Category Blog/Raama~Rashmi

Sri Samsthana will narrate Ramayana here.

ಸಿಂಧು ಕಾಣಾ..ಬಿಂದುವಿನೊಳು..!! – ಭಾಗ 2

ದೊಡ್ಡ ವರವನ್ನು ಕೊಡುವಾಗ ಸಣ್ಣ ಸೇವೆಯನ್ನಾದರೂ ಮಾಡಿಸದಿದ್ದರೆ ಕರ್ಮದ ಮರ್ಮವು ಮನಸಿಗೆ ಬರುವುದಾದರೂ ಹೇಗೆ…?

ಅಣ್ಣನಿಂದ ಅಪಹರಿಸಲ್ಪಟ್ಟಿದ್ದ ಅರಸಿಯನ್ನೂ, ಅರಸೊತ್ತಿಗೆಯನ್ನೂ ಸುಗ್ರೀವನಿಗೆ ಮರಳಿ ಕೊಡಿಸಿದ ರಾಮ, ಅವನಿಂದ ಅಪೇಕ್ಷಿಸಿದ್ದು ಸೀತಾನ್ವೇಷಣೆಯ ಸೇವೆಯನ್ನು…!

ತನ್ನ ಮದುವೆಗೆ ಮುನ್ನ ಅಹಲ್ಯಾ-ಗೌತಮರ ಮುರಿದ ಮದುವೆಯನ್ನು ಕೂಡಿಸುವಾಗ….

ಅಪಹೃತಳಾದ ತನ್ನ ಸತಿಯನ್ನು ಮರಳಿ ಪಡೆಯುವ ಮುನ್ನ ಸುಗ್ರೀವನಿಗೆ ಅವನ ಪತ್ನಿಯನ್ನು ಕೊಡಿಸುವಾಗ…

ಅಯೋಧ್ಯೆಯ ಚಕ್ರವರ್ತಿಸಿಂಹಾಸನದಲ್ಲಿ ತಾನು ಮಂಡಿಸುವ ಮುನ್ನ

ಕಿಷ್ಕಿಂಧೆಯ ಸಿಂಹಾಸನದಲ್ಲಿ ಸುಗ್ರೀವನನ್ನೂ…. ಲಂಕೆಯ ಸಿಂಹಾಸನದಲ್ಲಿ ವಿಭೀಷಣನನ್ನೂ ಕುಳ್ಳಿರಿಸುವಾಗ….

ಮರ್ಯಾದಾಪುರುಷೋತ್ತಮ ನಮಗಿತ್ತ “ಉಣಬಡಿಸಿ ಉಣ್ಣು” ಎಂಬ ಸಂದೇಶವನ್ನು ನಾವರಿಯಬೇಕಲ್ಲವೇ….!?

ಸಿಂಧು ಕಾಣಾ..ಬಿಂದುವಿನೊಳು..!!

* ಬೆರೆತವು ಭುವಿ-ಬಾನುಗಳು……

ಇತ್ತ…..
ದೇವದೂತನ ದಿವ್ಯಹಸ್ತವನ್ನಲಂಕರಿಸಿದ್ದ ದೇವನಿರ್ಮಿತ ಪಾಯಸದ ಮೂಲಕವಾಗಿ
ದೇವದೇವನು ದಿವಿಯಿಂದ ಧರೆಗಿಳಿದು ದಶರಥನ ಯಜ್ಞಾಗ್ನಿಯ ಮಧ್ಯದಲ್ಲಿ ಪ್ರಕಟಗೊಂಡರೆ…..
ಅತ್ತ…..
ಮಿಥಿಲೆಯ ಯಜ್ಞಭೂಮಿಯಲ್ಲಿ ಯಜ್ಞಾರ್ಥವಾಗಿ ಭೂಮಿಯನ್ನುಳುವ ಜ್ಞಾನಿಗಳ ರಾಜ ಜನಕನ ನೇಗಿಲರೇಖೆಯಲ್ಲಿ ಭುವನದ ಭಾಗ್ಯರೇಖೆಯಾಗಿ ಭೂಗರ್ಭವನ್ನು ಭೇದಿಸಿ ಮೇಲೆದ್ದು ಬಂದಳು ಸೀತೆ…!!!

ಎಂದಿದ್ದರೂ ಬಾನು ಭುವಿಯೆಡೆಗೆ ಬಾಗಲೇಬೇಕಲ್ಲವೇ….!!

ಬದುಕಿನ ಸಮರಸದ ಸಿದ್ಧಿಗಾಗಿ ಅರಸಿಯನ್ನರಸಿ ಅರಸುಗಳರಸನ ಅಭಿಯಾನ ಆರಂಭಗೊಂಡಿತು….

ಹೇ ರಾಮ..! ನೀ ಸರ್ವೋತ್ತಮ..!!

ಕುಟುಂಬಿಯೊಬ್ಬ ತನ್ನ ಕುಟುಂಬವನ್ನು ಪಾಲಿಸುತ್ತಾನೆ..

ಈತನೋ ‘ವಿಶ್ವಕುಟುಂಬಿ’…!!

ತಾನು..

ತನ್ನವರು…

ತನ್ನೂರು…

ತನ್ನ ಜಾತಿ…

ತನ್ನದೇಶ…

ಸಕಲ ಮಾನವಕುಲ….

ಈ ಸೀಮೆಗಳನ್ನೆಲ್ಲ ದಾಟಿ ಸಕಲ ಜೀವಿಗಳ ಸಂರಕ್ಷಕನಾದವನು..

ಇಲ್ಲೊಂದು ಶಂಕೆ…

ಸಕಲ ಜೀವ ಸಂರಕ್ಷಕನೆಂದ ಮೇಲೆ ದುಷ್ಟರಿಗೂ ರಕ್ಷಕನೆಂದಂತಾಗಲಿಲ್ಲವೇ..?

ಖಂಡಿತವಾಗಿಯೂ ಹೌದು..!!

ದುಷ್ಟತನವೆಂಬುದೊಂದು ಖಾಯಿಲೆ…!

ಶಿಕ್ಷೆ ಯೆಂಬ ಚಿಕಿತ್ಸೆಯನ್ನು ಕೊಟ್ಟು ಆ ಖಾಯಿಲೆಯನ್ನು ಗುಣಪಡಿಸಬೇಕಾಗುತ್ತದೆ..

ಗುಣವಾಗದ ದೋಷವಾಗಿದ್ದಾಗ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ..

ಮಿತಿಮೀರಿದ ದೋಷಗಳಿಂದ ಜನ್ಮವೇ ಕಳಂಕಿತವಾದಾಗ ಶಸ್ತ್ರಚಿಕಿತ್ಸೆಯಿಂದ ದೇಹವನ್ನೇ ಕಳೆದು ಜೀವಕ್ಕೆ ಒಳಿತು ಮಾಡುವವನು ಶ್ರೀರಾಮ..!!

ದೇಹ ನಶ್ವರ ಜೀವ ಶಾಶ್ವತ..!

ಗುಣಗಳ ಗಣಿ ಶ್ರೀರಾಮ..!

ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣಗಳನ್ನಾದರೂ ಬಿಟ್ಟೇನು…!.
ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು..!!
ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು…!!!
ಆದರೆ…
ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ…!!

ಅನಂತಗುಣಾಭಿರಾಮ..

ರಾಮನೆಂಬ ರತ್ನಾಕರದಲ್ಲಿ ನಾರದರು ಕಣ್ಮುಚ್ಚಿಕಂಡ ಗುಣರತ್ನಗಳಿವು..!

1.ಇಕ್ಷ್ವಾಕು ವಂಶ ಪ್ರಭವಃ –

ಮಾನವ ಶಬ್ಧ ಬಂದಿರುವುದು ಮನು ಶಬ್ದದಿಂದ..!
ಮಾನವ ಕುಲ ಬಂದಿರುವುದು ಮನು ಚಕ್ರವರ್ತಿಯಿಂದ..!
ಮನು ಮಹಾರಾಜ ಕಟ್ಟಿದ ನಗರಿ ಅಯೋಧ್ಯೆ..!
ಇಕ್ಷ್ವಾಕು, ಮನುವಿನ ಜ್ಯೇಷ್ಟಪುತ್ರ..!
ತಪಸ್ಸಿನಿಂದ ಹರಿಯನ್ನು ಒಲಿಸಿಕೊಂಡು ಆತನ ದಿವ್ಯ ಮಂಗಲ ವಿಗ್ರಹವನ್ನು ಪಡೆದು ಕೊಂಡವನು ಇಕ್ಷ್ವಾಕು..!
ಇಕ್ಷ್ವಾಕುವಿನ ನಂತರ ಆತನ ವಂಶಸ್ಥರು ಆ ಮೂರ್ತಿಯನ್ನು ಕುಲಧನವೆಂದು ಭಾವಿಸಿದರು ; ಅನವರತ ಆರಾಧಿಸಿದರು..!
ನದಿ,ಪರ್ವತ,ಕಾನನ , ನಗರಗಳಿಂದ ಕೂಡಿದ ಸಮಸ್ತ ಭೂಮಂಡಲವೇ ಇಕ್ಷ್ವಾಕುವಿಗೆ ಮನುವಿನಿಂದ ಪ್ರಾಪ್ತವಾಯಿತು..!
ಜಗತ್ತಿನ ಸಕಲ ಮಾನವರ, ಅಷ್ಟೇ ಏಕೆ ಸಕಲ ಜೀವರಾಶಿಗಳ ಯೋಗಕ್ಷೇಮದ ಹೊಣೆ ಇಕ್ಷ್ವಾಕುವಿನ ಹೆಗಲೇರಿತು..!
ಅಂದು ಭೂಮಂಡಲದ ಕೇಂದ್ರಬಿಂದು ಅಯೋಧ್ಯೆ..!
ಜಗತ್ತಿನ ಎಲ್ಲ ಸಿಂಹಾಸನಗಳೂ ಅಯೋಧ್ಯೆಯ ಸಿಂಹಾಸನದ ಅಧೀನ..!
ಇಕ್ಷ್ವಾಕು ವಂಶವೆಂಬುದು ಸಕಲ ಮಾನವ ವಂಶಗಳಿಗೆ ಮೂರ್ಧನ್ಯ..!!
ಇಕ್ಷ್ವಾಕುವಂಶದ ರಾಜರುಗಳು ಜಗದ ಸಕಲ ರಾಜರುಗಳಿಗೆ ಮೇಲ್ಪಂಕ್ತಿ..!
ಇಂತಹ ಆದರ್ಶವಂಶದಲ್ಲಿಯೇ ಪರಮಾದರ್ಶ ಪುರುಷನ ‍ಆವಿರ್ಭಾವವಾಗಿದ್ದು..!

2.ರಾಮೋ ನಾಮ :-

ರಾಮ ಶಬ್ಧ ‘ರಮು’ ಧಾತುವಿನಿಂದ ಬಂದಿದೆ..!
ರಮು ಧಾತುವಿಗೆ ‘ಕ್ರೀಡೆ’ ಅರ್ಥ;
‘ಕ್ರೀಡೆ’ ಎಂದರೆ ಆನಂದ..!
ರಾಮನೆಂದರೆ ಆನಂದ..!
ಬೆಳಗುವ ದೀಪದ ಬಳಿಸಾರಿದವರೆಲ್ಲ ಬೆಳಕನ್ನು ಪಡೆಯುವಂತೆ..!
ಅಭಿಮುಖರಾದವರಿಗೆಲ್ಲ ಆನಂದವನ್ನು ಕೊಡುವ ಅರ್ಹತೆಯನ್ನು ಕಂಡು ವಸಿಷ್ಟರು ಆತನನ್ನು ರಾಮನೆಂದು ಕರೆದರು..!

ಕಥೆಯೊಂದ ಹೇಳುವೆನು..!

ಮಾನವತೆಯ ಇತಿಹಾಸದಲ್ಲಿ ಆಗೊಮ್ಮೆ – ಈಗೊಮ್ಮೆ, ಅಲ್ಲೊಂದು – ಇಲ್ಲೊಂದು ಎಂಬಂತೆ ಕಾಣಸಿಗುವ ಉತ್ತಮೋತ್ತಮವಾದ ಕೆಲವು ಗುಣಗಳನ್ನ ಉಲ್ಲೇಖಿಸಿ ವಾಲ್ಮೀಕಿಗಳು ನಾರದರಿಗೆ ಹೇಳಿದರು.. ಏತದಿಚ್ಛಾಮ್ಯಹಂ ಶ್ರೋತಮ್ ..| “ಅನಂತ ಜೀವರಾಶಿಗಳ ಅನಂತ ವಸ್ತುರಾಶಿಗಳ ಅನಂತ ಘಟನಾವಳಿಗಳ ಈ ಜಗದಲ್ಲಿ ನಾನು ಕೇಳಬಯಸುವುದು ಇದೊಂದೇ ಒಂದು..! ಪರಂ ಕೌತೂಹಲಂ ಹಿ ಮೇ…. || ಸಂಸಾರದಲ್ಲಿ ನಿರಾಸಕ್ತನಾದ, ನಿಸ್ಸಂಗನಾದ… Continue Reading →

ಷೋಡಶ ಕಲಾಪರಿಪೂರ್ಣ..!

ವಾಲ್ಮೀಕಿಗಳ ಪ್ರಶ್ನೆ:-

1. ಕೆಲವು ಗುಣಗಳಿರುವ ಹಲವರಿರಬಹುದು…

ಹಲವು ಗುಣಗಳಿರುವ ಕೆಲವರಿರಬಹುದು…

ಆದರೆ ಎಲ್ಲಾ ಸದ್ಗುಣಗಳನ್ನೂ ಹೊಂದಿ ಗುಣಸಾಗರ ನೆನಿಸುವ ಒಬ್ಬ ವ್ಯಕ್ತಿ ಇಂದು ಇದೇ ಲೋಕದಲ್ಲಿ ಕಾಣಸಿಗಬಹುದೇ?

2. ಆತ ಗುಣವಂತನಾದರೆ ಸಾಲದು, ಜಗದ ವೀರಾಧಿವೀರರನ್ನೆಲ್ಲಾ ಮಣಿಸಬಲ್ಲ ಮಹಾವೀರ ನಾಗಿರಬೇಕು.

3. ವಿವೇಚನೆ ಇಲ್ಲದ ವೀರತ್ವ ರಾಕ್ಷಸತ್ವದಲ್ಲಿ ಪರ್ಯಾವಸಾನಗೊಳ್ಳುತ್ತದೆ.

ಆದುದರಿಂದ ಆತ ವೀರನಾದರೆ ಸಾಲದು.

ಧರ್ಮದ ಮರ್ಮವನ್ನರಿತು ತನ್ನ ವೀರತೆಯನ್ನು ಪ್ರಕಟಿಸುವವನಾಗಿರಬೇಕು.

4. ಆತ ಕೃತಜ್ಞನೂ ಆಗಿರಬೇಕು.

ಜೀವಿಯೊಬ್ಬನಿಗೆ ಏನೂ ಲಭಿಸಿದರೂ, ಅದು ಪ್ರಕೃತಿಯಿಂದಲೇ ಲಭಿಸಬೇಕು.

ನಮ್ಮೊಡನೆ ಧರೆಯಲ್ಲಿ ಬದುಕುವ ಇತರ ಜೀವಿಗಳ ಸಹಕಾರ ಅಲ್ಲಿ ಇದ್ದಿರಲೇಬೇಕು.

ದೇವ ದೇವನ ಕರುಣೆಯ ಕರವಂತೂ ಎಲ್ಲಕ್ಕಿಂತ ಮೊದಲು ಇರಲೇಬೇಕು.

ಇವೆಲ್ಲವನ್ನೂ ಮರೆತು ಬದುಕುವವನ ಬದುಕಿಗೆ ಅರ್ಥವೇ ಇಲ್ಲ..!

ರಾಮಾಯಣದ ಸಿದ್ಧತೆಯೆಂದರೆ………………

ಹುಳಿಪಾತ್ರದಲ್ಲಿಟ್ಟ ಹಾಲು ಹಾಳೆನಿಸಿದರೆ…
ಮೆಣಸಿನ ಪಾತ್ರದಲ್ಲಿಟ್ಟ ಹಾಲು ಖಾರವೆನಿಸಿದರೆ…
ಅದು ಹಾಲಿನ ತಪ್ಪಲ್ಲ…!
ಹಾಗೆಯೇ ಪೂರ್ವಾಗ್ರಹಗಳಿಂದ ಕಲುಷಿತವಾದ ನಮ್ಮ ಮನಸ್ಸಿಗೆ ರಾಮಾಯಣ ಏನೇನೋ ಆಗಿ ತೋರಿದರೆ…
ಅದು ರಾಮಾಯಣದ ತಪ್ಪಲ್ಲ…!
ಶುಚಿಯಲ್ಲದ ಕಣ್ಮನಗಳಿಂದ ರಾಮಾಯಣವನ್ನು ನೋಡಿದ್ದೇ ಅದರ ಹಲವು ಬಗೆಯ ಅಪಾರ್ಥ,ಅಪವ್ಯಾಖ್ಯಾನ,ಅಪಪ್ರಚಾರಗಳಿಗೆ ಕಾರಣವಾಯಿತು..!

ರಾಮಾಯಣವಿದು ರತ್ನಾಕರ…!

ಇತ್ತ…

ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…

ಅತ್ತ…

ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …

ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…

ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…

ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..

ಅದು ಮುತ್ತಿನ ಅವತಾರ…

ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…

ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…

ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!

ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…

ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!

ಸೇರಿದವು ದಿವಿಭುವಿಗಳು . . . !

ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?

ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!

ಲೋಕೋತ್ತರವಾದ ರಾಮಾಯಣ…!!!

ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑