ!? ಒಂದು ಯಾನ ಇದೆ ಅಲ್ಲಿಂದ ಇಲ್ಲಿಗೆ. ಯಾರು ಓಡಾಡುವುದು ಆಗ? ನಾನು ಎಂದರೆ ಯಾರು? ಇವತ್ತಿನಿಂದ ನಾಳೆಗೆ ಹೋಗುತ್ತೀರಿ ಅಲ್ಲವಾ? ಆಯಾ ಪ್ರಯಾಣದಲ್ಲಿ ಹೋಗುವವರು ಯಾರು? ಜೀವಯಾನ ಇದು ಕೂಡಾ. ಜೀವನಯಾನ. ಒಂದು ಅಕ್ಷರ ಸೇರಿದರೆ ಇನ್ನೂ ಸ್ಪಷ್ಟ ಆಗುತ್ತದೆ. ಜೀವನಯಾನವೇ ಜೀವಯಾನ. ಜೀವವೇ ಇಲ್ಲಿ ಬಂದು ಹೋಗಿ ಜೀವನ ಮಾಡ್ತಾ ಇರುವಂತಹದ್ದು. ಮುಂದಕ್ಕೆ ಇನ್ನೊಂದು ಜೀವನಕ್ಕೆ ಹೋಗುವಂತಹದ್ದು ಕೂಡಾ ಅದೇ ಜೀವ. ಹಾಗಾಗಿ ಜೀವಯಾನ ಅಂತ ಏನಾದರೂ ಇದ್ದರೆ ಅದರ ಮರ್ಮ ಈ ಪ್ರಶ್ನೆಯಲ್ಲಿದೆ ಅಂತ. ಯಮ ಹೇಳ್ತಾನೆ ಆಶ್ಚರ್ಯ! ಇವನಿದ್ದಾನಲ್ಲ ಜೀವ ಜೀವದೊಳಗಿನ ಬೆಳಕು, ದೇವ ಅಂತಲೂ ಕರೆಯಬಹುದು. ಎಷ್ಟೋ ಜನ ಕೇಳಿಯೇ ಇಲ್ಲಾ ಅವನ ಬಗ್ಗೆ. ಕೆಲವರು ಕೇಳಿದ್ದಾರೆ ಏನೋ ಜೀವ ಉಂಟು ದೇವರುಂಟು ಅಂತ. ಆದರೆ ಗೊತ್ತಿಲ್ಲಾ. “ಆಶ್ಚರ್ಯೋ ವಕ್ತಾ ಕುಶಲೋಸ್ಯಲಬ್ಧಾ “
ಅದರ ಬಗ್ಗೆ ಹೇಳುವವರೂ ದುರ್ಲಭ. ಕೇಳುವವರಂತೂ ಅದರಲ್ಲೂ ದುರ್ಲಭ. ಕೇಳಿ ತಿಳಿವವರು ದುರ್ಲಭರಲ್ಲಿ ದುರ್ಲಭ. ಆಶ್ಚರ್ಯ, ಈ ಪ್ರಪಂಚದಲ್ಲಿ ಅಪರೂಪ, ಕೌತುಕ. ಅದಕ್ಕೇ ಹೇಳುವುದು ಎಷ್ಟು ಜನರಿಗೆ ದೇವರ ಬಗ್ಗೆ ಪ್ರಶ್ನೆ ಬರುತ್ತದೆ? ಅದಕ್ಕೇ ಅಪರೂಪ ಎನ್ನುವಂತಹದ್ದು.
ರಮಣ ಮಹರ್ಷಿಗಳಿಗೆ ಹೀಗೇ ಆಗಿದ್ದಂತೆ, ಜನ್ಮ ಜನ್ಮದಲ್ಲಿ ಆಗುವಂತಹದ್ದು ಒಂದು ಘಂಟೆಯೂ ಬೇಕಿರಲಿಲ್ಲವಂತೆ ಅವರ ಆತ್ಮ ಸಾಕ್ಷಾತ್ಕಾರ ಆಗಲಿಕ್ಕೆ. ಒಮ್ಮೆ ಅವರಿಗೆ ಮೃತ್ಯು ಭೀತಿ ಆಯಿತಂತೆ. ಸಾವು ಎನ್ನುವ ಯೋಚನೆ ಬಂತು. ಭಯ ಆಯಿತು. ಏನು ಮಾಡಲೂ ಸಾಧ್ಯವಿಲ್ಲ ಎನ್ನುವಂತಾಯಿತು. ಆಮೇಲೆ ಒಂದು ಜಿಜ್ಞಾಸೆ ಬಂತು ಈ ಸಾಯೋದು ಯಾರು ಅಂತ. ದೇಹವೋ? ಮನಸ್ಸೋ? ಇಂದ್ರಿಯಗಳೋ? ನಾನು ತಾನೇ ಸಾಯುವುದು? ನಾನು ಅಂದರೆ ಏನು? ನಾನುವಿನ ಮೇಲೆ ಮನಸ್ಸನ್ನು ಏಕಾಗ್ರ ಮಾಡ್ತಾರೆ. ಒಂದು ಸಲ್ಪ ಹೊತ್ತಿನಲ್ಲಿ ಒಂದು ಬೆಳಕು ಗೋಚರಿಸುತ್ತದೆ ಅವರ ಎದುರಲ್ಲಿ. ಆ ನಾನು ಅವರೆದುರು ಪ್ರಕಟವಾಗುತ್ತದೆ. ಮತ್ತವರಿಗೆ ಸಾವಿನ ಭಯ ಇಲ್ಲ ಅಂತ. ಏಕೆಂದರೆ ಸಾಯುವುದು ನಾನಲ್ಲ. ಗೀತೆಗಳ ಪ್ರಕಾರ ಅಛೇದ್ಯೋಯಂ, ಅದಾಹ್ಯೋಯಂ
ಸುಡುವಂತಿಲ್ಲ, ನಾನು ಎಂಬುದು ನಿಜವಾಗಿ ಯಾರೋ ಆ ನನ್ನನ್ನು ನಿಜವಾಗಿ ಸುಡಲಾಗದು, ನೆನೆಸಲಾಗದು, ಒಣಗಿಸಲಾಗದು. ನೋವಿಗೂ ಹೆದರಬೇಕಿಲ್ಲ. ರಮಣ ಮಹರ್ಷಿಗಳು ಧ್ಯಾನಕ್ಕೆ ಕೂತಾಗ ಇರುವೆಗಳು ಕಚ್ಚಿ ರಕ್ತ ಹರಿಯುತ್ತಿದ್ದವಂತೆ. ಅವರಿಗೆ ಎಚ್ಚರ ಇರುತ್ತಿರಲಿಲ್ಲ. ನಾನುವಿನಲ್ಲಿ ಮುಳುಗಿ ನಮ್ಮನ್ನು ನಾವೇ ನೋಡುವಾಗ ಎಂತಹ ಮೈಮರೆಸುವಿಕೆ ಎಂದರೆ ಯಾವ ನೋವೂ ಸಹ ತಿಳಿಯುವುದಿಲ್ಲ.
ಹಾಗಾಗಿ ಯಮ ನಚಿಕೇತನಿಗೆ ಹೇಳಿದನಂತೆ ಬೇಡ ಮಗು “ನಹಿ ಸುಜ್ನೇಯಂ” ಇದು ತಿಳಿದುಕೊಳ್ಳುವುದು ಸುಲಭವಲ್ಲ. ನೀನಿನ್ನೂ ಸಣ್ಣವನು. “ಅಣುರೇಷು ಧರ್ಮಃ” ತುಂಬಾ ಸೂಕ್ಷ್ಮ ಇದು. ಹೇಗೆ ಅಣುವನ್ನು ಕಾಣಲು ಸುಲಭವಲ್ಲವೋ ಹಾಗೆಯೇ. ದೇವತೆಗಳೂ ಕೂಡಾ ಕಷ್ಟ ಪಟ್ಟಿದ್ದಾರೆ. ಮನುಷ್ಯರ ಸ್ಥರದ್ದಲ್ಲ ಅದು. ಇದನ್ನು ಕೇಳಬೇಡ. ಇಲ್ಲಾ ಅದೇ ಪ್ರಶ್ನೆಗೆ ಉತ್ತರ ಬೇಕು ನನಗೆ ಎಂದು ಪುನಃ ಪುನಃ ನಚಿಕೇತ ಹೇಳಿದಾಗ ಒತ್ತಾಯ ಮಾಡಬೇಡ ಬೇರೆ ಏನಾದರೂ ಕೇಳು ಏನು ಬೇಕು ನಿನಗೆ? ಮಕ್ಕಳು, ಮೊಮ್ಮಕ್ಕಳು ದೀರ್ಘಾಯುಷಿಗಳು? ಪಶುಗಳು ಬೇಕಾ? ಗೋವುಗಳೋ, ಅಶ್ವಗಳೋ ಅಥವಾ ಆನೆಗಳೋ “ಹಸ್ತಿ ಹಿರಣ್ಯಂ ಅಶ್ವಾನ್” ಚಿನ್ನ ಬೇಕಾ? ರತ್ನ ಬೇಕಾ? ಅಥವಾ ದೊಡ್ಡ ಭೂಮಿ, ವಿಶಾಲವಾದ ನೀ ಕೇಳಿದಷ್ಟು ಎಷ್ಟು ಬೇಕೋ ಅಷ್ಟು ಜಮೀನ್ದಾರ ಆಗಬಹುದು ನೀನು ಬೇಕಾ? ಆಯಸ್ಸು ಬೇಕಾ? ಎಷ್ಟಾಯಸ್ಸು ಬೇಕು ಹೇಳು “ಸ್ವಯಂಚ ಜೀವ ಶರದೋಯಾವದಿಚ್ಛಸಿ” ಎಷ್ಟು ಕಾಲ ನಿನಗೆ ಇಷ್ಟ ಇದೆಯೋ ಅಷ್ಟು ಕಾಲ ಬದುಕಿಬಿಡು. ನಿನ್ನ ತಂಟೆಗೆ ನಾನು ಬರುವುದಿಲ್ಲ. ನೀನು ಹೇಳಿದಾಗ ನೀನು ಕರೆದಾಗ ನಾನು ಬರುತ್ತೇನೆ. ನೀನು ಈ ವರಕ್ಕೆ ಸಮಾನ ಅಂತ ಅನಿಸಿದರೆ ನೀನು ಹಣವನ್ನು ಕೇಳು. ಚಿರ ಜೀವನ ಸಾವಿಲ್ಲದ ಬದುಕು ಅಂತಹದ್ದನ್ನು ಕೇಳು. “ಕಾಮಾನಾಂತ್ವಾ ಕಾಮಭಾಜಂಕರೋಮಿ” ಬೇಕಾದ್ದು ಕೇಳು. ಇದು ಖಾಲಿ ಚೆಕ್ ಹಾಳೆ ಕೊಟ್ಟಂತೆ ಯಮ.
“ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ
ಸರ್ವಾನ್ ಕಾಮಾನ್ ಛಂದತಃ ಪ್ರಾರ್ಥಯಸ್ವ
ಇಮಾ ರಾಮಾ ಸರಥಾಃ ಸತೂರ್ಯಾಃ
ನಹೀ ದೃಶಾಲಂಬನೀಯಾ ಮನುಷ್ಯೈಃ
ಆಭಿರ್ಮತ್ಪತ್ತಾಭಿಃ ಪರಿಚಾರಯಸ್ವ
ನಚಿಕೇತೋ ಮರಣಂ ಮಾನುಪ್ರಾಕ್ಷೀಃ”
“ನಾನು ಏನೆಲ್ಲಾ ನಿನಗೆ ಕೊಡಲು ಮುಂದಾಗಿದ್ದೇನೆ ಅದೆಲ್ಲ ಮರ್ತ್ಯ ಲೋಕದಲ್ಲಿ ದುರ್ಲಭ. ಒಂದಷ್ಟು ನಾರಿಯರನ್ನು ಮುಂದು ಮಾಡಿ ಯಮ ಹೇಳುತ್ತಾನೆ ಕರೆದುಕೊಂಡು ಹೋಗು ಇವರನ್ನು, ಇವರು ನಿನ್ನ ಸೇವೆ ಮಾಡುತ್ತಾರೆ. ಮನುಷ್ಯ ಲೋಕದಲ್ಲಿ ಇಂತಹಾ ಅಪ್ಸರೆಯರು ಸಿಗುವುದಿಲ್ಲ. “ಸರಥಾಃ ಸತೂರ್ಯಾಃ” ರಥಗಳು, ನಾನಾ ಬಗೆಯ ವಾದ್ಯಗಳು ಏನು ಬೇಕು ನಿನಗೆ ಸಂಗೀತ ನೃತ್ಯ ಮೊದಲಾದ ಸಕಲ ಸುಖ ಭೋಗಗಳನ್ನು ಕೊಡ್ತೇನೆ ಆದರೆ “ನಚಿಕೇತೋ ಮರಣಂ ಮಾನುಪ್ರಾಕ್ಷೀ಼ಃ” ಮರಣದ ಕುರಿತಾಗಿ ಪ್ರಶ್ನೆ ಮಾಡಬೇಡ. ದೇವ ರಹಸ್ಯ ಅದು. ಚಿದಂಬರ ರಹಸ್ಯ ಎನ್ನುವರಲ್ಲ ಅಂತಹದ್ದು ಅದು. ಸೃಷ್ಟಿ ರಹಸ್ಯ, ಜೀವ ರಹಸ್ಯ ಅದು. ಹೇಳುವಂತಹದ್ದಲ್ಲ ಹಾಗೆಲ್ಲಾ ಹಾಗಾಗಿ ಅದನ್ನ ಕೇಳಬೇಡ ನಚಿಕೇತ ಎಂದರೆ ನಚಿಕೇತನಿಗೆ ಕೇಳಲೇ ಇಲ್ಲವಂತೆ. ಅಂದರೆ ವರ ಕೇಳಲಿಲ್ಲ ಅಂತಲ್ಲ. ಬಿಡಲಿಲ್ಲ, ಬಿಡಲೇ ಇಲ್ಲ ಅಂತ. ಪಾಪ ಯಮನಿಗೆ ಇಂತಹ ನಚಿಕೇತನಂತಹ ಗಿರಾಕಿಗಳು ಯಾರೂ ಸಿಕ್ಕಿರಲಿಲ್ಲ. ಯಮದೂತರಿಗೆ ಏನು ಅಭ್ಯಾಸ ಎಂದರೆ, ಇಷ್ಟ ಇರಲಿ ಇಲ್ಲದಿರಲಿ ಕೊರಳಿಗೆ ಯಮಪಾಶ ಹಾಕಿ ಎಳೆದುಕೊಂಡು ಯಮಲೋಕಕ್ಕೆ ಹೋಗುವಂತಹದ್ದು. ಆದರೆ ಈಗ ಎಂತಹ ಪರಿಸ್ಥಿತಿ ಎಂದರೆ ಇದೇ ಯಮದೂತರು ಸಕಲ ಗೌರವಗಳೊಂದಿಗೆ ನಚಿಕೇತನನ್ನು ಭೂಮಿಗೆ ಕರೆದುಕೊಂಡು ಹೋಗಿ ಅವನ ಅಪ್ಪನ ಹತ್ತಿರಕ್ಕೆ ಬಿಟ್ಟುಬರಬೇಕು. ನಚಿಕೇತನಂತಹವರು ಹುಟ್ಟಿದರೆ ಏನಾಗುತ್ತದೆ ಎಂದರೆ ವಿಚಿತ್ರ ಅಘಟಿತ ಘಟನೆಗಳು ಘಟಿಸುತ್ತವೆ. ನಚಿಕೇತ ಒಪ್ಪಲಿಲ್ಲ. ನಾಳೆ ಅದನ್ನು ಮುಂದುವರಿಸಿ ಪೂರ್ತಿ ಮಾಡಿ ಮುಂದಿನ ಭಾಗಕ್ಕೆ ಹೋಗೋಣ. ನಾಳೆ ನೀವು ಕೇಳಬೇಕಾದ ವಿಷಯ ಪ್ರಲೋಭನೆ. ಆಮಿಷ ಮತ್ತು ಭಯ ಎಂದು ಎರಡು ಇರುತ್ತದೆ. ಜೀವನದಲ್ಲಿ ಬರುವಂತಹದ್ದು, ಆಸೆ ತೋರಿಸುವಂತಹದ್ದು, ಆಸೆಗಳಿಗೆ ನಾವು ವಶವಾಗಿ ತಪ್ಪು ಮಾಡುವಂತಹದ್ದು. ನಮ್ಮ ಜೀವನದಲ್ಲಿ ಹೀಗೆಲ್ಲಾ ಆಗುತ್ತದೆ. ಯಮ ಮಾಡಿದ್ದೇನು ನಚಿಕೇತನಿಗೆ ಅಂದರೆ ಪ್ರಲೋಭನೆ. ಇದನ್ನು ತೆಗೆದುಕೋ ಅದನ್ನು ತೆಗೆದುಕೋ, ಇದು ಬೇಕಾ ನಿನಗೆ ಆದರೆ ಅದನ್ನು ಕೇಳಬೇಡ. ಇವುಗಳ ಆಸೆಗಾಗಿ ಅದನ್ನು ಬಿಡಬೇಕು ನಚಿಕೇತ ಅಲ್ಲವಾ.. ಪ್ರಲೋಭನೆ ಎಂದು ಕರೆಯುತ್ತೇವೆ ನಾವು ಅದನ್ನ. ಇದರ ವಿಷಯವನ್ನು ನಾಳೆ ನಾವು ಸಲ್ಪ ತಿಳಿದುಕೊಳ್ಳೋಣ. ಆಮೇಲೆ ಜೀವಯಾನದ ಮುಂದಿನ ಭಾಗಕ್ಕೆ ಹೋಗೋಣ.
Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa
#Jeevayaana
#SriSamsthana
#SriRaghaveshwaraBharatiSwamiji
#SriMatha
Leave a Reply