ಮಾನವತೆಯ ಇತಿಹಾಸದಲ್ಲಿ ಆಗೊಮ್ಮೆ – ಈಗೊಮ್ಮೆ, ಅಲ್ಲೊಂದು – ಇಲ್ಲೊಂದು ಎಂಬಂತೆ ಕಾಣಸಿಗುವ
ಉತ್ತಮೋತ್ತಮವಾದ ಕೆಲವು ಗುಣಗಳನ್ನ ಉಲ್ಲೇಖಿಸಿ ವಾಲ್ಮೀಕಿಗಳು ನಾರದರಿಗೆ ಹೇಳಿದರು..

ಏತದಿಚ್ಛಾಮ್ಯಹಂ ಶ್ರೋತಮ್ ..|

“ಅನಂತ ಜೀವರಾಶಿಗಳ
ಅನಂತ ವಸ್ತುರಾಶಿಗಳ
ಅನಂತ ಘಟನಾವಳಿಗಳ ಈ ಜಗದಲ್ಲಿ ನಾನು ಕೇಳಬಯಸುವುದು ಇದೊಂದೇ ಒಂದು..!

ಪರಂ ಕೌತೂಹಲಂ ಹಿ ಮೇ…. ||
ಸಂಸಾರದಲ್ಲಿ ನಿರಾಸಕ್ತನಾದ, ನಿಸ್ಸಂಗನಾದ ನನಗೆ ಇದೊಂದು ವಿಷಯದಲ್ಲಿ ಮಾತ್ರ ಇನ್ನಿಲ್ಲದ ಕುತೂಹಲ..!

ಮಾನವ ಕೋಟಿಗೆ, ಮುಕುಟಪ್ರಾಯನಾದ, ಸಕಲಗುಣ ಪರಿಪೂರ್ಣನಾದ ಇಂತಹ ಮಹಾ ಮಾನವನ ಬಗ್ಗೆ ಯಾರಾದರೂ ತಿಳಿಯಬಲ್ಲವರಿದ್ದರೆ ಹೇ ಮಹರ್ಷೇ… ಅದು ನೀನು ಮಾತ್ರ..!

ಹೇಳುವೆಯಾ ದಯವಿರಿಸಿ..!?
ಹರಸುವೆಯಾ ಭುವಿಯನ್ನು..!?
ಹರಿಸುವೆಯಾ ಅರಿವನ್ನು..!? ”

ಕಡುಗತ್ತಲಿನ ಪಾತಾಳ…!
ಕತ್ತಲು – ಬೆಳಕಿನ ಭೂಲೋಕ….!
ಬೆಳಕೇ – ಬೆಳಕಾದ ಸ್ವರ್ಲೋಕ…!!

ತನ್ನೊಳಗಿನ ಬೆಳಕಿನ ನೆರವಿನಿಂದ
ಕತ್ತಲು – ಬೆಳಕಿನ ಸಕಲ ಲೋಕಗಳನ್ನು ನೋಡಬಲ್ಲ ನಾರದರ ಅಂತರಂಗ ಸಾಗರದಲ್ಲಿ ವಾಲ್ಮೀಕಿಗಳ ಈ ಪ್ರಶ್ನೆ
ಹರ್ಷದ ಅಲೆಗಳನ್ನೇ ಎಬ್ಬಿಸಿತು..!!

ಮಾನವತೆಯಲ್ಲಿ ದೇವತ್ವವನ್ನು ಮೆರೆಯುವ ವ್ಯಕ್ತಿತ್ವವೆಷ್ಟು ದುರ್ಲಬವೋ ಆ ಕುರಿತು ಕೇಳುವವರು – ಹೇಳುವವರೂ ಅಷ್ಟೇ ದುರ್ಲಭವಲ್ಲವೇ..?

ಸಿಹಿಯಾದ ವಸ್ತುವನ್ನು ಬಾಯಿಯಲ್ಲಿಟ್ಟುಕೊಂಡರೆ ಆ ಬಾಯಿಯೇ ಸಿಹಿಯಾಗುವುದಲ್ಲವೇ..?
ಹಾಗೆಯೇ ಆನಂದವೇ ತಾನಾದ ವ್ಯಕ್ತಿತ್ವವೊಂದರ ಬಗೆಗೆ ಭಾವಿಸುವ, ಭಾಷಿಸುವ ಪ್ರಸಂಗ ಬಂದರೆ
ಮೈ ಮಾತು ಮನಗಳಲ್ಲೆಲ್ಲಾ ಆನಂದವೇ ತುಂಬುವುದಲ್ಲವೇ..?

ನಾರದರಿಗಾದದ್ದು ಅದು..!

ಹಸಿರು ಪರ್ವತವನ್ನು ಕಂಡಾಗ ಕರಗಿ – ಹರಿಯುವ ಮೋಡದಂತೆ
ಕರಗಿ ಹರಿಯಿತು ನಾರದರ ಹೃದಯ..!

ಸುರಿಯಿತು ರಾಮವರ್ಣನೆಯ ಮಾತುಗಳ ಮಳೆ ವಾಲ್ಮೀಕಿ ಗಿರಿಯ ಮೇಲೆ..!

“ಹೇಳುವೆನು ಹೇಳುವೆನು,
ಮೈಯೆಲ್ಲ ಕಿವಿಯಾಗಿ ಕೇಳಿತ್ತ..!

ನೀನು ಉಲ್ಲೇಖಿಸಿದ ಗುಣಗಳಲ್ಲಿ ಹೆಚ್ಚಿನವು ಬಹು ದುರ್ಲಭವಾದವುಗಳು
ಆದರೆ ಸೃಷ್ಠಿಯ ಚರಿತ್ರೆಯಲ್ಲಿ ಅಂಥವನೊಬ್ಬನಿರುವುದುಂಟು..!”

ಹೀಗೆಂದ ನಾರದರು ಒಮ್ಮಿಂದೊಮ್ಮೆಲೆ ಅಂತರ್ಮುಖರಾಗಿ ಅಂತರಂಗದ ಆಳದಲ್ಲಿ ಮುಳುಗಿದರು..
ಅಲ್ಲಿ ಬೆಳಗುವ ಆ ದಿವ್ಯ ವ್ಯಕ್ತಿತ್ವವನ್ನು ಭಾವ ಚಕ್ಷುವಿನಿಂದ ಕಂಡು ಮತ್ತೆ ಬಹಿರ್ಮುಖರಾಗಿ ಹೇಳತೊಡಗಿದರು..

Facebook Comments