ಲಾಲ್ ಬಹಾದ್ದೂರ್ ಶಾಸ್ತ್ರೀ!!
ಆ ಹೆಸರು ನೆನಪಾದಷ್ಟು ಬಾರಿಯೂ ಬರುವ ಭಾವ ಈ ಮಹನೀಯ ಇನ್ನಷ್ಟು ಕಾಲ ದೇಶವನ್ನು ಆಳಬಾರದಿತ್ತೇ?
ನಮ್ಮ ದೇಶವನ್ನು…
ಮೊಗಲರು 331ವರ್ಷಗಳ ಕಾಲ ಆಳಿದರು;
ಬ್ರಿಟಿಷರು 190 ವರ್ಷಗಳ ಕಾಲ ಆಳಿದರು;
ಕಾಂಗ್ರೆಸ್ 55ವರ್ಷಗಳ ಕಾಲ ಆಳಿತು;
ನೆಹರೂ 17 ವರ್ಷಗಳ ಕಾಲ ಆಳಿದರು;
ಇಂದಿರಾ ಗಾಂಧಿ 16 ವರ್ಷಗಳ ಆಳಿದರು;
ಮನಮೋಹನ್ ಸಿಂಗ್ 10 ವರ್ಷಗಳ ಕಾಲ ಆಳಿದರು;
ಲಾಲ್ ಬಹದ್ದೂರ್ ಶಾಸ್ತ್ರಿ ಭಾರತವನ್ನು ಆಳಿದ್ದು ಕೇವಲ 17 ತಿಂಗಳು!! ಆದರೆ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನೂ ನೆನಪಿಸಿಕೊಳ್ಳುವುದು ಆ 17 ತಿಂಗಳುಗಳನ್ನೇ! ಏಕೆಂದರೆ ಕಳೆದೊಂದು ಶತಮಾನದಲ್ಲಿ ಆ ಪುಟ್ಟ ಅವಧಿಯ ಆಡಳಿತದಷ್ಟು ಶ್ರೇಷ್ಠವಾದ ಆಡಳಿತವನ್ನು ಭಾರತವು ಕಂಡೇ ಇಲ್ಲ!!
ಹೇಳಿದರೆ ದೇವರು ಮಾನವನಿಗೆ ಈ ಮಾತನ್ನು ಹೇಳಬಹುದು:
“ಎಷ್ಟು ಕಾಲ ಬಾಳಿದೆಯೆಂಬುದಕ್ಕಿಂತ ಹೇಗೆ ಬಾಳುವೆಯೆಂಬುದು ಮುಖ್ಯ”
ಆಡಿದರೆ ದೇವರು ದೊರೆಗೆ ಈ ಮಾತಾಡಬಹುದು:
“ಎಷ್ಟು ಕಾಲ ಆಳಿದೆಯೆಂಬುದಕ್ಕಿಂತ ಮುಖ್ಯ ಹೇಗೆ ಆಳಿದೆಯೆಂಬುದು!”
ದೇವರು ಮೆಚ್ಚುವಂತೆ ಆಳಿದರು, ಬಾಳಿದರು ಲಾಲ್ ಬಹಾದ್ದೂರ್ ಶಾಸ್ತ್ರಿ!
ಶಾಸ್ತ್ರಿಯ ಆಳ್ವಿಕೆ, ಅದು ಶಾಸ್ತ್ರೀಯ ಆಳ್ವಿಕೆ! ಆಳುವವನು ಹೇಗಿರಬೇಕೆಂಬುದನ್ನು ಕವಿಕುಲಗುರುವೆನಿಸಿದ ಕಾಳಿದಾಸನ ಮಾತುಗಳಲ್ಲಿ ಕೇಳಿ:
ಸ್ವಸುಖನಿರಭಿಲಾಷಃ ಖಿದ್ಯಸೇ ಲೋಕಹೇತೋಃ
ಪ್ರತಿದಿನಮಥವಾ ತೇ ವೃತ್ತಿರೇವಂವಿಧೈವ|
ಅನುಭವತಿ ಹಿ ಮೂರ್ಧ್ನಾ ಪಾದಪಸ್ತೀವ್ರಮುಷ್ಣಂ
ಶಮಯತಿ ಪರಿತಾಪಂ ಛಾಯಯಾ ಸಂಶ್ರಿತಾನಾಮ್||
-(ಅಭಿಜ್ಞಾನಶಾಕುಂತಲ, ಅಂಕ-೫, ಶ್ಲೋಕ-೭)
ತರುವಿನಂತಿರಬೇಕು ದೊರೆ:
ಬಿರುಬಿಸಿಲಿಗೆ ತನ್ನ ನೆತ್ತಿಯನ್ನೊಡ್ಡುವ ತರು, ಆಶ್ರಯವರಸಿ ಬಂದವರಿಗೆ ನೀಡುವುದು ನೆರಳನ್ನೇ!
‘ಕ್ಲೇಶಗಳೆಲ್ಲವೂ ತನಗಿರಲಿ; ಸೌಖ್ಯಗಳೆಲ್ಲವೂ ಪ್ರಜೆಗಳಿರಲಿ’ ಇದು ಯಾರ ಸಹಜ ಭಾವವೋ, ಅಲ್ಲಲ್ಲ, ಮೂಲ ಸ್ವಭಾವವೋ ಅವನೇ ನಿಜವಾದ ದೊರೆ!
ಆ ಪರಿಯ ದೊರೆಯು ದೊರೆಯಲು ದೇಶವೇ ಪುಣ್ಯ ಮಾಡಿರಬೇಕು! ನವಭಾರತಕ್ಕೆ ಹದಿನೇಳು ತಿಂಗಳು ಮಾತ್ರ ಅಂಥ ಆಳ್ವಿಕೆಯನ್ನು ಕಾಣುವ ಪುಣ್ಯವಿದ್ದಿತು!
ಸ್ವಂತಕ್ಕೆ ಒತ್ತು ಕಡಿಮೆಯಾದವನನ್ನು ಸಂತನೆನ್ನುವರು.
- ಹರಿದ ಧೋತಿಯನ್ನು ಬದಲಿಸದೆ, ಆ ಹಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಯಾವ ಸಂತರಿಗೇನು ಕಡಿಮೆ?
ನಿತ್ಯದ ಉಡುಗೆ ತೊಡುಗೆಗಳು ಐಷಾರಾಮಿ ಪಾಶ್ಚಾತ್ಯ ಸಂಸ್ಕಾರಗಳಿಂದ ಪ್ರೇರಿತವಾಗಿದ್ದ ಭೂತಪೂರ್ವ ಪ್ರಧಾನಿಗಳನ್ನು ನೆನಪಿಸಿಕೊಂಡರೆ ಶಾಸ್ತ್ರಿ ನಮಗೆ ಅಭೂತಪೂರ್ವ ಎನಿಸುತ್ತಾರೆ! - ಈ ದೇಶದಲ್ಲಿ Hopeless Home Ministerಗಳು ಅನೇಕರು ಆಗಿಹೋಗಿದ್ದಾರೆ; Homeless Home Minister(ಸ್ವಂತ ಮನೆಯಿಲ್ಲದ ಗೃಹ ಮಂತ್ರಿ) ಎಂದು ಕರೆಸಿಕೊಂಡಿದ್ದರೆ ಅದು ಲಾಲ್ ಬಹಾದ್ದೂರ್ ಶಾಸ್ತ್ರಿ ಮಾತ್ರ!
- ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳನ್ನು ಓದಿಸಲು ಖರ್ಚು ಮಾಡುವ ಹಣವನ್ನು ಕೂಡಿಸಿದರೆ, ಆ ಹಣದಲ್ಲಿ ಭಾರತದ ಎಲ್ಲ ಬಡಮಕ್ಕಳಿಗೆ ನಿಶ್ಶುಲ್ಕವಾದ ವಿದ್ಯಾಭ್ಯಾಸ ನೀಡಬಹುದು! ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಮಕ್ಕಳ ಟ್ಯೂಷನ್ ನಿಲ್ಲಿಸಿ, ಆ ಹಣವನ್ನು ರಾಷ್ಟ್ರಾರ್ಪಣೆ ಮಾಡಿದರು!
“ನಿಮ್ಮ ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ” ಎಂಬ ಟ್ಯೂಟರ್ ಮಾತಿಗೆ ಶಾಸ್ತ್ರಿಗಳ ಪ್ರತಿಕ್ರಿಯೆಯು ರಾಷ್ಟ್ರಕ್ಕೇ ಪಾಠ! “ಆಗಲಿ ಬಿಡಿ, ಇಂಗ್ಲೀಷ್ ನಮ್ಮ ಭಾಷೆಯೇನಲ್ಲ; ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ” ಎಂದರು ಶಾಸ್ತ್ರಿ! - ಮನೆಗೆಲಸವನ್ನೂ, ಮನೆಯಾಕೆಯ ಶುಶ್ರೂಷೆಯನ್ನೂ ತಾನೇ ಮಾಡಿಕೊಂಡು, ಮನೆಗೆಲಸದಾಕೆಗೆ ನೀಡುವ ಹಣವನ್ನು ‘ರಾಷ್ಟ್ರಾಯ, ಇದಂ ನ ಮಮ’ ಗೈದ ಶಾಸ್ತ್ರಿಗಳಿಗೆ ನಿಜಕ್ಕೂ ರಾಷ್ಟ್ರವೇ ಮನೆಯಾಗಿತ್ತಲ್ಲವೇ!?
ವಿಪರ್ಯಾಸವೆಂದರೆ ಸ್ವಂತಕ್ಕೆ ಒತ್ತು ಕೊಡದ ಶಾಸ್ತ್ರಿಗಳ ಸುಗುಣವೇ ಸ್ವಾರ್ಥಿಗಳ, ಷಡ್ಯಂತ್ರಿಗಳ ದಾಳವಾಗಿ ಪರಿಣಮಿಸಿ, ಅವರ ಅಧಿಕಾರದ ಅವಧಿಯು ಕಿರಿದಾಯಿತು; ಬದುಕಿನ ಅವಧಿಯೂ ಕಿರಿದಾಯಿತು!
- ಮೂರು ಮಹಾಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ಶಾಸ್ತ್ರಿ ಮನಸ್ಸು ಮಾಡಿದ್ದರೆ ಎಂದೋ ಪ್ರಧಾನಿಯಾಗಬಹುದಿತ್ತು! ಆಗಿದ್ದರೆ ದೇಶಕ್ಕೆ ಇನ್ನೆಷ್ಟೋ ಒಳ್ಳೆಯದಾಗುತ್ತಿತ್ತು!
- ಸ್ವರಕ್ಷಣೆಯ ಕುರಿತು ಕಾಳಜಿ ವಹಿಸಿದ್ದರೆ ಅವರು ತಾಷ್ಕೆಂಟಿನಿಂದ ಶವವಾಗಿ ಮರಳಿ ಬರುತ್ತಿರಲಿಲ್ಲ! ಇನ್ನಷ್ಟು ಕಾಲ ಅವರು ಪ್ರಧಾನಿಯಾಗಿದ್ದರೆ ದೇಶವೂ ಜೀವಚ್ಛವವಾಗುತ್ತಿರಲಿಲ್ಲ!
ಅಕ್ಟೋಬರ್ 2 – ಒಂದು ಅದ್ಭುತ; ಗಾಂಧೀಜಿ & ಶಾಸ್ತ್ರಿ ಎಂಬ ಈರ್ವರು ಮಹಾನಾಯಕರಿಗೆ ಜನ್ಮನೀಡಿತು.
ಗಾಂಧೀಜಿಯ ಮರಣ ಶ್ರೇಷ್ಠ; ಬದುಕಿರುವಾಗ ಅಂತರಾಳದಲ್ಲಿ, ಉಸಿರುಸಿರಿನಲ್ಲಿಯೂ ‘ರಾಮ ರಾಮ’ ಎನ್ನದವನು ಮರಣದಲ್ಲಿ ‘ಹೇ ರಾಮ್!’ ಎಂದುಸುರಲಾರ!
ಶಾಸ್ತ್ರಿಗಳ ಬದುಕು ಚೆನ್ನ; ಬದುಕಿನ ಪ್ರತಿಯೊಂದು ಉಸಿರಿನಲ್ಲಿಯೂ ‘ರಾಷ್ಟ್ರ ರಾಷ್ಟ್ರ’ ಎಂದ ಶಾಸ್ತ್ರಿಗಳು ಕೊನೆಗೂ ರಾಷ್ಟ್ರಕ್ಕಾಗಿಯೇ ತಮ್ಮ ಉಸಿರನ್ನು ತ್ಯಜಿಸಿದರು!
‘ದೇಹದ ಬಲವು ಬಲವಲ್ಲ; ಭಾವದ ಬಲವೇ ಬಲ!’ ಎಂಬ ಮಾತಿಗೆ ಇಂದಿನ\ಕಣ್ಮುಂದಿನ ಉದಾಹರಣೆ ಶಾಸ್ತ್ರಿಗಳು. ಕೃಶ-ಕುಬ್ಜ ಶರೀರವನ್ನು ನೋಡಿ, ಶಾಸ್ತ್ರಿಗಳನ್ನು ಕೀಳಂದಾಜು(Underestimate) ಮಾಡಿದವರು, ಅವರು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಬಗ್ಗು ಬಡಿದಾಗ ದಂಗು ಬಡಿದರು!
‘ನೀವು ಪಾಕಿಸ್ತಾನದ ವಿರುದ್ಧ ಯುದ್ಧವನ್ನು ನಿಲ್ಲಿಸದಿದ್ದರೆ ನಾವು ನಿಮಗೆ ಗೋಧಿ ನೀಡುವುದನ್ನು ನಿಲ್ಲಿಸುತ್ತೇವೆ’ ಎಂದು ಬೆದರಿಸಿತು ಅಮೇರಿಕಾ. ‘ನಿಮ್ಮ ಕಳಪೆ ಗುಣಮಟ್ಟದ ಗೋಧಿಯನ್ನು ತಿಂದು ಬದುಕುವುದಕ್ಕಿಂತ ರಾಷ್ಟ್ರಾಭಿಮಾನದಲ್ಲಿ ಉಪವಾಸವಿದ್ದು ಸಾಯುವುದೇ ಒಳ್ಳೆಯದು!’ ಎಂದುತ್ತರಿಸಿದರು ಶಾಸ್ತ್ರಿಗಳು!
ಹೇಡಿಯಾಗಿ ಬದುಕುವುದಕ್ಕಿಂತ ಧೀರನಾಗಿ ಸಾಯುವುದೊಳಿತು ಎನ್ನುವ ಈ ಪರಿಯ ಕೆಚ್ಚೆದೆಯ ನಾಯಕರು ದೇಶಕ್ಕೇ ಸ್ಫೂರ್ತಿಯಾಗಬಲ್ಲರು. ಆದುದರಿಂದಲೇ ‘ದೇಶಕ್ಕಾಗಿ ಪ್ರತಿ ಸೋಮವಾರ ಉಪವಾಸವಿರೋಣ’ ಎಂದು ಶಾಸ್ತ್ರಿಗಳು ಕರೆ ನೀಡಿದರೆ ದೇಶಕ್ಕೆ ದೇಶವೇ ಅದನ್ನು ಅನುಸರಿಸಿತು; ಉಪವಾಸವನ್ನು ಉತ್ಸವದಂತೆ ಆಚರಿಸಿತು!
ಈ ಸ್ಫೂರ್ತಿಯ ವ್ಯಾಪ್ತಿ ಅಂದಿನ ಭಾರತ-ಪಾಕಿಸ್ಥಾನದ ಯುದ್ಧದಿಂದ ಆರಂಭಿಸಿ ಇಂದಿನ ಮಲೆಮಹದೇಶ್ವರ ಬೆಟ್ಟದ ಭೀಕರ ಬರಗಾಲದ ವರೆಗೂ ಇದೆ! 70,000 ಗೋವುಗಳು ಅನಾವೃಷ್ಟಿಯ ಅವಸಾನದ ಅನಾಹುತಕ್ಕೊಳಗಾಗುತ್ತಿರುವಾಗ ಶ್ರೀಮಠವು ಸೋಮವಾರಗಳಂದು ಉಪವಾಸವಿದ್ದು ಆ ಮೌಲ್ಯವನ್ನು ಗೋವಿನ ಮೇವಿಗಾಗಿ ಗೋಪ್ರಾಣಭಿಕ್ಷೆಯಾಗಿ ಸಮರ್ಪಿಸಲು ಕರೆ ನೀಡಿದ್ದು ಶಾಸ್ತ್ರಿಗಳ ಸ್ಫೂರ್ತಿಯ ಪುನರವತಾರವೇ ಅಲ್ಲವೇ!
ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಸೊಬಗು! ಆದರೆ ‘ವಿರೋಧಕ್ಕಾಗಿ ವಿರೋಧ’ ‘ಆಡಳಿತ ಪಕ್ಷದವರು ಗೈದ ಒಳಿತೂ ಒಳಿತಲ್ಲ’ ಎನ್ನುವ ಭಾವ ಬಲಿತರೆ ‘ಯಾವಾಗಲೂ ಕಲಹ; ಎಲ್ಲೆಲ್ಲೂ ಕಲಹ!’ ಎಂಬಲ್ಲಿ ಅದು ಪರ್ಯವಸಾನಗೊಳ್ಳುತ್ತದೆ! ಪ್ರಜಾಪ್ರಭುತ್ವವು ಇಂದಿರುವುದು ಹಾಗೆ. ಆದರೆ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಮಾತು ಬೇರೆ. ಅವರನ್ನು ಒಪ್ಪದವರೇ ಇಲ್ಲ! ಎಲ್ಲ ಪಕ್ಷ-ಪಂಗಡಗಳ, ಎಲ್ಲ ಜಾತಿ-ಜನಾಂಗಗಳ, ಎಲ್ಲ ಪ್ರಾಂತ-ಸಿದ್ಧಾಂತಗಳ ಜನರ ಗೌರವಕ್ಕೆ ಅವರು ಪಾತ್ರರು!
ಆದರೆ ಅವರಿಗೆ ಅವ್ಯಕ್ತ ವೈರಿಗಳಿದ್ದರು; ಅವರ ಏಳ್ಗೆಯನ್ನು ಸಹಿಸದವರಿದ್ದರು; ಅವರ ಸ್ಥಾನಕ್ಕೆ ಬರಲು ಬಯಸಿದವರಿದ್ದರು. ಆದುದರಿಂದಲೇ ಮೊದಲು ಅವರಿಗೆ ಸಲ್ಲುವ ಸ್ಥಾನಗಳು ಸಲ್ಲಲಿಲ್ಲ; ಸಂದ ಬಳಿಕ ಅವರು ಬಹುಕಾಲ ಬದುಕುಳಿಯಲೂ ಇಲ್ಲ!
ಅವರ ಸಾವು ಭಾರತೀಯರಿಗೆ ಸಹಿಸಲಸಾಧ್ಯ, ಮಾತ್ರವಲ್ಲ, ನಂಬಲಸಾಧ್ಯ ಕೂಡಾ!
ದೇಶ-ದೇಶಗಳ ನಡುವೆ ದ್ವೇಷವು ಹೊತ್ತಿ, ಉರಿಯುತ್ತಿರುವ ಸನ್ನಿವೇಶದಲ್ಲಿ, ಸಮಯವಲ್ಲದ ಸಮಯದಲ್ಲಿ, ತಮ್ಮದಲ್ಲದ ದೇಶದಲ್ಲಿ, ಸಹಜವಲ್ಲದ ರೀತಿಯಲ್ಲಿ, ಯಾರೂ ಊಹಿಸಲೂ ಸಾಧ್ಯವಿಲ್ಲದಂತೆ ನಡೆದ ಅವರ ದೇಹಾಂತವು ದೇಶಕ್ಕಾದ ಅತಿ ದೊಡ್ಡ ಅನ್ಯಾಯ! ಭಾರತದ ಸರ್ವೋತ್ತಮ ಪ್ರಧಾನಿಯನ್ನು ದೇಶದ ವೈರಿಗಳು ಮತ್ತು ದೇಶದ್ರೋಹಿಗಳು ಸೇರಿ, ಸಂಚು ಹೂಡಿ, ಮುಗಿಸಿದರೇ ಎಂಬುದು ಇಂದಿಗೂ ದೇಶಭಕ್ತರೆಲ್ಲರ ಹೃದಯವನ್ನು ಕಾಡುವ-ಸುಡುವ ಪ್ರಶ್ನೆ.
ಅದಲ್ಲದಿದ್ದರೆ…..
- ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿದ ಶಾಸ್ತ್ರಿಗಳಿಗೆ; ಅಮೇರಿಕೆಯ ಒತ್ತಡಕ್ಕೂ ಮಣಿಯದ ಶಾಸ್ತ್ರಿಗಳಿಗೆ; ಮರಣದ ದಿನವೂ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ನನ್ನು ಸಂಧಾನದ ಸಂವಾದದಲ್ಲಿ ಮಖಾಡೆ ಮಲಗಿಸುವಷ್ಟು ಗಟ್ಟಿ ಎದೆಯಲ್ಲಿದ್ದ ಧೀರನಾಯಕ ಶಾಸ್ತ್ರಿಗಳಿಗೆ ಅದೇ ದಿನ ರಾತ್ರಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿಹೋಯಿತೇ?
- ಶಾಸ್ತ್ರಿಗಳ ವೈದ್ಯರ ಪ್ರಕಾರ ಅವರಿಗೆ ಆ ಮೊದಲು ಹೃದಯದ ಯಾವುದೇ ತೊಂದರೆಗಳಿರಲಿಲ್ಲ; ಅಂದ ಮೇಲೆ ಆ ದಿನ ನಿಜವಾಗಿಯೂ ನಡೆದದ್ದೇನು?
- ಹೃದಯಾಘಾತದ ಮರಣದಲ್ಲಿ ಶರೀರವು ನೀಲಿಗಟ್ಟುವುದೇ?
- ಶಾಸ್ತ್ರಿಗಳ ಶರೀರದಲ್ಲಿ, ಹೊಟ್ಟೆಯ ಭಾಗದಲ್ಲಿ ಕಂಡು ಬಂದ ಕತ್ತರಿಸಿದ ಗುರುತುಗಳಿಗೇನರ್ಥ?
- ಸಂಶಯಕ್ಕೆಡೆಯಾಗುವ ರೀತಿಯಲ್ಲಿ ಮರಣವನ್ನಪ್ಪಿದ ರಾಷ್ಟ್ರದ ಪ್ರಧಾನಮಂತ್ರಿಯ ಶವದ ಮರಣೋತ್ತರ ಪರೀಕ್ಷೆಯನ್ನೇಕೆ ನಡೆಸಲಿಲ್ಲ?
- ಮಾಹಿತಿ-ಹಕ್ಕಿನ ಅಡಿಯಲ್ಲಿ ಶಾಸ್ತ್ರಿಗಳ ಮರಣದ ಕುರಿತು ಹಲವು ಬಾರಿ ಕೇಳಲಾದ ಪ್ರಶ್ನೆಗಳಿಗೆ ಏಕೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ?
- ಗಾಂಧಿ ನೆಹರೂ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅಂತ್ಯಕ್ರಿಯೆ ನಡೆಸಲು ಏನಡ್ಡಿಯಿತ್ತು?
- ದಿಲ್ಲಿಯಲ್ಲಿ ಅಂತ್ಯಕ್ರಿಯೆಗೆ ಅವಕಾಶ ಕೊಡದೆ, ಅಲಹಾಬಾದಿಗೆ ಕಳುಹಿಸಿ, ಅಪಮಾನಿಸುವ ಪ್ರಯತ್ನವು ಏಕೆ ನಡೆಯಿತು?
- ಶಾಸ್ತ್ರಿಯವರ ಪತ್ನಿ ಲಲಿತಾದೇವಿಯವರು ಸರ್ವರ ಮುಂದೆ ಸತ್ಯವನ್ನು ಬಯಲು ಮಾಡುವ, ಸತ್ಯಾಗ್ರಹ ಹೂಡುವ ಮಟ್ಟಕ್ಕೆ ಹೋದ ಮೇಲೆ ದಿಲ್ಲಿಯಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಲಾಯಿತು ಎನ್ನುವುದು ರಾಷ್ಟ್ರ ಕಂಡ ಶ್ರೇಷ್ಠನಾಯಕನಿಗೆ ಸಲ್ಲುವ ಗೌರವವೇ?
- ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಮೊದಲಿಗೆ ಮೊಳಗಿಸಿದ ಮಹಾನುಭಾವನ ಸಮಾಧಿಯ ಮೇಲೆ ಆ ವಾಕ್ಯಗಳನ್ನು ಕೆತ್ತಲು ಏಕೆ ಅಡ್ಡಿಪಡಿಸಲಾಯಿತು?
- ಗುಣಹೀನನನ್ನೂ ಮರಣದ ಬಳಿಕ ಗುಣವಂತನೆಂದು ಹೊಗಳುವ ಪರಿಪಾಠವಿದೆ! ಆದರೆ ಮಹಾಗುಣವಂತನಾಗಿಯೂ ಬದುಕಿರುವಾಗಲೇ ತನ್ನ ಪಕ್ಷದಲ್ಲಿ ಅವಗಣನೆಗೊಳಗಾದ ಲಾಲ್ ಬಹದೂರ್ ಶಾಸ್ತ್ರಿಗಳ ಸ್ಮರಣೆಯು ಮರಣದ ಬಳಿಕವೂ ಇಲ್ಲವೇಕೆ!?
- ಶಾಸ್ತ್ರಿಗಳು ಶತಕೋಟಿ ಭಾರತೀಯರ ಸೊತ್ತು. ಅವರ ಸಾವು ಹೇಗಾಯಿತೆಂದು ಕೇಳುವ ಹಕ್ಕು ನಮಗಿಲ್ಲವೇ! ಉತ್ತರ ನೀಡಲೇಬೇಕಾದ ಬಾಧ್ಯತೆಯು ಬಳಿಕ ಬಂದ ಸರಕಾರಗಳಿಗಿಲ್ಲವೇ?
~
ಕೊನೆಯ ಪ್ರಶ್ನೆಯನ್ನು ವಿಧಿಗೇ ಕೇಳಬೇಕೆನಿಸುತ್ತಿದೆ:
ದೇಶವಾಸಿಗಳಿಗೆ ವರವಾಗಿ ಬಂದಿದ್ದ, ಇನ್ನಷ್ಟು ಕಾಲ, ಅಥವಾ ಇನ್ನೆಷ್ಟೋ ಕಾಲ ದೇಶಕ್ಕೆ ಬೇಕಾಗಿದ್ದ ದೇವತೆಯನ್ನು ಅಕಾಲದಲ್ಲಿ ಏಕೆ ಕಿತ್ತುಕೊಂಡೆ? ಯಾರಿಗೂ ಕೇಡು ಬಯಸದ, ಯಾವ ತಪ್ಪೂ ಮಾಡದ ನಮ್ಮ ನಾಡಿನ ಕಣ್ಮಣಿಗೇಕೆ ಈ ಪರಿಯ ಸಾವು?
ಕೊನೆಯಲ್ಲೊಂದು ಸಮಾಧಾನದ ಸಾಲು:
ಬಹುಕಾಲದ ಬಳಿಕ ಭಾರತದಲ್ಲಿ ಬಹುಭರವಸೆಯ ನಾಯಕನೊಬ್ಬನ ಉದಯವು ನರೇಂದ್ರಮೋದಿಯವರ ರೂಪದಲ್ಲಿ ಆಗಿದೆ. ಭಾರತದ ಪ್ರಕೃತ ಪ್ರಧಾನ ಮಂತ್ರಿಗಳಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಸ್ಪಷ್ಟಚ್ಛಾಯೆಯಿದೆ. ದೇವರು ನರೇಂದ್ರಮೋದಿಯವರಿಗೆ ಶಾಸ್ತ್ರಿಗಳಿಗಿದ್ದ ಸಾಮರ್ಥ್ಯ-ಸನ್ಮತಿಗಳನ್ನೂ, ಶಾಸ್ತ್ರಿಗಳಿಗೆ ಇಲ್ಲದೇ ಹೋದ ಆಯುಸ್ಸನ್ನೂ ನೀಡಿ, ಭಾರತವನ್ನು ಭಗವಂತನೆತ್ತರಕ್ಕೆ ಏರಿಸುವ ಭಗವತ್ಕಾರ್ಯದಲ್ಲಿ ಭಾಗವಾಗುವ ಭಾಗ್ಯವನೀಯಲಿ..
~*~*~
ಇದು ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ. ಅಕ್ಟೋಬರ್ 2ರಂದು ಗತಪೂರ್ವದ ಪ್ರಧಾನಿಗಳಾದ ಲಾಲ್ ಬಹಾದೂರ್ ಶಾಸ್ತ್ರಿಗಳ ಜನ್ಮದಿನದ ಪ್ರಯುಕ್ತ ವಿಶೇಷ ಲೇಖನ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
October 2, 2017 at 7:52 AM
ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಸ್ವಚ್ಛ ಹಾಗೂ ನ್ಯಾಯಯುತ ಆಡಳಿತ, ಅವರ ಜೀವನಶೈಲಿಯನ್ನು ತೆರೆದಿಟ್ಟ ರೀತಿ ಅದ್ಬುತ. ಅವರ ಆದರ್ಶ, ಪ್ರಾಮಾಣಿಕತೆ ಇಂದು ಯಾರಲ್ಲೂ ಇಲ್ಲ. ಶ್ರೀ ಸಂಸ್ಥಾನದವರು ಇಂಥ ಒಬ್ಬ ಸಂತನಂತಹ ರಾಜಕಾರಣಿಯನ್ನು ತೆರೆದಿಟ್ಟು ಮುಂದಿನ ಪೀಳಿಗೆಗೆ ಅಪೂರ್ವ ಮಾಹಿತಿಯನ್ನು ಕರುಣಿಸಿದರು
October 2, 2017 at 9:54 AM
“ಮಹಾನ್ ವವ ವಿಜನಾತಿ ಮಹಾಜನ ಪರಿಶ್ರಮಮ್”
“ಮಹಾಪುರುಷರು ಮಾತ್ರ ಲೋಕೋಪಕಾರಿಗಳ ಮಾಹಾಕಾರ್ಯಗಳನ್ನು ಗುರುತಿಸುತ್ತಾರೆ”
ಜಯಹೋ ಶಾಸ್ತ್ರೀ ಜೀಕಿ, ಜೀತೇರಹೆ, ಜೀತೇರಹೆ;
ಸ್ವಾಮೀಜಿ -ರಾಘವೇಶ್ವರಜೀ
October 2, 2017 at 11:42 AM
ಒಳಿತಿನ ಸಾಧನೆಗಾಗಿ ನಮ್ಮ ನಾಯಕರಲ್ಲಿ ಮತ್ತೆ ಆವಿರ್ಭವಿಸಲಿ ಶಾಸ್ತ್ರೀ ಜಿ…
October 2, 2017 at 11:50 AM
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನುಡಿಗಟ್ಟಿಗೆ ಅನ್ವರ್ಥ – ಸ್ವಚ್ಛ ನಡೆ ನುಡಿಯ ಶಾಸ್ತ್ರೀಜಿಯವರದು ಎಲ್ಲರಿಗೂ ಅನುಕರಣೀಯ ವ್ಯಕ್ತಿತ್ವ.ಹರೇರಾಮ
October 2, 2017 at 10:35 PM
ಈ ಸತ್ಯ ಕಥೆಯನ್ನೋದಿದಾಗ ಎಂಥವನ ಮನಸ್ಸೂ ತಲ್ಲಣಿಸಿ ಮರುಗಿ; ಮತ್ತೊಮ್ಮೆ ಹುಟ್ಟಿಬಾ ಶಾಸ್ತ್ರೀಜಿ ಎನ್ನದಿರದು!
October 6, 2017 at 7:23 AM
ಕೆಟ್ಟದ್ದು ಸಾಯಿವುದಕ್ಕೆ ಸಾವಿರ ವರ್ಷ, ಸಾಯಿಸುವುದಕ್ಕೆ ಸಾವಿರ ವರ್ಷ.
ಒಳ್ಳೆಯದು ಬದುಕುವುದಕ್ಕೆ ಒಂದು ವರ್ಷ, ಬದುಕಿಸುವುದಕ್ಕೆ ಸಾವಿರ ವರ್ಷ.
.
ಮೆರೆಯಬೇಕು ಮಿನುಗಬೇಕು ಎಂದು ಬಣ್ಣದಂಗಿಗಳ ತೊಟ್ಟವರು.. ಹರಿಯದ ಅಭಿಮಾನದಂಗಿಗಳ ಗಳಿಸಿ ಧರಿಸಲು ಕೊಟ್ಟವನು ತಂದೆ, ತೇಜಸ್ವಿ ಮಕ್ಕಳೇ ಮಿನುಗುದೀಪ.
.
ತಂದೆಯ ಸರ್ಪಗಾವಲು, ಮಕ್ಕಳ ದೈರ್ಯ ನೂರು ಪಾಲು, ಎದೆಗಳೇ ಎದುರಿಸಿದವು. ನಿಂತ ನೆಲದಲ್ಲಿಯೇ ಕಚ್ಚುವ ಸೊಳ್ಳೆಗಳು ವಿಷಜಂತುಗಳು.. ಎದೆಯ ಮುಟ್ಟಲಿಲ್ಲ.
.
ಆ ದೈರ್ಯವೇ ರಾಷ್ಟ್ರ, ಆ ಪ್ರೇಮವೇ ದೇಶ.
.
ಶ್ರೀ ಗುರುಭ್ಯೋ ನಮಃ
January 11, 2018 at 9:43 PM
ಶಾಸ್ತ್ರೀಜಿ ಮತ್ತೊಮ್ಮೆ ಹುಟ್ಟಿ ಬರಲಿ..