ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.

ಬದುಕಿನ ಪರಮ ಲಕ್ಷ್ಯದ ದಾರಿ ತೋರುವ ಮತ್ತು ಆ ಸರಿ ದಾರಿಯಲ್ಲಿ ಸತ್ಯದೆಡೆಗೆ ನಮ್ಮನ್ನು ಮುನ್ನೆಡೆಸುವ ಆ ಗುರುವಿಗೆ, ಗುರುತತ್ವಕ್ಕೆ ಪ್ರಣಾಮಗಳು. ನಿನ್ನೆ ಗುರುವಿನ ದಿನ, ಇಂದು ಗುರುಸೇವಕರ ದಿನ. ಗುರುಪರಿವಾರದ ದಿನ. ನಿನ್ನೆ ಪೂರ್ಣತೆಯ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದೆವು. ಗುರು ಎಂದರೆ ಪೂರ್ಣತೆ, ಆ ಪೂರ್ಣತೆಯ ಸೇವೆಯನ್ನು ಮಾಡೋಣ. ಈ ಪರಿವಾರವು ಗುರುವಿನ ಪೂರ್ಣತೆಗೆ ಕಾರಣವಾಗುವಂಥದ್ದು. ಒಬ್ಬೊಬ್ಬ ಪರಿವಾರದ ಸದಸ್ಯ ಕೂಡ ಒಂದು ಅಂಗ, ಅದೆಲ್ಲಾ ಸೇರಿ ಪೂರ್ಣವಾಗುವಂಥದ್ದು. ಪರಿವಾರ ಎನ್ನುವುದು ಗುರು ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಒಂದು ಗುಂಪು. ನಾವು ಅದೆಷ್ಟೋ ಬಾರಿ ಹೇಳಿದ್ದೇವೆ, ಕೆಲವು ಬಾರಿ ನಮಗೆ ಲಕ್ಷ್ಯದ ಬಗ್ಗೆ ಗಮನ ಇರುತ್ತದೆ, ಆದರೆ ದಾರಿ ಬಗ್ಗೆ ಗಮನವೇ ಇರುವುದಿಲ್ಲ. ಗುರು ಲಕ್ಷ್ಯವಾದರೆ ಅದಕ್ಕೆ ದಾರಿ ಈ ಪರಿವಾರ. ಇವರು ಗುರುವನ್ನು ಸೇರಲು ಸಾಧನವಾಗುವಂಥವರು. ನಾವು ಅವರನ್ನು ಮರೆತು ಬಿಡುತ್ತೇವೆ. ಅವರು ಸೋಪಾನ ಆಗಿದ್ದು ಮರೆತು ಗೋಡೆ ಎಂದು ನೆನಪಾಗುತ್ತದೆ. ಶಿಷ್ಯರು ಯಾವಾಗಲಾದರು ಬರುತ್ತಾರೆ, ಹೋಗುತ್ತಾರೆ. ಆದರೆ, ಪರಿವಾರದವರು ನಿರಂತರವಾಗಿ ಒಟ್ಟಿಗೆ ಇರುತ್ತಾರೆ. ನಾವು ಎಷ್ಟೋ ಬಾರಿ ಹೇಳಿದ್ದುಂಟು, ನಿಮಗೆ ಸಿಗುವುದು ಬರೀ ಬೆಳಕು ಮಾತ್ರ, ಅವರಿಗೆ ಬಿಸಿಯು ಕೂಡಾ ಸಿಗುತ್ತದೆ. ನಮ್ಮಲ್ಲಿ ಒಂದು ಮಾತು ಇತ್ತು; ಗುರುಗಳ ಬಹಳ ಹತ್ತಿರ ಹೋಗಬೇಡ, ಬೆಂಕಿ ಅದು. ಹಾಗಾಗಿ ಸ್ವಲ್ಪ ದೂರದಲ್ಲೇ ಸೇವೆ ಮಾಡಿ ಬಾ ಎಂದು ಹೇಳುವ ವಾಡಿಕೆ ಇತ್ತು. ಆದರೆ ಪರಿವಾರದವರು ಬೆಂಕಿಯ ಪಕ್ಕದಲ್ಲಿಯೇ ನಿಂತು ಅಗ್ನಿಶುದ್ಧರಾಗಿ ಸೇವೆಯನ್ನು ಮಾಡುವಂಥವರು. ಅಂತಹ ಪರಿವಾರದವರ ಸೇವೆಯ ಸುದಿನ ಇಂದು. ಈಗಿನ ಪರಿವಾರವಾಗಲಿ ಅಥವಾ ಹಿಂದಿನ ಪರಿವಾರವಾಗಲಿ ಈ ದಿನವನ್ನು ಎದುರು ನೋಡುತ್ತಿರುತ್ತಾರೆ. ಪರಿವಾರದ ಭಿಕ್ಷೆ ಎಂದರೆ ತುಂಬಾ ಅಭಿಮಾನ ಪಡುತ್ತಾರೆ ಮತ್ತು ತಪ್ಪದೇ ಬರುತ್ತಾರೆ. ಪರಿವಾರದಲ್ಲಿ ಸೇವೆ ಮಾಡಿದೆ ಎಂಬುವುದು ಒಂದು ಹೆಮ್ಮೆ ಹೊರತು ಅದು ಕಡಿಮೆ ಅಲ್ಲ. ಕೆಲವರಿಗೆ ಒಂದು ಭಾವನೆ ಇದೆ, ಪರಿವಾರದಲ್ಲಿ ಸೇವೆ ಮಾಡುತ್ತಿದ್ದಾನೆ ಎಂದರೆ ಹೆಣ್ಣು ಕೊಡುವುದು ಬೇಡ. ಅವರಿಂದ ಬೇಕಾದಷ್ಟು ಸೇವೆ ಮಾಡಿಸಿಕೊಳ್ಳೋಣ, ಉಪಕಾರ ಪಡೆದುಕೊಳ್ಳೋಣ ಆದರೆ ಹೆಣ್ಣು ಕೊಡುವುದು ಬೇಡ, ಬೇರೆಯವರಿಗೆ ಕೊಡೋಣ ಎಂಬ ಭಾವ ನಮ್ಮ ಸಮಾಜದಲ್ಲಿ ಇರುವುದನ್ನು ನೋಡಿದ್ದೇವೆ. ಪರಿವಾರದಲ್ಲಿ ಸೇವೆ ಮಾಡುವುದು ಹೆಗ್ಗಳಿಕೆಯ ಸಂಗತಿ ಹೊರತು ಕಡಿಮೆ ಅಲ್ಲ. ಅದಕ್ಕೆ ಸಾಕ್ಷಿ ಏನೆಂದರೆ ಯಾರು ಸೇವೆ ಮಾಡಿದ್ದಾರೋ ಅವರು ಪಡುವಂತಹ ಅಭಿಮಾನ, ಸಂತೋಷ ನೋಡಿದರೆ ತಿಳಿಯುತ್ತದೆ. ಇವತ್ತು ಕೆಲವು ಹಳೆಯ ಪರಿವಾರದವರು ಬಂದು ಪೂಜೆಯ ಹೊತ್ತಿನಲ್ಲಿ ಪರಿವಾರದ ಸಾಲಿನಲ್ಲಿ ಎಷ್ಟು ಸಂತೋಷದಿಂದ ಕುಳಿತಿದ್ದರು. ಕುಲಶೇಖರ ಆಳ್ವರ್ ಹೇಳುವ ಹಾಗೆ ಭಗವಂತನಿಗೆ ಒಬ್ಬ ಭಕ್ತ ಕೇಳಿಕೊಳ್ಳುವುದು ನನ್ನನ್ನು ಸೇವಕ ಎಂದು ನೆನಪಿಸಿಕೋ. ಅದು ಎಂತಹ ಸೇವಕನೆಂದರೆ ಸೇವಕನ ಸೇವಕನ ಸೇವಕನ ಸೇವಕ ಎಂದು. ‘ಸೇವೆಯಲ್ಲಿ ಸುಖವಿದೆ’ ಎಂಬ ಮಾತನ್ನು ಅನುಭವಿಸಿದವರು ಈ ಪರಿವಾರದವರು. ಪರಿವಾರದಲ್ಲಿ ನಿವೃತ್ತಿ ಎಂದು ಇಲ್ಲ. ಭಾರತೀಯ ಸೇನೆಯಲ್ಲಿ ಒಂದು ಪದ್ಧತಿ ಇದೆ, ಫೀಲ್ಡ್ ಮಾರ್ಷಲ್ ಎಂದು ಅವರಿಗೆ ನಿವೃತ್ತಿಯೇ ಇಲ್ಲ. ಅವರು ಸದಾ ಸೈನ್ಯದ ಒಂದು ಭಾಗವಾಗಿ ಇರುತ್ತಾರೆ. ಅದು ಅವರು ಮಾಡಿದ ಅಷ್ಟು ದೊಡ್ಡ ಕೆಲಸಕ್ಕೆ ಕೊಡುವ ಗೌರವ. ನಮ್ಮ ಪರಿವಾರವೂ ಕೂಡ ಹಾಗೇ. ಒಮ್ಮೆ ಪರಿವಾರಕ್ಕೆ ಒಬ್ಬರ ಪ್ರವೇಶವಾದರೆ, ಅವರು ಸದಾಕಾಲ ಪರಿವಾರದ ಸದಸ್ಯರಾಗಿಯೇ ಇರುತ್ತಾರೆ. ನಮ್ಮ ಪರಿವಾರದ ವಿಭೂತಿ ರಮೇಶ ಈ ವಯಸ್ಸಿನಲ್ಲಿ ಕೂಡ ಅತ್ಯಂತ ಉತ್ಸಾಹದಿಂದ ಸೇವೆ ಮಾಡುತ್ತಿದ್ದಾನೆ. ನಮ್ಮ ಪರಿವಾರದಲ್ಲಿ ಅತ್ಯಂತ ಚಿಕ್ಕವನು ಶ್ರೀಶ, ರಮೇಶ ವಯಸ್ಸನ್ನು ಮೀರಿ ಅವನಿಗಿಂತ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾನೆ. ನಮ್ಮ ಸ್ವಾಮಿಯಣ್ಣನಿಗೆ ಎಪ್ಪತ್ತು ವಯಸ್ಸಾಗಿರಬಹುದು. ಆದರೆ ಬದುಕಿಬಾಳಿದ ರೀತಿ, ಆತ ಮಾಡಿದ ಸೇವೆ ಶತಮಾನಗಳಿಗೆ ಸಾಕಾಗುವಷ್ಟು. ಒಮ್ಮೆ ಹೆಜ್ಜೆಯಿಂದ ಹೆಜ್ಜೆ ಇಡಲು ಕಷ್ಟವಾಗುವ ಸಂದರ್ಭ ಬಂದರೂ ವ್ಯಾಸಪೂಜೆಯ ದಿನ ಸ್ವಾಮಿಯಣ್ಣ ಪ್ರತ್ಯಕ್ಷ. ಬಂದು ಅಡುಗೆ ಮಾಡುತ್ತಿರುತ್ತಾನೆ. ಸೇವೆ ಎನ್ನುವುದು ಎಷ್ಟು ಶಕ್ತಿ ಕೊಡುತ್ತದೆ ಎನ್ನುವುದಕ್ಕೆ ಇವರೆಲ್ಲಾ ಅತ್ಯಂತ ದೊಡ್ಡ ನಿದರ್ಶನಗಳು. ಇವರು ಮಾಡುವ ಸೇವೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ. ಕಾಲ ಹೇಗೆ ಆಗಿದೆಯೆಂದರೆ ಚಾತುರ್ವರ್ಣ ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ , ಶೂದ್ರ ಇದೆಲ್ಲಾ ಹೋಗಿ ಒಂದೇ ವರ್ಣ ಇರುವ ಕಾಲವಿದು. ಎಲ್ಲರೂ ವೈಶ್ಯರೇ, ಎಲ್ಲರದ್ದೂ ವ್ಯಾಪಾರವೇ. ಪ್ರತಿಫಲಾಪೇಕ್ಷೆ ಇಲ್ಲದೆ ಏನೂ ಮಾಡದೆ ಇರುವ ಕಾಲವಿದು. ಯಾವುದೇ ಉದ್ಯೋಗಕ್ಕೆ ಸೇರುವುದಿದ್ದರೂ ಮೊದಲ ಪ್ರಶ್ನೆ, ಪ್ಯಾಕೇಜ್ ಅಥವಾ ಸಂಬಳ ಎಷ್ಟು? ಎಂದು. ಅದಿಲ್ಲದೆ ಯಾವ ಸಂದರ್ಶನವೂ ಪೂರ್ತಿಯಾಗುವುದಿಲ್ಲ. ಆದರೆ ಪರಿವಾರದವರು ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ಸೇವೆ ಮಾಡುತ್ತಾರೆ. ಅವರಿಗೆ ರಾಮದೇವರು ಕಡಿಮೆ ಮಾಡುವುದಿಲ್ಲ. ಅವರು ಇಲ್ಲಿ ಬಂದು, ಮುಳುಗಿ ಇಲ್ಲಿದ್ದು ಸೇವೆ ಮಾಡುತ್ತಾರೆ. ಹಾಗಾಗಿ ನೀವೆಲ್ಲರೂ ಅವರಿಗೆ ಗೌರವ ನೀಡಬೇಕು. ಸೇನೆಯಲ್ಲಿ ಹೆಚ್ಚು ಅಂದರೆ ಜೀವ ಕೊಡುವ ಸಂದರ್ಭ ಬರಬಹುದು, ಹಾಗೇ ಪರಿವಾರದಲ್ಲಿ ಜೀವನ ಕೊಡುವ ಸಂದರ್ಭ ಬರಬಹುದು, ಎರಡು ಒಂದೇ. ಒಮ್ಮೆ ಇಲ್ಲಿ ಬಂದ ಮೇಲೆ ದೂರ ಕಳಿಸುವ ಮನಸ್ಸು ನಮಗೆ ಇರುವುದಿಲ್ಲ, ದೂರ ಹೋಗುವ ಮನಸ್ಸು ಅವರಿಗೂ ಇರುವುದಿಲ್ಲ. ಕರ್ತವ್ಯವಶಾತ್, ಅನಿವಾರ್ಯವಾಗಿ ಹೋದರೂ ಸಹ ಮತ್ತೆ ತಿರುಗಿ ಬರುತ್ತಾರೆ. ಬೆಂಕಿಯ ಮಧ್ಯ ನಿಂತು ಮಾಡುವಂತಹ ಸೇವೆ. ಜಗತ್ತಿಗೇ ಬೆಳಕು ಕೊಡುವ ಜಾಗ ಅದರ ಬಿಸಿಯನ್ನು ಸ್ವೀಕರಿಸುತ್ತಾ. ಆದರೆ ಇಲ್ಲಿ ಒಂದು ವಿಶೇಷ ಇದೆ, ಆ ಬಿಸಿ ಅವರನ್ನು ಸುಡುವುದಿಲ್ಲ. ಪರಿವಾರದ ಸಂತೋಷ ನಮಗೆ ಪ್ರಶ್ನೆ ಕೇಳಿದ್ದ. ಸಂಸ್ಥಾನದ ಹತ್ತಿರದಲ್ಲಿ ಇದ್ದಾಗ ಕೆಲವು ಪಶ್ನೆಗಳು ಬರುತ್ತದೆ, ಹೀಗ್ಯಾಕೆ ಮಾಡಿದೆ ಎಂದು ಕೇಳುವ ಸಂದರ್ಭ ಬರುತ್ತದೆ, ಅದೆಲ್ಲಾ ನಮಗೆ ತೊಂದರೆಯಾಗಿ ಪರಿಣಮಿಸುತ್ತದಾ? ಆಶೀರ್ವಾದ ಪಡೆಯಬೇಕಾದ ಸ್ಥಳದಲ್ಲಿ ಅಚಾತುರ್ಯದಿಂದ ಕೋಪ ಬಂದರೆ ತೊಂದರೆ ಆಗಬಹುದಾ? ಎಂದು ಕೇಳಿದ್ದನು. ಹಾಗೇನು ಆಗುವುದಿಲ್ಲ, ಯಾರು ಚರಣಸೇವೆ ಮಾಡುತ್ತಾರೋ ಅವರಿಗೆ ಏನೂ ಆಗುವುದಿಲ್ಲ. ಆದರೆ ಹೊರಗಡೆಗೆ ಒಂದು ಸಣ್ಣ ಬೇಸರವು ಕೂಡ ದೊಡ್ಡ ಅನರ್ಥಕ್ಕೆ ಕಾರಣವಾಗಬಹುದು. ಮಠ ನಡೆಯಲು ಅನಿವಾರ್ಯವಾದ ಸಂಗತಿಗಳಲ್ಲಿ ಪರಿವಾರವು ಒಂದು. ಮಠ ನಡೆಯಲು ಗುರುಗಳು ಹೇಗೆ ಅನಿವಾರ್ಯವೋ ಅಷ್ಟೇ ಅನಿವಾರ್ಯ ಈ ಪರಿವಾರದವರೂ ಕೂಡ. ಗುರುಗಳು ಮಾಡುವ ರಾಮ ಸೇವೆಗೆ ಅವರು ಸಾಧನವಾಗಿ ಇರುವಂಥವರು. ಗುರುಸೇವೆಗೆ ದ್ವಾರವಾಗಿ ಮತ್ತು ದಾರಿಯಾಗಿರುವಂಥವರು. ಬೇರೆ ಮಠಗಳಿಗಿಂತ ನಮ್ಮ ಮಠದ ಪರಿವಾರ ತುಂಬಾ ಭಿನ್ನವಾಗಿದೆ. ಇಲ್ಲಿ ಎಲ್ಲರೂ ಸಾತ್ವಿಕರಾಗಿ, ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಇದು ಹಣ, ಅಧಿಕಾರದ ಮೂಲಕ ನಡೆಯುವ ವ್ಯವಸ್ಥೆ ಅಲ್ಲ, ಬದಲಾಗಿ ಪ್ರೀತಿ ವಿಶ್ವಾಸದ ಮೂಲಕ ನಡೆಯುವ ವ್ಯವಸ್ಥೆ. ಅವರು ಬಯಸುವುದು ಸಮಾಜದ ಪ್ರೀತಿ ವಿಶ್ವಾಸವನ್ನು, ಹಾಗಾಗಿ ಸಮಾಜ ಅವರನ್ನು ತಪ್ಪಾಗಿ ಭಾವಿಸಬಾರದು. ಸಾಧಕರಲ್ಲಿ ಒಂದು ಮಾತಿದೆ, ದೇವರನ್ನು ಸೇರಲಿಕ್ಕೆ ಯಾರು ದ್ವಾರ ಆಗುತ್ತಾರೋ, ಅವರನ್ನು ನೋಯಿಸಿದರೆ, ದೇವರ ಕೃಪೆ ಪ್ರಾಪ್ತವಾಗದೆ ಇರಬಹುದು. ಒಬ್ಬ ಮಹಾಗುರುವಿನ ಅಥವಾ ದೇವರ ಕೃಪೆ ಸಿಗುತ್ತದೆ ಎಂದರೆ ಅದಕ್ಕೆ ಕಾರಣ ಆದವರನ್ನು ಮರೆಯಬಾರದು, ನೋಯಿಸಬಾರದು. ಅವರು ನೂರ್ಕಾಲ ಚೆನ್ನಾಗಿ ಇರಲಿ ಮತ್ತು ಗುರುಸೇವೆಯನ್ನು ಮಾಡುವಂತೆ ಆಗಲಿ. ನಮ್ಮ ಶಾಸ್ತ್ರಿಗಳಿಗೆ ಮೂರು ಬಾರಿ ಅಪಘಾತವಾಗಿದೆ, ಸಕ್ಕರೆ ಕಾಯಿಲೆ ಇದೆ, ಒಂದು ಬಾರಿ ಹೃದಯಾಘಾತವಾಗಿದೆ, ಇಷ್ಟಾದರೂ ಅವರು ಒಂದು ದಿನಕ್ಕೆ ಮೂವತ್ತು ಪಾದಪೂಜೆ ಮಾಡಿಸಲು ತೊಂದರೆ ಇಲ್ಲ. ರಾಮನ ಕೃಪೆಯಿಂದ ಅವರಿಗೆ ಏನೂ ತೊಂದರೆಯಾಗಿಲ್ಲ. ಹೀಗೆ ನೀವೆಲ್ಲರೂ ನಿಷ್ಠೆಯಿಂದ ರಾಮಸೇವೆಯನ್ನು, ಗುರುಸೇವೆಯನ್ನು ಮಾಡಬೇಕು. ಯಾವತ್ತೂ ನಿವೃತ್ತರಾಗದೇ ಸದಾಕಾಲ ರಾಮಸೇವೆ, ಗುರುಸೇವೆ ಮಾಡುವಂತಾಗಲಿ ಎಂದು ಆಶೀರ್ವಾದ ಮಾಡುತ್ತೇವೆ. ಇವತ್ತು ದಿನೇಶ ಶಹಾರಾ ಅವರ ಸೇವೆ ಇತ್ತು. ಅವರು ಈ ಪರಿಸರದಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ ಮತ್ತು ಮಕ್ಕಳನ್ನು ಬೆಳೆಸುವ ಸಲುವಾಗಿ ಮೂವತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ್ದಾರೆ. ಅವರಿಗೂ ಶ್ರೇಯಸ್ಸನ್ನು ಹಾರೈಸುತ್ತೇವೆ. ನಾವು ಗುರುಪೂರ್ಣಿಮೆಯನ್ನು ಎಷ್ಟು ಪ್ರೀತಿಯಿಂದ ಭಾವಿಸಿ ಆಚರಿಸುತ್ತೇವೆಯೋ ಅದಕ್ಕಿಂತಲೂ ಹೆಚ್ಚಿನ ಭಾವದಿಂದ ಪರಿವಾರದವರು ಪರಿವಾರದ ಭಿಕ್ಷೆ ಆಚರಿಸುತ್ತಾರೆ. ಪರಿವಾರದ ಸಂತತಿ, ಸೇವಾಪ್ರವೃತ್ತಿ ಹೀಗೇ ಬೆಳೆಯಲಿ. ನಿಮಗೆಲ್ಲರಿಗೂ ಈ ಪರಿವಾರದ ಸೇವಾಭಾಗ್ಯ ದೊರಕಲಿ. ಎಲ್ಲರಿಗೂ ಒಳಿತಾಗಲಿ ಎಂದು ಆಶೀರ್ವದಿಸುತ್ತೇವೆ.

Facebook Comments Box