ಇತ್ತೀಚಿಗೆ ನಡೆದ ವಿಗ್ರಹ ಭಂಗದ ಕುರಿತಾಗಿ #ಲೋಕಲೇಖ ಮಾಲಿಕೆಯ ಭಾಗ 2.
ಭಾಗ 1 : ಲೆನಿನ್ ಪ್ರತಿಮೆ: ಉರುಳಿಸಿದ್ದೇಕೆ ಎಂದು ಕೇಳುವ ಮೊದಲು ಸ್ಥಾಪಿಸಿದ್ದೇಕೆ ಎಂದು ಕೇಳಬೇಡವೇ?
ಇತ್ತೀಚೆಗೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯೊಂದು ಉರುಳಿದಾಗ ‘ಪ್ರಪಂಚವೇ ಉರುಳಿತು!’ ಎಂಬ ಹಾಗೆ ಕೆಲ ವಾಮಪಂಥೀಯ ವಿಚಾರವಾದಿಗಳು ಹುಯಿಲೆಬ್ಬಿಸಿದರು. ವ್ಯಕ್ತಿಯಾಗಲೀ, ವಿಗ್ರಹವಾಗಲೀ ಉರುಳಿದಾಗ ಅದನ್ನು ಸಮರ್ಥಿಸುವುದು- ಸಂಭ್ರಮಿಸುವುದು ತರವಲ್ಲವಾದರೂ, ವಿಗ್ರಹಗಳು ಎಲ್ಲಿ ಉರುಳಿದವು? ಎಷ್ಟು ಉರುಳಿದವು? ಮತ್ತು ಏಕೆ ಉರುಳಿದವು? ಎಂಬುದನ್ನು ವಿವೇಚಿಸುವ ಮೊದಲು ‘ಎಂದೂ ನಡೆಯದ, ಎಲ್ಲೂ ಆಗದ, ಯಾರೂ ಮಾಡದ ಮಹದನರ್ಥವೇ ನಡೆದುಹೋಯಿತು!’ ಎಂಬಂತೆ ಹುಯಿಲೆಬ್ಬಿಸುವುದೂ ವಿಚಾರವಂತರೆನ್ನಿಸಿಕೊಂಡವರಿಗೆ ತರವಲ್ಲ.
ವಿಗ್ರಹ ಭಂಗ: ಭಾರತದಲ್ಲಿ ಮೊದಲಲ್ಲ, ಭಾರತದಲ್ಲಿ ಮಾತ್ರವೂ ಅಲ್ಲ:
ವಾಸ್ತವವಾಗಿ ವಿಶ್ವದಾದ್ಯಂತ ಲೆನಿನ್ ಪ್ರತಿಮೆಗಳು ಉರುಳಿವೆ; ಉರುಳುತ್ತಲೇ ಇವೆ! ಲೆನಿನ್ ನ ರಾಷ್ಟ್ರದಲ್ಲಿಯೇ ಭಾರತಕ್ಕಿಂತ ಬಹು ಮೊದಲೇ ಆತನ ಪ್ರತಿಮೆಗಳು ನೆಲಕಚ್ಚಿವೆ! ಅನೇಕ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಲೆನಿನ್ ಮತ್ತಿತರ ವಾಮನಾಯಕರ ಪ್ರತಿಮಾ-ಭಂಜನ-ಸರಣಿಯನ್ನು ಸರಕಾರೀ ಅಭಿಯಾನವಾಗಿಯೇ ಕೈಗೊಳ್ಳಲಾಗಿದೆ! ಸಾರ್ವಜನಿಕರು ಪ್ರತಿಭಟಿಸುವುದಿರಲಿ, ಈ ಪರಿಯ ಅಭಿಯಾನಗಳಿಗೆ ಸಂಪೂರ್ಣ ಸಹಯೋಗವನ್ನೇ ನೀಡಿದ್ದಾರೆ!
(ಮಾಹಿತಿಕೃಪೆ: SwarajyaMag.com)
-
- ಉದಾಹರಣೆಗೆ ಉಕ್ರೇನ್; ಜನಸಂಖ್ಯಾ ದೃಷ್ಟಿಯಿಂದ ಸೋವಿಯತ್ ಒಕ್ಕೂಟದ ಎರಡನೆಯ ಅತಿದೊಡ್ಡ ರಾಷ್ಟ್ರವೆನಿಸಿದ್ದ ಉಕ್ರೇನಿನಲ್ಲಿ 1991ರ ಸುಮಾರಿಗೆ 5500ರಷ್ಟು ಲೆನಿನ್ ಪ್ರತಿಮೆಗಳಿದ್ದವು; ಇಂದು ಅಲ್ಲಿ ಉಳಿದುಕೊಂಡಿರುವುದು ಕೆಲವು ನೂರು ಮಾತ್ರ! ಲೆನಿನ್ ಮೂರ್ತಿಗಳ ಭಂಜನವು ಸುಮಾರು ಮೂರು ದಶಕಗಳಿಂದ ಉಕ್ರೇನಿನಾದ್ಯಂತ ನಡೆಯುತ್ತಿದೆ; ಅದರ ನೇತೃತ್ವವನ್ನು ಸ್ವತಃ ಅಲ್ಲಿಯ ಸರಕಾರವೇ ವಹಿಸಿದೆ!
ಲೆನಿನ್ ಸೃಷ್ಟಿಸಿದ ಕೃತ್ರಿಮ ಕ್ಷಾಮದಲ್ಲಿ 60ಲಕ್ಷದಿಂದ 80ಲಕ್ಷದಷ್ಟು ಜನರ ದಾರುಣ ಮರಣವನ್ನು ಕಂಡ ಆ ದೇಶದ ಜನರು ಅತನ ಮುಖ ನೋಡಲೂ ಹೇಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ!
- ಉದಾಹರಣೆಗೆ ಉಕ್ರೇನ್; ಜನಸಂಖ್ಯಾ ದೃಷ್ಟಿಯಿಂದ ಸೋವಿಯತ್ ಒಕ್ಕೂಟದ ಎರಡನೆಯ ಅತಿದೊಡ್ಡ ರಾಷ್ಟ್ರವೆನಿಸಿದ್ದ ಉಕ್ರೇನಿನಲ್ಲಿ 1991ರ ಸುಮಾರಿಗೆ 5500ರಷ್ಟು ಲೆನಿನ್ ಪ್ರತಿಮೆಗಳಿದ್ದವು; ಇಂದು ಅಲ್ಲಿ ಉಳಿದುಕೊಂಡಿರುವುದು ಕೆಲವು ನೂರು ಮಾತ್ರ! ಲೆನಿನ್ ಮೂರ್ತಿಗಳ ಭಂಜನವು ಸುಮಾರು ಮೂರು ದಶಕಗಳಿಂದ ಉಕ್ರೇನಿನಾದ್ಯಂತ ನಡೆಯುತ್ತಿದೆ; ಅದರ ನೇತೃತ್ವವನ್ನು ಸ್ವತಃ ಅಲ್ಲಿಯ ಸರಕಾರವೇ ವಹಿಸಿದೆ!
-
- ಮಂಗೋಲಿಯಾದ ರಾಜಧಾನಿ ಊಲಾನ್ ಬಾಟರ್`ನಲ್ಲಿನ ಲೆನಿನ್ ಮೂರ್ತಿಯು ಕಮ್ಯೂನಿಸ್ಟ್ ದಬ್ಬಾಳಿಕೆಯ ಪ್ರತೀಕವೆಂದು ಸ್ವತಃ ಮೇಯರ್ ಘೋಷಣೆಗೈದರು, ಮಾತ್ರವಲ್ಲ, ಸಾರ್ವಜನಿಕರ ಸಂಭ್ರಮದ ಬೆಂಬಲದೊಂದಿಗೆ ಲೆನಿನ್ ವಿಗ್ರಹವನ್ನು ಭಗ್ನಗೊಳಿಸಿದರು!
-
- 40 ವರ್ಷಗಳ ಕಮ್ಯೂನಿಸ್ಟ್ ಶಾಸನದ ಕಪಿಮುಷ್ಟಿಯಿಂದ ಹೊರಬಂದ ರೊಮೇನಿಯಾದ ಜನತೆಯು, ರಾಜಧಾನಿಯ ಕೇಂದ್ರಸ್ಥಾನದಲ್ಲಿದ್ದ ಬೃಹತ್ ಲೆನಿನ್ ಪ್ರತಿಮೆಯನ್ನು ಹರ್ಷೋದ್ಗಾರಗಳ ನಡುವೆ ಧರೆಗುರುಳಿಸಿ ಸಂಭ್ರಮಿಸಿತು!
-
- ಕಮ್ಯೂನಿಸ್ಟರ ಕುರಿತಾದ ಆಕ್ರೋಶವು ಆಫ್ರಿಕಾದಲ್ಲಿಯೂ ಕಮ್ಮಿಯಿಲ್ಲ! ಇಥಿಯೋಪಿಯದಲ್ಲಿ ಅಡ್ಡಡ್ಡ ಮಲಗಿರುವ ಲೆನಿನ್ ವಿಗ್ರಹದ ದುರವಸ್ಥೆ ನೋಡಿ!
-
- ಕೊನೆಯದಾಗಿ ರಷಿಯಾ: ಎಲ್ಲಿ ಮೊತ್ತಮೊದಲ ಕಮ್ಯೂನಿಸ್ಟ್ ಸಾರ್ವಭೌಮತ್ವವು ಉದಯವಾಗಿತ್ತೋ, ಯಾವುದು ಲೆನಿನ್ನನ ಮಾತೃಭೂಮಿಯೋ, ಅಲ್ಲಿಯೇ ಆತನ ವಿಗ್ರಹಗಳು ವಿಚಿತ್ರವಾಗಿ, ಕೆಲವೊಮ್ಮೆ ವಿಕೃತವಾಗಿ ಭಗ್ನಗೊಳ್ಳುತ್ತಿವೆ!
ಲೆನಿನ್`ನದು ಮಾತ್ರವಲ್ಲ, ಇತರ ಹಲವಾರು ಕಮ್ಯೂನಿಸ್ಟ್ ನಾಯಕರ ಪ್ರತಿಮೆಗಳು ಜಗತ್ತಿನಾದ್ಯಂತ ಭಗ್ನಗೊಂಡಿವೆ; ಉದಾಹರಣೆಗೆ, ಹಂಗರಿಯ ರಾಜಧಾನಿಯಲ್ಲಿ ಭಗ್ನಗೊಂಡ ಆತನ ಉತ್ತರಾಧಿಕಾರಿ ಸ್ಟಾಲಿನ್ ಪ್ರತಿಮೆ:
- ೧೯೫೧ರಲ್ಲಿ ಜೋಸೆಫ್ ಸ್ಟಾಲಿನ್’ಗೆ, ಆತನ ೭೦ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಹಂಗರಿಯ ಜನತೆಯಿಂದ ಬುಡಾಪೆಸ್ಟ್’ನಲ್ಲಿ ಸ್ಥಾಪಿಸಲ್ಪಟ್ಟ ಆತನದೇ ವಿಗ್ರಹವನ್ನು, ೧೯೫೬ರ ಅಕ್ಟೋಬರ್ ೨೩ರಂದು – ಸ್ಥಾಪಿಸಿದ ಐದೇ ವರ್ಷದಲ್ಲಿ – ಲಕ್ಷಸಂಖ್ಯೆಯಲ್ಲಿ ಸೇರಿದ್ದ ವಾಮ-ವಿರೋಧೀ ಚಳುವಳಿಕಾರರು ಧ್ವಂಸಗೊಳಿಸಿದರು! ಅಂದು ಆ ವಿಗ್ರಹದ ಪಾದರಕ್ಷೆಗಳನ್ನಷ್ಟೇ ಉಳಿಸಿ, ಅದರೊಳಗೆ ಹಂಗರಿಯ ಬಾವುಟವನ್ನು ನೆಟ್ಟು, ಚಳುವಳಿಕಾರರು ವಿಜೃಂಭಿಸಿದ್ದರು!
- ಹಂಗರಿಯ ಮಾತಿರಲಿ, ಸ್ವತಃ ಸ್ಟಾಲಿನ್`ನ ತಾಯ್ನಾಡಾದ ‘ಜಾರ್ಜಿಯಾ’ದಲ್ಲಿ- ಅದೂ ಆತನ ಸ್ವಂತ ಊರಾದ ‘ಗೋರಿ’ಯಲ್ಲಿಯೇ ಸ್ಟಾಲಿನ್ ವಿಗ್ರಹವು ಗೋರಿ ಸೇರಿದೆ! ಊರಿನ ಚೌಕಿಯಲ್ಲಿ ವಿರಾಜಿಸುತ್ತಿದ್ದ ಆ ವಿಗ್ರಹವನ್ನು ೨೦೧೦ರಲ್ಲಿ, ಅಲ್ಲಿನ ಸರಕಾರವೇ ರಾತ್ರೋರಾತ್ರಿ ಬುಡಸಮೇತವಾಗಿ ಸ್ಥಳ ಬಿಡಿಸಿತ್ತು!
ತನ್ನೂರಿನಲ್ಲಿಯೇ ದೆವ್ವವೆನಿಸಿಕೊಂಡವನು ನಮ್ಮೂರಿನಲ್ಲಿ ದೇವರಾಗುವುದಾದರೂ ಹೇಗೆ!?
ಇತ್ತೀಚಿನ ಕಾಲಘಟ್ಟದಲ್ಲಿ ಕಮ್ಯೂನಿಸ್ಟ್ ನಾಯಕರ ಅದೆಷ್ಟು ಪ್ರತಿಮೆಗಳು ಭಗ್ನಗೊಂಡಿವೆಯೆಂದರೆ ಯಾವ ಕಮ್ಯೂನಿಸ್ಟ್ ನಾಯಕನಿಗೆ ಪ್ರತಿಮೆಯಿಲ್ಲವೋ ಅವನದು ಮಾತ್ರವೇ ಪ್ರತಿಮಾಭಂಗವು ನಡೆದಿಲ್ಲ ಎನ್ನುವಂತಿದೆ!
ವಿಗ್ರಹಭಂಗಕ್ಕೆ ವಿಶ್ವಾಸಭಂಗವೇ ಕಾರಣ!
ಒಂದು ಕಾಲದಲ್ಲಿ ಜನಕೇಂದ್ರಗಳಲ್ಲಿ ರಾರಾಜಿಸಿದ ವಾಮನಾಯಕರ ಮೂರ್ತಿಗಳು ಈ ಪರಿಯಲ್ಲಿ ಭಂಗಗೊಳ್ಳುತ್ತಿರುವುದಾದರೂ ಏಕೆ? ಅದೂ ಪರಕೀಯರಾರದೋ ಆಕ್ರಮಣಕ್ಕೆ ತುತ್ತಾಗಿಯಲ್ಲ; ಆಯಾ ದೇಶಗಳ ಪ್ರಜೆಗಳ, ಸರಕಾರಗಳ ಕೈಯಲ್ಲಿಯೇ ಈ ಮೂರ್ತಿಗಳು ಭಂಗಗೊಳ್ಳುತ್ತಿರಲು ಕಾರಣವೇನಿರಬಹುದು?
ಉತ್ತರ ಸರಳ: ವಿಶ್ವಾಸಭಂಗವೇ ವಿಗ್ರಹಭಂಗಕ್ಕೆ ಕಾರಣ! ವಾಮಸಿದ್ಧಾಂತದ ಕುರಿತಾದ ಜನತೆಯ ವಿಶ್ವಾಸವು ಕರಗಿದೆ..ಕರಗುತ್ತಿದೆ! ಕಮ್ಯೂನಿಸ್ಟ್ ಆಡಳಿತದ ದಬ್ಬಾಳಿಕೆ-ಕ್ರೌರ್ಯಗಳಿಂದ ಮುಕ್ತಿಯನ್ನು ಜನತೆ ಬಯಸಿದೆ..ಬಯಸುತ್ತಲಿದೆ! ಜನಾಕ್ರೋಶದ ಸುನಾಮಿಯ ಹೊಡೆತಕ್ಕೆ ಕಮ್ಯೂನಿಸಂ ಎಂಬ ಹಡಗು ಒಡೆಯುತ್ತಿದೆ…ಮುಳುಗುತ್ತಿದೆ! ಬಹುಕಾಲದಿಂದ ಅದುಮಿಟ್ಟ ಜನತೆಯ ಆಕ್ರೋಶವು ಜ್ವಾಲಾಮುಖಿಯಾಗಿ ಸ್ಫೋಟಿಸಿ, ವಾಮರ-ವಿಗ್ರಹಗಳನ್ನು- ವಿಚಾರಗಳನ್ನು- ಸರಕಾರಗಳನ್ನು ಬಲಿ ತೆಗೆದುಕೊಳ್ಳುತ್ತಿದೆ! ವಾಮವಾದದ ಕುರಿತಾದ ವಿಶ್ವಾಸಭಂಗವೇ ವಿಗ್ರಹಭಂಗವಾಗಿ ಪರ್ಯವಸಾನಗೊಳ್ಳುತ್ತಿದೆ!
ತತ್ತ್ವವೇ ಜನಮನದಿಂದ ಮರೆಯಾದ ಮೇಲೆ ಮೂರ್ತಿಗಳು ಜನಕೇಂದ್ರದಲ್ಲಿ ಮೆರೆಯುವುದಾದರೂ ಹೇಗೆ? ಕಮ್ಯೂನಿಸ್ಟ್ ಸಿದ್ಧಾಂತವೇ ಉರುಳಿ ಹೋಗುತ್ತಿರುವಾಗ ನಾಯಕರ ಪ್ರತಿಮೆಗಳು ಉಳಿದುಕೊಳ್ಳುವುದಾದರೂ ಹೇಗೆ!? ಅಡಿಪಾಯವೇ ಅಳಿದ ಬಳಿಕ ಛಾವಣಿ ಉಳಿಯಲು ಸಾಧ್ಯವೇ? ತಮ್ಮನ್ನು ಬಹುಕಾಲ ಆಳಿದ ನಾಯಕನ – ಮೂರ್ತಿಯನ್ನು ನೋಡಲೂ – ಜನ ಹೇಸುವರೆಂದರೆ ಅವರ ಆಳ್ವಿಕೆ ಹೇಗಿದ್ದಿರಬಹುದು?
ಕಮರುತ್ತಿದೆ ಕಮ್ಯೂನಿಸಂ:
ನಿಜವಾಗಿಯೂ ಕಮ್ಯೂನಿಸಂ ಅವಸಾನ ಹೊಂದುತ್ತಿದೆಯೇ?
“ಅವಸಾನ ಹೊಂದುತ್ತಿರುವುದಲ್ಲ; ಮೂಲ ಕಮ್ಯೂನಿಸಂ ಎಂದೋ ಸತ್ತಿದೆ!” ಎನ್ನುತ್ತಾನೆ ಕಮ್ಯೂನಿಸಂನ ವಿಕಾಸ-ವಿನಾಶಗಳ ಕುರಿತು ತಲಸ್ಪರ್ಶಿಯಾಗಿ ಅಧ್ಯಯನ ನಡೆಸಿದ, ಲೆನಿನ್-ಸ್ಟಾಲಿನ್-ಟ್ರಾಟ್ಸ್ಕಿಗಳ ಜೀವನ ಚರಿತ್ರೆಗಳನ್ನು ವಿರಚಿಸಿದ, ಇತಿಹಾಸಜ್ಞ ರಾಬರ್ಟ್ ಸರ್ವೀಸ್! ಅವನ ಶಬ್ದಗಳಿವು: “In it’s original form, it’s long been dead!”
ಅದೊಂದು ಕಾಲವಿತ್ತು; ಕಮ್ಯೂನಿಸಂ ವಿಶ್ವದ ಬಹು ದೊಡ್ಡ ಭಾಗವನ್ನೇ ಆಳುತ್ತಿತ್ತು; ಸಾಂಕ್ರಾಮಿಕ ರೋಗದಂತೆ ವಿದ್ಯುದ್ವೇಗದಲ್ಲಿ ಹರಡುತ್ತಲೂ ಇತ್ತು! ಅದು 1989-90ರ ಕಾಲಘಟ್ಟ: ಆಧುನಿಕ ವಿಶ್ವದ 15 ಸ್ವತಂತ್ರ ರಾಷ್ಟ್ರಗಳು, ಅಂದು ಸೋವಿಯತ್ ಒಕ್ಕೂಟದ ಹೆಸರಿನಲ್ಲಿ ಕಮ್ಯೂನಿಸಂನ ಕಪಿಮುಷ್ಟಿಯಲ್ಲಿದ್ದವು; ಅದಲ್ಲದೇ, ವಿಶ್ವದ ಇನ್ನಿತರ 21 ದೇಶಗಳಲ್ಲಿ ಕಮ್ಯೂನಿಸ್ಟ್ ಶಾಸನವಿತ್ತು. ಜಗತ್ತಿನ 174 ಕೋಟಿ ಜನರು ನೇರವಾಗಿ ಕಮ್ಯೂನಿಸ್ಟ್ ಶಾಸನಕ್ಕೆ ಒಳಪಟ್ಟಿದ್ದರು; ಅಂದರೆ ವಿಶ್ವದ 33%ದಷ್ಟು ಜನರು ಕಮ್ಯೂನಿಸ್ಟರ ಆಣತಿಗೊಳಪಟ್ಟು ಬಾಳುತ್ತಿದ್ದರು; ಇನ್ನು, ವಾಮರ ಸರಕಾರವಿರದಲ್ಲಿಯೂ – ವಾಮಸಿದ್ಧಾಂತವನ್ನೊಪ್ಪುವ, ವಾಮಪಕ್ಷಗಳಿಗೆ ಸೇರಿರುವ ಅಥವಾ ವಾಮರ ಪ್ರಭಾವಕ್ಕೊಳಪಟ್ಟಿರುವ ಜನರು ಜಗತ್ತಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿಯೇ ಇದ್ದರು!
ಆದರೆ ಇಂದೊಂದು ಕಾಲ ಬಂದಿದೆ: ವಿಶಾಲ ವಿಶ್ವದಲ್ಲಿ, ಇಂದು ಕೇವಲ ನಾಲ್ಕು ದೇಶಗಳಲ್ಲಿ ಕಮ್ಯೂನಿಸ್ಟ್ ಸರಕಾರಗಳಿವೆ; ಅದರಲ್ಲಿಯೂ, ಮೂಲ ಕಮ್ಯೂನಿಸ್ಟ್ ತತ್ತ್ವವನ್ನು ಅಷ್ಟೋ ಇಷ್ಟೋ ಅನುಸರಿಸುವ ಸರಕಾರಗಳ ವ್ಯಾಪ್ತಿಯಲ್ಲಿ ವಾಸಿಸುವವರ ಸಂಖ್ಯೆಯು ಪ್ರತಿಶತ ಒಂದರಷ್ಟು ಜನರಲ್ಲಿಯೂ ಇಲ್ಲ; ಒಂದು ಕಾಲದಲ್ಲಿ ಸಮಸ್ತ ವಿಶ್ವವನ್ನೇ ಆವರಿಸುವ ಲಕ್ಷಣ ತೋರಿದ್ದ ಕಮ್ಯೂನಿಸಂ ಇಂದು ವಿಶ್ವದ ಜನಸಂಖ್ಯೆಯಲ್ಲಿ 0.47%ಕ್ಕೆ ಇಳಿದಿದೆ.
ಸರಕಾರಗಳಿವೆ; ಆದರೆ ಸಿದ್ಧಾಂತ ಸತ್ತಿದೆ!
ಕಮ್ಯೂನಿಸ್ಟರು ಆಳುತ್ತಿರುವಲ್ಲಿಯೂ ಸರಕಾರಗಳಿವೆ, ಆದರೆ ಸಿದ್ಧಾಂತವಿಲ್ಲ! ಉದಾಹರಣೆಗೆ-
- ಕಮ್ಯೂನಿಸ್ಟ್ ರಾಷ್ಟ್ರವೆನಿಸಿಕೊಂಡಿರುವ ಚೀನಾದಲ್ಲಿ ಸಿರಿ~ಬಡತನಗಳ ನಡುವೆ ಬಲು ದೊಡ್ಡ ಅಂತರವಿದೆ: ಚೀನಾದ ಬಡವ, ಅಮೇರಿಕಾದ ಬಡವನಿಗಿಂತ ಎಷ್ಟೋ ಹೆಚ್ಚು ಬಡವ; ಆದರೆ ಅದೇ ದೇಶದಲ್ಲಿರುವ ಶತಕೋಟೀಶ್ವರರ ಸಂಖ್ಯೆ 128!
- ತಥಾಕಥಿತ ಕಮ್ಯೂನಿಸ್ಟ್ ಚೀನಾದಲ್ಲಿ ಲಂಚದ ಹಾವಳಿ ಎಷ್ಟಿದೆಯೆಂದರೆ- ಇನ್ನೇನು ಶಸ್ತ್ರಚಿಕಿತ್ಸೆಗೊಳಪಡಲಿರುವ ರೋಗಿಯು ವೈದ್ಯನಿಗೆ ಚಿಕಿತ್ಸಾ-ಮಂಚದ ಮೇಲೆಯೇ ಲಂಚ ತೆರಬೇಕು; ಅದಿಲ್ಲವಾದರೆ ಜೀವವನ್ನೇ ತೆರಬೇಕು! ಸುದೈವ, ಭಾರತದಲ್ಲಿ ಲಂಚದ ಹಾವಳಿ ಇನ್ನೂ ಆ ಮಟ್ಟವನ್ನು ಮುಟ್ಟಿಲ್ಲ!
ಚೀನಾದ ಸರಕಾರೀ ಒಡೆತನದ ಉದ್ಯಮಗಳು ಬಂದ ಲಾಭವನ್ನು ಜನರಿಗೆ ಹಂಚುವುದಿಲ್ಲ! - ಚೀನಾದ ಪ್ರಕೃತ ಅಧ್ಯಕ್ಷ ಇನ್ನೇನು ಸರ್ವಾಧಿಕಾರಿಯಾಗುವುದರಲ್ಲಿದ್ದಾನೆ! ಭ್ರಷ್ಟಾಚಾರ-ನಿಗ್ರಹದ ನೆಪದಲ್ಲಿ ತನ್ನ ವಿರೋಧಿಗಳೆಲ್ಲರನ್ನೂ ಮುಗಿಸಿರುವ ಆತ, ಹತ್ತು ವರ್ಷಗಳ ಅಧ್ಯಕ್ಷತೆಯ ಕಾಲಮಿತಿಯನ್ನು ಮೊನ್ನೆ ಮೊನ್ನೆಯಷ್ಟೇ ತೆಗೆದುಹಾಕಿದ್ದಾನೆ! ಇನ್ನು ಅವನು ಸಾಯುವವರೆಗೂ ಅಧ್ಯಕ್ಷನಾಗಿರಲು, ಬಡಪಾಯಿ ಜನರನ್ನು ಸಾಯಿಸುತ್ತಿರಲು ಯಾವ ಅಡ್ಡಿಯೂ ಇಲ್ಲ!
ಈ ಉದಾಹರಣೆಗಳು ಶ್ರುತಪಡಿಸುವ ಸತ್ಯವೆಂದರೆ ‘ಕಮ್ಯೂನಿಸ್ಟ್ ಸರಕಾರಗಳಿರುವಲ್ಲಿಯೂ ಕಮ್ಯೂನಿಸಂ ಉಳಿದುಕೊಂಡಿರುವುದು ಪುಸ್ತಕದಲ್ಲಿ ಮಾತ್ರ!’
ಕೊನೆಯಲ್ಲೊಂದು ಪ್ರಶ್ನೆ: ‘ಕಮ್ಯೂನಿಸಂನ ಅವಸಾನವು ಜಗತ್ತಿಗೆ ಲಾಭವೇ? ನಷ್ಟವೇ?’
ಇತಿಹಾಸವನ್ನು ಅವಲೋಕಿಸಿದರೆ ‘ಕಮ್ಯೂನಿಸಂನಿಂದ ಲಾಭಾನ್ವಿತರಾದವರು ಲೆನಿನ್-ಸ್ಟಾಲಿನ್`ಗಳಂಥವರು ಮಾತ್ರವೇ ಹೊರತು ಸಾಮಾನ್ಯ ಜನರಲ್ಲ’ ಎಂಬುದು ಸ್ಪಷ್ಟ! ಸಾಮಾನ್ಯ ಜನರಿಗೆ ಅದರಿಂದ ಪ್ರಯೋಜನವಿದ್ದಿದ್ದರೆ ಕಮ್ಯೂನಿಸಂ ಅವಸಾನಗೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ; ಹಾಗೆಯೂ ಅದು ಅವಸಾನಗೊಂಡರೆ ಸಾಮಾನ್ಯ ಜನತೆಯು ಅದಕ್ಕಾಗಿ ಶೋಕಿಸುತ್ತಿತ್ತು. ಇಂದು ಕಮ್ಯೂನಿಸಂ ಸರ್ವಾನಾಶವಾಗುತ್ತಿದ್ದರೂ ಅದಕ್ಕಾಗಿ ಪರಿತಪಿಸುವವರು ಯಾರೂ ಇಲ್ಲ! ಆದರೆ ಸಮಾಧಾನ ಪಡುವವರು ಧಾರಾಳ!
ಸಾಮಾನ್ಯವಾಗಿ, ಸಿದ್ಧಾಂತಗಳು ಸಮರ್ಪಕವಾಗಿರುತ್ತವೆ; ಅದರ ಕಾರ್ಯಾನ್ವಯದಲ್ಲಿ ಲೋಪದೋಷಗಳಿರುತ್ತವೆ. ಆದರೆ ಇಲ್ಲಿ ಹಾಗಲ್ಲ, ಸಿದ್ಧಾಂತವೇ ದೋಷಗ್ರಸ್ತ! ಆದುದರಿಂದಲೇ ಜಗತ್ತಿಗೆ ಕಮ್ಯೂನಿಸಂನ ಕೊಡುಗೆಯೆಂದರೆ ರಕ್ತ- ಹಿಂಸೆ- ಕ್ರೌರ್ಯ- ದಬ್ಬಾಳಿಕೆ- ಸಾವು- ಸಮೂಹ ಸಂಹಾರ ಮತ್ತು ಇದೆಲ್ಲದರ ಹಿಂದಿರುವ ಒಂದಷ್ಟು ಕ್ರೂರ ಸರ್ವಾಧಿಕಾರಿಗಳು ಮಾತ್ರ! ಒಂದು ವರ್ಗದ ಏಳ್ಗೆಯ ಹೆಸರಿನಲ್ಲಿ ಮತ್ತುಳಿದ ವರ್ಗಗಳನ್ನು ಕೊಲ್ಲುವ ಸಿದ್ಧಾಂತವು ಸಿದ್ಧಾಂತವೇ ಅಲ್ಲ! ಆದುದರಿಂದಲೇ ಕಮ್ಯೂನಿಸಂನ ಅವಸಾನವು ಜಗತ್ತಿಗೆ ಹಿತವಾರ್ತೆಯೇ ಹೊರತು ದುರ್ವಾರ್ತೆಯಲ್ಲ!
ಜೀವ ಸತ್ತರೆ ಅಳುವುದುಂಟು; ಸಾವು ಸತ್ತರೆ, ನೋವು ಸತ್ತರೆ ಅಳುವುದುಂಟೇ!?
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
March 25, 2018 at 9:51 AM
ಪ್ರಕೃತಿಗೆ ವಿರುದ್ದವಾದುದು ಉಳಿಯಲಾರದು.ಇದೇ ಅದಕ್ಕೆ ಸಾಕ್ಷಿ