ಎಲ್ಲಿಯ ಸಂತ? ಎಲ್ಲಿಯ ವಸಂತ? ಸಂತ-ವಸಂತರಿಗೆಲ್ಲಿಯ ಸಂಬಂಧ?

ಬದುಕಿನಲ್ಲಿ ಸಂತನಿಲ್ಲದೇ ವಸಂತವೆಲ್ಲಿ!? ಸಂತರ ಚರಣಧೂಲೀಕಣದಲ್ಲಿ ವಸಂತನ ನೆಲೆಯಿದೆ; ಬದುಕಿನಲ್ಲಿ ಸಂತರ ಆಗಮನವಾಯಿತೆಂದರೆ ವಸಂತೋದಯವೂ ಆಯಿತೆಂದೇ ಅರ್ಥ!

ದಶರಥನ ಬದುಕಿನಲ್ಲಿ ಮತ್ತೆ ಬಂದಿತು ವಸಂತ! ಹಿಂದಿನ ವಸಂತವು ಅಶ್ವಮೇಧದ ಅರುಣೋದಯವಾದರೆ ಇಂದಿನ ವಸಂತವು ಸೂರ್ಯೋದಯ; ಯಜ್ಞಾಶ್ವದ ವಿಮೋಚನೆಯ ಮೂಲಕ ಪೂರ್ವವಸಂತದಲ್ಲಿ ಅಶ್ವಮೇಧದ ಪೀಠಿಕೆಯು ನೆರವೇರಿದ್ದರೆ, ಈ ವಸಂತದಲ್ಲಿ ಅಶ್ವಮೇಧವೇ ನೆರವೇರಬೇಕಿದೆ.

ಮಹಾಯಾಗದ ಮಹಾಭಾರವು ಹೆಗಲೇರಲು ಹವಣಿಸುವಾಗ ದೊರೆಗೆ ತನ್ನ ಬದುಕನ್ನು ನಿತ್ಯವಸಂತವಾಗಿಸಿದ ಸಂತವರೇಣ್ಯ ವಸಿಷ್ಠರ ಸ್ಮರಣೆಯಾಯಿತು. ಗುರುವೆಂಬ ಶಬ್ದಕ್ಕೆ ಭಾರವುಳ್ಳದ್ದು ಎಂತಲೂ ಅರ್ಥವಿದೆ; ಶಿಷ್ಯರ ಜೀವಭಾರ~ಜೀವನಭಾರಗಳನ್ನು ತಾನು ವಹಿಸುವುದು ಗುರುವಿಗೆ ಸಹಜ! ಆದುದರಿಂದಲೇ ಗುರುವೆಂದರೆ ತೂಗಲಾಗದ ತೂಕ; ಶಿಷ್ಯನಾಗುವನು ಹತ್ತಿಗಿಂತ ಹಗುರ!

ಮಹಾಯಾಗದ ಮಹಾಭಾರವನ್ನು ಮಹಾಗುರುವಿಗೆ ವಹಿಸಲು ಮುಂದಾದನು ಮಹಾರಾಜ; ಇನ್ನೂ ಯಾಗವು ಆರಂಭವಾಗುವ ಮೊದಲೇ ವಸಿಷ್ಠರ ಸನ್ನಿಧಿ ಸೇರಿ, “ಭಗವನ್! ಭುವನತ್ರಯದಲ್ಲಿ ನಿಮ್ಮಷ್ಟು ಎತ್ತರ ಬೇರಾರಿಲ್ಲ; ನನಗೋ ನಿಮ್ಮಷ್ಟು ಹತ್ತಿರ ಬೇರಾರಿಲ್ಲ! ಒಮ್ಮೊಮ್ಮೆ ಪರಮಗುರುವಾಗಿ, ಒಮ್ಮೊಮ್ಮೆ ಪರಮಾಪ್ತಮಿತ್ರನಾಗಿ ನನ್ನ ಕಂಗಳಲ್ಲಿ ಬೆಳಕಿನ ಸೆಲೆಯೂಡಿದವರು, ನನ್ನೆದೆಯಾಳದಲ್ಲಿ ಅಮೃತದ ತಂಪೆರೆದವರು ನೀವು! ಹತ್ತಿರದಲ್ಲಿ ಹತ್ತರವಿರುವ ಓ ಎತ್ತರದ ಎತ್ತರವೇ! ನನ್ನ ಭಾರವೂ ನಿಮ್ಮದೇ; ನನ್ನ ಕುಲದ ಭಾರವೂ ನಿಮ್ಮದೇ; ಕುಲೋದ್ಧಾರಕ್ಕಾಗಿ ನಡೆಸುವ ಯಾಗದ ಭಾರವೂ ನಿಮ್ಮದೇ!” ಎಂದು ವಸಿಷ್ಠರ ಶ್ರೀಚರಣದಲ್ಲಿ ತನ್ನ ಮಸ್ತಕದ ಅದ್ವೈತವನ್ನು ಕಲ್ಪಿಸಿದನು ದಶರಥ!

ಪ್ರಸನ್ನ~ದೃಷ್ಟಿ, ಮಂದ~ಸ್ಮಿತ, ಮೇಲೇರುವ ಅಭಯಹಸ್ತಗಳೊಡನೆ “ತಥಾಸ್ತು” ಎನ್ನುವ ಕುಲಗುರುವು, ಕರುವಿಗೆ ಹಾಲೂಡಲು ಕಾಯುವ ಕಾಮಧೇನುವಿನಂತೆ ಕಂಡುಬಂದರು ದೊರೆಗೆ.

ವಸಿಷ್ಠರು ತಮ್ಮ ದಿವ್ಯಚಿತ್ತದಲ್ಲಿ ಯಾಗಧುರವನ್ನು* ಧರಿಸುತ್ತಿದ್ದಂತೆಯೇ- ಯಜ್ಞಪೂರುಷನು ಅವರ ವರಭುಜವನ್ನೇರುತ್ತಿದ್ದಂತೆಯೇ ಅಲ್ಲೊಂದು ಅನಿರ್ವಚನೀಯವಾದ ಸಂಚಲನವೇ ಏರ್ಪಟ್ಟಿತು! ಮಹಾಪುರುಷರ ಮನಸ್ಸಿಗೆ ಬಂದರೆ ಸಾಕು, ಮಹಾಕಾರ್ಯಗಳು ತಂತಾನೇ ಕೈಗೂಡುವವಲ್ಲವೇ!? ಈ ತತ್ತ್ವದ ಸಾಕ್ಷಾತ್ಕಾರವೇ ಅಯೋಧ್ಯೆಯಲ್ಲಿ ಅಶ್ವಮೇಧವಾಗಿ ಅನಾವರಣಗೊಂಡಿತು! ಚೈತನ್ಯದ ಆ ಚರಮೂರ್ತಿಯ ಸಂಕಲ್ಪ- ದೃಷ್ಟಿ- ತೋರ್ಬೆರಳ ಚಲನೆ- ಸೂಚನಾ~ವಚನಗಳು ಸುಪ್ತವಾಗಿದ್ದ ಅದೆಷ್ಟೋ ಸುಕೃತಿಗಳನ್ನು ಸಚೇತನಗೊಳಿಸಿದವು; ಯಜ್ಞಕಾರ್ಯದಲ್ಲಿ ತೊಡಗಿಸಿದವು!

ವಸಿಷ್ಠರ ಪಾವನದೃಷ್ಟಿಗೆ ಪಾತ್ರರಾದ ಪುಣ್ಯಚೇತನರು ಯಜ್ಞಪೂರ್ವದ ಕಾರ್ಯಗಳಲ್ಲಿ ತಮ್ಮ ಆಯುಃಖಂಡ ಮತ್ತು ಅಂತಶ್ಶಕ್ತಿಗಳನ್ನು ಆಹುತಿಯಾಗಿ ಸಮರ್ಪಿಸತೊಡಗಿದೊಡನೆಯೇ…..
ಭೂಮಿಯು ಸಮತಲವಾಗತೊಡಗಿತು;
*ಮಖಮಂಟಪವು ಮೇಲೇಳತೊಡಗಿತು;
ಕುಂಡಗಳು ಖನನಗೊಂಡವು;
ಮರಗಳು ಅಮರಪ್ರೀಣನದ* ಸಾಧನಗಳಾಗಿ ಕೆತ್ತನೆಗೊಂಡವು;
ಜಲಾಶಯಗಳನ್ನು ವಿರಚಿಸುವಲ್ಲಿ ಖನಕರ* ಕರಗಳ ಆಯುಧಗಳು ಧರೆಯಾಳಕ್ಕೆ ಇಳಿಯುವ ಮುನ್ನವೇ- ಅದಕ್ಕಾಗಿಯೇ ಕಾಯುತ್ತಿರುವಂತೆ ಅಂತರ್ಜಲವು ಮೇಲೆದ್ದುಬಂದಿತು;
ರಾಜಾಧಿರಾಜರಿಗಾಗಿ ವೈಭವಸದನಗಳು, ವಿಪ್ರವರರಿಗಾಗಿ ಮಂಗಲಸದನಗಳು, ಭಟರಿಗಾಗಿ ಭದ್ರಸದನಗಳು, ಗಜ-ವಾಜಿಗಳಿಗಾಗಿ ತದುಚಿತ ಸದನಗಳು, ಶ್ರೀಸಾಮಾನ್ಯರಿಗಾಗಿ ಸರಳ-ಸುಖಕರ ಸದನಗಳು ಸರಯೂ ತೀರವನ್ನು ಸಾಲಂಕೃತಗೊಳಿಸಿದವು;
ನಿದ್ರಾಂಗನೆಯ ಭದ್ರಾನುಗ್ರಹದಂತಿದ್ದ ಶಯ್ಯಾಗೃಹಗಳು, ಘ್ರಾಣಾಕರ್ಷಣದ ಆಮಂತ್ರಣ- ಜಠರಾಗ್ನಿಯ ಜಾಗರಣ- ಪ್ರಾಣತರ್ಪಣಗಳ ಮಹಾವತಾರದಂತಿದ್ದ ಮಹಾನಸಗಳು* ಅಲ್ಲಿ ಮೈದಳೆದವು;
ಜ್ಯೋತಿರ್ವಿದರು ಗಗನಜ್ಯೋತಿಗಳಲ್ಲಿಯೂ, ಯೋಗವಿದರು ಅಂತರ್ಜ್ಯೋತಿಯಲ್ಲಿಯೂ, ಯಾಗವಿದರು ಅಗ್ನಿಜ್ಯೋತಿಯಲ್ಲಿಯೂ ತಮ್ಮ ದೃಷ್ಟಿಗಳನ್ನು ನೆಟ್ಟರು;
ನಟ-ನರ್ತಕರ ಅಂತರಂಗ-ಅಂಗಾಂಗಗಳು ಯಾಗಾಗ್ನಿಯ ಸಂಗದ ರಂಗಸಂಗಮದ ಸಮಯಕ್ಕೆ ಕಾತರಿಸಿದವು;

ಜಗದ್ಗುರುವಿನ ಆಯೋಜನೆಯಲ್ಲಿ, ಜಗದೀಶ್ವರನ ಆಗಮನಕ್ಕಾಗಿ, ಜಗತೀತಲದ* ಯಾಗಜ್ಞರೆಲ್ಲರೂ ಅಯೋಧ್ಯೆಯಲ್ಲಿ ಆವಾಹನೆಗೊಂಡರು; ಆನಂದಪರ್ವವು ಅಖಿಲಜನರಲ್ಲಿ ಆವಾಹನೆಗೊಳ್ಳತೊಡಗಿತು!

ಹೀಗೆ ನಿರಾಕಾರವಾದ ಯಜ್ಞವು ಸರಯೂತೀರದ ಸುರಭೂಮಿಯಲ್ಲಿ ಸಂತವರನ* ಸಂಕಲ್ಪದಂತೆ ಸಾಕಾರಗೊಳ್ಳತೊಡಗಿತು!

~*~*~

(ಸಶೇಷ)

ಕ್ಲಿಷ್ಟ ಸ್ಪಷ್ಟ:

  • ಯಾಗಧುರ = ಯಾಗದ ಭಾರ. (ಧುರ ಎಂದರೆ – ಗಾಡಿಯ ಭಾರವನ್ನು ಎತ್ತುಗಳ ಹೆಗಲಿಗೆ ವರ್ಗಾಯಿಸುವ ನೊಗ)
  • ಅಮರಣಪ್ರೀಣನ = ದೇವತಾ ಪ್ರೀತಿಕರವಾದ ಸಾಧನಗಳು
  • ಮಖ = ಯಜ್ಞ (ಮಖ ಮಂಟಪ = ಯಜ್ಞ ಮಂಟಪ)
  • ಖನಕರು = ಅಗೆಯುವವರು
  • ಮಹಾನಸ = ಅಡುಗೆಮನೆ
  • ಘ್ರಾಣಾಕರ್ಣಣದ ಆಮಂತ್ರಣ = ಅಡುಗೆಯ ಸುವಾಸನೆಯ ಆಮಂತ್ರಣ; ಜಠರಾಗ್ನಿಯ ಜಾಗರಣ = ಹಸಿವನ್ನು ಉದ್ರಿಕ್ತಗೊಳಿಸುವ; ಪ್ರಾಣತರ್ಪಣ = ಪ್ರಾಣಾಗ್ನಿಗೆ ತರ್ಪಣವೀಯುವ ಸವಿಯೂಟ ಕೊಡುವ ಅಡುಗೆ ಮನೆ
  • ಜಗತೀತಲ = ಇಡಿಯ ಭೂಮಂಡಲದ
  • ಸಂತವರ =  ಸಂತಶ್ರೇಷ್ಠ, ವಸಿಷ್ಠರು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ65ನೇ ರಶ್ಮಿ.

 

64 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box