#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
13-09-2018:
ಸದಾ ಮರೆಯಲ್ಲಿರುವ, ಸಮಯ ಬಂದಾಗ ತಾನಾರೆನ್ನುವುದನ್ನು ಪ್ರಕಟಪಡಿಸುವ ಆ ಭಗವದ್ರೂಪಕ್ಕೆ, ಜಗದ್ಗುರು ಶ್ರೀ ಕೃಷ್ಣನಿಗೆ ಮೊದಲಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇವೆ.
ನಳನ ಬದುಕು ತುಂಬಿದೆ ಅನ್ನುವುದಕ್ಕಿಂತ ಅವನ ಕಣ್ಣು ತುಂಬಿದೆ, ಅವನ ಹೃದಯ ತುಂಬಿದೆ. ಆದರೆ ನಾವಂದುಕೊಂಡಂತೆ ಅಲ್ಲ, ಹೃದಯ ನೋವಿನಿಂದ ತುಂಬಿದರೆ ಕಣ್ಣುಗಳು ನೀರಿನಿಂದ ತುಂಬಿದೆ. ನೋವು ಯಾಕೆ ಅಂದರೆ ಆ ಮಾತುಗಳು ಖಡ್ಗದಂತೆ ಎದೆಯನ್ನು ಎರಡನೇ ಬಾರಿಗೆ ಇರಿಯುತ್ತಿದೆ. ಆ ಮಾತುಗಳು ಬೇರೆ ಯಾರಿಗೂ ಅಥ೯ ಆಗಲಾರದು, ಆದರೆ ನಳನಿಗೆ ಅರ್ಥವಾಗದೇ ಇಲ್ಲ. ಒಂದು ರೀತಿಯಲ್ಲಿ ಆ ಮಾತುಗಳನ್ನು ದಮಯಂತಿಯ ಶೋಕಗೀತೆ ಎನ್ನಬಹುದೇನೋ? ಅವಳೆ ರಚಿಸಿದ ವಾಕ್ಯಗಳು ಅವು. ಇದಕ್ಕೆ ಉತ್ತರ ಕೊಡು ಅಂದಾಗ ನೋವಾಗುವಂತೆ, ಆ ವಾಕ್ಯಗಳು ಹಾಗಿತ್ತು. ಹಾಗಾಗಿ ನಳನಿಗೆ ನೋವಾಯಿತು. ನಳ ಮನೋನಿಯಂತ್ರಣದ ಪರಮ ಪ್ರಯತ್ನ ಮಾಡಿದ, ಅವನು ಸಹಜವಾಗಿ ಯಾವ ಲೋಕದ ಕುದುರೆಗಳನ್ನಾದರೂ ನಿಯಂತ್ರಣ ಮಾಡಬಲ್ಲ, ಅವುಗಳನ್ನು ವೇಗವಾಗಿ ಓಡುವಂತೆ ಮಾಡಬಲ್ಲ, ಸೇನೆಯನ್ನು ನಿಯಂತ್ರಿಸಬಲ್ಲ, ಸಾಧಾರಣವಾದ ಯಾವುದೇ ಸಂದಭ೯ದಲ್ಲಿ ಮನೋನಿಗ್ರಹ ಮಾಡಬಲ್ಲ, ಅವನು ಮನೋಸಂಯಮಿ, ಆದರೆ ಈಗ, ಈ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿದೆ. ದಮಯಂತಿಯ ಶೋಕಗೀತ ಎದುರು ನಿಂತು ಉತ್ತರ ನೀಡು ಎನ್ನುವಾಗ ನಳ ಅವಮೊಳಗೇ ಸುಡುತ್ತಿದ್ದಾನೆ, ಬೆಂಕಿಯಲ್ಲಿದ್ದವನಂತೆ ಆಗಿದ್ದಾನೆ. ಚಿತೆಯೊಳಗೆ ನಿಂತು ಮಾತನಾಡಿದ ಹಾಗೆ, ಚಿಂತೆಯೊಳಗೆ ನಿಂತು ಆ ನಳ ಮಾತನಾಡುತ್ತಿದ್ದಾನೆ. ಆದರೆ ಮಾತು ಸ್ಪಷ್ಟ ಆಗುತ್ತಾ ಇಲ್ಲ. ಕೆಲವು ಬಾರಿ ಅಕ್ಷರಗಳು, ಕೆಲವು ಬಾರಿ ಶಬ್ದಗಳು ಅಸ್ಪಷ್ಟವಾಗುತ್ತಿದ್ದವು. ಶೋಕ ಸಂದಿಗ್ಧವಾದ ವಚನಗಳಿಂದ ಪ್ರತಿವಚನವನ್ನು ಬಾಹುಕ ನುಡಿಯುತ್ತಾನೆ. ಅಧ೯ರಾತ್ರಿಯಲ್ಲಿ ಯಾಕೆ ಬಿಟ್ಟು ಹೋದೆ ಎನ್ನುವುದಕ್ಕೆ ಮೊದಲು ಉತ್ತರ ಹೇಳುತ್ತಾನೆ. ಸಾಧಾರಣ ಸ್ತ್ರೀಯರಿಗೂ ಇಂತಹ ಕುಲ ಸ್ತ್ರೀಯರಿಗೂ ವ್ಯತ್ಯಾಸ ಇದೆ. ಕುಲಸ್ತ್ರೀಯರು ತಮ್ಮ ರಕ್ಷಣೆ ಮಾಡಿಕೊಳ್ಳಬಲ್ಲರು, ಅಲ್ಲದೇ ತಮ್ಮ ಪಾತಿವ್ರತ್ಯದ ಬಲದಿಂದ ಕುಟುಂಬದ ರಕ್ಷಣೆಯನ್ನೂ ಮಾಡಬಲ್ಲರು. ಎಂತಹ ವಿಷಮ ಸ್ಥಿತಿಯಲ್ಲಿಯೂ ಅವರು ತಮ್ಮ ರಕ್ಷಣೆ ಮಾಡಿಕೊಳ್ಳಬಲ್ಲರು ಅಂತ. ಯಾಕೆ ಹೀಗೆ ಹೇಳಿದ ಅಂದರೆ ನಿನ್ನ ಚಾರಿತ್ರ್ಯ, ಪಾತಿವ್ರತ್ಯ ನಿನ್ನ ಮಾನ ಕಾಪಾಡಿದೆ, ಆ ಮಾನ ನಿನ್ನ ಕುಲವನ್ನು ಕಾಪಾಡುತ್ತದೆ. ಹಾಗಾಗಿ ಸುಮ್ಮನೇ ಬಿಟ್ಟು ಹೋಗಲಿಲ್ಲ ನಳ. ಇದನ್ನು ತಿಳಿದೇ ಆ ದೈರ್ಯದ ಮೇಲೆಯೇ ಬಿಟ್ಟು ಹೋದ. ನಿನ್ನ ಧಮ೯ ನಿನ್ನನ್ನು ಕಾಪಾಡುತ್ತದೆ ಅನ್ನುವ ವಿಶ್ವಾಸ ಇದೆ. ಮುಂದುವರೆದು ಹೇಳಿದ, ಇಂತಹ ಸ್ತ್ರೀಯರು ಇದಕ್ಕಾಗಿ ಕೋಪ ಮಾಡಿಕೊಳ್ಳಬಾರದು. ಗಂಡ ದೂರ ಮಾಡಿದರೂ ಅವರು ದೂರ ಮಾಡಲಾರರು, ಕೋಪ ಮಾಡಿಕೊಳ್ಳುವುದಿಲ್ಲ. ಅವನು ಮಾಡಿದ್ದು ಕೇವಲ ಶರೀರದಿಂದ ದೂರ ಅಷ್ಟೇ, ಮಾನಸಿಕವಾಗಿ ದೂರ ಅಲ್ಲ. ಪತಿಯರಿಗಿಂತ ಈ ವಿಧದ ಸತಿಯರು ಮೇಲಿರುತ್ತಾರೆ. (ಹೆಸರನ್ನು ಹೇಳದೇ ನೀನೂ ಅಂತವಳಲ್ಲವೇ ಎಂದು ಕೇಳುತ್ತಿದ್ದಾನೆ).. ಅವರು ಚಾರಿತ್ರ್ಯವಂತರು, ಅವರನ್ನು ಅದೇ ಕಾಪಾಡುತ್ತದೆ, ಅವರು ಹೇಗಾದರೂ ತಮ್ಮ ಪತಿಗಾಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿರುತ್ತಾರೆ ಅಂತ ಹೇಳಿ, ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾನೆ. ಅವನು ಜೂಜುಕೋರ ನಿನ್ನನ್ನು ರಾತ್ರಿಯಲ್ಲಿ ಬಿಟ್ಟು ಹೋಗಿದ್ದು ಹೌದು, ಆದರೆ ಅದಕ್ಕಾಗಿ ಅವನ ಮೇಲೆ ಸಿಟ್ಟಾಗಬಾರದು. ಅವನು ಎಂಥ ಸ್ಥಿತಿಯಲ್ಲಿ ಇದ್ದ, ಆಗ? ಮತ್ತೆ ಶ್ಯಾಮಾ ಅಂತ ಹೇಳುತ್ತಾನೆ. ಶ್ಯಾಮಾ ಅಂದರೆ ಅವರೊಂದು ವಿಶಿಷ್ಟ ಬಗೆಯ ಸ್ತ್ರೀಯರು. ಅವರ ಬಗ್ಗೆ ಈ ಹಿಂದಿನ ಪ್ರವಚನಗಳಲ್ಲಿ ತಿಳಿಸಿದೆ. ಶ್ರೇಷ್ಠ ಸ್ತ್ರೀಯರು ಅಂತ ಹೇಳಬಹುದು. ಅವನ ಬದುಕೇ ಬವಣೆಯಾಗಿತ್ತು. ಸಂಕಟ ಕಂಟಕಗಳಿಂದ ಕೂಡಿತ್ತು. ಮುಳ್ಳಿನ ಮೇಲೆ ಬಿದ್ದ ಬಟ್ಟೆಯಂತೆ ಆಗಿತ್ತು. ಮನುಷ್ಯನಿಗೆ ಉಡಲು ಒಂದು ತುಂಡು ಬಟ್ಟೆಯಾದರೂ ಇದ್ದರೆ ಬುದ್ಧಿ ಸರಿ ಇರಬಹುದು, ಆದರೆ ಅದೂ ಇಲ್ಲದ ಪರಿಸ್ಥಿತಿಯಲ್ಲಿ ಅವನಿದ್ದ. ಮಾಯಾ ಪಕ್ಷಿಗಳು ಇದ್ದ ಒಂದೇ ವಸ್ತ್ರವನ್ನು ಕದ್ದೊಯ್ದಿದ್ದವು. ಚಕ್ರವತಿ೯ಯಾಗಿದ್ದವನು ಇಂಥ ಸ್ಥಿತಿಯಲ್ಲಿ, ಅವನ ಬುದ್ಧಿ ಏನಾಗಿರಬೇಕು! ಅವನು ತಪ್ಪು ನಿರ್ಣಯ ಮಾಡದಿರಲಾರ ಎನ್ನುವ ಭರವಸೆ ಏನು? ಎಂತಹ ಒತ್ತಡ, ಕ್ಲೇಶದಲ್ಲಿ, ಆ ನಿರ್ಧಾರ ಮಾಡಿದ ಅವನು.

ತತ್ತ್ವಭಾಗವತಮ್
ಬದುಕೇ ಬವಣೆ, ಬಟ್ಟೆ ಬಟ್ಟಬಯಲು, ಇನ್ನೊಂದೆಡೆ ಸುಡುವ ಚಿಂತೆ ಈ ಮೂರೂ ಕಾಡುತ್ತಿರುವಾಗ ಅವನು ಏನಾದರೂ ಮಾಡಿದರೆ ಅದನ್ನು ನೀನು ಕ್ಷಮಿಸಬೇಕಲ್ಲವೇ? ಪತಿ ಹೇಗೆ ನೋಡಿಕೊಳ್ಳಬೇಕೋ ಹಾಗೆ ನೋಡಿಕೊಳ್ಳದೆಯೂ ಇರಬಹುದು, ಆದರೂ ಬೇಸರ ಮಾಡಿಕೊಳ್ಳಬಾರದು, ರಾಜ್ಯಭ್ರಷ್ಟ, ದರಿದ್ರ, ಹಸಿವಿನಿಂದ ಕಂಗೆಟ್ಟಿದ್ದಾನೆ, ದೊಡ್ಡ ಸಂಕಟ ಆವರಿಸಿದೆ, ಅಂಥವನು ಏನೋ ಮಾಡಿದರೆ ಬೇಸರ ಮಾಡಿಕೊಳ್ಳಬೇಕಾ?
ಇದನ್ನು ಕೇಳಿದ ನಂತರ ಕೇಶಿನಿಗೆ ಶಂಕೆ ಅಧಿಕವಾಯಿತು. ಯಾಕೆಂದರೆ ಪ್ರಶ್ನೆ ಯಾರಿಗೆ ಸಂಬಂಧಿಸಿದ್ದೋ ಅವರು ಮಾತ್ರವೇ ಉತ್ತರ ಕೊಡುತ್ತಾರೆ, ಇಲ್ಲದಿದ್ದರೆ ಯಾಕೆ ಮಾತಾಡುತ್ತಾರೆ? ಹಾಗಾಗಿ ಅನಗತ್ಯವಾಗಿ ಇದಕ್ಕೆ ಯಾರು ಉತ್ತರಿಸುತ್ತಾರೆ? ನಳನ ಪರವಾಗಿ ಯಾಕೆ ಉತ್ತರ ನೀಡುತ್ತಾರೆ? ಅಲ್ಲದೆ ಉತ್ತರಿಸುತ್ತಾ, ಕಣ್ಣೀರ ಕಟ್ಟೆ ಒಡೆಯುತ್ತಿದೆ, ಅಲ್ಲಿಯವರೆಗೂ ಮೌನ ರೋದನ, ಅವನೊಳಗೆ ಸುಪ್ತವಾಗಿ ಅಡಗಿತ್ತು. ಇದೇನೂ ಸಾಮಾನ್ಯ ಸಂದಭ೯ ಅಲ್ಲ. ಒಬ್ಬ ಚಕ್ರವತಿ೯, ಅದರಲ್ಲೂ ನಳನಂಥವನು ಸ್ವರವೆತ್ತಿ ಅಳಬೇಕಾದರೆ ಅಂಥ ಸಂದಭ೯ ಬೇಕು.
ರಾಮಾಯಣದಲ್ಲಿಯೂ ಹಾಗೆಯೇ, ಸೀತಾ ಪರಿತ್ಯಾಗದ ನಂತರದ ಸಂದಭ೯ದಲ್ಲಿ ಹಲವೆಡೆ ಅವನು ಅಳುವುದನ್ನು ದುಃಖಿಸುವುದನ್ನು ಕಾಣುತ್ತೇವೆ. ಅದೂ ಹಾಗೇ, ಯಾರಿಗೂ ರಾಮನ ಹಾಗೆ ಅಳಲೂ ಸಾಧ್ಯವಿಲ್ಲ, ರಾಮನ ಹಾಗೆ ಯುದ್ಧ ಮಾಡಲೂ ಸಾಧ್ಯವಿಲ್ಲ. ಪ್ರಪಂಚಕ್ಕೆ ಹಾಗೆ ಒಳ್ಳೆಯದನ್ನು ಮಾಡಲೂ ಸಾಧ್ಯವಿಲ್ಲ. ಅಂತಹವರು ಯಾವುದನ್ನು ಮಾಡಿದರೂ ಅನುಭವಿಸಿದರೂ, ಆ ಮಟ್ಟದಲ್ಲಿಯೇ ಇರುತ್ತದೆ. ಸುಖ ಅಂದರೆ ಸುಖದ ಪರಾಕಾಷ್ಠೆ, ದುಃಖ ಅಂದರೆ ಅದರ ಪರಾಕಾಷ್ಠೆ, ಶೌರ್ಯ ಎಂದರೆ ಅದರ ಪರಾಕಾಷ್ಠೆ, ಕರುಣೆ ಎಂದರೆ ಅದರ ಪರಾಕಾಷ್ಠೆ, ದಾನ ಎಂದರೆ ಅದರ ಪರಾಕಾಷ್ಠೆ, ತ್ಯಾಗ ಎಂದರೆ ಅದರ ಪರಾಕಾಷ್ಠೆ ಈ ಬಗೆಯ ಪುರುಷರು ಪರಾಕಾಷ್ಠೆಯ ಪುರುಷರು. ಅಂತಹ ಸ್ತ್ರೀಯರುಗಳೂ ಹಾಗೆಯೇ.. ಹಾಗೆ ಅವರಿಗೆ ಒದಗಿ ಬರುವುದೂ ಹೀಗೇ ಪರಾಕಾಷ್ಠೆ, ಖಂಡತುಂಡವಾಗಿ ಇರುವುದಿಲ್ಲ. ಇಟ್ಟರೆ ಪ್ರೀತಿಯನ್ನು ಹಾಗೆಯೇ ಇಡುತ್ತಾರೆ, ಪಟ್ಟರೆ ದುಃಖವನ್ನು ಹಾಗೆಯೇ ಪಡುತ್ತಾರೆ. ಹಾಗಾಗಿ ಅದು ಬೇಕೂಂತ ಅತ್ತಿದ್ದಲ್ಲ, ದುಃಖ ಹೊರಗೆ ಬಂದದ್ದು ಹಾಗೆ. ನಳನಿಗೆ ತನ್ನ ಕುಟುಂಬದ ಮೇಲೆ ಪ್ರೀತಿ ಇತ್ತೇ ಅನ್ನುವ ಪ್ರಶ್ನೆಗೆ ಉತ್ತರ ಇದು. ರಾಮನಿಗೂ ಹೀಗೆಯೇ ಸೀತಾ ಪರಿತ್ಯಾಗ, ಅಗ್ನಿ ಪರೀಕ್ಷೆ ಇದನ್ನೆಲ್ಲಾ ನೋಡಿ ರಾಮನಿಗೆ ಸೀತೆಯ ಬಗ್ಗೆ ಪ್ರೇಮ ಇದ್ದದ್ದು ಹೌದಾ ಅನಿಸುತ್ತದೆ ಎಂದು ಮಾತಾಡುತ್ತಾರೆ. ಸೀತಾಪಹರಣದ ನಂತರ ಸೀತೆ ಬಗ್ಗೆ ರಾಮ ಪಟ್ಟ ದುಃಖ ಎಷ್ಟು ನೋಡಿ, ನಂತರ ಅರ್ಥ ಮಾಡಿಕೊಳ್ಳಿ ಇದು ಮಾಮೂಲಿ ಅಲ್ಲ, ಇದು ಏನೋ ಒಂದು ಸಂಕಷ್ಟದ ಸನ್ನಿವೇಶ ಅಂತ. ಅದು ವಿಕಟ ಸನ್ನಿವೇಶ, ಸಹಜತೆ ಅಲ್ಲ ಅಂತ.
ಇಲ್ಲಿಯೂ ಹಾಗೇ ದಮಯಂತಿ ಇಷ್ಟು ಪ್ರಯತ್ನ ಮಾಡುತ್ತಿದ್ದಾಳೆ ಅವನನ್ನು ಹುಡುಕಲು, ಆದರೆ ನಳ ಮಾತ್ರ ಯಾಕೆ ಹೀಗೆ? ಅಂದರೆ, ಪ್ರೀತಿ ಇಲ್ಲದೆ ಅಂತೂ ಇಲ್ಲ.. ಅವನು ಯಾವಾಗ ಅಳಲು ಪ್ರಾರಂಭ ಮಾಡಿದನೋ ಕೇಶಿನಿಗೆ ಏನೂ ಮಾಡಲು ತೋರದೇ ಸ್ವಲ್ಪ ಹೊತ್ತು ಸಮಾಧಾನಮಾಡಿ ನಂತರ ನೇರವಾಗಿ ದಮಯಂತಿಯ ಬಳಿ ಬಂದು ವಿವರವಾಗಿ ನಡೆದದ್ದನ್ನೆಲ್ಲಾ ಹೇಳಿದಳು. ಅವನ ಹಾವಭಾವ, ವಿಚಾರ, ಅವನು ಹೇಳಿದ್ದು, ಅವಳ ಸಂದೇಶ ಹೇಳಿದಾಗ ಅವನ ಪ್ರತಿಕ್ರಿಯೆ, ಅವನು ಏನೋ ಆದವನಂತೆ ಕುಸಿದು ಹೋದ, ತುಂಬಾ ಆತ್ತ, ಹಾಗೂ ಇದೇ ವಾಕ್ಯಗಳು ಆಡಿದ. ದಮಯಂತಿಗೆ ಮತ್ತೆ ಶಂಕೆ ದೃಢವಾಗುತ್ತಿದೆ. ಎಲ್ಲವೂ ಹೌದು ಅಂತ ಹೇಳುತ್ತಾ ಇದ್ದರೆ ಆಕೃತಿ ಮಾತ್ರ ಅಲ್ಲ ಅಂತ ಹೇಳುತ್ತಾ ಇದೆ. ಹೀಗೊಂದು ಸಾಧ್ಯತೆ ಇದೆಯಲ್ಲ! ಬಾಹುಕ ನಳನಿಗೆ ಆತ್ಮೀಯ ಸ್ನೇಹಿತನಾಗಿಯೂ ಇರಬಹುದು, ಇವನಿಗೆ ಅವನ ಬಗ್ಗೆ ಪ್ರೀತಿ ಇದ್ದುದರಿಂದ ಇವನಿಗೆ ದುಃಖ ಇರಬಹುದು, ಇವನಲ್ಲಿಯೂ ಆ ವಿದ್ಯೆ ಇರಬಹುದು. ನಳನೇ ಹೌದು ಆದರೆ ಆಕೃತಿಯಲ್ಲ. ಆಕೃತಿಯೇ ಅಲ್ಲ ವಿಕೃತಿ.
ದಮಯಂತಿ ಹೇಳುತ್ತಾಳೆ, ಸತ್ಯಸಾಗರದಲ್ಲಿ ಮತ್ತಷ್ಟು ಆಳಕ್ಕೆ ಇಳಿ, ಬಾಹುಕನ ಪರೀಕ್ಷೆ ಮಾಡು, ಅವನ ನಡೆಯನ್ನು ಆಮೂಲಾಗ್ರವಾಗಿ ಅವಲೋಕಿಸು ಅಂತ ಹೇಳಿ, ಒಂದೆರಡು ಸುಳಿವು ಕೊಟ್ಟಳು. ನಲನಿಗೆ ಅವನೊಡೆಯನಿಗೆ ಅಡುಗೆ ಮಾಡಿಹಾಕುವ ಜವಾಬ್ದಾರಿಯೂ ಇದೆ. ಅವನಿಗೆ ಅಡುಗೆಯಲ್ಲಿ ಕೆಲವು ಶಕ್ತಿ ಇದೆ ಅದನ್ನು ಪರೀಕ್ಷಿಸೋಣ, ಅವನಿಗೆ ನೀರು, ಬೆಂಕಿ ಸಿಗದಂತೆ ಮಾಡು, ಕೇಳಿದರೂ ಕೊಡಬೇಡ, ಹೇಗಾದರೂ ತಪ್ಪಿಸು. ಕನಿಷ್ಟ ಕೊಡುವುದು ತಡಮಾಡು, ಆಗ ಅವನು ಏನು ಮಾಡುತ್ತಾನೆ ನೋಡು ಅಂತ ಹೇಳಿದಳು. ಪಾಪ ಆ ಬಾಹುಕ ರಾಜನಿಗೆ ಕಾರಣ ಹೇಳಲು ಸಾಧ್ಯವೇ?
ಈಗಾಗಲೇ ಕೇಶಿನಿ ಎರಡು ಬಾರಿ ಹೋಗಿದ್ದಾಳೆ ಮತ್ತೆ ಹೊರಟಳು ಈಗ, ಹೋಗಿ ಎಲ್ಲವನ್ನೂ ಗಮನಿಸಿದಳು ಅವಳು ಹೇಳಿದಂತೆಯೇ ಮಾಡಿ, ದಂಗು ಬಡಿದವಳಂತೆ ತಿರುಗಿಬಂದಳು. ಬಿಟ್ಟ ಕಣ್ಣು, ಬಿಟ್ಟ ಬಾಯಿ ಬಿಟ್ಟಂತೆ ಅನ್ನುತ್ತಾರಲ್ಲ ಹಾಗೆ ಆಶ್ಚಯ೯ದಿಂದ ಹಿಂದೆ ಬಂದಳು, ಬಂದವಳೇ ದಮಯಂತಿಗೆ ಹೇಳಿದಳು, ವಿಚಿತ್ರ ಅವನು ಮನುಷ್ಯನೇ ಅಲ್ಲ, ನಾನು ಅವನನ್ನು ಯಾರೋ ಚಿಲ್ಲರೆ ಮನುಷ್ಯ ಅಂತ ಭಾವಿಸಿದ್ದೆ ಆದರೆ ಈತನ ಬಳಿ ಅತಿಮಾನುಷ ವಿಷಯಗಳಿವೆ. ಅವನ ಪವಾಡಗಳಿಗಿಂತ ಮುಂಚೆ ಅವನ ಶುಚಿತ್ವದ ಬಗ್ಗೆ ಹೇಳಬೇಕು. ನನ್ನ ಜೀವನದಲ್ಲೇ ಅವನಷ್ಟು ಶುದ್ಧನಾದವನನ್ನು ನಾನು ನೋಡಿಲ್ಲ, ಅತೀ ಶುದ್ಧವಾದ ಆಚರಣೆಗಳು ಅವನಲ್ಲಿದ್ದವು ನಾನು ಕಂಡದ್ದಿಲ್ಲ, ಕೇಳಿಯೂ ಇಲ್ಲ, ಬಾಗಿಲು ಚಿಕ್ಕದಿತ್ತು, ಆದರೆ ಇವನು ಲೆಕ್ಕಿಸದೇ ತನ್ನ ಪಾಡಿಗೆ ತಾನು ಹೋಗುತ್ತಿರುವಂತೆ, ಬಾಗಿಲೇ ದೊಡ್ಡದಾಯಿತು, ಇವನಿಗೆ ಆ ಕಡೆ ಗಮನವೂ ಇಲ್ಲ. ಅವರದ್ದೇ ಮನೆ ಆಗಿದ್ದರೆ ಹೀಗೆ ಏನೋ ವ್ಯವಸ್ಥೆ ಮಾಡಿಕೊಂಡಿರಬಹುದು ಆದರೆ ಇದು ಇಲ್ಲಿನ ಅತಿಥಿಗೃಹ ಅಲ್ಲಿ ಈ ವಿಚಿತ್ರ ನಡೆದಿದೆ. ಈ ವಿಚಾರ ದಮಯಂತಿಗೆ ತಿಳಿದಿದೆ, ಆದರೆ ಹೊರಗೆಲ್ಲಿಯೂ ತಿಳಿಸಿಲ್ಲ. ಅವನಿಗೆ ನೀನು ಹೇಳಿದಂತೆ ಅಡುಗೆ ಸಾಮಾನು ಕಳಿಸಲಾಗಿತ್ತು, ಆದರೆ ನೀರು ಕೊಟ್ಟಿರಲಿಲ್ಲ, ಸಾಮಾನುಗಳನ್ನು ತೊಳೆಯಬೇಕಾಗಿತ್ತು, ನೀರು ತುಂಬಿಸುವ ಪಾತ್ರೆ ಮಾತ್ರಾ ಅಲ್ಲಿತ್ತು. ಅದನ್ನು ಆ ಮನುಷ್ಯ ತಿರುಗಿ ಒಮ್ಮೆ ನೋಡಿದ ಅಷ್ಟೇ, ಅದರಲ್ಲಿ ನೀರು ತುಂಬಿತು. ಕೇಶಿನಿ ಎದುರಿಗಿದ್ದರೆ ಅವನು ಹಾಗೆ ಮಾಡುತ್ತಿದ್ದನೋ ಇಲ್ಲವೋ? ಆದರೆ ಯಾರೂ ಇರದ ಸಮಯ ನೋಡಿ ತನ್ನ ವಿದ್ಯೆ ಬಳಸಿದ. (ಅವನ ಮದುವೆ ಕಾಲದಲ್ಲಿ ಅಗ್ನಿ, ವರುಣರು ಕರೆದಾಗ ಬರುವುದಾಗಿ ಹೇಳಿ ವರ ನೀಡಿದ್ದರು) ಅದನ್ನು ನೋಡಿಯೇ ನನಗೆ ಗಾಬರಿ. ನಂತರ ಬೆಂಕಿ ಏನು ಮಾಡುತ್ತಾನೆ ಅಂತ ನೋಡುತ್ತಿದ್ದೆ. ಆಗ ಅವನು ಒಂದು ಹಿಡಿ ಒಣ ಹುಲ್ಲನ್ನು ಕೈಯಲ್ಲಿ ಹಿಡಿದು ಕೊಡವಿ ಅದರ ಕಡೆಗೆ ನೋಡಿದ, ಅಲ್ಲಿ ತಕ್ಷಣ ಬೆಂಕಿ ಹಚ್ಚಿಕೊಂಡಿತು. ಅದನ್ನು ನೋಡಿ ನನಗೇ ಗಾಬರಿಯಾಗಿ ಎದೆ ಹೊಡೆದುಕೊಳ್ಳಲು ಪ್ರಾರಂಭವಾಯಿತು. ನಿನಗೆ ಈ ಅದ್ಭುತವನ್ನು ಹೇಳೋಣ ಅಂತ ನೇರವಾಗಿ ಓಡಿ ಬಂದೆ ಅಂದಳು. ಇನ್ನೂ ಆಶ್ಚಯ೯ ಅಂದರೆ ಅವನು ಉರಿವ ಒಲೆಯೊಳಗೆ ಕೈ ಹಾಕಿ ಬೆಂಕಿ ಸರಿ ಮಾಡುತ್ತಾನೆ. (ನೋಡಿ ಹೇಗೆಲ್ಲಾ ಇದ್ದರು, ಆದರೂ ಸತ್ಯಕ್ಕಾಗಿ ಹೇಗೆ ಬದುಕಿದರು ಅಂತ, ಈಗ ನೋಡಿ ಪುಷ್ಕರನಿಂದ ದ್ಯೂತದಲ್ಲಿ ಸೋತ ಮೇಲೂ ಕೇವಲ ತನ್ನ ಬಾಹುಬಲದಿಂದ ಅವನನ್ನು ಪುನಃ ಸೋಲಿಸಬಹುದಾಗಿತ್ತು. ಆದರೆ ತಾನು ಒಂದು ಚೌಕಟ್ಟು ಹಾಕಿಕೊಂಡರೆ ಅದನ್ನು ಮೀರದಂತೆ ಇರುತ್ತಿದ್ದರು. ಎಂಥ ಧೀರ ಪುರುಷರು ಇವರು.) ಅವನು ಬೆಂಕಿಗೆ ಕೈಇಟ್ಟರೂ ಸುಡುವುದಿ, ಕರೆದಲ್ಲಿ ನೀರು ಬರುತ್ತದೆ, ಇವತ್ತಿನ ಎಲ್ಲ ರಿಮೋಟ್ ಹಾಗೂ ಸೆನ್ಸಾರ್ ಗಳಿಗಿಂತ ಮುಂದಿದೆ ಇದು, ತಪಸ್ಸು ಎನ್ನುವುದು ಎಲ್ಲಕ್ಕಿಂತ ದೊಡ್ಡದು. (ಪುಷ್ಪಕವಿಮಾನ ಯಜಮಾನನ ಮನಸ್ಸಿನಂತೆ ನಡೆಯುತ್ತದೆ, ಸಂಕಲ್ಪದಿಂದ ನಡೆಯುತ್ತದೆ.) ಕೊನೆಗೊಂದು ವಿಚಿತ್ರ ನಡೆಯಿತು, ಅವನು ಕೈಯಲ್ಲಿ ಹೂವನ್ನು ಹಿಡಿದು ಹೊಸಕಿ ಕೆಳಗೆ ಹಾಕಿದಾಗ ಹೂವು ಹಾಳಾಗಿ ಹೋಗುತ್ತೆ ಅಂದುಕೊಂಡೆ ಆದರೆ ಆ ಹೂವು ಇನ್ನಷ್ಟು ನಳನಳಿಸತೊಡಗಿತು, ಇನ್ನಷ್ಟು ಸುಗಂಧಭರಿತವಾಯಿತು. ವಿಚಿತ್ರವೆಂದರೆ ಹೊಸಕಿದಾಗ ಹೂವು ಹೊಸದಾಯಿತು. ಇದೆಲ್ಲ ಅದ್ಭುತ ನೋಡಿ ಓಡಿ ಬಂದೆ ಅಂದಳು. ನಳ ಇವುಗಳನ್ನೆಲ್ಲಾ ಎಂದೂ ಪ್ರದರ್ಶನಕ್ಕೆ ಇಡಲಿಲ್ಲ, ಅವನಲ್ಲಿ ಎಂದಿಗೂ ಇತ್ತು ಇದು. ಇದು ಪುಣ್ಯಶ್ಲೋಕನ ನಡೆ, (ಪುಣ್ಯಶ್ಲೋಕ ಎನ್ನುವ ಪದ ನಳನಿಗೇ ಮೀಸಲು).
ಅಪ್ರಯತ್ನವಾಗಿ ದಮಯಂತಿಯ ಬಾಯಿಂದ ನನ್ನ ಪತಿ ಬಂದ ಎನ್ನುವ ಅರ್ಥದ ಶಬ್ದ ಹೊರಬಂತು. ಶಂಕೆ ಒಂದೇ ಉಳಿದಿರುವುದು ಅದು ಆ ರೂಪದ್ದು. ಅಳುತ್ತಾ, ಅಳುತ್ತಾ ದಮಯಂತಿ ಕೇಶಿನಿಗೆ ಇನ್ನೊಂದು ಪರೀಕ್ಷೆ ಮಾಡಬೇಕು ಎಂದು ಹೇಳಿದಳು. ಅದು ಕಳ್ಳತನ. ಏನೆಂದರೆ, ಅವನು ಮಾಡಿದ ಅಡುಗೆಯ ಒಂದು ತುಣುಕನ್ನು ಅವನಿಗೆ ಗೊತ್ತಾಗದಂತೆ ತೆಗೆದುಕೊಂಡು ಬಾ ಅಂತ. ಇಂಥ ಒಂದು ಅದ್ಭುತ ಚಕ್ರವರ್ತಿಯಾದರೂ, ನಳನ ಅಡುಗೆಯನ್ನು ಆಸ್ವಾದಿಸ ಬಯಸುತ್ತಾಳೆ ನೋಡಿ, ಕೇಶಿನಿಯಂತೂ ದಮಯಂತಿ ಏನು ಹೇಳಿದರೂ ಮಾಡಲು ತಯಾರಿದ್ದಾಳೆ. ಸರಿ ನೇರ ಹೋಗಿ ಬಾಹುಕನ ಗಮನಕ್ಕೆ ಬಾರದಂತೆ ಅಡುಗೆ ತರುವ ಆತುರದಲ್ಲಿ ಬಿಸಿ ಬಿಸಿಯಾಗಿದ್ದನ್ನು ತಂದು ಕೊಡುತ್ತಾಳೆ ದಮಯಂತಿಗೆ, ಅವಳಿಗೆ ಆ ಬಿಸಿಯ ಅರಿವೂ ಆಗಲಿಲ್ಲ, ದಮಯಂತಿಗೆ ಪ್ರೀತಿಪಾತ್ರವಾದದ್ದನ್ನು ಮಾಡುವ ಉತ್ಸಾಹದಲ್ಲಿ. ದಮಯಂತಿಗೆ ನಳನ ಪಾಕ ಪರಿಚಿತ, ಅದನ್ನು ಬಾಯಲ್ಲಿ ಇಡುತ್ತಲೇ ಇದು ನಳನದ್ದೇ ಎನ್ನುವ ಉದ್ಗಾರ ಅವಳ ಬಾಯಿಂದ ಹೊರಬಂತು. ಆದರೆ ಆ ಸಮಸ್ಯೆ ಇದ್ದೇ ಇದೆ. ಈ ರೂಪ ಯಾಕೆ? ಶಾಪ ಬಂತೇ? ಈ ಕುರೂಪ ಯಾಕೇ? ಹೀಗೆ ಯೋಚಿಸಿ ಬಾಹುಕನ ಭಾವುಕತನಕ್ಕೆ ಕಡೆಯ ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ.
ಕಣ್ಣು ಸುಳ್ಳು ಹೇಳಿದರೂ ನಾಲಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಪ್ರದರ್ಶನದಲ್ಲಿಟ್ಟಿರುವ ಆಟದ ತೆಂಗಿನಕಾಯಿಯಂತೆ, ನೋಡಲು ತೆಂಗಿನಕಾಯಿ ಅನಿಸಿದರೂ ಬಾಯಿಗಿಟ್ಟಾಗ, ಬಂಡವಾಳ ಬಯಲಾಗತ್ತದೆ.
ಇಲ್ಲಿ ಕುರೂಪದಿಂದ ಕಣ್ಣು ಸುಳ್ಳು ಹೇಳುತ್ತೆ ಆದರೆ ನಾಲಿಗೆಯ ರುಚಿ ಹಾಗೆ ಹೇಳುತ್ತಿಲ್ಲ. ನಳನು ಮಾಡಿದ ಆಹಾರ ಬಾಯಿಗಿಟ್ಟಾಗ ಅದೇ ಸ್ವಾದ, ಸುಗಂಧ, ಪಕ್ವತೆ, ಹದ ಎಲ್ಲಾ ಅದೇ, ಈಗ ಮಾತ್ರಾ ದಮಯಂತಿಗೆ ತಡೆದುಕೊಳ್ಳಲು ಆಗಲಿಲ್ಲ. ಬಿಕ್ಕಿಬಿಕ್ಕಿ ಜೋರಾಗಿ ಅಳುತ್ತಾಳೆ. ಅತ್ಯಂತ ಕ್ಲೇಶವನ್ನು ಹೊಂದಿ ಎಷ್ಟೋ ಹೊತ್ತು ಅತ್ತ ನಂತರ ಆಮೇಲೆ ಎದ್ದು ಹೋಗಿ ಮುಖ ತೊಳೆದು ಬರುತ್ತಾಳೆ. ಆಮೇಲೆ ಕೊನೆಯ ಪರೀಕ್ಷೆಗೆ ಅಣಿಯಾಗುತ್ತಾಳೆ. ನಮ್ಮಿಬ್ಬರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಅವನ ಮುಂದೆ ನಿಲ್ಲಿಸು, ಇವರು ಗೊತ್ತೇ ಎಂದು ಕೇಳು, ಏನು ಹೇಳುತ್ತಾನೆ ನೋಡೋಣ. ಮಕ್ಕಳನ್ನು ಕಂಡಾಗ ಯಾರು ತಾನೇ ಕರಗುವುದಿಲ್ಲ. ಅಲ್ಲಿಯೂ ಕರಗದವನ ಹೃದಯ ಕಲ್ಲು. ಯಾರ ಮಕ್ಕಳನ್ನು ಕಂಡರೂ ಮನಸ್ಸು ಕರಗುತ್ತದೆ. ಯಾಕೆಂದರೆ ಅವರು ದೇವರ ಸಮಾನ. ಇನ್ನು ತನ್ನ ಮಕ್ಕಳನ್ನೇ ಕಂಡರೂ ಕರಗದಿದ್ದರೆ ಅವನು ನಳನೇ ಅಲ್ಲ. ನಳನಾದರೆ ಕರಗೇ ಕರಗುತ್ತಾನೆ.
ಮತ್ತೆ ಹೋದಳು ಕೇಶಿನಿ, ಇದು ಎಷ್ಟನೇ ಬಾರಿಯೋ ಅವಳ ದೌತ್ಯ ಪಾಪ, ಬಾಹುಕ ಇದೇನು ಬಂದಳು ಅಂತ ನೋಡುತ್ತಾ ಇದಾನೆ. ಈ ಬಾರಿ ಅವಳ ಜೊತೆ ಇಬ್ಬರು ಮಕ್ಕಳಿದ್ದಾರೆ. ಯಾರು ಅಂತ ನೋಡಿದರೆ ಅವರು ತನ್ನ ಮಕ್ಕಳೇ, ಅವರ ಗುರುತು ಸಿಗದಿದ್ದರೆ ಹೇಗೆ? ತಾನು ಬಾಹುಕನ ವೇಷದಲ್ಲಿ ಇದ್ದೇನೆ ಅಂತ ಒಂದು ಕ್ಷಣ ಅವನಿಗೆ ಮರೆತೇ ಹೋಯಿತು. ಒಂದೇ ನೆಗೆತಕ್ಕೆ ನೆಗೆದು ಅವರಿದ್ದಲ್ಲಿಗೆ ಹೋಗಿ ಎತ್ತಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅಳಲು ಪ್ರಾರಂಭಿಸಿದ. ಎಷ್ಟು ಮುಚ್ಚಿಟ್ಟರೂ ಮುಚ್ಚಿಡಲಾಗಲಿಲ್ಲ. ಪೂತಿ೯ ಕರಗಿ ಹೋದ. ಅವಳು ಮಾತಾಡುವ ಮುಂಚೆಯೇ ಎದ್ದು ಧಾವಿಸಿ ಹೋಗಿ ಮಕ್ಕಳ ತಬ್ಬಿ ಕಣ್ಣೀರಿಟ್ಟ. ಪುತ್ರ ವಾತ್ಸಲ್ಯಕೆ ಸಮ ಉಂಟೇ ಜಗತ್ತಿನಲ್ಲಿ, ಖಂಡಿತಾ ಇಲ್ಲ.
ಅಂಗಾದಂಗಾತ್ ಸಂಭವಂತಿ ಹೃದಯಾದಧಿಜಾಯಸೇ |
ಆತ್ಮಾವೈ ಪುತ್ರನಾಮಾಸಿ ತಂಜೀವ ಶರದಾಂ ಶತಂ || ಎಂದು ಹೇಳಿರುವಂತೆ. ತನ್ನ ಅಂಗಗಳಿಂದ ಮಕ್ಕಳು ತಮ್ಮ ಅಂಗಗಳನ್ನು ಪಡೆದುಕೊಳ್ಳುತ್ತಾರೆ. ಕೇವಲ ಹೊಟ್ಟೆಯಿಂದ ಮಾತ್ರವಲ್ಲ. ಹೃದಯದಿಂದ ಹುಟ್ಟುತ್ತಾರೆ. ಮಕ್ಕಳೆಂದರೆ ತನ್ನದೇ ಇನ್ನೊಂದು ರೂಪ, ಅದು ತಾನೇ, ಶಾಸ್ತ್ರಗಳಲ್ಲಿ ಹೇಳಿರುವಂತೆ ಪತಿಯೇ ಸತಿಯಲ್ಲಿ ಅನುಪ್ರವೇಶ ಮಾಡಿ ಮಗನಾಗಿ ಹುಟ್ಟುತ್ತಾನೆ. ಅವನು ಬೇರೆ ಅಲ್ಲ, ತಾನು ಬೇರೆ ಅಲ್ಲ. ಮನುಷ್ಯರಿಗೆ ಅಮೃತತ್ವ ಬರುವುದು ಒಂದು ಸಂನ್ಯಾಸದಿಂದ, ಎಲ್ಲ ಬಿಟ್ಟು ಹೊರಡುವುದರಿಂದ, ಇನ್ನೊಂದು ಸಂತತಿಯಿಂದಾಗಿ. ಏಕೆಂದರೆ ಸಂತತಿಯ ಮೂಲಕ ತಾನೇ ಉಳಿದುಕೊಳ್ಳುತ್ತಾನೆ. ಪುತ್ರವಾತ್ಸಲ್ಯಕ್ಕೆ ಮಿಗಿಲಾದದ್ದು ಏನೂ ಇಲ್ಲ ಈ ಪ್ರಪಂಚದಲ್ಲಿ. ದೇವಕುಮಾರ, ಕುಮಾರಿಯರಂತೆ ಕಂಡರು ಇಬ್ಬರೂ ಅವನಿಗೆ ಮಕ್ಕಳನ್ನು ಕಂಡಾಗ, ಬಾಹುಕ ಮತ್ತೆ ನಳನಾಗಿ ಬಿಟ್ಟ. ಸ್ವರವೆತ್ತಿ ರೋಧಿಸತೊಡಗಿದ. ಒಂದು ಕ್ಷಣ ಬಿಟ್ಟು ಎಚ್ಚರವಾಯಿತು. ತಕ್ಷಣ ಶೋಕವನ್ನು ನಿಗ್ರಹ ಮಾಡಿದ, ನಂತರ ಮಕ್ಕಳನ್ನು ಕೇಶಿನಿಯ ಕಡೆ ಕಳಿಸಿದ. ನಂತರ ಹೇಳಿದ, ಅದೂ! ನಂಗೂ ಇದೇ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ, ಇವರ ತರಹವೇ ಇದ್ದಾರೆ, ಹಾಗಾಗಿ ನೋಡಿದ ಕೂಡಲೇ ಕಣ್ಣಿರು ಬಂತು, ತಪ್ಪು ತಿಳಿಬೇಡ, ಕಳೆದು ಹೋದೆ, ಅಂತ ಅವಳು ಕೇಳುವ ಮೊದಲೇ ಹೇಳಿದ. ಅವಳು ಏನೂ ಮಾತಾಡಲಿಲ್ಲ, ಮತ್ತೆ ಇವನೇ ಹೇಳಿದ. ಅಮ್ಮ ನೀನು ಮತ್ತೆ ಈ ಕಡೆ ಬರಬೇಡ, ನಿನಗೆ ನಮಸ್ಕಾರ, ನಾವು ಮೊದಲೇ ಪರದೇಶಿಗಳು, ನೀನು ಪದೇ ಪದೇ ಇಲ್ಲಿಗೆ ಬರುವುದನ್ನು ಯಾರಾದರೂ ನೋಡಿ ತಪ್ಪು ತಿಳಿದುಕೊಳ್ಳಬಹುದು, ಅಂತ. ಕೇಶಿನೀ ಹಂ ಎಂದಳು ಅಷ್ಟೇ. ಆದರೆ ಮನಸ್ಸಿನಲ್ಲೇ ಅಂದುಕೊಂಡಳು ನಾನು ಬರುವುದು ಬಿಡುವುದು ದಮಯಂತಿಯ ಇಚ್ಚೆಗೆ ಬಿಟ್ಟಿದ್ದು ಅಂತ.
ನಂತರ ದಮಯಂತಿಯ ಬಳಿಗೆ ಬಂದು ನಡೆದದ್ದನ್ನು ಸವಿವರವಾಗಿ ಹೇಳಿದಳು, ಹೀಗೆಲ್ಲ ಮಾಡಿದ ಅಂತ. ಆಗ ದಮಯಂತಿಗೆ ವಿಷಯ ಹೆಚ್ಚು ಕಡಿಮೆ ಸ್ಪಷ್ಟ ಆಯಿತು, ಅವನು ನಳನೇ ಅಂತ. ಈಗ ಅವಳು ಮುಖಾಮುಖಿಗೆ ಸಿದ್ಧಳಾದಳು. ಮೊದಲೇ ಹೋಗಲಿಲ್ಲ ಯಾಕೆಂದರೆ? ಪಾತಿವ್ರತ್ಯದ ಪ್ರಶ್ನೆ ಇತ್ತು. ಈಗ ಹೆಚ್ಚಿನ ಭಾಗ ಸ್ಪಷ್ಟ ಆಗಿದ್ದರಿಂದ ತಂದೆ ತಾಯಿಗಳ ಒಪ್ಪಿಗೆ ಪಡೆದು ತಾನೇ ಅವಳಲ್ಲಿಗೆ ಹೋಗಲು ಸಿದ್ಧಳಾದಳು. ಆದರೆ ಇಬ್ಬರಲ್ಲೂ ಒಂದು ದೊಡ್ಡ ಪ್ರಶ್ನೆ ಇದೆ. ಅದು ಬಗೆಹರಿಯದ ಹೊರತು ಮತ್ತೆ ಆ ಸಂಸಾರ ಒಂದಾಗುವಂತೆ ಇಲ್ಲ. ದಮಯಂತಿಯ ಪ್ರಶ್ನೆ ತೀರ್ಮಾನ ಆಗದಿದ್ದರೂ ತೊಂದರೆ ಇಲ್ಲ. ಆದರೆ ನಳನ ಭೂತಾಕಾರದ ಪ್ರಶ್ನೆ ಇದೆಯಲ್ಲ! ಅದಕ್ಕೆ ಉತ್ತರ ಸಿಕ್ಕದ ಹೊರತು ಸಂಸಾರ ಒಂದಾಗುವುದಿಲ್ಲ. ಸಂಸಾರ ಒಂದಾಗದ ಹೊರತು ಪ್ರಪಂಚಕ್ಕೆ ಶುಭ ಇಲ್ಲ. ಅದು ಹೇಗೆ? ಒಂದು ರೀತಿ ದಮಯಂತಿಯೇ ಸೃಷ್ಟಿ ಮಾಡಿಕೊಂಡಿರುವುದು ಅದು, ಬೇಕಂತ ಅಲ್ಲ ಆದರೂ ಆಗಿದೆ.
ಅಂತಹಾ ಒಂದು ದೊಡ್ಡ ಪ್ರಶ್ನೆಯ ಯುಗಲವನ್ನು ಇಬ್ಬರೂ ಮುಂದಿಟ್ಟುಕೊಂಡು ಮಹಾಮುಖಾಮುಖಿ ಸಿದ್ಧವಾಗಿದೆ, ನಾಳೆ ನೋಡೋಣ.
ಚಿತ್ರ:ಅಂತರ್ಜಾಲದಿಂದ
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply