#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
15-09-2018:
ಅದ್ವೈತ ಸಿದ್ಧಿ
ತಾನೊಲಿದ ಜೀವಿಗಳಿಗೆ ತನ್ನನ್ನೇ ಕೊಡಮಾಡುವ, ತನ್ನೊಡನೆ ಅದ್ವೈತವನ್ನು ಏರ್ಪಡಿಸಿಕೊಡುವ, ಆ ಪರವಾಸುದೇವನ ಚರಣಗಳಲ್ಲಿ ನತಮಸ್ತಕರಾಗಿ ನಳಚರಿತ್ರೆಯ ಕೊನೆಯ ಘಟ್ಟವನ್ನು ಅನುಸಂಧಾನ ಮಾಡೋಣ.
ಮಾನ ದೊಡ್ಡದೋ ಪ್ರಾಣ ದೊಡ್ಡದೋ? ಅನ್ನುವ ಪ್ರಶ್ನೆ ಬಂದರೆ ಸತ್ಪುರುಷರಿಗೆ ಮಾನವೇ ದೊಡ್ಡದು. ಪ್ರಾಣಕ್ಕಿಂತ ಹೆಚ್ಚು ಅವರು ಮಾನಧನರು, ರಾವಣ ಸೀತೆಯನ್ನು ಅಪಹರಿಸಿ ತನ್ನವಳಾಗುವಂತೆ ಅವಳನ್ನು ಒತ್ತಾಯಿಸುವಾಗ ಅವಳು ನುಡಿಯುತ್ತಾಳೆ, ನಾನು ಶವವಾಗಬಲ್ಲೆನೇ ಹೊರತು ನಿನ್ನ ವಶಳಾಗಲಾರೆ ಎಂದು. ಇಲ್ಲಿ ದಮಯಂತಿಯೂ ಹಾಗೆಯೇ, ಅವಳು ಸೀತೆಗೇ ಆದರ್ಶಳಾದವಳು. ಅವಳೂ ಪ್ರಾಣವನ್ನೇ ಬಿಟ್ಟಾಳು ಆದರೆ ಮಾನವನ್ನು ಮಾತ್ರಾ ಬಿಡಲಾರಳು. ಅದರಷ್ಟೇ ಮುಖ್ಯ ಯಾರಿಗೆ ನಮ್ಮ ಮೇಲೆ ವಿಶ್ವಾಸ ಇರುತ್ತೋ, ಅನುಬಂಧ ಇರುತ್ತೋ ಅವರಲ್ಲಿ ನಮ್ಮ ಬಗ್ಗೆ ಮಾನಶಂಕೆ ಬರಬಾರದು, ಯಾರಿಗೋ ಬಂದರೂ ನಮ್ಮ ಬಗ್ಗೆ ಪ್ರೀತಿ ಇರುವವರಿಗಾದರೂ ಕನಿಷ್ಟಪಕ್ಷ ಬರಬಾರದು. ಯಾರು ನಂಬಬೇಕೋ ಅವರೂ ನಮ್ಮನ್ನು ನಂಬಬೇಕು ಅಂತ, ಯಾರು ನಂಬದಿದ್ದರೆ ಅವರ ಜೀವನಕ್ಕೇ ಅರ್ಥವಿಲ್ಲವೋ ಅವರೇ ನಂಬದಿದ್ದರೆ ಬದುಕು ದುರ್ಭರವಾಗುತ್ತದೆ. ಈಗ ಅವಳು ನಳನನ್ನು ಹೇಗಾದರೂ ತನ್ನಲ್ಲಿಗೆ ಕರೆಸುವ ಉದ್ದೇಶಕ್ಕಾಗಿ ನಳನ ಪ್ರೀತಿಯನ್ನೇ ಒತ್ತೆ ಇಟ್ಟಂತಾಗಿದೆ, ನಳನ ಅಂತರಂಗದಲ್ಲಿ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡುವ ಹಾಗೆ ಮಾಡಿಬಿಟ್ಟಿದ್ದಾಳೆ. ಈಗ ತನ್ನ ಜೀವವನ್ನೇ ಒತ್ತೆ ಇಟ್ಟು ಅದನ್ನು ಸಾಧಿಸುವವಳಿದ್ದಾಳೆ. ಹಾಗಾಗಿ ಈ ಶಪಥ. ಸೂರ್ಯ, ಚಂದ್ರ, ವಾಯುಗಳು ಮೂವರೂ ಅವಳ ಜೀವನದಲ್ಲಿ ಸಾಕ್ಷಿಗಳಾಗಿ ಇರುತ್ತಾರೆ, ಅವರುಗಳು ಹೇಳಲಿ ನಾನೇನು ಎಂದು ಅಂತ ಸವಾಲು ಹಾಕುತ್ತಾಳೆ. ಅದರಲ್ಲಿ ಸೂರ್ಯ, ಚಂದ್ರರು ಬೆಳಕು ಹಾಗೂ ವಾಯು ಉಸಿರು. ಹೀಗೆ ಬೆಳಕು ಉಸಿರುಗಳೇ ಜೀವನದ ಸಾಕ್ಷಿಗಳು.

ತತ್ತ್ವಭಾಗವತಮ್
ಆದಿತ್ಯ ಚಂದ್ರೌ ಅನಿಲಾನಲೌಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ| ಅಹಶ್ಚ ರಾತ್ರಿಶ್ಚ ಉಭೇಚ ಸಂಧ್ಯೇ ಧರ್ಮಶ್ಚ ಜಾನತಿ ನರಸ್ಯ ವೃತ್ತಂ|
ಈ ಮೇಲಿನ ಎಲ್ಲವೂ ನಮ್ಮ ಜೀವನದಲ್ಲಿ ಜೊತೆಗೇ ಇದ್ದಕೊಂಡು ನಮ್ಮ ಜೀವನಕ್ಕೆ, ಆಚರಣೆಗೆ ಸಾಕ್ಷಿಗಳಾಗಿ ಇರುತ್ತಾರೆ. ಹೀಗೆ ಗುಟ್ಟಾಗಿ ಪಾಪಮಾಡುವವರಿಗೂ ಯಮನೂ ಸಾಕ್ಷಿಯಾಗಿ ನಮ್ಮೊಳಗಿದ್ದುಕೊಂಡಿರುತ್ತಾನೆ. ದಮಯಂತಿ ತನ್ನೊಡನೆ ಅವರು ಮೂವರೂ ಇರುವುದನ್ನು ಗಮನಿಸಿದ್ದಾಳೆ, ನಳ ಅವಳಿಗೆ ಏನೂ ಶಪಥ ಮಾಡಲು ಹೇಳಲಿಲ್ಲ, ನೀನು ಯಾಕೆ ಹೀಗೆ ಮಾಡಿದೆ ಅಂತ ಕೇಳುತ್ತಾನೆ ಅಷ್ಟೇ. ಆದರೆ ದಮಯಂತಿ ತಾನಾಗಿಯೇ ಮುಂದುವರೆದು ಈ ಶಪಥ ಮಾಡುತ್ತಾಳೆ, ಪಾಪಗಳು ಮೂರು ಬಗೆಯದ್ದಾಗಿ ಇರುತ್ತದೆ, ಕಾಯಿಕ, ವಾಚಿಕ ಹಾಗೂ ಮಾನಸಿಕ ಎಂದು. ಕೆಟ್ಟ ಅಲೋಚನೆಗಳನ್ನು ಮಾಡುವುದು ಮಾನಸಿಕಪಾಪ ಅನಿಸಿಕೊಳ್ಳುತ್ತದೆ, ಅದನ್ನು ಬಾಯಿಯಲ್ಲಿಯೂ ಆಡಿದರೆ ಅದು ವಾಚಿಕಪಾಪವಾಗುತ್ತದೆ ಮತ್ತೂ ಮುಂದುವರೆದು ಅದು ಕೃತಿಯಲ್ಲಿ ಕೊನೆಯಾದರೆ ಅದು ದೈಹಿಕ ಪಾಪವೆಂದು ಕರೆಸಿಕೊಳ್ಳುತ್ತದೆ. ಹೀಗೆ ಈ ಮೂರೂ ವಿಚಾರದಲ್ಲಿ ತಾನು ಏನಾದರೂ ತಪ್ಪು ಮಾಡಿದ್ದರೆ ಆ ಮೂರು ದೇವತೆಗಳು ನನ್ನನ್ನು ಬಲಿ ತೆಗೆದುಕೊಳ್ಳಲಿ ಎಂದು ಹೇಳುತ್ತಾಳೆ. ಆಕೆಯ ಪತಿ ಕಲಿಯ ಕಾರಣದಿಂದಾಗಿ ತನ್ನ ರಾಜ್ಯವನ್ನೇ ಪಣಕ್ಕಿಟ್ಟಿದ್ದ ,ಈಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟಳು. ಗಂಡನಿಗೆ ಸರಿಯಾದ ಹೆಂಡತಿ, ಅವನಿಗಿಂತಲೂ ಒಂದು ಹೆಜ್ಜೆ ಮುಂದೆ ಇವಳು. ನಾನು ಹೇಳಿದ್ದು ತಕ್ಕುದಾಗಿದ್ದರೆ ಮೂಜಗಪತಿಗಳೇ, ಮಾತನಾಡಿ ಇಲ್ಲದಿದ್ದರೆ ನನ್ನ ಪ್ರಾಣಗಳನ್ನು ತೆಗೆದುಕೊಳ್ಳಿ ಅಂತ ಹೇಳುತ್ತಾಳೆ. ಎಂತಹ ಅದ್ಭುತ ವ್ಯಕ್ತಿತ್ವ ಇವರುಗಳದ್ದು ನೋಡಿ, ಬದುಕಿದ್ದರೆ ದಮಯಂತಿಯಂತೆ ಇರುತ್ತೇನೆ, ಇಲ್ಲದಿದ್ದರೆ ದಮಯಂತಿ ಉಳಿಯಲ್ಲ ಎಂದು. ತಪ್ಪು ಮಾಡಿದ್ದರೆ ಬದುಕೇ ಬೇಡ ಸಾವು ಬರಲಿ ಅಂತ. ಇಲ್ಲದಿದ್ದರೆ ನಿಜವನ್ನು ನಳನಿಗೆ ತಿಳಿಸಿ, ಜಗತ್ತಿಗೆ ತಿಳಿಸಿ ಅಂತ.
ನಳ ನಿಬ್ಬೆರಗಾಗಿ ನೋಡುತ್ತಿದ್ದಾನೆ, ಪತ್ನಿ ಅನಿವಾರ್ಯವಾಗಿ ಪ್ರಾಣಾರ್ಪಣೆಯವರೆಗೂ ಹೋಗಿಬಿಟ್ಟಿದ್ದಾಳೆ. ನಳನ ಪ್ರಶ್ನೆ ಸಹಜವಾಗಿತ್ತು, ಸೌಮ್ಯವಾಗಿ ಗಂಭೀರವಾಗಿ ಕೇಳಿದ್ದಾನೆ. ನೀನು ಎರಡನೇ ಸ್ವಯಂವರದ ಬಗ್ಗೆ ಚಿಂತಿಸಿದೆಯಲ್ಲ ಅದು ಸರೀನಾ? ಅಂತ ಅಷ್ಟೇ, ಅವಳು ಅದನ್ನು ಎಷ್ಟು ಪ್ರಖರವಾಗಿ ತೆಗೆದುಕೊಳ್ಳುತ್ತಾಳೆ ಅಂದರೆ ದೇವತೆಗಳನ್ನೇ ಕರೆಯುತ್ತಾಳೆ, ನೋಡಿ ಇಂತಹ ಸನ್ನಿವೇಶಗಳು ಬಂದರೆ ದೇವತೆಗಳೂ ಮಾತಾಡುತ್ತಾರೆ ಅಂತ. ಆ ಎತ್ತರದಲ್ಲಿ ನಿಂತು ಮಾತನಾಡಿದರೆ ದೇವತೆಗಳೂ ಮಾತಾಡುತ್ತಾರೆ. ಇದು ಅನುಭವವೇದ್ಯವಾಗಲಿಕ್ಕೆ ಸಾಧ್ಯ ಅಂತ. ನೀವು ದೃಢವಾಗಿ ನಂಬಿಕೊಂಡು ಹೆಜ್ಜೆ ಮುಂದಿಟ್ಟರೆ ಗೊತ್ತಾಗುತ್ತೆ ನಿಮ್ಮ ಸಂತೋಷ, ಸಂಕಟಗಳ ಸಮಯದಲ್ಲಿ ಇದು ನಿಮ್ಮ ಅರಿವಿಗೆ ಬರುತ್ತದೆ. ಆಗ ಅವರು ಸರಿಯಾದ ದಾರಿ ತೋರಿಸುತ್ತಾರೆ. ಗಮನಿಸಿದರೆ ದೈವಲೀಲೆ ಗೊತ್ತಾಗುತ್ತೆ. ಅವಳಿಗೆ ತನ್ನ ಚಾರಿತ್ರ್ಯ ಹಾಗೂ ದೇವತೆಗಳ ಮೇಲೆ ಬಹಳ ನಂಬಿಕೆ, ಇವರು ಸಾಮಾನ್ಯ ಮನುಷ್ಯರಂತೆ ಅಲ್ಲ ಬದುಕಿದ್ದು ಅಂತ, ಈ ಕಡೆ ಮನುಷ್ಯರ ಜೊತೆಗೆ ಮನುಷ್ಯರಂತೆ ವ್ಯವಹಾರ ಹಾಗೂ ಆ ಕಡೆ ದೇವತೆಗಳ ಜೊತೆಗೆ ದೇವತೆಗಳಂತೆ ವ್ಯವಹಾರ ಹೀಗೆ ಬದುಕಿದವರು ಅವರು ಅಂತ. ಹಾಗಾಗಿ ನಳ ಕರೆದಲ್ಲಿ ನೀರು ಬರುತ್ತೆ, ಅಗ್ನಿ ಬರುತ್ತೆ ಬಾಗಿಲು ತನ್ನಷ್ಟಕ್ಕೇ ಅನುಕೂಲಿಸುತ್ತೆ. ದಮಯಂತಿಯ ಜೊತೆಗೇ ಆ ಮೂವರೂ ಇರುತ್ತಾರೆ, ಹೀಗೆ ಈ ಮೂರೂ ದೇವತೆಗಳು ಇದ್ದುದರಿಂದಲೇ ಕಾಡು ಮನುಷ್ಯ ಅವಳನ್ನು ನಾಶಗೊಳಿಸಲು ಬಂದಾಗ ಅವನು ಉರಿದು ಹೋದದ್ದು. ಅದು ಇದೇ ಸೂರ್ಯನ ಬಿಸಿಗೆ ಸಿಲುಕಿ.
ಅವಳ ಶಪಥಕ್ಕೆ ವಾಯುವು ಅಂತರಿಕ್ಷದಿಂದ ಉತ್ತರ ಕೊಡುತ್ತಾನೆ, ದೊರೆಯೇ, ನಳನೇ ನಿನ್ನ ದಮಯಂತಿಯು ಯಾವುದೇ ತಪ್ಪನ್ನು ಮಾಡಿಲ್ಲ, ರಾಜನೇ, ದಮಯಂತಿಯ ಪ್ರಕಾಶಮಾನವಾದ ಶೀಲನಿಧಿಯು ಸುರಕ್ಷಿತವಾಗಿದೆ. ಅದು ತುಂಬಿದೆ ಅದಕ್ಕೇನೂ ಕೊರತೆಯಿಲ್ಲ, ನಾವು ಸಾಕ್ಷಿಗಳು ಹಾಗೂ ರಕ್ಷಕರು ಈ ಸಂಗತಿಗೆ. ನೀನಿರದ ಮೂರು ವರ್ಷಗಳು ನಾವು ಪ್ರಕಟವಾಗಿ ಆಕೆಯ ಹಿಂದೆ ರಕ್ಷಕರಾಗಿ ಸಾಕ್ಷಿಗಳಾಗಿ ಇದ್ದೇವೆ, ಸ್ವಯಂವರವೆಂಬುದು ನಿನ್ನನ್ನು ಬರಮಾಡಿಕೊಳ್ಳಲಿಕ್ಕಾಗಿ ದಮಯಂತಿ ಹೂಡಿದ ಒಂದು ಉಪಾಯ ಅಷ್ಟೇ. ತಂತ್ರ ಮಾತ್ರಾ, ಇನ್ನೊಮ್ಮೆ ನೆನಪಿಸಲಿಕ್ಕಾಗಿ ನೀನು ಬರಲೇಬೇಕು ಎನ್ನಲು ಸ್ವಯಂವರದ ವಿಚಾರ, ನೀನೇ ಎಂದು ತಿಳಿದುಕೊಳ್ಳಲು ಒಂದೇ ದಿನದ ಅವಕಾಶ ಹಾಗೂ ನೂರು ಯೋಜನಗಳ ದೂರವನ್ನು ಒಂದೇ ದಿನದಲ್ಲಿ ಕ್ರಮಿಸಬಲ್ಲ ಧೀರ ಇನ್ನೊಬ್ಬನಿಲ್ಲ ಭುವಿಯೊಳಗೆ ಹಾಗಾಗಿ ಈ ಉಪಾಯ. ನೀನಿರದೆ ದಮಯಂತಿ ಇಲ್ಲ, ದಮಯಂತಿ ಇರದೇ ನೀನಿಲ್ಲ, ನೀವಿಬ್ಬರೂ ಪ್ರತಿಸ್ಪಂದಿಸದೇ ಪ್ರೀತಿ ಇಲ್ಲ. ನೀವಿಬ್ಬರೂ ಒಬ್ಬರಿಗಾಗಿಯೇ ಒಬ್ಬರು ಸೃಷ್ಟಿಯಾಗಿರುವವರು. ಶಂಕೆ ಬೇಡ, ಇದ್ಯಾಕೆ? ಏನು ಅಂತ ಚಿಂತೆ ಬೇಡ ನೆಮ್ಮದಿಯಿಂದ ದಾಂಪತ್ಯ ನಡೆಸು ಹೋಗು ಎಂದು. ಆಗ ನಭದಿಂದ ಪುಷ್ಪವೃಷ್ಟಿ ಅಯಿತು, ದೇವದುಂದುಭಿಗಳು ಮೊಳಗಿದವು, ಹಿತವಾದ, ಶೀತಲವಾದ, ಸುಗಂಧಿತವಾದ ಮಂದಮಾರುತ ಬೀಸಿತು, ಹೀಗೆ ಕಣ್ಣು, ಕಿವಿ ಹಾಗೂ ಸ್ಪರ್ಶ ಈ ಮೂರೂ ಮಾಧ್ಯಮದಲ್ಲಿ ನೀವಿಬ್ಬರೂ ಒಟ್ಟಿಗೆ ಸುಖವಾಗಿರಿ ಎಂದು ಅಶೀರ್ವಾದ ಮಾಡಿದಂತೆ ಆಯಿತು. ಆ ಅದ್ಭುತವನ್ನು ಕಂಡ ನಳನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು, ನಳ ತನ್ನ ಜಿಜ್ಞಾಸೆಯನ್ನು ಪೂರ್ಣ ಬಿಟ್ಟು ನಿರ್ಮಲನಾದ. ಆಗ ನಳ ತನ್ನ ಮೂಲರೂಪ ಧಾರಣೆಮಾಡಲು ನಿಶ್ಚಯಿಸಿದ. ಅಲ್ಲಿಯವರೆಗೂ ಆ ವಿಕಾರ ರೂಪಿನಲ್ಲೇ ಇದ್ದ ಯಾಕೆಂದರೆ ದಮಯಂತಿ ಬೇರೆ ವಿವಾಹದ ಬಗ್ಗೆ ಯೋಚಿಸಿದ್ದರೆ, ಅವಳು ಮತ್ತೆ ಇವನಿಗೆ ಸಿಗದಿದ್ದರೆ ಆ ರೂಪದಿಂದ ಅವನಿಗೆ ಯಾವ ಪ್ರಯೋಜನವೂ ಇಲ್ಲ ಅವಳಿಲ್ಲದ ಬದುಕಿಗೆ ಸುಂದರ ರೂಪ ಯಾಕೆ? ಅಂತ ಅವನ ನಿಲುವು.
ಇಲ್ಲಿಯೂ ನಮಗೆ ರಾಮನ ನೆನಪು, ೧೪ ವರ್ಷಗಳ ವನವಾಸ ಪೂರ್ತಿಮಾಡಿ, ರಾವಣ ಸಂಹಾರವಾದ ಮೇಲೆ ಎಲ್ಲ ಕಪಿವೀರರನ್ನೂ ಜೊತೆಗಿಟ್ಟುಕೊಂಡು ಅಯೋಧ್ಯೆಯ ಬಳಿಗೆ ಬಂದ ರಾಮ ಸಮೀಪದ ಭರದ್ವಾಜರ ಆಶ್ರಮದಲ್ಲಿ ನಿಲ್ಲುತ್ತಾನೆ ಹಾಗೂ ಹನುಮಂತನನ್ನು ಭರತನ ಬಳಿಗೆ ಕಳುಹಿಸುತ್ತಾನೆ, ಮೊದಲು ಅವನಿಗೆ ರಾಜ್ಯದ ಆಸೆ ಇರಲಿಲ್ಲ, ಹೋಗಿ ನೋಡು ಇಷ್ಟುಕಾಲ ಕಳೆದ ಮೇಲೆ ಭರತನಿಗೇನಾದರೂ ರಾಜ್ಯದ ಮೇಲೆ ಆಸೆ ಬಂದಿದ್ದರೆ ನಾನು ಪುನಃ ಅಲ್ಲಿಗೆ ಹೋಗುವುದೇ ಇಲ್ಲ ಅಂತ. ಹೀಗೆಯೇ ನಳನೂ ತನ್ನ ಜೀವನದಲ್ಲಿ ದಮಯಂತಿ ಪುನಃ ಬರದಿದ್ದರೆ ತನಗೆ ಮೊದಲಿನ ರೂಪ ಬೇಡವೇ ಬೇಡ ಎಂದು ನಿಶ್ಚಯಿಸಿದ್ದ. ಹೀಗಿರಬೇಕು ಸಂಬಂಧ ಎಂದರೆ, ನಾವು ಹೇಗೆ ಮಾಡುತ್ತೇವೆ? ನಮ್ಮದೆಲ್ಲ ಅರೆಬರೆ ಸಂಬಂಧಗಳು, ನಿಷ್ಟೆ ಇಲ್ಲ, ಒಬ್ಬರಿಗೊಬ್ಬರ ಮೇಲೆ ಪೂರ್ತಿ ನಂಬಿಕೆ ಇಡುವುದಿಲ್ಲ. ಈಗ ನಳ ಕರ್ಕೋಟಕನನ್ನು ನೆನಸಿಕೊಂಡು ಅವನು ಕೊಟ್ಟಿದ್ದ ವಸ್ತ್ರಗಳನ್ನು ಧರಿಸುತ್ತಾನೆ, ಧರಿಸುತ್ತಿದ್ದಂತೆಯೇ ಪೂರ್ವರೂಪ ಬಂತು, ಪೂರ್ವ ಶರೀರ ಬಂತು. ಅವನ ಪೂರ್ವರೂಪ, ಸರ್ವಲಕ್ಷಣ ಸಂಪನ್ನವಾದ ಅವನ ರೂಪ, ಹಾಗೆಯೇ ಇನ್ನಷ್ಟು ಕಾಂತಿಯೊಡನೆ ನಳ ಕಂಗೊಳಿಸಿದ, ಅವನನ್ನು ಮೊದಲಿನ ರೂಪದಲ್ಲಿ ಪುನಃ ನೋಡಿದ ಕೂಡಲೇ ದಮಯಂತಿಯು ತಡೆದುಕೊಳ್ಳಲಾಗದೇ ಗಟ್ಟಿಯಾಗಿ ಕೂಗಿಕೊಂಡಳು, ತರುಲತೆಗಳು ಒಂದನ್ನೊಂದು ಬಂಧಿಸುವಂತೆ ಇಬ್ಬರೂ ಆಲಂಗಿಸಿದರು, ಹೀಗೆ ಸತಿಪತಿಯರು ಈರ್ವರೂ ಒಂದಾದರು.
ನಳನೂ ತನ್ನ ಪತ್ನೀಪುತ್ರರನ್ನು ಒಟ್ಟಿಗೆ ಕರೆದು ಆಲಂಗಿಸಿ ಮೊದಲು ಇದ್ದಂತೆಯೇ ಆನಂದದಲ್ಲಿ ಇರುತ್ತಾನೆ, ಮಹಾಭಾರತ ಹೇಳುತ್ತದೆ, ಗಂಟೆಗಟ್ಟಲೆ ಒಬ್ಬರನ್ನೊಬ್ಬರು ತಬ್ಬಿಕೊಂಡು ದುಃಖಿಸುತ್ತಾ, ಕಣ್ಣೀರು ಸುರಿಸುತ್ತಾ, ಹಾಗೆಯೇ ಉಳಿದುಬಿಟ್ಟಿದ್ದರು ಅವರಿಬ್ಬರೂ ಎಂದು. ಅದೇ ಅದ್ವೈತ ಸಿದ್ಧಿಯೆಂದರೆ. ಅವರ ವೇದನೆಗಳನ್ನು ಹೇಗೆ ಮಾತಿನಲ್ಲಿ ವ್ಯಕ್ತಪಡಿಸುವುದೋ ತಿಳಿಯದೇ, ನಳನೂ ಹಾಗೆಯೇ. ಮೇಲೆ ಗೊತ್ತಾಗಲ್ಲ ಆದರೆ ಒಳಗೇ ದುಃಖವನ್ನು ಅನುಭವಿಸಿದ್ದ.
ಜೀವ ದೇವರುಗಳ ಒಂದಾಗುವಿಕೆ ಅದು ಪರಮಾದ್ವೈತ, ಅದಕ್ಕೆ ಪೀಠಿಕೆಯಾಗಿ ಹೀಗೆ ಜೀವಜೀವಗಳು ಒಂದಾಗಬೇಕು. ಅಣ್ಣ-ತಂಗಿ, ಅಪ್ಪ-ಮಗ, ಗಂಡ-ಹೆಂಡತಿ ಈ ರೀತಿಯಾದ ಸಂಬಂಧಗಳು, ಜೀವಜೀವ ಬಂಧಗಳು ಯಾಕೆ ಅಂದರೆ ಪರಿಚಯ ಮಾಡಲಿಕ್ಕೆ, ಮುಂದೆ ದೇವನೊಡನೆ ಅದೈತ ಸಾಧಿಸಲಿಕ್ಕಿದೆ, ಅದಕ್ಕೆ ಪೂರ್ವಭಾವೀ ತಯಾರಿಯಾಗಿ ಈ ಸಂಬಂಧಗಳು. ಸತಿಯಾದವಳು ಪತಿಯನ್ನು ಸರಿಯಾಗಿ ಆಶ್ರಯಿಸಿದ್ದರೆ, ಹಾಗೆಯೇ ಅವಳು ಶ್ರೀಪತಿಯನ್ನೂ ಆಶ್ರಯಿಸಿರುತ್ತಾಳೆ, ಅದೇ ಅವಳಿಗೆ ಮುಕ್ತಿಗೆ ಮಾರ್ಗ. ಅವಳಿಗೆ ಆ ಫಲ ಇರುತ್ತದೆ ಅಂತ. ಯಾವುದೇ ಜೀವ ಜೀವ ಬಾಂಧವ್ಯ ಸಾಧನೆಯಾಗಿ ಪರಿಣಮಿಸಲಿಕ್ಕೆ ಸಾಧ್ಯ ಇದೆ, ಅದು ಶುದ್ಧವಾಗಿದ್ದಾಗ, ನಿಷ್ಠೆಯಿದ್ದಾಗ. ಹೀಗಿದ್ದರೆ ಅದು ಕೇವಲ ಸಂಸಾರವಲ್ಲ ಅದು ಸಾಧನೆ.
ಹೀಗೇ ಸಂಜೆಯಾಯಿತು. ಅವರು ನಂತರ ಇಡೀರಾತ್ರಿ ಇಬ್ಬರೂ ಮಾತನಾಡುತ್ತಾ ಕಳೆದರಂತೆ, ಏನು ಮಾತಾಡಿದರೋ? ಅವರಿಬ್ಬರೂ ತಾವಿಲ್ಲದೇ ಇನ್ನೊಬ್ಬರು ಕಳೆದ ಘಳಿಗೆಗಳನ್ನು , ವಿಷಯಗಳನ್ನು ಹಂಚಿಕೊಂಡರೋ. ಅಂತೂ ಸೂರ್ಯೋದಯ ಆಯಿತು. ಅಪರೂಪಕ್ಕೆ ಸಿಕ್ಕಿದರೆ ಹಾಗೆಯೇ, ಗಂಡಹೆಂಡತಿಯೇ ಅಲ್ಲ ಯಾವುದೇ ಸಂಬಂಧವಾದರೂ ಬಹಳ ಕಾಲದ ನಂತರ ಸಿಕ್ಕಿದಾಗ ಮಾತುಮುಗಿಯುವುದೇ ಇಲ್ಲ. ಮೂರುವರ್ಷಗಳ ಕಾಲ ಬೇರ್ಪಟ್ಟಿದ್ದರಲ್ಲ, ಆಗಿನ ಮಾತುಗಳೆಲ್ಲವನ್ನೂ ಆಡಿಮುಗಿಸಿದರೇನೋ! ಬೆಳಗಾಗುತ್ತಿದ್ದಂತೆ ಭೀಮರಾಜನಿಗೆ ವಿಷಯ ತಿಳಿಯಿತು, ಬಂದವನು ತನ್ನ ಅಳಿಯನೇ ಎಂಬುದಾಗಿ. ಅವನಿಗೆ ಹೋದ ಜೀವ ಮರಳಿ ಬಂದಂತಾಯಿತು. ಅಳಿಯನ ಬಗ್ಗೆ ಮೊದಲೇ ಇದ್ದ ಹೆಮ್ಮೆ ಈಗ ಇಮ್ಮಡಿಯಾಯಿತು. ಅಳಿಯ ಬಹಳ ಕಾಲದ ನಂತರ ಮರಳಿಬಂದಿದ್ದಾನೆ ಅಲ್ಲದೇ ಮೊದಲಿಗಿಂತ ಹೆಚ್ಚಿನ ಸಾಮರ್ಥ್ಯ ಪಡೆದು ಬಂದಿದ್ದಾನೆ. ಸಂತಸಗೊಂಡ ಅವನೇ ಏನು ಇಡೀ ಊರೇ ಆನಂದದಲ್ಲಿದೆ, ದಮಯಂತಿಗೆ ಎಷ್ಟು ಆನಂದವಾಯಿತು ಎಂದರೆ ಆಗಷ್ಟೇ ಮೊಳಕೆಯೊಡೆಯುತ್ತಿರುವ ಸಸ್ಯವಿರುವಾಗ ಮಳೆ ಬಂದರೆ ಭೂಮಿಗೆ ಎಷ್ಟು ಸಂತೋಷವಾಗುತ್ತದೋ ಅಷ್ಟು ಎಂಬುದಾಗಿ ಮಹಾಭಾರತದಲ್ಲಿ ಹೇಳಿದೆ, ಆದರೆ ಇದು ರಾಮಾಯಣದ ವಾಕ್ಯ. ಕವಿ ಈ ವಾಕ್ಯವನ್ನು ಹಾಗೆಯೇ ತೆಗೆದುಕೊಂಡಿದ್ದಾನೆ. ಯಾಕೆಂದರೆ ಇದೇ ಮಾತನ್ನು ಸೀತೆ ರಾಮಾಯಣದಲ್ಲಿ ಹನುಮಂತನಿಗೆ ಹೇಳುತ್ತಾಳೆ. ಹಾಗಾಗಿ ಕವಿ ಇಲ್ಲಿ ದಮಯಂತಿಯೂ ಸೀತೆಯೇ ಎಂದು ಸೂಚ್ಯವಾಗಿ ಹೇಳಲು ಹೀಗೆ ಹೇಳಿದ್ದಾನೆ, ಸೀತೆಯ ನೆನಪನ್ನು ಇಲ್ಲಿಯೂ ಮಾಡಿಸಲು. ದಮಯಂತಿಯ ಮುಖ ಕಂಗೊಳಿಸುತ್ತಿದೆ, ಅವಳ ಆ ಛಾಯೆ ಮರಳಿ ಬಂದಿದೆ.
ಒಂದು ರಾತ್ರಿಯ ಪ್ರತೀಕ್ಷೆ ಅಥವಾ ಒಂದು ರಾತ್ರಿಯ ಪರೀಕ್ಷೆ. ಭೀಮರಾಜನಿಗೆ ಒಂದು ರಾತ್ರಿ ಕಳೆದು ನೋಡೋಣ ಅಂತ, ಯಾಕೆಂದರೆ ದಮಯಂತಿಯ ಸ್ವಯಂವರದಲ್ಲಿ ಐದು ಜನ ಒಂದೇ ರೂಪದಲ್ಲಿ ಬಂದಿದ್ದರಲ್ಲ, ಹಾಗಾಗಿ ಅವನಿಗೆ ಧೈರ್ಯವಿಲ್ಲ ಬೆಳಗಿನ ತನಕ ಕಾಯ್ದು ನೋಡುವ ನಿರ್ಧಾರ ಮಾಡಿದ, ಬೆಳಗಾಯಿತು. ನಳ ಬಂದು ತನ್ನ ಮಾವನ ದರ್ಶನ ಮಾಡಿ ನಮಸ್ಕರಿಸಿದ, ಭೀಮರಾಜ ನಳನನ್ನು ತನ್ನ ಪುತ್ರನಂತೆ ಭಾವಿಸಿ ಸ್ವೀಕರಿಸಿ ಸ್ವಾಗತಿಸಿದ, ಹಾಗೂ ಮಗಳು ಅಳಿಯ ಇಬ್ಬರನ್ನೂ ಮದುವೆಯಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದ್ದಾಗಿ ಸತ್ಕರಿಸಿದ, ಅವರಿಬ್ಬರೂ ಅದನ್ನು ಗೌರವದಿಂದ ಸ್ವೀಕಾರಮಾಡಿ ಅಷ್ಟೇ ಪ್ರತಿಸತ್ಕಾರ ಮಾಡಿದರು. ಅಷ್ಟರಲ್ಲಿ ಊರಿಗೆಲ್ಲಾ ವಿಚಾರ ತಿಳಿಯಿತು. ಇಡೀ ನಗರದೆಲ್ಲೆಡೆ ಮಹಾನಂದದ ಧ್ವನಿ ಮೊಳಗಿತು. ಎಲ್ಲರಿಗೂ ಸಂತೋಷವಾಯಿತು, ಹೀಗಿರಬೇಕು ಇದ್ದರೆ ಮನುಜರು. ಕೆಲವರು ಇರುತ್ತಾರೆ, ಅವರು ಇರುವುದಕ್ಕೂ ಇಲ್ಲದಿರುವುದಕ್ಕೂ ವ್ಯತ್ಯಾಸವೇ ಇರಲ್ಲ. ಯಾರೇ ಒಬ್ಬರು ಬಂದರೆ ಎದೆ ಕುಣಿಯಬೇಕು, ಅಂತಹವರು ಪುಣ್ಯಾತ್ಮರು, ನಳನಂಥವರು ಎಲ್ಲರಿಗೂ ಸಂತೋಷವನ್ನು ತರುತ್ತಾರೆ, ಕೇವಲ ಅವರ ದರ್ಶನವಾದರೂ ಸಾಕು. ಆದರೆ ಇವರ ಕಷ್ಟಗಳು ಇನ್ನೂ ಮುಗಿದಿಲ್ಲ, ಮುಂದೆ ಇನ್ನೂ ಇದೆ, ಆದರೂ ಸಂತೋಷವಾಯಿತು. ಪುರಜನರು ಇಡೀ ಊರನ್ನು ಸಿಂಗರಿಸಿ, ರಸ್ತೆಗಳನ್ನು ಗುಡಿಸಿ, ತೊಳೆದು ರಂಗವಲ್ಲಿಗಳಿಂದ ಅಲಂಕರಿಸಿದರು ಎಲ್ಲರ ಮನೆಯ ಬಾಗಿಲುಗಳನ್ನು ತೋರಣಗಳಿಂದ ಶೃಂಗರಿಸಿದರು. ಹೂಚೆಲ್ಲಿ ಸಂಭ್ರಮಿಸಿದರು. ರಾಮನೂ ಹೀಗೆಯೇ ಪುಣ್ಯಶ್ಲೋಕ. ಊರಿನಲ್ಲಿನಲ್ಲಿರುವ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ದೇವತೆಗಳಿಗೂ ಹೀಗೊಂದು ಯೋಗ ನಳನಿಂದಾಗಿ. ಹೀಗೆ ನಗರಕ್ಕೆ ನಗರವೇ ಸಂಭ್ರಮಿಸುತ್ತಿದ್ದರೆ, ಇನ್ನೊಂದು ಜೀವವೂ ಸಂಭ್ರಮಿಸುತ್ತಿತ್ತು, ಅದು ಋತುಪರ್ಣ. ಹೌದು ತನ್ನ ಜೊತೆ ಬಂದವನು ಬಾಹುಕನಲ್ಲ ಅವನೇ ಮಾರುವೇಷದಲ್ಲಿದ್ದ ನಳನೆಂದು ತಿಳಿದೊಡನೇ ಅವನಿಗೆ ತುಂಬಾ ಸಂತೋಷವಾಯಿತು. ಇದರಿಂದ ಅರ್ಥವಾಗುವುದೆಂದರೆ ಅವನು ದಮಯಂತಿಗಾಗಿ ಸ್ವಯಂವರಕ್ಕೆ ಬಂದಿರಲಿಲ್ಲ, ಕೇವಲ ರಾಜಮರ್ಯದೆಯನ್ನು ಪಾಲಿಸಲಿಕ್ಕಾಗಿ ಮಾತ್ರವೇ ಬಂದಿದ್ದ ಅಂತ.
ನಮ್ಮತನ ನಮಗೆ ಮರಳಿ ಬಂದರೆ ಆಗ ನಮಗೆ ದೊಡ್ಡ ಆನಂದವಾಗುತ್ತದೆ. ನಳನ ಎರಡನೇ ಆತ್ಮ ಅವಳು ದಮಯಂತಿ, ನಳ ತನ್ನ ಭವನಕ್ಕೆ ಋತುಪರ್ಣನನ್ನು ಅಮಂತ್ರಿಸಿ ಅವನಲ್ಲಿ ಕ್ಷಮೆ ಕೋರುತ್ತಾನೆ, ದೊಡ್ಡವರು ದೊಡ್ಡವರಾಗೋದೇ ಹೀಗೆ. ಕ್ಷಮಿಸು ನನ್ನನ್ನು, ನಾನು ಯಾರೆಂದು ತಿಳಿಸದೇ ನಿನ್ನಲ್ಲಿ ಉಳಿದುಕೊಂಡೆ, ಅಲ್ಲದೇ ನಿನಗೆ ಹಲವು ಬಾರಿ ಅವಮಾನವಾಗುವಂತೆ ನಡೆದುಕೊಂಡೆ, ಹಾಗಾಗಿ ಕ್ಷಮಿಸು ಅಂತ. ಆಗ ಋತುಪರ್ಣ ಪ್ರತಿಕ್ರಯಿಸುತ್ತಾನೆ ನೀನು ಲೋಕಕ್ಕೇ ದೊಡ್ಡವನು, ನಿನ್ನಂತಹವನನ್ನು ಅನ್ಯಾಯವಾಗಿ ಊಳಿಗಕ್ಕೆ ಇಟ್ಟುಕೊಂಡಿದ್ದೆ ಅಂತ. ಋತುಪರ್ಣನಿಗೆ ಇನ್ನೂ ಅಶ್ಚರ್ಯವೇ ಭಾವವಾಗಿತ್ತು. ಆಮೇಲೆ ಕೇಳುತ್ತಾನೆ, ನಿನ್ನಲ್ಲಿ ನಾನೇನೂ ಅನುಚಿತವಾಗಿ ನಡೆದುಕೊಂಡಿಲ್ಲವಲ್ಲ ಅಂತ. ಹಾಗೆ ಒಂದೊಮ್ಮೆ ಏನಾದರೂ ಮಾಡಿದ್ದರೆ ಕ್ಷಮಿಸು ಅಂದ. ನಳ ಉತ್ತರಿಸುತ್ತಾನೆ, ನೀನು ಯಾವಾಗಲೂ ಹಾಗೆ ಮಾಡಿಲ್ಲ. ಒಂದೊಮ್ಮೆ ಮಾಡಿದ್ದರೂ ದೋಷವಿಲ್ಲ, ನಿನ್ನಿಂದ ನನಗೆ ಅಕ್ಷವಿದ್ಯೆ ಸಿಕ್ಕಿದೆ, ಮೊದಲೇ ನಾವು ಸಂಬಂಧಿಗಳು, ಮಿತ್ರರೂ ಕೂಡಾ ಏನಾಗಿದ್ದರೂ ಕ್ಷಮಿಸುತ್ತೇನೆ ಎಂದನು. ಕೊನೆಯದಾಗಿ ಹೇಳುತ್ತಾನೆ ನಿನ್ನ ಒಂದು ವಸ್ತು ನನ್ನಲ್ಲಿ ನಿಕ್ಷೇಪವಾಗಿ ಇರಿಸಲ್ಪಟ್ಟಿದೆ, ಅದು ಅಶ್ವವಿದ್ಯೆ. ದಯಮಾಡಿ ಅದನ್ನು ತೆಗೆದುಕೋ ಅಂತ, ಇದು ನಿಜವಾಗಿ ದೊಡ್ಡವರ ನಡೆಗಳು. ಅವರು ಯಾರ ಋಣವನ್ನೂ ಉಳಿಸಿಕೊಳ್ಳುವುದಿಲ್ಲ.
ಅಶ್ವವಿದ್ಯೆಯನ್ನು ನಳನು ಋತುಪರ್ಣನಿಗೆ ನೀಡಿದ, ಆನಂತರ ಇಬ್ಬರೂ ಪರಿಪೂರ್ಣರಾದರು. ಸರಿ ಅನಂತರ ಋತುಪರ್ಣನು ಇನ್ನೊಬ್ಬ ಸಾರಥಿಯನ್ನು ಕೂಡಿಕೊಂಡು ಅಯೋಧ್ಯೆಗೆ ಹೊರಟ, ವಾರ್ಷ್ಣೇಯ ಮತ್ತೆ ನಳನ ಜೊತೆಗೆ ಸೇರಿದ, ಆನಂತರ ನಳ ಬಹಳ ಕಾಲ ವಿದರ್ಭದಲ್ಲಿ ಉಳಿಯಲಿಲ್ಲ. ಒಂದುತಿಂಗಳ ಕಾಲ ಮಾತ್ರವೇ ಉಳಿದ. ಅಷ್ಟರಲ್ಲಿ ಸೈನ್ಯ ಸಂಘಟಿಸಿ ನಿಷಧ ರಾಜ್ಯದೆಡೆಗೆ ಹೊರಟ. ನಿಷಧವನ್ನು ಮತ್ತೆ ಗೆಲ್ಲಲು ಹೊರಟ, ಪುಷ್ಕರನನ್ನು ಮತ್ತೆ ಗೆಲ್ಲಲು ಹೊರಟ, ರಾಜಪರಂಪರೆಯ ಧರ್ಮವನ್ನನುಸರಿಸಿ ಹೊರಟ, ನಿಷಧದಲ್ಲಿಯೋ ಅವನೇ ಸಂಘಟಿಸಿದ ದೊಡ್ಡ ಸೈನ್ಯ ಇದೆ. ಆದರೆ ಈಗ ಸೈನ್ಯ ದೊಡ್ಡದಿಲ್ಲ, ಮನಸ್ಸು ದೊಡ್ಡದಾಗಿದೆ. ಹೀಗೆ ಅವನೀಗ ಪುಷ್ಕರನದಾಗಿದ್ದ ತನ್ನದೇ ರಾಜ್ಯ ಪ್ರವೇಶ ಮಾಡಿದ. ಈಗ ಅವನು ಯುದ್ಧೋಪಯೋಗಿಯಾದ ಒಂದು ಬೆಳ್ಳಿಯ ರಥ, ೧೬ ಆನೆಗಳು, ೫೦ ಕುದುರೆಗಳು, ೬೦೦ ಮಂದಿ ಕಾಲಾಳುಗಳ ಒಂದು ತುಕಡಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಅವನು ಸ್ವಾಭಿಮಾನಿ, ಅವನಲ್ಲಿ ಬಾಹುಕನಾಗಿ ದುಡಿದ ಹಣವಿತ್ತು, ಬಹುಶಃ ಅದನ್ನು ಬಳಸಿಯೇ ಸೈನ್ಯ ಕಟ್ಟಿದ್ದಿರಬಹುದು, ಹೀಗೆ ಭೂಮಿಯೇ ಕಂಪಿಸುವಂತೆ ಶಬ್ದ ಮಾಡುತ್ತಾ ಅವನು ತನ್ನದೇ ರಾಜ್ಯವನ್ನು ಪ್ರವೇಶ ಮಾಡುತ್ತಾನೆ. ಅವನಿಗೆ ಪುಷ್ಕರನ ಬಗ್ಗೆ ಮಹಾಕ್ರೋಧ ಉಂಟಾಗುತ್ತೆ. ನನ್ನ ತಮ್ಮ ನೀನು ನನ್ನ ದಯೆಯಿಂದ ಬದುಕಿಕೊಂಡಿದ್ದೆ, ಈಗ ನೋಡು ಏನಾಗುವುದೋ ಎಂದು ಮನದಲ್ಲಿಯೇ ಹೇಳಿಕೊಂಡ.
ನಳ ಪುಷ್ಕರರ ಮುಖಮುಖಿ ಏನಾಗುತ್ತೆ ನೋಡೋಣ, ಕಳೆದ ದಾರಿಯಲ್ಲಿಯೇ ವಸ್ತುವನ್ನು ಪಡೆದುಕೊಳ್ಳಬೇಕು, ಹಾಗಾಗಿ ಈಗ ಯುದ್ಧ ಮುಖ್ಯವಲ್ಲ, ಆದರೆ ದ್ಯೂತ ಹೇಗೋ ಏನೋ? ಗೆಲುವು ಹೇಗೆ ಹೇಳುವುದು? ಮುಂದೇನಾಯಿತು, ನಳ ಇನ್ನೂ ಏನನ್ನು ಪಣಕ್ಕಿಡಬೇಕಾಯಿತು? ಅವನು ಇನ್ನೂ ದೊಡ್ಡವನಾಗುವ ಅವಕಾಶ ಏನು ಬಂತು ಅನ್ನುವುದನ್ನು ನಾಳೆ ನೋಡೋಣ. ಪಣಕ್ಕಿಡುವ ಅವಕಾಶ ಕೂಡಾ ಭಿನ್ನವಾಗಿದೆ, ಅದು ಏನು ನಾಳೆ ತಿಳಿಯೋಣ. ಬದುಕಿನ ಕಷ್ಟಗಳನ್ನು ನೀಗಿಸುವ ದ್ವಾರ ಇದು ಋತುಪರ್ಣ, ದಮಯಂತಿ, ನಳ, ಕರ್ಕೋಟಕ ಇವರೆಲ್ಲರ ಸ್ಮರಣೆ ಮಾಡುವಂತಹ ಈ ಕಥಾನಕವನ್ನು ಹೃದಯದಲ್ಲಿ ಧಾರಣೆ ಮಾಡಿ ಕಲಿಯಿಂದ ಮುಕ್ತರಾಗೋಣ.
ಚಿತ್ರ:ಅಂತರ್ಜಾಲದಿಂದ
ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:
Leave a Reply