ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.
ವಾಲ್ಮೀಕಿ ರಾಮಾಯಣದ ಬಾಲಕಾಂಡದ ಅತ್ಯಂತ ಆರಂಭದಲ್ಲಿ ಬರುವ ಪ್ರಜಾವರ್ಣನೆ; ಅಯೋಧ್ಯೆಯ ಪ್ರಜೆಗಳು ಹೇಗಿದ್ದರು ಎಂದು ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. “ತಸ್ಮಿನ್ ಪುರವರೇ ಹೃಷ್ಟಾಃ”, ನಗರಗಳ ಪೈಕಿಯಲ್ಲಿ ಆ ಕಾಲದಲ್ಲಿ ಅತ್ಯಂತ ಶ್ರೇಷ್ಠವಾದ ಅಯೋಧ್ಯಾ ನಗರಿಯ ಪ್ರಜೆಗಳು ಸಂತೋಷವಾಗಿದ್ದರು. ಅಲ್ಲಿಂದ ಪ್ರಜೆಗಳ ವರ್ಣನೆ ಆರಂಭ. ಸಾಮಾನ್ಯವಾಗಿ, ಯಾವುದು ತುಂಬಾ ಮುಖ್ಯ ಮತ್ತು ಖಚಿತವಾಗಿರುತ್ತದೆಯೋ, ಅದನ್ನು ಮೊದಲು ಹೇಳುವುದು. ಹಾಗಾಗಿ ವಾಲ್ಮೀಕಿಗಳು ಅಯೋಧ್ಯೆಯ ಪರಿಚಯವನ್ನು ಹೇಳಬೇಕಾದರೆ, ಮೊಟ್ಟಮೊದಲಿಗೆ ಅಲ್ಲಿ ಆನಂದವಿತ್ತು ಎಂದು ಹೇಳಿದ್ದಾರೆ.
“ಏನಿದ್ದರೇನು ಸಂತೋಷವಿಲ್ಲದಿದ್ದರೆ; ಏನಿಲ್ಲದಿದ್ದರೇನು ಸಂತೋಷವೊಂದಿದ್ದರೆ” ಎಂಬ ಮಾತಿದೆ. ಅಷ್ಟೈಶ್ವರ್ಯ, ರಾಜ್ಯಾಧಿಕಾರ ಎಲ್ಲ ಇದ್ದರೂ ನೆಮ್ಮದಿಯೇ ಇಲ್ಲದಿದ್ದರೆ ಏನುಪಯೋಗ? ಹಾಗೆಯೇ ಒಂದು ಸಣ್ಣ ಜೋಪಡಿಯಲ್ಲಿದ್ದರೂ, ಗಂಜಿ ಕುಡಿದು ಜೀವಿಸುತ್ತಿದ್ದರೂ ನೆಮ್ಮದಿಯಿದೆ ಎಂದರೆ, ನೆಮ್ಮದಿಯಿಲ್ಲದ ಸಿರಿವಂತಿಕೆಗಿಂತ ನೆಮ್ಮದಿಯ ಗಂಜಿಯೇ ಒಳ್ಳೆಯದು. ಏಕೆಂದರೆ “ಜೀವನದ ಸಾರವೇ ಸಂತೋಷ”. ಮನುಷ್ಯ ಪ್ರಾತಃಕಾಲದಿಂದ ಸಾಯಂಕಾಲದವರೆಗೆ, ಇಡೀ ಜೀವನ ದುಡಿಯುತ್ತಾನೆ, ಹೋರಾಟ ಮಾಡುತ್ತಾನೆ. ಇಷ್ಟೆಲ್ಲ ಪ್ರಯತ್ನ ಮಾಡುವುದು ನೆಮ್ಮದಿ, ಸಂತೋಷಕ್ಕಾಗಿ. ಹಸ್ತಿನಾವತಿಯ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ಪ್ರಾರ್ಥನೆ ಮಾಡಿದಾಗ ಕೃಷ್ಣನು ಅಕ್ಷಯ ವಸ್ತ್ರವನ್ನು ಕರುಣಿಸುತ್ತಾನೆ. ಆಗ ಆಕೆ ಹೀಗೆನ್ನುತ್ತಾಳೆ, “ಕೃಷ್ಣ, ನೀನಿದ್ದ ಮೇಲೆ ಬೇರೆ ರಕ್ಷಕರು ಯಾಕೆ ಬೇಕು? ನೀನಿಲ್ಲದಿದ್ದರೆ ಬೇರೆ ರಕ್ಷಕರಿಂದ ಏನು ಪ್ರಯೋಜನ?” ಎಂದು. ಅವಳ ಗಂಡಂದಿರಾದ ಪಾಂಡವರು ಎಂತಹ ಸಮರ್ಥರಾಗಿದ್ದರೂ ದ್ರೌಪದಿ ಹೇಳುವ ಮಾತಿದು. ಹಾಗೆಯೇ ಜೀವನದಲ್ಲಿ ಸಂತೋಷವೊಂದಿದ್ದರೆ ಸಾಕು, ಬೇರೇನಿಲ್ಲದಿದ್ದರೂ ತೊಂದರೆಯಿಲ್ಲ, ಸಂತೋಷ ಇರದಿದ್ದರೆ ಬೇರೇನಿದ್ದರೂ ಅರ್ಥವಿಲ್ಲ.
ಅಯೋಧ್ಯೆಯಲ್ಲಿ ಸಂತೋಷವಿತ್ತು. ಪ್ರಭುತ್ವದ ಮಾನದಂಡ, ಆಡಳಿತ ಚೆನ್ನಾಗಿದೆಯೋ ಇಲ್ಲವೋ ಎನ್ನುವುದಕ್ಕೆ ಮಾನದಂಡ ಪ್ರಜೆಗಳ ಸಂತೋಷ. ಯಾವ ರಾಜ್ಯದ ಪ್ರಜೆಗಳು ಸುಖವಾಗಿದ್ದಾರೋ, ಆ ರಾಜ್ಯದ ಆಡಳಿತ ತುಂಬಾ ಚೆನ್ನಾಗಿದೆ ಎಂದರ್ಥ. ಎಲ್ಲಿ ಪ್ರಜೆಗಳು ಸುಖವಾಗಿಲ್ಲ, ನೆಮ್ಮದಿಯಾಗಿಲ್ಲ, ಅಲ್ಲಿ ಆಡಳಿತ ಚೆನ್ನಾಗಿಲ್ಲವೆಂದರ್ಥ. “ಪ್ರಜೆಗಳ ಸುಖವೇ ಪ್ರಭುತ್ವದ ಮಾನದಂಡ.” ಇವತ್ತಿನ ಕಾಲದಲ್ಲಿ ಒಂದು ರಾಷ್ಟ್ರ ಎಷ್ಟು ಚೆನ್ನಾಗಿದೆ, ಎಷ್ಟು ಸಮೃದ್ಧವಾಗಿದೆ ಎಂದು “ಜಿಡಿಪಿ” ಮೂಲಕ ತೀರ್ಮಾನ ಮಾಡುತ್ತಾರೆ. ಆದರೆ ಭೂತಾನ್ ರಾಷ್ಟ್ರ ಮಾತ್ರ “ಜಿಎನ್ಹೆಚ್” ಲೆಕ್ಕಾಚಾರ ಮಾಡುತ್ತದೆ. ಜಿಎನ್ಹೆಚ್ ಎಂದರೆ “ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್”. ಭೂತಾನ್ ಪುಟ್ಟ ರಾಷ್ಟ್ರವಾದರೂ ಹಣದ ಲೆಕ್ಕಾಚಾರ ಹಾಕುವುದಿಲ್ಲ, ಬದಲಿಗೆ ಪ್ರಜೆಗಳ ಸಂತೋಷವನ್ನು ಅಳೆಯುತ್ತದೆ. ಅವರಿಗೆ ಭಾರತದ ಸೈನ್ಯವೇ ಸೈನ್ಯ, ಅವರಿಗೇ ಆದ ಸೈನ್ಯವೊಂದಿಲ್ಲ. ಅವರ ರಕ್ಷಣೆ ನಮ್ಮದೇ ರಾಷ್ಟ್ರದ ಹೊಣೆ. ಆದರೆ ಆ ರಾಷ್ಟ್ರವನ್ನು ಮುನ್ನಡೆಸುವಂತಹವರ ಚಿಂತನೆ ಎಷ್ಟು ಚೆನ್ನಾಗಿದೆ ಎಂದರೆ ಪ್ರಜೆಗಳು ಎಷ್ಟು ಸುಖ, ಸಂತೋಷದಿಂದ ಇದ್ದಾರೆ ಎಂದು ಲೆಕ್ಕ ಮಾಡಿ ರಾಷ್ಟ್ರ ಅಷ್ಟು ಚೆನ್ನಾಗಿದೆ ಎಂದು ಅಳೆಯುತ್ತಾರೆ. ಪ್ರತಿ ವರ್ಷ “ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್” ತಯಾರಿ ಮಾಡಲಾಗುತ್ತದೆ. ಯಾವ ಯಾವ ರಾಷ್ಟ್ರದ ಪ್ರಜೆಗಳು ಎಷ್ಟು ಖುಷಿಯಾಗಿದ್ದಾರೆ ಎಂದು ಅಳತೆ ಮಾಡುವ ಮಾಪನ. ಅದರಲ್ಲಿ ಯಾವಾಗಲೂ ಡೆನ್ಮಾರ್ಕ್, ಫಿನ್ಲ್ಯಾಂಡ್ ಇವೆಲ್ಲ ತುಂಬಾ ಮುಂದಿರುತ್ತದೆ. ಫಿನ್ಲ್ಯಾಂಡ್ ಮೊದಲನೇ ಸ್ಥಾನ, ಡೆನ್ಮಾರ್ಕ್ ಎರಡನೇ ಸ್ಥಾನ, ಅಮೇರಿಕ ಹದಿನೈದನೇ ಸ್ಥಾನ, ಜರ್ಮನಿ ಹದಿನಾರನೇ ಸ್ಥಾನದಲ್ಲಿದ್ದರೆ ನಮ್ಮ ಭಾರತ 126ನೇ ಸ್ಥಾನದಲ್ಲಿದೆ! ಒಟ್ಟು ಸಮೀಕ್ಷೆ ನಡೆಯುವ 136 ರಾಷ್ಟ್ರಗಳ ಪೈಕಿಯಲ್ಲಿ, ಸಂತೋಷದ ಅಳತೆಗೋಲನ್ನು ನೋಡಿದರೆ ನಮ್ಮ ಭಾರತದ ಸ್ಥಾನ 126! ನಮಗಿಂತ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮುಂದಿದೆ. ಭಾರತ ಇವೆಲ್ಲಕ್ಕಿಂತ ಹಿಂದಿದೆ. ಮೊದಲು ಹೀಗಿರಲಿಲ್ಲ.
ಅಯೋಧ್ಯೆಯಲ್ಲಿ ರಾಮ, ದಶರಥರ ಆಡಳಿತ ಕಾಲದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸುಖವಾಗಿ ನೆಮ್ಮದಿಯಾಗಿದ್ದರು. ರಾಮನ ವರ್ಣನೆ ಮಾಡುವಾಗ ವಾಲ್ಮೀಕಿ ಮಹರ್ಷಿಗಳು ಹೀಗೆನ್ನುತ್ತಾರೆ, ಅವನ ರಾಜ್ಯದಲ್ಲಿ ಯಾರಿಗೆ ಸಂತೋಷವಾದರೂ, ರಾಮನಿಗೆ ಸಂತೋಷವಾಗುತ್ತಿತ್ತು. ಯಾರಿಗೆ ನೋವಾದರೂ ರಾಮನಿಗೆ ನೋವಾಗುತ್ತಿತ್ತು. ಅಲ್ಲಿ ದುಡ್ಡಿಗಿಂತ ಸಂತೋಷ, ನೆಮ್ಮದಿ ಮುಖ್ಯವಾಗಿತ್ತು. ರಾಜನಿಗೆ ಬೊಕ್ಕಸದ ಲೆಕ್ಕಕ್ಕಿಂತ, ಸೈನ್ಯದ ಬಲಕ್ಕಿಂತ, ಪ್ರಜೆಗಳ ಸೌಖ್ಯ, ನೆಮ್ಮದಿ ಮುಖ್ಯವಾಗಿತ್ತು.
ಡೆನ್ಮಾರ್ಕ್ ದೇಶದಲ್ಲಿ ಒಂದು ವಿಶೇಷ ಪರಿಕಲ್ಪನೆಯಿದೆ. “ಹೂಗಾ” ಎಂದು ಒಂದು ಉತ್ಸವ ಆಚರಣೆ ಮಾಡುತ್ತಾರೆ. ಅದೇನೆಂದರೆ ಕೆಲವಾರು ಮಂದಿ ಒಟ್ಟಾಗಿ ಸೇರಿ ಸಣ್ಣ ಸಣ್ಣ ವಸ್ತುಗಳಿಂದ ಸಂತೋಷಪಡುತ್ತಾರೆ. ಸಾಯಂಕಾಲದಲ್ಲಿ ಮೊಂಬತ್ತಿ ಹಚ್ಚಿ, ಎಲ್ಲರೂ ಬ್ರೆಡ್ ಹಂಚಿ ತಿನ್ನುವುದು, ಚಳಿಯಲ್ಲಿ ಬೆಚ್ಚನೆ ಹೊದಿಕೆ ಹೊದ್ದು ಮಲಗುವುದು, ಬಿಸಿ ಬಿಸಿ ಚಹಾವನ್ನು ಎಲ್ಲರೂ ಸೇರಿ ಖುಷಿಯಿಂದ ಕುಡಿಯುವುದು, ಇಂತಹ ಸಣ್ಣ ಸಣ್ಣ ಸಂಗತಿಗಳನ್ನು ಆಸ್ವಾದನೆ ಮಾಡುತ್ತಾರೆ. ಇದು ಎಷ್ಟು ವ್ಯಾಪಿಸಿದೆಯೆಂದರೆ ಆ ರಾಷ್ಟ್ರದ ಸಂತೋಷದ ಸ್ತರವೇ ಮೇಲೆ ಹೋಗುವಷ್ಟು. ನಮ್ಮಲ್ಲಿ ಆ ಪರಿಕಲ್ಪನೆ ಕಡಿಮೆಯಿದೆ. ಸಂತೋಷ ಪಡಬೇಕೆಂದರೆ ಅಷ್ಟೈಶ್ವರ್ಯವಿರಬೇಕಿಲ್ಲ, ಒಂದು ಕಮಲದ ಹೂ ಅರಳುವುದನ್ನು ನೋಡಿ, ಒಂದು ಸಣ್ಣ ಮಲ್ಲಿಗೆಯ ಪರಿಮಳವನ್ನು ಆಸ್ವಾದಿಸಿ ಖುಷಿ ಪಡಬಹುದು. ಅದೇ ಚಿನ್ನದ ಹೂವಾದರೆ ಅದಕ್ಕೆ ಪರಿಮಳವೂ ಇರುವುದಿಲ್ಲ. ಪರಿಮಳ, ಸ್ವಾದ ಇವೆಲ್ಲ ಇರಬೇಕೆಂದರೆ ಅದು ಪ್ರಾಕೃತಿಕವಾಗಿರಬೇಕು. ಇಂತಹ ನೂರಾರು ಸಣ್ಣ ವಿಷಯಗಳಿಂದ ಸಂತೋಷವಾಗಿರಬಹುದು. ನಾವೆಲ್ಲಾ ಹಾಗೆ ಸಂತೋಷವಾಗಿರುವುದನ್ನು ಕಲಿಯಬೇಕು.
ಹಿಂದೆ ನಮ್ಮ ಭಾರತದಲ್ಲಿ ಇಂತಹ ವಾತಾವರಣ ತುಂಬಾ ಚೆನ್ನಾಗಿತ್ತು. ಭಾರತದ ಪೂರ್ವಪ್ರಶಾಸನವು ಪ್ರಜೆಗಳ ಸುಖ, ಪ್ರಜೆಗಳ ಆನಂದವನ್ನು ಗಮನದಲ್ಲಿಟ್ಟು ಆಡಳಿತ ನಡೆಸುತ್ತಿದ್ದರು. ಸೂರ್ಯವಂಶದವರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಈ ಹ್ಯಾಪಿನೆಸ್ ಇಂಡೆಕ್ಸ್ ಇದ್ದಿದ್ದರೆ, ಭಾರತ ಮೊದಲನೇ ಸ್ಥಾನದಲ್ಲಿರುತ್ತಿತ್ತು.
ಸಂತೋಷ ಎನ್ನುವುದು ಎಲ್ಲಿಂದ ಬರುತ್ತದೆ ಎಂದರೆ ವಾಲ್ಮೀಕಿ ಮಹರ್ಷಿಗಳು ಹೇಳುತ್ತಾರೆ, “ಸುಖದ ಕಾರಣಗಳು ಎರಡು: ಧರ್ಮ ಮತ್ತು ಜ್ಞಾನ”. ಧರ್ಮದಿಂದ ಮತ್ತು ಜ್ಞಾನದಿಂದ ಸುಖವೇ ಹೊರತು ನೋಟು, ನಾಣ್ಯಗಳಿಂದಲ್ಲ, ವಸ್ತು, ಒಡವೆಗಳಿಂದಲ್ಲ. ವೇದವ್ಯಾಸರು ಒಂದು ಕಡೆಗೆ ಅದ್ಭುತವಾದ ಮಾತನ್ನು ಹೇಳುತ್ತಾರೆ, “ಊರ್ಧ್ವ ಬಾಹುಃ ವಿರೋಮ್ಯೇಷಃ ನ ಚ ಕಶ್ಚಿತ್ ಶೃಣೋತು ಮಾಮ್. ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ”, ಎರಡೂ ಕೈ ಮೇಲೆತ್ತಿ, ದೊಡ್ಡ ಸ್ವರದಲ್ಲಿ ಕೂಗಿ ಹೇಳುತ್ತಿದ್ದೇನೆ, ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಧರ್ಮದಿಂದಲೇ ಸಂಪತ್ತು ಮತ್ತು ಸಂತೋಷ. ಯಾಕೆ ನೀವು ಧರ್ಮವನ್ನು ಆಶ್ರಯಿಸುವುದಿಲ್ಲ, ಧರ್ಮವೊಂದಿದ್ದರೆ ಸುಖ ಸ್ಥಿರವಾಗಿರುತ್ತದೆ ಎಂದು ಎತ್ತರದ ಜಾಗಕ್ಕೆ ಹೋಗಿ ಕೂಗಿ ಹೇಳಿದರು.
ಅಯೋಧ್ಯೆಯ ರಾಜರು ಒಂದು ಶಾಸನವನ್ನು ಮಾಡಿದರು. ಯಾರೂ ಧರ್ಮವನ್ನು ಮೀರುವಂತಿಲ್ಲ, ಅದನ್ನು ಮೀರಿದರೆ ದಂಡನೆ. ಮತ್ತೆ ಪ್ರಜೆಗಳನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದ್ದರು. ಹೇಗೆ ಸುಖಪಡಬೇಕು, ನೆಮ್ಮದಿಯ ಸೂತ್ರ ಯಾವುದು ಎಂಬುದರ ಬಗ್ಗೆ ಸಾಮಾನ್ಯ ಜನರಿಗೂ ಕೂಡ ಶಿಕ್ಷಣ ಕೊಡುತ್ತಿದ್ದರು. ಶಾಸನ ಮತ್ತು ಶಿಕ್ಷಣ, ಈ ಎರಡು ಕಾರಣಗಳಿಂದ ಅಯೋಧ್ಯೆ ಅತ್ಯಂತ ಸುಖವಾಗಿತ್ತು.
ಇವತ್ತಿನ ಶಿಕ್ಷಣ, ಹೆಚ್ಚು ಅಂಕ ಪಡೆದು, ದೊಡ್ಡ ಉದ್ಯೋಗ ಪಡೆದು, ಹೆಚ್ಚು ಹಣ ಸಂಪಾದನೆ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತದೆ ಅಷ್ಟೇ. ಜೀವನದಲ್ಲಿ ಹೇಗೆ ಒಳ್ಳೆಯವರಾಗಿರಬೇಕು, ಹೇಗೆ ಧರ್ಮಮಾರ್ಗದಲ್ಲಿದ್ದು, ಸುಖವಾಗಿರಬೇಕು ಎಂದು ಮಕ್ಕಳಿಗೆ ಹೇಳಿಕೊಡಬೇಕು. ಇಲ್ಲದಿದ್ದರೆ ಆ ಶಿಕ್ಷಣ ಪೂರ್ಣವಲ್ಲ. ಅಯೋಧ್ಯೆಯಲ್ಲಿ ಶಾಸನ ಮತ್ತು ಶಿಕ್ಷಣ, ಇವೆರಡೂ ಪ್ರಜೆಗಳ ಸುಖಕ್ಕೆ ಕಾರಣ. ಎಲ್ಲರೂ ಧರ್ಮ ಮಾರ್ಗದಲ್ಲಿದ್ದಾಗ ಯಾರೊಬ್ಬರೂ ನೋಯಲಿಕ್ಕೆ ಸಾಧ್ಯವಿಲ್ಲ. ಒಬ್ಬ ಇನ್ನೊಬ್ಬನನ್ನು ನೋಯಿಸಲಿಕ್ಕೆ ಧರ್ಮಮಾರ್ಗವನ್ನು ಮೀರಬೇಕಾಗುತ್ತದೆ. ಎಲ್ಲರೂ ಧರ್ಮಮಾರ್ಗದಲ್ಲಿ ಇದ್ದರೆ ಒಬ್ಬರು ಇನ್ನೊಬ್ಬರನ್ನು ನೋಯಿಸುವ ಪ್ರಮೇಯವೇ ಬರುವುದಿಲ್ಲ. ಅಧರ್ಮಕ್ಕೆ ಅವಕಾಶವೇ ಇರದ ಹಾಗೆ ಮಾಡುವ ಶಾಸನವಿದ್ದರೆ ದುಃಖದ ಮೂಲವನ್ನೇ ನಾಶಮಾಡಿದಂತೆ. ಇದೊಂದು ಕಾರಣವಾದರೆ ಮತ್ತೊಂದು ಕಾರಣ ಜನರು ತಿಳುವಳಿಕೆಯುಳ್ಳವರಾಗಿದ್ದರು. ಬದುಕು ಎಂದರೇನು, ಮನಸ್ಸನ್ನು ಹೇಗಿಟ್ಟುಕೊಳ್ಳಬೇಕು ಎಂದು ಹಿರಿಯರು ಕಿರಿಯರಿಗೆ ತಿಳಿಸಿ ಹೇಳುತ್ತಿದ್ದರು. ಅಯೋಧ್ಯೆಯ ಅರಸರು ಪ್ರಜೆಗಳಿಗೆ ಯಾವ ಸಮೃದ್ಧಿಯನ್ನೂ ಕಡಿಮೆ ಮಾಡಲಿಲ್ಲ. ಆದರೆ ನೆಮ್ಮದಿಗೆ ಅದು ಕಾರಣವಲ್ಲ, ಶಿಕ್ಷಣ ಕಾರಣ.
ಯೋಗಶಾಸ್ತ್ರದಲ್ಲಿ ಸಂತೋಷವನ್ನು ಒಂದು ಸಾಧನೆಯಾಗಿ ತಿಳಿಸಲ್ಪಟ್ಟಿದೆ. ಯೋಗಶಾಸ್ತ್ರದ ಒಂದು ಅದ್ಭುತವಾದ ವಾಕ್ಯವಿದೆ, “ಸನ್ನಿಹಿತ ಸಾಧನಾತ್ ಅಧಿಕಸ್ಯ ಅನುಪಾದಿತ್ಸ” ಎಂದರೆ ನಮ್ಮ ಬಳಿ ಏನಿದೆಯೋ ಅದನ್ನು ಬಿಟ್ಟು ಬೇರೊಂದು ವಸ್ತುವಿನ ಬಗ್ಗೆ ನಮಗೆ ಇಚ್ಛೆ ಇಲ್ಲದೇ ಇರುವಂತದ್ದು. ಯಾವುದು ನಮ್ಮ ಬಳಿ ಇದೆಯೋ ಅದರಲ್ಲಿ ಸಂತೋಷವಾಗಿರಬೇಕು. ಇದನ್ನು ಸಾಧನೆ ಮಾಡಿದರೆ ಜಗತ್ತಿನಲ್ಲಿ ಕಳ್ಳತನವೇ ಇರುವುದಿಲ್ಲ. ಮೊದಲೇ ಹೇಳಿದ ಹಾಗೆ “ಸಾಕೆಂದವನು ಶ್ರೀಮಂತ, ಬೇಕೆಂದವನು ಬಡವ”. ಯಾರಿಗೆ ತೃಪ್ತಿ ಇದೆಯೋ, ಅವನೇ ಶ್ರೀಮಂತ, ಯಾರಿಗೆ ಅತೃಪ್ತಿ ಇದೆಯೋ, ಅವನೇ ಬಡವ.
ಒಮ್ಮೆ ಭರ್ತೃಹರಿ ಮತ್ತು ಒಬ್ಬ ದೊರೆ ಮುಖಾಮುಖಿಯಾಗುತ್ತಾರೆ. ರಾಜ ತನ್ನ ಸಂಪತ್ತಿನ ಗತ್ತಿನಲ್ಲಿದ್ದಾನೆ, ಭರ್ತೃಹರಿ ಸರಳ ಜೀವಿ. ಹಣಕಾಸಿನ ದೃಷ್ಟಿಯಿಂದ ರಾಜನಲ್ಲಿ ಬೆಟ್ಟವೇ ಇದೆ, ಭರ್ತೃಹರಿಯಲ್ಲಿ ಪರಮಾಣುವೂ ಇಲ್ಲ. ಅವರಿಬ್ಬರ ಮಧ್ಯದಲ್ಲಿ ಅಷ್ಟು ವ್ಯತ್ಯಾಸವಿದೆ. ಆಗ ಭರ್ತೃಹರಿ ರಾಜನಿಗೆ ಒಂದು ಮಾತನ್ನು ಹೇಳುತ್ತಾನೆ, “ವಯಮಪಿ ಪರಿತುಷ್ಟಾಃ ವಲ್ಕಲೈಃ, ತ್ವಂ ದುಕೂಲೈಃ | ಸಮ ಇಹ ಪರಿತೋಷಃ ನಿರ್ವಿಶೇಷೋ ವಿಶೇಷಃ ||” ಎಂದು. ಹಾಗೆಂದರೆ, ದೊರೆಯೇ, ನಾನು ಸರಳವಾದ ನಾರುಬಟ್ಟೆಯುಟ್ಟು ಸಂತೋಷ ಪಡುತ್ತೇನೆ, ನೀನು ಪೀತಾಂಬರವುಟ್ಟು ಸಂತೋಷ ಪಡುತ್ತೀಯೆ. ಆದರೆ ಇಬ್ಬರೂ ಪಡುವ ಸಂತೋಷದಲ್ಲಿ ವ್ಯತ್ಯಾಸವೇನೂ ಇಲ್ಲ. ಅದರಲ್ಲೇನೂ ವಿಶೇಷತೆಯಿಲ್ಲ ಎಂದು. ಮನುಷ್ಯ ಹಣ ಸಂಪಾದನೆಗೋಸ್ಕರ ಮಾಡಬಾರದ ಪಾಪಗಳನ್ನೆಲ್ಲ ಮಾಡುತ್ತಾನೆ. ಆದರೆ ಸಂತೋಷ ಪಡುವುದಕ್ಕೆ ಅದೆಲ್ಲ ಮಾಡುವ ಅಗತ್ಯವಿಲ್ಲ ಎಂದು ಗೊತ್ತಾದರೆ ಆ ಪಾಪಗಳೆಲ್ಲ ತಪ್ಪಬಹುದು. ಹಾಗೆಯೇ ಭರ್ತೃಹರಿಯು ಹೇಳಿದ್ದಾನೆ,
“ಸದುಭವತಿ ದರಿದ್ರೋ ಯಸ್ಯ ತೃಷ್ಣಾ ವಿಶಾಲಾ” ಯಾರಿಗೆ ಬೇಕು ಬೇಕು ಎಂಬ ಅಪೇಕ್ಷೆ ಇದೆಯೋ ಅವರೇ ದರಿದ್ರರು. ಯಾರಿಗೆ ತೃಪ್ತಿ ಇದೆಯೋ ಅವನೇ ಶ್ರೀಮಂತ.
ಕಥೆ:
ಒಂದೂರಿನಲ್ಲಿ ಒಬ್ಬ ಸಂತ ಹೋಗುತ್ತಿರುವಾಗ ಸಂತನಿಗೆ ನಾಣ್ಯವೊಂದು ಬಿದ್ದುಕೊಂಡು ಕಾಣುತ್ತದೆ. ಆತ ಸಂತನಾದ್ದರಿಂದ ಆತನಿಗೆ ಅದರ ಅವಶ್ಯಕತೆಯಿಲ್ಲ. ಸಂತನಿಗೆ ಬೇಕಾದದ್ದು ಕೇವಲ “ಕರತಲ ಭಿಕ್ಷಃ ತರುತಲ ವಾಸಃ” ಮಾತ್ರ. ಹಾಗಾಗಿ ನಾಣ್ಯವನ್ನು ಅತ್ಯಂತ ಅಗತ್ಯವುಳ್ಳ ಯಾರಿಗಾದರೂ ಕೊಡುವುದಾಗಿ ಚಿಂತಿಸುತ್ತಾನೆ. ನಾಣ್ಯವನ್ನು ಯಾರಲ್ಲಿ ಕೊರತೆಯಿದೆ ಅವರಿಗೆ ಕೊಡುವುದಾಗಿ ತೀರ್ಮಾನಿಸಿ ಮುಂದೆ ಸಾಗುತ್ತಾನೆ. ಅಂತಹವರನ್ನು ಹುಡುಕುತ್ತಾ ಆ ರಾಜ್ಯ ಪೂರ್ತಿ ಸುತ್ತಿದನಂತೆ. ಆದರೆ ಆ ರಾಜ್ಯ ಹೇಗಿತ್ತೆಂದರೆ ಯಾರಿಗೂ ಯಾವ ಅಪೇಕ್ಷೆಯೂ ಇರಲಿಲ್ಲ, ಯಾವ ಅಗತ್ಯವೂ ಇರಲಿಲ್ಲ, ಎಲ್ಲರೂ ತೃಪ್ತಿಯಾಗಿ ಉಂಡುಟ್ಟು ಸುಖವಾಗಿದ್ದರು. ಕೊನೆಗೆ ಊರಿನಿಂದ ಬರಬೇಕಾದರೆ ಊರಿನ ರಾಜನ ಭೇಟಿಯಾಗುತ್ತದೆ. ರಾಜನು ಸೈನ್ಯ ಸಮೇತ ಪಕ್ಕದ ರಾಜ್ಯವನ್ನು ಆಕ್ರಮಿಸಿ ತನ್ನ ಆಧೀನಕ್ಕೆ ತರಲು ಸಿದ್ಧನಾಗಿದ್ದನು. ಸಂತನನ್ನು ಕಂಡಾಗ ಬಳಿ ಬಂದು ಯುದ್ಧಕ್ಕೆ ಹೊರಟ ತನಗೆ ಆಶೀರ್ವದಿಸಬೇಕಾಗಿ ಕೇಳಿಕೊಂಡನು. ಸಂತ ತಕ್ಷಣ ಆ ನಾಣ್ಯವನ್ನು ರಾಜನಿಗೆ ನೀಡಿದನು. ಬೇಕಾದಷ್ಟು ಸಂಪತ್ತುಳ್ಳ ತನಗೆ ಸಂತನೇಕೆ ಒಂದು ನಾಣ್ಯ ನೀಡಿರುವುದಾಗಿ ರಾಜನು ಪ್ರಶ್ನಿಸಿದನು. ಅದಕ್ಕೆ ಸಂತನು ಹೇಳುತ್ತಾನೆ, ಎಲ್ಲಿ ಕೊರತೆ ಉಳ್ಳವರು ಕಂಡು ಬರುತ್ತಾರೋ, ಇದ್ದಿದ್ದು ಸಾಲದು ಎಂಬವರು ದೊರಕಿದಾಗ ಅವರಿಗೆ ಈ ಬಿದ್ದು ಸಿಕ್ಕಿದ ನಾಣ್ಯವನ್ನು ಕೊಡುವುದಾಗಿ ತೀರ್ಮಾನಿಸಿದ್ದುದರ ಕುರಿತು ಹೇಳುತ್ತಾನೆ. ಆ ಕೂಡಲೇ ರಾಜನ ಕಣ್ಣು ತೆರೆಯುತ್ತದೆ. ತನ್ನಲ್ಲಿ ಈಗಾಗಲೇ ಸಾಕಷ್ಟು ರಾಜ್ಯವಿದೆ, ಪ್ರಜೆಗಳು ಸಂತೋಷದಿಂದಿದ್ದಾರೆ, ಇದರಲ್ಲಿಯೇ ಸಂತೃಪ್ತಿ ಕಾಣಬೇಕೆಂಬ ಅರಿವಾಗುತ್ತದೆ. ‘ಬಹುಶ್ರುತಾಃ’, ಎಂದರೆ ಹಿರಿಯರಿಂದ, ಅನುಭವಸ್ಥರಿಂದ ಇಂತಹ ಮಾತುಗಳನ್ನು ಕೇಳುವುದರಿಂದ ಮನಸ್ಸಿಗೊಂದು ಶಿಕ್ಷಣ ಸಿಗುವಂತದ್ದು. ಇಂತಹ ಶಿಕ್ಷಣವಿದ್ದರೆ ಮತ್ತೇನೂ ಅಗತ್ಯವಿಲ್ಲ. ತುಂಬ ಸರಳ ಜೀವನ ಮಾಡುತ್ತಲೂ ಖುಷಿಯಾಗಿರಬಹುದು.
ಯಾರೋ ಒಬ್ಬ ಆರಾಮದಲ್ಲಿ ಮಲಗಿರುವ ಸಂತನನ್ನೆಬ್ಬಿಸಿ, ದುಡಿದು ಸಂಪಾದಿಸಿ ಹಣಗಳಿಸಬೇಕು , ಆಗ ನೆಮ್ಮದಿ ಸಿಗುತ್ತದೆ ಎಂದನಂತೆ. ನಾನೀಗಾಗಲೇ ನೆಮ್ಮದಿಯಿಂದ ಇದ್ದೇನಲ್ಲ ಎಂಬುದಾಗಿ ಸಂತನೆಂದನಂತೆ. ನೆಮ್ಮದಿ ಸಂತೋಷಕ್ಕಾಗಿ ಹಣವೇ ಮುಖ್ಯವಲ್ಲ.
ಔರಂಗಜೇಬನು ಹಣದಾಸೆಯಿಂದ ತಂದೆಯನ್ನು, ಒಡಹುಟ್ಟಿದವರನ್ನು ಕೊಂದುಬಿಟ್ಟ. ರಾಜ್ಯ, ಐಶ್ವರ್ಯಗಳು ಸುಖವನ್ನೇ ಕೊಡಬೇಕು ಎಂದೇನಿಲ್ಲ. ಹಣವು ಹೆಚ್ಚಾದರೆ ಅಹಂಕಾರ, ಕಡಿಮೆ ಆದರೆ ಹಾಹಾಕಾರ. ಅದಕ್ಕಾಗಿಯೇ ಎಷ್ಟು ಬೇಕೋ ಅಷ್ಟೇ ಇರಬೇಕು. ಅಷ್ಟನ್ನೇ ಇಟ್ಟುಕೊಳ್ಳಬೇಕು. ಉಡಬೇಕು, ಉಣಬೇಕು ವಿನಃ ಹೆಚ್ಚು ಹಣ ಇಟ್ಟುಕೊಳ್ಳಲೇಬಾರದು. ಪಾತ್ರವು ನೀರನ್ನು ತುಂಬಿಸುವಾಗ ಅದರ ಯೋಗ್ಯತೆಗೆ ಅನುಸಾರವಾಗಿ ನೀರನ್ನು ಇಟ್ಟುಕೊಳ್ಳುತ್ತದೆ. ನೀರು ಹೆಚ್ಚಾದರೆ ಹೊರಚೆಲ್ಲಿ ಹೋಗುತ್ತದೆ. ಅಂತೆಯೇ ನಾವೂ. ಹೆಚ್ಚೆಚ್ಚು ಹಣದ ಭಾರವನ್ನು ಹೊತ್ತರೆ ಕುಸಿದು ಬಿಡಬಹುದು. ಹಾಗಾಗಿ ‘ಹೆಚ್ಚು ಹಣ, ಹೆಚ್ಚು ಸುಖ’ ಎಂಬುದು ತಪ್ಪು. ‘ಹೆಚ್ಚು ಹಣ, ಹೆಚ್ಚು ಸಮಸ್ಯೆ, ಹೆಚ್ಚು ಆಪತ್ತು’.
ಶಂಕರಾಚಾರ್ಯರು ಹೇಳುತ್ತಾರೆ “ಪುತ್ರಾದಪಿ ಧನಭಾಜಾಂ ಭೀತಿಃ”, ಹಣವುಳ್ಳವರಿಗೆ ಮಕ್ಕಳಿಂದಲೂ ಭಯವಂತೆ. ಅದಕ್ಕಾಗಿಯೇ, ಸನ್ನಿಹಿತ ಅಂದರೆ ನಮ್ಮ ಬಳಿ ಇರುವುದರಲ್ಲಿಯೇ ಸಮಾಧಾನವನ್ನು ಕಾಣಬೇಕು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? ಅದಲ್ಲ ಜೀವನ, ಇರುವುದರಲ್ಲಿ ಸಂತೃಪ್ತಿ ಪಡುವುದು ಜೀವನ. ಮತ್ತೊಂದು ಮುಖ್ಯ ವಿಷಯವೇನೆಂದರೆ ನಮ್ಮ ಜೀವನದಲ್ಲಿ ಏನೇ ಆದರೂ ಒಳ್ಳೆಯದಕ್ಕೇ ಆಗುವುದು ಎಂಬ ವಿಶ್ವಾಸವಿರಬೇಕು.
ಕಥೆ
ಒಂದೂರಿನ ರಾಜನಿಗೆ ಒಬ್ಬ ಮಂತ್ರಿ ಇದ್ದನು. ಆ ಮಂತ್ರಿಗೆ ಎಲ್ಲ ವಿಷಯಕ್ಕೂ ಒಳ್ಳೆಯದಾಯಿತು ಎಂದು ಹೇಳುವ ಅಭ್ಯಾಸ. ಹೀಗೊಂದು ದಿನ ರಾಜನ ಬೆರಳು ತುಂಡಾದಾಗ ಮಂತ್ರಿಯು ಎಂದಿನಂತೆ ಒಳ್ಳೆಯದಾಯಿತು ಎಂದನು. ಸಿಟ್ಟುಗೊಂಡ ರಾಜನು ಮಂತ್ರಿಗೆ ಕಾರಾಗೃಹ ವಾಸದ ಶಿಕ್ಷೆ ನೀಡುತ್ತಾನೆ. ಬಳಿಕ
ಬೇಟೆಗಾಗಿ ಹತ್ತಾರು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಅಲ್ಲಿ ಗುಂಪಿನಿಂದ ಕಳೆದುಹೋದ ರಾಜ ಕಾಡಿನೊಳಗೆ ಉಳಿದುಬಿಡುತ್ತಾನೆ. ಕಾಪಾಲಿಕರ ಕೈಗೆ ಸಿಕ್ಕಿದ ರಾಜನನ್ನು ಅವರು ಕಾಳಿಯ ಪೂಜೆಯ ಕೊನೆಗೆ ನರಬಲಿ ನೀಡುವುದಕ್ಕಾಗಿ ತೆಗೆದುಕೊಂಡು ಹೋಗುತ್ತಾರೆ. ಬಲಿಕೊಡುವುದಕ್ಕೂ ಮುನ್ನ ರಾಜನು ಸಂಪೂರ್ಣನಾಗಿ ದೇವರಿಗೆ ಬಲಿಕೊಡಲು ಅರ್ಹನೋ ಎಂದು ಪರೀಕ್ಷಿಸುತ್ತಾರೆ. ಬಲಿ ಕೊಡುವಾಗ ಸಂಪೂರ್ಣವಾಗಿರಬೇಕು, ಎಲ್ಲಾ ಅಂಗಾಂಗಗಳೂ ಇರಬೇಕು.
ಅಪೂರ್ಣವಾಗಿರುವುದನ್ನು ದೇವರಿಗೆ ಅರ್ಪಿಸುವುದಿಲ್ಲ. ಹೀಗೆ ಪರೀಕ್ಷಿಸುವಾಗ ರಾಜನ ಒಂದು ಬೆರಳು ಇಲ್ಲದಿರುವುದರಿಂದ ರಾಜನು ಬಲಿಕೊಡಲು ಯೋಗ್ಯನಲ್ಲ ಎಂಬುದು ಸಾಬೀತಾಗುತ್ತದೆ. ಕಾಪಾಲಿಕರು ರಾಜನನ್ನು ಬಿಟ್ಟು ಬಿಡುತ್ತಾರೆ. ರಾಜ್ಯಕ್ಕೆ ತೆರಳಿದ ರಾಜನು ಮೊದಲಿಗೆ ಮಂತ್ರಿಯನ್ನು ಜೈಲಿನಿಂದ ಕರೆತರಿಸುತ್ತಾನೆ. ಒಳ್ಳೆಯದಾಯಿತು ಎಂದದ್ದು ಸುಮ್ಮನೆ ಅಲ್ಲ ಎಂಬುದು ರಾಜನಿಗೆ ಅರ್ಥವಾಯಿತು. ಬೆರಳು ತುಂಡಾದದ್ದು ಕೊರಳುಳಿಸಲು ಎಂಬುದು ತಿಳಿಯಿತು. ಆದರೆ ಮಂತ್ರಿ ಜೈಲಿಗೆ ಹೋದದ್ದರಲ್ಲಿ ಏನು ಒಳಿತಾಯಿತು ಎಂದು ಪ್ರಶ್ನಿಸುತ್ತಾನೆ. ಒಂದು ವೇಳೆ ಮಂತ್ರಿ ಜೈಲಿಗೆ ಹೋಗದಿದ್ದರೆ, ರಾಜನೊಂದಿಗೆ ಕಾಡಿಗೆ ಹೋಗುತ್ತಿದ್ದನು, ರಾಜನ ಜೊತೆಗಿದ್ದ ಮಂತ್ರಿಯ ಅಂಗಗಳು ಪರಿಪೂರ್ಣವಾಗಿದ್ದುದರಿಂದ ಕಾಪಾಲಿಕರು ಮಂತ್ರಿಯನ್ನು ಬಲಿಕೊಡಬಹುದಾಗಿತ್ತು ಎಂಬುದನ್ನು ಮಂತ್ರಿ ರಾಜನಿಗೆ ಹೇಳುತ್ತಾನೆ. ನಮ್ಮ ಜೀವನದಲ್ಲಿ ಏನೇ ಬಂದರೂ ‘ಯಾವ ರೀತಿಯಿಂದ ಇದು ಒಳ್ಳೆಯದು’ ಎಂದು ನೋಡುವ ದೃಷ್ಟಿ ಬಂದರೆ ಅಲ್ಲಿಂದ ನೆಮ್ಮದಿಯ ಜೀವನ ಪ್ರಾರಂಭವಾಗುತ್ತದೆ. ಕೆಡುಕು ಕೂಡ ನಮ್ಮ ಪಾಲಿಗೆ ಒಳಿತಾಗಿ ಪರಿಣಮಿಸುತ್ತದೆ. ದೇವರು ಯಾವ ಕಾರಣಕ್ಕೂ ಕೆಟ್ಟದ್ದು ಮಾಡುವುದಿಲ್ಲ ಎಂಬ ವಿಶ್ವಾಸವಿರಬೇಕು.
ಪಟ್ಟವೇರುವ ರಾಮ ಬೆಟ್ಟ ಸೇರಿದ..
ಇದರಲ್ಲಿ ದೇವರು ಯಾವ ಒಳಿತನ್ನು ಹುದುಗಿಸಿ ಇಟ್ಟಿದ್ದಾನೆ ಎಂದು ನೋಡುವ ಕಣ್ಣು ಬೇಕು. ರಾಮ ಕಾಡಿಗೆ ಹೋದ ಕಾರಣ ಲೋಕಕ್ಕೇ ಒಳ್ಳೆಯದಾಯಿತು. ಲೋಕಕ್ಕೆ ರಾಮಾಯಣ ತಿಳಿಯುವಂತಾಯಿತು. ರಾಮನಿಗೇನು ಒಳಿತಾಯಿತು? ಎಂದರೆ, ಸರ್ವರಿಗೂ ಒಳಿತಾದರೆ ಅದುವೇ ರಾಮನಿಗೂ ಸಂತೋಷ ಎಂಬುವುದನ್ನು ನೋಡಲು ಶಕ್ಯವಾಗುವ ಕಣ್ಣುಗಳು ಬೇಕು.
ಯೋಗದಲ್ಲಿ ಒಂದು ಮಾತಿದೆ :
“ಸರ್ವತಃ ಸಂಪದಸ್ತಸ್ಯ
ಸಂತುಷ್ಟಂ ಯಸ್ಯ ಮಾನಸಂ”
ಯಾರ ಮನಸ್ಸು ಸಂತುಷ್ಟವಾಗಿರುತ್ತದೋ ಅವರಿಗೆ ಎಲ್ಲೆಡೆಯಿಂದ ಸಂಪತ್ತು, ಎಲ್ಲವೂ ಸಂಪತ್ತು. ಉದಾಹರಣೆಗೆ ಭೂಮಿಯಲ್ಲಿ ಕಲ್ಲುಮುಳ್ಳುಗಳಿವೆ, ನಡೆಯುವ ವೇಳೆ ಕಾಲಿಗೆ ನೋವುಂಟಾಗುತ್ತದೆ ಎಂದು ಇಡೀ ಭೂಮಿಗೆ ಚಪ್ಪಲಿ ಹೊಲಿಸಲು ಸಾಧ್ಯವಿಲ್ಲ. ನಮ್ಮ ಕಾಲಿಗೆ ಚಪ್ಪಲಿ ಹಾಕಿಕೊಳ್ಳಲು ಆಗುತ್ತದೆ ಹಾಗೂ ಅದರಿಂದ ಕಲ್ಲುಮುಳ್ಳುಗಳು ತಾಗುವ ಸಮಸ್ಯೆಯೂ ದೂರವಾಗುತ್ತದೆ. ಅಂತೆಯೇ, ಪ್ರಪಂಚದಲ್ಲಿ ಸಮಸ್ಯೆಯಿದೆ ಎಂಬ ಕಾರಣಕ್ಕೆ ಇಡೀ ಪ್ರಪಂಚವನ್ನು ಬದಲಾಯಿಸಲು ಹೊರಟರೆ ಅದು ಶಕ್ಯವಲ್ಲ, ಬದಲಾಗಿ ನಮ್ಮಲ್ಲಿ ಪುಟ್ಟ ಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ನಮ್ಮ ಮೂಗಿನ ನೇರಕ್ಕೆ ಪ್ರಪಂಚ ಬದಲಾಗುವುದಿಲ್ಲ, ಹಾಗೊಂದು ವೇಳೆ ಬದಲಾಯಿಸಲು ಹೊರಟರೆ ತಿರುಗಿ ನಮಗೆ ನೋವು ಬರುತ್ತದೆ.
ಸಂತೋಷ :
ಸಂತೋಷವೆಂಬುದು ಆಗುವುದು ಮಾತ್ರವಲ್ಲ, ನಾವೇ ಅದನ್ನು ಮಾಡಿಕೊಳ್ಳಬಹುದು. ಶರೀರದಲ್ಲಿ ಡೋಪಮೈನ್, ಸೆರೊಟೋನಿನ್, ಎಂಡೋರ್ಫಿನ್ಸ್, ಓಕ್ಸಿಟೋಸಿನ್ ಎಂಬ ನಾಲ್ಕು ಹಾರ್ಮೋನ್ ಬಿಡುಗಡೆಯಾದಾಗ ಸಂತೋಷವಾಗುತ್ತದೆ.
ಒಳ್ಳೆಯ ಹಾಡನ್ನು ಆಲಿಸುವಾಗ ನಾವು ಈ ಹಾರ್ಮೋನ್ಗಳನ್ನುಂಟು ಮಾಡಿಕೊಳ್ಳಬಹುದು, ಸಂತೋಷಪಡಬಹುದು. ಒಂದು ಹೊಸ ಪೆನ್ನು ದೊರೆತರೆ, ಅಂತಹ ಸಂತೋಷ ಎರಡು ದಿನಗಳ ಕಾಲ ಇರಬಹುದು ಮತ್ತೆ ಕ್ಷೀಣಿಸುತ್ತಾ ಹೋಗುತ್ತದೆ. ಅದೇ ಗುರುಗಳ ಆಶೀರ್ವಾದ ಬಯಸಿ ಪಡೆದಾಗ ಆದಂತಹ ಸುಖ, ಅದು ಶಾಶ್ವತವಾಗಿರುತ್ತದೆ. ವಸ್ತುಗಳಿಂದ ದೊರೆಯುವಂತಹ ಸಂತೋಷ ಕೇವಲ ಕ್ಷಣಿಕ. ಅನುಭೂತಿಯಿಂದ ಪಡೆಯುವಂತಹ ಸಂತೋಷ ಶಾಶ್ವತವಾದಂತದ್ದು. ಇದು ವಿಜ್ಞಾನ ಪ್ರತಿಪಾದಿಸುವಂತದ್ದು.
ಹಾಗಿದ್ದರೆ ಯಾವತ್ತೂ ಸಂತೋಷವಾಗಿರುವುದಕ್ಕೆ ಸೂತ್ರ ಏನು?
ಯಾವತ್ತೂ ಸಂತೋಷವಾಗಿರುವುದಕ್ಕೆ ಇರುವ ಸೂತ್ರವೊಂದೇ. ಅದು ಸಂತೋಷದಿಂದ ಇರುತ್ತೇನೆ ಎಂಬ ತೀರ್ಮಾನ ಮಾಡುವುದು. ಏನೇ ಬರಲಿ ನಾನು ಸಂತೋಷದಿಂದಲೇ ಇರುತ್ತೇನೆ ಎಂಬ ತೀರ್ಮಾನ. ಇನ್ನು ಕೆಲವರು ಬೇಜಾರು ಮಾಡಿಕೊಳ್ಳಲು ಕಾರಣ ಹುಡುಕುತ್ತಾ ಇರುತ್ತಾರೆ, ಖುಷಿ ಪಡಲು ನೂರು ಕಾರಣವಿದ್ದರೂ ಸಣ್ಣ ವಿಷಯವೊಂದಕ್ಕೆ ಅಳುತ್ತಾ ಕೂರುತ್ತಾರೆ. ಅಂತಹವರನ್ನು ಬ್ರಹ್ಮ ಬಂದರೂ ಉದ್ಧಾರ ಮಾಡಲು ಸಾಧ್ಯವಿಲ್ಲ.
ಒಬ್ಬರು ಯಕ್ಷಗಾನ ತಾಳಮದ್ದಳೆ ಕಲಾವಿದರು ಇದ್ದರು. ಅವರು ಬಹಳ ಕೋಪದ ಸ್ವಭಾವದವರು, ಯಾವುದಾದರೊಂದು ಕಾರಣ ಹುಡುಕಿ ಸಿಟ್ಟು ಮಾಡಿಕೊಂಡಿರುತ್ತಿದ್ದರು. ಅವರು ಹೇಳುವಂತೆ ಅವರು ಅವರ ತಂದೆಗಿಂತ ವಾಸಿಯಂತೆ. ಯಾಕೆಂದರೆ ಅವರ ತಂದೆ ಸಿಟ್ಟುಗೊಂಡ ಬಳಿಕ ಕಾರಣ ಹುಡುಕುತ್ತಿದ್ದರು. ಮೊದಲು ಸಿಟ್ಟು ಮಾಡಿ ಕಾರಣವನ್ನು ಆಮೇಲೆ ಹುಡುಕುವುದು!
ಸಂತರೊಬ್ಬರ ಸೂಕ್ತಿಯಿದೆ,
ಒಂದು ನಿಮಿಷ ಕೋಪ ಮಾಡಿದರೆ, 60 ಸೆಕೆಂಡುಗಳ ಸಂತೋಷ ಹೋಗುತ್ತದೆ ಎಂದು. ಕೆಲವು ಬಾರಿ ಸಿಟ್ಟೊಂದೇ ಕೊನೆಯ ದಾರಿಯಾಗಿ ಕಂಡು ಸಿಟ್ಟುಗೊಂಡರೆ, ಅದು ಸಾತ್ವಿಕ ಕ್ರೋಧವಾಗಿರುತ್ತದೆ. ಶತ್ರುಗಳು ನಮ್ಮನ್ನು ದುಃಖಗೊಳಿಸಲು ನೂರು ಷಡ್ಯಂತ್ರಗಳನ್ನು ಮಾಡಬಹುದು. ಅವರ ಎದುರು ಎಂದಿಗೂ ನಾವು ನಗುನಗುತ್ತಾ ಇರಬೇಕು.
ನಗು ಎಲ್ಲಿರುತ್ತದೆ, ಖುಷಿ ಎಲ್ಲಿರುತ್ತದೆ ಎಂಬುದಕ್ಕೆ ಒಂದು ಕಥೆ:
ಜೋಯ್ ವಿಲ್ ಎಂಬ ಒಂದು ಹಳ್ಳಿಯಲ್ಲಿ ಒಬ್ಬಳು ಹುಡುಗಿಯ ನಗು ಕಳೆದು ಹೋಯಿತು. ಊರಿನ ಜನರೆಲ್ಲ ಸೇರಿ ಊರಿನ ಪೂರ್ತಿ ಹುಡುಕಿದರೂ ನಗು ಸಿಗಲಿಲ್ಲ. ಕೊನೆಗೆ ಹುಡುಗಿಯು ಒಂದು ಮರದ ಬುಡದಲ್ಲಿ ಹೋಗಿ ಕುಳಿತುಕೊಳ್ಳುತ್ತಾಳೆ. ಆಗ ಹಿರಿಯರೊಬ್ಬರು ಬಂದು ಆಕೆಯ ಕಿವಿಯಲ್ಲಿ ಏನೋ ಹೇಳುತ್ತಾರೆ. ಆ ಕೂಡಲೇ ಅವಳು ಜೋರಾಗಿ ನಕ್ಕುಬಿಡುತ್ತಾಳೆ. ಅವರು ಹೇಳಿದ ಮಾತೇನೆಂದರೆ, “ನಿನ್ನ ನಗು ನಿನ್ನೊಳಗೆಯೇ ಇದೆ” ಎಂಬುದಾಗಿ.
ನಮ್ಮ ನಗು ನಮ್ಮ ಅಂತಃಕರಣದಲ್ಲಿಯೇ ಇದೆ.
ಸಂತೋಷ ನಮ್ಮಲ್ಲಿಯೇ ಇರುತ್ತದೆ. ನಾವು ಎಂದೂ ಸಂತೋಷದಿಂದ ಇರುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಪರಮಾತ್ಮನ ಸ್ವರೂಪವೇ ಸಂತೋಷ. ಸಂತೋಷವು ಪರಮಾತ್ಮನ ಒಂದು ತುಣುಕು. ನಾವೆಲ್ಲರೂ ಸಂತೋಷದಿಂದಿದ್ದರೆ ರಾಮ ದೇವರಿಗೂ ಸಂತೋಷವಾಗುತ್ತದೆ.
ಯಾಕೆಂದರೆ ನಾವೆಲ್ಲರೂ ಶ್ರೀರಾಮನ ಪ್ರಜೆಗಳು. ಪ್ರಜೆಗಳ ಸಂತೋಷವೇ ರಾಮದೇವರ ಸಂತೋಷ.
|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa
ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ ‘ಭಾವ~ರಾಮಾಯಣ’ ವೇ ರಾಮಾಯಣ ಪಾಠದ ಪಠ್ಯ.
ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254
Leave a Reply