#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
25-08-2018:
ನಾವು ತಲುಪಬೇಕಾದ ಲಕ್ಷ್ಯ ಯಾವುದೋ, ಆ ಲಕ್ಷ್ಯಕ್ಕೆ ತಲುಪಲು ದಾರಿ ಯಾವುದೋ ನಮಗೆ ಗೊತ್ತಿಲ್ಲ, ಅದು ಕೃಷ್ಣನಿಗೆ ಗೊತ್ತು. ಅವನಿಗೆ ಶರಣಾದರೆ ದಾರಿತೋರಿಸಿ ಗುರಿಯಾಗಬಲ್ಲ ಅಂತಹ ಪಾರ್ಥಸಾರಥಿ ನಮ್ಮ ನಿಮ್ಮ ಬದುಕಿನ ರಥವನ್ನು ಶಾಶ್ವತ ಸತ್ಯದೆಡೆಗೆ ಮುನ್ನಡೆಸಲಿ, ಇಂದಿನ ಪ್ರವಚನಪುಷ್ಪವನ್ನು ಅವನ ಚರಣಗಳಿಗೆ ಸಮರ್ಪಿಸುತ್ತಿದ್ದೇವೆ.

ತತ್ತ್ವಭಾಗವತಮ್
ಪ್ರಕೃತಿಗೂ ಕೃತಕಕ್ಕೂ ತುಂಬಾ ವ್ಯತ್ಯಾಸ. ಎಷ್ಟು ಹಾಳೆಂದರೂ ಪ್ರಕೃತಿ ಒಳ್ಳೆಯದು, ಎಷ್ಟು ಒಳ್ಳೆಯದಾದರೂ ಕೃತಕವು ಕೆಡುಕೇ. ಮನುಷ್ಯ ನಿರ್ಮಿತಿ ಎಂದಿಗೂ ಹಾಳು, ದೇವನ ಸೃಷ್ಟಿ ಕೆಲಸಗಳು ಎಂದಿಗೂ ಒಳ್ಳೆಯದೇ ಆಗಿರುತ್ತದೆ. ಹಾಗೆಯೇ ದಮಯಂತಿಗೂ ಪ್ರಕೃತಿಯಿಂದ ಸಿಕ್ಕಿದ್ದೆಲ್ಲವೂ ಕರುಣೆ, ಸಾಂತ್ವನವೇ. ಮರ ಗಿಡ ಬಳ್ಳಿ ಪ್ರಾಣಿ ಪಕ್ಷಿ ಎಲ್ಲವೂ ಪೂರಕವೇ. ಕಲಿಪ್ರೇರಿತರಾದ ಹಾವು ಮತ್ತು ವ್ಯಾಧರು ಮಾತ್ರವೇ ತೊಂದರೆ ಕೊಟ್ಟವರು, ಅದೂ ದಮಯಂತಿಯನ್ನು ಆವರಿಸಿರುವ ನಳನ ಕುರಿತಾದ ಭಾವವನ್ನು ಹೇಗಾದರೂ ಬಿಡಿಸಿ ತನ್ನಡೆಗೆ ಹರಿಸಲು ಮಾಡಿದ ಕಲಿಯ ಹುನ್ನಾರ. ಹೀಗೆ ಹೆದರಿಸಿದರೆ ಪ್ರಾಣಭಯದ ಸಮಯದಲ್ಲಿಯಾದರೂ ಹೆದರಿ ಅವಳು ನಳನನ್ನು ತ್ಯಾಗ ಮಾಡಲಿ ಎಂದು. ಮಾನಕ್ಕೆ ಎರವಾಗಲು ಯತ್ನಿಸಿದ ವ್ಯಾಧ ಮರಣಕ್ಕೆ ಗುರಿಯಾದ. ಹೀಗೆ ಅರಣ್ಯದ ತೊಂದರೆಗಳು ಪರಿಹಾರವಾದಂತೆ ಮುಂದಿನ ಹಂತ ಪ್ರಾರಂಭವಾಗುತ್ತದೆ.
ದಮಯಂತಿಗೆ ಮನುಷ್ಯರು ಸಿಗುತ್ತಾರೆ. ಅವರು ಅವಳನ್ನು ಹೇಗೆ ಸ್ವೀಕರಿಸುತ್ತಾರೆ , ನೋಡಿಕೊಳ್ಳುತ್ತಾರೆ ಎಂಬುದೇ ವಿಷಯ. ಉದ್ವಿಗ್ನಳಾಗಿದ್ದ ಆಕೆಯನ್ನು ಮಹರ್ಷಿಗಳು ಸಾಂತ್ವನ ಮಾಡಿ ಉಪಚರಿಸಿ ಧೈರ್ಯತುಂಬಿ ನಿನಗೆ ಮುಂದೆ ಒಳ್ಳೆಯದಾಗಲಿದೆ, ನೀನು ಕಳೆದುಕೊಂಡದ್ದೆಲ್ಲವನ್ನೂ ಮರಳಿ ಪಡೆವೆ ಎಂದು ಹರಸಿ ಕಳಿಸಿದ್ದರಿಂದಾಗಿ ಅವಳ ಜೀವ ಸ್ವಲ್ಪ ತಣಿಯಲು ಸಹಕಾರಿ ಆಯಿತು. ಅವಳಿಗೆ ಮುಂದಿನ ಪ್ರೇರಣೆ ನೀಡಲು ಸಹಾಯಮಾಡಿತು.
ಹೀಗೆ ಮುಂದುವರೆಯುತ್ತಿರುವಾಗ ಅವಳಿಗೆ ಒಂದು ಸಾರ್ಥ ಎದುರಾಗುತ್ತದೆ, ಸಾರ್ಥವೆಂದರೆ ಉರಿಂದೂರಿಗೆ ವ್ಯಾಪಾರ ವಹಿವಾಟಿಗಾಗಿ ತಿರುಗಾಡುವ ವರ್ತಕರ ಒಂದು ತಂಡ, ಬಹುದೊಡ್ಡದಾಗಿರುವ ಈ ತಂಡದಲ್ಲಿ ಎಲ್ಲ ಬಗೆಯ ವ್ಯವಸ್ಥೆಗಳನ್ನೂ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಇವರ ಜೊತೆಗೆ ಒಂಟಿ ಪ್ರಯಾಣಿಕರೂ ಸೇರಿ ಪ್ರವಾಸ ಮಾಡುತ್ತಾರೆ, ಅಂತಹ ಒಂದು ಗುಂಪು ನದಿಯನ್ನು ದಾಟುತ್ತಿರುವುದು ದಮಯಂತಿಗೆ ಕಾಣಿಸುತ್ತದೆ. ಅವರಲ್ಲಿ ಆಶ್ರಯ ಪಡೆದರೆ ಕ್ಷೇಮ ಎಂದು ಭಾವಿಸಿ ಅವರಲ್ಲಿಗೆ ಹೋಗುತ್ತಾಳೆ. ಅವಳ ಮೈಎಲ್ಲಾ ಧೂಳು ಮುಸುಕಿರುತ್ತದೆ, ಹರಿದುಹೋಗಿರುವ ಅರ್ಧ ಬಟ್ಟೆಯನ್ನು ಉಟ್ಟಿರುತ್ತಾಳೆ, ಮಸಿದ ದಿವ್ಯರೂಪ ಮೋಡಮುಸುಕಿದ ಚಂದ್ರಬಿಂಬವನ್ನು ನೆನಪಿಸುತ್ತಿದೆ. ಅವರೂ ಇವಳನ್ನು ನೋಡುತ್ತಾರೆ. ಒಬ್ಬೊಬ್ಬರಿಗೆ ಒಂದು ರೀತಿಯಾಗಿ ಅವಳು ಕಾಣುತ್ತಾಳೆ, ಹೇಗೆಂದರೆ ವರಲಕ್ಷ್ಮಿಯಂತೆ, ವನದೇವತೆಯಂತೆ, ದೇವತಾಸ್ತ್ರೀಯಂತೆ, ರತಿ, ಪಾರ್ವತಿ, ಸರಸ್ವತಿ ಅಥವಾ ಮಯಾರೂಪಿನ ಭೂತವೋ ಎಂದು ಭ್ರಮಿಸಿದರು. ಅವಳನ್ನು ಕಂಡವರು, ಕೆಲವರು ಓಡಿದರು, ಕೆಲವರು ಕೂಗಿದರು, ಕೆಲವರು ಆಶ್ವರ್ಯಭರಿತರಾಗಿ ನೋಡುತ್ತಿದ್ದರು. ನೀವು ಸಾಮಾನ್ಯರಾದರೆ ತಳ್ಳಿಕೊಂಡು ಸಹಜವಾಗಿ ಹೋಗುತ್ತೆ ಜೀವನ, ನೀವು ವಿಶೇಷರಾದರೆ ಭಾರೀ ಅಭಿಮಾನಿಗಳನ್ನು ಕೊಡುತ್ತದೆ, ಜೊತೆಗೆ ಘೋರ ವೈರಿಗಳನ್ನೂ ಸಹಾ. ಹೀಗೆ ಸಂಪತ್ತು ಅಪತ್ತುಗಳೆರಡೂ ನಿಶ್ಚಿತ. ಈಕೆ ದಿವ್ಯರೂಪಳು ಆದರೆ ದೇಹಸಂಸ್ಕಾರ ರಹಿತಳಾದ್ದರಿಂದ ಹೀನಳಾಗಿ ಕಾಣುತ್ತಿದ್ದಾಳೆ, ಹೀಗಾಗಿ ನೋಡುಗರಲ್ಲಿ ಗೊಂದಲ. ಕೆಲವರು ಅವರೇ ಓಡಿದರು, ಕೆಲವರು ಮಂತ್ರಜಪ ಮಾಡಿದರು, ಕೆಲವರು ಕಲ್ಲು ಕೋಲು ತೆಗೆದುಕೊಂಡರು ಅವಳನ್ನು ಓಡಿಸಲಿಕ್ಕಾಗಿ, ಕೆಲವರಿಗೆ ಮಾತ್ರಾ ಅವಳನ್ನು ಕಂಡು ಕರುಣೆ, ದಯೆ ಬಂದದ್ದರಿಂದಾಗಿ ಅವಳನ್ನು ಸಮೀಪಿಸಿ ಮಾತನಾಡಿದರು
ಮಹಾಭಾರತದಲ್ಲಿ ಹೇಳಿದ್ದಾರೆ: ಕಾಸಿ ಕಸ್ಯಾಸಿ ಕಲ್ಯಾಣಿ ಕಿಂವಾ ಮೃಗಯ ಸೇವನೇ| ತ್ವಾಂ ದೃಷ್ಟ್ವಾವಿದಿತಾಸ್ಮೈಹ ಕಶ್ಚಿತ್ವಮಸಿ ಮಾನುಷೀ||
ಯಾರು ನೀನು ಮನುಷ್ಯಳೇ? ವನದಲ್ಲಿ ಏನು ಮಾಡುತ್ತಿದ್ದೀಯೆ? ನಿನ್ನನ್ನು ದೇವತೆಯೆಂದೇ ಭಾವಿಸಿ ನಿನಗೆ ಶರಣಾಗಿದ್ದೀವಿ ಅಂತ ಹೇಳುತ್ತಾರೆ. ವನದೇವತೆಯೇ? ಗಿರಿದೇವತೆಯೇ? ಸುರದೇವತೆಯೇ? ನಿಜ ಹೇಳು ಅಂತ, ಎಲ್ಲರೂ ಕೈಮುಗಿಯುತ್ತಿದ್ದಾರೆ. ಯಕ್ಷರಾಕ್ಷಸಿಯೇ (ರಾಕ್ಷಸಿಯರು ಚೆನ್ನಾಗಿರ್ತಾರಾ ಅಂತ ಸಮಸ್ಯೆ ಬರಬಹುದು, ಹೌದು ರಾಕ್ಷಸಿಯರಲ್ಲೂ ಲಕ್ಷಣವತಿಯರಿದ್ದರು.) ಅಥವಾ ದೇವತೆಯೇ? ನೀನು ಯಾರಾಗಿದ್ದರೂ ನಮಗೆ ಒಳ್ಳೆಯದು ಮಾಡು. ಈ ನಮ್ಮ ಗುಂಪು ಕ್ಷೇಮವಾಗಿ ಶೀಘ್ರವಾಗಿ ಮುಂದಿನ ಊರು ತಲುಪುವಂತೆ ಮಾಡು ಎಂದು ಕೇಳಿಕೊಳ್ಳುತ್ತಾರೆ.
ದಮಯಂತಿ ಅವರುಗಳಿಗೆ ಹೇಳುತ್ತಾಳೆ, ನೀವು ಹೇಳಿದ ಯಾವುದೂ ನಾನಲ್ಲ, ನಾನೂ ನಿಮ್ಮಂತೆಯೇ ಎರಡು ಕಾಲಿನ ಮನುಷ್ಯಳು, ನಿಮ್ಮ ಮಗಳು, ತಾಯಿಯಂತೆಯೇ. ನನ್ನ ಪತಿ ನಿಷಧರಾಜ. ಅಂತಹ ಶ್ರೇಷ್ಠ ವ್ಯಕ್ತಿ, ಅವರು ಕಳೆದು ಹೋಗಿದ್ದಾರೆ. ಅವರನ್ನು ಹುಡುಕಿಕೊಂಡು ಹೊರಟಿದ್ದೇನೆ. ಹಾಗಾಗಿ ನೀವು ನನಗೆ ಹೆದರಬೇಕಾಗಿಲ್ಲ. ನನಗೆ ಜೊತೆ ಬೇಕಾಗಿದೆ, ಪ್ರಯಾಣಕ್ಕೆ ನಿಮ್ಮ ಜೊತೆ ಬರುತ್ತೇನೆ. ಆ ಸಾರ್ಥ ಮುಖ್ಯಸ್ಥನ ಹೆಸರು “ಶುಚಿ” ಎಂದು. ಅವನು ದಮಯಂತಿಗೆ ಹೆದರಬೇಡ ಎಂದು ಅಭಯ ಕೊಟ್ಟು ಸಾಂತ್ವನ ಮಾಡಿ ನಮ್ಮ ಜೊತೆಗೆ ಬಾ ಎಂದು ಕರೆಯುತ್ತಾನೆ. ಅವರು ಚೇದಿ ದೇಶಕ್ಕೆ ಹೊರಟಿರುತ್ತಾರೆ. ಹಾಗಾಗಿ ಅವಳೂ ಜೊತೆಗೇ ಹೊರಡುತ್ತಾಳೆ, ಅವಳಿಗೆ ಪತಿಯನ್ನು ಹುಡುಕಲು ಅಶ್ರಯ ಬೇಕಾಗಿದೆ ಅಷ್ಟೇ. ಅವಳಿಗೆ ಎಲ್ಲಿಗೆ ಹೋಗಬೇಕೆನ್ನುವ ದಿಕ್ಕೇ ಇಲ್ಲ.
ನೀವು ಇದನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವಿದೆಯೇ? ನೀವು ಎಂದಾದರೂ ಎಲ್ಲಿಗೆ ಹೋಗಬೇಕೆಂಬುದನ್ನೆ ತಿಳಿಯದೇ ಪ್ರಯಾಣ ಮಾಡಿದ್ದೀರ? ಹಾಗೆ ಒಂದು ದಿನವಾದರೂ ಮಾಡಿದ್ದರೆ ನಿಮಗೆ ದಮಯಂತಿ ಏನು ಎಂಬುದು ಗೊತ್ತಾಗುತ್ತದೆ. ತನ್ನದಾಗಿ ಏನೂ ಇಲ್ಲ, ಮನೆ ಅಂತ ಇಲ್ಲ, ಊರು ಅಂತ ಇಲ್ಲ. ಕಳೆದುಕೊಂಡ ತನ್ನ ಪತಿ ಈ ವಿಶಾಲ ದೇಶದಲ್ಲಿ ಎಲ್ಲಿರುವನೆಂಬುದನ್ನೇ ತಿಳಿದಿಲ್ಲ, ಅವನನ್ನು ಹುಡುಕಬೇಕು. ಇಂತಹ ಒಂದು ಸ್ಥಿತಿಯಲ್ಲಿನ ಕೋಟಿಯಲ್ಲಿ ಒಂದನೇ ಅಂಶವು ನಮಗೆಲ್ಲಿಯಾದರೂ ಬಂದಿದ್ದರೆ ನಮಗೆ ಅರ್ಥವಾಗುತ್ತೆ ಏನು ಅಂತ. ಇಲ್ಲದಿದ್ದರೆ ಇದು ಬರಿಯ ಚಂದಮಾಮನ ಕಥೆಯಂತಾಗುತ್ತದೆ ಅಷ್ಟೇ.
ಹೀಗೇ ಸಾಗುತ್ತದೆ. ಒಂದೆರಡು ದಿನಗಳ ಬಳಿಕ ಅವರು ಒಂದು ಸರೋವರದ ತೀರದಲ್ಲಿ ರಾತ್ರಿಯ ವೇಳೆ ವಿಶ್ರಮಿಸುತ್ತಾರೆ. ತಾತ್ಕಾಲಿಕವಾಗಿ ಡೇರೆಗಳನ್ನು ಹಾಕಿದ್ದಾರೆ. ಸರಿ ಮಧ್ಯರಾತ್ರಿಯ ವೇಳೆ ಆನೆಗಳ ಗುಂಪೊಂದು ನೀರು ಕುಡಿಯಲಿಕ್ಕಾಗಿ ಸರೋವರದೆಡೆಗೆ ಬರುತ್ತದೆ. ಕಾಡಿನಿಂದ ಅವುಗಳು ತಮ್ಮ ದಾರಿಯಲ್ಲೇ ನಡೆದು ಬಂದವು ಅಡ್ಡಲಾಗಿ ಇವರು ಹಾಕಿದ್ದ ಡೇರೆಗಳನ್ನು ಸ್ವಭಾವ ಸಹಜವಾಗಿ ಕಿತ್ತುಹಾಕಿ ಮನಸೋ ಇಚ್ಛೆ ಜನಗಳ ಮೇಲೆ ಆಕ್ರಮಣ ಮಾಡಿತು. ಹಲವರು ಹಲ್ಲೆಗೀಡಾದರು, ಆದರೆ ದಮಯಂತಿಗೆ ಏನೂ ಆಗಲಿಲ್ಲ. ಡೇರೆಗಳೆಲ್ಲ ನಾಶವಾದವು. ಎಷ್ಟೋ ಸಾರಿ ಹೀಗೇ ಆಗುತ್ತದೆ. ಇವರಿಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ ಆನೆಗಳು ಬರುತ್ತವೆಯೆಂದು. ಗಲಾಟೆಯೋ ಗಲಟೆ, ಎಲ್ಲವನ್ನೂ ತುಳಿದು ನೆಲಸಮ ಮಾಡಿಬಿಡುತ್ತವೆ. ಎಲ್ಲಡೆ ಹಾಹಾಕಾರ, ಆರ್ತನಾದ.
ಅಲ್ಲಿ ದೊಡ್ಡ ಅನರ್ಥವೇ ನಡೆದು ಹೋಯಿತು. ಆದರೆ ಇವಳಿಗೆ ಏನೂ ಆಗಲಿಲ್ಲ, ಕೆಲವರು ತುಂಬಾ ತೊಂದರೆಗೊಳಗಾದರು, ಉಳಿದವರು ಹೀಗೇಕಾಯಿತು ಅಂತ ಜಿಜ್ಞಾಸೆ ಮಾಡಲು ಪ್ರಾರಂಭಿಸಿದರು. ಕೆಲವರು ಮಣಿಭದ್ರನ ಪೂಜೆ ಸರಿಯಾಗಲಿಲ್ಲ ಎಂದರು, ಹೊರಟ ನಕ್ಷತ್ರ, ತಿಥಿ, ಘಳಿಗೆ ಹೀಗೆ ಎಲ್ಲ ಬಗೆಯ ಚಿಂತನೆಯೂ ನಡೆಯಿತು. ಯಾವುದರಿಂದ ತೊಂದರೆ ಆಯಿತು ಅಂತ ಚರ್ಚೆ ನಡೆದು ಕೊನೆಗೆ ಈ ಹೆಣ್ಣಿನ ಕಾರಣಕ್ಕಾಗಿಯೇ ಹೀಗಾಯಿತು ಎಂದು ಅಭಿಪ್ರಾಯ ವ್ಯಕ್ತವಾಯಿತು. ಯಾರಾದರೂ ಒಬ್ಬ ಸಾತ್ವಿಕ, ಶುದ್ಧ ಮನುಷ್ಯನನ್ನು ಶಂಕಿಸಿದರೆ ಅನರ್ಥವಾಗುತ್ತದೆ. ಅವರು ದಮಯಂತಿಯನ್ನು ಸಂಶಯಿಸಿರುತ್ತಾರೆ ಮೊದಲು! ಈಗ ಮತ್ತೆ ಸಂಶಯಿಸುತ್ತಾರೆ. ನೋಡಿ ಅವಳು ಸಾಮಾನ್ಯಳಂತಿಲ್ಲ ಹುಚ್ಚಿಯಂತೆ ಕಾಣುತ್ತಾಳೆ, ಮಂತ್ರವಾದಿನಿ, ಯಕ್ಷಿ ಇತ್ಯಾದಿಯಾಗಿ ಕಂಡಳು, ಅವಳ ಮಾಯೆಯಿಂದಲೇ ಹೀಗಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ನಿಮಗಾದರೂ ನಂಬಿಕೆ ಬರುತ್ತದಾ ಹೀಗೆ ಯಾರಾದರೂ ಬಂದು ನಾನು ಮಾಜಿ ಪ್ರಧಾನಮಂತ್ರಿಯ ಪತ್ನಿ ಅಂತ ಹೇಳಿದರೆ ನಂಬುತ್ತೀರಾ? ಸಂಶಯ ಬರುತ್ತದೆ. ಅವರು ನಿರ್ಧಾರ ಮಾಡುತ್ತಾರೆ, ಅವಳು ಮತ್ತೆ ಕಾಣಿಸಿಕೊಂಡರೆ ಅವಳನ್ನು ಸಿಕ್ಕಿದ್ದರಲ್ಲಿ ಹೊಡೆದು ಕೊಂದುಬಿಡೋಣ ಎಂದು. ವಿದೇಶಗಳಲ್ಲಿ ಈ ರೀತಿ ಹೆಂಗಸರನ್ನು ಮಂತ್ರವಾದಿಗಳೆಂದು ಕೊಲ್ಲುವುದನ್ನು ಕಾಣುತ್ತೇವೆ. ಅದನ್ನು ವಿಚ್ ಹಂಟಿಂಗ್ ಅಂತ ಕರೆಯುತ್ತಾರೆ. ಇದು ಅನೇಕ ಬಾರಿ ತಪ್ಪಾಗಿರುತ್ತದೆ. ಯಾರನ್ನೋ ಸಂಶಯಿಸಿ ಕೊಲ್ಲುವುದು “ದುಷ್ಟಪದ್ಧತಿ” ಎಂದು ಕರೆಸಿಕೊಳ್ಳುತ್ತದೆ.
ದಮಯಂತಿ ಮರೆಯಲ್ಲಿ ನಿಂತು ತನ್ನ ಬಗ್ಗೆ ಆಡುತ್ತಿದ್ದ ಮಾತನ್ನು ಕೇಳುತ್ತಾಳೆ, ಇವರು ನನ್ನನ್ನು ಉಳಿಸುವುದಿಲ್ಲ ಎಂದು ಭಾವಿಸಿ ಹೆದರಿಕೆ, ನಾಚಿಕೆ, ಭಯಗಳಿಂದ ಇದಕ್ಕಿಂತ ಕಾಡೇ ವಾಸಿ, ಪ್ರಾಣಿಗಳು ಪ್ರಕೃತಿನಿಯಮದಂತೆ ಬೇಟೆಯಾಡಿ ತಿನ್ನುತ್ತವೆ ಬಿಟ್ಟರೆ ಮನುಷ್ಯರಂತೆ ನೀಚರಲ್ಲ. ಹೀಗೆ ಯೋಚಿಸಿ ತನ್ನ ಇಡೀ ಜೀವನದ ಅವಲೋಕನ ಮಾಡುತ್ತಾಳೆ. ಯಾರಿಗೆ ನಾನು ತೊಂದರೆ ಮಾಡಿದ್ದೀನಿ ಅಂತ. ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಮಾಡಿದ್ದನ್ನು ಕುರಿತು ಚಿಂತಿಸುತ್ತಾಳೆ. ಆತ್ಮಾವಲೋಕನ ಮಾಡಿದರೆ ಎಲ್ಲೂ ತಪ್ಪಿಲ್ಲ ತನ್ನ ಜೀವನವಿಡೀ ಕಾಯ ವಾಕ್ ಮಾನಸ ಪೂರ್ವಕವಾಗಿ ತಾನು ಯಾವುದೇ ತಪ್ಪನ್ನು ಮಾಡಿರುವುದಿಲ್ಲ. ಆದರೆ ನನಗ್ಯಾಕೆ ಹೀಗೆ ಅಗುತ್ತಿದೆ ಅಂತ. ಆಗ ಅವಳ ಚಿಂತೆ ಸ್ವಯಂವರದ ಕಡೆ ಹರಿಯುತ್ತದೆ, ದೇವತೆಗಳು ಸ್ವಯಂವರದಲ್ಲಿ ತನ್ನನ್ನು ವರಿಸಲು ಬಂದಾಗ ತಾನು ಅವರನ್ನು ವರಿಸಲಿಲ್ಲ ಹಾಗಾಗಿ ಅವರು ಈಗ ಈ ಆಟ ಹೂಡಿರಬಹುದೇ? ನನ್ನಿಚ್ಛೆಯಂತೆ ಸ್ವಯಂವರದಲ್ಲಿ ನಾನು ನಳನನ್ನು ವರಿಸಿದೆ. ಅವರೂ ಆಶೀರ್ವದಿಸಿದರು ಅದರೆ ಅದನ್ನೇ ಮನದಲ್ಲಿಟ್ಟಕೊಂಡು ಹೀಗೆ ಮಾಡುತ್ತಿರಬಹುದೇ? ಅಂತ ಬಗೆಬಗೆಯಾಗಿ ಚಿಂತಿಸುತ್ತಿದ್ದಳು. ಆಗ ಬ್ರಾಹ್ಮಣರ ಗುಂಪೊಂದು ಆ ವರ್ತಕರ ಗುಂಪಿನಿಂದ ಬೇರೆಯಾಗಿ ಹೊರಟರು ಅಗ ಅವರಲ್ಲಿ ದಮಯಂತಿ ಕೇಳಿಕೊಳ್ಳುತ್ತಾಳೆ, ಅವರು ಒಪ್ಪಿ ಅವಳನ್ನು ಚೇದಿರಾಜ್ಯದೆಡೆಗೆ ಕರೆದೊಯ್ದರು, ಅವಳು ದೇವರನ್ನು ಮನದಲ್ಲೇ ನೆನೆಯುತ್ತ ಅವರುಗಳ ಜೊತೆಗೆ ಹೊರಟಳು.
ಬಹುಕಾಲ ಬಹುದೂರ ನಡೆದು ನಡೆದು ಅವರು ಚೇದಿಯ ರಾಜ್ಯವನ್ನು ಸೇರಿದರು. ಧರ್ಮಾತ್ಮನಾದ ಸುಬಾಹು ಅಲ್ಲಿಯ ಅರಸ. ರಾಜಮಾರ್ಗದಲ್ಲಿ ನಡೆಯುತ್ತಿರುವ ಅವಳನ್ನು ಕಂಡು ಎಲ್ಲರೂ ಅಶ್ಚರ್ಯಚಕಿತರಾಗುತ್ತಾರೆ. ಅರ್ಧವಸ್ತ್ರ, ಕೆದರಿದ ಕೇಶ, ಹುಚ್ಚು ಹಿಡಿದಂತಹ ಮುಖಭಾವ, ಧೂಳಿನಿಂದ ಕೂಡಿ ಇಡೀ ಶರೀರದ ಬಣ್ಣಬದಲಾಗಿದೆ, ಕೃಶಳಾಗಿ, ದೀನಳಾಗಿದ್ದಾಳೆ, ಕೂದಲು ಬಿಚ್ಚಿ ಹರಡಿದೆ, ಹುಚ್ಚಿಯಂತೆ ಕಾಣುತ್ತಿದ್ದಾಳೆ ಆದರೆ ಮುಖದಲ್ಲಿ ದಿವ್ಯ ತೇಜಸ್ಸಿದೆ. ಅಲ್ಲಲ್ಲಿ ಗುಂಪುಸೇರಿ ಜನ ಅವಳನ್ನು ಇವಳ್ಯಾರೆಂದು ಆಶ್ಚರ್ಯದಿಂದ ನೋಡುತ್ತಿರುತ್ತಾರೆ, ವಿಶೇಷವಾಗಿ ಮಕ್ಕಳು, ಅವರು ಇವಳ ಹಿಂದೆ ತರಲೆ ಮಾಡುತ್ತಾ ಕೇಕೆ ಹಾಕಿ ನಗುತ್ತಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಒಂದುಕಾಲದಲ್ಲಿ ಸಾಮ್ರಾಜ್ಞಿಯಾಗಿದ್ದವಳು ಇದ್ದಾಳೆ ಅಂದರೆ ಗಮನಿಸಿ. ಇಂತಹ ಸ್ಥಿತಿಯಲ್ಲಿ ರಾಜಮಾರ್ಗದಲ್ಲಿ ಅಲೆಯುತ್ತಿದ್ದವಳನ್ನು ಉಪ್ಪರಿಗೆಯಲ್ಲಿ ನಿಂತಿದ್ದ ರಾಜಮಾತೆ ಕಾಣುತ್ತಾಳೆ. ಕನಕದಾಸರು ಹೇಳುವಂತೆ, ಅವಳು ಪಾದರಸಲೇಪಿತ ಚಿನ್ನದಂತೆ, ಮಲಿನ ವಸ್ತ್ರದಲ್ಲಿ ಹುದುಗಿದ್ದ ರತ್ನದಂತೆ, ಮೋಡದ ಮರೆಯಲ್ಲಿನ ಚಂದ್ರಬಿಂಬದಂತೆ ಕಾಣುತ್ತಾಳೆ. ಇವಳು ಯಾರೋ ಸಾಮಾನ್ಯಳಲ್ಲ ಅನಿಸುತ್ತದೆ. ತನ್ನ ಸೇವಕಿಯರನ್ನು ಕಳುಹಿಸುತ್ತಾಳೆ ಅವಳನ್ನು ಕರೆತರಲು, ದಮಯಂತಿ ಹೋಗುತ್ತಾಳೆ, ಅವಳಿಗೆ ಅದೇನೂ ಹೊಸದಲ್ಲ, ರಾಜಮಾತೆಗೆ ಅವಳಲ್ಲಿ ಏನೋ ವಿಶೇಷ ಆದರ, ನೀನು ಯಾರು ಅಂತ ಕೇಳುತ್ತಾಳೆ. ಆಗ ಒಂದೇ ಮಾತಿನಲ್ಲಿ ಹೇಳುತ್ತಾಳೆ ದಮಯಂತಿ, ನಾನೊಬ್ಬಳು ಸೈರಂಧ್ರಿ ಅಂತ.
ಸೈರಂಧ್ರಿ ಅಂದರೆ ಮನೆಮನೆಗಳಲ್ಲಿ ತಿರುಗಿ ಕರಕುಶಲ ಕೆಲಸಗಳನ್ನು ಮಾಡುವವಳು. ಅರಮನೆಗಳಲ್ಲಿ ಅಂತಹವರ ಅಗತ್ಯ ಇರುತ್ತದೆ. ಹಾಗೇ ಅವಕಾಶ ಸಿಗಬಹುದು ಅಂತ ಹೇಳುತ್ತಾಳೆ. ರಾಜಮಾತೆಯ ಹೃದಯ ತುಂಬಿ ಬಂತು ಅತ್ತಳು. ಅದೇನು ಕರುಳ ಅನುಬಂಧವೇ. ದಮಯಂತಿಗಿಂತ ಅವಳೇ ಹೆಚ್ಚು ಕರಗಿದಳು. ನನ್ನ ಆಶ್ರಯದಲ್ಲಿ ಇರು, ನೀನು ನನ್ನ ಮಗಳಂತೆಯೇ ಹೌದು, ನನಗೆ ನಿನ್ನಿಂದ ಏನಾಗಬೇಕು ಹೇಳು, ನಿನ್ನ ಪತಿಯನ್ನು ಹುಡುಕಲು ನನ್ನಲ್ಲಿರುವ ಆಳುಕಾಳುಗಳು ಸಹಾಯ ಮಾಡುತ್ತಾರೆ ಅಥವಾ ನಿನ್ನ ಗಂಡ ಇಲ್ಲಿಗೆ ತಾನೇ ಬಂದಾನು ಅಂತ ಹೇಳಿದಳು. ದಮಯಂತಿ ಒಪ್ಪಿದಳು. ನಿಮ್ಮಲ್ಲಿ ತಾಯಿಯ ಭಾವ ಇದೆ, ಆದರೆ ನನಗೆ ಕೆಲವು ನಿಬಂಧನೆಗಳಿವೆ ಎಂದು ಹೇಳುತ್ತಾಳೆ, ನಾನು ಇನ್ನೊಬ್ಬರ ಎಂಜಲು ತಿನ್ನುವುದಿಲ್ಲ, ಯಾರದ್ದೂ ಕಾಲೊತ್ತುವುದಿಲ್ಲ,(ಇವೆರಡೂ ನಳನಿಗೆ ಮೀಸಲು) ಯಾವುದೇ ಪುರುಷರ ಜೊತೆಗೆ ಅವರು ಎಷ್ಟೇ ದೊಡ್ಡವರಾದರೂ ಸಂಭಾಷಣೆಯನ್ನು ಮಾಡುವುದಿಲ್ಲ.(ಅವಳಿಗೆ ತನ್ನ ರೂಪದ್ದೇ ಚಿಂತೆ ಯಾರಾದರೂ ಅಪೇಕ್ಷಿಸಬಹುದು ಅಂತ) ಹಾಗೂ ಯಾರಾದರೂ ನನ್ನನ್ನು ಬಯಸಿದರೆ ಅವರನ್ನು ದಂಡಿಸಬೇಕು. ಒಂದು ಕೊನೆಯ ಅಪೇಕ್ಷೆಯೇನೆಂದರೆ ಬ್ರಾಹ್ಮಣೋತ್ತಮರೊಡನೆ ಮಾತನಾಡಲು ಅವಕಾಶ ನೀಡಬೇಕು ಅದರಿಂದ ನನ್ನ ಪತಿಯ ವಿಷಯವನ್ನು ಅವರಿಂದ ಪಡೆದುಕೊಳ್ಳಬಹುದು. ಇದಕ್ಕೆ ಅವಕಾಶ ಆದರೆ ಇರುತ್ತೀನೆ ಇಲ್ಲದಿದ್ದರೆ ಹೊರಡುತ್ತೀನೆ ಅಂತ ಹೇಳಿದಳು.
ಮಹಾಭಾರತದ ನೆನಪು ಇಲ್ಲಿ. ದ್ರೌಪದಿಯೂ ಹೀಗೆಯೇ ಇರುತ್ತಾಳೆ, ಸೈರಂಧ್ರಿಯಾಗಿ. ಪಾಂಡವರೈವರೂ, ಕಂಕಭಟ್ಟನಾಗಿ ಧರ್ಮರಾಯನಾದ ಯುಧಿಷ್ಟಿರ, ಅಡಿಗೆ ಭಟ್ಟನಾಗಿ ಭೀಮಸೇನ, ನಾಟ್ಯಾಚಾರ್ಯನಾಗಿ ಅರ್ಜುನ ಮತ್ತು ಒಬ್ಬ ಕುದುರೆಕಾಯುವವನು ಮತ್ತೊಬ್ಬ ಹಸು ಕಾಯುವವನಾಗಿ ನಕುಲ,ಸಹದೇವರು ವಿರಾಟನಗರದಲ್ಲಿ ವಾಸಿಸಿರುತ್ತಾರೆ. ದ್ರೌಪದಿ ನೇರವಾಗಿ ಹೇಳುತ್ತಾಳೆ, ವಿರಾಟನೂ ನನ್ನನ್ನು ಬಯಸಬಾರದು, ಬೇರೆಯವರು ಯಾರಾದರೂ ನನ್ನನ್ನು ನೋಡಿದರೆ ಅಂಥವರು ಯಾವ ಶರೀರದಲ್ಲಿ ಮಲಗಿರುತ್ತಾರೋ ಆ ಶರೀರದಲ್ಲಿ ಇರಲಾರರು ಬೆಳಿಗ್ಗೆ ಅಂದರೆ ಮರಣ ನಿಶ್ಚಿತ ಅಂತ.
ಇಲ್ಲಿ ದಮಯಂತಿಯು ಹೀಗೆ ಷರತ್ತು ಹಾಕಿದರೆ ನಿಮಗೇನನಿಸುತ್ತದೆ? ಹೋಗೆ ಮುಂದಕ್ಕೆ, ಏನು ಷರತ್ತು ಹಾಕುತ್ತೀ ಅಂದಿರಬಹುದಾ? ಇಲ್ಲ, ಇನ್ನೂ ಸಂತೋಷವಾಯಿತು ರಾಜಮಾತೆಗೆ, ಭೇಷ್ ನಿನ್ನ ವ್ರತ ಅಪರೂಪವಾದುದು ಎಂದು ಹೃದಯ ತುಂಬಿ ಹೇಳುತ್ತಾ ಎಲ್ಲ ನಡೆಸುತ್ತೇನೆ ಇಲ್ಲೇ ಇರು ಅಂತ ಹೇಳಿ, ಸುನಂದಾ ಎಂಬ ತನ್ನ ಮಗಳನ್ನು ಕರೆದು ದೇವರೂಪಿಯಾದ ಸೈರಂಧ್ರಿಯ ಜೊತೆ ನೀನಿರು, ನಿಶ್ಚಿಂತೆಯಿಂದ ಇವಳ ಸಂಗದಲ್ಲಿ ಸಂತೋಷವಾಗಿರು, ನೀನೂ ಸಂತೋಷವಾಗಿರು ಎಂದಳು.
ಇಲ್ಲೊಂದು ಸ್ವಾರಸ್ಯವಿದೆ, ರಾಜಮಾತೆ ನಿಜವಾಗಿ ದಮಯಂತಿಯ ತಾಯಿಯ ತಂಗಿ. ಹಾಗಾಗಿ ಕರುಳು ಹಾಗಾಡಿಸುತ್ತದೆ, ಆದರೆ ಯಾರಿಗೂ ಈ ವಿಷಯ ಗೊತ್ತಿಲ್ಲ. ಬಹುಶಃ ಅವಳು ದಮಯಂತಿಯನ್ನು ಸರಿಯಾಗಿ ನೋಡಿದ್ದರೆ ಕಥೆ ಬೇರೆಯೇ ಇರುತ್ತಿತ್ತು. ದಮಯಂತಿಯ ಹುಬ್ಬುಗಳ ನಡುವೆ ಮಚ್ಚೆ ಇದೆ ಆದರೆ ಧೂಳು ಮುಸುಕಿದೆ. ಮಗುವಾಗಿದ್ದಾಗ ಮಚ್ಚೆಯನ್ನು ಗುರುತಿಸಿದವಳಿಗೆ ಈಗ ಅದು ಕಂಡಿಲ್ಲ, ಆದರೆ ಕರುಳಭಾವ ಆಡುತ್ತಿದೆ. ಈಗ ಪಾಶ್ಚಾತ್ಯರಿಗೆ ಬಲಿಯಾಗಿ ನಮ್ಮಗಳ ಸಂಬಂಧ ಸಂಕೀರ್ಣವಾಗಿದೆ.
ಚಕ್ರವರ್ತಿನಿಯಾದವಳು ಆಳಿನ ಅವಸ್ಥೆಯಲ್ಲಿ ಉಳಿದುಕೊಂಡು ತನ್ನ ಪ್ರಯತ್ನ ಮಾಡುತ್ತಿರುತ್ತಾಳೆ, ಅತ್ತ ಭೀಮರಾಜ ಮಗಳನ್ನು ಹುಡುಕುತ್ತಿರುತ್ತಾನೆ, ನಳ ಕಾಡಿನಲ್ಲಿ ಒಬ್ಬಂಟಿಯಾಗಿ ಎಲ್ಲೋ ಒಂದುಕಡೆ ನಡೆದಾಡುತ್ತಾ ಇದ್ದಾನೆ. ಆಗೊಂದು ಅತೀ ವಿಚಿತ್ರವಾದ ಘಟನೆ ನಡೆಯುತ್ತದೆ ಅದನ್ನು ನಾಳೆ ನೋಡೊಣ. ಕಲಿಯಿಂದ ಯಾರಿಗೆಲ್ಲಾ ಬಿಡುಗಡೆ ಬೇಕೋ ಅವರೆಲ್ಲಾ ನಳಚರಿತ್ರೆಯನ್ನು ಮನನ ಮಾಡಬೇಕು.
ಚಿತ್ರ:ಅಂತರ್ಜಾಲದಿಂದ
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply