ಬಳಿ ಬಂದ ಜೀವವನ್ನು ಬರಿಗೈಯಲ್ಲಿ ಕಳುಹದಿರುವುದು ಭಾರತೀಯತೆ. ಆತಿಥ್ಯವೆಂದರೆ ಅದುವೇ! ಜೀವಕಲ್ಯಾಣದ ಈ ಭಾವವು ಎದೆಯೊಳಗಿದ್ದರೆ ಅವನು ಮಾನವ. ಅದು ಅಧಿಕವಾಗಿದ್ದರೆ ಸಂತ. ಸರ್ವಾಧಿಕವಾಗಿದ್ದರೆ ಅವನು ದೇವರೇ ಸರಿ!

ಲೋಕಜ್ಞಾನವಿಲ್ಲದಿದ್ದರೇನು, ದೇವತುಲ್ಯನಾದ ಋಷ್ಯಶೃಂಗನಿಗೆ ಬಂದವರನ್ನು ಸತ್ಕರಿಸುವ ಆತಿಥ್ಯವೆಂಬ ಆಶ್ರಮಧರ್ಮದ ಜ್ಞಾನವು ಧಾರಾಳವಾಗಿ ಇದ್ದಿತು. ಬಳಿ ಬಂದವನ ಉದರವನ್ನು ಅನ್ನದಿಂದ, ಹೃದಯವನ್ನು ಪ್ರೇಮದಿಂದ ತುಂಬುವ ಆ ಜ್ಞಾನವಿದ್ದವನಲ್ಲಿ ಬೇರೆ ಯಾವ ಜ್ಞಾನವು ಇಲ್ಲದಿದ್ದರೇನು? ಆ ಜ್ಞಾನವಿಲ್ಲದವನಲ್ಲಿ ಬೇರೆ ಯಾವ ಜ್ಞಾನವಿದ್ದೇನು!? ಬಂದವಳು ಯಾರು ಎಂಬುದನ್ನೂ ನೋಡದೆ, ಕೃಷ್ಣಾಜಿನದ ಉತ್ತಮಾಸನವನ್ನು ಕಲ್ಪಿಸಿ, ಕುಳಿತುಕೊಳ್ಳುವಂತೆ ಕೇಳಿಕೊಂಡನು ಋಷ್ಯಶೃಂಗ.

‘ಬಂದವನು ಭಗವಂತ’ ಎಂಬ ಭಾವದಲ್ಲಿ ಆತಿಥ್ಯವನ್ನು ಪೂಜೆಯಾಗಿಯೇ ನೆರವೇರಿಸುವುದು ಪರಂಪರೆ‌. ‘ಅಭಿನಮನವೂ ಆತಿಥ್ಯದ ಭಾಗ’ವೆಂಬ ತಂದೆಯ ನುಡಿಯ ನೆನಪಿನಲ್ಲಿ ವಾರಾಂಗನೆಗೆ ನಮಸ್ಕರಿಸಲು ಮುಂದಾದನು ಮುಗ್ಧ ಮುನಿ! ನಿರೀಕ್ಷೆಯೇ ಇರದ, ಮುನಿಯ ಆ ನಡೆಯಿಂದ ಒಮ್ಮೆಲೇ ಗಲಿಬಿಲಿಗೊಂಡಳಾಕೆ. ಪಾಪ, ಆವರೆಗೆ ಆಕೆ ತಿರಸ್ಕಾರವನ್ನೆಷ್ಟೋ ಕಂಡಿರಬಹುದು; ಆದರೆ ಬದುಕಿನಲ್ಲಿ ಒಮ್ಮೆಯೂ, ಯಾರಿಂದಲೂ ನಮಸ್ಕರಿಸಲ್ಪಟ್ಟು ಆಕೆಗೆ ಗೊತ್ತೇ ಇರಲಿಲ್ಲ! ಅದರಲ್ಲಿಯೂ ಈಗ ನಮಿಸಲು ಮುಂದಾಗುತ್ತಿರುವುದು ಧರಣಿಯು ಕಂಡ ಅಪರೂಪದ ತಪೋನಿಧಿ ಎನ್ನುವಾಗ ಆಕೆಗೆ ಹೇಗಾಗಿರಬೇಡ! ಮುನಿಯ ನಮನವನ್ನು ತಡೆಯಲು ವಾರಾಂಗನೆಯ ಕೈ-ಬಾಯಿಗಳು ಒಮ್ಮೆಲೇ ಮುಂದೆ ಬಂದವು. ‘ನಮನವು ನನ್ನಿಂದ ನಿನಗೆ ಸಲ್ಲಬೇಕೇ ಹೊರತು ನಿನ್ನಿಂದ ನನಗಲ್ಲ. ಹಾಗೆಯೇ ನಾನು ಈಗ ಕೈಗೊಂಡಿರುವ ವ್ರತದಲ್ಲಿಯಂತೂ ಆಲಿಂಗನವೇ ಅಭಿವಾದನ!’ ಎಂದುಲಿದಳು ಆ ಚದುರೆ. ಆದರೆ ಹಾಗೆಂದರೇನೆಂದು ಮುನಿಕುಮಾರನಿಗೆ ಅರ್ಥವೇ ಆಗಲಿಲ್ಲ!

ಋಷ್ಯಶೃಂಗನ ಆತಿಥ್ಯದ ಪ್ರಕ್ರಿಯೆಯು ಇನ್ನೂ ಮುಗಿದಿರಲಿಲ್ಲ. ಕಾಡಿನಲ್ಲಿ ಸಹಜವಾಗಿ ಸಿಗಬಹುದಾದ ನಾನಾ ಬಗೆಯ ಫಲಗಳನ್ನು ಆಕೆಯ ಮುಂದಿರಿಸಿದನಾತ. ಕ್ಷಣಾರ್ಧದಲ್ಲಿ ಭಲ್ಲಾತಕ~ಆಮಲಕ~ಕಾರೂಷಕ~ಇಂಗುದ~ಧನ್ವನ~ಪಿಪ್ಪಲ* ಫಲಗಳ ರಮಣೀಯ ರಾಶಿಯೇ ಆಕೆಯ ಮುಂದೆ ಕಂಗೊಳಿಸಿತು. ಆದರೆ ಅದೊಂದನ್ನೂ ಆಕೆ ಸ್ವೀಕರಿಸಲಿಲ್ಲ. ಏಕೆಂದರೆ ಮಹಾಫಲವೊಂದನ್ನು ಬಯಸಿ ಆಕೆ ಋಷ್ಯಶೃಂಗನಿರುವೆಡೆ ಬಂದಿದ್ದಳು. ಸಣ್ಣಪುಟ್ಟ ಫಲಗಳ ಅಪೇಕ್ಷೆಯೇ ಆಕೆಗಿರಲಿಲ್ಲ.
#RaamaRashmi blog by SriSri RaghaveshwaraBharati MahaSwamiji

ಆತಿಥ್ಯವನ್ನು ಸ್ವೀಕರಿಸಬೇಕಾದ ಅತಿಥಿಯೇ ಆತಿಥ್ಯಕ್ಕೆ ತೊಡಗಿದರೆ…?

ವಿಶೇಷವೇ ಸಹಜತೆಯನ್ನಾಂತ ಆ ದಿನದಂದು ಅತಿಥಿಯಾಗಿ ಬಂದ ವಾರಾಂಗನೆಯೇ ಋಷ್ಯಶೃಂಗನ ಆತಿಥ್ಯಕ್ಕೆ ತೊಡಗಿದಳು. ತಾನು ಬರುವಾಗ ತಂದ ‘ರುಚಿ-ರುಚಿ’ ‘ಘಮ-ಘಮ’ ಭಕ್ಷ್ಯಗಳನ್ನು ಮುನಿಗೆ ಉಣಬಡಿಸಿದಳು. ಋಷ್ಯಶೃಂಗನಿಗದು ಹೊಸತೋ ಹೊಸತು! “ಫಲಾನೀತಿ ಸ್ಮ ಮನ್ಯತೇ” (ವಾಲ್ಮೀಕಿ ರಾಮಾಯಣ ) – ಹಣ್ಣುಗಳನ್ನು ಹೊರತು ಬೇರೇನನ್ನೂ ತಿಂದು ಗೊತ್ತೇ ಇಲ್ಲದ ಆ ಮುಗ್ಧ ಮುನಿ ಅವುಗಳನ್ನೂ ಭಿನ್ನ ಪ್ರಕಾರದ ಹಣ್ಣುಗಳೆಂದೇ ಭಾವಿಸಿದ! ಪೀಯೂಷಸದೃಶವಾದ ಅಪರೂಪದ ಪೇಯಗಳನ್ನು ನಡುನಡುವೆ ಬಡಿಸಿದಳು. ಅವುಗಳನ್ನು, ತಾನು ನೋಡಿರದ, ಬೇರೊಂದು ಬಗೆಯ ನೀರೆಂದುಕೊಂಡನಾತ!‌

ಒಳಗೆ ತುಂಬಿದ ಮೇಲೆ ಹೊರಗಿನ ಸತ್ಕಾರದ ಆರಂಭ; ತಾನಿತ್ತ ಭಕ್ಷ್ಯ-ಭೋಜ್ಯಗಳಿಂದ ಸಂತೃಪ್ತನಾದ ಋಷಿಸುತನಿಗೆ ವಾರಕನ್ನಿಕೆಯು ಅನುಪಮ ವರ್ಣ-ವಿನ್ಯಾಸದ ವಸ್ತ್ರಗಳನ್ನು ಒಪ್ಪಿಸಿದಳು. ಪ್ರಕೃತಿಯ ನಗುಮೊಗದಂತಿರುವ ಪುಷ್ಪಮಾಲೆಗಳಿಂದ ಆ ಪುಷ್ಪಮಾನಸನನ್ನು ಅಲಂಕರಿಸಿದಳು. ಬಳಿಕ ಬಲು ಪ್ರೀತಿಯಲ್ಲಿ ಮಾತಾಡಿದಳು. ಎದೆಯ ಕಟ್ಟೆಯೇ ಒಡೆದು ನಗುವಂತೆ ವಿನೋದ ಮಾಡಿದಳು. ಹೃದಯವನ್ನೇ ಕಂಠಕ್ಕೆ ತಂದುಕೊಂಡು, ಮಧುರ-ಮಧುರವಾಗಿ ಹಾಡಿದಳು. ಋಷ್ಯಶೃಂಗನಿಗೆ ವನರಂಗದಲ್ಲಿ ನಲಿಯುವ ನವಿಲಿನ ನೆನಪಾಗುವ ತೆರನಾಗಿ ನರ್ತಿಸಿದಳು.

ಎಂದೂ ಆಟವಾಡಿ ಗೊತ್ತಿರದ, ಆಟವಾಡಲು ಜೊತೆಗಾರರೂ ಇರದ ಮುನಿಯ ಸಮ್ಮುಖದಲ್ಲಿ ಎಳೆಯ ಮಗುವನ್ನು ಹೋಲುವ ಸಂಭ್ರಮೋತ್ಸಾಹಗಳ ಆವೇಗದಲ್ಲಿ ಚೆಂಡಾಟವಾಡಿದಳು.

ಚೆಂಡಾಟವೆಂಬುದೊಂದು ಚೆಂದದ ಆಟ. ಚೆಂಡನ್ನು ನಾವೇ ನೆಲಕ್ಕೆಸೆದು, ಪುಟಿದೆದ್ದು ಅದು ಮರಳಿ ನಮ್ಮೆಡೆಗೆ ಬರುವಾಗ ಭದ್ರವಾಗಿ ಹಿಡಿದು ಕೊಳ್ಳುವುದು – ಜೀವಕಂದುಕವನ್ನು ಭೂಮಿಗೆ ಕಳುಹಿ,ದು ಸಾಧನೆಯ ದ್ವಾರಾ ತನ್ನೆಡೆಗೆ ಇಮ್ಮಡಿ ವೇಗದಲ್ಲಿ ಮರಳುವಾಗ, ಮತ್ತೆ ಪತನಗೊಳ್ಳದಂತೆ ಮುಕ್ತಿಯೆಂಬ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಳ್ಳುವ ಭಗವಂತನನ್ನೇ ನೆನಪಿಸುವುದಿಲ್ಲವೇ!?

ಮುನಿಕುಮಾರನ ಕಣ್ಣಂಗಳದಲ್ಲಿ ಚೆಂಡಾಟವಾಡುತ್ತಾ, ಚೆಂಡಿನ ಜೊತೆಯಲ್ಲಿ ಆಕೆ ತಾನೂ ಕುಣಿದು ಕುಪ್ಪಳಿಸುವಾಗ ಆತನಿಗೆ ಕೌತುಕವೋ ಕೌತುಕ! ನೆಲಕ್ಕಪ್ಪಳಿಸಿದರೂ ಒಡೆಯದೇ, ಹಣ್ಣು(ಚೆಂಡು) ಪುನಃ ಆಕೆಯ ಕೈಸೇರುತ್ತಿದ್ದುದು ಆ ಮಗುಮನದ ಮುನಿಯ ಕೌತುಕದ ಮೂಲ!

ಒಟ್ಟಿನಲ್ಲಿ ಆಕೆ ಆ ಆತ್ಮಜ್ಞಾನಿಗೆ ಲೋಕಜ್ಞಾನದ ಗುರುವಾದಳು. ಪ್ರಪಂಚದಲ್ಲಿದ್ದೂ ಪ್ರಪಂಚವರಿಯದ ಆ ಮಹಾವಿಭೂತಿಯ ಪಾಲಿಗೆ ಬಾಹ್ಯ ಪ್ರಪಂಚದ ದ್ವಾರವಾದಳು. ದೇವನೊಲುಮೆಯ ಸಾರಸರ್ವಸ್ವವನ್ನೂ ಸವಿದವನಿಗೆ ಜೀವದೊಲುಮೆಯ ನಲಿವಿನ ಬಿಂದುವಿನ ರುಚಿ ತೋರಿದಳು. ಅತ್ಯಲ್ಪ ಸಮಯದ ಒಡನಾಟದಲ್ಲಿಯೇ ಆತ್ಮಬಂಧು ಎನ್ನುವಷ್ಟು ಹತ್ತಿರವಾದಳು.

ಒಳಗೆ ಕಲ್ಮಷವಿಲ್ಲದವರಿಗೆ ಸಂತರ ಸಂಪ್ರೀತಿ ಬಲು ಸುಲಭ; ಸ್ವಾರ್ಥವಿಲ್ಲದಿದ್ದರಂತೂ ಕೇಳುವುದೇ ಬೇಡ! ಹೂವೆತ್ತಿದಷ್ಟು ಸುಲಭದಲ್ಲಿ ಅಂಥವರು ಸಂತರ ಹೃದಯವಲ್ಲಭರಾಗುವರು. ವಾರಕನ್ನಿಕೆಯ ಹೃದಯವು ನಿರ್ಮಲವಾಗಿತ್ತು. ಸ್ವಹಿತವು ಮರೆತೇ ಹೋಗಿತ್ತು, ಸಮಾಜಹಿತವೇ ಅವಳ ತನು-ಮನಗಳಲ್ಲಿ ತುಂಬಿಕೊಂಡಿತ್ತು. ಈ ಕಾರಣಗಳಿಂದಲಾಗಿಯೇ ಆಕೆ ಋಷ್ಯಶೃಂಗನಿಗೆ ಇನ್ನಿಲ್ಲವೆಂಬಷ್ಟು ಹತ್ತಿರವಾದಳು.

ಸರಿಯುವ ಸಮಯದ ಅರಿವಾಗದಿರುವುದು ಆನಂದಾನುಭೂತಿಯ ಪ್ರಥಮ ಲಕ್ಷಣ.‌ ಇಲ್ಲಿಯೂ ಹಾಗೆಯೇ, ಒಲವಿನ ಒಡನಾಟ, ಆಟೋಟಗಳ ಆನಂದಕೂಟದಲ್ಲಿ ಸಮಯವು ನೇಪಥ್ಯಕ್ಕೆ ಸರಿದು, ಒಂದಷ್ಟು ಕಾಲ ಸಂಭ್ರಮವೇ ರಾಜ್ಯವಾಳಿತ್ತು. ಆದರೆ ಸೃಷ್ಟಿಯಲ್ಲಿ ಕೊನೆಯಿಲ್ಲದೆ, ಯಾವುದೂ ಮುಂದುವರಿಯುತ್ತಲೇ ಇರುವುದು ಸಾಧ್ಯವಿಲ್ಲವಲ್ಲವೇ? ಇರುವ ಪರ್ವದ ಮುಕ್ತಾಯ, ಬರುವ ಪರ್ವದ ಆರಂಭ ಅನಿವಾರ್ಯವಲ್ಲವೇ?

ನಿಜ, ಸುಖವೇ ಸುಖವಾದ ಸಖ್ಯ-ಸಂಯೋಗ-ಸಹವಾಸಗಳ ಸಮಯ ಮುಗಿದು, ಬೀಳ್ಕೊಡುವ ಭಾರದ, ಬವಣೆಯ ಸಮಯ ಸನಿಹವಾಗುತ್ತಿತ್ತು.

ವಾರಾಂಗನೆಗೆ ಋಷ್ಯಶೃಂಗನಲ್ಲಿ ಎಷ್ಟು ಪ್ರೀತಿಯಿತ್ತೋ, ಆತನ ತಂದೆಯಾದ ವಿಭಾಂಡಕರ ಕುರಿತು ಅಷ್ಟೇ ಭೀತಿಯಿತ್ತು. ಆಶ್ರಮದಲ್ಲಿರುವಾಗಲೇ ಎಲ್ಲಿಯಾದರೂ ವಿಭಾಂಡಕರು ಬಂದು ಬಿಟ್ಟರೆ ಕ್ಷಣಮಾತ್ರದಲ್ಲಿ ತಾನು ಬೆಂಕಿಯಲ್ಲಿ ಬಿದ್ದ ಹೂವಾಗುವೆನೆಂಬ ಸ್ಪಷ್ಟ ಕಲ್ಪನೆ ಆಕೆಗಿತ್ತು. ಆದುದರಿಂದಲೇ ಋಷ್ಯಶೃಂಗನ ಪ್ರೀತಿ ‘ಇರು! ಇರು!’ ಎಂದುಲಿದರೂ ಆತನ ತಂದೆಯ ಭೀತಿ ‘ಓಡು! ಓಡು!’ ಎಂದು ಅಪಾಯದ ಗಂಟೆ ಬಡಿದು, ಅರಚುತ್ತಿತ್ತು! ಆದರೆ ಆಕೆಯನ್ನು ಬೀಳ್ಕೊಡಲು ಋಷ್ಯಶೃಂಗನು ಸರ್ವಥಾ ಸಿದ್ಧನಿರಲಿಲ್ಲ. ವಾರಕನ್ನಿಕೆಗೆ ಬೀಳ್ಕೊಡದೇ ವಿಧಿಯೇ ಇರಲಿಲ್ಲ! ಅಗ್ನಿಹೋತ್ರದ ನೆಪವೊಡ್ಡಿ ಮೆಲ್ಲನೆ ಅಲ್ಲಿಂದ ಕಾಲ್ಕಿತ್ತಳು ವಾರಕನ್ನಿಕೆ.

ಸೂರ್ಯನು ಬಳಿ ಸಾರುವಾಗ ಬೆಳಗುವ ಭುವನವು ಆತನು ಮರೆಯಾಗುತ್ತಿದ್ದಂತೆಯೇ ಕತ್ತಲಾಗುವಂತೆ, ವಾರಬಾಲಿಕೆಯು ಬಳಿಯಿದ್ದಾಗ ಎಂದೂ ಕಾಣದ ಸಂತೋಷದಲ್ಲಿ ಮುಳುಗಿದ್ದ ಮುನಿಬಾಲನ ಮನೋಲೋಕದಲ್ಲಿ, ಆಕೆಯು ದೂರ ಸರಿಯುತ್ತಿದ್ದಂತೆಯೇ ಬಲು ಬೇಸರವೆಂಬ ಕತ್ತಲಾವರಿಸಿತು! ಖುಷಿಗೆ ಕಾರಣವಾದ ಆಟಿಕೆಯನ್ನು ಕಳೆದುಕೊಂಡ ಮಗುವಿನಂತೆ ರೋದಿಸಿದನು ಋಷ್ಯಶೃಂಗ! ಅಗ್ನಿಹೋತ್ರವು ಆಕೆಗೆ ನೆಪವಷ್ಟೇ! ನಿಜವಾಗಿಯೂ ಅಗ್ನಿಹೋತ್ರವನ್ನು ಮಾಡಬೇಕಿದ್ದ ಋಷ್ಯಶೃಂಗನಿಗೆ ಅಂದು ಅದನ್ನು ಮಾಡಲಾಗಲೇ ಇಲ್ಲ! ವಿರಹಾಗ್ನಿಯು ಒಳಗೊಳಗೇ ಜ್ವಲಿಸಿ, ನೆಮ್ಮದಿಯನ್ನೇ ಆಹುತಿ ತೆಗೆದುಕೊಳ್ಳುವಾಗ ಮತ್ತುಳಿದ ಅಗ್ನಿಗಳಿಗೆ ಪ್ರಸಕ್ತಿಯಾದರೂ ಎಲ್ಲಿ!? ಆ ಸಮಯದಲ್ಲಿ ನಿತ್ಯ ಮಾಡುತ್ತಿದ್ದ ಕಾರ್ಯಗಳೆಲ್ಲವನ್ನೂ ಮರೆತು, ಮೂಲೆಯಲ್ಲಿ ಕುಳಿತು ಶೂನ್ಯದಲ್ಲಿ ದೃಷ್ಟಿ ನೆಟ್ಟನು ಋಷ್ಯಶೃಂಗ!

~*~*~

(ಸಶೇಷ)

ತಿಳಿವು-ಸುಳಿವು:
ಭಲ್ಲಾತಕ- ಕಾಡುಗೇರು ಹಣ್ಣು, ಇಂಗುದ-ಹಿಪ್ಪೆ, ಧನ್ವನ-ಅಂಜೂರ, ಪಿಪ್ಪಲ-ಅರಳಿ, ಹಿಪ್ಪಲಿ.  ಮೂಲ ವರ್ಣನೆ: ಮಹಾಭಾರತ.

ಕ್ಲಿಷ್ಟ-ಸ್ಪಷ್ಟ:

  • ಪುಷ್ಪಮಾನಸ = ಹೂವಿನಂಥ ಮನಸ್ಸುಳ್ಳವನು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ50ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box