|| ಹರೇರಾಮ ||

ರಾಮನೆಂಬ ರತ್ನಾಕರದಲ್ಲಿ ನಾರದರು ಕಣ್ಮುಚ್ಚಿಕಂಡ ಗುಣರತ್ನಗಳಿವು..!

1.ಇಕ್ಷ್ವಾಕು ವಂಶ ಪ್ರಭವಃ –

ಮಾನವ ಶಬ್ಧ ಬಂದಿರುವುದು ಮನು ಶಬ್ದದಿಂದ..!
ಮಾನವ ಕುಲ ಬಂದಿರುವುದು ಮನು ಚಕ್ರವರ್ತಿಯಿಂದ..!
ಮನು ಮಹಾರಾಜ ಕಟ್ಟಿದ ನಗರಿ ಅಯೋಧ್ಯೆ..!
ಇಕ್ಷ್ವಾಕು, ಮನುವಿನ ಜ್ಯೇಷ್ಠಪುತ್ರ..!
ತಪಸ್ಸಿನಿಂದ ಹರಿಯನ್ನು ಒಲಿಸಿಕೊಂಡು ಆತನ ದಿವ್ಯ ಮಂಗಲ ವಿಗ್ರಹವನ್ನು ಪಡೆದು ಕೊಂಡವನು ಇಕ್ಷ್ವಾಕು..!
ಇಕ್ಷ್ವಾಕುವಿನ ನಂತರ ಆತನ ವಂಶಸ್ಥರು ಆ ಮೂರ್ತಿಯನ್ನು ಕುಲಧನವೆಂದು ಭಾವಿಸಿದರು ; ಅನವರತ ಆರಾಧಿಸಿದರು..!
ನದಿ,ಪರ್ವತ,ಕಾನನ , ನಗರಗಳಿಂದ ಕೂಡಿದ ಸಮಸ್ತ ಭೂಮಂಡಲವೇ ಇಕ್ಷ್ವಾಕುವಿಗೆ ಮನುವಿನಿಂದ ಪ್ರಾಪ್ತವಾಯಿತು..!
ಜಗತ್ತಿನ ಸಕಲ ಮಾನವರ, ಅಷ್ಟೇ ಏಕೆ ಸಕಲ ಜೀವರಾಶಿಗಳ ಯೋಗಕ್ಷೇಮದ ಹೊಣೆ ಇಕ್ಷ್ವಾಕುವಿನ ಹೆಗಲೇರಿತು..!
ಅಂದು ಭೂಮಂಡಲದ ಕೇಂದ್ರಬಿಂದು ಅಯೋಧ್ಯೆ..!
ಜಗತ್ತಿನ ಎಲ್ಲ ಸಿಂಹಾಸನಗಳೂ ಅಯೋಧ್ಯೆಯ ಸಿಂಹಾಸನದ ಅಧೀನ..!
ಇಕ್ಷ್ವಾಕು ವಂಶವೆಂಬುದು ಸಕಲ ಮಾನವ ವಂಶಗಳಿಗೆ ಮೂರ್ಧನ್ಯ..!!
ಇಕ್ಷ್ವಾಕುವಂಶದ ರಾಜರುಗಳು ಜಗದ ಸಕಲ ರಾಜರುಗಳಿಗೆ ಮೇಲ್ಪಂಕ್ತಿ..!
ಇಂತಹ ಆದರ್ಶವಂಶದಲ್ಲಿಯೇ ಪರಮಾದರ್ಶ ಪುರುಷನ ‍ಆವಿರ್ಭಾವವಾಗಿದ್ದು..!

2.ರಾಮೋ ನಾಮ  :-

ರಾಮ ಶಬ್ಧ ‘ರಮು’ ಧಾತುವಿನಿಂದ ಬಂದಿದೆ..!
ರಮು ಧಾತುವಿಗೆ ‘ಕ್ರೀಡೆ’ ಅರ್ಥ;
‘ಕ್ರೀಡೆ’ ಎಂದರೆ ಆನಂದ..!
ರಾಮನೆಂದರೆ ಆನಂದ..!
ಬೆಳಗುವ ದೀಪದ ಬಳಿಸಾರಿದವರೆಲ್ಲ ಬೆಳಕನ್ನು ಪಡೆಯುವಂತೆ..!
ಅಭಿಮುಖರಾದವರಿಗೆಲ್ಲ ಆನಂದವನ್ನು ಕೊಡುವ ಅರ್ಹತೆಯನ್ನು ಕಂಡು ವಸಿಷ್ಠರು ಆತನನ್ನು ರಾಮನೆಂದು ಕರೆದರು..!

3.ಜನೈ: ಶ್ರುತಃ :-
ಮಾನವರ ಇತಿಹಾಸದಲ್ಲಿ ಈತನ ಕುರಿತು ಜನರೆಷ್ಟು ಕೇಳಿದ್ದಾರೋ, ಅಷ್ಟು ಬೇರಾರ ಕುರಿತೂ ಕೇಳಿರಲಾರರು..!
ಆದರೂ ಅವನಾಳವನ್ನು ಯಾರೂ ಪೂರ್ಣವಾಗಿ ಅರಿಯರು..!!
ಸಮುದ್ರವನ್ನು ಕಾಣದವರಾರು..?
ಸಮುದ್ರದ ಆಳ – ಅಗಲಗಳನ್ನು ಅರಿತವರೆಷ್ಟು..?

4.ನಿಯತಾತ್ಮಾ :-
ಹುಚ್ಚು ಹೊಳೆಯಂತೆ ಲಂಗು – ಲಗಾಮುಗಳಿಲ್ಲದ ಸ್ವಭಾವ – ಮನಗಳಲ್ಲ ಆತನದು..!
ಗಂಗಾನದಿಯಂತೆ ಗಂಭೀರ ;
ಗಂಗೆ ಸತತವೂ ಸಮುದ್ರಕ್ಕೆ ಅಭಿಮುಖವಾಗಿ ಹರಿಯುವಂತೆ..ಪರಮಲಕ್ಷ್ಯದೆಡೆಗೆ ನಿರಂತರವಾಗಿ ಗುರಿಯಿಟ್ಟ ಮನ:ಸ್ವಭಾವಗಳ ಮಹನೀಯನಾತ..!!

5.ಮಹಾವೀರ್ಯಃ :-
ಊಹೆ ಕಲ್ಪನೆಗಳಿಗೆ ಮೀರಿದ ವಿವಿಧ ವಿಚಿತ್ರ ಶಕ್ತಿಗಳು ಆತನಲ್ಲಿ ಸ್ವಾಭಾವಿಕವಾಗಿ ಇದ್ದವು..!

6. ದ್ಯುತಿಮಾನ್ :-
ಸಹಜಕಾಂತಿಯಿಂದ ಬೆಳಗುವನಾತ…!
ಕಾಂತಿಮೂಲವಾದ ಆತ್ಮ ಚೈತನ್ಯ ನಮ್ಮೆಲ್ಲರೊಳಗೂ ಇದೆ..
ಆದರೆ ಅದು ಹೊರಸೂಸಲು ರಜಸ್ತಮೋಮಯವಾದ ನಮ್ಮ ಪ್ರಕೃತಿಯೇ ತಡೆಯಾಗಿದೆ..!!
ಆದುದರಿಂದಲೇ ಒಳಗಿನ ಬೆಳಕಿನ ಕೊರತೆಯನ್ನು ತುಂಬಲು ‘ಮೇಕಪ್’ ಬೇಕಾಯಿತು..!
(ಕೊರತೆಯನ್ನು ತುಂಬುವುದಕ್ಕಲ್ಲವೇ ‘ಮೇಕಪ್’ ಎಂದು ಹೇಳುವುದು)

ಸ್ಫಟಿಕದ ಪಾತ್ರೆಯಲ್ಲಿಟ್ಟ ದೀಪದ ಬೆಳಕು ದಶದಿಶೆಗಳಿಗೆ ಪಸರಿಸುವುದು..!
ಅದೇ ಮಣ್ಣಿನ ಗಡಿಗೆಯಲ್ಲಿಟ್ಟ ದೀಪದ ಬೆಳಕು ಎಷ್ಟುಮಾತ್ರಕ್ಕೂ ಹೊರಸೂಸದು..!
ರಾಮನದು ಸ್ಫಟಿಕದಂತೆ ಪರಿಶುದ್ಧ – ಪಾರದರ್ಶಕ ಪ್ರಕೃತಿಯಾದರೆ..
ತಮಸ್ಸು-ರಜಸ್ಸುಗಳ ಕಪ್ಪು-ಕೆಂಪುಗಳಿಂದ ಕಲುಷಿತವಾದ ಪ್ರಕೃತಿ ನಮ್ಮದು..

7. ಧೃತಿಮಾನ್ :-
ಬಿರುಗಾಳಿ ಬೀಸಿದರೆ ಗಿಡ-ಮರಗಳು ಬುಡಮೇಲಾಗುವವು..
ಆದರೆ ಮಹಾಪರ್ವತವು ಅವಿಚಲವಾಗಿ ನೆಲೆ ನಿಂತಿರುವುದಲ್ಲವೇ..?
ಆಪತ್-ಸಂಪತ್ತುಗಳು ಬದುಕಿನಲ್ಲಿ ಬೀಸುವ ಬಿರುಗಾಳಿಗಳು….
ಅವುಗಳಿಂದ ವಿಕಾರಗೊಳ್ಳದ ಪರ್ವತಸದೃಶವಾದ ಅಂತಃ ಸ್ಥೈರ್ಯ ಆತನದಾಗಿತ್ತು..

8. ವಶೀ :- ವಶದಲ್ಲಿರಿಸಿಕೊಂಡವನು..!
ತನ್ನ ದೇಹವನ್ನು ವಶದಲ್ಲಿರಿಸಿಕೊಂಡವನು..!
ತನ್ನ ಮನವನ್ನು ವಶದಲ್ಲಿರಿಸಿ ಕೊಂಡವನು..!
ತನ್ನ ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡವನು..!
ತನ್ನ ಪ್ರಕೃತಿಯನ್ನು ವಶದಲ್ಲಿರಿಸಿ ಕೊಂಡವನು..!
ತನ್ನ ಪರಿಸರವನ್ನು ವಶದಲ್ಲಿರಿಸಿಕೊಂಡವನು..!
ಅಷ್ಟೇ ಏಕೆ..?
ಚರಾಚರ ಪ್ರಪಂಚವನ್ನೂ ತನ್ನ ವಶದಲ್ಲಿರಿಸಿಕೊಂಡವನು..!
ಅಧಿಕಾರದಿಂದ ‍ಆಳುವವರು ಹಲವರು..
ವ್ಯಕ್ತಿತ್ವದಿಂದಲೇ ಆಳುವವರು ಕೆಲವೇ ಕೆಲವರು..

9.ಬುದ್ಧಿಮಾನ್ :-
ಬುದ್ಧಿ ಇರುವವರೆಲ್ಲ ಬುದ್ಧಿವಂತರಲ್ಲ..!
ಪ್ರಶಸ್ತವಾದ ಬುದ್ಧಿಯುಳ್ಳವನೇ ಬುದ್ಧಿಮಾನ್..!
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯವನ್ನು ಕೈಗೊಳ್ಳುವ ಶಕ್ತಿಯೇ ನಿಜವಾದ ಬುದ್ಧಿ..!

10.ನೀತಿಮಾನ್ :-
ಶ್ರೇಷ್ಠ ಗುರಿಯನ್ನು ತಲುಪಲು ಸಾಧಕವಾಗುವ ಶ್ರೇಷ್ಠವಿಧಾನಗಳಿಗೆ ನೀತಿಯೆಂದು ಹೆಸರು..!

ಶ್ರೀರಾಮನು ನೀತಿಯನ್ನು ಬಲ್ಲವನು ಮಾತ್ರವಲ್ಲ ನೀತಿಯುಳ್ಳವನೂ ಹೌದು..!

11. ವಾಗ್ಮಿ :-
ಮಾತೆಂಬುದು ವಾಹನವಿದ್ದಂತೆ..!
ಹೃದಯದಾಳದ ಭಾವಗಳನ್ನು ಹೊತ್ತು ಮುಖದಿಂದ ಹೊರಹೊಮ್ಮುವ ಶಬ್ದಗಳು ಕೇಳುಗನ ಕಿವಿಯ ಮೂಲಕ ಹೃದಯವನ್ನು ಸೇರಿ ಅಲ್ಲಿ ಆ ಭಾವಗಳನ್ನು ಬಿತ್ತುವವಲ್ಲವೇ..?
ತನ್ನೊಳಗಿನ ಉತ್ತಮೋತ್ತಮ ಭಾವಗಳನ್ನು ಜಗದ ಜೀವರಿಗೆಲ್ಲ ಹಂಚಲು ಬೇಕಾದ ವಾಕ್ ಸಂಪತ್ತುಳ್ಳವನಾಗಿದ್ದನಾತ..!!

12. ಶ್ರೀಮಾನ್ :-
ಸೃಷ್ಠಿಯಲ್ಲಿ ಹಲವು ರೂಪಗಳಲ್ಲಿ ದೃಷ್ಟಿ ಗೋಚರವಾಗುವವಳು ಶ್ರೀ..
ಶ್ರೇಯಸ್ಸಿಗೆ ಸಾಧನವಾಗಬಹುದಾದುದೆಲ್ಲವೂ ಸಿರಿಯೇ ಸರಿ..!
ಒಮ್ಮೆ ಹಾಗಾಗದಿದ್ದರೆ ನಾವು ಸಿರಿಯೆಂದುಕೊಂಡಿರುವುದೂ ಸಿರಿಯಲ್ಲ ಸರಿಯೂ ಅಲ್ಲ..
ಅಮೃತ ಸಮುದ್ರದಿಂದ ಶ್ರೀಹರಿ ಭುವಿಯೆಡೆಗೆ ಹರಿದು ಬಂದಾಗ ಆತನ ಜೊತೆ ಬಿಡಲಿಲ್ಲ ಶ್ರೀ..!!
ತನ್ನೆಲ್ಲ ರೂಪಗಳಿಂದಲೂ ರಾಮ ಕಾರ್ಯಕ್ಕೆ ಸಹಕಾರಿಯಾಗಿ ನಿಂತಳವಳು..!

|| ಹರೇರಾಮ ||

Facebook Comments