ವಾಲ್ಮೀಕಿ ರಾಮಾಯಣ: ಭಾಗ – 40

ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.

ಸಂಪತ್ತು ಇದ್ದಲ್ಲಿ ಆಪತ್ತು, ಎಲ್ಲೆಲ್ಲಿ ಸಂಪತ್ತು ಇರುತ್ತದೆಯೋ ಅಲ್ಲೆಲ್ಲಾ ಆಪತ್ತು ಇರುತ್ತದೆ. ಆದರೆ ಆಪತ್ತು ಇದ್ದಲ್ಲೆಲ್ಲಾ ಸಂಪತ್ತು ಇರಬೇಕೆಂದಿಲ್ಲ. ಸಕ್ಕರೆ ಇದ್ದಲ್ಲಿ ಇರುವೆ ಬರುವ ಹಾಗೆ ಸಂಪತ್ತು ಇದ್ದಲ್ಲಿ ಕಳ್ಳರು ಬರುತ್ತಾರೆ, ಪಾಲುದಾರರು ಬರುತ್ತಾರೆ, ಸರ್ಕಾರ ಬರುತ್ತದೆ. ಸಂಪತ್ತು ಬರುವ ಮೊದಲು ನೆಮ್ಮದಿ ಇರುತ್ತದೆ. ಸಂಪತ್ತು ಬಂದ ಮೇಲೆ ನೆಮ್ಮದಿ ಕಳೆದು ಹೋಗುತ್ತದೆ. ಸಂಪತ್ತಿನ ಜೊತೆಗೆ ಒಂದು ದೊಡ್ಡ ಹೊಣೆಗಾರಿಕೆ ಅಥವಾ ಜವಾಬ್ದಾರಿ ಬರುತ್ತದೆ.ಪಂಚತಂತ್ರದಲ್ಲಿ ಒಂದು ಮಾತಿದೆ,”ಅರ್ಥಾನಾಂ ಆರ್ಜನೇ ದುಃಖಂ” ಅಂದರೆ ಸಂಪತ್ತನ್ನು ಪಡೆಯುವಾಗ ತುಂಬಾ ಕಷ್ಟಗಳು ಬರುತ್ತವೆ.”ಆರ್ಜಿತಾನಾಂ ಚ ರಕ್ಷಣೇ”  ಹಾಗೆ ಪಡೆದ ಮೇಲೆ ಸಂಪತ್ತನ್ನು ಉಳಿಸಿಕೊಳ್ಳುವುದು ಕೂಡ ಕಷ್ಟವೇ, ಆ ನಂತರ ಅದನ್ನು ಖರ್ಚು ಮಾಡುವ ಸಂದರ್ಭ ಬಂದಾಗ ನೋವು, ಬೇಸರ ಉಂಟಾಗುತ್ತದೆ.

ದಾನದಲ್ಲಿ ‘ರಾಜಸದಾನ’ ಎಂಬ ಒಂದು ವಿಭಾಗವಿದೆ. ಕೊಟ್ಟು ಕಷ್ಟ ಪಡುವಂತದ್ದು ಅಥವಾ ಅಯ್ಯೋ ಕೊಡಬೇಕಲ್ಲ! ಎಂದು ಬೇಜಾರು ಮಾಡಿಕೊಂಡು ಕೊಡುವಂತದ್ದು, ಅದು ರಾಜಸದಾನ. ಖುಷಿಯಿಂದ ಕೊಟ್ಟರೆ ಅದು ‘ಸಾತ್ವಿಕದಾನ’. ಹೀಗೆ ಪಂಚತಂತ್ರವು ‘ಸಂಪತ್ತಿಗೆ ಧಿಕ್ಕಾರ’ ಎಂದು ಹೇಳುತ್ತದೆ. ಸಂಪತ್ತು ಎಂದರೆ ಕಷ್ಟ ಎಂದು ಘೋಷಣೆ ಮಾಡಿದೆ. ಅಷ್ಟು ದೊಡ್ಡ ಹೊಣೆಗಾರಿಕೆ ಸಂಪತ್ತಿಗೆ ಇದೆ. ಅದಿಲ್ಲದಿದ್ದರೆ ನೆಮ್ಮದಿ ಇರುತ್ತದೆ. ಯಾರು ಬಡವ? ಯಾರು ಶ್ರೀಮಂತ? ಮೊತ್ತದ ಮೇಲೆ ಅವನು ಬಡವ-ಶ್ರೀಮಂತ ಎಂದು ತೀರ್ಮಾನ ಆಗುವುದಿಲ್ಲ. ಎಷ್ಟು ಮೊತ್ತ ಇದ್ದರೂ ತೃಪ್ತಿ ಇರದೇ ಇರುವಂತವರು ಬಡವರು. ನನಗೆ ಇಷ್ಟು ಸಾಕು ಎಂದು ಹೇಳುವವನು ಶ್ರೀಮಂತ. ಆ ‘ಸಾಕು’ ಎಂಬ ಭಾವ ನಮ್ಮಲ್ಲಿ ಬರಬೇಕು. ಆ ಸಂಪತ್ತು ಬಂದಾಗ ನಮಗೆ ಬರುವ ದೊಡ್ಡ ಹೊಣೆ ಏನೆಂದರೆ ಅದರ ರಕ್ಷಣೆ. 

ಅಯೋಧ್ಯೆಯ ಸಂದರ್ಭ ಏನೆಂದರೆ ಅಯೋಧ್ಯೆಗೆ ನಾರಾಯಣನು ಬರುವ ಮೊದಲೇ ಸಿರಿ ಬಂದಿದ್ದಳು. ಅಂದರೆ ಅಯೋಧ್ಯೆಯಲ್ಲಿ ಸಾಕಷ್ಟು ಸಮೃದ್ಧಿ ಇತ್ತು. ಹಾಗಾಗಿ ತುಂಬಾ ಜವಾಬ್ದಾರಿ ಕೂಡ ಇತ್ತು. ಉದಾಹರಣೆಗೆ, ಜನರು ಹಣ್ಣುಗಳಲ್ಲಿ ಹೆಚ್ಚು ಇಷ್ಟ ಪಡುವ ಹಣ್ಣು ಹಲಸಿನಹಣ್ಣು. ಯಾಕೆಂದರೆ ಅದಕ್ಕೆ ಇರುವ ಪರಿಮಳ ಬೇರೆ ಯಾವ ಹಣ್ಣಿಗೂ ಇಲ್ಲ. ಎಲ್ಲಾ ಹಣ್ಣಿನ ಪರಿಮಳಕ್ಕಿಂತ ಈ ಹಣ್ಣಿನ ಪರಿಮಳ ತುಂಬಾ ಆಕರ್ಷಕವಾದದ್ದು. ಹಾಗೆ ಅದರ ವ್ಯಾಪ್ತಿ ಕೂಡ ವಿಶಾಲ. ಹಲಸು ಹಣ್ಣಾದರೆ ಬೇರೆ ಪರೀಕ್ಷೆ ಕೂಡ ಬೇಡ, ಆ ಹಣ್ಣಿನ ಪರಿಮಳವೇ ಅದನ್ನು ಹೇಳುತ್ತದೆ. ಅದರ ಬಣ್ಣ ಹಿರಣ್ಯ ವರ್ಣ. ಹಾಗೆ ಅದರ ಬಣ್ಣವೂ ಸೊಬಗು, ಪರಿಮಳವೂ ಅತ್ಯಾಕರ್ಷಕ, ತುಂಬಾ ರುಚಿಕರವಾದ ಹಣ್ಣು. ಹಾಗಾಗಿ ಅದಕ್ಕೆ ಸುರಕ್ಷೆ ತುಂಬಾ ಇದೆ. ಅದನ್ನ ತಿನ್ನಬೇಕು ಅಂದರೆ ತುಂಬಾ ಕೆಲಸಗಳು ಆಗುತ್ತವೆ. ಹಾಗಾಗಿ ಪ್ರಕೃತಿ ಏನು ಮಾಡುತ್ತದೆ ಎಂದರೆ ಎಲ್ಲೆಲ್ಲಿ ಸಂಪತ್ತು ಇರುತ್ತದೋ ಅಲ್ಲಲ್ಲಿ ಸುರಕ್ಷೆಯನ್ನು ವಿಶೇಷವಾಗಿ ಮಾಡುತ್ತದೆ.


ಇನ್ನೊಂದು ಉದಾಹರಣೆ ತೆಂಗಿನಕಾಯಿ, ಸುಭಾಷಿತಕಾರರು ಎಳನೀರಿನ ಬಗ್ಗೆ, “ಉದಕಂ ಅಮೃತ ಕಲ್ಪಂ” ಎಂದು ಹೇಳಿದ್ದಾರೆ. ಅಂದರೆ ಅಮೃತಕ್ಕೆ ಸ್ವಲ್ಪವೇ ಕಡಿಮೆ. ಹಾಗಾಗಿ ಅದರ ಸುರಕ್ಷತೆಗಾಗಿಯೇ ಭದ್ರವಾದ ಕರಟ (ಚಿಪ್ಪು), ಅದರ ಮೇಲೆ ಮತ್ತೆ ದಪ್ಪ ಸಿಪ್ಪೆ ಹಾಗಾಗಿ ಪೆಟ್ಟು ಇಲ್ಲದೆ ಕಾಯಿ ಒಡೆಯುವುದೇ ಇಲ್ಲ, ಅದಕ್ಕಾಗಿ ಕಾಯಿ ಒಡೆಯುವುದು ಎನ್ನುವ ಶಬ್ದ ಬಂತು. ಸಂಪತ್ತು ಎಂದರೆ ಬರಿಯ ಹಣವಲ್ಲ, ಸುಖದ ಸಾಧನ ಯಾವುದೆಲ್ಲ ಇದೆಯೋ ಅದೆಲ್ಲ ಸಂಪತ್ತು. “ಸುಖವು ನಾರಾಯಣ, ಸುಖದ ಸಾಧನವೆಲ್ಲವೂ ಲಕ್ಷ್ಮಿ”. ನಮ್ಮ ಜೀವನದಲ್ಲಿ ನೆಮ್ಮದಿಯೇ ನಾರಾಯಣ, ಆ ನೆಮ್ಮದಿಗೆ ಕಾರಣವಾದ ಸಾಧನವೆಲ್ಲವೂ ಲಕ್ಷ್ಮೀ. ಹಾಗಾಗಿ ಅಯೋಧ್ಯೆಗೆ ರಕ್ಷಣೆ ಏನು? ಏಕೆಂದರೆ ಇಡೀ ಜಗತ್ತಿನಲ್ಲಿ ಅಯೋಧ್ಯೆ ಜ್ಯೇಷ್ಠವಾದ ನಗರಿ. ಇಂದಿನ ವಾಷಿಂಗ್ ಟನ್, ಲಂಡನ್ ಇವುಗಳೆಲ್ಲ ಏನೂ ಅಲ್ಲ. ಅಯೋಧ್ಯೆ ಇಡೀ ಜಗತ್ತಿನ ಕೇಂದ್ರ ಬಿಂದುವಾಗಿತ್ತು. ಸಾಮಂತ ರಾಜರು ಕಪ್ಪ ಕಾಣಿಕೆಗಳನ್ನು ಕೊಡಲು ಸಾಲುಗಟ್ಟಿ ನಿಂತಿರುತ್ತಿದ್ದರು. ವ್ಯಾಪಾರ ಮಾಡಲು ಜಗತ್ತಿನ ಸಾಮಂತ ರಾಜರುಗಳು ಅಯೋಧ್ಯೆಗೆ ಬರುತಿದ್ದರು. ಒಳ್ಳೆಯ ವಸ್ತುಗಳನ್ನು ಕೊಡಲು ಮತ್ತು ಕೊಳ್ಳಲು ಜನ ಅಯೋಧ್ಯೆಗೆ ಬರುತಿದ್ದರು.

ಬೆಲೆಬಾಳುವ ವಸ್ತುಗಳು ಅಯೋಧ್ಯೆಯಲ್ಲಿ ಸಿಗುತ್ತದೆ ಅಂದ ಮೇಲೆ ಅದರ ರಕ್ಷಣೆ ಕೂಡ ಬೇಕಲ್ಲವೇ? ಅಯೋಧ್ಯೆಯನ್ನು ಸೂರ್ಯವಂಶದ ಪುಣ್ಯ ಕಾಯುತಿತ್ತು. ಜಗತ್ತಿಗೆ ಗಂಗಾ, ಭಾಗೀರಥಿ ಅದು ಸೂರ್ಯವಂಶದ ಕೊಡುಗೆ ಹಾಗೆಯೇ ಸಾಗರ ಕೂಡ ಸೂರ್ಯವಂಶದ ಕೊಡುಗೆ. ಸೂರ್ಯವಂಶದ ಚಕ್ರವರ್ತಿ, ಸಗರನ ಅರವತ್ತು ಸಾವಿರ ಮಕ್ಕಳು ಅಗೆದು-ಬಗೆದು ಸಾಗರ ಆದದ್ದು, ಹಾಗಾಗಿ ಸಾಗರ ಆಗಿದೆ. ಹೀಗೆ ಅವರ ಪುಣ್ಯ ಅದು ಬಹಳ ದೊಡ್ಡದಿತ್ತು, ಅದುವೇ ಅಯೋಧ್ಯೆಯನ್ನು ಕಾಯುತಿತ್ತು. ಅಲ್ಲಿಂದ ಮುಂದೆ ಅಭೇದ್ಯವಾದ ಕೋಟೆ. ಎಲ್ಲಿಯೂ ದುರ್ಬಲವಾದ ದಾರಿ, ಕಳ್ಳದಾರಿ ಇಲ್ಲದ ಸುಭದ್ರವಾದ, ಅದ್ಭುತವಾದ ಕೋಟೆ. ಶ್ರೀರಾಮನು ಯುದ್ಧಮಾಡುವಾಗ ಎಲ್ಲಿಯೂ ಛಿದ್ರವಿಲ್ಲ, ಅಂದರೆ ಲೋಪವಿರಲಿಲ್ಲ. ಹಾಗೆಯೇ ಅಯೋಧ್ಯೆಯ ಭದ್ರಕೋಟೆಯೂ ಸಹ ಛಿದ್ರವಿಲ್ಲದ ಸುಭದ್ರಕೋಟೆ, ಕೋಟೆಯ ಹೊರಗೆ ಕಂದಕ. ಅಯೋಧ್ಯೆಯನ್ನು ಪ್ರವೇಶಮಾಡಬೇಕು ಅಂದರೆ ಏರಿ ಇಳಿಯಬೇಕು ಮಾತ್ರವಲ್ಲ, ಇಳಿದು ಏರಬೇಕು. ಕಂದಕ ಎಂದರೆ ಹಾರಲಾಗದ ಅಗಲ ಮತ್ತು ಪಾತಾಳದ ಆಳ ಇರುವಂತದ್ದು. ಕಂದಕದ ಒಳಗೆ ಈಜಿದರೆ ಕೈಕಾಲುಗಳು ಜಡ ಆಗುವಷ್ಟು ತಣ್ಣನೆಯ ನೀರು ಮತ್ತು ಮೊಸಳೆ ಮೊದಲಾದ ಕ್ರೂರ ಜಲ-ಜಂತುಗಳು. ಈ ಕಂದಕವನ್ನು ದಾಟಿದ ಮೇಲೆ ಕೋಟೆ, ಅದರಾಚೆಗೆ ಸೇನೆ ಇದೆ. ಕೋಟೆ ದಾಟಲು ಸಾಧ್ಯವಿಲ್ಲ ಏಕೆಂದರೆ ಯಂತ್ರಾಯುಧಗಳು ಶತ್ರುಗಳನ್ನು ನೋಡಿಕೊಳ್ಳುತ್ತಿದ್ದವು, ಶರ-ಶಿಲೆಗಳ ಮಳೆಗರೆಯುವ ಯಂತ್ರಗಳು. ಈಗಿನ ಕಾಲದಲ್ಲಿ ಮಾತ್ರವಲ್ಲ. ನೂರಾರು, ಸಾವಿರಾರು ಶತ್ರುಗಳ ಮೇಲೆ ಬಾಣಗಳ ಮಳೆಗರೆಯುವಂತಹ ದೊಡ್ಡ ದೊಡ್ಡ ಯಂತ್ರಗಳು ಅಯೋಧ್ಯೆಯಲ್ಲಿದ್ದವು. ಚೀನಾದ ಗೋಡೆಯನ್ನು ಬೇಧಿಸಲು ದೊಡ್ಡ ದೊಡ್ಡ ಬಂಡೆಗಳನ್ನು ಎಸೆಯುವಂತಹ ಯಂತ್ರಗಳನ್ನು ಕಂಡುಹಿಡಿದರು ಎಂದು ಚರಿತ್ರೆ ಹೇಳುತ್ತದೆ. ಅದಕ್ಕಿಂತ ಎಷ್ಟೋ ಯುಗ ಯುಗಗಳಷ್ಟು ಮೊದಲು ಇಂತಹ ಯಂತ್ರಗಳಿದ್ದವು! ಕೋಟೆಯ ಮೇಲಿನಿಂದ ಕಂಡಾಗಲೇ ಶತ್ರುವಿನ ಮೇಲೆ ದೊಡ್ಡ ದೊಡ್ದ ಬಂಡೆಗಳು, ಬಾಣಗಳು ಬಂದು ಬೀಳುವಂತೆ ಮಾಡುವ ವ್ಯವಸ್ಥೆ ಇದ್ದವು, ಶತಘ್ನಿಗಳಿದ್ದವು ಅಂದರೆ ಒಂದೇ ಬಾರಿಗೆ ನೂರು ಜನರನ್ನು ಕೊಲ್ಲುವಂತಹ ಶಕ್ತಿ ಅದಕ್ಕೆ ಇದೆ, ಅಂತಹದು ನೂರಾರು ಶತಘ್ನಿಗಳಿದ್ದವು, ಅದು ಕೋಟೆಯ ಮೇಲಿತ್ತು. ಇಷ್ಟೇ ಅಲ್ಲದೆ ತುಂಬಾ ದೂರದವರೆಗೆ ಸಮಭೂಮಿ (ಬಯಲು) ಇತ್ತು. ಎತ್ತರ, ತಗ್ಗುಗಳಿಲ್ಲದ ದೊಡ್ಡ ವಿಶಾಲವಾದ ಸ್ಥಳದ ಮಧ್ಯಭಾಗದಲ್ಲಿ ಅಯೋಧ್ಯೆಯನ್ನು ನಿರ್ಮಾಣ ಮಾಡಲಾಗಿತ್ತು. ಅಯೋಧ್ಯೆಯನ್ನು ನಿರ್ಮಾಣ ಮಾಡಿದ ಮೇಲೆ, ಸುತ್ತ ಎರಡು ಯೋಜನೆ ದೂರ ಸಮತಲವಾದ ಭೂಮಿ ಉಳಿದಿದ್ದರಿಂದ, ಶತ್ರುಗಳು ಬಂದರೆ ದೂರದಿಂದಲೇ ಕಾಣುತ್ತಿತ್ತು. ನಾವು ಆಸ್ಪತ್ರೆಗೆ ಹೋದಾಗ ವೈದ್ಯರು ಚಿಕಿತ್ಸೆ ಕೊಡುವ ಮೊದಲು ಮಾಡುವುದು ತಪಾಸಣೆ. ಏನು ಖಾಯಿಲೆ, ಸಮಸ್ಯೆ ಎಲ್ಲಿದೆ ಎಂದು ಗೊತ್ತಾದ ಮೇಲೆ ಚಿಕಿತ್ಸೆ ಪ್ರಾರಂಭವಾಗುತ್ತದೆ. ತುಂಬಾ ಜನರು ರೋಗಕ್ಕೆ ಚಿಕಿತ್ಸೆ ಇಲ್ಲದೇ ಸಾಯುವುದಲ್ಲ, ರೋಗ ಯಾವುದೆಂದು ಗೊತ್ತಾಗದೇ ಸಾಯುತ್ತಾರೆ, ಕೆಲವು ಬಾರಿ ತುಂಬಾ ತಡವಾಗಿ ಗೊತ್ತಾಗುತ್ತದೆ. ಹಾಗಾಗಿ ಮೊದಲು ತಪಾಸಣೆ ಅಗತ್ಯ. ಇದು ವೈದ್ಯ ವೃತ್ತಿಗೆ ಮಾತ್ರವಲ್ಲ, ಕ್ಷತ್ರ ವೃತ್ತಿಗೂ ಅನ್ವಯವಾಗುತ್ತದೆ.

ಮೊದಲು ಶತ್ರುಗಳು ಎಲ್ಲಿದ್ದಾರೆ ಎಂದು ಗೊತ್ತಾಗಬೇಕು, ಗೊತ್ತಾದರೆ ಮುಂದಿನದ್ದು ಸುಲಭವಾಗುತ್ತದೆ. ಅದಕ್ಕೆ ಮುಖ್ಯವಾಗಿ ಬೇಕಾದುದು ಸಮಭೂಮಿ. ಅಂತಹ ಜಾಗದಲ್ಲಿ ಅಯೋಧ್ಯೆಯನ್ನು ಕಟ್ಟಲಾಗಿತ್ತು. ಕೋಟೆಯ ಮೇಲೆ ನಿಂತರೆ ಎಷ್ಟೋ ದೂರದವರೆಗೂ ಸ್ಪಷ್ಟವಾಗಿ ಕಾಣುತ್ತಿತ್ತು. ಕೋಟೆ ಮುಗಿದು ಎರಡು ಯೋಜನೆ ದೂರದವರೆಗೂ ಅಯೋಧ್ಯೆಯೇ ಆಗಿತ್ತು. ಏಕೆಂದರೆ ಕೋಟೆಯ ಒಳಗೆ ರಕ್ಷಣೆಯ ವ್ಯವಸ್ಥೆ ಹೇಗಿತ್ತೋ, ಹಾಗೆಯೇ ಕೋಟೆಯ ಹೊರಗೂ ಸಹ ರಕ್ಷಣೆಯ ವ್ಯವಸ್ಥೆ ಇತ್ತು. ಹಾಗಾಗಿ ಆ ಅಯೋಧ್ಯಾ ನಗರಿಯು ಶತ್ರುಗಳು ಯುದ್ಧ ಮಾಡಿ ಗೆಲ್ಲಲಾಗದಂತಿತ್ತು.

ಇಷ್ಟೆಲ್ಲಾ ದಾಟಿ ಒಳಗೆ ಬಂದರೆ ಅಯೋಧ್ಯೆಯ ಅದ್ಭುತವಾದ ಸೈನ್ಯವನ್ನು ಎದುರಿಸಬೇಕು. ಮಹಾರಥರುಗಳಿಂದ ಕೂಡಿರುವ, ಶಬ್ದವೇದಿಯನ್ನು ಬಲ್ಲ, ವೀರಾಧಿವೀರರಿಂದ ಕೂಡಿರುವ ಅದ್ಭುತವಾದ ಸೈನ್ಯ. ಇದೆಲ್ಲ ಆದ ಮೇಲೆ ರಾಜನನ್ನು ಎದುರಿಸಬೇಕು. ಆಗಿನ ಕಾಲದಲ್ಲಿ ಒಬ್ಬೊಬ್ಬ ರಾಜನು ಒಂದು ಸೈನ್ಯ ಇದ್ದಂತೆ ಇರುತ್ತಿದ್ದರು. ತಮ್ಮ ಇಡೀ ಸೈನ್ಯವನ್ನು ಕಾಯುವ ಶಕ್ತಿ ಅಥವಾ ಇಡೀ ಶತ್ರು ಸೈನ್ಯವನ್ನು ಧೂಳೀಪಟ ಮಾಡುವಂತಹ ಶಕ್ತಿ ಅವರೊಬ್ಬರಿಗೇ ಇರುತ್ತಿತ್ತು. ಅಷ್ಟು ಪರಾಕ್ರಮ ಇರುತ್ತಿತ್ತು. ವನವಾಸದ ಸಂದರ್ಭದಲ್ಲಿ ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ, “ನೀನೇ ಅಯೋಧ್ಯೆಗೆ ರಾಜನಾಗಬೇಕಿತ್ತು, ಅದನ್ನು ಬಿಟ್ಟು ಬಂದೆಯಲ್ಲ” ಎಂದಾಗ ರಾಮನು, “ಯಾವುದೇ ಸೈನ್ಯವಿಲ್ಲದೇ, ಏಕಾಂಗಿಯಾಗಿ ನಾನು ಧನುರ್ಬಾಣಗಳನ್ನು ಹಿಡಿದು ಇಡೀ ಜಗತ್ತನ್ನು ಗೆಲ್ಲಬಲ್ಲೆ, ಆದರೆ ಹಾಗೆಲ್ಲ ರಾಜ್ಯ ಬೇಡ ನನಗೆ. ಧರ್ಮಮಾರ್ಗದಲ್ಲಿ, ಸತ್ಯಮಾರ್ಗದಲ್ಲಿ ರಾಜ್ಯ ಬರಬೇಕು” ಎಂದು ಲಕ್ಷ್ಮಣನಿಗೆ ಉತ್ತರಿಸುತ್ತಾನೆ. ಅಂತಹ ಪರಾಕ್ರಮವುಳ್ಳ ರಾಜರಿದ್ದರು. ದಶರಥನು ಕೂಡ ಒಬ್ಬ ಸಮರ್ಥ, ಘನ ಪರಾಕ್ರಮಿ ಅತಿರಥನಾದ ರಾಜ. ಹತ್ತುಸಾವಿರ ಸಾಮಾನ್ಯ ಸೈನಿಕರೊಂದಿಗೆ ಯುದ್ಧ ಮಾಡಬಲ್ಲವನು ಮಹಾರಥ. ಹತ್ತುಸಾವಿರ ಮಹಾರಥರೊಡನೆ ಯುದ್ಧ ಮಾಡಬಲ್ಲ ಒಬ್ಬ ವೀರ ಅತಿರಥ. ಅಂತಹ ಅತಿರಥನಾದ ದಶರಥ ಒಂದು ಸೇನೆಗಿಂತ ಕಡಿಮೆಯೇನಲ್ಲ. ಹಾಗಾಗಿ ಅಯೋಧ್ಯೆ “ಯೋದ್ಧುಮ್ ಅಶಕ್ಯ” ಎಂಬುದಾಗಿ ಹೆಸರುವಾಸಿಯಾಗಿತ್ತು. 

ಸಂಪತ್ತಿದ್ದಲ್ಲಿ ಆಪತ್ತು, ತುಂಬಾ ಸುರಕ್ಷೆ ಬೇಕು ಎಂಬುದಕ್ಕೆ ರಾಮಾಯಣದ್ದೇ ಮತ್ತೊಂದು ಉದಾಹರಣೆ ಸೀತೆ. ಸೀತೆ ಎಂದರೆ ಸಂಪತ್ತು, ಲಕ್ಷ್ಮಿ. ಸೀತೆ ಹುಟ್ಟುವ ಎಷ್ಟೋ ಮೊದಲೇ ಜನಕವಂಶಕ್ಕೆ ಶಿವಧನಸ್ಸು ಅನುಗ್ರಹ ಮಾಡಿ ಕೊಡಲ್ಪಟ್ಟಿತ್ತು. ನಿಮಿ ಎಂಬುವವ ಜನಕ ವಂಶದ ಮೂಲಪುರುಷ, ನಿಮಿಯಿಂದ ಆರನೆಯ ರಾಜ ದೇವರಾತ ಎಂಬ ರಾಜನ ಕಾಲದಲ್ಲಿ ದೇವತೆಗಳ ಮತ್ತು ಶಿವನ ಅನುಗ್ರಹದಲ್ಲಿ ಪ್ರಾಪ್ತವಾಗಿದ್ದು ಆ ಶಿವಧನಸ್ಸು. ಅದು ಏಕೆ ಜನಕ ವಂಶಕ್ಕೆ ಬಂತೆಂದರೆ, ಮುಂದೆ ಜಾನಕಿ ಹುಟ್ಟಿ ಬರುತ್ತಾಳೆ, ಅವಳು ರಾಮನಿಗೇ ಸಲ್ಲಬೇಕು ಎಂದು ಶಿವ ಧನಸ್ಸಾಗಿ ಬಂದು ಮಿಥಿಲೆಯಲ್ಲಿ ನೆಲೆಸಿದ್ದ. ಏಕೆಂದರೆ ಸಂಪತ್ತು ಬಂತೆಂದರೆ ಅದಕ್ಕೆ ರಕ್ಷಣೆ ಬೇಕು. ಹೀಗಾಗಿ ಜನಕನು ಮುಂದೆ ಸೀತೆ ಹುಟ್ಟಿದ ಮೇಲೆ, “ವೀರ್ಯ ಶುಲ್ಕ” ವನ್ನು ಪಣವಾಗಿ ಇಟ್ಟ. ಯಾರು ಶಿವಧನಸ್ಸನ್ನು ಎತ್ತಿ ಹೆದೆ ಏರಿಸುತ್ತಾರೋ, ಅವರಿಗೆ ಸೀತೆ ಎಂಬುದಾಗಿ ಜನಕನು ಘೋಷಣೆ ಮಾಡಿದ. ಸೀತೆ ಸಣ್ಣವಳಿದ್ದಾಗಲೇ ತುಂಬಾ ಪ್ರಸಿದ್ಧಿಯಾಗಿದ್ದಳು, ಅವಳನ್ನು ವರಿಸಬೇಕು ಎಂದು ಅನೇಕ ರಾಜರುಗಳು ಬಯಸಿದ್ದರು. ಅವರಲ್ಲಿ ಸ್ಪರ್ಧೆ ಇತ್ತು, ಹಾಗಾಗಿ ಎಷ್ಟೋ ರಾಜರು ಬಂದು ಜನಕನನ್ನು ಕೇಳಿದಾಗ, ಅವನು ಅವರೆಲ್ಲರಿಗೂ ಒಂದನ್ನೇ ಹೇಳಿದನು, “ಶಿವಧನಸ್ಸನ್ನು ಎತ್ತಿ, ಹೆದೆಯೇರಿಸಿ, ಅದಾದರೆ ಸೀತೆಯನ್ನು ಧಾರೆಯೆರೆದು ಕೊಡುತ್ತೇನೆ” ಎಂದು. ಭೂಮಂಡಲದ ಅನೇಕಾನೇಕ ರಾಜರುಗಳು ಬಂದು ಪ್ರಯತ್ನಪಟ್ಟರು, ಆದರೆ ಶಿವಧನಸ್ಸನ್ನು ಎತ್ತಲಾಗದೆ ಸೋತರು. ಅದಾದಮೇಲೆ ಆ ಸೋತ ರಾಜರೆಲ್ಲ ಸೇರಿ ಸಮಾಲೋಚನೆ ಮಾಡಿ, ನಮಗೆಲ್ಲ ಅವಮಾನವಾಗಿದೆ, ಈ ಜನಕನಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ತೀರ್ಮಾನಿಸಿ, ಆ ರಾಜರೆಲ್ಲರೂ ಒಂದುಗೂಡಿ ಬಹುದೊಡ್ಡ ಸೈನ್ಯವನ್ನು ಸಂಘಟನೆ ಮಾಡಿ ಬಂದು ಮಿಥಿಲೆಗೆ ಎಲ್ಲಾ ಕಡೆಯಿಂದ ಮುತ್ತಿಗೆ ಹಾಕುತ್ತಾರೆ. ಕೋಟೆಯ ಸುತ್ತಲೂ ಸಮುದ್ರದಂತಹ ಶತ್ರು ಸೈನ್ಯ, ಕೋಟೆಯ ಒಳಗೆ ಮಿಥಿಲೆಯ ಒಂದು ಸೈನ್ಯ ಮಾತ್ರ. ಆ ಯುದ್ಧ ಒಂದು ವರ್ಷ ನಡೆಯಿತು. ಆ ಯುದ್ಧದಲ್ಲಿ ಜನಕನು ಎಲ್ಲವನ್ನು ಕಳೆದುಕೊಂಡನು. ಯುದ್ಧ ಸಾಮಗ್ರಿಗಳು ಖಾಲಿಯಾಗಿ, ಸೈನ್ಯವೂ ತೀರಿಹೋಗಿ, ರಾಜ್ಯದ ಆಹಾರ ಪದಾರ್ಥಗಳು ಖಾಲಿಯಾಗಿ, ಮಿಥಿಲೆಯ ಜನರಿಗೆ ಉಪವಾಸವೇ ಗತಿ ಎನ್ನುವಂತಹ ಸ್ಥಿತಿ ಬಂದೊದಗಿತ್ತು. ಆದರೆ ಜನಕನಿಗೆ ಬಾಹುಬಲ ಮಾತ್ರವಲ್ಲ, ದೈವಬಲವಿತ್ತು. ಹಾಗಾಗಿ ಜನಕನು ದೇವತೆಗಳಲ್ಲಿ ಪ್ರಾರ್ಥನೆ ಮಾಡುತ್ತಾನೆ, “ನಾನು ಧರ್ಮಮಾರ್ಗದಲ್ಲಿ ಇದ್ದೇನೆ, ಅನ್ಯಾಯವಾಗಿ ನನ್ನ ಮೇಲೆ ಯುದ್ಧ ನಡೆಯುತ್ತಿದೆ, ಸಾಧನಗಳನ್ನು ಕೊಡಿ ಯುದ್ಧಕ್ಕೆ, ಸೀತೆಗಾಗಿ ನಾನು ಈ ಯುದ್ಧವನ್ನು ಗೆಲ್ಲಬೇಕು” ಎಂದು. ದೇವತೆಗಳು ಅನುಗ್ರಹ ಮಾಡಿ, ಚತುರಂಗ ಸೈನ್ಯವನ್ನೇ ಜನಕನಿಗೆ ಕೊಟ್ಟರು. ಜನಕನು ಎಲ್ಲ ರಾಜರನ್ನು ಸೋಲಿಸಿ ಓಡಿಸುತ್ತಾನೆ. ಸೀತೆಗಾಗಿ ನಡೆದ ಮೊದಲನೇ ಯುದ್ಧವದು.

ನಂತರ ಸಾಂಕಾಶ್ಚ ಎಂಬ ನಗರಿಯ ಸುಧನ್ವ ಎಂಬ ರಾಜನು ಜನಕನ ಬಳಿಬಂದು ಕೇಳಿದನು, “ಸೀತೆಯನ್ನು ಕೊಡು, ಶಿವಧನಸ್ಸನ್ನು ಕೊಡು” ಎಂದು. ಜನಕನು ಎರಡನ್ನೂ ಕೊಡುವುದಿಲ್ಲ, ಧನಸ್ಸನ್ನು ಎತ್ತಿದರೆ ಎರಡನ್ನು ಕೊಡುತ್ತೇನೆ ಎಂದನು. ಆದರೆ ಸುಧನ್ವನು ಶಿವಧನಸ್ಸನ್ನು ಎತ್ತಲು ಸಿದ್ಧನಿರಲಿಲ್ಲ. ಆಗ ಮಿಥಿಲೆಯ ಮೇಲೆ ದಾಳಿ ಮಾಡಿದನು. ಜನಕನು ಸುಧನ್ವನನ್ನು ಸಂಹಾರ ಮಾಡಿ ಯುದ್ಧದಲ್ಲಿ ಗೆದ್ದನು. ಆಗ ಆ ಸಾಂಕಾಶ್ಚ ನಗರಿಗೆ ಜನಕನ ತಮ್ಮ ಕುಶಧ್ವಜನೇ ರಾಜನಾಗುತ್ತಾನೆ. ಇದು ಸೀತೆಗಾಗಿ ನಡೆದ ಎರಡನೆಯ ಯುದ್ಧ. 

ನಂತರ ಮಹಾಯುದ್ಧ ತ್ರೇತಾಯುಗದ ಯುದ್ಧವೆಂದೇ ಪ್ರಸಿದ್ಧಿಯಾದ ರಾಮ-ರಾವಣರ ಯುದ್ಧ ನಡೆದದ್ದು ಮತ್ತದೇ ಸೀತೆಗಾಗಿ. ಅಂದರೆ “ಸಂಪತ್ತಿದ್ದಲ್ಲಿ ಆಪತ್ತಿದೆ, ಹಾಗಾಗಿ ಯಾರಿಗೆ ತಾಕತ್ತಿದೆಯೋ, ಆ ಸಂಪತ್ತನ್ನು ಹೊಂದಲು ಯೋಗ್ಯರು”. ಯಾಕೆ ಶಿವಧನಸ್ಸನ್ನು ಪಣವಾಗಿ ಇಟ್ಟಿದ್ದೆಂದರೆ, ಸೀತೆಯನ್ನು ವರಿಸಲು, ಹೊಂದಲು, ಅಂತಹ ಶಕ್ತಿ ಸಾಮರ್ಥ್ಯ ಇದ್ದರೆ ಮಾತ್ರ ಸಾಧ್ಯ ಎಂದು. ಯಾರು ಶಿವಧನಸ್ಸನ್ನು ಎತ್ತಿ, ಹೆದೆಯೇರಿಸಿ, ಪ್ರಯೋಗಿಸಬಲ್ಲವನೋ ಅವನು ಈಶ್ವರನಿಗೆ ಸಮಾನನಾದವನು, ಅಂತವನು ಮಾತ್ರವೇ ಸೀತೆಯನ್ನು ಬಾಳಿಸಬಲ್ಲ, ಉಳಿಸಿಕೊಳ್ಳಬಲ್ಲ ಎಂದು. ರಾವಣನು ಸೀತೆಯನ್ನು ಅಪಹರಣ ಮಾಡಿದಾಗ ರಾಮನಲ್ಲದೆ ಬೇರಾರಿಗೂ ಅವಳನ್ನು ಮರಳಿ ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗುತ್ತಿತ್ತೆ? ಅಷ್ಟು ಯೋಗ್ಯತೆ ಬೇಕು. ಏಕೆಂದರೆ ಸೀತೆ ಅಂತಹ ದೊಡ್ಡ, ಶ್ರೇಷ್ಠವಾದ ಸಂಪತ್ತು, ಸಾಕ್ಷಾತ್ ಲಕ್ಷ್ಮೀ ದೇವಿಯೇ ಆಗಿದ್ದರಿಂದ ಅಂತಹ ದೊಡ್ಡ ಪಣವನ್ನು ಇಡಲಾಯಿತು. ಅಂತಹ ಯೋಗ್ಯತೆ ಇದ್ದರೆ ಮಾತ್ರ ಅವಳನ್ನು ಪಡೆಯಬಹುದು, ಇಲ್ಲದಿದ್ದರೆ ಜೀರ್ಣ ಮಾಡಿಕೊಳ್ಳಲು ಸಾಧ್ಯವಿಲ್ಲ.

ಊಟ ಮಾಡಿದ್ದು ತುಂಬಾ ಹೆಚ್ಚಾದರೆ ಉಂಡ ಅನ್ನವೇ ಶತ್ರುವಾಗಬಹುದು, ಕೆಲವೊಮ್ಮೆ ಉಸಿರು ಕಟ್ಟಿ ಸಾಯಲೂಬಹುದು. ಹಾಗಾಗಿ “ಎಷ್ಟು ಜೀರ್ಣ ಮಾಡಿಕೊಳ್ಳಬಹುದೋ ಅಷ್ಟೇ ಊಟ ಮಾಡಬೇಕು. ಏನನ್ನು ಜೀರ್ಣಿಸಿಕೊಳ್ಳಬಹುದೋ ಅದನ್ನೇ ಊಟ ಮಾಡಬೇಕು”. ಬಂಡಿ ಅನ್ನವನ್ನು ಊಟಮಾಡಬೇಕು ಎಂದಾದರೆ ಬಕಾಸುರನನ್ನು ಸಂಹಾರ ಮಾಡಿದ ಭೀಮನಂತೆ ಶಕ್ತಿ ಇರಬೇಕು. ಭೀಮನಿಗೆ ವೃಕೋದರ ಎಂದೂ ಹೆಸರಿದೆ. ವೃಕ ಎಂದರೆ ಹೊಟ್ಟೆಯೊಳಗಿರುವ ಜೀರ್ಣ ಕ್ರಿಮಿಗಳು. ಭೀಮನಿಗೆ ಅದು ಬೇಕಾದಷ್ಟು ಇದ್ದಿದ್ದರಿಂದ ಏನನ್ನು ತಿಂದರೂ ಅರಗಿಸಿಕೊಳ್ಳಬಲ್ಲ ಶಕ್ತಿಯಿತ್ತು. ಹಾಗಾಗಿ ಯಾವುದೇ ಸಂಪತ್ತಿನ ಜೊತೆಯಲ್ಲಿ ಒಂದು ಬಾಧ್ಯತೆಯಿದೆ. ಹಿಂದೆ ಹೇಳಿದ ಹಾಗೆ, ಯೋಗ ಮತ್ತು ಯೋಗ್ಯತೆಯನ್ನು ನೋಡುವಾಗ, ಒಂದು ಯೋಗವನ್ನು ಅಪೇಕ್ಷೆ ಪಡುವ ಮೊದಲು, ನಮಗೆ ಅದರ ಯೋಗ್ಯತೆ ಇದೆಯಾ ಎಂದು ನೋಡಿಕೊಳ್ಳಬೇಕು. ಯೋಗ್ಯತೆ ಇಲ್ಲದೇ ಬರುವ ಯೋಗ ನಮ್ಮನ್ನು ಹಾಳುಮಾಡುವುದಕ್ಕೆ ಬರುವಂತದ್ದು, ಶ್ರೇಯಸ್ಸು ಮಾಡುವುದಕ್ಕೆ ಬರುವಂತದ್ದಲ್ಲ. ಹಾಗೆಯೇ ಸಂಪತ್ತು ಕೂಡ. “ಯಾವುದೇ ಸಂಪತ್ತನ್ನು ಗಳಿಸಿಕೊಳ್ಳಬೇಕಾದರೆ, ಅದನ್ನು ಕಾಪಾಡುವ ಸಾಮರ್ಥ್ಯವನ್ನು ಮೊದಲು ಹೊಂದಬೇಕು”. ಆ ಸಂಪತ್ತನ್ನು ಇಟ್ಟುಕೊಳ್ಳುವ, ಸದುಪಯೋಗ ಮಾಡುವ, ಆ ಸಂಪತ್ತಿನೊಟ್ಟಿಗೆ ಬರುವ ಆಪತ್ತುಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಗಳಿಸಿಕೊಂಡಾಗ ಮಾತ್ರವೇ ಸಂಪತ್ತಿಗೊಂದು ಅರ್ಥ.

ಹಾಗಾಗಿ ಅಯೋಧ್ಯೆಗೆ ಅಂತಹ ಒಂದು ಸುರಕ್ಷೆ ಅವತ್ತಿನ ಕಾಲದಲ್ಲಿ ಇತ್ತು. ರಾಮಾಯಣದ ಒಂದು ಸಂದರ್ಭ. ರಾಮ ಕಾಡಿಗೆ ಹೋದ ನಂತರ ಭರತನು ನಾಡಿಗೆ ಬಂದ. ನಂತರ ಭರತನು ರಾಮನನ್ನು ಮರಳಿ ಅಯೋಧ್ಯೆಗೆ ಕರೆತರಲು ಕಾಡಿಗೆ ಹೊರಟಾಗ, ಅವನೊಟ್ಟಿಗೆ ಇಡೀ ಅಯೋಧ್ಯಾ ನಗರಿ ಮತ್ತು ಸೈನ್ಯವೂ ಬಂದಿತು. ಆಗ ಅಯೋಧ್ಯೆಯಲ್ಲಿ ಯಾರಿದ್ದರು? ಶತ್ರುಗಳು ಬಂದು ಆಕ್ರಮಣ ಮಾಡಬಹುದಾಗಿತ್ತು. ಭರತನು ಅದನ್ನು ಕಾಡಿನಲ್ಲಿ ಹೇಳುತ್ತಾನೆ, ಈ ಸಮಯದಲ್ಲಿ ರಾಜ್ಯದ ಮಹಾದ್ವಾರವೂ ಕೂಡ ತೆರೆದಿತ್ತು. ಅರಮನೆಯ ದ್ವಾರ, ಎಲ್ಲವೂ ಇದ್ದ ಹಾಗೆಯೇ ಇದೆ. ಅಲ್ಲಿ ಯಾರೂ ಮನುಷ್ಯರಿಲ್ಲ, ಆನೆ ಕುದುರೆಗಳಿಲ್ಲ, ಸೈನ್ಯವೂ ಇಲ್ಲ. ಉತ್ಸಾಹವಿರದ ಸೈನ್ಯ, ತೆರೆದಿಟ್ಟ ಪುರದ್ವಾರ, ಇಂತಹ ಅಯೋಧ್ಯೆಯನ್ನು ಆಕ್ರಮಣ ಮಾಡಲು ಶತ್ರುಗಳು ಮನಸ್ಸಿನಲ್ಲಿಯೂ ಎಣಿಸುವುದಿಲ್ಲ ಎಂದು ಭರತನು ಹೇಳುತ್ತಾನೆ. ಏಕೆಂದರೆ ಅಯೋಧ್ಯೆ ಎಂದರೆ ಅಂತಹ ಅಭೇದ್ಯ ನಗರಿ. ರಾಮನು ಕಾಡಿನಲ್ಲಿದ್ದರೂ ಶತ್ರುಗಳಿಗೆ ಅಯೋಧ್ಯೆ ಎಂದರೆ ಭಯವಿತ್ತು. ರಾಮನ ಅಯೋಧ್ಯೆಯದು. ಕಾಡಿನಲ್ಲಿ ಇರುವ ರಾಮನ ಬಾಹುಗಳನ್ನು ಆಶ್ರಯಿಸಿ ಇಲ್ಲಿ ಅಯೋಧ್ಯೆ ನಿರ್ಭಯವಾಗಿತ್ತು ಎಂದರೆ ಎಂತಹ ಯೋಗ್ಯತೆಯದು. ಅಯೋಧ್ಯೆಗೆ ಅಂತಹ ಸುರಕ್ಷೆಯಿತ್ತು. ಹಾಗೆಯೇ ನಾವು ನಮ್ಮ ನಾಡನ್ನು, ದೇಶವನ್ನು ಅತ್ಯಂತ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅದರಲ್ಲೂ ನಮ್ಮ ದೇಶ ಜಗತ್ತಿನಲ್ಲಿ ಶ್ರೇಷ್ಠವಾದುದು. ಏಕೆಂದರೆ ಬೇರೆ ಎಲ್ಲ ಸಂಪತ್ತುಗಳೊಡನೆ, ಅತ್ಯಂತ ಶ್ರೀಮಂತವಾದ ಸಂಸ್ಕೃತಿ, ಪರಂಪರೆಯಿದೆ. ಇಂತಹದ್ದೊಂದು ನಶಿಸಿ ಹೋದರೆ ಮತ್ತೆ ಇದನ್ನು ಪುನಃ ನಿರ್ಮಾಣ ಮಾಡಲು ಸಾವಿರಾರು ವರ್ಷ, ಯುಗಗಳೇ ಬೇಕಾಗುತ್ತದೆ, ಆದರೂ ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ತುಂಬಾ ಮುತುವರ್ಜಿಯಿಂದ ನಮ್ಮ ದೇಶವನ್ನು ಕಾಪಾಡಿಕೊಳ್ಳಬೇಕು. ಗಡಿಯಲ್ಲಿ ಸೈನಿಕರು ನಮ್ಮನ್ನು ಕಾಯದೇ ಇದ್ದರೆ, ನಾವು ಯಾರೂ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಆಗ ಎಷ್ಟು ಸಂಪತ್ತು, ಸಮೃದ್ಧಿ, ಶ್ರೀಮಂತಿಕೆಯಿತ್ತೋ ಅದೆಲ್ಲವೂ ಮತ್ತೆ ಈ ನಾಡಿಗೆ ಬರಲಿ. ಹಾಗೆಯೇ ಅಂತಹ ಸುರಕ್ಷೆ ಕೂಡ ಬರಲಿ ಎಂದು ಈ ಎರಡನ್ನೂ ನಾವೆಲ್ಲರೂ ಹಾರೈಸೋಣ. ರಾಮರಕ್ಷೆ ನಮಗೆಲ್ಲ, ರಾಷ್ಟ್ರಕ್ಕೆಲ್ಲ ಸಂಪ್ರಾಪ್ತವಾಗಲಿ.

|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa 

ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ  *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.
*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.* 
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254

Facebook Comments Box