ನೀಲ ಕೇಶರಾಶಿಯ ನಡುವೆ ಎಲ್ಲಿಯೋ ಮರೆಯಾಗಿ ಮಲಗಿರುವ ಒಂದೇ ಒಂದು ಬೆಳ್ಳಿ ಕೂದಲಿನೆಳೆಯು ದರ್ಪಣದ ಮುಂದೆ ನಿಂತಾಗ ಎದ್ದು ಬಂದಂತೆ, ನಡುನೆತ್ತಿಯನೇರಿ ನೇಸರನೆಸೆಯುವ ಬೆಳಕಿನ ಬಳ್ಳಿಗಳ ಕ್ಷಣ ಮಸುಕಾಗಿಸುವ ಕಿರು-ಕರಿಮೋಡದಂತೆ, ಅಂಗದಿಂದ ಅಯೋಧ್ಯೆಗೆ ಹೊರಟು ನಿಂತ ದಶರಥನಂತರಂಗದಾಳದಲ್ಲಿ ಕಾರ್ಯಸಿದ್ಧಿಯ ಮಹಾನಂದದ ಮಧ್ಯೆಯೂ ಕ್ಷಣ ಹಣಿಕಿತು ಪ್ರಿಯವಿರಹದ ವಿಷಾದದೆಳೆಯೊಂದು.
ಬಹುದಿನಗಳ ಬಳಿಕ, ಕೆಲದಿನಗಳಷ್ಟೇ ಲಭಿಸಿದ ಅಂತರಂಗಸಖನಾದ ಅಂಗರಾಜನ ಸಂಗ-ಸಂತಸದ ಸಮಾರೋಪ-ಸಮಯವಲ್ಲವೇ ಅದು? ಋಷ್ಯಶೃಂಗರನ್ನು ಕಳುಹಿಕೊಟ್ಟು, ತನ್ಮೂಲಕ ರಘುವಂಶಕ್ಕೇ ಹೊಸ ಬಾಳ್ಕೊಟ್ಟವನ ಬೀಳ್ಕೊಡುವ ಭಾವಾರ್ದ್ರತೆಯ ಸನ್ನಿವೇಶವಲ್ಲವೇ ಅದು?
ಭಾವಾರ್ದ್ರತೆಯೆಂದರದು ನೇತ್ರಾರ್ದ್ರತೆಯ ತೊಟ್ಟಿಲು!*
ಸಖಸಂಗದ ಸುಖಭಂಗವು ಕರ್ಗಲ್ಲನ್ನೂ ಕರಗಿಸಿ, ಕಣ್ಣೀರಾಗಿ ಹರಿಸಬಲ್ಲುದು!
‘ಮುಂಬರುವ ಮಹತ್ಕಾರ್ಯದಲ್ಲಿ ನಾವೀರ್ವರೂ ಜೊತೆಯಲ್ಲಿ’ ಎಂಬುದನ್ನು ಮತ್ತೊಮ್ಮೆ ನೆನಪಿಸುವಂತೆ, ಬೀಳ್ಕೊಡುವ ಮುನ್ನ ಈರ್ವರು ದೊರೆಗಳ ಸ್ನೇಹಸ್ಪರ್ಶದ ಹಸ್ತಗಳು- ಪ್ರೇಮಜಲ ಸೂಸುವ ನೇತ್ರಗಳು ಬೆರೆತವು; ಹೃದಯಮೇಲನವೇ ಮೈವೆತ್ತು ಬಂದಂತೆ, ಎದೆಗೆ ಎದೆ ಹಚ್ಚಿ- ಬಿಗಿದಪ್ಪಿ, ಸಖ್ಯ-ಸೌಖ್ಯದಲ್ಲಿ ವಿಶ್ವ-ವಿಸ್ಮರಣೆಯನ್ನು ಅನುಭವಿಸಿದರು ದಶರಥ-ರೋಮಪಾದರು!
ಹೀಗೆ ಅಂಗರಾಜನ ಮಂಗಲಭವನದಿಂದ ಪೂರ್ಣಮನೋರಥನಾಗಿ* ಹೊರಬಂದು, ಅಯೋಧ್ಯೆಗೆ ಮುಖ ಮಾಡಿ ನಿಂತ ರಾಜರಥವೇರಿದನು ದಶರಥ.
ಪ್ರಯಾಣ~ಪ್ರತಿಪ್ರಯಾಣಗಳ ನಡುವೆ ಅದೆಷ್ಟು ಅಂತರ! ಅಯೋಧ್ಯೆಯಿಂದ ಅಂಗಕ್ಕೆ ಪ್ರಯಾಣಿಸುವಾಗ ದಶರಥನ ಅಂತರಂಗದಲ್ಲಿ ಅಭೀಪ್ಸೆ-ಆತಂಕಗಳು; ಮುನಿವರನು ಮನೆಗೆ ಬರಲೆಂಬ ಅಭೀಪ್ಸೆ; ಬಾರದಿದ್ದರೆ, ಬರಿಗೈಯಲ್ಲಿ ಹೇಗೆ ಮರಳಲೆಂಬ ಆತಂಕ! ಮರಳುವಾಗ ಕಾರ್ಯಸಿದ್ಧಿಯ ತೃಪ್ತಿ-ನಿರಾತಂಕಗಳು!
ಅಂಗಕ್ಕೆ ತೆರಳುವಾಗ ಋಷ್ಯಶೃಂಗರಿಗಾಗಿ ತಹತಹಿಸುವ ಮನ; ಮರಳುವಾಗ ಆ ಮಹಾಮುನಿ ಜೊತೆಯಲ್ಲಿಯೇ! ಹೀಗೆ ಶೂನ್ಯದಲ್ಲಿ ಆರಂಭಗೊಂಡು, ಪೂರ್ಣದಲ್ಲಿ ಮುಕ್ತಾಯಗೊಂಡ ಸಫಲಯಾತ್ರೆಯದು.
ಪಯಣವಿದು ಪರಮಾರ್ಥಪರಿಪೂರ್ಣ, ಮಾತ್ರವಲ್ಲ, ರಾಮಾಯಣ~ಕಾರಣ!
ಭಾಗೀರಥಿಯು ಬಾಗಿಲಿಗೆ ಬರುವಾಗ ಬಹಳ ಸಡಗರದಿಂದ ಬರಮಾಡಿಕೊಳ್ಳಬೇಡವೇ? ಭವಿಷ್ಯದ ಬೆಳಕೇ ಋಷ್ಯಶೃಂಗರೊಳಗೆ ಕುಳಿತು ಬಳಿ ಸಾರುವಾಗ ಅಯೋಧ್ಯೆಯು ಸಾನಂದವಾಗಿ-ಸಾಲಂಕೃತವಾಗಿ ಎದುರುಗೊಳ್ಳಬೇಡವೇ? ಇತ್ತ ಮಹರ್ಷಿಯೊಡನೆಯೇ ಮಹಾರಾಜನು ಪಯಣಿಸುತ್ತಿರಲಾಗಿ, ಅತ್ತ ಅಯೋಧ್ಯೆಯಲ್ಲಿ ಪುರಶೃಂಗಾರದ ಪೂರ್ವಸಿದ್ಧತೆಯ ಪರಿಯೆಂತು? ಅದಕ್ಕೆಂದೇ ದೂತಶ್ರೇಷ್ಠರು ರಾಜಸಂದೇಶವನ್ನು ಶಿರದ ಮೇಲೆ ಹೊತ್ತು, ಜವನಾಶ್ವಗಳನೇರಿ*, ಮುಂದಾಗಿ ಅಯೋಧ್ಯೆಯನ್ನು ತಲುಪಿ, ಮಹಾಮುನಿಯೊಡಗೂಡಿ ಮಹಾರಾಜನು ಆಗಮಿಸುತ್ತಿರುವ ಸುವಾರ್ತೆಯನ್ನು ಸಕಲರಿಗೂ ಅರುಹಿದರು; ನಗರವು ಸರ್ವಾಲಂಕಾರದೊಡನೆ ಋಷ್ಯಶೃಂಗರ ಸ್ವಾಗತಕ್ಕೆ ಸಜ್ಜಾಗಬೇಕೆಂಬ ಸಮ್ರಾಟನ ಸಂದೇಶವನ್ನೂ ಸಾರಿದರು.
ಯಾವುದೇ ವಸ್ತುವಿನ/ವ್ಯಕ್ತಿಯ ಪ್ರಥಮ ದರ್ಶನಕ್ಕೆ ಎಲ್ಲಿಲ್ಲದ ಮಹತಿಯಿದೆ. ಕೊನೆಯವರೆಗೂ ಉಳಿಯುವುದು ಮೊದಲ ನೋಟವೇ! ಅಲ್ಲಿ ಗೆದ್ದರೆ ಎಲ್ಲ ಗೆದ್ದಂತೆ! ಋಷ್ಯಶೃಂಗರಿಗೆ ಅಯೋಧ್ಯೆಯ ಪ್ರಥಮ ದರ್ಶನವು ಅತ್ಯಂತ ಹಿತಕರವಾಗಿರಲೆಂದು ಬಹಳವಾಗಿ ಬಯಸಿದ್ದನು ಮಹದನುಗ್ರಹಾಕಾಂಕ್ಷಿಯಾದ* ಮಹೀಪತಿ!
ಅತ್ತ ಅಯೋಧ್ಯೆಯಲ್ಲಿ ಆನಂದದ ಅಲೆಯೆದ್ದಿತು; ರಾಜವರನು ಋಷಿವರನೊಡನೆ ಪುರವರವನ್ನು ಪ್ರವೇಶಿಸುತ್ತಿರಲು, ನೆಲವೆಲ್ಲವೂ ಪರಿಮಳದ ಜಲದಿಂದ ಸೇಚನಗೊಂಡಿತು; ಗಾಳಿಯಲ್ಲಿ ಧೂಪ~ಧೂಮದ ಪರಿಮಳವು ಪಸರಿಸಿತು; ಗಗನದಲ್ಲಿ ವಿಧವಿಧ ವಿನ್ಯಾಸದ, ವರ್ಣವೈವಿಧ್ಯ-ವಿಭ್ರಮದ ಪತಾಕೆಗಳ ಸಾಲುಸಾಲುಗಳು ಮೇಲೆದ್ದವು; ಹೀಗೆ ನೆಲ-ಅನಿಲ-ನಭಗಳು ಸುಗಂಧಮಯವಾಗಿ- ಸು~ವರ್ಣಮಯವಾಗಿ ಕಂಗೊಳಿಸುತ್ತಿರಲು, ಕುಸುಮ~ಕದಲೀಕಾಂಡಗಳಿಂದ, ಕಲಶ~ಕನ್ನಡಿಗಳಿಂದ, ತಳಿರು~ತೋರಣಗಳಿಂದ ಶೃಂಗರಿಸಿಕೊಂಡು ತುಂಗಮಹಿಮರಾದ ಋಷ್ಯಶೃಂಗರನ್ನು ಸ್ವಾಗತಿಸಿದಳು ಅಯೋಧ್ಯಾಂಗನೆ!
~*~*~
(ಸಶೇಷ)
*ಕ್ಲಿಷ್ಟ-ಸ್ಪಷ್ಟ:
- ಭಾವಾರ್ದ್ರತೆ = ಹೃದಯ ಕರಗುವುದು; ನೇತ್ರಾರ್ದ್ರತೆ = ಕಣ್ಣು ಒದ್ದೆಯಾಗುವುದು.
- ಮನೋರಥ = ಮನೋಕಾಮನೆ
- ಜವನಾಶ್ವ = ವೇಗಶಾಲೀ ಕುದುರೆಗಳು
- ಮಹದನುಗ್ರಹಾಕಾಂಕ್ಷಿ = ಮಹತ್ತರವಾದ ಅನುಗ್ರಹವನ್ನು ನಿರೀಕ್ಷಿಸುತ್ತಿರುವ – ದಶರಥ.
- ರಾಜವರ = ರಾಜರಲ್ಲೇ ಶ್ರೇಷ್ಠನಾದ ದಶರಥ;
ಋಷಿವರ = ಋಷಿಶ್ರೇಷ್ಠರಾದ ಋಷ್ಯಶೃಂಗ;
ಪುರವರ = ನಗರಗಳಲ್ಲೇ ಶ್ರೇಷ್ಠವಾದ ಅಯೋಧ್ಯೆ
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 61ನೇ ರಶ್ಮಿ.
60 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.
ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.
January 11, 2018 at 7:32 AM
ಪರಮಾರ್ಥದ ಭಾವವನ್ನು ಅರಿಯುವ ಗುರುವೆಂಬ ಪರಮಾತ್ಮ!ಪರಮಾತ್ಮನ ಸಾನಿಧ್ಯ ಭಾವನೆಯಲ್ಲೆ ಅಡಗಿದೆ.ಜೀವನದ ಕೊಳೆ ತೊಳೆಯಲು ಬೇಕು ಗುರುದೇವನೆಂಬ ನೌಕೆ!
#ರಾಮರಶ್ಮಿ