#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
20-08-2018:
ನಿರ್ಣಯಗಳನ್ನು ಸ್ವೀಕರಿಸುವಾಗ ಯಾವುದರಿಂದಲೂ ಪ್ರಭಾವಿತರಾಗಬಾರದು, ಯಾರಾದರೂ ಏನಾದರೂ ತಿಳಿದುಕೊಂಡಾರೆಂಬ ಭಾವನೆಯಿಂದ ನಾವು ನಿರ್ಣಯ ತೆಗೆದುಕೊಂಡರೆ ಅಲ್ಲಿಯೇ ತೊಂದರೆ ಪ್ರಾರಂಭ.

ತತ್ತ್ವಭಾಗವತಮ್
ಇಲ್ಲೂ ಹಾಗೇ ಆಯಿತು, ನಳನಿಂದ ಪುಷ್ಕರ ಹಲವು ಬಾರಿ ಸೋತು ಓಡಿಹೋಗಿದ್ದಾನೆ, ಈಗ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗದೇ ಕಪಟ ದ್ಯೂತಕ್ಕೆ ಆಹ್ವಾನ ಮಾಡಿದಾಗ ಮೊದಲಿಗೆ ನಳ ಒಪ್ಪಿಲ್ಲ, ಆದರೆ ಹೆಂಡತಿಯ ಮುಂದೆ ಮತ್ತೆ ಕರೆದಾಗ ತಿರಸ್ಕರಿಸಲು ಮನ ಒಪ್ಪದೇ ಹೆಂಡತಿಯಿಂದ ಪ್ರಭಾವಿತನಾಗಿದ್ದರಿಂದ, ಅವಳದೇ ನಿಮಿತ್ತವಾಗಿ ದ್ಯೂತಕ್ಕೆ ಒಪ್ಪಿದ, ದ್ಯೂತದಿಂದ ನಳನಿಗೆ ಗಳಿಸುವುದೇನೂ ಇರಲಿಲ್ಲ, ಲಾಭವಿರಲಿಲ್ಲ, ಒಂದೊಮ್ಮೆ ಗೆದ್ದರೂ ಗೆದ್ದದ್ದನ್ನೆಲ್ಲಾ ಅಲ್ಲೇ ಬಿಟ್ಟು ಬರುತ್ತಿದ್ದ. ಆದರೆ ಸೋತರೆ ದೊಡ್ಡ ನಷ್ಟ, ಅವನಿಗೆ ಇಲ್ಲಿಯವೆರೆಗಿನ ಜೀವನದಲ್ಲಿ ಸೋಲೆಂಬುದು ತಿಳಿದೇ ಇರಲಿಲ್ಲ. ಅದೇ ಬಹುದೊಡ್ಡ ಅಘಾತವಾಗುತ್ತಿತ್ತು.
ದ್ಯೂತ ಪ್ರಾರಂಭವಾಯಿತು. ನಳ ಒಂದೊಂದಾಗಿ ಪಣಕ್ಕಿಟ್ಟು ಸೋತ. ರತ್ನಗಳು, ವಸ್ತುಗಳು, ಗ್ರಾಮಗಳು, ನಗರಗಳು ಹೀಗೆ ಇಟ್ಟಿದ್ದನ್ನೆಲ್ಲಾ ಸೋತ, ಎಲ್ಲವೂ ಪುಷ್ಕರನ ಪಾಲಾಯಿತು. ಮೊದಲಲ್ಲಿ ಸೋತಾಗಲೇ ವಿಮುಖನಾಗಬಹುದಿತ್ತಲ್ಲ ಯಾಕೆ ಮುಂದುವರೆಸಿದ ಎಂದರೆ ಅದಕ್ಕೆ ಎರಡು ಪ್ರಮುಖ ಕಾರಣಗಳು, ಮೊದಲನೆಯದು ಅವನಿಗೆ ಸೋಲುವುದು ತಿಳಿದಿರಲಿಲ್ಲ, ಹಾಗಾಗಿ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅವನು ಸಿದ್ಧನೂ ಇಲ್ಲ, ಹಾಗಾಗಿ ಎಲ್ಲ ಕಳೆದುಕೊಂಡ, ಅವನಲ್ಲಿ ಪೌರುಷವೇ ಪಧಾನ, ಅವನು ಪರಾಕ್ರಮಿ, ಗೆಲ್ಲುವವರೆಗೂ ಹೋರಾಡುವುದು ಅಭ್ಯಾಸ, ಎರಡನೆಯದಾಗಿ ಕಲಿಪುರುಷ ಅವನೊಳಗೆ ಸೇರಿಕೊಂಡಿದ್ದ, ಕಲಿ ಎಲ್ಲಿರುವನೋ ಅಲ್ಲಿ ಕೇಡು ನಿಶ್ಚಿತ.
ಕಲಿಯುಗದಲ್ಲಿ ಅಧರ್ಮ ಹೆಚ್ಚುತ್ತೆ ಅಂದರೆ ಅದರರ್ಥ ಕಲಿಯುಗ ದುಃಖವನ್ನು ಕೊಡುತ್ತೆ ಅಂತ. ಇಲ್ಲಿ ನಳನಿಗೆ ಮೋಸ ಅಗುತ್ತಾ ಇದೆ. ಕಲಿಯ ಪ್ರಭಾವದಿಂದ ಆಟ ಮುಂದುವರೆಯುತ್ತಿದೆ.
ಅಮಾತ್ಯರು ಬಂದರು, ಆಟ ನಿಲ್ಲಿಸಲು ಹೇಳುವ ಚಿಂತನೆಯೊಡನೆ, ಆದರೆ ನಳ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ, ದಮಯಂತಿ ಬಂದಾಗಲೂ ನೋಡದನಂತೆ ಮುಂದುವರೆಸಿದ, ತಲೆ ಎತ್ತಿ ದಮಯಂತಿಯನ್ನು ನೋಡಲಿಲ್ಲ, ಕಣ್ಣೆತ್ತಿ ಅವಳನ್ನು ನೋಡುವ ಧೈರ್ಯ ಇರಲಿಲ್ಲ. ಯಾಕೆಂದರೆ ತಾನು ಮಾಡಿದ್ದು ತಪ್ಪೆನ್ನುವ ಅಳುಕು ಅವನಲ್ಲಿ ಇತ್ತು. ಜಾನಾಮಿಧರ್ಮಂ ನಚಮೇ ಪ್ರವೃತ್ತಿಃ| ಎಂಬಂತೆ. ಪ್ರಜೆಗಳೂ ಹೆದರಿದರು, ತಮ್ಮ ರಾಜ ಇನ್ನು ಸರ್ವಸ್ವವನ್ನೂ ಕಳೆದುಕೊಂಡರೆ ಏನು ಗತಿ ಅಂತ. ಪುಷ್ಕರನಾದರೋ ತನ್ನ ರಾಜ್ಯದ ಚಿಂತೆಯನ್ನೂ ಬಿಟ್ಟು ಇಲ್ಲಿ ಕುಳಿತುಕೊಂಡುಬಿಟ್ಟಿದ್ದಾನೆ, ಇಷ್ಟು ಸುಲಭವಾಗಿ ರಾಜ್ಯ, ಸಂಪತ್ತು ದೊರಕಿದರೆ ಇನ್ನು ಚಿಂತೆ ಏನು ಅವನಿಗೆ?
ಮನುಷ್ಯ ಸಾಮಾನ್ಯವಾಗಿ ಅನಿಶ್ಚಿತತೆಯಲ್ಲಿಯೇ ಆನಂದ ಪಡುತ್ತಾನೆ. ಭಾರತ ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಪಂದ್ಯ ನಡೆಯುವಾಗ ಜನಸಾಮಾನ್ಯರಿಗೆ ಅದು ವೃತ್ತಿಗಾಗಲೀ, ಹೊಟ್ಟೆಪಾಡಿಗಾಗಲೀ ಯಾವರೀತಿಯಲ್ಲೂ ಉಪಯೋಗ ಬಾರದಿದ್ದರೂ ಯಾಕೆ ಉದ್ವೇಗ ಪಡುತ್ತಾರೆ ಅಂದರೆ ಅಲ್ಲಿ ಅನಿಶ್ಚಿತತೆ ಇದೆ ಅಂತ. ಈಗ ಮನುಷ್ಯರು ಇಷ್ಟಪಡುವ ಹೆಚ್ಚಿನದ್ದು ಜೂಜೇ ಆಗಿದೆ, ಹತ್ತು ಬಾರಿ ಕಣ್ಣೀರು ಹಾಕಿ ಐದು ಬಾರಿ ಸಂತಸ ಕೊಡುವ ಎಲ್ಲವೂ ಜೂಜಿನಂತೆಯೇ. ಸ್ವಾರಸ್ಯ ಎಂದರೆ ಸಾಲಾಗಿ ಎಲ್ಲವನ್ನೂ ಗೆಲ್ಲಲು ಪ್ರಾರಂಭಿಸಿದರೆ ಆಸಕ್ತಿ ಕಡಿಮೆಯಾಗುತ್ತದೆ. ಮೇಲೆ ಕೆಳಗೆ ಆಗಿ ಗೆದ್ದರೇ ಸ್ವಾದ. ನಾವು ವಾಸ್ತವತೆಯಲ್ಲಿ, ಸ್ಥಿರತೆಯಲ್ಲಿ ಸುಖವನ್ನು ಕಾಣಬೇಕು. ಇದು ಮೋಸ, ಮಾಯಾಜಾಲದಂತೆ ದ್ಯೂತದಿಂದ ಹಿಡಿದು ಕುದುರೆ ಓಟದವರೆಗೆ ಎಲ್ಲವೂ ಮನೆ ಹಾಳುಮಾಡುವಂಥದ್ದೇ, ಜೂಜಿನಲ್ಲಿ ಗೆದ್ದು ಸಂಪಾದನೆ ಮಾಡಿರುವ ಒಂದೂ ಉದಾಹರಣೆ ಸಿಗುವುದಿಲ್ಲ. ನಡೆಸುವವರು ಗಟ್ಟಿಯಾಗಬಹುದೇನೋ ಆದರೆ ಆಡಿದ ನೂರಾರು ಮನೆಗಳನ್ನು ನಾಶ ಮಾಡಿದ ಪಾಪದ ಲೇಪ ಅವರನ್ನು ಕಾಡುವುದು ನಿಶ್ಚಿತ.
ಇಲ್ಲಿ ಇವರ ದ್ಯೂತ ತಿಂಗಳುಗಟ್ಟಲೆ ನಡೆಯಿತು, ಯಾಕೆಂದರೆ ಅವನ ಸಂಪತ್ತು ಅಷ್ಟಿತ್ತು, ಸುಲಭವಾಗಿ ಕರಗದಷ್ಟು. ನಳ ಸಾಲುಸಾಲಾಗಿ ಎಲ್ಲವನ್ನೂ ಕಳೆದುಕೊಂಡ, ಅಗಿನ ಅವಸ್ಥೆಯಲ್ಲಿ ದಮಯಂತಿಗೆ ಅವನು ಹುಚ್ಚನಂತೆ ಕಂಡ. ಪುಣ್ಯಶ್ಲೋಕನಾದ ನಳ ಹುಚ್ಚನಂತಾಗಿಬಿಟ್ಟಿದ್ದ ಪುಣ್ಯಶ್ಲೋಕನೆಂದರೆ ಅವನ ಹೆಸರು ಹೇಳಿದರೂ ಸಾಕು ಪುಣ್ಯ ಬರುತ್ತೆ ಅಂಥವನು. ದಮಯಂತಿಗೆ ಭಯ ಶೋಕ ಎರಡೂ ಒಟ್ಟಿಗೇ ಉಂಟಾಯಿತು. ಸಂಪತ್ತು ಒಳ್ಳೆಯ ರೂಪದಲ್ಲಿ ವಿನಿಯೋಗವಾದರೆ ಒಳ್ಳೆಯದು, ಆದರೆ ಹೀಗೆ ಹಾಳಾದರೆ ಹೇಗೆ? ಚಿಂತಿತಳಾದ ದಮಯಂತಿ ಬೃಹತ್ಸೇನೆಯೆಂಬ ತನ್ನ ಸಖಿಯನ್ನು ಕರೆದು ಅಮಾತ್ಯರಿಗೆ ಸಂದೇಶವನ್ನು ಮುಟ್ಟಿಸಲು ಹೇಳಿದಳು ರಾಜನ ಆಜ್ಞೆಯಂತೆ ನಳನ ಉಳಿದ ಸಂಪತ್ತಿನ ಲೆಕ್ಖ ಕೊಡಲು ಹೇಳಿದಳು, ಒಂದು ದಮಡಿಯಷ್ಟಾದರೂ ಉಳಿದಿದ್ದರೆ ಸಾಕೆಂದು ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ನಳನಿಗೆ ಲೆಕ್ಖ ಕೊಡಲು ಹೋದರೂ ನಳನು ಅವರೆಡೆಗೆ ನೋಡಲೇ ಇಲ್ಲ. ದಮಯಂತಿಗೆ ಬೇಸರವಾಯಿತು.
ಹೆಂಡತಿಯ ಮಾತು/ ಸಲಹೆ ತೊಗೋಬಾರದು ಅನ್ನುವುದೇ ತಪ್ಪು, ಅವಳು ವಿವೇಕಿಯಾಗಿದ್ದು, ತಿಳುವಳಿಕೆಯಿಂದ ಹೇಳಿದರೆ ಖಂಡಿತವಾಗಿ ಕೇಳಬೇಕು. ಆದರೆ ಇಲ್ಲಿ ನಳ ಸ್ವೀಕರಿಸಲಿಲ್ಲ, ನೊಂದ ದಮಯಂತಿ ತಲೆತಗ್ಗಿಸಿ ಹೊರಟುಹೋದಳು. ದಮಯಂತಿ ಮುಂದೇನೆಂದು ಚಿಂತಿಸಿ ಮಕ್ಕಳನ್ನಾದರೂ ಉಳಿಸಿಕೊಳ್ಳುವ ನಿಶ್ಚಯ ಮಾಡಿ ವಾಷ್ರ್ಣೇಯನೆನ್ನುವ ನಳನ ಸಾರಥಿಯನ್ನು ಕರೆದು ಮಕ್ಕಳನ್ನು ಕರೆದುಕೊಂಡು ತವರಿಗೆ ಬಿಟ್ಟು, ಅವನೂ ಎಲ್ಲಿಯಾದರೂ ಹೋಗಿ ಬದುಕಬಹುದೆಂದು ಹೇಳಿ ಕಳುಹಿಸಿಕೊಟ್ಟಳು. ಅವನು ಅದರಂತೆ ಹೊರಟು ಮಕ್ಕಳನ್ನು ವಿದರ್ಭದಲ್ಲಿ ಬಿಟ್ಟು ತಾನು ಅಯೋಧ್ಯೆಯ ಋತುಪರ್ಣರಾಜನಲ್ಲಿಗೆ ಹೋಗಿ ಸೇರಿದನು.
ಆಗಬಾರದ್ದು ಆಗಿ ಹೋಯಿತು, ಮಾಡಬಾರದ್ದನ್ನು ಮಾಡಿದ್ದರಿಂದಾಗಿ ನಳ ಎಲ್ಲವನ್ನೂ ಕಳೆದುಕೊಂಡ. ಚತುರಂಗಬಲ, ಕಿರೀಟ, ಸಿಂಹಾಸನ, ಕೋಶ, ರಾಜ್ಯಾಧಿಕಾರ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಪುಷ್ಕರನಿಗೆ ಎಂತಹ ಒಂದು ಯೋಗ ಬಂದಿದೆ ಅನಾಯಾಸವಾಗಿ. ಪುಷ್ಕರ ನಳನಿಗೆ ಹೇಳುತ್ತಾನೆ ಈಗ ನಿನ್ನದ್ದೆಲ್ಲವೂ ನನ್ನದ್ದಾಗಿದೆ ಆದರೆ ಮುಗಿಸುವ ಮನಸ್ಸಿಲ್ಲ, ಹಾಗಾಗಿ ಇದು ಮುಂದುವರೆಯಲಿ ಎಂದ. ಅವನ ನಿಶ್ಚಯ ದಮಯಂತಿಯೆಡೆಗೆ ಇತ್ತು, ಅಲ್ಲದೇ ನಳ ಅವನನ್ನೇ ಪಣಕ್ಕೆ ಒಡ್ಡಿದ್ದರೂ ಅವನು ಶಾಶ್ವತ ಸೇವಕನಾಗಿ ತನ್ನಲ್ಲೇ ಉಳಿಯುತ್ತಾನೆ ಎಂಬ ಹಂಚಿಕೆ ಪುಷ್ಕರನದ್ದು. ನಳ ಮಾತನಾಡಲಿಲ್ಲ, ಪುಷ್ಕರನೇ ಬಾಯಿಬಿಟ್ಟು ಹೇಳುತ್ತಾನೆ ದಮಯಂತಿಯೆಂಬ ನಿನ್ನ ರತ್ನಸಮಾನಳಾದ ಪತ್ನಿ ಇದ್ದಾಳಲ್ಲ, ಅವಳನ್ನು ಪಣಕ್ಕಿಡು ಎಂದು. ಅದನ್ನು ಕೇಳಿ ನಳನ ಹೃದಯ ಚೂರುಚೂರಾಯಿತು, ಒಂದೆಡೆ ಕ್ರೋಧ, ಒಂದೆಡೆ ಶೋಕ ಎರಡೂ ತುಂಬಿಬಂತು. ಮಹಾಸರ್ಪವೊಂದು ಮಂತ್ರ, ಔಷಧಗಳಿಂದ ಕಟ್ಟಿಹಾಕಲ್ಪಟ್ಟಾಗ ಹೇಗೆ ಒದ್ದಾಡುತ್ತದೋ ಹಾಗೇ ಆಯಿತು ನಳನ ಸ್ಥಿತಿ. ಏನೂ ಮಾತಾಡಲಿಲ್ಲ ಪತ್ನಿಯನ್ನೂ ಪಣಕ್ಕಿಡಲಿಲ್ಲ, ತನ್ನನ್ನೂ ಪಣಕ್ಕಿಡಲಿಲ್ಲ, ಅಷ್ಟರಮಟ್ಟಿಗೆ ಧರ್ಮದ ಪರಿಧಿಯನ್ನು ದಾಟಲಿಲ್ಲ, ಪತ್ನಿಯನ್ನು ಬೇರೊಬ್ಬರ ವಶ ಮಾಡುವುದು ಧರ್ಮವಲ್ಲ, ಅದು ಮಾಡದ್ದರಿಂದ ಧರ್ಮವನ್ನು ಆಚರಿಸಿದಂತಾಯಿತು. ತನ್ನ ಆಭರಣಗಳನ್ನೆಲ್ಲಾ ತೆಗೆದ ಉಟ್ಟಬಟ್ಟೆಯಲ್ಲಿ ರಾಜಭವನ ಬಿಟ್ಟು ನೇರ ಹೊರಟ, ನಳನ ಇಡೀ ಪರಿವಾರ ಅದನ್ನು ನೋಡಲಾಗದೇ ಬಿಕ್ಕಿಬಿಕ್ಕಿ ಅತ್ತರು, ಅದುವರೆಗೂ ಆನಂದವರ್ಧನನೆನಿಸಿಕೊಂಡಿದ್ದವನು ಅಂದು ಶೋಕವರ್ಧನನಾದ ಅವರ ಪಾಲಿಗೆ. ಕೇವಲ ದಮಯಂತಿ ಅವನನ್ನು ಹಿಂಬಾಲಿಸಿದಳು, ಉಟ್ಟಬಟ್ಟೆಯಲ್ಲಿಯೇ. ಪುರಜನರಿಗೆ ಅವನೊಡನೆ ಹೋಗಬೇಕೆನ್ನುವ ಮನಸ್ಸು, ಆದರೆ ಪುಷ್ಕರನ ಕಟ್ಟಪ್ಪಣೆಯಿತ್ತು ಯಾರಾದರೂ ಅವನಿಗೆ ಸಹಾಯಕರಾದರೆ ಅವರಿಗೆ ದೇಹಾಂತ ಶಿಕ್ಷೆ ಎಂಬುದಾಗಿ, ಅದಕ್ಕಿಂತ ಹೆಚ್ಚಾಗಿ ನಳನೇ ಅವರನ್ನು ತಮ್ಮ ಜೊತೆ ಬರಲು ಒಪ್ಪುತ್ತಿರಲಿಲ್ಲ, ಅದು ಕೇವಲ ತನಗೆ ದೊರೆತ ಶಿಕ್ಷೆ ಹಾಗಾಗಿ ತಾನು ಮಾತ್ರವೇ ಅದನ್ನು ಅನುಭವಿಸಬೇಕೆನ್ನುವ ಭಾವ ಅವನದ್ದು. ಹಾಗೇ ಊರ ಹೊರಗೆ ವಾಸ ಮಾಡುತ್ತಾನೆ, ಅನ್ನ, ನೀರುಗಳು ಇಲ್ಲದೇ ಕೇವಲ ಗಾಳಿಸೇವನೆ ಮಾಡಿ.
ರಾಮನಲ್ಲೂ ಇದೇ ವಿಷಯವನ್ನು ಕಾಣುತ್ತೇವೆ. ವನವಾಸಕ್ಕೆ ಹೊರಟಾಗ ಪ್ರಜೆಗಳು ಹಿಂಬಾಲಿಸುತ್ತಾರೆ. ಅವರನ್ನು ರಾತ್ರಿ ವಿಶ್ರಮಿಸಿದಾಗ ಅಲ್ಲಿಯೇ ಬಿಟ್ಟು ರಾತ್ರೋರಾತ್ರಿ ಪ್ರಯಾಣ ಮಾಡಿ ರಾಮ ಮುಂದೆ ಹೊರಟುಹೋಗುತ್ತಾನೆ, ಅವನು ನೀಡುವ ಕಾರಣವೂ ಅದೇ, ಇದು ನನಗೆ ಕರ್ತವ್ಯ ಹಾಗಾಗಿ ನನಗೆ ಸೇವ್ಯ, ಅನ್ಯರು ಅದರ ಭಾರ ಹೊರುವುದು ತಕ್ಕುದಲ್ಲ ಅಂತ. ರಾಜನಾದವ ಪ್ರಯತ್ನ ಪಟ್ಟು ಪ್ರಜೆಗಳಿಗೆ ತನ್ನ ಸುಖವನ್ನಾದರೂ ಕೊಡಬೇಕು. ಅವರ ಸುಖವನ್ನು ತಾನು ಪಡೆದು ಜೀವಿಸಬಾರದು ಅದು ರಾಜನ ಧರ್ಮ.
ವಿಶ್ರಮಿಸಿದ ನಳ ಹಸಿವೆ ತಡೆಯಲಾರದೇ ಕಂದಮೂಲಫಲ ಗಳೇನಾದರೂ ಸಿಗುತ್ತದೇನೋ ನೋಡಿದ ಆದರೆ ಏನೂ ಸಿಗಲಿಲ್ಲ ಅಷ್ಟರಲ್ಲಿ ಅಶ್ಚರ್ಯವೆಂಬಂತೆ ಬಂಗಾರದ ಬಣ್ಣದ ಪಕ್ಷಿಗಳು ಗುಂಪಾಗಿ ಹಾರುತ್ತಾ ಅವನಿಗೆ ಸಿಗುವಂತೆ ಹತ್ತಿರ ಬಂದವು ಅವುಗಳನ್ನಾದರೂ ಹಿಡಿದು ಹೊಟ್ಟೆಹಸಿವು ತೀರಿಸಿಕೊಳ್ಳುವ ಯೋಚನೆಯಿಂದ ತಾನು ಉಟ್ಟಿದ್ದ ವಸ್ತ್ರವನ್ನೇ ಅವುಗಳ ಮೇಲೆ ಹರಡಿದ, ಆದರೆ ಅವು ಆ ಬಟ್ಟೆಯನ್ನೂ ಹೊತ್ತುಕೊಂಡು ಹಾರಿಹೋದವು. ಹೋಗುತ್ತಾ ಹಕ್ಕಿಗಳು ಹೇಳಿದವು, “ನಾವ್ಯಾರೆಂದು ತಿಳಿಯದೆ? ನಾವು ನಿನ್ನ ಪಗಡೆಯಾಟದ ದಾಳಗಳು! ನೀನು ಸೋತವ, ಒಂದು ಬಟ್ಟೆಯನ್ನು ಉಟ್ಟುಕೊಂಡು ಹೋರಟೆಯಲ್ಲ ಅದನ್ನು ನಮ್ಮಿಂದ ಸಹಿಸಲಾಗಲಿಲ್ಲ. ಈಗ ಸರಿಯಾಯಿತು, ನಿನ್ನನ್ನು ಪೂರ್ಣವಾಗಿ ಸೋಲಿಸಿದಂತಾಯಿತು” ಎಂದು ಹೇಳಿ ಹಾರಿದವು. ನಳ ಸೋತಮುಖದಿಂದ, ದಿಗಂಬರನಾಗಿ ನಿರ್ಗತಿಕನಂತೆ ಕುಳಿತು ರೋಧಿಸಿದ.
ಎಂಥ ದುರ್ಭಿಕ್ಷ ಅವಸ್ಥೆ ನೋಡಿ ರಾಮನಿಗೆ ವನವಾಸ ಆದಾಗಲೂ ಬಟ್ಟೆಗೆ ತೊಂದರೆ ಇರಲಿಲ್ಲ, ಪಾಂಡವರಿಗೂ ಹಾಗೆಯೇ ಆದರೆ ನಳನಿಗೆ ಅದೂ ಇಲ್ಲ ಎಂತಹ ಸ್ಥಿತಿ ನೋಡಿ, ಭಿಕ್ಷುಕನಿಗಾದರೂ, ಹುಚ್ಚನಿಗಾದರೂ ಹರಿದ ಬಟ್ಟೆಯಾದರೂ ಇರುತ್ತದೆ ಇಲ್ಲಿ ನಳನ ಸ್ಥಿತಿ ಗಂಭೀರ.
ಒಂದು ವ್ಯಸನ ಒಬ್ಬನ್ನು ಯಾವಸ್ಥಿತಿಗೆ ಇಳಿಸಬಹುದು ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆ.
ಸಾರ್ವಭೌಮನಾಗಿದ್ದವನು ಏನೂ ಇಲ್ಲ ಎನ್ನುವ ಸ್ಥಿತಿಗೆ ಬಂದುಬಿಟ್ಟಿದ್ದಾನೆ, ಕಲಿ ತನ್ನ ಪ್ರತಿಜ್ಞೆಯನ್ನು ಒಂದು ಹಂತದವರೆಗೆ ನಡೆಸಿದ ನಿಜ. ಆದರೆ ಇದು ಒಂದು ಘಟ್ಟ ಮಾತ್ರಾ, ಸಂಕಟದ ಘಟ್ಟ ನಳ ಪಾತಾಳಕ್ಕೆ ಹೋಗಿಬಿಟ್ಟಿದ್ದಾನೆ, ಕಳೆದುಕೊಳ್ಳಲು ಇನ್ನು ಏನೂ ಉಳಿದಿಲ್ಲ, ಇದು ಮೇಲ್ನೋಟಕ್ಕೆ ನಳ ಹಾಗೂ ಕಲಿಯ ನಡುವಿನ ಸಂಗ್ರಾಮ ಎನ್ನಿಸಿದರೂ ವಾಸ್ತವದಲ್ಲಿ ಇದು ಧರ್ಮ ಹಾಗೂ ಅಧರ್ಮಗಳ ನಡುವಿನ ಸಂಗ್ರಾಮ. ಯಾವುದನ್ನೂ ಮಧ್ಯದಲ್ಲಿ ನಿರ್ಣಯಿಸಬಾರದು. ಈ ಸಂಗ್ರಾಮ ಇನ್ನೂ ಮುಗಿದಿಲ್ಲ, ಕೊನೆಯವರೆಗೂ ಕಾಯಬೇಕು ನಿಜ ತಿಳಿಯಲು. ಹಾಗಾಗಿ ಈ ಸೋಲು ಸೋಲಲ್ಲ, ಧರ್ಮಕ್ಕೆ ಎಂದೂ ಸೋಲಿಲ್ಲ. ಆದರೆ ಇಲ್ಲಿನ ಪಾಠ ಏನೆಂದರೆ, ವ್ಯಸನ ಯಾವುದಾದರೂ ಅದು ಜೀವನವನ್ನು ಹಾಳು ಮಾಡುತ್ತೆ. ವ್ಯಸನ ಎಂದರೇ ದುಃಖ, ಅದಕ್ಕೇ ಆರೀತಿ ಹೇಳಿರುವುದು. ನಳನೇ ಇದಕ್ಕೆ ಅತ್ಯತ್ತಮ ಉದಾಹರಣೆ. ದ್ಯೂತದಲ್ಲಿ ಕಲಿ ಇದ್ದಾನೆ. ಇದರಿಂದ ನಾವು ದೂರ ಇರಬೇಕು ಅನ್ನುವುದನ್ನು ನಿಶ್ಚಯಮಾಡಿಕೊಳ್ಳೋಣ.
ನೆನಪಿರಲಿ,
ಕರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಳಸ್ಯ ಚ| ಋತೂಪರ್ಣಸ್ಯ ರಾಜರ್ಷೇ ಕೀರ್ತನಂ ಕಲಿನಾಶನಂ|| ಎಂಬಂತೆ
ಇದರ ಸ್ಮರಣೆ ಮಾತ್ರದಿಂದ ಕಲಿಯನ್ನು ಮೆಟ್ಟಿನಿಲ್ಲುತ್ತೇವೆ, ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ವಾರಸ್ಯಕರವಾಗಿ ಬರುವ ಭಾಗಗಳನ್ನು ಅವಲೋಕನ ಮಾಡೋಣ.
ಚಿತ್ರ:ಅಂತರ್ಜಾಲದಿಂದ
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply