ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.

ಹುಟ್ಟು ಯಾವಾಗ ಸಂಭ್ರಮ?
ಸರಿಯಾದ ರೀತಿಯಲ್ಲಿ ಮಾನವ ಜನ್ಮವು ಬಳಕೆಯಾದಾಗ “ಹುಟ್ಟು” ಒಂದು ಸಂಭ್ರಮ!!

ಯಾರಿಂದ ಜನ್ಮವೋ, ಯಾರಿಂದ ಜೀವನವೋ, ಯಾರಿಂದ ಮರಣವೋ, ಈ ಜನ್ಮಜರಾಮರಣಗಳಿಂದ ದಾಟುವುದು ಕೂಡ ಯಾರ ಕೃಪೆಯಿಂದಲೇ ಸಾಧ್ಯವೋ, ಅಂತಹ ಪರಮಗುರವರನ ಚರಣಕಮಲಗಳನ್ನು ಮೊದಲಾಗಿ ನೆನೆಯುತ್ತೇವೆ.
ಜನ್ಮ, ಜನ್ಮದಿನ, ಆಚರಣೆ, ಸಂತೋಷ ಇವನ್ನೆಲ್ಲ ಗಮನಿಸಿದಾಗ ನಮ್ಮ ಮನಸ್ಸಿಗೆ ಬರುವುದೇನೆಂದರೆ, ನಮ್ಮ ದೇಶದ ಸಂಸ್ಕೃತಿ ಹೇಗಿದೆಯೆಂದರೆ, ನಮ್ಮಲ್ಲಿ ಹುಟ್ಟು ಸೂತಕ! ಸಾವು ಸಂಭ್ರಮವಾಗುವುದೂ ಉಂಟು! ಪರಮಾನಂದದಲ್ಲಿ ಒಂದು ಜೀವವು ಲೀನವಾದರೆ ಅದು ದುಃಖ ಪಡುವ ವಿಷಯವಲ್ಲ. ಸಾಮಾನ್ಯವಾಗಿ ಸಾವಿನಲ್ಲಿ ಶೋಕಾಚರಣೆಯನ್ನು ಕಾಣುತ್ತೇವೆ. ಆದರೆ ಸಾವೆಂಬುದು ಸಂಭ್ರಮದ ವಿಷಯ. ಆತ್ಮ ಪರಮಾತ್ಮನೊಡನೆ ಲೀನವಾಗುವ ಅಥವಾ ಲಿಂಗೈಕ್ಯವಾಗುವ ಸಮಯ, ಅದೊಂದು ಸಂಭ್ರಮ. ಕೆಲಸದಲ್ಲಿ ಹೇಗೆ ಪ್ರೊಮೋಶನ್ ಸುಖವನ್ನು ನೀಡುವುದೋ, ಜನ್ಮದಲ್ಲಿ ಪ್ರೊಮೋಶನ್ ಆಗುವಂತಹದ್ದೇ ಪರಮಾನಂದದಲ್ಲಿ ಲೀನವಾದಾಗ!

ಜನನ-ಮರಣಗಳೆರಡೂ ಬಂಧನಗಳೇ. ಹುಟ್ಟು ಕೂಡ ಒಂದು ಬಂಧನ!
ಹುಟ್ಟು ದುಃಖದ ವಿಚಾರ. ಹುಟ್ಟಿದಾಗ ಮಗು ಯಾಕೆ ಅಳುತ್ತದೆ? ಯಾಕೆಂದರೆ, ನಮ್ಮೆಲ್ಲರೊಂದಿಗೆ ಅದೂ ನಾವೆಲ್ಲಾ ಬಿದ್ದಿರುವ ಬಲೆಯಲ್ಲಿಯೇ ಬಂದು ಬಿದ್ದಿತು ಎಂಬ ಕಾರಣಕ್ಕಾಗಿ. ಅದೇ ಕಾರಣಕ್ಕಾಗಿ ನಾವು ಹುಟ್ಟಿನಲ್ಲಿ ಸೂತಕವನ್ನು ಆಚರಿಸುವಂತಹದ್ದು. ಬ್ರಹ್ಮಜ್ಞಾನಿಗಳಾದ ವಾಮದೇವರು ನಗುತ್ತಾ ಹುಟ್ಟಿದರಂತೆ! ಹಾಗೆ ನಗುತ್ತಲೇ ಹುಟ್ಟುವವರಿಗೆ ಸೂತಕವನ್ನು ಆಚರಿಸಬೇಕಾದ್ದಿಲ್ಲ.
“ಸೂ” ಎಂದರೆ ಜನ್ಮ, ಹುಟ್ಟಿದಾಗ ಸೂತಕ ಆಚರಿಸುವಂತೆಯೇ ಮರಣವನ್ನಪ್ಪಿದಾಗ ಮೃತಕವನ್ನು ಆಚರಿಸುವುದು. ಸಹಜ ಸಾವಿನಿಂದ ಮುಕ್ತಿ ಮಾರ್ಗ ದೊರಕಿದರೆ ಸಾವು ಸಂಭ್ರಮ. ಬೇರೊಂದು ರೀತಿಯಲ್ಲಿ ಸಾವಾಗಿ ಪುನಃ ಇನ್ನೊಂದು ಜನ್ಮ ಎಂಬುದಿದ್ದಲ್ಲಿ ಸೂತಕ-ದುಃಖಗಳು ಇರುತ್ತವೆ. ಯಾಕೆಂದರೆ ಆತ್ಮವು ಇನ್ನೊಂದು ಶರೀರವನ್ನು ಪಡೆದು ಮುಕ್ತಿಗಾಗಿ ಇನ್ನಷ್ಟು ಕಾಯಬೇಕಾಗಿರುತ್ತದೆ.

ಹೀಗೆ, ಬದುಕೆಂಬುದು ಸಾವಿನ ಕಡೆಗೆ ನಿರಂತರ ಪಯಣ. ಇಲ್ಲಿನ ಒಂದೊಂದು ಕ್ಷಣವೂ ನಮ್ಮನ್ನು ಸಾವಿನ ಕಡೆಗೆ ಒಯ್ಯುತ್ತಾ ಇರುವಂತಹದ್ದು. ಪ್ರತಿಯೊಂದು ಸೂರ್ಯೋದಯ ಸೂರ್ಯಾಸ್ತಗಳು ನಮ್ಮ ಆಯಸ್ಸಿನ ಕ್ಷಯವನ್ನು ಹೇಳುತ್ತವೆ. ಒಂದು ದಿನವನ್ನು ನಾವು ಕಳೆದುಕೊಂಡೆವು, ಅದು ಮತ್ತೆ ಬರುವುದಿಲ್ಲ ಎಂಬುದನ್ನು ನೆನಪಿಸುತ್ತವೆ. ವಾಲ್ಮೀಕಿ ರಾಮಾಯಣದಲ್ಲಿ ಹೇಳಿದಂತೆ ರಾಮನ ಮಾತು ಏನೆಂದರೆ,

ನನ್ದನ್ಯುದಿತಾದಿತ್ಯೇ ನನ್ದನ್ತ್ಯಸ್ತಮಿತೇ ರವೌ ।
ಆತ್ಮನೋ ನಾವಬುದ್ಧ್ಯಂತೇ ಮನುಷ್ಯಾ ಜೀವಿತಕ್ಷಯಂ ||

ಸೂರ್ಯನ ಉದಯಾಸ್ತಗಳಿಗೆ ಮನುಷ್ಯ ಸಂತೋಷ ಪಡುತ್ತಾನೆ; ಅದರೊಂದಿಗೆ ಅವನ ಜೀವಿತಾವಧಿಯೂ ಕ್ಷಯಿಸುತ್ತಾ ಹೋಗುತ್ತದೆ.

ಸಾವಿನತ್ತ ಪಯಣದಲ್ಲಿ ಹುಟ್ಟುಹಬ್ಬಾಚರಣೆ :

ಸಾವಿನ ಕಡೆಗಿನ ಈ ಪಯಣದಲ್ಲಿ ಹುಟ್ಟುಹಬ್ಬವನ್ನು ಆಚರಿಸಬೇಕೇ? ಆಚರಿಸುವುದಾದರೆ ಯಾವಾಗ ಆಚರಿಸಬಹುದು? ಎಂಬ ಪ್ರಶ್ನೆ!
ಹುಟ್ಟುಹಬ್ಬವನ್ನು ಎರಡು ಸಂದರ್ಭಗಳಲ್ಲಿ ಆಚರಿಸಬಹುದು. ಒಂದೋ, ಜೀವನವನ್ನು ಸಾಧನೆ, ಸತ್ಕಾರ್ಯಗಳಲ್ಲಿ ಕಳೆದು ಸಾರ್ಥಕಗೊಳಿಸಿರಬೇಕು. ಅಥವಾ, ನಮ್ಮ ಪಾಲಿಗೆ ಎಷ್ಟು ಹೋಯಿತು, ಎಷ್ಟು ಉಳಿಯಿತು ಎಂಬುದಾಗಿ ತಿಳಿಯಲು ಹುಟ್ಟುಹಬ್ಬವನ್ನು ಆಚರಿಸಬಹುದು.

ಜೀವನ ಅನಂತವೋ ಅಕ್ಷಯವೋ ಅಲ್ಲ. “ಕಾಲಃ ಕ್ರೀಡತಿ ಗಚ್ಛತ್ಯಾಯುಃ” ಎಂಬಂತೆ, ಸಮಯವು ಕಳೆದು ಹೋಗುತ್ತಾ ಇರುತ್ತದೆ. ಹದಿನೆಂಟನೇ ಹುಟ್ಟುಹಬ್ಬವನ್ನು ಹದಿನೆಂಟನೇ ಬಾರಿಯೂ ಆಚರಿಸಬಹುದಾದರೂ ಕೂದಲ ನೆರೆಗಳು ಪ್ರಾಯವನ್ನು ತೋರಿಸಿಕೊಡುತ್ತದೆ. ಕೂದಲಿಗೆ ಬಣ್ಣ ಬಳಿಯುತ್ತಾ ಕಣ್ಣಿಗೆ ಮಣ್ಣೆರಚುವುದುಂಟು. ಹೀಗೆ ಕಾಲವು ತಲೆ ಕುಟ್ಟಿ ಹೇಳಿದರೂ ನಾವು ಅದನ್ನು ಮುಚ್ಚುವುದುಂಟು.

ಯಕ್ಷಪ್ರಶ್ನೆಯ ಸಂದರ್ಭದಲ್ಲಿ, ಯಾವುದು ಅತ್ಯಂತ ಆಶ್ಚರ್ಯಕರ ಎಂಬ ಪ್ರಶ್ನೆಗೆ ಧರ್ಮರಾಯನು, ತನ್ನ ಮುಂದೆಯೇ ಅನೇಕರು ಸಾಯುತ್ತಾರೆ, ಅಕ್ಕಪಕ್ಕದವರೂ ಸಾಯುತ್ತಾರೆ. ಆದರೂ ಮನುಷ್ಯ ತಾನು ಮಾತ್ರ ಶಾಶ್ವತವೆಂದು ಭಾವಿಸುತ್ತಾ ಇರುತ್ತಾನೆ. ಇದಕ್ಕಿಂತ ಹೆಚ್ಚಿನ ಆಶ್ಚರ್ಯವೇನಿದೆ? ಎಂದು ಉತ್ತರಿಸಿದನಂತೆ.
ಹಾಗಾಗಬಾರದು. ಕಳೆದ ಲೆಕ್ಕ ಉಳಿದ ಲೆಕ್ಕಗಳು ಅಗತ್ಯವಾದದ್ದು. ನಾವು ಒಳ್ಳೆಯ ಕಾರ್ಯಗಳನ್ನು ಮಾಡಿದ ಪ್ರತಿಯೊಂದು ಕ್ಷಣವೂ ಅದು ಕಳೆದದ್ದಲ್ಲ, ಅದು ಉಳಿದದ್ದು. ಇನ್ನೆಷ್ಟು ಧರ್ಮಕಾರ್ಯಗಳನ್ನು ಮಾಡಬಹುದು ಎಂಬ ಗಣನೆ ನಮಗೆ ಬೇಕು. ಅಥವಾ ಇಷ್ಟು ಸಮಯ ಕಳೆದು ಹೋಯಿತು, ವ್ಯರ್ಥವಾಯಿತು.ಇನ್ನಾದರೂ ಸತ್ಕಾರ್ಯಗಳಲ್ಲಿ ತೊಡಗಬೇಕು ಎಂಬುದಕ್ಕಾಗಿ ಜನ್ಮದ ಲೆಕ್ಕವನ್ನು ನಾವು ಮಾಡಬೇಕಾಗುತ್ತದೆ. ಅದಲ್ಲದೇ ಇದ್ದರೆ ಸುಮ್ಮನೇ ಆಡಂಬರದ ಆಚರಣೆಗಳು ನಮ್ಮ ಕಣ್ಣಿಗೆ ನಾವೇ ಮರೆ ಮಾಡಿಕೊಳ್ಳುವುದು ಬಿಟ್ಟರೆ ಬೇರೆನಲ್ಲ. ಇದು ಮಾಯೆಯಲ್ಲದೆ ಮತ್ತೇನಲ್ಲ.

ಆಯಸ್ಸಿನ ಮೌಲ್ಯ:

ಆಯಸ್ಸೆಂಬುದು ಅತ್ಯಂತ ಅಮೂಲ್ಯವಾದದ್ದು ಹಾಗೂ ಶ್ರೇಷ್ಠವಾದದ್ದು. ಹುಟ್ಟು ಸಂಭ್ರಮವು ಯಾವ ಅರ್ಥದಲ್ಲಿ ಎಂದರೆ, ಮನುಷ್ಯ ಜನ್ಮ ಬಂದಿರುವುದೇ ಬಹಳ ದೊಡ್ಡ ಅವಕಾಶ. ಮನುಷ್ಯ ಮನಸ್ಸು ಮಾಡಿದರೆ ದೇವತೆ ಆಗಬಹುದು, ದೇವರೂ ಆಗಬಹುದು. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದೇವರು ದೇಹದ ಪೆಟ್ಟಿಗೆಯಲ್ಲಿ ಇಟ್ಟಿದ್ದಾನೆ. ಹಾಗಾಗಿ ಅದು ಸರಿಯಾಗಿ ಬಳಕೆಯಾದರೆ ಹುಟ್ಟು ಸಂಭ್ರಮವೇ. ಈ ಮಹಾ ಅವಕಾಶವನ್ನು ವ್ಯರ್ಥ ಮಾಡಿ ಕಳೆದರೆ, ಪಾಪಗಳನ್ನು ಮಾಡುತ್ತಾ ಕಳೆದರೆ ಅದು ಅನರ್ಥವಾಗಿಬಿಡುತ್ತದೆ. ಹಾಗಾಗಿ ಮುಂದೊಂದು ದಿನ ಪಶ್ಚಾತ್ತಾಪ ಪಡದ ರೀತಿಯಲ್ಲಿ ಪ್ರತಿಕ್ಷಣವನ್ನೂ ನಾವು ಬಳಸಿಕೊಳ್ಳಬೇಕು. ಕೊರಳಿಗೆ ಕಾಲವನ್ನು ಪಾಶ ಬಿದ್ದನಂತರ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ. ಕಾಲ ಮಿಂಚುವ ಮುನ್ನವೇ ಆಯಸ್ಸಿರುವಾಗ, ಕೈಕಾಲು ಕಣ್ಣುಗಳು ಗಟ್ಟಿಯಿದ್ದಾಗ ಆದಷ್ಟು ಸತ್ಕಾರ್ಯ ಮಾಡುವುದರಿಂದ ಭಗವತ್ಪ್ರೀತಿ ಸಂಪಾದನೆ ಸಾಧ್ಯ. ಯಾವ ಕಾರ್ಯದಿಂದ ಲೋಕಪ್ರೀತಿ, ಆತ್ಮ ಪ್ರೀತಿ, ಆತ್ಮತೃಪ್ತಿ ಸಾಧನೆ ಆಗಬಹುದೋ ಅಂತಹ ಕೆಲಸಕಾರ್ಯವನ್ನು ಮಾಡಬೇಕು. ಈ ರೀತಿಯಲ್ಲಿ ದಿನವು ನಡೆದರೆ ದಿನ ಉಳಿಯಿತು ಎಂದರ್ಥ. ಇಲ್ಲದಿದ್ದರೆ ದಿನ ಕಳೆಯಿತು ಎಂದರ್ಥ.

ಕೆಲಸ ಎಂದು ಬಂದಾಗ ವಿರಾಮದ ಕಲ್ಪನೆಯೂ ಬರುವುದು ಸಹಜವಾಗಿ ಹೋಗಿದೆ. ಆದರೆ ವಿರಮಿಸುವುದು ಎಂಬುದು ನಮ್ಮ ಸಂಸ್ಕೃತಿಯಲ್ಲಿ ನಮ್ಮ ಕಲ್ಪನೆಯಲ್ಲಿ ಇರದಿದ್ದ ಸಂಗತಿ, ಈಗಷ್ಟೇ ಅದರ ಜೋಡಣೆಯಾಗಿದೆ. ರಜೆಗಾಗಿ ಹೋರಾಟಗಳು ನಡೆಯುವ ಸಮಾಜವನ್ನು ನಾವು ಕಾಣುತ್ತಿದ್ದೇವೆ. ಈ ವಿರಾಮವನ್ನು ನಾವು ವೀಕೆಂಡ್ಗಳಲ್ಲಿ ನಿರೀಕ್ಷಿಸುತ್ತೇವೆ. ಹೆಸರೇ ಹೇಳುವಂತೆ ಅದು ವೀಕ್-ಎಂಡ್, ಸ್ಟ್ರಾಂಗ್ ಎಂಡ್ಗಳಲ್ಲ. ಅಪರೂಪದ ಅವಕಾಶವಾಗಿ ದೊರೆತ ಜೀವನವನ್ನು ಕಾಲಹರಣ ಮಾಡುತ್ತಾ ಕಳೆಯುವುದು. ವಾರ ಪೂರ್ತಿ ಮಾಡುವ ಕಾರ್ಯಗಳಿಂದ ಮಿಗಿಲಾದ ಯಾವುದಾದರೂ ಒಳ್ಳೆಯ ಕೆಲಸ ಮಾಡಿದರೆ ವಿರಾಮವೂ ಸಾರ್ಥಕವೇ. ಆದರೆ ಈ ವಿರಾಮ ಸಮಯದಲ್ಲಿ ಏನೇನೋ ಹುಚ್ಚುಹುಚ್ಚಾಗಿ ಮಾಡುವಂತಹದ್ದು ಈಗ ಚಾಲ್ತಿಯಲ್ಲಿರುವುದು. ನಾವು ಪ್ರತಿದಿನವನ್ನು ಸದ್ವಿನಿಯೋಗಗೊಳಿಸಬೇಕೇ ಹೊರತು ಆಯಸ್ಸೆಂಬ ಬಂಗಾರದ ದ್ರವವನ್ನು ಬೀದಿಗೆ ಚೆಲ್ಲಿದಂತೆ ನಡೆದುಕೊಳ್ಳಬಾರದು.

ಒಬ್ಬ ಯೋಧ ದೇಶಕ್ಕಾಗಿ ದೇಶರಕ್ಷಣೆಗಾಗಿ ತನ್ನ ಜೀವವೇ ಸ್ವಾಹಾ ಎನ್ನುತ್ತಾನೆ. ಇದು ಬಹಳ ಕಾಲ ಬದುಕಿದ್ದಕ್ಕಿಂತ ಹೆಚ್ಚಿನ ಪುಣ್ಯ ಸಂಪಾದಿಸುವಂತಹ ಕೆಲಸ. ಯೋಗಿ ಯೋಗದಿಂದ ಏನು ಸಾಧನೆ ಮಾಡುವುದನ್ನು ಯೋಧ ಯುದ್ಧದಿಂದ ಸಾಧನೆ ಮಾಡುತ್ತಾನೆ. ಕೊನೆಗೆ ಯೋಗಿ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆ ಯೋಧನೂ ಹೋಗಿ ಸೇರುತ್ತಾನೆ. ಇಬ್ಬರೂ ಸೂರ್ಯಮಂಡಲವನ್ನು ಮೀರಿಸಿ ಹೋಗುತ್ತಾರೆ. ಅಂತಹ ಮನುಷ್ಯರು ಬಹಳಕಾಲ ಬದುಕಬೇಕಂತಿಲ್ಲ. ಅವರು ಅಲ್ಪಕಾಲದಲ್ಲಿ ಮಹಾಪುಣ್ಯ ಸಂಪಾದನೆಯನ್ನು ಮಾಡಿರುತ್ತಾರೆ. ಜೀವನದಲ್ಲಿ ಪುಣ್ಯ ಮಾತ್ರವೇ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುವಂತೆಯೇ ಪಾಪ ಮಾತ್ರ ಮಾಡಿದಲ್ಲಿ ನರಕ ಪ್ರಾಪ್ತಿಯಾಗುತ್ತದೆ. ಎರಡೂ ಮಾಡಿದರೆ ಆತ್ಮವು ನರಲೋಕಕ್ಕೆ ಪುನಃ ಸೇರಿಬಿಡುವುದು. ಮತ್ತದೇ ಸುಖ-ದುಃಖದ ಜಾಲಕ್ಕೆ ಬಂದು ಬಿಡುವುದು.

ಜೀವನದ ಮಾರ್ಗವು ಬಹಳ ಕಂಟಕಾಕೀರ್ಣವಾಗಿರುತ್ತದೆ.
ಸುಖದ ಹಿಂದೆ ದುಃಖವಿರುವುದು ಸಹಜ. ಇಂದು ಸುಖವಾಗಿದ್ದು ನಾಳೆಯೂ ಆರಾಮವೆನ್ನಲು ಆಗುವುದಿಲ್ಲ. ಸುಖವೂ ಶಾಶ್ವತವಲ್ಲ ದುಃಖವೂ ಅಲ್ಲ. ನಮ್ಮೆಲ್ಲರ ಜೀವನದ ಹಾದಿ ಹೂ ಹಾಸಿದಂತಿರಲಿ ಎಂದು ಹಾರೈಸುತ್ತೇವೆ. ನಮ್ಮ ಜೀವನದ ಪರಮಲಕ್ಷ್ಯಕ್ಕೆ ಹೋಗುವ ಹಾದಿ ಸುಮಶಯಿ ಆಗಿರಲಿ, ದೇವರು ನಮಗೆ ದೀರ್ಘಾಯಸ್ಸು ಆರೋಗ್ಯವನ್ನು ಕೊಟ್ಟು ಕರುಣಿಸಲಿ ಎಂದು ಆಶಂಸನೆ ಮಾಡುತ್ತೇವೆ.

ಆರೋಗ್ಯ ಭಾಸ್ಕರಾದಿಚ್ಛೇತ್, ಆರೋಗ್ಯವು ಸೂರ್ಯನ ಇಚ್ಛೆಯಂತೆ. ಹಾಗಾಗಿ ಅರುಣ ನಮಸ್ಕಾರವನ್ನು ನಡೆಸಲಾಯಿತು. ಸೂರ್ಯ ಕರುಣಿಸಿದರೆ ಆರೋಗ್ಯಭಾಗ್ಯ ದೊರಕುವುದು. ಇಲ್ಲದಿದ್ದರೆ ಚಿನ್ನದ ಚಮಚ ಬಾಯಲ್ಲಿಟ್ಟು ಹುಟ್ಟಿ, ದೇಹ ಪೂರ್ತಿ ಖಾಯಿಲೆಗಳ ಗೂಡಾದರೆ ಏನೇನೂ ಪ್ರಯೋಜನವಿಲ್ಲ. ನೂರೆಂಟು ಅರುಣನಮಸ್ಕಾರ ಮಾಡಿದರೂ ಏನೂ ಆಗದಂತೆ ಸೃಷ್ಟಿಯಾಗಿರುವ ಶರೀರವು ಹದಿನೆಂಟು ನಮಸ್ಕಾರದಲ್ಲಿಯೇ ದಣಿದು ಹೋಗುತ್ತಿದೆ. ಹಾಗಾಗಿ ಜೀವನದಲ್ಲಿ ಆರೋಗ್ಯವು ಅತಿ ಅಗತ್ಯ, ಶ್ರೇಯಸ್ಸು ಕೂಡಾ ಅಗತ್ಯ. ಇದಕ್ಕೆಲ್ಲ ಕಾರಣವಾಗುವಂತಹ ಬುದ್ಧಿಯೂ ಅಗತ್ಯವಾಗಿದೆ. ಜೀವನವು ಹೂವಾಗಿ, ಮುಳ್ಳಿಲ್ಲದೆ ಆಗಲಿ. ನಾವು ಇನ್ನೊಬ್ಬರಿಗೆ ಹೂವನ್ನು ಬಯಸೋಣ, ಮುಳ್ಳನ್ನು ಬಯಸುವುದು ಬೇಡ. ಕೊಟ್ಟದ್ದು ತನಗೆ ಎಂಬಂತೆ ಹೂವನ್ನು ಕೊಡೋಣ. ಆಗ ನಮ್ಮ ಪಾಲಿಗೂ ಹೂವೇ ದೊರೆಯುತ್ತದೆ. ಕೊಟ್ಟದ್ದು ತಮ್ಮ ಪಾಲಿಗೆ, ಇಟ್ಟದ್ದಲ್ಲ ಎಂಬುದನ್ನು ಅರಿತುಕೊಳ್ಳೋಣ ಹಾಗೂ ಅರಿತು ಕೊಡೋಣ. ಯಾವುದು ಪ್ರಶಸ್ತವೋ, ಪ್ರಿಯವೋ ಆಗಿರುತ್ತದೆಯೋ ಅದನ್ನು ಕೊಡೋಣ. ಮುಳ್ಳಿಲ್ಲದ ಬದುಕು ನಮ್ಮ ಪಾಲಿಗೂ ಬಂದೊದಗುತ್ತದೆ.

Facebook Comments Box