#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
24-08-2018:

ಮರೆಯದ ಮಹಾಪ್ರಭುವಿನ ಮಹಾನ್ವೇಷಣೆ.

“ಮಂಗಳದ ಬೆಳೆಗಿಂಗಳನ ಮಳೆ ಸುರಿದುದೈ ಮಹಾದೇವ” ಕುಮಾರವ್ಯಾಸನ ಮಾತಿದು. ತೆನೆ ತುಂಬಿದ ಭತ್ತದ ಪೈರಿಗೆ ಬಿರುಸಾದ ಮಳೆ ಬಿದ್ದರೇ ತಡೆಯಲು ಸಾಧ್ಯವಿಲ್ಲ ಹೀಗಿರುವಾಗ ಬೆಂಕಿಯ ಮಳೆ ಸುರಿದರೆ ಹೇಗಿರಬಹುದು? ಹಾಗೆಯೇ ಆಗಿತ್ತು, ಎಲ್ಲವನ್ನೂ ಕಳೆದುಕೊಂಡು ಕಾಡುಮೇಡುಗಳಲ್ಲಿ ಅಲೆಯುತ್ತಿರುವ ದಮಯಂತಿಯ ಕಥೆ. ಸುಖಾರ್ಹರಿಗೆ ದುಃಖ ಬಂದಾಗ ಅವರನ್ನು ನೋಡುವವರಿಗೂ ತುಂಬಾ ಕಷ್ಟ ಅನಿಸುತ್ತದೆ. ಈ ಮಾತು ದಮಯಂತಿಗೂ ಅನ್ವಯವಾಗುತ್ತದೆ.

ತತ್ತ್ವಭಾಗವತಮ್

ರಾಮಯಣದಲ್ಲಿ ಸೀತೆಯನ್ನು ಕಳೆದುಕೊಂಡ ಶ್ರೀರಾಮ ಮರ-ಗಿಡ, ಬೆಟ್ಟ-ಗುಡ್ಡಗಳಲ್ಲಿ ತಿರುಗಾಡಿ ಓಡಾಡಿ ವಿಲಪಿಸುತ್ತಾನೆ, ಹೇಗೆಂದರೆ ಶೋಕವೆಂಬ ಕೆಸರಿನ ಹೊಂಡದಲ್ಲಿ ಬಿದ್ದವನಂತೆ. ಕದಂಬ, ಅರ್ಜುನ ವೃಕ್ಷಗಳನ್ನು ಕೇಳುತ್ತಾನೆ ಸೀತೆಗೆ ನಿಮ್ಮನ್ನು ಕಂಡರೆ ಪ್ರೀತಿ ಇತ್ತು, ನೀವು ಅವಳನ್ನು ಕಂಡಿರಾ? ಎಂದು. ಅಶೋಕವೃಕ್ಷದ ಬಳಿ ಹೋಗಿ ನನ್ನನ್ನು ನಿನ್ನ ಹೆಸರಿನಂತೆ (ಶೋಕರಹಿತ) ಮಾಡು ಅದಕ್ಕಾಗಿ ನನಗೆ ಸೀತೆ ಎಲ್ಲಿರುವಳೆಂದು ತಿಳಿಸು ಎಂದು ವಿಲಪಿಸುತ್ತಾನೆ. ಹೀಗೆಯೇ ದಮಯಂತಿಯೂ ಮಾಡುತ್ತಾಳೆ. ಮರದ ಬಳಿಹೋಗಿ ಕೇಳುತ್ತಾಳೆ ನಿನ್ನಲ್ಲಿ ಎಷ್ಟೋ ಹಕ್ಕಿಗಳು ಬರುತ್ತಿರುತ್ತವೆ, ಅವು ಎಲ್ಲೆಲ್ಲಿಂದಲೋ ಬರುತ್ತವೆ, ಅವುಗಳಲ್ಲಿ ನಳನ ವೃತ್ತಾಂತವನ್ನು ಕೇಳು. ಹೇಳದಿದ್ದರೆ ನಿನ್ನಲ್ಲಿ ಜಾಗ ಕೊಡಬೇಡ ಅಂತ, ಇದನ್ನು ಹಲುಬುವುದು ಅಂತ ಹೇಳುತ್ತಾರೆ.
ಹತ್ತಿರದಲ್ಲಿ ಒಂದು ಹುಲಿ ಹೋಗುತ್ತಿರುತ್ತದೆ. ಅದರೆದುರಿಗೆ ಹೋಗಿ ಅದರ ಜೊತೆಗೆ ಮಾತನಾಡಲು ತೊಡಗುತ್ತಾಳೆ. ಹುಲಿಯೊಡನೆ ಯಾರಾದರೂ ಮಾತನಾಡುತ್ತಾರಾ? ಮೊದಲೇ ಅದನ್ನು ಹುಲಿ ಪ್ರೀತಿ ಅಂತ ಹೇಳುತ್ತಾರೆ. ಅಂತಹುದರಲ್ಲಿ ಈ ತಬ್ಬಲಿ ಹೆಬ್ಬುಲಿಯ ಮುಂದೆ ನಿಂತು ಮಾತನಾಡುತ್ತಿದ್ದಾಳೆ. ಅದಕ್ಕೆ ಹೇಳುತ್ತಾಳೆ, ನೀನಾದರೋ ಕಾಡಿನ ರಾಜ ನಾನು ವಿದರ್ಭದೇಶದ ರಾಜಕುವರಿ, ಅಷ್ಟೇ ಅಲ್ಲ ನಿಷಧ ದೇಶದ ರಾಣಿ, ವೀರನಾದ ನಳ ಚಕ್ರವರ್ತಿಯ ಹೆಂಡತಿ, ನೀನು ನನ್ನ ಕಷ್ಟ ಪರಿಹರಿಸು. ನನ್ನನ್ನು ಸಮಾಧಾನ ಮಾಡು. ಆದರೆ ಅದಕ್ಕಾಗಿ ನೀನು ನನ್ನ ಪತಿ ಎಲ್ಲಿರುವನೆಂದು ತಿಳಿಸಬೇಕು ಅಥವಾ ನಿನ್ನ ಹೊಟ್ಟೆಯಲ್ಲಿ ನನಗೆ ಜಾಗ ಮಾಡಿಕೊಡು, ಮುಂದಿನ ಜನ್ಮದಲ್ಲಿಯಾದರೂ ನಾನು ನಳನನ್ನು ಪತಿಯಾಗಿ ಮತ್ತೆ ಪಡೆಯುತ್ತೇನೆ ಎಂದು ಹೇಳುತ್ತಿದ್ದಳು. ಆದರೆ ಹುಲಿಯು ಇವಳ ಮಾತನ್ನು ಕೇಳಿ ಏನನ್ನೂ ಮಾತನಾಡಲು ತೋಚದೇ ಒಂದು ದಾರಿಯನ್ನು ಹಿಡಿದು ಹೊರಟಿತು, ದಮಯಂತಿಗೆ ಅದರ ವರ್ತನೆ ಅರ್ಥವಾಗಲಿಲ್ಲ. ಆದರೆ ಅದು ನಳ ಹೋದ ದಿಕ್ಕಿನಲ್ಲೇ ಹೋಗಿದ್ದಾಗಿತ್ತು. ಆ ಮೂಲಕ ಅವಳಿಗೆ ನೀನೂ ಅದೇ ದಾರಿಯನ್ನು ಹಿಡಿದು ಹೋಗು ಎಂದು ಹೇಳಿತ್ತು ಅದರದ್ದೇ ಆದ ಭಾಷೆಯಲ್ಲಿ! ಆದರೆ ಇವಳಿಗೆ ತಿಳಿಯಲಿಲ್ಲ.

ರಾಮನಿಗೂ ಹೀಗೇ ಆಗುತ್ತದೆ. ಮೊತ್ತಮೊದಲು ಸೀತೆಯ ಕುರಿತಾದ ವಿಚಾರ ಅವನಿಗೆ ತಿಳಿಸುವುದು ಪ್ರಾಣಿಗಳೇ, ಗೋದಾವರಿಗೂ ಆ ವಿಚಾರ ಗೊತ್ತಿತ್ತಾದರೂ ಅವಳು ರಾವಣನ ಭಯದಿಂದ ಹೇಳುವುದಿಲ್ಲ. ಆಗ ಎಲ್ಲ ಮರಗಿಡಗಳೂ ಅವಳಿಗೆ ಹೇಳಿದರೂ ಅವಳು ಹೇಳಲು ಬಯಸುವುದಿಲ್ಲ. ಆಗ ರಾಮ ದಿಗ್ಭ್ರಾಂತನಾಗಿ ಕುಳಿತುಬಿಡುತ್ತಾನೆ. ಪ್ರಾಣಿಗಳನ್ನು ಕೇಳಿದಾಗ ಅವು ಎದ್ದು ದಕ್ಷಿಣ ದಿಕ್ಕಿನತ್ತ ಸ್ವಲ್ಪ ದೂರ ಹೋಗಿ ಮುಖವನ್ನು ಮೇಲೆತ್ತಿ ಆಗಸಕ್ಕೆ ಮುಖಮಾಡಿ ಕೂಗುತ್ತವೆ. ಆದರೆ ಭ್ರಾಂತಿಯಲ್ಲಿದ್ದ ರಾಮನಿಗೆ ಅರ್ಥವಾಗಲಿಲ್ಲ, ಲಕ್ಷ್ಮಣನಿಗೆ ಅರ್ಥವಾಗುತ್ತದೆ. ಅದೇ ದಾರಿ ಹಿಡಿದು ಹೋಗುತ್ತಾರೆ. ಆಗ ಒಂದೊಂದಾಗಿ ಕುರುಹುಗಳು ಕಾಣುತ್ತವೆ, ಸೀತೆಯ ಮುಡಿಯಿಂದ ಬಿದ್ದ ಹೂಗಳು, ರಾವಣನ ಮುರಿದುಬಿದ್ದ ರಥ, ಸತ್ತುಬಿದ್ದಿದ್ದ ಅವನ ಅಂಗರಕ್ಷಕರು ಹೀಗೆ ಕಾಣುತ್ತದೆ. ಕೊನೆಗೆ ಜಟಾಯು ಕಾಣುತ್ತಾನೆ.

ಇಲ್ಲೂ ಹುಲಿ ಹಾಗೇ ಮಾಡುತ್ತದೆ, ಆದರೆ ದಮಯಂತಿ ಮಾತ್ರಾ ನನ್ನ ಮಾತು ಕೇಳಿಯೂ ಹುಲಿ ಏನನ್ನೂ ಮಾತನಾಡದೇ ಹೊರಟುಹೋಯಿತು ಅಂತ ಬೇಸರ ಮಾಡಿಕೊಳ್ಳುತ್ತಾಳೆ, ರಾಮಾಯಣದಲ್ಲಿಯೂ ಹೀಗೆಯೇ ರಾಮನು ಹುಲಿಯನ್ನು ಕಂಡು ಹೆದರಬೇಡ ನಿನಗೆ ಅಭಯವನ್ನು ನೀಡುತ್ತೇನೆ ನೀನೆಲ್ಲಾದರೂ ಸೀತೆಯನ್ನು ಕಂಡೆಯಾ ಹೇಳು ಎಂದು ಕೇಳುತ್ತಾನೆ.
ದಮಯಂತಿ ದಾರಿಯಲ್ಲಿ ಸಿಕ್ಕ ದೊಡ್ಡ ಪರ್ವತವನ್ನು ಕೇಳುತ್ತಾಳೆ ಭಗವಂತನೇ, ಪರ್ವತಶ್ರೇಷ್ಠನೇ, ಎಂದು ಬಗೆಬಗೆಯಾಗಿ ಅದನ್ನು ಹೊಗಳಿ ತನ್ನ ವಿವರಗಳನ್ನು ಪೂರ್ತಿಯಾಗಿ ಹೇಳುತ್ತಾಳೆ, ವಿದರ್ಭರಾಜನ ಕುವರಿ, ನಳನನ್ನು ಮೆಚ್ಚಿದ್ದು, ಸ್ವಯಂವರ, ಜೀವನ, ದ್ಯೂತ, ಅರಣ್ಯವಾಸ, ನಳ ತನ್ನನ್ನು ಬಿಟ್ಟುಹೋಗಿದ್ದು ಹೀಗೆ ಎಲ್ಲವನ್ನೂ ಹೇಳುತ್ತಾಳೆ. ಕಡೆಗೆ ನಳನ ಬಗ್ಗೆಯೂ ಹೇಳುತ್ತಾಳೆ. ಅವನು ಶತ್ರುಭಯಂಕರನಾದವನು, ಪುಣ್ಯವಂತ, ವೇದಗಳನ್ನು ಬಲ್ಲವನು, ಸೋಮಯಾಗ ಮಾಡಿದವನು, ವಾಗ್ಮೀ, ಯಜ್ಞಮಾಡಿದವನು, ದಾನಿ, ಶೂರ ಒಳ್ಳೆಯ ಆಡಳಿತಗಾರ. ಇಂತಹ ನಳನ ಪತ್ನಿ ನಾನು, ಅವನನ್ನು ಕಳೆದುಕೊಂಡಿದ್ದೇನೆ. ಅವನ ಬಗ್ಗೆ ಏನಾದರೂ ಹೇಳು ಎಂದು ಕೇಳುತ್ತಾಳೆ. ಅವನನ್ನು ನನಗೆ ಹುಡುಕಿಕೊಡು ಎನ್ನುತ್ತಾಳೆ. ಆದರೆ ಏನೊಂದೂ ಉತ್ತರ ಬರದಿದ್ದಾಗ ಉತ್ತರ ದಿಕ್ಕಿನೆಡೆಗೆ ಹೊರಟುಬಿಡುತ್ತಾಳೆ. ಮೂರು ಹಗಲು ಮೂರು ರಾತ್ರಿಗಳ ಕಾಲ ನಡೆದುಕೊಂಡು ಹೋಗುತ್ತಾಳೆ, ಉಪವಾಸ ಬೇರೆ. ಇದೇ ರೀತಿಯ ಘಟನೆ ರಾಮಾಯಣದಲ್ಲಿಯೂ ಆಗುತ್ತದೆ, ಶ್ರೀರಾಮನೂ ಪ್ರಸ್ರವಣ ಪರ್ವತವನ್ನು ಕುರಿತು ಹೀಗೆಯೇ ಮಾತನಾಡುತ್ತಾನೆ.

ದಮಯಂತಿ ಹೀಗೆಯೇ ಮುಂದುವರೆಯುತ್ತಿದ್ದಾಳೆ. ಎಷ್ಟೋ ದಿನಗಳಾಗಿದೆ, ಆಹಾರವಿಲ್ಲದೆಯೇ ತಿರುಗಾಡಿ ಬಳಲಿದ್ದಾಳೆ. ಕೆಲವೊಮ್ಮೆ ಪ್ರಕೃತಿಯಲ್ಲಿ ವಿಚಿತ್ರ ಚಮತ್ಕಾರ ನಡೆಯುತ್ತದೆ. ಇದ್ದಕ್ಕಿದ್ದಂತೆಯೇ ಒಂದು ಋಷ್ಯಾಶ್ರಮ ಕಾಣುತ್ತದೆ, ಅದು ಅನೇಕ ತಪಸ್ವಿಗಳಿಂದ ನಿಬಿಡವಾಗಿರುತ್ತದೆ, ಅಲ್ಲಿಗೆ ಹೋಗುತ್ತಾಳೆ. ಅವರು ನೀನ್ಯಾರು ಅಂತ ಕೇಳಿದಾಗ ತನ್ನ ಇಡೀ ವಿವರವನ್ನು ಮತ್ತೆ ಹೇಳುತ್ತಾಳೆ. ಆಗ ಋಷಿಗಳು ನೀನು ಚಿಂತಿಸಬೇಡ ಎಂದು ಹೇಳಿ ನಿನಗೆ ಒಳ್ಳೆಯದು ಆಗುತ್ತದೆ, ನಳ ಹಿಂತಿರುಗಿ ಬರುತ್ತಾನೆ, ಕಳೆದುಕೊಂಡದ್ದು ಮರಳಿ ಸಿಗುತ್ತದೆ. ನೆಮ್ಮದಿಯ ಜೀವನ ನಿನ್ನದಾಗುತ್ತದೆ, ಚಿಂತಿಸಬೇಡ ಸ್ವಲ್ಪ ದಿನ ಸೈರಿಸು ಎಂದು ಹೇಳುತ್ತಾರೆ. ಇದನ್ನು ಯೋಗಸ್ಥಿತಿಯ ಮೂಲಕ ನಾವು ಕಂಡುಕೊಂಡಿದ್ದೇವೆ ಎಂದು ಅವಳನ್ನು ಸಂತೈಸುತ್ತಾರೆ, ಇದಾಗದಿದ್ದರೆ ಅವಳು ಪ್ರಾಣತ್ಯಾಗ ಮಾಡುತ್ತಿದ್ದಳು.

ಮನುಷ್ಯನಿಗೆ ತುಂಬಾ ಇತಿಮಿತಿ ಇದೆ ತುಂಬಾ ಸುಖವನ್ನಾದರೂ ಸಹಿಸುವುದು ಸಾಧ್ಯವಿಲ್ಲ, ದುಃಖವನ್ನಾದರೂ ಸಹಿಸುವುದು ಸಾಧ್ಯವಿಲ್ಲ. ಎಲ್ಲರ ಜೀವನದಲ್ಲೂ ಏನಾದರೂ ಕಳಕೊಳ್ಳುವುದು ಇದ್ದೇ ಇರುತ್ತದೆ. ಮನೆಯಲ್ಲಿ ಯಾರಾದರೂ ತೀರಿಕೊಳ್ಳುತ್ತಾರೆ. ಅವರನ್ನು ಕಳೆದುಕೊಂಡ ದುಃಖ ಮೊದಮೊದಲು ಹೆಚ್ಚಾಗಿರುತ್ತದೆ, ನಂತರ ಕ್ರಮೇಣ ಅವರ ನೆನಪು ಬಿಟ್ಟುಹೋಗಿ ಮುಂದೆ ಅವರ ನೆನಪಿಗಾಗಿ ಏನನ್ನಾದರೂ ಮಾಡುವುದೂ ಅಪರೂಪ, ಶ್ರಾದ್ಧ ಮಾಡುವುದೂ ಕಷ್ಟ ಎನಿಸುವಂತಾಗುತ್ತದೆ.

ಸುಂದರಕಾಂಡದಲ್ಲಿ ಒಂದು ಸನ್ನಿವೇಶ ಬರುತ್ತದೆ, ಸೀತೆ ದುಃಖ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆದರೆ ಯಾವ ಶಸ್ತ್ರವೂ ಸಿಗುವುದಿಲ್ಲ, ವಿಷ ಕೂಡಾ ಇಲ್ಲ ಹಾಗಾಗಿ ಜಡೆಗೆ ಕಟ್ಟುವ ಬಳ್ಳಿಯನ್ನು ಕುತ್ತಿಗೆಗೆ ಕಟ್ಟಿಕೊಂಡು ಸಾಯುತ್ತೇನೆ ಅಂತ ಯೋಚಿಸುತ್ತಾಳೆ. ಆಗ ಶುಭ ಶಕುನಗಳು ಗೋಚರಿಸುತ್ತವೆ, ಕೆಂಪು ಕಮಲದಂತಿದ್ದ ಅವಳ ಕಣ್ಣುಗಳ ಪೈಕಿ ಎಡಗಣ್ಣು ಅದುರುತ್ತದೆ, ಆ ಭುಜ ಯಾವುದರ ಮೇಲೆ ಶ್ರೀರಾಮ ಸ್ವತಃ ವಿಶ್ರಮಿಸುತ್ತಿದ್ದನೋ, ಚಂದನದಿಂದ ಲೇಪಿತವಾಗಿರುತ್ತಿತ್ತೋ ಅಂತಹ ಎಡಭುಜ ಅದುರುತ್ತದೆ, ಎಡತೊಡೆಯೂ ಅದುರಿತು. ಇದೆಲ್ಲವೂ ಶುಭಶಕುನಗಳು, ಸೀತೆಗೆ ಮರಣಕ್ಕೆ ಮನಸು ಮಾಡಬೇಡ, ಜೀವ ಒಂದಿರಲಿ ಮುಂದೆ ಒಳ್ಳೆಯದಾಗುತ್ತೆ ಅಂತ. ಸಿದ್ಧಚಾರಣರು ಪ್ರತ್ಯಕ್ಷವಾಗಿಯೂ ಹೇಳುತ್ತಾರೆ. ಹೀಗೆಯೇ ದಮಯಂತಿಯ ಮುಂದೆಯೂ ಸತ್ಯವೇ ಪ್ರಕಟ ಆಗಿರಬೇಕು.

ಎಲ್ಲವೂ ಸಮಾಧಾನ ಆಗುವ ಹಾಗಿದೆ, ಕಣ್ಣುಬಿಟ್ಟು ನೋಡಿದರೆ ಪುನಃ ಕಾಡಿನಲ್ಲಿಯೇ ಇದ್ದಾಳೆ, ಆ ಋಷ್ಯಾಶ್ರಮ ಯಾವುದೂ ಕಾಣಲಿಲ್ಲ, ಅದೇನು ಅಂದರೆ ಅದು ಧರ್ಮದ ಸಾಂತ್ವನ. ಹೀಗೆ ಧರ್ಮಮಯವಾಗಿದ್ದರೆ ಧರ್ಮವೇ ತೊಂದರೆಯಾಗದಂತೆ ಕಾಪಾಡುತ್ತದೆ. ನಾವೂ ಸ್ವಲ್ಪ ದಮಯಂತಿಯಿಂದ ಧರ್ಮವನ್ನು ಪಡೆಯೋಣ. ಅವಳು ದಮಯಂತಿಯೆಂದರೆ ಧರ್ಮಯಂತಿಯೇ. ಯಾರು ಧರ್ಮಕ್ಕಾಗಿ ತಮ್ಮನ್ನು ತಾವು ಪೂರ್ತಿಯಾಗಿ ಕೊಟ್ಟುಕೊಳ್ಳುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ.

ಅದೊಂದು ಕನಸಿನಂತೆ ಈಗ ಕಾಣುತ್ತಿದ್ದುದು ಈಗ ಇಲ್ಲ. ಕನಸಿನಲ್ಲಿ ಚುನಾವಣೆ ನಡೆದು, ಗೆದ್ದು ಆರಿಸಿಬಂದು ಮುಖ್ಯಮಂತ್ರಿಯಾಗಿ ರಾಜ್ಯಭಾರವನ್ನು ಮಾಡಿದ್ದೆಲ್ಲ ಕನಸೆಣಿಸಿದ ನಂತರ ಎಚ್ಚರವಾದಾಗ ಮತ್ತೆ ಅದೇ ಗಂಜಿ, ಉಪ್ಪಿನಕಾಯಿ ಇದ್ದಂತೆ. ಕ್ಷಣ ಮೊದಲು ಋಷಿಮುನಿಗಳ ಸಾನ್ನಿಧ್ಯದಲ್ಲಿ ಸಾಂತ್ವನ ಆಯಿತು ಆದರೆ ಮತ್ತೆ ಅದಿಲ್ಲ ಇದು ಧರ್ಮದ ಸಾಂತ್ವನ.

ರಾಮನ ಮಾತು ಮತ್ತೆ ನೆನಪಾಗುತ್ತದೆ. ಲಕ್ಷ್ಮಣನಿಗೆ ಹೇಳುತ್ತಾನೆ, ಕನಿಷ್ಠ ನಾನಿರುವ ಭೂಮಿಯ ಮೇಲೆ ಅವಳೂ ಇದ್ದಾಳೆನ್ನುವ ಸಾಂತ್ವನ ಸಾಕು ಅದೇ ಸಮಾಧಾನ. ಅವಳ ಮೇಲೆ ಬೀಸಿದ ಗಾಳಿ ನನ್ನಮೇಲೂ ಬೀಸುತ್ತಿದೆಯಲ್ಲ ಎಂದು ತೃಪ್ತಿಪಡುತ್ತೇನೆ ಎಂದು. ಹೀಗೆಯೇ ದಮಯಂತಿಯದ್ದೂ. ಎಲ್ಲೋ ಭೂಮಂಡಲದಲ್ಲಿ ಅವನೂ ಇದ್ದಾನೆ ಪಡೆಯಲು ಪ್ರಯತ್ನ ಮಾಡುವುದನ್ನು ಮತ್ರಾ ಬಿಡಲ್ಲ. ದಮಯಂತಿ ಮತ್ತೆ ಚಿಂತಿತಳಾಗುತ್ತಾಳೆ, ಮತ್ತೆ ಗೊಂಡಾರಣ್ಯ ಪತಿಯನ್ನು ಹುಡುಕಲು ಎತ್ತಕಡೆ ಹೋಗಬೇಕೆನ್ನುವ ಚಿಂತೆ. ಆದರೆ ಭಯ ಇಲ್ಲ, ಚಕ್ರವರ್ತಿನಿ ಅಕೆ, ತುಂಬಾ ಗುಣವಂತೆ, ಒಬ್ಬಂಟಿಯಾಗಿ ಹುಡುಕುತ್ತೇನೆನ್ನುವ ಛಲ ಇದೆ, ಭಯ ಇಲ್ಲ. ಯಾಕೆಂದರೆ ಭಾವ ಇದೆ, ಭಾವವಿದ್ದಲ್ಲಿ ಭಯ ಎಲ್ಲಿ? ಭಾವವಿಲ್ಲದಲ್ಲಿ ಮಾತ್ರ ಭಯ ಇರುತ್ತದೆ. ದೇವರನ್ನು ಎರಡು ರೀತಿಯಲ್ಲಿ ಭಜಿಸುತ್ತಾರೆ. ಒಂದು ಭಯದಿಂದ, ಶನಿ ಒಳ್ಳೆಯವನೇ ಆದರೂ ಇವರು ಹೆದರಿ ಪೂಜೆ ಮಾಡುತ್ತಾರೆ ನಿನ್ನ ಸಹವಾಸ ಬೇಡ ಎನ್ನುವ ರೀತಿಯಲ್ಲಿ, ಇಂತಹವರದ್ದು ದೊಡ್ಡ ವರ್ಗ. ಇನ್ನೊಂದು ರೀತಿಯೆಂದರೆ ಭಾವದಿಂದ ಪೂಜಿಸುವವರದ್ದು ಶಬರಿ ರಾಮನನ್ನು ಪೂಜಿಸಿದಂತೆ, ಮೀರಾ ಕೃಷ್ಣನನ್ನು ಪೂಜಿಸಿದಂತೆ, ಒಬ್ಬಳೇ ಶಬರಿ ಕಾಡಲ್ಲಿ ತನ್ನ ಗುರು ನಿರ್ಮಿಸಿದ ಕುಟೀರದಲ್ಲಿದ್ದುಕೊಂಡು ತಪಸ್ಸು ಮಾಡುತ್ತಿದ್ದಳಲ್ಲ, ಅವಳಿಗೆ ಭಯ ಎಲ್ಲಿತ್ತು ? ಯಾಕೆಂದರೆ ಅವಳು ಸದಾ ರಾಮನಲ್ಲೇ ಲೀನವಾಗಿರುತ್ತಿದ್ದಳು. ಹಾಗೇ ದಮಯಂತಿಗೂ ಒಂದೇ ಛಲ, ಒಂದೇ ಲಕ್ಷ್ಯ, ನಳನನ್ನು ಕಾಣುವ ಹಂಬಲ, ಪಡೆಯುವ ಹಂಬಲ ಅಷ್ಟೇ. ಇಷ್ಟು ಸಮಯ ಕಾಡಿನಲ್ಲಿದ್ದು ಅನುಭವಿಸಿದಳು, ಇನ್ನು ನಾಡಿನ ಕಡೆಗೆ ಹೋಗುತ್ತಿದ್ದಾಳೆ. ನಾಡಿಗೆ ಹೋಲಿಸಿದರೆ ಕಾಡಿನ ಜೀವನವೇ ಚೆಂದ, ಮುಂದೆ ಅವಳಿಗೆ ನಾಗರೀಕ ಪ್ರಪಂಚದ ಮನುಷ್ಯರು ಭೇಟಿಯಾಗುತ್ತಾರೆ, ಕೆಲವು ಮನುಷ್ಯರಿಗೆ ಇವಳು ಕಾಣಿಸಿಕೊಂಡಾಗ ಅವರು ಹೇಗೆ ಪ್ರತಿಕ್ರಯಿಸುತ್ತಾರೋ, ಪರಿಗ್ರಹಿಸುತ್ತಾರೋ ನೋಡಬೇಕು. ಮುಂದೆ ನೋಡೋಣ ಆ ಭಾಗಗಳನ್ನು.

ನಳನ ಕಥೆ ಇನ್ನೂ ರೋಚಕವಾಗಿದೆ, ನಾಳೆ ಶನಿವಾರ ಕುಳಿತು ಕಲಿಪೀಡೆಯನ್ನು ದಮಯಂತಿ ನಾಶಮಾಡಿದ್ದನ್ನು ಅವಲೋಕಿಸೋಣ, ಕಲಿಯ ಕಲ್ಮಷ ಹಾಗೂ ಕ್ಲೇಶದಿಂದ ಮುಕ್ತರಾಗೋಣ. ಇಂದಿನ ಪ್ರವಚನವನ್ನು ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಸಮರ್ಪಣೆ ಮಾಡೋಣ. ಮಾತಾಡಿದಷ್ಟೂ ಚೈತನ್ಯ ಚೆಲ್ಲಿ ಹೋಗುತ್ತದೆ, ಮೌನದಿಂದ ಸಂಗ್ರಹವಾಗುತ್ತದೆ. ಮೌನವಾಗಿಯೇ ಸಮರ್ಪಣಾಭಾವದಲ್ಲಿಯೇ ಇದ್ದು ಮುಂದುವರೆಯೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box